ಮಕ್ಕಳ ಶಾಲೆಗಳು ಆರಂಭವಾಗುವುದು ಪ್ರಾರ್ಥನೆಯಿಂದ. "ಸ್ವಾಮಿ ದೇವನೆ ಲೋಕಪಾಲನೆ.." ಜಯ ಭಾರತ ಜನನಿಯೆ ತನುಜಾತೆ" ಜನಗಣಮನ ಎಂಬ ರಾಷ್ಟ್ರ ಗೀತೆ ಇರಬಹುದು ಒಟ್ಟಿನಲ್ಲಿ ಆರಂಭ ಪ್ರಾರ್ಥನೆಯಿಂದಲೆ. ಇದು ಎಲ್ಲ ಶಾಲೆಯ ಆರಂಭದ ಕ್ಷಣಗಳು. ಘಂಟೆ ಭಾರಿಸಿದ ತಕ್ಷಣ ಸಾಲಿನ ಸರತಿಯಲ್ಲಿ ನಿಲ್ಲುವ ಮಕ್ಕಳು ತಮ್ಮದೇ ಆದಂತಹ ಮುದ್ದು ಭಾಷೆಯಲ್ಲಿ ಹೇಳುವ ಸಾಲುಗಳು ಎಲ್ಲರ ಗಮನ ಸೆಳೆಯುತ್ತದೆ. ಅವೆಲ್ಲ ಸಹಜ ಬಿಡಿ, ಆದರೆ ಕಳೆದ ಎರಡು ವರ್ಷಗಳಿಂದ ಕಾರ್ಗಲ್ ಸಮೀಪದ ಲಿಂಗನಮಕ್ಕಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶೇಷ ನಡೆಯುತ್ತಿದೆ ಅದು ಶ್ವಾನ ಪ್ರಾರ್ಥನೆ.
ಇದು ವಿಶೇಷವಾದಂತಹ ಘಟನೆ. ಬೆಳಿಗ್ಗೆ ಹತ್ತು ಗಂಟೆಗೆ ಸರಿಯಾಗಿ ಶಾಲಾಗಂಟೆ ಭಾರಿಸುತ್ತಿದ್ದಂತೆ ಎರಡು ನಾಯಿಗಳು ಶಾಲೆಯ ಮಕ್ಕಳ ನಡುವೆ ದಾರಿ ಮಾಡಿಕೊಂಡು ಶಾಲೆಯ ಒಳ ಆವರಣ ಪ್ರವೇಶಿಸುತ್ತವೆ. ಮುಖ್ಯೋಪಾಧ್ಯಾಯರಾದ ಬಸವರಾಜ್ ಕ್ಲಾಸ್ ಲೀಡರ್ ಹುಡುಗನನ್ನು ವೇದಿಕೆಗೆ ಕರೆದು ಮಕ್ಕಳ ಪ್ರಾರ್ಥನೆಗೆ ಕಾಷನ್ ನೀಡಲು ಹೇಳುತ್ತಿದ್ದಂತೆ ಸೋನು ಹಾಗು ಗುಗ್ಗು ಎಂಬ ಎರಡು ಶ್ವಾನಗಳೂ ಕೂಡ ವೇದಿಕೆಯನ್ನು ಏರುತ್ತವೆ. ಮಕ್ಕಳು ಪ್ರಾರ್ಥನೆ ಶುರು ಮಾಡಿದ ಒಂದೆರಡು ಕ್ಷಣದ ನಂತರ ಸೋನು ಎಂಬ ಶ್ವಾನವೂ ತನ್ನದೇ ಆದ ಸ್ವರದಲ್ಲಿ ಪ್ರಾರ್ಥನೆಗೆ ತೊಡಗುತ್ತದೆ. ಶ್ವಾನ ಪ್ರಾರ್ಥನೆಯೆಂದರೆ ಕೇವಲ ನಾಯಿಯ ಊಳಿಡುವಿಕೆ ಅಲ್ಲ ಸ್ವಲ್ಪ ಮಟ್ಟಿಗಿನ ದನಿಯ ಏರಿಳಿತವನ್ನೂ ಮಾಡುತ್ತದೆ ಸೋನು ಎಂಬ ಶ್ವಾನ. ಗುಗ್ಗು ಎಂಬ ಶ್ವಾನ ಹಿರಿಯಣ್ಣ ಸೋನುವಿಗೆ ಸಾಥ್ ನೀಡುತ್ತದೆ. ರಾಷ್ಟಗೀತೆ ಮುಗಿದು ವರ್ತಮಾನ ಪತ್ರಿಕೆ ಓದಲು ಮಕ್ಕಳು ಶುರುವಿಟ್ಟುಕೊಂಡನಂತರ ಎರಡು ಶ್ವಾನಗಳೂ ವೇದಿಕೆಯಿಂದ ನಿರ್ಗಮಿಸುತ್ತವೆ. ಕೆಲಕಾಲ ಮಕ್ಕಳ ಸಾಲಿನ ನಡುವೆ ಓಡಾಡಿ ನಂತರ ಬಿಸಿಯೂಟ ಕ್ಕೆ ಮತ್ತೆ ಹಾಜರ್, ಅಲ್ಲಿಯತನಕ ಶಾಲೆಯ ಆವರಣದಲ್ಲಿ ಸುತ್ತಾಡುತ್ತಲೋ ಲಿಂಗನಮಕ್ಕಿಯ ಬೀದಿ ಸುತ್ತುತ್ತಲೋ ಇರುತ್ತವೆ ಎನ್ನುತ್ತಾರೆ ಶಾಲಾ ಶಿಕ್ಷಕಿ ಸಾವಿತ್ರಿ ಅಶೋಕ್. ಇದು ಯಾವ ಜನ್ಮದ ಋಣವೋ ಗೊತ್ತಿಲ್ಲ ಎನ್ನುತ್ತಾರೆ ಬಸವರಾಜ್. ಕಳೆದ ಎರಡು ವರ್ಷದಿಂದ ನಿರಂತರವಾಗಿ ಪ್ರಾರ್ಥನೆಯಲ್ಲಿ ತೊಡಗಿಕೊಂಡಿರುವ ಈ ಶ್ವಾನ ಜೋಡಿಯ ವಿಚಿತ್ರ ವರ್ತನೆ ಅರ್ಥವಾಗುವುದು ಕಷ್ಟಕರ.
ಬಸವರಾಜ್ ಫೋನ್:೭೭೯೫೨೨೮೨೬೧
2 comments:
ಸಾರ್ ಇದರ ಬಗ್ಗೆ ವಿಜಯವಾಣಿಯಲ್ಲಿ ಓದಿದೀನಿ..ನೀವೇ ಬರದಿದ್ದೋ ಅಲ್ಲವೋ ಗೊತ್ತಿಲ್ಲ...ಚೆನಾಗಿದೆ
ಆಶ್ಚರ್ಯಕರ :)
Post a Comment