Saturday, August 16, 2008

ಇಂದ್ರನ ಝಾಪು - ಮಹೀಂದ್ರಾ ಜೀಪು


ನೂರೋ ನೂರೈವತ್ತೋ ಎಕರೆ ಕಾಫಿ ಎಸ್ಟೇಟ್, ಅದರಲ್ಲಿ ಅಡಿಕೆ, ಕಾಳುಮೆಣಸು ಮುಂತಾದ ಸಮೃದ್ಧ ಬೆಳೆ. ತೋಟದ ನಡುವೆ ಒಂದು ಮನೆ. ಎಸ್ಟೇಟ್ ಗುಡ್ಡ ಸುತ್ತಲು ಕೆಂಪು ಮಣ್ಣಿನಬಳಸುದಾರಿ, ಆರೋಗ್ಯವಂತ ಶರೀರ ಮತ್ತು ವಿಶಾಲ ಮನಸ್ಸು ಜತೆಯಲ್ಲಿ ಸಣ್ಣ ಸಂಸಾರ ಇಷ್ಟಿದ್ದಾಗ ಆಹಾ ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಆನಂದರಾಮ. ಆದರೆ ಒಂದೇ ಒಂದು ಐಟಮ್ ಇಂತಹ ಜೀವನಕ್ಕೆ ರಂಗೇರಲು ಬಿಟ್ಟಿರಲ್ಲ ಎಂದು ನೀವು ಹೇಳಬಹುದು. ಹೌದು ಅದನ್ನೇ ನಾನು ಹೇಳಹೊರಟಿರುವುದು. ಸ್ವರ್ಗ ಲೋಕದ ದೊರೆ ಇಂದ್ರದೇವನ ಝಾಪಿನ ಜೀಪು ಮಹೀಂದ್ರ. ಫೋರ್ ವೀಲ್ ಡ್ರೈವ್, ಲಾಂಗ್ ಡ್ರೈವ್ ಗೆ ಎ.ಸಿ. ಅಬ್ಬಾ ಅದರಲ್ಲಿ ಹತ್ತಿ ಕುಳಿತು ಕೇವಲ ಎಸ್ಟೇಟ್ ಸುತ್ತುವುದೇನು ಪ್ರಪಂಚವನ್ನೇ ಸುತ್ತಬಹುದು. ಇಂದು ನೂರಾರು ತರಹದ ವಾಹನ ನಮ್ಮ ದೇಶಕ್ಕೆ ಬಂದಿರಬಹುದು. ಆದರೆ ನಮ್ಮ ರೈತಾಪಿ ಜೀವನಕ್ಕೆ ಮಹಿಂದ್ರಾ ಮುಂದೆ ಸಾಟಿಯಿಲ್ಲ. ಈಗ ಇದನ್ನು ಬರೆಯಲು ಪ್ರೇರಣೆಯಾದ ಕತೆ ಹೇಳುತ್ತೇನೆ ಕೇಳಿ.
ನಮ್ಮ ಹಿರಿಯಣ್ಣ ಮಧುಸೂದನ ಪೆಜತ್ತಾಯರು ಚಿಕ್ಕಮಗಳೂರು ಜಿಲ್ಲೆಯ ಬಾಳೆ ಹೊಳೆಯವರು. ಅಲ್ಲಿ ಅವರು ಹಿಂದೆ ನಾನು ಹೇಳಿದಂತೆ ರಾಯಲ್ ಜೀವನ ಸಾಗಿಸಿದವರು( ಪ್ರಸ್ತುತ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಬೆಂಗಳೂರು ಸೇರಿ, ಅಲ್ಲಿ ನಿವೃತ್ತಿ ಜೀವನ ನಡೆಸುತ್ತಿದ್ದಾರೆ. ನಮ್ಮ ಕಟ್ಟೆ ಪ್ರಕಾಶನದ ಮೂಲಕ ಅವರೇ ಅಷ್ಟೂ ಖರ್ಚನ್ನು ಭರಿಸಿ, ನಮ್ಮ ರಕ್ಷಕ ರಕ್ಷಾ ಹಾಗೂ ಕಾಗದದ ದೋಣಿ ಎಂಬ ಎರಡು ಪುಸ್ತಕ ಹೊರತರುತ್ತಿದ್ದಾರೆ, ನಮ್ಮ ತಲವಾಟ ಶಾಲೆಗೆ ಕಂಪ್ಯೂಟರ್ ಕೊಟ್ಟಿದ್ದಾರೆ- ಅವರ ಋಣ ನಾವು ತೀರಿಸಲಾಗದು ಅದರ ಕತೆ ಮುಂದೆ ಎಂದಾದರೊಂದು ದಿನ ಓದೋಣ) ಅವರ ಎಸ್ಟೇಟ್ನಲ್ಲಿ ಸಿನೆಮಾದ ಹೀರೋ ಜೀವನ ನಡೆಸಿದಂತೆ ಡಬಲ್ ಬ್ಯಾರಲ್ ಗನ್, ಪಿಸ್ತೂಲ್ ಗತ್ತಿನ ಮಹಿಂದ್ರಾ ಜೀಪ್ ಮುಂತಾದವುಗಳನ್ನಿಟ್ಟುಕೊಂಡು ಹಾಗೂ ಅವೆಲ್ಲಾ ಸಕಲ ಸೌಕರ್ಯ ಇದ್ದರೂ ಪಕ್ಕಾ ಮಣ್ಣಿನ ಮಗನಂತೆ ಬಾಳಿ ರೈತರ ಎಲ್ಲಾ ನೋವುಗಳನೂ ಅನುಭವಿಸಿ ಗೌರವಯುತ ರೈತನಾಗಿ ಇಂದಿಗೂ ಜೀವನ ಸಾಗಿಸುತ್ತಿದ್ದಾರೆ. ಕಾಲ ನಿಲ್ಲದಲ್ಲ ಪೆಜತ್ತಾಯರ ಮನಸ್ಸು ಇಪ್ಪತ್ತರ ಹರೆಯದಲ್ಲಿದ್ದರೂ ಈಗ ಅವರ ದೇಹ ಸ್ವಲ್ಪ ನಂಡಾಗಿದೆ ಹಾಗಾಗಿ ಈಗ ನನಗೆ ಜೀಪು ಹತ್ತಿ ಓಡಾಡಬಾರದು ಎಂದಿದ್ದಾರೆ, ನಾನು ಅತಿಯಾಗಿ ಪ್ರೀತಿಸುತ್ತಿದ್ದ ಜೀಪನ್ನು ಇಲ್ಲಿಯವರೆಗೂ ಜತನವಾಗಿ ಕಾಪಾಡಿಕೊಂಡು ಬಂದಿದ್ದೇನೆ, ಈ ಬೆಂಗಳೂರಿನ ಲ್ಲಿ ಈಗ ಅದನ್ನು ನಿಲ್ಲಿಸಲೂ ಜಾಗ ಇಲ್ಲ, ಹಾಗಾಗಿ ಅನಿವಾರ್ಯವಾಗಿ ಕೊಡುತ್ತೇನೆ ಎಂದು ಫೋನಾಯಿಸಿದರು. ಅದೇ ಬೇಸರದ ಸಂಗತಿ, ಹಲವು ಬಾರಿ ಈ ಮನುಷ್ಯ ನಿರ್ಮಿತ ಯಂತ್ರಗಳು ನಮ್ಮ ಸಹವರ್ತಿಯಾಗಿಬಿಡುತ್ತವೆ. ಅದನ್ನು ನಾವು ಒಂದು ಜೀವಿಯೆಂಬಂತೆ ಪ್ರೀತಿಸತೊಡಗುತ್ತೇವೆ. ಅದೊಂದು ವಸ್ತು ಎಂದು ನಮಗೆ ಅನ್ನಿಸುವುದಿಲ್ಲ. ಆದರೆ ಪರಿಸ್ಥಿತಿ ನಮ್ಮನ್ನು ಅದರಿಂದ ನಮ್ಮನ್ನು ದೂರಮಾಡುತ್ತದೆ. ಆವಾಗಿನ ನೋವು ಅನಿರ್ವಚನೀಯ. ಅದು ಮೊಬೈಲ್ ಇರಬಹುದು ಅಥವಾ ಮಜ್ಜಿಗೆ ಕಡೆಯುವ ಮಿಷನ್ ಇರಬಹುದು ಬೈಕ್ ಇರಬಹುದು ಕೊನೇ ಒಂದು ಚಂದದ ಎರಡು ರೂಪಾಯಿ ಬೆಲೆಯ ಪೆನ್ ಇರಬಹುದು. ಪೆಜೆತ್ತಾಯ್ಅರಿಗೆ ಮಹಿಂದ್ರಾ ಜೀಪು ಅಂತಹ ಅವಸ್ಥೆ ತಂದಿಟ್ಟಿದೆ. ಹಾಗಾಗಿ ಅವರು ಅದನ್ನು ಚಂದವಾಗಿ ನ ೋಡಿಕೊಳ್ಳುವ ಒಬ್ಬ ಗಿರಾಕಿಯನ್ನು ಹುಡುಕುತ್ತಿದ್ದಾರೆ. ಬೆಲೆ ಒಂದು ಲಕ್ಷ ರೂಪಾಯಿ. ಇದು ಹಣದ ಪ್ರಶ್ನೆ ಅನ್ನುವುದಕ್ಕಿಂತಲೂ ಒಂಥರಾ ಗುಣದ ಪ್ರಶ್ನೆ. ಅನಿವಾರ್ಯ. ಮಾರುಕಟ್ಟೆಯಲ್ಲಿ ನೂರು ತರಹದ ವಾಹನ ಸಾವಿರ ಸಿಕ್ಕಬಹುದು ಆದರೆ ಅವರವರ ಪ್ರೀತಿ ಮಾತ್ರಾ ಸಿಕ್ಕುವುದು ಕಷ್ಟ. ಇವೆಲ್ಲದರ ನಡುವೆ ನಾನು ಪೆಜತ್ತಾಯರಿಗೆ ಜೀಪು ಕೊಡಬೇಡಿ ಅದು ಸೂಪರ್ ಇದೆ ಅಂತ ವಾರಾತ ಮಾಡುತ್ತಿದೇನೆ. ನ ನಗೆ ಅಷ್ಟು ಹೇಳಿದರಷ್ಟೇ ಮುಗಿಯಿತು ಆದರೆ ಅ ವರಿಗೆ ಅದನ್ನು ಜತನವಾಗಿ ಕಾಪಾಡುವ ಸಮಸ್ಯೆ.
ಕೊನೆಯದಾಗಿ: ಆನಂದ ರಾಮ ಶಾಸ್ತ್ರಿಗಳ ಬಳಿ ಇವೆಲ್ಲವನ್ನು ಹೇಳಿದೆ. "ಕಾಲ ಎಲ್ಲವಕ್ಕೂ ಸಮರ್ಪಕವಾಗಿ ಉತ್ತರಿಸುತ್ತದೆ" ಎಂದು ನಿರುಮ್ಮಳವಾಗಿ ಹೇಳಿದರು. ನನಗೆ ಅರ್ಥವಾಗಿಲ್ಲ ಕಾಲವನ್ನೇ ಕೇಳಬೇಕು.

Friday, August 15, 2008

ಸಾಗಿ ಮುಂದೆ ಹೆಣ್ಣುಹುಡ್ರ ಹಿಂದೆ







ಆಗಸ್ಟ್ ಹದಿನೈದು ಎಂದರೆ ನಮಗೆ ಗಿಜಿಗಿಜಿ ಮಳೆಗಾಲ. ಶಾಲೆಗೆ ಹೋಗುವ ಮಕ್ಕಳಿಗೆ ಸ್ವಾತಂತ್ರೋತ್ಸವ. ಪಾಪ ಮಲೆನಾಡಿನ ಮಕ್ಕಳು ಬ್ರಿಟೀಷರನ್ನು ಇದೊಂದೇ ಕಾರಣಕ್ಕೆ ಶಪಿಸುತ್ತಾರೆ. ಅಕ್ಟೋಬರ್ ತಿಂಗಳಿಅಲ್ಲಾದರೂ ಅವರು ಬಿಟ್ಟು ಹೋಗಿದ್ದರೆ ಬಿಳಿ ಅಂಗಿಯನ್ನು ಕೆಸರಾಗದಂತೆ ಕಾಪಾಡಿಕೊಳ್ಳುವುದು, ಪ್ರಭಾತ್ಪೇರಿಯಲ್ಲಿ ಸೊಯಕ್ ಅಂತ ಜಾರಿ ಬಿದ್ದು ನಗೆಪಾಟಲಿಗೀಡಾಗುವುದು ತಪ್ಪುತ್ತಿತ್ತಲ್ಲ ಎಂದು ಅವರ ಕೊರಗು. ಹಿರಿಯರು ಎಂಬ ಹಿರಿಯರು ಅಂದು ಬಂದು ತಾಸುಗಟ್ಟಲೆ ಸರ್ವ ತಂತ್ರ ಸ್ವತಂತ್ರ್ಯದ ಬಗ್ಗೆ ಕೊರೆಯುವುದು ಅರ್ಥವಾಗದಿದ್ದರೂ ಸಹಿಸಿಕೊಳ್ಳಬಹುದು ಕಾರಣ ಕೊರೆತ ಮುಗಿದ ತಕ್ಷಣ ಚಾಕೊಲೇಟ್ ಇದೆ. ಆದರೆ ಜಾರಿಬಿದ್ದು ಬಿಳಿಬಟ್ಟೆ ಕೆಂಪಗಾದರೆ,ಎಳೇ ಕೈ ಲಟಕ್ ಎಂದರೆ ಬೆಳಿಗ್ಗೆ ಬೆಳಿಗ್ಗೆ ಅನುಭವಿಸಿದ ಸ್ವಾತಂತ್ರ್ಯದ ಬಗೆಗಿನ ಭಾಷಣ ಮನೆಗೆ ಹೋಗುವಷ್ಟರಲ್ಲಿ ಮಾಯವಾಗುತ್ತಲ್ಲ ಎಂಬ ಕೊರಗು ಅವರದ್ದು. ಇರಲಿ ಬಂತಲ್ಲ ಯಾವತ್ತಾದರೇನು ಅಂಬ ನಿರುಮ್ಮಳ ಭಾವಕ್ಕೆ ಇಳಿಯುವುದು ಅನಿವಾರ್ಯ. ಈ ತರಹ ಸರ್ಕಾರಿ ಹಬ್ಬಗಳನ್ನು ನಾವು ಹಾಗೂ ನೀವೂ ಸಣ್ಣಕ್ಕಿದ್ದಾಗ ಆಚರಿಸಿದ್ದೇವೆ. ಇಂದೂ ಆಚರಿಸುತ್ತಿದ್ದಾರೆ ಮುಂದೂ ಆಚರಿಸುತ್ತಾರೆ, ಅರ್ಥ ಯಾರಿಗೆ ಎಷ್ಟೆಷ್ಟೋ ಭಗವಂತನೇ ಬಲ್ಲ. ಬೋಲೋ ಭಾರತ್ ಮಾತಾಕಿ............... ಜೈ, ವಂದೇ.......... ಮಾತರಂ, ಸಾಗಿ ಮುಂದೆ ............ ಭಾರತೀಯರ ಹಿಂದೆ, ಮುಂತಾದ ಘೋಷಣೆಯನ್ನು ಕೂಗುತ್ತಾ ಸಾಗುವ ಪ್ರಭಾತ್ ಪೇರಿಯ ಮಜ ಅಂದಿನಿಂದಲೂ ಇದೆ. ಇಂದೂ ಇದೆ. ಅದರ ಜತೆ ಜತೆಯಲ್ಲಿ ತಲೆಮಾರಿನಿಂದ ತಲೆಮಾರಿಗೆ ಒಂದಷ್ಟು ಕಳ್ಳ ಘೋಷಣೆಗಳು ಅದು ಹೇಗೋ ಉಳಿದುಕೊಂಡು ಬಂದಿವೆ. ನನಗೆ ಆಶ್ಚರ್ಯ ವಾಗುವುದು ಅಲ್ಲಿಯೇ. ಇಂದು ಬೆಳಿಗ್ಗೆ ಸಾಲಾಗಿ ಮಕ್ಕಳು ಘೋಷಣೆ ಕೂಗುತ್ತಾ ಹೊರಟಿದ್ದರು. ಒಬ್ಬಾತ ವಂದೇ ಅಂತ ಗಂಟಲುಅರ ಕಿತ್ತುಬರುವಂತೆ ಕೂಗುತ್ತಿದ್ದ ಉಳಿದ ಮಕ್ಕಳೆಲ್ಲರೂ ಮಾತರಂ ಅನುತ್ತಿದ್ದರು. ನನ್ನ ಪಕ್ಕದಲ್ಲಿ ನಿಂತಿದ್ದ ಹುಡುಗನೊಬ್ಬ ಮಾತ್ರಾ ವಂದೇ ಅಂದಕೂಡಲೇ ಮಾಸ್ತರಂ. ಅನ್ನುತ್ತಿದ್ದ. ಉಳಿದ ಮೂರ್ನಾಲ್ಕು ಹುಡುಗರು ಕಿಸಕ್ಕನೆ ನಗುತ್ತಿದ್ದರು.(ನಮ್ಮ ಶಾಲೆಯಲ್ಲಿ ಒಬ್ಬರೇ ಮಾಸ್ತರಾದ್ದರಿಂದ ಅದಕ್ಕೆ ಮಹತ್ವ). ನಾವೂ ಸಣ್ಣಕ್ಕಿದ್ದಾಗ ಹಾಗೆಯೇ ಚಾಲ್ತಿಯಲ್ಲಿತ್ತು. ಬೋಲೋ ಭಾರತ್ ಮಾತಾಕಿ ಎಂದು ಒಬ್ಬಾತ ಅರಚಿ ಅದಕ್ಕೆ ಮಿಕ್ಕೆಲ್ಲರೂ ಜೈ ಎಂದರೆ ಆ ನೂರಾರು ದನಿಯ ಸಂದಿಯಲ್ಲಿ ಜಗದೀಶ ಎಂಬೊಬ್ಬ ಹುಡುಗ ಇಂದಿರಾಗಾಂಧಿ ನೇತಾಕಿ ಅನ್ನುತ್ತಿದ್ದ. ನಾವು ಅರ್ಥಗೊತ್ತಿಲ್ಲದಿದ್ದರೂ ಕಿಸಕ್ಕನೆ ನಗುತ್ತಿದ್ದೆವು. ಸಾಗಿ ಮುಂದೆ ಎಂದರೆ ಭಾರತೀಯರ ಹಿಂದೆ ಎಂದು ಉಳಿದವರು ಕೂಗಿದರೆ ಜಗದೀಶ ಹೆಣ್ಣುಹುಡ್ರ ಹಿಂದೆ ಎನ್ನುತ್ತಿದ್ದ. ಕೌಮೇತಿ ರಂಗೆ ಜಂಡೆ ನಮ್ಮ ಮೇಷ್ಟ್ರ ಹೆಂಡ್ತಿ ಮುಂಡೆ, ಹೀಗೆ ಹತ್ತಾರು ಅಬದ್ಧ ಸಾಲುಗಳು ಅವನಿಗೆ ಬಾಯಿಪಾಠ . ಇವತ್ತು ಅದೇ ರೀತಿ ಹುಡುಗನೊಬ್ಬ ಪ್ರಾಸಬದ್ಧವಾಗಿ ಹೇಳುತ್ತಿದ್ದ ಉಳಿದವರು ಯಥಾಪ್ರಕಾರ ಕಿಸಕ್ಕನೆ..... ಪ್ರಾಥಮಿಕ ಶಾಲೆಯ ವಯಸ್ಸಿನ ಮಕ್ಕಳಿಗೆ ಸ್ವಾತಂತ್ರ್ಯ ಎಂದರೆ ಒಟ್ಟಿನಲ್ಲಿ ಒಂದು ಹಬ್ಬ. ದೊಡ್ಡವರಿಗೆ ಮನೆಯಲ್ಲಿ ರಜಾದ ನಿದ್ರೆ . ಇವೆಲ್ಲಾ ಅಂದು ಇಂದು ಮುಂದೂ ಹೀಗೆ. ಆಯಾ ವಯಸ್ಸಿಗೆ ತಕ್ಕಂತೆ ಸಾಗುತ್ತಲಿರುತ್ತದೆ ಪ್ರಪಂಚ.

ಕೊನೆಯದಾಗಿ: ಇಂದು ಬ್ರಿಟೀಷರು ನಮ್ಮನ್ನು ತೊರೆದು ಹೋದ ದಿನ. ನನಗೆ ಒಮ್ಮೊಮ್ಮೆ ಅನಿಸುತ್ತದೆ ಅವರು ಇದ್ದಿದ್ದರೆ ಚೆನ್ನಿತ್ತೇನೋ......ಎನಿ ವೆ ಹ್ಯಾಪಿ ಇಂಡಿಪೆಂಡೆನ್ಸ್ ಡೆ.

ಗೋಪಿ ಹಕ್ಕಿಯ ಸುಮಧುರಗಾನ


"ಏಳು ನಾರಾಯಣನೆ...ಏಳು ಲಕ್ಷ್ಮೀರಮಣ...ಏಳು ಶ್ರೀಗಿರಿವಾಸ .. ಏಳು ಏಳೂ. ಕಾಸಿದ ಹಾಲನ್ನು ಕಾವಡಿಯಲಿ ಹೆಪ್ಪಿಟ್ಟು ಲೇಸಾಗಿ ಹೊಸ ಬೆಣ್ಣೆ ಕಡೆದೂ.... " ಹೀಗೆಯೇ ಇರಬೇಕು ಅಮ್ಮನ ಹಾಡು ಮುಂದುವರೆಯುತ್ತಿತ್ತು. ಹಾಡಿನ ಲಯಕ್ಕೆ ಮಜ್ಜಿಗೆ ಕಡೆಯುವ ಗರಗರ ಸದ್ದು . ಶೃತಿಗೆ ಸಿಳ್ಳೆ ಹೊಡೆಯುವ ಗೋಪಿ ಹಕ್ಕಿ. ಸಮಯ ಬೆಳಗ್ಗೆ ಐದೂವರೆ. ನಾನು ಮಜ್ಜಿಗೆ ಕಡೆಯುವ ಕಡಗಲಿನ ಬುರುಡೆಯ ಮೇಲೆ ಅಂಗೈಯನ್ನಿಟ್ಟು ಅದೇನೋ ಹಿತವನ್ನು ಅನುಭವಿಸುತ್ತಿದ್ದೆ. ಇವೆಲ್ಲಾ ಸರಿ ಸುಮಾರು ಮೂವತ್ತು ವರ್ಷದ ಹಿಂದಿನ ಘಟನೆ. ಹೀಗೆ ನನ್ನ ಬೆಳಗು ಆರಂಭವಾಗುತ್ತಿತ್ತು.
ಮೊನ್ನೆ ಸುಮಾರು ಹದಿನೈದು ದಿವಸ ಕರೆಂಟು ಇರಲಿಲ್ಲ. ಹಾಗಾಗಿ ಅಮ್ಮ ಮಜ್ಜಿಗೆ ಕಡೆಯಲು ಅಟ್ಟ ಸೇರಿದ್ದ ಕಡಗಲನ್ನು ಇಳಿಸಿ ತಂದಿದ್ದಳು. ಕರೆಂಟಿಲ್ಲದ ಕಾರಣ ಲಯವಿಲ್ಲದೇ ಕೇವಲ ಗರ್.......... ಎಂದು ಒಂದೇ ಸವನೆ ತಲೆಚಿಟ್ಟುಹಿಡಿಸುವಂತಹ ಶಬ್ಧದ ದ ಮೋಟಾರ್ ಗೆ ರಜ. ಚಿತ್ತಾರದ ಬುರುಡೆಹೊಂದಿರುವ ಮೊಳ ಉದ್ದದ ಕಡಗಲಿಗೆ ಹಗ್ಗ ಹಾಕಿ ಮೊಸರಿನ ಪಾತ್ರೆಯೊಳಗೆ ಇಳಿಬಿಟ್ಟು ಚಕ್ಕಳಮಕ್ಕಳ ಹಾಕಿ ಕುಳಿತ ಅಮ್ಮ ಅವಳಿಗೆ ತಿಳಿಯದಂತೆ ಮೂವತ್ತು ವರ್ಷ ಹಿಂದಕ್ಕೆ ಹೋಗಿದ್ದಳು. ಮಜ್ಜಿಗೆ ಕಡೆಯುವಾಗಿನ ಅದೇ ಹಾಡು ಗುಣುಗುಣಿಸುತ್ತಿದ್ದಳು. ಆದರೆ ಗಂಟೆ ಎಂಟಾದ್ದರಿಂದ ಗೋಪಿ ಹಕ್ಕಿಯ ಸಿಳ್ಳೆಯ ಶೃತಿ ಇರಲಿಲ್ಲ.
ಹಾ ಹೌದು ಈ ಸುಶ್ರಾವ್ಯವಾಗೆ ಚುಮು ಚುಮು ಬೆಳಕಿನಲ್ಲಿ ಸಿಳ್ಳೆ ಹೊಡೆಯುವ ಈ ಗೋಪಿ ಹಕ್ಕಿ ಎಂದು ಅಮ್ಮ ಹೇಳಿದ್ದುಬಿಟ್ಟರೆ ಅದರ ಹೆಸರನ್ನು ನಾನು ಇಲ್ಲಿಯವರೆಗೆ ಎಲ್ಲಿಯೂ ಕೇಳಿಲ್ಲ. ಪಕ್ಷಿ ತಜ್ಞ ಸಲೀಂ ಆಲಿಗೆ ಕೇಳಿದ್ದರೆ ವಿವರವಾಗಿ ಹೇಳುತ್ತಿದ್ದರೇನೋ. ಆದರೆ ನಾನು ಹೆಸರನ್ನು ಕೇಳಲಿ ಬಿಡಲಿ ಅದಂತೂ ಸುಮಧುರವಾಗಿ ಇಂದಿಗೂ ಬೆಳಗಿನ ಜಾವ ಸಿಳ್ಳೆಹೊಡೆಯುತ್ತಲೇ ಇರುತ್ತದೆ. ಮೂವತ್ತು ವರ್ಷದ ಹಿಂದಿನ ಹಕ್ಕಿಯ ಮೊಮ್ಮಗನೋ ಮರಿಮಗನೋ ಅಥವಾ ಳೋ ಇರಬೇಕು. ಅದೆಂತಾ ಸೂಪರ್ ಸ್ವರ ಅದರಿದ್ದು. ಜತೆಗೆ ಮಜ್ಜಿಗೆಯ ಗರ್ ಗರಾ ಗರ್ ಗರಾ ಹಾಗೂ ಏಳು ನಾರಾಯಣನೇ ಎಂಬ ಹೆಚ್ಚು ಕಮ್ಮಿ ಗೋಪಿ ಹಕ್ಕಿಯ ಸ್ವರದಂತಯೇ ಇದ್ದ ಅಮ್ಮನ ದನಿಯಲ್ಲಿನ ಹಾಡು. ಆಹಾ ಎಂತಾ ಮಧುರಾ ಯಾತನೆ..? ಅಂತ ಅನ್ನಬಹುದು ಈಗ.
ತಂತ್ರಜ್ಞಾನ ಮುಂದುವರೆದಂತೆ ನಾವು ಇಂತಹ ಮಧುರ ನೆನಪುಗಳನ್ನು ಕಳೆದುಕೊಳ್ಳುತ್ತೇವೆ. ಅಥವಾ ತಂತ್ರಜ್ಞಾನ ಮುಂದುವರೆದಿದ್ದರಿಂದ ಅವೆಲ್ಲಾ ಮಧುರ ಅಂತ ಅನ್ನಿಸಿರಬಹುದು ಅಂತಲೂ ಅನಬಹುದು. ಈಗ ಅಮ್ಮನಿಗೆ ಎಪ್ಪತ್ನಾಲ್ಕು ವಯಸ್ಸಾಗಿದೆ. ಮಜ್ಜಿಗೆ ಕಡೆಯುವ ನೀರು ಸೇದುವ ಕೆಲಸ ಆವು ಸುಲಭಮಾಡಿದ್ದೇವೆ. ಹಾಗಾಗಿ ಬಿ.ಪಿ ಗಂಟು ನೋವು ಶಾಶ್ವತವಾಗಿದೆ. ಆದರೆ ಮೊನ್ನೆ ಕರೆಂಟ್ ಹೋದ ವಾರಗಳಲ್ಲಿ ಕಡಗಲಿನಿಂದ ಮಜ್ಜಿಗೆ ಕಡೆದು ಹಾಡನ್ನು ಗುಣುಗುಣಿಸಿ ಒಳ್ಳೆಯ ಲಹರಿಯಲ್ಲಿದ್ದಳು. ಬಹುಶಃ ಹಳೆಯ ನೆನಪು ಬಂದಿರಬೇಕು. ಅಥವಾ ದೇಹ ಸ್ವಲ್ಪ ವ್ಯಾಯಾಮದಿಂದ ಲಹರಿಗೆ ಬಂತೋ. ಏನೇ ಇರಲಿ ಕರೆಂಟ್ ಹೀಗೆ ಕೈಕೊಟ್ಟರೂ ಒಳ್ಳೆಯದೇ ಅಂತ ಅನ್ನಿಸಿದ್ದು ಸುಳ್ಳಲ್ಲ.
ಕೊನೆಯದಾಗಿ: ಇಂದಿನ ತಂತ್ರಜ್ಞಾನ ಅಂದಿನ ಮನಸ್ಥಿತಿ ಇದ್ದರೆ ಸ್ವರ್ಗ ಧರೆಗಿಳಿಸಬಹುದು ಎನ್ನುತ್ತಾರೆ ನಮ್ಮ ಆನಂದರಾಮಶಾಸ್ತ್ರಿಗಳು. ಅದು ನಿಜ ಅಂತ ನನಗೂ ಅನ್ನಿಸಿದೆ.

Thursday, August 14, 2008

ಭೃಂಗದ ಬೆನ್ನೇರಿ

ಆನಂದರಾಮ ಶಾಸ್ತ್ರಿ ಸೂರ್ಯನನ್ನು ಎಬ್ಬಿಸುತ್ತಾನೋ ಸೂರ್ಯ ಆನಂದರಾಮಶಾಸ್ತ್ರಿಯನ್ನೆಬ್ಬಿಸುತ್ತಾನೋ ಎನ್ನುವುದು ಇಲ್ಲಿಯವರೆಗೂ ಯಕ್ಷಪ್ರಶ್ನೆಯೇ. ಚುಮು ಚುಮು ಬೆಳಕು ಭೂಮಿಗೆ ಬೀಳುವುದಕ್ಕೆ ಮೊದಲು ಆನಂದರಾಮ ಶಾಸ್ತ್ರಿ ದೊಡ್ಡಗುಡ್ಡದ ನೆತ್ತಿಯಮೇಲೆ ನಿಂತು ಸೂರ್ಯಪಾನದಲ್ಲಿ ತೊಡಗುವ ಕಾರ್ಯ ಯಾವತ್ತಿಂದ ಪ್ರಾರಂಭವಾಯಿತು ಎಂದು ಸೂರ್ಯನಿಗೆ ಮತ್ತು ಆನಂದರಾಮ ಶಾಸ್ತ್ರಿಗೆ ಹೊರತಾಗಿ ಮತ್ಯಾರಿಗೂ ತಿಳಿದಿರಲಿಲ್ಲ. ಆರಂಭದ ಕೆಲವರ್ಷಗಳಲ್ಲಿ ಗೇರುಸೊಪ್ಪದ ಜನತೆ ಇದು ಮಾಮೂಲು ಅಂತ ಸುಮ್ಮನಿದ್ದರು. ಆದರೆ ಶಾಸ್ತ್ರಿ ಯಾರು ನೋಡಲಿ ಬಿಡಲಿ ತನ್ನಷ್ಟಕ್ಕೆ ತಾನು ಎದ್ದು ಬಿರಬಿರನೆ ನಡೆಯುತ್ತಾ ದೊಡ್ಡಗುಡ್ಡದ ನೆತ್ತಿಯಮೇಲೆ ತಲುಪಿ ಇಪ್ಪತ್ತು ನಿಮಿಷಗಳ ಕಾಲ ನಿಲ್ಲುವುದನ್ನು ನೋಡಿ ಕುತೂಹಲಕ್ಕೆ ಒಳಗಾದರು. ಶಾಸ್ತ್ರಿ ಜೇನು ಸಾಕುವುದು, ಕೊಳೆ ಔಷಧಿ ಹೊಡೆಯದೆ ಅಡಿಕೆ ಬೆಳೆಯುವುದು, ಪ್ರಕೃತಿ ಸಹಜವಾಗಿ ಭತ್ತ ಬೆಳೆಯುವುದು, ಎಪ್ಪತ್ತು ವರ್ಷದ ಕೇದಿಗೆಯನ್ನು ಕೊಳಸಿ ತನ್ನ ಉಡುಪಿಗಾಗುವಷ್ಟು ಚಂದದ ಬಟ್ಟೆ ತೆಗೆಯುವುದು ಮುಂತಾದ ಕೆಲಸಗಳು ಜನಸಾಮಾನ್ಯರಿಗೆ ಅಚ್ಚರಿಯ ವಿಷಯವಾಗಿರಲಿಲ್ಲ. ಆದರೆ ಆತ ದಿನಕ್ಕೆ ಒಂದೇ ಬಾರಿ ಊಟ ಮಾಡುವುದು ಮತ್ತು ಮೈಮುರಿಯುವಷ್ಟು ಕೆಲಸಮಾಡುವುದು ಮತ್ತು ಪುಷ್ಠಿಕರವಾದ ಮೈಮಾಟ ಹೊಂದಿರುವುದು ಬಿಡಿಸಲಾರದ ರಹಸ್ಯವಾಗಿತ್ತು. ಜನರು ಆತನ ಬಳಿ ಆಹಾರದ ರಹಸ್ಯ ಕೇಳಿದರೆ ಆತ ಮುಗಳ್ನಗುತ್ತಿದ್ದ. ಆದರೆ ಸೂರ್ಯಪಾನದ ಬಗ್ಗೆ ಕೇಳಿದರೆ ವಿವರಿಸುತ್ತಿದ್ದ.
ಜನರು ದೇಹದ ಅವಶ್ಯಕತೆಗಿಂತ ಶೇಕಡಾ ಎಂಬತ್ತು ಹೆಚ್ಚಿನ ಆಹಾರ ಸೇವಿಸುತ್ತಾರೆ. ಮತ್ತು ಇಲ್ಲದ ಖಾಯಿಲೆಗೆ ಪರೋಕ್ಷ ಆಹ್ವಾನ ನೀಡುತ್ತಾರೆ. ಶೇಕಡಾ ಇಪ್ಪತ್ತು ದೇಹಕ್ಕೆ ಉಳಿದ ಶೇಕಡಾ ಎಂಬತ್ತು ಆಹಾರ ವೈದ್ಯರಿಗೆ ಎನ್ನುವಂತಾಗುತ್ತದೆ. ಆದರೆ ನಾನು ಇಪ್ಪತ್ತು ಮಾತ್ರಾ ಸೇವಿಸುತ್ತೇನೆ ಮತ್ತು ಸೂರ್ಯಪಾನ ಮಾಡುತ್ತೇನೆ. ನೀವೂ ಮಾಡಬಹುದಾದ ಜಗತ್ತಿನ ಮನುಷ್ಯನ ಹೊರತಾದ ಪ್ರತೀ ಜೀವಿಯೂ ಮಾಡುತ್ತಿರುವ ಕೆಲಸ ಇದು. ಮನುಷ್ಯ ಯೋಚನಾಜೀವಿ ಆದರೆ ಅವನ ಮಿದುಳಿನಿಂದ ಯೋಚಿಸುವ ಪ್ರಕ್ರಿಯೆಯಿಂದ ದೇಹದ ವ್ಯವಸ್ಥೆ ತಲತಲಾಂತರದಿಂದ ಹಾನಿಗೊಳಗಾಗುತ್ತಾ ಬಂತು. ಅದನ್ನು ಸಂಪೂರ್ಣ ಸರಿಪಡಿಸಲು ಒಂದುತಲೆಮಾತಿನಿಂದ ಸಾಧ್ಯವಿಲ್ಲ. ಆದರೆ ವ್ಯಕ್ತಿ ಬದಲಾವಣೆ ಬಯಸಿದಲ್ಲಿ ತನ್ನ ಜೀವಿತಾವಧಿಯಲ್ಲಿ ತನ್ನಮಟ್ಟಿಗೆ ಸುಖವಾಗಿ ಕಳೆಯಬಹುದು. ಯಾರಾದರೂ ನಿಮ್ಮನ್ನು ಊಟ ಮಾಡಿದಿರಾ?,ತಿಂಡಿ ತಿಂದಿರಾ? ಎಂಬ ಪ್ರಶ್ನೆಗಳನ್ನು ಕೇಳಿದರೆ, ನೀವು ಹೋ ಆಯಿತು ಎನ್ನುತ್ತೀರಿ. ಒಮ್ಮೆ ಯೋಚಿಸಿ ನೀವು ಊಟ ಮಾಡಿದ್ದೀರಾ..? ದೈಹಿಕವಾಗಿ ಅದು ಸರಿಯಾದ ಉತ್ತರ. ಆದರೆ ಮಾನಸಿಕವಾಗಿ ಅಲ್ಲ. ನೀವು ಊಟಮಾಡುವಾಗ ನಿಮ್ಮ ಮನಸ್ಸು ಎಲ್ಲಿತ್ತು? ಎಂದು ಯೋಚಿಸಿ.ಆಗ ತಿಳಿಯುತ್ತದೆ ನೀವು ಮಾಡಿದ್ದು ಏನು? ಎಂದು. ಸ್ನಾನ ಮಾಡುವಾಗ ದೇಹ ಬಚ್ಚಲುಮನೆಯಲ್ಲಿತ್ತು ಸರಿ ಆದರೆ ನಿಮ್ಮ ಮನಸ್ಸು ಎಲ್ಲಿತ್ತು?. ಒಂದೋ ಭವಿಷ್ಯದ ಚಿಂತೆಯಲ್ಲಿ ಅಥವಾ ಭೂತಕಾಲದ ನೆನಪಲ್ಲಿ ಓಡಾಡುತ್ತಿತ್ತಲ್ಲವೇ?. ವರ್ತಮಾನದಲ್ಲಿ ನಿಮ್ಮ ಮನಸ್ಸು ಇರಲಿಲ್ಲ. ನೀವು ವರ್ತಮಾನದಲ್ಲಿ ಇರಲಾಗದೆ ಯಾವಕೆಲಸವನ್ನು ಮಾಡುತ್ತೀರೋ ಅದು ವ್ಯರ್ಥ. ಅದರ ಸಾರ್ಥಕತೆ ನಿಮಗೆ ದೊರಕಲಾರದು. ನಿತ್ಯ ವರ್ತಮಾನದಲ್ಲಿ ಇದ್ದು ಭೂತಕಾಲದ ಅನುಭವಗಳನ್ನು ಭವಿಷ್ಯಕ್ಕೆ ಬಳಸಿಕೊಂಡರೆ ಅದೇ ಸ್ವರ್ಗ. ಈ ಪ್ರಕ್ರಿಯೆ ಸುಲಭವಾಗಲು ಬೆಳಗಿನ ಸೂರ್ಯಪಾನ ಕ್ರಿಯೆ ಮಾರ್ಗದರ್ಶಕ.
ಆನಂದರಾಮ ಶಾಸ್ತ್ರಿಯ ಇಂತಹ ವಾಕ್ಯಗಳು ಕೆಲವರಿಗೆ ವೇದಾಂತದ ಕೊರತವಾಗಿಯೂ ಇನ್ನು ಕೆಲವರಿಗೆ ಕಬ್ಬಿಣದ ಕಡಲೆಯಾಗಿಯೂ ಮತ್ತು ಹಲವರಿಗೆ ಪೇಲವವಾಗಿಯೂ ಇನ್ನೂ ಹಲವರಿಗೆ ಹುಚ್ಚುತನವಾಗಿಯೂ ಅನ್ನಿಸುತ್ತಿತ್ತು. ಆದರೆ ನಿಜದ ಅರ್ಥ ತಿಳಿದುಕೊಂಡ ಸಾವಿರಕ್ಕೊಬ್ಬರಿಗೆ ಜೀವನದ ದಾರಿ ಸೋಪಾನವಾಗುತ್ತಿತ್ತು.

Wednesday, August 13, 2008

ಜೋಗದ ಸಿರಿ ಬೆಳಕಿನಲ್ಲಿ



ಆಹಾ ಎಂತಹಾ ಚೆನ್ನಾಗಿದೆ ಆ ಕವಿತೆ. ಹಾಡುವ ಕಂಠ ಇಂಪಿದ್ದರೆ ಕೇಳಲು ಕರ್ಣಾನಂದ. ಆದರೆ ಈ ಜೋಗದ ಸಮೀಪ ಕುಳಿತು ಅನಾಮತ್ತು ನಾಲ್ಕು ತಿಂಗಳು ಮಳೆಗಾಲ ಅನುಭವಿಸುವುದಿದೆಯಲ್ಲ ಇತ್ತೀಚಿನ ವರ್ಷಗಳಲ್ಲಿ ಯಮ ಹಿಂಸೆಯಾಗುತ್ತಿದೆ. ದೀಪದ ಬುಡ ಕತ್ತಲು ಎಂಬ ಗಾದೆಯನ್ನು ಚಾಲ್ತಿಯಲ್ಲಿಡಬೇಕೆಂದು ಮೆಸ್ಕಾಂ ನವರು ಹಠ ಹೊತ್ತಿರುವಂತಿದೆ. ಸರಿ ಸುಮಾರು ಇಪ್ಪತ್ತು ದಿನಗಳಿಂದ ನಮ್ಮ ಊರಿನಲ್ಲಿ ಜೋಗದ ಸಿರಿ ಬೆಳಕು ಇಲ್ಲ. ಕರಿ ಬೆಳಕು ನಮ್ಮ ಪಾಲಿಗೆ. ಹೊರಜಗತ್ತಿಗೆ ನಾವು ಇದ್ದರೂ ಸತ್ತಂತಯೇ. ಅಡಿಕೆ ತೋಟ ಕೊಳೆ ರೋಗ ಹೊತ್ತು ಕೊಳೆಯುತ್ತಿದೆ. ಭತ್ತದ ಗದ್ದೆಗಳು ನೀರಿನಿಂದ ತಲೆಯೆತ್ತಲಾರದೆ ಬಳಲಿ ಬಾಗಿವೆ. ಆದರೂ ಬದುಕುವ ಛಲ ಇವೆಲ್ಲಾ ವರ್ಷಾನುಗಟ್ಟಲೆಯಿಂದ ನಡೆದು ಬಂದಿದೆಯಲ್ಲಾ ಎಂಬ ಸಮಾಧಾನದ ಮಾತಿನೊಂದಿಗೆ ಮುಂದುವರೆಯುತ್ತದೆ. ಹಿಂದೆಲ್ಲಾ ಈ ಕರೆಂಟು,ಟಿ.ವಿ.ಕಂಪ್ಯೂಟರ್ ಮುಂತಾದ ಹರಗಣಗಳೆಲ್ಲಾ ಇರಲಿಲ್ಲ. ಆವಾಗ ಹೊರ ಪ್ರಪಂಚದ ಅರಿವು ಕಡಿಮೆ. ಮಳೆ ಬಂದರೂ ಬಾರದಿದ್ದರೂ ಹೊಳೆ ಕಟ್ಟು ಒಡೆದರೂ ನೀರು ಹರಿದರೂ ನಮ್ಮದೇ ಜಗತ್ತು. ಆದರೆ ಈಗ ಮಂಡೆ ಬಿಸಿಯಾಗುತ್ತದೆ. ಇಲ್ಲಿ ಮಳೆ ಕೊಳೆ ಎಂದು ನಾವು ಒದ್ದಾಡುತ್ತಿದ್ದರೆ ಜುಂ ಎಂದು ಹತ್ತು ಲಕ್ಷದ ಕಾರಿನಲ್ಲಿ ಜೋಗ ನೋಡಲು ನೂರಾರು ಜನ ಭಾನುವಾರ ಬರುತ್ತಾರಲ್ಲ, ನಮಗೆ ಇಲ್ಲಿ ವರ್ಷಕ್ಕೊಮ್ಮೆಯೂ ಹೊರಜಗತ್ತು ನೋಡಲಾಗುವುದಿಲ್ಲವಲ್ಲ. ನಮಗೆ ರಗಳೆ ಶಾಶ್ವತವೇ? ಮುಂತಾದ ನೂರಾರು ಪ್ರಶ್ನೆಗಳು ಇಲ್ಲಿಯ ನಿತ್ಯ ಮಳೆಯ ಜತೆ ಗುದ್ದಾಡುತ್ತಾ ಜೀವನ ಸಾಗಿಸಲು ಯತ್ನಿಸುತ್ತಿರುವ ಕೃಷಿಕರ ಪ್ರಶ್ನೆ. ಅಯ್ಯೋ ಅವೆಲ್ಲಾ ಇದ್ದದ್ದೆ, ಅವರವರು ಪಡೆದು ಬಂದಿದ್ದು ಎಂದಿರಾ..? ಸರಿ ಬಿಡಿ ಸೀದಾ ಜೋಗದ ವೈಭವಕ್ಕೆ ಹೋಗೋಣ.
ಕಳೆದ ವರ್ಷ ಇಷ್ಟೋತ್ತಿಗೆ ಲಿಂಗನಮಕ್ಕಿಯ ಹನ್ನೊಂದು ಬಾಗಿಲು ತೆರೆದಿದ್ದರು. ಎಲ್ಲಿನೋಡಿದರಲ್ಲಿ ನೀರೇ ನೀರು. ನೀರ ನೋಡಲು ಬಂದ ನೀರೆಯರು. ಆಹಾ ಎಂತ ಮಧುರ ಯಾತನೆ ಎಂಬ ಹಾಡನ್ನೂ ಹಾಡುವಷ್ಟಿತ್ತು. ಆದರೆ ಈ ವರ್ಷ ಇನ್ನೂ ಆಣೆಕಟ್ಟು ತುಂಬಿಲ್ಲ. ಆದರೂ ಜೋಗದ ಜಲಪಾತದ ನೀರಿಗೇನು ಕೊರತೆಯಿಲ್ಲ. ಇನ್ನೊಂದು ಮಜ ಎಂದರೆ ಈ ವರ್ಷ ತಾಕತ್ತಿದ್ದರೆ ಜಲಪಾತದ ಕೆಳಗೆ ಇಳಿದು ಮೇಲೆ ನೋಡಬಹುದು. ಹಾ ಹುಷಾರಿ ಸ್ವಲ್ಪ ಎಚ್ಚರ ತಪ್ಪಿದರೂ ತೀರಾ ಮೇಲಕ್ಕೂ ಹೋಗಬಹುದು. ಇಲ್ಲಿ ನೀವು ಕೆಳಗಿನಿಂದ ಜೋಗ ನೋಡಿದರೆ ಹೇಗೆ ಕಾಣುತ್ತದೆ ಎಂಬ ಒಂದು ಫೋಟೋ ಹಾಕಿದ್ದೇನೆ. ಹೀಗೆ ಕೆಳಗಿನಿಂದ ಜೋಗ ಜಲಪಾತ ನೋಡಲು ತಾಕತ್ತಿನ ಹಾಗೂ ಧೈರ್ಯದ ಅವಶ್ಯಕತೆ ಇದೆ. ಧೈರ್ಯ ದಿಂದ ಇಳಿದರೆ ಅದರ ಮಜ ಅನುಭವಿಸಿದವರೇ ಹೇಳಬಲ್ಲರು. ಹಾಗಾಗಿ ಈಗ ಜೋಗಕ್ಕೆ ಹೋದರೆ ಕಾವಲುಗಾರರ ಕಣ್ಣುತಪ್ಪಿಸಿ ಗೋಡೆ ಹಾರಿ ಮೆಟ್ಟಿಲಿಳಿದು ತಳ ಸೇರಿ ಆನಂದ ಅನುಭವಿಸಿ. ಆಣೆಕಟ್ಟು ತುಂಬಿದರೆ ಈ ನೋಟ ಅಸಾಧ್ಯ.
ಕೊನೆಯದಾಗಿ: ಈ ಬ್ಲಾಗ್ ಬರೆದು ಮುಗಿಸಲು ತೆಗೆದುಕೊಂಡ ಅವಧಿ ಅನಾಮತ್ತು ಹದಿನೈದು ದಿವಸಗಳು ಕಾರಣ ಆರಂಭದಲ್ಲಿಯೇ ಹೇಳಿದ್ದೇನಲ್ಲ. ಜೋಗದ ಕರಿ ಬೆಳಕಿನಲ್ಲಿ.....