Sunday, May 10, 2009

ಏನಂತೀರಿ?

ಆಸ್ಥಾನದಲ್ಲಿ ರಾಜ ಒಡ್ಡೋಲಗವನ್ನಿತ್ತಿದ್ದ. ಇಬ್ಬರು ಮಹಿಳೆಯರು ಸಮಸ್ಯೆಯನ್ನುಹೊತ್ತು ತಂದರು. ಸಮಸ್ಯೆ ಏನಪಾ ಅಂತಂದ್ರೆ. ಒಂದು ಮಗು. ಆ ಮಗುವಿನ ಹೆಸರಲ್ಲಿ ಹೇರಳ ಆಸ್ತಿ. ಇಬ್ಬರು ಹೆಂಗಸರೂ ಮಗು ತನ್ನದು ತನ್ನದು ಎನ್ನುತ್ತಿದ್ದಾರೆ. ಮಗುವಿಗೆ ಇವಳೇ ನನ್ನ ಅಮ್ಮ ಅನ್ನುವ ವಯಸ್ಸಲ್ಲ. ರಾಜನಿಗೆ ಪೀಕಲಾಟ.ಯಾವ್ಯಾವ ತರಹದ ಪ್ರಶ್ನೆ ಕೇಳಿದರೂ ಇಬ್ಬರೂ ಸಮರ್ಪಕವಾಗಿ ಉತ್ತರಿಸುತ್ತಿದ್ದಾರೆ. ಹೇಗೆ ಬಗೆಹರಿಸುವುದು ಎಂದು ರಾಜನಿಗೆ ಸಮಸ್ಯೆಯಾಯಿತು. ಆಗ ರಾಜ ಸಮಸ್ಯೆಯಿಂದ ಹೊರಬರಲು ವೃದ್ಧ ಜ್ಞಾನಿಯ ಮೊರೆಹೊಕ್ಕ.
ವೃದ್ಧ ತಾನು ಸಮಸ್ಯೆಯನ್ನು ಬಗೆಹರಿಸುವುದಾಗಿ ಆಸ್ಥಾನಕ್ಕೆ ಬಂದ. ಒಂದರ್ದ ಗಂಟೆ ಹೆಂಗಸರ ಅಹವಾಲು ಕೇಳಿ ನಂತರ "ಓಹೋ ಹಾಗಾದರೆ ಇದಕ್ಕೆ ಒಂದೇ ಪರಿಹಾರ ಮಗುವನ್ನು ಅರ್ದ ತುಂಡರಿಸಿ ಇಬ್ಬರಿಗೂ ಸಮನಾಗಿ ಹಂಚುವುದೊಂದೇ ಸಮರ್ಪಕವಾದ ಮಾರ್ಗ" ಎನ್ನುತ್ತಾ ರಾಜನ ಓರೆಯಲ್ಲಿದ್ದ ಕತ್ತಿಯನ್ನು ತೆಗೆದುಕೊಂಡು ಮಗುವಿನತ್ತ ಧಾವಿಸಿದ. ಅವನ ರಭಸಕ್ಕೆ ಒಬ್ಬ ಮಹಿಳೆ ಓಡಿಬಂದು ವೃದ್ಧನ ಕಾಲು ಹಿಡಿದು " ಸ್ವಾಮಿ ಮಗು ನನ್ನದಲ್ಲ ನೀವು ಅದನ್ನು ತುಂಡರಿಸುವುದು ಬೇಡ ಆಕೆಗೆ ಕೊಟ್ಟುಬಿಡಿ" ಎನ್ನುತ್ತಾ ಬೋರಲು ಬಿದ್ದಳು. ತಕ್ಷಣ ವೃದ್ಧ "ಸುಲಭವಾಗಿ ಪರಿಹಾರವಾಯಿತಲ್ಲ ಸಮಸ್ಯೆ ಮಗು ಈಕೆಯದೇ ಇವಳಿಗೆ ನೀಡಿ" ಎಂದು ತೀರ್ಪನ್ನಿತ್ತ. ಎಲ್ಲರಿಗೂ ಆಶ್ಚರ್ಯ. ಮಗು ತನ್ನದಲ್ಲ ಎಂದವಳಿಗೆ ಮಗು ಕೊಡಿ ಎಂದನಲ್ಲ ಎಂದು. ವೃದ್ದ ಅದಕ್ಕೆ "ನಿಜವಾದ ತಾಯಿ ಮಗುವನ್ನು ಕತ್ತರಿಸಲು ಬಿಡಲಾರಳು ವ್ಯಾಮೋಹ ಅದು ಹಾಗಾಗಿ ಹೀಗೆ" ಎಂದ. ಜನರು ವೃದ್ಧನ ಬುದ್ದಿವಂತಿಕೆಗೆ ಮನ ಸೋತರು.
ಇದು ಕತೆಯಾಯಿತು. ಅಕ್ಷರ ರೂಪ ತಳೆಯಿತು. ಕಾಲ ಕಳೆಯಿತು.
ಮತ್ತೊಂದು ದಿನ ಮತ್ತೊಬ್ಬ ರಾಜನ ಆಸ್ಥಾನಕ್ಕೆ ಇದೇ ತರಹದ ಸಮಸ್ಯೆ ಬಂತು. ರಾಜ ಈ ಹಳೇ ಕತೆಯನ್ನು ಓದಿದ್ದ. ಹಾಗಾಗಿ ಈ ಸಮಸ್ಯೆಯನ್ನು ಬಗೆಹರಿಸುವುದು ಸುಲಭ ಎಂದು" ಓಹೋ ಹಾಗಾದರೆ ಇದಕ್ಕೆ ಒಂದೇ ಪರಿಹಾರ ಮಗುವನ್ನು ಅರ್ದ ತುಂಡರಿಸಿ ಇಬ್ಬರಿಗೂ ಸಮನಾಗಿ ಹಂಚುವುದೊಂದೇ ಸಮರ್ಪಕವಾದ ಮಾರ್ಗ" ಎನ್ನುತ್ತಾ ರಾಜ ಓರೆಯಲ್ಲಿದ್ದ ಕತ್ತಿಯನ್ನು ತೆಗೆದುಕೊಂಡು ಮಗುವಿನತ್ತ ಧಾವಿಸಿದ . ಆದರೆ ಈಗ ಇಬ್ಬರೂ ಮಹಿಳೆಯರೂ "ಬೇಡ ಮಹಾರಾಜ ಮಗು ನನ್ನದಲ್ಲ ಅವಳಿಗೆ ಕೊಡಿ" ಎಂದು ಹೇಳುತ್ತಾ ಒಟ್ಟಿಗೆ ಬಂದು ರಾಜನ ಕಾಲು ಹಿಡಿದರು. ರಾಜ ಈಗ ತಬ್ಬಿಬ್ಬಾದ. ರಾಜನಂತೆ ಆ ಮಹಿಳೆಯರೂ ಈ ಕತೆಯನ್ನು ಓದಿಬಿಟ್ಟಿದ್ದರು. ಮತ್ತೆ ಈ ರಾಜನಿಗೂ ಜ್ಞಾನಿಯ ಮೊರೆ ಹೋಗುವುದು ಅನಿವಾರ್ಯ ವಾಯಿತು. ಜ್ಞಾನಿ ಬಂದು "ನ್ಯಾಯ ಸುಲಭ, ಮಗುವನ್ನು ಈಕೆಗೆ ಕೊಡಿ ಆಸ್ತಿಯನ್ನು ಆಕೆಗೆ ಕೊಡಿ" ಎಂದ. ತಕ್ಷಣ ಮಗು ಪಾಲಿಗೆ ಬಂದಾಕೆ " ಮಗು ನನ್ನದಲ್ಲ ಆಕೆಯದೇ" ಎಂದಳು. ಮರುಕ್ಷಣ ಜ್ಞಾನಿ " ಆಸ್ತಿ ಮತ್ತು ಮಗುವನ್ನೂ ಆಕೆ ಕೊಡಿ " ಎಂಬ ತೀರ್ಪನ್ನಿತ್ತ. ಜನ ಈಗಲೂ ನಿಬ್ಬೆರಗಾದರು ಅದು ಹೇಗೆ? ಎಂದರು. ಜ್ಞಾನಿ ಹೇಳಿದ " ಈಕೆಯ ಆಸ್ತಿ ಮೋಹ ಮಗು ಯಾರದೆಂಬ ಸತ್ಯವನ್ನು ಹೊರಡಿಸಿತು ಎಂದ.
ಇದೂ ಕೂಡ ಕತೆಯಾಗುತ್ತದೆ . ಮತ್ಯಾರೋ ಓದುತ್ತಾರೆ ಅನುಷ್ಠಾನಕ್ಕೆ ತರುತ್ತಾರೆ. ಮತ್ತು ತೀರ್ಪು ಹೇಳಲಾಗದೆ ಪಿಗ್ಗಿ ಬೀಳುತ್ತಾರೆ. ಹಾಗಾಗಿ ಅನುಕರಣೆ ಯಾವಾಗಲೂ ಕಷ್ಟ. ಸ್ವಯಂ ಜ್ಞಾನ ಎಲ್ಲರಿಗೂ ಪರಿಹಾರ. ಏನಂತೀರಿ?

3 comments:

ಮೂರ್ತಿ ಹೊಸಬಾಳೆ. said...

raaghu maava neevu heeluvudu noorakke nooru satya.
haagaagiyee naanu ooduvudannu chikkandinalle bittiddeene.

Unknown said...

hmm. Mattu neenu succes kuda adyala. adu great

PARAANJAPE K.N. said...

ಕಥೆ, ಕಥೆಯೊಳಗಿನ ನೀತಿ ಚೆನ್ನಾಗಿದೆ.