Wednesday, June 25, 2008

ಇಲ್ಲಿ ಭವಿಷ್ಯ ಹೇಳಲಾಗುತ್ತದೆ............!


ಇಲ್ಲಿ ಭವಿಷ್ಯ ಹೇಳಲಾಗುತ್ತದೆ............!. ಹೀಗೊಂದು ಬೋರ್ಡನ್ನು ನೀವು ಎಲ್ಲಿಯಾದರೂ ನೋಡಿಯೇ ನೋಡಿರುತ್ತೀರಿ. ಮತ್ತು ಆ ಕ್ಷಣದಲ್ಲಿ ಇದೊಂದು ಮೋಸದ ತಾಣ ಅಂತ ಅಂದುಕೊಂಡಿರಲೂ ಬಹುದು.ಅಲ್ಲಿ ಹಲವಾರು ಜನರ ಸಂತೆಯನ್ನು ನೋಡಿದ ನೀವು ಎಂತಹಾ ಮರುಳರಪ್ಪಾ ಇವರು, ನಮ್ಮ ಭವಿಷ್ಯ ನಿರ್ಮಾತೃಗಳು ನಾವೇ, ಇವನ್ಯಾರೋ ಭವಿಷ್ಯ ಹೇಳುತ್ತಾನೆ ಎಂದು ಜನ ಕ್ಯೂ ನಿಂತಿದ್ದಾರಲ್ಲ ಹುಚ್ಚರ ಸಂತೆ ಇದು. ನಮ್ಮ ದೇಶ ಉದ್ಧಾರವಾಗದು ಎಂದು ಗೊಣಗಿರುತ್ತೀರಿ. ಅನ್ ಎಜುಕೇಟೆಡ್ ಬ್ರೂಟ್ಸ್ ಎನ್ನುವ ತೀರ್ಮಾನಕ್ಕೆ ಬಂದಿರುತ್ತಿರಿ. ಸ್ವಲ್ಪ ಇರಿ ನೀವು ಇಂತಹ ಬೋರ್ಡ್ ಇರುವ ಹಾಗೂ ಬೋರ್ಡ್ ಇಲ್ಲದಿರುವ ಭವಿಷ್ಯಾಲಯಗಳು ಮೋಸದ ತಾಣ ಎಂದು ತೀರ್ಮಾನಕ್ಕೆ ಬರುವ ಸಮಯದಲ್ಲಿ ನಿಮ್ಮ ಉದ್ಯೋಗ,ಹಣಕಾಸಿನ ಪರಿಸ್ಥಿತಿ, ಹೆಂಡತಿ ಮಕ್ಕಳು ಸೇರಿದಂತೆ ಎಲ್ಲವೂ ಸೌಖ್ಯ. ಬಿ.ಪಿ, ಷುಗರ್ , ಅಸಿಡಿಟಿ, ಗೊರ ಗೊರ ಎನ್ನುವ ದಮ್ಮು ಮುಂತಾದ ಯಾವ ಖಾಯಿಲೆಯೂ ಇಲ್ಲ, ನೀವು ಹೇಳಿದಂತೆ ನಡೆಯುತ್ತಿದೆ ಪ್ರಪಂಚ. ಇದ್ದಕ್ಕಿದ್ದಂತೆ ಡ್ಯೂಟಿಗೆ ಹೋಗುತ್ತಿದ್ದ ಹೆಂಡತಿ ಸಿಡಿಮಿಡಿ ಪ್ರಾರಂಬಿಸುತ್ತಾಳೆ, ನಿನಗಿಂತ ನಾನೇನು ಕಮ್ಮಿ, ನನ್ನನ್ನು ಹರ್ಟ್ ಮಾಡಬೇಡ, ಮುಂತಾದ ರಗಳೆ ಶುರುವಾಗುತ್ತದೆ. ಚೂಟಿಯಾಗಿದ್ದ ಮಗಳಿಗೆ ಮಂಕು ಕವಿಯುತ್ತದೆ. ಆಫೀಸಿನ ಬಾಸ್ ಉಗಿಯುತ್ತಾನೆ. ನೀವೇ ಬಾಸ್ ಆಗಿದ್ದರೆ ಕಸ್ಟಮರ್ ಕೈ ಎತ್ತುತ್ತಾನೆ. ಶೇರು ಮಾರುಕಟ್ಟೆ ಕುಸಿದು ಒಂದೇ ವರ್ಷದಲ್ಲಿ ಡಬ್ಬಲ್ ಆಗಲೆಂದು ಹಾಕಿದ ಹಣ ಡಂ ಎನ್ನುತ್ತದೆ. ದುಡಿಯುತ್ತಿದ್ದ ಮನೆ ಮಗ ಬೈಕ್ ಅಪಘಾತ ಮಾಡಿಕೊಂಡು ಬೆನ್ನೆಲಬು ಮುರಕೊಂಡು ಶಾಶ್ವತ ಅಂಗವಿಕಲನಾಗುತ್ತಾನೆ. ಇಂತಹ ಪರಿಹಾರವಿಲ್ಲದ ಸಮಸ್ಯೆಗಳು ಎದ್ದು ಕುಣಿದಾಗ ತಾಳ್ಮೆ ಮಾಯವಾಗುತ್ತದೆ. ಆವಾಗ ಗರಿಬಿಚ್ಚಿಕೊಳ್ಳುವುದೇ ನನಗೇನೋ ಗ್ರಹಚಾರ ಹಿಡಿದಿದೆ, ಟೈಮ್ ಸರಿ ಇಲ್ಲ, ಎಂಬಂತಹ ವಾಕ್ಯಗಳು. ಇಂತಹ ವಾಕ್ಯಗಳು ಮನದಲ್ಲಿ ಸುಳಿದಾಗ ಆತ್ಮೀಯರ ಬಳಿಯೋ ಅಥವಾ ತೀರಾ ಆಳವಾದ ಸಮಸ್ಯೆಯಾದರೆ ಅಪರಿಚಿತರಾದರೂ ಸೈ, ಅವರ ಬಳಿಯೂ ಅಲವತ್ತು ಕೊಳ್ಳುತ್ತೀರಿ. ಆವಾಗ ಗಣಪತಿ ಹೋಮ ಮಾಡಿಸು, ಅಲ್ಲಾ ಎನ್ನು, ಅಮೆನ್ ಹೇಳು ಎನ್ನುವಂತಹ ಸಲಹೆ ಸಿಗುತ್ತದೆ. ಮತ್ತೂ ಮುಂದುವರೆದಾಗ ನನಗೊಬ್ಬ ಜ್ಯೋತಿಷಿ ಗೊತ್ತಿದ್ದಾರೆ, ಅವರು ಮಕ್ಕಾಕಮಕ್ಕಿ ಹೇಳುತ್ತಾರೆ. ಅಲ್ಲಿ ನಿನ್ನ ಸಮಸ್ಯೆಗೆ ಪರಿಹಾರ ಸಿಗುತ್ತದೆ ಹೋಗು ಅಥವಾ ಬಾ ಹೋಗೋಣ ಎನ್ನುವ ಸಲಹೆ ಕಾರ್ಯರೂಪಕ್ಕೆ ಇಳಿಯುತ್ತದೆ. ನೀವು ಆವಾಗ ಇಲ್ಲಿ ಭವಿಷ್ಯ ಹೇಳಲಾಗುತ್ತದೆ ಎನ್ನುವ ದ್ವಾರದ ಕೆಳಗೆ ಕ್ಯೂ ನಿಂತಿರುತ್ತೀರಿ, ಮತ್ತು ಹಾದಿಯಲ್ಲಿ ಹೋಗುವವರು "ಎಂತಹಾ ಮರುಳರಪ್ಪಾ ಇವರು, ನಮ್ಮ ಭವಿಷ್ಯ ನಿರ್ಮಾತೃಗಳು ನಾವೇ, ಇವನ್ಯಾರೋ ಭವಿಷ್ಯ ಹೇಳುತ್ತಾನೆ ........."ಮನಸ್ಸಿನಲ್ಲಿ ಹೇಳುತ್ತಾ ಹೋಗುತ್ತಿರುತ್ತಾರೆ.
ಕೊನೆಯದಾಗಿ: "ಇಲ್ಲ ಎಂತಹ ಸಮಸ್ಯೆ ಬಂದರೂ ನಾನು ಏಕಾಂಗಿಯಾಗಿ ಎದುರಿಸುತ್ತೇನೆ. ಎಲ್ಲಿಯೂ ಅಲವತ್ತುಕೊಳ್ಳುವುದಿಲ್ಲಾ"...... ಎನ್ನುವ ಜಾಯಮಾನದವರು ನೀವಾ. ಗೆದ್ದಿರಿ ನೀವು. ನಿಮಗಿಂತ ಹಿರಿಯರಿಲ್ಲ, ಕಂಗ್ರಾಟ್ಸ್ ....ಹ್ಯಾಪಿ ಲೈಫ್ ನಿಮ್ಮದು.

Tuesday, June 24, 2008

ಟಿ.ವಿ ೯ ಎಂಬ ಕಡ್ಡಿ ಚಾನಲ್ ಮತ್ತು ವರದಹಳ್ಳಿ ಶ್ರೀಧರರು


ಸಜ್ಜನಗಡದಿಂದ ಬಂದ ಸಜ್ಜನ ಶ್ರೀಧರ ಸ್ವಾಮಿಗಳ ತಪೋಭೂಮಿ ಸಾಗರದ ಸಮೀಪದ ವರದಹಳ್ಳಿ. ಅಲ್ಲಿ ಪ್ರಶಾಂತತೆ ನೆಲಸಿದೆ. ಗುಡ್ಡ ಬೆಟ್ಟಗಳ ನಡುವೆ ಶುದ್ಧವಾದ ಜುಳು ಜುಳು ಅಬ್ಬಿ ನೀರು ಹರಿಯುತ್ತದೆ. ಅದಕ್ಕೊಂದು ಮಾನವ ನಿರ್ಮಿತ ಗೋಮುಖ ಇದೆ. ಅದರ ಬಾಯಿಂದ ಬೀಳುವ ನೀರು ನೋಡಲು ಬೊಗಸೆಯಲ್ಲಿ ಹಿಡಿದು ಕುಡಿಯಲು ಆನಂದ. ಚಂದದ ಪುಷ್ಕರಣಿ ಇದೆ, ಅಲ್ಲಿ ತೀರ್ಥಸ್ನಾನ ಮಾಡಿದರೆ ಆನಂದ. ಗಿಡಮರಗಳಿವೆ ಹಾಗಾಗಿ ಶುದ್ಧಗಾಳಿ ಉಸಿರಾಡಲು ಪರಮಾನಂದ. ಪಾಠಶಾಲೆಯ ಮಕ್ಕಳ ವೇದಘೋಷ ಕೇಳಿಬರುತ್ತದೆ ಅದು ಕರ್ಣಾನಂದ. ಶ್ರೀಧರರು ಬದುಕಿದ ರೀತಿ ನಿಮಗೆ ಗೊತ್ತಿದ್ದರೆ ಅವರು ಓಡಾಡಿದ ಜಾಗಗಳಲ್ಲಿ ನೀವೂ ಓಡಾಡಿದರೆ ಮನಸ್ಸು ಪುಳಕಗೊಳ್ಳುತ್ತದೆ. ಇವೆಲ್ಲಾ ನೂರಕ್ಕೆ ನೂರು ಸತ್ಯ. ಆದರೆ ಮೊನ್ನೆ ಮೊನ್ನೆ ಟಿವಿ ನೈನ್ ಎಂಬ ಚಾನಲ್ಲಿನಲ್ಲಿ ಬಂತು ನೋಡಿ ಪವಾಡದ ಕತೆಗಳು ಅದು ಮಾತ್ರಾ... ಅಮ್ಮಾ. ಬೇಸರವಾಗುತ್ತದೆ.

ಕಳೆದ ಹದಿನೈದು ದಿವಸಗಳಿಂದ ವರದಳ್ಳಿ ಯಲ್ಲಿ ಜನಜಂಗುಳಿ. ಒಂದು ಗುರುವಾರ ಇಪ್ಪತ್ತು ಸಾವಿರ ಜನ ಸೇರಿದ್ದರಂತೆ. ಪ್ಲಾಸ್ಟಿಕ್ ಕ್ಯಾನ್ಗಳು ಸಾಗರದಲ್ಲಿ ಭರ್ಜರಿ ವ್ಯಾಪಾರವಂತೆ. ಗೋಮುಖದ ಅಬ್ಬಿ ನೀರನ್ನು ತುಂಬಿ ವ್ಯಾಪಾರ ಶುರುವಿಟ್ಟುಕೊಂಡಿದ್ದಾರಂತೆ. ಈ ನುಗ್ಗಾಟಕ್ಕೆ ಪ್ರಮುಖ ಕಾರಣ ಟಿವಿ ೯ ನಲ್ಲಿ ಬಂದ ವರದಿಗಳು. ತೀರ್ಥಸ್ನಾನ ಮಾಡಿದರೆ ಎಲ್ಲಾ ರೋಗಗಳು ಗುಣಮುಖವಾಗುತ್ತದೆಯಂತೆ. ಕೋಟಿಗಟ್ಟಲೆ ವ್ಯಾಪಾರದಲ್ಲಿ ಲಾಸ್ ಆದರೂ ಒಂದೇ ಒಂದು ಅವಾಜ್ ಪ್ರಾರ್ಥನೆ ಮಾಡಿದರೆ ಸಾಕು ವಾಪಾಸು ಮನೆಗೆ ಹೋಗುವುದರೊಳಗೆ ದಾರಿಯಲ್ಲಿಯೇ ನಿಮಗೆ ಯಾರಾದರೂ ಸಿಕ್ಕು ಸಮಸ್ಯೆ ಬಗೆ ಹರಿಯುತ್ತದೆಯಂತೆ. ರಾತ್ರಿ ಮೂರುಗಂಟೆಗೆ ಶ್ರೀಧರರು ಇಂದೂ ಪುಷ್ಕರಣೆಗೆ ಬಂದು ಸ್ನಾನ ಮಾಡಿಹೋಗುತ್ತಾರಂತೆ.(ಟಿ.ವಿ ಯಲ್ಲಿ ಈ ಹೇಳಿಕೆ ನೀಡಿದವರಿಗೆ ತಾನು ಎಂತಹ ಬಾಲಿಶ ಹೇಳಿಕೆ ನೀಡುತ್ತಿದ್ದೇನೆಂದು ಅರ್ಥವೇ ಆಗಿಲ್ಲ ವೆಂದು ಕಾಣಿಸುತ್ತದೆ ಕಾರಣ, ಶ್ರೀಧರರು ಇಂದೂ ಬೆಳಗಿನ ಜಾವ ಬಂದು ಹೋಗುತ್ತಾರೆ ಎಂದರೆ ಅವರಿಗೆ ಮುಕ್ತಿಯೇ ಸಿಕ್ಕಿಲ್ಲ ಎಂಬ ಅಪಾರ್ಥ ನೀಡುತ್ತದೆ) ಪಾದುಕೆಯ ಕಟ ಕಟ ಶಬ್ಧ ಆಲಿಸಿದರೆ ಕೇಳುತ್ತದೆಯಂತೆ. ಮಾತಿಲ್ಲದವರಿಗೆ ಮಾತು ಬರುತ್ತದೆ. ಸತ್ತವರು ಬದುಕಿ ಬರುತ್ತಾರೆ. ಮುಂತಾದ ಅಂತೆಕಂತೆಗಳನ್ನು ಸತ್ಯವೆಂಬಂತೆ ಬಿಂಬಿಸಿದ ವರದಿ. ಪಾಪ ಅಮಾಯಕ ಜನರು ಅಳಿದುಳಿದ ಹಣವನ್ನು ಬಾಚಿಬಳಿದುಕೊಂಡು ವಾಸಿಯಾಗದ ಖಾಯಿಲೆಗಳ ದೇಹವನ್ನು ಹೊತ್ತು, ದೂರದೂರದ ಊರಿನಿಂದ ವರದಹಳ್ಳಿಯತ್ತ ನುಗ್ಗತೊಡಗಿದ್ದಾರೆ. ನಂಬಿಕೆ ಕೆಲಸ ಮಾಡುತ್ತದೆ ನಿಜ ಆದರೆ ಕುರುಡು ನಂಬಿಕೆ ಹಣವನ್ನು ವ್ಯರ್ಥ ಹಾಗೂ ಸಮಸ್ಯೆಯನ್ನು ದ್ವಿಗುಣ ಮಾಡುತ್ತದೆ. ಟಿವಿ ನೈನ್ ವರದಿಗಾರ ವಿಚಿತ್ರ ಅಂಗಚೇಷ್ಟೆಯ ಮುಖೇನ ಹಾಗೂ ವಿಷಿಷ್ಠ ಧ್ವನಿಯ ಮುಖಾಂತರ ಬಿಂಬಿಸಿದ್ದು ಅದೆಷ್ಟು ಪ್ರಭಾವ ಬೀರಿದೆಯೆಂದರೆ ತಮ್ಮ ಎಲ್ಲಾ ಸಮಸ್ಯೆಯೂ ಬಗೆಹರಿಯಿತು ಎಂದು ಜನ ನಂಬಿದ್ದಾರೆ. ವರದಹಳ್ಳಿಗೆ ಬಂದು ಹೋದ ನಂತರ ಯಾವಬದಲಾವಣೆಯೂ ಆಗದಿದ್ದರೆ ಅವರಿಗೆ ಇದೊಂದು ಮೋಸದ ತಾಣ ಎಂಬ ಭಾವನೆ ಬೆಳೆಯುತ್ತದೆ. ಆದರೆ ಶ್ರೀಧರರ ಪ್ರಕಾರ "ಸನ್ನಡತೆ ಸದ್ಬುದ್ದಿ ಸದಾಚಾರ ನಮ್ಮಲ್ಲಿ ಇದ್ದರೆ ಅದಕ್ಕೆ ಭಗವಂತ ಯೋಗ್ಯತೆಯನ್ನು ತಾನಾಗಿಯೇ ಕರುಣಿಸಬಲ್ಲ. ದುರಾಸೆ ದ್ವೇಷಕ್ಕೆ ಆತ ಮೌನಿ. ರೋಗರುಜಿನಗಳು, ಆರ್ಥಿಕ ಸಮಸ್ಯೆಗಳು, ಮುಂತಾದವುಗಳನ್ನು ತೀರ್ಥ ಪ್ರೋಕ್ಷಿಸಿ ಮಾಯ ಮಾಡಲಾಗದು. ನನ್ನ ಬಳಿ ಬರುವ ಭಕ್ತರು ತಮಗೆ ಹಣ ಕರುಣಿಸಿ, ನನ್ನ ಮನೆಯ ಆಕಳು ಹಾಲು ನೀಡುತ್ತಿಲ್ಲ, ನನಗೆ ಭೋಗ ಕರುಣಿಸಿ, ಎಂದು ಬರುತ್ತಾರೆ. ಆದರೆ ನಾನು ಸನ್ಯಾಸಿ ನನ್ನ ಬಳಿ ಮುಕ್ತಿಕೊಡಿ ಎಂದು ಪ್ರಾಂಜಲ ಮನಸ್ಸಿನಿಂದ ಇಲ್ಲಿಯವರೆಗೆ ಯಾರೂ ಬಂದಿಲ್ಲ. ನನ್ನ ತಪೋಶಕ್ತಿ ನನಗೆ ಮುಕ್ತಿ ನೀಡಬಹುದು ಆದರೆ ಮಿಕ್ಕವರ ವೈಯಕ್ತಿಕ ಸಮಸ್ಯೆಗೆ ಅವರೂ ಸನ್ಮಾರ್ಗದಲ್ಲಿ ನಡೆಯಬೇಕು. ನನ್ನಿಂದ ಪವಾಡಗಳು ನಡೆಯುವುದಿಲ್ಲ." ಎಂದು ಹೇಳುತ್ತಿದ್ದರಂತೆ. ಹಾಗೂ ಪ್ರಾಮಾಣಿಕ ಮನಸ್ಸಿನಿಂದ ಪ್ರಾರ್ಥಿಸುವ ಭಕ್ತರಿಗೆ ಮಾನಸಿಕ ಧೈರ್ಯ ತುಂಬುತ್ತಿದ್ದರಂತೆ. ಸಾತ್ವಿಕ ರೀತಿಯಲ್ಲಿ ಬದುಕುವ ದಾರಿಯನ್ನು ಉಪನ್ಯಾಸಗಳ ಮುಖಾಂತರ ಬೋಧಿಸುತ್ತಿದ್ದರಂತೆ. ಹೀಗಾಗಿ ಅವರು ಮುಕ್ತರಾದನಂತರವೂ ಕ್ಷೇತ್ರ ಅವರ ಸನ್ಮಾರ್ಗದಲ್ಲಿ ನಡೆಯುತ್ತಿತ್ತು. ಅಂದು ಶ್ರೀಧರರು ಅದೆಷ್ಟು ಸಜ್ಜನರಾಗಿದರು ಎನ್ನುವುದಕ್ಕೆ ಅವರಬಳಿ ಯಾರಾದರೂ ಗಂಡುಹೆಣ್ಣಿನ ಜಾತಕ ತೋರಿಸಿ "ಮದುವೆ ಮಾಡಿಕೊಳ್ಳಬಹುದಾ... " ಎಂದು ಕೇಳಿದರೆ. "ತಮ್ಮಾ ಜಾತಕ ನಿನ್ನ ಪುರೋಹಿತರಿಗೆ ತೋರಿಸು, ಅದು ಅವರ ಕೆಲಸ, ಒಳ್ಳೆಯ ಕೆಲಸಕ್ಕೆ ಭಗವಂತನ ಆಶೀರ್ವಾದ ಇದೆ" ಎನ್ನುತ್ತಿದ್ದ್ರಂತೆ. ಅವರು ಭವಿಷ್ಯ, ಜಾತಕ ಮುಂತಾದವುಗಳ ತಂಟೆಗೆ ಹೋದವರಲ್ಲ ಎಂದು ಅವರನ್ನು ಹತ್ತಿರದಿಂದ ನೋಡಿದ ಶಿಷ್ಯರೊಬ್ಬರು ಹೇಳಿದರು. ಈಗ ಮಾದ್ಯಮದವರ ಅತಿಮಾನುಷ ಪ್ರಚಾರದಿಂದ ವರದಹಳ್ಳಿಯನ್ನು ಮಾಂತ್ರಿಕ ಶಕ್ತಿಯ ತಾಣ ಮಾಡುವ ಯತ್ನ ನಡೆದಿದೆ. ಪವಾಡಗಳ ತಾಣವಾಗುವತ್ತ ಹೆಜ್ಜೆ ಹಾಕಿದೆ. ಇದರಿಂದಾಗಿ ನೆಮ್ಮದಿಯ ತಾಣವಾಗಿದ್ದ ಕ್ಷೇತ್ರ ವ್ಯಾಪಾರೀಕರಣದ ಪೇಟೆಯಾಗುವ ದಿನ ದೂರವಿಲ್ಲ. ಆದರೆ ಟಿವಿಯಲ್ಲಿ ನ ವರದಿಯಲ್ಲಿ ಶ್ರೀಧರರ ಆಶ್ರಮದ ಆರಂಭದಿಂದಲೂ ಬೆಳವಣಿಗೆಗೆ ಕಾರಣೀಕರ್ತರಾದ ಶಂಕರನಾರಾಯಣ ರಾಯರಂತರ ನಿಜವಾದ ಭಕ್ತರ ಸಂದರ್ಶನ ಇಲ್ಲದಿರುವುದು ಅನುಮಾನ ಹುಟ್ಟಿಸುತ್ತದೆ. ಇದು ಪ್ರಚಾರಕ್ಕೆ ಮಾಡಿದ ತಂತ್ರವೇ? ಎಂಬ ಪ್ರಶ್ನೆ ಕಾಡದಿರದು. ಹಾಗೇನಾದರೂ ಪ್ರಚಾರಕ್ಕೆ ಮಾಡಿದ ತಂತ್ರವಾದರೆ ವರದಹಳ್ಳಿ ಮತ್ತೊಂದು ಕಮರ್ಶಿಯಲ್ ಕೇಂದ್ರವಾಗಲು ಹೆಚ್ಚುದಿನ ಬಾಕಿ ಇಲ್ಲ. ಶ್ರಿಧರರೇ ಕಾಯಬೇಕು ಕ್ಷೇತ್ರವನ್ನು....!

ನಮಃ ಶಾಂತಾಯ ದಿವ್ಯಾಯ ಸತ್ಯ ಧರ್ಮ ಸ್ವರೂಪಿಣೆ ,ಸ್ವಾನಂದಾಮೃತ ತೃಪ್ತಾಯ ಶ್ರೀಧರಾಯ ನಮೋ ನಮ:

ಎಂಬ ಮಂತ್ರ ಬಾಲ್ಯದಿಂದಲೇ ಹೇಳುತ್ತಾ ಬಂದಿರುವ ಸಾವಿರಾರು ಭಕ್ತರಿಗೆ ಅದೊಂದೇ ಮಂತ್ರ ಸಾಕು ಶ್ರೀಧರರು ಎಂತಹ ಸನ್ಯಾಸಿ ಎಂದು ತಿಳಿಯಲು. ಆದರೆ ಇಂದಿನ ಜನ ಬಿಂಬಿಸಿಹೊರಟಿರುವ ಮಾಂತ್ರಿಕ ಶಕ್ತಿಯ ಶ್ರೀಧರರು ಅಲ್ಲಿ ಎಂದೂ ಇರಲಿಲ್ಲ ಇಂದೂ ಇಲ್ಲ ಮುಂದೂ ಇರುವುದಿಲ್ಲ ಎಂಬುದು ಹಿರಿಯರ ನುಡಿ. ನಂಬಿ ಕೆಟ್ಟವರಿಲ್ಲವೋ ನಿಜ. ಆದರೆ ಕೆಟ್ಟದ್ದನ್ನು ನಂಬಬಾರದು. ಹಾಗೆ ನಂಬಿದಲ್ಲಿ ಕೆಟ್ಟುಹೋಗುವುದು ಖಂಡಿತ...

ಕೊನೆಯದಾಗಿ :ನಮ್ಮ ಕಡೆ ಸಹಜವಾಗಿ ನಡೆಯುತ್ತಿರುವ ವಿಷಯಗಳನ್ನು ದೊಡ್ಡದು ಮಾಡುವ ಕೆಲಸಕ್ಕೆ ಕಡ್ಡಿ (ಫಿಟ್ಟಿಂಗ್) ಇಡುವುದು ಅನ್ನುತ್ತಾರೆ. ಟಿ.ವಿ ನೈನ್ ಗೆ ಕಡ್ಡಿಚಾನೆಲ್ ಎಂಬ ಹೆಸರು ಇತ್ತೀಚೆಗೆ ಹರಿದಾಡುತ್ತಿದೆ. ಸಣ್ಣದ್ದನ್ನು ದೊಡ್ಡದ್ದು, ಇಲ್ಲದ್ದನ್ನು ಇದ್ದಂತೆ ಮಾಡುವುದು ಅವರ ವೃತ್ತಿ. ಆದರೆ ಅಮಾಯಕರು ಸಿಕ್ಕಿಹಾಕಿಕೊಳ್ಳುವುದು ಯಾರ ವೃತ್ತಿಯೋ ಅರ್ಥವಾಗುತ್ತಿಲ್ಲ. ಪ್ರಪಂಚ ಇದು ಅವರವರ ದೃಷ್ಟಿಯಲ್ಲಿ ಅವರವರು ಸರಿ.


ಅಂತಿಮವಾಗಿ: ನಾನು ಈ ಬ್ಲಾಗ್ ಬರೆದು ಮುಗಿಸುತ್ತಿದ್ದಂತೆ ಕಡ್ಡಿ ತಂಡ ರಾಮನಗರದ ದರ್ಗಾದಲ್ಲಿ ದಿವ್ಯ ಪುರುಷ, ಕೇಳಿದ್ದನ್ನು ನೀಡುತ್ತಾನೆ, ಮಕ್ಕಳಿಲ್ಲದವರಿಗೆ ಮಕ್ಕಳು, ಹಣವಿಲ್ಲದವರಿಗೆ ಹಣ, ಎಂದು ಮನುಷ್ಯರು ಎಂದೂ ಮಾಡದ ಚೇಷ್ಟೆಗಳನ್ನು ಮಾಡುತ್ತಾ ಕೈ ಆಡಿಸುತ್ತಾ ಆಳವಾದ ದನಿಯಲ್ಲಿ ಕೂಗುತ್ತಿವೆ. ಆ ದೇವರೆ ............ ನಮ್ಮ ಜನರನ್ನು . ಕಾಪಾಡಬೇಕು

Sunday, June 22, 2008

ನಾನು ಮತ್ತು ಕನ್ನಡ ಮತ್ತು ಹಳ್ಳಿ ಮತ್ತು ದುಡ್ಡು.......



ನಾನು ಕನ್ನಡಾಭಿಮಾನಿಯಾಗಲು ಮುಖ್ಯ ಕಾರಣ ಇಂಗ್ಲೀಷ್ ಬಾರದಿರುವುದು. ಬೀಚಿಯವರ ತಿಮ್ಮನಂತೆ ನನಗೆ ಇಂಗ್ಲೀಷ್ ಕಹಿ. ಆತನಿಗೂ ಅದೇ ಸಮಸ್ಯೆ ಯಂತೆ. ಪಿ ಯು ಟಿ ಎಂದರೆ ಪುಟ್ ಸರಿ ಆದರೆ ಸಿ ಯು ಟಿ ಕುಟ್ ಆಗಬೇಕಿತ್ತು ಅದೇಗೆ ಕಟ್ ಆಯಿತು? ಎಂಬ ಪ್ರಶ್ನೆ ಕಾಡಿ ಅಂತಿಮದಲ್ಲಿ ಇಂಗ್ಲೀಷ್ ಭಾಷೆಯೇ ಸರಿ ಇಲ್ಲ ಎಂಬ ತೀರ್ಮಾನಕ್ಕೆ ಬಂದಿದ್ದನಂತೆ.ನನಗೂ ಹಾಗೆಯೆ. ನನಗೆ ಇಂಗ್ಲೀಷ್ ಓದಿದ್ದು ಅರ್ಥವಾಗುತ್ತೆ. ದರಿದ್ರದ್ದು ಬರೆಯಲು ಬರುವುದಿಲ್ಲ ಮತ್ತು ಮಾತನಾಡಲು ಹೆದರಿಕೆ. ನಿಜವಾದ ಕನ್ನಡಾಭಿಮಾನಿಗಳೆಂದರೆ ಬಾಳೆಹೊಳೆ ಪೆಜತ್ತಾಯ, ಅಮೆರಿಕಾದಿಂದ ಬರೆಯುವ ಶ್ರೀವತ್ಸ್ ಜೋಷಿ, ಅಮೇರಿಕಾದ
ತುತ್ತೂರಿ ಎಂಬ ಪತ್ರಿಕೆಯ ಮೂಲಕ ಕನ್ನಡ ಕಲಿಸುತ್ತಿರುವ ವಿಶ್ವೇಶ್ವರ ದೀಕ್ಷಿತ್, ದಟ್ಸ್ ಕನ್ನಡದ ಶ್ಯಾಮ್ ಹಾಗೂ ಇಂಗ್ಲೀಷ್ ಚೆನ್ನಾಗಿ ಗೊತ್ತಿದ್ದೂ ಕನ್ನಡದಲ್ಲಿ ಬ್ಲಾಗ್ ಬರೆಯುವ ಶುಶ್ರುತ ದೊಡ್ದೇರಿ, ಚೈತ್ರರಶ್ಮಿಯ ಸಂಪಾದಕ ರಾಮಚಂದ್ರ ಹೆಗಡೆ, ಯಂತಹ ನೂರಾರು ಜನ. ಅವರಿಗೆಲ್ಲಾ ಚಕಚಕನೆ ಮಾತನಾಡಲು ಇಂಗ್ಲೀಷ್ ಬರುತ್ತದೆ. ಪಟಪಟನೆ ಬರೆಯಲು ಆಂಗ್ಲ ಭಾಷೆ ಬರುತ್ತದೆ. ಆರ್ಥಿಕ ಲಾಭಕ್ಕಾಗಿ ಕನ್ನಡವನ್ನು ಅವಲಂಬಿಸಬೇಕಾದ ದರ್ದು ಇಲ್ಲ. ಆದರೂ ತಮ್ಮ ಸಮಯವನ್ನು ಕನ್ನಡಕ್ಕಾಗಿ ,ಮೀಸಲಿಟ್ಟಿದ್ದಾರೆ.

ನಾನು ಹಳ್ಳಿಯ ಅಭಿಮಾನಿಯಾಗಲು ಮುಖ್ಯ ಕಾರಣ ಪೇಟೆಯಲ್ಲಿ ಇರಲು ಅವಕಾಶವಿಲ್ಲದಿರುವುದು. ಕೆಸರು ಕೆಸರು ರಸ್ತೆ, ಜಟಿ ಜಟಿ ಮಳೆ, ಪದೆ ಪದೆ ಕೈಕೊಡುವ ಕರೆಂಟು, ರಸ್ತೆಯಿಂದ ಶುರುವಾಗಿ ಟೆಲಿಪೋನ್ ದುರಸ್ತಿಯವರೆಗೂ ತೆರಿಗೆ ಕಟ್ಟುವ ನಾವೇ ಒದ್ದಾಡಬೇಕಾದ ಪರಿಸ್ಥಿತಿ. ಒಂದು ಸಾಸಿವೆ ಕಾಳು ಬೇಕಾದರೂ ೬ ಕಿಲೋಮೀಟರ್ ದೂರಕ್ಕೆ ಓಡಬೇಕಾದ ಸ್ಥಿತಿ. ವರ್ಷದಲ್ಲಿ ಒಂಬತ್ತು ತಿಂಗಳು ಖಾಲಿ ಜೇಬು. ಯಾರಿಗೆ ಬೇಕು ಅನ್ನಿಸಿಬಿಡುತ್ತದೆ. ಓದುವ ಕಾಲದಲ್ಲಿ ಓದಿಕೊಂಡಿದ್ದರೆ ಪಟ್ಟಣ ಸೇರಿ ಹಾಯಾಗಿ ಇರಬಹುದು ಎಂದು ಹಲವುಬಾರಿ ಅನ್ನಿಸಿಬಿಡುತ್ತದೆ. ಡಾಲರ್ ಅಥವಾ ಯೆನ್ ಅಥವಾ ರಿಯಾಲ್ ರೂಪದಲ್ಲಿ ಸಂಬಳ ಎಣಿಸಿ ಅದನ್ನು ರೂಪಾಯಿಗೆ ಪರಿವರ್ತಿಸಿ ಖುಷಿ ಪಟ್ಟು ಹೊಂಡಾ ಅಥವಾ ಸುಜುಕಿ ಕಾರಿನಲ್ಲಿ ಖತ್ರೀನಾ ಕೈಫ್ ಕೆನ್ನೆಯಂತಹ ಟಾರ್ ರಸ್ತೆಯಲ್ಲಿ ಹೆಂಡತಿ ಮಗನನ್ನು ಕುಳ್ಳಿಸಿಕೊಂಡು ಝೊಂಯ್ಯನೆ ಹೋಗಬಹುದಿತ್ತು. ಆಗ ಮಗ ಇಂಗ್ಲೀಷಿನಲ್ಲಿ ಕೇಳುವ ಪ್ರಶ್ನೆಗೆ ಅವನ ಅಮ್ಮ ನೀಡುವ ಉತ್ತರ ಸರಿಯಾಗದೆ ನಾನು ಪಟಪಟನೆ ಉತ್ತರಿಸಬಹುದಿತ್ತು ಅಂತ ಅನ್ನಿಸುತ್ತದೆ. ಅಲ್ಲಿನ ಅನುಭವವನ್ನು ಕನ್ನಡ ಪತ್ರಿಕೆಗೋ ಅಥವಾ ಬ್ಲಾಗ್ ಬರೆದಿದ್ದರೆ "ಅಂವ ಅಮೆರಿಕಾದಲ್ಲಿದ್ದರೂ ಕನ್ನಡದ ಮೇಲೆ ಎಷ್ಟೊಂದು ಅಭಿಮಾನ ನೋಡು ಅಂತ ಅನ್ನಿಸಿಕೊಳ್ಳಬಹುದಿತ್ತು. ಈ ಪಟ್ಟಣದ ಲೈಫ್ ಎಂದರೆ ಯಾಂತ್ರೀಕೃತ ಬದುಕು, ಇಲ್ಲಿ ಏಕತಾನತೆ, ಹಳ್ಳಿಯಲ್ಲಾದರೆ ಸೊಗ ಡಿದೆ ಎಂಬಂತಹ ಬೊಗಳೆ ಭಾಷಣ ಪಟ್ಟಣದಲ್ಲಿ ಕುಳಿತು ಮಾಡಬಹುದಿತ್ತು. ಹಳ್ಳಿಯ, ರೈತರ ಜ್ವಲಂತ ಸಮಸ್ಯೆಯ ಕುರಿತು ಸಂಜೆ ಹೊತ್ತಿನಲ್ಲಿ ಚರ್ಚೆ ಮಾಡಬಹುದಿತ್ತು. ಇರಲಿ
ನನಗೆ ಹಣವೆಂದರೆ ಒಂಥರಾ ಅಲರ್ಜಿಯಾಗಲು ಮುಖ್ಯ ಕಾರಣ ನನ್ನಬಳಿ ಹಣವಿಲ್ಲದಿರುವುದು. ಹಾಗಾಗಿ ಶ್ರೀಮಂತಿಕೆ ಇದ್ದರೆ ಸುಖವಿಲ್ಲ, ಬಡತನದಲ್ಲಿ ಆನಂದವಿದೆ ಎನ್ನುವ ಭಾಷಣ ಮಾಡುವುದನ್ನು ಅಭ್ಯಾಸ ಮಾಡಿದ್ದೇನೆ. ವರ್ಷಕ್ಕೆ ಒಂದೂ ಕಾಲು ಕೋಟಿ ರೂಪಾಯಿ ಸಂಬಳ ವೇಣುವಿಗಂತೆ ಎಂಬ ಸುದ್ದಿ ,ಹಾಗೂ ನಾನು ಎತ್ತಿ ಆಡಿಸಿದ ರಮ್ಯಾ "ಮಾವ ಎನ್ನ ಸಂಬಳ ವರ್ಷಕ್ಕೆ ಐದು ಲಕ್ಷ" ಎಂದಾಗ, ನನ್ನ ಕ್ಲಾಸ್ಮೇಟ್ ರಾಜೇಶನ ಮನೆಯ ವ್ಯಾಲ್ಯೂ ಒಂದು ಕೋಟಿಯಂತೆ ಎಂದಾಗ, ಅಬ್ಬಬ್ಬ ಅನ್ನಿಸುತ್ತದೆ. ಇಡೀ ವರ್ಷಕ್ಕೆ ಒಂದು ಲಕ್ಷವನ್ನೂ ಎಣಿಸಲಾಗದ ನಾನು ಹಣ ಅಂತಹ ಮಹತ್ವ ಅಲ್ಲ ಎನ್ನುತ್ತೇನೆ. ಅಮೆರಿಕಾದಲ್ಲಿಯೋ, ದುಬೈ ನಲ್ಲಿಯೋ, ಬೆಂಗಳೂರಿನಲ್ಲಿಯೋ ಇರುವ ನನ್ನ ಪರಿಚಯದವರಿಗೆ ಕೋಟಿಗಟ್ಟಲೆ ಆಸ್ತಿ ಎಂದಾಗ ಅಮ್ಮಾ ಎನ್ನುವ ಉದ್ಗಾರ ತೆಗೆಯುತ್ತೇನೆ. ಹಾಗಂತ ನಾನೂ ಹಣ ಸಂಪಾದಿಸಲು ಬಹಳ ಒದ್ದಾಡಿದ್ದೇನೆ. ಅದು ನನ್ನ ಕೈಯಲ್ಲಿ ಆಗದ ಕೆಲಸ ಎಂದು ಸುಸ್ತಾಗಿ ಸುಮ್ಮನುಳಿದಿದ್ದೇನೆ. ಆವಾಗಲೇ ಶುರುವಾಗಿದ್ದು ಬ್ಲಾಗ್ ಬರೆಯುವುದು, ಕಟ್ಟೆ ಪತ್ರಿಕೆ ನಡೆಸುವುದು, ಅರಣ್ಯ ಬೆಳೆಸುವುದು, ಮುಂತಾದ ಕೆಲಸವಿಲ್ಲದ ಕೆಲಸಗಳು. ಹಾಗೂ ಪರಿಚಯದ ನೂರೈವತ್ತು ಜನರಿಗೆ ಅದರ ಲಿಂಕ್ ಮೈಲ್ ಮಾಡುವುದು. ಜನ ಓದುತ್ತಾರೆ ಅಂದುಕೊಳ್ಳುವುದು. (ಕಳುಹಿಸಿದ ಲಿಂಕ್ ಬಹಳಷ್ಟು ಜನರ ಮೈಲ್ ಬಾಕ್ಸಿನಲ್ಲಿ ಡಿಲೀಟ್ ಅಗುತ್ತದೆಯೆಂದು ಗೊತ್ತಿದ್ದರೂ). ಹೀಗೆ ನಡೆಯುತ್ತಿದೆ ಜೀವನ.
ಮಕ್ಕಳಿಗಾದರೂ ಇಂಗ್ಲೀಷ್ ಕಲಿಸಿ ಹೊರಗಡೆ ಅಟ್ಟೋಣ ಅಂದುಕೊಂಡರೆ , ಅವರ ಬಾಯಲ್ಲಿ ಟಸ್ ಪುಸ್ ಅಂತ ಇಂಗ್ಲೀಷ್ ನಲ್ಲಿ ಮಾತನಾಡಿಸೋಣ ಅಂದರೂ ಇಲ್ಲಿ ಆಗುತ್ತಿಲ್ಲ, ಅಲ್ಲಿ ಅವಕಾಶವಿಲ್ಲ ಹಾಗಾಗಿ ಇದೇ ಸೂಪರ್ ಇದೇ ಸೃಜನಶೀಲತೆ ಮತ್ತು ಇದೇ ಸ್ವರ್ಗ. ಮತ್ತು ಇದೇ ಜೀವನ.