Friday, December 7, 2012

ಶಾಲೆಯಲ್ಲೊಂದು "ಶ್ವಾನ" ಪ್ರಾರ್ಥನೆ




ಮಕ್ಕಳ ಶಾಲೆಗಳು ಆರಂಭವಾಗುವುದು ಪ್ರಾರ್ಥನೆಯಿಂದ. "ಸ್ವಾಮಿ ದೇವನೆ ಲೋಕಪಾಲನೆ.." ಜಯ ಭಾರತ ಜನನಿಯೆ ತನುಜಾತೆ" ಜನಗಣಮನ ಎಂಬ ರಾಷ್ಟ್ರ ಗೀತೆ ಇರಬಹುದು ಒಟ್ಟಿನಲ್ಲಿ ಆರಂಭ ಪ್ರಾರ್ಥನೆಯಿಂದಲೆ. ಇದು ಎಲ್ಲ ಶಾಲೆಯ ಆರಂಭದ ಕ್ಷಣಗಳು. ಘಂಟೆ ಭಾರಿಸಿದ ತಕ್ಷಣ ಸಾಲಿನ ಸರತಿಯಲ್ಲಿ ನಿಲ್ಲುವ ಮಕ್ಕಳು ತಮ್ಮದೇ ಆದಂತಹ ಮುದ್ದು ಭಾಷೆಯಲ್ಲಿ ಹೇಳುವ ಸಾಲುಗಳು ಎಲ್ಲರ ಗಮನ ಸೆಳೆಯುತ್ತದೆ. ಅವೆಲ್ಲ ಸಹಜ ಬಿಡಿ, ಆದರೆ ಕಳೆದ ಎರಡು ವರ್ಷಗಳಿಂದ ಕಾರ್ಗಲ್ ಸಮೀಪದ ಲಿಂಗನಮಕ್ಕಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶೇಷ ನಡೆಯುತ್ತಿದೆ ಅದು ಶ್ವಾನ ಪ್ರಾರ್ಥನೆ.
ಇದು ವಿಶೇಷವಾದಂತಹ ಘಟನೆ. ಬೆಳಿಗ್ಗೆ ಹತ್ತು ಗಂಟೆಗೆ ಸರಿಯಾಗಿ ಶಾಲಾಗಂಟೆ ಭಾರಿಸುತ್ತಿದ್ದಂತೆ ಎರಡು ನಾಯಿಗಳು ಶಾಲೆಯ ಮಕ್ಕಳ ನಡುವೆ ದಾರಿ ಮಾಡಿಕೊಂಡು ಶಾಲೆಯ ಒಳ ಆವರಣ ಪ್ರವೇಶಿಸುತ್ತವೆ. ಮುಖ್ಯೋಪಾಧ್ಯಾಯರಾದ ಬಸವರಾಜ್ ಕ್ಲಾಸ್ ಲೀಡರ್ ಹುಡುಗನನ್ನು ವೇದಿಕೆಗೆ ಕರೆದು ಮಕ್ಕಳ ಪ್ರಾರ್ಥನೆಗೆ ಕಾಷನ್ ನೀಡಲು ಹೇಳುತ್ತಿದ್ದಂತೆ ಸೋನು ಹಾಗು ಗುಗ್ಗು ಎಂಬ ಎರಡು ಶ್ವಾನಗಳೂ ಕೂಡ ವೇದಿಕೆಯನ್ನು ಏರುತ್ತವೆ. ಮಕ್ಕಳು ಪ್ರಾರ್ಥನೆ ಶುರು ಮಾಡಿದ ಒಂದೆರಡು ಕ್ಷಣದ ನಂತರ ಸೋನು ಎಂಬ ಶ್ವಾನವೂ ತನ್ನದೇ ಆದ ಸ್ವರದಲ್ಲಿ ಪ್ರಾರ್ಥನೆಗೆ ತೊಡಗುತ್ತದೆ. ಶ್ವಾನ ಪ್ರಾರ್ಥನೆಯೆಂದರೆ ಕೇವಲ ನಾಯಿಯ ಊಳಿಡುವಿಕೆ ಅಲ್ಲ ಸ್ವಲ್ಪ ಮಟ್ಟಿಗಿನ ದನಿಯ ಏರಿಳಿತವನ್ನೂ ಮಾಡುತ್ತದೆ ಸೋನು ಎಂಬ ಶ್ವಾನ. ಗುಗ್ಗು ಎಂಬ ಶ್ವಾನ ಹಿರಿಯಣ್ಣ ಸೋನುವಿಗೆ ಸಾಥ್ ನೀಡುತ್ತದೆ. ರಾಷ್ಟಗೀತೆ ಮುಗಿದು ವರ್ತಮಾನ ಪತ್ರಿಕೆ ಓದಲು ಮಕ್ಕಳು ಶುರುವಿಟ್ಟುಕೊಂಡನಂತರ ಎರಡು ಶ್ವಾನಗಳೂ ವೇದಿಕೆಯಿಂದ ನಿರ್ಗಮಿಸುತ್ತವೆ. ಕೆಲಕಾಲ ಮಕ್ಕಳ ಸಾಲಿನ ನಡುವೆ ಓಡಾಡಿ ನಂತರ ಬಿಸಿಯೂಟ ಕ್ಕೆ ಮತ್ತೆ ಹಾಜರ್, ಅಲ್ಲಿಯತನಕ ಶಾಲೆಯ ಆವರಣದಲ್ಲಿ ಸುತ್ತಾಡುತ್ತಲೋ ಲಿಂಗನಮಕ್ಕಿಯ ಬೀದಿ ಸುತ್ತುತ್ತಲೋ ಇರುತ್ತವೆ ಎನ್ನುತ್ತಾರೆ ಶಾಲಾ ಶಿಕ್ಷಕಿ ಸಾವಿತ್ರಿ ಅಶೋಕ್. ಇದು ಯಾವ ಜನ್ಮದ ಋಣವೋ ಗೊತ್ತಿಲ್ಲ ಎನ್ನುತ್ತಾರೆ ಬಸವರಾಜ್. ಕಳೆದ ಎರಡು ವರ್ಷದಿಂದ ನಿರಂತರವಾಗಿ ಪ್ರಾರ್ಥನೆಯಲ್ಲಿ ತೊಡಗಿಕೊಂಡಿರುವ ಈ ಶ್ವಾನ ಜೋಡಿಯ ವಿಚಿತ್ರ ವರ್ತನೆ ಅರ್ಥವಾಗುವುದು ಕಷ್ಟಕರ.

ಬಸವರಾಜ್ ಫೋನ್:೭೭೯೫೨೨೮೨೬೧

Monday, December 3, 2012

ಬದುಕನ್ನು ಬಂಗಾgವಾಗಿಸಿದ ವೀಳ್ಯದೆಲೆ


"ಏಲೆ ಅಡಿಕೆ ಸುಣ್ಣ ಸೇರಿದರೆ ಕೆಂಬಣ್ಣ" ಎಂಬ ಹಾಡನ್ನು ನೀವು ಕೇಳಿರುತ್ತೀರಿ. ಗೋಪಾಲಕೃಷ್ಣ ಅಡಿಗರು ತಮ್ಮ ಭಾಷಣವೊಂದರಲ್ಲಿ "ಅಡಿಕೆ ತಿಂದರೆ ಸೊಕ್ಕು ಬರುತ್ತದೆ ಅಂತ ಕೇಳಿದ್ದೆ ಆದರೆ ಬೆಳೆದರೂ ಬರುತ್ತದೆ ಎಂದು ಗೊತ್ತಿರಲಿಲ್ಲ" ಎಂಬ ಮಾತನ್ನು ಹೇಳಿದ್ದರು. ಅಡಿಕೆಗೆ ಒಳ್ಳೆಯ ದರ ಬಂದಾಗ ಹೇಳಿದ ಮಾತದು. ಇನ್ನು ಸುಣ್ಣವೆಂಬ ಬಿಳೀ ಬಣ್ಣದ ವಿಷಯ ಎಲ್ಲರಿಗೂ ತಿಳಿದದ್ದೇ. ಈ ಮೂರನ್ನೂ ನಂಬಿ ಬದುಕುತ್ತಿರುವ ಕುಟುಂಬಗಳ ಸಂಖ್ಯೆ ವಿಫುಲವಾಗಿದೆ. ಆದರೆ ೭೦ ವರ್ಷಗಳಿಂದ ವೀಳ್ಯದೆಲೆಯನ್ನೇ ನಂಬಿ ಬದುಕುಬಂಗಾರವನ್ನಾಗಿಸಿಕೊಂಡ ಕುಟುಂಬಗಳು ತುಂಬಾ ಅಪರೂಪ. ಅಂತಹ ಕುಟುಂಬ ತಾಳಗುಪ್ಪ ಸಮೀಪದ ಕೆರೇಕೈ ಎಂ ಶ್ರೀಪಾದರವರದ್ದು.

ಕಳೆದ ಎಪ್ಪತ್ತು ವರ್ಷಗಳಿಂದ ನಿರಂತರವಾಗಿ ವೀಳ್ಯದೆಲೆ ಬೆಳೆದು, ಅವುಗಳನ್ನು ಜೋಡಿಸಿ ತಾಳಗುಪ್ಪ ಹಾಗೂ ಸಾಗರದ ಸಂತೆ ಪೆಟೆಯಲ್ಲಿ ಕುಳಿತು ಮಾರಾಟ ಮಾಡಿ ಬಂದ ಹಣದಿಂದ ಸುಂದರ ಬದುಕು ಕಟ್ಟಿಕೊಂಡ ಕುಟುಂಬದ ಎರಡನೇ ತಲೆಮಾರಿನ ವ್ಯಕ್ತಿ ಶ್ರೀಪಾದ. ಶ್ರೀಪಾದರವರ ತಂದೆ ಮಹಬಲೇಶ್ವರಯ್ಯ ೧೯೩೫ ನೇ ಇಸವಿಯಲ್ಲಿ ವೀಳ್ಯದೆಲೆ ಬೆಳೆಯನ್ನು ಆಯ್ಕೆ ಮಾಡಿಕೊಂಡರು. ಆಣೆ ಪಾವಲಿಗಳ ಅಂದಿನ ಕಾಲದಲ್ಲಿ ಅಡಿಕೆಗೆ ಸೂಕ್ತ ಮಾರುಕಟ್ಟೆ ಇಲ್ಲದ ಹಾಗೂ ನಿಯಂತ್ರಣಕ್ಕೆ ಬಾರದ ವ್ಯಾಪಕ ಕೊಳೆರೋಗದ ಕಾರಣ ಹಾಗೂ ಅತೀ ಸಣ್ಣ ಹಿಡುವಳಿಯ ಕಾರಣದಿಂದ ಅವಿಭಕ್ತ ಕುಟುಂಬದ ಪೋಷಣೆಗೆ ಬೇರೆಯ ಆದಾಯ ಮೂಲವನ್ನು ಹುಡುಕಿಕೊಳ್ಳುವುದು ಮಹಬ್ಜಲೇಶ್ವರಯ್ಯ ನವರಿಗೆ ಅನಿವಾರ್ಯ ವಾಗಿತ್ತು. ಅಂದು ಅವರು ಆಯ್ಕೆ ಮಾಡಿಕೊಂಡಿದ್ದು ವಿಳ್ಯದೆಲೆ. ಮನೆಯ ತೋಟದಲ್ಲಿ ಬೆಳೆದ ವೀಳ್ಯದೆಲೆಯನ್ನು ಕೊಯ್ದು ಜೊಡಿಸಿ ಆರು ಕಿಲೋಮಿಟರ್ ದೂರದ ತಾಳಗುಪ್ಪದ ಸಂತೆಗೆ ತಲೆಹೊರೆಯ ಮೇಲೆ ಹೊತ್ತೊಯ್ದು ಸಂಜೆಯ ತನಕ ಸಂತೆಯ ಪೇಟೆಯಲ್ಲಿ ಕುಳಿತು ಮಾರಾಟ ಮಾಡಿ ಬಂದ ಹಣದಿಂದ ಸಂಸಾರ ತೂಗಿಸುತ್ತಿದ್ದರು. ಕಾಲಚಕ್ರ ಉರುಳಿದಂತೆ ವಯೋಮಾನದ ಕಾರಣದಿಂದ ಮಹಭಲೇಶ್ವರಯ್ಯ ವೀಳ್ಯದೆಲೆಯ ವೃತ್ತಿಯಿಂದ ನಿವೃತ್ತರಾದರು. ಐದು ಜನ ಗಂಡುಮಕ್ಕಳಲ್ಲಿ ನಾಲ್ಕು ಜನ ಬೇರೆ ಊರುಗಳಿಗೆ ಜೀವನಕ್ಕಾಗಿ ಹೋಗಿದ್ದರಿಂದ ಅಲ್ಪ ಹಿಡುವಳಿಯ ಸಂಸಾರದ ನೊಗ ಶ್ರಿಪಾದರವರ ಹೆಗಲಮೇಲೆ ಬಿತ್ತು. ತಂದೆಯವರ ಕಾಲದಲ್ಲಿಯೇ ಅಲ್ಪ ಹಿಡುವಳಿ ಇನ್ನು ಅದರಲ್ಲಿ ಐದು ಹಿಸ್ಸೆ ಮಾಡಿದರೆ ಜೀವನ ನಿರ್ವಹಿಸುವ ವಿಧಾನದ ಬಗ್ಗೆ ಚಿಂತಿಸಿದ ಶ್ರೀಪಾದ ತಂದೆಯವರ ವೃತ್ತಿಗೆ ಇನ್ನಷ್ಟು ವಿಸ್ತಾರ ನಿಡುವ ಆಲೋಚನೆಗೆ ಇಳಿದರು. ಇಪ್ಪತ್ತು ವರ್ಷದ ಹಿಂದೆ ಅವರು ತೆಗೆದುಕೊಂಡ ನಿರ್ಧಾರ ಇಂದು ಅವರನ್ನು ಆರ್ಥಿಕ ಸ್ವಾವಲಂಬಿಯನ್ನಾಗಿಸಿದೆ.
ಶ್ರಿಪಾದವರಿಗೆ ೩೦ ಗುಂಟೆ ಜಮೀನು, ಅದರಲ್ಲಿ ಐದು ಭಾಗವಾದರೆ ಇವರದ್ದು ಆರು ಗುಂಟೆ. ಇವೆಲ್ಲಾ ಲೆಕ್ಕಾಚಾರವನ್ನು ಮಾಡಿದ ಅವರು ವಿಳ್ಯದೆಲೆಯ ವ್ಯಾಪಾರವನ್ನು ತಾಳಗುಪ್ಪ ಸಂತೆಯಿಂದ ಸಾಗರದ ಸಂತೆಗೂ ವಿಸ್ತರಿಸುವ ನಿರ್ಧಾರ ಕೈಗೊಂಡರು. ಅಕ್ಕಪಕ್ಕದ ತೊಟದ ಕೃಷಿಕರಿಗೂ ವೀಳ್ಯದೆಲೆಬಳ್ಳಿ ಅಡಿಕೆ ಮರಕ್ಕೆ ಹಚ್ಚುವ ಹುರುಪು ನೀಡಿ, ವೀಳ್ಯದೆಲೆ ಕೊಯ್ದು ಮಾರಾಟದ ಹೊಣೆಯನ್ನು ತಾವು ಹೊತ್ತುಕೊಂಡರು. ತಮ್ಮ ತೋಟದಲ್ಲಿ ೧ ರಿಂದ ೨ ಸಾವಿರ ಸಿಗುತ್ತಿದ್ದ ವೀಳ್ಯದೆಲೆ ಹತ್ತು ಸಾವಿರಕ್ಕೆ ಏರಿತು. ಅಲ್ಲಿಂದ ನಿಧಾನವಾಗಿ ಇಪ್ಪತ್ತು ಸಾವಿರದ ಸಂಖ್ಯೆ ತಲುಪಿತು. ಅದರಿಂದಾಗಿ ಶನಿವಾರ ತಾಳಗುಪ್ಪ ಸಂತೆಗೆ ಸೀಮಿತವಾಗಿದ್ದ ಶ್ರೀಪಾದ ಗುರುವಾರದ ಸಾಗರದ ಸಂತೆಗೂ ಲಗ್ಗೆ ಇಟ್ಟರು. ಆದಾಯ ಹೆಚ್ಚುತ್ತಿದ್ದಂತೆ ಕೆಲಸದ ಒತ್ತಡವೂ ಹೆಚ್ಚಿತು. ೩೦ ಗುಂಟೆ ಜಮೀನಿನಲ್ಲಿ ಐದು ಪಾಲು ಮಾಡುವದಕ್ಕಿಂತ ಇನ್ನೆರಡು ಎಕರೆ ತೋಟ ಮಾಡಿದರೆ ಹೇಗೆ ಎಂಬ ಆಲೋಚನೆಗೆ ಪುಷ್ಠಿ ನೀಡಿ ಅನುಷ್ಠಾನ ಗೊಳಿಸಿದ ಶ್ರೀಪಾದ ಎಲ್ಲ ಸಹೋದರರಿಗೂ ತಮ್ಮ ಶ್ರಮದಿಂದ ೩೦ ಗುಂಟೆ ತೋಟ ಮಾಡಿಕೊಟ್ಟರು. ಅಲ್ಲಿಗೆ ತಮ್ಮ ಆರ್ಥಿಕ ಭದ್ರತೆಯ ಜತೆ ಸಹೋದರರ ಆರ್ಥಿಕ ಭದ್ರತೆಗೂ ವೀಳ್ಯದೆಲೆಯನ್ನು ಆಧರಿಸಿದರು.
ನೂರು ವೀಳ್ಯದೆಲೆಯ ಒಂದು ಕಟ್ಟಿಗೆ ಇಪ್ಪತ್ತು ವರ್ಷದ ಹಿಂದೆ ೨ ರೂಪಾಯಿ ಇಂದು ಇಪ್ಪತ್ತು ರೂಪಾಯಿ. ವಾರವೊಂದಕ್ಕೆ ಸಾಗರ ಹಾಗೂ ತಾಳಗುಪ್ಪದ ಎರಡು ಸಂತೆಯಿಂದ ಐದು ಸಾವಿರ ರೂಪಾಯಿಗಳನ್ನು ತಿಂಗಳಿಗೆ ಇಪ್ಪತ್ತು ಸಾವಿರ ರೂಪಾಯಿಗಳನ್ನು ಸಂಪಾದಿಸುವ ಅವರು, ಖರ್ಚು ವೆಚ್ಚ ಕಳೆದು ಹದಿನೈದು ಸಾವಿರ ಮಿಗಿಸುತ್ತಾರೆ. ಈ ತರಹದ ಅವರ ನಿರಂತರ ಶ್ರಮದ ಪ್ರತಿಫಲ ಈಗ ಕಣ್ಣೆದುರಿಗಿದೆ. ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ನೀಡಿದ್ದಾರೆ, ಸೈಕಲ್ ನಿಂದ ಆರಂಭವಾದ ಅವರ ವೇಗ ಇಂದು ಮೋಟರ್ ಸೈಕಲ್ ಗೆ ಏರಿದೆ. ಗುಡಿಸಲ ಮನೆಯಿಂದ ಸುವ್ಯವಸ್ಥಿತ ಸಕಲ ಸೌಲಭ್ಯದ ಮನೆ ಇದೆ. ಇವಕ್ಕೆಲ್ಲಾ ಪತ್ನಿ ಗೀತಾ ಹಾಗು ಮಕ್ಕಳು ಮತ್ತು ತಾಯಿ ವೀಳ್ಯದೆಲೆ ಜೋಡಿಸುವಂತಹ ಕೆಲಸಕ್ಕೆ ತಮ್ಮನ್ನು ತೊಡಗಿಸಿಕೊಂಡಿದ್ದೂ ಕಾರಣ ಎನ್ನುತ್ತಾರೆ ಶ್ರೀಪಾದ.
ಲಕ್ಕವಳ್ಳಿ,ಹಾಗೂ ನಾಗವಳ್ಳಿ ತಳಿಯ ವೀಳ್ಯದೆಲೆ ಮಲೆನಾಡಿನ ಅಡಿಕೆ ತೋಟಕ್ಕೆ ಸೂಕ್ತ ಎನ್ನುವ ಶ್ರೀಪಾದ, ಮಾರುಕಟ್ಟೆಯ ಏರಿಳಿತಗಳಿಗೆ ಚಿಂತಿಸದೆ ನಿರಂತರ ಕೆಲಸದಲ್ಲಿ ನಂಬಿಕೆ ಇಟ್ಟರೆ ಪ್ರತಿಫಲ ಖಂಡಿತ ಎನ್ನುತ್ತಾರೆ. ತಾಳಗುಪ್ಪ ಹಾಗೂ ಸಾಗರದ ಸಂತೆಯಲ್ಲಿ "ಎಲೆಭಟ್ರು" ಎಂದು ಜನಜನಿತವಾಗಿರುವ ಇವರು ಇರುವ ಜಾಗದಲ್ಲಿಯೇ ಆದಾಯ ನಿರ್ಮಿಸಿಕೊಂಡು ಬದುಕು ಕಟ್ಟಿಕೊಂಡು ಬಾಳು ಬಂಗಾರವಾಗಿಸಿಕೊಂಡವರ ಸಾಲಿಗೆ ಸೇರಿ ಉದ್ಯೋಗ ವಿಲ್ಲ ಎಂದು ಅಲೆಯುವ ಜನರಿಗೆ ಮಾರ್ಗದರ್ಶಿಯಾಗಿದ್ದಾರೆ

Tuesday, November 6, 2012

ಸಿಕ್ಕಿತೊಂದು ನವಿಲು ಮರಿ

ನವಿಲು ಎಂದಾಕ್ಷಣ ನಾಟ್ಯದ ನೆನಪು ಸಹಜ. ರಾಷ್ಟ್ರಪಕ್ಷಿ ನವಿಲಿನ ಕುರಿತು ವರ್ಣಿಸಿದ ಕವಿಗಳು ಹಲವಾರು. "ಗುಡುಗುಡು ಶಬ್ಧವು ಕೇಳಿದ ಮಾತ್ರಕೆ ಮಯೂರ ನಾಟ್ಯವನಾಡೀತೆ..? ಎಂದು ಕವಿಯೊಬ್ಬ ಮಯೂರ ನರ್ತಿಸಲು ಪ್ರಕೃತಿಯ ಗುಡುಗು ಸಿಡಿಲುಗಳೇ ಬೇಕು ಎಂಬ ಅರ್ಥದಲ್ಲಿ ವರ್‍ಣಿಸಿ ನವಿಲಿನ ಮಟ್ಟ ಹೆಚ್ಚಿಸಿದ್ದಾನೆ. ಹೀಗೆ ಹತ್ತು ಹಲವು ಹೆಗ್ಗಳಿಕೆಯನ್ನು ಗಮನಿಸಿ ನಾವು ಅದನ್ನು ರಾಷ್ಟ್ರಪಕ್ಷಿಯನ್ನಾಗಿಸಿ ಯಾಗಿದೆ. ಖೇದಕರ ಸಂಗತಿಯೆಂದರೆ ಕದ್ದುಬೇಟೆಯಾಡುವವರ ಈ ಚಂದದ ಪಕ್ಷಿ ನಿರಂತರ ಬಲಿಯಾಗುತ್ತಲೇ ಇವೆ. ಗರಿಯಿರುವ ಗಂಡು ನವಿಲಿಗೆ ಕಳ್ಳರು ಗುಂಡು ಹಾಕುವುದಿಲ್ಲ ಕಾರಣ, ಅದರ ಗರಿಗಳನ್ನು ಮುಚ್ಚಿಹಾಕುವುದು ಸ್ವಲ್ಪ ಕಷ್ಟಕರ ಕೆಲಸ, ಆದರೆ ಕೋಳಿಯಂತಿರುವ ಹೆಣ್ಣು ನವಿಲನ್ನು ರಾತ್ರಿ ಕದ್ದು ಬೇಟೆಯಾಡುತ್ತಾರೆ. ಇದರಿಂದಾಗಿ ಹೆಣ್ಣು ನವಿಲಿನ ಸಂತತಿ ನಿಧಾನಗತಿಯಲ್ಲಿ ಕ್ಷೀಣಿಸುತ್ತಿದೆ. ಆದರೂ ಪ್ರಕೃತಿ ಮಾನವನ ಹಲ್ಲೆಯನ್ನೂ ತಪ್ಪಿಸಿ ನವಿಲಿನ ಸಂತತಿಯನ್ನು ಕಾಪಾಡುತ್ತಿದೆ.


ನವೆಂಬರ್ ತಿಂಗಳಿನಿಂದ ಡಿಸೆಂಬರ್ ಅಂತ್ಯದವರೆಗೆ ನವಿಲು ಮೊಟ್ಟೆಗಳು ಒಡೆದು ಮರಿ ಆಚೆಬರುತ್ತವೆ. ತಾಯಿ ಮೊಟ್ಟೆಗಳನ್ನು ಜತನವಾಗಿ ಕಾಪಾಡಿಕೊಂಡು ಬರುತ್ತವೆ. ಮರಿಹೊರಬಂದ ನಂತರ ತನ್ನೊಂದಿಗೆ ಕರೆದುಕೊಂಡು ಹೋಗುತ್ತವೆ. ಆದರೆ ಮೊಟ್ಟೆಗಳನ್ನು ಒಂದೆಡೆ ಇಟ್ಟು ಆಹಾರಕ್ಕಾಗಿ ಹೊರಗೆ ಹೋದ ತಾಯಿ ಅಕಸ್ಮಾತ್ ಕಳ್ಳಬೇಟೆಗಾರರ ಗುಂಡಿಗೆ ಬಲಿಯಾದಾಗ ಮೊಟ್ಟೆಯಿಂದ ಹೊರಬಂದ ಮರಿಗಳ ಪಾಡು ತುಸು ಕಷ್ಟಕರ. ಈ ನವಿಲು ಮರಿಯ ಸ್ಥಿತಿಯೂ ಹಾಗೆಯೇ ಆಗಿದೆ. ತಾಳಗುಪ್ಪ ಸಮೀಪ ಹಿರೇಮನೆ ಅಸಳ್ಳೆ ಕೃಷ್ಣಮೂರ್ತಿ ಎಂಬುವವರ ತೋಟದಲ್ಲಿ ಮೊಟ್ಟೆಯಿಟ್ಟು ಆಹಾರವನ್ನರಸಲು ಹೋದ ಹೆಣ್ಣು ನವಿಲು ವಾಪಾಸ್ ಬರಲೇ ಇಲ್ಲ. ತೋಟಕ್ಕೆ ಹೋದ ಕೃಷ್ಣಮೂರ್ತಿಯವರ ಕಣ್ಣಿಗೆ ಬಿದ್ದ ಈ ಅನಾಥಮರಿಗಳನ್ನು ಅಲ್ಲಿಯೇ ಬಿಟ್ಟು ಹಾವುಗಳಿಗೆ ಆಹಾರವಾಗುವುದನ್ನು ತಪ್ಪಿಸುವ ಮನಸ್ಸು ಮಾಡಿದರು. ನವಿಲು ಮರಿಯನ್ನು ಜತನವಾಗಿ ತಂದು ರಶ್ಮಿಯ ಮನೆಗೆ ಕೊಟ್ಟರು. ಅಲ್ಲಿ ಈಗ ನವಿಲು ಸುರಕ್ಷಿತವಾಗಿ ಬೆಳೆಯುತ್ತಿದೆ. ದೊಡ್ಡದಾದಮೇಲೆ, ತನ್ನ ಆಹಾರ ತಾನು ಹುಡುಕಿಕೊಳ್ಳುವಷ್ಟು ಬೆಳೆದಮೇಲೆ ಕಾಡಿಗೆ ಬಿಡಬೇಕು ಎನ್ನುತ್ತಾರೆ ರಶ್ಮಿಯ ತಂದೆ ರಾಮಕೃಷ್ಣ. ಆದರೆ ಸದ್ಯಕ್ಕಂತೂ "ಅನಾಥ ಮಗುವಾದೆ" ಎನ್ನುತ್ತಿದೆ ನಮ್ಮ ರಾಷ್ಟ್ರಪಕ್ಷಿ. ಆದರೂ ಬೆಚ್ಚಗಿದೆ ಎನ್ನುವುದು ಸಮಾಧಾನಕರ.

Friday, November 2, 2012

ಮಾಡಲಿ ಬಿಡಿ ಅವಕ್ಕೂ ನೆನಪುಗಳು ಬೇಕಲ್ಲ....!

"ಬಾಲ್ಯ" ವಾವ್ ಅದೆರಡು ಅಕ್ಷರದಲ್ಲಿಯೇ ಮಜ ಇದೆ. ಬಡತನವಿರಲಿ, ಸಿರಿತನವಿರಲಿ ಇರಲಿ ಇಲ್ಲದಿರಲಿ ಬಾಲ್ಯ ಬಾಲ್ಯವೇ. ಅಲ್ಲೊಂದಿಷ್ಟು ಸುಮಧುರ ನೆನಪುಗಳು ನಮ್ಮ ನೆನಪಿನ ಕೋಶದಲ್ಲಿ ದಾಖಲಿಸುತ್ತವೆ. ಅದನ್ನು ಬೇಕೆಂದಾಗ ನೆನಪಿಗೆ ತಂದುಕೊಂಡು ಮಜ ಅನುಭವಿಸಬಹುದು. ಹಿಡಿದ-ಹಿಡಿಯದ ಮೀನು, ಕೆಸರಾಟ, ಮರಳು ಗುಡ್ಡೆಯಲ್ಲಿ ಗುಬ್ಬಿ ಹುಳ ಅರಸಿದ್ದು, ಗುಮ್ಮ ಅಂತ ಹೆದರಿಕೊಂಡಿದ್ದು, ಪಾಪದ ಕೆಂಪು ಪೀಟಿಯ ಅಂಡಿಗೆ ದಾರ ಕಟ್ಟಿ ಹೆಲಿಕ್ಯಾಪ್ಟರ್ ಅಂತ ಆಟ ಆಡಿದ್ದು, ಅದೊಂದು ಜೀವಿ ಎಂಬ ಅರಿವಿಲ್ಲದೇ ಅದಕ್ಕೆ ಹಿಂಸೆ ನೀಡಿ ಮಜ ಅನುಭವಿಸಿದ್ದು, ಹಸಿರುಳ್ಳೆ ಹಾವಿನ ಬಾಲ ಹಿಡಿದು ಗರಗರ ತಿರುಗಿಸಿ ಹಾರಿ ಬಿಟ್ಟಿದ್ದು, ಬಸ್ಸಿಗೆ ಕಲ್ಲು ಹೊಡೆದದ್ದು, ಹೀಗೆ ಒಂದಾ ಎರಡಾ..? ಸಾಲು ಸಾಲು ನೆನಪುಗಳು ಮುಗುಳ್ನಗೆ ಮೂಡಲು ಸಹಕರಿಸುತ್ತವೆ. ಅದು ಸರಿ ಅದೇ ತರಹದ ಹುಡುಗಾಟಿಕೆಯನ್ನು ಈಗ ನಿಮ್ಮ ಮಕ್ಕಳು ಮಾಡಲು ಹೊರಟಿದ್ದಾರೆ, ಮತ್ತೇಕೆ ಅವನ್ನು ಗದರಿಸುತ್ತೀರಿ, ಮಾಡಲಿ ಬಿಡಿ ಅವಕ್ಕೂ ನೆನಪುಗಳು ಬೇಕಲ್ಲ....!

Wednesday, September 19, 2012

ಶುಂಠಿ ಬೆಲ್ಲ ಎಂಬ ಮಜಕೂರ್ ಬ್ಲಾಗ್

ಸತ್ತ ಮೇಲೆ ಸಿಕ್ಕುವ ಸ್ವರ್ಗಕ್ಕಾಗಿ ಇಂದಿನ ಬಾಳನ್ನು ನರಕಸದೃಶವಾಗಿ ಮಾಡಿಕೊಳ್ಳುವುದು ಬೇಡ. ಇಂದಿನ ಇರುವಿಕೆಯನ್ನು ತಿಳಿವಳಿಕೆಯಿಂದ ತಿದ್ದಿಕೊಂಡರೆ ಇದೇ ಸ್ವರ್ಗ .


ಪ್ರತಿಯೊಬ್ಬನಿಗೂ ಒಂದು ಬಾಳಿನ ತತ್ವ ಬೇಕು. ಮಾನವ ಜೀವನವನ್ನು ಇಂದಿನಕಿಂತಲೂ ಹೆಚ್ಚು ಸುಗಮವನ್ನಾಗಿ, ಆದರ್ಶಪ್ರಾಯವನ್ನಾಗಿ ಮಾಡುವಂತಹ ತತ್ವ ಬೇಕು.

ದೇವನಿಗೂ ಒಂದು ಆತ್ಮಗೌರವ ಎಂಬುದಿದೆ. ಬೇರಾವ ಪ್ರಾಣಿಗೂ ಕೊಡಲಾರದಂತಹ ಬುದ್ಧಿಶಕ್ತಿ ಒಂದನ್ನು ದೇವನು ಮಾನವನಿಗೆ ಮಾತ್ರ ಇತ್ತಿದ್ದಾನೆ. ಇದರ ಸದುಪಯೋಗ ಮಾಡದಿರುವುದೇ ದೈವದ್ರೋಹ.
ದೇವನು ಸರ್ವಾಂತರ್ಯಾಮಿ ಮತ್ತು ಪ್ರತಿಯೊಬ್ಬರಲ್ಲಿಯೂ ಇದ್ದಾನೆ ಎಂಬ ವೇದವಾಕ್ಯವನ್ನು ಎಲ್ಲ ಸೊಸೆಯರೂ ಒಪ್ಪುತ್ತಾರೆ. ಆದರೆ ಎಲ್ಲದರಲ್ಲಿಯೂ ಇರುವ ಅದೇ ದೇವರು ಅದೇಕೆ ತನ್ನ ಅತ್ತೆಯಲ್ಲಿ ಇರುವುದಿಲ್ಲ? ಅತ್ತೆಯೊಡನೆ ಹಣಾಹಣಿ ಜಗಳವಾಡುತ್ತಾಳೆ. ದುಷ್ಟ ಶಬ್ದಗಳಿಂದ ಬೈಯುತ್ತಾಳೆ.
" ಕಾಲ ಎಷ್ಟು ಕೆಟ್ಟಿದೆ ನೋಡಿ, ನಮ್ಮ ಹಿಂದೂ ಸಂಸ್ಕೃತಿಯೇ ಹಾಳಾಗಿಹೋಗಿದೆ, ಅಲ್ಲಿರುವ ಆ ಇಬ್ಬರಲ್ಲಿ ಗಂಡು ಯಾರು ಹೆಣ್ಣು ಯಾರು ನೀವೇ ಹೇಳಿ ಸಾರ್" ಎಂದಂದೆ.
ಒಂದರೆ ನಿಮಿಷ ಆ `ಸಾರ್' ನನ್ನನ್ನು ದುರುಗುಟ್ಟಿ ನೋಡಿತು.
" ಏನ್ರೀ ನೀವು ಮಾತನಾಡೋದು? ಏನು ಮರ್ಯಾದೆ ಎಂಬುದೇ ಇಲ್ಲವೇ? ನನಗೆ ಸಾರ್ ಅಂತೀರಾ ನೀವು? ನಾನು ಆ ಎರಡೂ ಮಕ್ಕಳ ತಾಯಿ, ತಿಳೀತೆ?"

ಇವತ್ತಿಗೆ ಇಷ್ಟು. ಇನ್ನುಶುಕ್ರವಾರ. ಈಗ ನನ್ನದೊಂದು ಮುಕ್ತಕ.
ತಲೆಮಾರಿನ ಅಂತರ

"ಕುಂಟುವುದೇಕಜ್ಜ?" ಕೇಳಿದೆ ತಾತನ

"ಹೆಬ್ಬುಲಿ ಕಚ್ಚಿತು" ಎಂದ.

ಮೊಮ್ಮಗ ತಿಂಗಳು ಹಾಸಿಗೆ ಹಿಡಿದನು

ಚಪ್ಪಲಿ ಕಚ್ಚಿದ್ದರಿಂದ!     ಇನ್ನಷ್ಟು ಮಜ ಬೇಕಾ..? ಹಾಗಾದರೆ ತಕ್ಷಣ ಈ ಕೊಂಡಿ ಕ್ಲಿಕ್ಕಿಸಿ: http://shuntibella.blogspot.in/  

ಆಗ ಪಳಕ್ಕನೆ ಮಿಂಚಿತು........ಈ ಆನಂದ ಬಾಷ್ಪ .


ಹಾಗೆಲ್ಲಾ ಯೋಚಿಸಿದಾಗಲೆಲ್ಲಾ ನನಗೆ ಆನಂದ ಬಾಷ್ಪ ಒಸರುತ್ತದೆ. ಈ ಆನಂದ ಬಾಷ್ಪ ಇದೆಯಲ್ಲ ಅದೊಂದು ಅಪರೂಪದ ಕ್ಷಣ. ನೀವು ಆಸ್ವಾದಿಸಿದ್ದೀರೋ ಇಲ್ಲವೋ ಗೊತ್ತಿಲ್ಲ ನಾನಂತೂ ಹಲವು ಸಲ ಅನುಭವಿಸಿದ್ದೇನೆ. ನೋಡುಗರ ಕಣ್ಣಿಗೆ ದು:ಖವೆಂತಲೂ ನಮ್ಮ ಅಂತರಾಳಕ್ಕೆ ಸಂತೋಷವಾಗಿಯೂ ಇರುವ ಹಾಗೂ ಒಂದೇ ಘಟನೆಗೆ ಎರಡು ಅರ್ಥ ಕೊಡುವ ಅನುಭವ ಇದು. ಅದು ಯಾವ್ಯಾವಾಗ ಒಸರುತ್ತದೆ ಅಂತ ನಿಖಿರವಾಗಿ ಹೇಳಲಿಕ್ಕೆ ಆಗದಿದ್ದರೂ ಸರಿ ಸುಮಾರಾಗಿ ಹೀಗೆ ವಿಷದಪಡಿಸಬಹುದು.

ಮೊಟ್ಟ ಮೊದಲನೆಯದಾಗಿ ಆನಂದ ಭಾಷ್ಪ ಎನ್ನುವುದು ನಮ್ಮಗಳ ಮನಸ್ಥಿತಿಯ ಮೇಲೆ ಒಸರುತ್ತದೆ. ನೀವು ಯಾರಿಗೋ ಬುದ್ಧಿಪೂರ್ವಕವಾಗಿ ನಿಮ್ಮದನ್ನು ತೊರೆದು ಉಪಕಾರ ಮಾಡಿ ಮರೆತಿರುತ್ತೀರಿ. ಕಾಲ ಉರುಳಿದ ಒಂದು ದಿವಸ ತಣ್ಣನೆಯ ಸಮಯದಲ್ಲಿ ಮೆಲ್ಲಗೆ ಅವರು ನಿಮ್ಮ ಬಳಿ "ಅಂದು ನೀನಂದ ಮಾತು ನನ್ನ ಜೀವನದ ಅಭ್ಯುದಯಕ್ಕೆ ನಾಂದಿಯಾಯಿತು" ಅಂದು ಬಿಟ್ಟರು ಅಂದುಕೊಳ್ಳಿ. ಆಗ ಪಳಕ್ಕನೆ ಕಣ್ಣಂಚಿನಲ್ಲಿ ಮಿಂಚುತ್ತದೆ ಈ ಆನಂದ ಬಾಷ್ಪ. ನೀವು ಅದ್ಯಾವುದೋ ಕೆಲಸ ಯಾ ಯೋಜನೆಯನ್ನು ಆಸ್ಥೆಯಿಂದ ಕೈಗೊಂಡು ಶ್ರಮಪಟ್ಟು ಪೂರೈಸಿರುತ್ತೀರಿ, ಯಾರೂ ಏನೂ ಅಂದಿರುವುದಿಲ್ಲ ಆದರೆ ನೀವೆಣಿಸz ಸಣ್ಣ ವಯಸ್ಸಿನ ಮಗುವೊಂದು "ವಾವ್ ಸೂಪರ್" ಅಂತ ಹೆಬ್ಬೆರಳು ತೋರ್ಬೆರಳು ಸೇರಿಸಿ ಹೇಳಿತು ಅಂದುಕೊಳ್ಳಿ ಆಗಲೂ ಪಳಕ್ಕನೆ....... . ಅದು ಬಿಡಿ ಎಲ್ಲವೂ ನೀವೆಣಿಸಿದಂತೆ ನಡೆಯುತ್ತಿಲ್ಲ, ಅಲ್ಲೆಲ್ಲೋ ವ್ಯತ್ಯಯವಾಗುತ್ತಿರುತ್ತಿದೆ ಜೀವನಬಂಡಿ. ಆಗ ಅದ್ಯಾರೋ ನಿಮ್ಮ ಮನಸ್ಸಿನ ಭಾವನೆಗೆ ಸಮರ್ಪಕವಾಗಿ ಮ್ಯಾಚ್ ಆಗುವಂತಹ ಮಾತು ಆಡಿಬಿಡುತ್ತಾರೆ ಆಗಲೂ ಪಳಕ್ಕನೆ...... . ಇದು ಪಾಸಿಟೀವ್ ಕತೆಯಾಯಿತು ಆನಂದ ಬಾಷ್ಪಕ್ಕೆ ನೆಗಟೀವ್ ಕತೆಯೂ ಇದೆ. ಯಾರ್ಯಾರದೋ ಅಹಂಕಾರ ಮುರಿಯುವ ಕಾರಣ ಒಡ್ಡಿ ಪ್ರಕರಣ ಸೃಷ್ಟಿಸಿರುತ್ತಾರೆ, ಆ ಪ್ರಕರಣ ಕೊಂಚ ಯಶಸ್ಸು ಕಂಡಿತು ಅಂದಾದಾಗ ಪಳಕ್ಕನೆ ಬರುತ್ತದೆ ಬಟ್ ಅದನ್ನು ವಿಕೄತಾನಂದ ಭಾಷ್ಪ ಅಂತ ಕರೆದು ಮರೆತುಬಿಡೋಣ ಬಿಡಿ. ಹೋ ಮರೆತೆ ನನಗೇಕೆ ಇಂದು ಚಿಮ್ಮಿತು ಅಂತ ಹೇಳೋದನ್ನ

ನನ್ನ ಈಸ ರೈಸ್ ಬ್ಲಾಗ್ ಬರಹಕ್ಕೆ ನವ್ಯಾ ಕಾಮೆಂಟಿಸಿದ್ದಳು, ಈಗ ಆಕೆ ಇಂಜನಿಯರಿಂಗ್ ಪಧವೀಧರೆ, ಹೀಗೆ ನಾನು ಬಾಲ್ಯವನ್ನು ನೋಡಿದ ಮಕ್ಕಳು ಬೆಳೆದು ದೊಡ್ದವರಾಗಿದ್ದಾರೆ. ದೇಶವಿದೇಶದಲ್ಲಿ ನೆಲಸಿದ್ದಾರೆ ಗಟ್ಟಿಯಾಗಿ. ಅದೊಂದು ದೊಡ್ಡ ಗುಂಪೇ ಇದೆ. ನನಗೆ ಮಾತ್ರಾ ಅವರ ಹುಡುಗುತನವೇ ಕಾಣಿಸುತ್ತದೆ. ಸಂಸಾರ ಜಂಜಡದಲ್ಲಿ ನನಗೆ ಅವರನ್ನೆಲ್ಲಾ ಆಸ್ವಾದಿಸಲಾಗುತ್ತಿಲ್ಲ. ಹೀಗೆ ಅವರೆಲ್ಲಾ ಪಕ್ಕನೆ ನೆನಪಾದರು ಆಗ ಪಳಕ್ಕನೆ ಮಿಂಚಿತು........ಈ ಆನಂದ ಬಾಷ್ಪ .

Friday, August 31, 2012

ಈ ಈಸ ರೈಸ್ ನಿಮಗೆ ನೆನಪಿರಲಿ.

ಅದೊಂತರ ವಿಚಿತ್ರ ಸ್ಟೇಟಸ್. ಗುಂಪಿನಲ್ಲಿದ್ದಾಗ ಟೂರ್ ಹೋದಾಗ ಕೆಲವರು ಸ್ವಲ್ಪ ವಿಚಿತ್ರವಾಗಿ ಆಡತೊಡಗುತ್ತಾರೆ. ಅದಕ್ಕೆ ನಾವು ಈಸ ರೈಸ್ ಅನ್ನುತ್ತೇವೆ(ಇದು ನಮ್ಮ ವೈಯಕ್ತಿಕ ಪದ) ಒಟ್ಟಿನಲ್ಲಿ ಗುಂಪಿನಲ್ಲಿರುವವರಿಗಿಂತ ನಾವು ಬೇರೆ ಅಂತ ತೋರಿಸಿಕೊಳ್ಳುವ ಹಂಬಲದ ವರ್ತನೆ ಅದು. ಸಹಜ ಸ್ಥಿತಿಗಿಂತ ಮೇಲಿನ ಅವಸ್ಥೆ ಆಗಿದ್ದಕ್ಕೆ "ರೈಸ್" ಅನ್ನುವ ಪದ ಪ್ರಯೋಗ ಅಲ್ಲಿ ಅಷ್ಟೆ. ಈ ಈಸ ರೈಸ್ ಸ್ಥಿತಿ ಇದೆಯಲ್ಲಾ ಅದು ಜೀವ ಕಳೆದುಕೊಳ್ಳುವ ಮಟ್ಟಕ್ಕೆ ಹೋದ ಉದಾಹರಣೆ ಇದೆ. ಹೀರೋ ಆಗಲು ಹೋಗಿ ಝೀರೋ ಆಗುವ ಸ್ಥಿತಿ ಅದು. ಜೋಗ ಬ್ರಿಟೀಷ್ ಬಂಗ್ಲೆಯ ನೋಟದಲ್ಲಿ ಒಂದು ನುಣುಪಾದ ಬಂಡೆಯಿದೆ. ಅಲ್ಲಿ ಅಪಾಯ ಅಪಾಯ ಅಪಾಯ ಅಂತ ಎಲ್ಲರೂ ಹಲುಬುತ್ತಿರುತ್ತಾರೆ. ಇಷ್ಟಾದರೂ ಅಲ್ಲಿ ವರ್ಷಕ್ಕೆ ೩-೪ ಶೀಟಿ ಕೇಸ್ ನಡೆಯುತ್ತಲಿರುತ್ತದೆ. ಅದಕ್ಕೆ ಗುಂಪಿನಲ್ಲಿ ಬಂದಾಗ ಈಸ ರೈಸ್ ಆಗುವ ಸ್ಥಿತಿಯೇ ಕಾರಣ. ಈ ಚಿತ್ರದಲ್ಲಿ ನೋಡಿ ಜಿಟಿಜಿಟಿ ಮಳೆಯ ನಡುವೆ ಇವರದೆಂತಾ ಹುಚ್ಚಾಟ ಅಂತ. ಹಾಗಂತ ಹೀಗೆ ನೋಡಿ ಬಚಾವಾಗಿ ಹೋದವರ ಸಂಖ್ಯೆ ಬಹಳ ದೊಡ್ಡದಿದೆ. ಆದರೆ ಆ ಬಚಾವಾದವರು ಹುಚ್ಚಾಟ ಮಾಡಲು ಹೋಗಿರುವುದಿಲ್ಲ ಅಂತಲಾದರೂ ಅನ್ನಬಹುದು ಅಥವಾ ಮಾರನೇ ದಿವಸದ ಪತ್ರಿಕೆಯವರಿಗೆ ನಸೀಬು ಕೊಟ್ಟಿ  ಇತ್ತು ಅಂತಲಾದರೂ ಅನ್ನಬಹುದು. ಆದರೂ ಹುಷಾರು ತಪ್ಪಬಾರದು. ಬಿದ್ದರೂ ಈಸ ರೈಸ್ ಆಗಿ ಬೀಳಬಾರದು. ಹಾಗಾಗಿ ಟೂರ್ ಹೋದಾಗ ಈ ಈಸ ರೈಸ್ ನಿಮಗೆ ನೆನಪಿರಲಿ.