Saturday, May 9, 2009

ದೂರದ ಬೆಟ್ಟ.....


ಈ ವರ್ಷ ಅದೇಕೋ ಜೇನು ಮುನಿಸಿಕೊಂಡಿದೆ. ಕಳೆದವರ್ಷ ಇಪ್ಪತ್ತೈದು ಕೆಜಿ ತುಪ್ಪ ಈ ವರ್ಷ ಕೇವಲ ಅಂದರೆ ಕೇವಲ ಇನ್ನೂರಾ ಐವತ್ತು ಗ್ರಾಂ. ಪದೆ ಪದೆ ಮಳೆ ಬಂದದ್ದಕ್ಕೋ ಅಥವಾ ಕಾಡು ಮುನಿಸಿಕೊಂಡಿದ್ದಕ್ಕೋ ಗೊತ್ತಿಲ್ಲ ನನಗೆ ಜೇನು ತುಪ್ಪ ಸಿಗಲಿಲ್ಲ. ಇರಲಿ ಈ ಪ್ರಕೃತಿ ನಂಬಿದ ಬದುಕೇ ಹೀಗೆ.

ನಮ್ಮ ಮನೆಯಲ್ಲಿನ ಜೇನುಗೂಡು ನೋಡಿದವರು ಕೇಳುವ ಪ್ರಶ್ನೆ "ವರ್ಷಕ್ಕೆ ಎಷ್ಟು ಜೇನು ತುಪ್ಪ ಸಿಗುತ್ತದೆ?" . ಕಳೆದ ವರ್ಷ ನಾನು " ಪೆಟ್ಟಿಗೆಯೊಂದಕ್ಕೆ ಇಪ್ಪತ್ತೈದು ಕೆಜಿ" ಎಂದು ಒಂಥರಾ ಹೆಮ್ಮೆಯಿಂದ ಹೇಳುತ್ತಿದ್ದೆ. ಆವಾಗ ಅವರ ಮನಸ್ಸು ಏಕ್ ದಂ ಲೆಕ್ಕಾಚಾರಕ್ಕೆ ಇಳಿಯುತ್ತಿತ್ತು. ಇಪ್ಪತ್ತೈದು ಇಂಟು ಇನ್ನೂರು ಅಲ್ಲಿಗೆ ಬರೊಬ್ಬರಿ ಐದು ಸಾವಿರ ರೂಪಾಯಿ. ವಾವ್ ಸೂಪರ್ ಇನ್ ಕಂ ಎಂದು ಮನಸ್ಸಿನಲ್ಲಿ ಸಂತೋಷಗೊಂಡು ತಾವೂ ಆ ಆದಾಯ ಗಳಿಸುವ ಲೆಕ್ಕಾಚಾರದಲ್ಲಿ ಮುಳುಗುತ್ತಿದ್ದರು. ತಮ್ಮನೆ ಅಪ್ಪಿ ಏನೂ ಉಪಯೋಗಕ್ಕೆ ಬಾರದವನು ಎಂದು ಗೊಣಗುತ್ತಿದ್ದರು. ಒಂದು ಪೆಟ್ಟಿಗೆಗೆ ಐದು ಸಾವಿರ ಅಂದರೆ ಐದು ಪೆಟ್ಟಿಗೆಗೆ ಪುಕ್ಕಟ್ಟೆ ಇಪ್ಪತ್ತೈದು ಸಾವಿರ ಬಂತಲ್ಲೋ ಅಂತ ಒಂಥರಾ ಒಳವೇದನೆಯಿಂದ ಹೇಳುತ್ತಿದ್ದರು. ಆದರೆ ಅವೆಲ್ಲಾ ಗಣಿತವಲ್ಲ ಅಂತ ಅವರಿಗೆ ಗೊತ್ತಿಲ್ಲ ನಾನೂ ಬಾಯ್ಬಿಟ್ಟು ಹೇಳುತ್ತಿರಲಿಲ್ಲ.
ಆದರೆ ಈ ವರ್ಷ ಅಕ್ಷರಶ: ಇನಕಂ ಜೀರೋ. ಅವಕ್ಕೂ ರಿಸಿಷನ್ ಪಿರೀಯಡ್ ಇರಬಹುದೇನೋ..?.

ಆದರೆ ನಾನು ಮಾತ್ರಾ ನಮ್ಮ ಮನೆಗೆ ಬಂದವರು ಜೇನು ಪೆಟ್ಟಿಗೆಯ ಬಳಿ ನಿಂದು ವರ್ಷಕ್ಕೆ ಎಷ್ಟು? ಎಂಬ ಪ್ರಶ್ನೆ ಕೇಳಿದಾಗ ಅದೇ ಹಳೇ ಹೋದ್ವರ್ಷದ ಉತ್ತರವನ್ನೇ "ಇಪ್ಪತ್ತೈದು ಕೆಜಿ " ಎಂದು ಹೇಳುತ್ತಿದ್ದೇನೆ. ಆಫೀಸಿನಲ್ಲಿ ಬೆಂಚ್ ನಲ್ಲಿ ಕೂರಿಸಿದರೂ ಮನೆಯಲ್ಲಿ ಹಾಗೂ ಸಂಬಂಧಿಕರ ನಡುವೆ "ನನಗೇನೂ ತೊಂದರೆಯಿಲ್ಲ. ನನ್ನ ಪ್ರೆಂಡ್ ನ ಪ್ರೆಂಡ್ ಕಂಪನಿಯಲ್ಲಿ ನೂರು ಜನರನ್ನು ತೆಗೆದರಂತೆ" ಎನ್ನುವ ಕತೆಯ ಹಾಗೆ.

Thursday, May 7, 2009

ಚಿನ್ನ ಚಿನ್ನ ಆಸೈ



ಕಳೆದ ಶುಕ್ರವಾರ ಒಂದು ಜೋಡಿ ನಮ್ಮ ಹೋಂ ಸ್ಟೆ ಗೆ ಬಂದಿದ್ದರು. ಬೆಂಗಳೂರಿನ ಜಗನ್ನಾತ್ ಹಾಗೂ ಚೈತ್ರಾ ದಂಪತಿಗಳು ಎರಡು ದಿನ ಉಳಿದರು. ನಮ್ಮದು ಹೇಳಿಕೇಳಿ ಪರಿಸರ ಪ್ರೇಮಿ ಹೋಂ ಸ್ಟೆ. ಸಣ್ಣ ಸಣ್ಣ ಸಂಗತಿಗಳನ್ನು ಪ್ರಕೃತಿಯ ವೈಶಿಷ್ಟ್ಯಗಳನ್ನು ಪರಿಚಯಿಸುವ ಇಕೋಟೂರಿಸಂ ಗೆ ಮೊರೆಹೋದವರು ನಾವು. ಹಾಗಾಗಿ ನಮ್ಮಲ್ಲಿ ಬರುವ ಪ್ರವಾಸಿಗರು ಕಾಡುಪ್ರಿಯರು-ಹಕ್ಕಿಗಳ ಕಲರವ ಕೇಳುವವರು-ನೀರಿನ ಜುಳು ಜುಳು ಆಲಿಸುವವರು ಆಗಿರುತ್ತಾರೆ. ಅಂಥಹ ಆಸಕ್ತರ ಒಡನಾಟ ನಮಗೂ ಉಮೇದು ಹೆಚ್ಚಿಸುತ್ತದೆ. ಅವರನ್ನು ಕರೆದುಕೊಂಡು ಕಲ್ಲುಸಂಕ ತೊರಿಸಿಕೊಂಡು (ಡಿಟೈಲ್ ಫೋಟೋಕ್ಕೆ http://recipesforthelife.blogspot.com/ ನೋಡಿ) ಜೋಗಿನಮಠ ಕಾಡಿಗೆ ಹೋದೆ. ಬೆತ್ತ ನಿಷಣಿ(ದಾಲ್ಚಿನ್ನಿಯ ಕಾಡು ವೆರೈಟಿ) ಕಾಡು ಮೆಣಸು, ಕೋಕಂ(ಮುರುಗಲು) ಚದುರಂಗ, ಮುಳ್ಳಣ್ಣು ಹೀಗೆ ಹತ್ತಾರು ಕಾಡುಫಲಗಳನ್ನು ತಿನ್ನುತ್ತಾ ಸಾಗಿತು ನಮ್ಮ ಕಾಡುಪಯಣ. ಹಾಗೆ ಹೋಗುತ್ತಿರುವಾಗ ನನ್ನ ಬಾಲ್ಯಕ್ಕೆ ಜಾರಿದೆ.

ಬೇಸಿಗೆ ರಜವೆಂದರೆ ನಮಗೆ ಹೀಗೆ ಕಾಡುಸುತ್ತುವುದು ಮುಖ್ಯ ಕಾಯಕ. ಆಗ ಈಗಿನಂತೆ ಬೇಸಿಗೆ ಶಿಬಿರ ಇರಲಿಲ್ಲ. ಬೆಳಿಗೆ ಮನೆಯಲ್ಲಿ ತಿಂಡಿತಿಂದು ಗುಡ್ಡ ಹತ್ತಿದರೆ ಹಲಗೆ ಹಣ್ಣು-ಬಿಕ್ಕೆಹಣ್ಣು-ಕೌಳಿ ಹಣ್ಣು- ಮುಂತಾದ ಹಲವಾರು ಜಾತಿಯ ನಾನಾ ರುಚಿಯ ಹಣ್ಣುಗಳನ್ನು ತಿಂದು ಮಟಮಟ ಮಧ್ಯಾಹ್ನ ಮನೆ ಸೇರುವುದು ಎರಡು ತಿಂಗಳ ನಿತ್ಯ ಕಾಯಕ. ಅದು ಮನೆಯಲ್ಲಿ ಇರಲಿ ಅಥವಾ ನೆಂಟರ ಮನೆಗೆ ಹೋಗಲಿ (ನಾವು ಹೋಗುವ ಅಥವಾ ನಮಗಿದ್ದ ನೆಂಟರ ಮನೆ ಹಳ್ಳಿಯದ್ದೇ) ಇದೇ ಮಾಮೂಲು ಕಾಯಕ. ಹಾಗಿದ್ದ ಒಂದು ದಿನ ಗುಡ್ಡ ಹತ್ತಿ ಕಾಡು ಸೇರಿತು ನಮ್ಮ ತಂಡ. ನಮ್ಮ ತಂಡ ಅಂದರೆ ಅದು ತೀರಾ ದೊಡ್ಡದಲ್ಲ ಮೂರೇ ಮೂರು ಜನ. ಹಾಗೆ ಹೊರಟ ಮೂರು ಜನರ ತಂಡದಲ್ಲಿ ಒಬ್ಬಾತನಿಗೆ ಅದೇನು ಐಡಿಯಾ ಬಂದಿತ್ತೋ ಏನೋ ಬಕಣ(ಜೇಬು)ದಲ್ಲಿ ಮನೆಯಿಂದ ಬೆಂಕಿಪೆಟ್ಟಿಗೆ ಇಟ್ಟುಕೊಂಡು ಬಂದಿದ್ದ. ಮಧ್ಯಾಹ್ನ ಹನ್ನೊಂದರ ಸುಮಾರಿಗೆ ಜೇಬಿನಿಂದ ಹಗೂರ ಬೆಂಕಿಪೆಟ್ಟಿಗೆ ತೆಗೆದ ಆತ ಈಗ ನಾವು ಇಲ್ಲೇ ಗೇರು ಬೀಜ ಸುಟ್ಟು ತಿನ್ನೋಣವಾ? ಎಂದ. ನಮಗಿಬ್ಬರಿಗೆ ಅದು ಅಚ್ಚರಿ. ಹೇಗೆ ಬೆಂಕಿ ಮಾಡುವುದು? ತಗಡು ಎಲ್ಲಿ? ಮುಂತಾದ ಪ್ರಶ್ನೆ ಹುಟ್ಟಿತು. ಅದಕ್ಕೆ ಅವನೇ ತಾನೇ ತಗಡು ಬೇಡ ಒಂದಿಷ್ಟು ಜಾಗ ಚೊಕ್ಕ ಮಾಡಿಕೊಳ್ಳೋಣ ಅಲ್ಲಿ ಗೇರುಬೀಜ ಹರಡೋಣ ಬೆಂಕಿಪೊಟ್ಟಣ್ನ ಹೇಗೂ ಇದೆ ಬೆಂಕಿ ಹಚ್ಚೋಣ ಎಂದ. ಸರಿ ಅವನ ಯಜಮಾನಿಕೆಯಲ್ಲಿ ಎರಡು ಕಲ್ಲು ಹುಡುಕಿ ಅದರ ನಡುವೆ ಜಾಗ ಮಾಡಿ ಇಟ್ಟು ನಮ್ಮ ಜೇಬಿನಲ್ಲಿ ಸಂಗ್ರಹವಾಗಿದ್ದ ಗೇರುಬೀಜ ಹರಡಿ ಬೆಂಕಿ ಕಡ್ಡಿ ಗೀರಿಯಾಯಿತು. ಇಲ್ಲ ಅದೇನು ಪೆಟ್ರೋಲೇ ಬಗ್ಗಂತ ಹತ್ತಲು?. ನಮ್ಮಲ್ಲಿದ್ದ ಬೆಂಕಿಕಡ್ಡಿ ಸಂಗ್ರಹ ಕಡಿಮೆಯಾಗುತ್ತಾ ಬಂತೇ ಹೊರತು ಬೆಂಕಿ ಹತ್ತಲಿಲ್ಲ. ಅಂತಿಮವಾಗಿ ಆತ ಒಣಗಿದ ಕರಡ ಕಿತ್ತು ತಂದು ಗುಡ್ಡೆ ಹಾಕಿ ಅದರ ರಾಶಿಗೆ ಬೆಂಕಿ ಇಟ್ಟು ಅದರ ಮೇಲೆ ಗೇರುಬೀಜ ಹಾಕಿದ. ಬೆಂಕಿಯ ಮೇಲೆ ಗೇರುಬೀಜ ಬಿದ್ದ ಕೆಲವೇ ಕ್ಷಣಗಳಲ್ಲಿ ಟಸ್ ಪುಸ್ ಅಂತ ಗೇರೆಣ್ಣೆ ಬೀಜದಿಂದ ಹಾರತೊಡಗಿತು. ಗೇರೆಣ್ಣೆಯ ಜತೆ ಬೆಂಕಿಯೂ ಅತ್ತ ಇತ್ತ ಹಾರಿತು. ಇನ್ನೇನು ನಾವು ಬೆಂಕಿ ಆರಿಸಿ ಗೇರುಬೀಜ ಬಾಚಿಕೊಳ್ಳಬೇಕು ಅನ್ನುವಷ್ಟರಲ್ಲಿ ಕರಡ(ಒಣ ಹುಲ್ಲು) ಕ್ಕೆ ಬೆಂಕಿ ವ್ಯಾಪಿಸಿತು. ನಾವು ನೋಡನೋಡುತ್ತಿದ್ದಂತೆ ಕ್ಷಣಮಾತ್ರದಲ್ಲಿ ಬೆಂಕಿ ಕಾಡ್ಗಿಚ್ಚಾಗಿ ರುದ್ರ ನರ್ತನ ಪ್ರಾರಂಬಿಸಿತು. ನಾವು ಮೂವರು ದಿಕ್ಕು ತೋಚದೆ ಅಲ್ಲಿಂದ ಓಡು.
ಮಾರನೇ ದಿವಸ ದೊಡ್ಡವರು "ಯಾರೋ ದಾರಿಹೋಕರು ಬೀಡಿ ಸೇದಿ ಗುಡ್ಡಕ್ಕೆ ಬೆಂಕಿ ಹಾಕಿದಾರೆ" ಅಂತ ಹೇಳುತ್ತಿದ್ದರು. ನಾವು ಮಾತ್ರಾ ಗಪ್ ಚುಪ್....!.
ಅಂದು ಹಾಗೆ ಗುಡ್ಡ ಕಾಡು ಸುತ್ತಿದ್ದು ಇಂದು ಅಲ್ಪ ಸ್ವಲ್ಪ ಉಪಯೋಗಕ್ಕೆ ಬರುತ್ತಿದೆ. ಸವಿ ಸವಿ ನೆನಪು ಅಂದು ಗಾಬರಿ ಮೂಡಿಸಿದ್ದರೂ ಇಂದು ಹಂಚಿಕೊಳ್ಳಲು ಚಂದ. ಹಳೆ ನೆನಪಿಗೆ ಜಾರುತ್ತಾ ಹೊಸ ದಂಪತಿಗಳಿಗೆ ಕಾಡಿನ ಒಂದೊಂದೆ ಗಿಡಗಳ ಪರಿಚಯ ಮಾಡಿಕೊಡುತ್ತಾ ಸಾಗಿದೆ. ಅವರು ಅಚ್ಚರಿಯಿಂದ ವೌವ್ ವಾಹ್ ಹೌದಾ ಎಂದಾಗ ನಾನೂ ಪುಳಕಿತನಾಗುತ್ತಿದ್ದೆ.
ಎರಡು ದಿನ ಅವರೂ ಪರಿಸರದ ಕಲರವ ಅನುಭವಿಸಿ ಗೂಡು ಸೇರಿದರು. ನಾನು ಮತ್ತೊಂದು ಪ್ರಕೃತಿ ಪ್ರೇಮಿಗಳ ನಿರೀಕ್ಷೆಯಲ್ಲಿ ಕಾಯಕದಲ್ಲಿ ತೊಡಗಿಕೊಂಡೆ

Wednesday, April 22, 2009

"ತಂಗಾಳಿಯಲ್ಲಿ ನಾನು ತೇಲಿ ಹೋದೆ"

ಅಮಾವಾಸೆಯ ಕಾರ್ಗತ್ತಲು. ನಕ್ಷತ್ರಗಳು ಅಲ್ಲೊಂದು ಇಲ್ಲೊಂದು ಮಿನುಗುತ್ತಿತ್ತು.ಮೋಡ ನಕ್ಷತ್ರಗಳನ್ನು ಮರೆಮಾಚಿ ಮತ್ತೆ ತೋರಿಸುತ್ತಿತ್ತು. ಬಾಲ್ಯದಿಂದ ಮನಸ್ಸಿನ ಮೂಲೆಯಲ್ಲಿ ಅಡಗಿದ್ದ ಅಮಾವಾಸೆಯ ಭಯವನ್ನು ತೊಡೆದುಹಾಕುವ ನಿರ್ಧಾರವನ್ನು ತೆಗೆದುಕೊಂಡು ಅದಾಗಲೇ ಮನೆಯಿಂದ ಅರ್ದ ಕಿಲೋಮೀಟರ್ ಕ್ರಮಿಸಿದ್ದೆ. ಬೂತ ದೆವ್ವ ಪಿಶಾಚಿ ಮುಂತಾದವುಗಳ ಬಗ್ಗೆ ಕೇಳಿದ್ದ ಕತೆಗಳು ಪುಂಖಾನುಪುಂಖವಾಗಿ ನೆನಪಿಗೆ ಬರುತ್ತಿತ್ತು. ನಾನು ಕತ್ತಲಿನಲ್ಲಿ ಟಾರ್ಚ್ ನ ಸಹಾಯವೂ ಇಲ್ಲದೆ ಹಿಡಿದಿದ್ದ ದಾರಿ ಹಗಲೂ ಹೋಗಲು ಹೆದರುವ ಕಾಡು ಹಾಗೂ ಗುಡ್ಡದ ದಾರಿ. ನಿರ್ಜನ ಜಾಗದಲ್ಲಿ ದೆವ್ವಗಳು ಅಲೆದಾಟವಿರುತ್ತದೆ ಅವು ಮನುಷ್ಯರ ಆಕ್ರತಿಯನ್ನೇ ಹೊಂದಿದ್ದರೂ ಪಾದ ಮಾತ್ರ ಹಿಂದುಮುಂದೆ ಎಂಬಂತಹ ಕತೆಗಳು ಬೇಡವೆಂದರೂ ಪದೆ ಪದೆ ನೆನಪಾಗುತ್ತಿತ್ತು. ಅಂತಹ ನೆನಪುಗಳಿಂದ ಹೊರಬರಲು ಸಣ್ಣದಾಗಿ ಹಾಡಲು ಪ್ರಾರಂಭಿಸಿದೆ. ದಾರಿ ಕ್ರಮಿಸಿದಂತೆಲ್ಲಾ ಹಾಡಿನ ದನಿ ಸ್ವಲ್ಪ ಏರಿಸಿದೆ. ಗುಡ್ಡದ ದಾರಿಯಾದ್ದರಿಂದ ಏದುಸಿರು ಸ್ವಲ್ಪ ಹೆಚ್ಚಾಗಿ ಹಾಡಿನ ದನಿಯಲ್ಲಿಯೂ ಏರುಪೇರಾಗುತ್ತಿತ್ತು. ಒಮ್ಮೆ ನಾನು ಹಾಡುತ್ತಿರುವ ಹಾಡನ್ನು ನಾನೇ ಕೇಳಿಕೊಂಡೆ ಅರೆ "ತಂಗಾಳಿಯಲ್ಲಿ ನಾನು ತೇಲಿ ಹೋದೆ" ಎಂಬ ಮೋಹಿನಿಯದೇ ಹಾಡು. ಥೂ ದರಿದ್ರ ಅದು ಇಲ್ಲ ಎನ್ನುವುದಕ್ಕೆ ಹೊರಟ ನಾನು ಸರಿ ಸುಮಾರು ಅರ್ದ ಗಂಟೆ ಅದೊಂದೆ ಹಾಡು ನನಗೇ ತಿಳಿಯದಂತೆ ಹಾಡಿದೆನಲ್ಲ ಅಂತ ಅನಿಸಿ ಹಾಡು ಬದಲಾಯಿಸಿದೆ. ಇನ್ನು ಸರಿಸುಮಾರು ಅರ್ದ ಗಂಟೆ ಹೀಗೆ ನಡೆದರೆ ಗುಡ್ಡದ ತಲೆ ತಲುಪುತ್ತೇನೆ. ಅಲ್ಲಿಂದ ತಾಳಗುಪ್ಪ ಕಾಣಿಸುತ್ತದೆ. ಅಲ್ಲಿ ಲೈಟುಗಳ ಬೆಳಕು ನೋಡಬಹುದು. ದೂರದಲ್ಲಿ ಸಾಗರವನ್ನೂ ನೋಡಬಹುದು ಎಂದು ಆಲೋಚಿಸುತ್ತಾ " ನೂರೊಂದು ನೆನಪು ಎದೆಯಾಳದಿಂದ" ಎಂಬ ಬೇಸರದ ಹಾಡಿಗೆ ಭಾವುಕನಾಗಿ ಹಾಡುತ್ತಾ ಮುನ್ನೆಡದೆ. ಗುಡ್ಡದ ಏರಿನ ಹೊಡೆತ ಜೋರಾಗಿದ್ದರಿಂದ ಹಾಡಿನ ನಡುವೆ ಕೆಮ್ಮು ತನ್ನಿಂದತಾನೆ ಬರುತ್ತಿತ್ತು. ಹಾಗಾಗಿ ಹಾಡಿಗೆ ಒಂಥರಾ ಒರಿಜಿನಾಲಿಟಿ ಬಂದಿತ್ತು. ಗಂಟೆ ಸುಮಾರು ಎಷ್ಟಿರಬಹುದೆಂದು ಅಂದಾಜಿಸಿದೆ ಮನೆಯಿಂದ ಹೊರಡುವಾಗ ಹನ್ನೊಂದೂವರೆ ಈಗ ಹನ್ನೆರಡಾಗಿರಬಹುದಾ...? ಉತ್ತರ ಖಚಿತವಾಗಿ ಸಿಗಲಿಲ್ಲ. ಹನ್ನೆರಡು ಗಂಟೆಗೆ ಸರಿಯಾಗಿ ದೆವ್ವಗಳೂ ಡ್ಯೂಟಿ ಮುಗಿಸಿ ಮರಕ್ಕೆ ಬಂದು ವಾಪಾಸು ಸೇರಿಕೊಳ್ಳುತ್ತವೆ ಅಂತ ಯಾರೋ ಹೇಳಿದ್ದು ಪಕ್ಕನೆ ನೆನಪಾಯಿತು. ಎಷ್ಟೇ ಧೈರ್ಯ ತಂದುಕೊಂಡರೂ ಒಮ್ಮೆ ಮೈ ಜುಂ ಆಂತು. ನಡಿಗೆಯ ವೇಗದಿಂದ ಬೆವರು ಹರಿಯುತ್ತಿತ್ತು. ಅಂತೂ ಗುಡ್ಡದ ನೆತ್ತಿಗೆ ಬಂದು ತಲುಪಿದೆ. ಆಹಾ ಆ ಕ್ಷಣದ ಆನಂದ ಹೇಗೆ ವರ್ಣಿಸಲಿ..?. ಸೊಂಯ್ ಎಂದು ಬೀಸುವ ತಂಗಾಳಿ. ಗಾಳಿಗೆ ತೂಗುವ ಬೃಹದಾಕಾರದ ಬಿದಿರುಮೊಳೆಗಳು. ಅದರ ತಿಕ್ಕಾಟಕ್ಕೆ ಹೊರಡುವ ಸುಂಯ್ ಸುಂಯ್ ಶಬ್ದ. ಹೆಚ್ಚು ಕಮ್ಮಿ ಅರ್ದ ಗಂಟೆಗಳ ಕಾಲ ಅಲ್ಲಿಯೇ ಅತ್ತ ಇತ್ತ ಓಡಾಡಿದೆ. ಸೆಕೆಯ ಬೆವರಿಗೆ ಒದ್ದೆಯಾಗಿದ್ದ ಅಂಗಿಯನ್ನು ಬಿಚ್ಚಿ ಸುಮ್ಮನೆ ಮೇಲಕ್ಕೆ ಎಸೆದೆ. ಅದೊಂದೆ ನಾ ಮಾಡಿದ ಸ್ವಲ್ಪ ಯಡವಟ್ಟು ಕೆಲಸ. ಅಂಗಿ ಬಿದಿರಿನ ಹೆಣೆಕೆಗೆ ಸಿಕ್ಕಿ ಹಾಕಿಕೊಂಡಿತು. ಸಧ್ಯ ಬಿಳಿ ಬಣ್ಣದ ಅಂಗಿಯಾಗಿದ್ದರಿಂದ ದೂರದಿಂದಲೂ ಸ್ಪಷ್ಟವಾಗಿ ಕಾಣಿಸುತ್ತಿತ್ತು. ಹಾಗೆಯೇ ಸ್ವಲ್ಪ ಹೊತ್ತಿ ಅಂಗಿಯ ಆಲೋಚನೆ ಬಿಟ್ಟು ಪ್ರಪಂಚವನ್ನು ತಂಗಾಳಿಯ ಸುಖವನ್ನು ಅನುಭವಿಸುತ್ತಾ ಆಡ್ಡಾದೆ. ಸುಸ್ತೆಲ್ಲಾ ಮಾಯವಾದಮೇಲೆ ಹರಸಾಹಸ ಪಟ್ಟು ಕೋಲೋಂದರ ಸಹಾಯದಿಂದ ಅಂಗಿಯನ್ನು ಕೆಳಗಿಳಿಸಿ ಮನೆಗೆ ಹೊರಡಲನುವಾದೆ.
ಅಷ್ಟರಲ್ಲಿ ನನ್ನಿಂದ ಸುಮಾರು ನೂರು ಅಡಿ ದೂರದಲ್ಲಿ ಸರಸರ ಸದ್ದು ಮಾಡುತ್ತಾ ಒಂಥರಾ ವಿಚಿತ್ರ ರೀತಿಯಲ್ಲಿ ಅಯ್ಯೋ ಎಂದು ಕೂಗುತ್ತಾ ಯಾರೋ ಓಡಿಹೋದಂತಾಯಿತು.
ಈಗ ಮಾತ್ರಾ ಅಂತಹ ತಂಗಾಳಿಯಲ್ಲಿಯೂ ನಖಶಿಕಾಂತ ಬೆವರಿದೆ. ಮತ್ತೆ ಸ್ವಲ್ಪ ಕ್ಷಣ ಸುಧಾರಿಸಿಕೊಂಡು ಯಾವ ಸದ್ದೂ ಬಾರದಾದಮೇಲೆ ಬಿರಬಿರನೆ ಮನೆಗೆ ಸೇರಿದೆ. ಹಾಗೆ ಕೂಗಿದ್ದು ದೆವ್ವವಾ?. ಅಥವಾ ನನ್ನಲ್ಲಿ ಅಡಗಿದ್ದಾ ಭಾವನೆಯಾ? ಉತ್ತರ ರಾತ್ರಿ ಪೂರ್ತಾ ನಿದ್ರೆಗೆಟ್ಟರೂ ಸಿಗಲೇ ಇಲ್ಲ. ನಿದ್ರೆ ಮಾಡಲೂ ಆಗಲಿಲ್ಲ. ಮಾರನೇ ದಿನ ಅದಕ್ಕೊಂದು ಉತ್ತರ ಸಿಕ್ಕೀತು ಅಂತ ನಾನು ಎಣಿಸಿರಲಿಲ್ಲ.
ಬೆಳಿಗ್ಗೆ ಎದ್ದವನು ನಿತ್ಯ ಕೆಲಸಗಳನ್ನೆಲ್ಲಾ ಮುಗಿಸಿ ಕೊನೆಕೊಯ್ಯುವ ಸುಬ್ಬನಿಗಾಗಿ ಕಾಯುತ್ತಾ ಕುಳಿತೆ. ಹತ್ತು ಗಂಟೆಯಾದರೂ ಆತ ಪತ್ತೆ ಇಲ್ಲ. ಬೇರೆಲ್ಲಾದರೂ ಹೋಗಿಬಿಟ್ಟನೇನೋ ನೋಡಿ ಬರೋಣ ಅಂತ ಅವನ ಮನೆಗೆ ಹೋದೆ. ಸುಬ್ಬನ ಮನೆ ತಲುಪಿ ಅವನ ಹೆಸರು ಹಿಡಿದು ಕೂಗಿದೆ. ಆದರೆ ಆತ ಹೊರಬರದೆ ಅವನ ಹೆಂಡತಿ ಲಕ್ಷ್ಮಿ ಹೊರಗೆ ಬಂದು "ಅವ್ರಿಗೆ ಸಿಕ್ಕಾಪಟ್ಟೆ ಜ್ವರ ಬಂದೈತಿ" ಎಂದಳು.
"ನಿನ್ನೆ ಅರಾಂ ಇದ್ನಲ್ಲ" ನಾನಂದೆ
"ಹೌದ್ರಿ ರಾತ್ರಿ ಬ್ಯಾಡ್ದಿದ್ದು ಮಾಡಾಕೆ ಹೋಗಿ ಜ್ವರ ಬರ್ಸಿಕೊಂಡಿದಾರೆ"
"ಎಂತದು ಅಂತ ಮಾಡಬಾರದ ಕೆಲ್ಸ"?.
"ನಿನ್ನೆ ರಾತ್ರಿ ಅಮಾಸೆ ಬ್ಯಾಡ ಅಂತ ನಾ ಹೇಳಿದ್ರು ಕೇಳ್ದೆ ಕಾಡುಗುಡ್ಡಕ್ಕೆ ಬ್ಯಾಟಿಗೆ ಹೋಗಿದಾರೆ, ಅಲ್ಲಿ ದಯ್ಯ ಕಂಡು ಕೂಗ್ತಾ ಮನಿಗೆ ಬಂದು ಬಿದ್ಕಂಡಿದಾರೆ, ಈಗ ಗಾಡಿಗ ಮಾವಂಗೆ ಹೇಳಿ ಕಳ್ಸಿದೀನಿ" ಎಂದು ದುಗುಡ ತುಂಬಿದ ವದನಾರವಿಂದ ದಿಂದ ಹೇಳಿದಳು.
ಈಗ ನನಗೆ ರಾತ್ರಿಯ ಕೂಗಿನ ಮರ್ಮ ತಿಳಿಯಿತು. "ಅಯ್ಯೋ ಅದು ದೆವ್ವ ಅಲ್ಲ ಎಂತೂ ಅಲ್ಲ, ಮಾರಾಯ್ತಿ ನಾನೇ ರಾತ್ರಿ ಗುಡ್ಡಕ್ಕೆ ಹೋಗಿದ್ದೆ ನನ್ನ ನ್ನ ಕಂಡು ದೆವ್ವ ಅಂದ್ಕೊಂಡಿದಾನೆ ಕರಿ ಇಲ್ಲಿ ಅವನ್ನ" ಎಂದೆ.
"ಸುಮ್ಕಿರಿ ಒಡಿಯಾ ನೀವು, ತಮಾಶಿ ಮಾಡಾದು ಸಾಕು, ನೀವೆಂತಕೆ ಅಪರಾತ್ರಿಲಿ ಗುಡ್ಡಕ್ಕೆ ಹೋಕ್ತೀರಿ?. ಅದೂ ಅಲ್ದೆ ಅವ್ರು ಸರಿಯಾಗಿ ನೋಡಿದಾರಂತೆ . ಕೆಳಗೆ ಒಂದು ಓಡಾಟ್ತ ಇತ್ತಂತೆ, ಇನ್ನೊಂದು ಸೊಂಯ್ ಅಂತ ಹಾರಿ ಬಿದಿರು ಮಟ್ಟಿಯ ತಲೆಯ ಮೇಲೆ ಹಾರಿ ಕುತ್ಕಂಡ್ತಂತೆ, ಅದಕ್ಕೆ ಎರಡು ಕೈ ಮಾತ್ರಾ ಇತ್ತಂತೆ . ನೀವೆ ಆಗಿದ್ರೆ ನಿಮ್ಗೆ ಮೇಲೆಲ್ಲ ಹಾರಾಕೆ ಬರ್ತೈತಾ?."
ಈಗ ಉತ್ತರಿಸಲಾಗದ ಹಂತಕ್ಕೆ ನಾನು ಬಂದಿದ್ದೆ ನಾನು ಸುಮ್ಮನೆ ಮೇಲಕ್ಕೆ ಹಾರಿಸಿದ ಅಂಗಿ ಸೆಕೆ ತಡೆಯಲಾರದೆ ಮಾಡಿದ ಕೆಲಸ ದೆವ್ವಗಳ ನಂಬಿಕೆಯಿಂದ ಹೊರಬರಲು ಮಾಡಿದ ಅಪರಾತ್ರಿ ಓಡಾಟ, ಯಾವುದನ್ನೂ ಆಕೆ ನಂಬುವ ಸ್ಥಿತಿಯಲ್ಲಿ ಇರಲಿಲ್ಲ. ಆದರೆ ನನಗೆ ರಾತ್ರಿ ಕೂಗಿನ ಉತ್ತರ ಸಿಕ್ಕಿತ್ತು. ಸೈ ಎನ್ನುತ್ತಾ ಮನೆಯ ದಾರಿ ಹಿಡಿದೆ.
ಸಂಜೆ ಅವರ ಮನೆಯ ಮುಂದೆ ಹಾದು ಹೋಗುತ್ತಿರುವಾಗ ಗಾಡಿಗನ ಆರ್ಭಟ ಜೋರಾಗಿ ಕೆಳಿಬರುತ್ತಿತ್ತು. " ಇನ್ನು ಈ ಕಡೆ ಬರ್ತೀಯಾ?. ಬಿಟ್ಟೋಗು ದರಿದ್ರ ನಾನು ಅಂತಿಂತ ಗಾಡಿಗ ಅಂತ ತಿಳ್ಕಂಡಿಯಾ? ನೀನು ಬಿದಿರು ಮಟ್ಟಿ ಹತ್ತಿ ಕುಳಿತರೆ ನಾನು ಆಕಾಸ್ದಾಗೆ ತೇಲಾಡ್ತೀನಿ, ಹೋಗ್ ಹೋಗ್" ಎನ್ನುತ್ತಾ ಸುಬ್ಬನಿಗೆ ಬೇವಿನ ಸೊಪ್ಪಿನ ಪೂಜೆ ನಡೆಯುತ್ತಿತ್ತು.
ದೆವ್ವಕ್ಕೆ ಉತ್ತರ ಹುಡುಕಲು ಹೋಗಿ ಇನ್ನಷ್ಟು ದೆವ್ವದ ನಂಬಿಕೆ ಹೆಚ್ಚಾಗಲು ಕಾರಣೀಕರ್ತನಾದೆನಲ್ಲ ಅಂತ ಅನ್ನಿಸಿದ್ದು ಸುಳ್ಳಲ್ಲ.

Tuesday, April 21, 2009

ಕಾರ್ ಕಾರ್ ಕಾರ್


ಅಬ್ಬಾ ಈ ಕಾರ್ ಮುಟ್ಟಲೂ ಹಣ ಕೊಡಬೇಕೇನೋ. ಬಂಗಾರ ಮಯದ ಈ ಕಾರ್ ನೋಡಿ. ಜಗತ್ತು ಎಂತಹ ಐಷರಾಮಿನಲ್ಲಿ ತೇಲುತ್ತಿದೆ ಅಂತ ಅರ್ಥವಾಗುತ್ತೆ

Thursday, April 16, 2009

ಅಂತರ್ಯಾತ್ರೆ

ಎಲ್ಲಾ ಅಂದುಕೊಂಡಂತಯೇ ಆಗಿದ್ದರೆ "ಕಟ್ಟು ಕಥೆಯ ಕಟ್ಟು" ಎಂಬ ಹೆಸರಿನ ನನ್ನದೆ ಕಥಾಸಂಕಲನವೊಂದು ಇದೇ ಏಪ್ರಿಲ್ ನಲ್ಲಿ ಹೊರಬರಬೇಕಾಗಿತ್ತು. ಹಿಂದೆಯೇ ಬ್ಲಾಗ್ ನಲ್ಲಿ ಹಾಗೆ ಬರೆದಿದ್ದೆ ಕೂಡ. ನಮ್ಮ ಕಥೆಯನ್ನು ನಾವೇ ಪ್ರಕಟಿಸಿಕೊಳ್ಳಬೇಕು ಹಾಗು ನಾವೇ...! ಓದಿಕೊಳ್ಳಬೇಕು ಎಂದು. ಆದರೆ ಎಲ್ಲಾ ಅಂದುಕೊಂಡಂತೆ ಆಗಲಿಲ್ಲ. ಹಾಗಾಗಿ ಕಥಾ ಸಂಕಲನ ಹೊರಬರಲಿಲ್ಲ. ಕಾರಣ..? ನೂರಾರು ಹೇಳಬಹುದು.
ಕಳೆದ ಎರಡು ತಿಂಗಳಿನಿಂದ ನನ್ನ ಬರವಣಿಗೆ ಅಪೂಟ್ ಬಂದ್ ಆಗಿದೆ. ದಿನಕ್ಕೊಂದು ಬ್ಲಾಗ್ ವಾರಕ್ಕೊಂದು ಕಥೆ ಹದಿನೈದು ದಿನಕ್ಕೊಂದು ಲೇಖನ ಅಂತೆಲ್ಲಾ ಬರೆಯುತ್ತಿದ್ದವನು ಅದೇಕೋ ಮಂಕಾಗಿಬಿಟ್ಟೆ. ಓದುವ ಹವ್ಯಾಸವನ್ನು ನಿಲ್ಲಿಸಿಬಿಟ್ಟೆ. ಯಾವಾಗಲೋ ಬರೆದ ಕಥೆಗಳನ್ನು ಬ್ಲಾಗ್ ಗೆ ಅಪ್ ಲೋಡ್ ಮಾಡುವುದನ್ನು ಬಿಟ್ಟರೆ ಮತ್ತಿನ್ನೇನೂ ಮಾಡಲಿಲ್ಲ. ಪರಿಚಯ ಇರುವ ಬರಹಗಾರರಿಗೆ ಪೋನ್ ಹಚ್ಚುವುದನ್ನೂ ಬಿಟ್ಟೆ. ಅದಕ್ಕೆ ಮುಖ್ಯ ಸಬೂಬು ಎಂದರೆ ನನ್ನೊಳಗೆ ನಾನು ಇಳಿಯುವ ಯತ್ನಕ್ಕೆ ಕೈ ಹಾಕಿದ್ದು. ವೇದ ಶಾಸ್ತ್ರಗಳ ಹಂಗಿಲ್ಲದೆ, ಪುರಾಣ ಪುಣ್ಯ ಕಥೆಗಳ ಮಾರ್ಗದರ್ಶನವಿಲ್ಲದೆ, ಇತಿಹಾಸದ ಅವಲೋಕನವಿಲ್ಲದೆ, ಪೂರ್ವಾಗ್ರಹದ ಯೋಚನೆಯಿಲ್ಲದೆ ನನ್ನೊಳಗೆ ನಾನು ಮುಳುಗಿದೆ. ಮತ್ತು ಇನ್ನು ಮುಳುಗುತ್ತಲೇ ಇದ್ದೇನೆ. ಅದೇನೋ ಸಿಕ್ಕಂತಾಗುತ್ತಿದೆ. ಮತ್ತೆ ಮರೀಚಿಕೆ. ಹಾಗೆ ಇಳಿಯುತ್ತಾ ಸಾಗುತ್ತಾ ಇರುವ ಅಂತರ್ಯಾತ್ರೆ ಅದ್ಬುತವನ್ನು ಕಲ್ಪಿಸಿದೆ. ಅದನ್ನು ಎಲ್ಲಾ ಹೇಳಬೇಕು ಅಂತ ಅನ್ನಿಸುತ್ತದೆ ಆದರೆ ಅದಕ್ಕೆ ಪಕ್ವವಾದ ಕಾಲ ಇನ್ನೂ ಬಂದಿಲ್ಲ ಅಂತಲೂ ಹೆದರಿಸುತ್ತದೆ ಒಳಮನಸ್ಸು.

ಅಷ್ಟರೊಳಗೆ ಕಥಾಸಂಕಲನ ಹೊರ ತರಬೇಕು. ಏಪ್ರಿಲ್ ತಿಂಗಳಿನಲ್ಲಿ ಕಥಾಸಂಕಲನ ಹೊರತರಲಾಗದ್ದಕ್ಕೆ ಮೇಲಿನ ಕಾರಣ ಯಾವುದೂ ಅಲ್ಲ. ಜೇಬಿನದ್ದು ಮುಖ್ಯ ಕಾರಣ. ಕನಿಷ್ಟ ಇಪ್ಪತ್ತು ಸಾವಿರ ರೂಪಾಯಿ ಬೇಡುವ ಕಥಾಸಂಕಲನದ ಕೆಲಸ ತುಸು ಕಷ್ಟಕರ ಅಂತ ಮೇಲ್ಮನಸ್ಸಿಗೆ ಅನ್ನಿಸುತ್ತಿದೆ. ಆದರೆ ಅಂತರ್ಯಾತ್ರೆಯ ಸಮಯದಲ್ಲಿ ಅದಕ್ಕೊಂದು ಖಚಿತ ಉತ್ತರ ಸಿಕ್ಕಿದೆ. ನಡಯಲೇಬೇಕಾದ್ದು ನಡದೇ ನಡೆಯುತ್ತದೆ. ಅದು ಸರಿ ಆದರೆ ಅದು ಹೇಗೆ? ಎಂಬುದು ಮೆಲ್ಮನಸ್ಸಿನ ಪ್ರಶ್ನೆ?. ಉತ್ತರ ಇಂದು ಗೊತ್ತಿಲ್ಲ. ನಾಳೆ...? ನೋಡೋಣ.

Monday, April 13, 2009

ರಿಂಗ್ ರಿಂಗ್ ರಿಂಗ್


ಹಾ ಇದು ಉಂಗುರ ಅಂತ ನೋಡಿದಕೂಡಲೆ ತಿಳಿಯುತ್ತದೆ. ಸ್ವಲ್ಪ ಹೊಸ ತರಹದ್ದು ಅಂತ ಅನ್ನಿಸಲೂ ಬಹುದು. ನಾನು ಹಾಗೆ ಅಂತ ಅಂದುಕೊಂಡು ನೋಡಿದ್ದೆ. ಆದರೆ ಅದರ ಅರ್ಥ...! ಬೇರೆಯೇ ಇದೆಯಂತೆ. ಇದು ನಿಶ್ಚಿತಾರ್ಥದ ಉಂಗುರವಂತೆ ವರನ ಉಂಗುರ ವಧುವಿನ ಉಂಗುರ ಯಾವುದೆಂಬ ಆಯ್ಕೆ ಹಾಗೂ ಅದರ ಒಳಮರ್ಮ ನಿಮಗೆ ಬಿಟ್ಟದ್ದು.
ಈಗ ನಿಮ್ಮ ತುಟಿಯಂಚಲಿ ಒಂದು ನಗು ಮಿಂಚಿರಬಹುದು. ಹೇಗಿದೆ ನೋಡಿ ಐಡಿಯಾ....! ಜನರದ್ದು.