Tuesday, May 10, 2011

ಗೇಣಿ

(ಚೈತ್ರರಶ್ಮಿ ಯಲ್ಲಿ ಬಹುಮಾನ ಪಡೆದ ಕತೆ)
ಬೆಳಿಗ್ಗೆ ಮನೆಬಿಟ್ಟ ಕರಿಯಜ್ಜ ವಾಪಾಸು ಮನೆಗೆ ಬಂದಾಗ ಮಟಮಟ ಮಧ್ಯಾಹ್ನ. ಮುಚ್ಚಿದ್ದ ಬಾಗಿಲೆದುರು ನಿಂತು ಮೂರ್ನಾಲ್ಕು ಬಾರಿ ಹೆಂಡತಿಯನ್ನು ಕೂಗಿ ಕರೆದ. ಒಳಗಿನಿಂದ ಉತ್ತರ ಬಾರದ್ದರಿಂದ ಲಚ್ಚಿಯ ಸಿಟ್ಟು ಇನ್ನೂ ತಣಿದಿಲ್ಲ ಅಂತ ಅಂದುಕೊಂಡು "ಬಡವಾ ನೀ.... ಮಡಗಿದಂಗೆ ಇರು ಅಂತ ಹೇಳಿದ್ರೆ ಕೇಳಿದ್ಯಾ..." ಎಂದು ತನ್ನನ್ನೇ ತಾನು ಬೈದುಕೊಂಡ, ಅಷ್ಟಕ್ಕೂ ತಣಿಯದ ಸಿಟ್ಟಿಗೆ ಬಲಗಾಲಿನಿಂದ ದಡಾರನೆ ಬಾಗಿಲನ್ನು ಒದ್ದ. ಆ ಒದೆತದ ರಭಸಕ್ಕೆ ಅಷ್ಟೇನೂ ಗಟ್ಟಿಮುಟ್ಟಾಗಿರದ ಜಾಯಿಕಾಯಿ ಹಲಗೆಯ ಬಾಗಿಲು ಮಗಚಿಕೊಂಡು ಬಿತ್ತು. ಮುರಿದು ಬಿದ್ದ ಬಾಗಿಲ ಶಬ್ದಕ್ಕೆ ಗೂಡೊಳಗಿದ್ದ ಕೋಳಿಗಳು ಬದುಕಿದರೆ ಕುಕ್ಕಿ ತಿಂದೇವು ಎಂದು ಪಟಪಟನೆ ರಕ್ಕೆ ಬಡಿದುಕೊಂಡು ಕೊ ಕ್ಕೊ ಕ್ಕೊ ಎನ್ನುತ್ತಾ ಹಾರಿಹೋದವು. ಕೋಳಿ ಹಾರಿದ ಸದ್ದಿಗೆ ಕರಿಯಜ್ಜನ ಬಡಕಲು ನಾಯಿ ಮೈತುಂಬಿ ಕೂಗುವಷ್ಟು ಶಕ್ತಿ ಇಲ್ಲದಿದ್ದರೂ ತನ್ನ ವಂಶಪಾರಂಪರ್ಯ ಕರ್ತವ್ಯಕ್ಕೆ ಚ್ಯುತಿ ತರಬಾರದೆಂಬ ಒಂದೇ ಕಾರಣದಿಂದ ಅಳಿದುಳಿದ ಶಕ್ತಿಯನ್ನು ಬಳಸಿ ಊಳಿತೊಡಗಿತು. ಅಷ್ಟರತನಕ ಕೋಗಿಲೆಯ ಶಾಂತ ಸ್ವರದಿಂದ, ಅರಸನ ಹಕ್ಕಿಯ ಗುಟುರುವಿಕೆಯಿಂದ ತಂಪಾಗಿದ್ದ ಸುತ್ತಲ ಪರಿಸರ ಅರೆಕ್ಷಣದಲ್ಲಿ ಕದಡಿ ಗಲಿಗಿಬಿಲಿಗೊಳಗಾಯಿತು. ಇಷ್ಟಕ್ಕೆಲ್ಲಾ ಕಾರಣನಾದ ಕರಿಯಜ್ಜನ ರಭಸ, ಬಾಗಿಲು ಮುರಿದು ಬಿದ್ದ ಮರುಕ್ಷಣ ಆಘಾತಕ್ಕೆ ಒಳಗಾಗಿ ಹತಾಶ ಸ್ಥಿತಿಗಿಳಿಯಿತು. ಬೋರಲು ಬಿದ್ದ ಬಾಗಿಲ ಬಳಿ ಗೊಡೆಗೊರಗಿ ತನ್ನ ಹಣೇಬರಹವನ್ನು ಶಪಿಸತೊಡಗಿದ ಕರಿಯಜ್ಜ. ತನ್ನ ಈ ದೈನೀಸಿ ಸ್ಥಿತಿಗೆ ಕಾರಣವಾದ ಘಟನೆಗಳು ನೆನಪಾಗತೊಡಗಿದವು.
*********
ಕರಿಯಜ್ಜನ ಈ ಹತಾಶ ವರ್ತನೆ ಶುರುವಾಗಿದ್ದು ಹದಿನೈದು ದಿವಸಗಳ ಹಿಂದಿನದಾಗಿದ್ದರೂ ಸ್ವಲ್ಪ ವಿಕಾರ ರೂಪ ತಾಳಿದ್ದು ಬೆಳಗ್ಗೆ ಲಚ್ಚಿಯ ಚುಚ್ಚು ಮಾತುಗಳಿಂದ ಎಂಬುದು ಸತ್ಯ. ಬಟ್ಟಲಿಗೆ ಗಂಜಿ ಬಡಿಸಿದ ಲಚ್ಚಿ, ಪಾತ್ರೆಯನ್ನು ಅಲ್ಲಿಯೇ ಇಟ್ಟು ಹಾಗೆಯೇ ಕುಕ್ಕುರುಗಾಲಿನಲ್ಲಿ ಕುಳಿತ ತಕ್ಷಣ ಕರಿಯಜ್ಜನಿಗೆ ಅನುಮಾನದ ವಾಸನೆ ಬಡಿದಿತ್ತು. ಗಂಜಿ ಕರಿಯಜ್ಜನ ಗಂಟಲು ಸೇರುವದೊರಳಗೆ ಮೂರು ತಿಂಗಳ ಹಿಂದೆ ಅಡವಿಟ್ಟ ಬಂಗಾರದ ಬೆಂಡೋಲೆಯ ಪ್ರಸ್ತಾಪವನ್ನು ಲಚ್ಚಿ ಶುರುವಿಟ್ಟುಕೊಂಡಾಗ ಅನುಮಾನ ನಿಜವಾಗಿತ್ತು. ಲಚ್ಚಿ ಕರಿಯಜ್ಜನನ್ನು ಹೀಗೆ ಹಣಿಯುವುದು ಊಟಕ್ಕೆ ಕುಳಿತಾಗಲೇ, ಊಟ ಬಿಟ್ಟು ಏಳಲೂ ಆಗದು ನೆಮ್ಮದಿಯಿಂದ ಊಟ ಮಾಡಲೂ ಆಗದು ಎನ್ನುವಂತಹ ದೈನೇಸಿ ಸ್ಥಿತಿಯನ್ನು ತಂದಿಟ್ಟುಬಿಡುತ್ತಿದ್ದಳು ಲಚ್ಚಿ. ಅವಳು ಹಾಗೆ ಮಾಡುವುದಕ್ಕೆ ಅವಳದ್ದೇ ಆದ ಕಾರಣವೆಂದರೆ ಕರಿಯಜ್ಜ ಅಸಾಹಾಯಕನಾಗಿ ಅವಳ ಕೈಗೆ ಸಿಗುವುದು ಅದೊಂದೇ ಸಮಯದಲ್ಲಿ, ಹಾಗಾಗಿ ಊಟಕ್ಕೆ ಬಡಿಸಿ ಕುಕ್ಕುರುಗಾಲಿನಲ್ಲಿ ಬಟ್ಟಲೆದುರು ಕುಳಿತ ಲಚ್ಚಿ ಶುರುವಿಟ್ಟುಕೊಂಡಿದ್ದಳು
"ಅಲ್ಲಾ, ಇವತ್ತು ದೇವಸ್ಥಾನದಾಗೆ ಅಸ್ಟಬಂಧದ ಪೂಜೆ ಐತೆ, ಅದ್ಕೆ ಕಿವಿಗೆ ಕಡ್ಡಿ ಹಾಕ್ಯಂಡು ಹೋಗದು ಹ್ಯಾಂಗೆ, ಸರಿಕರಮುಂದೆ ಮಾನ ಮರ್ವಾದೆ ಇರಾಕಿಲ್ಲ, ಪ್ಯಾಟಿಗೆ ಹೋಗಿ ಅಡ ಇಟ್ಟ ಬೆಂಡೋಲೆ ಬಿಡಿಸಿ ತಗ ಬರಬಹುದಿತ್ತು, ಇವತ್ತು ನಾಳೆ ಇವತ್ತು ನಾಳೆ ಅಂತ ಮೂರ್ ತಿಂಗ್ಳು ಕಳದೋತು"
"....."
"ಮಾಡದೆಲ್ಲಾ ಮಾಡಿ ಹಿಂಗೆ ಗುಮ್ಮನ ಹಂಗೆ ಕುತ್ಕಂಡ್ರೆ ಬೆಂಡೋಲೆ ಅದ್ರಷ್ಟಕ್ಕೆ ಮನೆ ಬಾಗ್ಲಿಗೆ ಬರ್ತೈತಾ?, ದೇವ್ರು ಕೊಟ್ಟಷ್ಟು ಉಂಡು ತೆಪ್ಪಗಿರನಾ ಅಂತ ಹೇಳಿದ್ರೆ ಕೇಳ್ದೆ, ಅಷ್ಟು ದುಡೀತೀನಿ ಇಷ್ಟು ಕಿಸಿತೀನಿ ಅಂತ ಗೇಣಿ ಗದ್ದೆ ಮಾಡೋಕೋದ್ರಿ ಈಗ ಬಂಗಾರ ಅನ್ನೋ ಹೆಸ್ರಿಗೆ ಅಂತ ಇರಾ ಒಂದು ಒಡ್ವೆನೂ ಕಳ್ಕಂಡಂಗೆ ಆತು, ಒಟ್ನಲ್ಲಿ ನನ್ನ ಹಣೇಬರಾ ನೆಟ್ಟಗಿಲ್ಲ" ಎನ್ನುತ್ತಾ ಮುಸಿಮುಸಿ ಶುರುಮಾಡಿದ್ದಳು ಲಚ್ಚಿ.
ಕರಿಯಜ್ಜ ಮಾತನಾಡಲಿಲ್ಲ. ಮಾತನಾಡುವ ಆಸೆ ಇತ್ತು ಆದರೆ ಲಚ್ಚಿಗೆ ಸಮಾಧಾನ ನೀಡುವಂತಹ ಉತ್ತರ ಅವನಲ್ಲಿಇಲ್ಲದರಿಂದ ಮುಗುಮ್ಮಾಗಿ ಕುಳಿತು ಗಂಜಿಯನ್ನು ಹೊಟ್ಟೆಗೆ ಸೇರಿಸುವತ್ತ ಗಮನಹರಿಸಿದ್ದ. ಗಂಡನ ಈ ನಿರ್ಲಕ್ಷ್ಯ ವರ್ತನೆಯಿಂದ ಕೆರಳಿದ ಲಚ್ಚಿ ತನ್ನ ಹಣೇಬರಹವನ್ನು ಶಪಿಸತೊಡಗಿದಳು. ಉಕ್ಕಿಬಂದ ಸಿಟ್ಟು ತಡೆಯಲಾರದೆ ಗಂಜಿ ಪಾತ್ರೆಯನ್ನು ನೆಲಕ್ಕೆ ಕುಕ್ಕಿ ಮೂಲೆ ಸೇರಿ ಹರಕು ಕಂಬಳಿಯೊಳಗೆ ತೂರಿಕೊಂಡಳು.
ಕರಿಯಜ್ಜ ಒಮ್ಮೆ ಅಧಿರನಾಗಿ ಅಸಾಹಾಯಕ ಪರಿಸ್ಥಿತಿಗೆ ಉತ್ತರ ಸಿಗದೆ ಮನೆಯಿಂದ ಹೊರನಡೆದ. ತಪ್ಪು ತನ್ನಿಂದ ಆಗಿದ್ದು ನಿಜವಾದರೂ ಅದು ಉದ್ದೇಶಪಟ್ಟು ಮಾಡಿದ ತಪ್ಪಾಗಿರಲಿಲ್ಲ. ಆಸೆಯೆಂಬುದು ಯಾರಿಗಿರುವುದಿಲ್ಲ?, ವರ್ಷವರ್ಷಗಳಿಂದ ಕೂಲಿ ಮಾಡಿದ್ದರೂ ಅರೆಹೊಟ್ಟೆ ಮಾಸಲು ಬಟ್ಟೆ. ಸ್ಥಿತಿಯನ್ನು ಉತ್ತಮ ಮಟ್ಟಕ್ಕೆ ಏರಿಸಿಕೊಳ್ಳಬೇಕು ಎನ್ನುವ ಕನಸಿಗಾಗಿ ಅಲ್ಲದಿದ್ದರೂ ಉಂಡುಟ್ಟು ಸುಖವಾಗಿ ಇರಬೇಕು ಎನ್ನುವ ಆಸೆಗೆ ಬಲಿಯಾಗಿ ಗೇಣಿಗದ್ದೆ ಮಾಡಿ ಕೈಸುಟ್ಟುಕೊಂಡದ್ದು, ಗೊಬ್ಬರ ತರಲು ಬೆಂಡೋಲೆ ಅಡ ಇಟ್ಟಿದ್ದು ಆನಂತರ ಬರುವಷ್ಟು ಬೆಳೆ ಕೈಗೆಬಾರದೆ ಬೆಳೆದ ಬತ್ತವೆಲ್ಲಾ ಗೌಡರ ಮನೆ ಸೇರಿದ್ದು ಬೆಂಡೋಲೆ ಮಾರ್ವಾಡಿಯ ಹತ್ತಿರವೇ ಉಳಿದದ್ದು ಎಲ್ಲವೂ ಸತ್ಯ. ಹೀಗಾಗದೆ ಇಪ್ಪತ್ತುಚೀಲ ಭತ್ತ ಬಂದಿದ್ದರೆ ಒಡೆಯರ ಮನೆಗೆ ಹತ್ತು ಚೀಲ ಕೊಟ್ಟು ಮಿಕ್ಕುಳಿದ ಹತ್ತು ಚೀಲದಲ್ಲಿ ವರ್ಷಪೂರ್ತಿ ನೆಮ್ಮದಿಯ ಕೂಳು ತಿನ್ನಬಹುದಿತ್ತಲ್ಲ. ಆದರೆ ವಿಧಿ ಹಾಗಿಲ್ಲ ಅಂತ ತಿಳಿದದ್ದು ಎಲ್ಲಾ ಮುಗಿದಮೇಲೆಯೇ.
************
ಕರಿಯಜ್ಜ ಹುಟ್ಟಿದ್ದು ಕೂಲಿಕಾರನಾಗಿಯೇ ಆದರೂ ಬೆಳದದ್ದು ಕೃಷಿಕರ ಅಂಗಳದಲ್ಲಿಯೇ. ನಲವತ್ತರ ಹರೆಯದ ಅವನ ಮೂಲ ಹೆಸರು ಬೆರೇಯೇ ಇದ್ದರೂ ಹೋಲಿಕೆಯಲ್ಲಿ ಅವನ ಅಜ್ಜನಂತೆ ಎಂಬ ಕಾರಣದಿಂದ ಹಾಗೂ ಅಜ್ಜನ ಕಾಲುಸುತ್ತುತ್ತಾ ಬೆಳೆದದ್ದರಿಂದ ಅಜ್ಜ ಸತ್ತನಂತರ ಊರತುಂಬೆಲ್ಲಾ ಕರಿಯಜ್ಜ ತನ್ನ ಅಜ್ಜನ ಹೆಸರಿನಿಂದ ನಾಮಾಂಕಿತನಾಗಿದ್ದ. ಅಜ್ಜ ಲಾಗಾಯ್ತಿನಿಂದ ಭೂಮಿಯ ಮಗನಾಗಿಯೇ ಬೆಳೆದ ಪರಿಣಾಮದಿಂದ ಗದ್ದೆಹೂಟಿ ಮಾಡುವುದು, ಅಗೆಹಾಕುವುದು. ನಾಟಿಮಾಡುವುದು ಹೀಗೆ ಎಲ್ಲಾ ಕೃಷಿಕೈಂಕರ್ಯದ ಕಲೆಗಳು ಕರಿಯಜ್ಜನಿಗೂ ಕರಗತವಾಗಿದ್ದವು. ಸ್ವಂತ ಜಮೀನು ಇಲ್ಲದ ಕಾರಣ ಬೇರೆಯವರ ಜಮೀನಿನಲ್ಲಿ ಕೂಲಿ ಮಾಡುತ್ತ ಭಗವಂತ ಕೊಟ್ಟದ್ದು ತನ್ನದು ಎಂದು ಆರಾಮವಾಗಿದ್ದ. ಹಾಗಿದ್ದವನ ತಲೆಯೊಳಗೆ ಹುಳ ಬಿಟ್ಟದ್ದು ಊರಿನ ಗ್ರಾಮಪಂಚಾಯ್ತಿಯವರು ಏರ್ಪಡಿಸಿದ್ದ "ಗ್ರಾಮ ಸಭೆ"ಯ ಕಾರ್ಯಕ್ರಮ. ಕಾರ್ಯಕ್ರಮದಲ್ಲಿ ಇಸ್ತ್ರೀ ಪ್ಯಾಂಟು ಹಾಕಿಕೊಂಡಿದ್ದ ಸರ್ಕಾರಿ ಅಧಿಕಾರಿಗಳು " ರೈತನೆಂದರೆ ದೇಶದ ಬೆನ್ನೆಲುಬು, ಅವನೇ ಅನ್ನದಾತ, ಅವನು ಕೆಸರಿನಲ್ಲಿ ಹೊರಳಾಡಿ ಅಕ್ಕಿಯೆಂಬ ಬಂಗಾರ ಬೆಳೆಯದಿದ್ದರೆ ಮಿಕ್ಕವರ ಆಟ ನಡೆಯೋದೆ ಇಲ್ಲ. ಸಿನೆಮಾ ನಟರಿಂದ ಹಿಡಿದು ದೇಶದ ಪ್ರಧಾನಿಯ ವರೆಗೂ ರೈತನ ಸಹಾಯವಿಲ್ಲದೆ ಬದುಕಿಲ್ಲ, ಹಾಗಾಗಿ ಆತ ದೇವರ ಸ್ವರೂಪ" ಎಂದೆಲ್ಲ ಅದ್ಬುತವಾಗಿ ಭಾಷಣ ಮಾಡಿದರು. ಹಿಂದಿನ ಸಾಲಿನಲ್ಲಿ ಭಾಷಣ ಕೇಳುತ್ತಾ ಕುಳಿತ ಕರಿಯಜ್ಜನಿಗೆ ತನಗೆ ಗೊತ್ತಿದ್ದ ವಿದ್ಯೆಗೆ ಇಷ್ಟೆಲ್ಲಾ ಮಾನ್ಯತೆ ಇದೆ ಎಂದಾಗ ಮೈಮೇಲೆ ಮುಳ್ಳುಗಳು ಏಳುವಂತಹಾ ರೋಮಾಂಚನವಾಯಿತು. ಆ ಕ್ಷಣ ತಾನೂ ಭತ್ತ ಬಿತ್ತಬೇಕು ಅಕ್ಕಿಬೆಳೆಯಬೇಕು ದೇವರಂತೆ ಪೂಜನೀಯನಾಗಬೇಕು ಎನ್ನುವಂತಹ ಆಸೆಗಳು ಚಿಗುರೊಡೆಯತೊಡಗಿದವು. ತಕ್ಷಣ ಯೋಜನೆಯನ್ನು ಕಾರ್ಯರೂಪಕ್ಕೆ ಇಳಿಸಲು ಕರಿಯಜ್ಜನ ಬಳಿ ಜಮೀನು ಇಲ್ಲದ ಕಾರಣ ಜಮೀನು ಇದ್ದು ಭತ್ತ ಬಿತ್ತದವರ ಬಗ್ಗೆ ಆಲೋಚಿಸಿದ. ರಾಮಕೃಷ್ಣ ಗೌಡ್ರು ಹತ್ತು ಎಕರೆ ಅಡಿಕೆ ತೋಟದ ಒಡೆಯರು, ಹಾಗಾಗಿ ಅವರು ಒಂದು ಎಕರೆ ಭತ್ತ ಬೆಳೆಯುವ ಗದ್ದೆಯನ್ನು ಹಾಳುಬಿಟ್ಟಿದ್ದರು, ಅದು ಕರಿಯಜ್ಜನ ಮನಸ್ಸಿಗೆ ಪಳಕ್ಕನೆ ನೆನಪಿಗೆ ಬಂತು. ಭಾಷಣದ ಮಾತುಗಳು ಮನಸ್ಸಿನಿಂದ ಹುರುಪು ತೆಗೆಯುವುದಕ್ಕಿಂತ ಮೊದಲೇ ಗೌಡ್ರಮನೆ ಬಾಗಿಲಿಗೆ ಹೋಗಿ ನಿಂತ ಕರಿಯಜ್ಜ.
ಪಾಳುಬಿದ್ದ ಗದ್ದೆಯಾದರೂ ಗೌಡ್ರು ಬಡಪೆಟ್ಟಿಗೆ ಗದ್ದೆಯನ್ನು ಗೇಣಿಗೆ ಕೊಡಲು ಒಪ್ಪಲಿಲ್ಲ. ಹಿಂದೆಮುಂದೆ ಅಡ್ಡ ಉದ್ದ ಚೌಕಾಶಿ ಮಾಡಿದನಂತರ ಹತ್ತುಚೀಲ ಭತ್ತ ನೂರು ಹೊರೆ ಬೈಹುಲ್ಲು ಕರಿಯಜ್ಜ ಗೌಡ್ರಿಗೆ ಗೇಣಿಕೊಡುವುದು ಹಾಗೂ ಗದ್ದೆಗೆ ಬೇಕಾಗುವಷ್ಟು ಸರ್ಕಾರಿಗೊಬ್ಬರ ಗೌಡ್ರು ಕೊಡುವುದು ಎಂಬ ತೀರ್ಮಾನದೊಂದಿಗೆ ಗೇಣಿ ಚಾಲ್ತಿಗೆ ಬಂತು. ಕರಿಯಜ್ಜನಿಗೆ ಸ್ವರ್ಗ ಮೂರೇಗೇಣು. ಖುಷಿಯಾಗಿ ಮನೆಗೆ ಬಂದು ಪ್ರಪಂಚಗೆದ್ದ ಭಾವನೆಯಿಂದ ಲಚ್ಚಿಗೆ ತಾನು ಗೇಣಿಗದ್ದೆ ಮಾಡುವ ವಿಷಯ ತಿಳಿಸಿದ. ಆದರೆ ಕೈಸುಟ್ಟುಕೊಳ್ಳುವ ವಾಸನೆ ಬಿದ್ದ ಲಚ್ಚಿ "ಅವೆಲ್ಲಾ ನಮಗೆ ಬ್ಯಾಡ, ಸುಮ್ನೆ ಕೂಲಿ ಮಾಡಿ ಬದುಕು ಅಂತ ಭಗವಂತ ಕಳ್ಸಿದಾನೆ, ಅದ್ರನ್ನ ಮಾಡಾದು ಕಲೀರಿ" ಅಂತ ಹೇಳಿದರೂ ಕರಿಯಜ್ಜ ಪಕ್ಕಾಪಕ್ಕಾ ಲಾಭದ ಲೆಕ್ಕಾಚಾರ ಕೊಟ್ಟಮೇಲೆ ಮನಸ್ಸಿನಮೂಲೆಯಲ್ಲಿ ಆಸೆಚಿಗುರಿ ನಂತರದ ನಷ್ಟಕ್ಕೂ ತನ್ನದೊಂದು ಮಾತು ಅಂತ ಇಟ್ಟುಕೊಂಡು "ನಿಮಗೆ ತೋಚಿದಂಗೆ ಮಾಡಿ" ಎಂದು ಹೇಳಿ ಸೈ ಅಂದಿದ್ದಳು.
ಕಿವಿಯಲ್ಲಿ "ರೈತರೆಂದರೆ ದೇವರ ಅವತಾರ" ಎಂಬ ಅಧಿಕಾರಿಗಳ ಭಾಷಣದ ತುಣುಕನ್ನೇ ಇಟ್ಟುಕೊಂಡು ಕರಿಯಜ್ಜ ಜಡಿಮಳೆಯಲ್ಲಿ ಹೂಟಿ ಮಾಡಿ ಬೀಜದ ಭತ್ತ ಕಡ ತಂದು ಬಿತ್ತಿದ. ನೋಡನೋಡುತ್ತಿದ್ದಂತೆ ಹಸಿರುಬಣ್ಣದ ಸಸಿಗಳು ಮಡುಗಟ್ಟಿ ಎದ್ದವು. ಲಚ್ಚಿ ಸೊಂಟಕ್ಕೆ ಸೆರಗುಸುತ್ತಿಕೊಂಡು ಮುರಿಯಾಳು ಕರೆದುಕೊಂಡು ಸಸಿನಾಟಿ ಮಾಡಿದಳು. ಏಳುವ ಸಸಿ, ಹೊರಡುವ ತೆನೆ, ಸಿಗುವ ಭತ್ತ, ಉಳಿಯುವ ಬೈಹುಲ್ಲು, ಎಲ್ಲವನ್ನೂ ಗುಣಿಸಿ ಬಾಗಿಸುತ್ತಿದ್ದಂತೆ ಗದ್ದೆಗೆ ಗೊಬ್ಬರಕೊಡುವ ದಿನಗಳು ಬಂದವು. ಗೌಡ್ರ ಬಳಿ ಗೊಬ್ಬರಕ್ಕೆ ಹಣ ಕೇಳಿದಾಗ ಅವರು "ಅಲ್ಲಾ ಕರಿಯಜ್ಜ ಈಗ ನಾನು ಪ್ಯಾಟಿಗೆ ಹೋಗಿ ಯಾವ್ಯಾವುದೋ ಗೊಬ್ಬರ ತರೋದು ಅದು ಸರಿಯಾಗದೇ ಇರೋದು, ಅವೆಲ್ಲಾ ರಗಳೆಯೇ ಬ್ಯಾಡ, ಅದರ ಬಾಬ್ತು ಅಂತ ಎರಡು ಚೀಲ ಭತ್ತ ಕಡಿಮೆಕೊಡು, ನೀನೆ ಗೊಬ್ಬರಾನ ತಂದು ಹಾಕು" ಎಂದು ಹೇಳಿದ ಮಾತಿಗೆ ಕರಿಯಜ್ಜ ಲೆಕ್ಕಾಚಾರಕ್ಕೆ ಇಳಿದು ನೂರಿನ್ನೂರು ಮಿಗುವ ಕಾರಣದಿಂದ ಲಚ್ಚಿಯ ಬಂಗಾರದ ಬೆಂಡೋಲೆ ಮಾರ್ವಾಡಿ ಅಂಗಡಿಗೆ ಸೇರಿಸಿ ಗೊಬ್ಬರ ಅಂಗಡಿಯಿಂದ ತಂದು ಗದ್ದೆಗೆ ಸುರುವಿದ.
ಪಾಳುಬಿದ್ದ ಗದ್ದೆಗೆ ಒಮ್ಮೆಲೆ ಗೊಬ್ಬರ ಬಿದ್ದದ್ದರಿಂದ ಭತ್ತ ಹುಲುಸಾಗಿ ಎದ್ದು ಅಕ್ಕಪಕ್ಕದವರ ಕಣ್ಣುಕುಕ್ಕುವಷ್ಟು ತೆನೆ ಒಡೆದು ತೊನೆದಾಡತೊಡಗಿತು. ಮಾಡಿದ ಕೆಲಸ ಕೈಗೆ ಹತ್ತಿದ್ದ ಖುಷಿಯಲ್ಲಿ ಲಚ್ಚಿಯೂ ಸಂಭ್ರಮಪಟ್ಟು ಹೊಟ್ಟೆಕಿಚ್ಚುಪಡುವ ಮಂದಿಯ ಕಾಕದೃಷ್ಟಿಗೆ ಗದ್ದೆ ಹಾಳಾಗಬಾರದು ಎಂದು ಹಳೆ ಬಟ್ಟೆ ಸುತ್ತಿ ಬೆರ್ಚಪ್ಪನನ್ನು ಮಾಡಿ ಗದ್ದೆಯ ಮದ್ಯೆ ನಿಲ್ಲಿಸಿದಳು. ದಿನಗಳು ಸಂದಂತೆ ಹಸಿರುಬಣ್ಣದ ಗದ್ದೆ ಕೆಂಬಣ್ಣಕ್ಕೆ ತಿರುಗಿ ಕೊಯ್ಲಿನ ದಿನ ಬಂದೇಬಿಟ್ಟಿತು. ಕರಿಯಜ್ಜ ಲಚ್ಚಿ ಒಂದೆರಡು ಮುರಿಯಾಳಿನೊಡನೆ ಗದ್ದೆ ಕೊಯ್ಲು ಮುಗಿಸಿ ಒಕ್ಕಲು ಕಣಕ್ಕೆ ತಂದು ಹಾಕಿದರು. ಹುರುಪಿನಿಂದ ಹುಲ್ಲುಬಡಿದು ಭತ್ತ ಬೇರ್ಪಡಿಸಿ ಗುಡ್ಡೆಹಾಕಿ ಗೇಣಿ ಭತ್ತ ಒಯ್ಯಲು ಗೌಡ್ರಿಗೆ ಸುದ್ದಿ ಕಳುಹಿಸಿದರು. ಗೌಡ್ರು ಬರುವುದಕ್ಕೆ ಮೊದಲು ಒಮ್ಮೆ ಕರಿಯಜ್ಜ ಅರಿಶಿನ ಬಣ್ಣದ ಗೋಪುರದಂತಹ ಭತ್ತದ ರಾಶಿಯ ಕಣ್ತುಂಬಿಕೊಂಡ, ಜೀವನದಲ್ಲಿ ಪ್ರಥಮಬಾರಿಗೆ ತಾನೇ ಉತ್ತಿ ತಾನೇ ಬಿತ್ತಿ ತಾನೇ ಬೆಳೆದ ಭತ್ತದ ರಾಶಿ ಕರಿಯಜ್ಜನಿಗೆ, ಮಕ್ಕಳೇ ಆಗದೆಂದುಕೊಂಡ ತಾಯಿ ಮಗು ಹೆತ್ತಾಗಿನ ಸಂತೋಷದಂತೆ ಅನುಭವಿಸಿದ. ಗೌಡ್ರಿಗೆ ಹತ್ತುಚೀಲ ಕೊಟ್ಟು ಉಳಿಯುವ ಭತ್ತ ಹಾಗೂ ಬೈಹುಲ್ಲು ಬೆಂಡೋಲೆ ಬಿಡಿಸಿ ನಂತರ ವರ್ಷಪೂರ್ತಿ ಅನುಭವಿಸಬಹುದಲ್ಲ ಎಂಬ ಸಂತೋಷ ಕರಿಯಜ್ಜನಿಗೆ ಉನ್ಮಾದ ತಂದಿತ್ತು. ಆದರೆ ಅದು ಹೆಚ್ಚುಹೊತ್ತು ಇರಲಿಲ್ಲ.
ಗೇಣಿ ಕೊಂಡೊಯ್ಯಲು ಗೌಡರು ಮಗನೊಟ್ಟಿಗೆ ವ್ಯಾನಿನಲ್ಲಿ ಚೀಲದ ಸಮೇತ ಬಂದರು. ಲಚ್ಚಿ ಕರಿಯಜ್ಜ ಚೀಲ ಪಡೆದು ಭತ್ತವನ್ನು ಬೆತ್ತದ ಮೊರದಲ್ಲಿ ಮೊಗೆದು ತುಂಬತೊಡಗಿದರು. ಅರ್ದ ಗಂಟೆಯಲ್ಲಿ ಚೀಲತುಂಬುವ ಕೆಲಸ ಮುಗಿಸಿ ಚೀಲ ಎಣಿಸುವಾಗ ಕರಿಯಜ್ಜ ಅಧಿರನಾಗತೊಡಗಿದ. ಕನಿಷ್ಠ ಇಪ್ಪತೈದು ಚೀಲ ಭತ್ತ ಇರಬಹುದೆಂದು ಲೆಕ್ಕ ಹಾಕಿದ್ದ ಕರಿಯಜ್ಜನಿಗೆ ಬಾರಿ ಬಾರಿ ಎಣಿಸಿದಾಗಲೂ ಲೆಕ್ಕಕ್ಕೆ ಸಿಗುತ್ತಿರುವುದು ಹತ್ತೇ ಚೀಲ ಭತ್ತ. ತಾನು ತಪ್ಪಿದ್ದು ಎಲ್ಲಿ ಅಂತ ಕರಿಯಜ್ಜನಿಗೆ ತಿಳಿಯಲಿಲ್ಲ. ಬೈಹುಲ್ಲು ಹೊರೆಯತ್ತ ಕೈಕಟ್ಟಿ ನಿಂತಿದ್ದ ಗೌಡರು ಗತ್ತಿನಿಂದ "ಏನಾ ಕರಿಯಾ ಹುಲ್ಲಿನ ಹೊರೆ ನನಗೆ ಕೊಡುವುದು ಅಂತ ಸಣ್ಣ ಕಟ್ಟು ಕಟ್ಟಿದ್ದೀಯನಾ?" ಎಂದು ಪ್ರಶ್ನಿಸುತ್ತಿದ್ದರು. ಹುಲ್ಲಾದರೂ ಜಾಸ್ತಿ ಇರಬಹುದೆಂದು ಕರಿಯಜ್ಜ ಅದರ ಲೆಕ್ಕಾಚಾರಕ್ಕೆ ಇಳಿದ, ಅದೂ ಕೂಡ ಅಷ್ಟೆ ನೂರಾಹತ್ತು ಹೊರೆ ಇತ್ತು. ನೂರುಹೊರೆ ಗೌಡರಿಗೆ ಕೊಟ್ಟರೆ ತನಗುಳಿಯುವುದು ಹತ್ತು ಹೊರೆ ಹುಲ್ಲು ಅಂದರೆ ನೂರಾ ಐವತ್ತು ರೂಪಾಯಿ ಎನ್ನುವುದು ಕರಿಯಜ್ಜನಿಗೆ ಅರ್ಥವಾಗುತ್ತಿದ್ದಂತೆ ಸರ್ಕಾರಿ ಅಧಿಕಾರಿಗಳ ಭಾಷಣದಿಂದ ಇಲ್ಲಿಯತನಕ ಅನುಭವಿಸಿದ್ದ ಸಂತೋಷ, ಪಟ್ಟ ಸಂಭ್ರಮ, ಹಾಕಿದ ಲೆಕ್ಕಾಚಾರ ಎಲ್ಲಾ ಆಯೋಮಯವಾಗಿತ್ತು . ಆರು ತಿಂಗಳ ಕಾಲ ಮೈ ಬಗ್ಗಿಸಿ ದುಡಿದ ಲಚ್ಚಿ ಕಣದ ಮೂಲೆಯಲ್ಲಿ ಭತ್ತ ಮೊಗೆದ ಮೊರವನ್ನು ಕೈಯಲ್ಲಿ ಹಿಡಿದುಕೊಂಡು ಕಕ್ಕಾಬಿಕ್ಕಿಯಾಗಿ ನಿಂತಿದ್ದಳು.
ಕರಿಯಜ್ಜನ ಹತಾಶ ಸ್ಥಿತಿಕಂಡು ಅಲ್ಲಿಯೇ ನಿಂತಿದ್ದವರೊಬ್ಬರು ಗೌಡರ ಬಳಿ "ಗೌಡ್ರೇ, ಕರಿಯಜ್ಜ ಲೆಕ್ಕ ಗೊತ್ತಿಲ್ಲದೆ ಗೇಣಿಗೆ ಒಪ್ಕೊಂಡಿದ್ದಾನೆ, ಒಂದೆಕರೆಗೆ ಯಾರೂ ನಾಲ್ಕು ಚೀಲದ ಮೇಲೆ ಭತ್ತ ಕೊಡಲ್ಲ, ಏನೋ ಪಾಪ ಆರು ತಿಂಗಳು ಶ್ರಮ ಇದೆ, ಒಂದೈದು ಚೀಲ ಭತ್ತ ಕೊಡಿ ಪಾಪ" ಎಂದರು.
"ನೋಡಪ್ಪ ಈ ರಾಮಕೃಷ್ಣೇ ಗೌಡ ಎಂದೂ ಮಾತಿಗೆ ತಪ್ಪೋನಲ್ಲ, ಗೊಬ್ರದ ಬಾಬ್ತು ಅಂತ ಒಂದು ಚೀಲ ಕೊಡ್ತೀನಿ ಅಂತ ಹೇಳಿದ್ದೆ ಅದಕ್ಕೆ ಕಡಕ್ ಕೊಡ್ತೀನಿ, ಹತ್ತು ಹೊರೆ ಹುಲ್ಲು ಅವನಿಗೆ ಉಳಿತಲ್ಲ," ಎಂದು ಹೇಳಿ ಮಿಕ್ಕ ಹುಲ್ಲು ಭತ್ತ ವ್ಯಾನಿನಲ್ಲಿ ಹೇರಿಕೊಂಡು ಮಗನೊಟ್ಟಿಗೆ ಬರ್ರ್ ಅಂತ ಹೋದರು. ಗೊಬ್ಬರದ ಬಾಬ್ತು ಎರಡು ಚೀಲ ಭತ್ತ ಎಂದು ಹೇಳುವಷ್ಟೂ ಶಕ್ತಿಯಿಲ್ಲದೆ ಕರಿಯಜ್ಜ, ಲಚ್ಚಿ ಗೇಣಿ ಭತ್ತದ ಚೀಲವನ್ನು ನೋಡುತ್ತಾ ಉಳಿದರು. ಹಾಗಾಗಿ ಲಚ್ಚಿಯ ಬೆಂಡೋಲೆ ಮಾರ್ವಾಡಿಯ ಅಂಗಡಿಯಲ್ಲೇ ಉಳಿಯಿತು.
*************
ಮೆನೆಯೆದುರು ಹೆಜ್ಜೆಸಪ್ಪಳಕ್ಕೆ ಕರಿಯಜ್ಜ ಮನೆಯಾಚೆ ಯಾರೋ ಬರುತ್ತಿರುವ ಸದ್ದಾಗಿ ನೆನಪಿನ ಸರಣಿಗೆ ಮುಕ್ತಾಯ ಹಾಡಿ ಎದ್ದು ನಿಂತು ಮುರಿದುಬಿದ್ದ ಬಾಗಿಲನ್ನು ಎತ್ತಿ ಗೋಡೆಗೊರಗಿಸಿ ಹೊರಗೆ ಬಗ್ಗಿ ನೋಡಿದ. ಲಚ್ಚಿ ಒಡೆದ ತೆಂಗಿನ ಕಾಯಿ ಪ್ರಸಾದ ಹಿಡಿದುಕೊಂಡು ತೆಲೆತುಂಬಾ ಸೆರಗು ಮುಚ್ಚಿಕೊಂಡು ಮನೆಯತ್ತ ಬರುತ್ತಿದ್ದಳು. ಮುಚ್ಚಿಕೊಂಡ ಸೆರಗು ಇಲ್ಲದ ಬೆಂಡೋಲೆಯ ಅಸ್ತಿತ್ವ ಉಳಿಸಿಕೊಳ್ಳಲು ಎಂಬುದು ಕರಿಯಜ್ಜನಿಗೆ ಮಾತ್ರಾ ತಿಳಿದಿತ್ತು. ತನ್ನ ಅಸಾಹಾಯಕ ಸಿಟ್ಟಿನಿಂದ ಮುರಿದ ಬಾಗಿಲಿನ ಸ್ಥಿತಿಯಾದರೂ ಲಚ್ಚಿಗೆ ತಿಳಿಯದಿರಲಿ ಎಂದು ಕರಿಯಜ್ಜ ಬಾಗಿಲು ಬೀಳದಂತೆ ಗೊಡೆಗೆ ಆನಿಸಿ ನಿಂತುಕೊಂಡ.
ಅನತಿ ದೂರದಲ್ಲಿ ದೇವಸ್ಥಾನದ ಅಷ್ಟಬಂಧ ಕಮಿಟಿಯ ನೇತಾರ ಜಯರಾಮ ಶೆಟ್ರು ಮೈಕಿನಲ್ಲಿ " ಮಹಾದಾನಿ ರಾಮಕೃಷ್ಣೇ ಗೌಡ್ರು ಈ ದಿನದ ಅನ್ನ ಸಂತರ್ಪಣೆಗಾಗಿ ಹತ್ತುಚೀಲ ಅಕ್ಕಿಯನ್ನು ದಾನ ಮಾಡಿದ್ದಾರೆ, ಅವರಿಗೆ ಅವರ ಕುಟುಂಬಕ್ಕೆ ಶ್ರೀ ಮಹಾಗಣಪತಿಯು ಆಯುರಾರೋಗ್ಯ ಐಶ್ವರ್ಯ ದಯಪಾಲಿಸಲಿ" ಎಂದು ಕೂಗುತ್ತಿದ್ದರು. ಕರಿಯಜ್ಜ ಹಾಗೂ ಲಚ್ಚಿ ಆ ಮಾತನ್ನು ಕೇಳಿ ಒಮ್ಮೆ ದೇವಸ್ಥಾನದತ್ತ ನೋಡಿ ನಕ್ಕರು. ಆ ನಗುವಿನಲ್ಲಿ ವ್ಯಂಗ್ಯ, ವಿಷಾದ ಹಾಗೂ ಆಳವಾದ ನೋವೂ ಅಡಗಿತ್ತು. ಆದರೆ ಅದಕ್ಕೆ ಬೆಲೆಕೊಡುವ ಜನ ಮಾತ್ರಾ ಯಾರೂ ಅಲ್ಲಿ ಇರಲಿಲ್ಲ.
-ಆರ್.ಶರ್ಮಾ.ತಲವಾಟ