Monday, July 4, 2011

ಆದರೆ ನಾವು ಮನುಷ್ಯರಲ್ಲ...!

ಮನುಷ್ಯರು ಏಕತೆಯನ್ನು ಮುಚ್ಚಿಡುತ್ತಾರೆ ಭಿನ್ನತೆಯನ್ನು ಪ್ರದರ್ಶಿಸುತ್ತಾರೆ ಎಂದರು ಅವರು. ಅವರು ಎಂದರೆ ಯಾರು? ಎಂದೆಲ್ಲಾ ಕೇಳಬೇಡಿ ಅವರು "ಅವರು"ಅಷ್ಟೆ. ಅಂತಹ ಮಾತನ್ನು ಕೇಳಿಸಿಕೊಂಡ ನಾನು " ನನಗೆ ಸರಿಯಾಗಿ ಅರ್ಥವಾಗಲಿಲ್ಲ" ಎಂದೆ. " ಉದಾಹರಣೆಗೆ ಪ್ರಪಂಚದಾವುದೇ ಭಾಗದ ಮನುಷ್ಯನಲ್ಲಿ ಕಾಣಬಹುದಾದ ಅವಯವಗಳನ್ನು ಬಟ್ಟೆಯಿಂದ ಜತನವಾಗಿ ಮುಚ್ಚಿಡುತ್ತಾರೆ ಅಕ್ಕಪಕ್ಕದಲ್ಲಿಯೇ ಬೇರೆ ತರಹ ಇರುವ ಮುಖಗಳನ್ನು ಪ್ರದರ್ಶನಕ್ಕೆಇಟ್ಟಿರುತ್ತಾರೆ" ಎಂದರು. ಸರಿ ಇದರಲ್ಲಿ ಏನೇನೋ ಅರ್ಥ ಇದೆ ಅಂತ ನಾನು ಸುಮ್ಮನುಳಿದೆ. ಅವರು ಸ್ವಲ್ಪ ಮುಂದುವರೆದು " ನೋಡು ಪ್ರಪಂಚದ ಯಾವ ಭಾಗದಲ್ಲಿನ ಮನುಷ್ಯರು ಎಂದರೆ ಬಣ್ಣ ಆಕಾರ ಹೊರತುಪಡಿಸಿ ಅವಯವಗಳೆಲ್ಲಾ ಒಂದೇ ತರಹ. ಮುಖ ಮಾತ್ರಾ ಹಾಗಲ್ಲ ನಾನಾ ನಮೂನೆಯಾಗಿ ಕಣ್ಣಿಗೆ ಕಾಣಿಸುತ್ತದೆ ಅದನ್ನು ಎಲ್ಲರಿಗೂ ತೋರಿಸುತ್ತಾರೆ, ಇನ್ನು ಮಿಕ್ಕಂತೆ ಡ್ಯಾಶ್ ಡ್ಯಾಶ್ ಗಳೆಲ್ಲಾ ಒಂದೇ ತರಹ ಅದನ್ನು ಮುಚ್ಚಿಟ್ಟು ಏನೇನೋ ಬೇರೆಯದೇ ಇದೆ ಎಂಬ ಭ್ರಮೆ ಹುಟ್ಟಿಸುತ್ತಾರೆ. ಇನ್ನೂ ಕೆಲವರು ಒಂದಿಷ್ಟು ಹೆಜ್ಜೆ ಮುಂದೆ ಹೋಗಿ ಆ ಅದನ್ನೂ...! ಕೂಡ ಚೂರುಪಾರು ಕಾಣಿಸುವಂತೆ ಮಾಡಿ ಕುತೂಹಲ ಕೆರಳಿಸಿ ಮಜ ತೆಗೆದುಕೊಳ್ಳುತ್ತಾರೆ, ಜತೆಗೆ ಹಣದ ಗಂಟನ್ನೇ ಹೊಡೆಯುವವರೂ ಇದ್ದಾರೆ." ಎಂತೆಲ್ಲಾ ಅನ್ನೋಕೆ ಶುರುಮಾಡಿದರು ಅವರು. ನಾನು ಮಗುಮ್ಮಾದೆ ಇದು ಒಂಥರಾ ಪಾಮರರು ತೀರಾಕೆಟ್ಟದ್ದು ಎನ್ನುವ ಹಾಗೂ ಅಶ್ಲೀಲ ಎನ್ನಬಹುದಾದ ವಿಷಯಗಳನ್ನು ಬಯಲಿಗೆಳೆಯುವ ಮಾತುಗಳು ಅಂತ ನನಗೆ ಅನ್ನಿಸದಿದ್ದರೂ ಜತೆಯಲ್ಲಿ ಇದ್ದವರಿಗೆ ಹಾಗೆ ಅನ್ನಿಸಿ ಆಯೋಮಯವಾಗುವುದು ಬೇಡ ಎಂದು ಹಾಗಾದೆ.
ಆ "ಅವರು" ಹುಳ ಬಿಟ್ಟು ಹೋದನಂತರ ನನ್ನ ಈಗಷ್ಟೇ ಬರುತ್ತಿರುವ ಬಿಳಿಕೂದಲಿಗೆ ನಾಲ್ಕಾಣೆ ಮರ್ಯಾದೆ ನೀಡುವ ಸಲುವಾಗಿ ತನ್ಮೂಲಕ ನನ್ನಷ್ಟಕ್ಕೆ ನಾನು ಚಿಂತಕ ಎಂದು ಒಳಮನಸ್ಸನ್ನು ಮಣಿಸುವ ಕಾರಣದಿಂದ ಮುಂದಿನ ಆಲೋಚನೆಗೆ ಬಿಟ್ಟೆ. ಹೌದು ಅವರು ಹೇಳಿದ್ದು ಸಾರ್ವಜನಿಕವಾಗಿ ಹೇಳಲಾಗದ ಸತ್ಯ. ಅದರಲ್ಲಿ ಒಂಥರಾ ವಿಷಯ ಇದೆ.
ಮನೆಯಲ್ಲಿ ಚಂದವಾದ ಹೆಂಡತಿ ಇದ್ದಾಗ ಅಲ್ಲೇಲ್ಲೋ ಬೇಲಿ ಹಾರುವ ಮಂದಿಯ ಮಂಡೆಯೊಳಗೆ ಇದೇ ಮುಚ್ಚಿಟ್ಟ ಬಟ್ಟೆಯೊಳಗೆ ಬೇರೆಯದೇ ಏನೋ ಇದೆ ಎಂಬ ಭ್ರಮೆ ತುಂಬಿರಬಹುದಾ..?, ಹೆಂಡತಿಯೆಂಬ ಹೆಂಡತಿ ಬಾಯ್ಬಿಟ್ಟು "ನನ್ನಲ್ಲಿ ಇಲ್ಲದ್ದು ಅವಳಲ್ಲಿ ಏನು ಕಂಡಿರಿ?" ಎಂದು ಶರಂಪರ ಜಗಳಕ್ಕೆ ನಿಂತಾಗ ಗಂಡ "ಅಯ್ಯೋ ಅಲ್ಲೂ ಅದೇ ಎಂಬುದು ಆಮೇಲೆ ಗೊತ್ತಾಯ್ತು ಕಣೇ" ಎಂದು ಮನಸ್ಸಿನಲ್ಲಿ ಅಂದುಕೊಳ್ಳಬಹುದಾ?, ಇದೇ ಉಲ್ಟಾ ಆಗಿ ಪರಗಂಡಸಿನ ಬೆನ್ನತ್ತಿ ನೂರಾರು ಕತೆ-ಕಾರಣಗಳಿಗೆ ಸೃಷ್ಟಿಕರ್ತೆಯರು ಮಹಿಳೆಯೂ ಆಗಿರಬಹುದಾ? ಎಂಬಂತಹ ಉತ್ತರವಿಲ್ಲದ ಪ್ರಶ್ನೆಗಳು ತನ್ನಷ್ಟಕ್ಕೆ ಮಿಂಚಿ ಮಾಯವಾಗತೊಡಗಿದವು.
ಹೀಗೆಲ್ಲಾ ಇಲ್ಲಸಲ್ಲದ ಆಲೋಚನೆಗಳು ಪುಂಖಾನುಪುಂಕವಾಗಿ ಹೊರಹೊಮ್ಮತೊಡಗಿದಾಗ ನನ್ನಲ್ಲಿನ ಬುದ್ಧಿ ಬಡಕ್ಕನೆ ಎದ್ದು "ಮಗನೇ ಕೆಲಸವಿಲ್ಲದ ಬಡಗಿ ಮಗನ ಡ್ಯಾಶ್ ಕೆತ್ತಿದ್ದನಂತೆ" ಕೆಲಸ ನೋಡು ಹೋಗು ಅಂತ ಅಂದಿತು. ಬಚಾವಾದೆ, ಯಡವಟ್ಟು ಆಲೋಚನೆಗೆ ಬ್ರೆಕ್ ನೀಡಿ ತೋಟಕ್ಕೆ ಹೋದೆ. ಅಲ್ಲಿ ಮಂಗನ ಗುಂಪೊಂದು ನಿರಾಳವಾಗಿ ಬಾಳೆ ಅಡಿಕೆ ಬಾರಿಸುತ್ತಿತ್ತು, ಮೈಮೇಲೆ ಬಟ್ಟೆಯಿಲ್ಲದೆ, ಶೀಲ ಅಶ್ಲೀಲ ಎಂಬ ಹಂಗಿಲ್ಲದೆ. ಪ್ರಪಂಚದ ಗೊಡವೆಯಿಲ್ಲದೆ, ಆದರೆ ನಾವು ಮನುಷ್ಯರಲ್ಲ...! ಹಾಗಾಗಿ ತೋಟದಿಂದ ವಾಪಾಸು ಬಂದವನು "ಕಟಕಟ" ಸದ್ದು ಮಾಡುತ್ತಾ ಹೀಗೆಲ್ಲಾ ಕುಟ್ಟಿದೆ. ಇದೂ ಕೆಲಸವಿಲ್ಲದುದರ ಪರಿಣಾಮ ಅಂತ ನೀವು ಅನ್ನಬಹುದು ಆದರೆ ನಾನು ಈ "ಕಟಕಟ" ಎಂಬ ಸದ್ದಿನ "ಅಕಟಕಟಾ" ಎಂಬುದು ಕೆಲಸದ ನಂತರದ್ದು ಅಂತ ಸಮರ್ಥಿಸಿಕೊಳ್ಳುತ್ತೇನೆ. ಓಕೆನಾ..?

5 comments:

ಸೀತಾರಾಮ. ಕೆ. / SITARAM.K said...

ಹೇ ಹೇ!!!!!

Mahesh Hegade said...

Nice one!

Remembered what they say about Bikinis. Bikini - what it reveals is interesting. What it conceals is vital.

Dileep Hegde said...

ನೀವು ಹೀಗೆ ಕಟಕಟನೆ ಕುಟ್ತಾ ಇರಿ.. ನಾವು ಅಕಟಕಟಾ ಅನ್ನದೆ ಓದ್ತೇವೆ.. ಮಜವಾಗಿದೆ..

Manjunatha Kollegala said...

"ಹೀಗೆಲ್ಲಾ ಇಲ್ಲಸಲ್ಲದ ಆಲೋಚನೆಗಳು ಪುಂಖಾನುಪುಂಕವಾಗಿ ಹೊರಹೊಮ್ಮತೊಡಗಿದಾಗ ನನ್ನಲ್ಲಿನ ಬುದ್ಧಿ ಬಡಕ್ಕನೆ ಎದ್ದು "ಮಗನೇ ಕೆಲಸವಿಲ್ಲದ ಬಡಗಿ ಮಗನ ಡ್ಯಾಶ್ ಕೆತ್ತಿದ್ದನಂತೆ" ಕೆಲಸ ನೋಡು ಹೋಗು ಅಂತ ಅಂದಿತು. ಬಚಾವಾದೆ" - :) solid!

makara said...

ಮಹೇಶ್ ಹೆಗಡೆಯವರ ಕಾಮೆಂಟನ್ನು ಓದಿದ ನಂತರ ಡಾ. ಜಿ.ಎಸ್. ಶಿವರುದ್ರಪ್ಪನವರು ಸಂಪಾದಿಸುರುವ ’ನುಡಿ-ಕಿಡಿ" ಯಲ್ಲಿ ಬರೆದ ಬಿಕನಿಯ ಚುಟುಕು ನೆನಪಾಯಿತು.

ಬಿಕನಿ ಎಂದರೆ,
ಏನೂ ಇಲ್ಲ ಮತ್ತು
ಸ್ವಲ್ಪವೇ ಇದೆ ಎನ್ನುವೆರಡರ
ಮಧ್ಯಂತರದ ಸ್ಥಿತಿ.