ದಿನದಿಂದ ದಿನಕ್ಕೆ ಹಳ್ಳಿತೊರೆದು ಪಟ್ಟಣ ಸೇರುವ ವಲಸೆಯೆಂಬ ಹೀಗೊಂದು ಪ್ರಕ್ರಿಯೆ ಹವ್ಯಕ ಬ್ರಾಹ್ಮಣರ ಸಮುದಾಯದಲ್ಲಿ ಸದ್ದಿಲ್ಲದೆ ನಡೆಯುತ್ತಿದೆ. ಅದು ಯಾರ ಗಮನಕ್ಕೂ ಬಾರಾದಂತೆ ಮುಗುಮ್ಮಾಗಿ ತನ್ನಷ್ಟಕ್ಕೆ ತಾನೇ ಆಗುತ್ತಿದೆ. ನಾನು ಸ್ವತಹ ಗಮನಿಸಿದಂತೆ ಹತ್ತು ವರ್ಷ ದಿಂದ ಈಚೆಗೆ ನಮ್ಮ ಊರಿನ ಸುತ್ತ ಮುತ್ತ ಸುಮಾರು ಇಪ್ಪತ್ತು ಮನೆಗಳು ಬಾಗಿಲು ಮುಚ್ಚಿವೆ. ಅದರಲ್ಲಿ ಮುಕ್ಕಾಲು ಪಾಲು ವಲಸೆ ಕಾರಣಕ್ಕಾಗಿಯಾದರೆ ಇನ್ನು ಕಾಲು ಭಾಗ ಕುಟುಂಬದ ಸದಸ್ಯರು ಇಲ್ಲವಾಗಿದ್ದು. ಕಾರಣಗಳು ಸಾವಿರ ಇವೆ. ಇರುವ ಒಬ್ಬ ಮಗ ಬೆಂಗಳೂರಿನಲ್ಲಿ ಇಂಜನಿಯರ್ , ಇರುವ ಎರಡು ಹೆಣ್ಣು ಮಕ್ಕಳೂ ಮದುವೆಯಾಗಿ ಹೋಗಿದ್ದಾರೆ ಅಲ್ಲೇ ಪಕ್ಕದಲ್ಲಿ ಒಂದು ಮನೆ ಮಾಡಿ ವಾಸ, ವಯಸ್ಸಾದವರು ಕೈಲಾಸ ಸೇರಿದರು ಮಕ್ಕಳು ಅಲ್ಲಿಂದ ಇಲ್ಲಿಗೆ ಬಂದು ಜಮೀನು ನೋಡಿಕೊಳ್ಳಲಾಗುವುದಿಲ್ಲ ಹಾಗಂತ ಜಮೀನು ಮಾರೋಣ ಎಂದರೆ ಮುಂದೆ ಬೇಕಾಗುತ್ತೇನೋ ಅನ್ನುವ ಭಯ ಆಕಾರಣಕ್ಕಾಗಿ ಮನೆಯ ಬಾಗಿಲಿಗೆ ಒಂದು ಗೋಡ್ರೇಜ್ ಬೀಗ. ಹೀಗೆ . ಇನ್ನಷ್ಟು ಜನ ಹಳ್ಳಿಯ ಬಿಟ್ಟು ಓಡಿ ಹೋಗುವ ತವಕದಲ್ಲಿದ್ದಾರೆ. ಅವರಿಗೂನ್ ಅಷ್ಟೆ ಮಗ ಅಥವಾ ಮಗಳು ಸೆಟ್ಲ್ ಇಲ್ಲಿ ಬೇಜಾರು. ಇಂತಹ ಅನಿವಾರ್ಯ ಕಾರಣದಿಂದ ಹಳ್ಳಿಗಳು ಭಣಭಣ ಎನ್ನತೊಡಗಿವೆ. ಈ ಪ್ರಕ್ರಿಯೆ ನಿಲ್ಲದಿದ್ದಲ್ಲಿ ಅಥವಾ ಪಟ್ಟಣದಿಂದ ವಾಪಾಸಾತಿ ಆಗದಿದ್ದಲ್ಲಿ ಇನ್ನು ಹತ್ತು ವರ್ಷದಲ್ಲಿ ಹವ್ಯಕರ ಹಳ್ಳಿಗಳು ಭಾಗಶಃ ಖಾಲಿಯಾಗುವುದು ಖಂಡಿತ. ಹಾಗಂತ ಹಳ್ಳಿಯಲ್ಲಿ ಉಳಿದವರ ಪರಿಸ್ಥಿತಿಯೇನೋ ಸ್ವರ್ಗ ಅಂತ ಅನ್ನುವಂತಿಲ್ಲ. ದಿನದಿಂದ ದಿನಕ್ಕೆ ಆರ್ಥಿಕವಾಗಿ ಪರಿಸ್ಥಿತಿ ಬಿಗಡಾಯಿಸುತ್ತಿದೆ. ವೆನಿಲಾ ರೋಗದ ಕಾರಣ ಮಾಯ ಅಡಿಕೆ ದರ ಇಳಿತ, ಕೂಲಿಕಾರರ ಅಭಾವ, ಕೂಲಿಕಾರರು ಸಿಕ್ಕಿದರೂ ಹೆಚ್ಚಿದ ಸಂಬಳ. ಮುಂತಾದ ಹತ್ತಾರು ಸಮಸ್ಯೆಗಳು. ಇದರ ಜತೆಗೆ ಹವ್ಯಕರ ಗಂಡುಗಳಿಗೆ ಹೆಣ್ಣಿಲ್ಲದ ಭೀಕರ ಸಮಸ್ಯೆ. ಮೂವತ್ತರಿಂದ ನಲವತ್ತು ವರ್ಷದವರೆಗಿನ ಮದುವೆಯಾಗದ ಗಂಡುಗಳು ಪ್ರತೀ ಊರಿನಲ್ಲಿಯೂ ಹತ್ತೆಂಟು ಸಿಗುತ್ತಾರೆ. ಇವುಕ್ಕೆ ಹೆಣ್ಣು ಕೊಡುವವರು ಇಲ್ಲ ಎನ್ನುವ ಸಮಸ್ಯೆಯ ಜತೆ ಅವರುಗಳಿಗೆ ಮದುವೆಯಾಗುವ ಆಲೋಚನೆಯೇ ಇಲ್ಲದಿರುವುದು ಮತ್ತೊಂದು ದುರಂತ. ಮದುವೆ ಎನ್ನುವುದು ಯೋಚಿಸಿ ಆಗುವ ಕ್ರಿಯೆ ಅಲ್ಲ. ಅದು ಸಂಸಾರ ಎಂಬುದು ಜಂಜಡ ಎಂದು ಸಾವಿರ ಜನ ಹೇಳುತ್ತಿದ್ದರೂ ಅಲ್ಲ ಅಲ್ಲಿದೆ ಸ್ವರ್ಗ ಎಂದು ತಿಳಿದಿಕೊಳ್ಳುವಂತಹ ವಯಸ್ಸಿನಲ್ಲಿ ಆಗುವಂತಹ ಪ್ರಕ್ರಿಯೆ. ಆದರೆ ಗಂಡುಗಳಿಗೆ ಮೂವತ್ತು ನಲವತ್ತು ಆಗಿದ್ದರಿಂದ ಅವುಕ್ಕೆ ಸಂಸಾರ ಎನ್ನುವುದು ಸಸಾರ ಅಲ್ಲ ಅನ್ನುವುದು ಅರಿವಾಗಿ ಮದುವೆ ಮಾಡಿಕೊಳ್ಳದೇನೆ ನಾನು ಸುಖವಾಗಿ ಇರಬಲ್ಲೆ ಎಂಬ ತೀರ್ಮಾನಕ್ಕೆ ಬಂದುಬಿಟ್ಟಿದ್ದಾರೆ. ಇಂತಹ ಕಾರಣಗಳು ಭವಿಷ್ಯದಲ್ಲಿಯೂ ಹವ್ಯಕರ ಹಳ್ಳಿಗಳು ಖಾಲಿ ಖಾಲಿ ಅನ್ನಿಸಿಕೊಳ್ಳುವುದಕ್ಕೆ ಕಾರಣವಾಗಿಬಿಟ್ಟಿವೆ. ಈ ವಲಸೆ ಪ್ರಕ್ರಿಯೆ ನಿರಂತರವಾಗಿ ನಿಧಾನವಾಗಿ ಹಬ್ಬಲು ಮುಖ್ಯ ಕಾರಣ ಇಂದಿನ ಆರ್ಥಿಕ ಮಾನದಂಡ. ಎಲ್ಲರೂ ಎಲ್ಲವನ್ನೂ ಅವನ ಬಳಿ ಬ್ಯಾಂಕ್ ಬ್ಯಾಲೆನ್ಸ್ ಎಷ್ಟಿದೆ ? ಎನ್ನುವ ತತ್ವಕ್ಕೆ ಇಳಿದಿರುವುದರಿಂದ ಹಳ್ಳಿ ಹಣದ ಥೈಲಿ ತರದಾದ್ದರಿಂದ ವಲಸೆ ಅನಿವಾರ್ಯವಾಗತೊಡಗಿದೆ. ಹಿಂದಿನ ಹಳ್ಳಿಗಳಲ್ಲಿ ಈ ಅರ್ಥಪ್ರಧಾನ ವ್ಯವಸ್ಥೆ ಆಷ್ಟೊಂದು ಗಾಢವಾಗಿರಲಿಲ್ಲ. ಇಂದಿನ ಮಾಹಿತಿ ತಂತ್ರಜ್ಞಾನದ ಪ್ರಗತಿಯಿಂದ ಹಳ್ಳಿಗರಿಗೆ ಪ್ರಪಂಚ ದರ್ಶನ ಮನೆಯಬಾಗಿಲಿನಲ್ಲಿಯೇ ದೊರೆಯುವುದರಿಂದ ಮತ್ತು ಅವುಗಳು ಪಟ್ಟಣದ ಬದುಕು ಸುಖ ಎಂದು ಬಿಂಬಿಸುವುದರಿಂದ ಇಲ್ಲಿ ಬದುಕಲಾರದೆ ಅಲ್ಲಿಗೆ ಹೋಗಲಾರದೆ ತ್ರಿಶಂಕು ಜೀವನದ ಕತೆಯಾಗಿದೆ. ಮೂವತ್ತು ನಲವತ್ತು ವರ್ಷದ ಹಿಂದಿನ ಸಿನೆಮಾಗಳಲ್ಲಿ ಹಳ್ಳಿಯ ಬದುಕನ್ನು ಬಿಂಬಿಸಿ ನಾಯಕ ನಟಿಸುತ್ತಿದ್ದ. ಮಣ್ಣಿನ ಜತೆಗಿನ ಬದುಕು ಉತ್ತಮ ಎಂಬ ಸಂದೇಶ ರವಾನಿಸುತ್ತಿದ್ದ. ಹೈಕಳು ಅದರಿಂದ ಏನೋ ಪ್ರಭಾವಿತರಾಗಿ ಹಾಡು ಹೇಳುತ್ತಾ ಉಳುಮೆ ಮಾಡುತ್ತಿದ್ದರು. ಮನಸ್ಸಿನಲ್ಲಿ ನಾನು ದೇಶದ ಬೆನ್ನೆಲುಬು ಎಂಬುದನ್ನು ಆಹ್ವಾನಿಸಿಕೊಂಡು ಸುಖಿಸುತ್ತಿದ್ದರು. ಇಂದಿನ ಸಿನೆಮಾ ಟಿವಿಗಳು ರೈತರ ಆತ್ಮಹತ್ಯೆಯನ್ನು ಬಿಂಬಿಸುತ್ತವೆ, ಹಳ್ಳಿಯ ಜೀವನ ಮಧುರ ಅಲ್ಲ ಅಂದು ಸಾರುತ್ತವೆ. ಇವೆಲ್ಲಾ ಕೊಂಚ ಮಟ್ಟಿಗೆ ಹಳ್ಳಿಯ ಜೀವನ ತೊರೆಯಲು ಪ್ರೇರೇಪಿಸುತ್ತವೆ. ಹಾಗಂತ ಪಟ್ಟಣದಲ್ಲಿದ್ದವರು ಸುಖವೊಂದರಲ್ಲೇ ತೇಲುತ್ತಿದ್ದಾರೆ ಅಂಬರ್ಥವಲ್ಲ, ಬಹಳಷ್ಟು ಜನ ಹಾಗೆ ತಿಳಿದುಕೊಂಡಿದ್ದಾರೆ.
ಹೀಗೆ ಗೊತ್ತಿರುವ ಗೊತ್ತಿಲ್ಲದ ನೂರಾರು ಕಾರಣಗಳು ಹವ್ಯಕರ ಹಳ್ಳಿಯ ಮೇಲೆ ಪರಿಣಾಮ ಆಗುತ್ತಿರುವುದಂತೂ ಸತ್ಯ. ದೂರಗಾಮಿ ಪರಿಣಾಮ ಆ ಪ್ರಕೃತಿಗೇ ಬಿಟ್ಟದ್ದು. ಹೀಗಿದೆ ಅಂತ ಒಂದು ಹುಳ ಬಿಡುವ ಕ್ರಿಯೆಯನ್ನು ನಾವು ಮಾಡಬಹುದು.
6 comments:
ಇಷ್ಟೆಲ್ಲ ಬರೆದ ಮೇಲೆ ಕಡೆಯಲ್ಲಿ ತೀರ್ಮಾನಿಸಿದಿರಲ್ಲ ಅದನ್ನು ಬಿಟ್ಟು ಬೇರೆ ದಾರಿಯಿಲ್ಲ. ಬಯಕೆಗಳು ಏಳುವಾಗಲೂ ಅದೇ ತೀರ್ಮಾನ ಕೈಹಿಡಿದು ನಡೆಸಿದರೆ ಎಷ್ಟು ಚೆನ್ನ, ಅಲ್ಲವೇ? ಅದರಲ್ಲೂ ಒಂದು ದುರಂತ. ನಾವು ಬಯಸುವುದು ಮಾತ್ರ. ಅವು ಕೈಮೇಲೆ ಬಿದ್ದರೂ, ಮೈಮೇಲೆ ಹೊರಳಾಡಿದರೂ ನಮಗೆ celebrate ಮಾಡುವ ಮನಸ್ಥಿತಿಯೇ ಇಲ್ಲವಾಗಿದೆ. ಇಂದು ಬಂದಾಗ ಮುಂದಿನದ್ದರ ಚಿಂತೆ. ಮುಂದಿನದ್ದು ಸರಿಯಾಗಿ ಕಾಣದಿದ್ದಾಗ ಅಯ್ಯೋ! ಹಿಂದೆ ಹಲವು ಆಸೆಗಳು ಈಡೇರುವುದರಲ್ಲಿತ್ತು, ಅವಕ್ಕೆಲ್ಲ ಸ್ಪಂದಿಸಲೇ ಆಗಲಿಲ್ಲವಲ್ಲ ಎಂಬ ಚಿಂತೆ. ನಗರದ ರಂಗುರಂಗು ಆಕರ್ಷಿಸುತ್ತಿರುವುದು ಸುಳ್ಳಲ್ಲ. ಬಂದವರಿಗೇ ಗೊತ್ತು ಅದರ ವಾಸ್ತವ. ವಾರದ ಐದು ದಿನ (ಕನಿಷ್ಠ) ಕತ್ತೆಯ ತರಹ ಕೂಳಿನ ಬಂಡಿ ಎಳೆದರೆ, ಆರನೆಯ ದಿನ ಸುಸ್ತು, ಏಳನೆಯ ದಿನ ಸೋಮವಾರದ ಚಿಂತೆ. ಹಾಗಿದ್ದಾಗ celebration, ಮಜಾ ಎಲ್ಲಿ ಬಂತು? ಬೇಡ ಕೂಳಿನ ಬಂಡಿಯ ಕಡೆಗೆ average ಕಾಳಜಿ ವಹಿಸಿ, ಜೀವನವನ್ನು ಸಂತೋಷದಲ್ಲಿ ಕಳೆಯುವ ಎಂದುಕೊಂಡರೆ ಅದೂ ಆಗುವುದಿಲ್ಲ. ನಮ್ಮದೆಲ್ಲ ದೊಡ್ಡದೊಡ್ಡ ಹೈಫೈ ಆಸೆಗಳು. ಅದಕ್ಕಿಂತಲೂ ಹೆಚ್ಚಾಗಿ ನಮ್ಮದೆಲ್ಲ ಅಂತಸ್ತಿಗಾಗಿ, ಮೇಲಿನ ಅಂತಸ್ತಿನಲ್ಲಿ ಬದುಕುವ ಜೀವಗಳು. ಹಾಗಾಗಿ, ಇಷ್ಟ ಇರಲಿ, ಬಿಡಲಿ ಕೂಳಿನ ಬಂಡಿ ಕಿಲೋಮೀಟರ್ಗಟ್ಟಲೆ ಸಾಗಲೇಬೇಕು. ಆಗ ಮಳೆ, ಚಳಿ, ಬಿಸಿ ಯಾವುದೂ ಅರ್ಥವೇ ಆಗುವುದಿಲ್ಲ. ನಮ್ಮದೆಲ್ಲವೂ closed atmosphere ಬದುಕಾಗಿಬಿಟ್ಟಿರುತ್ತದಲ್ಲ. ಸಂತೋಷಕ್ಕಾಗಿ ಬದುಕುವ ಪ್ರತಿ ಹೆಜ್ಜೆಗಳೂ ಸಂತಸದಿಂದ ಇದ್ದರೆ ಉದ್ದೇಶ ಈಡೇರಲೂಬಹುದು. ಹೆಣ್ಣೂ ಸಿಗಬಹುದು. ಗಂಡಾಗಬಹುದು. ಮನೆತನ ಮುಂದುವರೆಯಬಹುದು. ಮತ್ತೆ ಒಂದು ಅನಿಸುತ್ತದೆ. ಹವ್ಯಕರ ಬದುಕಿನ ಸ್ವಾರಸ್ಯ ಇಷ್ಟೇ ಅಂತಾದರೆ, ಅವರ ಸಂತತಿ ಬಹುಕಾಲ ಉಳಿದು ಏನಾಗಬೇಕು? ಅಥವಾ ಉಳಿದರೆ ಏನಾಗಬಹುದು? ಎಲ್ಲವನ್ನೂ ಪ್ರಕೃತಿಯೇ ಹೇಳಬೇಕು. ನಂದೂ ಅದೇ ನಿರೀಕ್ಷೆ. ಒತ್ತಾಯ ಮಾಡದೇ ಇಷ್ಟೂ ಹಾಗೇ ಮೂಡಿದ್ದರಿಂದ ಬರೆದೆ.
ಭಾರತೀಶ
ಶರ್ಮ ಸಾರ್,
ಇದು ಬರೀ ಹವ್ಯಕರದ್ದಷ್ಟೆ ಕಥೆಯೆ? ಖಂಡಿತ ಅಲ್ಲ ಬಯಲು ಸೀಮೆಯಲ್ಲೂ ಇಂದು ಇದೆ ಗತಿ. ಉತ್ತರ ಕರ್ನಾಟಕದಲ್ಲೂ ಪರಿಸ್ಥಿತಿ ಭಿನ್ನವಾಗೇನೂ ಇಲ್ಲ. ನಗರೀಕರಣ ಎನ್ನುವ ಭೂತ ನಮ್ಮನ್ನೆಲ್ಲಾ ಎಲ್ಲವನ್ನು ನುಂಗಿ ನೊಣೆಯುತ್ತಿದೆ. ನಿಮ್ಮಲ್ಲಿ ಕೊನೆ ಪಕ್ಷ ನೀರಾದ್ರು ಇದೆ ಕೃಷಿ ಬದುಕಿಗೆ ಬಯಲು ಸೀಮೆಯಲ್ಲಿ ಅದಕ್ಕೂ ತತ್ವಾರ. ಅನಿವಾರ್ಯವಾಗಿ ಪಟ್ಟಣಗಳತ್ತ ಮುಖ ಮಾಡುತ್ತಿದ್ದಾರೆ.
ನನಗಂತೂ ಬೆಂಗಳೂರಿನ ನಿರಂತರ ಒತ್ತಡದ ಬದುಕು ಅಸಹ್ಯವೆನಿಸಿದೆ ಆದರೇನು ಪ್ರಯೋಜನ? ಇಲ್ಲೆ ಬದುಕಬೇಕು ಒಮ್ಮೊಮ್ಮೆ ನಿಮ್ಮ ಮನೆಗೆ ಬಂದು ಲಕ್ಷ್ಮಿಯನ್ನು ನೋಡಿ ಖುಷಿಪಡಬೇಕು ಅಂದ ಹಾಗೆ ಲಕ್ಷ್ಮಿ ಅವರಮ್ಮ ಇಬ್ಬರೂ ಹೇಗಿದ್ದಾರೆ.
ಪ್ರಿಯ ಶರ್ಮರೇ
ಹವ್ಯಕರ ಹಳ್ಳಿಗಳು ಖಾಲಿಯಾಗುವುದು ಅಲ್ಲ ಮಹಾರಾಯರೇ ಹವ್ಯಕರೇ ನಶಿಸುತ್ತಿರುವ ವರ್ಗಕ್ಕೆ ಸೇರಿಸಬೇಕಾಗುವರ ಪರೀಸ್ತಿತಿ ಉಂಟಾಗಿದೆ. ಪಟ್ಟಣ ಸೇರುವ ಯುವ ಹವ್ಯಕರ ಮೂರನೇಯ ತಲೆಮಾರಿಗೆ ತಲಪುವಾಗ ಹವ್ಯಕರಾಗಿ ಉಳಿಯುವ ಸಾದ್ಯತೆಗಳು ಬಹಳ ಅತ್ಯಲ್ಪ. ಅವಿಲಿನಲ್ಲಿರುವ ತರಕಾರಿಯಂತೆ ಪ್ರತ್ಯೇಕತೆ ಕಳಕೊಳ್ಳುತ್ತಾರೆ. ಆ ಬಗ್ಗೆ ನಾನೊಂದು ಬರಹ ಬೆಂಗಳೂರ ಹವ್ಯಕ ಪತ್ರಿಕೆಗೆ ಬರೆದರೆ RMP ವ್ಯವಹಾರದಲ್ಲಿ ಮುಳುಗಿರುವ ಅದರ ಸಂಪಾದಕರು ತಿರುಳು ಎಸೆದು ಸಿಪ್ಪೆ ಪ್ರಕಟಿಸಿದರು. ಈ ಬಗೆಗೆ ಕಾಳಜಿ ನಮ್ಮ ಸಮಾಜದ ಪತ್ರಿಕೆಗೆ ಇರಲೇ ಬೇಕಾಗಿತ್ತು. ಅಂದ ಹಾಗೆ ನಮ್ಮಲ್ಲಿ ಹೊಸ ಪ್ರಯೋಗ ಪ್ರಾರಂಬವಾಗಿದೆ. ಹುಡುಗ ಮದುವೆ ನಿಶ್ಚಯವಾಗುವ ವರೆಗೆ ಬೆಂಗಳೂರಲ್ಲಿ ಉದ್ಯೋಗಿಯಾಗುವುದು. ಅನಂತರ ಪರವಾಗಿಲ್ಲ.. ಈ ಬಗ್ಗೆ http://prasadyerumbu.blogspot.com/2008/12/blog-post.html ಒಮ್ಮೆ ಕಣ್ಣಾಡಿಸಿ
ಗೋವಿಂದ
ಸುಖದ ಆಸೆ ಮನುಷ್ಯನ ಬದುಕಿಗೆ ಇಂಧನ. ಸುಖದ ಕಲ್ಪನೆ ಒಬ್ಬೊಬ್ಬರಿಗೆ ಒಂದೊಂದು ತರಹ ಇರಬಹುದು. ಸುಖ ತೀರ ವೈಯಕ್ತಿಕವಾದ ಅನುಭವ.( ಎಲ್ಲ ಅನುಭವಗಳೂ ಹಾಗೇ). ಹವ್ಯಕರೆಲ್ಲ ವಲಸೆ ಹೋಗಲು ಇದೂ ಒಂದು ಕಾರಣವಿರಬಹುದೇ ಎಂಬ ಅನುಮಾನ ನನಗೆ. ನಮ್ಮ ಮತ್ತು ನಮ್ಮ ಹಿಂದಿನ ತಲೆಮಾರುಗಳ ನಡುವಿನ ಜೀವನ ವಿಧಾನ ಗಮನಿಸಿದರೆ ಹಾಗನ್ನಿಸಲ್ಲವಾ?
ದಿಢೀರನೆ ಹವ್ಯಕರ ಬಗ್ಗೆ ಬರೆಯಲು ಕಾರಣವೇನು!.. ಕಾರಣರಾದವರು ಯಾರು?
ಎಲ್ಲದಕ್ಕೂ ಮೂಲ ಕಾರಣ ಜನರಿಗೆ ಜೀವನವೆಂದರೆ ಬರಿ ದುಡ್ಡಿಗಾಗಿ ಮತ್ತು ಮೋಜಿಗಾಗಿ ಅನ್ನುವ ಮನೋಭಾವನೆ. ದುಡ್ಡೇ ದೊಡ್ಡಪ್ಪ ಅನ್ನುವ ಪರಿಸ್ಥಿತಿ ಈಗ ಎಲ್ಲರಲ್ಲೂ ಬೇರೂರಿದೆ. ಬಹುಶಃ ಇದನ್ನೆಲ್ಲಾ ತಿಳಿದೇ ದೊಡ್ಡವರು ಹೇಳಿದ್ದು ಕಲಿಗಾಲ ಬಂತು ಅಂದಿದ್ದು ಅನ್ಸತ್ತೆ.
ಹವ್ಯಕರ ಮನೆಗಳು ವೃದ್ದಾಶ್ರಮಗಳಾಗುತ್ತಿವೆ. ಅಲ್ಲಿಂದ ಪಟ್ಟಣಕ್ಕೆ ಬಂದವರು (ನನ್ನಂತವರು) ಇಲ್ಲಿಯೂ ಇರಲಾಗದೇ ಅಲ್ಲಿಗೂ ಹೋಗಲಾರದೆ ತ್ರಿಶಂಕು ರೀತಿಯಲ್ಲಿದ್ದೇವೆ. ನಾವು ತೀರ್ಮಾನ ತೆಗೆದುಕೊಳ್ಳುವುದರೊಳಗೆ ಪ್ರಪಂಚದಿಂದ ಗಂಟು ಮೂಟೆ ಕಟ್ಟೋ ಹೊತ್ತು ಬಂದಿರತ್ತೆ.
Post a Comment