ಆತನ ಹೆಸರು ರಮೇಶ.ವಯಸ್ಸು ಮೂವತ್ತು. ತಾಳಗುಪ್ಪದಲ್ಲಿ ಮಾರುತಿ ಕಾರ್ ಮ್ಯಕಾನಿಕ್. ಕಷ್ಟಜೀವಿ,ಬುದ್ದಿವಂತ,ಹೃದಯವಂತ ಮುಂತಾದ ಸನ್ನಡತೆಯ ಗುಣಗಳು ಆತನವು. ತಾಳಗುಪ್ಪದಂತಹ ತಾಳಗುಪ್ಪದಲ್ಲಿ ಮಾರುತಿ ಕಾರ್ ಗ್ಯಾರೇಜ್ ನಡೆಸುವುದು ಅತ್ಯಂತ ಕಷ್ಟ. ಹಗಲಿಡೀ ಮೈಮುರಿದು ಕೆಲಸ ಮಾಡೀದರೂ ಉದ್ರಿ ಗಿರಾಕಿಯೇ ಜಾಸ್ತಿ. ಇಪ್ಪತ್ತು ರೂಪಾಯಿ ಚಾರ್ಜ್ ಮಾಡೀದರೆ ಹೆಚ್ಚು ಹತ್ತುರೂಪಾಯಿ ಎಂದರೆ ವರ್ಕ್ಔಟ್ ಆಗದು. ಆದರೂ ಆತನ ಕೆಲಸದ ಗುಣಮಟ್ಟಕ್ಕೆ ಹಾಗೂ ಪ್ರಾಮಾಣಿಕತೆಗೆ ಸಾಗರದಿಂದ ಜೋಗದವರೆಗಿನ ಮಾರುತಿ ಕಾರುಗಳು ರಿಪೇರಿಗೆಂದು ಬರುತ್ತಿದ್ದವು. ಮದ್ಯಮಮಟ್ಟದ ಜೀವನ ಸಾಗಿಸುತ್ತಿದ್ದ ರಮೇಶನಿಗೆ ಸರಿಯಾಗಿ ಐದು ವರ್ಷದ ಹಿಂದೆ ಅಗಸ್ಟ್ ಏಳನೇ ತಾರೀಖು ಮೋಟರ್ ಸೈಕಲ್ ಆಕ್ಸಿಡೆಂಟ್ ಆಯಿತು. ಆತ ಉತ್ತಮ ಡ್ರೈವರ್ ಕೂಡ, ಆದರೂ ಅಪಘಾತ ಆಯಿತು. ಅದಕ್ಕೆ ನಾವು ವಿಧಿಯೆನ್ನುವುದು ಆಲ್ಲವೇ? ಇರಲಿ. ಕಣ್ಣಿನ ಹುಬ್ಬಿನ ಬಳಿ ಆಳವಾದ ಗಾಯವಾಯಿತು.ಒಂದು ಕಣ್ಣು ಪೂರ್ತಿ ಕತ್ತಲೆ. ಶಿವಮೊಗ್ಗ ದ ಕಣ್ಣಿನ ವೈದ್ಯರ ಬಳಿ ತೋರಿಸಿದಾಗ ರೆಟಿನಾಕ್ಕೆ ಪೆಟ್ಟುಬಿದ್ದಿದೆ ಆಪರೇಷನ್ ಆಗಬೇಕು ಇಪ್ಪತ್ತೈದುಸಾವಿರ ರೂಪಾಯಿ ಆಗಬಹುದು ಎಂದರು. ರಮೇಶ ಆಯಿತು ನಾಳೆ ಬರುತ್ತೇನೆ ಎಂದು ನೂರಾಐವತ್ತು ರೂಪಾಯಿ ಕೊಟ್ಟು ಮನೆಗೆ ಬಂದು ಮಲಗಿದ. ನಾಳೆ ಹೋಗಲು ಇಪ್ಪತ್ತೈದು ಸಾವಿರ ರೂಪಾಯಿಯ ಕೊರತೆ ಇತ್ತು. ಹಾಗಾಗಿ ಕೆಲಸಮಾಡಲು ಒಂದು ಕಣ್ಣು ಸಾಕು ಎಂಬ ಹುಂಬತನದ ಗಟ್ಟಿ ತೀರ್ಮಾನಕ್ಕೆ ಬಂದು ಸುಮ್ಮನುಳಿದ. ಅವನ ಈ ತೀರ್ಮಾನ ಅದೃಷ್ಟದ್ದಾಗಿತ್ತು. ಇಪ್ಪತ್ತು ದಿವಸಗಳೊಳಗೆ ಕಣ್ಣು ಮಂಜು ಮಂಜಾಗಿ ಕಾಣಿಸತೊಡಗಿತು. ತಿಂಗಳಿನಲ್ಲಿ ಅದ್ಭುತ ಎಂಬಂತೆ ಕಣ್ಣು ಸರಿಯಾಯಿತು. ಈಗ ಜನರು ಅವನ ತೀರ್ಮಾನಕ್ಕೆ ಅದೃಷ್ಟ ಇತ್ತು ಬಚಾವಾದೆ ಎಂದರು. ಆತ ತನ್ನ ಕಾಯಕದಲ್ಲಿ ಮುಂದುವರೆದ. ಎರಡುವರ್ಷದ ನಂತರ ಮದುವೆಯಾಯಿತು. ಮತ್ತು ಸುಖೀ ಸಣ್ಣ ಸಂಸಾರ.
ಐದು ವರ್ಷದ ನಂತರ ಅದೇ ಆಗಸ್ಟ್ ತಿಂಗಳ ಏಳನೇ ತಾರೀಖಿನಂದು ಮತ್ತದೇ ವಿಧಿಬರಹ. ಟೆಸ್ಟ್ ಡ್ರೈವ್ ಗೆ ತೆಗೆದುಕೊಂಡು ಹೋಗುತ್ತಿದ್ದ ಮಾರುತಿ ಓಮ್ನಿಯ ಸ್ಟಿಯರಿಂಗ್ ರಿಪೇರಿಗೆಂದು ಎತ್ತಿದಾಗ ಮತ್ತದರ ಮೂಲ ಜಾಗಕ್ಕೆ ಕೂರಲಿಲ್ಲ. ಓಮ್ನಿ ಸೀದಾ ಗದ್ದೆಗೆ ಹಾರಿ ಮರಕ್ಕೆ ಬಡಿದು ನುಜ್ಜುಗುಜ್ಜಾಗಿ ನಿಂತಿತು. ಈ ಬಾರಿ ವಿಧಿ ಮೊಣಕಾಲಿನ ಚಿಪ್ಪಿಗೆ ಭಾರಿಸಿತ್ತು. ಅದೃಷ್ಟ ಜೀವ ಉಳಿಸಿತ್ತು. ಮೊಳ್ಳಂಡೆ ಚಿಪ್ಪು ಅತಿಯಾದ ನೋವಿನಿಂದ ಮಣಿಪಾಲಿನವರೆಗೆ ಕರೆದುಕೊಂಡು ಹೋಗಿ ಈಗಾಗಲೇ ಇಪ್ಪತ್ತು ಸಾವಿರ ಕೈಬಿಡಿಸಿದೆ. ಒಂದು ತಿಂಗಳು ಮಲಗಿದಲ್ಲಿಂದ ಅಲ್ಲಾಡುವಂತಿಲ್ಲ. ಮಾರುತಿ ಓಮ್ನಿಯ ಓನರ್ ಗೆ ನಲವತ್ತು ಸಾವಿರ ದಂಡ ಕಟ್ಟಬೇಕಿದೆ. ಹೀಗೆ ಒಂದರ ಹಿಂದೆ ಒಂದು ಎಂಬಂತೆ ಸುಮಾರು ಒಂದು ಲಕ್ಷ ರೂಪಾಯಿಯನ್ನು ವಿಧಿ ಬೇಡುತ್ತಿದೆ. ಅದೃಷ್ಟ ಇನ್ನೂ ಕಣ್ಣುಬಿಟ್ಟಿಲ್ಲ. ನಾನು ನನ್ನ ಕೈಲಾದ ಸಹಾಯವನ್ನು ಮಾಡುವ ತೀರ್ಮಾನ ಮಾಡೀದ್ದೇನೆ.
ಇರಲಿ ಇವೆಲ್ಲಾ ಇಲ್ಲಿ ಯಾಕೆ ಬರೆದೆನೆಂದರೆ ಮೊನ್ನೆ ನಮ್ಮ ಯಜ್ಞೇಶನ ಬ್ಲಾಗ್ ಓದುತ್ತಾ ಇದ್ದೆ. ಅಲ್ಲೂ ಹೀಗೆ ವ್ಯಕ್ತಿಯೊಬ್ಬನಿಗೆ ಖಾಯಿಲೆಯಿಂದ ಹೊರಬರಲು ಹಣದ ಅವಶ್ಯಕತೆ ಇತ್ತು. ಕೊಡುವ ಮನಸ್ಸು ಹಲವರಿಗಿತ್ತು. ಆದರೆ ಪಡೆಯುವವನನ್ನು ವಿಧಿ ಎಳೆದೊಯ್ದಿತ್ತು. ಇಲ್ಲಿ ಹಾಗಲ್ಲ ಪಡೆಯುವ ಅರ್ಹತೆಯುಳ್ಳ ಪ್ರಾಮಾಣಿಕ ವ್ಯಕ್ತಿ ಇದ್ದಾನೆ. ಮತ್ತು ನಿಮಗೆ ನಿಮ್ಮ ಅವಶ್ಯಕತೆಗೆ ಹೆಚ್ಚಾದ ಹಣ ಇದ್ದರೆ ಸಧ್ಯಕ್ಕೆ ಕೊಡಬಹುದು. ಹಾಗಂತ ನೀವು ಬೆವರು ಹರಿಸಿ ದುಡಿಯುವಾಗ ಅಥವಾ ನೀವು ಕಷ್ಟದಲ್ಲಿದ್ದಾಗ ನಿಮಗೆ ಯಾರೂ ಸಹಾಯ ಮಾಡಿಲ್ಲದಿರಬಹುದು. ಅಥವಾ ಯಾರಾದರೂ ಮಾಡಿರಲೂ ಬಹುದು. ನಮ್ಮ ರಮೇಶನಂತೂ ನಿಮಗೆ ನೇರವಾಗಿ ಸಹಾಯ ಮಾಡಿರಲು ಸಾದ್ಯವಿಲ್ಲ. ಅವೆಲ್ಲಾ ತರ್ಕವನ್ನು ಬದಿಗಿರಿಸಿ ನಿಮ್ಮಲ್ಲಿ ನಿಮ್ಮ ಎಲ್ಲಾ ಅವಶ್ಯಕತೆಗಳಿಗೂ ಮಿಕ್ಕಿ ದಾನಕ್ಕೆ ಅಂತ ಹಣವಿದ್ದರೆ ತಾತ್ಕಾಲಿಕ್ಕಾದರೂ ಕೊಡಿ. ಮುಂದೆ ಆತ ವಾಪಾಸುಕೊಡುತ್ತಾನೆ ಎನ್ನುವ ಭರವಸೆ ನನ್ನದು. ಕೊಡದಿದ್ದರೂ ಭಗವಂತ ಕೊಡುತ್ತಾನೆ ನಿಮಗೆ ಎನ್ನುವ ನಂಬಿಕೆ ಇನ್ನೂ ಒಳ್ಳೆಯದು. ಕಾರಣ ವ್ಯಕ್ತಿಗಳ ಮನಸ್ಥಿತಿ ಕಾಲಕಾಲಕ್ಕೂ ಬದಲಾಗಿ ಬಿಡಬಹುದಲ್ಲ. ಆದರೆ ಸಧ್ಯಕ್ಕೆ ನಮ್ಮ ರಮೆಶನೇಂಬ ಆ ವ್ಯಕ್ತಿಗೆ ಹೀಗೆ ಬ್ಲಾಗ್ ನಲ್ಲಿ ಬರೆಯುವುದೂ ಮುಜುಗರದ ವಿಚಾರ. ಆದರೆ ಆತನ ಸಂಪೂರ್ಣ ಅವಶ್ಯಕತೆ ಪೂರೈಸುವಷ್ಟು ತಾಕತ್ತು ನನ್ನ ಬಳಿ ಇಲ್ಲ. ಹಾಗಾಗಿ ಇದು ಅನಿವಾರ್ಯ. ಇದು ವಿಧಿಯ ವ್ಯಥೆಯಾದರೆ ಇನ್ನು ಮುಂದಿನದು ಆತನ ಅದೃಷ್ಟದ ಕತೆ. ಇಲ್ಲಿ ಸಂಪರ್ಕಿಸಿ shreeshum@gmail.com
ಕೊನೆಯದಾಗಿ: ಕಷ್ಟದಿಂದ ಅವರ ಅನ್ನ ದುಡಿದು ಹಾಗೂ ಪ್ರಾಮಾಣಿಕತೆಯಿಂದ ಬದುಕುತ್ತಿರುವವರಿಗೆ ಏಕೆ ಹೀಗಾಗುತ್ತದೆ? ಎಂದು ಆನಂದರಾಮಾ ಶಾಸ್ತ್ರಿಗಳನ್ನು ಕೇಳಿದೆ.
ಕಷ್ಟ ಸುಖ ಅವರವರ ಭಾವಕ್ಕೆ, ಜೀವ ಉಳಿದದ್ದು ಸುಖ ಎಂದು ಕೊಂಡರೆ ಹಣ ಮತ್ತೆ ಗಳಿಸಬಹುದು. ಎಂದರವರು
No comments:
Post a Comment