Thursday, May 14, 2009

ಗಂಗೆ ಬಾರೆ ...ಗೌರೀ ಬಾರೆ


ಗೋವಿನ ಆ ಹಾಡು ಕೇಳಲು ಎಂತಹಾ ಆನಂದ. ಅದಕ್ಕೊಂದು ರೂಪಕ ಅಳವಡಿಸಿದರೆ ಮುಗಿದೇ ಹೋಯಿತು ಒಂದೆರಡು ದಿವಸ "ಧರಣಿ ಮಂಡಲ ಮಧ್ಯದೊಳಗೆ" ಗುನುಗುತ್ತಿರಬೇಕು. ತೀರಾ ಭಾವುಕರಾದರೆ ಹಾಡನ್ನು ಕೇಳುತ್ತಾ ಕೇಳುತ್ತಾ ನಾಲ್ಕಾರು ಕಣ್ಣೀರು ಹನಿಗಳು ಉದುರಿದರೂ ಆಶ್ಚರ್ಯವಿಲ್ಲ. ಪಾಪದ ಗೋವು- ಸತ್ಯದ ಗೋವು-ತಾಯಿ ಮಮತೆಯ ಗೋವು ಹೀಗೆ ಹತ್ತಾರು ಭಾವಗಳನ್ನು ಹುಟ್ಟಿಸುತ್ತದೆ ಆ ಹಾಡಿನ ಮೂಲಕ. ಮುಸ್ಸಂಜೆಯಲ್ಲಿ ಮರಗಿಡಗಳ ಮಧ್ಯೆ ಪ್ರಪಂಚ ಮರೆತು ಅಂತಹ ಒಂದು ಪುಣ್ಯಕೋಟಿಯನ್ನು ನೆನಸಿಕೊಂಡು-ಕಲ್ಪಿಸಿಕೊಂಡು ಸುಖಿಸುವ ಮಜ ಅನುಭವಿಸಿದವರಿಗೆ ಗೊತ್ತು.
ಒಂದೇ ಒಂದು ಅಪ್ರಿಯ ಸತ್ಯದ ವಿಚಾರವೆಂದರೆ ಕಲ್ಪನೆಗಳಲ್ಲಿ ಇರುವ ಮಜ ಸುಖ ವಾಸ್ತವದಲ್ಲಿ ಇರುವುದಿಲ್ಲ. ಹಾಗಾಗಿ ದೂರದ ವಿಷಯಗಳನ್ನು , ವ್ಯಕ್ತಿಗಳನ್ನು, ತನಗೆಟುಕದ ಜಗತ್ತನ್ನು ಹೀಗೆ ಕಲ್ಪಿಸಿಕೊಂಡು ಮನುಷ್ಯ ಸುಖಿಸುವುದನ್ನು ಅಭ್ಯಾಸ ಮಾಡಿಕೊಂಡಿದ್ದಾನೆ ಲಾಗಾಯ್ತಿನಿಂದ. ಅಂತಹ ಒಂದು ಅಪೂರ್ವ ಸುಖದ ವಿಷಯ ಗೋವು.
ಆದರೆ ವಾಸ್ತವವೆಂದರೆ ಎಲ್ಲ ಗೋವುಗಳೂ ಪುಣ್ಯಕೋಟಿಯಲ್ಲ, ಕೆಲವೊಂದು ಹುಲಿರಾಯನಕಿಂತ ಕ್ರೂರವಿರುತ್ತದೆ. ಮನುಷ್ಯರನ್ನು ಮಾಂಸವನ್ನು ತಿನ್ನದು ಎನ್ನುವುದೊಂದು ಬಿಟ್ಟರೆ, ಪಟಾರನೆ ಎಲುಬು(ನಮ್ಮದು) ಮುರಿಯುವಂತೆ ಒದೆಯುವ ಆಕಳೂ, ಕೋಡಿನಿಂದ ದುಬಲ್ಲನೆ ಗುದ್ದುವ ದನಗಳೂ ಇರುತ್ತವೆ. ಆದರೆ ಅವುಗಳನ್ನು ಪುಣ್ಯಕೋಟಿಗೆ ಹೋಲಿಸಿಕೊಳ್ಳಬಾರದು ಅಷ್ಟೆ.
ನಮ್ಮ ಹಳ್ಳಿಗಳಲ್ಲಿ ತುಡು ಮಾಡುವ ಬೀಡಾಡಿ ದನಗಳನ್ನು ಕಂಡರೆ ಮೈಮೇಲೆ ಮುಳ್ಳುಗಳೇಳುತ್ತವೆ. ಮಟ ಮಟ ಮಧ್ಯಾಹ್ನ ಬಿರುಬಿಸಿಲಿನಲ್ಲಿ ಲಘು ವಿಶ್ರಾಂತಿ ತೆಗೆದುಕೊಳ್ಳಲೋಸುಗ ಮಲಗಿದಾಗ ಚಟಚಟನೆ ಬೇಲಿ ಮುರಿಯುವ ಸದ್ಧು ಕೇಳಿತೆಂದರೆ ಅದು ತುಡು ದನದ್ದೇ ಅಂತ ಲೆಕ್ಕ. ಲಗುಬಗೆಯಿಂದ ಎದ್ದು ಹೋಗಿ ನೋಡಿದರೆ ಕುಂಬಳ ಬಳ್ಳಿ-ಹಾಗಲ ಬಳ್ಳಿ-ತಿಂಗಳವರೇ ಬಳ್ಳಿ ಅದಾಗಲೇ ಅರ್ದ ದನದ ಹೊಟ್ಟೆ ಸೇರಿರುತ್ತದೆ. ಆವಾಗ ಮಾತ್ರ ಕೈಗೆ ಸಿಕ್ಕ ಕೋಲಿನಿಂದ ಅಟ್ಟಿಸಿಕೊಂಡು ಹೊಡೆಯಿಸಿಕೊಳ್ಳಲು ಅದು ಸಿಗದೆ ಬಾಲ ಎತ್ತಿಕೊಂಡು ಓಡಿ ಹೋದಾಗ ಬರುವ ಸಿಟ್ಟು ಅನುಭವಿಸಿದವರಿಗೇ ಗೊತ್ತು. "ಗೋ ಮಾತೆಯಂತೆ ಗೋಮಾತೆ" ಎಂಬ ಗೊಣಗಾಟದೊಂದಿಗೆ ಮತ್ತೆ ಮಂಚ ಸೇರಬೇಕಾಗುತ್ತದೆ. ಆದರೂ ಆ ದನ ಅವರ ಮನೆಗೆ ಗೋಮಾತೆಯೇ ಕಾರಣ ಮಾಯವಾಗಿದ್ದು ನಮ್ಮ ಮನೆಯ ಕುಂಬಳ ಬಳ್ಳಿ ಅಲ್ಲವೇ?.
ಇಷ್ಟೆಲ್ಲಾ ರಗಳೆ ಇದ್ದರೂ ಗೋ ಮಾತೆ ಒಂಥರಾ ಗೋಮಾತೆಯೇ. ನಮ್ಮ ಮನೆಯ ದನ ಆಗಿರಬೇಕು ಅಷ್ಟೆ . ಸಂಜೆಯಾಗುತ್ತಿದ್ದಂತೆ ಜಗುಲಿಯಲ್ಲಿ ಕುಳಿತು "ಧರಣಿ ಮಂಡಲ" ಹಾಡು ಕೇಳಿದಾಗ ಎಲ್ಲ ಮರೆತು ಸೌಮ್ಯ ಭಾವ ಮೂಡತೊಡಗುತ್ತದೆ ಗೋವಿನ ಬಗ್ಗೆ.

1 comment:

Anonymous said...

ಕಲ್ಪನೆ-ವಾಸ್ತವ ಮಿಶ್ರಿತ 'ಕಲ್ಪನೆ' ಚೆನ್ನಾಗಿದೆ. ನೀವು ಹೇಳಿದ್ದು ಸರಿ. ಏಕೆಂದರೆ ಪಕ್ಕದ ಮನೆಯ ಮಾತೆ ನಮಗೆ ಆಂಟಿ ಮತ್ತೆ ಮಮತೆಯೂ anti. ಅದೆಲ್ಲ ಇರಲಿ, ಮಠದ ನಿಷ್ಠಾವಂತ ಕಾರ್ಯಕರ್ತರು ಇದನ್ನು ನೋಡಿದರೆ ನಿಮ್ಮ ಬುರುಡೆಗೆ ನಾಲ್ಕು ನಿಕ್ಕಿ. ಹ್ಹಹ್ಹಹ್ಹ...

ಭಾರತೀಶ