Saturday, February 6, 2010

ಮಿಟುಕಲಿಲ್ಲ ಮಿಸುಕಾಡಲಿಲ್ಲ


ಬದುಕಿನ ಘಟ್ಟಗಳಲ್ಲಿ ಒಬ್ಬೊಬ್ಬರದು ಒಂದೊಂದು ಸೇವೆ. ಸೃಷ್ಟಿ-ಸ್ಥಿತಿ-ಲಯ ಅಂತ ವಿಭಾಗ . ಒಂದಿಷ್ಟು ಜನ ಬೆಳೆಯುತ್ತಾರೆ, ಮತ್ತೊಂದಿಷ್ಟು ಜನ ಬೆಳೆಸುತ್ತಾರೆ ಮಗದೊಂದಿಷ್ಟು ಜನ ಮುಗಿಸುತ್ತಾರೆ. ಹಾಗಾಗಿ ಇದು ಹೆಚ್ಚು ಇದು ಕಡಿಮೆ ಎಂಬುದಿಲ್ಲ. ಎಲ್ಲವೂ ಎಲ್ಲರೂ ಸಮಾನರು. ಹುಟ್ಟಿಗೆ ಕಾರಣಕರರ್ತನೂ ಸಾವಿನ ಪೋಷಕನೂ ಎಲ್ಲರೂ ಬೇಕು. ಆದರೆ ಯಾವುದು ಎಲ್ಲಿ? ಯಾರು? ಮುಂತಾದ ಬಗೆಹರಿಸಲಾರದ ಗೊಂದಲ ಬಂದಾಗ " ತೇನವಿನಾ ತೃಣಮಪಿ ನಚಲತಿ" ಅಂತ ನಂಬಬೇಕು. ಒಮ್ಮೆ ಹಾಗೆ ನಂಬಿದಿರೋ ಅಲ್ಲಿಂದ ಪ್ರತೀ ಹಂತಕ್ಕೂ ಹಾಗೆಯೇ ಮುಂದುವರೆಯಬೇಕು. ನಂಬಿದ ನಂಬಿಕೆಯಲ್ಲಿ ಅನುಮಾನಗಳಿದ್ದರೆ ಎಲ್ಲವೋ ಆಯೋಮಯ. ಪರಿಪೂರ್ಣವಾದ ನಂಬಿಕೆಗೆ ಪಾತ್ರರಾದಿರೋ ಅಲ್ಲಿಗೆ ಜಗತ್ತು ಗೆದ್ದ ಭಾವನೆ ಬೆಳೆಯುತ್ತದೆ. ಯಾರೋ ಬುದ್ಧಿವಂತರು ಹೊಸೆದ ಕತೆಯೊಂದು ಅದ್ಬುತ ಸಾರಾಂಶವನ್ನು ಹೀಗೆ ಹೇಳುತ್ತದೆ.
ಯಥಾಪ್ರಕಾರ ಒಂದೂರು. ಆದರೆ ಮುಂದೆ ಇಲ್ಲಿ ರಾಜನ ಬದಲು ಸನ್ಯಾಸಿ. ಆತ ತನ್ನಪಾಡಿಗೆ ತಾನು ಜಪತಪ ಮಾಡುತ್ತಾ ಒಂಟಿ(!) ಜೀವನ ನಡೆಸುತ್ತಿದ್ದ. ಹೀಗೆ ಕಾಲ ಕಳೆಯುತ್ತಿರಬೇಕಾದರೆ ಆ ಊರಿನ ಸ್ಪುರದ್ರೂಪಿ ಯುವತಿಯಿಂದ ಸಮಸ್ಯೆಯೊಂದು ಬಂತು. ವಿವಾಹಪೂರ್ವದಲ್ಲಿ ಆಕೆ ಗರ್ಭವತಿಯಾಗಿ ಮುದ್ದಾದ ಮಗುವಿಗೆ ಜನ್ಮ ನೀಡಿದಳು.( ಮಾಲಾ ಡಿ ಇಲ್ಲದ ಕಾಲದ ಕತೆ ಇದು...!) . ಹಳ್ಳಿ ಹೈಕಳಿಂದ ಹಿಡಿದು ಬೊಚ್ಚು ಬಾಯಿಯವರೆಗೆ ಸುದ್ದಿಯೋ ಸುದ್ದಿ. ಸರಿ ಅಷ್ಟೆಲ್ಲಾ ಸುದ್ದಿಯಾದ ಮೇಲೆ ಪಂಚಾಯಿತಿ ಸೇರಲೇಬೇಕಲ್ಲ.! ಅದೂ ಸೇರಿತು. ಆಕೆಗೆ ಕೇಳಿದ "ಯಾರಮ್ಮ ನಿನ್ನ ಈ ಅವಸ್ಥೆಗೆ ಕಾರಣ?" ಅಂತ ಗಡಸು ದನಿಯಲ್ಲಿ ಕೇಳಿದರು ಪಂಚಾಯ್ತಿದಾರರು. ಆಕೆಯೋ ಮುಸಿಮುಸಿ ಅಳುತ್ತಾ ಸನ್ಯಾಸಿಯತ್ತ ಕೈತೋರಿಸಿಬಿಟ್ಟಳು. ಒಮ್ಮೆಲೆ ಇಡೀ ಊರೇ ಸ್ಥಬ್ಧ. ಮರುಕ್ಷಣ ಮುಸಿಮುಸಿ ಪಿಸುಪಿಸು ಡೈಲಾಗ್ ಉದರತೊಡಗಿತು. ಕಳ್ಳ ಸನ್ಯಾಸಿ- ಹಲ್ಕಟ್ ಸನ್ಯಾಸಿ- ಮೋಸಗಾರ- ವೃಥಾ ನಾವು ಇವನ್ನ ನಂಬಿದೆವಲ್ಲ, ಮುಂತಾಗಿ. ಸನ್ಯಾಸಿಗೆ ಇವೆಲ್ಲ ಮಾತುಗಳು ಕೇಳಿಸಿದವು. ಆದರೆ ಆತ ಒಂದಿನಿತೂ ಮಿಟುಕಲಿಲ್ಲ ಮಿಸುಕಾಡಲಿಲ್ಲ. ( ಗೌರಿ ಲಂಕೇಶ್,ರವಿ ಬೆಳಗೆರೆ, ಟಿ ವಿ ನೈನ್ , ಮುಂತಾದಂತಹ ಇಂಥಹ ಬೇಡದ ವಿಷಯಗಳಿಗೆ ಬಣ್ಣ ಹಚ್ಚಿ ರಾಯಲ್ ಬದುಕು ಸಾಗಿಸಬಹುದು ಎಂಬ ತಿಳುವಳಿಕೆ ಜನ ಇರದಿದ್ದ ಕಾಲ ಅದು) ಪಂಚಾಯ್ತಿಯ ಮುಖಂಡರೂ ಗುಸುಗುಸು ಪಿಸಪಿಸ ಮಾಡಿ ನಂತರ ಒಂದು ತೀರ್ಮಾನ ನೀಡಿದರು. ಕೆಟ್ಟ (ನಿಜವಾಗಲೂ ಸೃಷ್ಟಿ ಒಳ್ಳೆಯ ಕೆಲಸ ಅಂತ ಎಲ್ಲರೂ ಅಂದುಕೊಂಡಿದ್ದಾರೆ) ಕೆಲಸ ಮಾಡಿದ ಸನ್ಯಾಸಿಗೆ ಇನ್ನು ಮುಂದೆ ಊರಿನಲ್ಲಿ ಯಾರೂ ಅನ್ನ ಆಹಾರ ನೀಡಬಾರದು, ಮತ್ತು ಈ ಮಗುವಿನ ಜನ್ಮಕ್ಕೆ ಕಾರಣನಾದ ಆತನೆ ಇದರ ಪಾಲನೆ ಪೋಷಣೆ ಮಾಡಬೇಕು( ಯಾರೋ ಸಿಕ್ಕಾಪಟ್ಟೆ ಬುದ್ದಿ ಓಡಿಸುವ ಪಂಚಾಯ್ತಿದಾರರು ನೋಡಿ, ಸ್ಪುರದ್ರೂಪಿ ಯುವತಿ ಸನ್ಯಾಸಿಯೊಡನೆ ಬಾಳಬೇಕು ಅನ್ನಲಿಲ್ಲ.! ಆಕೆ ಖಾಲಿ ಇರಬೇಕು...!) ಎಂಬ ತೀರ್ಪನ್ನಿತ್ತರು. ಸನ್ಯಾಸಿ ಆಗಲೂ ವಿಚಲಿತನಾಗದೆ ಮುಗಳ್ನಗುತ್ತಾ ಇದ್ದ. ಮುಖದಲ್ಲಿ ಮಂದಹಾಸವಿತ್ತು. ಯುವತಿ ಮಗುವನ್ನು ಸನ್ಯಾಸಿಯ ಬಳಿ ಬಿಟ್ಟು ಹೊರಟಳು. ಪಂಚಾಯ್ತಿ ಬರ್ಕಾಸ್ತಾಯಿತು. ಜನ ಸನ್ಯಾಸಿಗೆ ತಲೆಗೊಂದರಂತೆ ಮಾತನಾಡಿದರು. ಆದರೆ ಸನ್ಯಾಸಿ ಏನೂ ನಡದೇ ಇಲ್ಲವೆಂಬಂತೆ ಗೊಂಬೆಯಂತಿದ್ದ ಮಗುವನ್ನು ತೊಡೆಯ ಮೇಲೆ ಕೂರಿಸಿಕೊಂಡು "ಛಿ ಕಳ್ಳ" ಎಂದು ಮುದ್ದಿಸತೊಡಗಿದ. ಜನರು ಇನ್ನಷ್ಟು ಅನ್ನಲು ಶುರುಮಾಡಿದರು. "ನೋಡಾ ಮಗು ಅವನಲ್ಲದಿದ್ದರೆ ಹೀಗೆ ಮುದ್ದಾಡುತಿದ್ದನಾ...? ಕಳ್ಳ ಕೊರಮ ಪಟಿಂಗ ಹೋಗಿ ಹೋಗಿ ನಾವು ಇವನಿಗೆ ಪೂಜೆ ಮಾಡಿದೆವಲ್ಲ." ಮುಂತಾಗಿ. ಸನ್ಯಾಸಿ ಯಥಾಪ್ರಕಾರ ನಿರುಮ್ಮಳನಾಗಿದ್ದ. ಸಮಯದ ನಂತರ ಮಗು ಹಸಿವೆಯಾಗಿ ಅಳಲು ಶುರುಮಾಡಿತು. ಸನ್ಯಾಸಿಗೆ ಈಗ ಸಮಸ್ಯೆ. ಆಹಾರ ಅವನ ಬಳಿ ಇಲ್ಲ ಊರವರು ನೀಡರು. ಆಗ ಸನ್ಯಾಸಿ ಮಗುವನ್ನೆತ್ತಿಕೊಂಡು ಊರ ಮೇಲೆ ಆಹಾರ ನೋಡೋಣ ಎಂದು ಹೊರಟ." ಮಗು ಹಸಿವೆಯಿಂದ ಅಳುತ್ತಿದೆ ಏನಾದರೂ ಕೊಡಿ ಅದಕ್ಕೆ " ಎಂದು ಕೇಳಿದ. ಊರಿನವರು ದಢಾರನೆ ಬಾಗಿಲು ಹಾಕಿಕೊಂಡರು. ಅಂತಿಮವಾಗಿ ಸನ್ಯಾಸಿ ಸ್ಪುರದ್ರೂಪಿ ಯುವತಿಯ ಮನೆಬಾಗಿಲಿಗೆ ಬಂದ ಮತ್ತು "ನನಗಲ್ಲ ಹಸುಗೂಸಿಗೆ ಬಿಕ್ಷೆ ನೀಡಿ" ಎಂದ. ಯಾರಿಗೂ ಏನನ್ನಿಸದಿದರೂ ಎದೆಯಲ್ಲಿ ಹಾಲೆಂಬ ಸತ್ಯವನ್ನು ಬಚ್ಚಿಟ್ಟುಕೊಂಡ ಯುವತಿಗೆ ತಡೆದುಕೊಳ್ಳಲಾಗಲಿಲ್ಲ. ಆಕೆಯ ತಾಯ್ತನ ಬಡಿದೆಬ್ಬಿಸಿತು. ಆಕೆ ಓಡೋಡಿ ಬಂದು " ಸ್ವಾಮಿ ನಾನು ಮಹಾಪರಾಧ ಮಾಡಿದ್ದೇನೆ, ಈ ಮಗುವಿನ ಕಾರಣಕರ್ತರು ನೀವಲ್ಲ, ಅದೇ ...... ಆ ಯುವಕ, ಆದರೆ ಅವನ ಹೆಸರನ್ನು ಹೇಳಿದರೆ ಅವನನ್ನು ಕೊಂದೇಬಿಡುತ್ತಾರೆ ಹಾಗಾಗಿ ನಾನು ಸುಳ್ಳು ಹೇಳಿದೆ, ನೀವು ನನ್ನ ಕಣ್ಣು ತೆರೆಸಿದಿರಿ " ಎಂದು ಹೇಳಿ ಮಗುವನ್ನು ಕಸಿದುಕೊಂಡು ಹಾಲುಣಿಸಿದಳು. ಆಗಲೂ ಸನ್ಯಾಸಿ ಮುಗುಳ್ನಕ್ಕ. ಸುದ್ದಿ ತಿಳಿದ ಊರಿಗೆ ಊರೇ ಅಲ್ಲಿ ಸೇರಿತು. ಸನ್ಯಾಸಿಯ ಮೇಲೆ ವೃಥಾ ಅಪರಾಧ ಹೊರೆಸಿದ್ದಕ್ಕೆ ನೊಂದಿತು ಮತ್ತು ಕ್ಷಮೆ ಕೇಳಿತು. ಸನ್ಯಾಸಿಗೆ "ದೇವರಂತವರು ನೀವು, ಪೂಜನೀಯರು ನೀವು, ಅಂತ ಉಘೇ ಉಘೇ ಅನ್ನತೊಡಗಿತು.
ಆದರೆ ಸನ್ಯಾಸಿ ಈಗಲೂ ಮಿಟುಕಲಿಲ್ಲ ಮಿಸುಕಾಡಲಿಲ್ಲ.
ಊರಿನ ಮುಖಂಡನೊಬ್ಬ ಸನ್ಯಾಸಿಯ ಬಳಿ ಬಂದು ಪಾದಕ್ಕೆರಗಿ " ಅಯ್ಯಾ ಮಹಾತ್ಮ ಆಕೆ ನಿಮ್ಮ ಮೇಲೆ ಅಪವಾದ ಹೊರೆಸಿದಾಗ ನೀವು ಅಲ್ಲಗಳೆಯಬಹುದಿತ್ತು, ಜನರೆಲ್ಲಾ ನಿಮ್ಮನ್ನು ಏನೇನೋ ಅನ್ನುವಂತಾಯಿತು ಕ್ಷಮಿಸಿ" ಎಂದರು.
ಆಗ ಸನ್ಯಾಸಿ " ಆಗಲೂ ನೀವು ಏನೇನೋ ಅಂದಾಗ ನಾನು ಅದಲ್ಲ ಈಗಲೂ ನೀವು ಏನೇನೋ ಅಂದಾಗ ನಾನು ಇದಲ್ಲ, ತೇನವಿನಾ ತೃಣಮಪಿ ನಚಲತಿ ಎಂದು ಭಗವಂತನನ್ನು ನಂಬಿದವನು ನಾನು, ಹೀಗೆಲ್ಲಾ ಆಗಿದ್ದು ಅವನಿಂದಲೇ ತಾನೆ? ಹಾಗಾಗಿ ಬೇಸರವೂ ಇಲ್ಲ ಸಂತೋಷವೂ ಸಲ್ಲ " ಎಂದು ಆಶ್ರಮದತ್ತ ನಡೆದ.
ಸರಿ ಈಗ ಕತೆ ಕೇಳಿಯಾಯಿತಲ್ಲ ವಿಷಯಕ್ಕೆ ಬರೋಣ. ಆ ಸನ್ಯಾಸಿಯ ಮಟ್ಟ ಪಾಮರರಿಗೆ ತಲುಪುವುದು ಕಷ್ಟ. ಆದರೆ ಈ ತರಹದ ಕಥೆ ಕೇಳಿದರೆ ಸ್ವಲ್ಪಮಟ್ಟಿಗೆ ನಾವು ಗುಡ್ಡವಾಗಬಹುದು. ಅದೋ ಮೇಲಿನ ಚಿತ್ರದಲ್ಲಿ ಒಂದು ಬರೊಬ್ಬರಿ ಚಂದದ ಬೆಟ್ಟವಿದೆ ಅದೆರೆದುರು ನಿಂತು " ಆಹಾ ನೀನೆಷ್ಟು ಸುಂದರ " ಅಂತ ಕೂಗಿ ಸುಮ್ಮನಾಗಿ. ಮತ್ತದೇ ಕೇಳುತ್ತದೆ. "ನೀನು ಕಚಡಾ.." ಎಂದು ಕೂಗಿ ಮತ್ತದೇ........... ಎಂಬಲ್ಲಿಗೆ ಬೆಟ್ಟವಾಗಿ ನೀವು ಇಡೀ ಜೀವನವೇ ಜಿಂಗಲಾಲ...
ತ್ಯಾಂಕ್ ಯು ಓದಿದ್ದಕ್ಕೆ.

Thursday, February 4, 2010

"ಆಲ್ ಈಸ್ ವೆಲ್"


ಶೀಟಿ ಬಜಾಕೆ ಬೋಲ್ "ಆಲ್ ಈಸ್ ವೆಲ್" , ವಾವ್ ಸೂಪರ್ ಸಿನೆಮಾ ೩ ಈಡಿಯಟ್ಸ್. ನಮಗೆ ಸಿನೆಮಾ ಇರಲಿ ಗುರುಗಳ ಹಿತೋಪದೇಶ ಇರಲಿ, ಸುಮಧುರ ಸಂಗೀತ ಇರಲಿ, ಯಕ್ಷಗಾನದ ಅರ್ಥ ಪದ್ಯ ಇರಲಿ ಅಥವಾ ಬರಹಗಳಿರಲಿ ತುಂಬಾ ಇಷ್ಟವಾಗಿ "ವಾವ್" ಎಂಬ್ ಉದ್ಘಾರ ಹೊರಡುವುದು ಅಂತಹದ್ದೊಂದು ವಿಚಾರ ನಮ್ಮ ಮೆದುಳೊಳಗೆ ಇದ್ದಾಗಲೆ. ನಮ್ಮ ಮಿದುಳೊಳಗೆ ಅದೇ ತರಹದ ಆಲೋಚನೆ ಇದ್ದಾಗ ಹೊರಗೆ ಅದಕ್ಕೆ ಇಂಥಹ ಆಹಾರ ಸಿಕ್ಕಾಗ ಸ್ಪಂದಿಸಿ ಸಂತೋಷ ಉಂಟಾಗುತ್ತದೆ.

ಹಿಗ್ಗಾಮುಗ್ಗ ಖಂಜೂಸ್ ಸ್ವಭಾವದ ಜನರಿಗೆ ಅಂತಹ ಪಾತ್ರವುಳ್ಳ ಸಿನೆಮಾಕ್ಕೆ ಯಾರಾದರೂ ಪುಕ್ಕಟೆ ಕರೆದುಕೊಂಡು ಹೋಗಿ ತೋರಿಸಿದರೆ ಚಕ್ಕನೆ ಇಷ್ಟವಾಗುತ್ತದೆ. ದೇವರು ಮಠ ಮಾನ್ಯ ಅಂತ ಇಷ್ಟವಿಲ್ಲದವರಿಗೆ ಕನ್ನಡದ ಮಠ ಸಿಕ್ಕಾಪಟ್ಟೆ ಖುಷ್. ಸ್ವಾಮಿಯೇ ಶರಣಂ ಅಯ್ಯಪ್ಪ ಭಕ್ತರಿಗೆ ಅದೇ ಸಿನೆಮಾ ಹಾರ್ಟ್ ಟಚ್. ಎಣ್ಣೆ ಹೊಡೆಯೋ ಅಭ್ಯಾಸವಿದ್ದವರಿಗೆ ಮತ್ತೊಬ್ಬರೂ ಅದೇ ಕೆಲ್ಸ ಮಾಡ್ತಾ ಇದಾರೆ ಅಂದಕೂಡಲೆ ಫುಲ್ ಖುಷ್. ಹುಡುಗಿ ಹಿಂದೆ ಬೀಳುವ ಮನಸ್ಸಿದ್ದವರಿಗೆ "ನಿಂಬೆ ಹಣ್ಣಿನಂತ ಹುಡುಗಿ ಬಂತು ನೋಡು..." ಮುದ ನೀಡುತ್ತದೆ.

ಹೀಗೆಲ್ಲಾ ಇದೆ ಆದರೆ ನನಗೆ ೩ ಈಡೀಯಟ್ ಕುಷ್ ಕೊಟ್ಟಿಕಾರಣ. ಸಿಕ್ಕಾಪಟ್ಟೇ ಓದಿ ಕೆಲಸ ಮಾಡಿ ಹಣ ಸಂಪಾದಿಸುವುದರಲ್ಲಿ ಅರ್ಥವಿಲ್ಲ, ಜಾಲಿಯಾಗಿ ಇದ್ದರೆ ಓಕೆ , ಅಷ್ಟು ತಲೆಕೆಡಿಸಿಕೊಂಡು ಓದಿದ ಸೈಲೆನ್ಸರ್ ಜಾಲಿಯಾಗಿರುವ ಅಮೀರ್ ಕೆಳಗೆ ಬಂದುಬಿಡುತ್ತಾನೆ. ವಾವ್ ಸೂಪರ್ ಕಣ್ರಿ ಸೂಪರ್.

ನಾನೂ ಓದಲಿಲ್ಲ ಜಾಲಿಯಾಗಿದ್ದೆ ಆದರೆ ಓದದೆಯೋ ಅಮೀರ್ ಖಾನ್ ತರಹ ಬುದ್ದಿವಂತನಾಗಿರಲಿಲ್ಲ ಎಂಬುದು ಅರ್ಥವಾಗಿದ್ದರೆ
........!

Tuesday, February 2, 2010

" ಮಾತೃ ದೇವೋ ಭವ, ಪಿತೃ ದೇವೋ ಭವ"

ಬಾಸ್ ಕಮ್ ಅಪ್ಪಯ್ಯ ಮೊನ್ನೆ ತಾಳಗುಪ್ಪಕ್ಕೆ ಸ್ಕೂಟಿ ತೆಗೆದುಕೊಂಡು ಹೋದ ಅರ್ದ ಗಂಟೆಗೆ ರಾಘವೇಂದ್ರ ಕೆಫೆ ಮಂಜಣ್ಣನಿಂದ ಫೋನ್ ಬಂತು. "ಅಪ್ಪಯ್ಯ ನ ಸ್ಕೂಟಿಗೆ ಯಾರ‍ೋ ಕಾರು ತಗುಲಿಸಿ ಹೋಗಿದ್ದಾರ‍ೆ, ಆಸ್ಪತ್ರೆಯಲ್ಲಿ ಸೇರಿಸಿದ್ದೀನಿ ಬಾ" ತಡಬಡಾಯಿಸಿಕೊಂಡು ಮಾರುತಿ ಕಿರ್ ಗುಡಿಸಿ ಹೋದೆ. ಅಪ್ಪಯ್ಯ ಆಸ್ಪತ್ರೆಯ ಮಂಚದಲ್ಲಿ ಮಲಗಿದ್ದರು. ಎಂಬತ್ತು ವರ್ಷದ ಗಟ್ಟಿ ಜೀವ. "ನಿನ್ನತ್ರ ಬಯ್ಸಿಕೊಳ್ಳುವ ಕೆಲಸ ಮಾಡೀಬಿಟ್ಟೆ" ಎಂದರು. ಪಿಚ್ಚೆನಿಸಿತು. ನಾನು ಯಾವತ್ತೂ ಯಾರಿಗೂ ಬೈಯ್ಯುವವನಲ್ಲ, ಆದರೂ ಅಪ್ಪಯ್ಯನಿಗೆ ತಾನು ಎಂಬತ್ತು ವರ್ಷದ ಇಳಿ ವಯಸ್ಸಿನಲ್ಲಿ ಬೈಕಿನಿಂದ ಬಿದ್ದೆನಲ್ಲ ಎಂಬ ಗಿಲ್ಟ್ ಇರಬೇಕು, ಹಾಗಾಗಿ ಹಾಗೆ ಹೇಳಿರಬೇಕು. ಇರಲಿ ನಾನು ಮಾಮೂಲಿ ಯಾಗಿ ಭೇಟಿಯಾಗಿ ಮುಂದಿನ ಕ್ರಮದ ಬಗ್ಗೆ ಕೇಳಿದೆ. ಅವರು ಸಾಗರಕ್ಕೆ ಕರೆದುಕೊಂಡು ಹೋಗಿ ಎಂದರು. ಸಾಗರದ ಡಾಕ್ಟರ್ ಪ್ರಸನ್ನರ ಬಳಿ ಅಡ್ಡ ಮಲಗಿಸಿ ಉದ್ದ ಮಲಗಿಸಿ ಎಕ್ಸ್ ರೇ ತೆಗೆಸಿದ್ದಾಯಿತು. ಆನಂತರ ತೊಡೆ ಸೊಂಟಕ್ಕೆ ಸೇರುವ ಜಾಗದಲ್ಲಿ ಸಣ್ಣ ಬಿರುಕುಬಿಟ್ಟಿದೆ, ಅಲ್ಲಿ ಆಪರೇಟ್ ಮಾಡಲಾಗುವುದಿಲ್ಲ ಬೆಡ್ ರೆಸ್ಟ್ ಒಂದೇ ಪರಿಹಾರ ಎಂಬ ಸಲಹೆಯೊಂದಿಗೆ ಒಂದಿಷ್ಟು ಮಾತ್ರೆ ಪಡೆದು ಮನೆಗೆ ಬಂದಾಯಿತು. ಇನ್ನು ನಲವತ್ತೈದು ದಿವಸಗಳ ಕಾಲ ಅಪ್ಪಯ್ಯ ಮಂಚದಿಂದ ಇಳಿಯುವಂತಿಲ್ಲ. ನಾನೂ ಕೂಡ ರೀಚಬಲ್ ಏರಿಯಾದಲ್ಲಿಯೇ ಇರಬೇಕು ಎಂಬ ತೀರ್ಮಾನ ಅನಿವಾರ್ಯ. "ಭಟ್ರು ಮತ್ತೆ ಬೈಕಿನಿಂದ ಬಿದ್ದಿದ್ವಡ" ಎಂಬ ಸುದ್ದಿ ಕಿವಿಯಿಂದ ಕಿವಿಗೆ ದಾಟುತ್ತಿದ್ದಂತೆ ಹಲವರು ನಮ್ಮ ಮನೆಗೆ ಬರತೊಡಗಿದರು.
ಬಂದವರು ದುಗುಡದ ಮುಖದಲ್ಲಿ " ಅಯ್ಯೋ ಗ್ರಾಚಾರವೇ.." "ಹಿಂಗಾದ್ರೆ ಹ್ಯಾಂಗಾ ಮಾರಾಯಾ" ಮುಂತಾದ ಮಾಮೂಲಿ ಡೈಲಾಗ್ ಹೊಡೆದರೆ ಇನ್ನು ಕೆಲವರು "ಈ ವಯಸ್ಸಿನಲ್ಲಿ ಬೈಕ್ ಹೊಡಿತಾ ಹೇಳಿರೆ ಕೇಳ್ತ್ವಲ್ಲೆ ಅಲ್ದಾ" ಎಂದು ನಾನು ಕರಗುಟ್ಟುತ್ತೇನೆ ಎಂದು ಮುಂದುವರೆಸಲು ನನಗೆ ಬಿಡುತಿದ್ದರು. ನಾನು ಹೌದಾ ಮಾರಾಯ ಎಂದರೆ ಅವರಿಗೆ ಅದೇನೋ ಒಂಥರಾ ಆನಂದ. ಆದರೆ ನಾನು ಬಿಲ್ ಕುಲ್ ಹಾಗೆ ಹೇಳುವ ಗಿರಾಕಿ ಅಲ್ಲ. "ಅಯ್ಯ ಮುರಿಯದೇ ಆದ್ರೆ ಬೈಕ್ ಅಲ್ದಿದ್ರೂ ಆಕ್ತಿತು ತಗ" ಆದರೆ ಅವರಿಗೆ ನನ್ನ ಈ ಡೈಲಾಗ್ ಖುಷಿ ಇಲ್ಲ, " ಆದ್ರೂ...." ಅಂಬ ರಾಗ ಅತ್ತ ಕಡೆಯಿಂದ. ಇರಲಿ ಅದು ಸಹಜ ನನಗೆ ತಲೆ ರಿಂ ಎನ್ನುವುದು ಅದಕ್ಕಲ್ಲ. ಪುರೋಹಿತರೊಬ್ಬರು ಬಂದಿದ್ದರು " ರಾಗು ನೀನು ಈಗಿಂದೀಗ್ಲೆ ಸೊರಬಕ್ಕೆ ಹೋಗು ಔಷಧಿ ತಗಬಾ..." ಅಂದರು. ನಾನು ತಡಮಾಡಲಿಲ್ಲ "ನೀವು ನಿಮ್ಮ ಅಪ್ಪಂಗೆ ಅದೆಲ್ಲೋ ಬೇರೆ ಕಡೆಯಿಂದ ಔಷಧಿ ತಂದಿದೀರಲ್ಲ ಆ ಊರು ಯಾವುದು?"ಅಂದೆ. ಪುರೋಹಿತರು ಮುಂದೆ ಮಾತಾಡಲಿಲ್ಲ. ಕಾರಣ ಸ್ಪಷ್ಟ ಅವರು ಅವರ ಅಪ್ಪ ಅಮ್ಮನ್ನ ಹೊರಹಾಕಿ ಹೆಂಡತಿಯೊಂದಿಗೆ ಸುಖ...? ಸಂಸಾರ ಸಾಗಿಸುತ್ತಿದ್ದರು. ಅಪ್ಪ ವರ್ಷ ಪೂರ್ತಿ ಮಲಗಿದರೂ ಇವರು ಅತ್ತ ತಲೆ ಹಾಕಿ ಮಲಗಲಿಲ್ಲ ಮತ್ತು ವರ್ಶಾಂತದ ಮನೆಗಳಲ್ಲಿ " ಮಾತೃ ದೇವೋ ಭವ, ಪಿತೃ ದೇವೋ ಭವ" ಅನ್ನುವುದನ್ನೂ ಬಿಡಲಿಲ್ಲ.
ಹೀಗಿರುತ್ತೇ ಪ್ರಪಂಚ. ಆದರೂ ನಾವು ಬೇರೆಯವರನ್ನ ಅನ್ನಬಾರದು ಕಾರಣ ಅವರೂ ನಮ್ಮಂತೆ ದೇವರ ಸೃಷ್ಟಿ. ಅವರನ್ನು ಅಂದರೆ ಪರೋಕ್ಷವಾಗಿ ದೇವರನ್ನು ಅಂದಂತೆ ಅಲ್ಲವೇ?. ಹಾಗಾಗಿ ಬೇರೆಯವರ ಸುದ್ದಿ ನಮಗ್ಯಾಕೆ....! ಅಲ್ಲವೆ ?