Friday, December 19, 2008

ಮಾವಿನ ಚಿಗುರನು ಮೆಲ್ಲುತ ಕೋಗಿಲೆ.........


"ಮಾವಿನ ಚಿಗುರನು ಮೆಲ್ಲುತ ಕೋಗಿಲೆ ಪಂಚಮ ಸ್ವರದಲಿ ಹಾಡೀತು" ಎಂದು ನಮ್ಮ ಗಿಂಡಿಮನೆ ಮೃತ್ಯುಂಜಯ ಅವರು ತಮ್ಮದೊಂದು ಕವಿತೆಯಲ್ಲಿ ಹೇಳಿದ್ದಾರೆ. ಆ ಕವಿತೆಯಲ್ಲಿ ಪ್ರಕೃತಿಯ ಶಬ್ದ ವನ್ನು ನಮಗೆ ತಿಳಿಸುವುದರ ಜತೆ ಮಾವಿನ ಚಿಗುರು ಕೋಗಿಲೆಯ ಸಂಬಂಧದ ಎಳೆಯನ್ನು ನವಿರಾಗಿ ಬಿಚ್ಚಿಡುತ್ತದೆ. ಇರಲಿ ಈಗ ಆ ಸುಮಧುರ ಕವಿತೆಯಲ್ಲಿನ ಮಾವಿನ ಬಗ್ಗೆ ಹೇಳೋಣ.
ಮಾವಿನ ಹಣ್ಣು ಮಾವಿನ ಮಿಡಿ ಉಪ್ಪಿನಕಾಯಿ, ಮಾವಿನ ಕಾಯಿ ತಂಬುಳಿ ಯಾರಿಗೆ ಗೊತ್ತಿಲ್ಲ? ಆಹಾ ಎಂಥ ಮಧುರಾ ವಾಸನೆ ಎನ್ನುವವರೆ ಎಲ್ಲ. ಪರಿಮಳ ಅಪ್ಪೆ ಮಾವಿನ ಕಾಯಿ ಹುಳಿ ಹುಳಿ ತಂಬುಳಿಯನ್ನು ನೆನೆಸಿಕೊಂಡಾಗಲೆಲ್ಲ ಚೊಳ್ ಅಂತ ಬಾಯಲ್ಲಿ ನೀರುಬರುತ್ತದೆ. ಮೊಸರು ಅನ್ನದ ಜತೆ ಕಚಕ್ ಅಂತ ಮಿಡಿಯನ್ನು ಕಚಿಕೊಂಡಾಗ ಆಗುವ ಆನಂದ ವರ್ಣಿಸಲಸದಳ. ಕಂಚಪ್ಪೆ. ಅನಂತ ಭಟ್ಟನ ಅಪ್ಪೆ ದ್ಯಾವ್ರಪ್ಪೆ ಹೀಗೆ ಸ್ಥಳೀಯವಾಗಿ ನೂರಾರು ಹೆಸರಿನಿಂದ ಕರೆಯಿಸಿಕೊಳ್ಳುವ ಮಾವಿನ ರುಚಿಗೆ ಸರಿಸಾಟಿಯಿಲ್ಲ. ಹೀಗೆ ಮನುಷ್ಯನ ಊಟದ ಜತೆಗೆ ಗುಡ್ ಕಾಂಬಿನೇಷನ್ ಆಗಿರುವ ಮಾವು ಪಕ್ಷಿ ಸಂಕುಲಕ್ಕೂ ಅಪಾರ ಉಪಕಾರಿ. ವಾಸಕ್ಕೆ ಆಹಾರಕ್ಕೆ ಸಂತತಿ ಬೆಳಸುವುದಕ್ಕೆ ಹೀಗೆ ಹತ್ತಾರು ಕಾರಣಗಳು ಅದರ ಜತೆ ತಳಕು ಹಾಕಿಕೊಂಡಿವೆ. ಆಯಿತು ಕೊರೆತ ಸಾಕು ಏನು ಹೇಳ ಹೊರಟಿವೆಯೋ ಅದನ್ನು ಹೇಳು ಮಾರಾಯ ಅಂದಿರಾ..! ಆಯಿತು ವಿಷಯಕ್ಕೆ ಬರೋಣ.
ಹೀಗೆ ಮಾವಿನ ಉತ್ಪನ್ನಗಳನ್ನು ಬಳಸುವ ಮಾನವ ಪರೋಕ್ಷವಾಗಿ ಮಾವಿನಮರಗಳ ಮಾರಣ ಹೋಮಕ್ಕೆ ಕಾರಣವಾಗುತ್ತಿದ್ದಾನೆ. ಅದು ಈಗ ನಾನು ಮೇಲೆ ಹೇಳಿದ ರುಚಿರುಚಿಯಾದ ಉತ್ಪನ್ನಗಳನ್ನು ಬಳಸುವ ಕಾರಣಕ್ಕಿಂತ ಹೆಚ್ಚು ಮಾವಿನ ಎಲೆಯನ್ನು ತೋರಣಕ್ಕಾಗಿ ಬಳಸುವ ಕಾರಣದಿಂದ ಎಂದು ಹೇಳಲು ಬಹು ಬೇಸರವೆನಿಸುತ್ತದೆ. ಹೌದು ಅದು ದೊಡ್ಡ ದುರಂತ. ದೊಡ್ಡ ದೊಡ್ಡ ಸಮಾರಂಭಗಳಲ್ಲಿ ಮಾವಿನ ಸೊಪ್ಪನ್ನು ತೋರಣದ ಕಾರಣಕ್ಕಾಗಿ ಯಥೇಚ್ಚವಾಗಿ ಬಳಸಲಾಗುತ್ತಿದೆ. ಮದುವೆಮನೆ ಉಪನಯನ ಹೀಗೆ ಧಾರ್ಮಿಕ ಸಮಾರಂಭಗಳಲ್ಲಂತೂ ಈ ಮಾವಿನ ಸೊಪ್ಪಿನ ಮಾರಣ ಹೋಮ ನೋಡಲಾಗದು. ಸಮಾರಂಭ ನಡೆಯುವ ಜಾಗಕ್ಕೆ ನೀವು ಹೋದಾಗ ಗಮನಿಸಿ ಅಲ್ಲಿ ಕಮಾನಿನಾಕರಾದಲ್ಲಿ ದಪ್ಪನೆಯ ಮಾವಿನ ಸೊಪ್ಪಿನ ಹೊದಿಕೆಯನ್ನೇ ನಿರ್ಮಿಸಿಬಿಟ್ಟಿರುತ್ತಾರೆ. ನನಗಂತೂ ಅವುಗಳನ್ನು ನೋಡಿದಾಗ ಸಮಾರಂಭದ ಉತ್ಸಾಹವೇ ಉಡುಗಿಹೋಗುತ್ತದೆ. ಮಾವಿನ ಎಲೆಗಳು ನನ್ನನ್ನು ಉಳಿಸಿ ಹೀಗೆ ಹಿಂಸಿಸಬೇಡಿ ಎಂದು ಚಿತ್ಕಾರ ಹೊರಡಿಸಿದಂತೆ ಭಾಸವಾಗುತ್ತದೆ. ಇತ್ತೀಚಿನ ದಿನಗಳಲ್ಲಂತೂ ರಾಜಕೀಯ ಸಮಾರಂಭಕ್ಕೂ ಮಾವಿನ ಎಲೆಗಳ ತೋರಣದ ಬಳಕೆಯಾಗುತ್ತಿದೆ. ಒಂದೆರಡು ದಿವಸದಲ್ಲಿ ಬಾಡಿಹೋಗುವ ಈ ಕಾರ್ಯಕ್ರಮಕ್ಕೆ ವರ್ಷಗಟ್ಟಲೆ ಮರದಲ್ಲಿ ಹಸಿರಾಗಿರುವ ಸೊಪ್ಪನ್ನು ಬಳಸುವುದು ಯಾವ ನ್ಯಾಯ ಅಂತ ಮಾವಿನ ಮರ ಮಾತನಾಡಲು ಬರುತ್ತಿದ್ದರೆ ಕೇಳುತ್ತಿತ್ತೇನೋ ಅಂತ ನನಗೆ ಅನ್ನಿಸುತ್ತದೆ.
ಅದ್ಯಾರೋ ಶಾಸ್ತ್ರಕಾರ ಮಾವಿನ ಸೊಪ್ಪು ಧಾರ್ಮಿಕ ಕಾರ್ಯಕ್ರಮಗಳಿಗೆ ಬಳಸಬೇಕು ಆಂದ, ಅದಕ್ಕೆ ನವ್ಯ ಶಾಸ್ತ್ರಕಾರ ಮಾವಿನ ಸೊಪ್ಪಿನಲ್ಲಿ ವೈರಸ್ ನಿರೋಧಕ ಶಕ್ತಿಯಿದೆ ಹಾಗಾಗಿ ಅದನ್ನು ಹತ್ತಾರು ಜನ ಓಡಾಡುವ ಜಾಗದ ಸಮಾರಂಭ ಸ್ಥಳದಲ್ಲಿ ಕಟ್ಟಿ ಸಮೂಹ ಕಾಯಿಲೆ ಹರಡದಂತೆ ತಡೆಯಬೇಕೆಂದು ನಮ್ಮ ಹಿಂದಿನವರು ಆ ಶಾಸ್ತ್ರ ಮಾಡಿದ್ದಾರೆ ಎಂದು ತನ್ನದೇ ತರ್ಕದ ...! ಮೂಲಕ ಸೇರಿಸಿದ, ಈಗಿನವರು ಕುಂಡೆ ಮೇಲೆ ಮಾಡಿಕೊಂಡು ಮನೆಯಲ್ಲಿ ಕಾರ್ಯಕ್ರಮ ಎಂದಕೂಡಲೆ ಮಾವಿನ ಸೊಪ್ಪು ಕಡಿದು ಕಡಿದು ತಂದು ಕಟ್ಟುತ್ತಿದ್ದಾರೆ. ಹಾಗಂತ ಅದೇ ಶಾಸ್ತ್ರಕಾರ ದೇವರು ನಿಮಗೆ ಸುಗಿ ಸುಗಿದು ಧನಕನನ ಕೊಡುತ್ತಾನೆ ವರ್ಷಕ್ಕೊಂದು ಮಾವಿನ ಸಸಿ ನಾಟಿ ಮಾಡಿ ಎಂದು ಸೇರಿಸಬಹುದಿತ್ತು. ಆದರೆ ಆತ ಹಾಗೆ ಮಾಡಿಲ್ಲ ಕಾರಣ ಆತನ ಕಾಲದಲ್ಲಿ ಕಾಡು ಹೇರಳವಾಗಿತ್ತು ಅವನ್ನು ನಾಶಮಾಡುವುದಕ್ಕೆ ಮಾರ್ಗ ಬೇಕಿತ್ತು ಹೀಗಾಗಿ ಹೀಗೊಂದು ಸಿಂಪಲ್ ಉಪಾಯ ಮಾಡಿದ. ಆದರೆ ಅದು ಈ ಕಾಲಕ್ಕೆ ದುಭಾರಿಯಾಗಿ ಪರಿಣಮಿಸಿದೆ. ಇದೊಂದು ತೋರಣದ ಬಳೆಕೆಯ ಕಾರಣದಿಂದಾಗಿ ಮಾವಿನಮರ ವರ್ಷದಿದ ವರ್ಷಕ್ಕೆ ಬೋಳುಬೋಳಾಗಿ ಮಾಯವಾಗುವತ್ತ ಸಾಗುತ್ತಿದೆ. ಇದು ತೋರಣಕ್ಕಾಗಿ ಮಾವುನಾಶದ ಕಥೆಯಾದರೆ ನಂತರದ್ದು ಮಾವಿನ ಮಿಡಿ ಕೊಯ್ಯುವವರ ದುರಾಸೆಯಿಂದ ಇಡೀ ಟೊಂಗೆಯೇ ಮಾಯವಾಗುವತ್ತ ಹೊರಟದ್ದೂ ಕಾಡು ಮಾವಿನ ಮರಗಳ ಸಂತತಿ ಕ್ಷೀಣಿಸಲು ಕಾರಣವಾಗುತ್ತಿದೆ.
ಹೀಗೆ ಮನುಷ್ಯನ ದುರ್ಬಳಕೆಯಿಂದ ಅಪರೂಪದ ಕಾಡುಮಾವಿನಮರದ ಸಂತತಿ ಬರ್ಬಾದೆದ್ದು ಹೋಗುತ್ತಿದೆ. ರಕ್ಷಿಸುವ ದೃಷ್ಟಿಯಿಂದ ಕೇವಲ ಲೇಖನ ಬರೆಯುತ್ತಾ ಕುಳಿತುಕೊಂಡರೆ ಆಗದು. ನಾನಂತೂ ವರ್ಷಕ್ಕೆ ನನ್ನ ಹತ್ತಿರ ಸಾದ್ಯವಾದಷ್ಟು ಕಾಡುಮಾವಿನ ಮರಗಳನ್ನು ನೆಡುತ್ತಿದ್ದೇನೆ. ಹಿಂದೆ ಅಶೋಕ ಮಹಾರಾಜನ ಕಾಲದಲ್ಲಿ ಸಾಲುಮರಗಳಾಗಿ ಕಂಡುಬರುತ್ತಿದ್ದ ಮಾವು ಇಂದಿನ ಪ್ರಜಾಪ್ರಭುತ್ವ ಎಂಬ ನಮ್ಮದೇ ಆಳ್ವಿಕೆಯಲ್ಲಿ ಕಾಣಬರುತ್ತಿಲ್ಲ.
ಕಳೆದ ವರ್ಷ ಹೊನ್ನೆಮರಡುವಿನಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಗೋಷ್ಠಿ ನಡೆದಾಗ ಮಾವಿನ ತೋರಣ ಕಟ್ಟಲು ಹೊರಟಿದ್ದರು. ನಂತರ ಅವರಿಗೆ ಗಂಟೆಗಟ್ಟಲೆ ಕೊರೆದು ಅಕೇಶಿಯಾ ತೋರಣ ಕಟ್ಟಿಸಲಾಯಿತು. ಬಂದವರೆಲ್ಲರೂ ಅದು ಮಾವಿನ ತೋರಣ ಎಂದೇ ಭಾವಿಸಿದ್ದರು. ಹಾಗಾಗಿ ನಾವು ನೀವು ಹೀಗೆ ಒಂದಿಷ್ಟು ನಮ್ಮ ಮಟ್ಟದ ತೀರ್ಮಾನ ಕೈಗೊಳ್ಳುವುದರಲ್ಲಿ ಅರ್ಥವಿದೆ. ನಿಮಗೆ ಸಂದರ್ಭ ಸಿಕ್ಕಾಗ ತೋರಣಕ್ಕಾಗಿ ಯಡ್ಡಾದಿಡ್ಡಿ ಮಾವಿನ ಸೊಪ್ಪನ್ನು ಬಳಸುವವರಿಗೆ ತಿಳಿ ಹೇಳಿ. ಸ್ವಲ್ಪ ಶಾಸ್ತ್ರಕ್ಕೆ ಬಳಸಲಿ. ಆ ವರ್ಷ ಒಂದೇ ಒಂದು ಗಿಡ ನೆಡಲು ಹೇಳಿ. ಇದು ಮಾವಿನ ಮರಗಳು ನನ್ನ ಮೂಲಕ ಮಾಡಿಕೊಂಡ ಮನವಿ ಅಂತ ಬೇಕಾದರೂ ಅಂದುಕೊಳ್ಳಿ. ಕಾಡುಮಾವಿನ ಮರಗಳು ಹೀಗೆಯೇ ದುರ್ಬಳಕೆಯಾದಲ್ಲಿ ಮತ್ತೆ ಕವಿಗಳ ಕವಿತೆಯಲ್ಲಿ ಮಾತ್ರಾ ಇದನ್ನು ಕಲ್ಪಿಸಿಕೊಳ್ಳಬೇಕಾದೀತು. ಅದು ನಮ್ಮ ಮುಂದಿನ ತಲೆಮಾರಿನವರಿಗೆ ಆಸಕ್ತಿ ಇದ್ದರೆ..! .
ಇನ್ನೂ ಮುಂದೆ ಯೋಚಿಸಿದಲ್ಲಿ ಮಾವು ಮಾಯವಾಗಿ ಅದು ಹೇಗಿತ್ತು ಅಂತ ತಿಳಿಯದ ಕವಿಗಳು " ಅಕೆಶಿಯಾ ಚಿಗುರನು ಮೆಲ್ಲುತ ಕೋಗಿಲೆ ಪಂಚಮ ಸ್ವರದಲಿ ಹಾಡೀತು" ಅನ್ನಬೇಕಾಗುತ್ತದೆ. ಹಾಗಾಗಲು ಬಿಡುವುದು ಬೇಡ. ಈ ಬಾರಿ ಮದುವೆ ಮುಂಜಿಗೆಂದು ನೀವು ಎರಡು ದಿವಸ ಮೊದಲು ಊರಿಗೆ ಬಂದಾಗ ನಾನು ಹೇಳಿದ್ದು ನೆನಪಾಗಿ ಅನುಷ್ಠಾನಕ್ಕೆ ಬರುತ್ತದೆ ಎಂಬ ಆಶಯ ನನ್ನದು. ಅದು ಸಕ್ಸಸ್ಸು ಹೌದು ಕಾರಣ ಊರಿನಲ್ಲಿ ನಿಮ್ಮ ಮಾತು ಕೇಳುತ್ತಾರೆ, ನಾವೆಲ್ಲ ಹೇಳಿದರೆ ಇವಕ್ಕೆಲ್ಲಾ ಎಂತ ಗೊತ್ತು ಅಂತ ಬಾಯಿಮುಚ್ಚಿಸುತ್ತಾರೆ. ಹಾಗಾಗಿ ನೀವು ಶಂಖವಾಗಿ ಮಾವು ತೀರ್ಥವಾಗಲಿ.

Thursday, December 18, 2008

ಇಶ್ಯಿಶ್ಶೀ......

ನಮ್ಮ ಊರುಗಳಲ್ಲಿ ಬಹುಪಾಲು ಅಡಿಕೆ ಬೆಳೆಗಾರರು. ಆದರೆ ಗುಟ್ಕಾ ತಿನ್ನುವವರನ್ನು ಕಂಡು ಗುರಾಯಿಸುತ್ತಾರೆ. ಎಲೆ ಅಡಿಕೆ ಹಾಕಿಕೊಂಡು ಬಾಯಿ ಕೆಂಪು ಮಾಡಿಕೊಂಡರೆ ಇಶ್ಯಿಶ್ಶೀ ಎನ್ನುತ್ತಾರೆ. ಬಹಳಷ್ಟು ಜನ ಅಡಿಕೆಯನ್ನು ಮೂಸಿಯೂ ನೋಡುವುದಿಲ್ಲ. ಹಾಗಂತ ಅಡಿಕೆಗೆ ದರ ಇಲ್ಲ ಅಂತ ಹಲುಬುತ್ತಾರೆ. ತಾವು ತಿನ್ನುವುದಿಲ್ಲ ತಿನ್ನುವವರನ್ನು ನಿಕೃಷ್ಟವಾಗಿ ಕಾಣುತ್ತಾರೆ ದರ ಜಾಸ್ತಿಯಾಗಲಿ ಎಂಬ ವಿಪರ್ಯಾಸದ ಮಾತು. ಇರಲಿ ಅದು ಪ್ರಪಂಚ ಅಂದು ಬಿಡೋಣ.

ಅವನದು ಲಿಕ್ಕರ್ ಫ್ಯಾಕ್ಟರಿಯಲ್ಲಿ ದೊಡ್ಡ ಹುದ್ದೆ. ಆದರೆ ಆತ ಕುಡಿಯುವವರನ್ನು ಕಂಡು ಗುರಾಯಿಸುತ್ತಾನೆ. ಏನೋ ಸ್ವಲ್ಪ ರಂಗಾಗಿ ತೂರಾಡುತ್ತಿದ್ದರೆ ಇಶ್ಯಿಶ್ಶಿ ಎನ್ನುತ್ತಾನೆ. ಆತ ಹೆಂಡವನ್ನೂ ಮೂಸಿಯೂ ನೋಡುವುದಿಲ್ಲ ಹಾಗಂತ ಸಂಬಳ ಕಡಿಮೆಯಾಯಿತೆಂದು ಹಲುಬುತ್ತಾನೆ. ತಾನು ಕುಡಿಯುವುದಿಲ್ಲ ಕುಡಿಯುವವರನ್ನು ಕಂಡರೆ ನಿಕೃಷ್ಟವಾಗಿ ಕಾಣುತ್ತಾನೆ ಸಂಬಳ ಜಾಸ್ತಿಯಾಗಲಿ ಎಂಬ ವಿಪರ್ಯಾಸದ ಮಾತು. ಆಗಲಿ ಅದೂ

ಆತ ಮಹಾನ್ ರಾಜಕಾರಣಿ, ಜನರಿಂದ ನಾನು ಮೇಲೆ ಬಂದೆ ಎಂದು ಚುನಾವಣೆಯ ಮೊದಲು ಹಾಡುತ್ತಾನೆ. ಮಣ್ಣಿನ ಮಗ ನಾನು ಅಂತಾನೆ. ಬಡಜನರ ಏಳ್ಗೆಯೇ ನನ್ನ ಗುರಿ ಅಂತಾನೆ. ಆದರೆ ಗೆದ್ದಮೇಲೆ ಜನಸಾಗರವನ್ನು ಕಂಡು ಇಶ್ಯಿಶ್ಶೀ ಅನ್ನುತ್ತಾನೆ. ದುಡಿಯಲಾರದ ಸೋಮಾರಿಗಳು ಅಂತಾನೆ. ದರ್ಪ ದವಲತ್ತುಗಳನ್ನು ಪ್ರದರ್ಶಿಸುತ್ತಾನೆ. ದೇವಸ್ಥಾನ ಸುತ್ತುತ್ತಾನೆ. ಆಯಿತು ಅದುವೇ ಪ್ರಪಂಚ ಅಂದು ಬಿಡೋಣ

ಆತ "ಮಾತೃ ದೇವೋ ಭವ, ಆಚಾರ್ಯ ದೇವೋ ಭವ " ಎನ್ನುವ ವೇದದ ಸಾರವೇ ಜೀವನ ಎನ್ನುವ ಘನಂದಾರಿ ಪುರೋಹಿತ. ಮನೆಯಲ್ಲಿ ವಯಸ್ಸಾದ ಅಮ್ಮನನ್ನು ಕಂಡು ಗುರಾಯಿಸುತ್ತಾನೆ. ಆಕೆ ಹುಷಾರಿಲ್ಲದೆ ಹಲುಬಿದರೆ ಇಶ್ಯಿಶ್ಶೀ ಎನ್ನುತ್ತಾನೆ. ಅಮ್ಮನನ್ನು ಮಾತನಾಡಿಸುವುದೂ ಇಲ್ಲ. ತಾನು ಪಾಲಿಸುವುದೂ ಇಲ್ಲ ಆದರೆ ನಿತ್ಯ ಮಾತೃದೇವೋ ಭವ ಎಂದು ಭಾಷಣ ಮಾಡುವುದನ್ನು ಬಿಡುವುದಿಲ್ಲ ಜತೆಗೆ ಪ್ರಪಂಚ ಆಚಾರ ವಿಚಾರಗಳನ್ನು ಕೈಬಿಟ್ಟು ಕೆಟ್ಟು ಹೋಗಿದೆ ಎಂಬ ವಿಪರ್ಯಾಸದ ಮಾತು.

ಆದರೆ ಇದನ್ನು ಮಾತ್ರಾ ಪ್ರಪಂಚ ಅಂತ ಸುಮ್ಮನಿರಲಾಗುವುದಿಲ್ಲ. ಯಾಕೆಂದರೆ ಮುಂದೊಂದು ದಿನ ನಾವು ಅಮ್ಮನಂತೆ ವಯಸ್ಸಾದವರಾಗುತ್ತೀವಿ ಅನ್ನುವ ಕಾರಣಕ್ಕಾದರೂ....?

Tuesday, December 16, 2008

ತರಬೇಕು..ತರಬೇಕು... ಒಂದು ಕಥಾ ಸಂಕಲನ

ಕಟ್ಟು ಕಥೆಯ ಕಟ್ಟು ಅಂತ ಅದರ ಹೆಸರು ಇಡಬೇಕು. ಅದರಲ್ಲಿ ನನ್ನ ಇಲ್ಲಿಯವರೆಗೆ ಪ್ರಕಟವಾದ ಕಥೆಗಳನ್ನು ಮುದ್ರಿಸಬೇಕು ಅಂತ ಒಂದು ಆಸೆ ಚಿಗುರಿದೆ. ಪ್ರಜಾವಣಿ-ಕನ್ನಡಪ್ರಭ-ಉದಯವಾಣಿ-ಕರ್ಮವೀರ-ಸುಧಾ ಸೇರಿದಂತೆ ಒಟ್ಟು ಪ್ರಕಟವಾಗಿದ್ದು ಇಪ್ಪತ್ತೈದು ಕಥೆಗಳು. ಅವುಗಳಲ್ಲಿ ಹದಿನೈದು ಆರಿಸಿ ಮುದ್ರಿಸಬೇಕು. ಅದಕ್ಕಾಗಿ ಹದಿನೈದು ಸಾವಿರ ರೂಪಾಯಿಗಳನ್ನು ವ್ಯಯಿಸಬೇಕು ಆಮೇಲೆ ಹೇಗೂ ಇದ್ದೇ ಇದೆ. " ಹೋಯ್ ಆರಾಮ, ಮತ್ತೆ ಸಮಾಚಾರ , ನನ್ನದೊಂದು ಕಥಾ ಸಂಕಲನ ಬಂದಿದೆ? " ಅಂತ ಅಪರೂಪದವರು ಕಂಡಕೂಡಲೆ ಕೇಳಬೇಕು. " ಓ ಹೋ ಹೌದಾ ನೀನು ಕಥೆ ಬರಿತೀಯಾ..?" ಎಂಬ ಪ್ರಶ್ನೆ ಬರುತ್ತದೆ . ತಾಳ್ಮೆಗೆಡಬಾರದು " ಹೌದು" ಅನ್ನಬೇಕು. ( ನಮ್ಮಲ್ಲಿ ಜನಜನಿತವಾದ ಮಾತಿದೆ. ಅದ್ಯಾರದ್ದೋ ಹೆಸರು ಹೇಳಿ " ಅವ ಹಡೆದ್ಲಡ ಗಂಡು ಮಗುವಡಾ.." ಅಂದಕೂಡಲೆ ಎದುರಿದ್ದವನಿಂದ " ಅರೆ ಅವ ಯಂಗೆ ಬಸಿರಾಗಿದ್ದೆ ಗೊತ್ತಿಲ್ಯಲ" ಎನ್ನುವ ಜೋಕ್ ರೂಪದ ವ್ಯಂಗ್ಯ. ಇದೂ ಹಾಗೆಯೆ, ಕಥೆ ಬರೆಯದೆ ಕಥಾ ಸಂಕಲನ.. ಬರಲು ಸಾಧ್ಯವೇ? ಇರಲಿ ) ಆನಂತರ ಬಗಲು ಚೀಲದಿಂದ ಒಂದು ಪುಸ್ತಕ ತೆಗೆದುಕೊಡಬೇಕು . ಆಗ ಅವರು " ಚಲೋ ಇದ್ದು " ಎಂದು "ಬರ್ಲಾ ಬಸ್ ಬಂತು" ಎನ್ನುತ್ತಾ ಹೋಗುವುದನ್ನು ನೋಡಬೇಕು. ಮನೆಗೆ ಬಂದು ಹೆಂಡತಿಯ ಬಳಿ ಇವತ್ತು ಹತ್ತು ಪುಸ್ತಕ ಖರ್ಚಾಯಿತು ಎನ್ನುವ ಸತ್ಯ ಹೇಳಬೇಕು. ಅಡಿಕೆ ಮಾರಿದ ದುಡ್ಡನ್ನು ಪುಸ್ತಕದಿಂದ ಬಂದದ್ದು ಎಂಬ ಹಸಿಹಸಿ ಸುಳ್ಳನ್ನು ಪೋಣೀಸಬೇಕು. ಇವಿಷ್ಟು ಸನ್ ಎರಡುಸಾವಿರದ ಒಂಬತ್ತನೆ ಇಸವಿ ಜನವರಿ ಅಥವಾ ಫೆಬ್ರವರಿ ತಿಂಗಳಿನಲ್ಲಿ ಆಗಬೇಕಾದ ಕೆಲಸಗಳು. ಒಂದು ಜೇನಿನ ಹಿಂದೆ ಎಂಬ ಪುಸ್ತಕ ೨೦೦೭ ರಲ್ಲಿ ಬರೆದಿದ್ದು ನಾಲ್ಕುನೂರು ಖಾಲಿಯಾಗಿದೆ.ಇನ್ನು ನೂರು ಪುಸ್ತಕ ಖಾಲಿಯಾದರೆ ಅಸಲಾದಂತೆ. ...! . ( ಹೆಂಡತಿಯ ಬಳಿ ಅದರ ಲಾಭದ ದುಡ್ಡಿನಿಂದ ಇನ್ನೊಂದು ಕಥಾ ಸಂಕಲನ ತರುತ್ತಿದ್ದೇನೆಂದು ಸುಳ್ಳು ಹೇಳಿಯಾಗಿದೆ. ಸಧ್ಯ ಆಕೆ ಈ ಬ್ಲಾಗ್ ಓದುವುದಿಲ್ಲ ಬಚಾವ್). ಮೊನ್ನೆ ನಮ್ಮ ವಿನಾಯಕ ತನ್ನ ಬ್ಲಾಗಿನಲ್ಲಿ ಅವನದೊಂದು ಬರಹ ಪ್ರಕಟವಾಗದ ಕುರಿತು ನೋವು ತೋಡಿಕೊಂಡಿದ್ದ. ಪ್ರಕಟವಾಗಲಿಲ್ಲ ಎಂದು ಬೇಸರ ಮಾಡಿಕೊಳ್ಳುವುದರಲ್ಲಿ ಅರ್ಥವೇ ಇಲ್ಲ. ಹೀಗೆ ನನ್ನಂತೆ ಅವರನ್ನ ಇವರನ್ನ ಹಿಡಿದು ನಮ್ಮದೇ ಒಂದು ಪ್ರಕಾಶನ ಸಂಸ್ಥೆ ಅಂತ ಶುರುವಿಟ್ಟುಕೊಂಡು ಪ್ರಕಟಿಸಿಬಿಡಬೇಕು. ಆನಂತರ ಅಷ್ಟು ಲಾಭ ಬಂತು ಇಷ್ಟು ಲಾಭ ಬಂತು ಅಂತ ಓಳು ಬಿಟ್ಟರೆ ಫಿನಿಷ್. ಪಾಪ ನಮ್ಮಂತಹ ಲೇಖಕರು ಸಾವಿರಾರು, ಅವರೆಲ್ಲರ ಕಥೆಗಳನ್ನು ಸಂಕಲನಗಳನ್ನಾಗಿಸಿದರೆ ಪ್ರಕಾಶಕರು ದಿವಾಳಿಯಾಗುತ್ತಾರೆ. ಹಾಗಾಗಿ ನಾವೇ ನಾವು ತಯಾರಾಗಿಬಿಟ್ಟರೆ ಯಾವ ಸಮಸ್ಯೆಯೂ ಇಲ್ಲ ಅನ್ನುವುದು ನನ್ನ ಸ್ವಾನುಭವ. ಬೇಕಾದರೆ ನೀವೂ ಹಾಗೆ ಮಾಡಿ ನೋಡಿ, ರಾಯಲ್ಟಿ ನನಗೇನು ಕೊಡಬೇಕಾಗಿಲ್ಲ. ಇರಲಿ ಅವೆಲ್ಲಾ ಎಲ್ಲಾ ಕಡೆ ಇದ್ದದ್ದೆ. ಫೆಬ್ರವರಿ ತಿಂಗಳಿನಲ್ಲಿ ಕಥಾ ಸಂಕಲನ ಪ್ರಕಟವಾಗುವ ನಿರೀಕ್ಷೆ ಇದೆ. ಅದಕ್ಕೊಂದು ಚಿಕ್ಕ ಸಮಾರಂಭವೂ ಇರುತ್ತದೆ. ಅದಕ್ಕೆ ತಪ್ಪದೇ ನೀವು ಬರಬೇಕು. ಇದು ಮಾತ್ರಾ ಬರೀ ಬಾಯಿಮಾತಿನ ಕರೆಯ ಅಲ್ಲ. ಖಂಡಿತಾ ಬರುವಿರಿ ತಾನೆ?.

ಮಮತೆಯ ಕರೆಯೋಲೆ

ಕ್ಷೇಮ /ಶ್ರೀ// ಸಾಂಪ್ರತ
ಪ್ರೀತಿಯ ಓದುಗರೆ ನಿಮಗೆ ಸಾಷ್ಟಾಂಗ ನಮಸ್ಕಾರ. ಇತ್ತ ನಾನು ಕ್ಷೇಮ. ನೀವು ಕ್ಷೇಮವಾಗಿದ್ದೀರೆಂದು ಭಾವಿಸುತ್ತೇನೆ. ಈ ಪತ್ರ ಬರೆಯಲು ಮುಖ್ಯ ಕಾರಣ ಇದೇ ತಿಂಗಳು ಇಪ್ಪತ್ತೇಳನೇ ತಾರೀಕಿನ ಶನಿವಾರ ಹೊನ್ನೇಮರಡುವಿನಲ್ಲಿ ಹೊಳೆ ಊಟಕ್ಕೆ ನಾವು ಹೋಗಬೇಕೆಂದು ತೀರ್ಮಾನಿಸಿಯಾಗಿದೆ. ಯಳ್ಳು ಇಲ್ಲದಿದ್ದರೂ ಯಳ್ಳಮವಾಸೆಯ ಆ ದಿನ ನಮ್ಮ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಹೀಗೆ ಹೊರ ಸಂಚಾರ ಹೊರಟು ಹೊಳೆಯ ಪಕ್ಕದಲ್ಲಿ ಊಟ ಮಾಡಿಕೊಂಡು ಬರುವುದು ಸುಮಾರು ಐವತ್ತು ವರ್ಷಗಳಿಂದ ನಡೆದು ಬಂದ ಪದ್ದತಿ. ಯಾವಾಗಲೂ ಜೋಗ ಜಲಪಾತ ಬೀಳುವ ಜಾಗಕ್ಕೆ ತೆರಳುತ್ತಿದ್ದ ನಾವು ಈ ಬಾರಿ ಹೊನ್ನೇಮರಡುವನ್ನು ಆಯ್ಕೆಮಾಡಿಕೊಂಡಿದ್ದೇವೆ. ಕಾರಣ ಅಲ್ಲಿ ಜಾಕೆಟ್ ಕಟ್ಟಿಕೊಂಡು ಈಜಾಡಬಹುದು ಬೋಟಿಂಗ್ ಮಾಡಬಹುದು.
ಈ ಹೊಳೆ ಊಟದ ಮಜ ನೀವೂ ಅನುಭವಿಸಬಹುದು. ಬನ್ನಿ ಖಂಡಿತಾ ಬರುವಿರಾಗಿ ಆಶಿಸುವ ಮತ್ತು ಬರುಅ ಮುಂಚೆ ನನಗೊಂದು ಮಾಹಿತಿ ತಿಳಿಸುವಿರಾಗಿ ಭಾವಿಸುವ ನಿಮ್ಮವ
ಮನೆಯಲ್ಲಿ ಹಿರಿಯರಿಗೆ ನಮಸ್ಕಾರ ಕಿರಿಯರಿಗೆ ಆಶೀರ್ವಾದಗಳು
ಇಂತಿ ನಿಮ್ಮ ಹಿತೈಷಿ.
ಆರ್.ಶರ್ಮಾ. ತಲವಾಟ
9342253240

Friday, December 12, 2008

ಹವ್ಯಕರ ಹಳ್ಳಿಗಳು ಖಾಲಿ ಖಾಲಿ

ದಿನದಿಂದ ದಿನಕ್ಕೆ ಹಳ್ಳಿತೊರೆದು ಪಟ್ಟಣ ಸೇರುವ ವಲಸೆಯೆಂಬ ಹೀಗೊಂದು ಪ್ರಕ್ರಿಯೆ ಹವ್ಯಕ ಬ್ರಾಹ್ಮಣರ ಸಮುದಾಯದಲ್ಲಿ ಸದ್ದಿಲ್ಲದೆ ನಡೆಯುತ್ತಿದೆ. ಅದು ಯಾರ ಗಮನಕ್ಕೂ ಬಾರಾದಂತೆ ಮುಗುಮ್ಮಾಗಿ ತನ್ನಷ್ಟಕ್ಕೆ ತಾನೇ ಆಗುತ್ತಿದೆ. ನಾನು ಸ್ವತಹ ಗಮನಿಸಿದಂತೆ ಹತ್ತು ವರ್ಷ ದಿಂದ ಈಚೆಗೆ ನಮ್ಮ ಊರಿನ ಸುತ್ತ ಮುತ್ತ ಸುಮಾರು ಇಪ್ಪತ್ತು ಮನೆಗಳು ಬಾಗಿಲು ಮುಚ್ಚಿವೆ. ಅದರಲ್ಲಿ ಮುಕ್ಕಾಲು ಪಾಲು ವಲಸೆ ಕಾರಣಕ್ಕಾಗಿಯಾದರೆ ಇನ್ನು ಕಾಲು ಭಾಗ ಕುಟುಂಬದ ಸದಸ್ಯರು ಇಲ್ಲವಾಗಿದ್ದು. ಕಾರಣಗಳು ಸಾವಿರ ಇವೆ. ಇರುವ ಒಬ್ಬ ಮಗ ಬೆಂಗಳೂರಿನಲ್ಲಿ ಇಂಜನಿಯರ್ , ಇರುವ ಎರಡು ಹೆಣ್ಣು ಮಕ್ಕಳೂ ಮದುವೆಯಾಗಿ ಹೋಗಿದ್ದಾರೆ ಅಲ್ಲೇ ಪಕ್ಕದಲ್ಲಿ ಒಂದು ಮನೆ ಮಾಡಿ ವಾಸ, ವಯಸ್ಸಾದವರು ಕೈಲಾಸ ಸೇರಿದರು ಮಕ್ಕಳು ಅಲ್ಲಿಂದ ಇಲ್ಲಿಗೆ ಬಂದು ಜಮೀನು ನೋಡಿಕೊಳ್ಳಲಾಗುವುದಿಲ್ಲ ಹಾಗಂತ ಜಮೀನು ಮಾರೋಣ ಎಂದರೆ ಮುಂದೆ ಬೇಕಾಗುತ್ತೇನೋ ಅನ್ನುವ ಭಯ ಆಕಾರಣಕ್ಕಾಗಿ ಮನೆಯ ಬಾಗಿಲಿಗೆ ಒಂದು ಗೋಡ್ರೇಜ್ ಬೀಗ. ಹೀಗೆ . ಇನ್ನಷ್ಟು ಜನ ಹಳ್ಳಿಯ ಬಿಟ್ಟು ಓಡಿ ಹೋಗುವ ತವಕದಲ್ಲಿದ್ದಾರೆ. ಅವರಿಗೂನ್ ಅಷ್ಟೆ ಮಗ ಅಥವಾ ಮಗಳು ಸೆಟ್ಲ್ ಇಲ್ಲಿ ಬೇಜಾರು. ಇಂತಹ ಅನಿವಾರ್ಯ ಕಾರಣದಿಂದ ಹಳ್ಳಿಗಳು ಭಣಭಣ ಎನ್ನತೊಡಗಿವೆ. ಈ ಪ್ರಕ್ರಿಯೆ ನಿಲ್ಲದಿದ್ದಲ್ಲಿ ಅಥವಾ ಪಟ್ಟಣದಿಂದ ವಾಪಾಸಾತಿ ಆಗದಿದ್ದಲ್ಲಿ ಇನ್ನು ಹತ್ತು ವರ್ಷದಲ್ಲಿ ಹವ್ಯಕರ ಹಳ್ಳಿಗಳು ಭಾಗಶಃ ಖಾಲಿಯಾಗುವುದು ಖಂಡಿತ. ಹಾಗಂತ ಹಳ್ಳಿಯಲ್ಲಿ ಉಳಿದವರ ಪರಿಸ್ಥಿತಿಯೇನೋ ಸ್ವರ್ಗ ಅಂತ ಅನ್ನುವಂತಿಲ್ಲ. ದಿನದಿಂದ ದಿನಕ್ಕೆ ಆರ್ಥಿಕವಾಗಿ ಪರಿಸ್ಥಿತಿ ಬಿಗಡಾಯಿಸುತ್ತಿದೆ. ವೆನಿಲಾ ರೋಗದ ಕಾರಣ ಮಾಯ ಅಡಿಕೆ ದರ ಇಳಿತ, ಕೂಲಿಕಾರರ ಅಭಾವ, ಕೂಲಿಕಾರರು ಸಿಕ್ಕಿದರೂ ಹೆಚ್ಚಿದ ಸಂಬಳ. ಮುಂತಾದ ಹತ್ತಾರು ಸಮಸ್ಯೆಗಳು. ಇದರ ಜತೆಗೆ ಹವ್ಯಕರ ಗಂಡುಗಳಿಗೆ ಹೆಣ್ಣಿಲ್ಲದ ಭೀಕರ ಸಮಸ್ಯೆ. ಮೂವತ್ತರಿಂದ ನಲವತ್ತು ವರ್ಷದವರೆಗಿನ ಮದುವೆಯಾಗದ ಗಂಡುಗಳು ಪ್ರತೀ ಊರಿನಲ್ಲಿಯೂ ಹತ್ತೆಂಟು ಸಿಗುತ್ತಾರೆ. ಇವುಕ್ಕೆ ಹೆಣ್ಣು ಕೊಡುವವರು ಇಲ್ಲ ಎನ್ನುವ ಸಮಸ್ಯೆಯ ಜತೆ ಅವರುಗಳಿಗೆ ಮದುವೆಯಾಗುವ ಆಲೋಚನೆಯೇ ಇಲ್ಲದಿರುವುದು ಮತ್ತೊಂದು ದುರಂತ. ಮದುವೆ ಎನ್ನುವುದು ಯೋಚಿಸಿ ಆಗುವ ಕ್ರಿಯೆ ಅಲ್ಲ. ಅದು ಸಂಸಾರ ಎಂಬುದು ಜಂಜಡ ಎಂದು ಸಾವಿರ ಜನ ಹೇಳುತ್ತಿದ್ದರೂ ಅಲ್ಲ ಅಲ್ಲಿದೆ ಸ್ವರ್ಗ ಎಂದು ತಿಳಿದಿಕೊಳ್ಳುವಂತಹ ವಯಸ್ಸಿನಲ್ಲಿ ಆಗುವಂತಹ ಪ್ರಕ್ರಿಯೆ. ಆದರೆ ಗಂಡುಗಳಿಗೆ ಮೂವತ್ತು ನಲವತ್ತು ಆಗಿದ್ದರಿಂದ ಅವುಕ್ಕೆ ಸಂಸಾರ ಎನ್ನುವುದು ಸಸಾರ ಅಲ್ಲ ಅನ್ನುವುದು ಅರಿವಾಗಿ ಮದುವೆ ಮಾಡಿಕೊಳ್ಳದೇನೆ ನಾನು ಸುಖವಾಗಿ ಇರಬಲ್ಲೆ ಎಂಬ ತೀರ್ಮಾನಕ್ಕೆ ಬಂದುಬಿಟ್ಟಿದ್ದಾರೆ. ಇಂತಹ ಕಾರಣಗಳು ಭವಿಷ್ಯದಲ್ಲಿಯೂ ಹವ್ಯಕರ ಹಳ್ಳಿಗಳು ಖಾಲಿ ಖಾಲಿ ಅನ್ನಿಸಿಕೊಳ್ಳುವುದಕ್ಕೆ ಕಾರಣವಾಗಿಬಿಟ್ಟಿವೆ. ಈ ವಲಸೆ ಪ್ರಕ್ರಿಯೆ ನಿರಂತರವಾಗಿ ನಿಧಾನವಾಗಿ ಹಬ್ಬಲು ಮುಖ್ಯ ಕಾರಣ ಇಂದಿನ ಆರ್ಥಿಕ ಮಾನದಂಡ. ಎಲ್ಲರೂ ಎಲ್ಲವನ್ನೂ ಅವನ ಬಳಿ ಬ್ಯಾಂಕ್ ಬ್ಯಾಲೆನ್ಸ್ ಎಷ್ಟಿದೆ ? ಎನ್ನುವ ತತ್ವಕ್ಕೆ ಇಳಿದಿರುವುದರಿಂದ ಹಳ್ಳಿ ಹಣದ ಥೈಲಿ ತರದಾದ್ದರಿಂದ ವಲಸೆ ಅನಿವಾರ್ಯವಾಗತೊಡಗಿದೆ. ಹಿಂದಿನ ಹಳ್ಳಿಗಳಲ್ಲಿ ಈ ಅರ್ಥಪ್ರಧಾನ ವ್ಯವಸ್ಥೆ ಆಷ್ಟೊಂದು ಗಾಢವಾಗಿರಲಿಲ್ಲ. ಇಂದಿನ ಮಾಹಿತಿ ತಂತ್ರಜ್ಞಾನದ ಪ್ರಗತಿಯಿಂದ ಹಳ್ಳಿಗರಿಗೆ ಪ್ರಪಂಚ ದರ್ಶನ ಮನೆಯಬಾಗಿಲಿನಲ್ಲಿಯೇ ದೊರೆಯುವುದರಿಂದ ಮತ್ತು ಅವುಗಳು ಪಟ್ಟಣದ ಬದುಕು ಸುಖ ಎಂದು ಬಿಂಬಿಸುವುದರಿಂದ ಇಲ್ಲಿ ಬದುಕಲಾರದೆ ಅಲ್ಲಿಗೆ ಹೋಗಲಾರದೆ ತ್ರಿಶಂಕು ಜೀವನದ ಕತೆಯಾಗಿದೆ. ಮೂವತ್ತು ನಲವತ್ತು ವರ್ಷದ ಹಿಂದಿನ ಸಿನೆಮಾಗಳಲ್ಲಿ ಹಳ್ಳಿಯ ಬದುಕನ್ನು ಬಿಂಬಿಸಿ ನಾಯಕ ನಟಿಸುತ್ತಿದ್ದ. ಮಣ್ಣಿನ ಜತೆಗಿನ ಬದುಕು ಉತ್ತಮ ಎಂಬ ಸಂದೇಶ ರವಾನಿಸುತ್ತಿದ್ದ. ಹೈಕಳು ಅದರಿಂದ ಏನೋ ಪ್ರಭಾವಿತರಾಗಿ ಹಾಡು ಹೇಳುತ್ತಾ ಉಳುಮೆ ಮಾಡುತ್ತಿದ್ದರು. ಮನಸ್ಸಿನಲ್ಲಿ ನಾನು ದೇಶದ ಬೆನ್ನೆಲುಬು ಎಂಬುದನ್ನು ಆಹ್ವಾನಿಸಿಕೊಂಡು ಸುಖಿಸುತ್ತಿದ್ದರು. ಇಂದಿನ ಸಿನೆಮಾ ಟಿವಿಗಳು ರೈತರ ಆತ್ಮಹತ್ಯೆಯನ್ನು ಬಿಂಬಿಸುತ್ತವೆ, ಹಳ್ಳಿಯ ಜೀವನ ಮಧುರ ಅಲ್ಲ ಅಂದು ಸಾರುತ್ತವೆ. ಇವೆಲ್ಲಾ ಕೊಂಚ ಮಟ್ಟಿಗೆ ಹಳ್ಳಿಯ ಜೀವನ ತೊರೆಯಲು ಪ್ರೇರೇಪಿಸುತ್ತವೆ. ಹಾಗಂತ ಪಟ್ಟಣದಲ್ಲಿದ್ದವರು ಸುಖವೊಂದರಲ್ಲೇ ತೇಲುತ್ತಿದ್ದಾರೆ ಅಂಬರ್ಥವಲ್ಲ, ಬಹಳಷ್ಟು ಜನ ಹಾಗೆ ತಿಳಿದುಕೊಂಡಿದ್ದಾರೆ.
ಹೀಗೆ ಗೊತ್ತಿರುವ ಗೊತ್ತಿಲ್ಲದ ನೂರಾರು ಕಾರಣಗಳು ಹವ್ಯಕರ ಹಳ್ಳಿಯ ಮೇಲೆ ಪರಿಣಾಮ ಆಗುತ್ತಿರುವುದಂತೂ ಸತ್ಯ. ದೂರಗಾಮಿ ಪರಿಣಾಮ ಆ ಪ್ರಕೃತಿಗೇ ಬಿಟ್ಟದ್ದು. ಹೀಗಿದೆ ಅಂತ ಒಂದು ಹುಳ ಬಿಡುವ ಕ್ರಿಯೆಯನ್ನು ನಾವು ಮಾಡಬಹುದು.

Thursday, December 11, 2008

ಜೇನುಗವನಗಳು

ಮಿನಿಗವನ, ಹನಿಗವನ, ಚುಟುಕ ಎಂದು ಕರೆಯಿಸಿಕೊಳ್ಳುವ ಬರಹಗಳೆಂದರೆ ನನಗೆ ಬಲು ಇಷ್ಟ. ಅದನ್ನು ಬರೆಯುವವರು ಅತೀಬುದ್ದಿವಂತರು ಎಂಬುದು ನನ್ನ ನಂಬಿಕೆ. ಪುಟಗಟ್ಟಲೆ ಕೊರೆದು ಒಂದು ಸಾಲಿನ ಅರ್ಥಹೇಳುವ ಬರಹಗಾರ ನಾಲ್ಕೇ ನಾಲ್ಕು ಸಾಲಿನಲ್ಲಿ ಒಳ್ಳೆಯ ಅರ್ಥ ತರುವ ಹಾಗೂ ಮುಗುಳ್ನಗೆ ಮೂಡಿಸುವ ಇವರೆದುರು ಪೇಲವನಾಗಿಬಿಡುತ್ತಾನೆ. ದುಂಡಿರಾಜ್ ಒಮ್ಮೆ ಬರೆದಿದ್ದರು
ಹುಡುಗ ಹೇಳಿದ:
ಪ್ರಿಯೆ ಹೃದಯ ಶ್ರೀಮಂತಿಕೆಯಲ್ಲಿ ನಾನು ಟಾಟಾ ಬಿರ್ಲಾ
ಹುಡುಗಿ ಹೇಳಿದಳು
ಸರಿ ಹಾಗಾದರೆ ನಾನು ಟಾಟಾ ಬರ್ಲಾ.
ಇಷ್ಟು ಸಾಲುಗಳಲ್ಲಿ ಎಂಥಹ ಮಜ ಇದೆ ನೋಡಿ. ಕವನ ಕವಿತೆಗಳಾದರೆ ಅರ್ಥಮಾಡಿಕೊಳ್ಳಲು ತಾಕತ್ತಿರಬೇಕು. ಅದನ್ನು ಆಳವಾಗಿ ಅಗಲವಾಗಿ ಪರಾಮರ್ಶಿಸಿ ಅಂತಿಮವಾಗಿ ಇದು ಹೀಗೆ ಅರ್ಥವಿರಬಹುದೇನೋ ಎಂಬ ತೀರ್ಮಾನಕ್ಕೆ ಬರಬೇಕಾಗುತ್ತದೆ. ಆದರೆ ಈ ಹನಿಯಂತಿರುವ ಹನಿಗವನ ಮಾತ್ರಾ ಪಾಮರರಿಗಾಗಿಯೇ ಇರುವುದು. ಓದಿದಕೂಡಲೇ ನಕ್ಕುಬಿಡಬಹುದು. ಡಿವಿಜಿ ಯವರ ಮಂಕುತಿಮ್ಮನ ಕಗ್ಗವೂ ಕೂಡ ನಾಲ್ಕೇ ಸಾಲು ಆದರೆ ಅರ್ಥಸಹಿತ ಕಗ್ಗವನ್ನು ಕೊಳ್ಳದಿದ್ದರೆ ನಮ್ಮನಿಮ್ಮಂತಹ ವರಿಗೆ ಅದು ತಿಳಿಯುವುದೇ ಇಲ್ಲ.
ಎಲ್ಲವೂ ಶೂನ್ಯದಿಂದಲೇ..
ಇದ್ದರೆ ಸಂಸಾರ
ಇಲ್ಲದಿದ್ದರೆ ಸಸಾರ.
ಮೂರೇ ಸಾಲಿನ ಈ ಚುಟುಕ ಪಟಕ್ಕನೆ ಅದೆಂತಹ ಘನಗಂಭೀರವಾದ ಅರ್ಥವನ್ನು ಕೊಡುತ್ತದೆ. ಹನಿಗವನದಲ್ಲಿ ನಗುಮೂಡಿಸುವ ಹನಿಗಳೇ ಹೆಚ್ಚು. ಸಣ್ಣದಾಗಿ ಚಮಕ್ ಕೊಡುವ ಸಾಹಿತ್ಯವೂ ಇದೆಯೆನ್ನಿ
ಹುಡುಗ ಹೇಳಿದ :
ಕನ್ನಡವೆಂದರೆ ಕುಣಿದಾಡುವುದೆನ್ನೆದೆ
ಹುಡುಗಿ ಹೇಳಿದಳು :
ಎನ್ನದಿದ್ದರೂ .............................!?
ಒಂದಿಷ್ಟು ಚುಕ್ಕಿ ನಂತರ ಆಶ್ಚರ್ಯಸೂಚಕ ಹಾಗೂ ಪ್ರಶ್ನಾರ್ಥಕದ ಚಿಹ್ನೆ. ಅದರ ಅರ್ಥ ಅಲ್ಲೆನೋ ಸಣ್ಣ ಡಬ್ಬಲ್ ಮೀನಿಂಗ್ ಇದೆ ಅಂತ ನಮಗೆ ಓದಿದ ಕೂಡಲೆ ತಿಳಿದು ಕಿರುನಗೆ ಮೂಡುತ್ತದೆ. ಇವತ್ತಿನ ಕಾಲದಲ್ಲಿ ಧಾವಂತದ ಬದುಕಿನಲ್ಲಿ ದುಡಿಯುವ ಭರಾಟೆಯಲ್ಲಿ ಗಂಟೆಗಟ್ಟಲೆ ಓದುತ್ತಾ ಕೂರುವುದರಲ್ಲಿ ಅರ್ಥ...!ವಿಲ್ಲ ಎಂದು ಈ ಹನಿಗವನ ಹುಟ್ಟಿಕೊಂಡಿತೇನೋ ಅಂತ ಅನ್ನಿಸುತ್ತದೆ. ಹಾಗೆಯೇ ನೂರಾರು ಈ ಹನಿಗವನಗಳ ಸೃಷ್ಟಿಕರ್ತರೂ ಹುಟ್ಟಿಕೊಂಡಿದ್ದಾರೆ. ಜೈ ಹನಿಗವನ.

Wednesday, December 10, 2008

ಹರೆ ಕೃಷ್ಣಾ ಹರೆ ರಾಮ

ಆತನ ಈಗಿನ ಹೆಸರು ಕುಲಶೇಖರ. ವಯಸ್ಸು ಇಪ್ಪತ್ತೈದು ಇಪ್ಪತ್ತಾರು ಇರಬಹುದು. ಇಸ್ಕಾನ್ ನ ಸನ್ಯಾಸಿ ಆತ. ಆತ ಓದಿದ್ದು ಡೆಂಟಲ್ . ಕೋರ್ಸ್ ಮುಗಿಯುತ್ತಿದ್ದಂತೆ ಆಧ್ಯಾತ್ಮದ ಕಡೆ ಎಳೆಯಿತಂತೆ ಹಾಗಾಗಿ ಆತ ಇಸ್ಕಾನ್ ಸೇರಿಕೊಂಡ. ತಂದೆತಾಯಿಗೆ ಒಬ್ಬನೇ ಮಗನಾದ ಆತನಿಗೆ ಮನೆಯಿಂದ ಇಸ್ಕಾನ್ ಸೇರಬೇಡ ಎಂಬ ಒತ್ತಡ ಮನವಿ ಬಹಳ ಇತ್ತಂತೆ. ಆದರೆ ಆತನಿಗೆ ಇಹದ ಬಗ್ಗೆ ಆಸಕ್ತಿಯೇ ಇರಲಿಲ್ಲ. ಎಲ್ಲವನ್ನೂ ಬಿಟ್ಟು "ಹರೆ ಕಿಷನಾ.. ಹರೆ ರಾಮ ಕಿಷ್ನ ಕಿಷ್ನ ಹರೆ. ಹರೇ..." ತುಂಬಾ ಇಷ್ಟವಾಯಿತು. ಎರಡೂ ಕೈಗಳನ್ನು ಮೇಲಕ್ಕೆತ್ತಿ ಕುಣಿಯುತ್ತಾ ಭಜನೆ ಮಾಡುತ್ತಾ ಮನಸ್ಸಿನಲ್ಲಿ ಕೃಷ್ಣನನ್ನು ಆಹ್ವಾನಿಸಿಕೊಳ್ಳುವ ಆ ಮಜ ನಮ್ಮ ಕುಲಶೇಖರಿನಿಗೆ ತಾನು ಓದಿದ್ದ ಎಂ.ಬಿ.ಬಿ.ಎಸ್ ನ್ನೂ ಮರೆಸುವ ತಾಕತ್ತು ಇತ್ತು. ಹಾಗಾಗಿ ಆತ ಇಸ್ಕಾನಿ. ನನಗೆ ಆತ ಒಂದು ಟ್ರೈನಿಂಗ್ ಪ್ರೋಗ್ರಾಂ ನಲ್ಲಿ ಸಿಕ್ಕಿದ್ದ. ನೋಡಲು ಮುದ್ದುಮುದ್ದಾಗಿದ್ದ ಆತ ಎಂತಹವರನ್ನೂ ಸೆಳೆಯುವ ಮುಖಾರವಿಂದ ಹೊಂದಿದ್ದ. ಆದರೆ ಸುಮ್ಮಸುಮ್ಮನೆ ಮಾತನಾಡಲಾರ. ಮೂರುದಿನದ ಕೃಷಿ ಟ್ರೈನಿಂಗ್ ನಲ್ಲಿ ಎರಡು ದಿನ ಆತನೊಟ್ಟಿಗೆ ಮುಗುಳ್ನಗೆಯ ವಿನಿಮಯದೊಂದಿಗೆ ಕಳೆದೆ. ನನಗೋ ಆತನೊಡನೆ ಮಾತನಾಡುವ ಹಂಬಲ. ಆದರೆ ಆತನಿಗೆ ಇಹದ ಬಗ್ಗೆ ಆಸಕ್ತಿಯೇ ಇಲ್ಲ ಯಾವಾಗಲೂ ಕೈಯಲ್ಲಿ ಜಪಮಣಿ ಬಾಯಲ್ಲಿ ಕೃಷ್ಣ ಕೃಷ್ಣ ಮಿಣಿಮಿಣಿ. ಅಂತೂ ಇಂತು ಎರಡು ದಿನದ ಮುಗಳ್ನಗು ಮೂರನೆಯ ದಿನ ಪ್ರಯೋಜನಕ್ಕೆ ಬಂದಿತ್ತು. ಬೆಳಿಗ್ಗೆ ತಿಂಡಿಯ ಸಮಯದಲ್ಲಿ ಆತ ವರಾಂಡದಲ್ಲಿ ಅಡ್ದಾಡುತ್ತಿದ್ದ. ತಿಂಡಿ ತಿನ್ನುತ್ತಿದ್ದ ನನಗೆ ನೀರಿನ ಅವಶ್ಯಕತೆ ಇತ್ತು. ಆದರೆ ಒಂದು ಕೈಯಲ್ಲಿ ಬಟ್ಟಲು ಇರುವ ಕಾರಣ ನಲ್ಲಿ ತಿರುಪದಾದೆ. ಆಗ ಆತ ಸಹಾಯಕ್ಕೆ ಬಂದ. ನೀರು ಲೋಟ ತುಂಬಿದ ನಂತರ ತ್ಯಾಂಕ್ಸ್ ಎಂದೆ ಆತ ಕೃಷ್ಣಾರ್ಪಣ ಎಂದ. ನನಗೆ ಆತನ ಕೃಷ್ಣ ಭಕ್ತಿಯನ್ನು ಕಂಡು ಅಚ್ಚರಿಯಾಯಿಯಿತು. ಹಗೂರ ಮಾತಿಗೆಳೆದ. ಪೂರ್ವಾಶ್ರಮದ ಬಗ್ಗೆ ಚುಟುಕಾಗಿ ಮುಗಿಸಿ ಅದರ ಬಗ್ಗೆ ಕೇಳಬೇಡಿ ಎಂದ. ನಿಮಗೆ ತಿಂಡಿ ಆಯಿತಾ ಎಂದೆ. ಇಲ್ಲ ಕೃಷ್ಣಾರ್ಪಣವಾದ ಮೇಲೆ ಕೃಷ್ಣನಿಗೆ ನೈವೇದ್ಯವಾದ ಮೇಲೆ ನಮಗೆ ಆಹಾರ ಎಂದ ಆತ. ಹಸಿವೆ ಯಾವ್ಗುವುದಿಲ್ಲವೇ? ಎಂದೆ. ಆ ಪರಮಾತ್ಮ ಕೃಷ್ಣನ ಆಸೆ ಹಾಗಿದ್ದರೆ ಹಾಗೆಯೇ ಆಗಲಿ ಎಂದ. ಮತ್ತೆ ಜಪಮಣಿ ತಿರುವುತ್ತಾ ಮಿಣ ಮಿಣ ಮುಂದುವರೆಸಿದ. ನನಗೆ ಆಯಾಚಿತವಾಗಿ ಪ್ರಶ್ನೆಯೊಂದು ಅಕಸ್ಮಾತ್ ಕೇಳಿ ಹೋಯಿತು. " ಈ ಕಾಲದಲ್ಲಿಯೂ ಕೃಷ್ಣ ಅಂತ ಒಬ್ಬ ಇದ್ದಾನೆ ಆತ ದೇವರು ಅವನು ಇಲ್ಲೆಲ್ಲೋ ನಿಂತು ನಿಮ್ಮನ್ನು ನೋಡುತ್ತಿದ್ದಾನೆ, ನಿಮ್ಮ ಆಶಯ ಈಡೇರಿಸುತ್ತಾನೆ ಎಂಬ ನಂಬಿಕೆ ನಿಮ್ಮಲ್ಲಿದೆಯಾ?" ಒಮ್ಮೆ ಆತನ ಮುಖ ಗಂಭೀರವಾಯಿತು. ಎರಡೂ ಕಣ್ಣಿನಿಂದ ದಳದಳ ನೀರಿಳಿಯಿತು. ಕಿವಿಯನ್ನು ಮುಚ್ಚಿಕೊಂಡು " ಹೇ ಪರಮಾತ್ಮ ಇಂತಹಾ ವಾಕ್ಯಗಲನ್ನು ನನ್ನ ಈ ಕಿವಿಗಳು ಕೇಳಬೇಕಾಯಿತಲ್ಲ " ಎಂದು ಹೇಳಿ ಮೌನವಾದ. ನಂತರ ನನಗೆ ಆ ಪ್ರಶ್ನೆ ಕೇಳಬಾರದಿತ್ತು ಅಂತ ಅನ್ನಿಸಿತು. ಆದರೆ ಕಾಲ ಮಿಂಚಿಹೋಗಿತ್ತು. ಕ್ಷಮಿಸಿ ನಿಮಗೆ ಈ ಪ್ರಶ್ನೆ ಕೇಳಿದ್ದಕ್ಕೆ ಎಂದೆ. ಮರುಕ್ಷಣ ಆತ" ಛೆ ಪರವಾಗಿಲ್ಲ, ಇದೂ ಕೂಡ ಆ ಪರಮಾತ್ಮನ ಪರೀಕ್ಷೆ, ಇದರ ಅರ್ಥ ನಾನು ಇನ್ನೂ ಆಧ್ಯಾತ್ಮಿಕ ಸಾಧನೆ ಮಾಡಬೇಕಿದೆ ಎಂದು ಮಿಣಮಿಣ ಮುಂದುವರೆಸಿದ,

ಇಂತಹ ಒಂದು ಪರಮ ಭಕ್ತಿಯ ಜನರನ್ನು ಇಲ್ಲಿಯವರೆಗೆ ನಾನು ನೊಡಿರಲೇ ಇಲ್ಲ. ನನಗೂ ಆಸೆಯಾಗುತ್ತದೆ. ಅಂತಹ ನಿರ್ಮಲ ನಿಸ್ವಾರ್ಥ ಭಕ್ತಿಯನ್ನು ಅನುಭವಿಸಬೇಕು. ಅದರಲ್ಲಿ ಅಂತಹ ಮಜ ಇದೆ ಎಂದು ಅನ್ನಿಸುತ್ತದೆ. ಮರುಕ್ಷಣ ನನ್ನಂತಹ ಮನುಷ್ಯನಿಗೆ ಅದು ಆಗದು ಎಂದು ಅನ್ನಿಸಲು ಶುರುವಾಗಿಬಿಡುತ್ತದೆ. ನಂಬಿಕೆಟ್ಟವರಿಲ್ಲವೋ ಅಂಬುದು ನಿಜ ಆದರೆ ನಂಬಲು ಆಗದಲ್ಲ ಅದು ಬಹಳ ಕಷ್ಟ. ನಂಬಲೇಬೇಕು ಎಂದು ಹೊರಟಾಗಲೆಲ್ಲ ಸಾವಿರ ಸಾವಿರ ತರ್ಕ ಕುತರ್ಕದ ಪ್ರಶ್ನೆಗಳು ಮೂಡಿ ಯಡವಟ್ಟಾಗಿಬಿಡುತ್ತದೆ.