Thursday, March 19, 2009

ಜೀವನವೆಂಬ....ನಾಟಕ ರಂಗ

"ಅಪ್ಪಾ ಥಿಯೇಟರ್ರಿನಲ್ಲಿ ಸಂಜೆ ೫ ಗಂಟಿಗೆ ನಾಟ್ಕ ಇತ್ತಂಬ್ರು ಡಿ.ಸಿ ಸಾಹೇಬ್ರು ನಾಟ್ಕಕ್ಕೆ ಬರ್‍ತಂಬ್ರು, ಅಲ್ಲಿಗೆ ಹೋಗ್ಬಾ.. ಒಂದು ಅರ್ಜಿ ಬರ್‍ದು ಕೊಡ್ತೆ, ಕೆಲ್ಸ ಆದ್ರೂ ಅಯ್ತೇ"
ಎಂದು ಕಲ್ಯಾಣಿ ಚಾವಡಿಯ ಮೇಲೆ ಬೋರಲು ಮಲಗಿದ್ದ ಕೋಣ್ಕಿಮಂಜನಿಗೆ ಹೇಳಿದಳು. ಕೋಣ್ಕಿಮಂಜ ಮಗಳ ಮಾತು ಕೇಳಿದರೂ ಕೇಳದಂತೆ ಮಲಗಿಯೇ ಇದ್ದ. ಅಪ್ಪನಿಗೆ ನಿದ್ರೆ ಬಂದಿರಬೇಕೆಂದು ತಿಳಿದ ಕಲ್ಯಾಣಿ "ಅಪ್ಪಾ ಓಯ್ ಅಪ್ಪ" ಎಂದು ಮತ್ತೆ ಪುನರುಚ್ಚರಿಸಿದಳು. "ಹೆಣ್ಣೆ ನಂಗೆ ಕಿವಿ ಕೇಳತ್ತ್, ಪದೆ ಪದೆ ಎಂತ ಹೇಳ್ತೆ, ಪುಟಗೋಸಿ ನಾಟ್ಕಕ್ಕೆ ಶಿಮೊಗ್ಗೆ ಯಿಂದ ಸಾಹೇಬ್ರು ಬರ್‍ತ್ರಾ ಮಣ್ಣಾ" ಎಂದು ಮಗ್ಗಲು ಬದಲಿಸಿದ ಮಂಜ.
"ನಿಂಗೆ ಸ್ವಂತ ತಿಳಿಯೂದಿಲ್ಲೆ ನನ್ನ ಮಾತಲ್ಲಿ ನಂಬ್ಕೆ ಇಲ್ಲೆ.. ಇವತ್ತು ಸಂಜೆ ನೇಗಿಲಯೋಗಿ ನಾಟ್ಕ ಇತ್ತಂಬ್ರು, ನಾಟ್ಕ ಬರೆದ ಸುಬ್ಬಣ್ಣನವ್ರಿಗೆ ಸನ್ಮಾನ ಮಾಡ್ತಂಬ್ರು ಹೋಗ್ಬಾ..ಅದ್ಕೆ ಡಿ.ಸಿ ಬಪ್ಪದು ತಿಳಿತಾ' ಎಂದು ಕಲ್ಯಾಣಿ ಹೇಳಿದ ಮಾತಿಗೆ ಅಡಿಗೆಮನೆಯಲ್ಲಿ ಕುಸುಬಲಕ್ಕಿ ಗಂಜಿ ಬಸಿಯುತ್ತಿದ್ದ ಚಂದು
"ಮಗಳೇ ನೀ ಅವ್ರಿಗೆ ಹೇಳೂಕೆ ಹೋಗ್ಬೇಡಾ..ಅವ್ರು ಮೊದ್ಲಿಂದ ಮಾಡಿದ್ದು ಅದೇಯಾ.. ನನ್ನ ಒಂದು ಮಾತು ಕೇಳಿದ್ರೆ ನಮ್ಗೆ ಈ ಪರಿಸ್ಥಿತಿ ಬರೂದಿಲ್ಯಾಗಿತ್ತು.ಇರೋ ಏಳೆಕ್ರೆ ಗದ್ದೀಗೆ ಒಂದು ಎಕ್ರೆ ಅಡಿಕೆ ತೋಟ ಹಾಕಿದ್ರೆ ಮಹಾರಾಜ್ರಂಗೆ ಇರ್ಲಕ್ಕಿತ್,ಬ್ಯಾಡ ಬಸ್ ಸ್ಟ್ಯಾಂಡ್ ಹತ್ರ ಒಂದು ಗೂಡಂಗಡಿ ಹಾಕಿನಿ ಅಂತ ಬಡ್ಕಂಡೆ, ಪದೆ ಪದೆ ಹೇಳಿರೆ ಕೋಣ್ಕಿ ಮನೆತನ ಅಂದ್ರೆ ಕಮ್ಮಿಯಾ ನೋಡು ನೋಡ್ತಾ ಇರು, ಕಡದು ಉರುಳಿಸ್ತೇ ಅಂತ್ರು, ಭತ್ತ ಬೆಳ್ಯುದ್ ಅಂದ್ರೆ ಪುಣ್ಯದ ಕೆಲ್ಸ ಅಂದ್ರು, ಈಗ ಕಂಡ್ಯಲೆ , ಹೊಟ್ಟಿಗಿದ್ರೆ ಬಟ್ಟಿಗಿಲ್ಲೆ, ಬಟ್ಟೆ ಇದ್ರೆ ಬಾಚ್ಕಂಬುಕಿಲ್ಲೆ, ಕೂಲಿ ಮಾಡಾದ್ರು ಹೊಟ್ಟೀ ಹೊರ್ಕಂಬ ಅಂದ್ರೆ ಏಳ್ ಎಕ್ರೆ ಜಮೀನ್ದಾರ್ರು ಆಳ್ ಕೆಲ್ಸಕ್ಕೆ ಹೋಗುಕಾಗುತ್ತಾ?, ಈ ಮಳಿ ನಂಬಿ ಆಪು ಬತ್ತ ನೋಡ್ರೆ ವರ್ಸಕ್ಕೆ ೩ ಚೀಲ, ಆ ಘೋರ್ಕಲ್ ಮೇಲೆ ನೀರು ಹೊಯ್ಯೋ ಹ್ವಾರ್‍ಯ ಬಿಟ್ಟು ನಿ ನಿನ್ನ ಕೆಲ್ಸ ಕಾಣ್" ಎಂದು ಮಗಳಿಗೆ ಹೇಳಿದಳು.
ಮಲಗಿದ್ದಲ್ಲಿಂದ ಹೆಂಡತಿ ಹಾಗೂ ಮಗಳ ಮಾತು ಕೇಳುತ್ತಿದ್ದ ಕೋಣ್ಕಿಮಂಜನಿಗೆ ಆಂತರ್ಯದಲ್ಲಿ ಚಂದು ಹೇಳಿದ ಮಾತು ಸತ್ಯ ಅಂತ ಅನ್ನಿಸಿತು. ಒಂದೇ ಒಂದು ಎಕರೆ ಅಡಿಕೆ ಹಾಕಿದ್ದಿದ್ದರೆ ಈ ಸಮಸ್ಯೆ ಇರುತ್ತಿರಲಿಲ್ಲ. ಊರಿಗೆ ಉಪಕಾರ ಮಾಡುವ ಭತ್ತದ ಬೆಳೆ ವರ್ಷಪೂರ್ತಿ ದುಡಿದರೂ ಇನ್ನೇನು ಬೆಳೆ ಕೈಗೆ ಸಿಕ್ಕಿತು ಅನ್ನುವಷ್ಟರಲ್ಲಿ ಮಳೆ ಬಂದು ಸರ್ವನಾಶವಾಗಿಬಿಡುತ್ತದೆ.ಅಥವಾ ಮಳೆ ಇಲ್ದೆ ಸಸಿಯೆ ಹುಟ್ಟುವುದಿಲ್ಲ, ಜಗತ್ತಿಗೆ ಊಟ ಬಡಿಸುವವ ಉನ್ಮಾದದಲ್ಲಿ ಬೆಳೆದವನಿಗೆ ಅರೆಹೊಟ್ಟೆ. ಭತ್ತದಿಂದ ಕಾಲು ಬುಡದವರೆಗೂ ಕೆಸರು ಬಿಟ್ರೆ ಮೊಸರು ಗಾದೆ ಮಾತಲ್ಲಷ್ಟೇ. ಅಂದು ಹೆಂಡತಿಯ ಮಾತು ಕೇಳಿ ಒಂದೆಕೆರೆಯಷ್ಟು ಅಡಿಕೆ ತೋಟ ಮಾಡಿದ್ದರೆ ಊರ ಗೌಡ್ರ ತರಹ ಅರಾಮಾಗಿ ಇರಬಹುದಿತ್ತು, ಆದರೆ ಅದ್ಯಾರೋ ತಿಳಿದವರು ಭತ್ತ ಮನುಷ್ಯನ ಆಹಾರ ಬೆಳೆ ಹಾಗಾಗಿ ಅದಕ್ಕೆ ಶಾಶ್ವತ ಬೆಲೆ, ಅದೇ ಅಡಿಕೆಯಾದರೆ ಈಗಾಗಲೇ ಬಯಲು ಸೀಮೆಯಲ್ಲೆಲ್ಲಾ ಸಾವಿರಾರು ಎಕರೆ ಹಾಕಿದ್ದಾರೆ ಹಾಗಾಗಿ ಸಧ್ಯದಲ್ಲಿ ಅಡಿಕೆ ದರ ನೆಲ ಕಚ್ಚಿಹೋಗುತ್ತದೆ ಜತೆಯಲ್ಲಿ ಅಡಿಕೆಯಿಂದ ಸಮಾಜಕ್ಕೆ ಯಾವ ಉಪಯೋಗವೂ ಇಲ್ಲ, ಭತ್ತಬೆಳೆದರೆ ಅನ್ನದಾತನ ಪಟ್ಟದ ಜತೆ ದೇಶಕ್ಕೆ ಉಪಕಾರ ಮಾಡಿದ ಗೌರವ ಸಿಗುತ್ತದೆ ಎಂದು ಹೇಳಿದ್ದನ್ನೇ ಸತ್ಯ ಎಂದು ತಿಳಿದ ಮಂಜ ಅಡಿಕೆತೋಟ ಹಾಕಿರಲಿಲ್ಲ. ಆದರೆ ಭತ್ತದ ಕೃಷಿಯಿಂದ ವರ್ಷದಿಂದ ವರ್ಷಕ್ಕೆ ಆರ್ಥಿಕ ಪರಿಸ್ಥಿತಿ ನೆಲ ಕಚ್ಚುವುದನ್ನು ನೆನಸಿಕೊಂಡರೆ ಹೆಂಡತಿ ಅಂದು ಹೇಳಿದ ಅಡಿಕೆ ಬೆಳೆದರೆ ಚೆನ್ನಾಗಿರಬಹುದು ಎಂಬುದೇ ಸತ್ಯ ಎಂದು ಮಂಜನಿಗೆ ಅರಿವಾಗಿತ್ತು. ಆದರೆ ಅದನ್ನು ಹೆಂಡತಿಯೆದುರು ಒಪ್ಪಿಕೊಳ್ಳಲು ಗಂಡಸೆಂಬ ಅಹಂಕಾರ ಬಿಡದೆ,
"ನೀ ಬಾಯಿ ಮುಚ್ಚಿ ಕೂರ್‍ತ್ಯ ಇಲ್ಲಾ ನಾಕು ಕಡಬು ಕೊಡ್ಕ, ನಾ ಗಂಡಸಲ್ದಾ.. ನಂಗೆ ಸರ್ಕಾರದಿಂದ ಪರಿಹಾರ ಹ್ಯಾಗೆ ತಕಂಬ್ದು ಅಂತ ನೀವ್ ತಾಯಿ ಮಗಳು ಕಲ್ಸಿಕೊಡ್ಕ" ಎಂದು ಹೆಂಡತಿಯ ಗದರಿದ. ಮೇಲ್ನೋಟಕ್ಕೆ ಹಾಗೆ ಗದರಿದರೂ ಸಂಜೆ ಕಲ್ಕೊಡು ನಾಟಕ ಥಿಯೇಟರ್ರಿಗೆ ಹೋಗಿ ಡಿ.ಸಿ ಸಾಹೇಬ್ರನ್ನ ಬೇಟಿ ಮಾಡಿ ಮಾರ್ಚಿ ತಿಂಗಳ ಅಕಾಲಿಕ ಮಳೆಯಿಂದ ನಷ್ಟವಾದ ಭತ್ತದಬೆಳೆ ಪರಿಹಾರವನ್ನು ತಹಶೀಲ್ದಾರರು, ಪರಿಹಾರ ಕೊಡಲು ಕಾನೂನಿನಲ್ಲಿ ಅವಕಾಶವೇ ಇಲ್ಲ, ಅತಿವೃಷ್ಟಿಯಾದರೆ ಅಥವಾ ಅನಾವೃಷ್ಟಿಯಾದರೆ ಮಾತ್ರಾ ಪರಿಹಾರ ಕೊಡಬಹುದು ಎಂದು ಮಳೆಯಲ್ಲಿ ಕೊಚ್ಚಿಹೋದ ಬೆಳೆಗೆ ಪರಿಹಾರ ನೀಡದೇ ಸತಾಯಿಸುತ್ತಿರುವುದನ್ನು ಹೇಳಿ ದೊಡ್ಡಸಾಹೇಬರಿಂದಲೇ ಪರಿಹಾರ ಪಡೆದುಕೊಳ್ಳಬೇಕೆಂದು ತೀರ್ಮಾನಿಸಿದ. ಆದರೆ ಸೀದಾ ಕಲ್ಕೋಡಿಗೆ ಹೋದರೆ ಮಗಳು ಹೆಂಡತಿಯ ಮಾತಿನಂತೆ ನಡೆದುಕೊಂಡಂತಾಗುತ್ತದೆ ಅದರ ಹೊರತಾಗಿ ಸಾಗರಕ್ಕೆ ಹೋಗುವ ನೆಪ ಮನೆಯಲ್ಲಿ ಹೇಳಿ ಸಾಹೇಬರ ಭೇಟಿ ಮಾಡುವುದೇ ಸೂಕ್ತವೆಂದು ತೀರ್ಮಾನಿಸಿ ಬಿಳಿ ಪಂಚೆ ಉಟ್ಟು ಇದ್ದುದರಲ್ಲಿಯೇ ಒಂದು ಒಳ್ಳೆಯ ಅಂಗಿ ತೊಟ್ಟು ಮೇಲಿಂದ ಒಂದು ಟವೆಲ್ ಹೆಗಲಮೇಲಿರಿಸಿ ಹೊರಟ.
ಮಂಜ ಕಲ್ಕೋಡಿನ ಹಳ್ಳಿ ಥಿಯೇಟರ್ರಿಗೆ ಬರುವಷ್ಟರಲ್ಲಿ ನಾಟಕ ನೋಡಲು ಆಗಲೆ ಬಣ್ಣ ಬಣ್ಣದ ಕಾರುಗಳಲ್ಲಿ ಜನ ಸೇರುತ್ತಿದ್ದರು. ಮಂಜನಿಗೆ ನಾಟಕ ನೋಡುವ ತಲುಬು ಇರಲಿಲ್ಲವೆಂದಲ್ಲ ಆದರೆ ವರ್ಷದ ಕೂಳಿಗೆ ನಾಟಕಕ್ಕಿಂತ ಹೆಚ್ಚಿನ ಆದ್ಯತೆ ಇರುವುದರಿಂದ ಸಾಹೆಬರನ್ನು ಭೇಟಿ ಮಾಡುವ ತರಾತುರಿ ಮಂಜನಲ್ಲಿತ್ತು. ಆದರೆ ಸಾಹೆಬರು ಆಗಲೇ ಶುರುವಾಗಿದ್ದ ನಾಟಕದಲ್ಲಿ ತಲ್ಲೀನರಾದ್ದರಿಂದ, ಹಾಗೂ ನಾಟಕದ ನಂತರ ವೇದಿಕೆ ಕಾರ್ಯಕ್ರಮ ಇದ್ದುದರಿಂದ ಅವರ ಭೇಟಿ ಮಂಜನಿಗೆ ಇನ್ನೂ ಕನಿಷ್ಠವೆಂದರೆ ಎರಡು ತಾಸಿನ ನಂತರವೇ ಎಂದು ತಿಳಿದು ಮಂಜನೂ ಅನಿವಾರ್ಯವಾಗಿ ನಾಟಕನೋಡಲು ಕುಳಿತ.
ಮಬ್ಬು ಬೆಳಕಿನಲ್ಲಿ ನಾಟಕ ಗಜಮುಖನೇ..ಹೇರಂಭ.... ನಮ್ಮ ಕಾಯೋ ಕರುಣಾಮಯಿಯೇ॒ ಎಂಬ ಗೀತೆಯೊಂದಿಗೆ ಆರಂಭವಾಯಿತು. ಸುಬ್ಬಣ್ಣ ನವರ ನೂತನ ಪರಿಕಲ್ಪನೆಯ ನೆಗಿಲಯೋಗಿ ನಾಟಕ ಅದು. ವೇದಿಕೆಯ ನಡುವಿನಲ್ಲಿ ಒಂದು ಪರದೆ ಇಳಿಬಿಟ್ಟು ರಂಗವನ್ನು ಎರಡನ್ನಾಗಿಸಿ ಪರಿವರ್ತಿಸಿದ್ದರು. ಅದು ಪ್ರೇಕ್ಷಕರಿಗೆ ಎರಡು ನಾಟಕ ನಡೆಯುತ್ತಿರುವಂತೆ ಭಾಸವಾಗುತ್ತಿತ್ತು.
ಸೂತ್ರಧಾರ ನಡು ಪರದೆಯ ಮುಂದೆ ನಿಂತು ನಾಟಕಕ್ಕೆ ಚಾಲನೆಕೊಟ್ಟ. ರಂಗದ ಎಡಬದಿಯಲ್ಲಿ ಶ್ರೀಮಂತರ ಡೈನಿಂಗ್ ಹಾಲ್ ನ ಸೆಟ್ಟಿಂಗ್, ಶ್ರೀಮಂತ ಅವನ ಹೆಂಡತಿ ಹಾಗೂ ಮಗಳು ಲಂಚ್‌ಗೆ ಕುಳಿತಿರುವ ದೃಶ್ಯ. ಬಲಭಾಗದಲ್ಲಿ ರೈತನ ಹೊಲ, ಹೊಲದ ಮೇಲ್ಗಡೆ ಒಂದು ಮರ, ಮರದ ಬುಡದಲ್ಲಿ ರೈತ ಅವನ ಹೆಂಡತಿ ಹಾಗೂ ಮಗಳು ಊಟ ಮಾಡುತ್ತಿರುವ ದೃಶ್ಯ.
"ಸೀ.. ನಮ್ಮ ಗವರ್ನ್‌ಮೆಂಟಿಗೆ ತಲೆ ಇಲ್ಲ, ರೈತರಿಗೆ ಎಲ್ಲಾ ಸಾಲ ಮನ್ನ ಮಾಡುತ್ತಂತೆ, ಅವ್ರಿಗೆ ಸೋಮಾರಿತನ ಕಲ್ಸೊದೆ ಇವ್ರು, ಎಲ್ಲಾ ಓಟಿಗಾಗಿ ಗಿಮಿಕ್, ಟ್ಯಾಕ್ಸ್ ಕಟ್ಟೊರು ನಾವೋ ದಾನ ಮಾಡೋರು ಅವ್ರು" ಶ್ರೀಮಂತ ಊಟ ಮಾಡುತ್ತಾ ಹೆಂಡತಿಯ ಬಳಿ ಹೇಳಿದ.
ಬೆಳಕು ಬಲಬದಿಯತ್ತ ಸಾಗಿತು
"ನೋಡು ಸರ್ಕಾರ ಸಾಲ ಮನ್ನಾ ಮಾಡಿದೆ ಅಂತ ಎಲ್ರೂ ಹೇಳ್ತಾರೆ, ಹೋದ್ವರ್ಷ ಚಾಲ್ತಿ ಸಾಲ ಮನ್ನಾ ಮಾಡಿದ್ರು, ನಮ್ದು ಆವಾಗ ಸುಸ್ತಿ ಇತ್ತು. ಮುಂದಿನ ವರ್ಷವಾದರೂ ಮನ್ನಾ ಆಗುತ್ತೇ ಅಂತ ಸಾಹುಕಾರಿ ಸಾಲ ಮಾಡಿ ಬ್ಯಾಂಕ್ ಸಾಲ ಚುಕ್ತಾ ಮಾಡಿದೆ, ಆದರೆ ಈ ವರ್ಷ ಸುಸ್ತಿ ಸಾಲ ಮನ್ನಾ ಮಾಡಿದ್ರು, ಒಟ್ನಲ್ಲಿ ನಮ್ಮ ಭಾಗ್ಯಕ್ಕೆ ಸಾಲದಿಂದ ಮುಕ್ತಿ ಇಲ್ಲ ರೈತ" ಹೊಲದ ತಟದಲ್ಲಿ ಊಟ ಮಾಡುತ್ತಾ ಹೇಳಿದ.
ಬೆಳಕು ಎಡಬದಿಯತ್ತ ಸಾಗಿತು.
"ಊಟ ಮಾಡುವಾಗ ಡೆಟ್ಟಾಲ್ ಹಾಕಿ ಕೈ ತೊಳದುಕೊಂಡೇ ಊಟ ಮಾಡ್ಬೇಕು, ಇಲ್ಲಾಂದ್ರೆ ಬ್ಯಾಕ್ಟೀರಿಯಾ ಎಲ್ಲಾ ಹೊಟ್ಟೆಯೊಳಗೆ ಸೇರಿ ಖಾಯಿಲೆ ಬರುತ್ತೆ"
ಶ್ರೀಮಂತ ತಾಯಿ ಪಳಪಳ ಹೊಳೆಯುವ ಟೇಬಲ್ ಮೇಲೆ ನ್ಯಾಪ್‌ಕಿನ್ ಹಾಕಿ ಪ್ಲೇಟ್ ಇಡುತ್ತಾ ಮಗಳಿಗೆ ಹೇಳಿದಳು
"ಎ ಬಡ್ದೈತ್ತದೆ ದೊಡ್ಡ ಸೂರ ಇವ್ನು ಕೈ ತೊಳಿಯಾಕೆ ಹೊಂಟ, ಊಟ ಮಾಡಿ ಕೈ ತೊಳಿಯುವಂತೆ ಬಾ ರೈತನ" ಹೆಂಡತಿ ಹೊಲದಲ್ಲಿ ಚುಚ್ಚುವ ಕಸಕಡ್ಡಿಗಳ ನಡುವೆ ಬುತ್ತಿಗಂಟನ್ನು ಬಿಚ್ಚುತ್ತಾ ಹೇಳಿದಳು.
ಈಗ ಬೆಳಕು ಶ್ರೀಮಂತರತ್ತ
"ಈ ಫುಡ್ ಕ್ವಾಲೀಟೀ ನೋಡು, ಸರ್ಕಾರ ಸಬ್ಸಿಡಿಲಿ ಫರ್ಟಿಲೈಸರ್,ಕೆಮಿಕಲ್ ಸಪ್ಲೆ ಮಾಡುತ್ತೆ, ಫಾರ್ಮರ್ಸ್ ಬೇಕಾಬಿಟ್ಟಿ ಸುರಿತಾರೆ, ನಾವು ತಿಂದು ಹೆಲ್ತ್ ಹಾಳುಮಾಡ್ಕೋಬೇಕು, ಅದರ ಬದಲು ಕೆಮಿಕಲ್ ಫ್ರೀ ಫುಡ್‌ಗ್ರೈನ್ಸ್ ಸಪ್ಲೈ ಮಾಡಿದ್ರೆ ನಾವೂ ಪ್ರೀಮಿಯಮ್ ಕೊಟ್ಟು ತಗೋಬಹುದು" ವಾಷ್ ಬೇಸಿನ್ನಿನಲ್ಲಿ ಕೈತೊಳೆಯುತ್ತಾ ಹೇಳುತ್ತಾನೆ ಶ್ರೀಮಂತ
"ನಾವು ಹಾಳಾಗಿದ್ದು ಈ ಸರ್ಕಾರಿ ಗೊಬ್ರ ಔಷಧಿಯಿಂದಾನೆ, ವರ್ಷ ವರ್ಷಕ್ಕೂ ಬೆಳೆಯ ಮುಕ್ಕಾಲು ದುಡ್ಡು ಅವುಕ್ಕೆ ದಂಡ. ಹಟ್ಟಿ ಗೊಬ್ರದಿಂದ ಕಡಿಮೆ ಫಸಲಾಗ್ತಿತ್ತು ನಿಜ ಆದರೆ ಬೆಳೆಗೆ ಜಾಸ್ತಿ ಹಣ ಕೊಟ್ಟಿದ್ರೆ ಅದೇ ಭಾಗ್ಯ ಆಕ್ತಿತ್ತು" ರೈತ ಹರಿವ ನೀರಿನಲ್ಲಿ ಕೈ ತೊಳೆಯುತ್ತಾ ಹೇಳುತ್ತಾನೆ.
ಹೀಗೆ ಹೂವು ಮತ್ತು ಬೇರುಗಳ ಸುದೀರ್ಘ ಸಂವಾದದ ನಂತರ ಸೂತ್ರಧಾರ ವ್ಯವಸ್ಥೆ ಎಂಬುದು ಈ ಪರದೆಯಂತೆ, ಅದು ಗ್ರಾಹಕ, ಉತ್ಪಾದಕನ ನಡುವೆ ಅಡ್ದಗೋಡೆಯಾಗಿದೆ, ಸರ್ಕಾರ ಪರದೆ ಸರಿಸಿದರೆ ಎಲ್ಲರ ಬಾಳು ಸುಖ ಎಂಬ ಮಾತಿನೊಂದಿಗೆ ನಾಟಕಕ್ಕೆ ತೆರೆಬಿತ್ತು.
ನಾಟಕ ನೋಡುತ್ತಾ ಕುಳಿತ ಕೋಣ್ಕಿಮಂಜನಿಗೆ ನಾಟಕ ಸಂಪೂರ್ಣ ಅರ್ಥವಾಗದಿದ್ದರೂ ಕಳೆದುಕೊಂಡ ಬೆಳೆಯ ನಡುವೆಯೂ ಅದೇನೋ ತನ್ನಪರವಾದ ಕೆಲಸ ನಡೆಯುತ್ತಿದೆ ಎಂಬ ಸಮಾಧಾನ ಸಿಕ್ಕಿತು. ನಂತರದ್ದು ನಾಟಕ ಕತೃ ಸುಬ್ಬಣ್ಣರಿಗೆ ಸನ್ಮಾನ. ಸನ್ಮಾನದ ಅಧ್ಯಕ್ಷತೆಯನ್ನು ಡಿ.ಸಿ. ಸಾಹೇಬರು ವಹಿಸಿದ್ದರಿಂದ ಕಾರ್ಯಕ್ರಮ ಮುಗಿಯುವವರೆಗೂ ಕಾಯುವುದು ಮಂಜನಿಗೆ ಅನಿವಾರ್ಯವಾಯಿತು.
ನೇಗಿಲಯೋಗಿ ನಾಟಕ ಇವತ್ತಿನ ಸ್ಥಿತಿಯನ್ನು ಅದ್ಭುತವಾಗಿ ಮನನ ಮಾಡಿಕೊಡುತ್ತದೆ. ಕೃಷಿಕರ ಬಾಳು ಹಸನಾಗಲು ಇಂತಹ ನಾಟಕಗಳ ಅವಶ್ಯಕತೆಯಿದೆ. ಸುಬ್ಬಣ್ಣ ಆಳವಾಗಿ ತಮ್ಮನ್ನು ಕೃಷಿಯಲ್ಲಿ ತೊಡಗಿಸಿಕೊಂಡು ರಾಸಾಯನಿಕದಿಂದ ಮುಕ್ತಿ ಉಳುವವನಿಗೆ ಶಕ್ತಿ ಯ ಸಂದೇಶ ನೀಡುವ ಈ ನಾಟಕ ರಚನೆಯಿಂದ ರಂಗಕರ್ಮಿಗಳಲ್ಲಿ ವಿಶಿಷ್ಠವಾಗಿ ನಿಲ್ಲುತ್ತಾರೆ. ಮರದಲ್ಲಿ ಎಲೆಗಳು ಬೆಳೆದು ಹೂವು ಅರಳಬೇಕೆಂದರೆ ಬೇರಿನ ಕೆಲಸ ಅತಿ ಮುಖ್ಯ, ಬೇರು ಯಾರಿಗೂ ಕಾಣಿಸದೇ ತನ್ನ ಕೆಲಸವನ್ನು ನಿರ್ವಹಿಸುತ್ತದೆ, ರೈತ ಬೇರಿದ್ದಂತೆ ,ಅವನ ಪರವಾಗಿ ನಾವು ಇಷ್ಟಾದರೂ ಮಾಡಬೇಕು, ಇವತ್ತಿನ ಕಾಲದಲ್ಲಿ ಎಲ್ಲರೂ ರೈತನನ್ನು ಉಪಯೋಗಿಸಿಕೊಳ್ಳುತ್ತಾರೆ, ಆದರೆ ಸುಬ್ಬಣ್ಣ ರೈತರಿಗಾಗಿ ಹೋರಾಡುತ್ತಾರೆ, ರಂಗದಲ್ಲಿ ನೇಗಿಲ ಯೋಗಿಯ ದೈನ್ಯ ಸ್ಥಿತಿ ಮನಸ್ಸನ್ನು ಕಲಕಿಬಿಡುತ್ತದೆ. ನಾನು ಸರ್ಕಾರದ ಪರವಾಗಿ ರೈತರ ಹಿತದೃಷ್ಟಿಯಿಂದ ಈ ನಾಟಕಕ್ಕೆ ಒಂದು ಲಕ್ಷರೂಪಾಯಿಯ ಸಹಾಯಧನ ನೀಡುವ ವ್ಯವಸ್ಥೆ ಮಾಡುತ್ತೇನೆ, . ಕಾರ್ಯಕ್ರಮದ ಅಧ್ಯಕ್ಷರಾದ ಡಿ.ಸಿ.ಸಾಹೇಬರ ಮಾತಿಗೆ ಕಿವಿಗಡಚಿಕ್ಕುವ ಚಪ್ಪಾಳೆಯೋ ಚಪ್ಪಾಳೆ. ಜನರ ನಡುವೆಯಿದ್ದ ಮಂಜನೂ ಚಪ್ಪಾಳೆ ತಟ್ಟುವುದರೊಂದಿಗೆ ಅಭಿನಂದನಾ ಕಾರ್ಯಕ್ರಮ ಮುಗಿಯಿತು.
ಸಮಾರಂಭ ಮುಗಿಯುತ್ತಿದ್ದಂತೆ ಪ್ರೇಕ್ಷಕರು, ಅತಿಥಿಗಳು, ಅಭ್ಯಾಗತರೂ ಎಂಬ ಬೇಧಭಾವವಿಲ್ಲದೆ ಹೊರಗೆ ಹೋಗಲು ಬಾಗಿಲಿನತ್ತ ನುಗ್ಗತೊಡಗಿದರು. ಕೋಣ್ಕಿ ಮಂಜನಿಗೆ ತನ್ನ ವರ್ಷದಕೂಳು ಅಕಾಲಮಳೆಯಿಂದ ನಾಶವಾಗಿದ್ದು, ಪರಿಹಾರ ಸಿಗದಿದ್ದುದು, ಬೆಳೆ ಇಲ್ಲದೆ ಜೀವನ ದೈನ್ಯ ಸ್ಥಿತಿಗೆ ತಲುಪಿರುವುದು, ಮುಂತಾದವುಗಳನ್ನು ಡಿ.ಸಿ ಯವರ ಬಳಿ ಹೇಳಿ ಅರ್ಜಿ ನೀಡುವುದು ಅನಿವಾರ್ಯವಾಗಿತ್ತು. ಜನರನ್ನು ತಳ್ಳುತ್ತಾ ಅವರುಗಳ ಬೈಯ್ಗುಳ ಕೇಳಿಯೂ ಕೇಳದಂತೆ ಮುನ್ನುಗ್ಗಿದ.
ಅಷ್ಟರಲ್ಲಿ ಸಾಹೇಬರು ಕಾರಿನ ಬಳಿ ಹೋಗಿದ್ದರು. ಹಲವಾರು ಗಣ್ಯರು ಅವರನ್ನು ಬೀಳ್ಕೊಡಲು ಜತೆ ಇದ್ದರು. ಅವರನ್ನೆಲ್ಲಾ ಬದಿ ಸರಿಸಿದ ಮಂಜ ಮಗಳು ಬರೆದಕೊಟ್ಟ ಅರ್ಜಿಯನ್ನು ಡಿ.ಸಿ.ಸಾಹೆಬರ ಮುಂದೆ ಹಿಡಿದ.
ಸಾಹೇಬರು ಒಮ್ಮೆ ಅರ್ಜಿಯನ್ನು ಮತ್ತೊಮ್ಮೆ ಕೋಣ್ಕಿಮಂಜನನ್ನು ಕೆಂಗಣ್ಣಿನಿಂದ ಅಪಾದಮಸ್ತಕ ನೋಡಿ ನಂತರ ಗಣ್ಯರತ್ತ ನೋಡಿ ಮುಗುಳನಕ್ಕು ಕೈಬೀಸಿ ಕಾರೊಳಗೆ ಕುಳಿತರು. ಕಾರು ಡರ್ ಎಂದು ಹೊರಟು ಹೋಯಿತು.
"ನಮ್ಮ ಜನರಿಗೆ ಯಾವಾಗ ಅರ್ಜಿ ಕೊಡಬೇಕು ಯಾವಾಗ ಕೊಡಬಾರ್‍ದು ಅನ್ನೋ ಮ್ಯಾನರ್ಸೇ ಇಲ್ಲ"
ಎಂದು ಗಣ್ಯರೊಬ್ಬರು ಹೇಳಿದರು. ಕೋಣ್ಕಿಮಂಜ, ಗಣ್ಯರು ಮ್ಯಾನರ್ಸ್ ಅಂದಿದ್ದನ್ನು ಕೇಳಿ ಅವರು ತನ್ನಪರವಾಗಿಯೇ ಏನೋ ಹೇಳಿದರೆಂದು ತಿಳಿದು "ಹೌದು ಹೌದು" ಎಂದು ತಲೆ ಅಲ್ಲಾಡಿಸಿ, ಡಿ.ಸಿ ಸಾಹೇಬರು ನೀಡುವ ಪರಿಹಾರದ ಕನಸುಕಾಣುತ್ತಾ ಜೀವನ ವೆಂಬುದು ನಾಟಕ ರಂಗ.... ಎನ್ನುವ ರಂಗಗೀತೆಯನ್ನು ಗುಣಗುಣಿಸುತ್ತಾ ಮನೆಯತ್ತ ಹೊರಟ.
ಆದರೆ ಕೋಣ್ಕಿಮಂಜನಿಗೆ ತಿಳಿಯದ ಸಂಗತಿಯೆಂದರೆ ಅವನು ಡಿ.ಸಿ ಸಾಹೇಬರಿಗೆ ಬರೆದುಕೊಟ್ಟ ಅರ್ಜಿ ಕಾರಿನ ಚಕ್ರಕ್ಕೆ ಸಿಕ್ಕು ಮೂರ್ನಾಲ್ಕು ಸುತ್ತು ಸುತ್ತಿ ಸ್ವಲ್ಪದೂರದಲ್ಲಿ ಟೈರ್‌ನ ಗುರುತಿನೊಂದಿಗೆ ಅನಾಥವಾಗಿ ಬಿದ್ದಿತ್ತು. ಅರ್ಜಿ ಬಿದ್ದ ಅನತಿ ದೂರದಲ್ಲಿ ನೇಗಿಲ ಯೋಗಿನಾಟಕದ ಪ್ರದರ್ಶನ ಫಲಕ ತೊನೆದಾಡುತ್ತಿತ್ತು.

Wednesday, March 18, 2009

ಪಣಿಯಕ್ಕ

ನನಗೆ ಅನ್ನಿಸುತ್ತದೆ ಪಣಿಯಕ್ಕ ಹುಚ್ಚಿಯಲ್ಲ, ಆದರೆ ನಾನೂ ಎಲ್ಲರೆದುರು ಹಾಗೆ ಹೇಳಲಾರೆ. "ಯಾರಿಗೆ ಯಾರುಂಟು ಯರವೀನ ಸಂಸಾರ ನೀರ ಮೇಲಣ ಗುಳ್ಳೆ ನಿಜವಲ್ಲೋ ಹರಿಯೇ" ಎನ್ನುವ ಹಾಡು ಕೇಳಿತೆಂದರೆ ಪಣಿಯಕ್ಕನ ಸವಾರಿ ನಮ್ಮ ಮನೆಗೆ ಪ್ರವೇಶವಾಗಿದೆ ಎಂದು ಅರ್ಥ. ಒಂದರ ಹಿಂದೆ ಒಂದು ಹಾಡುಗಳನ್ನು ಹೇಳುತ್ತಾ ಮರುಕ್ಷಣದಲ್ಲಿ "ಭಟ್ರು ಬಾ ಅಂದಿದ್ರು,ನನಗೆ ಯಾರ ಮನೆಗೂ ಬರಬಾರದು ಹೋಗಬಾರದು ಅಂತ ಏನಿಲ್ಲ, ಆದರೆ ಕೊಳೆ ಔಷಧಿ ಹೊಡೆದು ಆಗಲಿಲ್ಲ, ದೇವರಿಗೆ ಎರಡು ಹೂವು ಹಾಕಿದ್ರೆ ನಾಳೆ ದೊಡಗದ್ದೆಗೆ ಹೋಗಿ, ಮಳ್ಳು ಅಂತಂದ್ರೆ ಹೆಬ್ಬೆಟ್ಟಿಗೂ ಬೆಲೆ ಇಲ್ಲ " ಎಂದು ಒಂದು ವಿಷಯಕ್ಕೂ ಮತ್ತೊಂದು ವಿಷಯಕ್ಕೂ ಕೊಂಡಿ ಇಲ್ಲದ ಮಾತನ್ನು ಆರಂಬಿಸಿ ನಂತರ ಮತ್ತೆ " ಕರೆದರೂ ಬರುವೆಯೆಂದೂ ಶ್ರೀ ಕೃಷ್ಣನಾ..... " ಎಂದು ಮತ್ತೆ ಮರಳಿ ಹಾಡಿಗೆ ಹೊರಳುತ್ತಿತ್ತು.
ಪಣಿಯಕ್ಕಳ ಈ ರೀತಿಯ ಓಡಾಟದ ವರ್ತನೆಗೆ ಊರಿನ ಜನರು "ಅವಳಿಗೆ ಕೂತು ಉಣ್ಣುವಷ್ಟು ಆಸ್ತಿ ಇದ್ದರೂ ಅವಳ ಅವಸ್ಥೆ ಹೀಗೆ, ಅಮಾವಾಸೆ ಹುಣ್ಣಿಮೆಯ ಎದುರಿನಲ್ಲಿ ಮಳ್ಳು ಜಾಸ್ತಿಯಾಗಿ ಊರು ಅಲೆಯುವ ಭಾಗ್ಯ" ಎನ್ನುತ್ತಿದ್ದರು. ಅಮಾವಾಸೆ ಮತ್ತು ಹುಣ್ಣಿಮೆಯ ಎದುರಿನ ದಿವಸಗಳಲ್ಲಿ ಪಣಿಯಕ್ಕಳಿಗೆ ಹುಚ್ಚು ಜಾಸ್ತಿಯಾಗುತ್ತದೆ ಎನ್ನುವುದು ನಿಜವೋ ಸುಳ್ಳೊ ಎಂದು ಯಾರೂ ಕೂಲಂಕುಷವಾಗಿ ಪತ್ತೆ ಮಾಡಲು ಹೋಗದಿದ್ದರೂ, ಅವಳು ಹೀಗೆ ಊರಿನ ಮೇಲೆ ಹೊರಟಾಗಲೆಲ್ಲಾ "ಅಮವಾಸೆ ಬಂತು ಅಂತ ಕಾಣಿಸ್ತದೆ ಪಣಿಯಕ್ಕನ ಸವಾರಿ ಊರ್ ಮೇಲೆ ಹೊಂಟಿದೆ" ಎನ್ನುವ ಮಾತು ಚಾಲ್ತಿಗೆ ಬಂದಿತ್ತು. ಆದರೆ ಪಣಿಯಕ್ಕನ ಓಡಾಟಕ್ಕೂ ಅಮವಾಸೆ ಹುಣ್ಣಿಮೆಗೂ ಯಾವುದೇ ಸಂಬಂಧವಿರಲಿಲ್ಲ. ಹಾಗಂತ ಅವಳು ಊರಿನಲ್ಲಿ ಎಲ್ಲರ ಮನೆಗೆ ಹೋಗುತ್ತಿರಲಿಲ್ಲ ಕೆಲವು ಮನೆಗೆ ಮಾತ್ರ ಹೋಗಿ ಒಂದರ್ದ ತಾಸು ಹಾಡು ಹೇಳಿ ವಟವಟ ಎಂದು ಮಾತನಾಡಿ ಅಲ್ಲಿಂದ ಮತ್ತೊಂದು ಮನೆಗೆ ಹೊರಡುತ್ತಿದ್ದಳು. ತೀರಾ ಒತ್ತಾಯ ಮಾಡಿದರೆ ಒಂದು ಲೋಟ ಕಾಫಿ ಕುಡಿಯುತ್ತಿದ್ದಳಷ್ಟೆ.
******************
ನನಗೆ ಒಮ್ಮೊಮ್ಮೆ ಆಕೆಗೆ ಹುಚ್ಚು ಅಂತ ಅನ್ನಿಸುತ್ತಿರಲಿಲ್ಲ. ಆಕೆ ಹೇಳುವ, ಮಾತನಾಡುವ ವಿಧಾನ ಹಾಗಿತ್ತಾದರೂ ಕಳಚಿದ ಕೊಂಡಿ ಸೇರಿಸಿದರೆ ಅದಕ್ಕೊಂದು ಅರ್ಥ ಬರುತಿತ್ತು. ನಡೆದಿದ್ದನ್ನು ನಡೆದಹಾಗೆ ಹಲವು ಬಾರಿ ಹೇಳಿಬಿಡುತ್ತಿದ್ದಳು ಅದು ಹುಚ್ಚಿನ ಮಾತಾಗಿರದೇ ಸತ್ಯದ ಮಾತಾಗಿರುತ್ತಿತ್ತು. ಆದರೆ ಅವಳ ಮಾತಿಗೆ ಅರ್ಥ ಕಲ್ಪಿಸುವವರು ಅವಳನ್ನು ತಮ್ಮ ಅನುಕೂಲಕ್ಕೆ ಹುಚ್ಚಿಯನ್ನಾಗಿಸಿದ್ದರು ಅಂತ ಅನಿಸುತ್ತಿತ್ತು. "ಮಗಳ ಅತ್ತೆ ಮಗಳು ಹೇಳ್ದಂಗೆ ಕೇಳ್ಬೇಕು, ಕಡ್ಡಿ ಮುರಿದರೆ ಬೆಂಕಿ ಹತ್ತೋಕೆ ಏನ್ ತೊಂದ್ರೆ,ಆಸ್ತಿ ಸಿಕ್ಕಿದ್ಮೇಲೆ ಯಾರ ಹಂಗು ಯಾಕೆ, ಕಲ್ಲೂ ಅಂದ್ರೆ ದೇವ್ರು ದೇವ್ರೂ ಅಂದ್ರು ಕಲ್ಲೂ, ತನ್ನ ಸೊಸೆ ಮಾತ್ರಾ ತಾನು ಹೇಳ್ದಂಗೆ ಕೇಳ್ಬೇಕು, ಬಾರೋ ಬಾರೋ ಬಾರೋ ಗಣಪ...." ಎಂಬಂತಹ ಪಣಿಯಕ್ಕಳ ಬಾಯಿಂದ ಹೊರಡುವ ವಾಕ್ಯವನ್ನು ಸರಿಯಾಗಿ ಜೋಡಿಸಿ ಅರ್ಥೈಸಿಕೊಂಡರೆ ಅದೊಂದು ವಾಸ್ತವವನ್ನು ತೋರಿಸುತ್ತಿತ್ತು. ಅಲ್ಲಿ ಬೂಟಾಟಿಕೆ ಇರಲಿಲ್ಲ, ಔಪಚಾರಿಕ ಮಾತುಗಳೂ ಇರಲಿಲ್ಲ, ಆದರೆ ನಿತ್ಯ ಪ್ರಪಂಚದಲ್ಲಿ ಬದುಕಲು ನಾಟಕದ ಅವಶ್ಯಕಥೆ ಇದ್ದುದರಿಂದ ಸರಿಯಿದ್ದವರು ಎಂದು ಅನ್ನಿಸಿಕೊಂಡವರ ಪ್ರಕಾರ ಅದು ಹುಚ್ಚಾಗಿತ್ತು.
ನನಗೆ ಒಮ್ಮೊಮ್ಮೇ ಯೋಚಿಸಿದಾಗ ಪಣಿಯಕ್ಕ ಬೇಕಂತಲೇ ಹೀಗೆ ಆಡುತ್ತಿರಬಹುದಾ ಅಂತ ಅನುಮಾನವೂ ಕಾಡುತ್ತಿತ್ತು. ಪಣಿಯಕ್ಕ ಸುಮಾರು ತನ್ನ ಐವತ್ತೈದನೇ ವರ್ಷಗಳವರೆಗೂ ಎಲ್ಲಾ ಗೃಹಣಿಯರಂತೆ ಅಚ್ಚುಕಟ್ಟಾಗಿ ಸಂಸಾರ ಸಾಗಿಸಿಕೊಂಡು ಬಂದವಳು. ಸಾದು ಸ್ವಭಾವದ ಗಂಡ, ಮದ್ಯಮವರ್ಗದ ಜೀವನಕ್ಕೆ ಸಾಕಾಗುವಷ್ಟು ಅಡಿಕೆ ತೋಟ, ಅರಮನೆಯಲ್ಲದಿದ್ದರೂ ಊರಿನ ಅಂಚಿನಲ್ಲಿ ಪುಟ್ಟದೊಂದು ಮನೆ ಹೀಗೆ ಸುಖೀ ಸಂಸಾರ. ಆದರೆ ಗಂಡ ಹೆಂಡತಿ ಇಬ್ಬರಿಗೂ ಇದ್ದ ಎಕೈಕ ಕೊರಗೆಂದರೆ ಮಕ್ಕಳಿಲ್ಲದಿರುವುದು. ಮಕ್ಕಳಿಲ್ಲದ ಕೊರಗನ್ನು ದಂಪತಿಗಳು ಮನಸ್ಸಿಗೆ ಹಚ್ಚಿಕೊಳ್ಳದೆ ಊರಿನ ಎಲ್ಲಾ ಮಕ್ಕಳ ಮುಖದಲ್ಲಿ ತಮ್ಮ ಮಕ್ಕಳನ್ನು ಕಾಣುತ್ತಿದ್ದರು. ಆ ಮಮತೆ ಪ್ರೀತಿ ಬಾಯಿಮಾತಿಗಿರದೆ ದೀಪಾವಳಿ ಹಬ್ಬದ ವಸ್ತ್ರಡುಕು ಆಚರಣೆಗೆ ಊರಿನ ಎಲ್ಲಾ ಮಕ್ಕಳ ತಲೆ ಎಣಿಸಿ ಅವರ ಅಳತೆಗೆ ಸರಿ ಹೊಂದಿಸುವ ಬಟ್ಟೆ ಕೊಂಡು ವಾರಗಟ್ಟೆಲೆ ಊರಿನ ಏಕೈಕ ಮಹಿಳಾ ಟೈಲರ್ ಲಕ್ಷಮ್ಮನ ಬಳಿ ಹೊಲಿಸಿ ಕೊಡುತ್ತಿದ್ದರು. ಪಣಿಯಕ್ಕಳ ಮನೆಗೆ ಬಂದ ಊರಿನ ಎಲ್ಲಾ ಮಕ್ಕಳೂ ಚಾಕಲೇಟ್ ಇಲ್ಲದೆ ಮರಳುವಂತೆ ಇರಲಿಲ್ಲ. ಅದು ನಿಜವಾದ ಪ್ರೀತಿಯಾದ್ದರಿಂದ ಶಾಲೆಗೆ ರಜ ಇತ್ತೆಂದರೆ ಮಕ್ಕಳ ದಂಡು ಪಣಿಯಕ್ಕಳ ಮನೆಯಲ್ಲಿ ಜಾಂಡಾ ಊರಿಬಿಡುತ್ತಿತ್ತು. ಮಕ್ಕಳ ನಡುವೆ ಮಕ್ಕಳಾಗಿ ಅವರಿಗೆ ಅಚ್ಚರಿಯ ಕಥೆ ಹೇಳುವ ಕೆಲಸ ಪಣಿಯಕ್ಕಳ ಗಂಡ ಮಾಡುತ್ತಿದ್ದರೆ, ಮಕ್ಕಳ ಅಳು ಜಗಳಗಳನ್ನು ಸಂಬಾಳಿಸುವ ಕೆಲಸ ಪಣಿಯಕ್ಕಳಿದ್ದಾಗಿತ್ತು. ಮಂಕುತಿಮ್ಮನ ಕಗ್ಗವನ್ನು ಬಾಯಿಪಾಠ ಮಾಡಿಕೊಂಡಿದ್ದ ದಂಪತಿಗಳು ಊರಿನವರ ಜೀವನ ಜಂಜಡದ ಸಮಸ್ಯೆಗೆ ಕಗ್ಗದ ಉದಾಹರಣೆಯೊಡನೆ ಧೈರ್ಯ ತುಂಬುತ್ತಿದ್ದುದರಿಂದ ಊರಿನ ಹಿರಿಯರಿಗೂ ಅವರ ಮಾತನ್ನು ಮೀರಲಾಗದ ಗೌರವ. ಹೆಂಗಳೆಯರಿಗಂತೂ ಪಣಿಯಕ್ಕಳ ಮಾತು ವೇದವಾಕ್ಯ ಕಾರಣ ಪಣಿಯಕ್ಕಳಿಗೆ ಕನಿಷ್ಟವೆಂದರು ಒಂದು ಸಾವಿರ ಹಾಡುಗಳು ಬಾಯಿಗೆ ಬರುತ್ತಿತ್ತು. ಹಳೆಯ ಹಾಡು ಕಲಿಯುವವರು, ಮತ್ತು ಬರೆದುಕೊಳ್ಳುವವರು ನಿತ್ಯ ಪಣಿಯಕ್ಕಳ ಹಿಂದೆ ಇರುತ್ತಿದ್ದರು.
ಕಾಲ ಎನ್ನುವುದು ಎಲ್ಲವುದಕ್ಕೂ ಒಂದು ಅಂತ್ಯವನ್ನು ಇಟ್ಟಿರುತ್ತದೆಯೆಲ್ಲ. ಅದು ಪಣಿಯಕ್ಕಳ ದಿನಚರಿಯನ್ನು ಬದಲಾಯಿಸುವಂತೆ ಮಾಡಿತು. ಗುಂಡು ಕಲ್ಲಿನಂತೆ ಗಟ್ಟಿಯಾಗಿದ್ದ ಗಂಡ ಅದೇನೋ ತಿಳಿಯದ ಖಾಯಿಲೆಯಿಂದ ಅಕಸ್ಮಾತ್ ತೀರಿಕೊಂಡ. ಪಣಿಯಕ್ಕಳಿಗೆ ದಿಕ್ಕು ತೋಚದಾಗಿದ್ದೇ ಆವಾಗ. ಹಗಲೂ ಕತ್ತಲಿನಂತೆ ಅವಳಿಗೆ ಅನ್ನಿಸತೊಡಗಿತು. ಜೀವನ ಕಗ್ಗತ್ತಿಲಿನ ಕೂಪಕ್ಕೆ ತಳ್ಳಿದಾಗ ವಾಸ್ತವ ಮಾತ್ರ ಉತ್ತರ ನೀಡಬಲ್ಲದು ಎನ್ನುವ ಅರಿವಾಯಿತು.ಊಟ ಸೇರದು, ನಿದ್ರೆ ಬಾರದು ಮನೆಯಲ್ಲಾ ಬಣಬಣ ಅನ್ನಿಸಿ ಈ ಮನೆಯಲ್ಲಿ ಒಂಟಿಯಾಗಿ ತಾನು ಬದುಕಲಾರೆ ಎಂಬ ತೀರ್ಮಾನಕ್ಕೆ ಬಂದಳು. ಹೇಗೂ ಒಂದು ಕುಟುಂಬದ ಜೀವನಕ್ಕಾಗುವಷ್ಟು ಆಸ್ತಿ ಇದೆ, ನಾನು ಇನ್ನೆಷ್ಟು ದಿನ ಬದುಕಿಯೇನು? ನಂತರ ಯಾರೋ ಸಂಬಂಧವಿಲ್ಲದವರ ಪಾಲಾಗುವುದು ಬೇಡವೆಂದು ಅನಾಥರನ್ನು ಹುಡುಕಿ ಕರೆದುಕೊಂಡುಬಂದು ಮನೆಯಲ್ಲಿ ಇಟ್ಟುಕೊಂಡರೆ ಒಳ್ಳೆಯದು ಅಂಬ ಆಲೋಚನೆಗೆ ರೂಪುಕೊಡಲು ಪರಿಚಯದವರ ಹತ್ತಿರ "ಯಾರಾದರೂ ಬಡವರು ಇದ್ದರೆ ಹೇಳಿ, ನನಗೂ ಆಸರೆ ಅವರಿಗೆ ಆಸರೆ" ಎಂದಳು. ಆವಾಗ ಸಿಕ್ಕಿದ ದಂಪತಿಗಳೇ ಕಾರಗೋಡು ಮಂಜಪ್ಪ,ಮತ್ತು ಸರಸಮ್ಮ.
ಕಾರಗೋಡು ಮಂಜಪ್ಪ ಸಾಗರದ ಪೇಟೆ ಬೀದಿಯಲ್ಲಿ ಹಳ್ಳಿಗರಿಂದ ವೀಳ್ಯದೆಲೆ ಖರಿದಿ ಮಾಡಿ ಅಲ್ಲಿಯೇ ಕುಳಿತು ವ್ಯಾಪಾರ ಮಾಡುತ್ತಿದ್ದ. ಮದುವೆಗೆ ಮೊದಲು ಉಡುಪಿಯಲ್ಲಿ ಮೋಟಾರ್ ಸೈಕಲ್ ಗ್ಯಾರೇಜ್‌ನಲ್ಲಿ ಮ್ಯಕಾನಿಕ್ ಆಗಿದ್ದ ಮಂಜಪ್ಪ ಅಲ್ಲಿಯ ಬಿಸಿಲಿನ ಜಳ ತನ್ನ ದೇಹಕ್ಕೆ ಒಗ್ಗದೆ ಸಾಗರ ಸೇರಿದ್ದೆ ಎಂದು ಹೇಳುತ್ತಿದ್ದ. ಆದರೆ ನಿಜ ಸಂಗತಿಯೆಂದರೆ ಗ್ಯಾರೇಜ್‌ನ ಪಕ್ಕದ ಮನೆಯ ಕ್ರಿಶ್ಚಿಯನ್ ಹುಡುಗಿಯ ಪ್ರಕರಣ ಅವನನ್ನು ಉಡುಪಿಯನ್ನು ತೊರೆಯುವಂತೆ ಮಾಡಿತ್ತು. ಶೋಕಿ ಜೀವನ ಅಭ್ಯಾಸವಾಗಿದ್ದ ಮಂಜಪ್ಪನಿಗೆ ಸಾಗರಕ್ಕೆ ಬಂದು ಗ್ಯಾರೇಜ್ ಹಾಕಲು ಕೈಯಲ್ಲಿ ದುಡ್ಡಿರಲಿಲ್ಲ, ಹಾಗಂತ ಯಾವುದಾದರೂ ಗ್ಯಾರೇಜ್‌ನಲ್ಲಿ ಮೆಕಾನಿಕ್ ಆಗಿ ಕೆಲಸಕ್ಕೆ ಸೇರಲು ಮನಸ್ಸಿರಲಿಲ್ಲ. ಕೊನೆಯಲ್ಲಿ ಏನೂ ದಾರಿಕಾಣದೆ ಬಂಡವಾಳವಿಲ್ಲದ ವೀಳ್ಯದೆಲೆ ವ್ಯಾಪಾರ ಶುರುಮಾಡಿದ್ದ. ಆದರೆ ಅದರಿಂದ ಬರುವ ಆದಾಯ ಎರಡು ಮಕ್ಕಳ ನೆಮ್ಮದಿಯ ಸಂಸಾರಕ್ಕೆ ಸಾಲುತ್ತಿರಲಿಲ್ಲ. ಆವಾಗ ಅವನಿಗೆ ಪಣಿಯಕ್ಕಳ ಸುದ್ದಿ ಕಿವಿಗೆ ಬಿತ್ತು. ಪಣಿಯಕ್ಕ ವರಸೆಯಲ್ಲಿ ದೂರದ ಚಿಕ್ಕಮ್ಮನಾಗಬೇಕು ಎಂಬ ಮಾಹಿತಿ ಆತನಿಗೆ ಸಿಕ್ಕಿ, ತಾನು ಸರಿಯಾದ ಜೀವನ ಕಂಡುಕೊಂಡರೆ ಅಲ್ಲಿಯೇ ಎಂದು ತೀರ್ಮಾನಿಸಿ ಓಬಿರಾಯನ ನೆಂಟಸ್ತನವನ್ನು ಮುಂದುಮಾಡಿಕೊಂಡು ಆ ಎಳೆಯ ಆಧಾರದ ಮೇಲೆ ಸಾಗಿ ಪಣಿಯಕ್ಕಳ ಮನೆ ಸೇರಿದ.
ಮಂಜಪ್ಪನ ಹೆಂಡತಿ ಸರಸಮ್ಮ ಮುಗ್ದ ಸ್ವಭಾವದವಳು. ಹೊಸ ದಂಪತಿಗಳ ಪ್ರವೇಶವಾಗಿ ಮೊದಲನೇ ವರ್ಷ ಎಲ್ಲವೂ ಸಸೂತ್ರವಿತ್ತು. ಪಣಿಯಕ್ಕ ತನ್ನ ಪಾಡಿಗೆ ಊರಿನ ಮಕ್ಕಳೊಡನೆ ನಲಿಯುತ್ತಾ, ದೇಹವೆಂಬುದು ಕುದುರೆ ಆತ್ಮನದರಾರೋಹಿ .......ಎನ್ನುವ ಕಗ್ಗವನ್ನು ಗುಣುಗುಣಿಸುತ್ತಲೋ ಅಥವಾ ಹಾಡುತ್ತಲೋ ಮೊದಲಿನಂತೆ ಇದ್ದಳು. ನಂತರದ ದಿನಗಳಲ್ಲಿ ಮಂಜಪ್ಪನ ಬೇರು ಗಟ್ಟಿಯಾಗತೊಡಗಿತು. ಮನೆಗೆ ಬರುವ ಮಕ್ಕಳಿಗೆ ಮಂಜಪ್ಪ ಗದರಿಸತೊಡಗಿದ, ಪಣಿಯಕ್ಕ ಕೇಳಿದರೆ ಅವು ದುಡ್ಡು ಕದಿಯುತ್ತವೆ ಅಂತ ಸುಳ್ಳು ಹೇಳಿದ. ಮಂಜಪ್ಪನ ಅಹಂಕಾರದ ಸ್ವಭಾವದಿಂದ ನಿಧಾನ ಪಣಿಯಕ್ಕಳ ಮನೆಗೆ ಜನ ಬರುವುದು ಕಡಿಮೆಯಾಯಿತು. ನಿಧಾನ ತಮ್ಮ ಮನೆಗೆ ಮಕ್ಕಳು ಊರಿನವರು ಬಾರದಿದ್ದುದನ್ನು ಮನಗಂಡ ಪಣಿಯಕ್ಕ ತಾನೇ ಜನರ ಬಳಿ ಹೋಗತೊಡಗಿದಳು. ಪಣಿಯಕ್ಕ ಜನರ ಬಳಿ ಹೊರಟಾಗ ಮಂಜಪ್ಪನ ಒಂದೊಂದೇ ಅವತಾರದ ಪರಿಚಯವಾಗತೊಡಗಿತು. "ಅಲ್ಲಾ... ಪಣಿಯಕ್ಕ ಹೋಗಿ ಹೋಗಿ ಊರಿಗೆ ಒಂದು ಮಾರಿ ತಂದು ಹಾಕಿದ್ಯಲ್ಲೇ, ನಮ್ಮ ಮನೆ ಜಾಗ ತನಗೆ ಸೇರ್ತದೆ ಅಂತ ನಿಮ್ಮನೆ ಮಂಜಪ್ಪ ಕೋರ್ಟಿಗೆ ಹೋಗಿದಾನಲ್ಲೇ".ಅಂತಲೋ ಅಥವಾ " ಅಲ್ಲಾ ಪಣಿಯಕ್ಕ ನಿನ್ನ ಮಂಜಪ್ಪ ಉಡುಪಿಯಲ್ಲಿ ಅದ್ಯಾರೋ ಕ್ರಿಶ್ಚಿಯನ್ ಹುಡುಗಿ ಹತ್ರ ಹೊಡೆತ ತಿಂದ್ನಂತಲ್ಲೇ".ಎಂದೋ ಅಥವಾ "ನಿನ್ನ ಮಂಜಪ್ಪ ಬೆಂಗಳೂರಿಗೆ ಕ್ರಿಶ್ಚಿಯನ್ ಆಗೋದಕ್ಕೆ ಹೋಗಿದ್ನಂತಲ್ಲೇ, ನೀನು ಆಸ್ತಿ ಅವನಿಗೆ ಬರೆದುಕೊಡದಿದ್ರೆ ಕೋರ್ಟಿಗೆ ಹೋಕ್ತಾನಂತಲ್ಲೆ" ಎಂದು ಕೇಳತೊಡಗಿದಾಗ ಪಣಿಯಕ್ಕಳಿಗೆ ತಾನು ನಿಂತಲ್ಲೇ ಭೂಮಿ ಕುಸಿಯಬಾರದೇ ಅಂತ ಅನ್ನಿಸತೊಡಗಿತು. ಊರಿಗೆ ಊರೇ ಮೆಚ್ಚುವಂತೆ ಬದುಕಿದ್ದ ತನ್ನನ್ನು ಇಂಥಾ ಪರಿಸ್ಥಿತಿಯಲ್ಲಿ ತಂದಿಟ್ಟೆಯಲ್ಲಾ ದೇವರೆ ಎಂದು ಪಣಿಯಕ್ಕ ಕೊರಗತೊಡಗಿದಳು. ಮಂಜಪ್ಪನ ರಾಕ್ಷಸ ಸ್ವಭಾವನ್ನು ಸಹಿಸಲೂ ಆಗದೆ ಊರಿನವರಿಗೆ ಮುಖ ತೋರಿಸಲೂ ಆಗದೆ ದಿನದಿಂದ ದಿನಕ್ಕೆ ಪಣಿಯಕ್ಕಳ ಮನಸ್ಸು ದೇಹ ಹದಗೆಡುತ್ತಾ ಹೋಯಿತು. ಆಗೆಲ್ಲಾ ಮಂಜಪ್ಪನ ಹೆಂಡತಿ ಸರಸಮ್ಮ ಪಣಿಯಕ್ಕಳನ್ನು ತಾಯಿಗಿಂತ ಹೆಚ್ಚಾಗಿ ನೋಡಿಕೊಂಡರೂ ಪಣಿಯಕ್ಕಳ ಸ್ಥಿತಿ ಬಿಗಡಾಯಿಸುತ್ತಲೇ ಹೋಗಿ ಅತೀವ ಜ್ವರದಿಂದ ಹಾಸಿಗೆ ಹಿಡಿಯುವಂತಾಯಿತು.
ಇದೇ ಸಮಯ ಎಂದು ಜ್ವರದ ತಾಪದಿಂದ ನರಳತೊಡಗಿದ್ದ ಪಣಿಯಕ್ಕಳ ಹೆಬ್ಬೆಟ್ಟಿಗೆ ಮಂಜಪ್ಪ ಕೈ ಹಾಕಿದ. ಮಂಚದ ಮೇಲೆ ಮಲಗಿದ ಪಣಿಯಕ್ಕಳ ಹೆಬ್ಬೆಟ್ಟನ್ನು ಇಂಕ್ ಪ್ಯಾಡಿಗೆ ಒತ್ತಿಸಿ ಕೊಂಡು ಇನ್ನೇನು ಸ್ಟಾಂಪ್ ಪೇಪರ್ ಮೇಲೆ ಒತ್ತಿಸಿಕೊಳ್ಳಬೇಕು ಅನ್ನುವಷ್ಟರಲ್ಲಿ ಪಣಿಯಕ್ಕ ದಡಕ್ಕನೆ ಎದ್ದು ಸುಡುತ್ತಿರುವ ಜ್ವರದ ತಾಪದ ನಡುವೆಯೂ ಊರಿನ ನಡುವೆ ಕೂಗುತ್ತಾ ಓಡಿದಳು. ಅಂದಿನಿಂದ ಇಂದಿನ ವರೆಗೂ ಪಣಿಯಕ್ಕ ಹಾಗೆಯೇ ಓಡಾಡುತ್ತಲೇ ಇರುತ್ತಾಳೆ, ಮತ್ತು ಮಾತನಾಡುತ್ತಲೇ ಇರುತ್ತಾಳೆ. ಮತ್ತು ಅವಳ ಕೊಂಡಿಯಿಲ್ಲದಂತೆ ಕಾಣುವ ಮಾತಿನ ನಡುವೆ ಮಂಜಪ್ಪನ ಕಥೆ ಸ್ಪಷ್ಟವಾಗಿ ಬಿಚ್ಚಿಕೊಳ್ಳುತ್ತದೆ.
ನನಗೆ ಇಂದೂ ಅನ್ನಿಸುತ್ತದೆ ಪಣಿಯಕ್ಕ ಹುಚ್ಚಿಯಲ್ಲ, ಆದರೆ ನಾನೂ ಎಲ್ಲರೆದುರು ಹಾಗೆ ಹೇಳಲಾರೆ ಕಾರಣ ಮಂಜಪ್ಪನ ಕೈಯಲ್ಲಿ ಈಗ ಬೇಕಾದಷ್ಟು ದುಡ್ಡಿದೆ ಮತ್ತು ಪಣಿಯಕ್ಕ ಹುಚ್ಚಿಯೆಂದು ಆತ ಹೇಳಿದ್ದಾನೆ, ಮತ್ತು ಊರು ಕೂಡ ಹಾಗೆ ಹೇಳುತ್ತಿದೆ. ಹಾಗೂ ತನಗೆ ಈ ಅವಸ್ಥೆಯೇ ಒಳ್ಳೆಯದೂ ಎಂದು ಪಣಿಯಕ್ಕನೂ ಒಪ್ಪಿಕೊಂಡಿದ್ದಾಳೆ!.

Tuesday, March 17, 2009

ಕರಿಯಜ್ಜ ಮತ್ತು ಕೆಂಪು ಜಲಪಾತ



ಜಿರ್ರನೆ ಸುರಿವ ಮಳೆ ದಿನ ದಿನಕ್ಕೆ ಹೆಚ್ಚಾಗುತ್ತಿತ್ತು. ಎರಡು ತಿಂಗಳ ಹಿಂದೆ ಶುರುವಾಗಿದ್ದ ಮಲೆನಾಡ ಮಳೆ ಅದು, ಹಾಗಾಗಿ ಕಡಿಮೆಯಾಗುವ ಯಾವ ಲಕ್ಷಣ ಇರಲಿಲ್ಲ.
ಕುಂಬದ್ರೋಣ ಮಳೆಗೂ ಬೆಚ್ಚದೆ ಬೆದರದೆ ಜೀರುಂಡೆ,ಹಿತ್ಲಪುಟ್ಟಿ,ಮಳೆಜಿರ್ಲೆ ಒಂದಕ್ಕೊಂದು ಸ್ಪರ್ಧೆಗೆ ಬಿದ್ದವರಂತೆ ಚಿರ್ ಚಿರ್ ಅಂತ ಕೂಗುತ್ತಿದ್ದವು. "ಕೂಗು.... ಕೂಗು ಕುಂಡೆ ಒಡೆದು ಸಾಯ್ತೀಯಾ," ಕರಿಯಜ್ಜ ಪಡಸಾಲೆಯಲ್ಲಿ ಮಲಗಿದ್ದಲ್ಲಿಂದಲೇ ಕೂಗಿ ಹೇಳಿದ . ಅವು ಕರಿಯಜ್ಜನ ಕೂಗಿಗೆ ಸೊಪ್ಪು ಹಾಕಿದ ಲಕ್ಷಣಗಳ್ಯಾವುವೂ ಗೋಚರಿಸಲಿಲ್ಲ, ಇನ್ನೂ ಸ್ವಲ್ಪ ಎತ್ತರದ ದನಿಯಲ್ಲಿ "ಚಿರ್ ಚಿರ್ ಚಿರ್ರರ್ರೋ......" ಎಂದು ಕೂಗತೊಡಗಿದವು. "ಈ ದರಿದ್ರ ಜೀರುಂಡೆಗಳಿಗೆ ಈ ಮಳೆ ತಾಗದೇನೋ?, ಮಳೆಯ ಜರ್ರೋ ದನಿಯ ಜತೀಗೆ ಇದ್ರದ್ದೊಂದು ರಗಳೆ " ಎನ್ನುತ್ತಾ ಕರಿಯಜ್ಜ ಮಗ್ಗಲು ಬದಲಿಸಿದ.
ನಿತ್ಯ ಇಷ್ಟೇ ರಗಳೆ ಮಾಡುತ್ತಿದ್ದ ನೂರಾರು ಜಾತಿಯ ಜೀರುಂಡೆಗಳು ಕರಿಯಜ್ಜನ ನಿದ್ರೆಗೆ ಭಂಗ ತರುತ್ತಿರಲಿಲ್ಲ. ಆದರೆ ಇಂದು ನಿದ್ರೆ ಬಾರದ್ದರಿಂದ ಅದು ಅವನಿಗೆ ರಗಳೆಯಾಗಿತ್ತು. ವಾಸ್ತವವೆಂದರೆ ಅವನ ನಿದ್ರೆ ಕೆಡಿಸಿದ್ದು ಧೋ ಎಂದು ಧಾರಾಕಾರ ಸುರಿವ ಶಬ್ಧದ ಮಳೆಯೂ ಆಲ್ಲ, ಚಿರ್ರರ್ರೋ.... ಎಂದು ಕೂಗುವ ಹಿತ್ಲಪುಟ್ಟಿಯೂ ಅಲ್ಲ ರಾತ್ರಿ ಮಲಗುವ ಮುಂಚೆ ನಾಳೆ ನಾಡಿದ್ದರೊಳಗೆ ಆಣೆಕಟ್ಟಿನ ಬಾಗಿಲು ತೆರೆಯುತ್ತಾರಂತೆ ಎಂಬ ಸುದ್ದಿ ನಿದ್ರೆ ಹತ್ತಿರ ಸುಳಿಯಲು ಬಿಡುತ್ತಿರಲಿಲ್ಲ. ಹಾಗಾಗಿ ಹೊರಗಡೆಯ ಎಲ್ಲಾ ಶಬ್ಧಗಳೂ ಕರಿಯಜ್ಜನನ್ನು ಎಡಬಿಡದೆ ಕಾಡುತ್ತಿದ್ದವು.
ಕರಿಯಜ್ಜ ಎಂಬ ಹೆಸರಿಗೂ ಅವನ ವಯಸ್ಸಿಗೂ ಸಂಬಂಧವಿಲ್ಲದ ವಿಚಾರ ಎನ್ನುವುದು ಅವನನ್ನು ನೋಡದೆ ಕೇವಲ ಹೆಸರು ಕೇಳಿದ ಯಾರಿಗೂ ಗೊತ್ತಾಗಲು ಸಾಧ್ಯವಿರಲಿಲ್ಲ. ಕರಿಯಜ್ಜ ನಲವತ್ತರ ಹರೆಯದ ಹುಡುಗ ಅಂತ ಯಾರು ತಾನೆ ಊಹಿಸಿಯಾರು?. ಆದರೆ ಅದು ಅವನ ಹುಟ್ಟಿನೊಂದಿಗೆ ಚಾಲ್ತಿಗೆ ಬಂದ ಹೆಸರು. ಲಿಂಗನಮಕ್ಕಿ ಆಣೆಕಟ್ಟಿನ ಕೆಳಭಾಗದಲ್ಲಿರುವ ಕಾಳಿಬೆಳ್ಳೂರಿನ ಬಸಮ್ಮ ರಾಮಪ್ಪ ದಂಪತಿಗಳ ನಾಲ್ಕನೇ ಪುತ್ರನಾಗಿ , ಮಡಿವಾಳ ಕೇರಿಯ ಎಕೈಕ ನಾಯಕ ಕರಿಯಜ್ಜ ಸತ್ತ ದಿವಸ ಜನಿಸಿದ್ದ ಒಂದೇ ಕಾರಣದಿಂದ ಅವನಿಗೆ ಊರವರೆಲ್ಲಾ ಸೇರಿ ಕರಿಯಜ್ಜನೇ ಮತ್ತೆ ಹೊಸ ಜನ್ಮ ತಳೆದು ಬಂದಿದ್ದಾನೆ ಎಂಬ ತೀರ್ಮಾನ ಕೈಗೊಂಡು ಅದೇ ಹೆಸರಿನಿಂದ ಕೂಗತೊಡಗಿದರು. ಬಸಮ್ಮನಿಗೆ ಅದು ಸುತಾರಾಂ ಇಷ್ಟವಿಲ್ಲದೆ ಅವಳು "ಲೋಕೇಸ" ಎಂಬ ನವನವೀನ ಹೆಸರನ್ನು ಶಾಲೆಗೆ ಸೇರುವಾಗ ಇಟ್ಟು ಮಗನ ಬಗಲಿಗೊಂದು ಚೀಲ ಹಾಕಿ ತನ್ನ ಮಗ ಇದ್ಯಾವಂತ ಆಗಿ ಪ್ಯಾಂಟು ಶರ್ಟು ಹಾಕ್ಕೊಳ್ಳೊ ಹಂಗಾದರೆ ಸಾಕು ಎಂಬ ಮಹತ್ತರ ಆಸೆಯಿಂದ ಶಾಲೆಗೆ ಕಳುಹಿಸುತ್ತಿದ್ದಳು. ಆದರೆ ಊರವರ ಬಾಯಲ್ಲಿ ಮಾತ್ರ ಲೋಕೇಸನ ಹೆಸರು ಕರಿಯಜ್ಜ ಎಂದೆ ಕರೆಸಿಕೊಳ್ಳುತ್ತಿತ್ತು. ಹೆಸರು ಬದಲಾಯಿಸಲು ಹಠ ಹೊತ್ತ ಬಸಮ್ಮ ಅಕಸ್ಮಾತ್ ಐದನೇ ಹೆರಿಗೆಯಲ್ಲಿ ಬಾಣಂತಿಸನ್ನಿಯಾಗಿ ಅರೆಹುಚ್ಚಿಯಾದ್ದರಿಂದ ಲೋಕೇಸ ಎಂಬ ಹೆಸರು ಕಣ್ಮರೆಯಾಗಿ ಕರಿಯಜ್ಜ ಶಾಶ್ವತವಾಯಿತು. ಶಾಲೆಗೆ ಹೋಗಿದ್ದರಾದರೂ ಅದು ಬದಲಾಗುತ್ತಿತ್ತೇನೋ ಆದರೆ ಲೋಕೇಸನಿಗೆ ಏಳನೇ ವಯಸ್ಸಿಗೆ ಕಬ್ಬಿನಗದ್ದೆಯ ಹಂದಿಕಾಯುವ ಹಕ್ಕೆ ಮನೆಯಲ್ಲಿ ಮುಂಡು ಬೀಡಿ ಸೇದುವ ಕಾಯಕ ಶಾಲೆಗಿಂತ ಆಕರ್ಷಕವಾದ್ದರಿಂದ ಇವನೆ ನೋಡು ಅನ್ನದಾತ ಹೊಲದಿ ದುಡಿವೆ ದುಡಿವೆನು ಎಂಬ ಪದ್ಯವನ್ನು ಕಲಿತುಕೊಂಡು ಶಾಲೆಬಿಟ್ಟು ಖಾಯಂ ಕರಿಯಜ್ಜನಾಗಿ ಉಳಿದಿದ್ದ. ದಿನಕಳೆಯುತ್ತಿದ್ದಂತೆ ಅವನೂ ಆ ಹೆಸರನ್ನು ಒಪ್ಪಿಕೊಂಡ.
ಹುಟ್ತಾ ಹುಟ್ತಾ ಅಣ್ಣತಮ್ಮಂದಿರು ಬೆಳಿತಾ ಬೆಳಿತಾ ದಾಯವಾದಿಗಳು ಎಂಬ ಮಾತಿಗೆ ಒಂದಿನಿತೂ ಚ್ಯುತಿ ತರಲು ಇಚ್ಚಿಸದ ಸಹೋದರರು ಅಪ್ಪ ಸತ್ತ ಮಾರನೆದಿನ ಅರೆಹುಚ್ಚಿ ಬಸಮ್ಮನನ್ನು ಹೊರತುಪಡಿಸಿ ಹೊಡೆದಾಡಿ ಬಡಿದಾಡಿ ಇರುವ ಮೂರು ಎಕರೆ ನೀರಾವರಿ ಗದ್ದೆಯನ್ನು ಹಿಸ್ಸೆಮಾಡಿಕೊಂಡರು. ದೊಡ್ಡಣ್ಣನಿಗೆ ದೊಡ್ಡಪಾಲು ಎರಡನೆಯವನಿಗೆ ತುಸು ಹೆಚ್ಚು ಎಂಬ ಪಂಚಾಯ್ತಿದಾರರ ನ್ಯಾಯದಂತೆ ಕರಿಯಜ್ಜನಿಗೆ ಅರ್ದ ಎಕರೆಗಿಂತ ಕಡಿಮೆ ಗದ್ದೆ ಬಂತು. ಆದರೆ ಅವ್ವನ ಖಾಯಿಲೆ ಅಪ್ಪನ ಅಂತಿಮ ಕಾರ್ಯ ಎಂದು ಆಗಿದ್ದ ೧ ಲಕ್ಷ ಸಾಲದಲ್ಲಿ ಮಾತ್ರ ಸರಿಯಾಗಿ ನಾಲ್ಕನೇ ಒಂದಂಶ ಬಂದಿತ್ತು. ಅಮ್ಮ ಹುಚ್ಚಿಯಾದರೂ ತನ್ನ ಅಮ್ಮ ಹಾಗಾಗಿ ಅವಳು ತನ್ನ ಬಳಿಯೇ ಇರುತ್ತಾಳೆ ಎಂಬುದನ್ನು ಕರಿಯಜ್ಜನಾಗಿಯೆ ಹೇಳಿದ್ದ. ಇದು ಸರಿ ಅಲ್ಲ ಎಂದು ಮಿಕ್ಕ ಅಣ್ಣಂದಿರು ತಗಾದೆ ಮಾಡಲಿಲ್ಲ. ಕರಿಯಜ್ಜ ಅರೆಹುಚ್ಚಿ ಅಮ್ಮನೊಂದಿಗೆ ಗದ್ದೆ ತಲೆಯಲ್ಲಿ ಸಣ್ಣ ಗುಡಿಸಲುಕಟ್ಟಿಕೊಂಡು ಪಾಲಿಗೆ ಬಂದಿದ್ದೆ ಪಂಚಾಮೃತ ಎಂದು ಅರ್ಧ ಎಕರೆಯಲ್ಲಿ ಸಾಗುವಳಿ ಮಾಡಿ ಬತ್ತ ಬಿತ್ತಿದ್ದ. ಗದ್ದೆಯ ಕೆಳಗೆ ಆಣೆಕಟ್ಟಿನ ಹರಿಯೋ ನೀರಿಗಾಗಿ ಸರ್ಕಾರ ಅಳತೆ ಮಾಡಿದ್ದ ಒಂದೆಕರೆ ಜಾಗ ಖಾಲಿ ಇತ್ತು. ಅದು ಆಣೆಕಟ್ಟು ತುಂಬಿ ಹನ್ನೊಂದು ಬಾಗಿಲನ್ನು ತೆರೆದರೆ ಮಾತ್ರ ನೀರು ಬರುತ್ತಿತ್ತು. ಹತ್ತಾರು ವರ್ಷದಿಂದ ತುಂಬದಿದ್ದ ಆಣೆಕಟ್ಟು ಈ ವರ್ಷವಂತೂ ಖಂಡಿತಾ ತುಂಬಲಾರದು ಮತ್ತು ಆಣೆಕಟ್ಟು ತುಂಬಬಾರದು ಎಂದು ಹಕ್ಲು ಚೌಡಮ್ಮನಿಗೆ ಕೋಳಿ ಬಲಿ ಹರಕೆ ಹೇಳಿಕೊಂಡು ದೊಡ್ಡೇ ಗೌಡರ ಕೈಕಾಲು ಹಿಡಿದು ಹತ್ತುಸಾವಿರ ರೂಪಾಯಿ ಸಾಲ ಮಾಡಿ ಒಂದೆಕರೆ ಜಾಗಕ್ಕೆ ಶುಂಠಿ ಹಾಕಿದ್ದ. ಲಾಗಾಯ್ತಿನಿಂದ ಹಾಳುಬಿದ್ದ ಜಾಗ ಅಪರೂಪಕ್ಕೆ ಸಾಗುಮಾಡಿದ್ದರಿಂದ ಶುಂಠಿ ಹುಲುಸಾಗಿ, ಕರಿಯಜ್ಜನ ಎಲ್ಲಾ ಸಾಲವನ್ನು ಒಂದೇ ವರ್ಷದಲ್ಲಿ ತೀರಿಸಿಬಿಡುವಂತೆ ಬೆಳೆದು ನಿಂತಿತ್ತು. ಊರಿನವರೆಲ್ಲಾ ಕರಿಯಜ್ಜ ತಾಯಿಯನ್ನು ಪೊರೆದಿದ್ದಕ್ಕಾಗಿ ದೇವರು ಕಣ್ಣು ಬಿಟ್ಟ ಎಂದು ಹೇಳುತ್ತಿದ್ದರು. ಆದರೆ ಆದ್ರ ಮಳೆ, ಅಣ್ಣನ ಮಳೆ, ತಮ್ಮನ ಮಳೆ, ಎಂದು ಒಂದು ಮಳೆಯಾದ ನಂತರ ಮತ್ತೊಂದು ಮಳೆ ಬೇಕಾಬಿಟ್ಟಿ ಹೊಡೆದು ಆಣೆಕಟ್ಟು ತುಂಬಿನಿಂತು ಇನ್ನೇನು ಬಾಗಿಲು ತೆರೆಯುವುದರಿಂದ ಮಾತ್ರ ಒಳಹರಿವು ನಿಯಂತ್ರಣಕ್ಕೆ ಬರಬಹುದು ಎಂಬ ಅಧಿಕಾರಿಗಳ ಹೇಳಿಕೆ ಕರಿಯಜ್ಜನ ನಿದ್ರೆಗೆಡಿಸಿತ್ತು. ಹಾಗಾಗಿ ಮಗ್ಗಲು ಬದಲಿಸುತ್ತಾ ಹಿತ್ಲಪುಟ್ಟಿ, ಜೀರುಂಡೆ, ಮಳೆಜಿರ್ಲೆಗಳ ಮೇಲೆ ಸೇಡುತೀರಿಸಿಕೊಳ್ಳುತ್ತಿದ್ದ. ಆದರೆ ಅದರಿಂದಾಗೇನೂ ಮಳೆ ಕಡಿಮೆಯಾಗಲಿಲ್ಲ ಮತ್ತು ಆಣೆಕಟ್ಟಿನ ಬಾಗಿಲು ತೆಗೆಯುವುದು ನಿಲ್ಲಲಿಲ್ಲ.
ಹನ್ನೊಂದು ಬಾಗಿಲಿನಿಂದ ಬಿಟ್ಟ ಆಳೆತ್ತೆರದ ನೀರು ರಭಸದಿಂದ ಶುಂಠಿ ಗದ್ದೆಯತ್ತ ನುಗ್ಗಿಬರುತ್ತಿತ್ತು, ಕರಿಯಜ್ಜ ಶುಂಠಿ ಗದ್ದೆಯ ಮೇಲೆ ನಿಂತು ಅಸಾಹಾಯಕತೆಯಿಂದ ನೋಡುತ್ತಿದ್ದ, ಅಷ್ಟರಲ್ಲಿ ತಮಿಳು ಸಿನೆಮಾದಲ್ಲಿ ಆಕಾಶದಲ್ಲಿ ಗಿರಗಿರನೆ ಚಕ್ರ ತಿರುಗಿ ದೇವರು ಪ್ರತ್ಯಕ್ಷವಾಗುವಂತೆ ಚಕ್ರವೊಂದು ಗಿರಗಿರನೆ ತಿರುಗಿ ದೊಡ್ಡ ದೇಹದ ಉದ್ದುದ್ದ ಕೈ ಕಾಲಿನ ಅದಕ್ಕೆ ತಕ್ಕುದಾದ ಕಿರಿಟ ಹೊತ್ತ ಆಕೃತಿ ಪ್ರತ್ಯಕ್ಷವಾಯಿತು. ಆ ಆಕೃತಿಯ ಮುಖ ದೊಡ್ಡೇಗೌಡರನ್ನು ಹೋಲುತ್ತಿದ್ದುದು ಕರಿಯಜ್ಜನಿಗೆ ಆಶ್ಚರ್ಯವಾಗುವಂತಾಗಿತ್ತು. ಕರಿಯಜ್ಜ ಆ ಆಕೃತಿಯನ್ನು ನೋಡುತ್ತಲೆ ನಿಂತ, ಅದು ಕರಿಯಜ್ಜನನತ್ತ "ನಾನಿದ್ದೇನೆ ಹೆದರಬೇಡ" ಎನ್ನುವಂತೆ ನೋಡಿ ತನ್ನ ಅಗಲವಾದ ಎರಡು ಕೈಗಳನ್ನು ಶುಂಠಿಗದ್ದೆಗೆ ಆಣೆಕಟ್ಟಿನ ನೀರು ನುಗ್ಗದಂತೆ ಅಡ್ಡಹಿಡಿಯಿತು. ಕರಿಯಜ್ಜನಿಗೆ ಸಂತೋಷವೋ ದು:ಖವೋ ಅದೇನೆಂದು ಅರಿಯದೇ ಉಮ್ಮಳಿಸಿ ಬಂದು "ಊ ಊ ಊ" ಎಂದು ಕೂಗತೊಡಗಿದ,
"ಎಯ್ ಲೋಕೇಸ ಎಯ್ ಲೋಕೇಸ ಎಂತಾತ ಮಳ್ಳು ಮಳ್ಳು ಮಳೆ ಬಂತು ಎಂತಾತ" ಎಂದು ಬಸಮ್ಮ ಕರಿಯಜ್ಜನನ್ನು ಎಬ್ಬಿಸಿದಾಗ ತಾನು ಕಂಡಿದ್ದು ಕನಸು ಎಂಬುದು ಅರಿವಾದ ಕರಿಯಜ್ಜ ಕಣ್ಬಿಟ್ಟ ದೊಡ್ಡ ಬೆಳಗಾಗಿತ್ತು ಆಣೆಕಟ್ಟಿನ ನೀರು ನೆನಪಾಗಿ ದಡಬಡನೆ ಹಾಸಿಗೆಯಿಂದ ಎದ್ದು ಶುಂಠಿಗದ್ದೆಯತ್ತ ಓಡಿದ.
ಅಲ್ಲಿ ಶುಂಠಿ ಗದ್ದೆಯಿಂದ ಐದಡಿ ಮೇಲೆ ಕೆಂಪುನೀರು ಕೇರೇಹಾವಿನಂತೆ ಸರಸರನೆ ನಾಟ್ಯ ಮಾಡುತ್ತಾ ಮುನ್ನುಗ್ಗುತ್ತಿತ್ತು. ಅದು ಕರಿಯಜ್ಜನ ಬತ್ತದ ಗದ್ದೆಯನ್ನೂ ಮುಚ್ಚಿಹಾಕಿತ್ತು. ಕರಿಯಜ್ಜ ಗದ್ದೆಯ ಮೇಲ್ಗಡೆ ಹತಾಶನಾಗಿ ಕುಕ್ಕುರುಗಾಲಿನಲ್ಲಿಕುಳಿತ. ಸ್ವಲ್ಪ ಸಮಯ ಹಾಗೆ ಕುಳಿತವನು ಎದ್ದು ಓಡಿದ.
ಕಣ್ಣಳತೆಯ ದೂರದಲ್ಲಿ ಜೋಗ ಜಲಪಾತದ ರುದ್ರ ನರ್ತನ ನೋಡಲು ನೂರಾರು ವಾಹನಗಳು ಸಾಲುಗಟ್ಟಿನಿಂತಿದ್ದವು.
"ವಾವ್ ದಿಸ್ ಈಸ್ ಅಮೇಜಿಂಗ್, ವಾಟ್ ಎ ಬ್ಯೂಟಿಫುಲ್ ಇಟ್ ಈಸ್, ತಣ್ಣಿ ನಲ್ಲ ಇರ್ಕದು, ಎಯ್ ರಾರಾ ಇಕ್ಕಡ ಬಾಗುಂದಿ ಸೂಡು ಅಕ್ಕಡಾ, ಅಯ್ಯೋ ಮಗಾ ಮಳೆಯಲ್ಲಿ ಒದ್ದೆಯಾಗಬೇಡಾ ಈಚೆ ಬಾ, ಅಬ್ಬಾ ಇಲ್ಲಿನ ಜನರೇ ಪುಣ್ಯಾತ್ಮರಪ್ಪಾ ಯಾವಾಗಲೂ ಜೋಗದ ಸವಿ ಉಣ್ಣ ಬಹುದು," ಮುಂತಾದ ಹತ್ತು ಹಲವಾರು ಭಾಷೆಯ ಧ್ವನಿಗಳೂ ,೩ ಲಕ್ಷದಿಂದ ಹಿಡಿದು ೮ ಲಕ್ಷದ ವರೆಗಿನ ವಾಹನಗಳೂ ಜೋಗ ಜಲಪಾತದೆದುರು ತುಂಬಿಹೋಗಿತ್ತು. ಜಲಪಾತ ಒಮ್ಮೆ ಮಂಜಿನಿಂದ ಸಂಪೂರ್ಣ ಮುಚ್ಚಿ ಯಾರಿಗೂ ಕಾಣದೆ ಹಾಗೆ ನಿಧಾನ ಮಂಜಿನ ಪರದೆಯ ಸರಿಸಿ ಕಣ್ಮುಚ್ಚಾಲೆಯಾಡುತ್ತಿತ್ತು. ಜಲಪಾತ ಕಂಡಕೂಡಲೆ "ಓಹ್ ವಾಹ್" ಎಂಬ ಉದ್ಗಾರ ಹೊರಹೊಮ್ಮುತ್ತಿತ್ತು, ಅವೆಲ್ಲಾ ದನಿಗಳ ಜತೆಗೆ
"ಇವನೆ ನೋಡು ಅನ್ನದಾತ ಹೊಲದಿ ದುಡಿವೆ ದುಡಿವನು ನಾಡ ಜನರು ಬದುಕಲೆಂದು ದವಸ ಧಾನ್ಯ ಬೆಳೆವನು" ಎಂದು ಮಳೆಯಲ್ಲಿ ನೆನೆಯುತ್ತಾ ಕುಣಿಯುತ್ತಿದ್ದ ಮತ್ತೊಂದು ದನಿಯೂ ಸೇರಿತ್ತು. ಆದರೆ ಆ ದನಿಯ ಒಡೆಯ ಕರಿಯಜ್ಜ ಅಂತ ಹಾಗೂ ಅವನ ಹಿಂದೆ "ಲೋಕೇಸಾ... ಲೋಕೇಸಾ.. ಬಾ ಬಾ" ಎನ್ನುತ್ತಾ ಕೂಗುತ್ತಾ ಹೋಗುತ್ತಿದ್ದ ದನಿಯ ಒಡತಿ ಅವನ ಹೆತ್ತಮ್ಮ ಅಂತ ಅಲ್ಲಿ ಸೇರಿದ್ದ ಜನಸಾಗರಕ್ಕೆ ಗೊತ್ತಿರಲಿಲ್ಲ.
"ಪೋಲೀಸಿನವರು ಇಂತಾ ಹುಚ್ಚರನ್ನೆಲ್ಲಾ ಟೂರಿಸಂ ಪ್ಲೇಸ್‌ನಲ್ಲಿ ಅಲೋ ಮಾಡಬಾರದು" ಅಂತ ಯಾರೋ ಮುಖ ಸಿಂಡರಿಸಿ ಹೇಳುತ್ತಾ ಮುನ್ನಡೆಯುತ್ತಿದ್ದರು.
ಜೊರ್ರನೆ ಸುರಿವ ಮಳೆ ಮತ್ತು ಅದರ ಜನ್ಯ ಜಲಪಾತಕ್ಕೆ ಇದ್ಯಾವುದರ ಪರಿವೆಯೇ ಇಲ್ಲದೆ ಕೆಂಪು ಬಣ್ಣದೊಂದಿಗೆ ಮೇಲಿನಿಂದ ದುಮಿಕ್ಕಿ ಸಾಗರ ಸೇರಲು ತನಗೆ ತಿಳಿಯದಂತೆ ಮುನ್ನುಗ್ಗುತ್ತಿತ್ತು. ಮುನ್ನುಗ್ಗುತ್ತಿದ್ದ ಆ ಜಲಪಾತದ ಕೆಂಪು ನೀರಿನೊಂದಿಗೆ ಕರಿಯಜ್ಜನ ಶುಂಠಿ ಮತ್ತು ಬತ್ತವೂ ಇತ್ತು ಆದರೆ ಆದು ಜನರಿಗೆ ಕಾಣಿಸುತ್ತಿರಲಿಲ್ಲ. ಕರಿಯಜ್ಜನಿಗೆ ಕಾಣಿಸುತ್ತಿತ್ತೇನೋ ಆದರೆ ಆತ ನೋಡುವ ಸ್ಥಿತಿಯಲ್ಲಿ ಇರಲಿಲ್ಲ.

Monday, March 16, 2009

"ಎಲ್ಲಾರು ಮಾಡುವುದು.....!" (???????)

. ಮಗದೂರು ಈಶ್ವರ ದೇವಸ್ಥಾನದ ಗಂಟೆಯ ಶಬ್ದ ಇಂಪಾಗಿ ಡಣ್...ಡಣ್...ಡಣ್ ಎಂದು ಕೇಳಿಸಿತು. ಯಾರೋ ಈಶ್ವರನ ಭಕ್ತರು ಗಂಟೆ ಭಾರಿಸಿ ಗಿರಕಿ ಹೊಡೆಯುತ್ತಿದ್ದರು. ದೇವಸ್ಥಾನದ ಪಕ್ಕದ ಅಂಗಡಿ ಕಟ್ಟೆ ಆ ಶಬ್ದ ಕೇಳಿಸದಷ್ಟು ಗಹನವಾದ ವಿಚಾರದಲ್ಲಿ ಮುಳುಗಿತ್ತು. "ಕಡ್ನಮನೆ ರಾಘುವಿನ "ಚಿಟ್ಟೆ" ಪೇಪರ್ರು ಬಂದಾಗ್ನಿಂದ ಊರೇ ಹಾಳಾಗೋತು" ಎಂದು ಬೇಲಿಮನೆ ತಿರುಪತಿ ಮಗದೂರು ಅಂಗಡಿ ಕಟ್ಟೆಯ ಮೇಲೆ ಕುಳಿತು ಎಡಗೈಲಿ ಪೇಪರ್ ಹಿಡಿದುಕೊಂಡು ಬೀಡಿಯನ್ನು ನೆಲಕ್ಕೆ ತಿಕ್ಕಿ ನುರಿಯುತ್ತಾ ಹೇಳಿದ. ಹಾಗಂತ ತಿರುಪತಿಗೆ ಚಿಟ್ಟೆ ಪೇಪರ್‌ಬಗ್ಗೆ ಕೆಟ್ಟದಾಗಿ ಹೇಳಬೇಕು ಅಂದೇನು ಇರಲಿಲ್ಲ. ಅದೇ ದಿನ ಬೆಳಿಗ್ಗೆ ಕಡ್ನಮನೆ ರಾಘು ಹತ್ತಿರ "ಬಾಳ ಚೆನ್ನಾಗಿ ಬರದೀದೀಯ ಇನ್ಮೇಲಾದ್ರೂ ನಮ್ಮೂರು ಉದ್ಧಾರವಾಗುತ್ತೋ ನೋಡ್ಬೇಕು" ಅಂತ ಅಂದಿದ್ದ. ಆದರೆ ಈಗ ಆ ವಿಷಯ ಅಂಗಡಿಯ ಒಳಗೆ ಇದ್ದ ಜಯಣ್ಣನ ಪಟಾಲಂಗೆ ಕೇಳಸಲಿ ಎಂದು ಹಾಗು ತನ್ನ ಬಗ್ಗೆ ಜಯಣ್ಣನ ಪಟಾಲಂಗೆ ಒಳ್ಳೆ ಅಭಿಪ್ರಾಯ ಮೂಡಲಿ ಎಂದು ಹಾಗೆ ಹೇಳಿದ್ದ. ಆದರೆ ಜಯಣ್ಣನ ಪಟಾಲಂ "ಇವತ್ತು ಸಾಯಂಕಾಲ ಎಲ್ಲಿ ಕುತ್ಕೊಂಡು ಎಣ್ಣೆ ಹಾಕಬೇಕು" ಎಂಬ ಗಹನವಾದ ಚರ್ಚೆಯಲ್ಲಿ ಮುಳುಗಿದ್ದ ಕಾರಣ ಅಂಗಡಿಯ ಹೊರಗಡೆ ತಿರುಪತಿ ಹೇಳಿದ ಮಾತು ಕೇಳಿಸಲಿಲ್ಲ. ಹಾಗಾಗಿ ತಿರುಪತಿ ಅಲ್ಲಿಂದ ಎದ್ದು ಅಂಗಡಿಯ ಬಾಗಿಲಿಗೆ ಒರಗಿ ನಿಂತು ಮತ್ತೆ "ಅಲ್ಲಾ ಚಿಟ್ಟೆ ಪೇಪರ್ ಬಂದ್ಮೇಲೆ ನಮ್ಮ ಊರೇ ಹಾಳಾಗೋತು" ಎಂದು ಪುನರುಚ್ಛರಿಸಿದ. "ಯಾಕೋ ಹಾಗೆ ಹೇಳ್ತಾ ಇದೀಯಾ, ಎಂತ ಇದೆಯಾ ಅದ್ರಲ್ಲಿ ಊರು ಹಾಳ್ಮಾಡೊ ಸಮಾಚಾರ ?' ಅಂಗಡಿಯ ಒಳಗಡೆ ಖಾಲಿ ಹತ್ತಿ ಹಿಂಡಿ ಚೀಲದ ಮೇಲೆ ಕುಳಿತ ಜಯಣ್ಣ ಕೇಳಿದ."ನೀನೆ ನೋಡು." ಎಂದು ತಿರುಪತಿ ಚಿಟ್ಟೆ ಪತ್ರಿಕೆ ಮುಂದೆ ಹಿಡಿದ." ಅಂತ ದರಿದ್ರ ಪೇಪರ್ ಓದೋಕೆ ನಮಗೇನು ತಲೆ ಕೆಟ್ಟಿಲ್ಲ,ಅವೆಲ್ಲಾ ನಿಮ್ಮಂಥೋರಿಗೆ ಸರಿ, ಎಂತ ಇದೆ ಅಂತ ಹೇಳು ಸಾಕು" ಜಯಣ್ಣನ ಬಲಗೈ ಶಾಮು ಹೇಳಿದ" ಅವೆಲ್ಲಾ ನಮ್ಮಂಥೋರಿಗೆ ಅಂತಾದಮೇಲೆ ಬ್ಯಾಡ ಬಿಡು ಓದ್ದಿದ್ರೆ ನಂಗೇನು " ಎನುತ್ತಾ ತಿರುಪತಿ ಹೊರಟ. "ಏಯ್ ಬಾರಾ ಮಾರಾಯ, ಶಾಮು ತಮಾಷೆಗೆ ಹಾಗಂದ, ಅದಕ್ಕೆಂತ ಸಿಟ್ಟು ನಿಂದು. ಅಯ್ಯೋ ನಿನ್ನ" ಎಂದು ಜಯಣ್ಣ ಕರೆದಮೇಲೆ"ಏನೋ ನಿನ್ಮೇಲೆ ವಿಶ್ವಾಸ ಇಟ್ಟು ಬರ್‍ತಾ ಇದೇನೆ, ಶಾಮು ಪೇಪರ್ ಬೈಯ್ದಿದ್ರೆ ನನಗೆ ಬೇಜಾರಾಗ್ತಿರಲಿಲ್ಲ ಅದರ ಅದರ ಜತೆ ನಿಮ್ಮಂಥೋರಿಗೆ ಅಂತ ನನ್ನನ್ನೂ ಸೇರಿಸ್ತಾನೆ. ಯಾರಿಗೆ ಬೇಜಾರಾಗಲ್ಲ ಹೇಳು?" ಎಂದು ಪ್ರಶ್ನಿಸಿದ ತಿರುಪತಿ. ಜಯಣ್ಣ ಚಿಟ್ಟೆ ಪೇಪರ್ ತಿರುಪತಿಯಿಂದ ಇಸಿದುಕೊಂಡ. ಕಳೆದ ಒಂದೂವರೆ ವರ್ಷದಿಂದ ಚಿಟ್ಟೆ ವಾರಪತ್ರಿಕೆ ಊರಿನಿಂದ ಹೊರಡುತ್ತದೆ ಅದರಲ್ಲಿ ದೇವಸ್ಥಾನದ ಸುದ್ದಿ ಬರುತ್ತದೆ, ತನ್ನ ಹೆಸರು ಪರೋಕ್ಷವಾಗಿ ಬರುತ್ತದೆ ಅದನ್ನು ಹೇಗಾದರೂ ಮಾಡಿ ನಿಲ್ಲಿಸಬೇಕು ಎಂದು ಶಾಮು ಹೇಳಿದಾಗ ಪ್ರಜಾಪ್ರಭುತ್ವದಲ್ಲಿ ಪತ್ರಿಕೆಯೂ ಇರಬೇಕು, ನಿನಗೆ ಇಷ್ಟ ಇಲ್ಲದಿದ್ದರೆ ನೋಡಬೇಡ ಅಂತ ಜಯಣ್ಣ ಹೇಳಿದ್ದನೇ ಹೊರತು ಪತ್ರಿಕೆ ಓದಿರಲಿಲ್ಲ. ಈಗ ಅದೆಂತದೋ ಊರು ಹಾಳು ಮಾಡುವ ಸುದ್ದಿ ಎಂದು ತಿರುಪತಿ ಹೇಳಿದಾಗ ಕುತೂಹಲದಿಂದ ನೋಡಿದ. ಜಯಣ್ಣನಿಗೆ ಪೇಪರ್ ಓದಲು ಕೊಟ್ಟ ತಿರುಪತಿ ನಿನ್ನೆ ಪ್ರಿಂಟಿಂಗ್ ಪ್ರೆಸ್ಸಿನಲ್ಲಿ "ಈ ವಿಷಯದ ಬಗ್ಗೆ ಏನೇನೋ ಹೇಳ್ತಾ ಇದ್ರು, ನೀವು ಹಾಗೆಲ್ಲಾ ಮಾಡಿದ್ರೆ ನಾನು ಸುಮ್ನಿರಲ್ಲ ಅಂದೆ. ಇವೆಲ್ಲಾ ಊರು ಹಾಳ್ಮೋಡೊ ಕೆಲಸ ಮಾಡ್ಬೇಡಿ ಅಂತ ಹೇಳ್ದೆ. ನನ್ನ ತೀರ್ಮಾನ ಊರು ಚೆನ್ನಾಗಿರ್ಬೇಕು ಅಂತ ಒಟ್ಟಿನಲ್ಲಿ ಊರಿಗೆ ಒಳ್ಳೆದಾಗೋ ಕೆಲ್ಸ ಯಾರ್ ಮಾಡಿದ್ರು ಸರೀನೆ" ಎಂದ. "ಈಶ್ವರ ದೇವಸ್ಥಾನದ ಕರ್ಮಕಾಂಡ: ನಾಲ್ಕು ವರ್ಷದಿಂದ ದೇವಸ್ಥಾನದಲ್ಲಿ ಸರ್ವ ಸದಸ್ಯರ ಸಭೆಯೇ ಇಲ್ಲ-ಪ್ರಜಾಪ್ರಭುತ್ವವಾದಿಗಳಿಂದ ಸರ್ವಾಧಿಕಾರ " ಎಂಬ ಸುದ್ದಿ ಪ್ರಕಟವಾಗಿತ್ತು. ಒಂದೇ ಪುಟದ ಪತ್ರಿಕೆಯಾದ್ದರಿಂದ ಬಹಳಷ್ಟು ಜಾಗ ಹೆಡ್‌ಲೈನ್‌ಗೆ ತುಂಬಿತ್ತು. ಸುದ್ದಿಯೇನು ತೀರಾ ಜಾಳಾಗಿರಲಿಲ್ಲ. ಅದರಲ್ಲಿ ಜಯಣ್ಣನ ಶಿಷ್ಯರ ಪರಾಕ್ರಮಗಳು ಇತ್ತು.

****** ಮಗದೂರು ಜೋಗಜಲಪಾತಕ್ಕೆ ಹೋಗುವ ಬಿ.ಎಚ್.ರಸ್ತೆಯ ಪಕ್ಕದಲ್ಲಿರುವ ಎಪ್ಪತ್ತುಮನೆಗಳ ಸಣ್ಣಹಳ್ಳಿ. ಊರಿನ ಸಮಸ್ತ ಜಾತಿಯ ಜನರಿಗೂ ಒಂದು ಈಶ್ವರ ದೇವಸ್ಥಾನ. ದೇವರು ದೇವಸ್ಥಾನ ಇರುವುದು ಊರಿನಲ್ಲಿ ಜಗಳ ತಂದಿಡುವುದಕ್ಕೆ ಎಂಬ ಮಾತನ್ನು ನಿಜಗೊಳಿಸಲೆಂಬಂತೆ ಊರಿನ ಎಲ್ಲಾ ವೈಯಕ್ತಿಕ ಜಗಳವನ್ನೂ ಅಲ್ಲಿ ತಂದು ಕೆಲವರು ತೀರಿಸಿಕೊಳ್ಳುತ್ತಿದ್ದರು. ದೇವಸ್ಥಾನದ ಕಟ್ಟಡ ಶಿಥಿಲಗೊಂಡಿದ್ದರಿಂದ ಕೆಲವರು ಆಸ್ತಿಕರು ಕಟ್ಟಡ ಕಟ್ಟಲು ಮುಂದಾದರು. ಆವಾಗ ದೇವರಲ್ಲಿ ನಂಬಿಕೆಯೇ ಇರದ ಜಯಣ್ಣ ಹಾಗು ಶಾಮು ಸಣ್ಣದಾದ ಒಂದು ಗುಂಪಿನೊಂದಿಗೆ ಮರ್ಯಾದಸ್ಥ ಆಸ್ತಿಕರ ಮೇಲೆ ಕಾನೂನು,ಪ್ರಜಾಪ್ರಭುತ್ವ ಅಂದೆಲ್ಲಾ ಜನರಲ್ ಬಾಡಿ ಮೀಟಿಂಗನಲ್ಲಿ ತರಲೆ ತೆಗೆದು ಗೋಳು ಹೊಯ್ದುಕೊಳ್ಳುತ್ತಿದ್ದರು. ಜಯಣ್ಣ ಭ್ರಷ್ಟಾಚಾರ , ಅವ್ಯವಹಾರ, ದುರ್ಬಳಕೆ ಮುಂತಾದ ನಾನಾತರಹದ ಶಬ್ದ ಬಳಸಿ ಮೂರು ತಾಸು ಭಾಷಣ ಬಿಗಿದು ರಾಜಿನಾಮೆ ಕೊಡಿ ಎನ್ನುತ್ತಿದ್ದ. ಆದರೆ ಈ ಜಗಳದ ನಡುವೆಯೇ ಕೆಲವರು ಮನೆಕೆಲಸ ಬಿಟ್ಟು ಯಾರ ವಿರೋಧವನ್ನೂ ಲೆಕ್ಕಿಸದೆ ಹತ್ತಾರು ವರ್ಷಗಳು ಕಷ್ಟಪಟ್ಟು ಕಂಡಕಂಡಲ್ಲಿ ದೇಣಿಗೆ ಎತ್ತಿ ವ್ಯವಸ್ಥಿತ ರೀತಿಯಲ್ಲಿ ಕಟ್ಟಡ ನಿರ್ಮಿಸಿಬಿಟ್ಟರು. ರಾಜಿನಾಮೆ ಕೊಡಿ ಎನ್ನುವ ಜಯಣ್ಣನ ಪಟಾಲಂನ ವರಾತಕ್ಕೆ "ದಿನಾಲೂ ಮನೆ ಕೆಲ್ಸ ಬಿಟ್ಟು ಇಲ್ಲಿ ಜೀವ ತೇಯ್ದದ್ದಕ್ಕೆ ಒಂದು ಬೆಲೆ ಬೇಡ್ವಾ, ನಾವೇನು ನಮ್ಮ ಮನೆ ಉದ್ದಾರಕ್ಕಾಗಿ ಈ ಕೆಲ್ಸ ಮಾಡ್ತಾ ಇದೀವಾ ಏನೋ ಊರಿಗೆ ಒಳ್ಳೇದಾಗ್ಲಿ ಅಂತ ಮಾಡ್ತಾ ಇದೀವಿ" ಅಂತ ಊರಿನ ಸಾತ್ವಿಕ ಕಮಿಟಿಯವರು ಹೇಳುತ್ತಾ ಆಡಳಿತದಲ್ಲಿ ಮುಂದುವರೆದಿದ್ದರು. ಅದಾಗಿ ಸ್ವಲ್ಪ ದಿವಸದಲ್ಲಿ ಜಯಣ್ಣನ ದೋಸ್ತ್‌ಶಾಮು ೩ ವರ್ಷಗಳ ಕಾಲ ಊರು ಬಿಟ್ಟ. ಆವಾಗ ಒಂಟಿಯಾದ ಜಯಣ್ಣ ಸ್ವಲ್ಪ ವರ್ಷ ಸುಮ್ಮನುಳಿದ. ಹಾಗಂತ ಸ್ವಭಾವತಃ ಜಯಣ್ಣ ಒಳ್ಳೆಯವನೆ, ಊರಿನಲ್ಲಿ ವೈರಿಯೇ ಸತ್ತರೂ ಶತ್ರು ಎಂದು ನೋಡದೆ ಹೆಣ ಹೊರಲು ಹೋಗುತ್ತಿದ್ದ. ಆದರೆ ಬದುಕಿದ್ದಾಗ ತಕರಾರು ಎಬ್ಬಿಸಿಪ್ರಾಣ ಹಿಂಡುತ್ತಿದ್ದ. ಅವನ ಒಂದೇ ದೌರ್ಬಲ್ಯ ಎಂದರೆ ಯಾರಾದರೂ ಕೊಲೆ ಮಾಡಿ ಬಂದು ಅವನ ಬಳಿ ಮೊದಲು ಹೇಳಿದರೆ ಅದೇ ಸರಿ ಎಂದು ಅವರ ಪರ ನಿಂತುಬಿಡುತ್ತಿದ್ದ. ಆ ದೌರ್ಬಲ್ಯವನ್ನು ಶಾಮುನಂತವರು ಉಪಯೋಗಿಸಿಕೊಳ್ಳುತ್ತಿದ್ದರು. ಊರುಬಿಟ್ಟಿದ್ದ ಶಾಮು ೩ ವರ್ಷದ ನಂತರ ಮತ್ತೆ ಊರಿಗೆ ವಾಪಾಸು ಬಂದ ಮೇಲೆ ಮಾಡಲು ಬೇರೆ ಕೆಲಸ ಇಲ್ಲದ್ದರಿಂದ ಕಟ್ಟಿದ ದೇವಸ್ಥಾನದ ಕಟ್ಟಡ ಬೀಳುತ್ತದೆ,ಕಟ್ಟಡ ನಿರ್ಮಾಣದಲ್ಲಿ ಅವ್ಯವಹಾರ ಆಗಿದೆ ಎಂದು ಕ್ಯಾತೆ ತೆಗೆದ. ಅದಕ್ಕೆ ಜಯಣ್ಣ ಬೆನ್ನೆಲುಬಾಗಿ ನಿಂತ. ಕಟ್ಟಡ ಬೀಳದು ಎಂದು ಗೊತ್ತಿದ್ದರೂ ಜಯಣ್ಣ ಯಾವುದೋ ಇಂಜನಿಯರ್ ಹಿಡಿದು ಅವರನ್ನು ಹೆದರಿಸಿ ಕಟ್ಟಡಬೀಳುತ್ತದೆ ಎಂದು ಸರ್ಟಿಫಿಕೇಟ್ ಕೊಡಿಸಿ ದೇವಸ್ಥಾನದ ಸಾರ್ವಜನಿಕ ಸಭೆಯಲ್ಲಿ ಅವಿರತ ಭಾಷಣ ಮಾಡಿ ತನ್ನ ಶಿಷ್ಯರ ಸುಪರ್ತಿಗೆ ದೇವಸ್ಥಾನದ ಆಡಳಿತ ಕೊಡಿಸಿದ್ದ. ನಂತರ ತನಗೆ ದೇವರಲ್ಲಿ ನಂಬಿಕೆ ಇಲ್ಲವೆಂದು ತಾನು ತನ್ನ ಪಾಡಿಗೆ ಇದ್ದ. ರಸ್ತೆ ಪಕ್ಕದ ದೇವಸ್ಥಾನವಾದ್ದರಿಂದ ಕಾಣಿಕೆ ಡಬ್ಬಿ ಬೇಗನೆ ತುಂಬುತ್ತಿತ್ತು. ಜಯಣ್ಣನ ಶಿಷ್ಯಕೋಟಿಗೆ ಸರ್ವ ಸದಸ್ಯರ ಸಭೆಯಲ್ಲಿ ತಮ್ಮ ಪರ ವಾದ ಮಾಡಿ ಗೆಲ್ಲಿಸಲು ಪುಗಸಟ್ಟೆ ಅಸಾಮಿ ಸಿಕ್ಕಿದರಿಂದ ಆಡಳಿತ ಸಿಗುವವರೆಗೂ ತಾವು ಪ್ರಜಾಪ್ರಭುತ್ವದ ತುಂಡು, ನ್ಯಾಯ ನೀತಿ ನಮ್ಮ ಧರ್ಮ,ದೇವಸ್ಥಾನದ ಕಟ್ಟಡ ಬೀಳುತ್ತದೆ ಎನ್ನುತ್ತಿದ್ದವರು ಅಧಿಕಾರ ಸಿಕ್ಕಮೇಲೆ ಕಾಣಿಕೆ ಡಬ್ಬಿಯ ಮಹಿಮೆ ಅರಿವಾಗಿ ಅವರೇ ಶಿಥಿಲವಾಗಿದೆ ಎಂದು ವಾದಿಸುತ್ತಿದ್ದ ದೇವಸ್ಥಾನ ಗಟ್ಟಿಯಿದೆ ಎನ್ನತೊಡಗಿದ್ದರು. ವರ್ಷಕ್ಕೊಮ್ಮೆ ಸಾರ್ವಜನಿಕ ಸಭೆ ಕರೆಯುವುದನ್ನೂ ಕೈ ಬಿಟ್ಟು ಮಜ ಉಢಾಯಿಸತೊಡಗಿದರು. ರಸ್ತೆ ಪಕ್ಕದ ದೇವಸ್ಥಾನವಾದ್ದರಿಂದ ಕಲ್ಯಾಣ ಮಂಟಪ ಮುಂತಾದವುಗಳನ್ನು ಕಟ್ಟಿಸಿ ಊರಿನ ಪ್ರಗತಿಗೆ ದಾರಿಯಾಗಬಹುದಾಗಿದ್ದ ಉತ್ತಮ ಅವಕಾಶವನ್ನು ಹಾಳು ಮಾಡಿತ್ತು ಆಡಳಿತ ಸಮಿತಿ. ಇವೆಲ್ಲವನ್ನೂ ಸಮೀಕರಿಸಿದ ವರದಿ ಚಿಟ್ಟೆ ಪತ್ರಿಕೆಯಲ್ಲಿ ಬಂದಿತ್ತು. ಎಲ್ಲಾ ಘಟನೆಯನ್ನು ತನ್ನ ಮೂಗಿನ ನೇರಕ್ಕೆ ನೋಡಿ ತೀರ್ಮಾನ ತೆಗೆದುಕೊಂಡಿದ್ದ ಜಯಣ್ಣನಿಗೆ ಮತ್ತೊಂದು ಮುಖದ ವರದಿ ನೋಡಿ ಇರಿಸುಮುರಿಸಾಗಿತ್ತು. ಪತ್ರಿಕೆ ಓದಿದ ಜಯಣ್ಣ ಯಾರು ಏನ್ಬೇಕಾದ್ರೂ ಅಂದ್ಕೊಳ್ಳಿ ನಾನು ಮಾತ್ರ ಊರಿಗೆ ಒಳ್ಳೆದಾಗ್ಲಿ ಅಂತ ಎಲ್ಲವನ್ನೂ ಮಾಡಿದ್ದೇನೆ ಹೊರತು ನನ್ನ ಸ್ವಾರ್ಥಕ್ಕಾಗಿ ಇಲ್ಲ ಎಂದು ಹೇಳಿದ.

*********

"ಜಯಣ್ಣನ ಪಟಾಲಂನ ಸುದ್ದಿ ಹೀಗೆ ಬರೆದಿದ್ದು ಸರೀ ಆಯಿತು, " ಮಹಾಬಲ ಬಾಯಲ್ಲಿದ್ದ ವಿಮಲ್ ಗುಟ್ಕಾ ಪೂ... ಎಂದು ಸೊಸೈಟಿ ಕಟ್ಟೆ ಕೆಳಗೆ ಉಗಿದು ಹೇಳಿದ. ಹಾಗಂತ ಚಿಟ್ಟೆ ಪತ್ರಿಕೆಯಲ್ಲಿ ಬಂದಿರುವ ಲೇಖನ ಸರಿಯಾಗಿದೆ ಅಂತ ಅವನದೇನು ಅಭಿಪ್ರಾಯವಾಗಿರಲಿಲ್ಲ. ಮಧ್ಯಾಹ್ನ ಜಯಣ್ಣನ ಹತ್ತಿರ "ಅವರಿಗೆ ಮಾಡೋಕೆ ಬೇರೆ ಕೆಲಸ ಇಲ್ಲ ಬರೀತಾರೆ, ನಾನು ನೋಡಿದ್ನಲ್ಲ.... ಅವ್ರಿಗೆ ಯಾವಾಗ್ಲೂ ನಿನ್ನ ಸುದ್ದಿ ಬಿಟ್ರೆ ಬೇರೆ ವಿಚಾರಾನೆ ಇಲ್ಲ, ನಾನಂತೂ ಆ ಕಡೆ ಹೋಗೋದನ್ನ ಬಿಟ್ಟೀದೀನಿ" ಎಂದಿದ್ದ. ಆದರೆ ಈಗ ಸೊಸೈಟಿ ಒಳಗಡೆ ಕುಳಿತಿದ್ದ ರಾಘು ಮತ್ತವನ ಪಟಾಲಂಗಳಿಗೆ ಕೇಳಿಸಲಿ ಮತ್ತು ತನ್ನ ಬಗ್ಗೆ ರಾಘು ಪಟಾಲಂಗೆ ಒಳ್ಳೆ ಅಭಿಪ್ರಾಯ ಮೂಡಲಿ ಎಂದು ಹಾಗೆ ಹೇಳಿದ್ದ. ಆದರೆ ರಾಘು ಪಟಾಲಂ ಚಿಟ್ಟೆ ಪತ್ರಿಕೆಯನ್ನು ನಿಲ್ಲಿಸಿಬಿಡುವ ಗಹನವಾದ ಚರ್ಚೆಯಲ್ಲಿ ಮುಳುಗಿದ್ದರಿಂದ ಅವರಿಗೆ ಕೇಳಿಸಲಿಲ್ಲ. ಹಾಗಾಗಿ ಮಹಾಬಲ ಒಳಗಡೆ ಬಂದು "ಇಂಥ ಲೇಖನ ಬರದ್ರೆ ಪತ್ರಿಕೆ ಓದೋ ಹಂಗೆ ಇರ್ತದೆ, ಅದೇನೋ ವೇದಾಂತ ಇದ್ರೆ ಅದರಲ್ಲಿ ಏನಿದೆ ಅಂತ ಓದ್ಬೇಕು, ಈಗ ಅವ್ರ ಮುಕ್ಳೀಲಿ ಉರಿ ಬಿದ್ದಿರುತ್ತೆ ,ಬರ್‍ಯೋಕೆ ಮುಂಚೆ ನನ್ನ ಕೇಳಿದ್ರೆ ಇನ್ನಷ್ಟು ಮಾಹಿತಿ ಕೊಡ್ತಿದ್ದೆ" ಎಂದು ಹೇಳಿದ"ಇನ್ನಷ್ಟು ಮಾಹಿತಿ ನಮಗೆ ಗೊತ್ತಿಲ್ದೇ ಇರೋದು ಎಂಥಾ?" ರಾಘು ಕೇಳಿದ"ಅವರ ಎಲ್ಲಾ ಹುಳುಕು ನನ್ನತ್ರ ಇದೆ" ಸಸ್ಪೆನ್ಸ್ ಇರಲಿ ಎಂದು ನಿಂತಲ್ಲೆ ಗಿರಕಿ ಹೊಡೆದು ಹೇಳಿದ ಮಹಾಬಲ"ಇವನಿಗೆ ಗೊತ್ತಿರುತ್ತೆ ಮಣ್ಣು, ಸುಮ್ನೆ ಬೊಗಳೆ ಬಿಡ್ತಾನೆ,ಇಲ್ಲಿ ಎಲ್ಲಾರ ಮುಂದೆ ಸ್ಕೋಪ್ ತಗೊಳ್ಳೋಕೆ ಸ್ಟೈಲ್" ರಾಘುನ ಬಲಗೈ ಜಗದೀಶ ಹೇಳಿದ."ಹಾಗಾದ್ರೆ ಬ್ಯಾಡ ಬಿಡು ನಮ್ದು ಎಲ್ಲಾ ಬೊಗಳೆ ಅಂತಾದ್ಮೆಲೆ ಯಾಕಪ್ಪಾ" ಎನ್ನುತ್ತಾ ಮಹಾಬಲ ಹೊರಟ"ಏಯ್ ಬಾರಾ ಮಾರಾಯ, ಜಗದೀಶ ತಮಾಷೆಗೆ ಹಂಗಂದ, ಅದಕ್ಕೆಂತ ಸಿಟ್ಟು ನಿಂದು. ಅಯ್ಯೋ ನಿನ್ನ" ಎಂದು ರಾಘು ಕರೆದಮೇಲೆ"ಏನೋ ನಿನ್ಮೇಲೆ ವಿಶ್ವಾಸ ಇಟ್ಟು ಬರ್‍ತಾ ಇದೇನೆ, ಜಗದೀಶ ಕೇವಲ ಅವ್ರನ್ನ ಬೈಯ್ದಿದ್ರೆ ನನಗೆ ಬೇಜಾರಾಗ್ತಿರಲಿಲ್ಲ ಅದರ ಅದರ ಜತೆ ಬೊಗಳೆ,ಸ್ಟೈಲ್ ಅಂತ ನನ್ನನ್ನೂ ಸೇರಿಸ್ತಾನೆ. ಯಾರಿಗೆ ಬೇಜಾರಾಗಲ್ಲ ಹೇಳು?" ಎಂದು ಪ್ರಶ್ನಿಸಿದ ಮಹಾಬಲ ನಂತರ ದೇವಸ್ಥಾನದಲ್ಲಿ ಶೌಚಾಲಯದ ಕಟ್ಟಡದಲ್ಲಿ ನಡೆದ ಅವ್ಯವಹಾರ, ನಿತ್ಯ ಪೂಜೆಗೆ ತೆಂಗಿನ ಕಾಯಿ ಒಡೆಯದೇ ಇರುವುದು, ಕಮಿಟಿಯವರೆ ದೇವಸ್ಥಾನಕ್ಕೆ ಬಣ್ಣ ಹೊಡೆದು ಆಳಿನ ಲೆಕ್ಕ ಬರೆದು ದುಡ್ಡು ತಿಂದಿರುವುದು, ಮುಂತಾದ ಮಾಹಿತಿಯನ್ನು ಹೇಳಿ. ಇದೆಲ್ಲಾ ಹೊರಗೆ ಹಾಕಲೇಬೇಕು ಅಂತ ಹೇಳ್ತಾ ಇದೀನಿ, ಒಟ್ಟಿನಲ್ಲಿ ಊರಿಗೆ ಒಳ್ಳೆದಾಗೋ ಕೆಲ್ಸ ಯಾರ್ ಮಾಡಿದ್ರು ಸರೀನೆ ಎಂದ.

********

ಕೃಷಿಕರ ಊರಿನಲ್ಲಿ ದೇವಸ್ಥಾನದ ತಂಟೆಯೇ ಬೇಡ ಎಂದು ತಮ್ಮ ಕೃಷಿಯಲ್ಲಿ ಹೊಸ ಹೊಸ ವಿಧಾನಗಳನ್ನು ಅಳವಡಿಸಿಕೊಳ್ಳಲು ಹುಟ್ಟಿದ್ದ ಸಂಸ್ಥೆಯೇ ಚೇತನ ಕೃಷಿ ವಾಹಿನಿ. ಮಗದೂರು ದೇವಸ್ಥಾನದ ರಗಳೆಯಿಂದ ಬೇಸೆತ್ತು ಊರಿನಲ್ಲಿ ತರ್ಲೆ ಸ್ವಭಾವದ ಜನರನ್ನು ಹೊರತುಪಡಿಸಿ ಇಪ್ಪತ್ತೈದು ಜನ ಕಟ್ಟಿಕೊಂಡ ಸಂಸ್ಥೆ. ಮುರ್‍ನಾಲ್ಕು ವರ್ಷ ಅತ್ಯುತ್ತಮವಾಗಿ ಕೃಷಿಕಾರ್ಯಕ್ರಮಗಳನ್ನು ಅನುಷ್ಠಾನ ಗೊಳಿಸಿ ಯಶಸ್ವಿಯಾಗಿತ್ತು. ಕೃಷಿಯಲ್ಲಿ ಎಲ್ಲವುದನ್ನೂ ತಾವೇ ಅನುಷ್ಠಾನ ಮಾಡಬೇಕಾದ್ದರಿಂದ ಪಾರ್‍ಟಿ ಪಂಗಡಗಳಿಗೆ ಅವಕಾಶ ಇಲ್ಲದ್ದರಿಂದ ಆರಂಭದಲ್ಲಿ ಇದು ಚೆನ್ನಾಗಿ ಕಾಣಿಸಿತಾದರು ಮೂರ್ನಾಲ್ಕು ವರ್ಷಗಳ ನಂತರ ಜನರಲ್ ಬಾಡಿ ಗಲಾಟೆಯಿಲ್ಲದ ಪ್ರಯುಕ್ತ ಇಪ್ಪತ್ತೈದು ಜನರಲ್ಲಿ ಕೆಲವರಿಗೆ ಬೇಸರ ಬಂತು. ಅವರು ಅದರಿಂದ ದೂರವುಳಿದರು. ಹಾಗಾಗಿ ಅಂತಿಮವಾಗಿ ಹದಿನೈದು ಜನ ಸದಸ್ಯರ ಬಲಕ್ಕೆ ಬಂದು ನಿಂತಿತ್ತು. ಹತ್ತು ಹಲವು ಉತ್ತಮ ಯೋಜನೆಗಳಿದ್ದ ವಾಹಿನಿಯ ಕಾರ್ಯಕ್ರಮಗಳು ಜನರಿಗೆ ತಲುಪಲು ಉತ್ತಮಮಾರ್ಗ ಪತ್ರಿಕೆ ಎಂದು ಕೆಲವರು ಸಲಹೆಯನ್ನಿತ್ತು ಚಿಟ್ಟೆ ಪತ್ರಿಕೆಯನ್ನು ಶುರುಮಾಡಿದ್ದರು. ಚಿಟ್ಟೆ ವಾರ ಪತ್ರಿಕೆ ಕೃಷಿ ವಿಚಾರಗಳು, ಊರಿನಲ್ಲಿನ ಸಾಧಕರು, ಒಂಚೂರು ಆಧ್ಯಾತ್ಮ ಮತ್ತೆ ವೇದಾಂತವನ್ನು ಹೊತ್ತು ಭಾನುವಾರ ಹೊರಗೆ ಬರುತ್ತಿತ್ತು ಚಿಟ್ಟೆ ಪತ್ರಿಕೆ ಮುದ್ರಣವಾಗುವುದೇ ೧೦೦ ಪ್ರತಿ, ಅದೂ ಪುಕ್ಕಟೆ. ಅದರ ಸಂಪಾದಕ ರಾಘು. ಗ್ರಾಮೀಣ ಭಾಗದ ಸಮಸ್ಯೆಗಳನ್ನು ಹೇಳಲು, ತಮ್ಮ ವಾಹಿನಿಯ ಯೋಜನೆಯ ಮಾಹಿತಿಯನ್ನು ತಿಳಿಸಲು ಚಿಟ್ಟೆಪತ್ರಿಕೆ ಪ್ರಾರಂಭವಾಗಿತ್ತಾದರೂ ವಾಸ್ತವವಾಗಿ ಅದಕ್ಕೆ ಲೇಖನ ಬರೆಯುವವರೇ ಗತಿ ಇರಲಿಲ್ಲ. ಕೆಲವು ಲೇಖನವನ್ನು "ರಾ" ಎಂಬ ಹೆಸರಿನಲ್ಲಿ ಮತ್ತೆ ಕೆಲವು ಲೇಖನವನ್ನು ರಾಗ್ ಎಂಬ ಹೆಸರಿನಲ್ಲಿ ಬರೆದು ಬಹಳಷ್ಟು ಜನರು ಪತ್ರಿಕೆಗೆ ಬರೆಯುತ್ತಾರೆ ಎಂಬುದನ್ನು ಬಿಂಬಿಸಲು ಸಂಪಾದಕ ರಾಘು ಪ್ರಯತ್ನಿಸುತ್ತಿದ್ದ. ಆದರೆ ಹಳ್ಳಿಯ ಮಂದಿ ಬಹಳ ಬುದ್ದಿವಂತರು ಅವನ ಎದುರು ವಾ...... ವಾರೇವಾ ಎಂದು ಹೇಳಿ ಹಿಂದಿನಿಂದ "ಅದೇನೋ ಮಾಡ್ತೀನಿ ಇದೇನೋ ಕಡಿತೀನಿ ಅಂತ ಊರಿಂದ ಊರಿಗೆ ಅಲೆದು ಕೊನೆಯಲ್ಲಿ ಪತ್ರಿಕೆ ಶುರುಮಾಡಿದ" ಅಂತ ಹತ್ತು ಜನ ಸೇರಿ ಶುರು ಮಾಡಿದ್ದ ಪತ್ರಿಕೆಯನ್ನು ಅವನ ತಲೆಗೆ ಕಟ್ಟಿ ಜನರು ಆಡಿಕೊಳ್ಳುತ್ತಿದ್ದರು. ಜನ ಹಾಗೆಂದಾಗಲೆಲ್ಲ ತನ್ನ ಯೋಗ್ಯತೆ ಅವರಿಗೆ ತಿಳಿಯದು ಬಿಡು ಅದಕ್ಕೆಲ್ಲಾ ಪತ್ರಿಕೆಯ ಸಂಪಾದಕೀಯದ ಮೂಲಕ ಉತ್ತರ ಕೊಡುತ್ತೇನೆ ಎಂದು ಸಮಾಧಾನ ಮಾಡಿಕೊಂಡು ಮುನ್ನುಗ್ಗುವ ಧೈರ್ಯ ತೋರಿದ್ದ. ಹಾಗಂತ ರಾಘು ಸ್ವಭಾವತಹ ಒಳ್ಳೆಯವನೆ, ಯಾರು ಯಾವುದಕ್ಕಾಗಿ ತನ್ನನ್ನು ಬಳಸಿಕೊಳ್ಳುತ್ತಾರೆ ಎಂದು ತಿಳಿಯದೆ ಕೈಯಲ್ಲಿದ್ದ ಹಣವನ್ನೆಲ್ಲಾ ಸಾರ್ವಜನಿಕ ಕೆಲಸಕ್ಕೆ ಖಾಲಿ ಮಾಡಿಕೊಂಡುಬಿಡುತ್ತಿದ್ದ. ತನ್ನಿಂದ ಸಹಾಯ ತೆಗೆದುಕೊಂಡವರೆ ಹಿಂದಿನಿಂದ ಏನೇನೋ ಹೇಳಿದಾಗ ಪಾಟೀಲಪುಟ್ಟಪ್ಪ, ಶ್ಯಾಮರಾಯರು,ರವಿಬೆಳಗೆರೆ ಮುಂತಾದವರಿಗೂ ಆರಂಭದಲ್ಲಿ ಜನ ಹೀಗೆ ಹೇಳುತ್ತಿದ್ದರು ಎಂಬರ್ಥದ ಸಂಪಾದಕೀಯ ಬರೆದು "ಯಾರೂ ತಲೆ ಎತ್ತಬಾರ್ದು ಹಂಗೆ ಉತ್ರ ಕೊಟ್ಟೆ ನೋಡು" ಎನ್ನುತ್ತಿದ್ದ. ಪತ್ರಿಕೆಯ ಸಂಪಾದಕ ಮುದ್ರಕ ವಿತರಕ ಎಂಬ ಎಲ್ಲಾ ಹುದ್ದೆಯನ್ನು ಒಬ್ಬನೇ ನಿರ್ವಹಿಸುವ ಕಷ್ಟ ಅವನಿಗೆ ತಿಳಿದಿತ್ತಾದರೂ ಜನರಿಗೆ ಅದು ತಿಳಿಯುತ್ತಿರಲಿಲ್ಲ. ಅವನಿಗೆ ಚಿಟ್ಟೆಯಲ್ಲಿ ಕೃಷಿಕರಿಗೆ ಉಪಯೋಗವಾಗುವ ವಿಷಯಗಳನ್ನು ಮಾತ್ರ ಪ್ರಕಟಿಸುವ ಇರಾದೆ ಇತ್ತು.ಆದರೆ ಅಂಥ ವಿಷಯಗಳನ್ನು ಒಂದು ವರ್ಷಗಳಕಾಲ ನಿರಂತರವಾಗಿ ನೀಡುತ್ತಾ ಬಂದಿದ್ದರೂ ಯಾರೂ ಕ್ಯಾರೆ? ಎಂದಿರಲಿಲ್ಲ. ಹಾಗಾಗಿ ಚಿಟ್ಟೆ ಪತ್ರಿಕೆಯನ್ನು ಏನಕೇನ ಪ್ರಕಾರೇಣ ಪ್ರಸಿದ್ಧಮಾಡಬೇಕು ಎಂದರೆ ಜನಸಾಮಾನ್ಯರು ಬಯಸುವುದನ್ನು ನೀಡಬೇಕು ಎಂಬ ಸ್ವಯಂ ನಿರ್ಣಯ ತೆಗೆದುಕೊಂಡು "ಈಶ್ವರ ದೇವಸ್ಥಾನದ ಕರ್ಮಕಾಂಡ" ಎಂದು ಹಾಯ್ ಬೆಂಗಳೂರಿನಲ್ಲಿ ಬರುವ ಹೆಡ್ಡಿಂಗು ಭಟ್ಟಿ ಇಳಿಸಿ ಪ್ರಕಟಿಸಿದ್ದ. ಆದರೆ ರಾಘು ಮಾತ್ರ ಊರಿಗೆ ಒಳ್ಳೇದಾಗ್ಲಿ ಅಂತ ಇಂಥಹ ಹಗರಣ ಹೊರಗೆ ಹಾಕ್ತಾ ಇದ್ದೇನೆ ಹೊರತು ಇದರಲ್ಲಿ ನನ್ನ ಸ್ವಾರ್ಥವೇನೂ ಇಲ್ಲ ಅಂತ ಹೇಳುತ್ತಿದ್ದ.******** "ಮಹಾರಾಜಾಯ ವಿದ್ಮಹೇ ವಕ್ರ ತುಂಡಾಯ ಧೀಮಹಿ ತನ್ನೋ ದಂತಿ ಪ್ರಚೋದಯಾತ್" ಅರ್ಚಕರು ಈಶ್ವರ ಲಿಂಗದ ಮುಂದೆ ನಿಂತು ದೊಡ್ಡ ಸ್ವರದಿಂದ ಮಂತ್ರ ಹೇಳುತ್ತಿದ್ದರು ಆದರೆ ಮನಸ್ಸು ಮಾತ್ರ ಚಿಟ್ಟೆ ಪತ್ರಿಕೆಯಲ್ಲಿ ಬಂದ ಸುದ್ದಿಯ ಬೆನ್ನು ಹಿಡಿದಿತ್ತು. ಎಂಥಾ ಚೆನ್ನಾಗಿ ಬರೆದಿದಾನೆ ಕಮಿಟಿಯವರು ಮಾಡಿದ ಅನ್ಯಾಯ ತನ್ನೊಬ್ಬನಿಗೆ ಅಂತ ಅಂದುಕೊಂಡಿದ್ದೆ,ಇವರ್‍ನ ಹೀಗೆ ಬಿಟ್ರೆ ಊರಿಗೆ ಊರನ್ನೇ ಕೊಳ್ಳೆ ಹೊಡಿತಾರೆ. ಪ್ರತಿನಿತ್ಯ ನನ್ನನ್ನು ಹಿಂಸೆ ನೀಡಿ ದೇವಸ್ಥಾನದ ಪೂಜೆಯನ್ನು ಬಿಡಿಸಬೇಕು ಅಂತ ಮಸಲತ್ತು ಕಡೀತಾರಲ್ಲ.ಈಗ ಸರೀ ಆಯಿತು.. ತಾನೇನು ಸಂಬ್ಳ ಐದು ಸಾವಿರ ಕೊಡಿ ಅಂತ ಕೇಳಿದ್ನಾ, ಒಂದು ಸಾವಿರ ರೂಪಾಯಿ ಸಂಬ್ಳದಲ್ಲಿ ಜೀವನ ಮಾಡೋಕಾಗಲ್ಲ ಇನ್ನು ಐನೂರು ರೂಪಾಯಿ ಜಾಸ್ತಿ ಮಾಡಿ ಅಂತ ಅಷ್ಟೇ ಕೇಳಿದ್ದು. ಸಂಬ್ಳ ಜಾಸ್ತಿ ಮಾಡದಿದ್ರೂ ಪರ್ವಾಗಿಲ್ಲ ಆರತಿ ಬಟ್ಟಲಿಗೆ ಭಕ್ತರು ಹಾಕೋ ದುಡ್ಡನ್ನಾದ್ರೂ ನನಗೆ ಕೊಡಿ ಅಂತ ಕೇಳಿದ್ರೆ ಅದನ್ನೂ ಕಾಣಿಕೆ ಡಬ್ಬಿಗೆ ಹಾಕ್ಬೇಕು ಅಂತಾರಲ್ಲ. ತಾನು ಹೀಗೆಲ್ಲಾ ಕೇಳಿದ್ದಕ್ಕೆ ರಾತ್ರಿ ತಾನು ದೇವಸ್ಥಾನಕ್ಕೆ ಬೀಗ ಹಾಕ್ಲಿಲ್ಲ ಅಂತ ಸುಳ್ಳು ಹೇಳಿ ತನ್ನ ಮೇಲೆ ಗೂಬೇ ಕೂರ್ಸೋಕೆ ನೋಡಿದ್ರಲ್ಲ. ಆವಾಗ ನನ್ನ ರಕ್ಷಣೆ ಮಾಡಿದ್ದು ತನ್ನ ಮನೆ ಕುಲದೇವರಾದ ದೊಡ್ಡಗಣಪತಿಯೇ ಹೊರತು ಈ ಈಶ್ವರ ಅಲ್ಲ. ತಾನು ದಿನನಿತ್ಯ ಈಶ್ವರನ ತಲೆ ಮೇಲೆ ನೀರು ಹೊಯ್ತಿದ್ದ ಲೆಕ್ಕನೇನಾದ್ರು ಅವನು ಇಟ್ಕೋಂಡಿದ್ರೆ ನನಗೆ ಸಂಬ್ಳ ಜಾಸ್ತಿ ಮಾಡೊ ಬುದ್ದಿ ಕಮಿಟಿಯವರಿಗೆ ಕೊಡ್ತಿದ್ದ. ಏ ಈಶ್ವರಾ ಅದಕ್ಕೆ ನಾನು ಗಣಪತಿ ಮಂತ್ರ ಹೇಳುತ್ತಿದ್ದೇನೆ" ಎಂದುಕೊಳ್ಳುತ್ತಾ ತಿರುಗುವಷ್ಟರಲ್ಲಿ ಹೊಚ್ಚ ಹೊಸ ಮಾರುತಿ ಕಾರನ್ನು ಖರೀದಿಸಿ ಈಶ್ವರ ದೇವಸ್ಥಾನಕ್ಕೆ ಪೂಜೆಗೆ ತಂದಿದ್ದ ಭಕ್ತರೊಬ್ಬರು ಕೈ ಮುಗಿದು ನಿಂತಿದ್ದರು. ಭಕ್ತರು ಕಾರಿನ ಪೂಜೆ ಮುಗಿಸಿ ನೂರರ ನೋಟು ನೀಡುತ್ತಾ " ಭಟ್ರೆ ಆಗ್ಲೆ ನೀವು ಗಣಪತಿ ಮಂತ್ರ ಹೇಳ್ತಿದ್ರಿ ಅದ್ಯಾಕೆ ಈಶ್ವರ ದೇವಸ್ಥಾನದಲ್ಲಿ ಈಶ್ವರನ ಮಂತ್ರ ಹೇಳ್ಬೇಕಿತ್ತಲ್ಲ" ಎಂದಾಗ ಸಮಸ್ತ ಲೋಕ ಕಲ್ಯಾಣಕ್ಕಾಗಿ ತಾನು ಪ್ರಾರ್ಥಿಸುತ್ತಿದ್ದೆ ಹಾಗಾಗಿ ಆವಾಗ ಆ ದೇವರ ಮಂತ್ರ ಈ ದೇವರ ಮಂತ್ರ ಎಂದು ಬೇಧಭಾವ ಎಣಿಸದೇ ಎಲ್ಲಾ ಮಂತ್ರಾನೂ ಹೇಳ್ಬೇಕು ಒಟ್ಟಿನಲ್ಲಿ ಊರಿಗೆ ಒಳ್ಳೆದಾದ್ರೆ ಆಯಿತು ಎಂದು ಹೇಳಿದರು.

*********

ಮಗದೂರು ದೇವಸ್ಥಾನದ ಸುದ್ದಿ ಚಿಟ್ಟೆ ಪತ್ರಿಕೆಯಲ್ಲಿ ಬಂದ ಮಾರನೇ ದಿನ ದೇವಸ್ಥಾನ ಆಡಳಿತ ಮಂಡಳಿಯ ಸದಸ್ಯರು ಸಾರ್ವಜನಿಕರೂ ದೇವಸ್ಥಾನದಲ್ಲಿ ವಾರ್ಷಿಕ ರುದ್ರ ಹೋಮದ ಪ್ರಯುಕ್ತ ಸೇರಿದ್ದರು. ಒಂದಿಷ್ಟು ಹೆಂಗಸರು ಶ್ರದ್ಧೆಯಿಂದ ತೆಂಗಿನ ಕಾಯಿ ತುರಿಯುತ್ತಿದ್ದರು. ಮತ್ತೊಂದಿಷ್ಟು ಜನ ಅನ್ನ ಸಂತರ್ಪಣೆಯ ತಯಾರಿ ನಡೆಸುತ್ತಿದ್ದರು. ಆವಾಗ ದೇವಸ್ಥಾನದ ಆಫೀಸಿನಲ್ಲಿ ಆಡಳಿತ ಮಂಡಳಿಯ ಕೆಲ ಸದಸ್ಯರು " ಈ ರಗಳೆ ನಮಗ್ಯಾಕೆ ನಾಳೆ ಜನರಲ್ ಬಾಡಿ ಕರೆದು ಬಿಡೋಣ" ಅಂತ ಹೇಳಿದರು. ಅದಕ್ಕೆ ಕಮಿಟಿ ಅಧ್ಯಕ್ಷ ಗಜಾನನ "ನೀವು ಸುಮ್ನಿದ್ಬಿಡಿ ಅಂತ ಜಯಣ್ಣ ಹೇಳಿದಾನೆ, ಅವನು ಕೋರ್ಟಿನಲ್ಲಿ ಕೇಸು ಹಾಕ್ತೀನಿ ಅಂತ ಮೇಲಿನಮನೆ ಮಹಾಬಲನ ಹತ್ರ ಸುಮ್ನೆ ಹೇಳ್ತಾನಂತೆ. ಮಹಾಬಲನ ಹ್ಯಾಗೂ ಅಲ್ಲಿ ಹೇಳ್ತಾನೆ, ಸುಮ್ನೆ ಉಗುರಿನಲ್ಲಿ ಹೋಗೋ ಕೆಲ್ಸಕ್ಕೆ ಕೊಡಲಿ ತಗೊಳ್ಳದು ಬ್ಯಾಡ ಎಂದಿದ್ದಾನೆ. ಮತ್ತೆ ಈಗ ಜನರಲ್ ಬಾಡಿ ಕರೆದ್ರೆ ಚಿಟ್ಟೆ ಪೇಪರ್‍ನಲ್ಲಿ ಬರೆದಿದ್ದಕ್ಕೆ ಕರೆದ್ರು ಅಂತ ರಾಘು ಮೆರಿತಾನೆ, ನಾವು ಇಂಥಾ ಸಾಚಾ ಲೆಕ್ಕಾಚಾರ ಇಟ್ರೂ ಹಾಗೆಲ್ಲಾ ಬರ್‍ದಿದಾನೆ, ಅದೇನು ಕಿಸಿತಾನೋ ನೋಡೋಣ. ಇಲ್ಲಿ ಎಲ್ಲಾದ್ರೂ ಬಂದ್ರೆ ವಾಚಾಮಗೋಚರ ಉಗಿಬೇಕು. ದಿನಾಲೂ ಮನೆ ಕೆಲ್ಸ ಬಿಟ್ಟು ಇಲ್ಲಿ ಜೀವ ತೇಯ್ದದಕ್ಕೆ ಒಂದು ಬೆಲೆ ಬೇಡ್ವಾ, ನಾವೇನು ನಮ್ಮ ಮನೆ ಉದ್ದಾರಕ್ಕಾಗಿ ಈ ಕೆಲ್ಸ ಮಾಡ್ತಾ ಇದೀವಾ ಏನೋ ಊರಿಗೆ ಒಳ್ಳೇದಾಗ್ಲಿ ಅಂತ ಮಾಡ್ತಾ ಇದೀವಿ " ಎಂದು ಹೇಳಿದ.

*********

ತಾನು ಬರೆದ ಸುದ್ದಿಯಿಂದ ದೇವಸ್ಥಾನದ ಮೇಲೆ ಭಾರಿ ಪರಿಣಾಮವಾಗಿರಬಹುದೆಂದು ಊಹಿಸಿ ರಾಘು ದೇವಸ್ಥಾನಕ್ಕೆ ಹೋದ. ಅಲ್ಲಿ ಯಾವುದೇ ಬದಲಾವಣೆ ಆಗಿರಲಿಲ್ಲ. ರುದ್ರ ಹೋಮಕ್ಕೆ ನೂರಾರು ಭಕ್ತರು ಶ್ರದ್ಧೆಯಿಂದ ಪಾಲ್ಗೊಂಡಿದ್ದರು. ಮೂರ್ನಾಲ್ಕು ಪುರೋಹಿತರುಗಳು ಬಣ್ಣ ಬಣ್ಣದ ಮಡಿಯನ್ನುಟ್ಟು ಹೋಮದ ತಯಾರಿ ಆರಂಬಿಸಿದ್ದರು. ಕಮಿಟಿಯ ಕೆಲ ಸದಸ್ಯರು ಇವನನ್ನು ಕಂಡು ಬಾ ಬಾ ಎಂದು ಒಳಗೆ ಕರೆದು ಚಾ ಕೊಟ್ಟರು. ರುದ್ರ ಹೋಮಕ್ಕೆ ಆಗಮಿಸಿದ ಪುರೋಹಿತರು ತಯಾರಿ ನಡೆಸುತ್ತಾ,ನಿನ್ನೆ, ಮೊನ್ನೆ,ಮತ್ತು ಆಚೆ ಮೊನ್ನೆ ಎಲ್ಲೆಲ್ಲಿ ಎಷ್ಟು ದಕ್ಷಿಣೆ ಸಿಕ್ಕಿತು ಎನ್ನುವ ಹಾಗು ಇವತ್ತು ಕನಿಷ್ಟ ಐದು ನೂರು ರೂಪಾಯಿ ಗಿಟ್ಟಿಸಿಕೊಳ್ಳುವುದರ ಬಗ್ಗೆ ಚರ್ಚೆ ಮಾಡುತ್ತಿದ್ದರು. ಚಿಟ್ಟೆ ಪತ್ರಿಕೆಯ ಸಂಪಾದಕನ ಬಗ್ಗೆ ಆಕ್ರೋಶದಿಂದ ಮಾತನಾಡುತ್ತಿದ್ದರು. ವಾಸ್ತವವಾಗಿ ಅವರ ಅಂತರಂಗದಲ್ಲಿ ಹಾಗೆ ಇರಲಿಲ್ಲ. ಆದರೆ ಕಾರ್ಯಾಲಯದಲ್ಲಿರುವ ಕಮಿಟಿ ಸದಸ್ಯರು ತಮ್ಮ ಮಾತನ್ನು ಕೇಳಿಸಿಕೊಳ್ಳಲಿ ಎಂಬ ಇರಾದೆ ಅವರದಾಗಿತ್ತು. ಅಷ್ಟರಲ್ಲಿ ರಾಘು ಅಲ್ಲಿಗೆ ಬಂದ "ಓ ಸಂಪಾದಕರು ಬನ್ನಿ ಬನ್ನಿ" ಎಂದು ಪುರೋಹಿತರೊಬ್ಬರು ಹೇಳಿದರು."ರುದ್ರ ಹೋಮ ಜೋರಾಗಿದೆಯಾ? ರಾಘು ಕೇಳಿದ."ಸುಮಾರಾಗಿ ಇದೆಯಪ್ಪಾ ಇದರಲ್ಲಿ ನಮ್ದೇನು ಎಲ್ಲಾ ಊರಿನ ಒಳ್ಳೆಯದಕ್ಕೆ" ಎಂದರು ಪುರೋಹಿತರು. ಭಕ್ತರೆಲ್ಲಾ ಶ್ರದ್ಧೆಯಿಂದ ಭಾವಪರವಶರಾಗಿ ಕೈಮುಗಿದು ನಿಂತು "ನನಗೆ ಒಳ್ಳೆಯದನ್ನು ಮಾಡು ತಂದೆ" ಎಂದು ಕೇಳಿಕೊಳ್ಳುತ್ತಿದ್ದರು. ಮುಂದಿನವಾರದ ಚಿಟ್ಟೆ ಪತ್ರಿಕೆಯ ಸಂಪಾದಕೀಯದಲ್ಲಿ "ಹಸಿದ ಹುಲಿಗಳು ಹಾಗು ಅಮಾಯಕ ಭಕ್ತರು" ಎಂಬ ವಿಚಾರವಾಗಿ ರಾಘುವಿನ ದೃಷ್ಟಿಯಲ್ಲಿ ಮಾರ್ಮಿಕವಾಗಿ ಬರೆಯಲಾಗಿತ್ತು. ಜಯಣ್ಣ ಮತ್ತು ಶಾಮು ಹೊಸತಾಗಿ ಗುರುಮಠದ ವಿಷಯದಲ್ಲಿ ತಕರಾರು ಎತ್ತಲು ತಯಾರಿ ನಡೆಸಿದ್ದರು. ಊರಿನ ಉಳಿದ ಆಸ್ತಿಕ ನಾಗರೀಕರು "ಈ ನಾಸ್ತಿಕ ಮುಂಡೇವಕ್ಕೆ ಈಶ್ವರ ಈ ತರಹ ಬುದ್ದಿ ಕೊಟ್ಟು ತನ್ನ ಸೇವೆ ಮಾಡಿಸ್ಕೋತಾ ಇದಾನಲ್ಲ" ಅಂತ ಆಡಿಕೊಳ್ಳುತ್ತಿದ್ದರು. ಆಡಳಿತ ಕಮಿಟಿಯವರು ಚಿಟ್ಟೆ ಪತ್ರಿಕೆಯನ್ನು ಆಡಿಕೊಳ್ಳುತ್ತಾ ಕಾಣಿಕೆ ಡಬ್ಬಿಯ ದುಡ್ಡು ಎಣಿಸುವುದರಲ್ಲಿ ಮಗ್ನರಾಗಿದ್ದರು.ಅರ್ಚಕರು ಯಾವುದಕ್ಕೂ ಒಳ್ಳೆಯದು ಎಂದು ದೂರದ ಭಕ್ತರು ಬಂದಾಗ ಅವರ ಬಳಿ ನಿಮ್ಮೂರಿನ ದೇವಸ್ಥಾನದಲ್ಲಿ ಪೂಜೆಗೆ ಜನ ಇದಾರಾ. ಎಂದು ಕೇಳುತ್ತಿದ್ದರು. ಉಳಿದ ಪುರೋಹಿತರು ಸರ್ವೇ ಜನಾಹ ಸುಖಿನೋ ಭವಂತು, ಲೋಕಕಲ್ಯಾಣಾರ್ಥೆ, ಆತ್ಮ ಪ್ರೀತ್ಯರ್ಥೆ ,ಯತ್ ಕಿಂಚಿತ್ ..." ಮಂತ್ರ ಹೇಳಿ ನೂರು ರುಪಾಯಿ ದಕ್ಷಿಣೆ ಇಡು ಎನ್ನುತ್ತಿದ್ದರು. ಹಾಗೂ ಎಲ್ಲರೂ ನಾವು ಮಾಡುತ್ತಿರುವುದು ಸ್ವಾರ್ಥಕ್ಕೆ ಅಲ್ಲ ಊರಿನ ಒಳ್ಳೆಯದಕ್ಕೆ ಎಂದು ಹೇಳುತ್ತಿದ್ದರು. ಮಹಾಬಲ ಮತ್ತು ತಿರುಪತಿ "ಒಟ್ಟಿನಲ್ಲಿ ಊರಿಗೆ ಒಳ್ಳೆದಾದರೆ ಆಯಿತು ಯಾರು ಮಾಡಿದ್ರೂ ಸೈ" ಎಂದು ಎಲ್ಲರ ಬಳಿಯೂ ಒಳ್ಳೆಯಯವರಾಗುವ ಪ್ರಯತ್ನ ಮುಂದುವರೆಸಿದ್ದರು. ಈಶ್ವರ ದೇವಸ್ಥಾನದ ಗಂಟೆ ಮಾತ್ರ ಭಕ್ತರ ಕೈಯಿಂದ ಬಲವಾಗಿ ಏಟು ತಿಂದರೂ ಅವರು ಗಿರಕಿ ಹೊಡೆದು ಮುಗಿಸುವವರೆಗೂ ಲಯಬದ್ಧವಾದ ನೀನಾದವನ್ನು ಸುಶ್ರಾವ್ಯವಾಗಿ ಮೊಳಗಿಸುತ್ತಿತ್ತು. ಆದರೆ ಗಂಟೆ ಮಾತ್ರ ನಾನು ಊರಿಗೆ ಒಳ್ಳೆಯದಾಗಲಿ ಅಂತ ಕಷ್ಟಪಡ್ತಾ ಇದೀನಿ ಅಂತ ಅನ್ಕೊಂಡಿರಲಿಲ್ಲ. ಆದರೂ ಗಂಟೆಯ ನಾದದಿಂದ ಊರಿಗೆ ಒಳ್ಳೆಯದಾಗುತ್ತಿತ್ತು.

********************************************-೯೩೪೨೨೫೩೨೪೦