...ವಿಶ್ವನಾಥೋ ಮಹಾಬಲ: , ಕೋಟಿತೀರ್ಥೇಶು ಗಂಗಾಯಾಂ ಸಮುದ್ರಂ ಅಧಿಕಂ ಬಲಂ. ಎಂಬ ಶ್ಲೋಕವನ್ನು ಬಹುಪಾಲು ಜನ ಕೇಳಿರುತ್ತೀರಿ. ಗೋಕರ್ಣ ಸಮುದ್ರ ಹೊಂದಿದ್ದಕ್ಕಾಗಿ ಕಾಶಿಗಿಂತ ಒಂದು ತೂಕ ಜಾಸ್ತಿಯಂತೆ. ಇರಲಿ ಅದು ಭಕ್ತಿಯಿರುವ ಭಕ್ತರ ಕತೆಯಾಯಿತು. ನನಗೆ ಇದೊಂದು ಶ್ಲೋಕ ನೆನಪಾದಾಗಲೆಲ್ಲ ಮಾಚಭಟ್ಟರು ನೆನಪಾಗುತ್ತಾರೆ. ಆಜಾನುಬಾಹು ಎಂದು ವ್ಯಕ್ತಿಗಳನ್ನು ವರ್ಣಿಸುವುದಿದೆ. ಆ ವರ್ಣನೆಗೆ ತಕ್ಕುದಾದ ವ್ಯಕ್ತಿ ಈ ಮಾಚಭಟ್ಟರು.
ಘಟ್ಟದ ಮೇಲಿನ ಹಲವಾರು ಹವ್ಯಕರ ಮನೆಗಳಿಗೆ ಅವರವರ ಪುರೋಹಿತರು ಗೋಕರ್ಣದ ಮಹಾಬಲೇಶ್ವರನಿಗೆ ಪೂಜೆ ಸಲ್ಲಿಸಿ ದೂರ್ವೆ ಪ್ರಸಾದ ಕುಂಕುಮ ಹಾಗೂ ಕೊಬ್ಬರಿ ಪ್ರಸಾದ ಬಗಲ ಗಂಟಿನಲ್ಲಿ ಹಾಕಿಕೊಂಡು ಅಡಿಕೆ ಕೊಯ್ಲಿನ ನಂತರ ಭೇಟಿಕೊಡುವ ಪದ್ದತಿ ಹಿಂದೆ ಚಾಲ್ತಿಯಲ್ಲಿತ್ತು. ಅದಕ್ಕೆ ಸರ್ತೆ ಎನ್ನುತ್ತಿದ್ದರು. ಹಾಗೆ ಗೋಕರ್ಣದ ಪ್ರಸಾದ ತಂದ ಪುರೋಹಿತರಿಗೆ ನಮಸ್ಕಾರ ಮಾಡಿ ಅವರು ಕಾಯಿ ಕುಂಕುಮ ಪ್ರಸಾದ ಇಟ್ಟುಕೊಡುವ ಬಟ್ಟಲ ತುಂಬಾ ನಾವು ಬೆಳದ ಅಡಿಕೆ ನೀಡಿದರೆ ಅದು ದೇವರಿಗೆ ತಲುಪಿತು ಅಂಬ ಧನ್ಯತಾ ಭಾವ. ಆ ಪುರೋಹಿತರಾದರೂ ಅಷ್ಟೆ ಎಲ್ಲರ ಮನೆಗೆ ಹೋಗುವ ಜಾಯಮಾನದವರಲ್ಲ. ಮಹಾ ಸ್ವಾಭಿಮಾನಿಗಳು. ತಮ್ಮ ಶಿಷ್ಯ ವರ್ಗದ ಮನೆಗೆ ಮಾತ್ರಾ ಅವರ ಭೇಟಿ. ಅಂಥಹಾ ಒಬ್ಬ ಪುರೋಹಿತರು ನಾನು ಈಗ ಹೇಳಹೊರಟಿರುವ ಮಹಾಬಲೆಶ್ವರ ಭಟ್ಟರು ಅಥವಾ ಅಚ್ಚಿಮೆಚ್ಚಿನ ಶಾರ್ಟಾಗಿ ಮಾಚಜ್ಜ ಅಥವಾ ಮಾಚಭಟ್ಟರು.
ಚಳಿ ಚಳಿಯ ಕೊನೆಕೊಯ್ಲಿನ ದಿವಸದಲ್ಲಿ ಮಾಚಭಟ್ಟರು ಬಂದರೆಂದರೆ ನಮಗೆಲ್ಲಾ ಹಬ್ಬ, ಸರ್ತೆಗೆ ಬರುವ ರಾಮ ಭಟ್ಟರು ಗಣಪ ಭಟ್ಟರು ಮೊದಲಾದವರಿಗಿಂತಲೂ ಮಾಚ ಭಟ್ಟರು ಮಕ್ಕಳ ಪಾಲಿಗೆ ಕಾಶಿಯೆದುರು ಗೋಕರ್ಣ ಹೆಚ್ಚಾದಂತೆ ಒಂದು ಹೆಚ್ಚಿನ ತೂಕ. ಮಿಕ್ಕವರು ಕೊಬ್ಬರಿ ಕಲ್ಲುಸಕ್ಕರೆ ನೀಡಿ ಆಶೀರ್ವಾದ ಮಾಡಿದರೆ ಮಾಚಭಟ್ಟರು ಮಕ್ಕಳಿಗೆ ಇಷ್ಟವಾಗುವ ಓಂದಲ್ಲಾ ಒಂದೂರಲ್ಲಿ ಒಬ್ಬನಿದ್ದನು ಎಂಬ ಸ್ವಾರಸ್ಯಕರವಾದ ಕತೆ ಹೇಳುತ್ತಿದ್ದರು. ಕಾಶಿಯ ಬಗ್ಗೆ ಗೋಕರ್ಣದ ಬಗ್ಗೆ ಪುರಾಣದಲ್ಲಿನ ಮಹತ್ವ ಸೇರಿಸಿ ಕತೆ ಹೇಳುತ್ತಿದ್ದರು. ಅವರೆ ಹೊಸೆದ ಮಾಯಮಂತ್ರದ ಕತೆ ಕೇಳಲು ಕುಳಿತರೆ ನಾವು ಪ್ರಪಂಚ ಮರೆಯುತ್ತಿದ್ದೆವು. ಕತೆಯ ನಡುವೆ ರಾಕ್ಷಸ ಹ್ರೋಂ ಪಟ್ ಎಂದು ಮಾಯವಾಗುವ ಸಂದರ್ಭದಲ್ಲಿ ದೊಡ್ಡದಾಗಿ ಕಿರುಚಿ ಮಕ್ಕಳು ಬೆಚ್ಚಿಬೀಳುವಂತ ಶಭ್ದ ಹೊರಡಿಸುತ್ತಿದ್ದರು. ಮಹಾಲಕ್ಷ್ಮೀ ಮಹಾಕಾಳಿ ಮಹಾಸರಸ್ವತಿ ಮೂರೆ ಸಾಕು ಎಂದುತಿನ್ನುವ ದೋಸೆ ಲೆಕ್ಕವನ್ನು ದೇವರಿಗೆ ಹೋಲಿಸುತ್ತಿದ್ದರು. ಕ್ಯಾ...ಕ್ ಎಂದು ಕತೆಯ ಮಧ್ಯೆ ನಶ್ಯದಿಂದ ಉಂಟಾದ ಸುಂಬಳವನ್ನು ನಶ್ಯಕ್ಕಿಂತ ಕಪ್ಪಗಿರುವ ಬಿಳಿಯ..! ಪಂಚೆಗೆ ವರೆಸಿ ಅದೂ ಕತೆಯದೇ ಒಂದು ಭಾಗ ಎಂಬಂತೆ ನಂಬಿಸಿ ಹುಡುಗರಿಗೆ ತಮ್ಮ ಸಿಂಬಳದಿಂದ ಉಂಟಾಗುವ ಹೇಸಿಗೆಯನ್ನು ಮರೆಸುತ್ತಿದ್ದರು. ಗೋಕರ್ಣದ ಕೋಟಿ ತೀರ್ಥದಲ್ಲಿ ಆಚೆಯಿಂದ ಈಚೆ ಹತ್ತಾರು ಬಾರಿ ಈಜಿದವರ ಕತೆ ಗಂಟೆಗಟ್ಟಲೆ ಮುಳುಗಿದವರ ಕತೆ, ರಾವಣನ ಆತ್ಮಲಿಂಗದ ಕತೆ ಹೀಗೆ ನೂರಾರು. ನಮಗೆ ಬಾಲ್ಯದಲ್ಲಿ ಗೋಕರ್ಣವೆಂದರೆ ಸ್ವರ್ಗ ಎಂಬ ಕಲ್ಪನೆಯನ್ನು ಕೊಟ್ಟು ಅವರು ಸ್ವರ್ಗ ಸೇರಿದರು.
ನಾನು ಮಾಚಭಟ್ಟರು ಸ್ವರ್ಗಸ್ಥರಾದಮೇಲೆ ಗೋಕರ್ಣಕ್ಕೆ ಹೋದೆ. ಮಾಚಭಟ್ಟರ ಸ್ವರ್ಗದ ಕನಪಿನಲ್ಲಿದ್ದ ನನಗೆ ಗೋಕರ್ಣವೆಂದರೆ ನರಕ ಎಂದು ಅರಿವಾಯಿತು. ಅಲ್ಲಿಯ ಕೋಟಿ ತೀರ್ಥದಲ್ಲಿ ಸ್ನಾನ ಮಾಡಿದರೆ ಪುಣ್ಯ ಬರುವುದು ನಂತರದ ಮಾತಾಯಿತು ರೋಗ ಬರದಿದ್ದರೆ ಸಾಕು ಎಂಬಂತಿತ್ತು. ಒಂದರ ಕುಂಡೆಯಲ್ಲಿ ಒಂದರಂತಿರುವ ನೂರಾರು ಮನೆಗಳು, ಎಲ್ಲಿ ನೋಡಿದರಲ್ಲಿ ಗಲೀಜು, ನಮ್ಮಲ್ಲಿ ಪೂಜೆ ಮಾಡಿಸಿ ಎಂದು ವರಾತ ಹಚ್ಚುವ ಪುರೋಹಿತರು. ರಾವಣನಿಂದ ಭೂಮಿಯ ಒಳಗೆ ಹೋದ ಆತ್ಮಲಿಂಗವನ್ನು ಕಿತ್ತು ಮನೆಗೆ ಒಯ್ಯುತ್ತಾರೇನೋ ಎಂಬ ಭ್ರಮೆ ಹುಟ್ಟಿಸುವ ಲಿಂಗದ ತಲೆ ಮುಟ್ಟಲು ಮುರಿಬೀಳುವ ಭಕ್ತಾದಿಗಳು. ಅಸ್ತಿ ವಿಸರ್ಜನೆಗೆ ಮೀಸಲಾಗಿರುವ ದೇವಸ್ಥಾಅದ ಹಿಂದಿನ ಕೊಳ... ಅಬ್ಬಬ್ಬಾ ಇದು ಅಕ್ಷರಶ: ನರಕ ಎಂದು ಅನ್ನಿಸಿತು. ಪಾಪ ಮಾಚ ಭಟ್ಟರು ತಾವು ನರಕದಲ್ಲಿ ಬದುಕಿ ನಮ್ಮ ಬಾಲ್ಯವನ್ನು ಸ್ವರ್ಗದ ನೆನಪನ್ನಾಗಿಸಿದ್ದರು.
ಈಗ ಸರ್ತೆ ಭಟ್ಟರು ಮಾಯವಾಗಿದ್ದಾರೆ. ಘಟ್ಟದ ಮೇಲಿನ ಹವ್ಯಕರು ಸರ್ತೆಗೆ ಬರುವ ಪುರೋಹಿತರನ್ನು ಒಳ್ಳೆಯ ರೀತಿಯಲ್ಲಿ ನಡೆಯಿಸಿಕೊಳ್ಳುವುದಿಲ್ಲ ಎಂಬುದು ಅವರು ಮೇಲೆ ಬಾರದಿರಲು ಒಂದು ಕಾರಣವಂತೆ. ಅದೇ ರೀತಿ ಪುರೋಹಿತರುಗಳ ಮಕ್ಕಳು ಒಳ್ಳೋಳ್ಳೆ ಉದ್ಯೋಗ ಹಿಡಿದುಕೊಂಡು ಬಾಂಬೆ-ದುಬೈ ಸೇರಿರುವುದು ಸರ್ತೆ ಭಟ್ಟರು ಬಾರದಿರುವುದಕ್ಕೆ ಕಾರಣ. ಅಲ್ಲೊಭ್ಬರು ಇಲ್ಲೊಬ್ಬರು ಬರುತ್ತಾರಾದರೂ ಅವರುಗಳು ಘಟ್ಟದ ಕೆಳಗಿನ ಗೋಕರ್ಣಕ್ಕೂ ಹಾಗೂ ಘಟ್ಟದ ಮೇಲಿನ ಜನಕ್ಕೂ ಕೊಂಡಿಯಾಗಿ ಕೆಲಸ ಮಾಡುವ ತಾಳ್ಮೆ ಇಲ್ಲ. ಆದರೆ ಗೋಕರ್ಣದ ಸೌಭಾಗ್ಯವೆಂಬಂತೆ ನಮ್ಮ ಘನ ಸರ್ಕಾರ ಒಂದು ಉತ್ತಮ ಕೆಲಸ ಮಾಡಿದೆ. ಗೋಕರ್ಣದ ಆಡಳಿತವನ್ನು ಶ್ರೀ ರಾಮಚಂದ್ರಾ ಪುರ ಮಠಕ್ಕೆ ವಹಿಸಿದೆ. ಇಷ್ಟು ವರ್ಷ ಗೋಕರ್ಣ ಮಂಡಲಾಧೀಶ್ವರರುಎ ಎಂಬ ಹೆಸರನ್ನಷ್ಟೇ ಹೊಂದಿದ್ದ ಶ್ರೀಗಳಿಗೆ ಈಗ ನಿಜವಾದ ಮೂಲಮನೆಯ ಜವಾಬ್ದಾರಿ ದೊರೆತಿದೆ. ಧಾರ್ಮಿಕ ಸ್ಥಳಗಳ ನಿರ್ವಹಣೆ ಧಾರ್ಮಿಕ ವ್ಯಕ್ತಿಗಳೇ ಮಾಡಿದರೆ ಅಭಿವೃದ್ಧಿ ಸಾಧ್ಯ ಎಂಬುದು ಸರ್ಕಾರಕ್ಕೆ ಅರಿವಾಗಿದೆ. ಘಟ್ಟದ ಮೇಲೆ ಯೇ ಏನೂ ಗೋಕರ್ಣಕ್ಕೂ ಮಿಕ್ಕ ಪ್ರಪಂಚಕ್ಕೂ ಕೊಂಡಿಯ ಕೆಲಸ ಶ್ರೀಗಳು ಮಾಡಬಲ್ಲರು.
ಕೊನೆಯದಾಗಿ: ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳು ನಮ್ಮ ಮಾಚ ಭಟ್ಟರು ಹೇಳಿದ ಸ್ವರ್ಗದಂತಿದ್ದ ಗೋಕರ್ಣವನ್ನು ಮತ್ತೆ ಚಾಲ್ತಿಗೆ ತರುತ್ತಾರೆ ಎನ್ನುವುದರಲ್ಲಿ ಸಂಶಯವಿಲ್ಲ ಎಂಬುದು ಆನಂದರಾಮ ಶಾಸ್ರಿಗಳ ಅಭಿಮತ. ಹಾಗೆಯೇ ಆಗಲಿ.
2 comments:
Sharmare
Ananda Rama Shastrigalu endare yaru?
olle darshanikara ?
ಈಗ ಮಠಕ್ಕೆ ಗೋಕರ್ಣ ವಹಿಸಿಕೊಟ್ಟಿದ್ದಕ್ಕೂ ಗಲಾಟೆ ಶುರು ಆಗಿದ್ಯಲ್ಲ!
Post a Comment