Thursday, April 5, 2012

ನೀರಿಲ್ಲದ ಜೋಗಕ್ಕೆ ಸಂಗೀತ ಕಾರಂಜಿ ಮೆರುಗು.




ಜೋಗ ಜಲಪಾತ ಏಪ್ರಿಲ್ ಮೆ ತಿಂಗಳಿನಲ್ಲಿ ನೀರಿಲ್ಲದ ಕಾರಣ ನೀರಸ. ಜಲಪಾತದ ಮೆರುಗಿಲ್ಲದೆ ಪ್ರವಾಸಿಗರ ಕೊರತೆಯಿಂದ ಜೋಗ ಸೋರಗುತ್ತದೆ. ಈ ನಿಟ್ಟಿನಲ್ಲಿ ಜೋಗವನ್ನು ಸರ್ವ ಋತು ಪ್ರವಾಸೋದ್ಯಮ ತಾಣವನ್ನಾಗಿಸಲು ಜೋಗ ಅಭಿವೃದ್ಧಿ ಪ್ರಾಧಿಕಾರ ಸಂಗೀತ ಕಾರಂಜಿಯನ್ನು ನಿರ್ಮಿಸಿದೆ.
ಮಂಗಳವಾರದಿಂದ ಪ್ರಾಯೋಗಿಕವಾಗಿ ಸಂಗೀತ ಕಾರಂಜಿಯನ್ನು ಆರಂಭಿಸಿದ್ದಾರೆ. ಸಂಜೆ ೭-೧೫ ಪ್ರತಿ ನಿತ್ಯ ಸಂಗೀತ ಕಾರಂಜಿಯ ಕಾರ್ಯಕ್ರಮ ಆಯೋಜಿಸಲಾಗಿದೆ. ಪಶ್ಚಿಮ ಬಂಗಾಲದ ಪ್ರೀಮಿಯರ್ ವರ್ಲ್ಡ್ ಟೆಕ್ನಾಲಜಿ ಸಂಸ್ಥೆ ೧.೨೦ ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಿರುವ ಕಾರಂಜಿಯನ್ನು ಶೀಘ್ರದಲ್ಲಿ ಅಧಿಕೃತವಾಗಿ ಉದ್ಘಾಟಿಸಲಾಗುವುದು .
ಸಂಗೀತ ಕಾರಂಜಿಯು ಮೈಸೂರಿನ ಬೃಂದಾವನ ಮಾದರಿಯನ್ನು ಹೊಂದಿದ್ದು ಪ್ರವಾಸಿಗರ ಮನ ತಣಿಸುವಲ್ಲಿ ಯಶಸ್ವಿಯಾಗುವ ಭರವಸೆಯನ್ನು ಹೊಂದಿದೆ. ಕಾರಂಜಿಯಲ್ಲಿ ಮೂಡಿಬರುವ ಚಿತ್ರಗಳು ಹಾಗೂ ಅದಕ್ಕೆ ಹಿನ್ನಲೆ ಸಂಗೀತ ಜೋಗದ ಸಂಜೆಯನ್ನು ಮಧುರವನ್ನಾಗಿಸುತ್ತದೆ ಎಂಬುದರಲ್ಲಿ ಸಂಶಯವಿಲ್ಲ. ಲೇಸರ್ ತತ್ರಾಂಶ ಬಳಸಿ ಮೂಡಿಬರುವ ಚಿತ್ರಗಳಲ್ಲಿ ಕ್ರಿಕೆಟ್ ಪಟು ಸಚಿನ್ ತಂಡೂಲ್ಕರ್,ಪಿಟಿ ಉಷಾ, ಪಂಕಜ್ ಅಡ್ವಾಣಿ ಹಾಗೂ ರಾಷ್ಟ್ರನಾಯಕ ಚಿತ್ರಗಳು ಬೆರಗು ಮೂಡಿಸುತ್ತಿವೆ. ಮಳೆಗಾಲದಲ್ಲಿ ಜಲಪಾತದಿಂದ ಹಾಗೂ ಜಲಪಾತದಲ್ಲಿ ನೀರಿಲ್ಲದ ಬೇಸಿಗೆಯಲ್ಲಿ ಸಂಗೀತ ಕಾರಂಜಿಯಿಂದ ಪ್ರವಾಸಿಗರಿಗೆ ಕಣ್ಮನ ತಣಿಸುವ ನಿಟ್ಟಿನಲ್ಲಿ ಜೋಗ ಅಭಿವೃದ್ಧಿ ಪ್ರಾಧಿಕಾರ ಹೊಸ ಹೆಜ್ಜೆಯನ್ನು ಇಟ್ಟಿರುವುದು ಸ್ವಾಗತಾರ್ಹ.