Wednesday, June 17, 2009

ಇದು ಪ್ರಪಂಚ ಇದುವೇ ಪ್ರಪಂಚ..!


ಟಿವಿಯಲ್ಲಿ ಕ್ರಿಕೆಟ್ ನೋಡುತ್ತಿರುವಾಗಲೋ, ಅತ್ಯಂತ ಇಷ್ಟವಾದ ಸೀರಿಯಲ್ ನೋಡುತ್ತಿರುವಾಗಲೋ, ಊಟ ಮಾಡುತ್ತಿರುವಾಗಲೋ , ಪಟ್ಟಂತ ವಿದ್ಯುತ್ ಹೋಗುತ್ತದೆ. ಸರಿ ಆವಾಗ ಮನೆಮಂದಿಯೆಲ್ಲ ಸೇರಿ ಕರೆಂಟ್ ಕಂಪನಿಯವರಿಗೆ ಒಂದಿಷ್ಟು ಹಿಡಿಶಾಪ ಹಾಕುತ್ತೇವೆ. ಐದತ್ತು ನಿಮಿಷದೊಳಗೆ ಕರೆಂಟ್ ಬಂತೋ ಅಷ್ಟಕ್ಕೆ ನಿಲ್ಲುತ್ತದೆ ಆದರೆ ಗಂಟೆ ಕಳೆದರೂ ಬರಲಿಲ್ಲ ಅಂತಾದರೆ ಯಡ್ಯೂರಪ್ಪನಿಂದ ಶುರುವಾಗಿ ರಾಜಕೀಯ ನಾಯಕರೆಲ್ಲಾ ಮುಗಿಸಿ ಹುರಿದು ಮುಕ್ಕುತ್ತೇವೆ. ಆ ನಡುವೆ ಓಟು ಹಾಕಿ ಮುಗುಮ್ಮಾಗಿ ಕುಳಿತ ನಮ್ಮನ್ನೊಂದು ಬಯ್ದುಕೊಳ್ಳುವುದಿಲ್ಲ ಎಂಬುದನ್ನು ಬಿಟ್ಟರೆ ಮಿಕ್ಕವರೆಲ್ಲಾ ಸರಿ ಇಲ್ಲ ಎಂಬ ವಾಗ್ದಾಳಿ ಅವ್ಯಾಹತವಾಗಿ ಮುಂದುವರೆಯುತ್ತದೆ. ಇರಲಿ ಅದರ ಕತೆ ಬದಲಾಗುವುದಿಲ್ಲ ಆಗುವುದೂ ಬೇಡ. ಈಗ ಫೋಟೋ ಸುದ್ದಿಗೆ ಬರೋಣ.

ಜೋಗ ಜಲಪಾತ ನೀವು ನೋಡಿರುತ್ತೀರಿ ಅಥವಾ ಅದ್ಭುತವಾಗಿದೆ ಎಂಬ ಸುದ್ಧಿಯನ್ನು ಕೇಳಿರುತ್ತೀರಿ. ಈ ಜಲಪಾತ ಸೃಷ್ಟಿಮಾಡಿದ ಶರಾವತಿ ನದಿಗೆ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಹಾಕಿದ್ದಾರೆ. ಆ ಆಣೆಕಟ್ಟಿನ ನೀರಿನಿಂದ ಜಲವಿದ್ಯುತ್ ಮೂರುಕಡೆ ಉತ್ಪಾದಿಸುತ್ತಾರೆ(ಅಯ್ಯೋ ಅವೆಲ್ಲಾ ಗೊತ್ತು ಕೊರೆಯಬೇಡ, ಎಂದಿರಾ?. ಇದು ಗೊತ್ತಿಲ್ಲದವರಿಗಾಗಿ..!) ಅಂತಹ ಒಂದು ನಿಮಗೆ ಕಾಣಿಸುತ್ತಿರುವ ತಳಕಳಲೆ ಡ್ಯಾಮ್. ಹತ್ತು ಬೃಹತ್ ಗಾತ್ರದ ಪೈಪ್ ಗಳು ಕೆಳಗಿಳಿದಿವೆ ಹಾಗೆಯೇ ಹತ್ತು ತಂತಿಗಳು ಮೇಲೇರಿವೆ. ಹೊರನೋಟಕ್ಕೆ ಸುಂದರ ದೃಶ್ಯವಾಗಿ ಗೋಚರಿಸುವ ಈ ನೋಟ ಒಳಗೆ ಇಳಿದಂತೆಲ್ಲಾ ಮನುಷ್ಯನ ಇಚ್ಛಾ ಶಕ್ತಿಯನ್ನು ಬಿಚ್ಚಿಡುತ್ತವೆ. ಅಲ್ಲಿಂದಲೇ ನಮ್ಮ ಊಟ ಟಿವಿ ಕ್ರಿಕೆಟ್ ಗಳ ಮಜ ಹಾಗೂ ಗೊಣಗಾಟ ದ ಮೂಲ ಉತ್ಪಾದನೆಯಾಗುತ್ತದೆ. ಹತ್ತು ಪೈಪ್ ಗಳಲ್ಲಿ ರಭಸವಾಗಿ ನುಗ್ಗುವ ನೀರು ಟರ್ಬೈನ್ ತಿರುಗಿಸಿ ತಂತಿಯ ಮೂಲಕ ಚರ್ ಚರ್ ಎಂಬ ಶಬ್ಧದೊಂದಿಗೆ ತಲುಪುವಲ್ಲಿಗೆ ತಲುಪಿ ಬೆಳಗುತ್ತದೆ ಮತ್ತು ಮಿನುಗುತ್ತದೆ. ಸಹಸ್ರ ಸಹಸ್ರ ಕೈಗಳ ಶ್ರಮದ ಫಲ ಅದು. ಐವತ್ತು ವರ್ಷಗಳ ಹಿಂದೆ ಅದೆಷ್ಟು ಕುಟುಂಬಗಳು ಅಲ್ಲಿ ಪ್ರಾಣ ತೆತ್ತವೋ ಅವೆಷ್ಟು ಕುಟುಂಬಗಳು ಬೀದಿ ಪಾಲದವೋ ಕೇಳುಗರೇ ಇಲ್ಲದ ಅವರ ಗೊಣಗಾಟ ಅದೆಲ್ಲಿ ಕರಗಿ ಹೋಯಿತೋ ಬಲ್ಲವರ್ಯಾರು? . ಪೈಪಿನೊಳಗೆ ಹರಿದು ಬರುವ ನೀರು ಲಿಂಗನ ಮಕ್ಕಿ ಆಣೆಕಟ್ಟಿನಲ್ಲಿ ನಿಂತಾಗ ಅದೆಷ್ಟು ಸಹಸ್ರ ಜನ ಮನೆ ಮಠ ಸಂಸ್ಕೃತಿ ಕಳೆದುಕೊಂಡರೋ..? ಲೆಕ್ಕ ಇಟ್ಟವರ್ಯಾರು..? . ಕೇವಲ ಮನುಷ್ಯ ಮಾತ್ರ ಇಳಿಯುವುದು ಕಷ್ಟ ಎಂಬಂತಹ ಜಾಗಗಳಲ್ಲಿ ಆನೆಗಾತ್ರದ ಪೈಪ್ ಗಳು ಇಳಿಸುವಾಗ ಅದೆಷ್ಟು ಅನಾಹುತಗಳಾಯಿತೋ..? ಎಷ್ಟು ಜೀವಗಳು ಅಲ್ಲಿ ನಲುಗಿ ಹೋಯಿತೋ..?. ಅದೆಷ್ಟು ಮರ ಗಿಡ ಪ್ರಾಣಿ ಪಕ್ಷಿಗಳು ಅಕಾಲ ಮೃತ್ಯುವಿಗೆ ತುತ್ತಾದವೋ ಬಲ್ಲವರ್ಯಾರು?. ಅವರುಗಳ ಶ್ರಮದ ಪ್ರತಿಫಲ ನಾವು ಅನುಭವಿಸುತ್ತಿದ್ದೇವೆ.

ಆದರೂ ಹತ್ತೆ ಹತ್ತು ನಿಮಿಷ ಕರೆಂಟು ಹೋದಾಗ ಮುಳುಗಿ ಹೋಗುವುದು ಎನೂ ಇಲ್ಲದಿದ್ದರೂ " ತತ್ತ್ ಈ ದರಿದ್ರ ಕೆಇಬಿ ಯವರ ಹಣೇಬರಹವೇ ಇಷ್ಟು " ಎಂಬ ನಮ್ಮ ಹಿಡಿ ಶಾಪ ಮುಂದುವರೆಯುತ್ತದೆ.

ಅಯ್ಯೋ ಹಾಗೆ ಆಲೋಚಿಸುತ್ತಾ ಹೋದರೆ ಬದುಕಿನ ಮಜವೇ ಇಲ್ಲ ಎಂದಿರಾ.? ಓ ಕೆ ಒಂಥರಾ ಅದೂ ಸರೀನೆ. ಯಾಕೆಂದರೆ

ಇದು ಪ್ರಪಂಚ ಇದುವೇ ಪ್ರಪಂಚ..! ಅಲ್ಲವೇ?

Sunday, June 14, 2009

ಇಡಾದೇವಹೂರ್ಮನುರ್ಯಜ್ಞನೀಬೃಹಸ್ಪತಿರುಕ್ಥಾಮದಾನಿಶಗುಂಸಿಷದ್ವಿಶ್ವೇದೇವಾ:

"ಇಡಾದೇವಹೂರ್ಮನುರ್ಯಜ್ಞನೀಬೃಹಸ್ಪತಿರುಕ್ಥಾಮದಾನಿಶಗುಂಸಿಷದ್ವಿಶ್ವೇದೇವಾ: "
ಹೀಗೊಂದು ವಾಕ್ಯ ಓದಲು ಕೊಟ್ಟು ಸ್ವರಸಹಿತ ಹೇಳಿ ಎಂದರೆ ತಲೆಕೆಟ್ಟು ಮೈಪರಚಿಕೊಳ್ಳುವಂತಾಗುತ್ತದೆ ಮೊದಲನೇ ದಿನ. ಎರಡನೇ ದಿನ ಎದ್ದು ಬಿದ್ದು ಓದಿದರೆ ಅಲ್ಪಸ್ವಲ್ಪ ತಡವರಿಸಿಕೊಳ್ಳುತ್ತಾ ಓದಬಲ್ಲೆ ಅನ್ನು ವಿಶ್ವಾಸ ಬರುತ್ತದೆ. ಹದಿನೈದನೇ ದಿನ ಅಸ್ಖಲಿತವಾಗಿ ಓದಬಹುದು ನೋಡಿಕೊಳ್ಳದೇ ಹೇಳಬಹುದು ಈ ವಾಕ್ಯವನ್ನ ಆದರೆ ಮುಂದಿನ ವಾಕ್ಯ ಮತ್ತೆ ಹಳೆಯದರಂತೆ. ಇದು ಸಹಜ ಮನುಷ್ಯನ ತಾಕತ್ತು. ಆ ವಿಷಯ ಈ ವಿಷಯ ಅಂತಲ್ಲ ಪ್ರಪಂಚದ ಎಲ್ಲಾ ವಿಷಯವೂ ಕಲಿಯುವವರೆಗೆ ಕಷ್ಟ ಕಲಿತಮೇಲೆ ಲೀಲಾಜಾಲ. ಬೇರೆಯವರು ತಡವರಿಸಿದಾಗ ಇವರೇಕೆ ಇಷ್ಟು ಒದ್ದಾಡುತ್ತಾರೆ ಅಂತ ಅನ್ನಿಸದಿರದು. ಇರಲಿ ಈಗ ಅದು ಎಲ್ಲಿಯ ವಾಕ್ಯ ಅಂತ ನೋಡೊಣ.
ಶ್ರೀ ಮಠದ ಭಕ್ತರಿಗೆ ಶ್ರೀಗಳು "ರುದ್ರ" ಕಲಿಯಲು ಹೇಳಿದ್ದಾರೆ. ಒಂದು ವರ್ಷಗಳ ಕಾಲ ಗೋಕರ್ಣದಲ್ಲಿ ನಡೆಯುವ ರುದ್ರ ಪಾರಾಯಣಕ್ಕೆ ಜನ ಬೇಕು. ಹಾಗಾಗಿ ಗ್ರೃಹಸ್ಥರು ರುದ್ರ ಕಲಿಯಲಿ ಎಂಬುದು ಶ್ರೀಗಳ ಆಶಯ. ಹತ್ತರಿಂದ ಐವತ್ತರವರೆಗಿನ ವಯಸ್ಸಿನ ಬೇಧವಿಲ್ಲದೆ ಹಳ್ಳಿಯ ಹವ್ಯಕರು ಸಂಜೆ ಶಲ್ಯ ಹೊದ್ದು "ಇಡಾದೇವಹೂ...." ಎಂದು ಸಂಜೆ ಸರಿ ಸುಮಾರು ಒಂದೂವರೆ ತಾಸು ಬಾಯಿಪಾಠ ಶುರುಮಾಡಿದ್ದಾರೆ. ಬರೊಬ್ಬರಿ ಪುರೋಹಿತರ ಮಗನಾದ ನಾನು ಬಾಲ್ಯದಲ್ಲೆಲ್ಲೋ "ಓಂ ಗಣಾನಾಂತ್ವಾ..." ಎಂಬ ಗಣಪತಿ ಉಪನಿಷತ್ ಹಾಗೂ " ನಾದಶಬ್ಧ ಮಹೀಂ ಘಂಟಾಂ..." ಎಂಬ ದೇವರ ಪೂಜೆ ಮಂತ್ರ ಕಲಿತದ್ದು ಬಿಟ್ಟರೆ ಮತ್ತೆ ಅತ್ತ ಕಡೆ ತಲೆಹಾಕಿ ಮಲಗಲಿಲ್ಲ. ಹಾಗಾಗಿ ನಾಲಿಗೆಗೆ ಅವೆಲ್ಲಾ ಹೊಚ್ಚ ಹೊಸತು. ಇನ್ನು ಮಿದುಳಿಗೆ ಅರ್ಥವಾಗದ ಆ ಸಂಸ್ಕೃತ ಶಭ್ದಗಳು ಕೇವಲ ಸ್ವರಸಹಿತ ಪದಪುಂಜಗಳಷ್ಟೆ. ಆದರೂ ಹದಿನೈದು ಜನ ನಿತ್ಯ ಸಂಜೆ ಒಂದೂಕಾಲು ತಾಸು ಹೇಳಿ ಬಂದಾಗ ಮನಸ್ಸಿಗೆ ಅದೇನೋ ಒಂಥರಾ ಹಿತವನ್ನು ಕೊಡುತ್ತದೆ. ಅಬ್ಬಾ ಇವತ್ತು ಮುಗಿಯಿತು ಎಂಬ ನಿರಾಳ ಭಾವವೋ ಅಥವಾ ಸಂಸ್ಕೃತ ಮಂತ್ರಗಳಲ್ಲಿನ ಅಂತ:ಶಕ್ತಿಯೋ..? ಉತ್ತರ ಖಚಿತವಾಗಿ ಗೊತ್ತಿಲ್ಲ. ಆದರೂ ಏನೋ ಒಂದು ಮಜ ಇದೆ. ಹೊಸತಲ್ಲವೇ ಮಿದುಳಿಗೆ ಅದೇ ಇದ್ದರೂ ಇರಬಹುದು.
ರುದ್ರದಲ್ಲಿರುವ ಶಬ್ದಗಳು ಸಂಸ್ಕೃತದಲ್ಲಿರುವುದರಿಂದ ಅರ್ಥ ಗೊತ್ತಿಲ್ಲ ಬಿಡಿ. ಆದರೆ ಅಲ್ಲಿ ಕಲಿಯಲು ಬರುತ್ತಾರಲ್ಲ ಆವಾಗ ಒಂದಿಷ್ಟು ಕನ್ನಡದ ಅರ್ಥಕ್ಕೆ ಹೋಲುತ್ತವೆ . ಪಠಿಸುವುದು ಸಂಸ್ಕೃತ ಅರ್ಥ ಕನ್ನಡ ಆವಾಗ ಮುಸಿಮುಸಿ ನಗು ಪಠಣದ ಗಂಭೀರತೆಗೆ ಬೇಡ ಬೇಡ ಅಂದರೂ ಧಕ್ಕೆತಂದುಬಿಡುತ್ತವೆ. "ಹೇತಿರ್ಮೀಢುಷ್ಟಮ, ಹೇತಿರ್ವಣಕ್ತು, ಕಾಪ್ಯಾಯ ಚಾ, ವಟ್ಯಾಯ ಚ, ಕಾಟ್ಯಾಯ ಚಾ, " ಮುಂತಾದ ಶಬ್ದಗಳೆಲ್ಲಾ ಕನ್ನಡಕ್ಕೆ ತಿರುಗಿ ಅನರ್ಥಕ್ಕೆ ಕಾರಣವಾಗಿ ನಗುತರಿಸಿಬಿಡುತ್ತವೆ. (ಇನ್ನೂ ಬಹಳಷ್ಟಿವೆ ಕೆಂಗಣ್ಣಿಗೆ ಗುರಿಯಾಗುವ ಇಷ್ಟವಿಲ್ಲದ್ದರಿಂದ ಇಷ್ಟು ಸಾಕು)
ಇರಲಿ ನಮಗೆ ಮೂಲ ಅರ್ಥ ಗೊತ್ತಿಲ್ಲ ಮುಂದೆ ತಿಳಿದಂತೆ ಈ ಅನರ್ಥ ಮಾಯವಾಗಿ ಘನಗಂಬೀರತೆ ಮೂಡುತ್ತದೆ ಅಂಬುದು ನಂಬಿಕೆಯಲ್ಲ ಪರಮ ಸತ್ಯ.
ಹೀಗೆ ರುದ್ರ ಕಲಿತು ನಂತರ ಚಮಕ ಕಲಿತು ಒಂಚೂರು ಪುರುಷ ಸೂಕ್ತ ಆಮೇಲೆ ಗಣಾನಾಂತ್ವ ಗಣಪತೀಂ ಬಾಯಿಗಟ್ಟು ಆಯಿತೆಂದರೆ ಸಾಕು ನಂತರ ಪುರೋಹಿತನಾದಂತಯೇ. ಅಲ್ಲಿ ಇಲ್ಲಿ ಸಣ್ಣಪುಟ್ಟ ಸತ್ಯನಾರಾಯಣ ಕತೆ ನಂತರ ಪ್ರತಿಷ್ಠೆ...! ಗೆ ಸೀದಾ ಜಂಪ್ ಆನಂತರ ಒಣಪ್ರತಿಷ್ಠೆ ಹೇಗೂ ಇದ್ದೇ ಇದೆ.
ಆದರೂ ಕೊನೆಯ ಸಾಲು ಇನ್ನೂ ಕಷ್ಟ ಅಂತ ಭಾಸವಾಗುತ್ತಿದೆ. "ದಶಪ್ರಾಚೀರ್ದಶದಕ್ಷಿಣಾದಶಪ್ರತೀಚೀರ್ದಶೋದೀಚೀರ್ದಶೋರ್ಧ್ವಾಸ್ತೇಭ್ಯೋ ನಮ ಸ್ತೇನೋ ಮೃಡಯಂತು ತೇ.." ಮುಂದೆ ಅಭ್ಯಾಸವಾಗುತ್ತದೆ ಆವಾಗ ಮತ್ತೆ ನಿಮಗೆ ಕೊರೆಯುತ್ತೇನೆ.
ಅಲ್ಲಿಯವರೆಗೆ ರುದ್ರಾಯ ನಮ:.

Friday, June 12, 2009

ಅದೊಂದು ಗುಟ್ಟು

ಅರ್ಥವಾಯಿತೆಂದರೆ ಜೀವನ "ಜಿಂಗಲಾಲ" ಅಂತ ಅರ್ಥ. ಅವನು ಹಾಗೆ ಇವಳು ಹೀಗೆ ಅದು ಸರಿ ಇಲ್ಲ ಇದು ಉದ್ದ ಮತ್ತೊಂದು ಗಿಡ್ದ ಮಗದೊಂದು ಉದ್ದ ಎಂಬಂತಹ ಗೊಣಗಾಟದ ಮೂಲ. ಆ ಮೂಲ ಎಲ್ಲಿದೆ ? ಎಂಬ ಗುಟ್ಟು ಅರ್ಥವಾಯಿತೆಂದರೆ ತನ್ಮೂಲಕ ನಿತ್ಯ ಬಯಸುತ್ತಿರುವ ಶಾಂತಿ ಎಂಬುದು ಮನಸ್ಸಿಗೆ ದೊರಕಿತು ಎಂದರೆ ಅವರ ಜೀವನ ಜಿಂಗಲಾಲ. ಅದನ್ನು ಅರ್ಥಮಾಡಿಸಿಕೊಡಲು ಸಂತರು ದಾರ್ಶನಿಕರು ಬಾಬಾಗಳು ಕೂಪಿಟ್ಟುಕೊಂಡು ಲಾಗಾಯ್ತಿನಿಂದ ಕುಂತಿರುತ್ತಾರೆ. ಇಂದೂ ಹಾಗೆಯೇ ಮುಂದೂ ಹಾಗೆಯೇ. ಒಬ್ಬರು ಮೂರ್ತಿ ಪೂಜೆ ಮಾಡಿರಿ ಎಂದರು ಮತ್ತೊಬ್ಬರು ಮೂರ್ತಿ ಪೂಜೆ ಅವಶ್ಯಕತೆ ಇಲ್ಲ ಎಂದರು ಮಗದೊಬ್ಬರು ಹತ್ತಾರು ಮೂರ್ತಿ ಮಡಗಿ ಎಂದರು ಹೀಗೆ ನಾನಾ ಅವತಾರ ಎತ್ತಿದರು. ಎಲ್ಲವೂ ಇರುವುದ ಬಿಟ್ಟು ಇರದುದರೆಡೆಗೆ ತುಡಿವ ಜೀವನ ತೋರಿಸುವವರೆ. ಇರಲಿ ಅದು ಅವರವ ನಂಬಿಕೆಗೆ ಬಿಟ್ಟ ವಿಚಾರ. ನಾವು ಗುಟ್ಟಿನ ಬಗ್ಗೆ ನೋಡೋಣ.
ಮೊನ್ನೆ ನಾನು ಹೊಸತಾಗಿ ಕೊಂಡ ಮಾರುತಿ ೮೦೦ ನಲ್ಲಿ ಲಹರಿಯಲ್ಲಿ ಡ್ರೈವ್ ಮಾಡಿಕೊಂಡು ಬರುತ್ತಾ ಇದ್ದೆ. ಅಷ್ಟೊತ್ತಿಗೆ ಮೊಬೈಲ್ ರಿಂಗಣಿಸಿತು. ಗಮನ ಅತ್ತ ಹರಿಯಿತು. ನೇರವಾದ ರಸ್ತೆಯಾಗಿದ್ದರಿಂದ ಮೊಬೈಲ್ ಯಾರಿದ್ದಿರಬಹುದೆಂದು ನೋಡುತ್ತಾ ಸಾಗಿದೆ. ಹಿಂದಿನಿಂದ ಒಂದು ಕೆ ಎಸ್ ಆರ್ ಟಿಸಿ ಬಸ್ಸು ಬರುತ್ತಿತ್ತು. ನನ್ನ ಗಮನಕ್ಕೆ ಬರಲಿಲ್ಲ. ಆತ ಸ್ವಲ್ಪ ದೂರ ನನ್ನ ಹಿಂದೆಯೇ ಬಂದ. ಅವನಿಗೆ ಹಾರನ್ ಇರಲಿಲ್ಲವೆಂದೆನಿಸುತ್ತದೆ ಹಾಗಾಗಿ ಬಜಾಯಿಸಲಿಲ್ಲ. ಇರಲಿ ಅದು ಅವನ ತಪ್ಪಲ್ಲ ಬಿಡಿ. ನನಗೆ ಬಸ್ಸಿನ ಸದ್ದು ಕೇಳಿ ಎಡಬದಿಗೆ ಹೊರಳಿದೆ. ನನ್ನನ್ನು ದಾಟಿಕೊಂಡ ಹೋದ ಬಸ್ಸು ರಸ್ತೆಗೆ ಪೂರ್ಣ ಅಡ್ದವಾಗಿ ನಿಂತಿತು. ಇದೇನಪ್ಪಾ ಅಂತ ನಾನೂ ಅದರ ಹಿಂದೆ ಕಾರು ನಿಲ್ಲಿಸಿದೆ. ಆತ ಯಾಕೆ ಹಾಗೆ ನಿಲ್ಲಿಸಿದ್ದು ಅಂತ ನನಗೆ ಅರ್ಥವಾಗಲಿಲ್ಲ. ಅಷ್ಟರಲ್ಲಿ ಬೈಕ್ ಸವಾರನೊಬ್ಬ ಬಂದವ ನನ್ನ ಬಳಿ" ನೀವು ಅವನಿಗೆ ಸೈಡ್ ಕೊಡಲಿಲ್ಲವಂತೆ ಹಾಗಾಗಿ ಆತ ಹಾಗೆ ನಿಲ್ಲಿಸಿದ್ದಾನೆ" ಎಂದ ಓಹೋ ಹೀಗೋ ಸಮಾಚಾರ ಅಂತ ನಾನೂ ಸುಮ್ಮನೆ ನಿಲ್ಲಿಸಿಕೊಂಡೆ. ಡ್ರೈವರ್ ಇಳಿದುಬಂದ. ಹರೆಯದವ ಆತ ಬಹುಶಃ ಅಷ್ಟೇ ಕೆಲಸಕ್ಕೆ ಸೇರಿದ್ದಿರಬೇಕು ಬಹಳ ಉಮ್ಮೇದಿನಲ್ಲಿದ್ದ. ಕಾರಿನ ಬಳಿ ಬಂದವನು ಲಾಟ್ ಪೂಟ್ ಅಂತ ಕೂಗಲು ಶುರುಮಾಡಿದ. ನನಗೆ ಧಾವಂತ ಇರಲಿಲ್ಲ. ನಾನು ಒಂದೂ ಮಾತಾಡಲಿಲ್ಲ ಅವನ ಬಳಿ ಮಾತನಾಡುವ ಅಗತ್ಯವೂ ಇರಲಿಲ್ಲ ಅವಶ್ಯಕತೆಯೂ ಇರಲಿಲ್ಲ ಮತ್ತು ಮಾತನಾಡಿ ಪ್ರಯೋಜನವೂ ಇರಲಿಲ್ಲ. ಆತ ಒಬ್ಬನೇ ಏನೇನೋ ಕೂಗುತ್ತಿದ್ದ ನನ್ನ ತಲೆಯೊಳಗೆ ಅದು ಹೋಗುತ್ತಿರಲಿಲ್ಲ ನಾನು ಗದ್ದೆಯಲ್ಲಿ ಗದ್ದೆ ಹೂಟಿ ಮಾಡುತ್ತಿದ್ದ ರೈತನೊಬ್ಬನ ಕೆಲಸವನ್ನು ನೋಡತೊಡಗಿದ್ದೆ. ನನ್ನ ಈ ವರ್ತನೆ ಆತನಿಗೆ ಅನಿರೀಕ್ಷಿತ ಆಗಿದ್ದಿರಬೇಕು. ಪಾಪ ಅವನ ಕೂಗಿಗೆ ಪ್ರತಿಕ್ರಿಯೆ ಬಾರದ್ದರಿಂದ ಒಂಥರಾ ಮರ್ಯಾದೆ ಹೋದವನಂತೆ ಆಡತೊಡಗಿದ. ನಾನು ಏನೂ ನಡದೇ ಇಲ್ಲವೇನೋ ಏಂಬಂತೆ ನಿಧಾನ ಕಾರು ಓಡಿಸಿಕೊಂಡು ಮುನ್ನಡೆದೆ. ಆತ ತಬ್ಬಿಬ್ಬಾಗಿ ತಬ್ಬಿಬ್ಬಾಗಿ ನೋಡುತ್ತಲೇ ಇದ್ದ. ಗೋಣಗಾಟ ಕೂಗಾಟ ಮುಂದುವರೆದಿತ್ತೋ ಏನೋ ನನಗೇ ಕೇಳಿಸಲಿಲ್ಲ.
ಇಷ್ಟೆಲ್ಲಾ ಓದಿದರಲ್ಲ ನಾನು ಆರಂಭದಲ್ಲಿ ಹೇಳಿದೆನಲ್ಲ "ಗುಟ್ಟು" ಅಂತ , ಅದು ಇಲ್ಲಿಯೇ ಇದೆ. ಪತ್ತೆಮಾಡಿಕೊಂಡು ಅನುಷ್ಠಾನಕ್ಕೆ ತಂದೀರಾದರೇ ನಿಮ್ಮ ಲೈಫೂ "ಜಿಂಗಲಾಲ".

Friday, May 22, 2009

ಕಬೂತರ್ . ಬಾ... ಬಾ....ಬಾ..




ಬೆಕ್ಕು ನಾಯಿ ದನ ಜೇನು ಹಲವರು ಸಾಕುತ್ತಾರೆ. ಇವುಗಳನ್ನು ಸಾಕುವಲ್ಲಿ ನಮ್ಮ ಸ್ವಾರ್ಥವಿದೆ. ಇಲಿ ಹೆಗ್ಗಣ ವರ್ಲೆ ಜಿರ್ಲೆ ಅವಾಗಿಯೇ ನಮ್ಮೊಂದಿಗೆ ಇರುತ್ತವೆ. ನಮಗೆ ಬೇಡದಿದ್ದರೂ ನಮ್ಮ ಅತಿಥಿಗಳು. ಆದರೆ ಗಿಳಿ ಪಾರಿವಾಳ ನವಿಲು ಗಳನ್ನು ಸಾಕುವವರು ಕಡಿಮೆ. ಆದರೆ ಒಮ್ಮೆ ಆ ಪಕ್ಷಿಗಳ ಒಡನಾಟ ಶುರುವಾಯಿತೆಂದರೆ ನಂತರ ಬಿಡುವುದು ಕಷ್ಟ. ನೋಡಲು ಮುದ್ದು ಹಾಗೂ ಒಡನಾಟ ಖುಷ್ ಕೊಡುತ್ತದೆ.
ಇಪ್ಪತ್ತೈದು ವರ್ಷದ ಹಿಂದೆ ತಾಳಗುಪ್ಪದಲ್ಲಿ ಜೂಜನ ಹಿಟ್ಟಿನ ಮಿಲ್ಲಿನಲ್ಲಿ ಒಂದು ಗಿಳಿಯನ್ನು ಸಾಕಿದ್ದರು. ಅದು ಮುದ್ದಾಗಿ ಒಂದಿಷ್ಟು ಮಾತುಗಳನ್ನಾಡುತ್ತಿತ್ತು. ಕನ್ನಡಿಯನ್ನು ಅದಕ್ಕೆ ತೊರಿಸಿದರೆ ತನ್ನದೇ ಪ್ರತಿಬಿಂಬವನ್ನು ನೋಡಿ, ಕೋಣ್ತು..?(ಯಾರೂ..?) ಎನ್ನುತ್ತಿತ್ತು. ಪಕ್ಕಾ ಕಿರಿಸ್ತಾನರ ಮನೆಯ ಗಿಳಿಯಾದರೂ "ರಾಮಾ" ರಾಮಾ' ಎನ್ನುತ್ತಿತ್ತು. ಕಾಲಾನಂತರ ಅದರ ಆಯುಷ್ಯ ಮುಗಿಯಿತು.
ಕಳೆದ ವರ್ಷ ಹೊಸಬಾಳೆಯಲ್ಲಿ ದಾರಿ ಪಕ್ಕದ ಶೆಟ್ಟಿ ಬಿದಾರದಲ್ಲಿ ಒಂದುಮನೆಯಲ್ಲಿ ಗಿಳಿ ಕಂಡೆ. ಹತ್ತಿರ ಹೋಗಿ ಇಣುಕಿದೆ. ಮನೆಯಾತನಿಗೆ ಖುಷ್ ಆಯಿತು. ಬನ್ನಿ ಸ್ವಾಮಿ ಅಂದ ಗಿಳಿಯೂ ಒಂದಿಷ್ಟು ಮಾತುಗಳನ್ನು ಉಲಿಯಿತು. ಮೊನ್ನೆ ಮತ್ತೆ ಹೋದಾಗ ಹಣುಕಿದೆ. ಆ ಜಾಗದವನಿಗೂ ಮನೆಯವರಿಗೂ ಕಿರಿಕ್ ಆಗಿ ಆ ಮನೆಯನ್ನು ಕೆಡವಿದ್ದರು. ಮನೆಯೇ ಇಲ್ಲದ ಮೇಲೆ ಗಿಳಿ ಎಲ್ಲಿ?
ಆರೆಂಟು ತಿಂಗಳ ಹಿಂದೆ ಕೆರೇಕೈ ಪ್ರಶಾಂತನಿಗೆ ಪಾರಿವಾಳ ಸಾಕುವ ತಲುಬು ಬಂದಿತ್ತು. ಕೊಟ ಕೊಟ ಕೆತ್ತುವ ಕೃಷ್ಟಾಚಾರಿ ಹಿಡಿದು ಒಂದು ಬೋನ್ ತಯಾರಿಸಿದ. ಬೈಕ್ ಕುಂಡೆಗೆ ಹಾಕಿಕೊಂಡು ಪಡವಗೊಡಿಗೆ ಹೋಗಿ ಜೊತೆಗೆ ಇನ್ನೂರು ರೂಪಾಯಿ ಪೀಕಿ ಎರಡು ಜೊತೆ ಅಚ್ಚ ಬಿಳಿಯ ಪಾರಿವಾಳ ತಂದ "ರಾಗಣ್ಣ ಪಾರಿವಾಳ ತೈಂದಿ ಗೂಡೀಗೆ ಬಿಡ್ತಿ ಈಗ ಬತ್ಯಾ..?" ಅಂದ. ತಡಬಡ ಮಾಡಲಿಲ್ಲ ಬೈಕನ್ನೇರಿದೆ.
ಪ್ರಶಾಂತ ಆಗಲೇ ಚೀಲದಿಂದ ಪಾರಿವಾಳ ತೆಗೆದು ಅದರ ರಕ್ಕೆಗೆ ಗಮ್ ಟೇಪ್ ಅಂಟಿಸುತ್ತಿದ್ದ. ನಾನೂ ಜತೆಗೂಡಿದೆ. ಪಾರಿವಾಳ ಮುಟ್ಟಿದೆ ಆಹಾ ಎಂತಹ ಮುದ್ದಾದ ಪಕ್ಷಿ ಅಂತ ಅನ್ನಿಸಿತು. ಹೊಸ ಗೂಡಿಗೆ ಪಾರಿವಾಳ ಬಿಡುವಾಗ ಹಾರಿ ಹೋಗದಂತೆ ಒಂದೆರಡು ವಾರಗಳ ಮಟ್ಟಿಗೆ ಗಮ್ ಟೇಪ್ ಹಚ್ಚಿಡಬೇಕೆಂದು ಪಾರಿವಾಳ ಕೊಟ್ಟವನು ಹೇಳಿದ್ದನಂತೆ. ಹಾಗಾಗಿ ಟೇಪ್ ಹಚ್ಚಿ ಗೂಡಿನ ಬಳಿ ಬಿಟ್ಟ. ಒಂದೆರಡು ಕ್ಷಣ ನಾಲ್ಕೂ ಪಾರಿವಾಳಗಳು ಅತ್ತಿತ್ತ ಓಡಾಡಿದವು. ಮತ್ತೆ ಅವುಕ್ಕೆ ಏನನಿಸಿತೋ ಗಮ್ ಟೇಪ್ ಇದ್ದಂತಯೇ ಪಟಪಟ ಹಾರಿ ಪಕ್ಕ ದ ಮನೆಯ ಮಾಡಿನಲ್ಲಿಕುಳಿತುಕೊಂಡವು. ಒಂದು ಪಾರಿವಾಳಕ್ಕೆ ಸರಿಯಾಗಿ ಹಾರಲಾಗಲಿಲ್ಲ. ರಸ್ತೆಯ ಮೇಲೆ ಬಿತ್ತು. ಪ್ರಶಾಂತ ಅದನ್ನು ಎತ್ತಿಕೊಳ್ಳಲು ಓಡುವ ಹೊತ್ತಿಗೆ ಅದೆಲ್ಲಿತ್ತೋ ಬೀದಿನಾಯಿ ಅದನ್ನು ಆಹುತಿ ತೆಗೆದುಕೊಂಡೇ ಬಿಟ್ಟಿತು. ನಮ್ಮ ಕೂಗಾಟ ಹಾರಾಟ ಚೀರಾಟ ಲೆಕ್ಕಿಸದೆ ನಾಯಿ ರೈಟ್. ಮತ್ತೆ ಮೂರು ಪಾರಿವಾಳಗಳು ಮೂರು ದಿಕ್ಕಿಗೆ ಹಾರಿ ಹೋದವು. " ಇಲ್ಲೆ ಅವು ಸಾಯಂಕಲ ವಾಪಾಸ್ ಬತ್ವಡ ಪಾರಿವಾಳ ಕೊಟ್ಟವ ಹೇಳಿದ್ದ" ಎಂದ. ಇಂದಿನವರೆಗೂ ಸಾಯಂಕಾಲ ಬರಲೇ ಇಲ್ಲ. ಕೆಲವರು ಹೇಳಿದರು ಅವು ವಾಪಾಸು ತಂದಲ್ಲಿಗೆ ಹೋದವು ಎಂದು. ನಿಜವಾಗಿಯೂ ಅಲ್ಲಿಗೇ ಹೋದವೋ ಅಥವಾ ಗಿಡುಗನ ಪಾಲಾದವೋ ಗೊತ್ತಾಗಲೇ ಇಲ್ಲ. ಆದರೆ ಬಹಳ ಅಂದರೆ ಬಹಳ ಮುದ್ದಾಗಿತ್ತು.
ಈಗ ನನಗೆ ಅದೊಂದು ಅವತಾರ ಮಾಡಿಬಿಡುವ ಮನಸ್ಸಾಗಿದೆ. ಮನಮನೆಯ ಪಾಂಚುವಿಗೆ ಒಂದು ಜೋಡಿ ಕೊಡಲು ಹೇಳಿದ್ದೇನೆ. ಮಳೆಗಾಲ ಮುಗಿಯುವವರೆಗೆ ಕಾಯಬೇಕು. ನಾನು ಪಾರಿವಾಳ ಹಾಗೂ ಗಿಳಿ ತಂದಮೇಲೆ ಹೇಳುತ್ತೇನೆ. ಆವಾಗ ಬನ್ನಿ ಮಜ ಇರುತ್ತೆ ಅಥವಾ ಮಜ ಇದ್ದರೂ ಇರಬಹುದು..!.

Thursday, May 21, 2009

ಕಾಡು ನೇರ್ಲೆ


ನೇರಲೆ ಹಣ್ಣು ಯಾರಿಗೆ ಗೊತ್ತಿಲ್ಲ, ಪೇಟೆಯಲ್ಲಿ ಸಿಗುವ ಹೈಬ್ರಿಡ್ ನೇರಲೆ ಹಣ್ಣಿನಿಂದಾಗಿ ಇದು ಎಲ್ಲರಿಗೆ ಚಿರಪರಿಚಿತ. ಆದರೆ ಈ ಕಾಡುನೇರ್ಲೆ ರುಚಿಯಲ್ಲಿ ಅದ್ಬುತ. ತಿನ್ನಲು ಕುಳಿತರೆ ಮುಷ್ಟಿಗಟ್ಟಲೆ ಖಾಲಿ ಮಾಡಿಬಿಡಬಹುದು,ಕಾಡು ನೇರ್ಲೆ ಅಷ್ಟೊಂದು ಸಿಹಿ. ಆನಂತರ ಬಾಯಿ ನಾಲಿಗೆ ಸಮೇತ ನೇರಲೆ ಬಣ್ಣಕ್ಕೆ ತಿರುಗುತ್ತದೆ. ಬೆಳಿಗ್ಗೆ ಹಣ್ಣುತಿಂದರೆ ಮಧ್ಯಾಹ್ನದವರೆಗೂ ನಾಲಿಗೆ ಹೊರಚಾಚಿ ಬದಲಾದ ಬಣ್ಣ ನೋಡಿಕೊಳ್ಳುವುದೇ ಒಂದು ಮೋಜು ಮಜ. ಇದು ಅತ್ಯುತ್ತಮ ಔಷಧೀಯ ಗುಣವನ್ನು ಹೊಂದಿದ್ದು ಅತಿಬೇಧಿ ನಿಯಂತ್ರಣಕ್ಕೆ ಇದರ ರಸವನ್ನು ಬಳಸುತ್ತಾರೆ. ಮಲೆನಾಡ ಮಕ್ಕಳ ಇಂಕ್ ಹಣ್ಣು ಎಂದೂ ಕರೆಸಿಕೊಂಡಿದೆ .

Thursday, May 14, 2009

ಗಂಗೆ ಬಾರೆ ...ಗೌರೀ ಬಾರೆ


ಗೋವಿನ ಆ ಹಾಡು ಕೇಳಲು ಎಂತಹಾ ಆನಂದ. ಅದಕ್ಕೊಂದು ರೂಪಕ ಅಳವಡಿಸಿದರೆ ಮುಗಿದೇ ಹೋಯಿತು ಒಂದೆರಡು ದಿವಸ "ಧರಣಿ ಮಂಡಲ ಮಧ್ಯದೊಳಗೆ" ಗುನುಗುತ್ತಿರಬೇಕು. ತೀರಾ ಭಾವುಕರಾದರೆ ಹಾಡನ್ನು ಕೇಳುತ್ತಾ ಕೇಳುತ್ತಾ ನಾಲ್ಕಾರು ಕಣ್ಣೀರು ಹನಿಗಳು ಉದುರಿದರೂ ಆಶ್ಚರ್ಯವಿಲ್ಲ. ಪಾಪದ ಗೋವು- ಸತ್ಯದ ಗೋವು-ತಾಯಿ ಮಮತೆಯ ಗೋವು ಹೀಗೆ ಹತ್ತಾರು ಭಾವಗಳನ್ನು ಹುಟ್ಟಿಸುತ್ತದೆ ಆ ಹಾಡಿನ ಮೂಲಕ. ಮುಸ್ಸಂಜೆಯಲ್ಲಿ ಮರಗಿಡಗಳ ಮಧ್ಯೆ ಪ್ರಪಂಚ ಮರೆತು ಅಂತಹ ಒಂದು ಪುಣ್ಯಕೋಟಿಯನ್ನು ನೆನಸಿಕೊಂಡು-ಕಲ್ಪಿಸಿಕೊಂಡು ಸುಖಿಸುವ ಮಜ ಅನುಭವಿಸಿದವರಿಗೆ ಗೊತ್ತು.
ಒಂದೇ ಒಂದು ಅಪ್ರಿಯ ಸತ್ಯದ ವಿಚಾರವೆಂದರೆ ಕಲ್ಪನೆಗಳಲ್ಲಿ ಇರುವ ಮಜ ಸುಖ ವಾಸ್ತವದಲ್ಲಿ ಇರುವುದಿಲ್ಲ. ಹಾಗಾಗಿ ದೂರದ ವಿಷಯಗಳನ್ನು , ವ್ಯಕ್ತಿಗಳನ್ನು, ತನಗೆಟುಕದ ಜಗತ್ತನ್ನು ಹೀಗೆ ಕಲ್ಪಿಸಿಕೊಂಡು ಮನುಷ್ಯ ಸುಖಿಸುವುದನ್ನು ಅಭ್ಯಾಸ ಮಾಡಿಕೊಂಡಿದ್ದಾನೆ ಲಾಗಾಯ್ತಿನಿಂದ. ಅಂತಹ ಒಂದು ಅಪೂರ್ವ ಸುಖದ ವಿಷಯ ಗೋವು.
ಆದರೆ ವಾಸ್ತವವೆಂದರೆ ಎಲ್ಲ ಗೋವುಗಳೂ ಪುಣ್ಯಕೋಟಿಯಲ್ಲ, ಕೆಲವೊಂದು ಹುಲಿರಾಯನಕಿಂತ ಕ್ರೂರವಿರುತ್ತದೆ. ಮನುಷ್ಯರನ್ನು ಮಾಂಸವನ್ನು ತಿನ್ನದು ಎನ್ನುವುದೊಂದು ಬಿಟ್ಟರೆ, ಪಟಾರನೆ ಎಲುಬು(ನಮ್ಮದು) ಮುರಿಯುವಂತೆ ಒದೆಯುವ ಆಕಳೂ, ಕೋಡಿನಿಂದ ದುಬಲ್ಲನೆ ಗುದ್ದುವ ದನಗಳೂ ಇರುತ್ತವೆ. ಆದರೆ ಅವುಗಳನ್ನು ಪುಣ್ಯಕೋಟಿಗೆ ಹೋಲಿಸಿಕೊಳ್ಳಬಾರದು ಅಷ್ಟೆ.
ನಮ್ಮ ಹಳ್ಳಿಗಳಲ್ಲಿ ತುಡು ಮಾಡುವ ಬೀಡಾಡಿ ದನಗಳನ್ನು ಕಂಡರೆ ಮೈಮೇಲೆ ಮುಳ್ಳುಗಳೇಳುತ್ತವೆ. ಮಟ ಮಟ ಮಧ್ಯಾಹ್ನ ಬಿರುಬಿಸಿಲಿನಲ್ಲಿ ಲಘು ವಿಶ್ರಾಂತಿ ತೆಗೆದುಕೊಳ್ಳಲೋಸುಗ ಮಲಗಿದಾಗ ಚಟಚಟನೆ ಬೇಲಿ ಮುರಿಯುವ ಸದ್ಧು ಕೇಳಿತೆಂದರೆ ಅದು ತುಡು ದನದ್ದೇ ಅಂತ ಲೆಕ್ಕ. ಲಗುಬಗೆಯಿಂದ ಎದ್ದು ಹೋಗಿ ನೋಡಿದರೆ ಕುಂಬಳ ಬಳ್ಳಿ-ಹಾಗಲ ಬಳ್ಳಿ-ತಿಂಗಳವರೇ ಬಳ್ಳಿ ಅದಾಗಲೇ ಅರ್ದ ದನದ ಹೊಟ್ಟೆ ಸೇರಿರುತ್ತದೆ. ಆವಾಗ ಮಾತ್ರ ಕೈಗೆ ಸಿಕ್ಕ ಕೋಲಿನಿಂದ ಅಟ್ಟಿಸಿಕೊಂಡು ಹೊಡೆಯಿಸಿಕೊಳ್ಳಲು ಅದು ಸಿಗದೆ ಬಾಲ ಎತ್ತಿಕೊಂಡು ಓಡಿ ಹೋದಾಗ ಬರುವ ಸಿಟ್ಟು ಅನುಭವಿಸಿದವರಿಗೇ ಗೊತ್ತು. "ಗೋ ಮಾತೆಯಂತೆ ಗೋಮಾತೆ" ಎಂಬ ಗೊಣಗಾಟದೊಂದಿಗೆ ಮತ್ತೆ ಮಂಚ ಸೇರಬೇಕಾಗುತ್ತದೆ. ಆದರೂ ಆ ದನ ಅವರ ಮನೆಗೆ ಗೋಮಾತೆಯೇ ಕಾರಣ ಮಾಯವಾಗಿದ್ದು ನಮ್ಮ ಮನೆಯ ಕುಂಬಳ ಬಳ್ಳಿ ಅಲ್ಲವೇ?.
ಇಷ್ಟೆಲ್ಲಾ ರಗಳೆ ಇದ್ದರೂ ಗೋ ಮಾತೆ ಒಂಥರಾ ಗೋಮಾತೆಯೇ. ನಮ್ಮ ಮನೆಯ ದನ ಆಗಿರಬೇಕು ಅಷ್ಟೆ . ಸಂಜೆಯಾಗುತ್ತಿದ್ದಂತೆ ಜಗುಲಿಯಲ್ಲಿ ಕುಳಿತು "ಧರಣಿ ಮಂಡಲ" ಹಾಡು ಕೇಳಿದಾಗ ಎಲ್ಲ ಮರೆತು ಸೌಮ್ಯ ಭಾವ ಮೂಡತೊಡಗುತ್ತದೆ ಗೋವಿನ ಬಗ್ಗೆ.