Wednesday, October 1, 2008

ಹನಿ ಹನಿ ಇಬ್ಬನಿ


ಚುಮು ಚುಮು ಬೆಳಗಾಗುತ್ತಿದ್ದಂತೆ ಹನಿ ಹನಿ ಇಬ್ಬನಿ ಬೀಳುವ ಚಳಿಗಾಲ ಶುರುವಾಗಿದೆ. ಒಂದು ಮಂಕಿ ಕ್ಯಾಪ್ ಧರಿಸಿ ಬೆಳಿಗ್ಗಿನ ವಾಕಿಂಗ್ ಹೊರಡುವವರಿಗೆ ಮೀಸೆಯಮೇಲೆಲ್ಲಾ ಹನಿ ಹನಿ ಇಬ್ಬನಿ . ಬಾಯಿಂದ ಹೊರಡುವ ಬೆಳ್ಳನೆಯ ಹೊಗೆ ಸಿಗರೇಟು ಸೇದದಿದ್ದರೂ ಪುಕ್ಕಟೆ ಬರುತ್ತದೆ. ಮೂರ್ನಾಲ್ಕು ಕಿಲೋಮೀಟರ್ ನಡೆದು ವಾಪಾಸು ಮನೆಗೆ ಬಂದು ಒಂದು ಸೌಟು ಕೊಬ್ಬರಿ ಎಣ್ಣೆ ಬಾಯಿಗೆ ಹಾಕಿ ಪುಚುಪುಚು ಆಯಿಲ್ ಪುಲ್ಲಿಂಗ್ ಮಾಡಿ ನಂತರ ಬಿಸಿಬಿಸಿ ಕಾಫಿ ಕುಡಿದರೆ ಆಹಾ ಎಂಥ ಮಧುರಾ ಯಾತನೆ ಎಂಬ ಹಾಡು ಗುಣುಗುಣಿಸಬಹುದು. ಆರೋಗ್ಯದ ಬಗ್ಗೆ ಪಕ್ಕದ ಮನೆಯವರೊಡನೆ ಗಂಟೆಗಟ್ಟಲೆ ಭಾಷಣ ಬಿಗಿಯಬಹುದು. ನಂತರ ಬಿಸಿಬಿಸಿ ದೋಸೆ ಆಮೇಲೆ ಆಫೀಸ್ ಇದ್ದರೆ ಅದರ ಕತೆ ಬೇರೆ. ಇದು ಸಿಟಿ ಜೀವನದ ಕತೆಯಾಯಿತು. ನಮಗೆ ನಮ್ಮಂತ ಹಳ್ಳಿಯಲ್ಲಿ ಕೂತವರಿಗೆ ಇದು ಮಹದಾನಂದದ ಕಾಲ.....!. ಬೆಳಿಗ್ಗಿನ ಚಳಿಗೆ ಏಳಲಾರದೆ ಎದ್ದು ಕೊಟ್ಟಿಗೆಗೆ ಹೋಗಿ ಕಮಟು ವಾಸನೆಯ ಸಗಣಿ ಬಾಚಬೇಕು. ಚಳಿಗಾಲ ಬಂತೆಂದರೆ ಆಕಳುಗಳು ಇಡಿ ಮೈಯನ್ನು ರಾಡಿ ಮಾಡಿಕೊಂಡು ಬಿಡುತ್ತವೆ. ಬೆಚ್ಚನೆಯ ಸಗಣಿಯ ಮೇಲೆ ಹೊರಳಿ ಹೊಳ್ಯಾಡಿ ದೇಹದ ತಾಪಮಾನವನ್ನು ಹೆಚ್ಚಿಸಿಕೊಳ್ಳುವ ಅವುಗಳ ಯತ್ನದಲ್ಲಿ ನಮಗೆ ಹಾಲು ಹಿಂಡಲು ಬರಲಾರದಷ್ಟು ರಾಡಿ. ಅವುಗಳ ಮೈ ತೊಳಸಿಯೇ ಹಾಲು ಕರೆಯಬೇಕು. ನಾವು ಇಂದು ಹಾಲು ಕರೆದು ಡೈರಿಗೆ ಹಾಕದಿದ್ದರೆ ನಾಳೆ ಸಿಟಿಯಲ್ಲಿ ವಾಕಿಂಗ್ ಮುಗಿಸಿ ಬಂದವರಿಗೆ ಬಿಸಿಬಿಸಿ ಕಾಫಿ ಇರುವುದಿಲ್ಲ ಎಂಬ ಕಾಳಜಿಯಿಂದ ನಾವೇನು ಕರೆಯುತ್ತಿಲ್ಲ. ಹೀಗೆ ಹಾಲು ಹಾಕಿ ನಾಲ್ಕಾರು ಕಾಸು ಕಂಡು ಅದರಿಂದ ನಮ್ಮ ಮಕ್ಕಳಾದರೂ ಸಿಟಿಯ ವಾಕಿಂಗ್ ಮುಗಿಸಿ ಕಾಫಿ ಕುಡಿಯುತ್ತಾರಾ ಎಂಬ ದೂರದ ಆಸೆ. ಈ ಆಸೆ ದೂರವಾಗುತ್ತಲೆ ಬಂದಿದೆ. ಕಾರಣ ಹಾಲು ಡೈರಿಗೆ ಹಾಕಿ ಲಾಭ ಮಾಡಿದ ಗಿರಾಕಿ ನಮ್ಮ ಮಲೆನಾಡಿನಲ್ಲಿ ಇಲ್ಲ. ದಿನ ದೂಡಬಹುದು ಅಷ್ಟೆ. ಹಾಗೆಯೇ ಭತ್ತ ಬೆಳೆಯುವ ಮಲೆನಾಡಿಗನೂ ಅದೇ ಕನಸು ಹೊತ್ತು ಹಲವಾರು ತಲೆಮಾರು ಕಳೆದಿದ್ದಾನೆ. ಸಮಾಜಕ್ಕೆ ಅಮೃತ ಉಣಿಸಿದವರು ತಾವು ಅರೆಹೊಟ್ಟೆಯಲ್ಲಿಯೇ ಇರಬೇಕು ಎಂಬುದು ಪ್ರಕೃತಿ ನಿಯಮವಾದಂತಿದೆ . ಹಾಗಾದರೆ ಹಣದ ವಿಷಯದಲ್ಲಿ ಗೆದ್ದವರ್ಯಾರು, ?
ಕಂಡೆ ನಾನು ಮೊನ್ನೆ ಬೆಂಗಳೂರು ಮೈಸೂರು ಹಾಗೂ ಮಡ್ರಾಸ್ ಗೆ ಹೋದಾಗ ಗೆದ್ದವರನ್ನು ಕಂಡೆ. ಅಬ್ಬಾ ಅದು ಎಂತಾ ಗೆಲುವು?. ಆದರೆ ಅವರು ಲಯಕರ್ತರು.

ಬೆಂಗಳೂರಿನಲ್ಲಿ ಪೆಜತ್ತಾಯರು ಯು.ಬಿ ಸಿಟಿಯಲ್ಲಿರುವ ರಾಜಧಾನಿ ಹೊಟೆಲ್ಲಿಗೆ ಊಟಕ್ಕೆ ಕರೆದೊಯ್ದಿದ್ದರು. ಆ ಹೊಟೆಲ್ಲಿನ ತಲೆಯಮೇಲೆ ವಿಜಯಮಲ್ಯನ ಹೆಲಿಪ್ಯಾಡ್ ಇದೆ. ಬಹು ಅಂತಸ್ತಿನ ಆ ಕಟ್ಟದವನ್ನು ಕುತ್ತಿಗೆ ಮುರಿದುಹೋಗುತ್ತದೆಯೇನೋ ಎನ್ನುವಷ್ಟು ತಲೆ ಎತ್ತಿ ನೋಡಬೇಕು. ಕೋಟಿ ಕೋಟಿ ರೂಪಾಯಿಯ ಒಡೆಯ ವಿಜಯ ಮಲ್ಯ ಹಾಗೂ ಅವನಪ್ಪ ವಿಠಲ ಮಲ್ಯ ಗಳಿಸಿದ್ದು ಗಳಿಸುತ್ತಿರುವುದು ಹೆಂಡದಿಂದ. ಜನರಿಗೆ ಕುಡಿಸಿ ಬೆಳೆದವರು ಅವರು . ಅವರು ಉರಿಯಲು ಅದೆಷ್ಟು ಮನೆಯ ದೀಪಗಳು ಆರಿವೆಯೋ ಇರಲಿ. ಮೈಸೂರಿಗೆ ಹೋದಾಗ ಗಣೇಶ್ ಬೀಡಿಯ ಒಡೆಯರ ಆಸ್ತಿಯನ್ನು ಕಿವಿಯಾರೆ ಕೇಳಿದೆ. ಮೂರು ತಲೆಮಾರು ಹಾಸಿ ಹೊದೆಯುವಷ್ಟು, ಎಲ್ಲಿ ನೋಡಿದರಲ್ಲಿ ಅವರದ್ದೇ ಆಸ್ತಿ. ಆ ಆಸ್ತಿ ಹಾಗೆ ಬೆಳೆಯಲು ಎಷ್ಟು ಜನರ ಅಸ್ತಿ ನುಗ್ಗಾಗಿದೆಯೋ ಬಲ್ಲವರ್ಯಾರು. ಮಡ್ರಾಸ್ ಗೆ ಹೋದಾಗ ಮಾಣಿಕ್ ಚಂದ್ ಗುಟ್ಕಾ ಕಂಪನಿಯ ಒಡೆಯನ ಶ್ರೀಮಂತಿಕೆಯ ಕುರಿತು ವಿವರ ಹೇಳಿದರೊಬ್ಬರು. ಮೂರೇನು ಮೂವತ್ತು ತಲೆಮಾರು ತಿಂದರೂ ಕರಗದು ಅಷ್ಟಿದೆ ಆಸ್ತಿ. ಪಾಪ ಗುಟ್ಕಾ ತಿಂದು ಅದೆಷ್ಟು ಜನರು ದೇಣಿಗೆ ಕೊಟ್ಟರೋ ಜೀವವನ್ನ ಅಂತ ಅನ್ನಿಸಿತು. ನಾವಾದರೋ ಒಂದಿಷ್ಟು ಅಡಿಕೆ ಬೆಳೆದು ಹಣ ಕಂಡಿದ್ದೇವೆ. ಆದರೆ ಲಾಗಾಯ್ತಿನಿಂದ ಆಹಾರ ಬೆಳೆ ಬೆಳೆದು ಸಂಕಷ್ಟದಲ್ಲಿರುವ ರೈತರನ್ನು ನೆನೆದು ಬೇಸರವಾಗುತ್ತದೆ. ಇರಲಿ ಶ್ರೀಮಂತಿಕೆಯೊಂದೆ ಮಾನವಲ್ಲ ಅಂತ ಅಂದುಕೊಂಡು ಹಾಲು ಮಾರಿ ತರಕಾರಿ ಬೆಳೆದು ಭತ್ತ ಹಾಕಿ ದೇಶೋದ್ಧಾರ ಮಾಡಲು ಒಂದಿಷ್ಟು ಜನ ಬೇಕಲ್ಲ. ಅವರ ಸಾಲಿಗೆ ಅವರುಗಳು ಹಾಗೂ ನಾವುಗಳು ಎನ್ನುವ ಸಮಾಧಾನ.

ಕೊನೆಯದಾಗಿ: ಶ್ರೀಮಂತಿಕೆಯಲ್ಲಿ ನೆಮ್ಮದಿ ಇಲ್ಲವಂತೆ ಹೌದಾ..? ಎಂದು ಆನಂದರಾಮಾ ಶಾಸ್ತ್ರಿಗಳನ್ನು ಕೇಳಿದೆ. ಅದಕ್ಕವರು" ಹೌದು ಬಡವರು ಹಾಗಂದುಕೊಳ್ಳುವುದರಿಂದ ಬಡತನದಲ್ಲಿ ನೆಮ್ಮದಿ ಇದೆ" ಎಂದರವರು. ಅಂತರಾರ್ಥ ತಿಳಿದು ದಂಗಾದೆ.

Sunday, September 28, 2008

ಜಸ್ಟ್ ನೆಮ್ಮದಿಗಾಗಿ

ಮನುಷ್ಯ ಸಂಘಜೀವಿಯಾಗಿ ಬಾಳಿದರೆ ಉತ್ತಮ ಎಂದು ಪೂರ್ವಜರು ತಿಳಿದಿದ್ದರು. ತಾನು ಹೆಂಡತಿ ಮಕ್ಕಳು ಇಷ್ಟೇ ಎಂದರೆ ಒಂದಲ್ಲಾ ಒಂದು ದಿನ ನಿರಾಶರಾಗಬಹುದು ಹಾಗಾಗಿ ಒಂದಿಷ್ಟು ಹಬ್ಬ ಮತ್ತೊಂದಿಷ್ಟು ಹರಿದಿನ, ಜನ ಸಮೂಹ ಒಂದೆಡೆ ಸೇರಲು ದೇವಸ್ಥಾನ, ದೇವರು, ಹೀಗೆಲ್ಲಾ ಕಲ್ಪಿಸಿ ಅನುಷ್ಠಾನಕ್ಕೆ ತಂದರು.ಅಲ್ಲಿ ತರ್ಕ ಕುತರ್ಕ ಮುಂತಾದವುಗಳಿಗೆ ಅವಕಾಶ ಇಲ್ಲದೆ ಭಕ್ತಿ ಪ್ರಧಾನ ಕೇಂದ್ರ ವನ್ನಾಗಿಸಿದರು. ಅಂತಹ ಜೀವನ ಹಳ್ಳಿಗಳಿಗೆ ಅನಿವಾರ್ಯ ಕೂಡ ಆಗಿತ್ತು.ಅಂದಿನ ದಿನಗಳಲ್ಲಿ ಮನರಂಜನೆಗೆ ಹೆಚ್ಚು ಅವಕಾಶ ಇಲ್ಲದ್ದರಿಂದ ಜನ ಒಂದೆಡೆ ಸೇರಿ ಹಬ್ಬ ಹರಿದಿನಗಳನ್ನು ಆಚರಿಸುತ್ತಿದ್ದರು. ಬಡ ಮಧ್ಯಮ ವರ್ಗದ ಜನತೆಗೆ ಸಾಮೂಹಿಕ ಮನರಂಜನೆ ಭಕ್ತಿಯ ಮುಖಾಂತರ ಸಿಗುತ್ತಿತ್ತು. ಕಾರ್ತಿಕ ದೀಪೋತ್ಸವ, ದೀಪಾವಳಿ ಸಂಭ್ರಮ, ಗಣೇಶನ ಹಬ್ಬ, ವಾರ್ಷಿಕ ಸಂತರ್ಪಣೆ ಹೀಗೆ ನೂರಾರು. ದೇವಸ್ಥಾನದ ಕೆಲಸಗಳು ಸಾಂಗೋಪಸಾಂಗವಾಗಿ ನೆರವೇರಲು ಅದಕ್ಕೆ ಸಾರ್ವಜನಿಕರಿಂದ ವರಾಡ ಎಂಬ ರೂಪದಲ್ಲಿ ಹಣ ಸಂಗ್ರಹಣೆ ಅದನ್ನು ದೇವಸ್ಥಾನದ ಅಭಿವೃದ್ದಿಗೆ ಬಳಸುವುದು. ತನ್ಮೂಲಕ ಊರು ಪ್ರಗತಿ ಹೊಂದುವುದು ಪೂರ್ವಜರ ಕಲ್ಪನೆ. ಅದು ಸರಿಯೋ ತಪ್ಪೋ ಆದರೆ ಅದರಿಂದ ಊರಿನ ಜನರು ಒಂದೆಡೆ ಸೇರುತ್ತಿದ್ದರು. ಕುಶಲೋಪರಿ ನಡೆಯುತ್ತಿತ್ತು. ಈಗ..? ಕಾಲ ಬದಲಾಗಿದೆ. ಟಿ.ವಿ ಇಂಟರ್ನೆಟ್ ಮುಂತಾದ ಆಧುನಿಕತೆಯ ಸೊಗಡಿನ ಮನರಂಜನಾ ಮಾಧ್ಯಮಗಳು ಮನೆಯಲ್ಲಿಯೇ ಬಂದಿದೆ. ಇದರ ಪರಿಣಾಮ ಹಳ್ಳಿಗಳ ಮೇಲೆ ತೀವ್ರತರದಲ್ಲಿ ಆಗಿದೆ. ಸಾಂಘಿಕ ಜೀವನ ಅರ್ಥ ಕಳೆದುಕೊಂಡು ತಾರ್ಕಿಕ ಜೀವನ ಶುರುವಾಗಿದೆ. ಭಕ್ತಿಯ ಕೇಂದ್ರ ನಿದ್ರೆಯತ್ತ ಜಾರಿ ತರ್ಕದ ಕೇಂದ್ರ ಎದ್ದು ಕುಳಿತಿದೆ.
ನಮ್ಮೂರಿನ ಬಚ್ಚಗಾರು ಶ್ರೀ ಮಹಾಗಣಪತಿ ದೇವಸ್ಥಾನ ಜ್ವಲಂತ ಉದಾಹರಣೆ. ಕಷ್ಟ ಬಂದಾಗ ಗಣಪತಿಗೆ ಒಂದು ಹಣ್ಣು ಕಾಯಿ ಹೇಳಿಕೊಂಡರೂ ಸಾಕು ಎನ್ನುವ ನಂಬಿಕೆ ಹಿಂದೆ ಇತ್ತು. ಆತ ಶಕ್ತಿ ಗಣಪತಿ ಎಂಬ ನಂಬಿಕೆ ಊರಲ್ಲಿ ಏನು ಪರ ಊರಲ್ಲಿಯೂ ವ್ಯಾಪಕವಾಗಿತ್ತು. ಅಲ್ಲಿ ಹೋಗಿ ಒಂದು ಹಣ್ಣು ಕಾಯಿ ಮಾಡಿಸಲು ನಿಂತರೆ ಅದ್ಯಾವುದೋ ಒಂದು ಭಕ್ತಿ ಮೂಡುತ್ತಿತ್ತು. ದೀಪಾವಳಿ ಎಂದರೆ ರಂಗೋ ರಂಗು. ಇಂತಹ ದೇವಸ್ಥಾನ ಎಂಟು ವರ್ಷದ ಹಿಂದೆ ನಾಸ್ತಿಕ ಎಂದು ಬೋರ್ಡ್ ತಗುಲಿಸಿಕೊಂಡ ಕುತರ್ಕದಿಂದ ವಾದಿಸುವ ಗಡ್ಡಧಾರಿ ಒಬ್ಬಾತನ ಸರ್ವಾಧಿಕಾರಕ್ಕೆ ಒಳಪಟ್ಟಿತು. ಆತ ತನ್ನಂತೆ ಕುತರ್ಕ ಮಾಡುವ ಒಂದು ಗುಂಪು ನಿರ್ಮಿಸಿಕೊಂಡ. ಅಲ್ಲಿಗೆ ದೇವಸ್ಥಾನ ಸತ್ತು ಹೋಯಿತು. ಕಳೆದ ಎಮ್ಟು ವರ್ಷದಿಂದ ಜನರಲ್ ಬಾಡಿಯೇ ಇಲ್ಲ. ಕಾಣಿಕೆ ಡಬ್ಬಿ ದುಡ್ಡು ಅವರು ಎಣಿಸಿಕೊಂಡಷ್ಟು ಅಲ್ಲಿ ಬಿದ್ದಷ್ಟು. ಯಾರಾದರೂ ಸಂಜೆ ಮುಂದೆ ಕೇಳಿದರೆ ಕಣ್ಣು ಕೆಂಪಗಾಗಿಸಿಕೊಂಡು ಮೈಮೇಲೆ ಬರುವ ಒಂದು ಸಣ್ಣ ಗುಂಪು ಸದಾ ರೆಡಿ. ಇಂತಂಹ ತರ್ಕದ ಜನರ ಆಡಳಿತಕ್ಕೆ ದೇವಸ್ಥಾನ ಒಳಪಟ್ಟಿದ್ದರಿಂದ ಎಂಟು ವರ್ಷದ ಈಚಿನ ತಲೆಮಾರಿಗೆ ದೇವಸ್ಥಾನದ ಪರಿಚಯವೇ ಇಲ್ಲದಂತಾಗಿದೆ. ದೇವಸ್ಥಾನಕ್ಕೆ ಹೋಗದಿದ್ದರೆ ನಾವೂ ಆರಾಮಾಗಿ ಇರಬಹುದು ಎಂದು ಹಲವಾರು ಜನರಿಗೆ ಗೊತ್ತಾಗಿದೆ. ದುಷ್ಪರಿಣಾಮ ದೀರ್ಘಕಾಲದ್ದು, ಊರಿನಿಂದ ಆಚೆ ಕೆಲಸಕ್ಕಾಗಿ ಹೋದವರು ವರ್ಷಕ್ಕೊಮ್ಮೆ ಊರಿಗೆ ಬಂದಾಗ ದೇವಸ್ಥಾನಕ್ಕೆ ಹೋಗುತ್ತಿದ್ದರು. ಈಗ ಹಾಗೆ ಯಾರೂ ಹೋಗುವುದೇ ಇಲ್ಲ. ಹಾಗಾಗಿ ಸ್ಥಳೀಯರಿಗೆ ಹೊರಗಿನ ಜನರ ಸಂಪರ್ಕ ಕೊಂಡಿ ಕಳಚಿದಂತಾಗಿದೆ. ಎಲ್ಲರೂ ತಮ್ಮ ಪಾಡಿಗೆ ಜೀವನ ನಡೆಸಿಕೊಳ್ಳುವುದನ್ನು ಕಲಿತಿದ್ದಾರೆ. ಅಯ್ಯಾ ದೊರೆ ಹೀಗೆಲ್ಲಾ ಸಾರ್ವಜನಿಕರಿಂದ ದೇವಸ್ಥಾನ ತಪ್ಪಿಸಿ ಅವರೂ ಬದುಕುತ್ತಿದ್ದಾರಲ್ಲ, ನೀನೇನು ಕೊರಗುವುದು. ಅವರಂತೆ ಬದುಕು ಅಂತ ನೀವು ಕೇಳಬಹುದು. ಇಲ್ಲ ನೆಮ್ಮದಿಗಾಗಿ ಅವರೂ ಕೂಡ ಸಂಜೆ ಪರಮಾತ್ಮನ ಮೊರೆ ಹೋಗಿದ್ದಾರೆ. ಈಗ ಕೆಲ ವಿಕೆಟ್ ಗಳು ಬಿದ್ದಾಯಿತು. ಈ ಒಣ ಹಠ ದ್ವೇಷಗಳ ನಡುವೆ ಸಾಮಾಜಿಕ ಕಾಳಜಿಯ ಸಂತತಿ ಹಳ್ಳಿಯಲ್ಲಿ ತೀವ್ರತರದಲ್ಲಿ ಕಡಿಮೆಯಾಗುತ್ತಿದೆ. ಈಗಾಗಲೇ ಹಳ್ಳಿಗಳಲ್ಲಿ ವಯಸ್ಸಾದ ಒಂದಿಷ್ಟು ಜನರನ್ನು ಬಿಟ್ಟರೆ ಯುವಕರು ಕಾಣಿಸುತ್ತಿಲ್ಲ. ಇದ್ದವರ ನಡುವೆ ಇಂತಹ ಅವ್ಯವಸ್ಥೆ. ಇದು ಒಂದೂರಿನ ಕತೆಯಲ್ಲ, ಹವ್ಯಕರ ನೂರಾರು ಹಳ್ಳಿಗಳ ವ್ಯಥೆ. ನಾನು ನನ್ನದು ಎಂದಿಷ್ಟೇ ಬದುಕುವುದಾದರೆ ಮಿಕ್ಕೆಲ್ಲ ಜೀವಿಯಂತೆ ಮನುಷ್ಯನೂ ಬದುಕಬಹುದು. ಆದರೆ ಮನುಷ್ಯ ತುಸು ಬೇರೆ ಎಂದು ಹೇಳಲು ಈ ಸಾಂಘಿಕ ಜೀವನದ ವ್ಯವಸ್ಥೆ. ಅದು ಮಠ ಇರಬಹುದು ಮಂದಿರ ಇರಬಹುದು. ಮನಸ್ಸಿನ ಶಾಂತಿಗೆ ಆಗಾಗ ಮೂಡುವ ಕುತೂಹಲಕ್ಕೆ ಧುತ್ತನೆ ಬಂದೆರೆಗುವ ಆಘಾತಕ್ಕೆ, ಒಂದೇ ಒಂದು ದಿನದ ಸಂತೋಷಕ್ಕೆ, ಈ ದೇವರು ದೇವಸ್ಥಾನ ಸಾಮೂಹಿಕವಾಗಿ ಅತ್ಯವಶ್ಯಕ. ಆದರೆ ಅದೇ ಜೀವನವಲ್ಲ ಎಂಬುದೂ ಆಷ್ಟೇ ಸತ್ಯ. ಜೀವನದಲ್ಲಿ ಮಠ ಮಂದಿರ ಇದ್ದರೆ ಚೆನ್ನ.
ಆಧುನಿಕತೆಯ ಸೋಗಿನಲ್ಲಿ ನಾವು ಹಳೆಯದನ್ನು ಹೀಗೆಳೆಯುತ್ತಾ ಹೊಸತನ್ನು ಹುಡುಕಲಾರದೆ ಒದ್ದಾಡುವುದಕ್ಕಿಂತ ಇದ್ದುದ್ದರಲ್ಲೇ ನೆಮ್ಮದಿ ಹುಡುಕುವುದು ಸೂಕ್ತ. ಆದರೆ ಆ ಅಗಾದ ಪ್ರಕೃತಿಯ ಅಂದಾಜು ನಮಗೆ ತಿಳಿಯುವುದಿಲ್ಲ ಹಾಗಾಗಿ ಹೀಗೆಲ್ಲ...! ಒಂದಂತೂ ಸತ್ಯ ಇವೆಲ್ಲಾ ಜಸ್ಟ್ ನೆಮ್ಮದಿಗಾಗಿ.

Friday, September 19, 2008

ಆಚಾರವಿಲ್ಲದ

ಗೋಕರ್ಣದಲ್ಲಿ ಸಪ್ಟೆಂಬರ್ ಹದಿನೈದರಂದು ಸರಿ ಸುಮಾರು ಮೂವತ್ತು ಸಾವಿರ ಜನರು ಸೇರಿದ್ದ ಮಹಾಸಂಕಲ್ಪ ಕಾರ್ಯಕ್ರಮ ನಡೆಯಿತು. ದೂರದರ್ಶನದ ಚಂದನ ವಾಹಿನಿ ನೇರಪ್ರಸಾರ ಮಾಡಿದ್ದರೆ ಸುವರ್ಣ ಸಹಿತ ಈಟಿವಿ ಮೊದಲಾದವುಗಳು ತಮ್ಮ ವಾರ್ತೆಯಲ್ಲಿ ಪ್ರಸಾರ ಮಾಡಿದವು. ಆದರೆ ರಾಮಚಂದ್ರಾಪುರ ಮಠದ ವಿರುದ್ದ ಹಾದಿಯಲ್ಲಿಹೋಗುವವರು ಮಾತನಾಡಿದರೂ ಅವರ ಮುಖಕ್ಕೆ ಮೈಕ್ ಹಿಡಿದು " ಅಲ್ಲಾ ನೀವು ವಿರೋಧ ಮಾಡ್ತೀರಾ ಅಂತ" ಎಂದು ತಮಗೆ ಬೇಕಾದ ರೀತಿಯಲ್ಲಿ ಉತ್ತರ ಹೊರಡಿಸಲು ಯತ್ನಿಸುವ ಉತ್ತಮ ಸಮಾಜಕ್ಕಾಗಿ ಎಂಬ ಸ್ಲೋಗನ್ ನೊಡನೆ ಮೂಡಿಬರುವ ಟಿವಿ ನೈನ್ ಚಾನಲ್ ಗೆ ಇದೊಂದು ಕಾರ್ಯಕ್ರಮ ಅಂತ ಅನ್ನಿಸದೇ ಇದ್ದುದು ಪರಮಾಶ್ಚರ್ಯ. ಅದೇ ದಿನ ಸ್ವರ್ಣವಲ್ಲಿಯಲ್ಲಿ ನಡೆದ ವಿರೋಧಿ ಸಮಾರಂಭ ಕಾಂಜಿಪೀಂಜಿಗಳಿಗೂ ಮೈಕ್ ತಗುಲಿಸುತ್ತಿದ್ದ ಪರಿ ಆಶ್ಚ್ರಯ ಹುಟ್ಟಿಸುವಂತಿತ್ತು. ಪೇಜಾವರ ಶ್ರೀಗಳ ಬಳಿ ಫೋನ್ ಮಾಡಿ ಅವರಿಂದ ಹೇಗಾದರೂ ಮಾಡಿ ನಾನು ರಾಮಚಂದ್ರಾ ಪುರಮಠದ ವಿರೋಧಿ ಅಂತ ಹೇಳಿಸಬೇಕೆಂಬ ರಂ,ಭಾ ನ ಹರ ಸಾಹಸ ನೋಡಿದರೆ ಇದು ಮಾಹಿತಿ ನೀಡುವ ಚಾನಲ್ಲೋ ಅಥವಾ ಕಡ್ದಿಗೀರುವ ಚಾನಲ್ಲೋ ಎಂಬುದನ್ನ ಯಾವುದೇ ಅನುಮಾನ ಇಲ್ಲದೇ ಕ್ಷಣಮಾತ್ರದಲ್ಲಿ ಹೇಳಿಬಿಡಬಹುದಿತ್ತು.
ಆಶ್ಚ್ರರ್ಯವಾಗುವುದು ಇಲ್ಲೆ. ನಮ್ಮ ದೇಶದಲ್ಲಿ ಯಾವುದೇ ಕೆಲಸ ಹಿಂದುವಿನಿಂದ ನಡೆದರೂ ಅದಕ್ಕೆ ಪ್ರಭಲವಾಗಿ ಅರ್ಥವಿಲ್ಲದೆ ವಿರೋದ ವ್ಯಕ್ತಪಡಿಸುವ ಒಂದು ಗುಂಪು ಇದೆ. ಅವರು ಅಪ್ಪಿತಪ್ಪಿಯೂ ಬಾಂಬ್ ಬ್ಲಾಸ್ಟ್ ಮಾಡಿ ಮಾರಣ ಹೋಮ ಮಾಡಿರುವವರ ಕುರಿತು ಮಾತನಾಡುವುದಿಲ್ಲ. ವಕ್ಫ್ ಮಂಡಳಿ ಕುರಿತು ಮಾತನಾಡುವುದಿಲ್ಲ. ಮತಾಂತರದ ಬಗ್ಗೆ ಚಕಾರ ವೆತ್ತುವುದಿಲ್ಲ. ಅವರೆಲ್ಲಾ ಸಾಚಾಗಳು ಹಿಂದೂ ಮಠಾಧೀಶರು ಅನ್ಯಾಯ ಮಾಡುವ ಜನ ಎಂದು ಲಂಕೇಶ್ ಪತ್ರಿಕೆಯಿಂದ ಪ್ರಾರಂಭ ಗೊಂಡು ಹಾಯ್ ಬೆಂಗಳೂರು ಸೇರಿದಂತೆ ಟಿ.ವಿ. ನೈನ್ ವರೆಗೂ ಮುಂದುವರೆಯುತ್ತದೆ. ಹಾಯ್ ನ ಬೆಳೆಗೆರೆ ರಾಮಚಂದ್ರಾ ಪುರಮಠದ ಶ್ರೀಗಳಿಗೆ ಬಳಸಿದ ಬಾಷೆ ಮುಲ್ಲಾಗಳಿಗೆ ಬಳಸಲಾಗುತ್ತದಯೇ?. ಆದರೆ ಅದೇ ಹಿಂದೂಗಳಿಗೆ ಇವರದ್ದು ಕೀಳುಮಟ್ಟದ ಭಾಷೆ. ಅರ್ತವಿಲ್ಲದ ಕುತರ್ಕ. ಮಾದ್ಯಮಗಳೆಂದರೆ ನಿಷ್ಪಕ್ಷಪಾತವಾಗಿರಬೇಕು. ಧೈರ್ಯದ ಮಾತನ್ನಾಡಿದರೆ ಎಲ್ಲರಿಗೂ ಮಾತನ್ನಾಡಬೇಕು. ಸಾಧು ಸಜ್ಜನರು ಸಿಕ್ಕಿದರೆ ರಂಭಾ ,ರಬೆ, ಗೌಲಂ, ಅಶ್ರೀ, ಮುಂತಾದ ನೂರಾರು ಜನರು ತಮ್ಮ ಲೇಖನಿ ಹರಿಬಿಡುತ್ತಾರೆ. ಉತ್ತರನ ಪೌರುಷ ಒಲೆಯ ಮುಂದೆ ಎಂದಂತೆ ಇವರ ಕತೆ.
ಇದೇಕೆ ಹೀಗೆ ಎಂದೇ ಅರ್ಥವಾಗದು. ಬಹುಶಃ ಇವರಿಗೆಲ್ಲಾ ಹಿಂದೂ ಗಳಿಂದ ಪೇಮೆಂಟ್ ಹೋಗದೇನೋ ಹಾಗಾಗಿ ಹೀಗೆ ಅಂತ ಒಂದೇ ಒಂದು ಉತ್ತರ ಸಿಗಬಹುದು. -ರಘು

Thursday, September 18, 2008

ಹಾವು ಹಾವೆಂದು


ಹಾವು ಎಂದರೆ ಯಾರಿಗೆ ಭಯವಿಲ್ಲ. ಎಲ್ಲರೂ ಮಾರು ದೂರ ಹಾರುತ್ತಾರೆ. ಬೆಳಿಗ್ಗೆ ದೇವರಿಗೆ ಹೂವು ಕೊಯ್ಯುತ್ತಿರುವಾಗ ನಿರುಪದ್ರವಿ ಹಸಿರುಳ್ಳೆ ಹಾವು ಕಂಡರೂ ಸಾಕು ಟಣ್ಣಂತ ಆಚೆ ಜಿಗಿಯುತ್ತೇವೆ ನಾವು. ಹಾವು ಎಂದರೆ ಅಷ್ಟರ ಮಟ್ಟಿಗಿನ ಭಯ ಮನಸ್ಸಿನ ಆಳಕ್ಕೆ ಇಳಿದುಹೋಗಿದೆ. ಆದರೆ ವಾಸ್ತವವೆಂದರೆ ಶೇಕಡಾ ಎಂಬತ್ತರಷ್ಟು ಹಾವುಗಳು ನಿರುಪದ್ರವಿ. ತನ್ನಷ್ಟಕ್ಕೆ ತಾನು ಇಲ್ಲಿಯವರೆಗೆ ಯಾರಮೇಲೂ ಅಟ್ಯಾಕ್ ಮಾಡಿದ ದಾಖಲೆಯಂತೂ ಇಲ್ಲವೇ ಇಲ್ಲ. ಹಾವು ತನ್ನ ಜೀವ ರಕ್ಷಣೆಗೋ ಅಥವಾ ಆಹಾರಕ್ಕಾಗಿಯೋ ಮಿಕ್ಕ ಜೀವಿಯ ಮೇಲೆ ಧಾಳಿ ಮಾಡುತ್ತವೆ ಎನ್ನುವುದು ಸರ್ವವಿಧಿತ. ಆದರೆ ಮನುಷ್ಯ ಹಾವನ್ನು ತನ್ನಂತೆಯೇ ಎಂದು ಎಣಿಸಿದ್ದರಿಂದ ಹಾವಿಗೆ ಹೆದರಿ ಬದುಕುವಂತಾಗಿದೆ. ನಮ್ಮ ಮನೆಯ ಸುತ್ತಮುತ್ತ ಮಳೆಗಾಲ್ದ ದಿವಸದಲ್ಲಿ ನೂರಾರು ಜಾತಿಯ ಹಾವು ಹರಿದಾಡುತ್ತಿರುತ್ತದೆ. ಅದರ ಜತೆಯಲ್ಲಿ ಹಾವು ಗೊಲ್ಲರ ಬೆತ್ತದ ಬುಟ್ಟಿಯೊಳಗಿನ ನಾಗರಹಾವೂ ಅದೇ ಸಮಯದಲ್ಲಿ ಬರುತ್ತದೆ. ಈ ಹಾವು ಗೊಲ್ಲರ ಜೀವನ ಒಂದು ಅದ್ಬುತ ತಾಕತ್ತಿನದು. "ಗೌರಬ್ಬೇ...ಮಹಾತಾಯಿ ಒಂದಿಷ್ಟು ಬಿಕ್ಷಾ ಹಾಕಿ ತಾಯಿ..." ಎನ್ನುವ ಡೈಲಾಗ್ ನೊಂದಿಗೆ ಹಾವುಗೊಲ್ಲ ಹೆಂಗಸರು ಮನೆಬಾಗಿಲಿಗೆ ಬರುತ್ತಾರೆ. "ಆತು ಬಿಕ್ಷೆ ಹಾಕ್ತಿನಿ ಮತ್ತೆ ರಗಳೆ ಮಾಡಬಾರದು" ಎಂಬ ಅಣತಿಯೊಂದಿಗೆ ಒಂದು ಮುಷ್ಟಿ ಅಕ್ಕಿ ಹಾಕುತ್ತೇವೆ. ಅಕ್ಕಿ ಅವರ ಚೀಲದೊಳಗೆ ಬಿದ್ದ ಮರುಕ್ಷಣ" ಸ್ವಾಮೀ... ಮಗ ಊಟ ಮಾಡದೆ ಮೂರು ದಿವ್ಸ ಆತು ತಿನ್ನಕೆ ಏನಾದ್ರೂ ಇದ್ರೆ ಕೊಡ್ರವ್ವಾ...." ಎಂಬ ಉದ್ಗಾರ." ಆಗ್ಲೆ ಹೇಳಿದೀನಿ ಮತ್ತೆಂತು ಕೇಳ್ಬಾರ್ದು ಅಂತ" ಎಂದು ನಾವು ಗದರಿದರೆ " ನಿಮ್ಮ ಮಗು ಅಂತ ತಿಳ್ಕಂಡು ಹಾಕ್ರಿ ಯಪ್ಪಾ" ಅಂದು ಬಿಡ್ತಾರೆ ಸಧ್ಯ ಸಂಬಂದ ಹೀಗೆಲ್ಲಾ ಆಗುತ್ತಿರುವುದನ್ನು ಕಂಡು ಹೆದರಿ ಮುಂದುವರೆಯುವ ರಗಳೆ ಬೇಡ ಎಂದು ಅಳಿದುಳಿದ ರೊಟ್ಟಿ ಕೊಟ್ಟರೆ ಮರುಕ್ಷಣ "ಕವಳಾ ಹಾಕಾಕೆ ನಾಲ್ಕು ಅಡಿಕೆ ಕೊಡಿ" ಎನ್ನುವ ಅದರ ನಂತರ ಉಡಾಕೆ ಹಳಪಳೆ ಸೀರೆ ಇದ್ರೆ ಕೊಡೀ..... ಎನ್ನುವ ವಿಚಿತ್ರ ಧ್ವನಿಯ ಹಾಗೂ ಶೈಲಿಯ ರಾಗ ಮುಂದುವರೆಯುತ್ತದೆ. ಈ ಹಾವುಗೊಲ್ಲ ಹೆಂಗಸರು ಕಚಪಚ ನಮ್ಮನ್ನು ಬೈಯುತ್ತಾ ಆಚೆ ದಾಟುತ್ತಿದ್ದಂತೆ ಪಿಟಿಪಿಟಿ ಹೆಜ್ಜೆ ಹಾಕುತ್ತಾ ಹಾವುಗೊಲ್ಲ ಬರುತ್ತಾನೆ. ಆತ ಈ ಹೆಂಗಸರಿಗೂ ತನಗೂ ಯಾವುದೇ ಸಂಬಂಧ ಇಲ್ಲ ಎನ್ನುವ ವರ್ತನೆಯೊಂದಿಗೆ "ಹಾವು ನೋಡ್ತೀರಾ ಸೋಮಿ.." ಎನ್ನುತ್ತಾನೆ. ಹೂ ಎಂದಿರಾ? ಹತ್ತೊ ಇಪ್ಪತ್ತೋ ರೂಪಾಯಿ ಕೈಬಿಟ್ಟಿತು ಎಂದರ್ಥ. ಹಾವು ನೋಡದಿದ್ದರೆ ಒಂದು ಮುಷ್ಠಿ ಬಿಕ್ಷಕ್ಕಷ್ಟೇ ಆತ ಸಮಾಧಾನಿ ಎಲ್ಲಾದರೂ ಅಕಸ್ಮಾತ್ ಅಡಿಕೆ ಕೇಳಿಯಾನು. ಆತನ ಬಗಲಲ್ಲಿ ಒಂದು ಕಾಲದಲ್ಲಿ ಘಟಸರ್ಪ ಎಂದು ಖ್ಯಾತಿ ಪಡೆದು ನಂತರ ಗುರುಬಲದ ದೋಷದಿಂದ ಈ ಬಡಕಲು ಹಾವುಗೊಲ್ಲನ ಕಣ್ಣಿಗೆ ಬಿದ್ದು ಹಲ್ಲುಕೀಳಿಸಿಕೊಂಡ ನಾಗರಹಾವು ಬೆತ್ತದ ಚಾಪೆಯೊಳಗೆ ಸುರುಳಿಸುತ್ತಿ ಮಲಗಿರುತ್ತದೆ. ಎಂತಹ ವಿಚಿತ್ರ, ಮಾರುದೂರದಲ್ಲಿ ಕಂಡರೆ ಬೆಚ್ಚಿಬೀಳುವ ನಾವು, ಬಗಲಲ್ಲಿ ಇಟ್ಟುಕೊಂಡು ಜೀವನ ಅರಸುವ ಹಾವುಗೊಲ್ಲ. ಹಾವೆಂಬ ಜೀವಿ ಒಬ್ಬರಿಗೆ ಜೀವಭಯವನ್ನು ತರಿಸುತ್ತಿದ್ದರೆ ಮತ್ತೊಬ್ಬರಿಗೆ ಜೀವನವನ್ನೇ ಕೊಡುತ್ತಿದೆ. ಎಂಬಲ್ಲಿಗೆ ಹಾವು ಪುರಾಣ ಮುಕ್ತಾಯವೂ.......

Thursday, September 11, 2008

ಸಂಪಿಗೆ ಮರದ ಹಸಿರೆಲೆ ನಡುವೆ ಕೋಗಿಲೆ ಕೂಗಿತ್ತು




ಚಿಕ್ಕವ್ವೋ ಚಿಕ್ಕವ್ವೋ ಎನ್ನುತ ತನ್ನಯ ಮರಿಗಳ ಕರೆದಿತ್ತು ಅದ ಕೇಳಿ ನಾ ಮೈ ಮರೆತೆ ಸ್ವರವೊಂದು ಆಗಲೆ ಕಲಿತೆ ಹಾಡಿದೆ ಈ ಕವಿತೆ. ವಾವ್ ಎಂದೆನ್ನುವ ಈ ಹಾಡನ್ನು ನೀವು ಕೇಳಿದ್ದೀರೋ ಇಲ್ಲವೋ ಗೊತ್ತಿಲ್ಲ. ಆದರೆ ಅದು ಅದ್ಬುತದ ಹಾಡು. ನನ್ನ ಹದಿನೆಂಟನೆ ವಯಸ್ಸಿನಲ್ಲಿ ಈ ಹಾಡು ನನಗೆ ಪ್ರಿಯವಾಗಿತ್ತು. ಆಗ ನನ್ನ ಅಕ್ಕನ ಮಗಳು ರಮ್ಯಾ ಮೂರು ವರ್ಷದ ಕೂಸು. ಆಕೆಯ ಅಪ್ಪ ಅಮ್ಮ ಇಬ್ಬರೂ ಜಾಬ್ ಜನ ಆಗಿದ್ದರಿಂದ ಒಂದು ವರ್ಷ ಅಜ್ಜನ ಮನೆಯ ವಾಸ ಅವಳಿಗೆ. ಹಾಗಾಗಿ ನನಗೆ ಮದುವೆಯಾಗದಿದ್ದರೂ ಮಕ್ಕಳನ್ನು ಪಾಲಿಸುವ ಜವಾಬ್ದಾರಿ ಬಿದ್ದಿತ್ತು. ಕೂಸಿನ ಅಜ್ಜ ಅಜ್ಜಿ ಮತ್ತು ಮಾವನೆಂಬ ಮಾವನಾದ ನಾನು ಬಿಟ್ಟರೆ ಕಾಡಿನ ನಡುವೆಯ ಒಂಟಿಮನೆಯಲ್ಲಿ ಯಾರೂ ಇರಲಿಲ್ಲ. ನಾನು ಮನೆಯಲ್ಲಿದ್ದಷ್ಟು ಹೊತ್ತು ನನ್ನ ಕಾಲು ಸುತ್ತುತ್ತಿದ್ದ ಆಕೆಗೆ ಈ ನನ್ನ ಹಾಡು ಕೊಡುಗೆ. ಹಾಡಿನಲ್ಲಿ ಅಷ್ಟು ಶಕ್ತಿಯಿತ್ತಿರಬೇಕು( ನನ್ನ ಕಂಠದ ಲಯದಬಗ್ಗೆ ನನಗೆ ಅನುಮಾನ) ಆ ಹಾಡನ್ನು ಪದೆ ಪದೆ ಹಾಡಬೇಕಿತ್ತು ಅವಳಿಗೆ. ಮಿಸ್ಕಿ ಹಾಕಿರೆ ಹೆಕ್ಕನ ಪುಕ್ಕಿ, ಇಮಾನು ಬಂದರೆ ಹೆಕ್ಕನ ಪುಕ್ಕಿ (ಮಿಕ್ಸಿ ಹಾಕಿದರೆ ಹೆದರುಪುಕ್ಕಿ ವಿಮಾನ ಬಂದರೆ ಹೆದರುಪುಕ್ಕಿ) ಎಂದು ಅವಳದೇ ಆದ ಬಾಲ್ಯ ಬಾಷೆಯಲ್ಲಿ ಹೇಳುತ್ತಿದ್ದ ನೆನಪುಗಳು ಸುಮಧುರ. ಈಗ ಆಕೆ ಹನಿವೆಲ್ ಉದ್ಯೋಗಿ. ಕಣ್ಮುಂದೆ ಬೆಳೆದ ಕೂಸು ಜಣಜಣ ಹಣ ತರುತ್ತಿದೆ ಪ್ರಪಂಚದ ಸುದ್ದಿ ಹೇಳುತ್ತಿದೆ ನಾನು ಅದೇ ಹಳೆಯ ಕತೆಗೆ ಜೋತು ಬಿದ್ದು ತೌಡು ಕುಟ್ಟುತ್ತಿದ್ದೇನೆ. ಮತ್ತೊಬ್ಬ ಅಕ್ಕನ ಮಗಳು ನವ್ಯ, ಅವಳ ಬಾಲ ಭಾಷೆಯ ಮಜವೇ ಮಜ. ಶೆಟ್ರಮನೆ ನಾಗಮನಿ ಕಂಡ್ರೆ ಬತ್ತಿಯ್ಯೆ( ಶೇಟ್ರಮನೆಯ ನಾಗಮಣಿಯನ್ನು ಕಂಡ್ರೆ ಆಗ್ತಲ್ಲೆ, ಎಂದು ಇದರ ಅರ್ಥ) ಎಂಬಂತಹ ಬಾಲ ಭಾಷೆ ಅವಳದ್ದು. ಈಗ ಆಕೆ ಇಂಜನಿಯರಿಂಗ್ ಮುಕ್ತಾಯ ಹಂತದಲ್ಲಿರುವ ಹುಡುಗಿ. ಹಾಗೆಯೇ ರಂಜನ ಕಾವ್ಯ ಲಕ್ಷ್ಮೀಶ ವೈಶಾಲಿ ಸಾಲು ಸಾಲು ಹುಡುಗರು. ಅತ್ಯಂತ ಕಿರಿಯವನಾಗಿ ನನ್ನ ಮಗ ಸುಮಂತ ಅವನ ಬಾಲ ಭಾಷೆಯೋ ಅದರ ಅರ್ಥ ನಮಗೆ ಮಾತ್ರ ಗೊತ್ತು. ದತುಲ ಅಂದರೆ ನಿಮಗೇನಾದರೂ ಅರ್ಥ ಈ ಜನ್ಮದಲ್ಲಿ ಆಗಲಿಕ್ಕಿಲ್ಲ. ಆದರೆ ನಮಗೆ ಗೊತ್ತು ನಮ್ಮ ಸುಮಂತನ ಬಾಲ್ಯ ಭಾಷೆಯಲ್ಲಿ ರಕ್ತ ಎಂದಾಗಿತ್ತು. ಹುಡುಗರು ಎಷ್ಟೇ ದೊಡ್ದವರಾದರೂ ಹೆತ್ತವರಿಗೆ ಅವರ ಬಾಲ್ಯ ಮರೆಯಲಾರದು. ಅವುಗಳು ಸುನೇರೆ ಫಲ್. ಇರಲಿ ಅದೆಲ್ಲಾ ಇರಲಿ ಈಗ ವಾಸ್ತವದ ಕತೆಗೆ ಬರುತ್ತೇನೆ.


ಹತ್ತಿರದ ಹಂಸಗಾರು ಎಂಬ ಊರಿನಲ್ಲಿ ರಂಗಣ್ಣ ಎಂಬ ಜನ ಇದ್ದ. ಆತನಿಗೆ ಸಾಮಾಜಿಕ ಕೆಲಸದಲ್ಲಿ ಅತಿಯಾದ ಕಾಳಜಿ. ಸರ್ಕಾರಿ ಶಾಲೆಯಲ್ಲಿ ಪಾಠ ಹೇಳುವುದು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಜನರನ್ನು ತೊಡಗಿಸುವುದು, ಯೋಗ ಹೇಳಿಕೊಡುವುದು ಹೀಗೆ ಸಾರ್ವಜನಿಕರಿಗೆ ಉಪಕಾರವಾಗುವಂತಹಾ ಎಲ್ಲಾ ಚಟುವಟಿಕೆಗಳಲ್ಲಿ ತನ್ನನ್ನು ತಾನು ಆತ ತೊಡಗಿಸಿಕೊಂಡು ಜನಜನಿತನಾಗಿದ್ದ. ರಂಗಣ್ಣ ಸಿನೆಮಾದಲ್ಲಿ ತೋರಿಸುವ ಪರೋಪಕಾರಿಯ ಯಥಾರೂಪ. ಆತನಿಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಚೂಟಿಯಾಗಿದ್ದ ಮಕ್ಕಳು ಓದಿನಲ್ಲಿಯೂ ಚುರುಕು. ಎಲ್ಲಾ ಮಕ್ಕಳಂತೆ ರಂಗಣ್ಣನ ಮಕ್ಕಳು ಬಾಲ ಭಾಷೆಯನ್ನಾಡುತ್ತಿದ್ದವು. ಆದರೆ .... ಹಂಸಗಾರಿನ ರಂಗಣ್ಣನ ಮನೆಯೆದುರು ದೇವಸ್ಥಾನದ ಕೆರೆ, ಅಕ್ಕ ತಮ್ಮ ಮತ್ತು ಕೆಲ ಹುಡುಗರು ಶಾಲೆಗೆ ರಜೆಯಿರುವ ಮಟ ಮಟ ಮಧ್ಯಾಹ್ನ ಕೆರೆಗೆ ಆಟ ಆದಲು ಹೋಗಿದ್ದವು. ತಮ್ಮ ಕೆರೆಗೆ ಜಾರಿಬಿದ್ದ, ತಮ್ಮನನ್ನು ಕಾಪಾಡಲು ಅಕ್ಕ ಕೈಕೊಟ್ಟಳು. ಕ್ಷಣಾರ್ದದಲ್ಲಿ ವಿಧಿ ಎರಡು ಮಕ್ಕಳನ್ನು ತನ್ನೆಡೆಗೆ ಸೆಳೆದುಕೊಂಡಿತ್ತು. ಪಾಲಕರ ಗೋಳಾಟ ಚೀರಾಟ ಹೃದಯ ವಿದ್ರಾವಕ ಘಟನೆ. ರಂಗಣ್ಣ "ನಾನು ಮಾಡಿದ ಸಮಾಜ ಸೇವೆ ಕಡಿಮೆಯಾಯಿತು ಅಂತ ಅನ್ನಿಸುತ್ತೆ" ಎಂದು ಮೌನವಾದ. ಆನಂತರ ಆತ ಹಂಸಗಾರನ್ನು ತೊರೆದು ಮುಳುಗಡೆಯ ಮೂಲೆ ಊರು ಸೇರಿದ. ತಾನಾಯಿತು ತನ್ನ ಯೋಗ ಧ್ಯಾನವಾಯಿತು ಎಂಬ ತತ್ವಕ್ಕೆ ಇಳಿದ. ಸಂಬಧಿಕರ ಮಗುವನ್ನು ದತ್ತು ತೆಗೆದುಕೊಂಡಿದ್ದಾನಂತೆ. ಆದರೂ ಸತ್ತ ಮಗುವಿನ ದು:ಖ ನೂರು ಹೆತ್ತರೂ ಬಾರದಂತೆ. ಅರಳುವ ಹೂವು ಬೀಜವಾಗಿ ಹಣ್ಣಾಗಿ ಮಾಗಿದರೆ ಮರಕ್ಕೊಂದು ನೆಮ್ಮದಿ. ಆದರೆ ವಿಧಿ ಎಲ್ಲಾ ಹೂಗಳನ್ನೂ ಬೀಜವಾಗಿಸುವುದಿಲ್ಲ. ಅದಕ್ಕೆ ಅದರದ್ದೇ ಆದ ನಿಯಮವಿದೆ, ಅದು ಯಾವರೀತಿಯದು ಎಂದು ಪ್ರಪಂಚ ಹುಟ್ಟಿ ಈ ಕ್ಷಣದವರೆಗೂ ಯಾರಿಗೂ ಗೊತ್ತಿಲ್ಲ. ಮುಂದೂ ತಿಳಿಯುವುದಿಲ್ಲ ಎಂಬ ಆಧ್ಯಾತ್ಮ ಸತ್ಯವಾದರೂ ಮಕ್ಕಳ ಬಾಲ್ಯ ನೋಡಿದವರಿಗೆ ಅವರ ಕಳೆದುಕೊಂಡಾಗ ನಿತ್ಯ ಕಾಡುತ್ತದೆ. ಅವರ ಆಟೋಟಪಾಟಗಳು ನಿತ್ಯ ಕಾಡುತ್ತವೆ.

ಇವೆಲ್ಲಾ ಯಾಕೆ ನೆನಪಾಯಿತೆಂದರೆ ಮೊನ್ನೆ ಬಂದಕೊಪ್ಪದ ಪತ್ರಕರ್ತೆಯೊಬ್ಬಳು ರಸ್ತೆ ಅಪಘಾತದಲ್ಲಿ ನಿಧನಳಾದಳಂತೆ ಆಕೆಯ ಚಿತೆಯ ನೋಡಲು ಬರುತ್ತಿದ್ದ ಅಣ್ಣ ನೂ ರಸ್ತೆ ಅಪಘಾತದಲ್ಲಿ ನಿಧನನಾದನಂತೆ. ವಿಧಿ ಎಷ್ಟು ಕ್ರೂರ ಅನ್ನಿಸುತ್ತದೆ. ಆದರೆ ನಾವು ಅಸಾಹಾಯಕರು.

ಕೋಗಿಲೆಯ ಚಿಕ್ಕವ್ವೋ ಚಿಕ್ಕವ್ವೋ ಕೂಗು ಮರಿಗಳಿದ್ದಾಗ ಚಂದ. ಇಲ್ಲದಿದ್ದಾಗ .......

ಕೊನೆಯದಾಗಿ: ಈ ಅಪ್ರಾಪ್ತ ವಯಸ್ಸಿನ ದುಮ್ಮರಣವೇಕಾಗುತ್ತದೆ? ಎಂದು ಆನಂದರಾಮ ಶಾಸ್ತ್ರಿಗಳನ್ನು ಕೇಳಿದೆ. ಅದಕ್ಕವರು "ಅಯ್ಯಾ ದೊರೆ ಈ ಪ್ರಶ್ನೆ ಇಟ್ಟುಕೊಂಡು ಎಂತೆಹಾ ವ್ಯಕ್ತಿಗಳ ಬಳಿ ಹೋಗುತ್ತೀಯೋ ಅಂತಹ ಉತ್ತರ ಸಿಗುತ್ತದೆ. ನಿಖರವಾದ ಉತ್ತರ ಕೊಡುತ್ತೇನೆ ಎಂದು ಹೇಳಿದವನು ಸುಳ್ಳು ಹೇಳುತ್ತಿದ್ದಾನೆ ಎಂದರ್ಥ" ಎಂದರು. ಅವರಿಗೆ ಉತ್ತರ ತೋಚದಿದ್ದಕ್ಕಾಗಿ ಹಾಗೆ ಹೇಳಿದರೋ ಅಂತ ನಾನಂದು ಕೊಂಡೆ.

ಟಿಪ್ಸ್:ಇಳಿಜಾರು ರಸ್ತೆಯಲ್ಲಿ ಬೈಕ್ ಆಪ್ ಮಾಡಿಕೊಂಡು ಹೋಗುತ್ತಿರುವಾಗ ಸುಮ್ಮನೆ ಆಕ್ಸಿಲೇಟರ್ ಕೊಡಿ. ಬೈಕ್ ನಿಧಾನವಾದಂತೆ ಅನ್ನಿಸುತ್ತದೆ. ಒಳ್ಳೆ ಮಜ ಅನುಭವಿಸಿ ಕಾರಣ ಹೊಳೆದರೆ ಹೇಳಿ ಇಲ್ಲದಿದ್ದರೆ ಕೇಳಿ

ಯಶಸ್ಸಿನ ಹಿಂದಿನ ಕೈಗಳು

ಖತ್ರಿನಾ ಕೈಪ್ ಬಿಪಾಶಾ ಬಸು ಸಾಯಿಫ್ ಆಲಿ ಖಾನ್ ಸೂಪರ್ ಹಾಡಿಗೆ ತಾಳಕ್ಕೆ ತಕ್ಕ ಕುಣಿಯುತ್ತಿದ್ದಾರೆ . ಪ್ರೇಕ್ಷಕರಿಗೆ ಖುಷಿಯೋ ಖುಷಿ. ವಿಶ್ವೇಶ್ವರ ಭಟ್, ನಾಗೇಶ ಹೆಗಡೆ, ಕುಲದೀಪ್ ನಯ್ಯರ್, ಶ್ರೀವತ್ಸ ಜೋಷಿ, ಹಾಲ್ದೋಡ್ದೇರಿ, ಪ್ರತಾಪ್ ಸಿಂಹ ಚೆಂದಾಗಿ ಅಂಕಣ ಬರೆಯುತ್ತಾರೆ ಓದುಗರಿಗೆ ಖುಷಿಯೋ ಖುಷಿ. ಸುದೀಪ್ ಉಪೇಂದ್ರ ಜಗ್ಗೇಶ್ ರಮ್ಯಾ ರಮೇಶ್ ದೊಡ್ಡಣ್ಣ ಪರದೆಯ ಮೇಲೆ ಸೂಪರ್ ಡೈಲಾಗ್ ಹೊಡೆಯುತ್ತಾರೆ ವೀಕ್ಷಕ ಖುಷಿಯೋ ಖುಷಿ. ಫೈವ್ ಸ್ಟಾರ್ ಹೋಟೆಲ್ಲಿನಲ್ಲಿ ಬೆಳ್ಳನೆಯ ರೈಸ್ ಕೆಂಪನೆಯ ಸಾಂಬಾರ್ ವಾವ್ ಊಟಕ್ಕೆ ಕುಳಿತವನ ಬಾಯಲ್ಲಿ ಹೋಟೆಲ್ಲಿನ ಗುಣಗಾನ. ಈ ಟಿವಿ ಯ ಸವಿ ರುಚಿಯ ಕಾರ್ಯಕ್ರಮದಲ್ಲಿ ಗೃಹಿಣಿ ಚಂದಾಗಿ ಡ್ರೆಸ್ ಮಾಡಿಕೊಂಡು ಆಶೀರ್ವಾದ ಗೋದಿ ಹಿಟ್ಟು....! ಬಳಸಿ ಕಾಶ್ಮೀರಿ ಪಲಾವ್ ಮಾಡುವುದರ ಬಗ್ಗೆ ಹೇಳುತ್ತಿದ್ದಾಳೆ. ನಿರೂಪಕಿ ಧನ್ಯವಾದಗಳ ಸುರಿಮಳೆಯನ್ನು ಅರ್ಪಿಸುತ್ತಿದ್ದಾಳೆ. ಸಂಜೆ ಮುಂದೆ ಬೇಕರಿಯ ಬಾಗಿಲಲ್ಲಿ ನಿಂತು ವಾವ್ ಎಂಥಾ ಬಾದಾಮಿ ಹಾಲು ಕೊಡ್ತಾನೆ ಇವನು ಎನ್ನುತ್ತಲೋ, ಅಥವಾ ಟಿವಿ ನೈನ್ ನ ರಂಗನಾಥ್ ಭಾರದ್ವಾಜ್ "ಈಗೇನೋ ದೊಂಬಿ ಕಡಿಮೆಯಾಗಿದೆ ಸಾಯಂಕಾಲ ಮತ್ತೆ ಜಾಸ್ತಿಯಾಗಬಹುದಾ ಅಂತ? " ಎಂದು ಕೋಮುಗಲಭೆಯ ನಡುವೆ ಕ್ಯಾಮೆರಾ ಇಟ್ಟುಕೊಂಡು ಕುಳಿತ ವರದಿಗಾರನ ಬಳಿ ಸ್ಟೈಲಾಗಿ. ಪ್ರೇಕ್ಷಕ ರಂಗನಾಥ್ ಕೇಳುವ ಪ್ರಶ್ನೆಗೆ ಖುಷಿಯೋ ಖುಷಿ , ವರಾತ ವನ್ನು ಹೇಳಲು ಒಂದು ಬ್ಲಾಗ್ ನೋಡಿದಕೂಡಲೆ ವಾಹ್ ಪರವಾಗಿಲ್ಲ ಎನ್ನುವ ಓದುಗರು ಖುಷ್ ಇರಲಿ ಇವೆಲ್ಲಾ ಮುಂಚೂಣಿಯಲ್ಲಿ ನಿಂತವರ ಕತೆಯಾಯಿತು.
ಒಂದು ಸಾರಿಯಾದರೂ ನಾವು ಖತ್ರಿನಾ ಹಿಂದೆ ಅವಳಿಗಿಂತ ಚೆಂದಾಗಿ ನರ್ತಿಸುವ ಸಹನರ್ತಿಕಿಯರ ಬಗ್ಗೆಯೋ, ಅಂಕಣಕಾರರ ಬರಹಗಳನ್ನು ತಲುಪಿಸುವ ಪೇಪರ್ ಬಾಯ್ ಬಗ್ಗೆಯೋ, ವಾಚಕರ ವಾಣಿಯಲ್ಲಿ ಸೀಮಿತ ಜಾಗದಲ್ಲಿ ಸೂಪರ್ ಅಂಕಣಕಾರರಿಗಿಂತ ಚೆನ್ನಾಗಿ ಬರೆಯುವ ಅನಾಮಿಕ ಬರಹಗಾರನ ಬಗ್ಗೆಯೋ, ಜಗ್ಗೇಶ್ ನ ಸೂಪರ್ ಡೈಲಾಗ್ ಬರೆದವನ ಬಗ್ಗೆಯೋ, ಮೊಳಕಾಲುದ್ದ ಕೆಸರಿನಲ್ಲಿ ಮುಳುಗಿಕೊಂಡು ಬೆಳ್ಳನೆಯ ಅಕ್ಕಿ ಬೆಳೆದ ಭತ್ತದ ರೈತನ ಬಗ್ಗೆಯೋ. ಕಾಶ್ಮೀರಿ ಪಲಾವ್ ಗೆ ಸಕಲ ಸಾಂಬಾರು ಒದಗಿಸಿದ ತೋಟಗಾರಿಕಾ ಕೃಷಿಕನ ಬಗ್ಗೆಯೋ, ಬೇಕರಿಯವನ ಬಾದಾಮಿ ಹಾಲಿಗೆ ಗಬ್ಬು ನಾಥದ ಸಗಣಿ ಮೈಗೆ ಹಚ್ಚಿಕೊಂಡು ಹಾಲು ಪೂರೈಸುತ್ತಿರುವ ಗೌಳಿಯ ಬಗ್ಗೆಯೂ ಅಥವಾ ಗಲಭೆಯ ನಡುವೆ ಕ್ಯಾಮೆರಾ ಇಟ್ಟುಕೊಂಡು ಎಡಗೈಲಿ ಜೀವ ಹಿಡಿದುಕೊಂಡಿರುವ ವರದಿಗಾರನಬಗ್ಗೆಯೋ , ಅಥವಾ ಬ್ಲಾಗ್ ಓದಿ ಅದಕ್ಕಿಂತ ಚೆನ್ನಾಗಿ ಎರಡು ಸಾಲಿನಲ್ಲಿ ಶ್ರದ್ಧೆಯಿಂದ ಕಾಮೆಂಟ್ ಬರೆದು ಪೋಸ್ಟ್ ಮಾಡುತ್ತಾರಲ್ಲ ಅವರ ಬಗ್ಗೆ ನಾವು ಯೋಚಿಸುವುದೇ ಇಲ್ಲ.
ಮುಂಚೂಣಿಯಲ್ಲಿ ನಿಂತವರ ಗುಣಗಾನ ಅವರಿಗೆ ಎಲ್ಲ ಸಲ್ಲುತ್ತದೆ. ಆದರೆ ನಿಜವಾದ ವ್ಯಕ್ತಿಗಳು ಅವರ ಹಿಂದಿರುವವರು. ಹಾಗಂತ ಹಿಂದಿರುವ ಎಲ್ಲಾ ವ್ಯಕ್ತಿಗಳನ್ನು ಮುಂದೆ ತರುವುದು ಅಸಾದ್ಯದ ಮಾತು ಎನ್ನುವುದಂತೂ ನೂರಕ್ಕೆ ನೂರು ಸತ್ಯದ ಮಾತು. ಆದರೆ ಮುಂದಿದ್ದವರೇ ಸತ್ಯ ಅಂತ ತಿಳಿದುಕೊಂಡು ಬಿಡುವುದು ಅಷ್ಟೇ ತಪ್ಪಿನ ಮಾತು. ವಾಸ್ತವವೆಂದರೆ ದೊಡ್ದವರು ಯಾರು ಗೊತ್ತಾ..? ಅಜ್ಞಾತ ವ್ಯಕ್ತಿಗಳು ಅವರು ಸರ್ವಜ್ಞನಂತೆ. ಯಾರು ನೋಡಲಿ ಬಿಡಲಿ ಯಾರು ಕೇಳಲಿ ಬಿಡಲಿ ತಮ್ಮ ಪಾಡಿಗೆ ತಾವು ಭತ್ತ ಬೆಳೆಯುತ್ತಲೋ ಬಟ್ಟೆ ನೆಯ್ಯುತ್ತಲೋ ಅವರ ಜೀವನ ಮುಗಿದಿರುತ್ತದೆ. ಮುಂಚೂಣಿಯಲ್ಲಿರುವವರು ಅವರ ಸಾರವನ್ನು ಬಸಿದುಕೊಂಡು ತಮ್ಮ ಲೇಬಲ್ ಅಂಟಿಸಿಕೊಂಡಿರುತ್ತಾರೆ. ಅದೊಂದು ಯೋಗಾವಳಿ ಅಥವಾ ಅವಕಾಶ. ಆ ಅವಕಾಶ ಎಲ್ಲರಿಗೂ ಹುಡುಕಿಕೊಂಡು ಬರುವುದಿಲ್ಲ. ಹುಡಿಕಿ ಹೊರಟವರಿಗೆ ಕೆಲವೊಮ್ಮೆ ದಕ್ಕುತ್ತದೆ ಹಲವೊಮ್ಮೆ ದಕ್ಕದು. ಆದರೆ ಹಠ ಬಿದ್ದರೆ ಒಂದಲ್ಲಾ ಒಂದು ದಿನ ಸಾದ್ಯ.

Saturday, September 6, 2008

ಹುಡುಕ ಹೊರಟ ನಾನು ಹುಡಿಕಿಕೊಂಡ ಅಪ್ಪಯ್ಯ


ಹಾ ಆರಂಭದಲ್ಲಿಯೇ ಹೇಳುತ್ತೇನೆ. ಈಗ ನಾನು ಹೇಳ ಹೊರಟಿರುವುದು ಏನೇನೋ ಇದೆ. ಅದನ್ನೆಲ್ಲಾ ನಿಮ್ಮಲ್ಲಿಯೇ ಬಚ್ಚಿಟ್ಟುಕೊಳ್ಳಬೇಕು, ಕಾರಣ ಅದು ನೀವೂ ಆಗಿರಬಹುದು. ನಾನೂ ಆಗಿರಬಹುದು.
ನನಗೆ ವಯಸ್ಸು ನಲವತ್ತೊಂದು, ಪಿಯುಸಿ ವಿದ್ಯಾರ್ಹತೆ ಕನ್ನಡ ಓದಲು ಬರೆಯಲು ಹಿಂದಿ ಮಾತನಾಡಲು ಇಂಗ್ಲೀಷ್ ಓದಲು ಬರುತ್ತದೆ. ಮಲೆನಾಡಿನ ಹಳ್ಳಿಯ ಒಂಟಿಮನೆಯಲ್ಲಿ ವಾಸ. ವರ್ಷಕ್ಕೆ ಹತ್ತು ಕ್ವಿಂಟಾಲ್ ಅಡಿಕೆ ಬೆಳೆಯಲ್ಲಿ ಜೀವನ. ವೆನಿಲಾಕ್ಕೆ ಒಳ್ಳೆ ದರ ಬಂದಿದ್ದಾಗ ಕೊಂಡುಕೊಂಡ ಕಂಪ್ಯೂಟರ್,ತೊಂಬತ್ತೊಂದನೆ ಮಾಡಲ್ ಓಮ್ನಿ, ಓಲಂಪಸ್ ಕ್ಯಾಮೆರಾ, ವಾಷಿಂಗ್ ಮಷಿನ್, ಪ್ರಿಜ್, ಹೀಗೆ ಏನೇನೋ ಇದೆ. ಈಗ ವೆನಿಲಾ ವೈರಸ್ ಖಾಯಿಲೆಯಿಂದ ಸಂಪೂರ್ಣ ನಾಶವಾದ ನಂತರ ಅವೆಲ್ಲಾ ದಿನಕಳೆದಂತೆ ಮೂಲೆ ಸೇರುತ್ತಾ ಇದೆ. ಇರಲಿ ಅದೂ ಒಂದು ಕಾಲ. ಈಗ ನನ್ನ ಬುದ್ದಿಯ ಕತೆ ನೋಡೋಣ. ಹುಡುಕ ಹೊರಡುವುದು ಚಟ, ಸಿಗಲಿ ಸಿಗದಿರಲಿ ಅರ್ದಕ್ಕೆ ಕೈಬಿಡುವುದು ಕೆಟ್ಟ ಚಟ. ಇತ್ತ ದೇವರು ದಿಂಡಿರು ಎಂದು ಮಡಿ ಉಟ್ಟು ಕೂರುವುದರಲ್ಲಿ ಅರ್ಥ ಇಲ್ಲ ಅಂತ ಅನ್ನಿಸುತ್ತದೆ, ಅವೆಲ್ಲಾ ಸುಳ್ಳು ಅಂತ ಅನ್ನಿಸುತ್ತದೆ. ಆದರೆ ಸತ್ಯ ಯಾವುದು ಎಂದು ಗೊತ್ತಿಲ್ಲ. ಪ್ರತಿ ನಿತ್ಯ ಬೆಳಿಗೆ ಎದ್ದು ಮಿಂದು ಮಡಿಯನ್ನುಟ್ಟು ಅದೇ ನಾದಶಬ್ಧ ಮಹೀಂ ಗಂಟಾಂ ಸರ್ವ ವಿಘ್ನಾಪಹಾರೀಣೆ, ಪೂಜಯೇ ... ಎಂದು ಮಂತ್ರ ಹೇಳುತ್ತಾ ಗಂಧ ತೆಯ್ಯುತ್ತಾ ಮರದ ದೇವರ ಪೀಠಕ್ಕೆ ಅಲಂಕಾರ ಮಾಡುತ್ತಾ, ಕಪ್ಪಗಿರುವ ಕಲ್ಲನ್ನು ಸಾಲಿಗ್ರಾಮ ಎಂದುಕೊಂಡು ತಿಕ್ಕಿ ತಿಕ್ಕಿ ತೊಳೆದು ಆಕಳು ಹಾಲನ್ನು ಅಭಿಷೇಕ ಮಾಡಿ ತೆಯ್ದ ಗಂಧ ಹಚ್ಚಿ ಗಣಗಣ ಗಂಟೆ ಭಾರಿಸಿ ಕೊನೆಯದಾಗಿ ಶರೀರೆ ಜರ್ಜರೇಭೂತೆ ವ್ಯಾಧಿಗ್ರಸ್ತೆ ಕಲೇವರೆ ಔಷಧಿ ಜಾಹ್ನವಿತೋಯಂ.... ಮಂತ್ರ ಹೇಳಿ ಸುವಾಸನಾಭರಿತ ತೀರ್ಥವನ್ನು ತೆಗೆದುಕೊಂಡು ಪ್ರಸಾದ ಕಣ್ಣಿಗೊತ್ತಿಕೊಳ್ಳುವುದರಲ್ಲಿ ಏನಿದೆ..? ಇವೆಲ್ಲಾ ಮಾಡದೇ ಸಹಜವಾಗಿ ನಯವಿನಯ ಕರುಣೆ ಯನ್ನು ವ್ಯಕ್ತಪಡಿಸುತ್ತಾ ಮನೆಯವರೊಂದಿಗೆ ನಗುನಗುತ್ತಾ ನಾಲ್ಕು ಮಾತನಾಡಿ ಜನರಿಗೆ ನಮ್ಮ ಕೈಲಾದಷ್ಟು ಉಪಕಾರ ಮಾಡಬೇಕೆಂದು ತೀರ್ಮಾನಿಸುವ ಯಡವಟ್ಟು ಸ್ವಭಾವ ನನ್ನದು. ಹೀಗೆ ಉಪಕಾರ ಮಾಡಲು ಹೋಗಿ ಹಾದಿಯಮೇಲೆ... ಹೆಗಲಮೇಲೆ ಏರಿಸಿಕೊಂಡ ಕತೆಯೇ ಹಲವು. ನನ್ನ ಬಳಿ ದೇವರ ಕುರಿತಾದ ನೂರಾರು ಪ್ರಶ್ನೆಗಳಿವೆ. ದೇವರಪೂಜೆಯೇ ಜೀವನವಲ್ಲ, ಜೀವನದಲ್ಲಿ ದೇವರನ್ನು ಪೂಜಿಸಬೇಕು. ಕರ್ತವ್ಯವೇ ದೇವರು, ಗಣಪತಿಯೇ ದೇವರು ಎಂದಾಗಿದ್ದರೆ ಇದೇ ವಿಗ್ರಹವನ್ನು ಹಿಂದೂ ಧರ್ಮ ಗೊತ್ತಿಲ್ಲದ ದಕ್ಷಿಣ ಆಮೆರಿಕಾದ ವ್ಯಕ್ತಿಗೆ ತೋರಿಸಿದರೆ ಆತ ದಿಸ್ ಇಸ್ ಜಸ್ಟ್ ಲೈಕ್ ಎ ಎಲಿಫೆಂಟ್ ಅಂದುಬಿಡುತ್ತಾನೆ. ಆತ ಅಪ್ಪಿತಪ್ಪಿಯೂ ಓ ಮೈ ಗಾಡ್ ಎಂದು ಕೈಮುಗಿಯುವುದಿಲ್ಲ. ಕಾಪಾಡಪ್ಪಾ ವಿನಾಯಕ ಅನ್ನುವುದಿಲ್ಲ. ನಮ್ಮಂತಯೇ ಮನುಷ್ಯನಾದ ಮನುಷ್ಯನೇ ಹೀಗೆಂದಮೇಲೆ ನಮ್ಮ ಅಚ್ಚುಮೆಚ್ಚಿನ ಗಣಪ ಸರ್ವಾಂತರ್ಯಾಮಿಯಲ್ಲ ಎಂದಾಯಿತು. ಅಯ್ಯೋ ಅಮೆರಿಕಾದ ಕತೆ ಹಾಗಿರಲಿ ಚುಪುರು ಚುಪುರು ಗಡ್ಡದ ಪಾತ್ರೆಗೆ ಕಲಾಯಿ ಹಾಕುವ ಬುಡಾನ್ ಸಾಬಿ " ನಿಮ್ದೂಕಿ ಮೂರ್ತಿ ಪೂಜೆ ಮಾಡ್ತಾರೆ, ದೇವ್ರು ಹಂಗೆಲ್ಲಾ ಮೂರ್ತೀಲಿ ಇರ್ತಾರೆ ಅನ್ನೋದು ಸುಳ್ಳು, ನಮ್ದೂಕಿ ಅಲ್ಲಾನೇ ದೇವ್ರು" ಅಂತ ಹೇಳ್ತಾನೆ ಅಂದ್ಮೇಲೆ, ನಾವು ನಂಬಿದ ಕಾರಣಕ್ಕಾಗಿ ಆತ ದೇವರು ನಂಬದಿದ್ದರೆ ದೇವರು ಅಲ್ಲ ಅಂಬ ವಾದಕ್ಕೆ ಇಳಿಯುತ್ತೇನೆ. ಒಮ್ಮೆ ಒಬ್ಬ ಪುರೋಹಿತರ ಬಳಿ ವೃಥಾ ವಾದಕ್ಕೆ ಇಳಿದಿದ್ದೆ. ವಡೆಭಾಗದ ಮನೆಗಳಲ್ಲಿ ನಮಗೆ ಊಟಕ್ಕೆ ಆಗುವತನಕ ಕೆಲ್ಸ ಇರುವುದಿಲ್ಲ( ಇಲ್ಲಿ ನಮ್ಮ ಹಳ್ಳಿಗಳಲ್ಲಿ ಯಾವಾಗ ಕೆಲ್ಸ ಇದೆ ಅಂತ ನೀವು ಕೇಳಬಹುದು.. ಇರಲಿ ನೀವು ಹಾಗೆಲ್ಲ ತಲೆಹರಟೆ ಮಾಡುವುದಿಲ್ಲ ಅಂತ ನನಗೆ ಗೊತ್ತು) 'ಭಟ್ರೆ ಒಂದು ನೀವು ಸುಳ್ಳು ಇಲ್ಲ ವೇದ ಮಂತ್ರ ಸುಳ್ಳು". ಹೀಗೆ ಉದ್ಧಟತನದ ವಾಕ್ಯಕ್ಕೆ ಪುರೋಹಿತರು ಸ್ವಲ್ಪ ಕಂಗಾಲಾದರು. ಯಾಕೆ? ಎಂದರು. ನೋಡಿ ವೇದ ಮಂತ್ರ ಮಾತೃದೇವೋ ಭವ ಎನ್ನುತ್ತದೆ ನೀವು ಪುರೋಹಿತರುಗಳು ಮನೆಯಲ್ಲಿ ಅಮ್ಮನಿಗೆ ನಿಕ್ಕಾಲಾಣೆ ಗೌರವ ಕೊಡುವುದಿಲ್ಲ. ಹೆಂಡತಿಯ ಮಾತು ಕಟ್ಟಿಕೊಂಡು ಕುಣಿಯುತ್ತೀರಿ. ಹಾಗಂತ ವರ್ಷಾಂತದ ಮನೆಯಲ್ಲಿ ಶ್ರವಣರಾಗಿ ನಿಮ್ಮನ್ನು ಕರೆದಾಗ ಅಲ್ಲಿ ಭಾಷಣ ಮಾಡುತ್ತಾ ತಾಯಿಯನ್ನು ದೇವರಂತೆ ಕಾಣಬೇಕು ಎನ್ನುತ್ತೀರಿ. ಈಗ ಹೇಳಿ ಯಾವುದು ಸತ್ಯ. ನನ್ನ ಒಡ್ಡತನದ ಪ್ರಶ್ನೆಗೆ ಪುರೋಹಿತರಿಗೆ ಸಿಕ್ಕಾಪಟ್ಟೆ ಸಿಟ್ಟು ಬಂತು. ಆದರೆ ತೋರ್ಪಡಿಸುವಂತಿಲ್ಲ. ಅವರೂ ಸ್ವತ: ಮನೆಯಲ್ಲಿ ಹಾಗೆಯೇ. ಅಂತೂ ಇಂತೂ ಅಳೆದು ಹೊಯ್ದು "ಇದಕ್ಕೆ ಇವತ್ತು ಬೇಡ ಇನ್ನೊಂದು ದಿನ ಉತ್ತರ ಕೊಡುತ್ತೇನೆ " ಎಂದರು. ನಾನು ಮರೆತೆ ಆದರೆ ಪಾಪ ಅವರು ಮರೆಯಲಿಲ್ಲ. ಮತ್ತೊಂದು ದಿನ ಒಬ್ಬರೇ ಸಿಕ್ಕಾಗ "ಅಪ್ಪಿ ವೇದ ಸುಳ್ಳಲ್ಲ ನಾವೇ ಸುಳ್ಳು. ಇತ್ತ ದರೆ ಅತ್ತ ಪುಲಿ ಹಾಗಾಗಿ ಆಚಾರ ಹೇಳಾಕೆ ಬಾನಾ ಉಣ್ಣಾಕೆ ಅಂತಾಗಿದೆ ನಮ್ಮ ಸ್ಥಿತಿ. ಪುಸ್ತಕದ ನೀತಿಯೇ ಬೇರೆ ವಾಸ್ತವ ವೇ ಬೇರೆ" ಎಂದು ಜಾರಿಕೊಂಡರು. ಇಂತಹ ಯಡವಟ್ಟು ಮಾರ್ಗವನ್ನು ಆಯ್ಕೆ ಮಾಡಿಕೊಂಡ ನಾನು ಗೊಂದಲದ ಗೂಡಾಗಿ ಹೋಗುತ್ತಾ ಇದ್ದೇನೆ ಅಂತ ಅನ್ನಿಸತೊಡಗಿತು. ಆವಾಗ ಆನಂದರಾಮ ಶಾಸ್ತ್ರಿಗಳು ಸಹಾಯಕ್ಕೆ ಬಂದರು. ಅವರು ನೂರಕ್ಕೆ ನೂರು ಯೋಗ್ಯತೆಯುಳ್ಳ ಜನ. ನಿತ್ಯ ಒಂದು ಗಂಟೆ ಅವರ ಸಹವಾಸ ಮಿಕ್ಕ ಸಮಯದಲ್ಲಿ ನಾನು ನಾನೇ....
ಆದರೆ ಅಪ್ಪಯ್ಯ ಹಾಗಲ್ಲ
ವಯಸ್ಸು ಎಂಬತ್ತು ನಿತ್ಯ ಮೂರು ತಾಸು ಪೂಜೆ ಯಾವ ಹಬ್ಬ ಹರಿದಿನ ಹೇಗೆ ಆಗಬೇಕೋ ಹಾಗೆಯೇ. ಒಂದಿಷ್ಟು ನಂಬಿಕೆಗಳು ಗಟ್ಟಿ. ಇಂದಿಗೋ ಜೀವನೋತ್ಸಾಹದ ಬುಗ್ಗೆ. ನಮ್ಮ ಪೆಜತ್ತಾಯರು ಬರೆದ ಕಾಗದದ ದೋಣಿ ಎಂಬ ಜೀವನಾನುಭವದ ಪುಸ್ತಕವನ್ನು ಮೂರೇ ದಿವಸದಲ್ಲಿ ಓದಿ ಮುಗಿಸುವ ಉತ್ಸಾಹ. ಯಾರಿಗೂ ಹೆದರಿದ ಆಸಾಮಿಯೇ ಅಲ್ಲ. ಹುಡುಕಾಟದಲ್ಲಿ ಸತ್ಯ ಸಿಕ್ಕಿದೆಯೋ ಇಲ್ಲವೋ ಎಂಬ ಗೊಂದಲ ಇಲ್ಲ ಸತ್ಯ ಸಿಕ್ಕಿದೆ, ದೇವರು ಇದ್ದಾನೆ ಎಂಬ ಮತ್ತು ಇವೆಲ್ಲಾ ಅವನದೇ ಆಟ ಎಂಬ ಅಚಲವಾದ ನಂಬಿಕೆ. ನಾನು ನಾನೇ.... (ಮುಂದುವರೆಯುತ್ತದೆ)
ಕೊನೆಯದಾಗಿ: ಶಾಸ್ತ್ರಿಗಳೇ ನಮ್ಮ ಸಿಂಧುವಿಗೆ ಗೊಂದಲ ಪುರದಿಂದ ಹೊರಗೆ ಬರಲು ದಾರಿ ತೋರಿಸಬೇಕಂತೆ ಎಂದು ಕೇಳಿದೆ. ಇದು ಆಗಾದ ಪ್ರಕೃತಿ ಒಮ್ಮೊಮ್ಮೆ ನಾವು ಏನನ್ನಾದರೂ ಸಾಧಿಸಬೇಕು ಅಂತ ಅನ್ನಿಸುತ್ತದೆ ಮತ್ತೊಮ್ಮೆ ಇಲ್ಲ ನನ್ನಿಂದ ಏನೂ ಆಗದು ಅಂತ ಅನ್ನಿಸುತ್ತದೆ. ಆದರೆ ಈ ಭೂಮಿಯ ಎಲ್ಲಾ ಜೀವಿಗಳಲ್ಲಿಯೂ ಮಾನವ ನಿರ್ಮಿತ ಜಗತ್ ಎಂಬ ವಾಕ್ಯಕ್ಕೆ ಮಹತ್ವ ಹೆಚ್ಚು. ಆದರೂ ಪ್ರಕೃತಿಯ ಕೂಸಾದ ಮಾನವ ಮರ ನೆಟ್ಟರೂ ಮರ ಕಡಿದರೂ, ಪ್ಲಾಸ್ಟಿಕ್ ಎಸೆದರೂ, ಎಸೆಯದಿದ್ದರೂ, ವಿದ್ಯುತ್ ಬಳಸಿದರೂ ಬಳಸದಿದ್ದರೂ, ಗಣಪತಿಯ ನಂಬಿದರೂ ನಂಬದಿದ್ದರೂ..ಆ ಆಗಾಧ ಶಕ್ತಿಯ ಪ್ರಕೃತಿಯ ಅಣತಿಯಂತೆಯೇ ಮಾಡಿರುವುದು ಹಾಗೂ ಮಾಡುವುದು ಅನಿವಾರ್ಯ. ಎಂದರು. ತೀರಾ ಅರ್ಥವಾಗದ ಉತ್ತರ ಅಂತ ನನಗನ್ನಿಸಿತು. ಒಮ್ಮೊಮ್ಮೆ ಹಾಗೆಯೇ ಅವರು ಎಂದು ಸುಮ್ಮನುಳಿದೆ.
ಕೆಳಗಿನ ಟಿಪ್ಸ್ ಓದಲು ಆಗದು ಎಂದರೆ ಅಷ್ಟೇ ಸಾಲನ್ನು ಸೆಲೆಕ್ಟ್ ಮಾಡಿ ಆವಾಗ ನೋಡಿ.
ಟಿಪ್ಸ್: ವಿಶಾಲ್ ಎಕ್ಸ್ ಪೋರ್ಟ್ ಎಂಬ ಪೆನ್ನಿ ಸ್ಟಾಕ್ ದರ ಕೇವಲ ಎರಡು ರೂಪಾಯಿಗಿಂತ ಕಡಿಮೆಯಂತೆ. ಇರಲಿ ಸಾವಿರ ರೂಪಾಯಿ ಹಾಕಿ ಒಂದೈನೂರು ಶೇರ್ ಕೊಳ್ಳಿ. ವರ್ಷ ಕಾಯಿರಿ ಹತ್ತು ರೂಪಾಯಿಗೆ ಹೋಯಿತಾ ನಿಮಗೆ ಬಂಪರ್ ಲಾಟರಿ ಕಂಪನಿ ಮುಳುಗಿತಾ ನೀವ್ ಲಾಟರಿಯಂತೂ ಅಲ್ಲ.