Saturday, September 6, 2008

ಹುಡುಕ ಹೊರಟ ನಾನು ಹುಡಿಕಿಕೊಂಡ ಅಪ್ಪಯ್ಯ


ಹಾ ಆರಂಭದಲ್ಲಿಯೇ ಹೇಳುತ್ತೇನೆ. ಈಗ ನಾನು ಹೇಳ ಹೊರಟಿರುವುದು ಏನೇನೋ ಇದೆ. ಅದನ್ನೆಲ್ಲಾ ನಿಮ್ಮಲ್ಲಿಯೇ ಬಚ್ಚಿಟ್ಟುಕೊಳ್ಳಬೇಕು, ಕಾರಣ ಅದು ನೀವೂ ಆಗಿರಬಹುದು. ನಾನೂ ಆಗಿರಬಹುದು.
ನನಗೆ ವಯಸ್ಸು ನಲವತ್ತೊಂದು, ಪಿಯುಸಿ ವಿದ್ಯಾರ್ಹತೆ ಕನ್ನಡ ಓದಲು ಬರೆಯಲು ಹಿಂದಿ ಮಾತನಾಡಲು ಇಂಗ್ಲೀಷ್ ಓದಲು ಬರುತ್ತದೆ. ಮಲೆನಾಡಿನ ಹಳ್ಳಿಯ ಒಂಟಿಮನೆಯಲ್ಲಿ ವಾಸ. ವರ್ಷಕ್ಕೆ ಹತ್ತು ಕ್ವಿಂಟಾಲ್ ಅಡಿಕೆ ಬೆಳೆಯಲ್ಲಿ ಜೀವನ. ವೆನಿಲಾಕ್ಕೆ ಒಳ್ಳೆ ದರ ಬಂದಿದ್ದಾಗ ಕೊಂಡುಕೊಂಡ ಕಂಪ್ಯೂಟರ್,ತೊಂಬತ್ತೊಂದನೆ ಮಾಡಲ್ ಓಮ್ನಿ, ಓಲಂಪಸ್ ಕ್ಯಾಮೆರಾ, ವಾಷಿಂಗ್ ಮಷಿನ್, ಪ್ರಿಜ್, ಹೀಗೆ ಏನೇನೋ ಇದೆ. ಈಗ ವೆನಿಲಾ ವೈರಸ್ ಖಾಯಿಲೆಯಿಂದ ಸಂಪೂರ್ಣ ನಾಶವಾದ ನಂತರ ಅವೆಲ್ಲಾ ದಿನಕಳೆದಂತೆ ಮೂಲೆ ಸೇರುತ್ತಾ ಇದೆ. ಇರಲಿ ಅದೂ ಒಂದು ಕಾಲ. ಈಗ ನನ್ನ ಬುದ್ದಿಯ ಕತೆ ನೋಡೋಣ. ಹುಡುಕ ಹೊರಡುವುದು ಚಟ, ಸಿಗಲಿ ಸಿಗದಿರಲಿ ಅರ್ದಕ್ಕೆ ಕೈಬಿಡುವುದು ಕೆಟ್ಟ ಚಟ. ಇತ್ತ ದೇವರು ದಿಂಡಿರು ಎಂದು ಮಡಿ ಉಟ್ಟು ಕೂರುವುದರಲ್ಲಿ ಅರ್ಥ ಇಲ್ಲ ಅಂತ ಅನ್ನಿಸುತ್ತದೆ, ಅವೆಲ್ಲಾ ಸುಳ್ಳು ಅಂತ ಅನ್ನಿಸುತ್ತದೆ. ಆದರೆ ಸತ್ಯ ಯಾವುದು ಎಂದು ಗೊತ್ತಿಲ್ಲ. ಪ್ರತಿ ನಿತ್ಯ ಬೆಳಿಗೆ ಎದ್ದು ಮಿಂದು ಮಡಿಯನ್ನುಟ್ಟು ಅದೇ ನಾದಶಬ್ಧ ಮಹೀಂ ಗಂಟಾಂ ಸರ್ವ ವಿಘ್ನಾಪಹಾರೀಣೆ, ಪೂಜಯೇ ... ಎಂದು ಮಂತ್ರ ಹೇಳುತ್ತಾ ಗಂಧ ತೆಯ್ಯುತ್ತಾ ಮರದ ದೇವರ ಪೀಠಕ್ಕೆ ಅಲಂಕಾರ ಮಾಡುತ್ತಾ, ಕಪ್ಪಗಿರುವ ಕಲ್ಲನ್ನು ಸಾಲಿಗ್ರಾಮ ಎಂದುಕೊಂಡು ತಿಕ್ಕಿ ತಿಕ್ಕಿ ತೊಳೆದು ಆಕಳು ಹಾಲನ್ನು ಅಭಿಷೇಕ ಮಾಡಿ ತೆಯ್ದ ಗಂಧ ಹಚ್ಚಿ ಗಣಗಣ ಗಂಟೆ ಭಾರಿಸಿ ಕೊನೆಯದಾಗಿ ಶರೀರೆ ಜರ್ಜರೇಭೂತೆ ವ್ಯಾಧಿಗ್ರಸ್ತೆ ಕಲೇವರೆ ಔಷಧಿ ಜಾಹ್ನವಿತೋಯಂ.... ಮಂತ್ರ ಹೇಳಿ ಸುವಾಸನಾಭರಿತ ತೀರ್ಥವನ್ನು ತೆಗೆದುಕೊಂಡು ಪ್ರಸಾದ ಕಣ್ಣಿಗೊತ್ತಿಕೊಳ್ಳುವುದರಲ್ಲಿ ಏನಿದೆ..? ಇವೆಲ್ಲಾ ಮಾಡದೇ ಸಹಜವಾಗಿ ನಯವಿನಯ ಕರುಣೆ ಯನ್ನು ವ್ಯಕ್ತಪಡಿಸುತ್ತಾ ಮನೆಯವರೊಂದಿಗೆ ನಗುನಗುತ್ತಾ ನಾಲ್ಕು ಮಾತನಾಡಿ ಜನರಿಗೆ ನಮ್ಮ ಕೈಲಾದಷ್ಟು ಉಪಕಾರ ಮಾಡಬೇಕೆಂದು ತೀರ್ಮಾನಿಸುವ ಯಡವಟ್ಟು ಸ್ವಭಾವ ನನ್ನದು. ಹೀಗೆ ಉಪಕಾರ ಮಾಡಲು ಹೋಗಿ ಹಾದಿಯಮೇಲೆ... ಹೆಗಲಮೇಲೆ ಏರಿಸಿಕೊಂಡ ಕತೆಯೇ ಹಲವು. ನನ್ನ ಬಳಿ ದೇವರ ಕುರಿತಾದ ನೂರಾರು ಪ್ರಶ್ನೆಗಳಿವೆ. ದೇವರಪೂಜೆಯೇ ಜೀವನವಲ್ಲ, ಜೀವನದಲ್ಲಿ ದೇವರನ್ನು ಪೂಜಿಸಬೇಕು. ಕರ್ತವ್ಯವೇ ದೇವರು, ಗಣಪತಿಯೇ ದೇವರು ಎಂದಾಗಿದ್ದರೆ ಇದೇ ವಿಗ್ರಹವನ್ನು ಹಿಂದೂ ಧರ್ಮ ಗೊತ್ತಿಲ್ಲದ ದಕ್ಷಿಣ ಆಮೆರಿಕಾದ ವ್ಯಕ್ತಿಗೆ ತೋರಿಸಿದರೆ ಆತ ದಿಸ್ ಇಸ್ ಜಸ್ಟ್ ಲೈಕ್ ಎ ಎಲಿಫೆಂಟ್ ಅಂದುಬಿಡುತ್ತಾನೆ. ಆತ ಅಪ್ಪಿತಪ್ಪಿಯೂ ಓ ಮೈ ಗಾಡ್ ಎಂದು ಕೈಮುಗಿಯುವುದಿಲ್ಲ. ಕಾಪಾಡಪ್ಪಾ ವಿನಾಯಕ ಅನ್ನುವುದಿಲ್ಲ. ನಮ್ಮಂತಯೇ ಮನುಷ್ಯನಾದ ಮನುಷ್ಯನೇ ಹೀಗೆಂದಮೇಲೆ ನಮ್ಮ ಅಚ್ಚುಮೆಚ್ಚಿನ ಗಣಪ ಸರ್ವಾಂತರ್ಯಾಮಿಯಲ್ಲ ಎಂದಾಯಿತು. ಅಯ್ಯೋ ಅಮೆರಿಕಾದ ಕತೆ ಹಾಗಿರಲಿ ಚುಪುರು ಚುಪುರು ಗಡ್ಡದ ಪಾತ್ರೆಗೆ ಕಲಾಯಿ ಹಾಕುವ ಬುಡಾನ್ ಸಾಬಿ " ನಿಮ್ದೂಕಿ ಮೂರ್ತಿ ಪೂಜೆ ಮಾಡ್ತಾರೆ, ದೇವ್ರು ಹಂಗೆಲ್ಲಾ ಮೂರ್ತೀಲಿ ಇರ್ತಾರೆ ಅನ್ನೋದು ಸುಳ್ಳು, ನಮ್ದೂಕಿ ಅಲ್ಲಾನೇ ದೇವ್ರು" ಅಂತ ಹೇಳ್ತಾನೆ ಅಂದ್ಮೇಲೆ, ನಾವು ನಂಬಿದ ಕಾರಣಕ್ಕಾಗಿ ಆತ ದೇವರು ನಂಬದಿದ್ದರೆ ದೇವರು ಅಲ್ಲ ಅಂಬ ವಾದಕ್ಕೆ ಇಳಿಯುತ್ತೇನೆ. ಒಮ್ಮೆ ಒಬ್ಬ ಪುರೋಹಿತರ ಬಳಿ ವೃಥಾ ವಾದಕ್ಕೆ ಇಳಿದಿದ್ದೆ. ವಡೆಭಾಗದ ಮನೆಗಳಲ್ಲಿ ನಮಗೆ ಊಟಕ್ಕೆ ಆಗುವತನಕ ಕೆಲ್ಸ ಇರುವುದಿಲ್ಲ( ಇಲ್ಲಿ ನಮ್ಮ ಹಳ್ಳಿಗಳಲ್ಲಿ ಯಾವಾಗ ಕೆಲ್ಸ ಇದೆ ಅಂತ ನೀವು ಕೇಳಬಹುದು.. ಇರಲಿ ನೀವು ಹಾಗೆಲ್ಲ ತಲೆಹರಟೆ ಮಾಡುವುದಿಲ್ಲ ಅಂತ ನನಗೆ ಗೊತ್ತು) 'ಭಟ್ರೆ ಒಂದು ನೀವು ಸುಳ್ಳು ಇಲ್ಲ ವೇದ ಮಂತ್ರ ಸುಳ್ಳು". ಹೀಗೆ ಉದ್ಧಟತನದ ವಾಕ್ಯಕ್ಕೆ ಪುರೋಹಿತರು ಸ್ವಲ್ಪ ಕಂಗಾಲಾದರು. ಯಾಕೆ? ಎಂದರು. ನೋಡಿ ವೇದ ಮಂತ್ರ ಮಾತೃದೇವೋ ಭವ ಎನ್ನುತ್ತದೆ ನೀವು ಪುರೋಹಿತರುಗಳು ಮನೆಯಲ್ಲಿ ಅಮ್ಮನಿಗೆ ನಿಕ್ಕಾಲಾಣೆ ಗೌರವ ಕೊಡುವುದಿಲ್ಲ. ಹೆಂಡತಿಯ ಮಾತು ಕಟ್ಟಿಕೊಂಡು ಕುಣಿಯುತ್ತೀರಿ. ಹಾಗಂತ ವರ್ಷಾಂತದ ಮನೆಯಲ್ಲಿ ಶ್ರವಣರಾಗಿ ನಿಮ್ಮನ್ನು ಕರೆದಾಗ ಅಲ್ಲಿ ಭಾಷಣ ಮಾಡುತ್ತಾ ತಾಯಿಯನ್ನು ದೇವರಂತೆ ಕಾಣಬೇಕು ಎನ್ನುತ್ತೀರಿ. ಈಗ ಹೇಳಿ ಯಾವುದು ಸತ್ಯ. ನನ್ನ ಒಡ್ಡತನದ ಪ್ರಶ್ನೆಗೆ ಪುರೋಹಿತರಿಗೆ ಸಿಕ್ಕಾಪಟ್ಟೆ ಸಿಟ್ಟು ಬಂತು. ಆದರೆ ತೋರ್ಪಡಿಸುವಂತಿಲ್ಲ. ಅವರೂ ಸ್ವತ: ಮನೆಯಲ್ಲಿ ಹಾಗೆಯೇ. ಅಂತೂ ಇಂತೂ ಅಳೆದು ಹೊಯ್ದು "ಇದಕ್ಕೆ ಇವತ್ತು ಬೇಡ ಇನ್ನೊಂದು ದಿನ ಉತ್ತರ ಕೊಡುತ್ತೇನೆ " ಎಂದರು. ನಾನು ಮರೆತೆ ಆದರೆ ಪಾಪ ಅವರು ಮರೆಯಲಿಲ್ಲ. ಮತ್ತೊಂದು ದಿನ ಒಬ್ಬರೇ ಸಿಕ್ಕಾಗ "ಅಪ್ಪಿ ವೇದ ಸುಳ್ಳಲ್ಲ ನಾವೇ ಸುಳ್ಳು. ಇತ್ತ ದರೆ ಅತ್ತ ಪುಲಿ ಹಾಗಾಗಿ ಆಚಾರ ಹೇಳಾಕೆ ಬಾನಾ ಉಣ್ಣಾಕೆ ಅಂತಾಗಿದೆ ನಮ್ಮ ಸ್ಥಿತಿ. ಪುಸ್ತಕದ ನೀತಿಯೇ ಬೇರೆ ವಾಸ್ತವ ವೇ ಬೇರೆ" ಎಂದು ಜಾರಿಕೊಂಡರು. ಇಂತಹ ಯಡವಟ್ಟು ಮಾರ್ಗವನ್ನು ಆಯ್ಕೆ ಮಾಡಿಕೊಂಡ ನಾನು ಗೊಂದಲದ ಗೂಡಾಗಿ ಹೋಗುತ್ತಾ ಇದ್ದೇನೆ ಅಂತ ಅನ್ನಿಸತೊಡಗಿತು. ಆವಾಗ ಆನಂದರಾಮ ಶಾಸ್ತ್ರಿಗಳು ಸಹಾಯಕ್ಕೆ ಬಂದರು. ಅವರು ನೂರಕ್ಕೆ ನೂರು ಯೋಗ್ಯತೆಯುಳ್ಳ ಜನ. ನಿತ್ಯ ಒಂದು ಗಂಟೆ ಅವರ ಸಹವಾಸ ಮಿಕ್ಕ ಸಮಯದಲ್ಲಿ ನಾನು ನಾನೇ....
ಆದರೆ ಅಪ್ಪಯ್ಯ ಹಾಗಲ್ಲ
ವಯಸ್ಸು ಎಂಬತ್ತು ನಿತ್ಯ ಮೂರು ತಾಸು ಪೂಜೆ ಯಾವ ಹಬ್ಬ ಹರಿದಿನ ಹೇಗೆ ಆಗಬೇಕೋ ಹಾಗೆಯೇ. ಒಂದಿಷ್ಟು ನಂಬಿಕೆಗಳು ಗಟ್ಟಿ. ಇಂದಿಗೋ ಜೀವನೋತ್ಸಾಹದ ಬುಗ್ಗೆ. ನಮ್ಮ ಪೆಜತ್ತಾಯರು ಬರೆದ ಕಾಗದದ ದೋಣಿ ಎಂಬ ಜೀವನಾನುಭವದ ಪುಸ್ತಕವನ್ನು ಮೂರೇ ದಿವಸದಲ್ಲಿ ಓದಿ ಮುಗಿಸುವ ಉತ್ಸಾಹ. ಯಾರಿಗೂ ಹೆದರಿದ ಆಸಾಮಿಯೇ ಅಲ್ಲ. ಹುಡುಕಾಟದಲ್ಲಿ ಸತ್ಯ ಸಿಕ್ಕಿದೆಯೋ ಇಲ್ಲವೋ ಎಂಬ ಗೊಂದಲ ಇಲ್ಲ ಸತ್ಯ ಸಿಕ್ಕಿದೆ, ದೇವರು ಇದ್ದಾನೆ ಎಂಬ ಮತ್ತು ಇವೆಲ್ಲಾ ಅವನದೇ ಆಟ ಎಂಬ ಅಚಲವಾದ ನಂಬಿಕೆ. ನಾನು ನಾನೇ.... (ಮುಂದುವರೆಯುತ್ತದೆ)
ಕೊನೆಯದಾಗಿ: ಶಾಸ್ತ್ರಿಗಳೇ ನಮ್ಮ ಸಿಂಧುವಿಗೆ ಗೊಂದಲ ಪುರದಿಂದ ಹೊರಗೆ ಬರಲು ದಾರಿ ತೋರಿಸಬೇಕಂತೆ ಎಂದು ಕೇಳಿದೆ. ಇದು ಆಗಾದ ಪ್ರಕೃತಿ ಒಮ್ಮೊಮ್ಮೆ ನಾವು ಏನನ್ನಾದರೂ ಸಾಧಿಸಬೇಕು ಅಂತ ಅನ್ನಿಸುತ್ತದೆ ಮತ್ತೊಮ್ಮೆ ಇಲ್ಲ ನನ್ನಿಂದ ಏನೂ ಆಗದು ಅಂತ ಅನ್ನಿಸುತ್ತದೆ. ಆದರೆ ಈ ಭೂಮಿಯ ಎಲ್ಲಾ ಜೀವಿಗಳಲ್ಲಿಯೂ ಮಾನವ ನಿರ್ಮಿತ ಜಗತ್ ಎಂಬ ವಾಕ್ಯಕ್ಕೆ ಮಹತ್ವ ಹೆಚ್ಚು. ಆದರೂ ಪ್ರಕೃತಿಯ ಕೂಸಾದ ಮಾನವ ಮರ ನೆಟ್ಟರೂ ಮರ ಕಡಿದರೂ, ಪ್ಲಾಸ್ಟಿಕ್ ಎಸೆದರೂ, ಎಸೆಯದಿದ್ದರೂ, ವಿದ್ಯುತ್ ಬಳಸಿದರೂ ಬಳಸದಿದ್ದರೂ, ಗಣಪತಿಯ ನಂಬಿದರೂ ನಂಬದಿದ್ದರೂ..ಆ ಆಗಾಧ ಶಕ್ತಿಯ ಪ್ರಕೃತಿಯ ಅಣತಿಯಂತೆಯೇ ಮಾಡಿರುವುದು ಹಾಗೂ ಮಾಡುವುದು ಅನಿವಾರ್ಯ. ಎಂದರು. ತೀರಾ ಅರ್ಥವಾಗದ ಉತ್ತರ ಅಂತ ನನಗನ್ನಿಸಿತು. ಒಮ್ಮೊಮ್ಮೆ ಹಾಗೆಯೇ ಅವರು ಎಂದು ಸುಮ್ಮನುಳಿದೆ.
ಕೆಳಗಿನ ಟಿಪ್ಸ್ ಓದಲು ಆಗದು ಎಂದರೆ ಅಷ್ಟೇ ಸಾಲನ್ನು ಸೆಲೆಕ್ಟ್ ಮಾಡಿ ಆವಾಗ ನೋಡಿ.
ಟಿಪ್ಸ್: ವಿಶಾಲ್ ಎಕ್ಸ್ ಪೋರ್ಟ್ ಎಂಬ ಪೆನ್ನಿ ಸ್ಟಾಕ್ ದರ ಕೇವಲ ಎರಡು ರೂಪಾಯಿಗಿಂತ ಕಡಿಮೆಯಂತೆ. ಇರಲಿ ಸಾವಿರ ರೂಪಾಯಿ ಹಾಕಿ ಒಂದೈನೂರು ಶೇರ್ ಕೊಳ್ಳಿ. ವರ್ಷ ಕಾಯಿರಿ ಹತ್ತು ರೂಪಾಯಿಗೆ ಹೋಯಿತಾ ನಿಮಗೆ ಬಂಪರ್ ಲಾಟರಿ ಕಂಪನಿ ಮುಳುಗಿತಾ ನೀವ್ ಲಾಟರಿಯಂತೂ ಅಲ್ಲ.

Wednesday, September 3, 2008

ಜೈ ಗಣೇಶ


"ಸರಿಯಪ್ಪಾ ಗಣೇಶ ನಂಬಿದವರ ಪಾಲಿನ ಕಲ್ಪತರು ನೀನೆ ಅನ್ನೋದು ಎಲ್ಲರಿಗೂ ಗೊತ್ತು ಆದರೆ ನಂಬದವರಪಾಲಿಗೂ ಕಲ್ಪತರು ನೀನು ಅಂತ ಬಹಳ ಜನಕ್ಕೆ ಗೊತ್ತಿಲ್ಲ. ಹುಲುಮನುಜರು ನಿನ್ನನ್ನು ನಂಬಲಿ ಬಿಡಲಿ ಇದೊಂದು ಸಣ್ಣ ಸಾಲಿನಿಂದ ನಿನ್ನನ್ನು ಸಣ್ಣವನನ್ನಾಗಿಸಿಬಿಟ್ಟಿದ್ದಾರೆ. ಇರಲಿ ಹೀಗಂತ ಮನುಷ್ಯರೇ ಹಾಡನ್ನು ಹಾಡಿದ್ದಾರೆ ಹೊರತು ನೀನಲ್ಲವಲ್ಲ ಅಂತ ನನಗೆ ಸಮಾಧಾನ. ಈ ಮನುಷ್ಯರು ತಾವೇ ಸೃಷ್ಟಿಸಿದ ದೇವರನ್ನು ತಮ್ಮ ಲೆವಲ್ಲಿಗೆ ಇಳಿಸಿಬಿಡುತ್ತಾರೆ. ನಂಬಿದವರು ನಂಬದವರು ಎಂದು ವಿಭಾಗ ಮಾಡಲು ಗಣೇಶನೇನು ರಾಜಕಾರಣಿಯಂತೆ ಓಟು ಹಾಕಿದವರು ಓಟು ಹಾಕದವರು ಎಂದು ವಿಭಾಗಿಸುವ ಮಟ್ಟಕ್ಕೆ ಇಳಿದು ಹೋದನಾ?. ಬಿಡಿ ಸೋಮಿ ಸ್ವಲ್ಪ ಕತ್ತೆತ್ತಿ ... ಇನ್ನೇನು ಮುಗಿದೇ ಹೋತು"
ಇದೇನು ಸ್ವಲ್ಪ ವಿಚಿತ್ರ ವಾಕ್ಯಗಳಿದೆಯಲ್ಲ ಅಂತ ಯೋಚಿಸುತ್ತಿದ್ದೀರಾ ಇದು ನಮ್ಮ ವಿಠಲನ ಡೈಲಾಗ್. ವಿಠಲ ಯಾರು ಎಂದಿರಾ?. ಅವನೊಬ್ಬ ನಾಪಿತ. ನಮ್ಮೂರ ಬಳಿಯ ಆಡುಕಟ್ಟೆಯಲ್ಲಿ ಸಂಚಾರಿ ಸಲೂನ್. ಮನೆಮನೆಗೂ ತೆರಳಿ ಅಂಗಳದಲ್ಲಿ ತುದಿಕಾಲದಲ್ಲಿ ಕುಳಿತು ತಲೆಯನ್ನು ತನ್ನೆರಡು ತೊಡೆಯ ಸಂದಿಯಲ್ಲಿ ಹಾಕಿಟ್ಟುಕೊಂಡು ಸರಿ ಸುಮಾರು ಎರಡು ತಾಸು ಇಂತಹ ವಿಚಾರಗಳನ್ನು ಅರುಹುವ ಅತಿ ಬುದ್ದಿವಂತ. ಕಳೆದ ವರ್ಷ ಆತ ಇಹಲೋಕ ತ್ಯಜಿಸಿದ. ಆದರೆ ಆತ ನನಗೆ ಚೌತಿ ಹಬ್ಬ ಬಂದಾಗಲೆಲ್ಲ ಗಣೇಶನಿಗಿಂತ ಮೊದಲು ನೆನಪಿಗೆ ಬರುತ್ತಾನೆ. ಪ್ರಾಮಾಣಿಕತೆಗೆ ಮತ್ತೊಂದು ಉದಾಹರಣೆಯಂತೆ ಬಾಳಿದ ವಿಠಲ ಚಿಂತಕರ ಪಾಲಿಗೆ ಒಳ್ಳೆಯ ವ್ಯಕ್ತಿ. ಆತನ ಪ್ರಶ್ನೆಗಳು ಆತನ ತರ್ಕದ ರೀತಿ ಬಹಳ ಮೇಲ್ಮಟ್ಟದ್ದಾಗಿತ್ತು.
ಒಮ್ಮೆ ಆತ ನಮ್ಮೂರ ಪುರೋಹಿತರ ಬೋಡನ್ನು ಹೊಡೆಯುತ್ತಿದ್ದಾಗ ಓಂದು ಪ್ರಶ್ನೆ ಎಸೆದ. ಪಾಪ ಆ ಜಪ ಈ ಜಪ ಆ ಪೂಜೆ ಈ ಪೂಜೆ ಎಂದು ರೊಕ್ಕವನ್ನಷ್ಟೆ ಮಾಡುತ್ತಿದ್ದ ಹಾಗೂ ಮಂಡೆಯಿರುವುದು ಬೋಳಿಸಿಕೊಳ್ಳಲಷ್ಟೇ ಹಾಗೂ ವೃತ್ತಿ ಇರುವುದು ಹಣಮಾಡಲಷ್ಟೇ ಎಂಬಂತಿದ್ದ ಪುರೋಹಿತರಿಗೆ ಈ ವಿಠಲ ಜಿಜ್ಞಾಸೆ ತಲೆಹರಟೆಯಾಗಿ ಕಂಡು ಕೆಂಡಾಮಂಡಲವಾಗಿದ್ದರು. ಆತ ಕೇಳಿದ್ದು ಎಂದರೆ " ಅಲ್ಲಾ ಸೋಮಿ ಈ ಗಣಪತಿ ಮುಖದ ವಿಚಾರದಲ್ಲಿ ನಂಗೊಂದು ಡೌಟು, ಗೌರಿ ಸ್ನಾನ ಮಾಡಿದ್ದು ಅದರಿಂದ ಮಣ್ಣು ಉದುರಿದ್ದು ನಂತರ ಗಣಪತಿ ಮಾಡಿದ್ದು ತುಸು ಹೆಚ್ಚು ಅಂತ ಅನ್ನಿಸಿದರೂ ನಂಬಬಹುದು. ಆದರೆ ಮುಖದ ವಿಷಯದಲ್ಲಿ ಮಾತ್ರಾ ಯಡವಟ್ಟಾಗಿದೆ. ಶಿವ ಗಣೇಶನ ರುಂಡ ಕತ್ತರಿಸಿದ ಅದಕ್ಕೆ ಅಲ್ಲೆಲ್ಲೋ ಉತ್ತರ ದಿಕ್ಕಿಗೆ ತಲೆ ಹಾಕಿ ಮಲಗಿದ್ದ ಆನೆಯ ತಲೆ ತಂದು ಜೋಡಿಸಿದರು ಅನ್ನೋ ಕತೆ. ಅಷ್ಟೆಲ್ಲಾ ತ್ರಾಸು ತೆಗೆದುಕೊಂಡು ಆನೆ ರುಂಡ ಜೋಡಿಸುವುದರ ಬದಲು ಅಲ್ಲೆ ಬಿದ್ದಿದ್ದ ಗಣೇಶನದೇ ರುಂಡವನ್ನು ಮುಂಡಕ್ಕೆ ಜೋಡಿಸಬಹುದಿತ್ತು. ಇರಲಿ ಬೇಡ ಬಿಡಿ ನೆಲಕ್ಕೆ ಬಿದ್ದ ಹೊಡೆತಕ್ಕೆ ರುಂಡಕ್ಕೆ ಮಣ್ಣು ಮಸಿ ಮೆತ್ತಿಕೊಂಡಿರಬಹುದು ಆದರೆ ನಾಲ್ಕು ಕಾಲಿನ ಪ್ರಾಣಿ ಆನೆಯ ತಲೆಯನ್ನು ತಂದು ಎರಡು ಕಾಲಿನ ಗಣೇಶನಿಗೆ ಜೋಡಿಸಿದಾಗ ಈಗ ಗಣೇಶ ಇದ್ದಾನಲ್ಲ ಹಾಗೆ ಮುಖ ಇರಲು ಸಾದ್ಯವೇ ಇಲ್ಲ. ಮುಖ ಆಕಾಶದತ್ತ ನೋಡುತ್ತಾ ಇರಬೇಕಿತ್ತು. ಅದು ಹೇಗೆ ನಾಲ್ಕು ಕಾಲಿನ ಪ್ರಾಣಿಯ ತಲೆ ಎರಡು ಕಾಲಿನ ಗಣೇಶನಿಗೆ ಇಟ್ಟರು.? ಒಮ್ಮೆ ಆಲೋಚಿಸಿ ಉತ್ತರ ಹೇಳ್ತೀರಾ " ಅಂದ. ಪಾಪ ಪುರೋಹಿತರಿಗೆ ಇಲ್ಲಿಯವರೆಗೆ ಮ್ರುತ್ಯುಂಜಯ ಜಪಕ್ಕೆ ಎಷ್ಟು , ರುದ್ರ ಹವನಕ್ಕೆ ಎಷ್ಟು ಖರ್ಚಾಗುತ್ತದೆ ಮುಂತಾದ ಪ್ರಶ್ನೆ ಕೇಳುತ್ತಿದ್ದರು. ಅವರು ಅದಕ್ಕೆ ತಕ್ಕುದಾದ ಉತ್ತರ ನೀಡುತ್ತಿದ್ದರು. ಈತ ಅದೂ ಯಕಶ್ಚಿತ್ ನಾಪಿತ ದರ್ಮಸೂಕ್ಷ್ಮ ವಿಚಾರ ಕೇಳಿದ್ದಾನೆ, ಉತ್ತರ ಗೊತ್ತಿಲ್ಲ ಎಂದರೆ ಮರ್ಯಾದೆ ಹರಾಜು. ಗೊತ್ತಿದೆ ಎಂದರೆ ಏನಂತ ಹೇಳುವುದು. ಗಣಪತಿ ಮುಖ ನೇರವಾಗಿ ನಮ್ಮನ್ನೆ ನೋಡುತ್ತಿದೆ. ಆನೆಯ ಮುಖ ಜೋಡಿಸಿದ್ದಾದರೆ ಆಕಾಶ ನೋಡಬೇಕಿತ್ತು, ಏನಪ್ಪಾ ಹೇಳುವುದು. ಎನ್ನುತ್ತಾ ಶಾಸ್ತ್ರಕಾರರನ್ನು ಬೈಯ್ದುಕೊಂಡರು. ಆದರೂ ಕೊನೆಗೆ ಅದೆಲ್ಲಾ ನಂಬಿಕೆ ಕಣಯ್ಯಾ ಎಂದು ಹಾರಿಕೆ ಉತ್ತರ ನೀಡಿದರು. ಆದರೆ ಬಡಪೆಟ್ಟಿಗೆ ವಿಠಲ ಬಿಡಲೊಲ್ಲ. "ಅಯ್ಯಾ ಅದೇಗೆ ನಂಬಿಕೆ ಆಗುತ್ತದೆ, ಗಣಪತಿ ವರ ಕೊಡುತ್ತಾನೆ ಎಂದರೆ ಅದು ನಂಬಿಕೆಯಾಯಿತು. ಇದು ಹಾಗಲ್ಲ, ತಪ್ಪಾಗಿದೆ". ಎಂದ. ಪುರೋಹಿತರಿಗೆ ಸಿಟ್ಟೊಂದು ಬಿಟ್ಟರೆ ಮತ್ತೇನು ಹೊಳೆಯಲಿಲ್ಲ. ನಂತರ ವಿಠಲನೇ ಮುಂದುವರೆಸಿ: ಸೋಮಿ ಆನೆ ತಲೆ ತಂದು ಗಣೇಶನಿಗೆ ಜೋಡಿಸಿದಾಗ ಮುಖ ಆಕಾಶ ನೋಡುತ್ತಿತ್ತು, ಆನಂತರ ರಾವಣನ ಆತ್ಮಲಿಂಗದ ಗಲಾಟೆಯಾಯಿತಲ್ಲ ಆವಾಗ ರಾವಣ ಸಿಟಗೊಂಡು ಗಣಪತಿಯ ತಲೆಮೇಲೆ ಗುದ್ದಿದನಲ್ಲ ಆವಾಗ ಆಕಾಶ ನೊಡುತ್ತಿದ್ದ ಮುಖ ನಮ್ಮತ್ತ ನೋಡುವಂತಾಯಿತು, ಎಂದು ಕತೆ ಸೇರಿಸಿ " ಎಂದ. ಪುರೋಹಿತರಿಗೆ ಸುಸ್ತಾಗಿತ್ತು. ಹ್ಞೂ ಎಂದರು,
ಹೀಗೆ ಅದ್ಬುತ ಪ್ರಶ್ನಾವಳಿಯ ಸಂಗ್ರಹ ಹೊಂದಿದ್ದ ವಿಠಲ ಇಂದು ಇಲ್ಲ. ಆದರೆ ಅವನ ಇಂತಹ ಹಲವಾರು ಕತೆಗಳು ಉಳಿದಿವೆ. ಇರಲಿ ಇಂದು ಗಣೇಶನ ಹಬ್ಬ ವಿಠಲ ಅಲ್ಲಿ ಸ್ವರ್ಗದಲ್ಲಿ ಇದ್ದಾನೆ ಅಲ್ಲಿದ್ದ ಗಣೇಶ ಪೂಜೆ ಮಾಡಿಸಿಕೊಂಡು ಹೋಗಲು ಇಲ್ಲಿಗೆ ಬಂದಿದ್ದಾನೆ ಗಣೇಶನ ಮುಖಾಂತರ ವಿಠಲನಿಗೆ ನಮ್ಮದೊಂದು ಜೈ ಕಾರ ಕಳುಹಿಸೋಣ.
ನಿಮಗೂ ಹ್ಯಾಪಿ ಗಣೇಶ.
ಕೊನೆಯದಾಗಿ: ಚೌತಿ ದಿವಸ ಚಿತ್ರ ವಿಚಿತ್ರ ನಾಲಿಗೆ ಹೊರಳದಂತಹ ಹೆಸರಿರುವ ಸಹಸ್ರನಾಮ ಓದುವುದು ಕಷ್ಟ . ಹಾಗಾಗಿ ಸಾವಿರ ಬೇರೆ ಬೇರೆ ಹೆಸರಿನಿಂದ ಗಣೇಶನನ್ನು ಭಜಿಸಿ ಸಹಸ್ರ ನಾಮ ಓದುವುದರ ಬದಲು ಸಾವಿರ ಬಾರಿ ಗಣೇಶ ಗಣೇಶ ಅಂತ ಹೇಳಿದರೆ ಪುಣ್ಯ ಬರುವುದಿಲ್ಲವೇ. ಎಂದು ಆನಂದರಾಮ ಶಾಶ್ತ್ರಿಗಳನ್ನು ಕೇಳಿದೆ. ಅದಕ್ಕವರು ಅಯ್ಯಾ ದೊರೆ ನೀನೆ ಸ್ವಲ್ಪ ಮೇಲು ಮೊನ್ನೆ ಮತ್ತೊಬ್ಬ ಭಕ್ತ ಸ್ವಾಮಿ ಗಣೇಶ ಹೋಲ್ ಸ್ಕ್ವೇರ್ ಅಂತ ಹತ್ತು ಸಾರಿ ಹೇಳಿದರೆ ಸಹಸ್ರ ನಾಮ ಆದಂತಲ್ಲವೇ ಅಂದಿದ್ದ. ಎಂದರು ,

Tuesday, August 26, 2008

ಹಸಿವು ಹಸಿವೆಂದು ..........


ಒಂದೂರಿನಲ್ಲಿ ಒಬ್ಬ ರಾಜ. ಅವನಿಗೆ ಒಬ್ಬ ಮುದ್ದು ಕುವರ. ಏಕಮಾತ್ರ ಮಗನಾದ್ದರಿಂದ ಮುದ್ದಿನಿಂದ ಬೆಳಸಿದ್ದರು. ಒಂದು ದಿನ ಬೆಳಿಗ್ಗೆ ರಾಜಕುಮಾರ ಹೊಟ್ಟೆಯನ್ನು ಹಿಡಿದುಕೊಂಡು ಬೊಬ್ಬಿಡತೊಡಗಿದ. "ಅಯ್ಯೋ ಹೊಟ್ಟೆಯಲ್ಲಿ ಏನೋ ಆಗುತ್ತಿದೆ" ಎಂದು ಕೂಗ ತೊಡಗಿದ. ಎಷ್ಟೆಂದರೂ ರಾಜಕುಮಾರ ತಾನೆ. ತತ್ ಕ್ಷಣ ರಾಜವೈದ್ಯರಿಗೆ ಬುಲಾವ್ ಹೋಯಿತು. ಗಡಿಬಿಡಿಯ ಮುಖಾರವಿಂದದೊಡನೆ ವೈದ್ಯರ ಪಡೆ ಆಗಮಿಸಿ ನಖಶಿಕಾಂತ ಪರೀಕ್ಷೆ ನಡೆಸತೊಡಗಿತು. ಎಷ್ಟೇ ತಲೆಕೆಡಿಸಿಕೊಂಡರೂ ರೋಗದ ಲಕ್ಷಣ ಕಾಣಿಸಲಿಲ್ಲ. ಆದರೆ ರಾಜಕುವರನ ಏನೋ ಆಗುತ್ತಿದೆ ಎನ್ನುವ ವರಾತ ನಿಲ್ಲಲಿಲ್ಲ. ರಾಜನೆಂದ ಮೇಲೆ ಕೇಳಬೇಕೆ ನಾನಾತರಹದ ಪರೀಕ್ಷೆ ಜ್ಯೋತಿಷ್ಯ ಗಳೆಲ್ಲಾ ಕ್ಷಣಮಾತ್ರದಲ್ಲಿ ಆರಂಭಿಸಿದರೂ ಪ್ರತಿಫಲ ಮಾತ್ರಾ ಶೂನ್ಯ. ರಾಣಿಯರು ಸಖಿಯರು ಪರಿವಾರದವರು ಹೀಗೆ ಎಲ್ಲರೂ ದುಗುಡದ ಮುಖ ಹೊತ್ತು ಅಸಾಹಾಯಕರಾಗಿ ಆಚೆ ಈಚೆ ತಿರುಗಾಡತೊಡಗಿದರು. ಊಹ್ಞೂ ಪರಿಹಾರ ಮಾತ್ರಾ ಶೂನ್ಯ. ತಕ್ಷಣ ರಾಜ ತನ್ನ ಮಗನ ಖಾಯಿಲೆಯನ್ನು ಗುಣಪಡಿಸಿದವರಿಗೆ ನಗನಾಣ್ಯ ನೀಡುವುದಾಗಿ ಘೋಷಿಸಿದ. ಈ ಗಡಿಬಿಡಿಯ ನಡುವೆ ಒಬ್ಬೇವಕನಿಗೆ ತಾನು ರಾಜಕುಮಾರನಿಗೆ ಬೆಳೆಗಿನ ಉಪಹಾರ ತರುವುದನ್ನು ಮರೆತಿದ್ದು ನೆನಪಾಯಿತು. ತಕ್ಷಣ ಆತ ರಾಜನ ಬಳಿ ತಾನು ಗುಣಪಡಿಸುವುದಾಗಿ ಹೇಳಿ ರಾಜಕುಮಾರನನ್ನು ಕೋಣೆಯಲ್ಲಿ ಕೂರಿಸಿಕೊಂಡು ಉಪಹಾರ ನೀಡಿದ. ಕುವರನ ಕಿರುಚಾಟ ಕಡಿಮೆಯಾಯಿತು. ರಾಜ ರಾಣಿಯರು ಸಮಾಧಾನಗೊಂಡರು. ಮತ್ತು ಸೇವಕನಿಗೆ ಕೈತುಂಬಾ ನಾಣ್ಯಗಳು ದೊರೆತವು. ಮುಂದಿನ ದಿನಗಳಲ್ಲಿ ಎಲ್ಲರೂ ಸುಖವಾಗಿ ಇದ್ದರು. ಎಂದು ಒಂದು ಕತೆ ಹೇಳುತ್ತದೆ. ಇರಲಿ ಕತೆ ಹೇಳಲಿ ಬಿಡಲಿ ಹಸಿವಿನ ಮಹತ್ವ ಹಾಗಿದೆ. ಅದು ಅನುಭವಿಸಿವರಿಗೆ ಗೊತ್ತು. ಹುಟ್ಟಿದಂದಿನಿಂದ ರಾಜಕುಮಾರ ಒಂದು ತಾಸುಕೂಡ ಖಾಲಿಹೊಟ್ಟೆ ಬಿಟ್ಟಿರಲಿಲ್ಲ ಹಾಗಾಗಿ ಅವನಿಗೆ ಹಸಿವೆಯ ಅನುಭವ ಆಗಿರಲಿಲ್ಲ. ಆ ಕಾರಣದಿಂದ ಆತ ಏನೋ ಆಗುತ್ತಿದೆ ಎಂದು ಬೊಬ್ಬಿಡುತ್ತಿದ್ದ. ಆನಂತರ ಅವನಿಗೆ ಗೊತ್ತಾಯಿತು ಹಸಿವೆ ಎನ್ನುವುದೊಂದು ಇದೆ ಎಂಬುದು.
ಹೀಗೆ ಬಹಳ ಜನರ ಬಾಳಿನಲ್ಲಿ ಹಸಿವೆ ಎಂಬುದೊಂದು ಇದೆ ಅನ್ನುವ ವಿಚಾರವೇ ಗೊತ್ತಿಲ್ಲದಂತೆ ಬೆಳೆದುಬಿಡುತ್ತಾರೆ. ಕಾಲಕಾಲಕ್ಕೆ ಸರಿಯಾಗಿ ಪೂರೈಕೆಯಾದರೆ ಅದರ ಮಹ್ಅತ್ವ ಅರಿವಾಗುವುದಿಲ್ಲ. ನಾನು ಒಂದು ದಿನ ಹಸಿವೆಯನ್ನು ಅನುಭವಿಸಬೇಕೆಂದು ತೀರ್ಮಾನಿಸಿದೆ. ಬೆಳಿಗ್ಗೆ ತಿಂಡಿ ಸಮಯದಲ್ಲಿ ಸ್ವಲ್ಪ ಹೊಟ್ಟೆ ಚುರುಗುಟ್ಟಿತು. ನೀರು ಕುಡಿದೆ. ಮಧ್ಯಾಹ್ನ ಕೈಕಾಲೆಲ್ಲ ತರತರ , ಅಮ್ಮಾ ಹೊಟ್ಟೆಗೆ ರುಚಿಕಟ್ಟಾದ್ದೆ ಆಗಬೇಕೆಂದಿಲ್ಲ ಎನಾದರೂ ಆದೀತು ಕಳುಹಿಸು ಎಂದು ಒಳಗಿನಿಂದ ಕೂಗತೊಡಗಿತು. ನಾನು ಇಲ್ಲ ಆಗದು ಎಂದೆ. ಊಟದ ಸಮಯ ಹತ್ತಿರಬಂದಂತೆಲ್ಲಾ ಅದೇನೋ ಹಪಹಪಿಕೆ. ಆದರೆ ನಾನು ಗಟ್ಟಿ ನಿರ್ಧಾರ ಮಾಡಿದ್ದೆ. ಹಾಗಾಗಿ ಮಂಚದ ಮೇಲೆ ಸುಮ್ಮನೆ ಮಲಗಿದೆ. ಮನಸ್ಸು ಹಸಿವೆಯನ್ನು ಹೊರತಾಗಿ ಮತ್ತಿನ್ನೇನನ್ನೂ ಯೋಚಿಸದು. ಆದ್ಯಾತ್ಮ ದೇವರು ದಿಂಡಿರು ಸುಖ ದು:ಖ ಊಹ್ಞೂ ಯಾವುದೂ ಬೇಡ. ಹಾಗೆಯೇ ಸಣ್ಣದಾಗಿ ಜೊಂಪು ಹತ್ತಿತು. ಅರೆನಿದ್ರೆಯಲ್ಲಿಯೂ ಊಟದ್ದೇ ಕನಸು. ಪಟಕ್ಕನೆ ಎಚ್ಚರವಾಯಿತು. ಮತ್ತೆ ನಿದ್ರೆ ಬಂದಂತಾಯಿತು. ಈಗ ಮತ್ತೆ ಹಸಿವಿನ ಕನಸಿನ ಮುಂದುವರಿಕೆ. ಈಗ ಬರೆಯಲು ಮುಜುಗರವಾಗುತ್ತದೆ. ಅಂತಹ ಕನಸುಗಳೆಲ್ಲಾ ಬೀಳತೊಡಗಿದವು. ಚಪ್ಪಲಿಯನ್ನು ಕಚ ಕಚ ತಿಂದಂತೆ. ದಬರಿಗಟ್ಟಲೆ ಅನ್ನ ನಾನು ತಿನ್ನುತ್ತೇನೆ ಆದರೆ ಹಸಿವು ಮಾತ್ರಾ ಹಾಗೆಯೇ ಇದೆ. ಹೀಗೆ ನೂರಾರು ತರಹದ ಚಿತ್ರವಿಚಿತ್ರ ಕನಸುಗಳು. ಅಂತೂ ಸಾಯಂಕಾಲವಾಯಿತು. ನಾನೂ ಅದನ್ನೇ ಕಾಯುತ್ತಿದ್ದೆ. ಸೂರ್ಯ ಮುಳುಗಿದ ತಕ್ಷಣ ಗಬಗಬನೆ ಒಂದಷ್ಟು ತಿಂದೆ. ಕೇವಲ ೧೨ ತಾಸು ಖಾಲಿ ಹೊಟ್ಟೆ ಇತ್ತು. ಅಷ್ಟಕ್ಕೆ ಈಪಾಟಿ ಸಮಸ್ಯೆ. ಗಬಗಬನೆ ತಿಂದ ಮರುಕ್ಷಣ ಸುಸ್ತೋ ಸುಸ್ತೋ. ಅದ್ಯಾಕಾದರೂ ತಿಂದೆನೋ ಎನ್ನುವಂತಾಯಿತು ಪರಿಸ್ಥಿತಿ. ಇರಲಿ ಒಟ್ಟಿನಲ್ಲಿ ಹಸಿವೆಯೆಂಬ ಮಾಯಾವಿಯ ವಿರಾಟ ರೂಪ ದರ್ಶನವನ್ನೂ ಬೇಕಂತಲೆ ಆಹ್ವಾನಿಸಿ ಒಂಥರಾ ಸುಖರೂಪದ ಕಷ್ಟವನ್ನು ಅನುಭವಿದೆ. ಆದರೆ ಮಾರನೇ ದಿವಸ ಬೆಳಿಗ್ಗೆ ಮನಸ್ಸು ಉಲ್ಲಾಸದಾಯಕವಾಗಿತ್ತು. ಅದೇನೋ ಒಂಥರಾ ಖುಶ್ ಖುಷಿ ಹಾಗೂ ಯಡ್ಡಾದಿಡ್ಡಿ ಧೈರ್ಯ. ಮನಸ್ಸು ೧೨ ಗಂಟೆಗಳ ಕಾಲ ಒಂದೇ ವಿಷಯದ ಬಗ್ಗೆ ಯೋಚಿಸಿದ್ದರಿಂದ ಧ್ಯಾನದಂತಾಗಿರಬೇಕು. ಮುಸ್ಲಿಂ ಜನಾಂಗದ ರಾಂಜಾನ್ ಉಪವಾಸ ದ ಆಚರಣೆ ಹಾಗೂ ಅ ವರ ಯಾಡ್ಡಾದಿಡ್ಡಿ ಆತ್ಮಸ್ಥೈರ್ಯಕ್ಕೆ ನಿಜದ ಕಾರಣ ಅರಿವಾಯಿತು. ಹಾಗಾಗಿ ನಮ್ಮ ಹಿಂದಿನವರು ಹದಿನೈದು ದಿನಕ್ಕೊಂದು ಏಕಾದಶಿ ಉಪವಾಸ ಆಚರಣೆಯಲ್ಲಿಟ್ಟಿದ್ದರು. ಆದರೆ ವಿಪರ್ಯಾಸವೆಂದರೆ ಉಪವಾಸ ಎಂದರೆ ಮೂರ್ನಾಲ್ಕು ಗೋದಿ ರೊಟ್ಟಿ ತಿನ್ನುವುದು ಎಂದು ಬುದ್ದಿವಂತರು . .! ಬದಲಾವಣೆ ಮಾಡಿಕೊಂಡಿದ್ದಾರೆ. ಇ ರಲಿ ಇಲ್ಲಿಯತನಕ ನಾನೇನು ತೀರಾ ಹೊಸ ವಿಷಯ ಹೇಳಿಲ್ಲ. ಹಳೆಯದನ್ನು ನೆನಪಿಸಿದ್ದೇನೆ. ನಿಮಗೆ ಷುಗರ್ ಗ್ಯಾಸ್ ಟ್ರಬಲ್ ಹಾಗೂ ಬಿ ಪಿ ಇರದಿದ್ದಲ್ಲಿ ಒಂದು ದಿವಸ ಉಪವಾಸ ಇದ್ದು ಎಂಜಾಯ್ ಮಾಡಿ. ಮತ್ತೆ ತಿನ್ನುವುದು ಹೇಗೂ ಇ ದೆ.
ಕೊನೆಯದಾಗಿ: "ಹದಿನೈದು ದಿನಕ್ಕೊಮ್ಮೆ ಹೀಗೆ ಸಂಪೂರ್ಣ ನಿರಾಹಾರ ಒಳ್ಳೆಯದು ಅಲ್ಲವೇ?" ಎಂದು ಆನಂದರಾಮ ಶಾಸ್ತ್ರಿಗಳನ್ನು ಕೇಳಿದೆ. ಅದಕ್ಕವರು ನಿತ್ಯ ಸುಗ್ರಾಸ ಭೋಜನ ಸಿಗುವ ಜನಕ್ಕೆ ಉಪವಾಸವಿರುವ ಚಿಂತೆ, ನಿತ್ಯ ಉಪವಾಸದ ಜನಕ್ಕೆ ಸುಗ್ರಾಸ ಭೋಜನದ ಚಿಂತೆ. ಹೀಗಿದೆ ಪ್ರಪಂಚ ಅಂತ ನಕ್ಕರು. ಯಾರ ಕುರಿತು ಹೇಳಿದ್ದು ಅಂತ ನಿಮಗೂ ನನಗೂ ಅ ರ್ಥವಾಯಿತಲ್ಲವೇ..? ಸಾಕು ಬಿಡಿ.

Sunday, August 24, 2008

ವಿನಾ ದೈನ್ಯೇನ ಜೀವನಂ ..ಅನಾಯೇಸೇನ ಮರಣಂ


ಎಂಬ ಶ್ಲೋಕದಂತೆ ನನ್ನ ಜೀವನ ಆಗಲಿ ಭಗವಂತ ಅಂತ ಪ್ರಾರ್ಥಿಸಬಹುದಷ್ಟೆ. ಆದರೆ ಹಾಗೆಯೇ ಆಗಿಬಿಡುತ್ತದೆಯೆಂಬ ಗ್ಯಾರಂಟಿ ಇಲ್ಲ. ದೈನ್ಯದಿಂದ ಕೂಡಿದ ಜೀವನ ಅತ್ಯಂತ ಯಾತನಾಮಯ. ಅಸಾಹಾಯಕರಾದಾಗಿನ ಬದುಕು ಕಷ್ಟ. ನಮ್ಮ ರಮೇಶನ ಸ್ಥಿತಿಯೂ ಅದೇ ಆಗಿತ್ತು. ಅದೇನು ಅವನ ಪ್ರಾಮಾಣಿಕತೆಯ ಫಲವೋ ಅಥವಾ ಮತ್ತಿನ್ನೇನೋ ಗೊತ್ತಿಲ್ಲ ನಾನು ಬ್ಲಾಗ್ ನಲ್ಲಿ ಅವನ ಕಾಲು ಮತ್ತು ಅಪಘಾತದ ಕಾರಿನ ವಿಷಯಕ್ಕೆ ಸ್ಪಂದಿಸಿ ಬೆಂಗಳೂರಿನ(ಹೆಸರು ಹೇಳಲು ಇಚ್ಚಿಸದ ವ್ಯಕ್ತಿತಿಯೊಬ್ಬರು) ಎರಡು ಸಾವಿರ ರೂಪಾಯಿ ಕಳುಹಿಸಿದರು. ಅದನ್ನು ತಲುಪಿಸಲು ಅವರ ಮನೆಗೆ ಹೋಗಿದ್ದೆ. ಮಂಚದ ಮೇಲೆ ಮಲಗಿದ್ದ ರಮೇಶನಿಗೆ ಬ್ಲಾಗ್ ವಿಷಯ ತಿಳಿಸಿ ಹಣ ಸಹಾಯ ಮಾಡಿದವರ ವಿವರ ಹೇಳಿ ಹಣ ಕೊಟ್ಟೆ. ಆತನ ಕಣ್ಣಂಚಿನಲ್ಲಿ ಪಳಕ್ಕನೆ ಒಂದು ಹನಿ ಜಾರಿತು. ಅಪರಿಚಿತನಾದ ನನಗೆ ದೇವರು ಹೀಗೆ ಬಂದಿರಬೇಕು ಎಂದ .
ನಿನ್ನೆ ಮನೆಗೆ ಬಂದಾಗ ರಮೇಶನಿಗಾಗಿ ಮತ್ತೊಂದು ಮೈಲ್ ಬಂದಿತ್ತು. ನನಗೆ ಈ ಪ್ರಪಂಚದ ಬಗ್ಗೆ ಅಚ್ಚರಿಯಾಗುವುದು ಇಂತಹ ಸಂದರ್ಭದಲ್ಲಿಯೇ. ನೂರು ರೂಪಾಯಿ ದೇಣಿಗೆ ಕೊಟ್ಟು ಹೆಸರಿಗಾಗಿ ಒದ್ದಾಡುವ ಜನ ಒಂದೆಡೆ. ಏನೂ ದೇಣಿಗೆ ಕೊಡದೆ ಹೇಗಾದರೂ ಹೆಸರು ಮಾಡಬೇಕೆಂಬ ಜನ ಮತ್ತೊಂದೆಡೆ, ದೇಣಿಗೆಯ ಹಣವನ್ನು ಗುಳುಂ ಮಾಡಿ ಹೆಸರು ಹೆಚ್ಚಿಸಿಕೊಳ್ಳುವ ಜನ ಮಗದೊಂದೆಡೆ, ಹೀಗೆ ನಾನಾ ತರಹದ ಜನರ ಮಧ್ಯೆ " ನಾನು ಸಹಾಯಮಾಡುತ್ತೇನೆ But I have a request. Please not disclose my name to anybody. It has to be strictly between me and you." ಎಂಬ ಒಂದು ಸಾಲಿನ ಆರ್ಡರ್ ಮಾಡುವ ಜಾಗದಲ್ಲಿ ವಿನಂತಿ. ಇಂತಹ ಸಂದರ್ಭದಲ್ಲಿ ವಿನಾ ದೈನ್ಯೇನ ಜೀವನಂ ಅರ್ಥ ಕಳೆದುಕೊಳ್ಳುತ್ತದೆ. ಇಲ್ಲಿ ಸಹಾಯ ಪಡೆದುಕೊಳ್ಳುವವರಿಗಿಂತ ಸಹಾಯ ಮಾಡುವ ಜನರೇ ವಿನಯಪೂರ್ವಕವಾಗಿರುತ್ತಾರೆ. ಇರಲಿ ಈ ಪ್ರಪಂಚ ಹೇಗೇ ನೋಡಿದರೆ ಹಾಗೆ ಕಾಣುತ್ತದೆ. ಕುರುಡರು ಮುಟ್ಟಿದ ಆನೆಯ ಕತೆ.
ಈ ನಡುವೆ ರಮೇಶ ತ್ವರಿತಗತಿಯಲ್ಲಿ ಚೇತರಿಸಿಕೊಳ್ಳುತ್ತಿದ್ದಾನೆ. ಆಪರೇಷನ್ ಹೊಲಿಗೆ ಬಿಚ್ಚದಿದ್ದರೂ ಎದ್ದು ನಿಲ್ಲಬಲ್ಲ. ಅಲ್ಲಿಗೆ ರಮೇಶನ್ನಿಗೆ ನಿಮ್ಮ ಹಾರೈಕೆ ತಲುಪಿದೆ. ಹಾರೈಕೆ ಕೆಲಸ ಮಾಡುತ್ತದೆ ಎನ್ನುವ ನಂಬಿಕೆ ಅನ್ನದು.
ಒಂದು ಬ್ಲಾಗಿನ ನಾಲ್ಕಕ್ಷರ ಓದಿ ರಮೇಶನಿಗೆ ಸಹಾಯ ಮಾಡಿದವರಿಗೆ ಅನಂತ ಧನ್ಯವಾದಗಳು. ತಮ್ಮ ಅಮೂಲ್ಯ ಸಮಯದ ನಡುವೆ ಬ್ಲಾಗ್ ಓದಿ ರಮೇಶನಿಗೆ ಹಾರೈಸಿದವರಿಗೂ ವಂದನೆಗಳು.
ಕೊನೆಯದಾಗಿ: ಕಾಲ ಕೆಟ್ಟೋಗಿದೆ ಅಂತ ಅಂತಾರಲ್ಲ ಆದರೆ ಇವತ್ತೂ ಹೀಗೆ ಸಹಾಯ ಮಾಡುವವರು ಇದಾರಲ್ಲ ಅದು ಹೇಗೆ? ಅಂತ ಆನಂದರಾಮ ಶಾಸ್ತ್ರಿಗಳನ್ನು ಕೇಳಿದೆ. ಆ ಮಾತು ಮಾತಿಗಷ್ಟೆ, ಕಾಲ ಯಾವತ್ತೂ ಕೆಟ್ಟಿಲ್ಲ ಕೆಡುವುದೂ ಇಲ್ಲ, ಮನುಷ್ಯರು ಕೆಡಬಹುದು ಆದರೆ ಅಂದೂ ಕೆಟ್ಟವರು ಒಳ್ಳೆಯವರು ಇದ್ದರು ಇಂದೂ ಇದ್ದಾರೆ ಮುಂದೂ ಇರುತ್ತಾರೆ. ನಾವು ಮಾತ್ರ ಭೂತದ ಅನುಭವವನ್ನು ಬಳಸಿ ವರ್ತಮಾನದಲ್ಲಿ ಬದುಕಿ ಭವಿಷ್ಯಕ್ಕೆ ಕಾತರಿಸಬೇಕು. ಎಂದರು. ಒಂಥರಾ ಕಬ್ಬಿಣದ ಕಡಲೆಯಂತೆ ಅನ್ನಿಸಿತು.
ಸೇರ್ಪಡೆ : ವಿಧಿಯಾಟದ ನಂತರ ರಮೇಶನಿಗೆ ಅದೃಷ್ಟದ ಬೆಂಬಲ ದೊರೆಯುತ್ತಿದೆ. ಪೆಜತ್ತಾಯ, ಹೆಸರು ಹೇಳಲು ಇಚ್ಚಿಸದವರು ಈಗಾಗಲೆ ಅನುಕ್ರಮವಾಗಿ ತಲಾ ಎರಡು ಸಾವಿರ ಹಾಗೂ ಹತ್ತು ಸಾವಿರ ಕಳುಹಿಸಿದ್ದಾರೆ. ಕೃಪೇಶ ಕಳುಹಿಸುತ್ತಿದ್ದಾನೆ. ರಮೇಶ ಇವರಿಗೆ ಕೃತಜ್ಞತೆ ಸಲ್ಲಿಸಿದ್ದಾನೆ.

Wednesday, August 20, 2008

ಕರಿ ಎತ್ತಾ ಕಾಳಿಂಗಾ ಬಿಳಿ ಎತ್ತ ಮಾಲಿಂಗ..ಹುಯ್




ರೆಡಿಯೋದಲ್ಲಿ ಕೃಷಿರಂಗ ಕಾರ್ಯಕ್ರಮ ಬರುವ ಮುನ್ನ ಹೀಗೊಂದು ಹಾಡು ಪ್ರಸಾರವಾಗುತ್ತಿತ್ತು ಮತ್ತು ಆಗುತ್ತಿದೆ. ಹಿಂದೆ ಈ ಹಾಡನ್ನು ಗುಣಗುಣಿಸದ ಕೃಷಿಕರಿಲ್ಲ. ಈಗ ಜಿಂಕೆ ಮರಿನಾ..-ಏನೊ ಒಂಥರಾ... ಮುಂತಾದ ಹಾಡು ಗುಣುಗುಣಿಸಿದಂತೆ ಅಂದು ಕರಿಯೆತ್ತಾ.. ಗುಣುಗುಣಿಸುತ್ತಿದ್ದರು. ಆನಂತರ ಬೆಂಕಿರೋಗಕ್ಕೆ ರೋಡೋಮಿಲ್ ಹೊಡೆಯಿರಿ, ಊಜಿ ನೊಣಕ್ಕೆ ಎಂಡೊಮಿಲ್ ಹೊಡೆಯಿರಿ, ಡಿಎಪಿ ಹಾಕಿ ಯೂರಿಯಾ ಚೆಲ್ಲಿ ಮುಂತಾಗಿ ಮುಂದುವರೆಯುತ್ತಿತ್ತು. ಅವೆಲ್ಲಾ ಇರಲಿ ಈ ಕರಿ ಹಾಗೂ ಬಿಳಿ ಎತ್ತಿನ ಕತೆಗೆ ಬರೋಣ. ನಾವು ನೀವು ದಿನನಿತ್ಯ ಊಟ ಮಾಡುವ ಬಿಳಿ ಅಕ್ಕಿಯ ಹಿಂದಿನ ಕರಿ ಕತೆ ಇಂದಿಗೂ ಬೇಸರದ ಸಂಗತಿಯೆ. ಅದೂ ಮಲೆನಾಡಿನಲ್ಲಿ ಭತ್ತ ಬೆಳೆಯುವ ಕೆಲಸವೆಂದರೆ ಅದರ ಪಾಡು ಯಾರಿಗೂ ಬೇಡ. ಮೊಣಕಾಲಿನ ಆಳ ಹುಗಿಯುವ ಕೆಸರಿನಲ್ಲಿ ಬೆನ್ನೆಲುಬು ಕಾಣುವ ಹೋರಿಗಳನ್ನು ನೇಗಿಲೆಗೆ ಕಟ್ಟಿಕೊಂಡು ಹೂಟಿ ಮಾಡುವ ಕೆಲಸದ ಕಷ್ಟ ಮಾಡಿದವರಿಗೆ ಗೊತ್ತು. ನಾಲ್ಕು ತಿಂಗಳುಗಳ ಕಾಲ ಹಗಲೂ ರಾತ್ರಿ ಹಕ್ಕಿ ಪ್ರಾಣಿ ಮಳೆಯಿಂದ ರಕ್ಷಿಸಿಕೊಂಡು ಒಂದು ಬೆಳೆ ತೆಗೆದರೆ ಆರು ತಿಂಗಳ ಊಟಕ್ಕಾಗುತ್ತದೆ. ಕೃಷಿಕನಿಗೆ ಆರು ತಿಂಗಳ ಊಟಕ್ಕಾದರೆ ಎತ್ತುಗಳಿಗೆ ಆತ ಎಲ್ಲಿಂದ ತಂದಾನು?. ಅವುಕ್ಕೆ ಗುಡ್ಡದಲ್ಲಿನ ಚುಪುರು ಚುಪುರು ಹುಲ್ಲೇ ಗತಿ. ಅದೇನು ಮನುಷ್ಯನ ಜತೆಗಿನ ಬಾಂಧವ್ಯವೋ ಆದರೂ ಅವುಗಳು ಅವನ ಜತೆಗಾರನಾಗಿವೆ. ಆಕಳುಗಳಿಗಾದರೆ ಗೋವೆಂಬ ಹಿರಿಮೆಯಿದೆ. ಹಾಲು ಕೊಡುತ್ತವೆಯಾದ್ದರಿಂದ ಅವುಕ್ಕೆ ಹಿಂಡಿ ಸಿಗುತ್ತದೆ. ಆದರೆ ಅದ್ಯಾವ ಜನ್ಮದಲ್ಲಿ ಎಂತಹ ಪಾಪ ಮಾಡಿ ಇವು ಹೋರಿಗಳಾಗಿ ಹುಟ್ಟಿವೆಯೋ ಹೂಟಿ ಮಾಡೂವ ಒಂದು ತಿಂಗಳು ಹತ್ತಿಹಿಂಡಿ ಕಂಡರೆ ಅವುಗಳ ಪುಣ್ಯ. ಗೋಮಾತೆಗಾದರೆ ಗೋಪೂಜೆಯಂತೆ, ಗೋಗ್ರಾಸವಂತೆ ಹೀಗೆ ಅಂತೆಕಂತೆಗಳ ಸಂತೆಯಿದೆ. ಅನ್ನ ನೀಡಲು ಅರ್ಲು ತುಳಿಯುವ ಹೋರಿಗಳಿಗಾದರೆ ಪೂಜೆಯೂ ಇಲ್ಲ ಗೀಜೆಯೂ ಇಲ್ಲ. ಆದರೂ ಅವು ಅರೆಹೊಟ್ಟೆಯಲ್ಲಿ ದ್ದು ಮನುಷ್ಯನಿಗೆ ಹೊಟ್ಟೆ ತುಂಬಿಸಲು ಹೋರಾಟ ಮಾಡುತ್ತಲೇ ಇವೆ. ಅವುಗಳ ಜತೆಗೆ ಬೆನ್ನಿಗೆ ಅಂಟಿಕೊಂಡಿರುವ ಚಕ್ಕಳ ಮೂಳೆಯ ರೈತನೂ ಇದ್ದಾನಲ್ಲ ಎಂಬ ಸಮಾಧಾನ ಅವುಕ್ಕೆ ಇರಬೇಕು. ಅವೇನೆ ಇರಲಿ ಹೀಗೆ ಯಾರ್ಯಾರೋ ಎಷ್ಟೆಷ್ಟೋ ಕಷ್ಟಪಟ್ಟು ನಮ್ಮ ಹೊಟ್ಟೆಗೆ ಹಿಟ್ಟು ತಲುಪಿಸುತ್ತಿದ್ದಾರಲ್ಲ ಅಂದು ಯೋಚಿಸಿದರೆ ಒಮ್ಮೆ ನಮ್ಮ ಒಣ ಠೇಂಕಾರವೆಲ್ಲಾ ಇಳಿದುಹೋಗುತ್ತದೆ.
ಕೊನೆಯದಾಗಿ: ದೇಹ ಪೋಷಣೆಯ ಹೊಣೆ ಹೊತ್ತವರು ಕಷ್ಟದಲ್ಲಿದ್ದಾರೆ ಮನಸ್ಸಿಗೆ ಮುದ ನೀಡುವ ಕೆಲಸ ಆಯ್ದುಕೊಂಡವರು ಸುಖದಲ್ಲಿ ತೇಲುತ್ತಿದಾರೆ ಇದೇಕೆ ಹೀಗೆ ? ಎಂದು ನಮ್ಮ ಆನಂದರಾಮ ಶಾಸ್ತ್ರಿಯವರನ್ನು ಕೇಳಿದೆ. ಅದಕ್ಕವರು ಜನ್ಮ ಜನ್ಮಾಂತರದ ಕತೆ ಹುಟ್ಟಿಕೊಂಡಿರುವುದು ಇಂತ ತರ್ಲೆ ಆಲೋಚನೆಯಿಂದಲೆ. ಕಡಿಮೆ ಯೋಚಿಸು ಹೆಚ್ಚು ಸುಖದಿಂದಿರು ಎಂದು ಸ್ವಲ್ಪ ಬಿರುಸಾಗಿ ಹೇಳಿದರು. ನಾನು ತೆಪ್ಪಗಾದೆ

Tuesday, August 19, 2008

ಗೋವಿಂದ ಭಟ್ಟರ ಕಾಮೆಂಟ್ ಮತ್ತು ಫೋಟೋ


ನಮ್ಮ ಗೋವಿಂದ (bhat59@gmail.com ) ಭಟ್ಟರು ಇಪ್ಪತ್ತೆರಡು ವರ್ಷದ ಹಿಂದೆ ಜಪಾನಿಗೆ ಬೇಟಿಕೊಟ್ಟಾಗಿನ ಪುಕವೂಕರ ಜತೆಗಿನ ಫೋಟೋ ಕಳುಹಿದಿದ್ದಾರೆ. ಜತೆಗೆ ನನ್ನ ಲೇಕನದಲ್ಲಿನ ಸಣ್ಣ ತಿದ್ದುಪಡಿಯೊಂದಿಗೆ. ಅವರ ಜಪಾನ್ ಬೇಟಿಯ ಪೂರಕ ಓದಿಗೆ ಲಾಗ್ ಇನ್ ಆಗಿ - http://halliyimda.blogspot.com/2008/08/blog-post_2698.html


ಪ್ರಿಯರೇ

ಇಪ್ಪತ್ತೆರಡು ವರ್ಷ ಹಿಂದೆ ನಾನು ಒಂದು ವಾರ ಫುಕೋಕರ ಅತಿಥಿಯಾಗಿದ್ದೆ. ಯಂತ್ರ ಚಾಲಿತ ಗರಗಸದಲ್ಲಿ ಪುಟ್ಟದೊಂದು ಅಪಘಾತವಾಗಿ ಬೆರಳಿನ ಹೊಲಿಗೆ ತೆಗೆಯುವ ವರೆಗೆ ಅಲ್ಲಿರಬೇಕಾಯಿತು. ನನ್ನ ನೆನಪಿನ ಪ್ರಕಾರ ಅವರ ಊರು ಶಿಕೋಕು ದ್ವೀಪದ ಮಟ್ಸುಯಾಮ ಪಟ್ಟಣದ ಹೊರವಲಯದಲ್ಲಿರುವ ಇಯೋ ಎಂಬ ಪುಟ್ಟ ಊರು. ಟೋಕಿಯೊವಿನಿಂದ ಒಂಬೈನೊರು ಕಿಲೋಮಿಟರ್ ದೂರ. ಸಾದ್ಯವಾದರೆ ಇನ್ನೆರಡು ದಿನದಲ್ಲಿ ಹೆಚ್ಚಿನ ವಿವರ ಬರೆಯುತ್ತೇನೆ.
ಫೋಟೊ ಅಲ್ಲಿ ಸೇರಿಸಲು ಸಾದ್ಯವಾಗಲಿಲ್ಲ. ಹಾಗೆ ನಿಮಗೆ ಕಳುಹಿಸುತ್ತಿದ್ದೇನೆ.
ನಿಮ್ಮ,

ಕೃಷಿ ಋಷಿಗೆ ಅಂತಿಮ ನಮನ


ಈ ಜಪಾನಿ ಅಜ್ಜನಿಗೆ ತೊಂಬತ್ತೈದು ವರ್ಷ. ಈತನ ಹೆಸರು ಪ್ರಪಂಚದಲ್ಲಿನ ಕೃಷಿಕರಿಗೆ ಚಿರಪರಿಚಿತ. ಈತನಿಗೆ ಭಾರತ ಸರ್ಕಾರವೂ ಕೂಡ ಬಿರುದುಗಳನ್ನು ಕೊಟ್ಟು ಸನ್ಮಾನಿಸಿದೆ. ಅಯ್ಯೋ ಇವರು ನಮಗೆ ಗೊತ್ತಿಲ್ಲದೇ ಏನು ಎಂದಿರಾ? ಹೌದು ನಿಮಗೆ ತಿಳಿದಿರುವಂತೆ ಈತನ ಹೆಸರು ಮುಸನುಬು ಪಕವೂಕ. ಸಹಜ ಕೃಷಿಯ ನೇತಾರ. ಕೃಷಿಯೆಂದರೆ ಕಡಿಮೆ ಕೆಲಸ ಮತ್ತು ಸಂತೃಪ್ತಿ ಜೀವನ ಎಂಬುದನ್ನು ಪ್ರಪಂಚಕ್ಕೆ ಪರಿಚಯಿಸಿಕೊಟ್ಟ ಮಹಾನುಭಾವನೀತ. ದಕ್ಷಿಣ ಜಪಾನ್ ನ ಶಿಕೋಕು ಎಂಬ ಹಳ್ಳಿಯ ಪಕವೂಕ ಒಭ್ಬ ವಿಜ್ಞಾನಿಯಾಗಿ ಜೀವನವನ್ನು ಆರಂಭಿಸಿ ನಂತರ ಅದು ತನ್ನ ಮನಸ್ಥಿತಿಗೆ ಒಗ್ಗದೆ ಇದ್ದುದರಿಂದ ವಾಪಾಸು ಹಳ್ಳಿಗೆ ಮರಳಿದ. ಹಳ್ಳಿಗೆ ಮರಳಿದಾಗ ಅವನ ಹಳ್ಳಿಯಲ್ಲಿ ರಾಸಾಯನಿಕ ಕೃಷಿಯ ಭರಾಟೆ. ಆದರೆ ಪಕವೂಕನಿಗೆ ಇದು ಒಗ್ಗದು. ಆಗಲೆ ಆತನ ಹುಡುಕಾಟ ಆರಂಭ. ಹಲವು ಪ್ರಯತ್ನಗಳ ವಿಪಲದನಂತರ ಆತ ಜಗತ್ತಿಗೆ ಸಹಜ ಕೃಷಿಯ ಪಾಠ ಹೇಳುವಂತಹ ವ್ಯಕ್ತಿಯಾದ. ಆತನ ಒಂದು ಹುಲ್ಲಿನ ಕ್ರಾಂತಿ ಜಗತ್ತಿಗೆ ಪರಿಚಯವಾಯಿತು. ಆತನ ಬಗ್ಗೆ ಹೆಚ್ಚು ನಾನಿಲ್ಲೆ ಬರೆಯುವುದಕಿಂತಲೂ ಆತನ ಪುಸ್ತಕ ಓದಿದರೇ ಅರ್ಥವಾದೀತು. ನೆಟ್ ನಲ್ಲಿಯೂ ಪುಟಗಟ್ಟಲೆ ಆತನ ಬಗ್ಗೆ ಮಾಹಿತಿ ದೊರೆಯುತ್ತದೆ. ಈ ಪುಕವೂಕರ ಸ್ಲೋಗನ್ ಸ್ಯಾಂಪಲ್ ಓದಿದರೂ ಕೃಷಿಕರಿಗೆ ಮನಸ್ಸು ಪ್ರಫುಲ್ಲವಾಗುತ್ತದೆ. ಕೇವಲ ಕೃಷಿಕನಾಗಿ ಅಲ್ಲದೆ ಫಿಲಾಸಫಿಯನ್ನು ಕೃಷಿಯಲ್ಲಿ ತೊಡಗಿಸಿದ ಮುಸನುಬುವ ವಾಕ್ಯಗಳೆ ಮನಮೋಹಕ.
"If we throw mother nature out the window, she comes back in the door with a pitchfork."
"When a decision is made to cope with the symptoms of a problem, it is generally assumed that the corrective measures will solve the problem itself. They seldom do. Engineers cannot seem to get this through their heads. These countermeasures are all based on too narrow a definition of what is wrong. Human measures and countermeasures proceed from limited scientific truth and judgment. A true solution can never come about in this way."
"Natural farming is not just for growing crops, it is for the cultivation and perfection of human beings.
"Giving up your ego is the shortest way to unification with nature."(http://www.permaculture.com/drupal/node/140) . ಇದು ಮುಸನುಬು ಪಕವೂಕನ ಅತ್ಯಂತ ಕಿರುಪರಿಚಯ.
ಇಂದು ಮಧ್ಯಾಹ್ನ ಬೆಂಗಳೂರಿನಿಂದ ನರಹರಿಬಾವ ಫೋನ್ ಮಾಡಿ ಒಂದು ಸುದ್ದಿ ಹೇಳಿದ . ಅದನ್ನು ಕೇಳಿ ನನಗೆ ಸಖೇದಾಶ್ಚ್ರಯವಾಯಿತು. ಖೇದಕ್ಕೆ ಕಾರಣ ನಮ್ಮ ಮುಸನೂಬು ಪಕವೂಕ ಎಂಬ ಈ ಅಜ್ಜ ಮೊನ್ನೆ ಇಹಲೋಕ ತ್ಯಜಿಸಿದ್ದಕ್ಕೆ. ಆಶ್ಚರ್ಯಕ್ಕೆ ಕಾರಣ ಕೃಷಿಪ್ರಧಾನ ದೇಶ ಎಂದು ಬೊಬ್ಬೆ ಹೊಡೆಯುವ ನಮ್ಮ ದೇಶದ ಮಾಧ್ಯಮಗಳಲ್ಲಿ ಇದೊಂದು ಸುದ್ದಿಯೇ ಇಲ್ಲದಿರುವುದಕ್ಕೆ. ಒಂದು ದೊಡ್ಡ ಲಕ್ಷ್ಮೀ ದಡಾಕಿ ಹೊಡೆದರೂ ವಾರಗಟ್ಟಲೆ ತಗಡು ಫೋಟೋ ಹಾಕಿ ತೌಡುಕುಟ್ಟುವ ನಮ್ಮ ವೃತ್ತ ಪತ್ರಿಕೆಗಳು , ಸಣ್ಣ ಪುಟ್ಟ ಘಟನೆಗಳಾದರೂ ಅಲ್ಲಿಗೆ ಪ್ರತಿನಿಧಿಗಳನ್ನು ಕಳುಹಿಸಿ "ಅಲ್ಲಿ ಇನ್ನೂ ದೊಡ್ಡ ಗಲಾಟೆ ಆಗಬಹುದಾ..?" ಎಂದು ಕಡ್ಡಿಗೀರುವ ಟಿ.ವಿ ಚಾನೆಲ್ ಗಳೂ ಇದೊಂದು ಸುದ್ಧಿಯನ್ನು ಪ್ರಕಟಿಸಲೇ ಇಲ್ಲ. ಗಲಾಟೆ ಇಲ್ಲದ ಗೋಕರ್ಣದಲ್ಲಿ "ಉದ್ವಿಗ್ನ" ಎಂದು ಅರ್ದ ಪುಟದ ಅಕ್ಷರಗಳಲ್ಲಿ ಮುದ್ರಿಸುವ ಪತ್ರಿಕೆಗೂ ಇದೊಂದು ಸುದ್ದಿ ಅಂತ ಆನ್ನಿಸಲೇ ಇಲ್ಲ. ಇರಲಿ ಇದನ್ನೆಲ್ಲಾ ತಿದ್ದಲು ನಾವ್ಯಾರು? ಅಬ್ದುಲ್ ಕಲಾಂ ಅದಕ್ಕೆ ಹೇಳಿದ್ದು: ಇಸ್ರೇಲ್ ದೇಶ ಕೃಷಿ ಹಾಗೂ ತಂತ್ರಜ್ಞಾನದಲ್ಲಿ ಮುಂದುವರೆಯುವುದಕ್ಕೂ ಮತ್ತು ಭಾರತ ಹೀಗಿರುವುದಕ್ಕೂ ಮಾಧ್ಯಗಳೇ ಕಾರಣ.
ತೊಂಬತ್ತೈದು ವರ್ಷ ಆರೋಗ್ಯಪೂರ್ಣವಾಗಿ ಯಾವ ಖಾಯಿಲೆಗೂ ತುತ್ತಾಗದೇ ಇಹ ತ್ಯಜಿಸಿದ ಕೃಷಿ ಋಷಿಗೆ ಇದು ಅಂತಿಮ ನಮನ. ದೂರದ ಜಪಾನ್ ನಲ್ಲಿ ಹುಟ್ಟಿ ಭಾರತದ ಇಂತಹ ಹಳ್ಳಿಯ ಮೂಲೆಗೆ ಆತನ ವಿಚಾರಧಾರೆ ತಲುಪಿಸಿದ ಎಂದರೆ ಆತ ಮಹಾತ್ಮನೇ.
ಕೊನೆಯಾದಾಗಿ: ಸುದೀರ್ಘಕಾಲ ಆರೋಗ್ಯವಾಗಿ ಬದುಕಿ ಯಾವಕಾಯಿಲೆಯೂ ಇಲ್ಲದೆ ಸಹಜವಾಗಿ ಇಹ ತ್ಯಜಿಸುವವರು ನಿಜವಾದ ಅಧ್ಯಾತ್ಮಿಕ ವ್ಯಕ್ತಿಗಳು. ಅವರ ಕ್ಷೇತ್ರ ಯಾವುದಾದರೂ ಅಲ್ಲಿ ಅವರ ಪ್ರಭೆ ಪ್ರಖರವಾಗಿರುತ್ತದೆ
ಅಂದು ಆನಂದರಾಮ ಶಾಶ್ತ್ರಿಗಳು ಹೇಳುತ್ತಿರುತ್ತಾರೆ. ಅಂತಹ ವ್ಯಕ್ತಿ ಈ ಮುಸನೂಬು ಪಕವೂಕ ಎನ್ನುವುದರಲ್ಲಿ ಎರಡು ಮಾತಿಲ್ಲ.