ಹೊರ ನೋಟಕ್ಕೆ ಇಷ್ಟರಮಟ್ಟಿಗೆ ತಯಾರಾಗಿ ನಿಂತಿದೆ ಮನೆ. ಇನ್ನು ಇಂಟೀರಿಯರ್ ನಡೆಯಬೇಕಿದೆ. ಕಳೆದ ವರ್ಷ ಮಾರ್ಚ್ ತಿಂಗಳಿನಿಂದ ಇಲ್ಲಿಯವರೆಗೆ ಆಗಿರುವ ಅನುಭವ "ಮನೆ ಕಟ್ಟಿ ನೋಡು" ಎಂಬ ಪುಸ್ತಕ ಹೊರ ತರಬಹುದಾದಷ್ಟಿದೆ. ಮನೆ ಕಟ್ಟುವುದು ಒಂದು ಮಹಾ ಅಪರಾಧ ಎಂಬಂತೆ ಬಿಂಬಿಸಿದ ಅನಂತ ಪಟಾಲಂ ನಿಂದ ಹಿಡಿದು ನಿನ್ನೆ ನಮ್ಮ ಮನೆ ಕೊನೆಕೊಯ್ಯುವ ಜನ ಕಂಠಮಟ್ಟ ಕುಡಿದು ಅನಾಹುತಮಾಡಿಕೊಂಡಲ್ಲಿಯವರೆಗೆ, ನಾನು ಮಾಡಿದ ಕೆಲಸಕ್ಕೆ ಸರ್ಕಾರ ಸಂಬಳ ಕೊಡುತ್ತೆ ಎಂದ ಮಂಜುಳಾ ಶಾನುಭೋಗರಿಂದ ಹಿಡಿದು ತಳ್ಳಿ ತಳ್ಳಿ ಇನ್ನಷ್ಟು ತಳ್ಳಿ ಎಂದ ಜನರವರೆಗೂ, ನಾನು ಇಲ್ಲಿ ಕೆಲಸ ಮಾಡಿ ಹೊಸ ಮನುಷ್ಯನಾದೆ ಎಂದ ತಿಲಕ್ ರಾಯ್ಕರ್ ನಿಂದ ಹಿಡಿದು ಕೆಲಸವನ್ನೇ ಮಾಡದೇ ಹಣ ಪೀಕಿದ ಜನರವರೆಗೂ, ಗೊಣಗದೆ ಸೂಪರ್ ಸೂಪರ್ ಎನ್ನುತ್ತಾ ಹಣ ನೀಡಿದ ಗೌರೀಶನಿಂದ ಹಿಡಿದು, ಜವಾಬ್ದಾರಿಯೇ ಇಲ್ಲ ಎಂದ ಅಪ್ಪಯ್ಯನವರೆಗೂ, ಇಲ್ಲಿ ಬೋರ್ ತೆಗೆದರೆ ನೀರು ಚಿಮ್ಮುತ್ತೆ ಎಂದ ಕೃಷ್ಣಮೂರ್ತಿಯಣ್ಣನಿಂದ ಹಿಡಿದು ಮಳೆಗಾಲದಲ್ಲಿ ಸ್ಲ್ಯಾಬ್ ಹಾಕಿದರೆ ಆರು ತಿಂಗಳೂ ನಿಲ್ಲದು ಎಂದು ಹೆದರಿಸಿದ ಜನರವರೆಗೂ, ನೀನು ಮನೆ ಕಟ್ಟು ಯಾರೂ ಏನೂ ಮಾಡಲಾಗದು ಕಾರಣ ನೀನು ಕಾನೂನಿನ ಪ್ರಕಾರ ಸರಿಯಾಗಿದ್ದೀಯ ಎಂದ ಕಾನುತೋಟದ ಶೇಷಗಿರಿಯಣ್ಣ ಹಾಗೂ ಬಾಬುವಿನಿಂದ ಹಿಡಿದು ನಾನು ಹೇಳಿದರೆ ಡಿಸಿ ಬಂದು ಮನೆ ಕೆಲಸ ನಿಲ್ಲಿಸುತ್ತಾರೆ ಎಂದ ಶ್ಯಾಂ ಭಟ್ಟನವರೆಗೂ, ಸಮಸ್ಯೆ ಬಂದಾಗ ಕಣ್ಮುಚ್ಚು ನಿನ್ನ ಕೆಲಸ ಮಾಡುತ್ತಾ ಹೋಗು ಎಂದು ಧೈರ್ಯ ತುಂಬಿದ ಜನಾರ್ಧಣ್ಣನಿಂದ ಹಿಡಿದು ಅವನು ಕಟ್ಟಿದ ಮನೆ ಸರ್ಕಾರಿ ಜಾಗದಲ್ಲಿದೆ ಅದು ಉಳಿಸಿಕೊಳ್ಳುವುದು ಕಷ್ಟ ಎಂದ ಜನರವರೆಗೂ, ಎಲ್ಲವೂ ಪಾತ್ರಗಳೆ ಪರಿಚಯಸ್ಥರೆ, ಅವನ್ನೆಲ್ಲಾ ಒಂದೆಡೆ ಯಾರಿಗೂ ಅವಮಾನವಾಗದಂತೆ ಅಕ್ಷರದಲ್ಲಿ ಬಂಧಿಸಿ, ಅನುಮಾನಕ್ಕೆ ಎಡೆಯಿಲ್ಲದಂತೆ ಬರೆದು ಮುದ್ರಿಸಿ ಮತ್ತೆ ಯಥಾಪ್ರಕಾರ ಹಂಚಬೇಕಿದೆ. ಆವಾಗ ನನಗೆ ನೆನಪು ಬರುವುದು ನಿಮ್ಮನ್ನ. ಎಲ್ಲಿಯೋ ಕುಳಿತು ಭೇಟಿಯಾಗದೆ ಪರಿಚಯವಿಲ್ಲದೆ ಇದ್ದರೂ ಗಾಡ್ ಬ್ಲೆಸ್ ಯೂ ಅನ್ನುತ್ತೀರಲ್ಲ ಅದನ್ನ. ಮತ್ತೆ ಇದನ್ನ.