ಹೀಗೆ ಬರೆಯುತ್ತಾ ಬರೆಯುತ್ತಾ ನಾನು ಒಂದು ದಿನ ಇಲ್ಲವಾಗುತ್ತೇನೆ. ಹಾಗೆ ಓದುತ್ತಾ ಓದುತ್ತಾ ನೀವು ಕೂಡ ಅಷ್ಟೆ. ಆದರೆ ಬರಹಗಳು ಉಳಿಯುತ್ತವೆ. ಭಾಷೆಗಳು ಉಳಿಯುತ್ತವೋ ಇಲ್ಲವೋ ಗೊತ್ತಿಲ್ಲ. ಒಂದಾನೊಂದು ಕಾಲಕ್ಕೆ ಭಾಷೆಯಾಗಿದ್ದ ಕನ್ನಡ ಈಗ ಹಳೆಗನ್ನಡ ಎಂಬ ಹೆಸರು ಪಡೆದು ನಮಗೆ ನಿಮಗೆ ಅರ್ಥವಾಗದಂತಾಗಿದೆ. ಹಾಗೆಯೇ ಈಗ ನಾನು ಬರೆದದ್ದು ನೀವು ಓದಿದ್ದು ಮುಂದೊಂದು ದಿನ ಯಾರಿಗೂ ಅರ್ಥವಾಗದಿರಬಹುದು. ಅಥವಾ ನಾವು ಬರೆದ ರೀತಿಯಲ್ಲಿ ಅರ್ಥವಾಗದಿರಬಹುದು. ಹೀಗೊಂದು ವಾಕ್ಯವಿದೆ "ನಾನು ನಿನ್ನ ಕೊಡೆ ಕದ್ದಿಲ್ಲ". ಈ ವಾಕ್ಯದ ಮಜ ಹೇಗಿದೆ ಎಂದರೆ ವಾಕ್ಯದ ಒಂದೊಂದು ಶಬ್ಧವನ್ನು ಒತ್ತಿ ಹೇಳಿದಾಗ ಒಂದೊಂದು ಅರ್ಥವನ್ನು ನಿಡುತ್ತದೆ. "ನಾನು ನಿನ್ನ ಕೊಡೆ ಕದ್ದಿಲ್ಲ" ಎಂದು ನಿನ್ನ ಶಬ್ಧವನ್ನು ಒತ್ತಿ ಹೇಳಿದಾಗ ನಿನ್ನ ಕೊಡೆ ಕದ್ದಿಲ್ಲ ಬೇರೆಯವರ ಕೊಡೆ ಕದ್ದಿದ್ದೇನೆ ಎಂಬ ಅರ್ಥವನ್ನು ಕೊಡೆ ಶಭ್ಧವನ್ನು ಮಾತ್ರ ಒತ್ತಿ ಹೇಳಿದಾಗ ಕೊಡೆ ಕದ್ದಿಲ್ಲ ಬೇರೆ ಏನನ್ನೋ ಕದ್ದಿದ್ದೇನೆ ಎಂದು ಹಾಗೂ ಕದ್ದಿಲ್ಲ ಎಂಬ ಶಬ್ಧವನ್ನು ಒತ್ತಿ ಹೇಳಿದಾಗ ನಾನು ಕದ್ದಿಲ್ಲ ತೆಗೆದುಕೊಂಡು ಹೋಗಿದ್ಡೇನೆ ಎಂಬ ಅರ್ಥವನ್ನು ನೀಡುತ್ತದೆ. ಹೀಗೆ ಸಹಜವಾಗಿದ್ದ ಒಂದು ವಾಕ್ಯ ಆಡುವಾಗಿನ ವ್ಯತ್ಯಾಸದಿಂದ ಮೂಲವಾದ ಅರ್ಥಕ್ಕೆ ತದ್ವಿರುದ್ದವಾದ ಅರ್ಥವನ್ನು ನೀಡಿಬಿಡುತ್ತದೆ. ವರ್ತಮಾನದಲ್ಲಿಯೇ ಬರಹಗಳು ಇಷ್ಟೊಂದು ಅವಾಂತರ ತಂಡಿಡಬಲ್ಲದಾದರೆ ನೂರಾರು ವರ್ಷದ ನಂತರ ದುರಂತವನ್ನೇ ಸೃಷ್ಟಿಸಬಿಡಬಲ್ಲದು ಭಾಷೆ. ಈಗಿನ ಕನ್ನಡದಲ್ಲಿ ನೂರಾರು ಆಂಗ್ಲ ಪದಗಳು ತುಂಬಿ ತುಳುಕಾಡುತ್ತಿವೆ. ಮುಂದೊಂದು ದಿನ ಅವೇ ಕನ್ನಡವಾಗುತ್ತವೆ. ಹಾಗಂತ ಈ ಭಾಷೆಯ ಸಮಸ್ಯೆ ಕೇವಲ ಕನ್ನಡಕ್ಕೆ ಅಂತೇನೂ ಅಲ್ಲ ಇಂಗ್ಲೀಷ್ ಸೇರಿದಂತೆ ಜಗತ್ತಿನ ಎಲ್ಲಾ ಭಾಷೆಗೂ ಇದೇ ಸಮಸ್ಯೆ.
ಅಣುಸ್ಥಾವರದ ಹಾರುಬೂದಿಯನ್ನು ಹೂತಿಡುವಾಗ ಇದೇ ಸಮಸ್ಯೆ ಎದುರಾಯಿತಂತೆ. ಆ ಅಣುಸ್ಥಾವರ ಬೂದಿ ಸಾವಿರ ವರ್ಷಗಳ ಕಾಲ ವಿಕಿರಣವನ್ನು ಸೂಸುತ್ತಿರುತ್ತದೆಯಂತೆ. ಹಾಗಾಗಿ ಅದನ್ನು ಎಲ್ಲೆಂದರಲ್ಲಿ ಬಿಸಾಡುವಂತಿಲ್ಲ. ಅದರ ಸಂಪರ್ಕ ಮನುಷ್ಯನಿಗೆ ಅಥವಾ ಯಾವುದೇ ಪ್ರಾಣಿಗಳಿ ಬಂದಲ್ಲಿ ರೋಗರುಜಿನ ಕಟ್ಟಿಟ್ಟ ಬುತ್ತಿ. ಸಾವಿರ ವರ್ಷಗಳ ಕಾಲ ಅಪಾಯವನ್ನು ಕಂಕುಳಿನಲ್ಲಿ ಇಟ್ಟುಕೊಂಡು ಕಾಪಾಡುವುದೂ ಒಂದು ಕಷ್ಟಕಾರಕ ಕೆಲಸವೆ. ಬೂದಿಯನ್ನಿಟ್ಟ ಜಾಗದಲ್ಲಿ ಡೇಂಜರ್ ಎಂದು ಬರೆದ ಬೋರ್ಡ್ ಇಡಬೇಕು. ಸರಿ ಓದುವನಿಗೆ ಇಂಗ್ಲೀಷ್ ಬರದಿದ್ದರೆ ಎಂಬ ಚಿಂತೆ. ಆಯಿತು ಜಗತ್ತಿನ ಎಲ್ಲಾ ಭಾಷೆಯಲ್ಲಿಯೂ ಹಾಗೆ ಬರೆದಿಡಬೇಕು. ಅದು ಸರಿ ಆದರೆ ಅಕ್ಷರ ಓದಲು ಬಾರದಿದ್ದವನಿಗೆ ಎಂಬ ಚಿಂತೆ. ಓದಲು ಬಾರದಿದ್ದವನಿಗೆ ಅಂತ ಮಾನವನ ತಲೆಬುರುಡೆ ಪಕ್ಕಕ್ಕೆರಡು ಎಲುಬಿನ ಚಿತ್ರ ಬಿಡಿಸಿಟ್ಟರೆ ಆತ ಆಪಾಯ ಎಂದು ಅರ್ಥೈಸಿಕೊಳ್ಳುತ್ತಾನೆ. ಸರಿ ಈ ಭಾಷೆ ಈ ಚಿಹ್ನೆ ಗಳೆಲ್ಲಾ ಈಗ ಸರಿ ಇನ್ನು ಮುನ್ನೂರು ವರ್ಷದಲ್ಲಿ ಯಾವ ಬದಲಾವಣೆ ಆಗುತ್ತದೆ ಅಂತ ಯಾರು ಬಲ್ಲರು?. ತಲೆಬುರುಡೆಯೇ ದೇವರಾದರೆ.?. ಮತ್ತೆ ಅಪಾಯ ಕಟ್ಟಿಟ್ಟ ಬುತ್ತಿ. "ಓಹೋ ಇದು ದೇವರ ಆವಾಸಸ್ಥಾನ " ಎಂದು ಯಾರಾದರೂ ಪೂಜೆ ಶುರುವಿಟ್ಟುಕೊಂಡರೆ ಅಣುಬೂದಿಯನ್ನು ಭಸ್ಮ ಅಂತ ತಿಳಿದು ಲೇಪಿಸಿಕೊಂಡರೆ? . ಭಾಷೆಯೂ ಹಾಗೆ ಡೇಂಜರ್ ಅಥವಾ ಅಪಾಯ ಎನ್ನುವುದು ಬದಲಾದರೆ. ಅಂತಿಮವಾಗಿ ಅಮೆರಿಕಾದ ವಿಜ್ಞಾನಿಗಳು ಒಂದು ತೀರ್ಮಾನಕ್ಕೆ ಬಂದರಂತೆ. ಪ್ರತೀ ಇಪ್ಪತ್ತದು ವರ್ಷಕ್ಕೊಮ್ಮೆ ಅಲ್ಲಿನ ನಾಮಫಲಕವನ್ನು ಹೊಸದಾಗಿ ಬರೆಯಬೇಕು. ಆಗ ಈ ಬೂದಿಯ ಅಪಾಯ ನಿರಂತರವಾಗಿ ಅರಿವಿಗೆ ಬರುತ್ತದೆ. ಅಮೆರಿಕಾದಲ್ಲಾದರೆ ಸರಿ ನಮ್ಮಂತಹ ದೇಶದಲ್ಲಿ ಹತ್ತು ವರ್ಷದ ಪ್ಲಾನ್ ನಮ್ಮಲ್ಲಿಲ್ಲ ಇನ್ನು ಸಾವಿರ ವರ್ಷದ ಕಥೆ ಆಮೇಲಿನದು.
ಅಯ್ಯೋ ಈಗಿನದು ಈಗ ಮುಂದಿನದು ಯಾರಿಗೆ ಗೊತ್ತು ಅಂದಿರಾ..? ಯೆಸ್ ನಿಮ್ಮಂತೆ ನಾನು. ಹ್ಯಾವ್ ಯೆ ನೈಸ್(ಖೇಣೀ ನೈಸ್ ಅಲ್ಲ) ಡೆ
3 comments:
hmm nija nija . navu baryodu ondu artha agodu ondu
ನಾನು ಕೊಡೆ ಕದ್ದಿಲ್ಲ ಎಂಬ ಮಾತಿನಲ್ಲಿ ನಾನು ಎಂಬುದಕ್ಕೆ ಒತ್ತು ಕೊಟ್ಟರೆ ಬೇರೆ ಯಾರೋ ಕೊಡೆ ಕದ್ದಿದ್ದಾರೆ ಎಂಬ ಅರ್ಥ ಬರುತ್ತೆ. ಗಮನಿಸಿಲ್ಲವಾ? ಸ್ವರಾಭಿವ್ಯಕ್ತಿಗೂ ಅಕ್ಷರಾಭಿವ್ಯಕ್ತಿಗೂ ಇದೇ ವ್ಯತ್ಯಾಸ. ಇದು ಭಾಷೆಯ ಅಂತರ್ಗುಣ. ಭಾಷೆ ಹುಟ್ಟಿದ ಪ್ರಾರಂಭಿಕ ಹಂತದಲ್ಲಿ ಸ್ವರ ಭಿನ್ನತೆಯಿಂದ ಅರ್ಥಭಿನ್ನತೆಯನ್ನು ಹುಟ್ಟಿಸುವುದು ಅಗತ್ಯವೇ ಆಗಿತ್ತೋ ಏನೋ. ಹಾಗಾಗಿಯೇ ಮಂತ್ರಗಳನ್ನು ಕೇಳಿಯೇ ಕಲಿಯುವ ಪರಂಪರೆಯಿತ್ತು. ಸ್ವರ ಅಕ್ಷರರೂಪದಲ್ಲಿ ಬರೆಹವಾದಾಗ, ಅದರ ಕಾಲವ್ಯಾಪ್ತಿ, ದೇಶವ್ಯಾಪ್ತಿ ವಿಸ್ತಾರವಾಯಿತು; ಆದರೆ ಅರ್ಥವ್ಯಾಪ್ತಿ ಕುಂದಿತು ಅನಿಸುತ್ತೆ.
Which language have you written this article in? :D
Post a Comment