"ತಬಕಲು ತಗ ಬಾರಾ" ಅಂತ ಅಂದ್ರೆ ಈಗಿನ ತಲೆ ಮಾರಿನವರಿಗೆ ಅರ್ಥವೇ ಆಗಲಿಕ್ಕಿಲ್ಲ. ಹೌದು ಹಾಗಂದರೆ ಏನು? ಅಂದಿರಾ. ಎಲೆಅಡಿಕೆ ಹರಿವಾಣ ಕಣ್ರಿ. ಅದೇ ಕವಳದ ಸಿಬಿಲು. ಎಲೆ ಅಡಿಕೆ ಅಂದ್ರೆ ಗೊತ್ತಾಯಿತು ಅದೇನು ಹರಿವಾಣ? ಅದೆಂತದು ಕವಳದ ಸಿಬಿಲು?. ಎಂಬ ಪ್ರಶ್ನೆ ನಿಮ್ಮಿಂದ ಅಂತ ನನಗೆ ಗೊತ್ತು. ಹರಿವಾಣ ಅಂದ್ರೆ ಅಚ್ಚ ಕನ್ನಡ...! ದಲ್ಲಿ ಪ್ಲೇಟ್ ಅಂತ....!
"ಓಹೋ ಪ್ಲೇಟಾ ... ಹಾಗೆ ಹೇಳಿ ಮತ್ತೆ ಅದೇನೋ ಹರಿವಾಣ ತಬಕಲು ಅಂತೆಲ್ಲಾ ಹೇಳಿದರೆ ನಮಗೆ ಹೇಗೆ ತಿಳಿಯಬೇಕು?. ಆಮೇಲೆ ಕವಳದ ಸಿಬಿಲು.. ಅಂದ್ರೆ ? ಎಂದು ನೀವು ಉದ್ಗಾರ ತೆಗಯಬಹುದು. ಅದೂ ಅದೆ. ಅವೆಲ್ಲಾ ಆಡು ಸ್ಥಳೀಯ ಭಾಷೆಗಳು. ಇರಲಿಬಿಡಿ ಈಗ ಅರ್ಥ ಆಯಿತಲ್ಲ ಮುಂದೆ ಹೋಗೋಣ.
ನಮ್ಮ ಕೃಷಿಕರ ಮನೆಗಳಲ್ಲಿ ಜಗುಲಿ( ಎದುರಿನ ಹಜಾರ) ಯ ಮೇಜಿನ ಮೇಲೆ ಹೀಗೊಂದು ಬಟ್ಟಲು ಎಲೆ ಅಡಿಕೆ ಸುಣ್ಣ ಗಳಿಂದ ಸಾಲಂಕೃತಗೊಂಡು ತಣ್ಣಗೆ ಕುಳಿತಿರುತ್ತದೆ. ಈಗೆಲ್ಲಾ ಸ್ಟೀಲ್ ಪ್ಲೇಟ್ ಸಾಮಾನ್ಯವಾಗಿದೆ. ಆದರೆ ಸುಮಾರು ಮೂವತ್ತು ವರ್ಷಗಳ ಹಿಂದೆ ಈ ತಬಕಲು ಎನ್ನುವ ಬಟ್ಟಲು ಒಂದು ಘನಗಂಭೀರತೆಯನ್ನು ಹೊಂದಿರುತ್ತಿತ್ತು. ಮರದಿಂದ ಮಾಡಿದ ಸಾಲಂಕೃತ ಬಟ್ಟಲು, ಹಿತ್ತಾಳೆಯ ಅಂದದ ಬಟ್ಟಲು. ಪಂಚಲೋಹದ ಬಟ್ಟಲು ತಾಮ್ರದ ಕವಳದ ಸಿಬ್ಲು. ಹೀಗೆ ಅವರವರ ಮಟ್ಟಕ್ಕೆ ತಕ್ಕುದಾದ ನಾನಾ ತರಹದ ಬಟ್ಟಲು ಕಾಣಸಿಗುತ್ತಿತ್ತು. ಈಗಲೂ ಹಲವಾರು ಮನೆಗಳಲ್ಲಿ ಹಲವಾರು ತರಹದ ಹರಿವಾಣಗಳು ಸಿಗುತ್ತವೆ. ಆದರೆ ಮೊದಲಿನಷ್ಟು ವಿವಿಧತೆ ಕಡಿಮೆಯಾಗಿದೆ.
ನನ್ನ ಆಪ್ತರಾದ ಪೆಜತ್ತಾಯರ ಬೆಂಗಳೂರಿನ ಮನೆಯಲ್ಲಿದ್ದ ಅಂತಹ ಒಂದು ಪಂಚಲೋಹದ ಎಲೆಅಡಿಕೆ ಹರಿವಾಣವನ್ನು ನಮ್ಮ ಮನೆಗೆ ತಂದು ತಂದೆಯವರಿಗೆ ಕೊಟ್ಟೆ. ಪೆಜತ್ತಾಯರು ಅಡಿಕೆ ಬೆಳೆಗಾರರು ಆದರೆ ಎಲೆಅಡಿಕೆ ಹಾಕರು ಹಾಗಾಗಿ ಅದು ಅಲ್ಲಿ ತನ್ನ ಕುಲಕಸುಬನ್ನು ಮಾಡದೆ ಮೂಲೆಯಲ್ಲಿ ಕುಳಿತಿತ್ತು. ಪೆಜತ್ತಾಯರ ಕೊಡುಗೆ ಈಗ ನಮ್ಮ ಮನೆಯಲ್ಲಿ ತನ್ನ ಡ್ಯೂಟಿ ಮಾಡುತ್ತಿದೆ. ಆಮೆಯ ರೂಪದ ಈ ಪಂಚಲೋಹದ ತಬಕಲು ತೂಕವೂ ಇರುವುದರಿಂದ ಹಾಗೂ ನೋಡಲೂ ಅಪರೂಪದ ರಚನೆ ಇರುವುದರಿಂದ ನಮ್ಮ ಮನೆಗೆ ಬರುವ ಅತಿಥಿಗಳ ಕಣ್ಣು ಒಮ್ಮೆ ತಬಕಲಿನತ್ತ ಹೋಗಿ ಅಬ್ಬಾ...! ಎಂಬ ಉದ್ಗಾರವನ್ನು ಹೊರಡಿಸುತ್ತಿದೆ. ಹಾಗೆಯೇ ಅವರ ಬಾಯನ್ನೂ ಕೆಂಪಗಾಗಿಸುತ್ತಿದೆ.
ಒಮ್ಮೆ ಬರ್ರಲಾ... ತಬಕು ನೋಡಿಕೊಂಡು ಎಲೆ ಅಡಿಕೆಹಾಕಿ ಹೋಗುವಿರಂತೆ.
ಹಾಗೆಯೇ ಇನ್ನು ಮಲೆನಾಡಿನ ಮನೆಗಳಿಗೆ ಹೋದಾಗ ಒಮ್ಮೆ ಮೇಜಿನಮೇಲೆ ಕುಳಿತಿರುವ ತಬಕಿನತ್ತ ಕಣ್ಣಾಡಿಸಿ ಎಂತೆಂತಹ ಹರಿವಾಣಗಳು ನಿಮ್ಮನ್ನು ಅಚ್ಚರಿಗೆ ತಳ್ಳಿಬಿಡಬಹುದು.