Monday, October 11, 2010

ಸೇವಂತಿಯೇ ಸೇವಂತಿಯೇ




"ಈ ವರ್ಷ ಎಷ್ಟು ಪಿಂಟಾಲ್ ಸೇವಂತೀ ಬೇಳ್ದೀಯಪ್ಪಾ..? ಎಲ್ಡು ಎಕ್ರೆಗೆ ಹಾಕಿದೀನಿ ಎಷ್ಟು ಬರ್ತಾವ್ ನೋಡ್ಬೇಕು" ಎಂದು ಸೇವಂತಿಯೆಂಬ ಸುಂದರ ಹೂವಿನ ಮಾತುಗಳು ಕೇಳಿಬಂದರೆ ಅದು ಬಯಲುಸೀಮೆಯ ರೈತರ ಬೆಳೆ ಹಾಗೂ ಬದುಕಿನ ಕತೆ. "ನಿಮ್ಮ ಮನೇಲಿ ಕಾರದ ಕಡ್ಡಿ, ಅರಿಶಿನ ಮುಡಿ ಶ್ಯಾವಂತಿಗೆ ಹಿಳ್ಳು ಇದ್ರೆ ನಂಗೊಂದು ಬೇಕು" ಎಂದು ಶ್ಯಾವಂತಿಗೆ ಎಂಬ ನಯನಮನೋಹರ ಹೂವಿನ ಹೆಸರು ಕೇಳಿತೆಂದರೆ ಅದು ಮಲೆನಾಡಿನ ಹೆಂಗಳೆಯರ ಚಿಟ್ಟೆ ಶ್ಯಾವಂತಿಗೆ ಹೂವಿನ" ಹವ್ಯಾಸದ ಕತೆ.
ಸೇವಂತಿ, ಶ್ಯಾವಂತಿ ಎಂಬ ಪುಷ್ಪ ಹೀಗೆ ಒಂದೆಡೆ ವ್ಯವಹಾರವಾಗಿ ಇನ್ನೊಂದೆಡೆ ಹವ್ಯಾಸವಾಗಿ ಹಾಸುಹೊಕ್ಕಾಗಿದೆ. ಬಯಲುಸೀಮೆಯಲ್ಲಿ ಎಕರೆಗಟ್ಟಲೆ ಹೊಲದಲ್ಲಿ ಒಂದೆರಡು ಬಣ್ಣದಲ್ಲಿ ಅಂದವಾಗಿ ನಿಲ್ಲುವ ಸೇವಂತಿ ಮಲೆನಾಡಿನ ಅಂಗಳದ ತುದಿಯ ಚಿಟ್ಟೆ ಎಂದು ಕರೆಯಿಸಿಕೊಳ್ಳುವ ಮೂರಡಿ ಅಗಲದ ಜಾಗದಲ್ಲಿ ಶ್ಯಾವಂತಿಗೆಯಾಗಿ ಹತ್ತು ಹಲವಾರು ಬಣ್ಣಗಳಲ್ಲಿ ವಿಧವಿಧ ಆಕಾರದಲ್ಲಿ ಅರಳಿ ನಿಲ್ಲುತ್ತಾಳೆ.
ಜಡಿ ಮಳೆಹೊಡೆದರೆ ಶ್ಯಾವಂತಿಗೆ ಗಿಡ ಬದುಕುವುದಿಲ್ಲ ಹಾಗಾಗಿ ಮಳೆ ತಗುಲದ ಸೂರಂಚಿನ ಚಿಟ್ಟೆ ಮಲೆನಾಡಿನ ಮಹಿಳೆಯರ ಹೂದೋಟವಾಗುತ್ತದೆ. ಜೂನ್ ತಿಂಗಳಿನಿಂದ ಬಂಧುಬಳಗ ನೆಂಟರಿಷ್ಟರ ಮನೆಯಿಂದ ಹಾಗೂ ಸ್ವಂತ ಖಜಾನೆಯಲ್ಲಿ ಕಾಪಿಟ್ಟ ಹಿಳ್ಳುಗಳು ಚಿಟ್ಟೆಯಲ್ಲಿ ಆರೈಕೆ ಪಡೆಯಲಾರಂಬಿಸುತ್ತವೆ. ಅಕ್ಟೋಬರ್ ಹೊತ್ತಿಗೆ ಮೋಡಮಾಯವಾಗಿ ಬಿಸಿಲ ರೇಷ್ಮೆ ಗಿಡದ ನೆತ್ತಿಗೆ ಬೀಳಲಾರಂಬಿಸಿದಕೂಡಲೇ ನಾನಾ ತರಹದ, ವಿವಿಧ ಬಣ್ಣದ ಹೂವುಗಳು ಅರಳಲಾರಂಬಿಸುತ್ತವೆ. ಆವಾಗ ಹೂದೋಟದ ಒಡತಿಯ ಗತ್ತು ಬದಲಾಗುತ್ತದೆ. ಹೆಚ್ಚು ಹೆಚ್ಚು ಹೂವುಗಳು ಅರಳಿ ನಿಂತರೆ ಆ ವರ್ಷ ಅವರ ಸುದ್ದಿ ಹತ್ತಿರದ ಊರುಗಳಿಗೆಲ್ಲಾ ಹಬ್ಬಿ ವೀಕ್ಷಕರ ದಂಡು ಹರಿದುಬರುತ್ತದೆ. ನಿತ್ಯ ಕಂಬಳಿ ಹುಳುವಿನಿಂದ ರಕ್ಷಣೆ ನೀಡಲು ಬೂದಿ ಸೋಕುವುದು, ಒಣಗಿದ ಎಲೆ ಕೀಳುವುದು ಒಡತಿಯ ಎರಡು ತಾಸು ಸಮಯ ಕಳೆಯುವ ಕೆಲಸವಾಗುತ್ತದೆ. ಅಪ್ಪಿತಪ್ಪಿಯೂ ಹೂವನ್ನು ಗಿಡದಿಂದ ಕೀಳದೆ ಅಲ್ಲಿಯೇ ಅಂದವನ್ನು ಸವಿಯುವುದು ಮಲೆನಾಡ ಮಹಿಳೆಯರ ಈ ಹವ್ಯಾಸದ ಪ್ರಮುಖ ಅಂಶಗಳಲ್ಲೊಂದು. ಹಾಗಂತ ನೋಡಲು ಬರುವ ವಿಶ್ವಾಸಕರಿಗೆ ಖಾಲಿ ಜಡೆಯಿಂದ ಕಳುಹಿಸುವ ಹಾಗಿಲ್ಲ, ಅದಕ್ಕಾಗಿ ಮೂಲೆಯಲ್ಲಿ ಒಂದೆರಡು ಬಿಳಿ ಬಣ್ಣದ ಆದರೆ ಹೆಚ್ಚು ಹೂವು ಬಿಡುವ ಶ್ಯಾವಂತಿಗೆ ಮುಡಿಗೇರಲು ಸಿದ್ಧವಾಗಿರುತ್ತದೆ.ಹೀಗೆ ಒಂದೆಡೆ ವಹಿವಾಟು ನಡೆಸಿ ಇನ್ನೊಂದೆಡೇ ಹವ್ಯಾಸಕ್ಕೆ ಬಳಕೆಯಾಗುತ್ತಿರುವ ಸೇವಂತಿ ತನ್ನ ಸುವಾಸನೆ ಹಾಗೂ ಅಂದದಿಂದ ಗಾರ್ಡನ್ ಪ್ರಿಯರ ಮನಸೂರೆಗುಳ್ಳುತ್ತಿದೆ
(ಇಂದಿನ ವಿಕ ಲವಲವಿಕೆಯಲ್ಲಿ ಪ್ರಕಟಿತ

Sunday, October 10, 2010

ಮೀನು ಕುಣಿ


ಮೀನು ಎಂಬ ಎರಡಕ್ಷರ ಹಲವರಿಗೆ ಬಾಯಲ್ಲಿ ನೀರು ತರಿಸುತ್ತದೆ. ಅದೂ ಪುಕ್ಕಟ್ಟೆ ಮೀನು ಅಂದರೆ ಇನ್ನಷ್ಟು ಖುಷಿ ನೀಡುವುದು ಖಂಡಿತ. ಹಾಗೆ ರುಚಿರುಚಿಯಾದ ಪುಕ್ಕಟ್ಟೆ ಮೀನು ತಿನ್ನಲು ಮಲೆನಾಡಿನ ಹೊಳೆಯಂಚಿನ ಊರುಗಳಲ್ಲಿ ನೀವು ವಾಸವಾಗಿರಬೇಕಷ್ಟೆ, ಆಗ ಮಳೆಗಾಲದ ನಂತರ ಮೀನೂಟ ದಿನಾಲೂ ಉಚಿತ.
ಜಡಿಮಳೆ ಮುಗಿದ ಮಾರನೇ ದಿನ ಮಲೆನಾಡಿನ ಹೊಳೆಬದಿಯಲ್ಲಿ ಮೂರ್ನಾಲ್ಕು ಜನ ನಿಂತಿದ್ದಾರೆಂದರೆ ಅವರು ಅಲ್ಲಿ ಕುಣಿ ಹಾಕಿದ್ದಾರೆ ಎಂದರ್ಥ. ಹರಿವ ನೀರಿಗೆ ಅಡಿಕೆ ಮರದಿಂದ ದೋಣಿಯನ್ನು ಮಾಡಿ ಹೊಳೆಯ ಬದಿಯಲ್ಲಿ ಬೀಳುವಂತೆ ಮಾಡುತ್ತಾರೆ. ಹಾಗೆಯೇ ಆ ನೀರು ಹರಿವ ಬುಡದಲ್ಲಿ ಒಂದು ಡಬ್ಬವನ್ನಿಟ್ಟು ಮನೆ ಸೇರುತ್ತಾರೆ. ಆ ಮೀನುಗಳೋ ಮಳೆಗಾಲ ಮುಗಿಯೆತೆಂದಾಗ ನೀರಿನ ಮೂಲ ಸೇರಿಕೊಳ್ಳುವ ತವಕದಲ್ಲಿ ಹರಿವ ಹೊಳೆಯ ವಿರುದ್ಧವಾಗಿ ಹೋಗುತ್ತಿರುತ್ತವೆ. ಹಾಗೆ ಹೊರಟ ಮೀನುಗಳಿಗೆ ಈ ಸಣ್ಣ ಸಣ್ಣ ತೊರೆಗಳು ಅಪ್ಯಾಯಮಾನವೆನಿಸಿ ಅಲ್ಲಿ ಹೋಗಿ ನಂತರ ದಿಡೀರನೆ ಸಿಗುವ ಇಳಿಜಾರಿನಲ್ಲಿ ಜಾರುತ್ತಾ ಡಬ್ಬಿಯಲ್ಲಿ ಸಿಕ್ಕಿಹಾಕಿಕೊಂಡು ತಮ್ಮ ಸಾವಿಗೆ ತಾವೇ ಚರಮಗೀತೆ ಹಾಡುತ್ತಾ ಕುಣಿ ಹಾಕಿದವರು ಬರುವವರೆಗೂ ಅಲ್ಲಿಯೇ ಪಳಕ್ಕನೆ ಎಗರುತ್ತಾ ಕುಣಿಯುತ್ತಾ ಇರುತ್ತವೆ. ಸಂಜೆಮುಂದೆ ಇಟ್ಟುಹೋಗಿದ್ದ ಡಬ್ಬ ಬೆಳಿಗ್ಗೆ ಬರುವ ಹೊತ್ತಿಗೆ ಮೀನುಗಳಿಂದ ತುಂಬಿತುಳುಕುತ್ತಿರುತ್ತದೆ. ಒಂದು ಕೂಣಿಯನ್ನು ಮೂರ್ನಾಲ್ಕು ಜನ ಸೇರಿ ಹಾಕುವುದರಿಂದ ಅಲ್ಲಿ ಸಮಪಾಲು. ಪಾಲು ಹಂಚಿಕೊಂಡು ಮತ್ತೆ ಡಬ್ಬ ಅಲ್ಲಿಯೇ ಇಟ್ಟು ಹೊರಟರೆ ಮತೆ ಆಯುಷ್ಯ ಕಡಿಮೆಯಾದ ಮೀನುಗಳ ದಾರಿ ಅದರತ್ತ. ಮನುಷ್ಯರ ಚಿತ್ತ ಡಬ್ಬದತ್ತ.
ಹೀಗೆ ಸುಲಭವಾಗಿ ಮೂರ್ನಾಲ್ಕು ತಿಂಗಳು ಮೀನಿನೂಟ ಪುಕ್ಸಟ್ಟೆ ಮಾಡುವ ಮಲೆನಾಡು ಮಂದಿಯ ಅದೃಷ್ಟ ಯಾರಿಗುಂಟು ಯಾರಿಗಿಲ್ಲ. ಆದರೆ ಹೀಗೆ ಮೂರ್ನಾಲ್ಕು ತಿಂಗಳು ಪುಕ್ಕಟ್ಟೆ ರುಚಿ ಹಚ್ಚಿಸಿದ ಮೀನು ನಂತರದ ಒಂಬತ್ತು ತಿಂಗಳು ಹತ್ತಿದ ರುಚಿ ತಣಿಸಲು ಜೇಬು ಖಾಲಿಮಾಡಿಸಿಬಿಡುತ್ತದೆ.

(ವಿಕೆ ಲವಲವಿಕೆಯಲ್ಲಿ ಶನಿವಾರ ಪ್ರಕಟಿತ ಬರಹ)

Thursday, September 30, 2010

ರಾಮನಗಿಂಡಿ ಕಡಲ ಕಿನಾರೆ


ಸಮುದ್ರದ ಅಲೆಗಳ ನೋಟಕ್ಕೆ ಅದರಿಂದ ಉಂಟಾಗುವ ಶಬ್ಧಕ್ಕೆ ಅಲ್ಲಿ ಆಡಬಹುದಾದ ಆಟಕ್ಕೆ ಮನುಷ್ಯ ಮನಸೋತು ಶತಮಾನಗಳೇ ಕಳೆಯಿತು. ಕಡಲಿನ ಭೋರ್ಗರತ ಪ್ರಪಂಚವನ್ನು ಮರೆಯಿಸಿಬಿಡುತ್ತದೆ. ಪಂಚೇಂದ್ರಿಯಗಳನ್ನೂ ಅನುಭವಕ್ಕೆ ತೊಡಗಿಸಬಹುದಾದ ವಿಷಯಗಳಲ್ಲಿ ಕಡಲೂ ಒಂದು ಎನ್ನುವುದರಲ್ಲಿ ಲವಲೇಶದ ಸಂಶಯವೂ ಇಲ್ಲ. ಹಾಗಾಗಿ ಮನುಷ್ಯ ಸಮತಟ್ಟು ಸಮುದ್ರ ಸಿಕ್ಕ ಕಡೆಯಲ್ಲೆಲ್ಲಾ ಅದಕ್ಕೊಂದು ಹೆಸರನ್ನಿಟ್ಟು ಅಲ್ಲಿ ತಾನು ವಿರಮಿಸಲು ಜಾಗ ಕಂಡುಕೊಂಡಿದ್ದಾನೆ.
ಪ್ರಪಂಚದ ಸಮುದ್ರ ತೀರದ ದೇಶಗಳು ಸಾಮಾನ್ಯವಾಗಿ ಕಡಲನ್ನು ಪ್ರವಾಸೋದ್ಯಮಕ್ಕೆ ಬಳಸಿಕೊಂಡಿವೆ. ದೃಢ ಸರ್ಕಾರಗಳು ಮುನ್ನೋಟವಿರುವ ಆಡಳಿತಗಾರರು ಇರುವ ದೇಶಗಳು ವ್ಯವಸ್ಥಿತವಾಗಿ ಸಮುದ್ರವನ್ನು ಬಳಸಿಕೊಂಡರೆ ಹಿಂದುಳಿದ ದೇಶಗಳು, ಪ್ರವಾಸೋದ್ಯಮಕ್ಕೆ ಹೆಚ್ಚು ಆದ್ಯತೆ ಕೊಡದ ದೇಶಗಳು ಸಮುದ್ರದ ಕಿನಾರೆಯನ್ನು ಹಾಗೆ ಬಿಟ್ಟಿವೆ. ಆದರೂ ಕೂಡ ಅಲ್ಲಿ ಪ್ರವಾಸಿಗರು ಭೇಟಿ ನೀಡುತ್ತಾರೆ ಅದರಿಂದಾಗಿ ಪ್ರವಾಸೋದ್ಯಮ ಬೆಳದಿದೆ. ಭಾರತದಂತಹ ದೇಶ ಸಮುದ್ರವನ್ನು ಪ್ರವಾಸೋದ್ಯಮಕ್ಕೆ ಸಂಪೂರ್ಣ ಬಳಸಿಕೊಳ್ಳದಿದ್ದರೂ ವಿದೇಶಿಗರ ಬಳಕೆಯಿಂದಾಗಿ ಹಲವಾರು ಕಿನಾರೆಗಳು ಬೀಚ್ ಆಗಿ ಪರಿವರ್ತಿತಕೊಂಡು ಪ್ರಖ್ಯಾತವಾಗಿವೆ. ಗೋವಾ ಕೇರಳ ಸರ್ಕಾರಗಳು ಪ್ರವಾಸೋದ್ಯಮಕ್ಕೆ ತುಸು ಹೆಚ್ಚು ಪ್ರಾಶಸ್ತ್ಯ ಕೊಟ್ಟದ್ದರಿಂದ ಅಲ್ಲಿ ಸಮುದ್ರತಟಗಳು ಹೆಸರುವಾಸಿ. ಕರ್ನಾಟಕದ ಸಮುದ್ರ ತಟಗಳಾದ ಕಾರವಾರ ಗೋಕರ್ಣ, ಮಲ್ಪೆ, ಮಂಗಳೂರು ಮುಂತಾದಲ್ಲಿ ಬೀಚ್ ಗಳನ್ನು ಸರ್ಕಾರಕ್ಕಿಂತ ಪ್ರವಾಸಿಗರೇ ಭೇಟಿ ನೀಡಿ ವಿಶ್ವವಿಖ್ಯಾತಗೊಳಿಸಿದ್ದಾರೆ ಎನ್ನಬಹುದು. ಆದರೆ ಇನ್ನೂ ಅಜ್ಞಾತವಾಗಿಯೇ ಉಳಿದಿರುವ ಅತ್ಯಂತ ಮನಮೋಹಕವಾಗಿರುವ ಸಮುದ್ರತೀರಗಳು ಹಲವಾರು ಇವೆ ಅಂತಹ ಒಂದು ಸುಂದರ ಸಮುದ್ರ ಕಿನಾರೆಯ ಹೆಸರು ರಾಮನಗಿಂಡಿ ಕಡಲ ಕಿನಾರೆ.
ಸಾಮಾನ್ಯವಾಗಿ ನಾವು ಬೀಚ್ ಗಳಿಗೆ ನೆಲಮಟ್ಟದಲ್ಲಿ ಪ್ರವೇಶಿಸುತ್ತೇವೆ. ಹಾಗಾಗಿ ಸಮುದ್ರ ರಾಜನ ಆರ್ಭಟ ವಿಸ್ತಾರವಾಗಿ ನಮಗೆ ಕಾಣಿಸುವುದಿಲ್ಲ. ಗೋಕರ್ಣದ ಓಂ ಬೀಚ್ ನಂತಹ ಎತ್ತರದ ಪ್ರದೇಶದಿಂದ ಪ್ರವೇಶಿಸಲು ಅವಕಾಶವಿರುವ ಸಮುದ್ರ ಕಿನಾರೆ ಅಪರೂಪ. ಅಂತಹ ಅಪರೂಪದ ಕಿನಾರೆ ಈ ರಾಮನಗಿಂಡಿ ಎಂಬ ಊರಿನದು. ರಾಷ್ಟ್ರೀಯ ಹೆದ್ದಾರಿ ಸಂಖ್ಯೆ ೧೭ ರಲ್ಲಿ ಮಂಗಳೂರಿನಿಂದ ಕಾರವಾರಕ್ಕೆ ಹೋಗುವಾಗ ಹೊನ್ನಾವರದಿಂದ ೧೩ ಕಿಲೋಮೀಟರ್ ದೂರದಲ್ಲಿ ಬತ್ತಗೇರಿ ಕ್ರಾಸ್ ಸಿಗುತ್ತದೆ. ಅಲ್ಲಿಂದ ಒಂದು ಕಿಲೋಮೀಟರ್ ಒಳರಸ್ತೆಯಲ್ಲಿ ಹೋದರೆ ಸಿಗುವ ಊರೇ ರಾಮನಗಿಂಡಿ. ಈ ಊರು ಕೇವಲ ೮ ಮನೆಗಳಿರುವ ಸುಂದರ ಹಳ್ಳಿ. ಸ್ಥಳೀಯವಾಗಿ ದೊರಕುವ ಕಲ್ಲಿನಿಂದ ಮೂರ್ತಿಗಳನ್ನು ಕೆತ್ತುವ ಭಂಡಾರಿ ಕುಂಟುಂಬದವರು ಮಾತ್ರ ಇರುವ ಊರು ಇದು. ರಾಮನಗಿಂಡಿಗೆ ಪ್ರವೇಶ ಪಡೆಯುವ ಜಾಗದಲ್ಲಿ ನಿಂತು ಸಮುದ್ರ ನೋಡಿದಾಗ ಸಮುದ್ರದ ಅಗಾಧ ಪರಿಚಯವಾಗುತ್ತದೆ. ನಂತರ ಅಲ್ಲಿಂದ ಅರ್ದ ಕಿಲೋಮೀಟರ್ ದೂರ ಇಳಿಜಾರು ಪ್ರದೇಶದಲ್ಲಿ ಕಾಲ್ನಡಿಗೆಯಲ್ಲಿ ಸಾಗಿದರೆ ಪ್ರಶಾಂತ, ಸ್ವಚ್ಚ ಸಮುದ್ರ ನಿಮ್ಮನ್ನು ಸ್ವಾಗತಿಸುತ್ತದೆ.
ಇಲ್ಲಿಗೆ ಬರುವ ಪ್ರವಾಸಿಗರ ಸಂಖ್ಯೆ ಕಡಿಮೆಯಾದ್ದರಿಂದ ಹಾಗೂ ಬಂಡಾರಿ ಕುಟುಂಬದ ಜನರು ಸ್ವಲ್ಪಮಟ್ಟಿಗಿನ ಕಾಳಜಿ ತೆಗೆದುಕೊಳ್ಳುವುದರಿಂದ ಸಮುದ್ರ ತೀರ ಅತ್ಯಂತ ಸ್ವಚ್ಚವಾಗಿದೆ. ಸ್ಥಳ ಪುರಾಣದ ಪ್ರಕಾರ ಇಲ್ಲಿ ರಾಮ ಲಕ್ಷ್ಮಣರು ಯಾಗವನ್ನು ನಡೆಯಿಸಿದರಂತೆ, ಹಾಗಾಗಿ ಇದಕ್ಕೆ ರಾಮನಗಿಂಡಿ ಎಂಬ ಹೆಸರು ಬಂದಿದೆಯಂತೆ. ಇದಕ್ಕೆ ಸಾಕ್ಷಿ ಎಂಬಂತೆ ಅಲ್ಲಿನ ಗುಡ್ಡದ ಅಂಚಿನಲ್ಲಿ ಹೊಂಡ ತೆಗೆದರೆ ಕೆಂಪುಮಣ್ಣಿನಡಿಯಲ್ಲಿ ಬಿಳಿಯದಾದ ಭಸ್ಮ ಸಿಗುತ್ತದೆ. ಹಣೆಗೆ ಹಚ್ಚುವ ವಿಭೂತಿಯಂತಿರುವ ಭಸ್ಮ ಸಂಗ್ರಹಿಸಿ ತೆಗೆದುಕೊಂಡು ಹೋಗಲಿಕ್ಕಾಗಿಯೇ ಸಿರಸಿ, ಸಾಗರ ದಂತಹ ದೂರದೂರಿನಿಂದ ಇಲ್ಲಿಗೆ ಜನರು ಬರುತ್ತಾರೆ ಎನ್ನುತ್ತಾರೆ ಸ್ಥಳೀಯ ಆನಂದ ಭಂಡಾರಿ. ಹಾಗೆಯೇ ಸಮುದ್ರದಂಚಿನ ಗುಡ್ಡದಲ್ಲಿ ಹೇರಳ ಸಿಗುವ ಮೂರ್ತಿ ತಯಾರಿಸುವ ಕಲ್ಲು ಇಲ್ಲಿನ ಭಂಡಾರಿ ಕುಟುಂಬದ ಸದಸ್ಯರ ಹಸ್ತದಿಂದ ವಿವಿಧ ದೇವರುಗಳ ಆಕಾರ ಪಡೆದು ದೂರದೂರಿಗೆ ಹೋಗುತ್ತವೆ.
ಈ ಕಡಲ ಕಿನಾರೆಯ ಜವಾಬ್ದಾರಿಯನ್ನು ಸ್ವತ: ಊರಿನವರೇ ಸ್ವಘೋಷಿತವಾಗಿ ತೆಗೆದುಕೊಂಡಿರುವುದರಿಂದ ಪ್ರವಾಸಿಗರ ದೌರ್ಜನ್ಯಕ್ಕೆ ಒಳಗಾಗಿಲ್ಲ. ಸೂರ್ಯಾಸ್ತ ಹಾಗೂ ಸೂರ್ಯೋದಯ ಮತ್ತು ಸುಂದರ ಸಮುದ್ರವನ್ನೂ ಎತ್ತರದ ಸ್ಥಳದಲ್ಲಿ ನಿಂತು ಒಂದೇ ಜಾಗದಲ್ಲಿ ಸವಿಯಬಹುದಾದ ಅಪರೂಪದ ಜಾಗ ಈ ರಾಮನಗಿಂಡಿ.
(ಇಂದಿನ ಲವಲವಿಕೆಯಲ್ಲಿ ಪ್ರಕಟಿತ)

Monday, September 27, 2010

ಪವರ್ ಕಟ್ ಇಲ್ಲದ ಕಾನುತೋಟ




ಉತ್ತಮ ಗುಣಮಟ್ಟದ ವಿದ್ಯುತ್, ಪವರ್ ಕಟ್ ಪ್ರಶ್ನೆಯೇ ಇಲ್ಲ, ಸಿಂಗಲ್ ಫೇಸ್ ಕಾಟ ಗೊತ್ತಿಲ್ಲ, ದಿನಪೂರ್ತಿ ಸಮರ್ಪಕ ವಿದ್ಯುತ್ ಪೂರೈಕೆ, ಓಹ್ ಇಷ್ಟು ಓದಿದ ಮೇಲೆ ನೀವು ಇದು ನಮ್ಮ ದೇಶದ ಸುದ್ದಿಯೇ ಅಲ್ಲ ಎಂಬ ವಿಚಾರಕ್ಕೆ ಬಂದಿರುತ್ತೀರಿ, ಆದರೆ ಇದು ನಮ್ಮದೇ ರಾಜ್ಯದ ಪುಟ್ಟ ಹಳ್ಳಿಯ ಸುದ್ಧಿ. ವಿಷಯ ಅಷ್ಟೇ ಅಲ್ಲ ಎಷ್ಟೇ ವಿದ್ಯುತ್ ಉಪಯೋಗಿಸಿದರೂ ಬಿಲ್ ಕಟ್ಟಬೇಕಾಗಿಲ್ಲ, ಬಿಲ್ ಕಟ್ಟುವ ಕಿರಿಕಿರಿ ಅಥವಾ ಹಣ ಕಟ್ಟದಿದ್ದರೆ ಡಿಸ್‌ಕನೆಕ್ಟ್ ಮಾಡುವ ಭಯವೂ ಇಲ್ಲ. ಮೊದಲನೆಯದಲ್ಲ ಇದ್ದರೂ ಇರಬಹುದು ಇದು ಮಾತ್ರಾ ಬೊಗಳೆ ಎಂಬ ತೀರ್ಮಾನಕ್ಕೆ ಬಂದಿರಾದರೆ ಅದು ಸುಳ್ಳು.
ಶಿವಮೊಗ್ಗ ಸಾಗರ ತಾಲ್ಲೂಕು ಕಾನುತೋಟ ಎಂಬುದು ಸಾಗರದಿಂದ ಜೋಗಕ್ಕೆ ಸಾಗುವ ಮಾರ್ಗದಲ್ಲಿರುವ ಒಂಟಿಮನೆಯ ಪುಟ್ಟ ಹಳ್ಳಿ. ಅಲ್ಲಿಗೆ ಮೆಸ್ಕಾಂ ವಿದ್ಯುತ್ ಪೂರೈಕೆ ಮಾಡಿದೆಯಾದರೂ ಕಾಡಿನ ನಡುವೆ ಹಾದುಹೋಗಿರುವ ಲೈನ್ ನಿಂದಾಗಿ ವಾರಕ್ಕೊಮ್ಮೆ ವಿದ್ಯುತ್ ಮುಖ ನೋಡುವುದು ಕಷ್ಟವಾಗಿತ್ತು. ಆಗ ಕಾನುತೋಟದ ಗುರು ಮನಸ್ಸು ಮಾಡಿದ್ದು ಸ್ವಯಂ ವಿದ್ಯುತ್ ತಯಾರಿಕೆಗೆ. ಗುಡ್ಡದ ಬುಡದಲ್ಲಿರುವ ಗುರುರವರ ಮನೆಗೆ ಗುಡ್ಡದ ನೆತ್ತಿಯಿಂದ ಪ್ರಕೃತಿದತ್ತವಾದ ಅಬ್ಬಿನೀರು ಹರಿದು ಬಂದು ವ್ಯರ್ಥವಾಗಿ ಹೊಳೆಗೆ ಸೇರಿ ಹೋಗುತ್ತಿತು. ಅದಕ್ಕೆ ಪೈಪ್ ಲೈನ್ ಹಾಕಿ ಅಲ್ಲೊಂದು ಜನರೇಟರ್ ಕೂರಿಸಿದರು ಗುರು. ಅಲ್ಲಿಂದೀಚೆಗೆ ಕಾನುತೋಟದ ಗುರು ಅವರಿಗೆ ನಿರಂತರ ವಿದ್ಯುತ್ ಪೂರೈಕೆಯಾಗುತ್ತಿದೆ ಅದೂ ಪೈಸಾ ಖರ್ಚಿಲ್ಲದೆ. ವಿದ್ಯುತ್ ಟರ್ಬೈನ್ ತಿರುಗಿಸಿದನಂತರದ ನೀರು ತೋಟಕ್ಕೆ ಬಳಕೆಯಾಗುತ್ತದೆ. ಈಗಾಗಲೆ ಯಶಸ್ವೀ ಆರು ವರ್ಷಗಳನ್ನು ಸ್ವಯಂ ವಿದ್ಯುತ್ ತಯಾರಿಕೆ ಮಾಡಿಕೊಂಡು ಪೂರೈಸಿಕೊಳ್ಳುತ್ತಿರುವ ಗುರು ಪವರ್ ಕಟ್ ಮುಂತಾದ ಕಿರಿಕಿರಿಯಿಂದ ಮುಕ್ತರಾಗಿದ್ದಾರೆ. ಹೀಗೆ ಅವಕಾಶವಿರುವ ಜನರು ಮನಸ್ಸುಮಾಡಿದರೆ ಮೆಸ್ಕಾಂ ನ ಹೊರೆಯೂ ಕಡಿಮೆಯಾಗಿ ವಿದ್ಯುತ್ ಸ್ವಾವಲಂಬಿಗಳಾಗಬಹುದು ಎನ್ನುವುದು ಕಾನುತೋಟದ ಗುರುರವರ ಮಾತು.
ಸಂಪರ್ಕ: ೦೮೧೮೩-೨೦೭೨೫೩
(ವಿಕ ಲವಲವಿಕೆಯಲ್ಲಿ ಇಂದು ಪ್ರಕಟಿತ)

Saturday, September 25, 2010

ಕೋಣೆಯ ಸೊಗಸಿಗೆ ಕಾಷ್ಠ ಕಲೆ


ಕಲಾವಿದನ ಕೈಗೆ ಕಸ ಸಿಕ್ಕರೂ ರಸವೆ. ಅವನಲ್ಲಿರುವ ಕಲೆಗಾರ ಕಸದಲ್ಲಿ ಅಡಗಿಕುಳಿತಿರುವ ರಸವನ್ನು ಹುಡುಕಿ ಮೇಲೆತ್ತುತ್ತಾನೆ. ಮಣ್ಣನ್ನು ಮೂರ್ತಿಗಳನ್ನಾಗಿಸಿ, ಶಿಲೆಯನ್ನು ಶಿಲ್ಪವನ್ನಾಗಿಸಿ, ಬಣ್ಣವನ್ನು ಚಿತ್ರವನ್ನಾಗಿಸಿ ಹೀಗೆ ನಾನಾ ವಿಧದಲ್ಲಿ ಜಡಕ್ಕೆ ಚೇತನ ತುಂಬುವ ಕೆಲಸ ಕಲಾವಿದನಿಂದಲ್ಲದೆ ಮತ್ಯಾರಿಂದನೂ ಸಾದ್ಯವಿಲ್ಲ. ಅಥವಾ ಅಂತಹ ಜನರಿಗೆ ಕಲಾವಿದರು ಎನ್ನಬಹುದು. ಅಂತಹ ಅಪರೂಪದ ಕಲಾವಿದರ ಸಾಲಿನಲ್ಲಿ ಗೋಟಗಾರು ಗಣಪತಣ್ಣ ಸೇರುತ್ತಾರೆ.
ಸಾಗರ ತಾಲ್ಲೂಕಿನ ಜೋಗ ಮಾರ್ಗದಲ್ಲಿ ಸಾಗರದಿಂದ ೧೨ ಕಿಲೋಮೀಟರ್ ದೂರದಲ್ಲಿ ಸಿಗುವ ಗೋಟಗಾರು ಎಂಬುದು ಕೇವಲ ಐದುಮನೆಗಳ ಪುಟ್ಟ ಹಳ್ಳಿ. ಅಲ್ಲಿನ ಕೃಷಿಕ ಗಣಪತಿಯವರಿಗೆ ತಮ್ಮ ತೋಟದ ಸುತ್ತಮುತ್ತ ಹಾಗೂ ಕಾಡಿನಲ್ಲಿ ಸಿಗುವ ಒಣಗಿದ ಮರಗಳಲ್ಲಿ ಅಡಗಿಕುಳಿತಿರುವ ಆಕಾರಗಳನ್ನು ಹೊರತೆಗೆಯುವುದು ಹವ್ಯಾಸ. ಜನಸಾಮಾನ್ಯರಿಗೆ ಮರದಬೊಡ್ಡೆಯಾಗಿ ಕಾಣಿಸುವ ಒಣಗಿದ ಮರಗಳು ಅವರಿಗೆ ವಿಶಿಷ್ಠ ವಿಶೇಷ ಆಕಾರಗಳಾಗಿ ಕಾಣಿಸುತ್ತವೆ. ಹಾಗಾಗಿ ಅವರ ಮನೆಯ ಪ್ರವೇಶದ್ವಾರದಲ್ಲಿಯೇ ನಂದಿಮರದಲ್ಲಿ ಅಡಗಿಕುಳಿತಿದ್ದ ಈಶ್ವರನ ವಾಹನ ನಂದಿಯಾಗಿ ಮನೆಗೆ ಬರುವ ಜನರನ್ನು ಸ್ವಾಗತಿಸುತ್ತಾ ಕುಳಿತಿದ್ದಾನೆ. ಕಾಡಿನಲ್ಲಿ ಸತ್ತು ಮಣ್ಣಾಗಿಹೋಗುತ್ತಿದ್ದ ಗಿಡದ ಬೇರುಗಳು, ಮತ್ತಿ, ಬೀಟೆ ಮುಂತಾದ ಹತ್ತು ಹಲವಾರು ಜಾತಿಗಳ ಮರದ ಬೊಡ್ಡೆಗಳು ವಿವಿಧ ಆಲಂಕಾರ ಪಡೆದು ಮನೆಯನ್ನು ಕಾಷ್ಠ ಶಿಲ್ಪಗಳ ಸಂಗ್ರಹಾಲಯನ್ನಾಗಿ ಪರಿವರ್ತಿಸಿದೆ. ಕಾಡಿನಲ್ಲಿ ಸತ್ತುಹೋಗಿರುವ ಮರದ ಬೊಡ್ಡೆ ಆಕಾರಪಡೆದು ಕಾಸು ಖರ್ಚಿಲ್ಲದ ಮನೆಯಲ್ಲಿರುವ ಟಿಪಾಯಿಯ ರೂಪ ಪಡೆದು ಕುಳಿತಿದೆ. ಚಿಕ್ಕ ಚಿಕ್ಕ ಮಾನವನ ಆಕಾರಗಳಿಂದ ಹಿಡಿದು ನವಿಲು, ಹಾವು, ಗಿಳಿ, ಜಿಂಕೆ ಗಣಪತಿ ಮೂರ್ತಿ ಹೀಗೆ ಎಲ್ಲವೂ ಮರದ ಬೇರುನಾರಿನಿಂದಲೇ ರೂಪತಳೆದು ಇಲ್ಲಿ ಜೀವಕಳೆಪಡೆದುಕೊಂಡು ನಿಂತಿದೆ. ಎಂದೋ ಸತ್ತುಹೋಗಿ ಕಾಡಿನಲ್ಲಿ ಮಣ್ಣು ಸೇರುತ್ತಿದ್ದ ಮರದ ಬೊಡ್ಡೆಗಳ ಆಕಾರ ಗಣಪತಿಯವರ ಕೈಯಿಂದ ಜೀವ ತಳೆದು ಅವರಿಂದ ಅದು ಸಿಕ್ಕ ಕತೆಯನ್ನು ಸ್ವಾರಸ್ಯವಾಗಿ ಹೇಳಿಸಿಕೊಂಡು ಮುದನೀಡುತ್ತವೆ.
ಮಗ ಅರುಣ ಕೂಡ ಇಂತಹ ಕಲೆಯಲ್ಲಿ ಆಸಕ್ತಿ ಹೊಂದಿರುವುದರಿಂದ ಹಾಗೂ ಸೊಸೆ ಸೌಮ್ಯ ಯಕ್ಷಗಾನ ಕಲಾವಿದೆಯಾಗಿರುವುದರಿಂದ ಅವರುಗಳ ಉತ್ತಮ ಸಹಕಾರ ಗೋಟಗಾರು ಗಣಪತಿಯವರಿಗೆ ಎಪ್ಪತ್ತರ ಇಳಿ ವಯಸ್ಸಿನಲ್ಲಿಯೂ ಕಾಷ್ಠಶಿಲ್ಪ ಅತ್ಯುತ್ಸಾಹದಿಂದ ಮುಂದುವರೆದಿದೆ. ಜೋಗ ನೋಡಲು ಹೋದಾಗ ಒಮ್ಮೆ ನೀವೂ ಭೇಟಿ ನೀಡಿ ಆಸ್ವಾದಿಸಬಹುದು. ಗಣಪತಿಯವರ ಫೋನ್ ನಂ: ೦೮೧೮೩-೨೩೧೯೬೯
(ಲವಲವಿಕೆಯಲ್ಲಿ ಇಂದು ಪ್ರಕಟಿತ)

Wednesday, September 22, 2010

ತಿತಿತಿ ಚಿಕ್ಕದಾದರೂ ಕೀರ್ತಿ ದೊಡ್ಡದು


ಅಂತ ಈ ಸೂಜಿಮೆಣಸಿಗೆ ಅನ್ನಬಹುದು. ಸೌತೆಕಾಯಿ ಉಪ್ಪೂಖಾರದಲ್ಲಿ ಮೈನ್ ಪಾತ್ರಧಾರಿ ಇದು. ಸೊರ್ ಸೊರ್ ಎಂದು ಬಾಯಿಸೆಳೆಯುವಂತೆ ಮಾಡುವ ಮುಖ್ಯ ವೇಷಧಾರಿ. ಇದರ ಖಾರವನ್ನು ಬಲ್ಲವನೇ ಬಲ್ಲ. ಮೊದಲೆಲ್ಲಾ ಇದು ಬೇಕಾಬಿಟ್ಟಿ ಸಿಕ್ಕುತ್ತಿತು. ಆದರೆ ಈಗ ಮೊದಲಿನ ಹಾಗಿಲ್ಲ. ಇದಕ್ಕೆ ಒಣಗಿದರೆ ಕೆಜಿಯೊಂದಕ್ಕೆ ನಾಲ್ಕುನೂರು ರೂಪಾಯಿ ದರ. ಹಾಗಾಗಿ ಹೆಂಗಸರು ಇದನ್ನು ಉಪಯೋಗಿಸಲು ಸ್ವಲ್ಪ ಕಂಜೂಸ್ ಆರಂಭಿಸಿದ್ದಾರೆ. ಹಿತ್ತಲಿನಿಂದ ಕೊಯ್ದು ಒಣಗಿಸಿ ಮೂರು ತಿಂಗಳಿಗೊಮ್ಮೆ ಲಟಾರಿ ಎಂ ಎಯ್ಟಿ ಗಾಡಿಯಲ್ಲಿ ಬರುವ ಚುಪುರು ಗಡ್ಡದ ಸಾಬುವಿಗೆ ಮಾರಿಬಿಡುತ್ತಾರೆ. ಕಾ ಕಾ ಎನ್ನುವ ಕಾಗೆಗೆ ಇದು ಬಹಳ ಪ್ರೀತಿಯ ಹಣ್ಣು, ಅದರಿಂದ ರಕ್ಷಿಸಿಕೊಂಡು ಕ್ವಿಂಟಾಲ್ ಗಟ್ಟಲೆ ಬೆಳೆದರೆ ವರ್ಷಕ್ಕೆ ಲಕ್ಷಾಂತರ ಹಾಗೂ ಹತ್ತು ವರ್ಷಕ್ಕೆ ಕೊಟ್ಯಾಂತರ ರೂಪಾಯಿ ಸಂಪಾದಿಸಬಹುದು, ಆದರೆ ತಿಪ್ಪರಲಾಗ ಹಾಕಿದರೂ ಒಂದು ಕೆಜಿಗಿಂತ ಜಾಸ್ತಿ ಬೆಳೆಯಲಾಗುವುದಿಲ್ಲ ಎನ್ನುವುದು ಗುಟ್ಟಿನ ಮಾತು. ಒಮ್ಮೆ ಸಿಕ್ಕಾಗ ಒಂದೇ ಒಂದು ತಿಂದು ನೋಡಿ, ಆನಂತರ ಅವಾಂತರ ನನಗೆ ಹೇಳಿ.

Monday, September 20, 2010

ಅಡಿಕೆ ಕೃಷಿಗೆ ’ಅಮೇರಿಕನ್’ ಯುವಕ


ಮಲೆನಾಡಿನ ಹಳ್ಳಿಗಳು ವೃದ್ಧಾಶ್ರಮಗಳಾಗುತ್ತಿವೆ, ಯುವಕ ಯುವತಿಯರು ಷಹರದ ಬಣ್ಣದ ಬದುಕಿಗೆ ಮನಸೋತು ಹಳ್ಳಿ ತೊರೆದು ಪಟ್ಟಣ ಸೇರುತ್ತಿದ್ದಾರೆ, ತೋಟದ ಕೆಲಸಕ್ಕೆ ಕೂಲಿಕಾರ್ಮಿಕರು ಸಿಗುತ್ತಿಲ್ಲ, ಎಂಬಂತಹ ಕೊರಗಿನ ಮಾತುಗಳ ನಡುವೆ ಪಟ್ಟಣದ ಬದುಕನ್ನು ತೊರೆದು ಕೃಷಿಯನ್ನು ಆಯ್ದುಕೊಂಡು ಹಳ್ಳಿಗೆ ಬಂದಿರುವ ದಂಪತಿಗಳ ಕತೆ ಇಲ್ಲಿದೆ.
ಸಾಗರದ ಸಮೀಪದ ಮಂಕಾಳೆ ಊರಿನವರಾಗಿದ್ದ ಕೃತಿ. ಆರ್. ತಾವು ದೆಹಲಿಯಲ್ಲಿ ಎಂ.ಫಿಲ್ ಓದುತ್ತಿದ್ದಾಗ ಮೆಚ್ಚಿದ್ದು ಅಮೇರಿಕಾದ ಟಾಡ್ ಅವರನ್ನು. ಮಗಳು ಮೆಚ್ಚಿದ ಅಮೆರಿಕಾದ ಅಳಿಯನನ್ನು ಮನೆಯವರೂ ಕೂಡ ತಂಟೆ ತಕರಾರಿಲ್ಲದೆ ಸ್ವಾಗತಿಸಿದರು. ಮದುವೆಯ ನಂತರ ಆರು ವರ್ಷಗಳ ಕಾಲ ದೆಹಲಿ ಅಮೆರಿಕಾ ಮುಂತಾದ ಕಡೆಗಳಲ್ಲಿ ಕೃತಿ ಹಾಗೂ ಟಾಡ್ ದುಡಿದರು. ದಂಪತಿಗಳಿಬ್ಬರೂ ಸಂಗೀತ ಪ್ರಿಯರಾದ್ದರಿಂದ ಸಂಜೆ ಸಮಯವನ್ನು ಸಂಗೀತಕ್ಕಾಗಿ ಮೀಸಲಿಡುವ ಆಸೆಯಿತ್ತು. ದುಡಿಮೆಗೆ ಪ್ರಾಧಾನ್ಯತೆಯಿತೆಯಿರುವ ಪಟ್ಟಣದಲ್ಲಿ ಸಂಜೆ ತಮ್ಮ ಹವ್ಯಾಸಕ್ಕೆ ಮೀಸಲಿಡಲು ಆಗುತ್ತಿರಲಿಲ್ಲ. ಆವಾಗ ಅವರಿಗೆ ಮನಸ್ಸಿನ ಮೂಲೆಯಲ್ಲಿ ಚಿಗುರೊಡೆದ ಆಸೆ ಕೃಷಿಕರಾಗಬೇಕು ಎಂದು. ಆ ಆಸೆಯ ಫಲ ಇಂದು ಅಮೆರಿಕನ್ ಯುವಕ ಟಾಡ್ ಲಿರಿಚ್ ಹಾಗೂ ಕೃತಿಯವರನ್ನು ಅಡಿಕೆ ತೋಟದ ಮಾಲಿಕರನ್ನಾಗಿಸಿದೆ.
ಸಾಗರದಿಂದ ಹೊಸನಗರಕ್ಕೆ ಹೋಗುವ ಮಾರ್ಗದಲ್ಲಿ ಪುರಪ್ಪೆಮನೆ ಎಂಬ ಊರು ಸಿಗುತ್ತದೆ. ಅಲ್ಲಿ ಅಪ್ಪೆಮನೆಯತ್ತ ಒಂದುಕಿಲೋಮೀಟರ್ ಸಾಗಿದರೆ ಈ ಅಮೇರಿಕನ್ ಅಳಿಯ ಊರಿನ ಮಗಳು ಅವರ ಸಣ್ಣ ಫಾರಂ ಹೌಸ್ ನೋಡಬಹುದು. ಪಕ್ಕಾ ಪಕ್ಕಾ ವಿದೇಶಿ ಶೈಲಿಯಮನೆ ನೋಡಿದ ತಕ್ಷಣ ಇದು ಪರಂಪರಾಗತ ಮಲೆನಾಡು ಮನೆ ಅಲ್ಲ ಎಂಬುದು ನಿಮಗೆ ತೋಚುತ್ತದೆ. ನಿಮ್ಮ ಅದೃಷ್ಟ ಖುಲಾಯಿಸದ್ದರೆ ಮನೆಯ ಬಳಿ ಹೋಗುತ್ತಿದ್ದಂತೆ ಸೀತಾರ್ ಧ್ವನಿ ಕೇಳಬಹುದು. ಸಿತಾರ್ ನಾದ ಹಾಗೂ ಅದಕ್ಕೊಂದು ಸಣ್ಣ ಮಟ್ಟದ ಹಾಡು ಕೇಳುತ್ತಿದೆಯಂದರೆ ಲಾಡ್ ದಂಪತಿಗಳು ಮನೆಯಲ್ಲಿದಾರೆಂದು ಅರ್ಥ. ಅವರು ಇದ್ದಾರೆಂದರೆ ನಿಮಗೆ ಉತ್ತಮ ಆತಿಥ್ಯ ಸಿಕ್ಕಿತು ಅಂತ.
ಸ್ವಭಾವತಹ ಏಕಾಂಗಿಪ್ರಿಯರಾದ ಟಾಡ್ ಲಿರಿಚ್ ಹರಟೆಮಲ್ಲರಲ್ಲ. ಭಾಷೆಯ ತೊಡಕೂ ಸ್ವಲ್ಪ ಮಟ್ಟದಲ್ಲಿರುವುದರಿಂದ ಹಾಗಿರಬಹುದು. ಕನ್ನಡ ಅರ್ಥ ಮಾಡಿಕೊಳ್ಳುವ ಹಂತದಲ್ಲಿರುವ ಅವರು ಅಲ್ಪಸ್ವಲ್ಪ ಮಾತನಾಡಲೂ ಬಲ್ಲರು ಈಗಷ್ಟೆ. "ನಿಮಗೆ ಈ ನೀರವ ವಾತಾವರಣ ಅಮೆರಿಕಾದ ಬ್ಯುಸೀ ಜೀವನಕ್ಕೆ ಹೋಲಿಸಿದಲ್ಲಿ ಬೇಸರ ತರಿಸದೇ? ಎಂಬ ಪ್ರಶ್ನೆಗೆ ಲಾಡ್ "ಬೇಸರ ತರಿಸಲು ಸಮಯವೇ ಇಲ್ಲ ಹಗಲೆಲ್ಲಾ ಕೆಲಸ, ರಾತ್ರಿ ಸಿತಾರ್ ಹಾಗೂ ಓದು" ಎಂದು ನಗುತ್ತಾರೆ. ಆದರೆ ಕೃತಿ ನಿಮ್ಮೆದುರು ಇತಿಹಾಸವನ್ನೇ ಬಿಚ್ಚಿಡುತ್ತಾರೆ . ಇಂಡೋ ಅಮೇರಿಕನ್ ಹಮೀರ್ ಮುಗಿಲು ನಿಮ್ಮನ್ನು ಮಂತ್ರಮುಗ್ದನನ್ನಾಗಿಸುವಲ್ಲಿ ಸೈ ಅನ್ನಿಸಿಕೊಳ್ಳುತ್ತಾನೆ. ಅಮೇರಿಕಾದ ಧೈರ್ಯ ಭಾರತದ ಒಳ್ಳೆಯತನ ಮಿಳಿತಗೊಂಡ ಅದ್ಭುತ ವ್ಯಕ್ತಿತ್ವ ಮಗ ಹಮೀರ್ ನದು. ಅಮ್ಮನ ಬಳಿ ಹವ್ಯಕ ಕನ್ನಡ ಮತ್ತಷ್ಟೆ ವೇಗವಾಗಿ ಅಪ್ಪನ ಬಳಿ ಅಮೇರಿಕನ್ ಆಕ್ಸೆಂಟ್ ನಲ್ಲಿ ಇಂಗ್ಲೀಷ್ ಮಾತನಾಡುವ ಮುದ್ದು ಮುಖದ ಹಮೀರ್ ಮುಗಿಲು ಪುಟ್ಟ ಕೃಷಿಕನಾಗಿ ಬೆಳೆಯುತ್ತಿದ್ದಾನೆ.
ಪಾಳೇಕರ್ ಕೃಷಿಯ ಬಗ್ಗೆ ಅತ್ಯಾಸಕ್ತಿ ಹೊಂದಿರುವ ದಂಪತಿಗಳು ಸಾವಯವ ಕೃಷಿಯನ್ನು ಪಾಲಿಸುತ್ತಿದ್ದಾರೆ. ಒಂದು ಎಕರೆಯಷ್ಟು ಅಡಿಕೆ ತೊಟ, ಸೊಪ್ಪಿನ ಬೆಟ್ಟದಲ್ಲಿ ಸುಂದರ ಮನೆ, ನೆಮ್ಮದಿ ಜೀವನ ಇವರ ಆಸೆಯನ್ನು ಸಾಕಾರಗೊಳಿಸಿದೆ. ಹೆಗ್ಗೋಡಿನ ನೀನಾಸಂ ರಂಗಮಂದಿರ ಕೆಲವೇ ಕಿಲೋಮೀಟರ್ ಅಂತರದಲ್ಲಿ ಇರುವುದರಿಂದ ಇವರ ಹವ್ಯಾಸಕ್ಕೆ ಇಂಬು ನೀಡಿದೆ. ಅಲ್ಲಿ ಪ್ರದರ್ಶನಗೊಳ್ಳುವ ಎಲ್ಲಾ ನಾಟಕಗಳಿಗೂ ಈ ದಂಪತಿಗಳ ಭೇಟಿ ಖಂಡಿತ.
ಟಾಡ್ ರ ತಂದೆ ಇಲ್ಲಿಗೆ ಬಂದು ಹೋಗುತ್ತಾರೆ ಎನ್ನುವ ಕೃತಿ ಅಮೇರಿಕಾದ ಪೋಷಕರ ಬಗ್ಗೆ ಒಳ್ಳೆ ಅಭಿಪ್ರಾಯವನ್ನು ಹೇಳುತ್ತಾರೆ. ಹದಿನೆಂಟು ತುಂಬಿದ ಮಕ್ಕಳನ್ನು ಪಕ್ಕಾ ಸ್ನೇಹಿತರಂತೆ ನಡೆಯಿಸಿಕೊಳ್ಳುವ ಅಲ್ಲಿನ ಜನ ತಮ್ಮ ಮಕ್ಕಳ ಭವಿಷ್ಯ ನಿರ್ಮಾಣದ ನಿರ್ಧಾರಕ್ಕೆ ಅಡ್ಡಿಯಾಗುವುದಿಲ್ಲ .ಅದು ಅವರ ವೈಯಕ್ತಿಕ ಬದುಕು ಎಂದು ಬೆಂಬಲಿಸುತ್ತಾರೆ ಎನ್ನುತ್ತಾರೆ. ಅಮೆರಿಕಾದ ಕೃಷಿಯ ಬಗ್ಗೆ ಸಾವಿರ ಹೆಕ್ಟೇರ್ ಕೃಷಿಕರ ಬಗ್ಗೆ ವಿಸ್ತಾರ ಕತೆ ಬಿಚ್ಚಿಡುತ್ತಾರೆ. ಅಲ್ಲಿ ಈ ರೀತಿಯ ಒಂದೆರಡು ಎಕರೆ ಭೂಮಿಯಿಂದ ಕೃಷಿ ಕೈಂಕರ್ಯ ಸಾಗದು ಎನ್ನುವ ಮಾತನ್ನು ನೆನಪಿಸುತ್ತಾರೆ.
ಟಾಡ್ ಬೆಳಿಗ್ಗೆ ಏಳಕ್ಕೆ ಅಡಿಕೆ ತೋಟಕ್ಕೆ ಹೋದರೆ ಸೋಗೆ ಕೊಚ್ಚುವುದು, ಕಾದಿಗೆ ಹೆರೆಯುವುದು ಮುಂತಾದ ಕೆಲಸವನ್ನು ಪಕ್ಕಾ ಮಲೆನಾಡಿನ ಸಾಂಪ್ರದಾಯಿಕ ಅಡಿಕೆ ಕೃಷಿಕರಂತೆ ಸ್ವತಹ ಮಾಡುತ್ತಾರೆ. ನಾವು ಕೂಲಿಕಾರ್ಮಿಕರ ಮೇಲೆ ಸಂಪೂರ್ಣ ಅವಲಂಬಿತರಾಗಿಲ್ಲ ಎಂದು ಕೃತಿ ಆತ್ಮಸ್ಥೈರ್ಯದಿಂದ ಹೇಳುತ್ತಾರೆ. ಕೊನೆಕೊಯ್ಲು, ಗೊಬ್ಬರ ಹಾಕುವುದಕ್ಕೆ ಮುಂತಾದ ದೊಡ್ಡ ಕೆಲಸ ಹೊರತುಪಡಿಸಿದರೆ ನಿತ್ಯದ ಕೆಲಸಕ್ಕೆ ನಾವು ಕೃಷಿಕಾರ್ಮಿಕರ ಬಯಸುವುದಿಲ್ಲ. ಟಾಡ್ ರ ಪ್ರಕಾರ ಕೂಲಿಕಾರ್ಮಿಕರ ಸಮಸ್ಯೆ ಅಮೆರಿಕಾಪ್ರಜೆಗಳಿಗೆ ಮಹತ್ತದ್ದಲ್ಲ. ಕಾರಣ ಅಲ್ಲಿ ತಮ್ಮ ಬಹುತೇಕ ಎಲ್ಲಾ ಕೆಲಸಕ್ಕೆ ಬೇರೆಯವರ ಅವಲಂಬನೆ ಇಲ್ಲ, ಮತ್ತೂ ಕೃಷಿ ಕಾರ್ಮಿಕರ ಸಮಸ್ಯೆಯ ಕುರಿತು ದಿವಸದಲ್ಲಿ ಆರು ತಾಸು ಮಾತನಾಡುವುದರ ಬದಲು ಎರಡು ತಾಸು ಕೆಲಸ ಮಾಡಿದರೆ ಸಮಸ್ಯೆ ಬಗೆಹರಿದಂತೆ ಎಂಬುದು ಖಚಿತ ಮಾತು. ಮನೆಗೆ ಬೇಕಾದಷ್ಟು ತರಕಾರಿ ಸೊಪ್ಪು ಬೆಳೆಯಲು ಹಿತ್ತಲು ಸಜ್ಜಾಗಿದೆ. ಮನೆಯಲ್ಲಿ ಅಡಿಗೆ ಕೆಲಸ ಹೆಂಗಸರದ್ದು ವ್ಯವಹಾರ ಗಂಡಸರದ್ದು ಎಂಬ ಬೇಧಭಾವ ಇವರಲ್ಲಿಲ್ಲ. ಸೋಮವಾರ ಕೃತಿ ಅಡಿಗೆ ಮಾಡಿದರೆ ಮಂಗಳವಾರ ಶುದ್ಧ ಅಮೇರಿಕನ್ ಶೈಲಿಯ ಅಡಿಗೆಯ ಉಸ್ತುವಾರಿ ಟಾಡ್ ರದ್ದು ಬುಧವಾರ ಮತ್ತೆ ಕೃತಿಯ ಅಡಿಗೆ .
ಪಕ್ಕಾ ಕೃಷಿಕರು ಹೇಗಿದ್ದರೆ ಚೆನ್ನ ಎಂಬುದಕ್ಕೆ ಈ ಇಂಡಿಯಾ-ಅಮೇರಿಕನ್ ದಂಪತಿಗಳು ಒಳ್ಳೆಯ ಉದಾಹರಣೆ. "ಕೃಷಿಯಲ್ಲಿ ಹಣದ ಓಘ ಕಡಿಮೆ ನಿಜ ಆದರೆ ಶಾಂತಿ ನೆಮ್ಮದಿ ಇಲ್ಲಿ ಇದೆ, ನಮ್ಮ ವಿದ್ಯಾರ್ಹತೆಗೆ ನಾವು ಪಟ್ಟಣದಲ್ಲಿದ್ದರೆ ಹಣ ಗುಡ್ಡೆ ಹಾಕಬಹುದು, ನಮ್ಮ ವೃದ್ದಾಪ್ಯದ ಹೊತ್ತಿಗೆ ದೊಡ್ಡ ಹಣದ ರಾಶಿ ಆಗಿರುತ್ತದೆ, ಆದರೆ ಅನುಭವಿಸಲು ವಯಸ್ಸು ಇರುವುದಿಲ್ಲ" ಎಂದು ತತ್ವಭರಿತವಾಗಿ ಹೇಳುವ ಕೃತಿ ದಂಪತಿಗಳು ಕೊರಗುತ್ತಾ ಬದುಕುವ ಅಡಿಕೆ ಕೃಷಿಕರಿಗೆ ಮಾದರಿ ಖಂಡಿತ.
ನಾವು ಕಾರಣರಾಗಿ ಸುದ್ಧಿಯಾಗುದಕ್ಕಿಂತ ನಾವು ಹಳ್ಳಿಯ ಜೀವವನ್ನಾಗಿಸಿಕೊಂಡ ಕಾರಣಗಳು ಸುದ್ಧಿಯಾಗುವುದು ಒಳಿತು ಎಂಬುದು ದಂಪತಿಗಳ ಕಿವಿಮಾತು.

(ಸಪ್ಟೆಂಬರ್ ಅಡಿಕೆಪತ್ರಿಕೆಯಲ್ಲಿ ಪ್ರಕಟಿತ)