Thursday, September 2, 2010

ಒಂದು ಜೇನಿನ ಹಿಂದೆ -3


ಪುಸ್ತಕ
ಜೇನುಗೂಡು ಪತ್ತೆಯಾದ ಮೇಲೆ ಜೇನನ್ನು ಹಿಡಿದು ಪೆಟ್ಟಿಗೆಗೆ ಕೂಡುವುದು ಅತ್ಯಂತ ನಾಜೂಕಾದ ಕೆಲಸ. ಮರದ ಪೆಟ್ಟಿಗೆ, (ಕೂಡುಪೆಟ್ಟಿಗೆ) ತಗಡಿನ ಜೇನುಗೇಟು, ಬಾಳೆ ನಾರಿನ ದಾರ, ಅಥವಾ ಅಡಿಕೆಹುಂಬಾಳೆ, ಚಾಕು, ಊದುಬತ್ತಿ, ಬೆಂಕಿಪೊಟ್ಟಣ, ಕತ್ತಿ, ಕೊಡಲಿ, ಸಣ್ಣದಾದ ಮರಕೊಡಲಿ, ನಾಲ್ಕೈದು ಸೆಣಬಿನ ದಾರ, ತುಪ್ಪ ಸಂಗ್ರಹಿಸಲು ಪಾತ್ರೆ, ಒಂದು ಟಾರ್ಚ್, ಇವಿಷ್ಟು ಸಲಕರಣೆಗಳನ್ನು ಇಟ್ಟುಕೊಂಡು ಹೊರಡಬೇಕು.
ಮೊದಲನೆಯದಾಗಿ ಜೇನಿನಗೂಡಿನೆದುರಲ್ಲಿ ಮರದ ಜೇನುಪೆಟ್ಟಿಗೆಯನ್ನು ಇಟ್ಟುಕೊಳ್ಳಲು ಮಟ್ಟವಾದ ಜಾಗವನ್ನು ಮಾಡಿಕೊಳ್ಳಬೇಕು, ಅಕಸ್ಮಾತ್ ಮರದಮೇಲೆ ಗೂಡು ಇದ್ದ ಪಕ್ಷದಲ್ಲಿ ಪೆಟ್ಟಿಗೆ ಭದ್ರವಾಗಿ ಅಲ್ಲಿಡಲು ಸೂಕ್ತ ವ್ಯವಸ್ಥೆ ಮಾಡಿಕೊಳ್ಳಬೇಕು. ಅಂತಹಾ ಸಂದರ್ಭದಲ್ಲಿ ಹಗುರವಾದ ರಟ್ಟಿನಿಂದ ಮಾಡಿರುವ ಕೂಡುಪೆಟ್ಟಿಗೆಯನ್ನು ಬಳಸಬೇಕು. ನೆಲದಲ್ಲಿನ ಹುತ್ತದಲ್ಲಿ ಜೇನು ಇದ್ದಾಗ ಮರದ ಪೆಟ್ಟಿಗೆಯಾದರೂ ತೊಂದರೆಯಿಲ್ಲ. ಆದರೆ ಹುತ್ತದಲ್ಲಿನ ಜೇನುಗೂಡಿನಿಂದ ಪೆಟ್ಟಿಗೆಗೆ ಜೇನು ಕೂಡಿಸಬೇಕಾದ ಸಂದರ್ಭದಲ್ಲಿ ಹುತ್ತವನ್ನು ಸಂಪೂರ್ಣವಾಗಿ ಕೂಲಂಕಶವಾಗಿ ಪರೀಕ್ಷಿಸಿಕೊಳ್ಳುವುದನ್ನು ಮರೆಯಬಾರದು. ಜೇನು ಹಿಡಿಯಬೇಕಾದ ಸಮಯದಲ್ಲಿ ಹುತ್ತದೊಳಗೆ ಕೈಯನ್ನು ಹಾಕಬೇಕಾಗಿರುವುದರಿಂದ ಅಲ್ಲಿ ಯಾವ ಹಾವು ಅಥವಾ ಚೇಳು ಮತ್ಯಾವ ವಿಷಯುಕ್ತ ಜೀವಿಗಳು ವಾಸವಾಗಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಪ್ರಮುಖವಾದ ಅಂಶವಾಗಿರುತ್ತದೆ. ಇದು ಪ್ರಾಣಕ್ಕೆ ಸಂಚಕಾರ ತರುವ ಸಂಗತಿಯಾದ್ದರಿಂದ ಯಾವಕಾರಣಕ್ಕೂ ಈ ವಿಷಯದಲ್ಲಿ ರಾಜಿಯಾಗುವಂತಿಲ್ಲ.
ಸಾಮಾನ್ಯವಾಗಿ ಎರಡು ಅಥವಾ ಮೂರಿಂಚಿನ ಅಗಲದ ತೂತಿನ ಮಾರ್ಗದ ಮುಖಾಂತರ ಜೇನುಹುಳುಗಳು ಓಡಾಟ ಮಾಡುತ್ತಿರುತ್ತವೆ. ಮೊದಲು ಜೇನುಗೂಡಿನ ತತ್ತಿ ಕಾಣಿಸುವಂತೆ ಗೂಡಿನ ಬಾಯನ್ನು ಬಿಡಿಸಿಕೊಳ್ಳಬೇಕು. ನಂತರ ಅರ್ಧಅಡಿಯಿಂದ ಒಂದು ಅಡಿಯತನಕ ಉದ್ದ ಮತ್ತು ಅಷ್ಟೇ ಅಗಲದ ತತ್ತಿ ಹೊರಬರುವಷ್ಟು ದಾರಿ ಮಾಡಿಕೊಳ್ಳಬೇಕು. ಮೇಣದ ತತ್ತಿಗಳಾದ್ದರಿಂದ ಅವು ಬಹಳ ಮೆದುವಾಗಿರುತ್ತವೆ ಹಾಗಾಗಿ ತತ್ತಿಯನ್ನು ಹೊರ ತೆಗೆಯುವ ಪೊಟರೆಯ ಬಾಯಿಯನ್ನು ಸಮರ್ಪಕ ರೀತಿಯಲ್ಲಿ ಅಗಲ ಮಾಡಿಕೊಳ್ಳುವುದು ಅತ್ಯಗತ್ಯ. ಜೇನಿನಗೂಡಿಗೆ ಬೇರೆ ಮಾರ್ಗಗಳಿದ್ದಲ್ಲಿ ಅದನ್ನು ಮುಚ್ಚಿಕೊಳ್ಳಬೇಕು. ಈ ಕೆಲಸಗಳನ್ನು ಮಾಡುವಾಗ ಹೆಚ್ಚು ಗದ್ದಲವಾಗದಂತೆ ನೋಡಿಕೊಳ್ಳಬೇಕು. ಸದ್ದು ಜಾಸ್ತಿಯಾದರೆ ಹುಳುಗಳು ಗಾಬರಿಯಾಗಿ ಧಾಳಿ ಮಾಡುವುದೂ ಹೆಚ್ಚು ಜೊತೆಗೆ ಅಕಸ್ಮಾತ್ ಪೊಟರೆಗೆ ಆಳವಾದ ಬೇರೆ ಮಾರ್ಗಗಳಿದ್ದರೆ ಅತ್ತಕಡೆ ಹೋಗಿಬಿಡುವ ಸಾಧ್ಯತೆಯೂ ಇರುತ್ತದೆ. ಸಾಮಾನ್ಯವಾಗಿ ಪೊಟರೆಯ ಬಾಯಿಯನ್ನು ಅಗಲಮಾಡಲು ಶುರುಮಾಡುವಷ್ಟರಲ್ಲಿ ಹತ್ತೆಂಟು ಸೈನಿಕಹುಳುಗಳು ಹೊಡೆಯುತ್ತವೆ. ಮೊದಲು ಜೇನು ಹೊಡೆದಕೂಡಲೇ ಒಮ್ಮೆ ತೀವ್ರವಾಗಿ ಉರಿಯುತ್ತದೆ. ಉರಿಯಾಗುತ್ತದೆ ಎಂಬ ಅರಿವು ಮೊದಲೇ ಇದ್ದರೆ ನಮ್ಮ ಮನಸ್ಸು ತಡೆದುಕೊಳ್ಳಲು ಪೂರ್ವಸಿದ್ದತೆಯನ್ನು ಹೊಂದಿರುತ್ತದೆಯಾದ್ದರಿಂದ ಒಮ್ಮೆಲೇ ಗಾಬರಿ ಬೀಳುವುದಿಲ್ಲ. ಜೇನು ಹೊಡೆದಾಗ ಗಾಬರಿಯಿಂದ ಅತ್ತಿತ್ತ ಓಡಾಡಿದಲ್ಲಿ ಮತ್ತಷ್ಟು ಹುಳಗಳು ಹೊಡೆಯುತ್ತವೆ. ಆ ಕಾರಣದಿಂದ ನಿಧಾನವಾಗಿ ಕೆಲಸ ಮಾಡುವುದು ಜೇನು ಹೊಡೆಯುವುದನ್ನು ತಪ್ಪಿಸಿಕೊಳ್ಳುವುದಕ್ಕೆ ಇರುವ ಏಕೈಕ ಮಾರ್ಗ. ಮುಖಕ್ಕೆ ತೆಳ್ಳನೆಯ ಪರದೆ ಮುಚ್ಚಿಕೊಳ್ಳುವುದರಿಂದ ಮುಖವನ್ನು ಜೇನಿನಧಾಳಿಯಿಂದ ತಪ್ಪಿಸಿಕೊಳ್ಳಬಹುದು. ಜೇನು ಹೊಡೆದ ತಕ್ಷಣ ನಿಧಾನವಾಗಿ ಆ ಜಾಗದಲ್ಲಿ ನಾಟಿರುವ ಸೂಜೆಯ ಮೊನೆಯಷ್ಟು ಚಿಕ್ಕದಾದ ಕಪ್ಪುಬಣ್ಣದ ಅಂಬನ್ನು ಕಿತ್ತು ಹಾಕಬೇಕು.

ಜೇನಿನ ಅಂಬು ಅಲ್ಲೇ ಉಳಿದಲ್ಲಿ ಕೀವು ಆಗುತ್ತದೆ. ಅಂಬು ಕಿತ್ತ ಜಾಗವನ್ನು ತಕ್ಷಣ ಅಲ್ಲಿ ಹತ್ತಿರದಲ್ಲಿರುವ ಯಾವುದಾದರೂ ಕುರುಚಲು ಗಿಡದ ಸೊಪ್ಪಿನ ಎಲೆಯಿಂದ ಉಜ್ಜಬೇಕು. ಇದು ಎರಡು ಕಾರಣದಿಂದ ಪಾಲಿಸಬೇಕಾದ ನಿಯಮ. ಒಂದನೆಯದಾಗಿ ಸೊಪ್ಪಿನ ರಸಕ್ಕೆ ಔಷಧೀಯ ಗುಣವಿರುವುದರಿಂದ ನಂಜು ಜಾಸ್ತಿ ಆಗುವುದಿಲ್ಲ. ಎರಡನೆಯದು ಹುಳುಹೊಡೆದ ಜಾಗದಲ್ಲಿ ರಾಸಾಯನಿಕವೊಂದನ್ನು ಬಿಟ್ಟಿರುತ್ತದೆ. ಅದರ ವಾಸನೆ ಮತ್ತೊಂದು ಜೇನುಹುಳು ಅದೇ ಜಾಗಕ್ಕೆ ಹೊಡೆಯಲು ಪ್ರೇರೇಪಿಸುವ ಗುಣವನ್ನು ಹೊಂದಿರುತ್ತದೆ. ಸೊಪ್ಪಿನ ಎಲೆಯ ರಸ ಹಚ್ಚುವುದರಿಂದ ವಾಸನೆ ಹೋಗುತ್ತದೆ. ಮತ್ತೊಂದು ಹುಳ ಹೊಡೆಯುವ ಪ್ರಮಾಣವನ್ನು ತಗ್ಗಿಸಬಹುದು. ಒಂದುಸಾರಿ ಅಂಬನ್ನು ನಮಗೆ ಚುಚ್ಚಿದ ಜೇನ್ನೊಣ ಅಲ್ಲಿಯೇ ಸುತ್ತ ಮುತ್ತ ಜೋರಾಗಿ ಹಾರಾಡುತ್ತಾ ಸ್ವಲ್ಪ ಹೊತ್ತಿನಲ್ಲಿ ಅಸುನೀಗುತ್ತದೆ.
ತುಡುವೆಜೇನುಹುಳುಗಳು ಸಾಮಾನ್ಯವಾಗಿ ಮೊದಲು ಒಂದೈದು ನಿಮಿಷ ಧಾಳಿ ಮಾಡಿ ನಂತರ ಸುಮ್ಮನೆ ಹಾರಾಡಲು ತೊಡಗುತ್ತವೆ. ಹೆಜ್ಜೇನಿನ ತರಹ ನೂರಾರು ಹುಳುಗಳು ಒಮ್ಮೆಲೆ ಧಾಳಿ ಮಾಡುವುದಿಲ್ಲ. ಅಕಸ್ಮಾತ್ ಸ್ವಲ್ಪ ಹೆಚ್ಚು ಹುಳುಗಳು ಧಾಳಿಮಾಡಲಾರಂಭಿಸಿದರೆ ಊದುಬತ್ತಿಯ ಹೊಗೆಯನ್ನು ತೋರಿಸಿದಲ್ಲಿ ಸುಮ್ಮನುಳಿಯುತ್ತವೆ. ಪೆಟ್ಟಿಗೆಗೆ ಕೂಡಬೇಕಾದ ಜೇನಿಗೆ ಜಾಸ್ತಿ ಹೊಗೆ ತೋರಿಸಬಾರದು. ಹೊಗೆ ಜಾಸ್ತಿಯಾದಲ್ಲಿ ಬಹಳ ಬೇಗನೆ ಹಾರಿಹೋಗಿಬಿಡುವ ಸಾಧ್ಯತೆ ಹೆಚ್ಚು.
ಇಡೀ ಜೇನಿನ ಕುಟುಂಬ ರಾಣಿಹುಳವನ್ನು ಅವಲಂಬಿಸಿರುತ್ತದೆ. ಆದ್ದರಿಂದ ಗೂಡಿನ ಭಾಗದಲ್ಲಿ ಸ್ವಲ್ಪ ಪ್ರಮಾಣದ ಗದ್ದಲವಾದ ತಕ್ಷಣ ರಾಣಿಜೇನು ಗೂಡಿನೊಳಗೆ ಸುರಕ್ಷಿತ ಜಾಗಕ್ಕೆ ಸೇರಿಕೊಂಡುಬಿಡುತ್ತದೆ. ರಾಣಿಜೇನು ಇತರೆ ಜೇನ್ನೊಣಕ್ಕಿಂತ ಮೂರುಪಟ್ಟು ದೊಡ್ಡದಾಗಿರುತ್ತವೆ. ಉದ್ದನೆಯ ಹಿಂಭಾಗ ಹೊಂದಿರುವ ರಾಣಿ, ಅಗಲವಾದ ರೆಕ್ಕೆಯನ್ನು ಹೊಂದಿರುತ್ತವೆ. ಹಾಗಾಗಿ ಗುರುತಿಸುವುದು ಬಹಳ ಸುಲಭ. ನಿಧಾನ ಗೂಡಿನೊಳಗೆ ಕೈಯನ್ನು ಹಾಕಿ ರಾಣಿಜೇನಿನ ರೆಕ್ಕೆಯನ್ನು ಎಚ್ಚರಿಕೆಯಿಂದ ಕೈಯಲ್ಲಿ ಹಿಡಿದು ಪೆಟ್ಟಿಗೆಯೊಳಕ್ಕೆ ಹಾಕಿ ಮುಚ್ಚಳ ಹಾಕಬೇಕು. ರಾಣಿಜೇನುಹುಳು ಪೆಟ್ಟಿಗೆಯಿಂದ ಹೊರಗಡೆ ಬರಲಾಗದಂತಹ ಮತ್ತು ಕೆಲಸಗಾರ ನೊಣ ಓಡಾಡಲು ಅನುಕೂಲವಾಗುವಂತಹ ಅರ್ಧ ಇಂಚು ಅಗಲದ ಮೂರು ಇಂಚು ಉದ್ದದ ಕಬ್ಬಿಣದ ಬಾಗಿಲನ್ನು ಪೆಟ್ಟಿಗೆಗೆ ಹಾಕಿದರೆ ಜೇನುಹಿಡಿಯುವ ಕೆಲಸದ ಪ್ರಮುಖ ಘಟ್ಟ ಯಶಸ್ವಿಯಾಗಿ ಮುಗಿದಂತಾಗುತ್ತದೆ. ರಾಣಿಜೇನ್ನೊಣ ಹೊರಸೂಸುವ ಪ್ಯಾರಾಮೂನ್‌ಗೆ ಒಂದರ ಹಿಂದೆ ಒಂದರಂತೆ ಎಲ್ಲಾ ಜೇನುಹುಳುಗಳು ಸ್ವಲ್ಪಹೊತ್ತಿನಲ್ಲಿ ಪೆಟ್ಟಿಗೆಯೊಳಗೆ ಸೇರಿಕೊಂಡುಬಿಡುತ್ತವೆ. ಹುಳಗಳಿಲ್ಲದ ತತ್ತಿಯನ್ನು ನಿಧಾನ ಚಾಕುವಿನಿಂದ ಬಿಡಿಸಿ ಮರದ ಚೌಕಾಕಾರದ ಕಟ್ಟುಗಳಿಗೆ ಬಾಳೆಪಟ್ಟೆ ದಾರದಿಂದ ಕಟ್ಟಿ, ನಿಧಾನವಾಗಿ ಪೆಟ್ಟಿಗೆಯೊಳಗೆ ಇಡಬೇಕು. ತತ್ತಿಯನ್ನು ಪೆಟ್ಟಿಗೆಯೊಳಗೆ ಇಡಲು ಈಗಾಗಲೇ ರಾಣಿನೊಣ ಮತ್ತು ಹುಳುಗಳು
ಸೇರಿಕೊಂಡಿರುವ ಪೆಟ್ಟಿಗೆಯ ಮೇಲ್ಭಾಗದ ಮುಚ್ಚಳವನ್ನು ಬಹಳ ಎಚ್ಚರಿಕೆಯಿಂದ ತೆಗೆಯಬೇಕು. ಜೋರಾಗಿ ತೆಗೆದರೆ ರಾಣಿಯ ಸಮೇತ ಹುಳುಗಳು ಹಾರಿಹೋಗುವ ಸಂಭವ ಇರುತ್ತದೆ. ಯಾವ ಕಾರಣಕ್ಕೂ ರಾಣಿಯನ್ನು ಹೊರಗಡೆ ಬಿಡಬಾರದು. ಪೆಟ್ಟಿಗೆಗೆ ಕೂಡುವ ಪ್ರಾರಂಭದಲ್ಲಿ ಪೊಟರೆಯೊಳಗಿರುವ ರಾಣಿಹುಳು ಸುಲಭವಾಗಿ ಕೈಗೆ ಸಿಗದಿದ್ದಲ್ಲಿ..............
ಪುಸ್ತಕದ ಎರಡು ಹಾಳೆ ಸರಿಯಾದ ಸಂದರ್ಭದಲ್ಲಿ ಕೈಕೊಟ್ಟಿತ್ತು. ಕನ್ನರ್ಸೆ ನಾರಾಯಣ ಸ್ವಾಮಿಯ ಮನೆಯಿಂದ ಬಂದು ಊಟ ಮುಗಿಸಿ, ಅಕಸ್ಮಾತ್ ಸಿಕ್ಕಿದ ಜೇನನ್ನು ಮತ್ತೆ ಹೋಗಿ ಪೆಟ್ಟಿಗೆ ತುಂಬಬೇಕಾದ್ದರಿಂದ, ಆ ನನ್ನ ಹೊಸ ಅನುಭವಕ್ಕೆ ಸರಿಯಾದ ಮಾಹಿತಿ ಇದ್ದರೆ ಒಳ್ಳೆಯದೆಂದು, ಹಾಗು ಕರೆಂಟು ತೆಗೆಯುವ ತನಕ ಸಮಯವೂ ಇದ್ದುದರಿಂದ ಮತ್ತೊಮ್ಮೆ ಪುಸ್ತಕ ಓದುತ್ತಿದ್ದಾಗ ಪೊಟರೆಯೊಳಗೆ ರಾಣಿಹುಳು ಕೈಗೆ ಸಿಗದಿದ್ದಾಗ ಏನು ಮಾಡಬೇಕು ಹಾಗು ಹೇಗೆ ಪೆಟ್ಟಿಗೆಯೊಳಗೆ ಜೇನು ತುಂಬಬೇಕು ಎಂಬ ಮಾಹಿತಿಯಿದ್ದ ಪುಟ ಕಾಣೆಯಾಗಿತ್ತು. ಮೊದಲ ಬಾರಿ ಪುಸ್ತಕ ಓದುವಾಗ ಅದರಲ್ಲಿ ಕೆಲವು ಪುಟಗಳು ಇಲ್ಲದ್ದು ಗಮನಕ್ಕೆ ಬಂದಿತ್ತಾದರೂ ಹಿಂದಿನ ಹಾಗು ಮುಂದಿನ ಪುಟದ ಆಧಾರದಮೇಲೆ ತೂಗಿಸಿಕೊಂಡು ಓದಿದ್ದೆ. ಆದರೆ ಇಂತಹಾ ಅತ್ಯಮೂಲ್ಯ ಘಟ್ಟದಲ್ಲಿ ಕೈಕೊಟ್ಟಿದ್ದು ಗಮನಕ್ಕೆ ಬಂದಿರಲಿಲ್ಲ. ಈಗ ಮಾಡುವುದೇನು ಎಂಬ ಪ್ರಶ್ನೆ ಒಂದೆರಡು ಕ್ಷಣ ಕಾಡಿತಾದರೂ, ರಾಣಿ ನೊಣ ಸಿಕ್ಕದಿದ್ದಾಗ ಆ ಪ್ರಶ್ನೆ ಉದ್ಬವಿಸುವುದು ತಾನೆ? ಹಾಗಾಗಿ ರಾಣಿ ಸುಲಭವಾಗಿ ಸಿಗುತ್ತದೆಯೆಂಬ ನಂಬಿಕೆಯಿಂದ, ಅಥವಾ ಚೆನ್ನನನ್ನೋ ಪ್ರಶಾಂತನನ್ನೋ ಕರೆದುಕೊಂಡು ಹೋದರಾಯಿತೆಂಬ ತೀರ್ಮಾನದಿಂದ ಸುಮ್ಮನುಳಿದೆ.
ಸತ್ಯವಾಗಿ ಹೇಳಬೇಕೆಂದರೆ ನನಗೆ ಜೇನನ್ನು ಪೆಟ್ಟಿಗೆಗೆ ಕೂಡಲು ಪ್ರಶಾಂತ ಅಥವಾ ಚೆನ್ನನನ್ನು ಕರೆದುಕೊಂಡು ಹೋಗುವ ಮನಸ್ಸು ಇರಲಿಲ್ಲ. ನಾನೊಬ್ಬನೇ ಯಾರ ಸಹಾಯವೂ ಇಲ್ಲದೇ ಪೆಟ್ಟಿಗೆಗೆ ಜೇನು ಕೂಡಬೇಕೆಂಬ ಮಹದಾಸೆ ಇತ್ತು, ಆದರೆ ಈಗ ಮಾಹಿತಿಯ ಕೊರತೆ ಅವರಲ್ಲೊಬ್ಬರನ್ನು ಅವಲಂಬಿಸುವಂತೆ ಮಾಡಿತ್ತು.
* * * * *
ಕೈಹುಟ್ಟು
ಜೇನು ಪೆಟ್ಟಿಗೆಗೆ ಕೂಡಲು ಬೇಕಾದ ಪರಿಕರಗಳನ್ನು ಚೀಲಕ್ಕೆ ತುಂಬಿಕೊಂಡು ಪ್ರಶಾಂತನ ಮನೆಗೆ ಹೊರಟೆ. ಜೇನು ಹುಳ ಹೊಡೆಯದಂತೆ ಗಾಜಿನ ಮಾಸ್ಕ್ ಹಾಗೂ ಕೋಟ್ ಇದ್ದರೆ ಒಳ್ಳೆಯದಿತ್ತು ಅಂತ ಅನಿಸಿತು. ಆದರೆ ಅದು ದುಬಾರಿ ವೆಚ್ಚದ್ದಾದ್ದರಿಂದ ಸದ್ಯಕ್ಕೆ ಅದನ್ನು ತರಿಸುವುದು ಸಾಧ್ಯವಿರಲಿಲ್ಲ.
ಪ್ರಶಾಂತನ ಮನೆಗೆ ಹೋದಾಗ ಅವನ ತಂದೆ ಮನೆಬಾಗಿಲಿನಲ್ಲಿ ಬೀಡಿ ಸೇದುತ್ತಾ ಕುಳಿತಿದ್ದರು. ನನ್ನನ್ನು ನೋಡಿದಕೂಡಲೆ ಅವರಿಗೆ ನನ್ನ ಉದ್ದೇಶ ಅರ್ಥವಾಗಿ,
ಪ್ರಶಾಂತನಿಗೆ ಸಿಕ್ಕಾಪಟ್ಟೆ ಜ್ವರ, ಮೆತ್ತಿನಮೇಲೆ ರೂಂನಲ್ಲಿ ಮಲಗಿದ್ದಾನೆ, ಅದೇನೋ ಚಿಕನ್‌ಗುನ್ಯಾವಂತೆ, ಹೇಳಿದ್ದು ಕೇಳೋದಿಲ್ಲಾ ಬೈಕು ಮುಕಳಿಗೆ ಹಾಕ್ಕೊಂಡು ತಿರಗ್ತಾನೆ ಕಂಡಿದ್ದೆಲ್ಲಾ ತಿಂತಾನೆ ಎಂದು ಅದ್ಯಾವುದೋ ತಿನ್ನಬಾರದ್ದು ತಿಂದು, ತಿರುಗಬಾರದ ಕಡೆ ಹೋಗಿ ಖಾಯಿಲೆ ಬಂದಿದೆ ಎನ್ನುವಂತೆ ಹೇಳಿದರು.
ಯಾವಾಗಿನಿಂದ ಜ್ವರ ಬಂತು?
ನಿನ್ನೆ ರಾತ್ರಿಯಿಂದ ಜೋರಾಗಿದೆ, ಕಾಲು ಮಂಡಿಯೆಲ್ಲಾ ನೋವಂತೆ, ನಡೆಯಲೂ ಆಗುವುದಿಲ್ಲ ಅಂತ ಅವನ ತಾಯಿ ಹತ್ರ ಹೇಳ್ತಿದ್ದ, ನನ್ನತ್ರ ಎಲ್ಲಾ ಹೇಳ್ತಾನಾ ಎಂತು? ಆ ಖಾಯಿಲೆನಾದ್ರೂ ನಮ್ಮನೇನೆ ಹುಡ್ಕೊಂಡು ಬರ‍್ತದೆ, ಇಲ್ಲೇನೂ ಕೋಳೀನೂ ಇಲ್ಲ ತಿನ್ನೋರು ಇಲ್ಲ ಅದು ಹೆಂಗೆ ಬರುತ್ತೋ
ಚಿಕೂನ್‌ಗುನ್ಯಾ ಎನ್ನುವುದನ್ನು ಚಿಕನ್‌ಗುನ್ಯಾ ಎಂದು ತಪ್ಪಾಗಿ ಅರ್ಥಮಾಡಿಕೊಂಡ ಅವರು ಇದು ಕೋಳಿಯಿಂದ ಬಂದಿದೆ ಎಂದು ತಿಳಿದು, ಅಪ್ಪಟ ಬ್ರಾಹ್ಮಣರ ಮನೆಯ ಮಗನಿಗೆ ಈ ಖಾಯಿಲೆ ಬಂದಿರುವ ಹಿಂದಿನ ಗುಟ್ಟೇನು, ಅದರರ್ಥ ತಮ್ಮ ಮಗನೇನಾದರೂ ಕೋಳಿಗೀಳಿ ಶುರುಮಾಡಿಕೊಂಡುಬಿಟ್ಟಿದ್ದಾನಾ! ಎಂಬ ಸಂಶಯ ಉಂಟಾಗಿ ನನ್ನಲ್ಲಿ ಅದರ ಬಗ್ಗೆ ಮಾಹಿತಿ ಸಿಗಬಹುದೆಂದು ಅಂದಾಜು ಮಾಡಿ ಕೇಳಿದರು.
ಅದು ಚಿಕನ್‌ಗುನ್ಯಾ ಅಲ್ಲ ಚಿಕೂನ್‌ಗುನ್ಯಾ. ಚಿಕೂನ್ ಎಂಬ ಹಳ್ಳಿಯಲ್ಲಿ ಆ ತರಹದ ಜ್ವರ ಮೊದಲು ಕಾಣಿಸಿಕೊಂಡಿರುವುದರಿಂದ ಮತ್ತು ಕೈಕಾಲುಗಳ ಸಂದುಗಳೆಲ್ಲಾ ಬಾತುಕೊಂಡು ವಿಪರೀತ ನೋವು ಆಗುವುದರಿಂದ ಚಿಕೂನ್‌ಗುನ್ಯಾ ಎಂದು ಕರೆಯುತ್ತಾರೆ ಅದು ಏಡಿಸ್ ಈಜಿಪ್ತ್ ಅನ್ನೋ ಸೊಳ್ಳೆಯ ಮುಖಾಂತರ ಹರಡುತ್ತೆ. ಕೋಳಿಗೂ ನಾವು ತಿನ್ನುವ ಆಹಾರಕ್ಕೂ, ನಮ್ಮ ತಿರುಗಾಟಕ್ಕೂ, ಚಿಕೂನ್‌ಗುನ್ಯಾ ಜ್ವರಕ್ಕೂ ಯಾವುದೇ ಸಂಬಂಧವಿಲ್ಲ. ಸೊಳ್ಳೆಯ ನಾಶಕ್ಕೆ ಮನೆಯ ಸುತ್ತ ಮೊನ್ನೆ ಆಸ್ಪತ್ರೆಯವರು ಫಾಗಿಂಗ್ ಮಷೀನ್ ತಂದು ಬ್ಲೀಚಿಂಗ್ ಪೌಡರ್ ಹೊಡೆದರಲ್ಲ ಯಾವುದೋ ಪುಸ್ತಕ ಓದಿದ್ದರಲ್ಲಿ ನೆನಪಿದ್ದಷ್ಟನ್ನು ಹೇಳಿದೆ.
ಏಡ್ಸ್ ಅನ್ನೋ ಸೊಳ್ಳೆಯಿಂದ ಬರುತ್ತೋ ಮತ್ಯಾವುದರಿಂದ ಬರುತ್ತೋ ಒಟ್ಟಿನಲ್ಲಿ ನಮ್ಮ ಗ್ರಹಚಾರ, ಒಂದು ಹೊತ್ತಾದರೂ ಸಂಧ್ಯಾವಂದನೆ, ಗಾಯಿತ್ರಿ ಜಪ ಮಾಡಿ ಅಂದರೆ ಕೇಳೋದಿಲ್ಲ, ಖಾಯಿಲೆ ಬರದೆ ಇನ್ನೇನಾಗುತ್ತೆ ಎಂದು ಆರಿ ಹೋದ ಬೀಡಿಯನ್ನು ಮತ್ತೆ ಕಡ್ಡಿಗೀರಿ ಹಚ್ಚಿ ಗಂಟಲಾಳದಿಂದ ಕವಕವನೆ ಕೆಮ್ಮುತ್ತಾ ಹೇಳಿದರು.
ಮೂರು ಹೊತ್ತು ಸಂಧ್ಯಾವಂದನೆ ಜಪ ಮಾಡುವ ನೀವೇಕೆ ಆ ತರಹ ಕರುಳು ಕಿತ್ತುಹೋಗುವಂತ ಕೆಮ್ಮನ್ನು ಅನುಭವಿಸುತ್ತಿದ್ದೀರಿ ಅಂತ ಕೇಳೋಣ ಅಂದುಕೊಂಡೆ. ಆದರೆ ಅದು ವಿತಂಡವಾದ ಎಂದಾಗುತ್ತದೆ ಎಂದು ಸುಮ್ಮನುಳಿದೆ. ಅವರಿಗೆ ಮಗನಿಗೆ ದೇವರ ಬಗ್ಗೆ ಕಾಳಜಿಯಿಲ್ಲ ಎನ್ನುವುದನ್ನು ಸೂಚ್ಯವಾಗಿ ಹೇಳಬೇಕಾಗಿತ್ತು, ಮಾತು ಮುಂದುವರೆಸಿ ಪ್ರಯೋಜನವಿಲ್ಲವೆಂದು ಪ್ರಶಾಂತನನ್ನು ನೋಡಲು ಮಹಡಿಯ ಮೆಟ್ಟಿಲು ಹತ್ತಿದೆ.
ಪ್ರಶಾಂತನ ಪರಿಸ್ಥಿತಿ ತುಂಬಾ ಬಿಗಡಾಯಿಸಿತ್ತು. ಆದರೆ ಹತ್ತೆಂಟು ದಿನ ಜ್ವರ ಹಾಗು ಸಂದುನೋವನ್ನು ಅನುಭವಿಸುವುದನ್ನು ಬಿಟ್ಟರೆ ಅನ್ಯಮಾರ್ಗವಿರಲಿಲ್ಲ. ನಾನು ಜೇನನ್ನು ಪೆಟ್ಟಿಗೆಗೆ ಕೂಡುವ ವಿಚಾರವನ್ನು ಈ ಸಮಯದಲ್ಲಿ ಕೇಳಿದರೆ ಅದು ತೀರಾ ಸ್ವಾರ್ಥವಾಗುತ್ತದೆಯೇನೋ ಎಂದೆನಿಸಿ, ಸುಮ್ಮನೆ ಕುಶಲ ವಿಚಾರಿಸಿ, ಅವನನ್ನು ಆರೋಗ್ಯದ ಕಡೆ ಕಾಳಜಿ ಕೊಡುವಂತೆ ಹೇಳಿ ಹೊರಡಲನುವಾದೆ.
ಅಷ್ಟರಲ್ಲಿ ಪ್ರಶಾಂತ ಅವನಾಗಿಯೇ ನಾರಾಯಣ ಸ್ವಾಮಿಯ ಮನೆಯ ಸೊಪ್ಪಿನ ಬೆಟ್ಟದಲ್ಲಿ ಜೇನು ಇದೆಯಂತೆ ಎಂದು ಸುಡುತ್ತಿರುವ ಜ್ವರದ ಮಧ್ಯೆಯೂ ಕುತೂಹಲದಿಂದ ಕೇಳಿದ. ಜೇನಿನ ಹುಚ್ಚೇ ಹಾಗೆ, ಜೇನಿನ ಚಟ ಒಮ್ಮೆ ಅಂಟಿಸಿಕೊಂಡರೆ ಮಿಕ್ಕಿದ್ದನ್ನೆಲ್ಲಾ ಮರೆಸುವ ತಾಕತ್ತು ಅದಕ್ಕೆ ಇದೆ. ಅಂತಹ ಸುಡುವ ಜ್ವರದ ನೋವಿನ ನಡುವೆಯೂ ಅವನ ಕುತೂಹಲವನ್ನು ನೋಡಿದ ನನಗೆ ಅದು ಸತ್ಯ ಅಂತ ತೋರಿತು.
ಹೌದು ಪೆಟ್ಟಿಗೆಗೆ ಕೂಡಲು ನಿನ್ನನ್ನು ಕರೆದುಕೊಂಡು ಹೋಗೋಣ ಅಂತ ಬಂದೆ, ಆದರೆ ನಿನ್ನ ಪರಿಸ್ಥಿತಿ ಹೀಗಾಗಿದೆಯಲ್ಲ
ಸ್ವಲ್ಪ ಓಡಾಡುವಷ್ಟು ತಾಕತ್ತು ಇರುತ್ತಿದ್ದರೆ ಖಂಡಿತಾ ಬರುತ್ತಿದ್ದೆ, ಆದರೆ ಈಗ ಮಾತಾಡುವುದೇ ಕಷ್ಟವಾಗಿದೆ ಹಾಗಾಗಿ ಮತ್ಯಾರನ್ನಾದರೂ ಕರೆದುಕೊಂಡು ಹೋಗಿ ಹುಷಾರಿಯಿಂದ ಪೆಟ್ಟಿಗೆಯೊಳಗೆ ಕೂಡು ಎಂದ ಪ್ರಶಾಂತ.
ಜೇನಿನರಾಣಿ ಸುಲಭದಲ್ಲಿ ಕೈಗೆ ಸಿಗದಿದ್ದರೆ ಜೇನು ಕೂಡುವುದು ಹೇಗೆ?. ತೀವ್ರವಾಗಿ ಕಾಡುತ್ತಿದ್ದ ಪ್ರಶ್ನೆ ಕೇಳಿದೆ.
ಒಂದೆರಡು ತತ್ತಿಯನ್ನು ನಿಧಾನ ಹೊರತೆಗೆದು ಫ್ರೇಮಿಗೆ ಅದನ್ನು ಬಾಳೆಪಟ್ಟೆಯಿಂದ ಕಟ್ಟಿ ಪೆಟ್ಟಿಗೆಯೊಳಗೆ ಇಟ್ಟು ಮುಚ್ಚಳ ಹಾಕು, ನಂತರ ಜೇನುಗೂಡಿನ ಬಾಗಿಲ ಬಳಿ ಪೆಟ್ಟಿಗೆ ಹಿಡಿದುಕೊಂಡು ಪೊಟರೆಯೊಳಗಿನಿಂದ ತೊಪ್ಪೆ ತೊಪ್ಪೆ ಹುಳುಗಳನ್ನು ಹಿಡಿದು ಪೆಟ್ಟಿಗೆಯ ಬಾಗಿಲಿಗೆ ಬಿಡು. ಅವು ಕತ್ತಲೆಯನ್ನು ಅರಸುತ್ತಿರುತ್ತವೆಯಾದ್ದರಿಂದ ಹಾಗು ಒಳಗಿನಿಂದ ಬರುವ ತತ್ತಿಯ ವಾಸನೆ ಅವುಗಳಿಗೆ ತಿಳಿದು ಸರಸರನೆ ಪೆಟ್ಟಿಗೆಯ ಸಣ್ಣ ಬಾಗಿಲ ಮೂಲಕ ಒಳಸೇರುತ್ತವೆ. ಹಾಗೆ ಹುಳಗಳನ್ನು ಹಿಡಿದು ಬಿಡುವಾಗ ಅಕಸ್ಮಾತ್ ರಾಣಿ ಬಂದರೂ ಬಂದೀತು. ಬರದಿದ್ದರೆ ಜಾಸ್ತಿ ಸಂಖ್ಯೆಯ ಹುಳ ಪೆಟ್ಟಿಗೆಯೊಳಗೆ ಸೇರಿದ ನಂತರ ರಾಣಿನೊಣ ತಾನಾಗಿಯೇ ಬಂದು ಪೆಟ್ಟಿಗೆ ಸೇರಿಕೊಳ್ಳುತ್ತದೆ.
ಹುಳಗಳನ್ನು ಕೈಯಿಂದ ಹಿಡಿದಾಗ ಅವು ಹೊಡೆಯುವುದಿಲ್ಲವಾ?
ಮೊದಲು ಒಂದೆರಡು ಹುಳ ಹೊಡೆಯುತ್ತವೆ, ಒಂದು ಹುಳಕ್ಕೂ ಪೆಟ್ಟಾಗದಂತೆ ಅಂಗೈಯನ್ನು ಪೊಟರೆಯೊಳಗೆ ಹಾಕಿ ಬಹಳ ನಿಧಾನವಾಗಿ ಹೊರಗಡೆ ಬಿಟ್ಟರೆ ಹೊಡೆಯುವುದಿಲ್ಲ. ಅಷ್ಟಕ್ಕೂ ನಿನಗೆ ಹೊಸತಾದ್ದರಿಂದ ಹೆದರಿಕೆಯಿದ್ದರೆ ಸ್ಟೀಲ್ ಕೈಹುಟ್ಟನ್ನು ತೆಗೆದುಕೊಂಡು ಹೋಗು ಅದರ ಮೂಲಕ ಎಚ್ಚರಿಕೆಯಿಂದ ಹುಳಗಳನ್ನು ಹಿಡಿದು ಪೆಟ್ಟಿಗೆಯ ಬಾಗಿಲಲ್ಲಿ ಬಿಡು ಎಂದು ಹೇಳಿದ ಪ್ರಶಾಂತ. ಕಾಡುತ್ತಿದ್ದ ತೀವ್ರಜ್ವರದ ನಡುವೆಯೂ ನನ್ನ ಬೃಹದಾಕಾರದ ಸಮಸ್ಯೆಗೆ ಸುಲಭ ಪರಿಹಾರ ನೀಡಿದ ಪ್ರಶಾಂತನಿಗೆ ಹುಷಾರು ಹೇಳಿ, ಜೇನಿನ ಹೊಡೆತದಿಂದ ತಪ್ಪಿಸಿಕೊಳ್ಳಲು ಅವನ ಹೊಸ ವಿಧಾನವಾದ ಕೈಹುಟ್ಟು ಬಳಸಲು ಅವರ ಮನೆಯಲ್ಲಿಯೇ ಒಂದು ಸ್ಟೀಲ್ ಸೌಟನ್ನು ಇಸಿದುಕೊಂಡು, ಚೆನ್ನನೇನಾದರೂ ಸಿಕ್ಕಿದಲ್ಲಿ ಕರೆದುಕೊಂಡು ಹೋಗಿಬಿಡಬಹುದೆಂದು ಸಂಪಳ್ಳಿಗೆ ಹೋದೆ.
ಚೆನ್ನನ ಮನೆ ಬೀಗ ಹಾಕಿತ್ತು. ಚೆನ್ನ ಬಹುಶಃ ಕಾಡಿಗೆ ಹೋಗಿದ್ದಿರಬೇಕು, ಅವನ ಹೆಂಡತಿ ಮಗ ಕೂಲಿಯನ್ನು ಮುಗಿಸಿ ಇನ್ನೂ ಬಂದಿರಲಿಲ್ಲ. ಇನ್ನು ಹೆಚ್ಚು ಹೊತ್ತು ಕಾದು ಕುಳಿತರೆ ಅತ್ತ ಜೇನು ಪರಾರಿಯಾದರೆ ಅಪರೂಪದ ಅವಕಾಶವನ್ನು ನಾನಾಗಿಯೇ ಕಳೆದುಕೊಂಡಂತಾಗುತ್ತದೆ ಎಂದು ಚೆನ್ನನ ಪಕ್ಕದ ಮನೆಯ ಹೆಂಗಸಿನ ಬಳಿ ಚೆನ್ನ ಬಂದಕೂಡಲೇ ಕನ್ನರ್ಸೆ ನಾರಾಯಣಸ್ವಾಮಿಯ ಮನೆ ಹತ್ತಿರ ಬರಲು ನಾನು ಹೇಳಿದ್ದೇನೆಂದು ಹೇಳಲು ಹೇಳಿ ಹೊರಟೆ.

(ಮುಂದುವರೆಯುತ್ತದೆ)

Wednesday, September 1, 2010

ಒಂದು ಜೇನಿನ ಹಿಂದೆ -2


ಕರ್ಮಣ್ಯೇ.....
ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ ಮಾ ಕರ್ಮಫಲಹೇತುರ್ಭೂಃ ಮಾ ತೇ ಸಂಗೋಸ್ತ್ವಕರ್ಮಣಿ ಎಂದು ಶ್ರೀಕೃಷ್ಣ ಹೇಳಿದ್ದಾನೆ. ಅದಕ್ಕಾಗಿ ನಮ್ಮ ಕೆಲಸ ನಾವು ಮಾಡುತ್ತಿರಬೇಕು ಫಲವನ್ನು ಭಗವಂತನ ಇಚ್ಛೆಗೆ ಬಿಡಬೇಕು ಎಂಬ ಸಣ್ಣ ವೇದಾಂತದ ಭಾಷಣದೊಂದಿಗೆ ಕೆಲಸ ಆರಂಭಿಸುತ್ತೇವೆ. ಆದರೆ ಜೇನುಗಳಿಗೆ ಈ ಶ್ಲೋಕ ಗೊತ್ತಿಲ್ಲದೆಯೇ ಯಶಸ್ವಿಯಾಗಿ ಅನುಷ್ಠಾನಗೊಳಿಸುತ್ತಿವೆ. ಅದರ ಅರ್ಥ ಅವುಗಳು ಪ್ರಕೃತಿ ಸಹಜವಾದ ಜಗತ್ತಿನ ನಿಯಮವನ್ನು ಯಾವ ಪಠ್ಯಪುಸ್ತಕಗಳ ಸಹಾಯವಿಲ್ಲದೆ ಪಾಲಿಸುತ್ತಿವೆ, ಹಾಗಾಗಿ ಮಾನಸಿಕ ಗೊಂದಲದಲ್ಲಿರುವ ವ್ಯಕ್ತಿಗಳಿಗೆ ಸಹಜಜೀವನವನ್ನು ಅನುಸರಿಸಲು ಜೇನುಹುಳುಗಳ ಜೀವನ ಪದ್ಧತಿಯಿಂದ ಉತ್ತಮ ಮಾರ್ಗದರ್ಶನ ಸಿಗುತ್ತದೆ. ಜೇನಿನ ಸಂಪೂರ್ಣ ಜೀವನಕ್ರಮ ಅರಿಯಲು ಒಂದು ತುಡುವೆಜೇನಿನ ಸಂಸಾರವನ್ನು ಮನೆಯಬಳಿ ಪೆಟ್ಟಿಗೆಯಲ್ಲಿಟ್ಟು ಸಾಕಿಕೊಳ್ಳಬೇಕು. ದಿನನಿತ್ಯ ಪೆಟ್ಟಿಗೆಯ ಬಳಿಯ ನಮ್ಮ ಓಡಾಟ, ಜೇನಿನ ಸಂಸಾರದ ಒಡನಾಟ ಎಂತಹ ಮನುಷ್ಯರ ಸ್ವಭಾವವನ್ನೂ ಬದಲಾಯಿಸಿಬಿಡುತ್ತವೆ. ಧೈರ್ಯವಿಲ್ಲದವರಿಗೆ ಧೈರ್ಯವನ್ನು, ಶ್ರದ್ಧೆಯಿಲ್ಲದವರಿಗೆ ಶ್ರದ್ಧೆಯನ್ನು, ಜೀವನದ ಏಕತಾನತೆಯಿಂದ ಬೇಸತ್ತು ಜೀವನ ಎಂದರೆ ಇಷ್ಟೇನಾ.. ಎಂದು ಅಲವತ್ತುಕೊಳ್ಳುವವರಿಗೆ ಜೀವನೋತ್ಸಾಹವನ್ನು ತಂದುಕೊಡುವಲ್ಲಿ ಜೇನುಹುಳುಗಳು ಸಹಾಯಕವಾಗಬಲ್ಲದು ಎಂಬುದರಲ್ಲಿ ಎರಡು ಮಾತಿಲ್ಲ. ನಮ್ಮ ಕಿರುಬೆರಳಿನ ಉಗುರಿನ ಗಾತ್ರದ ಜೇನುಹುಳುಗಳು ನಮಗೇನು ಪಾಠ ಹೇಳಿಕೊಡಬಲ್ಲವು ಎಂಬ ತಾತ್ಸಾರದ ಪ್ರಶ್ನೆ ಹಲವರಿಗೆ ಬಂದೀತಾದರೂ, ಮನುಷ್ಯನ ಮಾನಸಿಕ ನೆಮ್ಮದಿಯ ಪಾಠಕ್ಕೆ ಜೇನು ಅಂತಲ್ಲ, ನಮ್ಮ ಸುತ್ತಮುತ್ತಲಿನ ಜೀವ ಜಗತ್ತನ್ನು ಕೂಲಂಕಷವಾಗಿ ನೋಡಿದರೆ ಈ ಭೂಮಿಯಲ್ಲಿ ಬದುಕಿ ಬಾಳುತ್ತಿರುವ ಪ್ರತಿಯೊಂದು ಜೀವಿಯಿಂದಲೂ ನಾವು ಕಲಿಯಬಹುದು. ಅವುಗಳಲ್ಲಿ ನಾವೇ ಪೆಟ್ಟಿಗೆಯಲ್ಲಿ ಸಾಕಿದ ಜೇನುಹುಳುಗಳಿಗೆ ಒಂದು ತೂಕ ಜಾಸ್ತಿ ಹೆಗ್ಗಳಿಕೆ ನೀಡಬಹುದು ಕಾರಣ, ಅವುಗಳ ಜೀವನಕ್ರಮವು ಮನುಷ್ಯನ ಜೀವನಕ್ರಮವನ್ನು ಹೋಲುತ್ತದೆ. ಹಾಗಾಗಿ ನಾವೇ ಒಂದು ಜೇನು ಸಂಸಾರ ಸಾಕಿಕೊಂಡರೆ ಅವುಗಳನ್ನು ಸುಲಭವಾಗಿ ಅಭ್ಯಸಿಸಬಹುದು, ಜತೆಯಲ್ಲಿ ಅವು ನಮ್ಮ ದೇಹಕ್ಕೆ ಬೇಕಾಗುವ ಔಷಧೀಯ ಗುಣಗಳುಳ್ಳ ಸ್ವಾದಿಷ್ಟ ತುಪ್ಪವನ್ನು ನೀಡುವುದರಿಂದ ಮಾನಸಿಕವಾಗಿ ನೆಮ್ಮದಿಯಾಗಿ ಬಾಳಿ ಬದುಕುವ ಜೀವನದ ಪಾಠ ಹೇಳಿಕೊಡುತ್ತವೆ. ಕಲಿಯುವ ಆಸಕ್ತಿ, ಮನಸ್ಸು ಇರಬೇಕಷ್ಟೆ. ಅವುಗಳು ಕಲಿಸುವ ಜೀವನದ ಪಾಠಗಳನ್ನು ಮನುಷ್ಯರಿಂದ ಕಲಿಯಬೇಕಾದಲ್ಲಿ ಅದಕ್ಕೆ ಪಿಂಡಿಗಟ್ಟಲೆ ಹಣವನ್ನು ಕಕ್ಕಬೇಕಾದೀತು.
ಜೇನಿನ ಕುರಿತಾದ ಹೊಸತಾದ ವಿಚಾರಗಳನ್ನು ಆನಂದರಾಮ ಶಾಸ್ತ್ರಿ ಹೇಳುತ್ತಿದ್ದರೆ ನಾನು ಬಿಟ್ಟ ಬಾಯಿಬಿಟ್ಟುಕೊಂಡು ಅವನನ್ನೇ ನೋಡುತ್ತಿದ್ದೆ. ಇದೆಂತಹ ವಿಚಿತ್ರ ! ಒಂದು ಸಣ್ಣ ಜೇನುಹುಳಕ್ಕೂ ಈ ಗಾತ್ರದ ಮನುಷ್ಯನಿಗೂ ಎತ್ತಣದೆತ್ತಣ ಸಂಬಂಧ, ನಾವು ಅವುಗಳಿಂದ ಕಲಿಯಬೇಕಾದ್ದು ಇದೆ ಎನ್ನುವ ಮಾತುಗಳು ನನಗೆ ಮೊದಲು ಪೇಲವವಾಗಿ ಕಂಡರೂ,
ಆತನ ಸ್ಪಷ್ಟವಾದ ಹಾಗೂ ಖಚಿತವಾದ ನಿಲುವಿನ ಹೋಲಿಕೆಗಳು ನನ್ನನ್ನು ಆಕರ್ಷಿಸತೊಡಗಿತು. ಜೊತೆಯಲ್ಲಿ ನನ್ನ ಆಸಕ್ತಿಯ ವಿಚಾರ ಇವನಿಗೆ ಅದು ಹೇಗೆ ತಿಳಿಯಿತು ಎಂದು ಆಶ್ಚರ್ಯವಾಗುತ್ತಿತ್ತು. ಕಾರಣ ನನಗೆ ಆತ ಅಕಸ್ಮಾತ್ತಾಗಿ ಘಂಟೆಯ ಹಿಂದಷ್ಟೇ ಪರಿಚಯವಾಗಿದ್ದ. ತಾಳಗುಪ್ಪದ ಹೆಗಡೆಯವರು ತಾವು ಬೆಳ್ಳೂರು ಆಂಜನೇಯನ ದೇವಸ್ಥಾನಕ್ಕೆ ಹೋಗಬೇಕಿರುವುದರಿಂದ ಬೆಳಿಗಿನ ಜಾವ ನಾಲ್ಕುಗಂಟೆಗೆ ಕಾರು ತೆಗೆದುಕೊಂಡು ಬಾ ಎಂದು ಹೇಳಿದ್ದರು. ಬೆಳಿಗ್ಗೆ ಸರಿಯಾದ ಸಮಯಕ್ಕೆ ಹೊರಟು ಆರುವರೆಗೆಲ್ಲಾ ಬೆಳ್ಳೂರು ತಲುಪಿದ್ದೆವು.
ದೇವಸ್ಥಾನದಲ್ಲಿನ ಭಟ್ಟರ ಮೈಮೇಲೆ ಆಂಜನೇಯ ಅವತರಿಸಿ ಹೇಳಿಕೆ ನೀಡಲು ಮಧ್ಯಾಹ್ನ ಹನ್ನೊಂದು ಗಂಟೆಯವರೆಗೆ ನಾವು ಕಾಯಬೇಕೆಂದು ತಿಳಿಯಿತು. ಅಲ್ಲಿ ನನಗೆ ಮಾಡಲು ಬೇರೆ ಕೆಲಸವಿರಲಿಲ್ಲ. ದೇವರು ಮೈಮೇಲೆ ಬರುವುದನ್ನು ನೋಡಲು ಕುತೂಹಲ ಇತ್ತಾದರೂ ಅದಕ್ಕೆ ಇನ್ನೂ ಎರಡು ತಾಸು ಕಾಯಬೇಕಾಗಿತ್ತು. ಹಾಗಾಗಿ ಬೆಳ್ಳೂರಿನಿಂದ ಗೇರುಸೊಪ್ಪಕ್ಕೆ ಹೋಗಿ ಕೆ.ಪಿ.ಸಿ.ಕ್ಯಾಂಟಿನ್ನಿನಲ್ಲಿ ಇಡ್ಲಿ ತಿಂದು ಬರೋಣ ಎಂದು ಕಾರು ತೆಗೆದುಕೊಂಡು ಹೋದೆ. ಅಲ್ಲಿ ಗಡದ್ದಾಗಿ ಹೊಟ್ಟೆಬಿರಿ ತಿಂಡಿ ತಿಂದು ವಾಪಾಸು ಹೊರಡುವಾಗ ಆತ ನನ್ನ ಬಳಿ ಬಂದು ತಮ್ಮ ಕಾರು ಬೆಳ್ಳೂರಿಗೆ ಹೋಗುತ್ತಾ? ನಾನು ಕಾರಿನಲ್ಲಿ ಬರಬಹುದಾ? ಎಂದು ಕೇಳಿದ. ಸ್ವಚ್ಛವಾದ ಬಿಳಿವಸ್ತ್ರ ಧರಿಸಿದ್ದ ಆತನ ಮುಖದಲ್ಲಿ ವ್ಯಕ್ತಪಡಿಸಲು ಬಾರದ ಒಂದು ಪ್ರಭಾವವಿತ್ತು. ಅವನ ಕಣ್ಣುಗಳಲ್ಲಿ ಅದೇನೋ ಸೆಳೆತವಿತ್ತು. ನನಗೆ ಹೆಚ್ಚು ಹೊತ್ತು ಆತನ ಮುಖ ನೋಡಲಾಗಲಿಲ್ಲ. ಒಮ್ಮೊಮ್ಮೆ ಅವೆಲ್ಲಾ ಒಂದು ಭ್ರಮೆ ಎಂದೆನಿಸಿದರೂ ಆಕ್ಷಣದಲ್ಲಿ ನನಗೆ ಆ ಅನುಭವವಾಗಿತ್ತು. ಆತನ ಕೋರಿಕೆ ನಿರಾಕರಿಸದೆ ಅಥವಾ ಅದ್ಯಾವುದೋ ಒಂದು ನಿರಾಕರಿಸಲಾಗದ ಸೆಳತಕ್ಕೆ ಸಿಕ್ಕಿ ಆಯಿತು ಬನ್ನಿ ಎಂದು ಕಾರಿನ ಮುಂದಿನಬಾಗಿಲು ತೆಗೆದೆ. ಆದರೆ ಆತ ಅಲ್ಲಿ ಕುಳಿತುಕೊಳ್ಳದೆ ಅವನಾಗಿಯೇ ಹಿಂದಿನಬಾಗಿಲು ತೆರೆದುಕೊಂಡು ಕುಳಿತ.
ಆತನನ್ನು ಕಾರಿಗೆ ಹತ್ತಿಸಿಕೊಂಡಮೇಲೆ ನನ್ನ ಬಗ್ಗೆ ನನಗೆ ಆಶ್ಚರ್ಯವಾಯಿತು. ಕಾರಣ ಸಾಮಾನ್ಯವಾಗಿ ಅಪರಿಚಿತರನ್ನು ನನ್ನ ಕಾರಿನೊಳಕ್ಕೆ ಹತ್ತಿಸಿಕೊಳ್ಳುತ್ತಿರಲಿಲ್ಲ, ಒಂದೆರಡು ಬಾರಿ ಹಾಗೆ ಅಪರಿಚಿತರನ್ನು ಹತ್ತಿಸಿಕೊಂಡಿದ್ದರಿಂದ ಅತೀ ಕೆಟ್ಟ ಅನುಭವವಾಗಿತ್ತು. ಹಾಗಿದ್ದರೂ ನಾನು ಆತ ಕೇಳಿದ ತಕ್ಷಣ ಒಂದು ಕ್ಷಣವೂ ಯೋಚಿಸದೇ ಆಯಿತು ಎಂದಿದ್ದು ಹೇಗೆ? ಆದರೆ ಉತ್ತರ ಸಿಗದಿದ್ದರಿಂದ ಸುಮ್ಮನುಳಿದೆ.
ಸ್ವಲ್ಪ ದೂರ ಕಾರಿನಲ್ಲಿ ಸಾಗುತ್ತಿರುವಷ್ಟರಲ್ಲಿ ನನಗೆ ಆತನ ಹೆಸರು, ಊರು ಕೇಳಬೇಕಿತ್ತು ಅಂತ ಅನಿಸಿತು. ಹಾಗೆ ಅನ್ನಿಸಿದ ಕೂಡಲೆ ಹೆಸರು ಕೇಳಲು ಅವನತ್ತ ತಿರುಗಿದೆ, ಅಷ್ಟರಲ್ಲಿ ಆತ ಗಂಭೀರವಾಗಿ ನನ್ನ ಪ್ರಶ್ನೆ ಮೊದಲೆ ತಿಳಿದವನಂತೆ ನನ್ನ ಹೆಸರು ಆನಂದರಾಮಶಾಸ್ತ್ರಿ, ನನ್ನ ಹುಟ್ಟೂರು ಹಳ್ಳಿಕೇರಿ ಎಂದು ಹೇಳಿ ಮುಗುಳ್ನಕ್ಕ. ನನಗೆ ಆಗ ಮಾತ್ರ ಈತ ಏನೋ ವಿಶೇಷ ಶಕ್ತಿಯಿರುವ ಮನುಷ್ಯ ಎಂದೆನಿಸಿತು. ಮರುಕ್ಷಣ, ಅಲ್ಲ ಇದು ಕಾಕತಾಳೀಯ ಸಾಮಾನ್ಯವಾಗಿ ಪರಸ್ಪರ ಪರಿಚಯಕ್ಕಾಗಿ ಎಲ್ಲರೂ ಅನುಸರಿಸುವ ವಿಧಾನ ಎಂದು
ಸಮಾಧಾನ ಪಟ್ಟುಕೊಂಡೆ. ಅಂತಹಾ ವಿಶೇಷಶಕ್ತಿ ಅವನಲ್ಲಿ ಇದ್ದಿದ್ದೇ ಹೌದಾಗಿದ್ದರೆ ಆತ ಬೆಳ್ಳೂರಿನ ಆಂಜನೇಯ ದೇವಸ್ಥಾನಕ್ಕೆ ಹೇಳಿಕೆಯ ಮೂಲಕ ಪರಿಹಾರ ಕಂಡುಕೊಳ್ಳಲು ಸಮಸ್ಯೆ ಹೊತ್ತುಕೊಂಡು ಯಾಕೆ ಬರುತ್ತಿದ್ದ ಎಂದೆನಿಸಿತು. ಕಾರಿನಲ್ಲಿ ಕುಳಿತ ಆತ ತನ್ನ ಹೆಸರನ್ನು ಆನಂದರಾಮಶಾಸ್ತ್ರಿ ಎಂದು ಹೇಳಿ ಸುಮ್ಮನುಳಿದ. ಆತ ನನ್ನ ಹೆಸರನ್ನು ಕೇಳಲಿಲ್ಲ ಹಾಗಾಗಿ ನಾನೂ ಹೇಳದೆ ಸುಮ್ಮನುಳಿದೆ.
ಕಾರಿನಿಂದ ಇಳಿದ ಆತ ಒಂದು ಮುಗುಳ್ನಕ್ಕು ದೇವಸ್ಥಾನದೊಳಗೆ ಹೊರಟುಹೋದ. ನಾನು ಕೂಡ ಕಾರನ್ನು ಅರಳಿಮರದ ನೆರಳಿನಲ್ಲಿ ನಿಲ್ಲಿಸಿ ದೇವಸ್ಥಾನ ಪ್ರವೇಶಿಸಿದೆ.
ಆಂಜನೇಯನ ದರ್ಶನಕ್ಕೆ ನೂರಾರು ಜನರು ಸೇರಿದ್ದರು. ಭಟ್ಟರ ಮೈಮೇಲೆ ಅವತರಿಸಿದ ಆಂಜನೇಯ ಭಕ್ತರ ಸಮಸ್ಯೆಗೆ ಪರಿಹಾರ ಸೂಚಿಸುತ್ತಿದ್ದ. ಗರ್ಭಗುಡಿಯ ಹೊರಗಡೆ ಜಗುಲಿಯಲ್ಲಿ ನೂರಾರು ಜನರು ಭಯಭಕ್ತಿಯಿಂದ ತಮ್ಮ ಸರದಿಗಾಗಿ ಕಾಯುತ್ತಾ ಕುಳಿತಿದ್ದರು. ಒಳಗಡೆ ಆಂಜನೇಯ ಮೈಮೇಲೆ ಬಂದ ಭಟ್ಟರನ್ನು ಗಟ್ಟಿಮುಟ್ಟಾದ ಎರಡು ಜನ ಹಿಡಿದುಕೊಂಡಿದ್ದರು. ಅವರನ್ನೂ ಜಗ್ಗಿಕೊಂಡು ಭಟ್ಟರು ಹಾರಿ ಹಾರಿ ಕುಣಿದು ಕುಪ್ಪಳಿಸಿ,ಏನೋ ಇಂಥಾ ಸಮಸ್ಯೆ ಇಟ್ಟುಕೊಂಡು, ಇಷ್ಟು ದಿವಸದ ಮೇಲೆ ಬಂದಿದ್ದೀಯಲ್ಲ, ಆಗ್ಲಿ ನೀನೇನು ಭಯಪಡಬೇಡ ನಿನಗೆ ನನ್ನ ಆಶೀರ್ವಾದ ಇದೆ. ಕೋರ್ಟುಕೇಸು ನಿನ್ನಂತಲೇ ಆಗುತ್ತೆ ಹೋಗು, ತೆಗೆದುಕೋ ಪ್ರಸಾದ ಎಂದು ಪಕ್ಕದಲ್ಲಿದ್ದ ತಾಮ್ರದ ಚೊಂಬಿನಿಂದ ಅವನ ಮೈಮೇಲೆ ನೀರನ್ನು ಚಿಮುಕಿಸಿ, ತೆಂಗಿನ ಕಾಯಿ ಕೊಡುತ್ತಿದ್ದರು. ಬಹುಶಃ ಆ ಭಕ್ತ ತನ್ನ ವಕೀಲರು ಇದೇ ಮಾತನ್ನು ಹೇಳಿದರೂ ನಂಬುತ್ತಿರಲಿಲ್ಲವೇನೋ, ಅಲ್ಲಿಯೇ ಕೇಸು ಗೆದ್ದ ಮುಖಭಾವದೊಂದಿಗೆ ಪ್ರಸಾದವನ್ನು ಕಣ್ಣಿಗೊತ್ತಿಕೊಂಡು ಹೊರಗಡೆ ಬಂದ. ನಂತರ ಮತ್ತೊಬ್ಬ ಭಕ್ತನ ಹೆಸರನ್ನು ಕೂಗಲಾಯಿತು. ಆತ ಬರುವ ಅಲ್ಪವಿರಾಮದ ವೇಳೆಯಲ್ಲಿ ಆಂಜನೇಯನ ಅವತಾರಿ ಭಟ್ಟರು ಬಾಯಿಯಲ್ಲಿ ಇಡೀ ಬಾಳೆಗೊನೆ ಕಚ್ಚಿ ಎಳೆದಾಡುತ್ತಾ, ಒಮ್ಮೆ ಹಾರಿ ಕುಣಿದು ಕುಪ್ಪಳಿಸಿದರು. ಹೀಗೆ ಒಬ್ಬರ ನಂತರ ಮತ್ತೊಬ್ಬ ಭಕ್ತರ ನಿತ್ಯ ಜೀವನದ ಸಮಸ್ಯೆಗಳಿಗೆ ಹಾಗು ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದರು. ಅದನ್ನೇ ನೋಡುತ್ತಿದ್ದ ನನಗೆ ಇದು ದೇವರ ಅವತಾರವಲ್ಲ ಮಂಗಚೇಷ್ಟೆ ಎಂದು ಒಮ್ಮೆ ಅನಿಸಿತಾದರೂ ಮರುಕ್ಷಣ ನನಗೆ ಜೀವನದಲ್ಲಿ ಬಗೆಹರಿಸಲಾರದ ಸಮಸ್ಯೆ ಇಲ್ಲದಿರುವುದೂ ಹಾಗೆ ಅನ್ನಿಸಲು ಕಾರಣವಿರಬಹುದು ಎಂದೆನಿಸಿತು. ಪರಿಹರಿಸಲಾಗದ ಸಮಸ್ಯೆಗಳು ಮನುಷ್ಯನಿಗೆ ಬಂದಾಗ ಇಂತಹ ದೇವರುಗಳ ಸಹಾಯ ಬೇಕಾಗಬಹುದೇನೊ? ಯಾವುದನ್ನು ನಂಬದಿದ್ದರೂ ಹತ್ತೆಂಟು ತಾಸು ಕುಣಿದು ಕುಪ್ಪಳಿಸುತ್ತಾ ಹಲ್ಲಿನಿಂದ ಬಾಳೆಗೊನೆ ಜಗ್ಗಾಡುವುದನ್ನು ನೋಡಿದರೆ ನಾಸ್ತಿಕನೂ ದೇವರ ಬಗ್ಗೆ ನಂಬಲು ಆರಂಭಿಸಿಬಿಡಬಹುದಿತ್ತು ಎಂದು ಯೋಚಿಸುತ್ತಾ ಅಲ್ಲಿಂದ ಹೊರಗಡೆ ಬಂದು ಸುತ್ತಾಡುತ್ತಾ ದೇವಸ್ಥಾನದ ಕೆಳಗಡೆ ತೋಟದ ಕಡೆ ಸಾಗಿದ್ದ ದಾರಿಗೆ ಹೊರಳಿದೆ.
ದೇವಸ್ಥಾನದಿಂದ ತೋಟಕ್ಕೆ ಸಾಗುವ ದಾರಿಯಲ್ಲಿ ಬೃಹತ್ತಾದ ನಂದಿಮರದಲ್ಲೊಂದು ಹೆಜ್ಜೇನು ಗೂಡುಕಟ್ಟಿತ್ತು. ಹೆಜ್ಜೇನು ಕಂಡೊಡನೆ ಪಟಾಕಿನಾರಾಯಣ ನೆನಪಿಗೆ ಬಂದ. ಅಂದು ನಾರಾಯಣನೂ ಸೇರಿದಂತೆ ನಮ್ಮೆಲ್ಲರ ಮುಖವನ್ನು ಆಂಜನೇಯನ ದವಡೆ ತರಹ ಮಾಡಿದ್ದ ಹೆಜ್ಜೇನು ಇಂದು ಮನಸ್ಸು ಮಾಡಿದರೆ ದೇವಸ್ಥಾನದಲ್ಲಿ ಇದ್ದ ಎಲ್ಲರ ಮೈಮೇಲೆ ಆಂಜನೇಯನನ್ನು ಅವತರಿಸಬಹುದಿತ್ತು. ಪಟಾಕಿಯನ್ನು ಕರೆತಂದಿದ್ದರೆ ಆತ ಇದ್ಯಾವ ಮಹಾ ಈಗ ಓಡಿಸ್ತೆ ಕಾಣಿ ಎನ್ನುತ್ತಿದ್ದನೇನೋ ಎನಿಸಿ ನಗು ಬಂತು. ಅರ್ಧಗಂಟೆ ಹೆಜ್ಜೇನಿನ ಗೂಡನ್ನೇ ನೋಡುತ್ತಾ ಅಲ್ಲಿಯೇ ಕುಳಿತೆ. ನಂತರ ಅಲ್ಲಿಂದ ವಾಪಾಸು ದೇವಸ್ಥಾನಕ್ಕೆ ಹೊರಟಾಗ ಆತ ಕಾಣಿಸಿದ... ಆನಂದರಾಮ ಶಾಸ್ತ್ರಿ.
ದೇವಸ್ಥಾನದ ಕೆಳಭಾಗದಲ್ಲಿರುವ ಕಟ್ಟಡದಲ್ಲಿ ಬೋನಿನೊಳಗೆ ಕೂಡಿ ಹಾಕಿದ್ದ ಬಿಳಿಮಂಗನನ್ನು ಆಚೆ ಬಿಟ್ಟುಕೊಂಡು ಮೂಸಂಬಿ ಹಣ್ಣು ತಿನ್ನಲು ಕೊಟ್ಟು ಅದನ್ನು ನೋಡುತ್ತಾ ನಿಂತಿದ್ದ. ನನ್ನನ್ನು ನೋಡಿದವನು ಏಕಾಏಕಿ ಕರ್ಮಣ್ಯೇವಾಧಿಕಾರಸ್ತೇ... ಎಂದು ಜೇನಿನ ಜೀವನಕ್ಕೂ ಮನುಷ್ಯರ ಬಾಳಿಗೂ ತಾಳೆಮಾಡಿ ವೇದಾಂತ ಹೇಳತೊಡಗಿದ. ಆತನಿಗೆ ಮಾನವಾತೀತಶಕ್ತಿ ಏನಾದರೂ ಇರಬಹುದಾ ಎಂದು ನನಗನ್ನಿಸಿದ್ದು ಆವಾಗಲೇ. ನಾನು ಅವನಿಗೆ ಒಂದೆರಡು ಘಂಟೆಯ ಹಿಂದಷ್ಟೆ ಪರಿಚಯವಾದವನಾದ್ದರಿಂದ, ನನ್ನ ಹೆಸರು, ಊರು, ದೆಸೆ ಯಾವುದೂ ಆತನಿಗೆ ಯಾವಕಾರಣಕ್ಕೂ ತಿಳಿಯಲು ಸಾಧ್ಯವಿರಲಿಲ್ಲ. ಅವುಗಳೇ ಗೊತ್ತಿರಲು ಸಾಧ್ಯವಿರಲಿಲ್ಲ ಎಂದಾದಮೇಲೆ ಇನ್ನು ನನ್ನ ಆಸಕ್ತಿ ತಿಳಿದಿರಲು ಹೇಗೆ ಸಾಧ್ಯ?, ಆದರೂ ನನ್ನ ಮನದಿಂಗಿತವನ್ನು ತಿಳಿದವನಂತೆ ಜೇನಿನ ಕುರಿತಾಗಿ ನನ್ನ ಬಳಿ ಮಾತನಾಡತೊಡಗಿದ್ದ. ಮತ್ತೊಬ್ಬರ ಮನದೊಳಗಿನ ಯೋಚನೆ ತಿಳಿಯುವ ವಿದ್ಯೆಗಳಿವೆ, ಮತ್ತೊಬ್ಬರಿಗೆ ನಮ್ಮ ಯೋಚನೆಯನ್ನು ತಲುಪಿಸಲು ಟೆಲಿಪತಿಯಿಂದ ಸಾಧ್ಯ ಎಂದು ನನ್ನ ಬಳಿ ಯಾರಾದರೂ ಹೇಳಿದಾಗ ನಾನು ಅವರನ್ನು ಅಪಹಾಸ್ಯ ಮಾಡುತ್ತಿದ್ದೆ. ಆದರೆ ಈಗ ಅವು ನನ್ನ ಅನುಭವಕ್ಕೆ ಬಂದಿದ್ದರಿಂದ ದಿಗ್ಭ್ರಾಂತನಾಗಿದ್ದೆ. ನನ್ನ ಸ್ಥಿತಿಯನ್ನು ಆತ ಗಮನಿಸದೆ ಜೇನು ಮತ್ತು ಜೀವನದ ವಿಚಾರ ಮುಂದುವರೆಸಿದ. ನನಗೆ ಮುಂದಿನ ಎರಡು ತಾಸುಗಳು ಕಳದದ್ದೇ ತಿಳಿಯಲಿಲ್ಲ.
* * * * *
ಜೇನ ಸುದ್ದಿ
ದಿನದಿಂದ ದಿನಕ್ಕೆ ಮಳೆ ಜಾಸ್ತಿಯಾಗುತ್ತಿತ್ತು. ಅದೇಕೊ ಮಳೆಗಾಲ ಈ ವರ್ಷ ಸುದೀರ್ಘ ಎಂದೆನಿಸತೊಡಗಿತ್ತು. ಅದಕ್ಕೆ ಮುಖ್ಯ ಕಾರಣ ನನ್ನ ಜೇನು ಸಾಕುವ ಹುಚ್ಚು. ಮಳೆಗಾಲ ಬೇಗನೆ ಮುಗಿದರೆ ಚೆನ್ನನನ್ನು ಹಿಡಿದು ಜೇನನ್ನು ಪತ್ತೆ ಮಾಡಬಹುದಲ್ಲಾ ಎನ್ನುವ ಆತುರ. ಜೇನು ತುಪ್ಪ ಮಾರಾಟಮಾಡಿ ಬೇಕಾದಷ್ಟು ದುಡ್ಡು ಸಂಪಾದನೆ ಮಾಡಬಹುದು ಎನ್ನುವ ಗುರಿಯಿಂದ ಹೊರಟ ನನ್ನ ಹುಚ್ಚು ಈಗ ಜೇನಿನಲ್ಲಿ ಸಹಜ ನೆಮ್ಮದಿಯ ಜೀವನಕ್ಕೆ ಬೇಕಾಗುವ ಅಧ್ಯಾತ್ಮವನ್ನು ಹುಡುಕುವವರೆಗೂ ಮುಂದುವರೆದ ಕಾರಣ ಚಳಿಗಾಲದ ಆಗಮನವನ್ನು ಕಾತರದಿಂದ ಕಾಯುವಂತಾಗಿತ್ತು. ಆದರೆ ಕಾಲವೆನ್ನುವುದು ನಮ್ಮ ಕೈಯಲ್ಲಿ ಇಲ್ಲವಲ್ಲ, ಕಾಯುವುದು ಅನಿವಾರ್ಯ ಎಂದು ಸುಮ್ಮನುಳಿದಿದ್ದೆ. ಅಷ್ಟರಲ್ಲಿ ನನಗೆ ಪ್ರಿಯವಾದ ಸುದ್ದಿಯೊಂದು ಸಿಕ್ಕಿತು.
ಈ ನಡುವೆ ನಾನು ಜೇನು ಸಾಕುವುದರ ಬಗ್ಗೆ ಹೆಚ್ಚು ಮಾತನಾಡಲು ಆರಂಭಿಸಿದ್ದೆ. ಮೊದಲೆ ಹೇಳಿಕೇಳಿ ವಾಚಾಳಿಯಾಗಿದ್ದ ನನ್ನ ಮೇಲೆ ಹಿಂದಿನಿಂದ ಕೊರೆತೇಶ್ವರ ಎಂದು ಆಡಿಕೊಳ್ಳುತ್ತಿದ್ದರು. ಆದರೆ ಓಡಾಡಲು ಕಾರು, ಕೈಯಲ್ಲಿ ಮೊಬೈಲ್, ಮನೆಯಲ್ಲಿ ಕಂಪ್ಯೂಟರ್, ಡಿಜಿಟಲ್‌ಕ್ಯಾಮೆರಾ ಹಾಗು ಪತ್ರಿಕೆಗಳಲ್ಲಿ ಅಲ್ಲೊಂದು ಇಲ್ಲೊಂದು ಪ್ರಕಟವಾಗುತ್ತಿದ್ದ ಲೇಖನಗಳಿಂದಾಗಿ ಈತ ಬಹಳ ದುಡ್ಡಿದ್ದವ ಅಂದುಕೊಂಡು ಎದುರುಗಡೆಯಿಂದ ಏನೂ ಅನ್ನುತ್ತಿರಲಿಲ್ಲ. ದುಡ್ಡೆಲ್ಲವೂ ಇಂತಹ ಬೇಡದ್ದಕ್ಕೆ ಖಾಲಿಯಾಗಿದೆ ಎಂದು ತಿಳಿದಿದ್ದರೆ ಎದುರೇ ಅನ್ನುತ್ತಿದ್ದರೇನೋ! ಅದೇನೆ ಇರಲಿ ನನ್ನ ಜೇನಿನ ಹುಚ್ಚು ಊರಲ್ಲೆಲ್ಲಾ ಸುದ್ದಿಯಾಗಿದ್ದ ಕಾರಣ ಮತ್ತು ನಾನು ಅದರ ಬಗ್ಗೆ ಹೆಚ್ಚು ಮಾತನಾಡುತ್ತಿದ್ದುದರಿಂದ ನನ್ನಿಂದ ತಪ್ಪಿಸಿಕೊಳ್ಳಲು ನೋಡುತ್ತಿದ್ದುದು ನನಗೆ ತಿಳಿಯುತ್ತಿತ್ತು. ನಾನು ಗೊತ್ತಾಗಿಯೂ ಗೊತ್ತಾಗದವನಂತೆ ಸುಮ್ಮನುಳಿಯುತ್ತಿದ್ದೆ. ನನ್ನ ಜೇನು ಸಾಕುವ ಹುಚ್ಚು ಊರೆಲ್ಲಾ ಸುದ್ದಿಯಾಗಿ ಹಿಂದಿನಿಂದ ಆಡಿಕೊಳ್ಳುವ ವಿಷಯವಾದರೂ ಅದರಿಂದ ಒಂದು ಮಹದುಪಕಾರವಾಗಿತ್ತು. ಯಾರೇ ಜೇನು ಕಂಡರೂ ನನಗೆ ಸುದ್ದಿ ಮುಟ್ಟಿಸುತ್ತಿದ್ದರು.
ಅಂತಹ ಒಂದು ದಿನ, ಈ ಮಳೆಗಾಲದಲ್ಲಿ ಜೇನು ಸಿಕ್ಕುವುದೇ ಇಲ್ಲ ಎಂದುಕೊಂಡಿದ್ದ ನನಗೆ ಕನ್ನರ್ಸೆ ನಾರಾಯಣಸ್ವಾಮಿ ಫೋನ್‌ಮಾಡಿ ನಮ್ಮ ಮನೆಯ ಸೊಪ್ಪಿನ ಬೆಟ್ಟದಲ್ಲಿ ಒಂದು ಸಳ್ಳೆ ಮರ ಪಲ್ಟಿ ಹೊಡೆದಿದೆ ಅದರ ಪೊಟರೆಯಿಂದ ಜೇನು ಹುಳುಗಳು ಹಾರಾಡುತ್ತಿವೆ ಹಿಡಿಯುವುದಾದರೆ ಬೇಗ ಬಾ ಎಂದ. ನನಗೆ ನಿಧಿ ಸಿಕ್ಕಷ್ಟು ಸಂತೊಷವಾಯಿತು. ಲಗುಬಗೆಯಿಂದ ಜೇನನ್ನು ಕೂಡಲು ಒಂದು ಪೆಟ್ಟಿಗೆಯನ್ನು ನನ್ನ ತೊಂಬತ್ತೊಂದನೆ ಮಾಡೆಲ್ ಮಾರುತಿಯಲ್ಲಿ ಹೇರಿಕೊಂಡು ಹೊರಟೆ. ಕನ್ನರ್ಸೆ ಸ್ವಾಮಿಯ ತೋಟದ ಮೇಲ್ಭಾಗದಲ್ಲಿ ಹತ್ತಡಿ ಎತ್ತರದ ಸಳ್ಳೆ ಮರ ಮಗಚಿಕೊಂಡುಬಿದ್ದಿತ್ತು. ಮರದ ಅರ್ಧಭಾಗದಲ್ಲಿದ್ದ ಪೊಟರೆಯಿಂದ ಜೇನುಹುಳುಗಳು ಹಾರಾಟ ನಡೆಸುತ್ತಿದ್ದವು. ನಿಧಾನ ಹತ್ತಿರ ಹೋದೆ. ಪೊಟರೆಯೇನು ತೀರಾ ಆಳವಿರಲಿಲ್ಲ. ಹೊರಗಿನಿಂದಲೇ ಬಿಳಿ ಬಣ್ಣದ ಜೇನುತತ್ತಿ ಕಣ್ಣಿಗೆ ಕಾಣಿಸುತ್ತಿತ್ತು. ಹುಳ ಗಾಬರಿಯಾಗಿ ಹೊರಗಡೆ ಹಾರಾಡುತ್ತಿದ್ದುದರಿಂದ ತೀರಾ ಹತ್ತಿರ ಹೋಗಿ ಗೂಡನ್ನು ನೋಡುವಂತಿರಲಿಲ್ಲ. ಹುಳುಗಳು ಸ್ವಲ್ಪ ಶಾಂತವಾಗುವವರೆಗೆ ಕಾಯಬೇಕಾಗಿತ್ತು. ಅಲ್ಲಿಯವರೆಗೆ ಸುತ್ತಮುತ್ತಲಿನ ಜಾಗ ಚೊಕ್ಕಟ ಮಾಡಿಕೊಳ್ಳಲು, ಸುತ್ತಮುತ್ತಲಿನ ಮರಗಿಡಗಳ ಸೊಪ್ಪನ್ನು ಸವರಲು ಸ್ವಾಮಿಯ ಬಳಿ ಕತ್ತಿ ಇಸಿದುಕೊಂಡು ಎಡಗೈಯಲ್ಲಿ ಸಣ್ಣದಾಗಿದ್ದ ಅಕೇಶಿಯಾ ಗಿಡದ ಕೊಂಬೆ ಹಿಡಿದೆ.......ಒಮ್ಮೆಲೆ ಮೈಯೆಲ್ಲಾ ನಡುಗಿದಂತಾಗಿ ಇಡೀ ದೇಹ ಜುಂ ಎಂದಿತು. ಅಯ್ಯಮ್ಮಾ... ಎಂದು ಕೂಗಿಕೊಂಡೆ ನನಗೆ ಏನಾಗುತ್ತಿದೆ ಎಂದು ತಿಳಿಯುವುದರೊಳಗೆ ಕೈಯಲ್ಲಿದ್ದ ಕತ್ತಿ ಮಾರುದೂರ ಠಣಾರೆಂದು ಸದ್ದು ಮಾಡುತ್ತಾ ಹಾರಿ ಬಿತ್ತು. ದಿಢೀರನೆ ಆದ ಆಘಾತದಿಂದ ಚೇತರಿಸಿಕೊಳ್ಳಲು ಸ್ವಲ್ಪ ಸಮಯ ಹಿಡಿಯಿತು. ನಾನು ಕೂಗಿದ್ದನ್ನು ಕೇಳಿ ನನ್ನಿಂದ ಅನತಿ ದೂರದಲ್ಲಿದ್ದ ಸ್ವಾಮಿ ನನ್ನ ಬಳಿ ಓಡಿ ಬಂದ. ಅಷ್ಟೊತ್ತಿಗೆ ನಾನು ಸ್ವಲ್ಪ ಚೇತರಿಸಿಕೊಂಡಿದ್ದೆ. ಅಷ್ಟರಲ್ಲಿ ಆತನೂ ಅಯ್ಯಯ್ಯೋ ಕರೆಂಟು ಹೊಡಿತ್ರೋ ಎಂದು ಕೂಗುತ್ತಾ ಮಾರು ದೂರ ಹಾರಿದ. ಅವನು ಹಾಗೆ ಕೂಗಿದ್ದರಿಂದ ನನಗೂ ಹೊಡೆದದ್ದು ಕರೆಂಟು ಎಂದು ತಿಳಿಯಿತು. ನಾರಾಯಣಸ್ವಾಮಿ ಹಾರುವ ಗಡಿಬಿಡಿಯಲ್ಲಿ ಮರದ ಬೊಡ್ಡೆ ಕಾಲಿಗೆ ತಾಕಿ ದಢಾರನೆ ಮಗುಚಿ ಬಿದ್ದ. ನಾನು ಅವನು ಬಿದ್ದಲ್ಲಿಗೆ ಓಡಿದೆ. ಸಣ್ಣ ಪುಟ್ಟ ತರಚು ಗಾಯವನ್ನು ಹೊರತು ಪಡಿಸಿದರೆ ಅಂತಹಾ ದೊಡ್ಡ ಏಟು ಆಗಿರಲಿಲ್ಲ. ಜೇನು ಹಿಡಿದು ಪೆಟ್ಟಿಗೆ ಕೂಡಲು ಬಂದ ನಾವು ಇಬ್ಬರೂ ಸೇರಿ ಅಕೇಶಿಯಾ ಗಿಡ ಕರೆಂಟು ಹೊಡೆಯುವ ಕಾರಣ ಕಂಡು ಹಿಡಿಯಬೇಕಾಗಿತ್ತು. ಅದು ತಿಳಿಯದೆ ಜೇನಿನ ಸುದ್ದಿಗೆ ಹೋಗುವಂತಿರಲಿಲ್ಲ.
ನೇರವಾಗಿ ಕೆಳಮುಖ ತೋಟಕ್ಕೆ ಬೀಳಬೇಕಾಗಿದ್ದ ಸಳ್ಳೆ ಮರ ದೊಡ್ಡದಾದ ಕಲ್ಲು ಬಂಡೆ ಅಡ್ದಸಿಕ್ಕಿದ್ದರಿಂದ ತಿರುಗಿ ಸೊಪ್ಪಿನ ಬೆಟ್ಟದಲ್ಲಿಯೇ ಬಿದ್ದಿತ್ತು. ಉದ್ದವಾಗಿ ಬೆಳೆದ ಅಕೇಶಿಯಾ ಗಿಡದಮೇಲೆ ಸಳ್ಳೆ ಮರದ ಬಲವಾದ ಕೊಂಬೆ ಹೋಗಿ ಕುಳಿತಿದ್ದರಿಂದ ಬಳಲೆಯಾಗಿದ್ದ ಅಕೇಶಿಯಾದ ತುದಿ ಅಲ್ಲಿಯೇ ಮೇಲೆ ಹಾದು ಹೋಗಿದ್ದ ಹನ್ನೊಂದು ಕಿಲೋ ವ್ಯಾಟ್ ಸಾಮರ್ಥ್ಯದ ವಿದ್ಯುತ್ ತಂತಿಗೆ ತಾಗಿಕೊಂಡಿತ್ತು. ಮಳೆಗಾಲದಲ್ಲಿ ಪದೆ ಪದೆ ಸುಟ್ಟುಹೋಗುವ ಫ್ಯೂಸ್‌ತಂತಿಯನ್ನು ಬದಲಾಯಿಸಲು ಬರುವುದು ರಗಳೆ ಎಂದು ಲೈನ್‌ಮನ್ ದಪ್ಪನೆಯ ವೈರ್ ಸುತ್ತಿದ್ದ ಪರಿಣಾಮವಾಗಿ ಕರೆಂಟ್ ಅರ್ಥ್ ಆಗುತ್ತಿದ್ದರೂ ಫ್ಯೂಸ್ ಹೋಗಿರಲಿಲ್ಲ. ನಾವು ಜೇನು ಸಿಕ್ಕ ಸಂತೋಷದಲ್ಲಿ ಇದ್ಯಾವುದನ್ನೂ ಗಮನಿಸುವ ಸ್ಥಿತಿಯಲ್ಲಿ ಇರಲಿಲ್ಲ. ಹಾಗಾಗಿ ಕರೆಂಟ್ ನಮಗೆ ಹೊಡೆದಿತ್ತು. ಅದ್ಯಾವ ಪುಣ್ಯವೋ ನಾವು ಬದುಕುಳಿದದ್ದು. ಇನ್ನು ಜೇನನ್ನು ಪೆಟ್ಟಿಗೆಗೆ ಕೂಡಬೇಕಾದರೆ ಮೆಸ್ಕಾಂಗೆ ಫೋನ್‌ಮಾಡಿ ಕರೆಂಟ್ ತೆಗೆಸಬೇಕು. ಅದಕ್ಕೆ ಕನಿಷ್ಟವೆಂದರೂ ಇನ್ನು ಒಂದು ಘಂಟೆ ಬೇಕು. ಆಗಲೆ ಮಧ್ಯಾಹ್ನ ಹನ್ನೆರಡುವರೆ ಆಗಿತ್ತು. ಏನು ಮಾಡಬೇಕೆಂದು ತೋಚಲಿಲ್ಲ. ಅಷ್ಟರಲ್ಲಿ ಕರೆಂಟ್ ಷಾಕ್‌ನಿಂದ ಕಂಗೆಟ್ಟಿದ್ದ ಸ್ವಾಮಿ,
ಸಾಕು ಮನೆಗೆ ಹೋಗೋಣ ಜೇನೂ ಬೇಡ ಗೀನೂ ಬೇಡ, ಜೀವ ಇದ್ದರೆ ಜೇನುತುಪ್ಪ ಕೊಂಡು ತಿನ್ನಬಹುದು, ಅಷ್ಟಕ್ಕೂ ಮಿಕ್ಕಿ ಜೇನು ಹಿಡಿಯಲೇ ಬೇಕು ಎಂದಾದರೆ ಮಧ್ಯಾಹ್ನದ ಮೇಲೆ ಕರೆಂಟ್ ತೆಗಿಸಿಕೊಂಡು ಬಂದರಾಯಿತು ಈಗ ಹೋಗೋಣ ಬಾ ಎಂದು ಹೊರಟ.
ನನಗೆ ಬರಿಗೈಯಲ್ಲಿ ಮನೆಗೆ ಹೋಗಲು ಸುತಾರಾಂ ಇಷ್ಟವಿರಲಿಲ್ಲ. ಒಮ್ಮೆ ಜೇನು ಹಾರಾಡುತ್ತಿದ್ದ ಸಳ್ಳೆಮರದ ಪೊಟರೆಯತ್ತ ನೋಡಿದೆ. ಅವು ಶಾಂತವಾಗಿದ್ದವು. ಅಲ್ಲೊಂದು ಇಲ್ಲೊಂದು ಹುಳ ಹಾರಾಡುತ್ತಿತ್ತು. ಅಕಸ್ಮಾತ್ ನಾವು ಊಟ ಮಾಡಿ ಬರುವುದರೊಳಗೆ ಅವು ಹಾರಿಹೋದg ಎಂಬ ಸಂಶಯ ಕಾಡಿತು. ಆದರೆ ಅಲ್ಲಿ ಉತ್ತರಿಸಲು ಅನುಭವವಿರುವ ಮತ್ಯಾರೂ ಇಲ್ಲದ್ದರಿಂದ ಮನೆಗೆ ಹೊರಡುವುದು ಅನಿವಾರ್ಯವಾಗಿತ್ತು. ಊಟಮಾಡಿ ಚೆನ್ನನನ್ನೋ ಅಥವಾ ಪ್ರಶಾಂತನನ್ನೊ ಕರೆದುಕೊಂಡು ಬಂದರೆ ಆಯಿತೆಂದು ನಾರಾಯಣಸ್ವಾಮಿಯ ಜೊತೆಗೂಡಿದೆ. ಮನೆಗೆ ಹೊರಟಾಗ ನಾನು ಎಸೆದ ಕತ್ತಿಯ ನೆನಪಾಗಿ ವಾಪಾಸು ಹೋದೆ, ಅದು ಎಷ್ಟು ರಭಸದಿಂದ ಕೈಬಿಟ್ಟಿತ್ತೋ ಏನೋ ಎಷ್ಟು ಹುಡುಕಿದರೂ ಸಿಗಲಿಲ್ಲ. ಕುರುಚಲು ಗಿಡದ ಮರೆಯಲ್ಲಿ ಎಲ್ಲೋ ಕಣ್ಮರೆಯಾಗಿತ್ತು. ನಾರಾಯಣಸ್ವಾಮಿ ಕೈಯಲ್ಲಿ ಸೊಂಟ ನೀವಿಕೊಳ್ಳುತ್ತಾ ತನ್ನಷ್ಟಕ್ಕೆತಾನು ಅದೇನೋ ಗೊಣಗಿದ. ಕಂಡೋರಿಗೆ ಉಪಕಾರ ಅಂತಲೋ ಎನೋ ಅಂದಂತೆ ಕೇಳಿಸಿತು. ಬಹುಶಃ ನನಗೆ ಜೇನು ತೋರಿಸಲು ಹೋಗಿ ತಾನು ಪೆಟ್ಟುತಿನ್ನುವಂತಾಯಿತಲ್ಲ ಎಂದು ಬೇಸರಿಸಿಕೊಂಡನೇನೋ ಎಂದು ನನ್ನ ಜೇನಿನ ಹುಚ್ಚಿನಿಂದ ನೀನು ಪೆಟ್ಟು ತಿನ್ನುವಂತಾಯಿತಲ್ಲ ಛೆ ಎಂದು ಹೇಳಿದೆ. ಅದಕ್ಕೆ ಆತ ಹಾಗೆನಿಲ್ಲ ಬಿಡು ಇವೆಲ್ಲಾ ಮಾಮೂಲಿ, ನೀನು ಬೇಕಂತಲೇ ಮಾಡಿಲ್ಲವಲ್ಲ, ಸದ್ಯ ಇಷ್ಟರಲ್ಲೇ ಗ್ರಹಚಾರ ಹೋಯಿತು, ನನಗೆ ಅದಕ್ಕೇನು ಬೇಸರವಿಲ್ಲ ಬಿಡು, ಕತ್ತಿ ಸಿಗದಿದ್ದರೆ ಹೋಗಲಿ ಎಂದು ಹೇಳಿದ. ಉಪಚಾರಕ್ಕಾಗಿ ಹಾಗೇನೋ ಹೇಳಿದ, ಆದರೆ ಅವನ ಮುಖಚರ್ಯೆ ನನ್ನಮೇಲೆ ಆತ ಬೇಸರ ಮಾಡಿಕೊಂಡಂತೆ ನನಗೆ ಅನಿಸಿತು. ವಿನಾಕಾರಣ ಅವನಿಗೆ ತೊಂದರೆಕೊಟ್ಟೆನಲ್ಲಾ ಎಂದು ನನಗೆ ಬೇಸರವಾಗತೊಡಗಿತು. ಆವಾಗ ನನಗೆ ಆನಂದರಾಮ ಶಾಸ್ತ್ರಿ ನೆನಪಾದ.
* * * * *
ತ್ರಿಯಂಬಕಂ ಯಜಾಮಹೆ ಸುಗಂಧಿಂ ಪುಷ್ಠಿವರ್ಧನಂ ಊರ್ವಾರುಕಮಿವ ಬಂಧನಾತ್ ಮೃತ್ಯೋರ್ಮುಕ್ಷಿ ಯಮಾಮೃತಾತ್ ಈ ಶ್ಲೋಕ ಕೇಳಿದ್ದೀರಲ್ಲ?, ಶಾಸ್ತ್ರಿ ನನ್ನನ್ನು ಪ್ರಶ್ನಿಸಿದ್ದ.
ಹೌದು, ಬಹಳ ಹಿಂದೆ ಚಿಕ್ಕವನಿದ್ದಾಗ ಕೇಳಿ ಕಷ್ಟಪಟ್ಟು ಕಲಿತಿದ್ದೇನೆ
ಆದರೆ ನಾನು ಕಲಿತಿಲ್ಲ, ಆದರೂ ಇಂತಹಾ ಹಲವಾರು ಶ್ಲೋಕಗಳನ್ನು ಹೇಳಬಲ್ಲೆ ಎಂದ ಆನಂದರಾಮಶಾಸ್ತ್ರಿ. ನನಗೆ ಆತನ ಮಾತು ಒಗಟಾಗಿ ತೋಚಿತು. ಕಲಿತಿಲ್ಲ ಎನ್ನುತ್ತಾನೆ, ಆದರೆ ಅಸ್ಖಲಿತವಾಗಿ ಓತಪ್ರೋತವಾಗಿ ಶ್ಲೋಕ ಹೇಳುತ್ತಾನೆ, ಅದು ಹೇಗೆ ಸಾಧ್ಯ ಎಂದೆನಿಸಿ ಮುಗುಳ್ನಗುತ್ತಾ ಮತ್ತೆ ಶ್ಲೋಕ ಕಂಠಪಾಠ ಮಾಡದೆ ಅಷ್ಟೊಂದು ಸುಲಲಿತವಾಗಿ ಹೇಳಿದ ಪರಿ ಕುತೂಹಲದಿಂದ ಕೇಳಿದೆ.
ಶ್ಲೋಕ ಹೇಳಲು ಕಂಠಪಾಠವೇ ಆಗಬೇಕಾಗಿಲ್ಲ, ಹೊಸ ಹೊಸ ಸಿನಿಮಾ ಹಾಡುಗಳನ್ನು ಹಾದಿಹೋಕರೆಲ್ಲಾ ಹಾಡಿಕೊಳ್ಳುತ್ತಾ ಹೋಗುತ್ತಾರಲ್ಲ ಅವರೇನು ಅವುಗಳನ್ನು ಕಂಠಪಾಠ ಮಾಡುತ್ತಾರೆ ಎಂದುಕೊಂಡಿರಾ?, ಹಾಗೆನಿಲ್ಲಾ ಆಸಕ್ತಿಯಿಂದ ಒಂದೆರಡು ಬಾರಿಕೇಳಿರುತ್ತಾರೆ.
ಹಾಗಾದರೆ ನೀವೂ ಆ ಶ್ಲೋಕವನ್ನು ಸಿನಿಮಾದ ಹಾಡಿನಂತೆ ಆಸಕ್ತಿಯಿಂದ ಕೇಳಿದ್ದಕ್ಕೆ ಬಂತಾ?
ಇಲ್ಲ.... ಸಿನೆಮಾ ಹಾಡಿನಲ್ಲಿನ ರಾಗಗಳು ನಮ್ಮಲ್ಲಿ ಆಸಕ್ತಿಯನ್ನು ಮೂಡಿಸುತ್ತವೆ, ಆದರೆ ಶ್ಲೋಕಗಳ ಮೆಲೆ ಆಸಕ್ತಿ ಮೂಡುವುದು ಅಪರೂಪ
ಮತ್ತೆ?,
ನನ್ನ ಬಾಲ್ಯದಲ್ಲಿ ಅಜ್ಜ ದಿನನಿತ್ಯ ಇಂತಹಾ ಹಲವಾರು ಶ್ಲೋಕಗಳನ್ನು ತಮ್ಮಷ್ಟಕ್ಕೆ ಹೇಳುತ್ತಿದ್ದರು. ಅದು ಹಾಗೆಯೇ ನನ್ನ ಮಿದುಳಿನಲ್ಲಿ ತನ್ನಷ್ಟಕ್ಕೆ ಅಚ್ಚಾಯಿತು. ಅದು ನನಗೆ ಬೇಕಾ, ಶ್ಲೋಕಗಳ ಅವಶ್ಯಕತೆ ನನಗೆ ಇದೆಯಾ ಅಂತಲೂ ನನಗೆ ತಿಳಿಯದ ವಯಸ್ಸು ಅದು. ಆದರೆ ಈಗ ಶ್ಲೋಕಗಳ ಅವಶ್ಯಕತೆ ನನಗಿಲ್ಲ ಎಂದರೂ ನನ್ನಿಂದ ಅದನ್ನು ಮರೆತುಬಿಡಲು ಆಗುವುದಿಲ್ಲ. ಬಾಯಲ್ಲಿ ಹೇಳದೆ ಇರಬಹುದು, ಆದರೆ ಅಜ್ಜನ ನೆನಪಾದಾಗಲ್ಲೆಲ್ಲಾ ಶ್ಲೋಕಗಳನ್ನು ಮನಸ್ಸು ಗುಣುಗುಣಿಸಲು ಪ್ರಾರಂಭಿಸಿಬಿಡುತ್ತೆ. ಮನುಷ್ಯನಲ್ಲಿನ ಬೇಸರವೂ ಹಾಗೇನೆ.
ಪ್ರಪಂಚದ ಯಾವ ಜೀವಿಗಳಲ್ಲಿಯೂ ಇರದ ಮನುಷ್ಯನಲ್ಲಿ ಮಾತ್ರ ನೆಲೆಗೊಂಡಿರುವ ಮತ್ತು ಅವನ ಜೀವನದ ಬಹುಪಾಲು ಆನಂದದ ಕ್ಷಣಗಳನ್ನು ತಿನ್ನುತ್ತಿರುವ ಅವಸ್ಥೆಯೇ ಬೇಸರ. ಕೋಪ ಸರಿ, ದುಃಖ ಸರಿ, ಆನಂದ ಸರಿ. ಅವೆಲ್ಲಾ ಪ್ರಕೃತಿಯೇ ಕಲ್ಪಿಸಿದ ವ್ಯವಸ್ಥೆ ಆದರೆ ಈ ಬೇಸರ ಎನ್ನುವುದು ಪರಿಹರಿಸಲಾಗದ ಅವಸ್ಥೆ. ಕೋಪ ಬಂದಾಗ ಹಾರಾಡಿ ಕೂಗಾಡಿ ವ್ಯಕ್ತಪಡಿಸಿಬಿಡಬಹುದು, ಕಣ್ಣೀರಕೋಡಿ ಹರಿಸಿದರೆ ದು:ಖ ಶಮನವಾಗಬಹುದು. ಕುಣಿದು ಕುಪ್ಪಳಿಸಿ ಆನಂದ ಹೊಂದಬಹುದು. ಆದರೆ ಬೇಸರ ಎನ್ನುವುದು ಮಾತ್ರ ವಿಚಿತ್ರ ಅವಸ್ಥೆ. ಅದಕ್ಕೆ ಬರಲು ಕಾರಣ ಇರುವುದಿಲ್ಲ, ಹೋಗಲೂ ತಿಳಿಯುವುದಿಲ್ಲ. ಹೋದದ್ದೂ ತಿಳಿಯುವುದಿಲ್ಲ. ದುಃಖದಂತಹ ಅನುಭವ ಹಾಗಂತ ದುಃಖವೂ ಅಲ್ಲ, ಮತ್ತು ಅದು ಪ್ರಕೃತಿ ನೀಡಿದ್ದೂ ಅಲ್ಲ ಮನುಷ್ಯ ತಲೆತಲೆಮಾರುಗಳಿಂದ ಸೃಷ್ಟಿಸಿಕೊಂಡ ಅವ್ಯವಸ್ಥೆ.
ಹುಟ್ಟಿದ ಒಂದು ವರ್ಷದವರೆಗೆ ಮಗು ಹಸಿವಾದಾಗ ಅಥವಾ ತನಗೆ ಕಿರಿಕಿರಿಯಾದಾಗ ಅಳುತ್ತದೆ, ಹೆಚ್ಚಿನ ಸಮಯ ನಿದ್ರೆ ಮಾಡುತ್ತದೆ, ಎಲ್ಲವೂ ಸರಿಯಿದ್ದರೆ ಬಾಹ್ಯ ಪ್ರಪಂಚವನ್ನು ನೋಡುತ್ತಾ ಕೈಕಾಲುಗಳನ್ನು ಅತ್ತಿತ್ತ ಆಡಿಸುತ್ತಾ, ಪಿಳಿಪಿಳಿ ಕಣ್ಣುಬಿಟ್ಟು ತನ್ನಷ್ಟಕ್ಕೆ ಮಲಗಿರುತ್ತದೆ. ಬೆಳೆದಂತೆ ತನಗೆ ಬೇಕಾಗಿದ್ದು ಸಿಗದಾಗ ಕೋಪದಿಂದ ರಚ್ಚೆ ಹಿಡಿಯುತ್ತದೆ. ಅಲ್ಲಿಯವರೆಗೆ ಅದು ಸರಿ. ಆದರೆ ತಾಯಿಯಂದಿರು ಬಾಹ್ಯ ಪ್ರಪಂಚದ ಅರ್ಥವಿಲ್ಲದ ನ್ಯೂನತೆಯನ್ನು ಅವರಿಗೂ ಅರಿವಿಲ್ಲದಂತೆ ತುಂಬತೊಡಗುತ್ತಾರೆ. ಗಂಟೆಗಟ್ಟಲೆ ಒಂಟಿಯಾಗಿ ಆಟವಾಡುತ್ತಿದ್ದ ಮಗು ಯಾವುದೋ ಕಾರಣದಿಂದ ಅತ್ತರೆ, ಓಡಿ ಬಂದು ಒಬ್ಬನೆ ಆಡಿ ಬೇಸರ ಆಯಿತಾ ಮಗಾ. ಅಮ್ಮ ನಿನ್ನ ಬಿಟ್ಟು ಹೋಗಿದ್ಲಾ? ಎನ್ನುವ ಸ್ವಗತದ ಮಾತುಗಳನ್ನು ಆಡುತ್ತಾರೆ. ಅಳುವಾಗ ಆಗುವ ಅನುಭವವನ್ನು ಮಗು ಬೇಸರ ಎಂದು ತಪ್ಪಾಗಿ ಗ್ರಹಿಸಿಬಿಡುತ್ತದೆ ಮತ್ತು ಒಂಟಿಯಾಗಿರುವುದು ಎಂದರೆ ಬೇಸರ ಎನ್ನುವ ಭಾವನೆ ಬೆಳೆಯುತ್ತದೆ. ಹಾಗಾಗಿ ಸುಮ್ಮನೆ ಒಂಟಿಯಾಗಿ ಇದ್ದಾಗ ಬೇಸರವಾಗುವುದು ಮತ್ತು ಬೇಸರವಾದಾಗ ಒಂಟಿಯಾಗಿ ಸುಮ್ಮನೆ ಕೂರುವುದು ಎಂಬ ಹೊಸ ವಿಧಾನ ಚಾಲ್ತಿಗೆ ತನ್ನಷ್ಟಕ್ಕೆ ಬಂತು.
ಸಣ್ಣ ವಯಸ್ಸಿನಿಂದಲೇ ದಿನನಿತ್ಯ ಹಲವಾರು ಬಾರಿ ಬೇಸರ ಎಂಬ ಶಬ್ದವನ್ನು ಕೇಳಿ ನಿಧಾನವಾಗಿ ಬೇಸರ ಎಂಬ ಅರ್ಥವಿಲ್ಲದ ಹೊಸ ಅನುಭವ ಮಗುವಿನ ಮನಸ್ಸಿನಲ್ಲಿ ಅಚ್ಚುಬೀಳತೊಡಗುತ್ತದೆ. ಶುದ್ಧಮನಸ್ಸಿಗೆ ಅವಶ್ಯಕತೆ ಇದೆಯೋ ಇಲ್ಲವೋ ಕಿವಿಯ ಮೂಲಕ ಶ್ಲೋಕ ಹೇಗೆ ತಾನಾಗಿಯೇ ಅಚ್ಚೊತ್ತುತ್ತದೆಯೋ ಅದೇರೀತಿ ಬೇಸರವೆಂಬ ಶಬ್ದಕ್ಕೆ ದುಃಖದ ಅನುಭವ ಸೇರಿ ನೆನಪಿನಾಳಕ್ಕೆ ಇಳಿದುಬಿಡುತ್ತವೆ.ಪ್ರಕೃತಿ ಸಹಜವಾಗಿದ್ದದ್ದು ಮೂರೇ ವಿಧಾನ. ಒಂದು ಕೋಪ, ಇನ್ನೊಂದು ದುಃಖ, ಮತ್ತೊಂದು ಸಮಾಧಾನ. ಕೋಪವನ್ನು ಕೂಗಾಡಿಯೂ, ದುಃಖವನ್ನು ಕಣ್ಣೀರಿನ ಮೂಲಕವೂ ಹೊರಹಾಕಿಕೊಳ್ಳಬಹುದು. ಅವುಗಳು ಶಾಶ್ವತ ಅವಸ್ಥೆಗಳಲ್ಲ. ಆದರೆ ಕಾರಣವಿಲ್ಲದ ಬೇಸರವನ್ನು ಅನುಭವಿಸಬಹುದೇ ವಿನಃ ಹೊರಹಾಕಲು ಸಾಧ್ಯವಿಲ್ಲ. ಹಾಗಾಗಿ ಬೇಸರ ಎನ್ನುವುದು ನಮ್ಮ ಕಳ್ಳಮನಸ್ಸಿನ ತಪ್ಪುಕಲ್ಪನೆಯ ಸೃಷ್ಟಿಯೇ ಹೊರತು ಸಹಜ ಅಲ್ಲ. ಮನಸ್ಸಿನಿಂದ ಯಾವುದನ್ನು ಹೊರಹಾಕಲು ಸಾಧ್ಯವಿಲ್ಲವೋ ಅದು ನಂತರ ವಿಕೃತಿಯಾಗಿ ಕಾಡತೊಡಗುತ್ತದೆ. ಪ್ರಕೃತಿ ತಾನಾಗಿ ಆರಂಭಿಸಿದ ಎಲ್ಲಾ ವ್ಯವಸ್ಥೆಗೆ ಅಂತ್ಯವನ್ನೂ ಕಲ್ಪಿಸಿದೆ. ಆದರೆ ಮನುಷ್ಯನ ತಪ್ಪುಗ್ರಹಿಕೆಯಿಂದಾದ ದೋಷಕ್ಕೆ ಅಂತ್ಯವೇ ಇಲ್ಲ. ಇದಕ್ಕೆಲ್ಲಾ ಮನುಷ್ಯ ತಾನು ಬುದ್ದಿಜೀವಿ ಎಂದು ತಿಳಿದುಕೊಂಡಿದ್ದೇ ಕಾರಣ.
ಆ ಕಾರಣಕ್ಕೆ ನನಗೆ ಜೇನಿನ ಜೀವನ ಅತ್ಯಂತ ಇಷ್ಟವಾಗುವುದು. ಪ್ರಕೃತಿ ಕಲ್ಪಿಸಿಕೊಟ್ಟ ಜೀವನದ ವ್ಯವಸ್ಥೆಯನ್ನು ಅವು ಚಾಚೂ ತಪ್ಪದಂತೆ ಅನುಸರಿಸುತ್ತಿವೆ. ಅವು ತಮ್ಮ ಯೋಚನಾ ಸಾಮರ್ಥ್ಯವನ್ನು ಜೀವನದ ನಿಯಮಗಳ ಮೇಲೆ ಹೇರಿಲ್ಲ. ಮನುಷ್ಯನಂತೆ ಕುಟುಂಬವ್ಯವಸ್ಥೆಯಲ್ಲಿ ಬದುಕುತ್ತಿರುವ ಅವುಗಳಿಂದ ನಾವು ಇಂದೂ ಕೂಡ ಆನಂದದಿಂದ ಬದುಕುವುದನ್ನು ಕಲಿಯಬಹುದು. ಅವುಗಳಲ್ಲಿನ ಮೂಲತತ್ವವನ್ನು ನಾವು ಇವತ್ತೂ ಸುಲಭದಲ್ಲಿ ಪಾಲಿಸಬಹುದು. ಆ ಆನಂದದ ಜೀವನವನ್ನು ತಮ್ಮದಾಗಿಸಿಕೊಳ್ಳಬೇಕಾದ ಆಸೆಯಿದ್ದವರು ಒಮ್ಮೆ ಜೇನಿನೊಳಗೆ ಪರಕಾಯಪ್ರವೇಶ ಮಾಡಿಬರಬೇಕಷ್ಟೆ. ಅದು ಭವಿಷ್ಯದ ದೃಷ್ಟಿಯಿಂದಲಾದರೂ ಉತ್ತಮಮಾರ್ಗ.
ಪರಕಾಯ ಪ್ರವೇಶ... ಭವಿಷ್ಯ.. ಮಾಟಮಂತ್ರ ! ಇಂದಿನ ಕಾಲದಲ್ಲಿಯೂ ನೀವು ಅಂತದ್ದನ್ನೆಲ್ಲಾ ನಂಬುತ್ತೀರಾ... ಕೂಡಲೆ ಕುತೂಹಲದಿಂದ ಕೇಳಿದೆ.
ಇಂದೂ ನಂಬುತ್ತೀರಾ ಎಂದರೆ ನಿಮ್ಮ ಅರ್ಥದಲ್ಲಿ ಅದು ಸುಳ್ಳು, ಆಗದು ಎಂಬ ಅಪನಂಬಿಕೆ ಇರುವಂತಿದೆ
ಮತ್ತಿನ್ನೇನು ಅವೆಲ್ಲಾ ಕಲ್ಪನಾಲೋಕದ ಕಥೆಗಳಲ್ಲಿ ಮಾತ್ರ ಸಾಧ್ಯವಲ್ಲವೇ?
ಹಾಗಂತ ಸುಲಭವಾಗಿ ಅಲ್ಲಗಳೆಯಬೇಡಿ, ನಾನು ನಿಮಗೆ ಭವಿಷ್ಯ ಮತ್ತು ಪರಕಾಯಪ್ರವೇಶದಂತಹ ಹಲವಾರು ವಿಷಯಗಳ ನಿಜವಾದ ಅರ್ಥ ಮತ್ತು ಇಂದಿನ ಅನರ್ಥ ಎರಡನ್ನೂ ವಿಷದಪಡಿಸುತ್ತೇನೆ ಎಂದು ಮುಗುಳ್ನಕ್ಕ.
* * * * *
ಶಾಸ್ತ್ರಿ ಅಂದು ಹೇಳಿದ ವೇದಾಂತಗಳು ನೂರಕ್ಕೆ ನೂರು ಒಪ್ಪಿಕೊಳ್ಳುವಂತಿಲ್ಲದಿದ್ದರೂ ಅವನ ತರ್ಕದ ರೀತಿ ಅಲ್ಲಗಳೆಯುವಂತಿರಲಿಲ್ಲ. ಅಥವಾ ಜೇನಿನ ಪುಸ್ತಕ ನಾನು ಓದಿಲ್ಲದಿದ್ದರೆ, ಅದರ ಬಗ್ಗೆ ಆಸಕ್ತಿ ಇಲ್ಲದಿದ್ದರೆ, ಅವನ ಹೋಲಿಕೆಗಳು ಅರ್ಥವಾಗದೆ ನನಗೂ ಅದು ಪೇಲವವೆಂದು ಅನ್ನಿಸಿಬಿಡುತ್ತಿತ್ತು. ಕಾರಣವಿಲ್ಲದ ಬೇಸರ ಹಲವು ಬಾರಿ ನನ್ನನ್ನೂ ಕಾಡುತ್ತಿತ್ತು. ಈಗಲಾದರೂ ನನ್ನ ಬೇಸರಕ್ಕೆ ಸಣ್ಣದೊಂದು ಕಾರಣವಿತ್ತು, ಆದರೆ ಬಹಳಷ್ಟು ಸಾರಿ ನನ್ನ ಬೇಸರಕ್ಕೆ ಕಾರಣವೂ ಇರಲಿಲ್ಲ ಮತ್ತು ಪರಿಹಾರಕ್ಕೆ ಉತ್ತರವೂ ಇರಲಿಲ್ಲ. ನಾರಾಯಣ ಸ್ವಾಮಿ ಬೇಸರಮಾಡಿಕೊಂಡನೇನೋ ಎಂದು ಊಹಿಸಿ ಅದಕ್ಕಾಗಿ ನಾನು ಬೇಸರಮಾಡಿಕೊಳ್ಳುವಷ್ಟರ ಮಟ್ಟಿಗೆ ಬೇಸರಕಾಡುವ ಹುಟ್ಟುಸ್ವಭಾವ ನನ್ನದಾದ್ದರಿಂದ, ಆನಂದರಾಮ ಶಾಸ್ತ್ರಿಯ ವೇದಾಂತ ನೆನಪಾಗಿ ಅತ್ಯಂತ ಸುಲಭವಾಗಿ ಬೇಸರವನ್ನು ನೀಗಿಕೊಂಡು ಊಟಮಾಡಿ ಬರಲು ಮನೆಗೆ ಹೋದೆ.
* * * * (ಮುಂದುವರೆಯುತ್ತದೆ)
ಹಿಂದಿನ ಓದಿಗೆ
http://shreeshum.blogspot.com/2010/08/blog-post_31.html

Tuesday, August 31, 2010

ಒಂದು ಜೇನಿನ ಹಿಂದೆ


ಪುಸ್ತಕ ತಂದ ಆಸೆ
ಸ್ವಾವಲಂಬನೆಯ ಬದುಕಿಗೆ ಜೇನುಕೃಷಿ ಎಂಬ ತಲೆಬರಹ ಹೊತ್ತ ಪುಸ್ತಕ ನನಗೆ ಓದಲು ಸಿಗುವಾಗ ಜೋರು ಮಳೆಗಾಲ. ಕಾಗೆಯೂ ಹಾರಾಡಲಾರದಷ್ಟು ಮಳೆ ಸುರಿಯುತ್ತಿದ್ದ ಒಂದುದಿನ ಮಾಡಲು ಯಾವ ಕೆಲಸವೂ ಇಲ್ಲದ್ದರಿಂದ ಹಳೆಯ ಟ್ರಂಕು ಹುಡುಕುತ್ತಿದ್ದೆ. ಹಳೆ ಕಸ್ತೂರಿ, ತುಷಾರ, ಮಯೂರಗಳ ನಡುವೆ ಆ ಪುಸ್ತಕ ಸಿಕ್ಕಿತು. ಅದು ಪ್ರಾಯಶಃ ನನ್ನ ಅಪ್ಪಯ್ಯ ಪ್ರಾಯದ ಕಾಲದಲ್ಲಿ ಕೊಂಡುತಂದ ಪುಸ್ತಕ ಇದ್ದಿರಬೇಕು. ಅರ್ಧ ಮುಖಪುಟ ಹರಿದುಹೋಗಿ ಮಾಸಲು ಬಣ್ಣ ತಲುಪಿತ್ತು. ಆದರೂ ಮುಖಪುಟದಲ್ಲಿನ ಸ್ವಾವಲಂಬನೆಯ ಬದುಕು ಎನ್ನುವ ಶೀರ್ಷಿಕೆ ನನಗೆ ಆ ಪುಸ್ತಕದ ಮೇಲೆ ಕುತೂಹಲ ಇಮ್ಮಡಿಸುವಂತೆ ಮಾಡಿತ್ತು. ಸಾಮಾನ್ಯವಾಗಿ ಕೃಷಿಕರ ಜೀವನದಲ್ಲಿ ಹಣದ ವಿಚಾರದಲ್ಲಿ ಪರಾವಲಂಬಿ ಬದುಕೆ ಹೆಚ್ಚು. ಬೆಳೆ ಕೈಗೆ ಬಂದಾಗ ಹಣದ ವಹಿವಾಟು ಜೋರಾಗಿ ನಡೆದು ನಂತರ ಮುಂದಿನ ಬೆಳೆ ಕೈಗೆ ಸಿಗುವವರೆಗೂ ಆಮೆಗತಿಯಲ್ಲಿ ಸಾಗುವ ವಹಿವಾಟಿನ ಕಾರಣದಿಂದ ಬಹಳಷ್ಟು ಕೃಷಿಕರು ಇಂತಹ ಶಬ್ದಗಳಿಗೆ ಮರುಳಾಗುತ್ತಾರೆ. ನಾನೂ ಅದಕ್ಕೆ ಹೊರತಾಗಿರಲಿಲ್ಲ. ಹಣ ಸಿಕ್ಕ ಕೂಡಲೇ ಕಣ್ಣಿಗೆ ಕಂಡ ವಸ್ತುಗಳನ್ನು ಖರೀದಿಸಿ ಕೈ ಬರಿದಾಗಿಸಿಕೊಳ್ಳುವ ನನ್ನಂತಹ ಸ್ವಭಾವದವರನ್ನು ಶೀರ್ಷಿಕೆ ಇನ್ನಷ್ಟು ಬೇಗನೆ ಸೆಳೆಯುತ್ತಿತ್ತು. ಹಾಗಾಗಿ ಜೇನುತುಪ್ಪ ಮಾರಾಟಮಾಡಿ ಬರುವ ಹಣದಿಂದ ಬೇಕಾಗಿದ್ದನ್ನು ಮಾಡಬಹುದು ಎಂಬ ಆಸೆ ಇನ್ನಷ್ಟು ಹೆಚ್ಚಿನ ಆಸಕ್ತಿಗೆ ಕಾರಣವಾಗಿತ್ತು. ನಿರಂತರ ಆದಾಯ ಬರುತ್ತದೆ ಎಂದರೆ ಯಾರಿಗೆ ಆಸೆ ಇರುವುದಿಲ್ಲ?. ಹಾಗಾಗಿ ಹಠಕ್ಕೆ ಬಿದ್ದು ಪುಸ್ತಕ ಓದತೊಡಗಿದೆ. ಪುಸ್ತಕ ಓದುತ್ತಾ ಹೋದಂತೆ ಜೇನಿನ ಪ್ರಪಂಚದ ಒಂದೊಂದೇ ಮಜಲು ಅರ್ಥವಾಗುತ್ತಾ ಹೋಯಿತು. ಜೇನುಹುಳದ ಜಾತಿ, ಅದರ ಸ್ವಭಾವ, ತುಪ್ಪಮಾಡುವ ಸಮಯ, ಜೇನುಗೂಡನ್ನು ಪತ್ತೆ ಮಾಡುವ ವಿಧಾನ, ಕಾಡಿನ ಪೊಟರೆಯಿಂದ ಮರದಪೆಟ್ಟಿಗೆಗೆ ಜೇನನ್ನು ಸೇರಿಸುವ ರೀತಿ ಹೀಗೆ ಒಂದೊಂದನ್ನೂ ಸವಿವರವಾಗಿ ಪುಸ್ತಕದಲ್ಲಿ ಹೇಳಲಾಗಿತ್ತು. ಮಧ್ಯದಲ್ಲಿ ಕೆಲವು ಪುಟಗಳು ಹರಿದು ಹೋಗಿತ್ತಾದರೂ ಆದರ ಹಿಂದಿನ ಹಾಗು ಮುಂದಿನ ಪುಟಗಳ ಆಧಾರದ ಮೇಲೆ ವಿಷಯವನ್ನು ತೂಗಿಸಿಕೊಂಡು ಅರ್ಥಮಾಡಿಕೊಳ್ಳಬಹುದಿತ್ತು.
ಸ್ವಾವಲಂಬನೆಯ ಬದುಕಿಗೆ ಜೇನುಕೃಷಿ ಎಂಬ ಪುಸ್ತಕ ನನಗೆ ಎಷ್ಟರ ಮಟ್ಟಿಗೆ ಹುಚ್ಚು ಹಚ್ಚಿತ್ತು ಎಂದರೆ ನಾನು ಹತ್ತೆಂಟು ಪೆಟ್ಟಿಗೆಯಲ್ಲಿ ಜೇನು ಸಾಕಿದಂತೆ, ಡಬ್ಬಗಟ್ಟಲೆ ತುಪ್ಪ ತೆಗೆದು ಮಾರಾಟಮಾಡಿದಂತೆ, ಕೈತುಂಬಾ ಹಣ ಎಣಿಸಿದಂತೆ ಕನಸು ಕಾಣುತ್ತಿದ್ದೆ. ಕೆಲವು ರಾತ್ರಿ ಜೇನು.. ಜೇನು.. ಎಂದು ದೊಡ್ಡದಾಗಿ ನಿದ್ರೆಯಲ್ಲಿ ಕೂಗಿದ್ದೂ ಇತ್ತು. ಆದರೆ ಕನಸು ತಕ್ಷಣ ನನಸಾಗುವುದು ಸುಲಭವಾಗಿರಲಿಲ್ಲ. ಘೋರಾಕಾರದ ಮಳೆಗಾಲದ ಕಾರಣ ಜೇನು ಹಿಡಿಯಲು ಇದು ಸರಿಯಾದ ಸಮಯವಲ್ಲ ಎಂದು ಪುಸ್ತಕದಲ್ಲಿ ಇದ್ದದ್ದರಿಂದ ತತ್‌ಕ್ಷಣದಿಂದ ಪೆಟ್ಟಿಗೆಯಲ್ಲಿ ಜೇನು ಸಾಕುವ ನನ್ನ ಆಸೆಯನ್ನು ತಡೆಹಿಡಿಯಬೇಕಾಗಿತ್ತು. ಆಸೆ ತಡೆಹಿಡಿಯುವುದೆಂದರೆ ಸುಲಭದ ಮಾತಲ್ಲ. ಆಸೆಯೇ ಆಗದಿದ್ದಲ್ಲಿ ಅದರ ಪ್ರಶ್ನೆ ಬೇರೆ, ಆದರೆ ಈಗಾಗಲೆ ಆಸೆ ಹುಟ್ಟಿದ್ದರಿಂದ ಕುಳಿತಲ್ಲಿ ನಿಂತಲ್ಲಿ ಜೇನು ಕಾಡತೊಡಗಿತು. ಪುಸ್ತಕದಲ್ಲಿ ಮಳೆಗಾಲದಲ್ಲಿ ಜೇನುಗೂಡನ್ನು ಪತ್ತೆ ಮಾಡಲಾಗದ ಕಾರಣದಿಂದ ಪೆಟ್ಟಿಗೆಗೆ ಕೂಡುವುದಕ್ಕೆ ಸೂಕ್ತ ಸಮಯವಲ್ಲ ಎಂದಿರಬಹುದು, ಅಕಸ್ಮಾತ್ ಕಾಡಿನಲ್ಲಿ ಜೇನುಗೂಡು ಪತ್ತೆಯಾದರೆ ತೊಂದರೆಯೇನು ಇಲ್ಲವಲ್ಲ ಎಂಬ ಆಲೋಚನೆಯಿಂದಾಗಿ ಮನಸ್ಸಿನ ಮೂಲೆಯಲ್ಲಿ ಜೇನನ್ನು ಪೆಟ್ಟಿಗೆಯಲ್ಲಿ ಕೂಡುವ ಸಣ್ಣ ಆಸೆಯೊಂದು ಚಿಗುರಿತು.
* * * * *
ಚೆನ್ನ
ಸಂಪಳ್ಳಿಯ ಚೆನ್ನ ಕಾಡು ಉತ್ಪನ್ನವನ್ನು ಆಧರಿಸಿ ಜೀವನ ನಡೆಸುತ್ತಿದ್ದ. ಅವುಗಳಲ್ಲಿ ಅವನಿಗೆ ಜೇನುತುಪ್ಪ ಮಾರಾಟದಿಂದ ಹೆಚ್ಚಿನ ಆದಾಯ ಬರುತ್ತಿತ್ತು. ಚೆನ್ನ ಎನ್ನುವ ಹೆಸರನ್ನು ಕೇಳಿದಾಕ್ಷಣ ಸಾಮಾನ್ಯವಾಗಿ ಆತ ನೋಡಲು ಬಹಳ ಸುಂದರವಾಗಿರಬಹುದೆಂಬ ಕಲ್ಪನೆ ಸಹಜ. ಆದರೆ ಅವನ ಹೆಸರಿಗೂ ದೇಹದ ರೂಪಕ್ಕೂ ಹೋಲಿಕೆಯೇ ಇರಲಿಲ್ಲ. ಚೆನ್ನ ಗಡಿಬಿಡಿಯಲ್ಲಿ ನಿರ್ಮಿಸಿದ ಮಣ್ಣಿನಬೊಂಬೆಯಂತಿದ್ದ. ನೋಡಲು ಕುರೂಪಿಯ ಜತೆ ಸ್ವಲ್ಪ ಸೋಂಬೇರಿ. ಹಾಗಾಗಿ ಇಡೀ ಕೇರಿಯಲ್ಲಿ ಕೂಲಿ ಕೆಲಸ ಮಾಡದೆ ಜೀವನ ಸಾಗಿಸುತ್ತಿರುವ ಏಕೈಕ ವ್ಯಕ್ತಿ. ಅಪರೂಪಕ್ಕೊಮ್ಮೆ ಒಂದವೈತ್ತು ರೂಪಾಯಿ ಇದ್ರೆ ಕೊಡ್ರಿ, ನಾಡಿದ್ದು ಸೋಮಾರ ವಾಪಾಸು ಕೊಡ್ತೀನಿ ಎಂದು ಇಸಿದುಕೊಂಡು ವಾಪಾಸು ಕೊಡುವುದನ್ನು ಮರೆಯುತ್ತಿದ್ದ. ಹಾಗಂತ ಅವನು ಮರೆಗುಳಿಯೇನಲ್ಲ. ಅದು ಉದ್ದೇಶಪೂರ್ವಕ ಮರೆವು. ಅಕಸ್ಮಾತ್ ದುಡ್ಡು ಕೊಟ್ಟವರು ಚೆನ್ನ ಕೊಡಬೇಕಾದ ದುಡ್ಡಿನ ನೆನಪು ಮಾಡಿದರೆ, ಬಾಯಿಂದ ಸೊರ್ ಎಂದು ಗಾಳಿಯನ್ನು ಒಳಗೆಳೆದುಕೊಂಡು ವಿಚಿತ್ರ ಶಬ್ದ ಹೊರಡಿಸುತ್ತಾ ತೋ ಹೌದಲ್ರಿ, ನಂಗೆ ಮರ‍್ತೆ ಹೋಗಿತ್ತು. ಯಾವ್ದೋ ದುಡ್ಡು ಬರದೈತಿ ನಾಡಿದ್ದು ಕೊಡ್ತೀನಿ ಎನ್ನುವ ಹೊಚ್ಚಹೊಸ ಸುಳ್ಳು ಹೇಳುತ್ತಿದ್ದ. ಈ ಮೂರು ಗುಣಗಳನ್ನು ಹೊರತುಪಡಿಸಿದರೆ ಚೆನ್ನ ಮಿಕ್ಕೆಲ್ಲರಿಗಿಂತ ಸಾಚಾ. ಇತರರಂತೆ ಸಾರಾಯಿ, ಬೀಡಿ ಮುಂತಾದ ಯಾವ ದುಶ್ಚಟವೂ ಇಲ್ಲದ ಜನ. ಹಾಗಾಗಿ ಖರ್ಚಿಗೆ ಅಂತ ಹೆಚ್ಚಿಗೆ ಕಾಸು ಅವನಿಗೆ ಬೇಕಾಗುತ್ತಿರಲಿಲ್ಲ. ವರ್ಷಪೂರ್ತಿ ಕಾಡು ಉತ್ಪನ್ನವೇ ಅವನ ಮಟ್ಟದ ಜೀವನಕ್ಕೆ ಸಾಕಾಗುತ್ತಿತ್ತು. ಯಾವ ಯಾವ ಕಾಲದಲ್ಲಿ ಯಾವ ಜಾತಿಯ ಕಾಡು ಉತ್ಪನ್ನ ಸಿಗುತ್ತದೆ ಮತ್ತು ಅವುಗಳನ್ನು ಯಾರು ಕೊಳ್ಳುತ್ತಾರೆ ಎನ್ನುವುದರಿಂದ ಹಿಡಿದು, ಕೊಳ್ಳುವವರು ಯಾವ ರೀತಿ ಮೋಸಮಾಡುತ್ತಾರೆ ಎನ್ನುವುದರವರೆಗೂ ಆತ ಪಳಗಿದ್ದ. ಜೇನುತುಪ್ಪ, ಉಪ್ಪಾಕೆ ಹಣ್ಣು, ವಾಟೆಕಾಯಿ, ಅಪ್ಪೆಮಿಡಿ, ಕಳಲೆಗಳನ್ನು ಸಂಗ್ರಹಿಸಿ, ಹವ್ಯಕಬ್ರಾಹ್ಮಣರೇ ಹೆಚ್ಚಾಗಿರುವ ಊರಿನಲ್ಲಿ ವ್ಯಾಪಾರಮಾಡಿ ಕೊಂಚ ಹಣ ಸಂಪಾದಿಸುತ್ತಿದ್ದ. ಮಿಕ್ಕಂತೆ, ಅಂಟುವಾಳಕಾಯಿ, ಸೀಗೆಕಾಯಿ, ಮುಂತಾದವುಗಳನ್ನು ತಾಳಗುಪ್ಪದ ಕಾಳಪ್ಪಶೆಟ್ರಿಗೆ ಮಾರುತ್ತಿದ್ದ. ಹಾಗೆ ಸಂಪಾದಿಸಿದ ಹಣದಲ್ಲಿ ಅರ್ಧವನ್ನು ಕುಮುಟಾಭಟ್ಟರ ಅಂಗಡಿಯಲ್ಲಿ ಕಾಮತ್ ಚೌಚೌ ತಿಂದು ಖಾಲಿ ಮಾಡಿದರೆ ಇನ್ನರ್ಧವನ್ನು ಮನೆಗೆ ಕೊಡುತ್ತಿದ್ದ. ಚೆನ್ನನ ಹೆಂಡತಿ ಮಗ ಇಬ್ಬರೂ ಕೂಲಿಗೆ ಹೋಗುತ್ತಿದ್ದುದರಿಂದ ಸಂಸಾರದ ಜವಾಬ್ದಾರಿಯಿಂದಲೂ ಅವನು ನುಣುಚಿಕೊಂಡಿದ್ದ. ಹಾಗಾಗಿ ಅವರಿಬ್ಬರ ಸಂಪಾದನೆಯಿಂದ ಸಾಮಾನ್ಯಮಟ್ಟದ ಜೀವನಕ್ಕೆ ತೊಂದರೆ ಇರಲಿಲ್ಲ.
ಚೆನ್ನನನ್ನು ಜತೆಯಲ್ಲಿ ಇಟ್ಟುಕೊಂಡರೆ ನನ್ನ ಜೇನು ಸಾಕಾಣಿಕಾ ಕೆಲಸಕ್ಕೆ ಸಹಾಯವಾದೀತೆಂದು ಅವನನ್ನು ಹುಡುಕುತ್ತಾ ಸಂಪಳ್ಳಿಗೆ ಹೊರಡಲನುವಾದೆ. ಬೆಳಿಗ್ಗೆ ಮುಂಚೆ ಹೋದರೆ ಮಾತ್ರ ಅವನು ಮನೆಯಲ್ಲಿ ಸಿಕ್ಕುತ್ತಾನೆ, ಇಲ್ಲದಿದ್ದರೆ ಆತ ಮತ್ತೆ ಸಿಗುವುದು ಸಾಯಂಕಾಲವೇ, ಹಾಗಾಗಿ ಬೇಗನೆ ಹೊರಟೆ.

ಹಿಡಿಯೋರು
ಮಲೆನಾಡಿನ ಕಾಡಿನಲ್ಲಿರುವ ಮಣ್ಣಿನಹುತ್ತದಲ್ಲಿ ಗೂಡುಮಾಡಿಕೊಂಡಿರುವ ಜೇನು ಮಳೆಗಾಲಕ್ಕೆ ಸ್ವಲ್ಪ ಮುಂಚೆ ಸಂಸಾರ ಸಮೇತ ಜಾಗ ಖಾಲಿಮಾಡಿಬಿಡುತ್ತವೆ. ಇಪ್ಪತ್ತು ಇಪ್ಪತ್ತೈದು ಕಿಲೋಮೀಟರ್ ದೂರದ ಮಳೆ ಸ್ವಲ್ಪ ಕಡಿಮೆಯಿರುವ ಅರೆಮಲೆನಾಡಿಗೆ ತಾತ್ಕಾಲಿಕ ವಲಸೆ ಹೋಗಿರುತ್ತವೆ. ಮಲೆನಾಡಿನ ಅತಿಯಾದ ಮಳೆ ಅವುಗಳಿಗೆ ಆಹಾರದ ಕೊರತೆಯನ್ನು ತಂದಿಡುವುದರ ಜೊತೆಗೆ ಮಣ್ಣಿನ ಗೂಡಿನೊಳಗೆ ನೀರು ನುಗ್ಗುವುದರಿಂದ ಅವುಗಳಿಗೆ ಮಳೆಗಾಲ ಅಸುರಕ್ಷಿತ. ಮತ್ತೆ ಮಳೆಗಾಲ ಮುಗಿದು ಚಳಿಗಾಲ ಶುರುವಾಗುತ್ತಿದ್ದಂತೆ ತಂಡೋಪತಂಡವಾಗಿ ಮಲೆನಾಡ ಕಾಡಿಗೆ ಬಂದು ಸೇರುತ್ತವೆ. ಆದರೆ ಅಪರೂಪಕ್ಕೆ ಮರದಪೊಟರೆಯನ್ನು ಆಶ್ರಯಿಸಿರುವ ಜೇನು ಮಳೆಗಾಲದಲ್ಲಿಯೂ ಮಲೆನಾಡ ಕಾಡಿನಲ್ಲಿಯೇ ಉಳಿದಿರುತ್ತದೆ. ಅವುಗಳನ್ನು ಪತ್ತೆ ಮಾಡಿ ಪೆಟ್ಟಿಗೆ ತುಂಬುವ ಯೋಜನೆ ನನ್ನದಾಗಿತ್ತು. ಆದರೆ ಮಳೆಗಾಲದಲ್ಲಿ ಜೇನನ್ನು ಪತ್ತೆ ಮಾಡುವುದಕ್ಕೆ ತುಂಬಾ ಅನುಭವಸ್ಥರೇ ಆಗಿರಬೇಕು. ಕಾರಣ ಯಾವಾಗಲೂ ಮೋಡ ಮುಸುಕಿದ ವಾತಾವರಣದಿಂದ ಜೇನು ಹುಳುಗಳ ಹಾರಾಟವನ್ನು ಪತ್ತೆ ಮಾಡುವುದು ಕಷ್ಟಕರ.
ತುಡುವೆಜೇನನ್ನು ಹಿಡಿಯುವವರು ಎರಡು ಬಗೆಯವರು. ಒಂದನೆಯವರೆಂದರೆ ಜೇನಿನ ತುಪ್ಪ ಮತ್ತು ತತ್ತಿಯನ್ನು ಮಾತ್ರ ಬಯಸುವವರು, ಎರಡನೆಯವರೆಂದರೆ, ಜೇನು ಹುಳುಗಳನ್ನು ಹಿಡಿದು ತಂದು ಪೆಟ್ಟಿಗೆಯೊಳಗೆ ಸಾಕುವವರು.
ತುಪ್ಪಕ್ಕಾಗಿ ಜೇನು ಹಿಡಿಯುವವರು ಮಾರ್ಚ್ ಏಪ್ರಿಲ್ ತಿಂಗಳಿನಲ್ಲಿ ಬೆಳಗ್ಗೆ ಎಂಟು ಗಂಟೆಗೆ ಮನೆಬಿಡುತ್ತಾರೆ. ಅದು ಜೇನುಹುಳುಗಳು ಸಾಲುಸಾಲಾಗಿ ಹೂವಿನ ಮಕರಂದ ಹೀರಲು ಹೊರಗಡೆ ಬರುವ ಸಮಯ. ಮಕರಂದ ಕುಡಿದ ಜೇನು ವಾಪಾಸು ಯಾವ ಮಾರ್ಗದಲ್ಲಿ ಸಾಗುತ್ತದೆ ಎನ್ನುವುದನ್ನು ಬಿಸಿಲಿಗೆ ಎದುರಾಗಿ ನಿಂತುಕೊಂಡು, ಹಣೆಯಮೇಲೆ ಕೈಯನ್ನು ಅಡ್ಡಹಿಡಿದು,ಕಣ್ಣನ್ನು ಕಿರಿದಾಗಿಸಿ ನೋಡುತ್ತಾ ನಿಲ್ಲುತ್ತಾರೆ. ಅತಿ ಹೆಚ್ಚು ಜೇನುಹುಳುಗಳ ಹಾರಾಟ ಯಾವ ಮಾರ್ಗದಲ್ಲಿ ಸಾಗಿದೆ ಎನ್ನುವುದನ್ನು ಅನುಸರಿಸಿ ಅತ್ತ ಕಡೆ ಹೊರಡುತ್ತಾರೆ. ಹೀಗೆ ಹೊರಟ ಅರ್ಧಗಂಟೆಯೊಳಗೆ ಒಂದು ಜೇನು ಗೂಡುಪತ್ತೆ ಮಾಡುತ್ತಾರೆ. ತಕ್ಷಣ ಕಾರ್ಯಾಚರಣೆ ಶುರುಮಾಡಿ ಗೂಡಿಗೆ ಹೊಗೆ ಹಾಕಿ ಹುಳ ಓಡಿಸಿ ಕಿತ್ತುಬಿಡುತ್ತಾರೆ. ಹೋದ ಒಂದೆರಡು ತಾಸಿನೊಳಗೆ ಕೈತುಂಬಾ ಜೇನುರೊಟ್ಟಿನೊಂದಿಗೆ ವಾಪಾಸು ಮನೆಗೆ ಬಂದುಬಿಡುತ್ತಾರೆ.
ಪೆಟ್ಟಿಗೆಗೆ ಜೇನನ್ನು ಕೂಡಿಸುವವರು ನವೆಂಬರ್ ಡಿಸೆಂಬರ್ ತಿಂಗಳಿನಲ್ಲಿ ಜೇನು ಹುಡುಕಲು ಹೊರಡುತ್ತಾರೆ. ಜೇನು ಪತ್ತೆ ಮಾಡುವ ವಿಧಾನ ಒಂದೇ ಆದರೂ, ನಂತರ ಪೆಟ್ಟಿಗೆಗೆ ಜೇನನ್ನು ಕೂಡಲು ಸ್ವಲ್ಪ ಹೆಚ್ಚಿನ ಸಮಯ ತಗಲುತ್ತದೆ. ಒಮ್ಮೊಮ್ಮೆ ಸಾಯಂಕಾಲದವರೆಗೂ ಕಾರ್ಯಾಚರಣೆ ನಡೆಸಬೇಕಾದ ಸಂದರ್ಭ ಇರುತ್ತದೆ. ಅಕಸ್ಮಾತ್ ಬೇಗನೆ ಪೆಟ್ಟಿಗೆಯೊಳಗೆ ಎಲ್ಲಾ ಜೇನುಹುಳುಗಳು ಬಂದರೂ ಆಹಾರಕ್ಕೆ ಹೋದ ಜೇನುಗಳು ಬರುವವರೆಗೆ ಪೆಟ್ಟಿಗೆಯನ್ನು ಅಲ್ಲಿಯೇ ಇಟ್ಟು ಕತ್ತಲೆಯಾದಮೇಲೆ ಮನೆಗೆ ತರುತ್ತಾರೆ. ಜೇನುಗೂಡನ್ನು ಪತ್ತೆ ಮಾಡುವ ವಿಚಾರದಲ್ಲಿ ಜೇನು ಸಾಕುವವರಿಗಿಂತ ತುಪ್ಪಕ್ಕಾಗಿ ಜೇನು ಕೀಳುವವರೇ ಹೆಚ್ಚು ಪಳಗಿರುತ್ತಾರೆ.
ಕಾರಣ, ಜೇನು ಸಾಕುವವರು ವರ್ಷದಲ್ಲಿ ಹೆಚ್ಚೆಂದರೆ ಒಂದೆರಡು ಗೂಡು ಪತ್ತೆ ಮಾಡುತ್ತಾರಷ್ಟೆ. ಆದರೆ ತುಪ್ಪಕ್ಕಾಗಿ ಜೇನು ಹುಡುಕುವವರು ವರ್ಷಕ್ಕೆ ಕನಿಷ್ಟವೆಂದರೂ ಇಪ್ಪತ್ತು ಜೇನುಗೂಡು ಪತ್ತೆ ಮಾಡಿರುತ್ತಾರೆ. ಒಮ್ಮೊಮ್ಮೆ ಎರಡೂ ತರಹದ ಜನರು ಒಂದಾಗಿ ಹೊರಟು, ತುಪ್ಪ ಒಬ್ಬರಿಗೆ ಜೇನುಹುಳುಗಳು ಮತ್ತೊಬ್ಬರಿಗೆ ಎಂದು ಪಾಲು ಮಾಡಿಕೊಳ್ಳುವುದೂ ಇದೆ.
ಸಂಪಳ್ಳಿಯ ಚೆನ್ನ ಜೇನುಗೂಡು ಪತ್ತೆ ಮಾಡುವುದರಲ್ಲಿ ನಮ್ಮ ಭಾಗದಲ್ಲಿ ಎತ್ತಿದ ಕೈ. ಚೆನ್ನ ತುಡುವೆ ಜೇನುತುಪ್ಪವನ್ನು ಮಾರಾಟಮಾಡಿ, ಅದರಲ್ಲಿ ಬರುವ ಹಣದಿಂದ ಎರಡು ತಿಂಗಳು ಆರಾಮಾಗಿ ಇರುತ್ತಿದ್ದ. ಆದರೆ ಅವನಿಗೆ ಜೇನನ್ನು ಪೆಟ್ಟಿಗೆಯೊಳಗೆ ಕೂಡುವ ವಿಚಾರ ಗೊತ್ತಿರಲಿಲ್ಲ. ಮತ್ತು ಅದರಲ್ಲಿ ಅವನಿಗೆ ಆಸಕ್ತಿಯೂ ಇರಲಿಲ್ಲ. ಮರದ ಪೆಟ್ಟಿಗೆಯನ್ನು ಹಣಕೊಟ್ಟು ತಂದು ಕಬ್ಬಿಣದ ಸ್ಟ್ಯಾಂಡ್ ಮಾಡಿಸಿ, ಜೇನು ಕೂಡಿಸಿ, ಜೇನುಹುಳ ತಿನ್ನಲು ಬರುವ ಓತಿ, ಜೇನುಹಕ್ಕಿ, ಬಂಡಾರು ಬಡ್ಚಿಗೆಯಿಂದ ಅವನ್ನು ರಕ್ಷಿಸಿ ತುಪ್ಪ ತೆಗೆಯುವುದರ ಬದಲು ಸುಮ್ಮನೆ ಕಾಡಲ್ಲಿ ಅಡ್ಡಾಡುತ್ತಾ ಅಲ್ಲಿ ಸಿದ್ಧವಾಗಿರುವ ಜೇನುತುಪ್ಪ ತಂದು ಮಾರಾಟ ಮಾಡುವುದೇ ಅವನಿಗೆ ಸುಲಭವಾಗಿತ್ತು. ಆದರೆ ವಾಸ್ತವವಾಗಿ ಅವನು ಸ್ವಲ್ಪ ಯೋಚಿಸಿದ್ದರೆ ಇನ್ನೂ ಬಹಳಷ್ಟು ಹೆಚ್ಚು ಹಣಗಳಿಸಿ ಯಶಸ್ವಿ ಜೇನು ಸಾಕಾಣಿಕಾದಾರನಾಗಬಹುದಿತ್ತು.
ಜೇನುತುಪ್ಪದ ಬೆಲೆಯ ವಿಚಾರದಲ್ಲಿ ಕಾಡಿನಿಂದ ಕಿತ್ತು ತಂದ ಜೇನುತುಪ್ಪಕ್ಕಿಂತ ಸಾಕಿದ ಪೆಟ್ಟಿಗೆಯಿಂದ ತೆಗೆದ ತುಪ್ಪಕ್ಕೆ ಎರಡುಪಟ್ಟು ಬೆಲೆ ಹೆಚ್ಚು. ಕಾರಣ, ಕಾಡಿನ ಜೇನನ್ನು ಹಿಡಿದು ತತ್ತಿಯನ್ನು ಕೈಯಿಂದ ಹಿಂಡಿ ತುಪ್ಪವನ್ನು ತೆಗೆಯುತ್ತಾರೆ. ಕೈಯಿಂದ ತುಪ್ಪವನ್ನು ಹಿಂಡುವಾಗ ತತ್ತಿಯೊಳಗಿನ ಮರಿಗಳೂ ಸೇರಿಬಿಟ್ಟಿರುತ್ತವೆ. ಹಾಗಾಗಿ ಆ ತುಪ್ಪ ಶುದ್ಧವಾಗಿರುವುದಿಲ್ಲ. ಅದೇ ಸಾಕಿದ ಜೇನಿನಲ್ಲಿ ಸಣ್ಣದಾದ ತುಪ್ಪ ತೆಗೆಯುವ ಯಂತ್ರದ ಮುಖಾಂತರ ತೆಗೆಯುವುದರಿಂದ ಉತ್ತಮ ತುಪ್ಪ ಸಿಗುತ್ತದೆ ಮತ್ತು ಅದು ಹುಳಿಬರುವುದಿಲ್ಲ. ದೀರ್ಘಕಾಲ ಬಾಳಿಕೆ ಬರುತ್ತದೆ. ಆದರೆ ಅದು ಸ್ವಲ್ಪ ಜಾಸ್ತಿ ಕೆಲಸವನ್ನು ಬೇಡುತ್ತದೆ. ಚೆನ್ನನಿಗೆ ಜಾಸ್ತಿ ಕೆಲಸ ಎಂದರೆ ಆಗುತ್ತಿರಲಿಲ್ಲ. ಬೇಗನೆ ಕೆಲಸ ಮುಗಿಯಬೇಕು ಮತ್ತು ಸಿಕ್ಕಷ್ಟು ದುಡ್ಡು ಸಾಕು ಎನ್ನುವ ತತ್ವ ಅವನದು. ಹಾಗಾಗಿ ನಾನು ಜೇನುಗೂಡು ಪತ್ತೆ ಮಾಡುವ ಮಟ್ಟಿಗೆ ಅವನನ್ನು ಆಶ್ರಯಿಸಬಹುದಿತ್ತು. ಅದರ ಹೊರತಾಗಿ ಪುಸ್ತಕದಲ್ಲಿ ಓದಿದಂತೆ ಜೇನುಸಾಕಾಣಿಕಾದಾರನ ಪಟ್ಟಿಗೆ ಅವನ ಹೆಸರನ್ನು ಸೇರಿಸುವಂತಿರಲಿಲ್ಲ. ಜೇನುಗೂಡನ್ನು ಪತ್ತೆ ಮಾಡಿ ಪೆಟ್ಟಿಗೆಯೊಳಗೆ ಸೇರಿಸಿದ ನಂತರದ ಸಾಹಸಗಳಿಗೆ ನಾನು ಬೇರೆಯವರನ್ನೋ ಅಥವಾ ಸ್ವಾವಲಂಬನೆಗೆ ಜೇನುಕೃಷಿ ಪುಸ್ತಕವನ್ನು ಆಶ್ರಯಿಸುವುದು ಅನಿವಾರ್ಯವಾಗಿತ್ತು. ಆದರೆ ಅದು ನಂತರದ್ದು, ಪ್ರಸ್ತುತ ಚೆನ್ನನ ಸಹಾಯದ ಅಗತ್ಯ ನನಗೆ ಇತ್ತು.
ನಿತ್ಯಸತ್ಯ

ಚೆನ್ನನ ಮನೆ ಸಮೀಪಿಸುತ್ತಿರುವಂತೆ ದೊಡ್ಡದಾಗಿ ಮಾತುಗಳು ಕೇಳಲಾರಂಭಿಸಿತು. ಸಂಪಳ್ಳಿಯ ಕೇರಿಯಲ್ಲಿ ಯುದ್ದ ಘೋಷಣೆಯಾಗಿತ್ತು. ಸಾಮಾನ್ಯವಾಗಿ ವಾರಕ್ಕೊಂದು ಯುದ್ದ ಅಲ್ಲಿ ನಡೆಯುತ್ತಿರುತ್ತದೆ. ಒಮ್ಮೊಮ್ಮೆ ಸಾಯಂಕಾಲ ಶುರುವಾದ ಜಗಳ ರಾತ್ರಿ ಹನ್ನೆರಡು ಘಂಟೆಯವರೆಗೆ ನಡೆದು, ನಿದ್ರೆಯ ಕಾರಣಕ್ಕಾಗಿ ಕದನವಿರಾಮ ಘೋಷಣೆಯಾಗಿ ಮತ್ತೆ ಬೆಳಿಗ್ಗೆ ಅದರ ಎರಡನೇ ಕಂತು ಕೆಲಸಕ್ಕೆ ಹೊರಡುವ ತನಕ ಮುಂದುವರೆಯುತ್ತಿರುತ್ತದೆ. ಅದು ರಾಜಿಯಾಗುವುದು ಸಾಯಂಕಾಲ. ರಾಜಿಯಾದ ವಾರದ ನಂತರ ಕದನ ಮತ್ತೆ ಶುರುವಾಗುವುದು ಸರ್ವೇಸಾಮಾನ್ಯ. ಆದರೆ ವ್ಯಕ್ತಿಗಳು ಬದಲಾಗುತ್ತಿರುತ್ತಾರೆ. ಅದಕ್ಕೆ ಸುತ್ತಮುತ್ತಲಿನವರು ಹೆಚ್ಚಿನ ಮಹತ್ವ ಕೊಡುವುದಿಲ್ಲ. ಕಂಡೂಕಾಣದಂತೆ ಅವರವರ ಕೆಲಸಗಳಿಗೆ ಹೋಗುತ್ತಲಿರುತ್ತಾರೆ. ಆದರೆ ನನಗೆ ಚೆನ್ನನನ್ನು ಕಾಣುವುದು ಅನಿವಾರ್ಯವಾಗಿತ್ತಾದ್ದರಿಂದ ಅಲ್ಲಿಯೇ ನಿಂತೆ.
ನಾನು ಸಾವ್ರ ಜನ್ರ ಜತೆ ಮಲಗ್ತೀನಿ ನಿಂಗೇನಾ ಹೆಣ್ಣು ದನಿಯ ಆರ್ಭಟ ಕೇಳುತ್ತಿತ್ತು.
ಸಾವ್ರ ಏನು ಹತ್ತಸಾವ್ರ ಜನ್ರ ಜತೆ ಹೋಗು ನಂಗೇನು ಚೆನ್ನನ ಉತ್ತರ ಅದಕ್ಕೆ.
ಏ ಹಲ್ಕಟ್ ಸೂಳೆಮಗನೆ ಅಷ್ಟಿದ್ದವ ನನ್ನ ಹಿಂದೆ ಇವ್ಳು ಯಾರ್ಜೊತೆ ಹೊಗ್ತಾಳೆ ಅಂತ ನೋಡಾಕೆ ಮೂರ‍್ಮನೆ ಕಾನ್ತನಕ ಬಂದಿದ್ದೆ
ಲೌಡಿ, ನಾಲ್ಗೆ ಬಿಗಿ ಹಿಡ್ದು ಮಾತಾಡು ನಾನು ಉಪ್ಪಾಕೆ ಹಣ್ಣು ಕೊಯ್ಯಾಕೆ ಹೋಗಿದ್ದೆ, ನಿನ್ನ ಮಿಂಡನ್ನ ಕಟ್ಗೆಂಡು ನಂಗೇನಾಗ್ಬೇಕು
ಬೋಳಿಮಗನೆ ಉಪ್ಪಾಕೆ ಹಣ್ಣಿನ ಮರ ಮೂರ‍್ಮನೆ ಕಾನಾಗೆ ಶಾಸ್ತ್ರಕ್ಕಾದ್ರೂ ಐತನಾ? ಅತ್ವಾ ನೀನು ಅಕೇಶಿಯಾ ಮರ‍್ದಾಗೆ ಉಪ್ಪಾಕೆ ಹಣ್ಣು ಕೊಯ್ತೀಯಾ?
ಓ....ಹೋ... ಹೋ...ಹೋ ಹೌದೌದು, ನೀನು ಹಗಲಿಡೀ ಮೂರ‍್ಮನೆ ಕಾನಾಗೆ ಅಂಗಾತ ಮಲ್ಕ್ಯಂಡು ಮ್ಯಾಲೆ ನೊಡ್ತಾ ಇರ್ತೀಯಾ, ಹಂಗಾಗಿ ನಿಂಗೆ ಇಡೀ ಕಾನಾಗೆ ಇರೋ ಮರದ ಜಾತ್ಯೆಲ್ಲಾ ಗೊತ್ತು.... ವ್ಯಂಗ್ಯವಾಡಿದ ಚೆನ್ನ.
ನನಗೆ ಅಲ್ಲಿ ನಿಲ್ಲಲೂ ಆಗದು, ಹಾಗಂತ ಚೆನ್ನನನ್ನು ಕಾಣದೆ ವಾಪಾಸು ಹೋಗಲು ಜೇನಿನ ಹುಚ್ಚು ಬಿಡದು, ಸ್ವಲ್ಪ ಹೊತ್ತು ಕುಮಟಾಭಟ್ರ ಅಂಗಡಿಕಟ್ಟೆಯ ಮೇಲೆ ಕುಳಿತು, ಜಗಳ ನಿಂತಮೇಲೆ ಬಂದರಾಯಿತು ಎಂದು ತಿರುಗಿದೆ. ನಾನು ಹೊರಟಿದ್ದು ಚೆನ್ನನ ಹೆಂಡತಿ ಸುಬ್ಬಿಗೆ ಕಾಣಿಸಿರಬೇಕು, ಅವಳು -
ಅಲ್ಲಿ ಭಟ್ರು ನಿಂತ್ಕಂಡು ಕಾಯ್ತಿದಾರೆ ಹೋಗ್ರಿ, ಆ ರಂಡೆಗಂತೂ ಮಾನಮರ‍್ವಾದಿ ಇಲ್ಲ, ನಿಮ್ಗೂ ಬೇರೆ ಕೆಲ್ಸ ಇಲ್ಲ, ಬೆಳ್ಗೆ ಬೆಳ್ಗೆ ಹೋಗಿ ಹೋಗಿ ಆ ನಾಯಿಬಾಯಿಗೆ ಕೋಲು ಹಾಕ್ತಾ ಕುಂತೀರಿ ಎಂದು ಚೆನ್ನನ ಬಳಿ ಹೇಳಿದಳು. ಚೆನ್ನ ಏಕಪಕ್ಷೀಯ ಕದನ ವಿರಾಮ ಘೋಷಿಸಿ ನನ್ನ ಬಳಿ ಬಂದು,
ಯಂತ್ರೀ....ರಾಗಣ್ಣ ಬೆಳಿಗ್ಗೆ ಮುಂಚೆ ಈ ಕಡಿಗೆ ಹೊಂಟ್ರಲಾ ಎಂದ.
ಕಾಡಲ್ಲಿ ಎಲ್ಲಾದ್ರು ಜೇನು ಕಂಡಿದ್ದೀಯಾ? ಎಂದು ಚೆನ್ನನನ್ನು ಕೇಳಿದೆ.
ಈ ಘೋರಾಕಾರದ ಮಳೇಗಾಲ್ದಲ್ಲಿ ಎಂಥಾ ಜೇನ್ರಿ, ಅವು ಊರ‍್ಬಿಟ್ಟು ಆಗ್ಲೆ ಎರ‍್ಡು ತಿಂಗ್ಳಾತು
ಅದು ನಂಗೂ ಗೊತ್ತಿದೆ, ಆದ್ರೆ ಅಪರೂಪಕ್ಕೊಂದು ಮರದ ಪೊಟರೆಯಲ್ಲಿ ಇರ‍್ತಾವಂತಲ್ಲ. ಅದ್ನೇನಾದ್ರೂ ಕಂಡಿದ್ರೆ ಹೇಳು, ನಾನು ಅದನ್ನ ಹಿಡಿದು ಪೆಟ್ಟಿಗೆ ಕೂಡಬೇಕಾಗಿದೆ
ಅಯ್ಯೋ.. ಈ ಮಳೆಗಾಲ್ದಲ್ಲಿ ಜೇನು ಹಿಡ್ದು ಪೆಟ್ಗೆ ಕೂಡಾಕೆ ಬರದಿಲ್ಲ, ಅದಕ್ಕೆ ಮಳೆಗಾಲ ಕಳ್ದು ಚಳಿಗಾಲ ಶುರುವಾಗ್ಬೇಕು. ಆ ಟೈಮಲ್ಲಿ ಮಾತ್ರ ಅವು ಪೆಟ್ಗೇಲಿ ನಿಲ್ತಾವೆ. ಹಂಗಾಗಿ ಇನ್ನು ಎರಡು ತಿಂಗ್ಳು ನೀವು ಕಾಯ್ಲೇ ಬೇಕು.
ದಿನಾ ಸಕ್ರೆಪಾಕ ಕೊಟ್ರೆ ಪೆಟ್ಗೇಲಿ ನಿಲ್ತಾವಂತಲ್ಲೋ,
ಅದು ನಂಗೆ ಗೊತ್ತಿಲ್ಲ, ಯಾಕಂದ್ರೆ ನಾನು ಜೇನುಗೂಡಿನ ಬಾಯಿಗೆ ಹೊಗೆ ಹಾಕಿ ಹುಳ ಹಾರ‍್ಸಿ ತತ್ತಿಯಿಂದ ತುಪ್ಪ ಹಿಂಡಿ ತರ‍್ತೀನಿ. ಈ ಟೈಮಲ್ಲಿ ಪೆಟ್ಗೇಲಿ ನಿಲ್ಲಲ್ಲ ಅಂತ ಪ್ರಶಾಂತಣ್ಣಯ್ಯ ಹೇಳಿದ್ದನ್ನ ಕೇಳಿದ್ದೆ, ನೀವೊಂದು ಕೆಲ್ಸ ಮಾಡಿ, ಅವ್ರನ್ನೆ ಕೇಳಿ. ಅವ್ರು ಮಳೆಗಾಲ್ದಲ್ಲಿ ಹೂವಿಗೆ ಬರೋ ಜೇನುಹುಳ ಹಿಡಿದು ಅದರ ಕುಂಡಿಗೆ ಕೆಂಪಿ ದಾರ ಕಟ್ಟಿ ಗೂಡು ಪತ್ತೆ ಮಾಡ್ತಾರೆ
ಅವ್ರನ್ನ ಕೇಳೋದು ಆಮೇಲಾತು. ನಿನಗೆ ನೂರು ರೂಪಾಯಿ ಕೊಡ್ತೀನಿ ಮರದ ಪೊಟರೆಯಲ್ಲಿರೊ ಒಂದು ಜೇನು ಪತ್ತೆ ಮಾಡಿಕೊಡ್ತೀಯಾ? ಎಂದು ಚೆನ್ನನನ್ನು ಕೇಳಿದೆ.
ಅಯ್ಯ.. ದುಡ್ಡಿನ ಮಕಕ್ಕೆ ಅಷ್ಟು ಬೆಂಕಿ ಬಿತ್ತು, ಈಗ ಮಳೆಮಾಡ ತುಂಬ್ಕಂಡೈತಿ, ಹಂಗಾಗಿ ಹುಳದ ದಾರಿ ಪತ್ತೆಮಾಡೊದು ಬಹಳ ಕಷ್ಟ. ಗೂಡು ಪತ್ತೆ ಮಾಡಕೆ ಬಿಸಿಲು ಬೇಕೇಬೇಕು. ನೀವು ಯಾವ್ದಕ್ಕೂ ಮಳೆಗಾಲ ಮುಗಿದ ಮೇಲೆ ಒಂದ್ಸಾರಿ ನೆಪ್ಪ ಮಾಡ್ರಿ ಎನ್ನುತ್ತಾ ಮನೆಕಡೆ ಹೊರಟ. ಅವನಿಗೆ ನನ್ನ ಜೇನಿನ ಕುರಿತಾದ ಪ್ರಶ್ನೆಗಳಿಗೆ ಉತ್ತರ ಕೊಡುವ ಆಸಕ್ತಿ ಇರಲಿಲ್ಲ. ಅರ್ಧಕ್ಕೆ ನಿಲ್ಲಿಸಿ ಬಂದಿದ್ದ ಜಗಳದ ಯೋಚನೆಯೇ ಜಾಸ್ತಿಯಾಗಿತ್ತು.
ಕದನವನ್ನು ಚೆನ್ನ ನಿಲ್ಲಿಸಿದ್ದನೇ ಹೊರತು ಆಕೆ ನಿಲ್ಲಿಸಿರಲಿಲ್ಲ. ಆದರೆ ಧ್ವನಿ ಸ್ವಲ್ಪ ಸಣ್ಣದಾಗಿತ್ತು.
ಏ... ಬಸ್ವಿ, ನಿನ್ನ ಅಪ್ಪ ಅಮ್ಮ ನಿಂಗೆ ಸರಿಯಾದ ಹೆಸ್ರು ಇಟ್ಟಿದಾರೆ ನೋಡು, ಊರುಬಸ್ವಿ ಅಂತ ಇಟ್ಟಿದ್ರೆ ಇನ್ನೂ ಲಾಯ್ಕಿತ್ತು. ನಿನ್ಮಿಂಡ ಎಮ್ಮೆ ಹೊಡ್ಕಂಡು ಗದ್ದಿಗೆ ಹೊಂಟ ನೋಡು, ಒಂದ್ ಮೋಟ್‌ಕತ್ತಿ ಹಿಡ್ಕಂಡು ಮನ್ಯಾಗೆ ಬೆಂಕಿ ಒಟ್ಟಾಕೆ ಒಂಚೂರು ಕಟಿಗೆಯಿಲ್ಲಾ ಈಗ್ ತರ್ತೀನಿ ಅಂತ ಗಂಡನತಾವ ಒಂದ್ ಅಗಡಬಾಂಕ್ ಸುಳ್ಳೇಳಿ ನೀನೂ ಆ ಕಡೆ ಹೋಗು ಎಂದ. ಇಷ್ಟು ಹೊತ್ತಿನ ತನಕ ಸಣ್ಣದಾಗಿ ಗೊಣಗುಟ್ಟುತ್ತಿದ್ದ ಬಸವಿಯ ದನಿ ಆ ಕಡೆಯಿಂದ ಮತ್ತೆ ಆರ್ಭಟಿಸತೊಡಗಿತು.
ಬೇವರ್ಸಿ ಸೂಳೆಮಗನೆ, ನಮ್ಮ ಅಪ್ಪ ಅಮ್ಮನ ಸುದ್ದಿ ಎತ್ತಿದ್ರೆ ಬೋಟಿತೆಗಿತೀನಿ ನೋಡು, ನೀನು ಕೊಸಿಯೋದು ಆಚಾರ ಮಾಡೋದೆಲ್ಲಾ ಅನಾಚಾರ ಅಂತಾ ಊರಿಗೆಲ್ಲಾ ಗೊತ್ತು, ನಿನ್ಮನೆ ಆಟಾನೆಲ್ಲಾ ನನ್ನತ್ರ ತೋರಿಸಬ್ಯಾಡ, ನೀನು ವಾಟೆಕಾಯಿ ಕೊಯ್ಯಕೆ ಹೋದಾಗ ಮಾಡೊ ಹಲ್ಕಟ್ ಕೆಲ್ಸ ನಂಗೆ ಏನು ಇಡೀ ಊರಿಗೆ ಗೊತ್ತು. ನಿಂಗೆ ತಾಕತ್ತಿದ್ರೆ ನೀನೂ ಬಾ ನಿನ್ನ ಮಗನ್ನೂ ಕಳುಸು, ಅದ ಬಿಟ್ಟು............ ಮುಂದುವರೆಯುತ್ತಲೇ ಇತ್ತು. ನನಗೆ ಜಗಳ ನೋಡುವ ಆಸೆ ಇತ್ತಾದರೂ ಇನ್ನು ಹೆಚ್ಚು ಹೊತ್ತು ಅಲ್ಲಿ ನಿಂತರೆ ನೋಡಿದವರು ತಪ್ಪು ತಿಳಿದಾರು ಎಂದು ಮನೆಯ ಕಡೆ ಹೊರಟೆ.
ಜೇನಜಾತಿ

ಜೇನು, ಶಿಸ್ತುಬದ್ದ ಜೀವನ ನಡೆಸುವ ಜೀವಿ. ಜೇನಿನ ಪ್ರಬೇಧದಲ್ಲಿ ಸಾವಿರಾರು ಜಾತಿಯ ಜೇನುಗಳಿದ್ದರೂ ಪ್ರಮುಖವಾಗಿ ಹೆಜ್ಜೇನು, ತುಡುವೆ, ನಿಸರಿ, ಹಾಗು ಕೋಲ್ಜೇನು ಎಂಬ ನಾಲ್ಕು ಜಾತಿಯ ತುಪ್ಪವನ್ನು ಮನುಷ್ಯ ಬಳಕೆ ಮಾಡುತ್ತಿದ್ದಾನೆ.
ಹೆಜ್ಜೇನುತುಪ್ಪವನ್ನು ಆಹಾರಕ್ಕಾಗಿ ಹಾಗು ತತ್ತಿಯನ್ನು ಮೇಣಕ್ಕಾಗಿಯೂ ಬಳಕೆ ಮಾಡುತ್ತಾರಾದರೂ ಅದನ್ನು ಪೆಟ್ಟಿಗೆಯಲ್ಲಿಟ್ಟು ಸಾಕಾಣಿಕೆ ಮಾಡಲು ಆಗುವುದಿಲ್ಲ. ಅವು ಬೆಳಕಿನಲ್ಲಿಯೇ ಗೂಡು ಕಟ್ಟುತ್ತವೆ. ದೊಡ್ಡ ಕಟ್ಟಡಗಳಲ್ಲಿ, ಆಕಾಶದೆತ್ತರದ ಮರಗಳಲ್ಲಿ ಒಂದೇ ತತ್ತಿಗೆ ಲಕ್ಷಾಂತರ ಹುಳುಗಳು ಜೋತು ಬಿದ್ದಿರುತ್ತವೆ. ಅವು ಗಾತ್ರದಲ್ಲಿ ದೊಡ್ಡದಿದ್ದು ಮನುಷ್ಯನ ಪ್ರಾಣಕ್ಕೆ ಸಂಚಕಾರ ತಂದ ಹಲವಾರು ಘಟನೆಗಳು ಕಾಣಸಿಗುತ್ತವೆ.
ಗಾತ್ರದಲ್ಲಿ ಹೆಜ್ಜೇನನ್ನು ಹೋಲುವ ಆದರೆ ಕತ್ತಲೆಯಲ್ಲಿ ಮಾತ್ರ ಗೂಡುಕಟ್ಟುವ, ಪೆಟ್ಟಿಗೆಯಲ್ಲಿಟ್ಟು ಸಾಕಬಹುದಾದ ಮೆಲ್ಲಿಫಿರಾ, ಎಂಬ ವಿದೇಶಿತಳಿ ಭಾರತಕ್ಕೆ ವಿದೇಶದಿಂದ ಬಂದಿದೆಯಾದರೂ ಅದಕ್ಕೆ ಹೇರಳ ಹೂವುಗಳು ಬೇಕಾಗುವುದರಿಂದ ಮಲೆನಾಡಿನಲ್ಲಿ ಅವುಗಳ ಸಾಕಾಣಿಕೆ ಕಷ್ಟಕರ. ಸಾವಿರಾರು ಎಕರೆ ಜಾಗದಲ್ಲಿ ಸೂರ್ಯಕಾಂತಿ ಬೆಳೆಯುವ ಉತ್ತರಭಾರತದಲ್ಲಿ ಮೆಲ್ಲಿಫಿರಾ ಜೇನನ್ನು ಸಾಕುತ್ತಾರೆ.
ಕೋಲ್ಜೇನು ಗಾತ್ರದಲ್ಲಿ ತುಡುವೆಜೇನಿಗಿಂತ ಸ್ವಲ್ಪ ಚಿಕ್ಕದಾಗಿದ್ದು ಅರೆಮರೆಯಲ್ಲಿ ಸಣ್ಣಗಾತ್ರದ ಮರದ ಟೊಂಗೆಗೆ ಕಟ್ಟಿಕೊಳ್ಳುತ್ತದೆ. ಸಾವಿರದೊಳಗಿನ ಹುಳುಗಳ ಸಂಖ್ಯೆಯ ಇವು ಅಲ್ಪಸ್ವಲ್ಪ ತುಪ್ಪವನ್ನು ಮಾತ್ರ ಸಂಗ್ರಹಿಸಿಡುತ್ತದೆ. ಇವನ್ನು ಸಾಕಾಣಿಕೆ ಮಾಡಲಾಗುವುದಿಲ್ಲ.
ನಿಸರಿಹುಳು ಜೇನಿಗಿಂತ ಭಿನ್ನ ಜಾತಿಯ ಹುಳುವಾಗಿದ್ದು ತುಪ್ಪದ ರುಚಿಯಲ್ಲಿ ಹಾಗೂ ಔಷಧೀಯ ಗುಣಗಳಲ್ಲಿ ವಿಶಿಷ್ಠ ಸ್ಥಾನಗಳಿಸಿದೆ. ಇದರ ಏರಿ ಕಟ್ಟುವ ವಿಧಾನ ಹಾಗು ಜೀವನ ಕ್ರಮಗಳು ಜೇನಿನಷ್ಟು ಶಿಸ್ತುಬದ್ದವಾಗಿರುವುದಿಲ್ಲವಾದ್ದರಿಂದ ಅವುಗಳನ್ನು ದೊಡ್ದ ಪ್ರಮಾಣದಲ್ಲಿ ಸಾಕಾಣಿಕೆ ಮಾಡಲಾಗುವುದಿಲ್ಲ.
ತುಡುವೆಜೇನು ಇವೆಲ್ಲಕ್ಕಿಂತ ಸಾಕಾಣಿಕೆಯಲ್ಲಿಯೂ ಆದಾಯದಲ್ಲಿಯೂ ಮನುಷ್ಯರಿಗೆ ಹೊಂದಿಕೊಂಡಿರುವುದರಿಂದ ಹಾಗು ಅತ್ಯಂತ ವ್ಯವಸ್ಥಿತ ಜೀವನಕ್ರಮದಿಂದ ಎಲ್ಲರನ್ನೂ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಇವುಗಳಲ್ಲಿ ಎರಡು ಜಾತಿ, ಒಂದು ಅರಿಶಿನತುಡುವೆ ಇನ್ನೊಂದು ಕಪ್ಪುತುಡುವೆ. ಇವೆರಡು ಜಾತಿಗಳಲ್ಲಿ ಬಣ್ಣದ ವ್ಯತ್ಯಾಸದ ಹೊರತಾಗಿ ಮತ್ಯಾವುದೇ ವ್ಯತ್ಯಾಸ ಕಂಡುಬರುವುದಿಲ್ಲ. ಕಪ್ಪುತುಡುವೆಜೇನು ಮಲೆನಾಡಿನ ಹವಾಗುಣಕ್ಕೂ, ಅರಿಶಿನ ತುಡುವೆಜೇನು ಬಯಲುಸೀಮೆಯ
ಹವಾಗುಣಕ್ಕೂ ಒಗ್ಗಿಕೊಂಡಿವೆ. ಪ್ರಪಂಚದ ಎಲ್ಲಾ ದೇಶಗಳಲ್ಲಿಯೂ ಜೇನುಹುಳುಗಳು ಇದ್ದು ಅಲ್ಲಿಯ ಹವಾಗುಣಕ್ಕೆ ಸಣ್ಣಪುಟ್ಟ ಬದಲಾವಣೆಯ ದೇಹ ರಚನೆಯನ್ನು ಹೊಂದಿವೆ. ಆದರೆ ತುಪ್ಪ ಸಂಗ್ರಹಿಸುವ ಮೂಲಗುಣ ಮಾತ್ರ ಎಲ್ಲಾ ಕಡೆಗಳಲ್ಲಿಯೂ ಒಂದೇರೀತಿ.
ಜೇನು ಸಾಕಾಣಿಕ ವಿಧಾನದ ಪುಸ್ತಕದ ಮಾಹಿತಿಯನ್ನು ಮೆಲುಕು ಹಾಕುತ್ತಾ ಮನೆಯಕಡೆ ಹೊರಟವನಿಗೆ ಚೆನ್ನ ಮಳೆಗಾಲದಲ್ಲಿ ಜೇನುಗೂಡು ಕಂಡುಹಿಡಿಯುವ ಪ್ರಶಾಂತನ ಹೊಸ ವಿಧಾನದ ಬಗ್ಗೆ ಹೇಳಿದ್ದು ನೆನಪಾಯಿತು. ಹೇಗೂ ಬಂದಿದ್ದಾಗಿದೆ ಸಂಪಳ್ಳಿಯಿಂದ ಪ್ರಶಾಂತನ ಮನೆಯಿರುವ ಕೆರೆಕೈ ಕೂಗಳತೆಯಷ್ಟು ದೂರ ಅವನನ್ನು ವಿಚಾರಿಸಿಕೊಂಡು ಹೋದರಾಯಿತು ಎಂದು ಅತ್ತಕಡೆ ಹೊರಟೆ.
ಪ್ರಶಾಂತ ತುಡುವೆಜೇನು ಹಿಡಿದು ಪೆಟ್ಟಿಗೆಯಲ್ಲಿ ಸಾಕುವುದರಲ್ಲಿ ಎತ್ತಿದ ಕೈ. ಕಡ್ಡಿಯಂತೆ ಸಪೂರವಾಗಿದ್ದ ಅವನಿಗೆ ಮರ ಹತ್ತುವುದು, ಹುತ್ತದೊಳಕ್ಕೆ ತೂರುವುದು ಬಹಳ ಸುಲಭವಾಗಿತ್ತು. ಹಾಗಾಗಿ ಜೇನು ಮರದ ತುದಿಯ ಪೊಟರೆಯಲ್ಲಿದ್ದರೂ ಬಿಡುತ್ತಿರಲಿಲ್ಲ. ನಾಲ್ಕೈದು ವರ್ಷಗಳ ಹಿಂದೆ ದೊಡ್ಡ ಪ್ರಮಾಣದಲ್ಲಿ ಜೇನು ಕೃಷಿ ಆರಂಭಿಸಿ ನಂತರ ಅಡಿಕೆ ವ್ಯಾಪಾರ ಶುರುಮಾಡಿದ ಕಾರಣದಿಂದ ಜೇನು ಸಾಕಾಣಿಕೆ ಬಗೆಗಿನ ಆಸಕ್ತಿ ಕಡಿಮೆಯಾಗಿ ಒಂದು ಪೆಟ್ಟಿಗೆಯನ್ನು ಮಾತ್ರ ಇಟ್ಟುಕೊಂಡಿದ್ದ. ಜೇನುಹುಳಗಳ ಬಗ್ಗೆ ಪ್ರಶಾಂತ ಹೊಸಹೊಸ ವಿಧಾನಗಳನ್ನು ಅದೆಲ್ಲಿಂದಲೋ ಪತ್ತೆಮಾಡಿಕೊಂಡು ಅನುಷ್ಠಾನಗೊಳಿಸುತ್ತಿದ್ದ. ಅದರಲ್ಲಿ ಮಳೆಗಾಲದ ದಿನಗಳಲ್ಲಿ ಜೇನುಗೂಡು ಪತ್ತೆಮಾಡುವ ವಿಧಾನವೂ ಒಂದು.
ಅಪರೂಪಕ್ಕೆ ಹೂವಿನಮಕರಂದ ಹೀರಲು ಬರುವ ತುಡುವೆಜೇನುಹುಳವನ್ನು ಕೈಯಲ್ಲಿ ನಿಧಾನವಾಗಿ ಹಿಡಿದು ಅದರ ಸೊಂಟಕ್ಕೆ ಸಣ್ಣದಾದ ಬಣ್ಣದ ದಾರವನ್ನು ಕಟ್ಟಿ ಅದು ಹಾರಿಹೋಗುವ ದಾರಿಗುಂಟ ಸಾಗಿದರೆ ಜೇನುಗೂಡು ಸುಲಭವಾಗಿ ಪತ್ತೆಯಾಗಿಬಿಡುತ್ತಿತ್ತು. ಇಲ್ಲಿ ಎರಡು ಕ್ರಮಗಳನ್ನು ಬಹಳ ಎಚ್ಚರಿಕೆಯಿಂದ ಮಾಡಬೇಕಾಗಿತ್ತು ಮೊದಲನೆಯದು ದಾರವನ್ನು ಜೇನುಹುಳದ ಸೊಂಟಕ್ಕೆ ಬಿಗಿಯಾಗದಂತೆ ಹಾಗು ದಾರ ಕಳಚಿಹೋಗದಂತೆ ಕಟ್ಟುವುದು. ಎರಡನೆಯದು ದಾರದ ಬಣ್ಣ ಹಾಗು ಉದ್ದ. ಸಾಧ್ಯವಾದಷ್ಟು ದೂರದಿಂದ ಗುರುತಿಸಬಹುದಾದ ದಟ್ಟಬಣ್ಣದ ದಾರವನ್ನು ಬಳಸಬೇಕು ಹಾಗು ಅದು ಜಾಸ್ತಿ ಉದ್ದವಾಗಿರದಂತೆ ನೋಡಿಕೊಳ್ಳಬೇಕು. ದಾರದ ಬಣ್ಣ ಮಾಸಲಾಗಿದ್ದರೆ ಹುಳ ಮೇಲೆ ಹಾರಿದಾಗ ನಮಗೆ ಕಾಣಿಸುವುದೇ ಇಲ್ಲ. ಅದೇರೀತಿ ದಾರದ ಉದ್ದ ತೀರ ಜಾಸ್ತಿಯಾಗಿದ್ದರೆ ಅದು ಗಿಡಗಂಟಿಗಳಿಗೆ ಸಿಕ್ಕಿಹಾಕಿಕೊಂಡು ಹುಳದ ಪ್ರಾಣಕ್ಕೆ ಸಂಚಕಾರ ಬಂದೆರೆಗುವ ಸಾಧ್ಯತೆ ಹೆಚ್ಚು . ಹಾಗಾಗಿ ಇವೆರಡು ಮುನ್ನೆಚ್ಚರಿಕೆ ಕ್ರಮವನ್ನು ಅನುಸರಿಸಿ ಕೆಲಸಮಾಡಿದರೆ ಘೋರಾಕಾರದ ಮಳೆಗಾಲದಲ್ಲಿಯೂ ಜೇನುಹಿಡಿಯುವ ಕೆಲಸದಲ್ಲಿ ಯಶಸ್ಸು ಸಾಧ್ಯ ಎಂಬುದು ಪ್ರಶಾಂತ ಅನುಭವದಿಂದ ಕಂಡುಕೊಂಡ ಸತ್ಯ.
ಯಾವ ಪುಸ್ತಕದಲ್ಲಿಯೂ ಸಿಗದ ಇಂತಹ ಹಲವಾರು ಉಪಾಯಗಳು ಜೇನು ಸಾಕಾಣಿಕಾದಾರರ ಅನುಭವದಲ್ಲಿ ಬಚ್ಚಿಟ್ಟುಕೊಂಡಿರುತ್ತವೆ. ಹಾಗಾಗಿ ಈ ತರಹದ ಹಲವಾರು ಮಾಹಿತಿಗಳನ್ನು ತಿಳಿದಿರುವ ಪ್ರಶಾಂತನನ್ನು ಹುರಿದುಂಬಿಸಿ ನನ್ನ ಜೊತೆಗೂಡಿಸಿಕೊಂಡರೆ ನನಗೆ ಸ್ವಲ್ಪ ಸಹಾಯವಾಗಬಹುದೆಂಬ ಆಲೋಚನೆಯೊಂದಿಗೆ ಅವರ ಮನೆಯೊಳಕ್ಕೆ ಕಾಲಿಟ್ಟೆ. ಆದರೆ ಪ್ರಶಾಂತ ಅಡಿಕೆವ್ಯಾಪಾರಕ್ಕೆಂದು ಕಲಗಾರಿಗೆ ಹೋಗಿದ್ದಾನೆಂದು ಅವನ ಅಮ್ಮ ಹೇಳಿದ್ದರಿಂದ ಇವತ್ತೇಕೋ ಹೊರಟ ಘಳಿಗೆ ಸರಿಯಿಲ್ಲವೆಂದೆನಿಸಿ ಮನೆಯ ಕಡೆ ವಾಪಾಸು ಹೊರಟೆ. ----------------------------

ದಾರದ ದಾರಿ

ಮನೆಗೆ ಹೋಗುವ ದಾರಿಯಲ್ಲಿ ಹುಳವೊಂದು ಬಿಕ್ಕೆಗಿಡದ ಸುತ್ತಲೂ ರೊಂಯ್ಯನೆ ಸದ್ದು ಮಾಡುತ್ತಾ ಸುತ್ತುತ್ತಿತ್ತು. ಜೇನು ಇರಬಹುದಾ ಎಂದು ಪರಿಶೀಲಿಸಿದೆ. ಅಲ್ಲ ಎನ್ನಲು ನನ್ನ ಬಳಿ ಯಾವ ಕಾರಣವೂ ಇರಲಿಲ್ಲ. ಹುಡುಕಿದ ಬಳ್ಳಿ ಕಾಲಿಗೇ ತೊಡರಿದಂತಾಯಿತಲ್ಲಾ, ಪ್ರಶಾಂತನ ಜೇನುಗೂಡು ಪತ್ತೆಮಾಡುವ ವಿಧಾನವನ್ನು ಅನುಷ್ಠಾನಗೊಳಿಸಲು ಇಷ್ಟು ಬೇಗನೆ ಅವಕಾಶ ಸಿಕ್ಕಿತಲ್ಲ ಎಂದು ಸಂತೊಷದಿಂದ ದಾರಕ್ಕಾಗಿ ಹುಡುಕಾಡಿದೆ. ಅಲ್ಲೆಲ್ಲಿ ದಾರ?, ಮನೆಗೆ ಹೋಗಿ ದಾರ ತರೋಣವೆಂದರೆ ಅಷ್ಟರಲ್ಲಿ ಹುಳ ಹಾರಿ ಹೋದರೆ ಅನ್ನುವ ಭಯ, ಏನು ಮಾಡಲಿ ಎಂದು ಆಲೋಚಿಸುತ್ತಿರುವಾಗ ಮಿಂಚಿನಂತೆ ಉಪಾಯವೊಂದು ಹೊಳೆಯಿತು. ಕೈಯಲ್ಲಿ ಬೆಣ್ಣೆ ಇಟ್ಟುಕೊಂಡು ತುಪ್ಪಕ್ಕಾಗಿ ಊರೆಲ್ಲಾ ಸುತ್ತಿದ ಗಾದೆ ಮಾತು ನೆನಪಾಯಿತು. ಉಟ್ಟ ಲುಂಗಿಯ ತುದಿಯಿಂದ ದಾರದ ತುಂಡೊಂದನ್ನು ಎಳೆದೆ. ಮೂರ‍್ನಾಲ್ಕು ಪ್ರಯತ್ನಗಳು ವಿಫಲವಾದ ನಂತರ ಗೇಣುದ್ದದ ದಾರ ಕೈಗೆ ಬಂತು. ಆಗ ಜೇನು ಬಿಕ್ಕೆಹೂವಿನ ಮೇಲೆ ಕುಳಿತಿತ್ತು. ಗಾತ್ರದಲ್ಲಿ ಸ್ವಲ್ಪ ದೊಡ್ಡದಾಗಿದ್ದರಿಂದ ರಾಣಿ ಹುಳುವೇ ಇರಬಹುದು ಎಂದು ಅನಿಸಿತಾದರೂ, ರಾಣಿಹುಳು ಮಕರಂದಕ್ಕಾಗಲೀ ಆಹಾರ ಸಂಗ್ರಹಣೆಗಾಗಲೀ ಹೊರಗಡೆ ಹೋಗುವುದಿಲ್ಲ ಎಂಬುದು ನೆನಪಾಯಿತು. ಬಹುಶಃ ಸ್ವಲ್ಪ ದೊಡ್ಡ ಗಾತ್ರದ ಜೇನಿನ ಹುಳವಾಗಿರಬಹುದೆಂದು ನಿಧಾನ ಹಿಡಿಯಲು ಕೈಚಾಚಿದೆ. ಅದು ನನಗಿಂತ ಬಲು ಸೂಕ್ಷ್ಮ. ನನ್ನ ಯೋಜನೆ ಅದಕ್ಕೆ ಹೊಳೆದಿರಬೇಕು, ರೊಂಯ್ಯನೆ ಮತ್ತೊಂದು ಬಿಕ್ಕೆ ಗಿಡದಮೇಲೆ ಹೋಗಿ ಕುಳಿತುಕೊಂಡಿತು. ಹೀಗೆ ನಾಲ್ಕೈದುಬಾರಿ ಪ್ರಯತ್ನಮಾಡಿ ಇದು ನನ್ನ ಕೈಯಲ್ಲಿ ಆಗದ ಕೆಲಸ ಎಂದು ಹೊರಡಲನುವಾದೆ. ಆದರೆ ಕೈಗೆ ಸಿಕ್ಕ ಅವಕಾಶವನ್ನು ದೂರಮಾಡಿ ಹೋಗಲು ಮನಸ್ಸಾಗದೆ ಪ್ರಯತ್ನ ಮುಂದುವರೆಸಿದೆ. ಚಿಟ್ಟೆ ಹಿಡಿಯುವ ಕೈಹಿಡಿಕೆಯುಳ್ಳ ಬಲೆ ಇದ್ದಿದ್ದರೆ ಎಂಬ ಆಲೋಚನೆ ಬಂತು, ಆ ಆಲೋಚನೆ ಬಂದದ್ದೆ, ಅರೆ ಹೌದು ಬಲೆ ಇಲ್ಲದಿದ್ದರೆ ಏನಾಯಿತು ಅದೇ ತರಹದ ಬಟ್ಟೆ ಇದೆಯೆಲ್ಲಾ ಎಂದು ಉಟ್ಟ ಲುಂಗಿ ಬಿಚ್ಚಿ ಜೇನುಹುಳದ ಮೇಲೆ ಎಸೆದೆ. ನನ್ನ ಈ ಹೊಸ ಯೋಜನೆ ಮೊದಲನೆಯ ಬಾರಿಯೇ ಯಶಸ್ಸು ಕಂಡಿತು. ಲುಂಗಿಯೊಳಗೆ ಸಿಕ್ಕಿಕೊಂಡ ಹುಳ ಹಾರಲಾಗದೆ ಅಲ್ಲಿಯೇ ಸದ್ದು ಮಾಡತೊಡಗಿತು. ಬಿಕ್ಕೆಗಿಡದ ಮೇಲಿದ್ದ ಲುಂಗಿಯ ಅಡಿಯಿಂದ ಕೈಯನ್ನು ಹಾಕಿ ಹುಳ ಹಿಡಿದುಕೊಂಡು ಬಹಳ ಎಚ್ಚರಿಕೆಯಿಂದ ದಾರ ಕಟ್ಟಿ ಹಾರಲು ಬಿಟ್ಟೆ. ಒಂದೆರಡು ಬಾರಿ ದಾರದೊಂದಿಗೆ ಹಾರಲು ಅದು ಮಿಸುಕಾಡಿದರೂ ಮೂರನೆ ಬಾರಿಗೆ ದಾರದ ಸಮೇತ ಹಾರಲು ಯಶಸ್ವಿಯಾಯಿತು.
ಪ್ರಶಾಂತನ ಜೇನುಗೂಡು ಪತ್ತೆಮಾಡುವ ನೂತನ ವಿಧಾನ ಇಲ್ಲಿಯವರೆಗೆ ಯಶಸ್ವಿ ಹಾಗು ಸುಲಭವಾಗಿತ್ತು ನಿಜ. ಆದರೆ ಈಗ ದಾರ ಕಟ್ಟಿದ ನಂತರ ಹುಳುವನ್ನು ಬೆನ್ನತ್ತುವುದು ಯಾವ ಜನ್ಮದ ವೈರಿಗಳಿಗೂ ಬೇಡದ ಕೆಲಸವಾಗಿತ್ತು. ಅವುಗಳಿಗಾದರೋ ಗಾಳಿಯಲ್ಲಿ ಅಡ್ಡಿ ಆತಂಕಗಳಿಲ್ಲದ ರಹದಾರಿ, ಅದನ್ನು ಹಿಂಬಾಲಿಸುವ ನಮಗೆ ಕಲ್ಲು ಮುಳ್ಳುಗಳ ದಾರಿ.
ಆದರೆ ಯಾವ ಕಾರಣಕ್ಕೂ ಕೈಬಿಡುವಂತಿರಲಿಲ್ಲ. ಕಲ್ಲುಮುಳ್ಳುಗಳನ್ನು ಲೆಕ್ಕಿಸದೆ ಹುಳುವಿಗೆ ಕಟ್ಟಿದ್ದ ದಾರವನ್ನು ನೊಡುತ್ತಾ, ಕೈಕಾಲುಗಳಲ್ಲಿ ಮುಳ್ಳು ಕೊರೆದು ರಕ್ತ ಸುರಿಯುತ್ತಿದ್ದರೂ ಗಮನಿಸದೆ ಓಡಿದೆ. ಒಮ್ಮೆ ಗುಡ್ಡದ ಕಡೆ ಮತ್ತೊಮ್ಮೆ ಕಾಡಿನಕಡೆ ಮಗದೊಮ್ಮೆ ನಮ್ಮಮನೆಯ ರಸ್ತೆಯಕಡೆ ಹೀಗೆ ಅದು ಹಾರುತ್ತಿತ್ತು. ವಿಚಿತ್ರವೆಂದರೆ ಆ ಹುಳು ನಾನು ಅದರ ಗೂಡನ್ನು ಪತ್ತೆಮಾಡುತ್ತಿದ್ದೇನೋ ಅಥವಾ ಅದು ನನ್ನ ಮನೆ ಪತ್ತೆ ಮಾಡುತ್ತಿದೆಯೋ ಎನ್ನುವಂತೆ ನಮ್ಮ ಮನೆಯ ಕಡೆ ಹೋಗುತ್ತಿತ್ತು. ಏನಾದರಾಗಲಿ ಆಮೇಲೆ ನೋಡೋಣ ಎಂದು ಅದರ ಹಿಂದೆಯೇ ಓಡಿದೆ. ಅದು ಸೀದಾ ನಮ್ಮ ಮನೆಯ ಜಗುಲಿಯನ್ನು ಪ್ರವೇಶಿಸಿತು. ಒಮ್ಮೆ ಸಖೇದಾಶ್ಚರ್ಯವಾಯಿತು. ಅರೆ, ಜೇನು ನನಗೆ ತಿಳಿಯದಂತೆ ನಮ್ಮ ಮನೆಯೊಳಗೆ ಸೇರಿಕೊಂಡಿದೆಯಾ?, ಇದೆಂತಹಾ ವಿಚಿತ್ರ ವಿಷಯವಾಯಿತಲ್ಲ ಎಂದು ಒಮ್ಮೆ ಅನಿಸಿತು. ಆದರೆ ಈ ವಿಷಯ ನಗೆಪಾಟಲಾಗಲು ಹೆಚ್ಚು ಸಮಯ ಬೇಕಾಗಲಿಲ್ಲ.
ಜಗುಲಿ ಪ್ರವೇಶಿಸಿದ ಜೇನು ಹುಳುವನ್ನು ಹುಡುಕಾಡಿದೆ. ಮರದ ಪಕಾಸಿಯ ಮೂಲೆಯಲ್ಲಿ ಒಂದು ಸಣ್ಣ ಮಣ್ಣಿನ ಗೂಡಿನ ಬಾಯಿಂದ ನಾನು ಕಟ್ಟಿದ ಲುಂಗಿಯ ದಾರ ನೇತಾಡುತ್ತಿತ್ತು. ಅಷ್ಟರಲ್ಲಿ ಅಮ್ಮ ಒಳಗಡೆಯಿಂದ ಬಂದು ಎನೋ ಅದು? ಅಂದಳು. ಜೇನುಹುಳಕ್ಕೆ ದಾರ ಕಟ್ಟಿ ಫಾಲೋ ಮಾಡಿದ ಕಥೆ ಹೇಳಿದೆ. ಅಯ್ಯೋ ಹುಚ್ಚು ಮುಂಡೆಗಂಡ ಅದು ಜೇನಲ್ಲ ಗುಬ್ಬಿನೊಣ, ಅದು ಮಣ್ಣಿನಗೂಡು ಕಟ್ಟಿ ಮನೆಯನ್ನೆಲ್ಲಾ ರಾಡಿ ಮಾಡುತ್ತದೆ ಎಂದು ಹೇಳಿ ಹಿಡಿಯಿಂದ ಅದನ್ನು ಕಿತ್ತೆಸೆದಳು. ಜೇನು ಹಿಡಿಯುವ ಪ್ರಯತ್ನದಲ್ಲಿ ಪ್ರಥಮ ಚುಂಬನಂ ದಂತಭಗ್ನಂ ಕಥೆ ನನ್ನದಾದರೂ ಈ ಘಟನೆಯಿಂದ ಜೇನಿನ ಹುಚ್ಚು ಇನ್ನಷ್ಟು ಹೆಚ್ಚಿತೇ ಹೊರತು ಕಡಿಮೆಯಾಗಲಿಲ್ಲ.
ಆದರೆ ಈ ಘಟನೆ ಮತ್ತೊಂದು ಸಣ್ಣ ನಗೆ ಪ್ರಸಂಗಕ್ಕೆ ಕಾರಣವಾಯಿತು. ನಾನು ಬಿಕ್ಕೆ ಗಿಡದ ಮೇಲೆ ಕುಳಿತ ಜೇನುಹುಳ ಹಿಡಿಯುವ ಗುಂಗಿನಲ್ಲಿ ಉಟ್ಟ ಲುಂಗಿ ಬಿಚ್ಚಿ ಗಿಡದ ಮೇಲೆ ಹಾಕುತ್ತಿದ್ದ ಕೆಲಸ ದೂರದ ರಸ್ತೆಯಲ್ಲಿ ಬಸ್ಸಿಗಾಗಿ ಕಾಯುತ್ತಿದ್ದವರಿಗೆ ವಿಚಿತ್ರವಾಗಿ ತೋರಿ ಅಲ್ಲಿ ಕೆಲ ಸಮಯ ಚರ್ಚಾವಿಷಯವಾಯಿತಂತೆ, ಯಾರು ಅದು? ಯಾಕೆ ಲುಂಗಿ ಬಿಚ್ಚಿ ಕುಣಿಯುತ್ತಿದ್ದಾರೆ ಎಂದು ಅರ್ಥವಾಗದೆ ಹಲವಾರು ಊಹಾಪೋಹಗಳಿಗೆ ಕಾರಣವಾಯಿತೆಂದು ನನಗೆ ಸಂಜೆ ಅಂಗಡಿ ಕಡೆಗೆ ಹೋದಾಗ ತಿಳಿಯಿತು. ಆದರೆ ಹಾಗೆ ಕುಣಿದವನು ನಾನೇ ಎಂದು ಹೇಳದೆ ಸುಮ್ಮನುಳಿದೆ.
* * * * *
ಪಟಾಕಿ......!

ಜೇನಿನಲ್ಲಿ ಅತ್ಯಂತ ಅಪಾಯಕಾರಿ ಹಾಗು ಮನುಷ್ಯರಿಗೆ ಪೆಟ್ಟಿಗೆಯೊಳಗೆ ಸಾಕಲು ಆಗದ ಜೇನೆಂದರೆ ಹೆಜ್ಜೇನು. ಸಾಮಾನ್ಯ ಮನುಷ್ಯನ ಹೆಬ್ಬೆಟ್ಟು ಗಾತ್ರದಷ್ಟಿರುವ ಹೆಜ್ಜೇನುಹುಳುಗಳು ಜೇನಿನಲ್ಲಿಯೇ ಅತ್ಯಂತ ಬಲಿಷ್ಟ ಜಾತಿ. ಮಲೆನಾಡು, ಬಯಲುಸೀಮೆ ಎಂಬ ಭೇದಭಾವವಿಲ್ಲದೆ ವಾಸಿಸುವ ಹೆಜ್ಜೇನು ಕಡಿದು ಪ್ರಾಣ ಕಳೆದುಕೊಂಡವರೂ ಹಲವರಿದ್ದಾರೆ. ಮನುಷ್ಯನನ್ನು ಹೊರತುಪಡಿಸಿದರೆ ಕರಡಿ ಹಾಗು ಗಿಡುಗ ಹೆಜ್ಜೇನಿನ ಶತ್ರುಗಳು. ಕರಡಿ ಹಾಗು ಗಿಡುಗ ಹೆಜ್ಜೇನು ಗೂಡಿಗೆ ಧಾಳಿ ಮಾಡಿದಾಗಲೆಲ್ಲಾ ಅವು ಮನುಷ್ಯನ ಮೇಲೆ ತಮ್ಮ ಸೇಡು ತೀರಿಸಿಕೊಳ್ಳುತ್ತವೆ. ಗಿಡುಗ ಹೆಜ್ಜೇನುಗೂಡನ್ನು ಒದ್ದು ಹಾರಿಹೋದ ಸಮಯದಲ್ಲಿ ಅಲ್ಲಿ ಮನುಷ್ಯರು ಹೋದರೆ ಅಟ್ಟಿಸಿಕೊಂಡು ಬರುತ್ತವೆ. ಎರಡು ಕಿಲೋಮೀಟರ್ ದೂರದವರೆಗೂ ಅಟ್ಟಿಸಿಕೊಂಡು ಧಾಳಿ ಮಾಡಿದ ದಾಖಲೆಗಳಿವೆ. ಅವುಗಳು ಎಷ್ಟರಮಟ್ಟಿಗೆ ಸಿಟ್ಟಾಗುತ್ತವೆ ಎಂದರೆ ನೀರೊಳಗೆ ಮುಳುಗಿದರೂ ಬಿಡುವುದಿಲ್ಲ. ನೀರಿನಿಂದ ಉಸಿರಾಡಲು ತಲೆ ಹೊರಹಾಕಿದಾಗ ಅಲ್ಲೇ ಸುತ್ತುವರೆಯುತ್ತಲಿರುವ ಜೇನು ಮತ್ತೆ ಹೊಡೆಯುತ್ತವೆ. ಹೆಜ್ಜೇನು ಧಾಳಿಯಿಂದ ಬದುಕುಳಿಯಲು ಇರುವ ಏಕೈಕ ಮಾರ್ಗೋಪಾಯವೆಂದರೆ ಕಂಬಳಿ ಮುಚ್ಚಿ ಕುಳಿತುಕೊಳ್ಳುವುದು. ಕಂಬಳಿ ಮುಚ್ಚಿಕುಳಿತಾಗ ಅವು ಧಾಳಿಯನ್ನೇನೂ ನಿಲ್ಲಿಸುವುದಿಲ್ಲ ಆದರೆ ಕಂಬಳಿಯನ್ನು ಅವು ಮನುಷ್ಯರೆಂದು ತಿಳಿದುಕೊಂಡು ಅಂಬನ್ನು ಕಂಬಳಿಗೆ ಚುಚ್ಚುತ್ತವೆ. ಅಂಬು(ಜೇನು ಹುಳದ ಹಿಂಭಾಗದಲ್ಲಿರುವ ಚಿಕ್ಕದಾಗಿರುವ ವಿಷದ ಬಾಣ) ಕಂಬಳಿಯನ್ನು ದಾಟಿ ಮನುಷ್ಯರಿಗೆ ಚುಚ್ಚುವುದಿಲ್ಲವಾದ್ದರಿಂದ ಬದುಕುಳಿಯಬಹುದು. ಹಾಗಾಗಿ ಅದೊಂದೇ ಪರಿಹಾರ ಮಾರ್ಗ. ಬಹಳ ಜನರಲ್ಲಿ ಜೇನು ಕಡಿಯುತ್ತದೆ ಎಂಬ ತಪ್ಪು ಅಭಿಪ್ರಾಯವಿದೆ. ಆದರೆ ಜೇನು ಕಚ್ಚುವುದಿಲ್ಲ. ಅದರ ಹಿಂಭಾಗದಲ್ಲಿ ಚಿಕ್ಕದಾದ ಮುಳ್ಳಿರುತ್ತದೆ. ಅದನ್ನು ಜೇನುಹುಳು ನಮ್ಮ ಚರ್ಮಕ್ಕೆ ಚುಚ್ಚುತ್ತದೆ. ಹಾಗಾಗಿ ಜೇನುಹುಳ ದೂರದಿಂದ ಮಾತ್ರ ಗುರಿ ನಿರ್ಧರಿಸಿ ಧಾಳಿಮಾಡಬಲ್ಲದು. ಕೈಯಲ್ಲಿ ಹುಳವನ್ನು ಹಿಡಿದುಕೊಂಡುಬಿಟ್ಟರೆ ಅದಕ್ಕೆ ಗುರಿ ನಿರ್ಧರಿಸಲು ಸಾಧ್ಯವಾಗದಿರುವುದರಿಂದ, ರಭಸದಿಂದ ಚುಚ್ಚಲು ಬರುವುದಿಲ್ಲ. ಹಾಗಾಗಿ ಜೇನುಕಡಿಯಿತು ಅನ್ನುವುದಕ್ಕಿಂತಲೂ ಜೇನು ಹೊಡೆಯಿತು ಎನ್ನುವುದೇ ಸರಿಯಾದ ಅರ್ಥ. ದುರಂತವೆಂದರೆ ಅಂಬನ್ನು ಚರ್ಮಕ್ಕೆ ನಾಟಿಸಿದ ಜೇನು ಸ್ವಲ್ಪ ಹೊತ್ತಿನಲ್ಲಿ ಗಿರಕಿ ಹೊಡೆದು ಸಾವನ್ನಪುತ್ತದೆ.
ಹೆಜ್ಜೇನು ಸಾಮಾನ್ಯವಾಗಿ ಹಳ್ಳಿಗಳಲ್ಲಿ ದೊಡ್ಡ ಮರದ ಗಟ್ಟಿ ಕೊಂಬೆಗೆ ಹಾಗು ಪಟ್ಟಣಗಳಲ್ಲಿ ಬಹುಮಹಡಿ ಕಟ್ಟಡಕ್ಕೆ ಅಥವಾ ದೊಡ್ಡ ನೀರಿನ ಟ್ಯಾಂಕಿಗೆ ತತ್ತಿಯನ್ನು ಕಟ್ಟಿಕೊಳ್ಳುತ್ತವೆ. ಒಂದೇ ತತ್ತಿಗೆ ಜೋತುಬೀಳುವ ಹೆಜ್ಜೇನು ಲಕ್ಷಾಂತರ ಹುಳುಗಳ ತಂಡ ಹೊಂದಿದ್ದರೂ ಏಕನಾಯಕತ್ವದ ನಿಯಮದಡಿಯಲ್ಲಿ ಒಂದೇ ರಾಣಿಯ ಆಜ್ಞೆಯನ್ನು ಪಾಲಿಸುತ್ತವೆ. ಕೆಲವು ಸಾಲು ಮರಗಳಲ್ಲಿ ಇಪ್ಪತ್ತು ಇಪ್ಪತ್ತೈದು ಹೆಜ್ಜೇನುಗೂಡು ಕಟ್ಟಿಕೊಂಡಿರುವುದನ್ನು ಕಾಣಬಹುದು. ಅವಷ್ಟೂ ಬೇರೆ ಬೇರೆ ಕುಟುಂಬಕ್ಕೆ ಸೇರಿದವುಗಳಾಗಿರುತ್ತವೆ. ತಮ್ಮ ಗೂಡನ್ನು ಹೊರತುಪಡಿಸಿ ಅಪ್ಪಿತಪ್ಪಿಯೂ ಅಕ್ಕಪಕ್ಕದ ಜೇನುಗೂಡಿಗೆ ಹುಳುಗಳು ಹೋಗುವುದಿಲ್ಲ. ಅಕಸ್ಮಾತ್ ಹೋದರೂ ಆ ಹುಳವನ್ನು ಮತ್ತೊಂದು ಗೂಡಿನ ಹುಳುಗಳು ಕಚ್ಚಿ ಸಾಯಿಸಿಬಿಡುತ್ತವೆ. ಅವು ತಮ್ಮ ಗುಂಪನ್ನು ಗುರುತಿಸಲು ರಾಣಿಹುಳು ಸ್ರವಿಸುವ ಪ್ಯಾರಾಮೂನ್ ಎಂಬ ದ್ರವವನ್ನು ಆಶ್ರಯಿಸುತ್ತವೆ. ಒಂದು ರಾಣಿಯ ಪ್ಯಾರಾಮೂನ್‌ದ್ರವದ ಅಡಿಯಲ್ಲಿ ಬಂದ ಹುಳು ಬೇರೆ ರಾಣಿಯ ಗುಂಪಿಗೆ ಹೋದಾಗ ಗುರುತಿಸುವುದು ಈ ವಾಸನೆಯಿಂದಲೇ. ಈ ಕ್ರಮವನ್ನು ಅವು ಹಿಸ್ಸೆಯಾಗುವವರೆಗೂ ಪಾಲಿಸುತ್ತವೆ. ತುಡುವೆಜೇನು ಹಾಗು ಕೋಲ್ಜೇನು ಇದೇ ಕ್ರಮವನ್ನು ಅನುಸರಿಸುತ್ತವೆ. ನಿಸರಿಜೇನು ಮಾತ್ರ ರಾಣಿಯನ್ನು ಹೊಂದಿರದೆ ಇದಕ್ಕೆ ಹೊರತಾಗಿದೆ. ಹೆಜ್ಜೇನು ಆಹಾರದ ಸಂಗ್ರಹಣೆಗಾಗಿ ೪-೫ ಕಿಲೋಮೀಟರ್ ದೂರದವರೆಗೂ ಹೋಗುವ ಸಾಮರ್ಥ್ಯವನ್ನು ಹೊಂದಿವೆ. ತನ್ನ ಗೂಡಿನ ಹತ್ತಿರದಲ್ಲಿ ನೀರು ಇದ್ದರೂ ಅವು ದೂರದಿಂದಲೇ ನೀರು ಸಂಗ್ರಹಿಸುತ್ತವೆ.
ಸಾಮಾನ್ಯವಾಗಿ ಸರಿಯಾಗಿ ಅಭಿವೃದ್ದಿಯಾದ ಹೆಜ್ಜೇನನ್ನು ಕಿತ್ತಾಗ ಇಪ್ಪತ್ತು ಕೆ.ಜಿ ತುಪ್ಪ ಸಿಗುತ್ತದೆ. ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರದ ಸಹಜ ಕಾಡಿನಲ್ಲಿ ಹೆಜ್ಜೇನು ಹೇರಳವಾಗಿದೆ. ಹೆಜ್ಜೇನಿನ ತುಪ್ಪ ಸಂಗ್ರಹಿಸಲು ಸರ್ಕಾರ ಅರಣ್ಯಇಲಾಖೆಯ ಮೂಲಕ ಹರಾಜು ಹಾಕುತ್ತದೆ. ಅಲ್ಲಿಯ ಸಿದ್ದಿಜನಾಂಗ ಹೆಜ್ಜೇನು ಕೀಳುವುದರಲ್ಲಿ ಸಿದ್ದಹಸ್ತರು. ಹೆಜ್ಜೇನು ಗೂಡು ಕಟ್ಟಿರುವ ಮರದ ಕೆಳಗೆ ದಟ್ಟವಾದ ಹೊಗೆ ಹಾಕಿ ಅದು ಕಾರ್ಮೋಡದಂತೆ ಒಮ್ಮೆಲೆ ಜೇನುಗೂಡನ್ನು ಮುಚ್ಚುವಂತೆ ಮಾಡುತ್ತಾರೆ. ಈ ತರಹದ ಅನಿರೀಕ್ಷಿತ ಹೊಗೆಯಿಂದ ಅಷ್ಟೂ ಜೇನುಹುಳುಗಳು ಒಂದು ಸಾರಿ ತತ್ತಿಯನ್ನು ಬಿಟ್ಟು ಮೇಲೆ ಹಾರುತ್ತವೆ. ಹಾರಿದ ಜೇನುಹುಳುಗಳು ಮತ್ತೆ ತತ್ತಿಯ ಸಮೀಪ ವಾಪಾಸು ಬರುವುದರೊಳಗೆ ಮರವನ್ನು ಏರಿ ಅಥವಾ ಮೊದಲೇ ಏರಿ ಕುಳಿತುಕೊಂಡು ತತ್ತಿಯನ್ನು ಕೊಯ್ದು ಹಗ್ಗದ ಮೂಲಕ ಕೆಳಗಿಳಿಸುತ್ತಾರೆ. ಈ ರೀತಿ ಒಂದು ಹೆಜ್ಜೇನು ಕೀಳುವುದರಿಂದ ಕನಿಷ್ಟ ಒಂದು ಸಾವಿರ ರೂಪಾಯಿಯಿಂದ ಎರಡು ಸಾವಿರ ರೂಪಾಯಿ ಆದಾಯ ಗಳಿಸಬಹುದು.
ಪುಸ್ತಕದಲ್ಲಿ ಆದಾಯದ ಹಾಗೂ ಲಾಭದ ವಿಚಾರ ಬಂದಾಗಲೆಲ್ಲಾ ಎಲ್ಲರ ಆಸೆಯೂ ಚಿಗುರುತ್ತದೆ. ಆದರೆ ವಾಸ್ತವದ ಕಥೆ ಅಷ್ಟು ಸುಲಭವಲ್ಲ. ಹೆಜ್ಜೇನಿನ ಗೂಡಿನ ತತ್ತಿಯಿಂದ ಜೇನುತುಪ್ಪ ಸಂಗ್ರಹಿಸುವುದು ಅತ್ಯಂತ ಧೈರ್ಯ, ಸಾಹಸಗಳನ್ನು ಬೇಡುವ ಕೆಲಸ. ಇದಕ್ಕೆ ನುರಿತ ಕೆಲಸಗಾರರೇ ಆಗಿರಬೇಕು. ಮೂರ್ನಾಲ್ಕು ನಿಮಿಷಗಳಲ್ಲಿ ಈ ಕಾರ್ಯಾಚರಣೆ ಮುಗಿಯಬೇಕು. ನಿಗದಿತ ಸಮಯದಲ್ಲಿ ಕೆಳಗಡೆಯಿಂದ ಬರುವ ಹೊಗೆ ಕಡಿಮೆಯಾಗಿ ಅಥವಾ ತತ್ತಿ ಕೊಯ್ಯಲಾಗದಿದ್ದರೆ ಮರಹತ್ತಿದವನ ಪ್ರಾಣಕ್ಕೆ ಕುತ್ತು ಬರುವ ಸಾಧ್ಯತೆ ಇರುತ್ತದೆ. ಹಾಗಾಗಿ ಎಲ್ಲರೂ ಈ ಕೆಲಸದಲ್ಲಿ ಪಾಲ್ಗೊಳ್ಳುವುದು ಆಗದ ಮಾತು. ಈ ಪ್ರಕ್ರಿಯೆ ಓದಲು ಅಥವಾ ಮತ್ಯಾರ ಬಳಿಯೋ ಕಥೆ ಕೇಳಲು ಸ್ವಾರಸ್ಯಕರವಾಗಿರುತ್ತದೆ. ಆದರೆ ವಾಸ್ತವ ಮಾತ್ರ ಅತ್ಯಂತ ಕಷ್ಟಕರ ಮತ್ತು ಅಪಾಯಕಾರಿ. ಪ್ರತೀಬಾರಿಯೂ ಹೊಸಹೊಸ ಸಮಸ್ಯೆಗಳು ಎದುರಾಗುತ್ತವಾದ್ದರಿಂದ ಹೆಜ್ಜೇನಿನ ವಿಷಯದಲ್ಲಿ ಪರಿಣಿತರ ಸಹಾಯದಿಂದ ಮುನ್ನುಗ್ಗುವುದೊಳಿತು. ಒಮ್ಮೆ ಹಾಗೆಯೇ ಆಯಿತು.
ನಮ್ಮ ಪಕ್ಕದ ಊರಾದ ಇಡುವಾಣಿಯಲ್ಲಿ ಪಟಾಕಿನಾರಾಯಣ ಎಂಬೊಬ್ಬನಿದ್ದ. ಪಟಾಕಿ ಎಂದು ಅವನಿಗೆ ಅಡ್ಡ ಹೆಸರು. ಹಾಗಂತ ಅವನು ಪಟಾಕಿಯನ್ನು ತಯಾರಿಸುವುದಾಗಲಿ, ವ್ಯಾಪಾರಮಾಡುವುದಾಗಲಿ ಮಾಡುತ್ತಾನೆಂದು ತಿಳಿಯುವುದು ತಪ್ಪು. ಪ್ರಪಂಚದ ಯಾವುದೇ ವಿಷಯವಾದರೂ ಅವನು ತನಗೆ ಗೊತ್ತು ಎನ್ನುತ್ತಿದ್ದರಿಂದ ಅವನಿಗೆ ಪಟಾಕಿನಾರಾಯಣ ಎನ್ನುತ್ತಿದರು. ಪಟಾಕಿ ಎಂಬ ಶಬ್ದವನ್ನು ಆತನೂ ಸಂಪೂರ್ಣ ಒಪ್ಪಿಕೊಂಡು ನಾರಾಯಣ ಹೆಸರನ್ನು ಸೇರಿಸದೆ ಕೇವಲ ಪಟಾಕಿ ಎಂದು ಕರೆದರೂ ಓ ಎನ್ನುತ್ತಿದ್ದ.
ಮಾರ್ಚ್ ತಿಂಗಳ ಒಂದು ದಿನ ಬೆಳಿಗ್ಗೆ ನಾವೆಲ್ಲಾ ಕುಮುಟಾಭಟ್ಟರ ಅಂಗಡಿಯಲ್ಲಿ ಮಾತನಾಡುತ್ತಾ ಕುಳಿತಿದ್ದೆವು. ಮನಮನೆಯ ಕಡೆಯಿಂದ ತಲ್ವಾಟದ ರಸ್ತೆಯ ಮೂಲಕ ನಡೆದುಕೊಂಡು ಬಂದ ಕಾಶಿ ರಾಮಕೃಷ್ಣ ತಲ್ವಾಟದ ರಮಾನಂದ ಹೆಗಡೆಯವರ ಮನೆ ಬಳಿ ಹೆಜ್ಜೇನು ಗೂಡಿಗೆ ಗಿಡುಗ ಒದ್ದಿದ್ದು ಹಾಗು ಅದು ರಸ್ತೆಯಲ್ಲಿ ಓಡಾಡುವ ಶಾಲೆ ಮಕ್ಕಳಿಗೆ ಹೊಡೆದ ಸುದ್ದಿಯನ್ನು ಭಯದಿಂದ ಹೇಳಿದ. ಅಲ್ಲಿ ನಮ್ಮ ಪಟಾಕಿ ನಾರಾಯಣನೂ ಇದ್ದ. ಅಲ್ಲಿದ್ದವರೆಲ್ಲ ಏನು ಮಾಡುವುದು ಎಂದು ಯೋಚಿಸುವಷ್ಟರಲ್ಲಿ ನಾರಾಯಣ,
ಅಯ್ಯೋ ದೇವ್ರೆ ಅದಕ್ಕೆಂತ ಅಷ್ಟು ಹೆದರ‍್ತ್ರಿ, ನಾನು ಇಂಥಾ ಸಾವ್ರ ಜೇನ್ ಕಂಡಿದೆ, ಮೆಣ್ಸಿನ ಗೂಜಿಗೆ ಬೆಂಕಿ ಹಾಕಿ ಬುಡ್ದಲ್ಲಿಟ್ರೆ ಎಲ್ಲಾ ಜೇನು ಪರಾರಿ ಅಗ್ತೋ, ಕಾಣಿನಿ ಬೇಕಾರೆ ಎಂದ.
ಹಾಗಾದ್ರೆ ಅದೊಂದು ಹೊಗೆ ಹಾಕಿ ಉಪಕಾರ ಮಾಡು ಮಾರಾಯ, ಜೇನಿನ ಹತ್ರ ಹೋಗೋದಕ್ಕೆ ಎಲ್ಲಾ ಹೆದ್ರಿ ಸಾಯ್ತಾ ಇದಾರೆ ಕಾಶಿ ರಾಮಕೃಷ್ಣ ಹೇಳಿದ.
ಈಗ ನಾರಾಯಣನಿಗೆ ಪೀಕಲಾಟಕ್ಕಿಟ್ಟುಕೊಂಡಿತು. ಹೆಜ್ಜೇನಿನ ಹಿಂದೂ ಮುಂದೂ ಗೊತ್ತಿಲ್ಲದೆ ಯಾರೋ ಹೊಗೆ ಹಾಕಿದರೆ ಹಾರಿಹೋಗುತ್ತವೆ ಎಂದಿದ್ದನ್ನು ಕೇಳಿ ಇಲ್ಲಿ ಎಲ್ಲರೆದುರು ಕೊಚ್ಚಿಕೊಂಡಿದ್ದ. ಪರಿಸ್ಥಿತಿ ಅವನ ಕಾಲಬುಡಕ್ಕೆ ತಗುಲುವ ಹಾಗಿತ್ತು.
ನಂಗೆ ಒಂಚೂರು ಮನಮನೆಗೆ ಹೊಯ್ಕು ಇಲ್ದಿದ್ರೆ ನಾನೇ ಓಡಿಸ್ತಿದ್ದೆ, ಅದ್ಯಾವ ಮಹಾ ಕೆಲಸ ಎಂದ ನಾರಾಯಣ. ಅಷ್ಟರಲ್ಲಿ ಚೆನ್ನ ಅದೆಲ್ಲಿದ್ದನೋ ಬಂದು ಅಯ್ಯ ನಾರಾಯಣ ಶೆಟ್ರಿಗೆ ಇದ್ಯಾವ ಮಹಾ, ಅವ್ರು ಖಂಡಿತಾ ಹೆಜ್ಜೇನು ಓಡಿಸ್ತಾರಪ್ಪ, ಮನಮನೆಗೆ ಹೋಗೋ ಕೆಲಸಕ್ಕೆ ಇಲ್ಲೆ ಯವಸ್ಥೆ ಮಾಡಿದ್ರಾತು ಎಂದ ಬಲಗೈ ಮುಷ್ಠಿಕಟ್ಟಿ ಹೆಬ್ಬೆರಳನ್ನು ಮೇಲ್ಮುಖ ಮಾಡಿ ಪಟಾಕಿ ನಾರಾಯಣ ಕಂತ್ರಿ ಸರಾಯಿಕುಡಿಯುವ ಪರಿಯನ್ನು ಅಣಕಿಸಿ ತೋರಿಸುತ್ತಾ. ಅಲ್ಲದೇ, ಮನಮನೆಗೆ ಹೋಗೋದಾದ್ರೂ ಅದೇ ರಸ್ತೆ ಸೈಯಲ, ದಾರೀಲಿ ಹೆಜ್ಜೇನು ಓಡ್ಸಿ ಹೋಕ್ತಾರಪ ಎಂದು ನಾರಾಯಣನಿಗೆ ಗಾಳಿಹಾಕತೊಡಗಿದ. ನಾರಾಯಣನಿಗೆ ಈಗ ಅನಿವಾರ್ಯವಾಯಿತು.
ಕುಮುಟಾ ಭಟ್ಟರ ಅಂಗಡಿಕಟ್ಟೆಯಲ್ಲಿದ್ದ ಎಲ್ಲರೂ ನನ್ನ ವ್ಯಾನ್ ಹತ್ತಿಕೊಂಡು ತಲ್ವಾಟದತ್ತ ಹೊರಟಾಯಿತು. ಪಟಾಕಿನಾರಾಯಣ ಚೆನ್ನನ ಗಾಳಿ ಮಾತಿನಿಂದ ಸಿಕ್ಕಾಪಟ್ಟೆ ಉಬ್ಬಿಹೋಗಿದ್ದ. ನನಗೆ ಹೆಜ್ಜೇನು ಕೀಳುವ ಈ ಸಾಹಸ ಏನಾದರೂ ಭಾನಗಡಿಯಾದೀತೆಂಬ ಭಯದಲ್ಲಿ,
ಪಟಾಕಿ, ನಿಂಗೆ ಸರಿ ಗೊತ್ತಿದ್ರೆ ಕೆಲ್ಸ ಮಾಡು ಇಲ್ದಿದ್ರೆ ಬ್ಯಾಡ ಕೊನೆಗೆ ಒಂದಕ್ಕೆ ಒಂದೂವರೆಯಾದೀತು, ನಮಗೂ ಯಾರಿಗೂ ಹೆಜ್ಜೇನನ್ನು ಓಡ್ಸೋದು ಗೊತ್ತಿಲ್ಲಎಂದೆ. ಆದರೆ, ಪಟಾಕಿನಾರಾಯಣ ನಮ್ಮ ಯಾರ ಮಾತನ್ನೂ ಕೇಳುವ ಹಂತದಲ್ಲಿರಲಿಲ್ಲ. ಚೆನ್ನನ ಬಳಿ ತನ್ನ ಹಳೆ ಸಾಹಸ ಕೊಚ್ಚಿಕೊಳ್ಳುವುದರಲ್ಲಿ ಮುಳುಗಿದ್ದ. ಹೆಜ್ಜೇನು ಧಾಳಿ ಮಾಡುತ್ತಿರುವ ರಮಾನಂದ ಹೆಗಡೆಯವರ ಮನೆಬಳಿ ಎಲ್ಲರೂ ತಲುಪಿದ್ದಾಯಿತು. ಬೆಳಿಗ್ಗೆ ಮುಂಚೆ ಗಿಡುಗ ಒದ್ದಿದ್ದರೂ, ಆಗಲೇ ತುಂಬಾ ಹೊತ್ತಾದ್ದರಿಂದ ನಾವು ಹೋಗುವಷ್ಟರಲ್ಲಿ ಜೇನುಹುಳುಗಳು ಶಾಂತವಾಗಿದ್ದವು. ಅದನ್ನು ತಿಳಿದ ಪಟಾಕಿನಾರಾಯಣನ ವರಸೆ ಇನ್ನಷ್ಟು ಜಾಸ್ತಿಯಾಯಿತು.
ನನ್ನ ವಾಸ್ನೆ ಅಂದ್ರೆ ಹಂಗ್ ಇತ್ತ ಕಾಣ್ ಚೆನ್ನ, ನನ್ ಹೆಸ್ರ ಕೇಣಿರೆ ಜೇನು ಸುಮ್ನಿರ್ಕು. ನಾನೊಂದ್ಸಾರಿ ಯಲ್ಲಾಪುರ‍್ದ ಕಾನಾಗೆ ಮೂರ್ ತಾಸ್ನೊಳಗೆ ಇಪ್ಪತ್ತೇಳು ಹೆಜ್ಜೇನು ಕೊಯ್ದಿದ್ದೆ. ಫಾರೆಸ್ಟ್ ರೇಂಜ್ರು ಶಭಾಷ್ ಬಡ್ಡಿಮಗನೆ ಅಂದ್ರು, ಪ್ರಶಸ್ತಿ ಕೊಡಸ್ತೆ ಅಂದ್ರು, ನಾನೇ ಬ್ಯಾಡ ಅಂದೆ ಹೀಗೆ ಓತಪ್ರೋತವಾಗಿ ಪಟಾಕಿ ಉದುರಿಸುತ್ತಿದ್ದ.
ಚೆನ್ನನಿಗೂ ಅವನ ಕೊರೆತ ಕೇಳಿ ಬೇಸರಬಂದಿರಬೇಕು, ಹೆಜ್ಜೇನು ಹಿಡಿಯದು, ತುಪ್ಪ ತೆಗಿಯದು ಎಲ್ಲಾ ಕೊನಿಗಾತು, ಸದ್ಯ ಈಗ ಈ ಹೆಜ್ಜೇನು ಓಡ್ಸಿ ಅಂದ.
ರಮಾನಂದ ಹೆಗಡೆಯವರ ಮನೆಗಿಂತ ಅನತಿ ದೂರದಲ್ಲಿ ಹೆಜ್ಜೇನು ಅಪರೂಪದ ಜಾಗದಲ್ಲಿ ತತ್ತಿ ಕಟ್ಟಿತ್ತು. ರಸ್ತೆಯ ಪಕ್ಕದಲ್ಲಿ ನಲವತ್ತು ಅಡಿ ಆಳದ ಕಂದಕ. ಕಂದಕದ ಬುಡದ ಅಡಿಕೆತೋಟದಿಂದ ಬೈನೆ ಮರವೊಂದು ಬೆಳೆದು ನಿಂತಿತ್ತು. ತೋಟದಿಂದ ಮರದ ಎತ್ತರ ಸುಮಾರು ಐವತ್ತು ಅಡಿ, ಆ ಮರದ ಬುಡದಲ್ಲಿಯೇ ತೋಟಕ್ಕೆ ಇಳಿದು ಹೋಗುವ ದಾರಿ ಇತ್ತು. ಇಡೀ ಮರ ಐವತ್ತು ಅಡಿ ಎತ್ತರದಲ್ಲಿದ್ದರೂ ಜೇನುಗೂಡು ಕಟ್ಟಿದ್ದ ಬೈನೆ ಮರದ ಕೊಂಬೆ ರಸ್ತೆಯಿಂದ ಕೇವಲ ಹತ್ತು ಅಡಿ ಎತ್ತರದಲ್ಲಿತ್ತು. ಹಾಗಾಗಿಯೇ ಗಿಡುಗ ಒದ್ದಕೂಡಲೆ ಅವು ದಾರಿಹೋಕರಮೆಲೆ ಧಾಳಿಮಾಡಿದ್ದು. ಅಲ್ಲಿಂದ ನೂರುಅಡಿ ದೂರದಲ್ಲಿ ರಸ್ತೆಯ ಪಕ್ಕದಲ್ಲಿ ಮೂರ್ನಾಲ್ಕು ಮನೆ. ಇಂತಹಾ ಸುಲಭದಲ್ಲಿ ಜೇನಿನ ಧಾಳಿಗೆ ಜನರು ತುತ್ತಾಗುವ ಸಂದರ್ಭವಿರುವುದರಿಂದ ಹೊಗೆಹಾಕಿ ಓಡಿಸುವುದೂ ಕೂಡ ಸ್ವಲ್ಪ ಅಪಾಯಕಾರಿ ಹಾಗು ಕಷ್ಟಕರವಾಗಿತ್ತು. ಅಕಸ್ಮಾತ್ ಜೇನು ಓಡಿಸುವ ಕೆಲಸದಲ್ಲಿ ವ್ಯತ್ಯಾಸವಾದರೆ ಊರಿಗೆಊರೇ ಜೇನು ಧಾಳಿಗೆ ಗುರಿಯಾಗುವ ಸಂಭವ ಇತ್ತು. ಆದರೆ ಪಟಾಕಿನಾರಾಯಣ ಇದ್ಯಾವುದನ್ನೂ ಲಕ್ಷ್ಯಕ್ಕೆ ತೆಗೆದುಕೊಳ್ಳದೆ ಹೊಗೆ ಹಾಕುವ ತಯಾರಿಯಲ್ಲಿದ್ದ. ನಮಗೂ ಹೆಜ್ಜೇನನ್ನು ಓಡಿಸುವುದು ಬೇಕಾಗಿತ್ತು. ಆದರೆ ಓಡಿಸುವ ರೀತಿ ನೀತಿಗಳು ತಿಳಿಯದ್ದರಿಂದ ಪಟಾಕಿ ಹೇಳಿದ್ದಕ್ಕೆಲ್ಲಾ ತಲೆ ಆಡಿಸುತ್ತಾ ರಮಾನಂದ ಹೆಗಡೆಯವರ ಮನೆ ಬಾಗಿಲಲ್ಲಿ ವ್ಯಾನ್ ನಿಲ್ಲಿಸಿಕೊಂಡು ನಿಂತೆವು.
ಪಟಾಕಿ ನಾರಾಯಣ ಉದ್ದನೆಯ ಬಿದಿರು ಕೋಲಿನ ತುದಿಯನ್ನು ಎರಡು ಅಡಿಯಷ್ಟು ಸೀಳಿ ಅದರ ಮಧ್ಯೆ ಗಾರೆ ಕೆಲಸಕ್ಕೆ ಬಳಸುವ ಕಬ್ಬಿಣದ ಬಾಂಡ್ಲಿ ಕಟ್ಟಿದ. ಅದರೊಳಗೆ ಒಣಗಿದ ಅಡಿಕೆಸಿಪ್ಪೆ ಹಾಗು ಕಾಳುಮೆಣಸಿನ ಗೂಜು ತುಂಬಿ ಸ್ವಲ್ಪ ಸೀಮೆಎಣ್ಣೆ ಸುರಿದು ಬೆಂಕಿಹಚ್ಚಿದ. ನಂತರ ಬಾಯಲ್ಲಿ ಉಫ್ ಎಂದು ಬೆಂಕಿ ಆರಿಸಿದ. ಬೆಂಕಿ ಆರಿದ ಕೂಡಲೇ ಗಾಢವಾದ ಹೊಗೆ ಬಾಂಡ್ಲಿಯಿಂದ ಮೇಲೇಳತೊಡಗಿತು.
ಅಲ್ಲಿಯವರೆಗಿನ ಅವನ ತಯಾರಿ ನೋಡುತ್ತಿದ್ದ ನನಗೆ ಅವನು ಹೇಳಿದ್ದು ತೀರಾ ಸುಳ್ಳಲ್ಲ ಅಂತ ಅನಿಸತೊಡಗಿತು. ಉದ್ದ ಕೋಲಿನ ತುದಿಯನ್ನು ಹಿಡಿದುಕೊಂಡು ಹೆಜ್ಜೇನು ಗೂಡಿರುವ ಜಾಗದತ್ತ ಹೋಗತೊಡಗಿದ ಪಟಾಕಿ ನಾರಾಯಣ ಅರ್ಧದಾರಿಗೆ ಹೋದವನು ನಮ್ಮತ್ತ ತಿರುಗಿ,
ಅಯ್ಯೋ ಶಿವನೇ ನೀವು ಇಷ್ಟು ಹೆದ್ರಿಕೊಂಡ್ರೆ ಜೀವನ ಮಾಡ್ದಂಗೆ, ಅಲ್ಲಿ ರಸ್ತೆ ಪಕ್ದಲ್ಲಿ ಕಾರ್ ನಿಲ್ಸಿ, ಎಂತು ಆತಿಲ್ಲೆ ಮಾರಾಯ್ರೆ, ಈಗ ಒಂದ್ ಕ್ಷಣದಲ್ಲಿ ಅವು ನಾಪತ್ತೆಯಾತೋ ಕಾಣಿ ಎಂದ. ನನಗೂ ಅದನ್ನು ಹತ್ತಿರದಿಂದ ನೋಡುವ ಆಸೆಯಾಯ್ತು. ವ್ಯಾನಿನೊಳಗಡೆ ಗ್ಲಾಸನ್ನೇರಿಸಿ ಕುಳಿತುಕೊಂಡರೆ ಜೇನು ಬರಲಾರದು ಎಂದು ವ್ಯಾನ್ ಸ್ಟಾರ್ಟ್‌ಮಾಡಿ ನಿಧಾನ ಹೋಗಿ ಪಟಾಕಿ ನಾರಾಯಣನಿಗಿಂತ ಹತ್ತಡಿ ದೂರದಲ್ಲಿ ನಿಲ್ಲಿಸಿದೆ. ಚೆನ್ನನೂ ಬಂದು ವ್ಯಾನ್ ಹತ್ತಿ ಕುಳಿತ. ಮಿಕ್ಕವರು ದೂರದಲ್ಲಿ ನಿಂತರು.
ಪಟಾಕಿನಾರಾಯಣ ಹೊಗೆಯ ಬಾಂಡ್ಲಿಯನ್ನು ಹೆಜ್ಜೇನಿನ ತತ್ತಿಗಿಂತ ಸುಮಾರು ಐದಡಿ ಕೆಳಗೆ ಹಿಡಿದ. ಒಮ್ಮೆಲೆ ರೊಂಯ್ಯನೆ ಸದ್ದು ಮಾಡುತ್ತಾ ಲಕ್ಷಾಂತರ ಹುಳು ಮೇಲೇರ ತೊಡಗಿತು. ಆಗ ಪಟಾಕಿ ನಮ್ಮ ಕಡೆ ತಿರುಗಿ,
ಕಂಡೀರ‍್ಯಾ, ನಾನ್ ಹೇಳಿದ್ ಮೇಲೆ ಮುಗಿತು, ಕಾಣಿ ಜೇನೂ ಇಲ್ಲೆ ಎಂತದು ಇಲ್ಲೆ, ಅದೆಂತಾ ಹೆದರ‍್ತ್ರಿ ಕಾರಿಂದ ಇಳೀರಿ ಮರಾಯ್ರೆ ಎಂದ.
ಅವನು ಅಷ್ಟು ಹೇಳಿ ಮುಗಿಸುವಷ್ಟರಲ್ಲಿ ಅವನು ಹಿಡಿದಿದ್ದ ಬಾಂಡ್ಲಿಯಿಂದ ಭಗ್ಗನೆ ಬೆಂಕಿ ಹೊತ್ತಿಕೊಂಡಿತು. ಪಟಾಕಿ ಒಮ್ಮೆಲೆ ಗಾಬರಿಯಾಗಿ ಕೋಲು ಕೈಬಿಟ್ಟ. ಅಲ್ಲಿಯತನಕ ದಟ್ಟವಾಗಿದ್ದ ಹೊಗೆ ಮಾಯವಾಗಿ ಬೆಂಕಿಸಮೇತ ಕಬ್ಬಿಣದ ಬಾಂಡ್ಲಿ ದೊಪ್ಪನೆ ಕೆಳಕ್ಕೆ ಬಿತ್ತು. ಕ್ಷಣಮಾತ್ರದಲ್ಲಿ ಅಲ್ಲಿನ ಚಿತ್ರಣವೇ ಬದಲಾಗಿ ಹೋಯಿತು. ನಾನು ಏನಾಯಿತೆಂದು ನೋಡುವಷ್ಟರಲ್ಲಿ ಪಟಾಕಿನಾರಾಯಣ ತಕತಕನೆ ಮೈಕೈ ಉಜ್ಜಿಕೊಳ್ಳುತ್ತಾ ಕುಣಿಯತೊಡಗಿದ. ಚೆನ್ನ ವ್ಯಾನಿನ ಒಳಗಡೆಯಿಂದಲೇ ಏ..ಓಡ...ಓಡ... ಓಡಲೇ ಎನ್ನುತ್ತಾ ಕೂಗುತ್ತಿದ್ದ. ಆದರೆ ಪಟಾಕಿ ಅದನ್ನು ಕೇಳಿಸಿಕೊಳ್ಳುವ ಸ್ಥಿತಿಯಲ್ಲಿ ಇರಲಿಲ್ಲ.
ಒಡಿಯಾ ವ್ಯಾನ್ ಅವನತ್ರ ತಗೊಂಡ್ಹೋಗಿ, ಹ್ಯಾಗಾದ್ರೂ ಅವನ್ನ ಒಳಗೆ ಎಳ್ಕತ್ತೀನಿ. ಇಲ್ದಿದ್ರೆ ಅವ್ನು ಸತ್ತೇ ಹೋಗ್ತಾನೆಎಂದು ಚೆನ್ನ ಹೇಳಿದ. ಗಡಿಬಿಡಿಯಿಂದ ವ್ಯಾನ್ ಸ್ಟಾರ್ಟ್ ಮಾಡಿ ಪಟಾಕಿ ಬಳಿ ನಿಲ್ಲಿಸಿದೆ. ಚೆನ್ನ ಲಬಕ್ಕನೆ ಅವನನ್ನು ಒಳಗೆಳೆದುಕೊಂಡ. ವ್ಯಾನ್ ಮುಂದೋಡಿಸಿದೆ. ಆದರೆ ಈಗ ಮತ್ತೊಂದು ಅನಾಹುತವಾಗಿತ್ತು. ಪಟಾಕಿನಾರಾಯಣನ ಜತೆಯಲ್ಲಿದ್ದ ಹತ್ತೆಂಟು ಹುಳುಗಳು ಕಾರಿನೊಳಗೆ ಸೇರಿಕೊಂಡು ನನ್ನನ್ನು ಚೆನ್ನನನ್ನು ಹೊಡೆಯಲಾರಂಭಿಸಿದವು. ಅದು ಹೇಗೋ ಉರಿಯನ್ನು ಸಹಿಸಿಕೊಂಡು ಅರ್ಧ ಕಿಲೋಮೀಟರ್ ದೂರ ಹೋಗಿ ವ್ಯಾನ್ ನಿಲ್ಲಿಸಿ ಹೊರಗೆ ಹಾರಿಕೊಂಡೆವು. ಆದರೆ ಪಟಾಕಿ ವ್ಯಾನಿನಿಂದ ಇಳಿಯುವ ಸ್ಥಿತಿಯಲ್ಲಿ ಇರಲಿಲ್ಲ. ನನಗೆ ಎರಡು ಜೇನುಹುಳು ಹೊಡೆದಿತ್ತು, ಆ ಉರಿ ಸಹಿಸಲಾರದೆ ತಕತಕನೆ ಕುಣಿಯುವಂತಾಗಿತ್ತು. ಇನ್ನು ಹತ್ತಿಪ್ಪತ್ತು ಹುಳ ಹೊಡೆದ ನಾರಾಯಣನ ಸ್ಥಿತಿ ಹೇಗಾಗಿರಬೇಡ. ತಕ್ಷಣ ಅವನನ್ನು ತಾಳಗುಪ್ಪದ ಹೆಗಡೆಡಾಕ್ಟರ್ ಬಳಿ ಕರೆದುಕೊಂಡು ಹೋಗಿ, ಅಂಬು ತೆಗೆಸಿ, ನಂಜಿನ ಇಂಜೆಕ್ಷನ್ ಕೊಡಿಸಿಕೊಂಡು ಮನೆ ಸೇರುವಷ್ಟರಲ್ಲಿ ನನ್ನ ಮುಖವೂ ಯಾರಿಗೂ ಗುರುತು ಸಿಗದಂತೆ ಆಂಜನೇಯನ ಮುಖದ ತರಹ ಉಬ್ಬಿಹೋಗಿತ್ತು.
ಇಷ್ಟೆಲ್ಲಾ ಅನಾಹುತಕ್ಕೆ ಪಟಾಕಿನಾರಾಯಣ ಅರ್ಧಂಬರ್ಧ ತಿಳಿದುಕೊಂಡಿದ್ದ ಮಾಹಿತಿ ಕಾರಣವಾಗಿತ್ತು. ಹೆಜ್ಜೇನು ಓಡಿಸುವ ಕಾರ್ಯಾಚರಣೆ ಯಾವಾಗಲೂ ಸಂಜೆ ಮಾಡಬೇಕು. ಮತ್ತು ಹೆಜ್ಜೇನು ಓಡಿಸಲು ಮರದಬುಡದಿಂದ ಗಾಢವಾಗಿ ಮೇಲೇಳುವಂತೆ ದಟ್ಟವಾದ ಹೊಗೆ ಹಾಕಬೇಕು. ಜತೆಯಲ್ಲಿ ಬುಗ್ಗನೆ ಬೆಂಕಿ ಹತ್ತಿಕೊಳ್ಳದಂತೆ ನೋಡಿಕೊಳ್ಳಬೇಕು. ಇಲ್ಲದಿದ್ದಲ್ಲಿ ಮೊದಲಿಗೆ ಮೇಲೆದ್ದ ದಟ್ಟವಾದ ಹೊಗೆಯಿಂದಾಗಿ ಮೇಲೇರುವ ಜೇನು ಹುಳುಗಳು ಹೊಗೆ ಕಡಿಮೆಯಾಗುತ್ತಿದ್ದಂತೆ ಅದೇ ವೇಗದಲ್ಲಿ ಕೆಳಗಿಳಿದು ಧಾಳಿಮಾಡುತ್ತವೆ.
ಇವಿಷ್ಟು ಮಾಹಿತಿಯನ್ನು ಚೆನ್ನ ನನಗೆ ಮಾರನೆ ದಿನ ಸಿಕ್ಕದವ ಹೇಳಿ ನಂತರ ಸಣ್ಣ ದನಿಯಲ್ಲಿ, ನಿನ್ನೆ ಅದು ಹಿಂಗೇ ಆಗ್ತೈತಿ ಅಂತ ನಂಗೂ ಗೊತ್ತಿತ್ರೀ, ಸಿಕ್ಕಾಪಟ್ಟೆ ಹಾರಾಡ್ತಾನಲ್ಲ ಬುದ್ಧಿ ಬರ್ಲಿ ಅಂತ ಸುಮ್ನಿದ್ದೆಅಂದ.
ಥೂ.. ದರಿದ್ರದವ್ನೆ, ಅವ್ನಿಗೆ ಬುದ್ದಿ ಕಲ್ಸಕ್ಕೋಗಿ ಜೀವಾನೆ ತೆಗಿತಿದ್ಯಲ್ಲೋ, ನಿಂಗೆ ಮಂಡೆ ಹಿಡಿದ್ರೂ ಬೋಳು ಕುಂಡೆ ಹಿಡಿದ್ರೂ ಬೋಳು, ಹೆಚ್ಚುಕಮ್ಮಿ ಆಗಿದ್ರೆ ಕೊನೆಗೆ ಎಲ್ಲಾ ನಮ್ತಲೆ ಮೇಲೆ ಬರ‍್ತಿತ್ತು ಅಂತ ಚೆನ್ನನ ಮೇಲೆ ರೇಗಿದೆ. ಆದರೆ ತೀರಾ ಅನಾಹುತ ಆಗದೆ ಇದ್ದುದ್ದಕ್ಕೆ ಅಂತಹ ಗಡಿಬಿಡಿಯ ಸಮಯದಲ್ಲೂ ಪಟಾಕಿಯನ್ನು ವ್ಯಾನಿನೊಳಕ್ಕೆ ಎಳೆದುಕೊಂಡ ಚೆನ್ನನ ಸಮಯ ಪ್ರಜ್ಞೆಯೇ ಕಾರಣ ಎಂದೆನಿಸಿ ಸುಮ್ಮನುಳಿದೆ.
ಆ ದಿನ ಸಾಯಂಕಾಲದವರೆಗೂ ರಸ್ತೆಯಲ್ಲಿ ಯಾರಿಗೂ ಓಡಾಡಲು ಹೆಜ್ಜೇನು ಬಿಡಲಿಲ್ಲ. ನಾವು ವ್ಯಾನ್ ತೆಗೆದುಕೊಂಡು ಮುಂದೆ ಹೋದಮೇಲೆ ಕೆಲಹುಳುಗಳು ರಮಾನಂದ ಹೆಗಡೆಯವರ ಮನೆಯವರೆಗೂ ಬಂದು ಕೆಲವರಿಗೆ ಹೊಡೆಯಿತಂತೆ. ಶಾಲೆಗೆ ಹೊರಟ ಪೂಜಾ, ಅನುಜಿತ್ ಮುಂತಾದ ಮಕ್ಕಳೆಲ್ಲಾ ಜೇನುಹುಳ ಹೊಡೆಸಿಕೊಂಡು ಮುಖ ಊದಿಸಿಕೊಂಡಿದ್ದರು.
ಮಾರನೆ ದಿನ ಬೆಳಿಗ್ಗೆ ಹೆಜ್ಜೇನು ಅಲ್ಲಿಂದ ಹಾರಿ ಹೋಗಿತ್ತು. ಬಹುಶಃ ಅವುಗಳಿಗೆ ಗಿಡುಗನ ಕಾಟ ಜಾಸ್ತಿಯಾಯಿತೋ ಅಥವಾ ನಾರಾಯಣನ ಹೊಗೆ ಕೆಲಸ ಮಾಡಿತೋ ಗೊತ್ತಾಗಲಿಲ್ಲ. ಒಟ್ಟಿನಲ್ಲಿ ಅವುಗಳಿಗೆ ಆ ಜಾಗ ಸುರಕ್ಷಿತ ಅಲ್ಲ ಎಂಬ ಭಾವನೆ ಬಂದಿರಬೇಕು, ಹಾಗಾಗಿ ಜಾಗ ಖಾಲಿ ಮಾಡಿದ್ದವು. ಜೇನುಹುಳಗಳಿಲ್ಲದ ಖಾಲಿ ತತ್ತಿ ಮೂರ್ನಾಲ್ಕು ದಿನ ಅಲ್ಲಿಯೇ ಇತ್ತು. ಕೊನೆಗೆ ಚೆನ್ನ ಅದನ್ನು ಕಿತ್ತು ತಂದು ಒಂದು ಉಂಡೆ ಜೇನುಮೇಣ ಕಾಯಿಸಿ ಮರಗೆಲಸದ ಉದಯಾಚಾರಿಗೆ ಮೂವತ್ತು ರೂಪಾಯಿಗೆ ಮಾರಿದೆ ಎಂದು ಹೇಳಿದ. ಈ ಹೆಜ್ಜೇನು ಓಡಿಸುವ ಪ್ರಕರಣ ನನಗೆ ಸ್ವಲ್ಪ ಹಣವನ್ನು ಕೈಬಿಡಿಸಿ, ಪಟಾಕಿ ನಾರಾಯಣನಿಗೆ ಪಾಠ ಕಲಿಸಿದಂತಾದರೂ ಚೆನ್ನನಿಗೆ ಮಾತ್ರ ಆರ್ಥಿಕ ಲಾಭವನ್ನು ತಂದುಕೊಟ್ಟಿತ್ತು ಮು
(ಮುಂದುವರೆಯುತ್ತದೆ)