ಮಲೆನಾಡಿನ ಮಳೆಗಾಲದ ದಿನಗಳಲ್ಲಿ ಪುಕ್ಕಟ್ಟೆ ಪಾಯಿ ಚಪ್ಪರಿಸಬೇಕು ಎಂದಾದರೆ ಒಮ್ಮೆ ಈ ಅಂಕುಲಾ ಹಣ್ಣನ್ನು ಸವಿಯಬೇಕು. ಮಲೆನಾಡಿನ ಹಳ್ಳಿಯ ಶಾಲೆಯಮಕ್ಕಳಿಗೆ ಮಳೆಗಾಲದ ದಿನಗಳು ಎಂದರೆ ರಸ್ತೆಯಲ್ಲಿ ಹರಿಯುವ ಜುಳುಜುಳು ನೀರು ಹಾಗೂ ರಸ್ತೆಯಂಚಿನ ಪೆಪ್ಪರ್ ಮೆಂಟ್ ಹಣ್ಣು. ನಿಂಬೆಹುಳಿ ಪೆಪ್ಪರ್ ಮೆಂಟನ್ನು ಗಿಡದ ಮೇಲೆ ಜೋಡಿಸಿದಂತಿರುವ ಕಾರಣಕ್ಕಾಗಿ ಅಂಕುಲ ಹಣ್ಣಿಗೆ ಪರ್ಯಾಯ ಹೆಸರು ಇದು.
ಮಳೆಗಾಲದ ಕಾಡು ಹಣ್ಣುಗಳ ರಾಜ ಎನ್ನಿಸಿಕೊಂಡಿರುವ ಈ ಹಣ್ಣಿಗೆ ವಿಶಿಷ್ಠ ರುಚಿಯ ಜತೆಗೆ ವಿಶೇಷ ಬಣ್ಣವನ್ನು ಪ್ರಕೃತಿ ನೀಡಿದೆ. ಹಸಿರೆಲೆಗಳ ನಡುವೆ ಕಡುಕೆಂಪು ಬಣ್ಣದ ಈ ಹಣ್ಣಿನ ಸಿಪ್ಪೆ ಸುಲಿದು ಕೆಂಪಗೆ ಮಿರಿಮಿರಿ ಮಿಂಚುವ ರಸಭರಿತ ಹಣ್ಣು ಅಗಿಯುವುದಲ್ಲ ಸೀಬಬೇಕು. ಸೀಬಿದ ಮರುಕ್ಷಣ ವಾವ್ ಎಂಬ ಉದ್ಘಾರ ತನ್ನಷ್ಟಕ್ಕೆ ಹೊರಡುತ್ತದೆ. ಬೀಜವನ್ನು ಉಗಿಯುತ್ತಿದ್ದಂತೆ ಮತ್ತೊಂದು ಹಣ್ಣಿನ ಹುಡುಕಾಟ ತನ್ನಷ್ಟಕ್ಕೆ. ಶಾಲಾ ಮಕ್ಕಳ ಬಾಯಿಗೆ ಹಣ್ಣು ನೀಡುವುದು ಎಂದರೆ ಪ್ರಾಯಶಃ ಈ ಗಿಡಕ್ಕೂ ಅತ್ಯಂತ ಸಂತೋಷದ ಸಂಗತಿಯೆ. ತಮಗೇ ಗೊತ್ತಿಲ್ಲದಂತೆ ದಾರಿಯುದ್ದಕ್ಕೂ ಅಂಕುಲದ ಬೀಜ ಪ್ರಸರಣ ಮಾಡುವ ಕೆಲಸಗಾರರು ಇವರು.
ಅಂಕುಲ ಗಿಡ ಸ್ಥಳೀಯವಾದ ಭಾಷೆಗಳಲ್ಲಿ ಬೇರೆ ಬೇರೆ ಹೆಸರಿನ ಮೂಲಕ ಪರಿಚಯಿಸಿಕೊಳ್ಳುತ್ತದೆ. ಗಿಡ ಹಣ್ಣುಗಳ ಚಿತ್ರ ಕಂಡಾಗ ಓಹ್ ಇದು ಈ ಹಣ್ಣು ಎಂದು ನೆನಪಾಗುತ್ತದೆ. ಪಶ್ಚಿಮ ಘಟ್ಟದ ತಪ್ಪಲಿನ ವಾತಾವರಣದಲ್ಲಿ ಮಾತ್ರಾ ಕಾಣಿಸಿಕೊಳ್ಳುವ ಈ ಗಿಡ ಪೊದೆಯ ಆಶ್ರಯದಲ್ಲಿ ಮಾತ್ರಾ ಬೆಳೆಯಬಲ್ಲದು. ಅತ್ತ ಬಳ್ಳಿಯೂ ಅಲ್ಲ ಇತ್ತ ಗಿಡವೂ ಅಲ್ಲ ಎಂಬಂತಿರುವ ಅಂಕುಲ ಗಿಡದ ಹಣ್ಣಿನ ರುಚಿಗೆ ಮಾತ್ರಾ ಸಾಟಿಯಿಲ್ಲ.
(ಇಂದಿನ ವಿಜಯಕರ್ನಾಟಕ ಲವಲವಿಕೆಯಲ್ಲಿ ಪ್ರಕಟಿತ)