Saturday, January 31, 2009

ಭತ್ತವ ನುಂಗುತ್ತಿರುವ ಅಡಿಕೆಗಳು




ತೇನವಿನಾ ತೃಣಮಪಿನಚಲತಿ ಅಂತ ಭಗವಂತನ ಕುರಿತು ಸಂಸ್ಕೃತದಲ್ಲಿ ವಾಕ್ಯವೊಂದಿದೆ. ಇರಬಹುದು ಆತನ ಅಣತಿಯಿಲ್ಲದೆ ಒಂದು ಹುಲ್ಲುಕಡ್ಡಿಯೂ ಚಲಿಸದೇ ಇರಬಹುದು ಅಥವಾ ಹುಲ್ಲುಕಡ್ಡಿ ಚಲಿಸಿದ್ದಕ್ಕೆ ಭಗವಂತನನ್ನು ಹೆಸರಿಸಬಹುದು ಆದರೆ ನಾನು ಇಲ್ಲಿ ಹೇಳುತ್ತಿರುವುದು ಆ ಭಗವಂತನಲ್ಲ ಆಹಾರ ಧಾನ್ಯ ಬೆಳೆಯುವ ರೈತನೆಂಬ ಭಗವಂತನ ಕುರಿತು. ಹಾಗಾಗಿ ಇಲ್ಲಿ ನನ್ನ ಪಾಲಿಗೆ ರೈತನೇ ಭಗವಂತ. ( ಇರಲಿ ಹೀಗೆ ಹೇಳುತ್ತಾ "ಅವನೆ ನೋಡು ಅನ್ನದಾತ ಹೊಲದಿ ದುಡಿವೆ ದುಡಿವನು ನಾಡಜನರು ಬದುಕಲೆಂದು ಧವಸ ಧಾನ್ಯ ಬೆಳವನು" ಎಂದು ರೈಲು ಹಚ್ಚುತ್ತಾ ಬಂದಾಗಿದೆ. ಈಗ ಅದು ಸಾಲದು ಎಂದು ಭಗವಂತ ಅಂಬೋ ತುಸು ಹೆಚ್ಚಿನ ಲೆವಲ್ ನೀಡಬೇಕಾಗಿದೆ.)

ರೈತರುಗಳಲ್ಲಿ ಎರಡು ಬಗೆಯವರು ಮೊದಲನೆಯವರು ಆಹಾರ ಧಾನ್ಯ ಉತ್ಪಾದಕರು ಎರಡನೆಯವರು ತೋಟಗಾರಿಕಾ ಬೆಳೆಗಳ ಉತ್ಪಾದಕರು. ನಮ್ಮ ಭಾಗದಲ್ಲಿ ಕ್ರಮವಾಗಿ ಭತ್ತ ಬೆಳೆಯುವವರು ಹಾಗೂ ಅಡಿಕೆ ಬೆಳೆಯುವವರು ಎಂದು ವರ್ಗೀಕರಿಸಲಾಗಿದೆ. ಅಡಿಕೆ ಬೆಳೆಯೆಂಬ ಬೆಳೆಗಾರರು ಲಾಗಾಯ್ತಿನಿಂದಲೂ "ಈ ವರ್ಷ ಬದುಕುವುದು ಕಷ್ಟ ಅಡಿಕೆಗೆ ದರ ಇಲ್ಲ, ಇದೇ ರೀತಿ ಮುಂದುವರೆದರೆ ಹೇಗೋ...!" ಎಂಬ ಮಾತುಗಳನ್ನಾಡುತ್ತಾ ಯಾವಗಲೂ ಭವಿಷ್ಯದ ಜೀವನದ ಬಗ್ಗೆ ನೆಗೇಟೀವ್ ಯೋಚನೆ ಮಾಡುತ್ತಾ ಬಂದಿರುವವರು. ಹೀಗೆ ಅಷ್ಟು ಬೇಡದ ಯೋಚನೆಗೆ ಸಮಯ ಸಿಕ್ಕುತ್ತದೆ. ಆದರೆ ಭತ್ತದ ಬೆಳೆಗಾರನ ಸ್ಥಿತಿ ಹಾಗಲ್ಲ. ಆತನಿಗೆ ಹೀಗೆಲ್ಲಾ ಭವಿಷ್ಯದ ಬಗ್ಗೆ ಯೋಚಿಸಲು ಸಮಯವೇ ಇಲ್ಲ. ಬೆಳೆದ ಭತ್ತ ಗಟ್ಟಿ ಊಟಮಾಡಿದರೆ ಆರುತಿಂಗಳಿಗೆ, ಸ್ವಲ್ಪ ಅರೆಹೊಟ್ಟೆ ಯಾದರೆ ಇನ್ನೊಂದು ತಿಂಗಳು ಜಾಸ್ತಿ ಬರುತ್ತದೆ. ಮಿಕ್ಕ ಸಮಯದಲ್ಲಿ ಆತ ಕೂಲಿನಾಲಿಯನ್ನು ಅವಲಂಬಿಸಬೇಕಾಗುತ್ತದೆ. ಇದು ಮಲೆನಾಡಿನ ಭತ್ತ ಬೆಳೆವ ರೈತನ ಪರಿಸ್ಥಿತಿ. ಅವ ನಿಜವಾದ ಅನ್ನದಾತ.! ಆತನ ಬೆಳೆ ಮಳೆ ನಂಬಿ ಬೆಳೆ. ಕೈ ಕೆಸರಾದರೆ ಬೇರೆಯವರ ಬಾಯಿ ಮೊಸರು ಎಂಬ ಗಾದೆ ಅವನಿಗಾಗಿಯೇ.
ಬಯಲು ಸೀಮೆಯ ಆಹಾರ ಧಾನ್ಯದ ಗದ್ದೆಗಳೆಲ್ಲ ಅಡಿಕೆ ಭಾಗಾಯ್ತು ಆಗುತ್ತಾ ಹೊರಟಿತು . ಪಟ್ಟಣದಲ್ಲಿ ಸಾಪ್ಟವೇರ್ ಡಾಕ್ಟರ್ ಲಾಯರ್ ಗಳೆಲ್ಲಾ ಟ್ಯಾಕ್ಸ್ ಉಳಿಸಲು ಹಳ್ಳಿಗಳಲ್ಲಿ ತೋಟ ಎಬ್ಬಿಸುತ್ತಿದ್ದಾರೆ. ಅದು ಅವರಿಗೆ ಉಪ ಆದಾಯ. ಇಂತಹ ಪರಿಸ್ಥಿತಿಯಲ್ಲಿ ವರ್ಷದಿಂದ ವರ್ಷಕ್ಕೆ ಹಣದ ಬೆಳೆಯ ಹಿಂದೆ ಅನ್ನದಾತರ ದಂಡು ಹೊರಟಿತು. ಯಾರಿಗೆ ಹಣದಾಸೆ ಇರುವುದಿಲ್ಲ. ಅದು ಸಹಜ. ಆದರೆ ಈಗ ಐದು ವರ್ಷದಿಂದ ನಿಜವಾಗಿಯೂ ಹಣದ ಬೆಳೆಯಾದ ಅಡಿಕೆಯ ಸ್ಥಿತಿ ವರ್ಷದಿಂದ ವರ್ಷಕ್ಕೆ ಅಧೋಗತಿಯತ್ತ ಹೊರಟಿದೆ. ಭತ್ತದ ಗದ್ದೆ ಅರೆಬರೆ ತೋಟವಾಗಿ ನಿಂತಿದೆ. ಇತ್ತ ಭತ್ತ ಇಲ್ಲ ಅತ್ತ ಅಡಿಕೆ ಬರಲಿಲ್ಲ. ಎಂಬಂತಹ ಸ್ಥಿತಿ. ಅಡಿಕೆ ದರದ ಕುಸಿತ ಪಟ್ಟಣದಲ್ಲಿ ಒಳ್ಳೆಯ ಉದ್ಯೋಗದಲ್ಲಿದ್ದು ಇಲ್ಲಿ ತೋಟ ಮಾಡಿದವರಿಗೆ ಬಾಧಿಸದು. ಆದರೆ ಇಲ್ಲಿ ಅದನ್ನೇ ಜೀವನಾಧಾರವಾಗಿಟ್ಟು ಕೊಂಡು ಹೊರಟ ರೈತಾಪಿ ಜನ ಕಣ್ಣುಕಣ್ಣು ಬಿಡುವಂತಾಗಿದೆ. ಅವರಿಗೆ ಪಟ್ಟಣಕ್ಕೆ ಹೋಗಿ ಲಾಯರ್ ಡಾಕ್ಟರ್ ಆಗುವಂತಿಲ್ಲ.
ಹೀಗೆ ಅಡಿಕೆಯೆಂಬ ಮಾಯಾವಿ ಭತ್ತವನ್ನು ನುಂಗಿ ಅದನ್ನು ನಂಬಿದ್ದ ಎಲ್ಲರನ್ನೂ ಮುಳುಗಿಸುವ ಹಂತಕ್ಕೆ ತಲುಪಿಸಿದೆ. ಯಾರ್ಯಾರು ಬಚಾವಾಗುತ್ತಾರೋ ಅದು ಪ್ರಕೃತಿಯ ಆಸೆಗೆ ಬಿಟ್ಟದ್ದು.

No comments: