Wednesday, February 2, 2011

ಅವರುಗಳೆಂಬ ಅವರುಗಳು .....!

ಅಸಲಿಗೆ ಅವೆಲ್ಲಾ ಹಾಗೆ ಇದೆಯಾ..? ಎಂಬ ಪ್ರಶ್ನೆ ಸಹಜವಾಗಿ ಎಲ್ಲರನ್ನೂ ಕಾಡಬಹುದು, ಬಹುದೇನು?,ಕಾಡುತ್ತದೆ. ನಾಭಿಯಿಂದ ಯೋಚಿಸುವುದು, ಉಸಿರಾಟ ನಿಯಂತ್ರಿಸಿ ಸಾಧಿಸುವುದು, ಆಜ್ಞಾಚಕ್ರಗಳನ್ನು ಹುಡುಕುವುದು, ಬೆಳಗಾಮುಂಚೆ ಎದ್ದು ಗರಗರ ತಿರುಗಿ ಸ್ಪರ್ಶಥೆರಪಿ ಅನುಭವಿಸಿ ಮುಪ್ಪನ್ನು ಮುಂದೂಡುವುದು, ಧ್ಯಾನ ಸ್ಥಿತಿಯಲ್ಲಿ ಕುಳಿತು ಲೌಕಿಕ ಮರೆಯುವುದು, ರುದ್ರ ಹೇಳಿ ರೌದ್ರಾವತಾರ ತಾಳುವುದು, ಲಕ್ಷ್ಮೀ ಪೂಜೆ ಮಾಡಿ ಹಣಗಳಿಸುವುದು, ಅಮೆನ್ ಹೇಳಿ ಪಾಪ ಕಳೆದುಕೊಂಡು ಮತ್ತೆ ಪಾಪ ಮಾಡುವುದು, ಗೋಡೆಯತ್ತ ಕಣ್ಮುಚ್ಚಿಕುಳಿತು ಹೋಯ್ ಭಗವಂತಾ ಅನ್ನುವುದು ಹೀಗೆ ಎನೇನೋ....
ಇರಲಿ, ಅವರೆಂಬ ಅವರುಗಳು ಏನನ್ನಾದರೂ ಹೇಳಿಕೊಳ್ಳಲಿ, ನಾವು ನೀವು ಹೀಗೆ ಯೋಚಿಸೋಣ, ನ್ಯೂಟನ್ ಒಂದಿಷ್ಟು ನಿಯಮಗಳನ್ನು ಮಾಡಿದ, ಅದೇನೋ ಸೇಬುಹಣ್ಣ ಬೀಳುತ್ತಿದ್ದುದನ್ನು ಕಂಡು ಅವನಿಗೆ ನಿಯಮಗಳು ಮೂಡಿದುವಂತೆ, ಅದು ವಿಜ್ಞಾನದ ವಿಷಯ. ಹಾಗಂತ ಅವ ಆ ನಿಯಮ ಮಾಡಿರದಿದ್ದರೆ ಅವೆಲ್ಲಾ ನಡೆಯುತ್ತಿರಲಿಲ್ಲವೇ?. ನಡೆಯುತಿತ್ತು, ಇದ್ದ ವಿಷಯವನ್ನು ನಮಗೆ ಆತ ವಿಷದಪಡಿಸಿದ ತನ್ನದೇ ಆದ ವಿಧಾನಗಳ ಮೂಲಕ. ಇವುಗಳೂ ಹಾಗೆಯೇ. ಏನೇನೋ ಇದೆ ಅವುಗಳನ್ನು ಅವರವರ ವಿಧಾನಗಳಮೂಲಕ ಜನರು ವಿಷದಪಡಿಸುತ್ತಿದ್ದಾರೆ. ಹಾಗೆ ಹೇಳುತ್ತಾ ಹೇಳುತ್ತಾ ಕೇಳುಗರ ಕಿವಿಯಮೇಲೆ ಹೂವನ್ನಿಡುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ.
ವರ್ತಮಾನದಲ್ಲಿ ಬದುಕುವ ಮನುಷ್ಯರ ಸಂಖ್ಯೆ ಬಹು ಕಡಿಮೆ, ಮದುವೆಯಾದ ಮೂರ್ನಾಲ್ಕು ವರ್ಷದಲ್ಲಿ ಮಕ್ಕಳಾಗದಿದ್ದರೆ ಹೆಣ್ಣೋ ಗಂಡೋ ಒಂದು ಮಗುವಾಗಲಿ ಎಂಬ ಚಿಂತೆ, ಮಗು ಹುಟ್ಟಿದರೆ ಅದು ಆರೋಗ್ಯವಾಗಿರಬೇಕು, ಆರೋಗ್ಯವಾಗಿದ್ದರೆ ಅದು ಎಲ್ಲಾ ಮಕ್ಕಳಿಗಿಂತ ಬುದ್ಧಿವಂತನಾಗಿರಬೇಕು, ಬುದ್ದಿವಂತನಾಗಿದ್ದರೆ ಅದು ಬೆಳೆದು ಲಕ್ಷಗಟ್ಟಲೆ ಸಂಬಳ ತರುವ ಉದ್ಯೋಗಿಯಾಗಬೇಕು, ಹಾಗಾದ ಮರುಕ್ಷಣ ಒಂದು ಸುಂದರ ಅನುರೂಪ ಹುಡುಗಿ(ಗ) ಸಿಗಬೇಕು, ಅದೂ ಆಯಿತು ಎಂದರೆ ಅವರುಗಳು ನಾವು ಹೇಳಿದಂತೆ ಕೇಳಬೇಕು, ಎಂಬ ಚಿಂತೆ ಹಲವರಿದ್ದು, ಇಲ್ಲಿ ಕರಕರ ಎಂದು ಕೊರಗಲು ನೂರಾರು ಐಟಮ್ ಬಾಯಿತೆರೆದುಕೊಂಡು ಕುಂತಿರುವುದರಿಂದ ಜೀವನಪೂರ್ತಿ ನೆಮ್ಮದಿ ಕೆಡಿಸಿಕೊಳ್ಳಲು ಅವಕಾಶ ಹೇರಳ. ಈ ಸಂದರ್ಭವನ್ನು ಅವರುಗಳೆಂಬ ಅವರುಗಳು ಚೆನ್ನಾಗಿ ಉಪಯೋಗಿಸಿಕೊಳ್ಳುತ್ತಾರೆ,
ಈ ಪ್ರಕ್ರಿಯೆ ಲಾಗಾಯ್ತಿನಿಂದ ನಡೆದುಬಂದಿದೆ, ಮುಂದೂ ಹೀಗೆಯೇ, ಇಲ್ಲಿ ಎಲ್ಲವೂ ಇದೆ ಆದರೆ ಅನುಭವಿಸಲು ಸ್ವಲ್ಪ ಜಾಣ್ಮೆ ಬೇಕು ಅಷ್ಟೆ.
ವಿಸೂ: ಥೋ ಇದು ಏನಪ್ಪಾ ಅರ್ಥವೇ ಆಗುತ್ತಿಲ್ಲ ಎಂದು ಅನಿಸಿದರೆ ಅರ್ಥವಾಗುವವರೆಗೂ ಓದಿ, ಇಲ್ಲದಿದ್ದರೆ ಎಕ್ಸ್ ಮಾರ್ಕ್ ಕ್ಲಿಕ್ ಮಾಡಿ.

Tuesday, February 1, 2011

"ಓಂ" ಕಾರದಲ್ಲಿ ಎಲ್ಲಾ ಇದೆ.!

ಅಯ್ಯೋ ಅದು ಖಡಾಖಂಡಿತಾ ನಿಜ ಅಂತ ನಮಗೆ ಗೊತ್ತು ನೀನೇನು ಹೊಸತಾಗಿ ಹೇಳಬೇಕಾಗಿಲ್ಲ ಅಂತ ಅಂದಿರಾ..? ವಾಕೆ ಮುಂದುವರೆಸೋಣ. ಅವರೆಂಬ ಅವರು ಏನೆಂತಾರೆ ಎಂದರೆ, " ನೀವು ಎಲ್ಲಾ ಯೋಚನೆಗೂ ಮಿದುಳನ್ನು ಆಶ್ರಯಸುತ್ತೀರಿ, ಹಾಗಾಗಿ ಯೋಚನೆಯೆಂಬುದು ಯೆಗ್ಗಿಲ್ಲದೆ ನಿಮ್ಮನ್ನು ಎಲ್ಲೆಲ್ಲಿಗೋ ಕೊಂಡೊಯ್ಯುತ್ತದೆ. ಮಡೆಸ್ನಾನ ಮಾಡುವವರೂ ಹಾಗೂ ಕ್ರಿಕೆಟ್ ಹರಾಜಾಗುವವರು ತಲೆಕೆಡಿಸಿಕೊಳ್ಳದ್ದಕ್ಕೆ ನೀವು ಬರಪ್ಪೂರ್ ಕಿತ್ತಾಡಿ ಸುಸ್ತಾಗುತ್ತೀರಿ, ಸುಮ್ಮನೆ ಯೆಸ್ ಎಂದು ಮುಗುಮ್ಮಾಗಿ ಕುಳಿತುಕೊಂಡು ಮಜ ಅನುಭವಿಸಬಹುದಾಗಿದ್ದ ಸಮಯವನ್ನು ತಲೆಕೂದಲೆಲ್ಲಾ ನಿಮರುವಂತೆ ಮಂಡೆಬಿಸಿಮಾಡಿಕೊಂಡು ವ್ಯಗ್ರರಾಗುತ್ತೀರಿ, ಆದರೆ ಮಜ ಗೊತ್ತ ? ಹೀಗೆ ನಿಮ್ಮ ವರ್ತನೆಯಿಂದ ಪ್ರಪಂಚ ದಲ್ಲಿ ಗುಲಗುಂಜಿ ಬದಲಾವಣೆ ಆಗುವುದಿಲ್ಲ, ಅಕಸ್ಮಾತ್ ಆದರೂ ಅದು ನೀವು ಮಂಡೆಬಿಸಿಮಾಡಿಕೊಂಡಿದಕ್ಕಂತೂ ಆಗಿರುವುದಿಲ್ಲ. ಹೀಗೆಲ್ಲಾ ಆಗುವುದಕ್ಕೆ ನಿಮ್ಮ ಮೆದುಳಿನ ಹೆಚ್ಚು ಬಳಕೆಯೇ ಕಾರಣ," ಬಿಟ್ಟಾಕಿ ಅವೆಲ್ಲಾ, ಪ್ರೀತಿಯನ್ನು ಹೃದಯದಿಂದ, ಪ್ರಪಂಚವನ್ನು ನಾಭಿಯಿಂದ ನೋಡಿ ಕೇಳಿ ಅನುಭವಿಸಿ, ಆಗ ನೋಡಿ ಸ್ವರ್ಗದಲ್ಲಿ ತೇಲಾಡುತ್ತೀರಿ. ಆಗ ನಿಮ್ಮಲ್ಲಿ ಹುಟ್ಟುವ ಯೋಚನೆಗಳು ಮಿದುಳಿನಲ್ಲಿ ರೂಪ ಪಡೆದು ಸದ್ದು ಮೂಡುತ್ತಲ್ಲ ಅಲ್ಲಿ ಬದಲಾವಣೆ ಆಗಬಹುದು, ಇಲ್ಲ ಆಗಲೇ ಇಲ್ಲ ಎನ್ನಿ ಆಗದ ಚಿಂತೆ ನಿಮ್ಮನ್ನು ಕಾಡದು, ಅಷ್ಟಾದರೆ ಸಾಕಲ್ಲ ಇನ್ನೇಕೆ ತಡ. ಪ್ರೀತಿ ಮಾಡುವ ಮನಸ್ಸು ಇಲ್ಲದಿದ್ದರೆ ನಾಭಿಯತ್ತ ನಿಮ್ಮ ಗಮನವನ್ನು ಕೊಡಿ.
ಅದೆಲ್ಲಾ ಸರಿ ನಾಭಿಯತ್ತ ಗಮನ ಅಂದರೆ ಏನು? ಅಂತ ನಿಮ್ಮ ಪ್ರಶ್ನೆ ಅಂತ ತಾನೆ?. ಅದೇ ಓಂಕಾರ, ಸಿಕ್ಕಾಪಟ್ಟೆ ಭಯ ಆದಾಗ ಹೊಟ್ಟೆಯಲ್ಲಿ ಅದೇನೋ ತಳಮಳ ಅಂತೀವಿ ತಾನೆ?, ಅಲ್ಲಿಗೆ ಅಲ್ಲಿ ಏನೋ ಇದೆ ಅಂತಾಯ್ತು, ಹೌದು ಅಲ್ಲಿಂದಲೇ ಎಲ್ಲವಂತೆ, ನಾಭಿ ನಮ್ಮ ಮೂಲಕೇಂದ್ರವಂತೆ, ಅದರ ಬಗ್ಗೆ ದಿನಕ್ಕೊಮ್ಮೆ ಗಮನಹರಿಸಿದರೆ ನಮ್ಮ ಯೋಚನೆಯ ದಿಕ್ಕು ಬದಲಾಗಿ ಸ್ವಲ್ಪ ರಿಲೀಫ್ ಸಿಗುತ್ತಂತೆ, ಅದರತ್ತ ಗಮನ ಹರಿಸಲು ಅತ್ಯಂತ ಸುಲಭ ಈ ಓಂಕಾರವಂತೆ. ಹೀಗೆ ಅಂತೆಕಂತೆಗೆಳ ಸಂತೆಯನ್ನು ತೀರಾ ಒಂತರಾ ಹಳೇಬಾಟಲಿ ಹೊಸ ಮದ್ಯದ ತರಹದ ಆಲೋಚನೆಗೆ ಒಡ್ಡಬೇಡಿ, ನೀವು ಮಂಡೆಬಿಸಿಯಿಂದ ಬಳಲುವ ಜನ ಆಗಿದ್ದರೆ ಸುಮ್ಮನೆ ರವಿಶಂಕರ್ ಯೋಗ, ಮತ್ತೊಂದು ಧ್ಯಾನ ಮಗದೊಂದು ನಗುಥೆರಪಿ ಮಗಮಗದೊಂದು ಹೀಲಿಂಗ್ ಅಂತೆಲ್ಲಾ ಹಣ ಕಳೆದುಕೊಳ್ಳಬೇಡಿ, ಅವೆಲ್ಲಾ ನಿಮ್ಮಲ್ಲಿರುವ ಶಕ್ತಿಯನ್ನು ಬಳಸಿಕೊಂಡು ನಿಮಗೆ ಅದೇನೋ ಕಲಿಸಿಕೊಟ್ಟಂತೆ ಅನಿಸಿಬಿಡುತ್ತಾರೆ, ಸುಮ್ಮನೆ ಬೆಳಗ್ಗೆ ಒಂದೈದು ನಿಮಿಷ ಓಂ...... ಎಂದು ದೀರ್ಘವಾಗಿ ಎಳೆದು ಎಳೆದು ಒಂದಿಪ್ಪತ್ತು ಬಾರಿ ಹೇಳಿ, ಮಜ ಬರುತ್ತೆ,ಆಗ ನಿಮ್ಮ ಯೋಚನೆ ನಾಭಿಯತ್ತ ಹೊರಳುತ್ತದೆ. ಹೌದು ಅದು ನಾಭಿಯಿಂದ ಹೊರಡಿಸಬಹುದಾದ ಸದ್ದು ಅದು. ಆನಂತರ ಪುಕ್ಕಟ್ಟೆ ನೆಮ್ಮದಿ ನಿಮ್ಮದಾಗುತ್ತದೆ. ಒಮ್ಮೆ ನಾಭಿಯತ್ತ ಗಮನ ಹರಿದು ಅದು ವಿಕಸನಗೊಂಡಮೇಲೆ ಓಂಕಾರ ತನ್ನಷ್ಟಕ್ಕೆ ಬದುಕು ಕಟ್ಟಿಕೊಡುತ್ತದೆ.
ಅಯ್ಯೋ ಸಾಕು ಬಿಡು ಇವೆಲ್ಲಾ ಚೊರೆ ಎಂದಿರಾ ಸರಿ ಹಾಗಾದರೆ ನಿಮಗೆ ಈಗಾಗಲೇ ಆ ವಿದ್ಯೆಗಳೆಲ್ಲಾ ಒಲಿದಿದೆ, ಅಥವಾ ಏನೂ ಒಲಿದಿಲ್ಲ. ಒಲಿದಿದ್ದರೆ ಸಂತೋಷ, ಒಲಿಯದಿದ್ದರೆ ಅಂತಹ ಅವಶ್ಯಕತೆಯಕಾಲ ಬಂದಾಗ ಇದನ್ನು ನಿಧಾನ ಕುಳಿತು ಓದಿ. ಹ್ಯಾಪಿ "ಓಂ"

Monday, January 31, 2011

ಅವರು ಹೀಗೆ ಮೈಲ್ ಮಾಡಿದ್ದಾರೆ

ಚೈತ್ರರಶ್ಮಿಯ ಸಂಪಾದಕರು ಹೀಗೆ ಮೈಲ್ ಮಾಡಿದ್ದಾರೆ. ಧನ್ಯವಾದಗಳು ಅವರಿಗು ನಿಮಗೂ....

ನಮಸ್ತೆ, ಕುಶಲವೆಂದು ಭಾವಿಸುವೆ. ನಮ್ಮ ಚೈತ್ರರಶ್ಮಿ ಪ್ರಕಾಶನದ ವತಿಯಿಂದ ಏರ್ಪಡಿಸಿದ್ದ ರಾಜ್ಯಮಟ್ಟದ ಕಥಾಸ್ಪರ್ಧೆಯಲ್ಲಿ ಭಾಗವಹಿಸಿದ ನಿಮಗೆ ನಮ್ಮ ವಂದನೆಗಳು. ನಿಮ್ಮ ಕಥೆ ನಮ್ಮ ಸ್ಪರ್ಧೆಯ ತೀರ್ಪುಗಾರರ ಮೆಚ್ಚುಗೆಗೆ ಪಾತ್ರವಾಗಿದ್ದು ,ಸ್ಪರ್ಧೆಯ ತೃತೀಯ ಬಹುಮಾನಕ್ಕೆ ಪಾತ್ರವಾಗಿ ನಾವು ಹೊರತರುತ್ತಿರುವ "ಕನ್ನಡಿ ಬಿಂಬದ ನೆರಳು" ಎಂಬ ಕಥಾಸಂಕಲನದಲ್ಲಿ ಪ್ರಕಟವಾಗುತ್ತಿದೆ. ಈ ಕಥಾಸಂಕಲನದ ಬಿಡುಗಡೆ ಕಾರ್ಯಕ್ರಮ ಫೆಬ್ರವರಿ 13 , ಭಾನುವಾರ , ನಮ್ಮ ಚೈತ್ರರಶ್ಮಿ ಪತ್ರಿಕೆಯ 6 ನೇ ವಾರ್ಷಿಕ ಸಂಭ್ರಮದ ಕಾರ್ಯಕ್ರಮದಲ್ಲಿ, ಬೆಂಗಳೂರಿನ ಜೆ .ಸಿ.ರಸ್ತೆಯ ಕನ್ನಡ ಭವನದ ನಯನ ಸಭಾಂಗಣ ದಲ್ಲಿ ಸಂಜೆ 4 ಕ್ಕೆ ನಡೆಯಲಿದೆ. ಈ ಸಮಯ ನೀವು ನಮ್ಮೊಂದಿಗೆ ಉಪಸ್ಥಿತರಿದ್ದು ಕಥಾಸಂಕಲನದ ಬಿಡುಗಡೆಯ ಸಂಭ್ರಮದ ಕ್ಷಣಗಳಿಗೆ ಸಾಕ್ಷಿಯಾಗುತ್ತೀರಿ ಎಂದು ನಂಬುತ್ತೇನೆ.

ನಮ್ಮ ಸೃಜನಶೀಲತೆಯ ಹುಡುಕಾಟದ ತಿಂಗಳ ಪತ್ರಿಕೆ ’ಚೈತ್ರರಶ್ಮಿ’ಯ ಭಾವಯಾನಕ್ಕೆಆರರ ಸಂಭ್ರಮ. ಬದುಕಿನ ವಾಸ್ತವದಲ್ಲಿ ಕಳೆದುಹೋದ ಮನಸ್ಸಿನಲ್ಲಿ ಹೊಸ ಹುರುಪು ತುಂಬಿ ಚೈತನ್ಯದಾಯಕ ಬೆಳಕಿನೆಡೆಗೆ ಕರೆದೊಯ್ಯಬಲ್ಲ ಒಂದು 'A Ray of HOPE' 'ನಮ್ಮದಾಗಬೇಕು ಎಂಬುದು ಚೈತ್ರರಶ್ಮಿಯ ಆಶಯ. ಹಳ್ಳಿಮನೆಗಳಲ್ಲಿ ಪ್ರತಿಭೆಯಿದ್ದೂ ಅವಕಾಶಗಳಿಲ್ಲದೆ ಕಳೆದುಹೋದ, ಬರೆಯಲು ಹಿಂಜರಿದು ಬರೆಯೋದು ಮರೆತ, ಬದುಕಿನ ಜಂಜಡದಲ್ಲಿ ಸಾಹಿತ್ಯದ ಸೆಲೆಯಿಂದ ದೂರಾದ ಎಲ್ಲ ಎಲೆಮರೆಯಕಾಯಂತಹ ಕವಿಮನಸ್ಸುಗಳನ್ನು ಸೃಜನಶೀಲತೆಯ ಹುಡುಕಾಟದ ಭಾವಯಾನದಲ್ಲಿ ಕರೆದೊಯ್ಯಬೇಕೆಂಬುದು ಚೈತ್ರರಶ್ಮಿಯ ಕನಸು.ಜೊತೆಗೆ ಸಮಾಜದಲ್ಲಿ ಸಾಧನೆ ಮಾಡಿದ ಸಾಧಕರನ್ನು, ನಮ್ಮ ನಡುವಿನ ಆದರ್ಶಗಳನ್ನು, ಸಾಹಿತ್ಯ, ಸಂಸ್ಕೃತಿ ಪರಂಪರೆಗಳ ಉತ್ಕೃಷ್ಟ ವಿಚಾರಗಳನ್ನು, ದೇಶ, ಸಮಾಜದೆಡೆಗಿನ ಕಾಳಜಿಯನ್ನು ಎಲ್ಲರಿಗೂ ತಲುಪಿಸುವ ಪುಟ್ಟ ಪ್ರಯತ್ನವನ್ನೂ ಚೈತ್ರರಶ್ಮಿ ಮಾಡುತ್ತಿದೆ. ಚೈತ್ರರಶ್ಮಿಗೆ ಆರು ತುಂಬಿದ ಈ ಸಂಭ್ರಮದಲ್ಲಿ ಕಥಾಸಂಕಲನ ಬಿಡುಗಡೆ, ಸಾಧಕರಿಗೆ ಸನ್ಮಾನ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ಕಥಾಸ್ಪರ್ಧೆಯ ಫಲಿತಾಂಶ, ಕಾರ್ಯಕ್ರಮದ ಆಹ್ವಾನ ಪತ್ರಿಕೆಗಳಿಗೆ ಅಟ್ಯಾಚ್ಮೆಂಟ್ ನೋಡಿ.
ನಮ್ಮ ಈ ಎಲ್ಲ ಸಂಭ್ರಮದ ಕ್ಷಣಗಳಲ್ಲಿ ನಮ್ಮೊಂದಿಗೆ ನೀವಿರುತ್ತೀರಿ ಎಂದು ನಂಬುತ್ತಾ, ನಿಮ್ಮ ನಿರೀಕ್ಷೆಯಲ್ಲಿ...
-
ರಾಮಚಂದ್ರ ಹೆಗಡೆ ಸಿ.ಎಸ್,
ಸಂಪಾದಕ ,
ಚೈತ್ರರಶ್ಮಿ, ಕನ್ನಡ ಮಾಸಿಕ
ದೂ: ೯೯೮೬೩೭೨೫೦೩

Sunday, January 30, 2011

ಹಸಿ ಹಸಿ ವೆನಿಲಾದ ಒಣ ಒಣ ನೆನಪು


ಕೆಲ ವರ್ಷಗಳ ಹಿಂದೆ "ವೆನಿಲಾ" ಮೂರಕ್ಷರದ ಪದ ಕೃಷಿಕರನ್ನು ರೋಮಾಂಚನ ಗೊಳಿಸುತ್ತಿತ್ತು. ಅಬ್ಬಾ ಅದರ ಒನಪು ವಯ್ಯಾರ ಗತ್ತು ಗಾಂಬೀರ್ಯ, ವರ್ಣಿಸಲಸದಳ. ಕೆಜಿಯೊಂದಕ್ಕೆ ಮೂರುವರೆ ಸಾವಿರ ಬೆಲೆ ಕಂಡಿದ್ದ ಕಾರಣ ಕೃಷಿಕ ಅದಕ್ಕೆ ಸಿಕ್ಕಾಪಟ್ಟೆ ಬೆಲೆ! ಕೊಡುತ್ತಿದ್ದ. ಬೆಳೆದವರ ಗತ್ತೇನು? ಅದು ಹೆಚ್ಚು ಹೂವು ಬಿಡಲು ಮಾಡುವ ಪ್ರಯತ್ನಗಳೇನು ? ಬಿಡಿ ಅದರ ಸುದ್ದಿ ಹೇಳುವುದೇ ಬೇಡ.
ನೋಡನೋಡುತ್ತಾ ಅವೆಲ್ಲಾ ದಂತ ಕತೆಗಳಾಗಿವೆ. ಈಗ ಮನೆಯ ಹತ್ತಿರ ಇರುವ ಬಳ್ಳಿಗಳನ್ನು ಕಣ್ಣೆತ್ತಿಯೂ ನೋಡುವುದಿಲ್ಲ ಯಾರೂ. ಕಾಲಾಯ ತಸ್ಮೈ ನಮಃ