Saturday, May 24, 2008

ಗುರುಗಳು ಮತ್ತು ಹಿತೋಪದೇಶ


ನನಗೆ ನಮ್ಮ ರಾಮಚಂದ್ರಾಪುರಮಠದ ಗುರುಗಳು ಅಂದ್ರೆ ಆಂತರಂಗಿಕವಾಗಿ ತುಂಬಾ ಇಷ್ಟ. ಶಾಸ್ತ್ರ ಸಂಪ್ರದಾಯಗಳು ಒತ್ತಟ್ಟಿಗಿರಲಿ ಅವರು ಸ್ವದೇಶಿ ಗೋತಳಿ ಅಭಿವೃದ್ಧಿ ಎಂಬ ಕಾರ್ಯಕ್ರಮದ ಮೂಲಕ ದೂರದ ಗುಜರಾತಿನಿಂದ ಕಾಂಕ್ರಿಜ್ ತಳಿಯ ಆಕಳನ್ನು ತರಿಸಿಕೊಟ್ಟಿದ್ದಾರೆ. ನಾವು ಕೃಷಿಕರು ತಿಪ್ಪರಲಾಗ ಹಾಕಿದರೂ ಅಲ್ಲಿಂದ ಆ ಉತ್ತಮ ತಳಿಯ ಆಕಳನ್ನು ಅಲ್ಲಿಂದ ತರಿಸಿಕೊಳ್ಳಲಾಗುತ್ತಿರಲಿಲ್ಲ. ನಮ್ಮ ಮನೆಯ ಕೊಟ್ಟಿಗೆಯಲ್ಲಿ ಆ ಆಕಳು(ಸೀತೆ) ಬಂದು ಮೂರು ವರ್ಷ ಆಗಿದೆ. ಕರು ಹಾಕಿದೆ(ಲಕ್ಷ್ಮಿ) ಅದರ ನೋಡಲು ಎರಡು ಕಣ್ಣು ಸಾಲದು.ಕಳೆದ ವರ್ಷ ಬೆಂಗಳೂರಿನ ಪ್ರಸನ್ನ ಅಂತ ಬಿ.ಎಚ್.ಇ.ಎಲ್ ಎಂಪ್ಲಾಯ್ ಬಂದಿದ್ದರು, ಅವರು ಈಗ ಫೋನ್ ಮಾಡಿದಾಗ ಕೇಳುವುದು ಆಕಳ ಸುದ್ದಿಯನ್ನೇ. ಅದೆಲ್ಲಾ ಒತ್ತಟ್ಟಿಗಿರಲಿ ವಿಷಯಕ್ಕೆ ಬರುತ್ತೇನೆ. ನಮ್ಮ ಗುರುಗಳು ಗಂವಾರ ಎಂಬ ಗುಲ್ಬರ್ಗದ ಹಳ್ಳಿಯಲ್ಲಿ ಶಿವಸತ್ರ ಏರ್ಪಡಿಸಿದ್ದರು. ಅಲ್ಲಿಗೆ ನಾನು ಹೋಗಿದ್ದೆ. ಅಲ್ಲಿ ವೇದಿಕೆಯಲ್ಲಿ ಒಂದು ದಿನ ಪ್ರಜಾವಾಣಿಯ ರಂಜಾನ್ ದರ್ಗ ಮಾತಾನಾಡಿದರು. ಅವರು ಬಸವಣ್ಣನ ತತ್ವ ಇಷ್ಟವಾದ ವ್ಯಕ್ತಿಯಂತೆ. ಅವರು ಬಂದ ದಿವಸವೇ ನಮ್ಮ ಶ್ರೀಗಳು ಸಾವಯವ ಗೊಬ್ಬರ ಗೋಮೂತ್ರ, ಅದರಿಂದ ಭೂಮಿಯ ಫಲವತ್ತತೆಯ ಕುರಿತು ಆಶೀರ್ವಚನ ನೀಡಿದರು. ಅದು ಅವರಿಗೆ ಬಹಳ ಇಷ್ಟವಾಯಿತಂತೆ. ಮಾರನೆ ದಿನ ಶಿವನ ಕುರಿತು ಉಪನ್ಯಾಸ ಗುರುಗಳಿಂದ. ಅದು ಪುರಾಣದ ಕತೆಗಳಂತೆ ಒಳ್ಳೆಯ ಜೀವನಕ್ಕೆ ದಾರಿ ತೋರಿಸುವ ಮಾರ್ಗದರ್ಶಿಯಂತೆ ಇತ್ತು. ಶ್ರೀಗಳ ಆಶೀರ್ವಚನ ವೆಂದರೆ ಸಾತ್ವಿಕರೀತಿಯಲ್ಲಿ ಬದುಕುವ ಮಾರ್ಗದರ್ಶನ . ರಾಮನ ಕತೆ , ಶಬರಿ ಕತೆ, ಶಿವನ ಕತೆ, ಅಲ್ಲೊಂದು ಇಲ್ಲೊಂದು ಉಪಕತೆ ಹೀಗೆ ಸಾಗುತ್ತಿರುತ್ತದೆ. ಗುರುಗಳನ್ನು ನಂಬಿ ಬರುವವರೆಲ್ಲರೂ ಧಾರ್ಮಿಕ ವಿಧಿವಿಧಾನಗಳನ್ನು ಅನುಸರಿಸ ಹೊರಟವರು ಮತ್ತು ಅನುಸರಿಸುತ್ತಾ ಇರುವವರು.
ಈಗ ನನಗೆ ಸಮಸ್ಯೆ ಇರುವುದು ಎಲ್ಲಿ ಗೊತ್ತಾ.? ಕೆಟ್ಟದಾಗಿ ಬದುಕುತ್ತಿರುವವರು ಪ್ರವಚನಕ್ಕೆ ಬರುವುದೇ ಇಲ್ಲ. ಬಂದವರು ಒಳ್ಳೆಯ ದಾರಿಯಲ್ಲಿ ಇರುವವರು ಎಂದಾಯಿತು. ಮತ್ತೇಕೆ ಗೊತ್ತಿದ್ದವರಿಗೆ ಅದನ್ನೇ ಹೇಳುತ್ತಾರೆ. ಎಂದು ನನ್ನ ಹತ್ತಿರದ ಮುತ್ತುಬಾವ ಕೇಳಿದರು. ಅರೆ ಹೌದಲ್ಲ ಅಂತ ಅನಿಸಿತು.
ತಪ್ಪೋ ಒಪ್ಪೋ ಯಾರಿಗೆ ಗೊತ್ತು ? ಸಾತ್ವಿಕರಿಗೆ ಪದೆ ಪದೇ ಹೇಳುವುದಕ್ಕಿಂತ, ದಾರಿ ತಪ್ಪಿದವರನ್ನು ಎಳೆದು ತರುವುದೇ ಲೇಸೇನೋ ಅಂತ ಅನ್ನಿಸಿಬಿಟ್ಟಿತು.ಅರೆ ದಾರಿ ತಪ್ಪಿದವರು ಅಂತ ಯಾರನ್ನ ಗುರುತಿಸುವುದು? ಹೇಗೆ ಗುರುತಿಸುವುದು ಮಾನದಂಡ ಯಾವುದು? ನಾವೇ ತಪ್ಪು ದಾರಿಯಲ್ಲಿರಬಹುದು? ಇದು ಸರಿ ಅಂತ ಹೇಗೆ? ಎಂಬಂತಹ ನೂರಾರು ಪ್ರಶ್ನೆಗಳು ಮಳೆಗಾಲದ ಆರಂಭದಲ್ಲಿ ಒಂದರ ಹಿಂದೆ ಬರುವ ವರಲೆಯಂತೆ ಹುಟ್ಟಿಬರಲು ಶುರುವಾಯಿತು. ಓ ಹೋ ಇದು ನನ್ನ ಮಟ್ಟಕ್ಕೆ ಅಲ್ಲ ಎಂದು ಕೈಬಿಟ್ಟೆ. ಕವಳದ ಸಿಬಿಲಿನಲ್ಲಿ ಕೈ ಇಟ್ಟೆ.
ಇದು ಅಗಾಧ ಪ್ರಪಂಚ, ಗುಟ್ಟು ಬಿಟ್ಟು ಕೊಡದ ಪ್ರಕೃತಿ. ಕುರುಡರು ಆನೆ ಮುಟ್ಟಿದ ಕತೆ. ಲೋಕದ ಡೊಂಕು ... ಅಬ್ಬಾ ನನ್ನ ಬಳಿ ಅಂತೂ ಸಾಧ್ಯವಿಲ್ಲದ್ದು . ಇಲ್ಲಿ ಯಾವುದು ತಪ್ಪೋ ಯಾವುದು ಸರಿಯೋ ಅರ್ಥವಾಗದ ಗೊಂದಲ. ಪಿ.ಭಾರತೀಶ ಹೇಳುವಂತೆ ಶೀಘ್ರದಲ್ಲಿ ಏನೋ ಒಂದು ಸಂಭವಿಸುತ್ತದೆ ಎಂಬ ನಿರೀಕ್ಷೆಯಲ್ಲಿ ಹಿಂದಿನಿಂದಲೂ ಮುಂದಿನತನಕವೂ ಬದುಕು.

ಗುಟ್ಕಾ ಮತ್ತು ಬೋಳಿಮಗ


ಬೆಂಗಳೂರಿನ ಮಳೆ ಎಂದರೆ ಗಿಜಿ ಗಿಜಿ ಪಚ ಪಚ. ಕಪ್ಪನೆಯ ನೀರು ವ್ಯಾ.. ಜಯನಗರದ ಎಂಟನೇ ಬ್ಲಾಕಿನ ಮೂಲೆ ಅಂಗಡಿಯಲ್ಲಿ ಮಳೆರಾಯನಿಂದ ತಪ್ಪಿಸಿಕೊಂಡು ಅವನನ್ನೇ ನೋಡುತ್ತಾ ನಿಂತಿದ್ದೆ. "ಯಂತಾ ಮಳೇರಿ.. ಮಾಣಿಕ್ ಚಂದ್ ಕೊಡಿ... ಗುಟ್ಕಾ ಅಂತ ಇಲ್ದಿದ್ರೆ ಚಳಿ ಹಿಡಿದು ಸಾಯ್ಬೇಕಿತ್ತು...ಅಲ್ಲಾ ಯಾವ ಬೋಳಿಮಗ ಕಂಡು ಹಿಡಿದಾ ಈ ಗುಟ್ಕಾನ ಅಂತ " ಹಿಂದಿನಿಂದ ಹೆಣ್ಣು ದನಿ ಕೇಳಿದಾಗ ಸ್ವಲ್ಪ ಅಚ್ಚರಿಗೊಂಡು ತಿರುಗಿ ನೋಡಿದೆ. ಊರಲ್ಲಿ ಗಂಡು ಮಕ್ಕಳು ಗಬ್ಬುವಾಸನೆಯ ಗುಟ್ಕಾ ತಿನ್ನುವುದನ್ನು ಎಲ್ಲರೂ ನೊಡಿದ್ದಾರೆ,ಪೇಟೆಯಲ್ಲಿ ಸಣ್ಣ ಮಕ್ಕಳು ತಿನ್ನುವುದನ್ನು ನಾನೂ ನೋಡಿದ್ದೀನಿ. ಅಕ್ಕ,ಹೆಂಡತಿ, ಅಮ್ಮ, ಮುಂತಾದ ಮಹಿಳಾಮಣಿಗಳ ಮತ್ತು ಪೆಜತ್ತಾಯರಂತಹ ಸಾತ್ವಿಕ ದಂಡಿನ ಹತ್ತಿರ ನಾನೂ ವಾಚಾಮಗೋಚರ ಉಗಿಸಿಕೊಂಡಿದ್ದೀನಿ. ಗುಟ್ಕಾ ಹಾಕದವರಿಗೆ ಗಬ್ಬು ವಾಸನೆಯ ಸೂಸುವ ತಿನ್ನುವವರಿಗೆ ಆಸ್ವಾದ ನಿಡುವ ಸ್ಟಾರ್ ಪಾನ್ ಪರಾಗ್ ನಾನೂ ತಿಂದಿದ್ದೀನಿ, ಆದರೆ ದೇವರಾಣೆ ಹೇಳ್ತೀನಿ ಹೆಂಗಸರು ಈ ಪಾಟಿ ಗುಟ್ಕಾ ತಿನ್ನುವುದನ್ನು ನೋಡಿರಲಿಲ್ಲ. ಠಾಕುಠೀಕಾಗಿದ್ದ ಸುಮಾರು ಐವತ್ತರ ಹರೆಯದ ಆ ಹೆಂಗಸು ಖರೀದಿಸಿದ್ದು ಅನಾಮತ್ತು ಇಪ್ಪತ್ತು ಗ್ಗುಟ್ಕಾ . ಇಷ್ಟಗಲಾ ಕಣ್ಣುಬಿಟ್ಟು ನೋಡುತ್ತಿದ್ದ ನನ್ನನ್ನು ನೋಡಿದ ಆಕೆ " ದರಿದ್ರದ್ದು ಕಣ್ರಿ ಬಿಡೋಕಾಗಲ್ಲ, ಕೆಟ್ಟ ಗಳಿಗೇಲಿ ಕಲ್ತೆ" ಎಂದು ಅರ್ದಂಬರ್ದ ಸ್ವಗತದ ಮಾತನ್ನು ಹೇಳಿ ಪರ್ರನೆ ಗುಟ್ಕಾ ಪ್ಯಾಕೆಟ್ ಹರಿದು ಬಾಯಿಗೆ ಸುರಿದುಕೊಂಡು ಮಳೆ ನಿಂತ ಕೂಡಲೆ ಅಲ್ಲಿಂದ ರೈಟ್ ಎಂದಳು. ನನ್ನೋಳಗಿದ್ದ ಅಡಿಕೆ ಬೆಳೆಗಾರನಿಗೆ ಯೆಲಾ ಅಡಿಕೆಬೆಳೆಗಾರ ನನ್ಮಗನೆ ಯಾವಾಗ್ಲೂ "ಅಡಿಕೆ ರೇಟ್ ಒಂದಲ್ಲಾ ಒಂದು ದಿನ ಬಿದ್ದೋಗುತ್ತೆ ಜೀವನ ಹೆಂಗೆ ಮಾಡ್ತೀಯಾ ಅಂತ" ಹೆದರುಸ್ತಿದ್ದೆ, ಈ ಪಾಟಿ ಹೆಂಗಸರು ಮಕ್ಳೆಲ್ಲಾ ತಿಂದು ಹಾಳಾಕ್ತೀನಿ ಅಂತಾ ಇದಾರೆ, ಪ್ರಪಂಚ ಸುಟ್ಟು ನೀನು ಗುಮ್ ಅಂತ ಆರಾಮಾಗಿ ಇರು" ಅಂತ ಹೇಳಿಕೊಂಡೆ. ಅಡಿಕೆ ಬೆಳೆದು ತಾವು ತಿನ್ನದೆ ಇರೋರು ಬುದ್ದಿವಂತರು. ಬೆಳೆದು ತಿನ್ನೋರು ನನ್ನಂಗೆ ಮಧ್ಯಮವಂತರು, ಪಾಪ ಕೊಂಡು ತಿನ್ನೋರು ಗ್ರಾಚಾರವಂತರು ಅಂತ ಅನ್ನಿಸ್ತು. ಅದೇ ಸತ್ಯ ಅಂತಲ್ಲ , ಸತ್ಯ ಇದ್ರೂ ಇರಬೈದು.. ಹ ಹ.ಹ . ಮನೆಗೆ ಬಂದು ಅಡಿಕೆ ಮೇಲೆ ಒಂದು ಕತೆ ಬರೆಯಲು ಕುಂತೆ. ಅದು ಬರೆಯೋಕೆ ಅಂತ ಕುಂತಿದ್ದೊಂದು ಬರೆದಿದ್ದೊಂದು ಅಂತ ಆಗೋಯ್ತು. ಕತೆ ಕಳ್ಸಿದ ವಾರದಲ್ಲೇ ಕನ್ನಡ ಪ್ರಭದ ವಿದ್ಯಾರಶ್ಮಿಯವರು ಮುಂದಿನ ವಾರ ಸಾಪ್ತಾಹಿಕಪ್ರಭದಲ್ಲಿ ನಿಮ್ಮ ಕತೆ ಬರುತ್ತೆ ಅಂತ ಮೈಲ್ ಮಾಡಿಯೇ ಬಿಟ್ರು. ಇಲ್ಲಿದೆಯಾ ನೊಡಿ:- ಕನ್ನಡ ಪ್ರಭ ವೆಬ್ ಸೈಟ್ ಓಪೆನ್ ಆದ್ಮೇಲೆ ಪೇಜ್ ನಂಬರ್ ಹದಿನೈದರ ಮೇಲೆ ಕ್ಲಿಕ್ ಮಾಡಿ. http://www.kannadaprabha.com/pdf/epaper.asp?pdfdate=4/20/2008

ಜೇನು ಮತ್ತು ನಾನು



ಜೇನು ಅದು ಹ್ಯಾಗೋ ನನ್ನನ್ನು ಸೆಳೆದುಬಿಡ್ತು. ವಾವ್ ಏನ್ ಮಜ ಇದೆ ಗೊತ್ತಾ ಅದ್ರಲ್ಲಿ. ಜೀವನ ಇದೆ ನೋವು ಇದೆ ನಲಿವು ಇದೆ. ಬೆಳಿಗ್ಗೆ ಮುಂಚೆ ಎದ್ದು ಡೈರಿಗೆ ಹಾಲು ಕೊಟ್ಟು ಬಂದು ಒಂದು ಬಿಸಿ ಬಿಸಿ ಕಾಫಿ ಕುಡಿದು ಇವತ್ತು ಜೇನು ತುಪ್ಪ ತೆಗಿಬೇಕು ಅಂತ ಅನ್ಕೊಳ್ಳೋದ್ರಿಂದ ಅದರ ಮಜ ಶುರುವಾಗುತ್ತೆ. ನಿಧಾನ ಪೆಟ್ಟಿಗೆ ಮುಚ್ಚಳ ತೆಗೆದಾಗ ಒಂದ್ಸಾರಿ ಪಾಪ ಅನ್ಸುತ್ತೆ ಒಂದೊಂದು ಗ್ರಾಂ ಕೆಂಪನೆಯ ತುಪ್ಪಕ್ಕೂ ಹತ್ತಾರು ಕಿಲೋಮೀಟರ್ ಓಡಾಡಿ ಸಂಗ್ರಹ ಮಾಡಿರೋ ಅವುಗಳ ಶ್ರಮವನ್ನ ಒಂದು ಕ್ಷಣದಲ್ಲಿ ತತ್ತಿ ಸಮೇತ ಮಷೀನಿನಲ್ಲಿಟ್ಟು ತುಪ್ಪ ತೆಗೆದು ಬಾಟ್ಲಿ ತುಂಬಿ ನಾನು ನೆಮ್ಮದಿ ಕಾಣ್ತೀನಲ್ಲ ಇದು ಸರೀನಾ ? ಅಂತ ಒಳಮನಸ್ಸು ಕೇಳುತ್ತೆ. ಮತ್ತೆ ಅಯ್ಯೋ ಬೆಪ್ಪು ಮುಂಡೇದೆ ಪ್ರಪಂಚ ಅನ್ನೋದು ಕಳ್ಳ ತನದ ಮೇಲೆ ನಿಂತಿದೆ. ಕಳ್ಳತನ ಅನ್ನೋದು ಪ್ರಕೃತಿ ಸಹಜ, ಮನುಷ್ಯ ನಿತ್ಯ ಕದೀತಾನೆ ಇರ್ತಾನೆ ಬೇರೆ ಬೇರೆ ವೇಷ ಹಾಕ್ಕೋತಾನೆ ಬೇರೆ ಬೇರೆ ಹೆಸರು ಇಟ್ಕೋತಾನೆ ನೀ ಮುಂದುವರಿ ಅಂತ ಹೊರಮನಸ್ಸು ಕದಿಯುವ ಕೆಲಸಕ್ಕೆ ಮಣೆ ಹಾಕುತ್ತೆ. ಹೀಗೆ ತುಪ್ಪ ತೆಗೆಯೋ ಕೆಲಸದ ನಡುವೆ ಎಲ್ಲೋ ಓಡಿದ ತಲೆಯಲ್ಲಿ ಜೇನು ತತ್ತಿ ಅಲ್ಲೆಲ್ಲಿಯೋ ತಾಕಿ ಒಂದೆರಡು ಹುಳುಗಳಿಗೆ ಪೆಟ್ಟು ಆಗುತ್ತೆ. ಎಷ್ಟೆಂದರೂ ಅವು ಜೇನು, ಅವುಕ್ಕೆ ಸಾಕಿದವರು ಆತ್ಮೀಯರು ಮುಂತಾದ(ನಾಯಿ ಜಾನುವಾರುಗಳಿಗೆ ಇದ್ದ ಹಾಗೆ) ಭಾವನೆಯ ವಿಷಯ ಗೊತ್ತಿಲ್ಲ. ಹಾಗಾಗಿ ಕುಂಡೆಯಲ್ಲಿರುವ ಅಂಬನ್ನು ನನ್ನ ದೇಹಕ್ಕೆ ಚುಚ್ಚುತ್ತೆ. ಒಮ್ಮೆ ಆ ಅಂಬಿನ ವಿಚಿತ್ರ ವಾಸನೆಗೆ ನಖಶಿಕಾಂತ ಸಿಟ್ಟು ಕಣ್ಣೀರು ಬಂದರೂ ಅನಿವಾರ್ಯವಾಗಿ ತಡಕೊಂಡು ಮುನ್ನುಗ್ಗುತ್ತೇನೆ. ಕಾರಣ ನನ್ನ ಸಿಟ್ಟು ತೀರಿಸಿಕೊಳ್ಳಲು ಹೋದರೆ ನೂರಾರು ಹುಳಗಳಿಗೆ ಸಿಟ್ಟು ಬಂದು ನಾನು ಕೊನೆಗೆ ಆಸ್ಪತ್ರೆ ಸೇರಬೇಕಾಗಬಹುದು ಎಂಬ ಭಯ. ಹುಳಗಳನ್ನು ಬೇರ್ಪಡಿಸಿದ ತತ್ತಿಯನ್ನು ಮಿಷನ್ನಿನಲ್ಲಿ ಇಟ್ಟು ಗರಗರ ತಿರುಗಿಸಲು ಪ್ರಾರಂಭಿಸಿದಾಗ ತುಪ್ಪ ಜೊರ್‍ರ್ ಅಂತ ಬೀಳಲು ಶುರು. ಹೀಗೆ ೧೦ ತತ್ತಿಗಳನ್ನು ಪೆಟ್ಟಿಗೆಯಲ್ಲಿಟ್ಟು ತಿರುಗಿಸಿ ನಂತರ ತುಪ್ಪ ಫಿಲ್ಟರ್ ಮಾಡಿ ಬಾಟಲಿ ತುಂಬಿ ಎರಡೂ ಕೈಯಲ್ಲಿ ಹಿಡಿದು ನೋಡಿದಾಗ ಅದೆಷ್ಟು ಮಜ ಸಿಗುತ್ತೆ ಗೊತ್ತಾಅ.. ಅಬ್ಬ. ಕದ್ದ ತುಪ್ಪಕ್ಕೆ ಇಷ್ಟು ಮಜ ಇನ್ನು ನಾನೇ ಹೂವು ಕೊಯ್ದು ಮಾಡಿದ್ದರೆ. ಇರಲಿ ಅಷ್ಟರಲ್ಲಿ ಕಳ್ಳ ಮನಸ್ಸು ಇಂದು ಬೆಳಿಗ್ಗೆ ೩೦೦ ರೂಪಾಯಿ ದುಡಿದೆಯಲ್ಲೋ ಅಂತ ದುಡ್ಡಿನ ಲೆಕ್ಕಾಚಾರಕ್ಕೆ ಇಳಿಯುತ್ತದೆ. ಬೇವರ್ಸಿ ಮುಂಡೇದು ದುಡ್ಡಿನ ಹಿಂದೆ ಬೀಳಬೇಡ ಅಂತ ಎಷ್ಟು ಸಲ ಹೇಳೋದು ನಿಂಗೆ ಅಂತ ಒಳಮನಸ್ಸು ಗದರಿದ ಮೇಲೆ ಕಪಾಟಲ್ಲಿ ತುಪ್ಪ ಇಟ್ಟು ತೋಟಕ್ಕೆ ರೈಟ್. ಕಪಾಟಲ್ಲಿಟ್ಟ ಕದ್ದ ತುಪ್ಪ ಚೆನ್ನಾಗಿ ಕೆಂಪಗೆ ಸ್ವೀಟಾಗಿ ಇದೆ. ನನ್ನ ಕಳ್ಳತನದಲ್ಲಿ ನಿಮಗೂ ಪಾಲು ಬೇಕಾ, ಊರಿಗೆ ಬಂದಾಗ ಬನ್ನಿ ತಿಂದು ಪಾಪಿಗಳಾಗಿ................

ನಮಸ್ಕಾರ


ಬೆಳೆಗ್ಗೆ ಮುಂಚೆ ಹಾಲು ಕೊಟ್ಟು ಮನೆಗೆ ನಡೆದುಕೊಂಡು ಹೋಗುವಾಗ ಹೀಗೊಂದು ನಮಸ್ಕಾರ ಎನ್ನುವ ಶುಭಾಶಯ ಎದುರು ಬಂದ ವ್ಯಕ್ತಿಯಿಂದ ಸಿಗುತ್ತದೆ. ಅದಕ್ಕೆ ಪ್ರತಿ ನಮಸ್ಕಾರ ನಾನೂ ಹೇಳುತ್ತೇನೆ. ಸತ್ಯವಾಗಿಯೂ ಅದು ಅಷ್ಟಕ್ಕೆ ನಿಲ್ಲಬೇಕಾದ ಯೋಚನೆ. ಆದರೆ ಅದು ಹಾಗಾಗುವುದಿಲ್ಲ. ಆತನ ನಮಸ್ಕಾರದಲ್ಲಿ ಕೊಂಕು ಹುಡುಕಲು ಶುರುವಾಗುತ್ತದೆ. ಈತ ನನಗೆ ನಮಸ್ಕರಿಸಿದ್ದು ಯಾವ ಉದ್ದೇಶದಿಂದ? ನನ್ನಿಂದ ಲಾಭವನ್ನೇನಾದರೂ ಆತ ನಿರೀಕ್ಷಿಸಿರಬಹುದಾ? ಇಲ್ಲದಿದ್ದರೆ ಪುಗ್ಸಟ್ಟೆ ನಮಸ್ಕಾರ ಹೇಳಲು ಆತನಿಗೆ ನಾನೇ ಬೇಕಾಗಿತ್ತಾ. ಹೀಗೆ ಒಂದರ ಹಿಂದೆ ಒಂದು ಆಲೋಚನೆ ಬೆನ್ನೆತ್ತಿ ಸುತ್ತಲಿದ್ದ ಸುಂದರ ಕಾಡು, ಹಾರುತ್ತಿರುವ ಬೆಳ್ಳಕ್ಕಿ,ಕೂಗುತ್ತಿರುವ ನವಿಲು, ಹರೆಯುತ್ತಿರುವ ಚೊರಟೆ ಯಾವುದನ್ನೂ ಅಸ್ವಾದಿಸಲಾಗದೆ ಪೊಳ್ಳು ನಮಸ್ಕಾರದ ಹಿಂದಿನ ಪೊಕ್ಕು ಆಲೋಚನೆಗೆ

ಒಂದು ಕಿಲೋಮೀಟರ್ ನಡಿಗೆ ವ್ಯರ್ಥವಾಗುತ್ತದೆ. ಇದು ಒಂದು ಕಿಲೋಮೀಟರ ನಡಿಗೆಯ ಪ್ರಶ್ನೆಯಷ್ಟೇ ಅಲ್ಲ ಜೀವನದ ನಲವತ್ತು ವರ್ಷದ ನನ್ನ ನಡಿಗೆ ಇಂತಹ ಪೊಕ್ಕು ಆಲೋಚನೆಗೆ ವ್ಯರ್ಥವಾಗಿದ್ದು ನೆನಪಿಗೆ ಬರುತ್ತೆ. ಆವತ್ತು ನನ್ನ ೧೮ ನೇ ಕಿಲೋಮೀಟರ್ ನಡಿಗೆ ಇರಬಹುದು ಒಂದು ದಿನ ಸೊಂಪಾಗಿ ಬೆಳೆಯುತ್ತಿದ್ದ ಭತ್ತದ ಒಂದು ಎಕರೆ ಗದ್ದೆಗೆ ಅಡಿಕೆ ತೋಟ ತುಂಬುವ ಆಲೋಚನೆ ಬಂತು. ಆದರೆ ಆ ಆಲೋಚನೆಯ ಬೆನ್ನ ಹಿಂದೆಯೇ ಅಡಿಕೆ ಎಂದರೆ ಅದು ಮಾದಕ ಪದಾರ್ಥದಂತೆ. ತಂಬಾಕಿಲ್ಲದ ಅಡಿಕೆ ಯಾರೂ ತಿನ್ನುವುದಿಲ್ಲ. ಅದರಿಂದ ಸಮಾಜಕ್ಕೆ ಹಾನಿಯೇ ಹೊರತು ಲಾಭವಿಲ್ಲ. ಕಂಡವರ ಮನೆಗೆ ಬೆಂಕಿ ಇಟ್ಟು ಬೆಂಕಿಯ ಬೆಳಕು ನಾವು ಅನುಭವಿಸಬಾರದು. ಆಹಾರ ಪದಾರ್ಥ ಬೆಳೆದರೆ ಸಮಾಜಕ್ಕೆ ಒಳಿತು. ಈಗಿರುವ ಅಡಿಕೆ ಸಾಕು. ಸುತಾರಾಂ ಇನ್ನೊಂದು ಇಂಚು ಜಾಗವನ್ನು ಅಡಿಕೆಗಾಗಿ ವಿಸ್ತರಿಸಬಾರದು, ಹೇಗಾದರೂ ಪ್ರಯತ್ನಿಸಿ ಈಗಿರುವ ಅಡಿಕೆಯನ್ನು ಕೈಬಿಡಬೇಕು.ಸಾಧ್ಯವಾದರೆ ಜೀವನಕ್ಕೆ ಬೇರೆ ಉತ್ತಮ ದಾರಿ ಹುಡುಕಬೇಕು . ಆದರೆ ಕೂಲಿ ಆಳಿನ ಸಮಸ್ಯೆ ಯಿಂದ ಗದ್ದೆ ಮಾಡಿಸಲಾಗುವುದಿಲ್ಲ . ಸರಿ ತೆಂಗು ಹಾಕೋಣ ಅದು ಒಳ್ಳೆಯದು. ಎಂಬ ಒಂದಿಷ್ಟುಜನರ ಒಳ್ಳೆಯ ಆಲೋಚನೆಗೆ ನಾನು ಪುಟಕೊಟ್ಟೆ ಅಡಿಕೆ ಕೈಬಿಟ್ಟೆ. ಆವಾಗ ಅಕ್ಕಪಕ್ಕದವರು ಅಡಿಕೆ ಹಾಕು ಎಂದರು. ಕೇಳಲಿಲ್ಲ. ಅವರು ಅಡಿಕೆ ತೋಟ ಎಬ್ಬಿಸಿದರು . ನಾನು ತೆಂಗಿಗೆ ನೀರು ಉಣಿಸುತ್ತಿದ್ದೆ. ನೋಡನೊಡುತ್ತ ಅವರು ಜಣ ಜಣ ಎಣಿಸಿದರು. ನಾನು ಕಾಯಿ ಎಣಿಸುತ್ತಿದ್ದೆ. ಒಂದು.... ಎರಡು.... ಮೂರು...... ಒಂದು ತೆಂಗಿನ ಕಾಯಿಗೆ ಖರ್ಚಾದದ್ದು ೫೦ ರೂಪಾಯಿ, ಅದರ ಮಾರಾಟ ಬೆಲೆ ೮ ರೂಪಾಯಿ . ತೆಂಗು ಒಳ್ಳೆಯದು ಎಂದು ಹಾಗೆ ಮಾಡಿದೆ ಮತ್ತು ತೋಪಾದೆ.

ಇನ್ನಾದರೂ ಪೊಕ್ಕು ಆಲೋಚನೆಗೆ ಚುಕ್ಕಿ ಹಾಕಬೇಕು. ಒಕ್ಕಣ್ಣು ರಾಜ್ಯ ಇದು .ನಮಸ್ಕಾರ ಎಂದರೆ ನಮಸ್ಕಾರ ಅದರ ಹಿಂದೆ ಏನಿದೆಯೋ ಅವನಿಗೆ ಅವನದು ಗೊತ್ತು ನನಗೆ ನನ್ನದು ಗೊತ್ತು.

Friday, May 23, 2008

ಹಾಯ್

ಈ ಬ್ಲಾಗೂ ಬರೀಬೇಕು ಅಂತ ಬರೆದಿದ್ದಲ್ಲ. ಬರೀಬಾರ್ದು ಅಂತ ಬಿಟ್ಟಿದ್ದೂ ಅಲ್ಲ. ಎಲ್ರಿದ್ದೂ ಬ್ಲಾಗ್ ಇರುತ್ತೆ ನಂದೂ ಒಂದಿರ್ಲಿ ಅಂತ ಶುರು ಮಾಡಿದ್ದು. ಇಲ್ಲಿ ಸತ್ಯವನ್ನು ಮಾತ್ರಾ ಬರೀಬೇಕು ಅಂತ ತೀರ್ಮಾನ ಮಾಡಿಬಿಟ್ಟಿದ್ದೀನಿ. ಇದರಿಂದ ಸಿಕ್ಕಾಪಟ್ಟೆ ಸಮಸ್ಯೆ ಅಂತ ಖಂಡಿತಾ ಗೊತ್ತು. ಬದುಕಿದ್ದಾಗ ಸತ್ಯ ಹೇಳ್ದೋರು ಸತ್ತಮೇಲೆ ವ್ಯಕ್ತಿ ಆಕ್ತಾರಂತೆ. ಬದುಕಿದ್ದಾಗ ಸುಳ್ಳು ಹೇಳೋರು ವರ್ತಮಾನದಲ್ಲಿ ಸುಖಿಗಳಂತೆ. ಸುಳ್ಳು ಅಂದ್ರೆ ನೀನು ಚೆನ್ನಾಗಿದ್ದೀಯಾ.. ಚೆನ್ನಾಗಿ ಬರೀತೀಯಾ.. ಮುಂತಾದವುಗಳು. ಇದಕ್ಕೆ ಯಾರು ಬೇಕಾದ್ರೂ ಕಾಣಿಕೆ ಸಲ್ಲಿಸಬಹುದು.. ಶುರು ಮಾಡಿ ಕಾಮೆಂಟ್ ಗಳನ್ನ...