Friday, January 4, 2013

ಗೊತ್ತಿಲ್ಲ ಎನ್ನುವವನು ಮಾತ್ರಾ ನಡುವೆ ನಿಂತ ಸುಖಿ.

                ಅಲ್ಲಿ ನಿಲ್ಲಲ್ಲು ಸಾದ್ಯವಾದರೆ ಅದು ಪರಮ ಸುಖ. ಅಲ್ಲಿ ಎಂಬುದಕ್ಕೆ ಸಮರ್ಪಕವಾದ ಉತ್ತರ ನಿಮಗೆ ನೀವೆ ಕಂಡುಕೊಳ್ಳಬೇಕು. ಅದು ಪಕ್ಕಾ ನಿಮ್ಮ ಮಿದುಳಿನ ಶಕ್ತಿಯನ್ನು ಅವಲಂಬಿಸಿದೆ. ಸುಲಭ ಉದಾಹರಣೆಯ ಮೂಲಕ ಹೇಳಬೇಕೆಂದರೆ ಇತ್ತೀಚೆಗೆ ಸುದ್ದಿಯಾಗುತ್ತಿರುವ  ಅತ್ಯಾಚಾರದ ವಿಷಯ. ಅತ್ಯಾಚಾರ ವಿರೋಧಿಸಿ ಚಿಂತಿಸುವ ಗುಂಪು ದೊಡ್ಡದಿದೆ ನಿಜ ಆದರೆ ವಿಚಿತ್ರ ಗೊತ್ತಾ ...?  ಆ ಅತ್ಯಾಚಾರದ ಪರವೂ ಒಂದು ಗುಂಪು ಇರುತ್ತದೆ. ಅದು ಸಣ್ಣದಿರಬಹುದು. ಆದರೂ ಇರುತ್ತದೆ. ವಿಷಯ ಎಂಬುದು ಗುಂಪಿನ ಬಹುಮತಕ್ಕೆ ಸಂಬಂದಪಟ್ಟಿದ್ದಲ್ಲವಾದ್ದರಿಂದ  ಇರುವಿಕೆಯಂತೂ ಸತ್ಯ. ಈಗ ಯೋಚಿಸಿ ಅಲ್ಲಿನ ಪರವೂ ಕೂಡ ವಿಷಯಕ್ಕೆ ವಿರೋಧವೇ, ವಿರೋಧವೂ ಕೂಡ ವಿಷಯಕ್ಕೆ ಪರವೇ. ತರ್ಕದ ಮೂಲಕ ಹೇಗಾದರೂ ಸಮರ್ಥಿಸಬಹುದು. ಘಟನೆ ನಡೆಯುವ ಕೆಲ ನಿಮಿಷಗಳ ಹಿಂದಿನ ಕ್ಷಣಗಳಲ್ಲಿ ಏನು ನಡೆಯಿತು ಎನ್ನುವುದರ ಮೇಲೆ ಘಟನೆ ನಿಂತಿರುತ್ತದೆಯಾದ್ದರಿಂದ ಅದು ಹೇಗೂ ತಿರುವು  ಪಡೆದುಕೊಳ್ಳಬಹುದು. ಅಲ್ಲಿನ ವ್ಯಕ್ತಿಗಳು  ಮತ್ತು ಅವರೊಡನೆ ನಿಮ್ಮ ನಮ್ಮ ವೈಯಕ್ತಿಕ ಸಂಬಂಧ ಯಾವ ಮಟ್ಟದ್ದು ಎನ್ನುವುದರ ಮೇಲೆ ಘಟನೆ ತಿರುವು ಪಡೆದುಕೊಳ್ಳುತ್ತಾ ಸಾಗುತ್ತದೆ.
            ಅತ್ಯಾಚಾರಿಯು ಹತ್ತಿರದ ಕರುಳ ಸಂಬಂಧಿಯಾದರೆ ಅದಕ್ಕೊಂದು ತಿರುವು, ಅತ್ಯಾಚಾರಕ್ಕೆ ಈಡಾದವರು ಕರುಳ ಸಂಬಂದಿಯಾದರೆ ಅದಕ್ಕೊಂದು ತಿರುವು. ಈ ವಿಷಯಗಳ ನಡುವೆ ಸತ್ಯವೊಂದು ಸುಮ್ಮನೆ ನಗುತ್ತಾ ಕುಳಿತಿರುತ್ತದೆ. ಅದು ತಿಳಿಯುವುದು ಬಹು ಅಪರೂಪದ ಜನಕ್ಕೆ. ಆ ಅಪರೂಪದ ಜನ ನೀವಾಗಬೇಕು ಎಂತಾದರೆ ಆ "ಅಲ್ಲಿ" ನಿಲ್ಲುವುದನ್ನು ಕಲಿಯಬೇಕು. ಈಗ ನಿಮಗೆ ಅರ್ಥವಾಗಿರಬೇಕು ಆ ಅಲ್ಲಿ ಎಂದರೆ  "ನಡುವೆ" ಎಂದು. ಹೌದು ಆಕಸ್ಮಿಕದ ಘಟನೆಯನ್ನು ಪೂರ್ವಯೋಜಿತ ಅಂತಲೂ ಪೂರ್ವಯೋಜಿತ ಘಟನೆಯನ್ನು ಆಕಸ್ಮಿಕ ಅಂತಲೂ ಬಲಾಬಲದ ಮೇಲೆ ತಿರುಚಿದ ಉದಾಹರಣೆ ಸಾಕಷ್ಟಿದೆ. ಅದು ತಿಳಿಯುವುದು ನಡುವೆ ನಿಂತಾಗಲೇ. ಇಡೀ ಜೀವನವನ್ನು ನಡುವೆ ನಿಂತು ಅರ್ಥ ಮಾಡಿಕೊಳ್ಳ ತೊಡಗಿದರೆ ಅದರಂತಹ ಸುಖ ಮತ್ತೊಂದಿಲ್ಲ. ನಡುವೆ ನಿಲ್ಲುವ  ಶೈಲಿಯ ಇನ್ನೂ ಸುಲಭದ ವ್ಯಾಖ್ಯೆ ಎಂದರೆ ದೇವರು ಇದ್ದಾನೆ ಎನ್ನುವವರಿಗೂ ಇಲ್ಲ ಎನ್ನುವವರಿಗೂ ಗುಲಗುಂಜಿ ವ್ಯತ್ಯಾಸ ಇಲ್ಲ. ಎಲ್ಲಾ ಗೊತ್ತಿದ್ದೂ...  "ಗೊತ್ತಿಲ್ಲ" ಎನ್ನುವವನು ಮಾತ್ರಾ ನಡುವೆ ನಿಂತ ಸುಖಿ. ದಲೈಲಾಮ "ನನಗೆ ಗೊತ್ತಿಲ್ಲ" ಎಂಬ ಮಾತಿನಿಂದಲೇ ಉತ್ತರ ಕೊಡಲು ಆರಂಭಿಸುತ್ತಾರೆ. ಹಾಗಾಗಿ ಅವರ ವ್ಯಕ್ತಿತ್ವ  ಜಗತ್ತಿಗೆ ಮತ್ತು ಸತ್ಯ ದರ್ಶನದ ವಿಷಯದಲ್ಲಿ   "ಶಾಂತಿ, ಶಾಂತಿ, ಶಾಂತಿ"

Thursday, January 3, 2013

ಇವರು ಇಂಜನಿಯರಿಂಗ್ "ರೈತ"

              
           ಬಹುಪಾಲು ಎಲ್ಲ ತಂದೆತಾಯಿಂದರ ಕನಸು ಮಕ್ಕಳು ಇಂಜನಿಯರ್ ಅಥವಾ ಡಾಕ್ಟರ್ ಆಗಬೇಕು, ಪಕ್ಕದ ಮನೆಯ ಹುಡುಗರು ಕೃಷಿಕರಾಗಬೇಕು ಎಂಬ ತತ್ವ. ಆದರೆ ತಾಳಗುಪ್ಪದ ಸಮೀಪದ ಶಿರೂರು ಆಳ್ಳಿಯ ಮೂಗೀಮನೆ ಸುಬ್ರಾಯ ಹಾಗೂ ಕನಕಲತ ದಂಪತಿಗಳು ೧೨ ವರ್ಷದ ಕೆಳಗೆ ಇಂಜನಿಯರ್ ಮಗ ಮನೆಗೆ ಬರುತ್ತಾನೆ ಮರಳಿ ಕೃಷಿಗೆ ತೊಡಗಿಸಿಕೊಳ್ಳುತ್ತಾನೆ ಎಂದರೆ ಸಂಭ್ರಮಿಸಿದರು. ಅದರ ಪ್ರತಿಫಲ ಕೃಷಿಕ ಪ್ರಪಂಚಕ್ಕೆ ಇಂಜನಿಯರ್ ಕೊಡುಗೆಯಾದಂತಾಯಿತು.
         ೧೯೯೧ ನೆ ಇಸವಿಯಲ್ಲಿ ಟೆಲಿಕಮ್ಯುನಿಕೇಷನ್ ವಿಭಾಗದಲ್ಲಿ ಬಿಇ ಮುಗಿಸಿದ ಗಣೇಶ್ ಎಂ ಎಸ್ ಆಯ್ದುಕೊಂಡಿದ್ದು ನೌಕರಿಯನ್ನಲ್ಲ ಕೈಗಾರಿಕೆಯನ್ನ. ಮೈಸೂರಿನಲ್ಲಿ ಇಂಜನಿಯರಿಂಗ್ ಇಂಡಸ್ಟ್ರಿ ಆರಂಭಿಸಿದರು. ಉದ್ಯಮ ಆರಂಭಿಸಿದ ಕೆಲವೇ ವರ್ಷಗಳಲ್ಲಿ ಯಶಸ್ವಿಯೂ ಆದರು, ಆದರೆ ಮನಸ್ಸಿಗೆ ನೆಮ್ಮದಿ ಮಾತ್ರಾ ಸಿಕ್ಕಿರಲಿಲ್ಲ. ಮಲೆನಾಡಿನ ತುಡಿತ ಕೃಷಿಯಲ್ಲಿ ಏನನ್ನಾದರೂ ಸಾಧಿಸಬೇಕೆಂಬ ಹಂಬಲ ದಿನದಿಂದ ದಿನಕ್ಕೆ ಹೆಚ್ಚುತ್ತಾ ಹೋಗಿ ೧೯೯೯ ನೇ ಇಸವಿಯಲ್ಲಿ ಇಂಜನಿಯರಿಂಗ್ ಉದ್ಯಮಕ್ಕೆ ವಿದಾಯ ಹೇಳಿ ಮರಳಿದರು ಮಣ್ಣಿಗೆ.
   ದೇಶ ಸುತ್ತಿ ಕೋಶ ಓದಿ ವಾಪಾಸು ಬಂದ ಇಂಜನಿಯರಿಂಗ್ ಪದವಿಧರ ಗಣೇಶ್ ಆರಂಭದಲ್ಲಿ ಕೃಷಿಗೆ ಒಗ್ಗಿಕೊಳ್ಳುವುದು ತುಸು ಕಷ್ಟ ಎನಿಸಿತು. ಕೃಷಿಯನ್ನು ಉದ್ಯಮದ ಲೆಕ್ಕಾಚಾರಕ್ಕೆ ತೆಗೆದುಕೊಂಡರೆ ಹಾಗೂ ಲಾಭ ನಷ್ಟದ ಲೆಕ್ಕಾಚಾರದ ಬಳಕೆಯಿಂದ ಮಾತ್ರಾ ಯಶಸ್ಸು ಎನಿಸಿ ಕೃಷಿ ಉದ್ಯಮ ಆರಂಭಿಸಿದರು.
ಬೇವಿನ ಹಿಂಡಿ ಉದ್ಯಮ: ತಮ್ಮ ಸ್ವಂತ ತೋಟದ ಬಳಕೆಗೆ ಗೊಬ್ಬರ ಅವಶ್ಯಕತೆ ಇತ್ತು ಅದರ ಜತೆ ಇತರೇ ಕೃಷಿಕರ ಅವಶ್ಯಕತೆಯನ್ನು ಪೂರೈಸುವ ಸಣ್ಣ ಪ್ರಮಾಣದ ಬೇವಿನ ಹಿಂಡಿ ಗೊಬ್ಬರ ಘಟಕ ಪ್ರಾರಂಭಿಸಿದರು. ಬಯಲು ಸೀಮೆಯಿಂದ ಬೇವಿನ ಬೀಜ ತರಿಸಿ ಅದನ್ನು ಹುಡಿಮಾಡಿ ಇತರೆ ರೈತರಿಗೆ ಕೊಂಚ ಕಡಿಮೆ ದರದಲ್ಲಿ ವಿತರಿಸಿದರು. ಇದರಿಂದಾಗಿ ಅವರ ತೋಟಕ್ಕೂ ಕಡಿಮೆ ವೆಚ್ಚದಲ್ಲಿ ಗೊಬ್ಬರ ದಕ್ಕಿತು. ಇಂತಹ ಸಣ್ಣ ಪ್ರಯತ್ನಗಳಿಂದಾಗಿ ಕೃಷಿಯನ್ನು ಲಾಭಕರ ಉದ್ಯಮವನ್ನಾಗಿಸಬಹುದೆಂದು ಗಣೇಶ್ ತೋರಿಸಿಕೊಟ್ಟಿದ್ದಾರೆ.


ನಾಟಿ ಯಂತ್ರ: ಒಮ್ಮೆ ಕೃಷಿ ಪ್ರವಾಸಕ್ಕೆಂದು ಯಲ್ಲಾಪುರಕ್ಕೆ ಹೋದಾಗ ಅಲ್ಲಿನ ಕೃಷಿಕರೊಬ್ಬರು ಭತ್ತದ ಸಸಿ ನಾಟಿಮಾಡಲು ಕೈಯಂತ್ರ ಬಳಸುತ್ತಿರುವುದನ್ನು ಗಣೇಶ್ ಗಮನಿಸಿದರು. ಆದರೆ ಆ ಯಂತ್ರ ಪರಿಪೂರ್ಣವಾಗಿರಲಿಲ್ಲ. ಒಂದು ಎಕರೆ ಭತ್ತದ ಸಸಿ ನಾಟಿ ಮಾಡುವಷ್ಟರಲ್ಲಿ ಯಂತ್ರ ದುರಸ್ತಿಕಾರ್ಯಕ್ಕೆ ಬರುತ್ತಿತ್ತು. ಗಣೇಶ್ ಆ ಯಂತ್ರದ ಮಾದರಿಯನ್ನು ಸುಧಾರಿಸಿ ಭತ್ತ ನಾಟಿ ಮಾಡುವ ಯಂತ್ರ ನಿರ್ಮಿಸಿದ್ದಾರೆ. ಲೀಲಾಜಾಲವಾಗಿ ಹತ್ತು ಎಕರೆ ನಾಟಿ ಮಾಡುವುದರ ಮೂಲಕ ಯಶಸ್ಸು ಸಾಧಿಸಿದ್ದಾರೆ. ಇಂತಹ ಹಲವು ಯಂತ್ರಗಳನ್ನು ತಾವೇ ತಯಾರಿಸಿ ಕೃಷಿಕರಿಗೆ ನೀಡಿದ್ದಾರೆ.
ಕೈಕೊಟ್ಟ ಉದ್ಯೋಗ ಖಾತ್ರಿ: ಕೂಲಿಜನರ ಸಹಾಯಕ್ಕೆಂದು ಬಂದ ಕೇಂದ್ರ ಸರ್ಕಾರದ ಉದ್ಯೋಗ ಖಾತ್ರಿ ಯೋಜನೆಯಿಂದ ರೈತರ ಸಂಕಷ್ಟ ಹೆಚ್ಚಾಗಿದೆ ಎನ್ನಿವುದು ಗಣೇಶ್ ಅಭಿಮತ. ಕೂಲಿಕಾರರನ್ನು ಇನ್ನಷ್ಟು ಸೋಮಾರಿಯನ್ನಾಗಿಸಿ ಅತ್ತ ಖಾತ್ರಿಯೂ ಇಲ್ಲ ಇತ್ತ ಕೃಷಿ ಕಾರ್ಯುಗಳೂ ಇಲ್ಲದಂತಾಗಿದೆ. ಇದರ ದುಶ್ಪರಿಣಾಮ ಕೃಷಿಕರು ಎದುರಿಸುವಂತಾಗಿದೆ. ಆದರೆ ಕೃಷಿಕಾರ್ಮಿಕರ ಕೊರತೆಗೆ ಹೆದರದೆ ಗಣೇಶ್ ಯಂತ್ರಗಳ ಬಳಕೆಯನ್ನು ಅವಲಂಬಿಸಿದರು. ಗದ್ದೆ ಕೊಯ್ಲಿಗೆ ಯಂತ್ರವನ್ನು ಬಳಸಿ ಹಣ ಉಳಿಸಿದರು. ಇದರಿಂದಾಗಿ ಸ್ವಾವಲಂಬಿಯಾದೆ ಎನ್ನುತ್ಟಾರೆ.
ಭತ್ತದ ಆಸಕ್ತಿ: ಆರ್ಥಿಕ ಬೆಳೆಯಾಗಿ ಅಡಿಕೆ ಬೆಳೆಯುತ್ತಿದ್ದರೂ ಗಣೇಶ್ ರವರಿಗೆ ಭತ್ತದ ಮೇಲೆ ಅಪಾರ ಪ್ರೀತಿ. ಕೃಷಿಯಲ್ಲಿ ತೊಡಗಿಸಿಕೊಂಡ ಆರಂಭದಲ್ಲಿಯೇ ಮಲೆನಾಡಿನಲ್ಲಿ ಯಾರೂ ಬೆ:ಳೆಯದಿದ್ದ ಡೈಮಂಡ್ ಸೋನಾ ತಳಿಯ ಭತ್ತ ಬೆಳೆದು ಲಾಭ ಗಳಿಸಿದರು. ಮಲೆನಾಡಿನಲ್ಲಿ ಭತ್ತದ ಬೆಳೆ ಲಾಭದಾಯಕವಲ್ಲ ಎಂಬ ನುಡಿಯನ್ನು ಸುಳ್ಳು ಮಾಡಿದ್ದಾರೆ ಗಣೇಶ್. ೧೨ ಎಕರೆ ಗದ್ದೆಯಲ್ಲಿ ೧೬೦ ಕ್ವಿಂಟಾಲ್ ಭತ್ತ ಬೆಳೆದು ದಾಖಲೆ ನಿರ್ಮಿಸಿದ್ದಾರೆ. ಭತ್ತದ ಬೆಳೆ ಬೈ ಹುಲ್ಲನ್ನೂ ಸೇರಿಸಿದರೆ ಶೇಕಡಾ ಮೂವತ್ತರಷ್ಟು ಲಾಭ ಮಾಡಬಹುದು ಎನ್ನುವುದು ಗಣೇಶ್ ಅಭಿಪ್ರಾಯ.
ಬಯೋ ಡೈಜೆಸ್ಟರ್: ಗೊಬ್ಬರ ಸಾಗಾಟ ತೋಟಕ್ಕೆ ಕಷ್ಟ ಹಾಗೂ ಹೆಚ್ಚಿನ ಕೂಲಿಯನ್ನು ಬೇಡುತ್ತದೆ ಎನ್ನುವುದು ಅರಿವಾದಾಗ ಮೊರೆಹೋಗಿದ್ದು ಬಯೋ ಡೈಜೆಸ್ಟರ್ ಘಟಕ. ತೋಟದ ಎಲ್ಲಾ ಗಿಡಗಳಿಗೆ ನೀರಿನ ಮೂಲಕ ಗೊಬ್ಬರ ಸೇರುವುದರಿಂದ ಅತ್ಯಂತ ಪರಿಣಾಮಕಾರಿ. ತಾನು ಕೃಷಿ ಆರಂಭಿಸಿದ ಸಮಯದಲ್ಲಿ ೨-೩ ಸಾವಿರ ದಷ್ಟು ಸಿಗುತ್ತಿದ್ದ ತೆಂಗಿನಕಾಯಿ ಈಗ ೧೨-೧೩ ಸಾವಿರಕ್ಕೇರಿದೆ ಎನ್ನುತ್ತಾರೆ.


ಕೈಮಗ್ಗ ಘಟಕ: ಹೆಗ್ಗೋಡಿನ ಚರಕದ ಮಾದರಿಯಲ್ಲಿ ಸಣ್ಣದಾದ ಕೈಮಗ್ಗದ ಘಟಕ ನಡೆಸುತ್ತಿರುವ ಗಣೇಶ್ ಅದು ಖುಷಿಗೆ ಎನ್ನುತ್ತಾರೆ. ಕೃಷಿಯ ಜತೆ ಖುಷಿಯೂ ಬೇಕು ಆರ್ಥಿಕವಾಗಿ ಮಗ್ಗಗಳು ಲಾಭದಾಯಕವಲ್ಲ ಆದರೆ ನಾಲ್ಕಾರು ಜನಕ್ಕೆ ಉದ್ಯೋಗ ನೀಡಿದ ಖುಷಿ ಹಾಗೂ ಅವಶ್ಯಕವಾದ ಬಟ್ಟೆಯನ್ನು ನಾವು ಸಮಾಜಕ್ಕೆ ನೀಡುತ್ತಿರುವ ನೆಮ್ಮದಿಗಾಗಿ ಚರಕದ ಸಹಯೋಗದೊಂದಿಗೆ ಕೈಮಗ್ಗದ ಘಟಕ ಸ್ಥಾಪಿಸಿದ್ದೇನೆ ಎನ್ನುತ್ತಾರೆ.
ಮಂಗಗಳ ಕಾಟಕ್ಕೆ ನಾಯಿಯೇ ಮದ್ದು: ಮಂಗಗಳು ಹೇರಳ ಅಡಿಕೆಚಿಗುರು ಕಾಯಿಗಳನ್ನು ತಿಂದು ಅಪಾರ ಹಾನಿ ಮಾಡುತ್ತಿದ್ದವು. ಕಾವಲಿಗೆ ಜನರನ್ನು ಇಟ್ಟರೂ ನಿಯಂತ್ರಣಕ್ಕೆ ಬರಲಿಲ್ಲ, ಆಗ ಸಿಕ್ಕಿದ್ದು ಈ ಉಪಾಯ. ಹಾದಿಬದಿಯಲ್ಲಿರುವ ಹತ್ತೆಂಟು ಬೀದಿನಾಯಿಯನ್ನು ಸಾಕಿದ್ದಾರೆ. ಸಾಕುವ ಖರ್ಚೂ ಕಡಿಮೆ ಮಂಗಗಳ ಕಾಟದಿಂದಲೂ ಮುಕ್ತಿ ಎನ್ನುವುದು ಗಣೇಶರ ಅನುಭವದ ಮಾತುಗಳು.
ಅಮೆರಿಕಾದ ನಗರದಲ್ಲೋ ಜಪಾನ್ ನ ಏರ್ ಕಂಡೀಷನ್ ರೂಂ ನಲ್ಲೋ ಕುಳಿತು ಉದ್ಯೋಗ ಮಾಡಬಹುದಾಗಿದ್ದ ಗಣೇಶ್ ಸ್ವಂತ ಮಣ್ಣಿನ ಆಸಕ್ತಿಯಿಂದ ಉತ್ತಮ ಕೃಷಿಕರೆನಿಸಿಕೊಂಡು ಕೃಷಿಯಲ್ಲಿ ಲಾಭವಿಲ್ಲ ಎನ್ನುವ ಮಾತಿಗೆ ಅರ್ಥವಿಲ್ಲ ಎಂಬುದನ್ನು ತೊರಿಸಿಕೊಟ್ಟಿದ್ದಾರೆ. ಕೃಷಿಯನ್ನೂ ಉದ್ಯಮವೆಂದು ಪರಿಗಣಿಸಿದರೆ ಅಷ್ಟೇ ಆಸ್ಥೆಯಿಂದ ಲೆಕ್ಕಾಚಾರಕ್ಕಿಳಿದು ಕೆಲಸ ಮಾಡಿ ತೊಡಗಿಸಿಕೊಂಡಲ್ಲಿ ಮಣ್ಣು ಕೈಬಿಡದು ಎನ್ನುವುದು ಗಣೇಶ್ ರ ಅನುಭವದಿಂದ ಬಂದ ಮಾತುಗಳು.
ಫೋನ್:  08183207625  -೦೮೧೮೩ ೨೦೭೬೨೫
ಮೊಬೈಲ್: 9449328304 -೯೪೪೯೩೨೮೩೦೪
(ವಿಜಯವಾಣಿಯಲ್ಲಿ ಪ್ರಕಟಿತ)

Saturday, December 22, 2012

ಮಲ್ಲು ಎಂಬ ಜಾತಿಯಲ್ಲದ ಜಾತಿ ನಾಯಿ

ಅತ್ತ ಜಾತಿಯದೇ ಅಲ್ಲ ಹಾಗಂತ ಕಂತ್ರಿಯಂತೂ ಅಲ್ಲವೇ ಅಲ್ಲ ಎಂಬಂಥಹ ಜಾತಿಗೆ ಸೇರಿದ್ದು ನಮ್ಮ ಮನೆಯ ನಾಯಿ ಮಲ್ಲು. ಅಯ್ಯ ಅದೇಂತಾ ಹೆಸರು ಮಲ್ಲು ಅಂತ ನಾಯಿಯದು ಅಂತ ನಿಮಗೆ ಅನ್ನಿಸಬಹುದು. ನಮ್ಮ ಮನೆಯಲ್ಲಿ ನಾವು ಎಲ್ಲಿಂದ ಯಾರ ಮನೆಯಿಂದ ಪ್ರಾಣಿಗಳನ್ನು ತಂದಿರುತ್ತೇವೆ ಎನ್ನುವುದರ ಮೇಲೆ ಅದರ ಹೆಸರು ನಿಕ್ಕಿಯಾಗುವ ಸಂಪ್ರದಾಯ ಲಾಗಾಯ್ತಿನಿಂದಲೂ. ಮಲ್ಲಕ್ಕಿ ಶ್ರೀಪಾದಣ್ಣನ ಮನೆಯಿಂದ ತಂದಂತಹ ನಾಯಿ ಇದಾದ್ದರಿಂದ ಶ್ರೀಪಾದ ಎಂದು ಹೆಸರಿಟ್ಟರೆ ಒದೆ ತಿನ್ನಬೇಕಾದೀತೆಂದು ಮಲ್ಲಕ್ಕಿ ಹೆಸರನ್ನು ಕತ್ತರಿಸಿ ಮಲ್ಲು ಎಂದು ನಾಮಕರಣ ಮಾಡಲಾಗಿದೆ. ಇಂತಿಪ್ಪ ಈ ನಮ್ಮ ಮಲ್ಲು ಈಸ ರೈಸ್ ಗಿರಾಕಿ. ಬಹುಶಃ ಒರಿಜಿನಲ್ ಈಸ ಕೂಡ ಇಷ್ಟು ರೈಸ್ ಆಗುವುದನ್ನು ನಾನು ನೊಡಿಲ್ಲ( ಈಸ ಪದ ಗೊತ್ತಿಲ್ಲದಿದ್ದರೆ ನನ್ನ ಯಾವುದೋ ಹಿಂದಿನ ಬ್ಲಾಗ್ ಓದಬೇಕು, ಇರಲಿ ಈಸ ಎಂದರೆ ಮುದ್ದು ಅಂತ) ನಮ್ಮ ಮಲ್ಲು ಮನುಷ್ಯರೊಡನೆ ಸ್ನೇಹಜೀವಿ, ಜಾನುವಾರು ಪ್ರಾಣಿಗಳನ್ನು ಕಂಡರೆ ಆಗದು. ವಾರಕ್ಕೊಂದೆರಡು ಹಾವುಗಳನ್ನು ಇದು ಸಾಯಿಸಿಬಿಡುತ್ತದೆ. ಒಂಥರಾ ಬೆಸರದ ಸಂಗತಿಯಾದರೂ ಅದು ಬಿಡದು ತನ್ನ ಚಟವನ್ನು ನಾವು ಬಿಡಲಾರೆವು ಮಲ್ಲುವನ್ನು. ಈಗ ಇದ್ದಕ್ಕಿದಂತೆ ಮಲ್ಲುವಿನ ಕುರಿತು ಯಾಕೆ ಬರೆದೆ ಅಂತ ಗೊತ್ತಾಗುತ್ತಿಲ್ಲ. ಒಟ್ಟಿನಲ್ಲಿ ಮಲ್ಲುವಿಗೆ ತನ್ನ ಮುಖವನ್ನು ನಿಮಗೆ ತೊರಿಸುವ ಅದೃಷ್ಟ ಮಜ ಮಾಡ್ಲಿ ಬಿಡಿ

ಹೀಗೆಲ್ಲಾ ಇದೆ ಮಜವಾದರೆ ಮಜ ಅನ್ನಿ ಇಲ್ಲವಾದರೆ ಬಿಟ್ಟಾಕಿ -

ಯಾರು ಎಷ್ಟೇ ಹಾರಾಡಿದರೂ  ಕೂಗಾಡಿದರೂ ಒಂದಲ್ಲ ಒಮ್ದು ದಿನ ಈ ದೇಹವನ್ನು ಬಿಡಲೇಬೇಕು. ಗೊತ್ತಿಲ್ಲದ ಗುರಿಯಿಲ್ಲದ ಪಯಣ ಅದು. ಹುಟ್ಟಿನ ಮೊದಲು ಸತ್ತ ನಂತರ ದ ವ್ಯವಹಾರಗಳು ಏನು ಎತ್ತ ಎಂಬುದು ಎಲ್ಲವೂ ಕಾಲ್ಪನಿಕವೇ. ಶಾಸ್ತ್ರ ಪುರಾಣ ಏನೇ ಹೇಳಲಿ ಅದು ಮತ್ತೆ ಮನುಷ್ಯ ಸೃಷ್ಟಿಯೇ. ಮತ್ತು ನಂಬಿಕೆಯ ಅಧಾರದ ಮೇಲೆ ನಿಂತಿದೆ. ಬಿಡಿ ಅವುಗಳನ್ನೆಲ್ಲಾ ಅದರ ಪಾಡಿಗೆ ಬಿಟ್ಟು ನಾವೂ ಒಂದು ಸುಲಭ ಉಪಾಯದ ಮೂಲಕ ಡೆತ್ ಅನುಭವ ಪಡೆದುಕೊಳ್ಲೋಣ. ಹೀಗೊಂದು ಸುಲಭ ನಂಬಿಕೆಯ ವ್ಯಾಯಾಮ ನಿಮಗೆ ನಿಮ್ಮಲ್ಲಿ ಅಡಗಿರುವ ಜೀವ ಭಯ, ಟೆನ್ಷನ್, ಖಾಯಿಲೆ ಭಯ ಹೀಗೆ ಎನೆಲ್ಲಾ ಕಪೋಲಕಲ್ಪಿತಗಳು ಇರುತ್ತವೆಯೋ ಅವನ್ನೆಲ್ಲಾ ಓಡಿಸಿ ವಾಸ್ತವಗಳನ್ನು ಮಾತ್ರಾ ನಿಮ್ಮ ಮಿದುಳು ಯೋಚಿಸುವಂತೆ ಮಾಡುತ್ತದೆ. ಅಷ್ಟಾದ ಮೇಲೆ ದಿನಪೂರ್ತಿ ಜಿಂಗಲಾಲ.
ನಿಮಗೀಗ ನಡು ವಯಸ್ಸು ಅಂತಿಟ್ಟುಕೊಂಡರೆ ನಿಮ್ಮ ಜೀವನದಲ್ಲಿ ಒಂದೆರಡು ಸಾವಿನ ಮನೆಯನ್ನು ನೋಡಿರುತ್ತಿರಿ. ಅವೆಲ್ಲಾ ನೆನಪಿರುತ್ತದೆ. ಈಗ ಅದನ್ನು ನೀವು ಒಮ್ಮೆ ಅನುಭವಿಸಿ.  ಆರಾಮವಗಿ ಅಂಗಾತ ಮಲಗಿ. ಆಳವಾದ ಉಸಿರೆಳೆದುಕೊಳ್ಳಿ. ಕಾಲಿನ ಕೊಟ್ಟ ಕೊನೆಯ ಬೆರಳನ್ನು ನೆನಪಿಸಿಕೊಳ್ಳಿ. ನಂತರ ಪಕ್ಕದ್ದು ಆಮೇಲೆ ಅಂಗಾಲು ನಂತರ ಕಾಲು ಹಾಗೆಯೇ ಮೇಲೆ ತೊಡೆ ನಂತರ .....  .... ಮತ್ತೆ ಹೊಟ್ಟೆ ಹೃದಯ ಕುತ್ತಿಗೆ ಮಿದುಳಿನೆಲ್ಲಾ ನಿಮ್ಮ ಮನಸ್ಸನ್ನು ಸುತ್ಟಾಡಿಸಿ ಕುಂಕುಮ ಪಾಯಿಂಟ್( ಮೂಗಿನ ಮೇಲೆ) ನಿಮ್ಮ ಮನಸ್ಸನ್ನು ಕೇಂದ್ರೀಕರಿಸಿ. ಅಲ್ಲಿಗೆ ನಿಮ್ಮ ಮನಸ್ಸು ಬಂತು ಅಂತಾದರೆ ದೇಹವನ್ನು ಮರೆತಿರುತ್ತದೆ. ಮರೆತಿಲ್ಲದಿದ್ದರೂ ಪರವಾಗಿಲ್ಲ ಒತ್ತಾಯಪೂರ್ವಕವಾಗಿ ನೆನಪಿಸಿಕೊಳ್ಳಬೇಡಿ. ನೆನಪಿಸಿಕೊಂಡರೂ ಪರವಾಗಿಲ್ಲ ಯಾವುದು ನೆನಪಾಯಿತೋ ಮತ್ತೆ ಅಲ್ಲಿಂದ ಮುಂದುವರೆಸಿ ಅಂತಿಮವಾಗಿ ಕುಂಕುಮ ಪಾಯಿಂಟ್ ಗೆ ಬಂದಮೇಲೆ ಕಲ್ಪಿಸಿಕೊಳ್ಳಿ "ನನ್ನ ದೇಹ ಸಾವನ್ನು ಹೊಂದಿದೆ" ನಂತರ ನಿಮ್ಮ ಸಾವು ನಿಮ್ಮ ಹತ್ತಿರವಿದ್ದವರಿಗೆ ತಿಳಿದಂತೆ ಅದರ ಪರಿಣಾಮ ನಿಮ್ಮ ಮಿದುಳಿಗೆ ತೋಚಿದಂತೆ ಕಲ್ಪಿಸುತ್ತಾ ಸಾಗಿ. ನಿಮ್ಮ ದೇಹದ ಪಯಣ ಚಿತಾಗಾರದವರೆಗೂ ಸಾಗಲಿ ಅಲ್ಲಿ ಭಸ್ಮವಾಗಲಿ. ಇವೆಲ್ಲಾ ಅನುಭವ ಕಲ್ಪನೆಗಳ ಮೇಲಷ್ತೇ ಸಾಗುವುದರಿಂದ ನಿಮ್ಮ  ಮಿದುಳು ತಮಾಷೆಯಾಗಿ ಒಂದು ಆಟದಂತೆ ಇವನ್ನೆಲ್ಲಾ ಗ್ರಹಿಸುತ್ತದೆ. ಸರಿ ಸುಮಾರು ಅರ್ದ ಗಂಟೆಯ ನಂತರ ಕಣ್ಣು ಬಿಡಿ. ನಿಮ್ಮ ಮನಸ್ಸು ಉಲ್ಲಾಸದತ್ತ ಸಾಗುತ್ತದೆ. ವರ್ತಮಾನದಲ್ಲಿ ಕಾಡುತ್ತಿರುವ ಸಮಸ್ಯೆಗಳ ಪರಿಹಾರ ತನ್ನಷ್ಟಕ್ಕೆ ಗೋಚರಿಸುತ್ತದೆ.
ಇಂತಿ ನಿಮ್ಮ -  ಶಾಸ್ರ ತಿಳಿಯದ ಶಾಸ್ತ್ರಿ

ಹೀಗೆಲ್ಲಾ ಇದೆ ಮಜವಾದರೆ ಮಜ ಅನ್ನಿ ಇಲ್ಲವಾದರೆ ಬಿಟ್ಟಾಕಿ -

Sunday, December 16, 2012

ಉತ್ಸಾಹದ ಚಿಲುಮೆ ಆರಂಭವಾಗುತ್ತದೆ.

ನಲವತ್ತು ದಾಟಿದಮೇಲೆ ಆರೋಗ್ಯದತ್ತ ಮನಸ್ಸು ಹರಿಯತೊಡಗುತ್ತದೆ. ಅತ್ತ ಯುವಕರೂ ಅಲ್ಲ ಇತ್ತ ಮುದುಕರೂ ಅಲ್ಲ, ಜವಾಬ್ದಾರಿ ಹೆಚ್ಚು ದೇಹ ಶಕ್ತಿ ಕೊಂಚ ಕಡಿಮೆ ಹೀಗೆಲ್ಲಾ ಇರುವ ಕಾಲದಲ್ಲಿ ಟೆನ್ಷನ್ ಎಂಬ ವ್ಯಾಧಿ ದೇಹವನ್ನು ತಿನ್ನತೊಡಗುತ್ತದೆ. ಆವಾಗ ಪೂಜೆ ದೇವರ ಮೊರೆ ಧಾರ್ಮಿಕ ಕಾರ್ಯಕ್ರಮ ಜಾತಕ ಹಿಡಿದು ತಿರುಗುವುದು ಮುಂತಾದ ಸಲಹೆಕಾರರ ಸಲಹೆಗಳೆಲ್ಲಾ ಅನುಷ್ಠಾನ ಗೊಳ್ಳಲಾರಂಬಿಸುತ್ತವೆ. ಒಂದಿಷ್ಟು ಸಕ್ಸಸ್ ಮತ್ತೊಂದಿಷ್ಟು ತೋಪು. ಬಿಡಿ ಅವೆಲ್ಲಾ ಬಹುಪಾಲು ಎಲ್ಲರ ಜೀವನದಲ್ಲಿ ಇದ್ದದ್ದೇ, ಈಗ ಏಕ್ ದಂ ಬೇರೆ ವಿಷಯದತ್ತ ಹೊರಳೋಣ,
ಹೇಗೂ ಸ್ನಾನ ನಿತ್ಯ ಮಾಡುತ್ತಿರಿ ನೀವು, ಅಲ್ಲಿ ನೀವೊಬ್ಬರೆ ಹೆಚ್ಚಾಗಿ ಇರುವುದು. ಗುಂಪಿನ ಸ್ನಾನ ಎಲ್ಲೋ ವರ್ಷದಲ್ಲಿ ಒಮ್ಮೊಮ್ಮೆ ಅಷ್ಟೆ ಹಾಗಾಗಿ ಅದನ್ನು ಬಿಟ್ಟಾಕಿ ಒಂಟಿ ಸ್ನಾನದ ವಿಷಯದತ್ತ ಹೊರಳೋಣ. ಬಿಸಿ ನೀರಿನ ಬೆಚ್ಚನೆಯ ಸ್ನಾನಕ್ಕಿಂತ ತಣ್ನೀರಿನಲ್ಲಿ ಮಿಂದು ಬೆಚ್ಚಗಾಗುವುದು ಉತ್ತಮ ಎಂದು ನಾನು ನಿಮಗೆ ಹೊಸದಾಗಿ ಹೇಳಿಕೊಡಬೇಕಾಗಿಲ್ಲ, ಇರಲಿ ಯಾವುದೋ ಒಂದು ನೀರಿನ ಸ್ನಾನ ಮುಗಿದಮೇಲೆ ಕೊನೇಯ ಚೊಂಬಿನ ನೀರು ತಲೆಯಮೇಲೆ ಸುರಿದುಕೊಳ್ಳಿ ಆ ನೀರು ಇಳಿದುಹೋಗಲು ಆರಂಬಿಸುತ್ತಿದ್ದಂತೆ ನೇರವಾಗಿ ನಿಲ್ಲಿ ಮುಖವೂ ಸೆಟೆದುಕೊಳ್ಳುವಷ್ಟು ನೇರ, (ಅಪಾರ್ಥ ಬೇಡ ಮೈಮೇಲೆ ಬಟ್ಟೆ ಇರಬಾರದು) ಈಗ ನಿಮ್ಮ ಎರಡು ಪಾದಗಳನ್ನು ಕೊಂಚ ಅಗಲ ಮಾಡಿ, ಅಂದರೆ ನಿಮ್ಮ ದೇಹದ ಭಾರ ಎರಡು ಕಾಲುಗಳ ಮೇಲಿದ್ದರೂ ನಡು ಮಧ್ಯೆ ಇರುವ ಅನುಭವವಾಗುತ್ತದೆ. ಆಗ ಕುತ್ತಿಗೆಯನ್ನು ಮಾತ್ರಾ ಬಗ್ಗಿಸಿ ನೋಡಿ, ಏನು ಕಾಣಿಸಿತು ಎಂಬುದರ ಮೇಲೆ ನಿಮ್ಮ ಅವಸ್ಥೆ.  ಹೆಬ್ಬೆರಳು ಸಂಪೂರ್ಣ ಕಾಣಿಸುತ್ತದೆ ಎಂದರೆ ನಿಮಗೆ ಯಾವ ಧ್ಯಾನ ಯೋಗ ದ ಅವಶ್ಯಕತೆಯಿಲ್ಲ ಆರೋಗ್ಯ ಸಾಕಷ್ಟಿದೆ.  ಹೆಬ್ಬರಳ ಉಗುರು ಮಾತ್ರಾ ಕೊಂಚ ಕಾಣಿಸುತ್ತಿದೆ ಎಂದರೆ ನಿಮ್ಮ ದೇಹದ ಸಮಸ್ಯೆ ಈಗಷ್ಟೇ ಆರಂಭ. ಇಲ್ಲ ನನಗೆ ಪಾದವೇ ಕಾಣಿಸುತ್ತಿಲ್ಲ ನನ್ನ  ಹೊಟ್ಟೆ  ಮಾತ್ರಾ ಕಾಣಿಸುತ್ತಿದೆ ಎಂದಾದರೆ ನಿಮ್ಮ ಆರೋಗ್ಯ ಹದೆಗೆಟ್ಟಿದೆ ಎಂದರ್ಥ. ಸರಿ ಸರಿ ಸಮಸ್ಯೆ  ಗೊತ್ತಾಯಿತು ಪರಿಹಾರವೇನು ಎಂದಿರಾ. ಸಿಂಪಲ್ ಹಾಗೆಯೇ ಮತ್ತೆ ಕುತ್ತಿಗೆ ನೇರಮಾಡಿ ಕಣ್ಮುಚ್ಚಿ ಹೀಗೆ ಹೇಳಿ " ಮುಂದಿನ ತಿಂಗಳು ಸದರಿ ದಿನಾಂಕದಂದು ನಾನು ಕುತ್ತಿಗೆ ಬಗ್ಗಿಸಿದಾಗ ನನ್ನ ಕಾಲಿನ ಹೆಬ್ಬೆರಳು ಕಾಣುವಾಂತಾಗಲಿ" ಹೀಗೆ ನಿತ್ಯ ಸ್ನಾನ ಮಾಡಿದ ಮೇಲೆ ಬಚ್ಚಲಲ್ಲಿಯೇ ನಿಂತು ಇಷ್ಟೆಲ್ಲಾ ಮಾಡಿ ಹೇಳುತ್ತಾ ಸಾಗಿ. ಒಂದು ತಿಂಗಳ ನಂತರ ಅಚ್ಚರಿ ನೋಡಿ, ನಿಮ್ಮ ಹೊಟ್ಟೆ ವಾಪಾಸು ಹೋಗಿರುತ್ತದೆ ಮತ್ತು ಅದೇನೋ ಅದಮ್ಯ ಉತ್ಸಾಹದ ಚಿಲುಮೆ ಆರಂಭವಾಗುತ್ತದೆ. ಆಗಿಲ್ಲವಾದರೆ ನಿಮ್ಮ ಕ್ರಮದಲ್ಲಿ ತುಸು ವ್ಯತ್ಯಯವಾಗಿದೆ ಅಂತ ಅರ್ಥ. ನನಗೆ ಫೋನಾಯಿಸಿ ಸರಿಪಡಿಸುತ್ತೇನೆ  .

Saturday, December 15, 2012

ಕಲ್ಲು ಭೂಮಿಯಲ್ಲಿ ಕೈ ಹಿಡಿದ ಅನಾನಸ್


ಕೃಷಿ ಯಶಸ್ವಿಯಾಗಲು ಭೂಮಿಯ ಫಲವತ್ತತೆ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ. ಲ್ಯಾಟ್ರೇಟ್ ಕಲ್ಲಿನ ಮೇಲ್ಪದರವುಳ್ಳ ಭೂಮಿಯನ್ನು ಖರೀದಿ ಮಾಡಿ ಕೃಷಿ ಮಾಡುತ್ತೇನೆಂದು ಹೊರಟರೆ ಅಲ್ಲಿ ಫಲ ಸಿಗುವುದು ದುಸ್ತರ ಎಂಬುದು ಎಲ್ಲರ ಭಾವನೆ. ಅದರ ಜತೆ ಮೇಲ್ಗಡೆ ಹೈಟೆನ್ಷನ್ ವಿದ್ಯುತ್ ತಂತಿ ಹಾದು ಹೋಗಿದೆ ಎಂದರೆ ಆ ಭೂಮಿಯ ಗತಿ ಕೇಳುವವರೇ ಇಲ್ಲ. ಕೃಷಿಗಂತೂ ಕಷ್ಟ, ವಿದ್ಯುತ್ ಕಂಬಗಳು ಹಾದುಹೋಗಿರುವುದರಿಂದ ಕೆಂಪು ಕಲ್ಲು ಗಣಿಗಾರಿಕೆಗೂ ಅನುಪಯುಕ್ತ ಎಂಬುದು ಜನಸಾಮಾನ್ಯರ ಅಭಿಪ್ರಾಯ. ಅದು ಆದರೆ ತಾಳಗುಪ್ಪ ಸಮೀಪದ ಹಿರೇಮನೆಯ ಎಂ ಆರ್ ಅಣ್ಣಪ್ಪ ಎಂಬ ರೈತ ವಿಶೇಷ ಧೈರ್ಯ ದಿಂದ ಇಂಥಹ ಅಭಿಪ್ರಾಯದ ಗೊಡ್ಡು ಭೂಮಿ ಖರೀದಿ ಮಾಡಿ ಆರು ವರ್ಷಗಳ ನಿರಂತರ ಶ್ರಮದಿಂದ ಯಶಸ್ಸು ಸಾಧಿಸಿದ್ದಾರೆ.
೨೦೦೬ ನೇ ಇಸವಿಯಲ್ಲಿ ಲೋಕೋಪಯೋಗಿ ಇಲಾಖೆಯ ಕ್ಲಾಸ್ ೩ ಗುತ್ತಿಗೆದಾರರಾಗಿ ಕೆಲಸ ಮಾಡುತ್ತಿದ್ದ ಅಣ್ಣಪ್ಪರಿಗೆ ಕೃಷಿ ಮಾಡಬೇಕೆಂಬ ಹುಚ್ಚು ತಲೆಗೆ ಹತ್ತಿತ್ತು. ವಂಶಪಾರಂಪರಿಕವಾಗಿ ಕೃಷಿಕರಾಗಿದ್ದರೂ ಹೊಸತನ್ನು ಸಾಧಿಸಬೇಕೆಂಬ ಹಂಬಲದೊಂದಿಗೆ ಕೃಷಿ ಯೋಗ್ಯ ಭೂಮಿ ಅರಸಲು ಆರಂಭಿಸಿದರು. ಕೃಷಿಯೋಗ್ಯ ಫಲವತ್ತಾದ ಭೂಮಿ ಖರೀದಿ ಅಣ್ಣಪ್ಪನವರ ಜೇಬಿಗೆ ಎಟುಕುವಂತೆ ದೊರಕಲಿಲ್ಲ. ಆಗ ಕಂಡಿದ್ದು ಬಹುಪಾಲು ಕಲ್ಲುತುಂಬಿದ್ದ ಗೊಡ್ಡು ಖುಷ್ಕಿ ಭೂಮಿ. ಮೇಲ್ಗಡೆ ಹಾಯ್ದು ಹೋದ ಹೈ ಟೆನ್ಷನ್ ವಿದ್ಯುತ್ ತಂತಿ. ಹೀಗಿರುವ ಆರೂವರೆ ಎಕರೆ ಖುಷ್ಕಿ ಖರೀದಿ ಮಾಡ ಹೊರಟ ಅಣ್ಣಪ್ಪನವರ ಕೆಲಸಕ್ಕೆ ಹುಚ್ಚು ಎಂದವರು ಬಹಳ ಮಂದಿ. ಆದರೆ ಇಂದು ಅವರತ್ತ ಬೆರಗುಗಣ್ಣಿನಿಂದ ಎಲ್ಲ ನೋಡುವಂತಾಗಿದೆ.
ಲ್ಯಾಟ್ರೇಟ್ ಕಲ್ಲಿನ ಖುಷ್ಕಿ ಖರೀದಿಸಿದ ಅಣ್ಣಪ್ಪ ಗುಡ್ಡದಂಚಿನಲ್ಲಿ ತೆರೆದ ಬಾವಿ ತೆಗೆಯಿಸಿದರು. ಅವರ ಆರಂಭದ ಯತ್ನವೇ ಸಫಲವಾಯಿತು. ೨೫ ಅಡಿ ಆಳದಲ್ಲಿ ೬ ಎಕರೆಗೆ ಬೇಕಾಗುವಷ್ಟು ನೀರು ಸಿಕ್ಕಿತು. ಆವಾಗ ಅವರು ಆಯ್ಕೆ ಮಾಡಿಕೊಂಡಿದ್ದು ಬಾಳೆ ಹಾಗೂ ಅಡಿಕೆ. ಖುಷ್ಕಿ ಭೂಮಿಯಲ್ಲಿ ಬಾಳೆ ಸಾಧಾರಣ ಬೆಳೆ ಬಂದಿತಾದರೂ ಅಡಿಕೆಗೆ ಅಷ್ಟು ಪ್ರಯೋಜನ ಅಲ್ಲ ಜತೆಯಲ್ಲಿ ಮೇಲ್ಗಡೆ ಹೈಟೆನ್ಷನ್ ವಿದ್ಯುತ್ ತಂತಿ ಇರುವ ಕಾರಣ ಎತ್ತರದ ಸಮಸ್ಯೆಯಿಂದಾಗಿ ಅಡಿಕೆಗೆ ಒಗ್ಗದು ಎಂಬುದು ಪ್ರಯೋಗದಿಂದ ಮನದಟ್ಟಾಯಿತು. ಜತೆಯಲ್ಲಿ ಭೂಮಿಯ ಬಹು ಭಾಗ ವಿದ್ಯುತ್ ತಂತಿ ಕಂಬಗಳು ಹಾದು ಹೋಗಿರುವ ಕಾರಣ ಮತ್ತು ಭೂಮಿಯ ಹೆಚ್ಚು ಭಾಗ ಲ್ಯಾಟ್ರೇಟ್ ಕಲ್ಲಿನದಾದ್ದರಿಂದ ಅದಕ್ಕೆ ತಕ್ಕುದಾದ ಬೆಳೆ ಅರಸುವ ಕೆಲಸಕ್ಕೆ ಅಣ್ಣಪ್ಪ ಇಳಿದರು. ಆವಾಗ ಸಿಕ್ಕಿದ್ದು ಅನಾನಸ್.

ಅನಾನಸ್ ಬಂಪರ್ ಬೆಳೆ : ಅನಾನಸ್ ನಾಟಿ ಮಾಡಿ ಹದಿನೆಂಟು ತಿಂಗಳಿಗೆ ಉತ್ತಮ ಬೆಳೆ ಬಂದಿತು. ಭೂಮಿ ಹದ ಮಾಡಲು ಸ್ವಲ್ಪ ಅಧಿಕ ವೆಚ್ಚ ತಗುಲಿದರೂ ಎಕರೆಗೆ ೫ ರಿಂದ ೬ ಟನ್ ಅತ್ಯುತ್ತಮ ಫಸಲು ದೊರಕಲಾರಂಭಿಸಿದಾಗ ಅಣ್ಣಪ್ಪನವರ ಶ್ರಮ ಸಾರ್ಥಕವಾದಂತೆನಿಸಿತು. ಭೂಮಿ ಖರಿದಿಸಿ ಅನಾನಸ್ ಕೃಷಿ ಪ್ರಾರಂಭಿಸಿ ಆರು ವರ್ಷಗಳು ಸಂದಿವೆ. ವರ್ಷವೊಂದಕ್ಕೆ ೨ ಲಕ್ಷ ಹಣ ಅನಾನಸ್ ಮೂಲಕ ಗಳಿಸುತ್ತಿರುವ ಅಣ್ಣಪ್ಪ ಖರ್ಚು ಕಳೆದು ೧ ಲಕ್ಷ ಮಿಗಿಸುತ್ತಿದ್ದಾರೆ. ಕಳೆದ ವರ್ಷದಿಂದ ಅನಾನಸ್ ಬೆಳೆಯ ನಡುವೆ ಅತ್ತರಕ್ಕೆ ಬೆಳೆಯದ ಪೇರಲೆ ಹಲಸು ಮುಂತಾದ ಹಣ್ಣಿನ ಗಿದಗಳನ್ನು ನಾಟಿಮಾಡಿದ್ದಾರೆ. ಅನಾನಸ್ ಆರ್ಥಿಕ ಲಾಭ ತರುವ ಬೆಳೆಯಾದರೂ ನಿರಂತರ ಕೂಲಿಯಾಳುಗಳನ್ನು ಅವಲಂಬಿಸುವುದರಿಂದ ಬಂಡವಾಳ ವಾಪಾಸು ಬಂದನಂತರ ಹಣ್ಣಿನ ಬೆಳೆಗಳಿಗೆ ಹೊರಳುವುದು ಅಣ್ಣಪ್ಪನವರ ಚಿಂತನೆ.

ನಿವೃತ್ತಿಯಿಲ್ಲದ ಜೀವನ: ಕೃಷಿಕನ ಜೀವನ ಸುಂದರ ಎನ್ನುವ ಅಣ್ಣಪ್ಪ ಶಾಂತಿ ನೆಮ್ಮದಿ ಇರುವುದು ಹಾಗೂ ನಿವೃತ್ತಿಯ ಚಿಂತೆ ಕಾಡದಿರುವುದು ಕೃಷಿಕರಿಗೆ ಮಾತ್ರಾ ಎನ್ನುತ್ತಾರೆ. ಗಿಡಗಳ ನಡುವೆ ನಾವು ನಂಟು ಬೆಳೆಸಿಕೊಂಡರೆ ಅವೂ ಮಾತಾನಾಡುತ್ತವೆ ಆದರೆ ಅದನ್ನು ಗಮನಿಸುವ ಮನಸ್ಸಿರಬೇಕು ಎನ್ನುತ್ತಾರೆ. ಮೇಲೆ ತಂತಿ ಕೆಳಗೆ ಕಲ್ಲು ನಡುವೆ ಅಣ್ಣಪ್ಪ ನವರ ಶ್ರಮದಿಂದಾಗಿ ಭೂಮಿ ಇಂದು ಹಸಿರಿನಿಂದ ನಳನಳಿಸುವಂತಾಗಿದೆ. ಶ್ರಧ್ದೆ ಹಾಗೂ ತಾಳ್ಮೆ ಇದ್ದರೆ ಭೂಮಿ ಖಂಡಿತಾ ಬರಡಲ್ಲ ಹಾಗೂ ಬರಡು ಭೂಮಿ ಎಂಬುದು ನಮ್ಮ ಮಾನಸಿಕ ಅವಸ್ಥೆ, ಮನಸ್ಸನ್ನು ಹಸಿರುಗೊಳಿಸಿದರೆ ಎಲ್ಲೆಡೆ ಹಸಿರು ಕಾಣಬಹುದು ಎಂಬುದು ಅಣ್ಣಪ್ಪ ನವರ ಅನುಭವವೇದ್ಯ ಮಾತುಗಳು.

ಪೋನ್:೯೩೭೯೪೧೨೦೦೩