ಪೂಜೆ ಪುನಸ್ಕಾರ ಎಂದರೆ ಹೂವುಗಳಿಲ್ಲದೇ ಸಾಗದು. ಹಬ್ಬಹರಿದಿನಗಳಲ್ಲಿ ಹೂವುಗಳ ಸಂಖ್ಯೆ ಗಣನೀಯವಾಗಿ ಹೆಚ್ಚು ಬೇಡಿಕೆ ಇರುತ್ತದೆ. ಗಣಪತಿ ಹಬ್ಬ, ದೀಪಾವಳಿ ಹಬ್ಬ ಹೀಗೆ ಹಬ್ಬಗಳ ಸಾಲೇ ಇರುವಾಗ ಹೂವುಗಳ ಸರಗಳೇ ಬಿಕರಿಯಾಗಿಬಿಡುತ್ತವೆ. ಅಂಗಡಿಗೆ ಹೋಗಿ ಅವರವರ ಜೇಬಿನ ಗಾತ್ರಕ್ಕನುಗುಣವಾಗಿ ಹೂವುಗಳ ಖರೀದಿ ನಡೆಯುತ್ತದೆ. ಸರಿಬಿಡಿ ಅದು ಪಟ್ಟಣಿಗರ ಕತೆಯಾಯಿತು. ಹಳ್ಳಿಗಳಲ್ಲಿ ಹೂವು ಖರೀದಿಸುವ ಜನರ ಸಂಖ್ಯೆ ಕಡಿಮೆ. ಮನೆಯ ಹಿತ್ತಲಿನಲ್ಲಿ ಭಗವಂತನ ಪ್ರೀತ್ಯರ್ಥಕ್ಕಾಗಿಯೇ ಹೂವಿನಗಿಡಗಳ ದಂಡೇ ಇರುತ್ತದೆ. ಸರಿ ಅದೂ ಕೂಡ ನೆಟ್ಟಗಿಡದ ಬಿಟ್ಟ ಹೂವಿನ ಕತೆಯಾಯಿತು. ಆದರೆ ಇಲ್ಲೊಂದು ಹಬ್ಬಗಳಿಗಾಗಿಯೇ ಪ್ರಕೃತಿ ಹೂವೊಂದನ್ನು ಅರಳಿಸಿ ನಿಂತಿದೆ. ಅದೇ ಗೌರೀ ಹೂವು.ಕೃಷ್ಣ ಜನ್ಮಾಷ್ಟಮಿಯಿಂದ ಗಣೇಶ ಚತುರ್ಥಿಯವರೆಗೆ ಹದಿನೈದು ದಿನಗಳ ಕಾಲ ಮಲೆನಾಡಿನ ಪಶ್ಚಿಮಘಟ್ಟಗಳ ತಪ್ಪಲಿನಲ್ಲಿ ಅರಳುತ್ತದೆ ಈ ಗೌರಿ. ಹೆಸರು ಗೌರಿಯಾದರೂ ಗಣಪತಿಗೆ ಶ್ರೇಷ್ಠ ಎಂಬ ನಂಬಿಕೆ ಹಿಂದಿನಕಾಲದಿಂದಲೂ ನಡೆದುಬಂದ ಪರಿಣಾಮ ಗಣೇಶ ಹಬ್ಬದ ಸಂದರ್ಭದಲ್ಲಿ ಗುಡ್ಡಗಾಡು ಅಲೆದು ಹುಡುಕಿ ತಂದು ಗಣಪತಿಯ ಮುಡಿಗೇರಿಸಿ ಸಂಭ್ರಮಿಸುತ್ತಾರೆ ದೈವಭಕ್ತರು. ಹದಿನೈದು ದಿನದಿನಗಳಿಂದ ಇಪ್ಪತ್ತು ದಿವಸಗಳವರೆಗೆ ದಿನಕ್ಕೊಂದರಂತೆ ಹೂವುಬಿಡುವ ಗೌರಿಯ ಬಣ್ಣ ಬಹು ಆಕರ್ಷಣೀಯ. ಒಂದೆರಡು ತಿಂಗಳು ಗಿಡ ಹಾಗೆಯೇ ಇದ್ದು, ನಂತರ ಸಾವನ್ನಪ್ಪುತ್ತದೆ ಮತ್ತೆ ಮುಂದಿನ ವರ್ಷ ತನ್ನಷ್ಟಕ್ಕೆ ಗಣಪತಿ ಹಬ್ಬಕ್ಕೆ ಹೂ ನೀಡಲು ಸರಿಯಾಗಿ ಚಿಗುರಿನಿಲ್ಲುತ್ತದೆ.
ಆಂಗ್ಲಭಾಷೆಯಲ್ಲಿ ಗ್ಲೋರಿಸಾ (Gloriosa) ಎಂದು ಕರೆಯಿಸಿಕೊಳ್ಳುವ ಇದು ಆರ್ಕಿಡ್ ವಂಶ. ವರ್ಷಕ್ಕೊಮ್ಮೆ ಮಾತ್ರಾ ಹೂವಾಗುವ ಗೌರಿಯ ಗಡ್ಡೆ ಹಾಗೂ ಬೀಜ ವಿಷಯುಕ್ತವಾಗಿರುತ್ತದೆ. ಇತ್ತೀಚಿನ ದಿನಗಳಲ್ಲಿ ಗೌರಿ ಗಿಡವನ್ನು ಕೃತಕವಾಗಿ ಬೆಳೆದು ಅದರ ಬೀಜವನ್ನು ಸಂಗ್ರಹಿಸಿ ಔಷಧಿಗಳಿಗೆ ಉಪಯೋಗಿಸುತ್ತಾರೆ. ಗೌರಿ ಹೂವಿನ ಬಗ್ಗೆ ಸವಿವರವಾದ ಹೆಚ್ಚಿನ ಮಾಹಿತಿಗೆ http://en.wikipedia.org/wiki/Gloriosa_(genus) ಗೆ ಭೇಟಿ ನೀಡಬಹುದು.