"ಮನೋ ಮಧುಕರೋ ಮೇಘೋ ಮಾನಿನೀ ಮದನೋ ಮರುತ್ ಮಾಮರೋ ಮರ್ಕಟೋರ್ಮತ್ಸ್ಯೋ ಮಕಾರಾತ್ ದಶ ಚಂಚಲಾ:" ಅಂತ ಸಂಸ್ಕೃತದಲ್ಲಿ ಒಂದು ಉಕ್ತಿ ಇದೆಯಂತೆ. ಸ್ವಲ್ಪ ಹೆಚ್ಚುಕಮ್ಮಿ ಇದ್ದರೂ ಇರಬಹುದು ಬಿಡಿ. ಒಟ್ಟಿನಲ್ಲಿ ಮ ಕಾರದಿಂದ ಪ್ರಾರಂಭವಾಗುವ ಹಲವು ಶಬ್ಧಗಳು ಚಂಚಲತೆಗೆ ಉದಾಹರಣೆ ಎಂಬುದು ತಾತ್ಪರ್ಯ. ಹಾಗೆ ನೋಡಿದಲ್ಲಿ ಇಡೀ ಪ್ರಪಂಚವೇ ಒಂಥರಾ ಚಂಚಲ. ಸ್ಥಿರ ಎನ್ನುವುದು ನಮ್ಮ ತರ್ಕವಷ್ಟೆ. ಆದರೆ ಈ ಮೇಲಿನ ಮಕಾರ ದಿಂದ ಪ್ರಾರಂಭವಾಗುವ ವಿಷಯ ಚಂಚಲತೆ ಹೆಚ್ಚು ಅನ್ನಬಹುದು.
ನಿಂತಲ್ಲಿ ನಿಲ್ಲಲಾರ, ಕುಂತಲ್ಲಿ ಕೂರಲಾರ, ಮಾಡಿದ್ದನ್ನು ಮಾಡಲಾರ ಮಾಡದೆಯೂ ಇರಲಾರ ಎಂಬ ವ್ಯಕ್ತಿತ್ವಕ್ಕೆ ಚಂಚಲ ಮನಸ್ಥಿತಿ ಯ ಜನ ಅಂತ ನಾಮಕರಣ ಮಾಡಿಯಾಗಿದೆ. ಇದು ವ್ಯಕ್ತಿಯ ಹೊರಗಿನ ಚಂಚಲತೆಯ ಕತೆಯಾದರೆ ವ್ಯಕ್ತಿಯೊಳಗಿನ ಚಂಚಲತೆ ಇದೆಯಲ್ಲ ಅದರದ್ದು ಬೃಹತ್ ಸಮಸ್ಯೆ ಹಲವರಿಗೆ.
ಮಠ ಸಿನೆಮಾದಲ್ಲಿ " ಮನಸ್ಸಿನೊಳಗಿನ ಮಾತನಾಡುವ ಗಿಳಿಯನ್ನು ಸುಮ್ಮನಾಗಿಸುವುದೇ ದಾನ್ಯ" ಎಂದು ಮಜವಾಗಿ ಧ್ಯಾನದ ಕುರಿತು ಹೇಳಿದ್ದಾರೆ. ಈ ಚಂಚಲತೆಯನ್ನು ಸ್ಥಿರಗೊಳಿಸುವ ಕೆಲಸಕ್ಕೆ ಮಿದುಳ ಬಳಸಿ ಬದುಕುವ ಮಂದಿ ಬಹಳ ಬೆಲೆಯನ್ನು ತೆತ್ತಿದ್ದಾರೆ ತೆತ್ತುತ್ತಲಿದ್ದಾರೆ. ಆ ಮಾತನಾಡುವ ಗಿಳಿ ಇದೆಯಲ್ಲ ಅದರ ನಿಯಂತ್ರಣಕ್ಕೆ ಹಾಕಿದ ಹಾಕುತ್ತಿರುವ ಹಾಕುವ ವೇಷ ಹಲವು ತರಹದ್ದು. ಜನಸಾಮಾನ್ಯರ ಈ ದೌರ್ಬಲ್ಯವನ್ನರಿತ ಒಂದು ತೂಕ ಹೆಚ್ಚಿನ ಬುದ್ದಿವಂತರು ಅದಕ್ಕೆ ಹಾಗೆ ಮಲಗಿ, ಹೀಗೆ ಕೂತು ಉಸಿರು ಬಿಡಿ, ಮತ್ತೆ ಆಳವಾಗಿ ಉಸಿರಾಡಿ, ಹ ಹ ಹ ಎಂದು ಹಾರಿಹಾರಿ ಬೀಳಿ, ಅಂತಿಮವಾಗಿ ನಾವು ಹೀಗೆ ಕಲಿಸಿಕೊಟ್ಟದ್ದಕ್ಕೆ ಇಷ್ಟು ಹಣ ಕಕ್ಕಿ ಎಂಬಲ್ಲಿಯವರೆಗೆ ಈ ಗಿಳಿಯ ಆಟ ನಡೆಯುತ್ತಲಿದೆ. ನಿರಂತರವಾಗಿ ಪುತುಪುತುನೆ ಏಳುವ ಆಲೋಚನೆಯ ಬೆನ್ನುಹತ್ತಿ ಉತ್ತರ ಸಿಗದೆ ತಡಬಡಾಯಿಸುವ ಹಲವರಿಗೆ ಈ ಗಿಳಿಯ ಕಾಟ ಅಷ್ಟಿಷ್ಟಲ್ಲ. ಶುರುವಾದ ಆಲೋಚನೆಗೆ ಪಟಕ್ಕನೆ ಬ್ರೆಕ್ ಹಾಕುವ ತಾಕತ್ತು ರೂಢಿಸಿಕೊಂಡರೆ ಇವರ ಪಾಲಿಗೆ ಜಗತ್ತ ಗೆದ್ದಂತೆ. ಉದ್ಯೋಗದಲ್ಲಿ ಜೀವನಕ್ಕಾಗಿ ಮಿದುಳು ಉಪಯೋಗಿಸುವ ಮಂದಿಯ ದೇಹ ಒಂಥರಾ ಜಡ್ಡಾಗಿರುತ್ತದೆ. ದೇಹದ ಶ್ರಮದ ಮೂಲಕ ಅಥವಾ ಶ್ರಮದ ಕೆಲಸದ ಮೂಲಕ ಮಿದುಳಿನ ಯೋಚನೆಯನ್ನು ನಿಯಂತ್ರಿಸುವುದು ಸುಲಭ ಅಥವಾ ಸುಲಭ ಅನ್ನುವುದಕ್ಕಿಂತಲೂ ಅದು ಪ್ರಕೃತಿ ಸಹಜ. ದೇಹ ಶ್ರಮಕ್ಕೆ ಹಾರ್ಡ್ ವರ್ಕ್ ಅಂತ ಒಂಥರಾ ಜಿಗುಪ್ಸೆಯ ಪದಪ್ರಯೋಗ ಬಳಕೆಗೆ ಬಂದ ನಂತರ ಈ ಧ್ಯಾನ ಎಂಬ ಮಾರುಕಟ್ಟೆಯ ವ್ಯಾಪ್ತಿ ವಿಸ್ತಾರವಾಗುತ್ತಿದೆ. ಈ ಮಾರುಕಟ್ಟೆಯಲ್ಲಿ ಬಿಕರಿಗಿಟ್ಟ ಸರಕು "ಶಾಂತಿ..ನೆಮ್ಮದಿ....ಸುಖ " ಎಂಬ ನಮ್ಮೊಳಗೇ ಇರುವ ನಾವೇ ಸೃಷ್ಟಿಸಿಕೊಳ್ಳಬೇಕಾಗಿರುವ ವಿಷಯಗಳು. ಮಜ ಎಂದರೆ ಅದಕ್ಕೆ ನಾವು ಹಣ ಕೊಟ್ಟು ಅಲ್ಲಿದೆ, ಎಲ್ಲಿದೆ..? ಅಲ್ಲೆಲ್ಲೋ ಇದೆ, ಎಂದು ಹಗಲಿನಲ್ಲಿ ಬ್ಯಾಟರಿ ಬಳಸಿ ಹುಡುಕಾಡುತ್ತಿದ್ದೇವೆ. ಅದು ನಗುತ್ತಿದೆ... ಸನಿಹದಲ್ಲಿಯೇ ನಮ್ಮ ಹೊರಗೆ ಕುಳಿತು.
2 comments:
ನೈಸ್
ಹೊರ ಜಗತ್ತಿನ ಓಟ ಹೇಗೂ ಇರಲಿ. ನಮ್ಮ ಒಳಗಿನ ಚಟುವಟಿಕೆ ಯಂತೂ ಹೆಚ್ಚಾಗಿರಬೇಕು. ಪ್ರಪಾತಕ್ಕೆ ಜಾರುತ್ತಿರುವ ಸುತ್ತಲಿನ ಸಾಮಾಜಿಕ ಬದುಕು
ನಮ್ಮ ಮನಸ್ಸಿನ ಮೇಲೆ ಒತ್ತಡ ಹಾಕುತ್ತಿರುವಾಗ, ತಪ್ಪಿಸಿಕೊಳ್ಳುವ ದಾರಿಯೆಂದರೆ,ನನ್ನ ಪಾಲಿಗೆ ಬಂದ ಕೆಲಸವನ್ನು ಅಚ್ಚುಕಟ್ಟಾಗಿ, ನಿಷ್ಠೆಯಿಂದ ಮಾಡುತ್ತಾ, ಸಮಾಧಾನ ತಂದುಕೊಳ್ಳುವುದು. ನಮ್ಮ ಎಲ್ಲ ಬುದ್ಧಿ- ಕೌಶಲ್ಯಗಳನ್ನ ಶುದ್ಧ ಕ್ರಿಯೆಯಲ್ಲಿ ತೊಡಗಿಸಿಕೊಳ್ಳುವುದರಲ್ಲಿ
ಆನಂದವಿದೆ. ಹೀಗಾಗಿ, ನಮ್ಮ ಒಳ- ಹೊರಗೂ ನಿತ್ಯ ಚಟುವಟಿಕೆಯಲ್ಲಿ ಸುಖ ಅರಸಬೇಕು. ಕ್ರಿಯಾಶೀಲ ವ್ಯಕ್ತಿತ್ವದಿಂದ ಶಾಂತಿ-ಸಮಾಧಾನ ಸಾಧ್ಯ.
Post a Comment