Saturday, January 31, 2009

ಭತ್ತವ ನುಂಗುತ್ತಿರುವ ಅಡಿಕೆಗಳು
ತೇನವಿನಾ ತೃಣಮಪಿನಚಲತಿ ಅಂತ ಭಗವಂತನ ಕುರಿತು ಸಂಸ್ಕೃತದಲ್ಲಿ ವಾಕ್ಯವೊಂದಿದೆ. ಇರಬಹುದು ಆತನ ಅಣತಿಯಿಲ್ಲದೆ ಒಂದು ಹುಲ್ಲುಕಡ್ಡಿಯೂ ಚಲಿಸದೇ ಇರಬಹುದು ಅಥವಾ ಹುಲ್ಲುಕಡ್ಡಿ ಚಲಿಸಿದ್ದಕ್ಕೆ ಭಗವಂತನನ್ನು ಹೆಸರಿಸಬಹುದು ಆದರೆ ನಾನು ಇಲ್ಲಿ ಹೇಳುತ್ತಿರುವುದು ಆ ಭಗವಂತನಲ್ಲ ಆಹಾರ ಧಾನ್ಯ ಬೆಳೆಯುವ ರೈತನೆಂಬ ಭಗವಂತನ ಕುರಿತು. ಹಾಗಾಗಿ ಇಲ್ಲಿ ನನ್ನ ಪಾಲಿಗೆ ರೈತನೇ ಭಗವಂತ. ( ಇರಲಿ ಹೀಗೆ ಹೇಳುತ್ತಾ "ಅವನೆ ನೋಡು ಅನ್ನದಾತ ಹೊಲದಿ ದುಡಿವೆ ದುಡಿವನು ನಾಡಜನರು ಬದುಕಲೆಂದು ಧವಸ ಧಾನ್ಯ ಬೆಳವನು" ಎಂದು ರೈಲು ಹಚ್ಚುತ್ತಾ ಬಂದಾಗಿದೆ. ಈಗ ಅದು ಸಾಲದು ಎಂದು ಭಗವಂತ ಅಂಬೋ ತುಸು ಹೆಚ್ಚಿನ ಲೆವಲ್ ನೀಡಬೇಕಾಗಿದೆ.)

ರೈತರುಗಳಲ್ಲಿ ಎರಡು ಬಗೆಯವರು ಮೊದಲನೆಯವರು ಆಹಾರ ಧಾನ್ಯ ಉತ್ಪಾದಕರು ಎರಡನೆಯವರು ತೋಟಗಾರಿಕಾ ಬೆಳೆಗಳ ಉತ್ಪಾದಕರು. ನಮ್ಮ ಭಾಗದಲ್ಲಿ ಕ್ರಮವಾಗಿ ಭತ್ತ ಬೆಳೆಯುವವರು ಹಾಗೂ ಅಡಿಕೆ ಬೆಳೆಯುವವರು ಎಂದು ವರ್ಗೀಕರಿಸಲಾಗಿದೆ. ಅಡಿಕೆ ಬೆಳೆಯೆಂಬ ಬೆಳೆಗಾರರು ಲಾಗಾಯ್ತಿನಿಂದಲೂ "ಈ ವರ್ಷ ಬದುಕುವುದು ಕಷ್ಟ ಅಡಿಕೆಗೆ ದರ ಇಲ್ಲ, ಇದೇ ರೀತಿ ಮುಂದುವರೆದರೆ ಹೇಗೋ...!" ಎಂಬ ಮಾತುಗಳನ್ನಾಡುತ್ತಾ ಯಾವಗಲೂ ಭವಿಷ್ಯದ ಜೀವನದ ಬಗ್ಗೆ ನೆಗೇಟೀವ್ ಯೋಚನೆ ಮಾಡುತ್ತಾ ಬಂದಿರುವವರು. ಹೀಗೆ ಅಷ್ಟು ಬೇಡದ ಯೋಚನೆಗೆ ಸಮಯ ಸಿಕ್ಕುತ್ತದೆ. ಆದರೆ ಭತ್ತದ ಬೆಳೆಗಾರನ ಸ್ಥಿತಿ ಹಾಗಲ್ಲ. ಆತನಿಗೆ ಹೀಗೆಲ್ಲಾ ಭವಿಷ್ಯದ ಬಗ್ಗೆ ಯೋಚಿಸಲು ಸಮಯವೇ ಇಲ್ಲ. ಬೆಳೆದ ಭತ್ತ ಗಟ್ಟಿ ಊಟಮಾಡಿದರೆ ಆರುತಿಂಗಳಿಗೆ, ಸ್ವಲ್ಪ ಅರೆಹೊಟ್ಟೆ ಯಾದರೆ ಇನ್ನೊಂದು ತಿಂಗಳು ಜಾಸ್ತಿ ಬರುತ್ತದೆ. ಮಿಕ್ಕ ಸಮಯದಲ್ಲಿ ಆತ ಕೂಲಿನಾಲಿಯನ್ನು ಅವಲಂಬಿಸಬೇಕಾಗುತ್ತದೆ. ಇದು ಮಲೆನಾಡಿನ ಭತ್ತ ಬೆಳೆವ ರೈತನ ಪರಿಸ್ಥಿತಿ. ಅವ ನಿಜವಾದ ಅನ್ನದಾತ.! ಆತನ ಬೆಳೆ ಮಳೆ ನಂಬಿ ಬೆಳೆ. ಕೈ ಕೆಸರಾದರೆ ಬೇರೆಯವರ ಬಾಯಿ ಮೊಸರು ಎಂಬ ಗಾದೆ ಅವನಿಗಾಗಿಯೇ.
ಬಯಲು ಸೀಮೆಯ ಆಹಾರ ಧಾನ್ಯದ ಗದ್ದೆಗಳೆಲ್ಲ ಅಡಿಕೆ ಭಾಗಾಯ್ತು ಆಗುತ್ತಾ ಹೊರಟಿತು . ಪಟ್ಟಣದಲ್ಲಿ ಸಾಪ್ಟವೇರ್ ಡಾಕ್ಟರ್ ಲಾಯರ್ ಗಳೆಲ್ಲಾ ಟ್ಯಾಕ್ಸ್ ಉಳಿಸಲು ಹಳ್ಳಿಗಳಲ್ಲಿ ತೋಟ ಎಬ್ಬಿಸುತ್ತಿದ್ದಾರೆ. ಅದು ಅವರಿಗೆ ಉಪ ಆದಾಯ. ಇಂತಹ ಪರಿಸ್ಥಿತಿಯಲ್ಲಿ ವರ್ಷದಿಂದ ವರ್ಷಕ್ಕೆ ಹಣದ ಬೆಳೆಯ ಹಿಂದೆ ಅನ್ನದಾತರ ದಂಡು ಹೊರಟಿತು. ಯಾರಿಗೆ ಹಣದಾಸೆ ಇರುವುದಿಲ್ಲ. ಅದು ಸಹಜ. ಆದರೆ ಈಗ ಐದು ವರ್ಷದಿಂದ ನಿಜವಾಗಿಯೂ ಹಣದ ಬೆಳೆಯಾದ ಅಡಿಕೆಯ ಸ್ಥಿತಿ ವರ್ಷದಿಂದ ವರ್ಷಕ್ಕೆ ಅಧೋಗತಿಯತ್ತ ಹೊರಟಿದೆ. ಭತ್ತದ ಗದ್ದೆ ಅರೆಬರೆ ತೋಟವಾಗಿ ನಿಂತಿದೆ. ಇತ್ತ ಭತ್ತ ಇಲ್ಲ ಅತ್ತ ಅಡಿಕೆ ಬರಲಿಲ್ಲ. ಎಂಬಂತಹ ಸ್ಥಿತಿ. ಅಡಿಕೆ ದರದ ಕುಸಿತ ಪಟ್ಟಣದಲ್ಲಿ ಒಳ್ಳೆಯ ಉದ್ಯೋಗದಲ್ಲಿದ್ದು ಇಲ್ಲಿ ತೋಟ ಮಾಡಿದವರಿಗೆ ಬಾಧಿಸದು. ಆದರೆ ಇಲ್ಲಿ ಅದನ್ನೇ ಜೀವನಾಧಾರವಾಗಿಟ್ಟು ಕೊಂಡು ಹೊರಟ ರೈತಾಪಿ ಜನ ಕಣ್ಣುಕಣ್ಣು ಬಿಡುವಂತಾಗಿದೆ. ಅವರಿಗೆ ಪಟ್ಟಣಕ್ಕೆ ಹೋಗಿ ಲಾಯರ್ ಡಾಕ್ಟರ್ ಆಗುವಂತಿಲ್ಲ.
ಹೀಗೆ ಅಡಿಕೆಯೆಂಬ ಮಾಯಾವಿ ಭತ್ತವನ್ನು ನುಂಗಿ ಅದನ್ನು ನಂಬಿದ್ದ ಎಲ್ಲರನ್ನೂ ಮುಳುಗಿಸುವ ಹಂತಕ್ಕೆ ತಲುಪಿಸಿದೆ. ಯಾರ್ಯಾರು ಬಚಾವಾಗುತ್ತಾರೋ ಅದು ಪ್ರಕೃತಿಯ ಆಸೆಗೆ ಬಿಟ್ಟದ್ದು.

Friday, January 30, 2009

ಹಾರುತ ದೂರ ದೂರ .......ಏರುವ ಸಾವಿನ ತೇರ

ಎಂದು ಹಾಡುವ ರಾಣಿನೊಣದ ಮರ್ಮ ದಡ್ದ ಗಂಡು ಜೇನಿಗೆ ತಿಳಿಯುವುದೇ ಇಲ್ಲ. ಗಂಡು ಜೇನುನೊಣಕ್ಕೆ ಮಿಲನಮಹೋತ್ಸವದ ಆರಂಭ ಎಂದರೆ ಚರಮಗೀತೆಯ ಸಾಲುಗಳ ಶುರು ಎಂದರ್ಥ. ಅಂತಿಮವಾಗಿ ರಾಣಿಯ ಸೇರಿದ ಧೀರ ಗಂಡು ಜೇನು ಸಾವನ್ನಪ್ಪುತ್ತದೆ. ಇದು ಪ್ರಕೃತಿಯ ವೈಚಿತ್ರ್ಯ.ಹುಲು ಮಾನವನಿಗೆ ಅರ್ಥವಾಗದ ಸೃಷ್ಟಿ ರಹಸ್ಯ.
ಹೀಗೆ ಜೇನಿನ ಬಗ್ಗೆ ಹೇಳುತ್ತಾ ಹೋದರೆ ಕನಿಷ್ಟವೆಂದರೂ ಐದು ಕಾದಂಬರಿ ಬರೆಯಬಹುದು. ಆವರಣದಂತಹ ವಿವಾದ ಎಬ್ಬಿಸದಿದ್ದರೂ ಓದಲು ಮಜ ಇರುತ್ತದೆ. ಇರಲಿ ಹೀಗೆ ಅದೇನೋ ಅರೆಬರೆಯಾಗಿ ಹೇಳಿದರೆ ಅರ್ಥವಾಗದು ಹೇಳಿದರೆ ಸರಿಯಾಗಿ ಹೇಳು ಇಲ್ಲದಿದ್ದರೆ ರೈಟ್ ಹೇಳು ಅಂದಿರಾ ..? ಸ್ಸಾರಿ ಒಂದಿಷ್ಟು ಸಾಲುಗಳಲ್ಲಿ ವಿವರಿಸಲು ಯತ್ನಿಸುತ್ತೇನೆ.
ಆವತ್ತು ನಿಮಗೆ ಗಂಡು ಜೇನು ನೋಣ ಆಚೆ ಬರುವುದನ್ನು ನಾನು "ಬಾ ಬಾರೋ ಬಾರೋ ರಣಧೀರ" ಅಂತ ಕಾಯುತ್ತಿರುತ್ತೇನೆ ಕಾರಣ ನಾನು ಅವುಗಳನ್ನು ಹಿಸ್ಸೆ ಮಾಡಿಸಬೇಕು ಅಂದಿದ್ದೆ. ನೆನಪಿರಬಹುದು ನೆನಪಿಲ್ಲದಿದ್ದರೂ ಪರವಾಗಿಲ್ಲ ಈಗಿನದ್ದು ಅರ್ಥಮಾಡಿಕೊಳ್ಳಬಹುದು ಬಿಡಿ.
ಎರಡು ಕುಟುಂಬಗಳಾದ ಜೇನಿನಲ್ಲಿ ಒಂದು ಹೊಸರಾಣಿ ಆಚೆ ಬರುತ್ತದೆ. ಹೀಗೆ ಬಂದಂತಹ ರಾಣಿ ಜೇನಿಗೆ ತನ್ನ ಜೀವಿತಾವಧಿಯಲ್ಲಿ ಒಮ್ಮೆ ಮಾತ್ರಾ ಗಂಡನ್ನು ಸೇರುವ ಯೋಗ. ಆನಂತರ ತಾನು ಬದುಕುವ ಮೂರುವರ್ಷಗಳ ಕಾಲ ಅವಶ್ಯಕತೆ ಇದ್ದಾಗ ದಿನವೊಂದಕ್ಕೆ ಒಂದೂವರೆ ಸಾವಿರದವರೆಗೂ ಮೊಟ್ಟೆಯನ್ನಿಡುವ ತಾಕತ್ತು ಇದೆ. ಅದೇನೋ ಆಮೇಲಾಯಿತು ಆದರೆ ಅದಕ್ಕೂ ಮೊದಲು ಗಂಡು ಜೇನಿನೊಂದಿಗೆ ಮಿಲನವಾಗಬೇಕಲ್ಲ ಅದರ ಕಥೆ ನೋಡೋಣ.
ಕೋಶದಿಂದ ಹೊರಬಂದ ಮಾರನೆ ದಿನ ರಾಣಿಜೇನು ಮಿಲನಮಹೋತ್ಸವಕ್ಕೆ ಹೊರಟು ನಿಲ್ಲುತ್ತದೆ. ಅದರ ಜತೆ ಒಂದಿಪ್ಪತ್ತು ಗಂಡು ಜೇನುನೊಣಗಳೂ ಹಾಗೂ ಮಿಲನದ ನಂತರ ರಾಣಿಗೆ ಪರತ್ತು ಗೂಡಿನ ದಾರಿ ತೋರಿಸಲು ಇನ್ನೊಂದಿಪ್ಪತ್ತು ಕೆಲಸಗಾರ ಜೇನು ನೊಣಗಳೂ ಹೊರಡುತ್ತವೆ . ಈಗ ಚಂದದ ಹಾರಾಟ ಪ್ರಾರಂಭವಾಗುತ್ತದೆ. ರಾಣಿ ಜೇನುನೊಣ ಮುಂದೆ ಅದರ ಹಿಂದೆ ಗಂಡು ಜೇನುನೊಣ ತದನಂತರ ಕೆಲಸಗಾರ ಜೇನುನೊಣಗಳು. ಬಲಸ್ಯ ಪೃಥ್ವಿ ಎಂಬ ಪ್ರಕೃತಿಯ ನಿಯಮ ಇಲ್ಲಿ ಹಾರಾಟದ ಒಳಗುಟ್ಟು. ರಾಣಿ ಜೇನು ನೊಣ ಗತ್ತಿನೊಂದಿಗೆ ನುಲಿಯುತ್ತಾ ( ಚಳಿ ಚಳಿ ತಾಳೆನು ಈ ಛಳಿಯಾ.. ಅಹಾ ಓಹೋ ಎಂಬ ಹಾಡನ್ನು ನೀವು ಬೇಕಾದರೆ ಕಲ್ಪಿಸಿಕೊಳ್ಳಬಹುದು) ಗುಂಯ್ ಎನ್ನುವ ರಕ್ಕೆಯ ಸಂಗೀತ ದೊಂದಿಗೆ ರಾಣಿ ಜೇನು ನೊಣ ಆಕಾಶದತ್ತ ಏರಲು ಶುರುಮಾಡುತ್ತದೆ. ಈಗ ಗಂಡು ಜೇನು ನೊಣಗಳ ತಾಕತ್ತು ಪರೀಕ್ಷಾ ಕಾಲ. ರಾಣಿ ಆಕಾಶದತ್ತ ಏರುತ್ತಿದ್ದಂತೆ ಒಂದೊಂದೇ ಗಂಡು ಜೇನು ನೊಣಗಳು ಸೋಲನ್ನಪ್ಪತೊಡಗುತ್ತವೆ. ಹೀಗೆ ಮುಂದುವರೆದು ಅಂತಿಮವಾಗಿ ಇಪ್ಪತ್ತರಲ್ಲಿ ಒಬ್ಬ ಹೀರೋ (ನಮ್ಮ ಸಿನೆಮಾ ನಾಯಕನಂತೆ) ಉಳಿಯುತ್ತಾನೆ. ಮಿಕ್ಕೆಲ್ಲಾ ಗಂಡು ಜೇನು ನೊಣಗಳು ಹಿಂದೆ ಬೀಳುತ್ತವೆ. ರಾಣಿಯ ಸೇರುವ ಯೋಗ ಆತನಿಗೆ. ಆದರೆ ಆ ಗಂಡು ಜೇನಿಗೆ ತನ್ನ ಅಂತಿಮಯಾತ್ರೆ ಅದು ಎಂದು ತಿಳಿಯದು. ರಾಣಿಯ ಸೇರಿ ಆತನ ಕೆಲಸ ಮುಗಿದನಂತರ ಅಲ್ಲಿಂದಲೇ ಗಿರಕಿ ಹೊಡೆಯುತ್ತಾ ಧರೆಗುರುಳುತ್ತಾನೆ ಈ ಹೀರೋ. ಮಿಕ್ಕ ಗಂಡು ನೊಣಗಳು ಅವುಕ್ಕೆ ತಿಳಿಯದಂತೆ ಜೀವ ಉಳಿದದ್ದಕ್ಕೆ ಖುಷಿಯಾಗಿ ಹಾಗೂ ರಾಣಿ ಜೇನನ್ನು ಸೇರಲಾಗದ್ದಕ್ಕೆ ಒಣಮುಖ ಮಾಡಿಕೊಂಡು ಕೆಲಸಗಾರ ಜೇನು ನೊಣಗಳೊಂದಿಗೆ ಗೂಡು ಸೇರುತ್ತದೆ. ಅಲ್ಲಿಗೆ ಮಿಲನ ಮಹೋತ್ಸವದ ಕಥೆ ಮುಗಿದಂತೆ. ಸಂತಾನಾಭಿವೃದ್ಧಿಗೆ ತನ್ನ ಜೀವವನ್ನೇ ಬಲಿಕೊಡುವ ಗಂಡಿನ ಕಥೆಯಿದು. ಇಷ್ಟಕ್ಕೆ ರಾಣಿಯ ಹನಿಮೂನ್ ಮುಗಿದರೂ ಒಮ್ಮೊಮ್ಮೆ ವಾಪಾಸು ಗೂಡಿಗೆ ರಾಣಿಜೇನು ಸುರಕ್ಷಿತವಾಗಿ ಮರಳಲಾಗುವುದಿಲ್ಲ. ಅಲ್ಲಿ ಅದಕ್ಕೂ ಹಕ್ಕಿಗಳ ರೂಪದಲ್ಲಿ ಸಾವು ಕಾದಿರುತ್ತದೆ. ಹಲವು ಸಲ ಇಡೀ ಹನಿಮೂನ್ ಪ್ರಸಂಗ ಖೇದಕರ ರೀತಿಯಲ್ಲಿ ಮುಗಿಯುವ ಸಾಧ್ಯತೆ ಇದೆ. ಅದರ ಕಥೆ ಮುಂದೆ ಎಂದಾದರೂ ಬರೆಯುತ್ತೇನೆ. ಒಟ್ಟಿಗೆ ಹೇಳಿದರೆ "ಇವನೇನು ಕೊರತದ ಜನವಪ್ಪಾ ಅಂತ ನೀವು ಬಯ್ದುಕೊಳ್ಳುತ್ತೀರಿ. ಹಾಗಾಗುವುದು ಬೇಡ.
ಅಂತಿಮವಾಗಿ :ಸಧ್ಯ ಮನುಷ್ಯರಾದ ನಮಗೆ ಗಂಡು ಜೇನಿನಗತಿಯನ್ನುಪ್ರಕೃತಿ ಈ ವಿಚಾರದಲ್ಲಿ ಮಾಡಿಲ್ಲ ಹಾಗಾಗಿ ನಾವು ಬಚಾವು ಎಂದಿರಾ..? ಯೆಸ್ ತ್ಯಾಂಕ್ ಗಾಡ್....!

Thursday, January 29, 2009

ಮಲೆನಾಡಿಗೊಂದು ಮತ್ತುಗ ದ ಗರಿ

ಜೋಗಕ್ಕೆ ಬರುವ ನಿಮಗೆಲ್ಲಾ ಉಳಿಯಲು ಒಂದು ವ್ಯವಸ್ಥೆ ಬೇಕಿತ್ತು ಅಂತ ಬಹಳ ಸಾರಿ ಅನ್ನಿಸಿರಬಹುದು. ಸರ್ಕಾರಿ ಪ್ರವಾಸಿ ಬಂಗಲೆಗಳಿದ್ದರೂ ಅವುಗಳ ವಶೀಲಿ ಬಾಜಿ ಸ್ವಲ್ಪ ಕಷ್ಟಕರ. ಯಾರ್ಯಾರನ್ನೋ ಹಿಡಿದು ರೂಂ ಬುಕ್ ಮಾಡುವ ಹೊತ್ತಿಗೆ ಸುಸ್ತಾಗಿಬಿಡುತ್ತದೆ. ಹಾಗಾಗಿ ಒಂದು ಹೋಂ ಸ್ಟೇ ಯಾರಾದರೂ ಮಾಡಿದ್ದರೆ ಬಹಳ ಚೆನ್ನಾಗಿ ನಡೆಯುತ್ತದೆ ಅಂತ ಬಹಳ ಸಾರಿ ನೀವು ಮಾತನಾಡಿಕೊಳ್ಳುತ್ತಾ ಹೋಗಿದ್ದಿದೆ. ಆನ್ ಲೈನ್ ನಲ್ಲೆ ಬೆಂಗಳೂರಿನಲ್ಲಿ ಕುಳಿತು ಕ್ಲಿಕ್ಕಿಸಿ ಬುಕ್ ಮಾಡುವ ವ್ಯವಸ್ಥೆ ಇರಬೇಕು ಅಂತ ಹೇಳಿದ್ದಿದೆ. ಈಗ ಅವುಗಳನ್ನು ಎಂ.ಎಸ್.ನರಹರಿಯವರು ಸಾಕಾರಗೊಳಿಸಿದ್ದಾರೆ. ಒಮ್ಮೆ ಉಳಿದು ಹೋಗಿ ಆಮೇಲೆ ನೀವು ಅಭಿಪ್ರಾಯ ಹೇಳಬಹುದು. ಅದಕ್ಕಿಂತ ಮೊದಲು ಇಲ್ಲಿ ಕ್ಲಿಕ್ಕಿಸಿ http://matthuga.in/ . ಉಳಿಯುವುದಕ್ಕಿಂತ ಉಳಿಯಲಿಕ್ಕೆಂದು ಬರುವುದಕ್ಕಿಂತ ಮೊದಲು ನಮ್ಮ ಊರಿನ ಸುತ್ತಮುತ್ತೆಲ್ಲಾ ಏನೇನು ಇದೆ ಅಂತ ಸಂಪೂರ್ಣ ಮಾಹಿತಿ ತಿಳಿಯಬಹುದು. ಹಾ ಮರೆತೆ ಇದರ ನಡುವೆ ನಮ್ಮದೇ ಆದ ಉಳಿಮನೆ "ನಮ್ಮನೆ" ಹೇಗೂ ಇದೆ. ಆದರೆ ಇಲ್ಲಿ ಮತ್ತುಗದಷ್ಟು ಐಷಾರಾಮಿನ ವ್ಯವಸ್ಥೆ ಇಲ್ಲ. ಆದರೆ ಆತ್ಮೀಯತೆ ಇದೆ. ಮತ್ತುಗದಲ್ಲಿ ಎರಡೂ ಇದೆ.

Tuesday, January 27, 2009

ಎರಡು ಬ್ಲಾಗ್ ಗಳು

ಶನಿವಾರ ಬರೆದು ಮುಗಿಸಬೇಕಿದ್ದ ಈ ಬ್ಲಾಗ್ ಬರಹ ಈ ವಾರ ಮಂಗಳವಾರಕ್ಕೆ ಬಂದಿದೆ. ಅದಕ್ಕೆ ಮುಖ್ಯ ಕಾರಣ ಬಿ.ಎಸ್.ಎನ್.ಎಲ್ ನೆಟ್ ಶುಕ್ರವಾರ ರಾತ್ರಿಯಿಂದ ಮಲಗಿದ್ದು. ನಂತರ ರಜದ ಸಾಲುಗಳ ಹೊಡೆತದಲ್ಲಿ ಅದು ಎಚ್ಚರಗೊಂಡಿದ್ದು ಮಂಗಳವಾರ ಹಾಗಾಗಿ ಮೂರು ದಿನ ನೆಟ್ ಇಲ್ಲದೆ ಮಳ್ಳು ಹಿಡಿದಂತಾಗಿತ್ತು. ಇರಲಿ ಅವೆಲ್ಲಾ ಮಾಮೂಲಿ ಅಂದು ಬರಬೇಕಾಗಿದ್ದು ಇಂದು ಬಂದರೆ ಪ್ರಪಂಚ ಮುಳುಗಿ ಹೋಗುವುದಿಲ್ಲ.

ತಟ್ಟನೆ ಗಡಿಬಿಡಿಯಲ್ಲಿ ಓದಿದರೆ ಮೀರ್ ಸಾಧಕ್ ಅಂತ ಅನ್ನಿಸುವ ನೀರ್ ಸಾಧಕ್ (http://neersaadhak.blogspot.com/) ಹೆಸರೇ ಸೂಚಿಸುವಂತೆ ನಮ್ಮ ನಿತ್ಯ ಉಪಯೋಗಿ ಜೀವಜಲ ಕುರಿತು ಹೇಳುವ ಲೇಖನಗಳ ಸರದಾರ ರಾಧಾಕೃಷ್ಣ ಭಡ್ತಿಯವರದ್ದು. ಪ್ರಿಂಟ್ ಮೀಡಿಯಾದಲ್ಲಿ ಉದ್ಯೋಗಿಯಾಗಿರುವ ಭಡ್ತಿ ವಿಕ ದಲ್ಲಿ ನೀರುನೆರಳು ಅಂಕಣ ಬರಹಗಾರರು. ಅವುಗಳನ್ನು ತಮ್ಮ ಬ್ಲಾಗ್ ನಲ್ಲಿ ಪ್ರಕಟಿಸುತ್ತಾರೆ. ನೀರಿನ ಸಮಸ್ಯೆ ಎಂದರೆ ಏನೆಂದು ತಿಳಿಯದ ನಮ್ಮಂತಹ ಮಲೆನಾಡಿಗರೂ ಓದುವಂತೆ ಇರುವ ಅವರ ಬರಹಗಳು ಓದಲಷ್ಟೇ ಅಲ್ಲ ಮಾಹಿತಿಯ ವಿಷಯದಲ್ಲಿಯೂ ಬರಪ್ಪೂರ್. ನೀರ್ ಸಾಧಕ್ ಬ್ಲಾಗ್ ಓಪನ್ ಆಗುತ್ತಿರುವಂತಯೇ ನಿಮಗೊಂದು ಅದ್ಭುತ ಫೋಟೋ ಕಾಣಸಿಗುತ್ತದೆ ಅದೊಂದೆ ಸಾಕು ಅಷ್ಟು ಚೆನ್ನಾಗಿದೆ. ಅವರ ಲಾಸ್ಟ್ ಡ್ರಾಪ್ ಮತ್ತಷ್ಟು ಖುಷಿ ಕೊಡುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ ನೀರೆನ್ನುವುದು ವಾಸ್ತವ. ಆದರೆ, ಅದರ ಸನ್ನಿಯಲ್ಲಿ ಹೋಗಿ ಕುಳಿತರೆ ಎಂಥ ಸುಂದರ ಕಲ್ಪನೆಗಳಿಗೆ ಬೇಕಾದರೂ ಅದು ವಸ್ತುವಾಗಬಹುದು. ಎನ್ನುತ್ತಾ ನೀರಿನ ಲೋಕದಲ್ಲಿ ನಮ್ಮನ್ನು ಮುಳುಗೇಳಿಸುತ್ತಾರೆ.

ಹೀಗೆಯೇ ಪ್ರಿಂಟ್ ಮೀಡಿಯಾದಲ್ಲಿ ಕೆಲಸ ಮಾಡುತ್ತಾ ನಮಗೆ ಬ್ಲಾಗ್ ಬರಹ ಉಣಿಸುತ್ತಿರುವ ಬರಹಗಾರ ವಿನಾಯಕ ಕೋಡ್ಸರ(http://aksharavihaara.wordpress.com/) ಬ್ಲಾಗ್ ನ ಅಗ್ರ್ರೆಸ್ಸಿವ್ ಬರಹಗಾರರ ಪಟ್ಟಿಯಲ್ಲಿ ವಿನಾಯಕರನ್ನು ಸೇರಿಸಬಹುದು. ಬರೆಯುತ್ತಾ ಬರೆಯುತ್ತಾ ನಮ್ಮನ್ನು ಒಂದಿಷ್ಟು ಪ್ರಶ್ನೆ ಅವರೇ ಕೇಳುತ್ತಾರೆ. ಬುದ್ದಿಜೀವಿಗಳು ಹಾಗೂ ಕೋಮುವಾದಿಗಳು ಮುಂತಾದ ವಿಷಯಗಳನ್ನು ಬದಿಗಿರಿಸಿ ಒಂದು ಘಟನೆಯನ್ನು ಮೂರನೇ ಘಟ್ಟದಲ್ಲಿ ನಿಂತು ನೋಡಿ ತಮ್ಮ ಬರಹಗಳನ್ನು ನಿರ್ಭೀಡೆಯಿಂದ ದಾಖಲಿಸುತ್ತಾ ಹೋಗುತ್ತಾರೆ ಕೋಡ್ಸರ. ಇದ್ದದ್ದು ಇದ್ದಹಾಗೆ ಹೇಳುವ ಕೋಡ್ಸರ ಬಹಳಷ್ಟು ಬಾರಿ ನಿಷ್ಟುರವಾದಿ. ಇಲ್ಲ, ದಾಳಿ ವಿರೋಧಿಸುವವರಿಗೆ ಇವೆಲ್ಲಾ ಅರ್ಥವಾಗುದಿಲ್ಲ. ಅವರ ಮನೆ ಹೆಣ್ಣು ಮಕ್ಕಳು ಮುಂದೊಂದು ದಿನ ಪಬ್‌ನಲ್ಲಿ ಸಿಕ್ಕಿಬಿದ್ದಾಗಲೇ ರಾಮಸೇನೆಯ ದಾಳಿ ಹಿಂದಿನ ಅನಿವಾರ್ಯತೆ ಅವರಿಗೆ ಅರ್ಥವಾಗುವುದು! ನಮ್ಮ ಸಮಾಜ ಇವತ್ತು ಯಾವ ಸ್ಥಿತಿಯಲ್ಲಿದೆ ಎಂಬುದರ ಅರಿವಾಗುವುದು. ಎಂದು ತಮ್ಮ ಬರಹದಲ್ಲಿ ವೃಥಾ ನೆಲೆಯಿಲ್ಲದೆ ವಿರೋಧಿಸುವವರನ್ನು ತಾಕುತ್ತಾರೆ. ಮತ್ತು ಹಾಗೆಯೇ ನಮ್ಮನ್ನು ತಲುಪುತ್ತಾರೆ.

ಇದು ಈ ವಾರದ ತಡವಾದ ಬರಹ. ಮುಂದಿನವಾರ ಬಿ.ಎಸ್.ಎನ್.ಎಲ್ ನವರು ಸರಿ ಇದ್ದರೆ ಶನಿವಾರ ಸಿಗೋಣ. ಅಲ್ಲಿಯವರೆಗೆ ಶುಭವಾಗಲಿ.