Friday, March 12, 2010

ಮಾಹಿತಿ ಇದ್ದರೆ ಚೆನ್ನ




ನೀವು ನಮ್ಮ ಮನೆಗೆ ಬಂದಿಲ್ಲದಿದ್ದರೆ ಈ ಗೋಡೆಯ ಪೋಟೋ ನೋಡಿರಲು ಸಾದ್ಯವಿಲ್ಲ. ಅಪ್ಪ-ಅಮ್ಮರ ಐದು ಮಕ್ಕಳ ಮತ್ತು ಮೊಮ್ಮಕ್ಕಳ ಕಾರ್ಯ ಕಟ್ಲೆಯ ವಿವರದ ಬರಹವಿದು. ಬಂದ ಹೊಸಬರೆಲ್ಲರೂ "ವಾವ್’ ಅಂತಾರಪ್ಪ. ಹಾಗಾಗಿ ಬ್ಲಾಗ್ ಗೆ ಹಾಕಿದೆ. ವಯಸ್ಸಾದಂತೆ ಮದುವೆಯ ಆನಿವರ್ಸರಿ ಮರೆತು ಹೆಂಡರ ಕೈಲಿ ಉಗಿಸಿಕೊಳ್ಳುವುದಕ್ಕಿಂತ ಊಟ ಮಾಡುವಾಗ ತಿಂಡಿ ತಿನ್ನುವಾಗ ಹೀಗೊಂಡು ಮಾಹಿತಿ ಇದ್ದರೆ ಚೆನ್ನ ಅಂತ ಬರೆಯಲಾಗಿದೆ. ಈಗ ಮೊಮ್ಮಕ್ಕಳ ಕಾರ್ಯಕ್ಕೆ ಪಕ್ಕದ ಗೊಡೆ ಮೀಸಲಿರಿಸಲಾಗಿದೆ.

Tuesday, March 9, 2010

ಬಿಟ್ಟೆನೆಂದರೂ "ಬಿಡದೀ" ಮಾಯೆ

ಹೂವು ಅರಳುತ್ತದೆ ಪರಾಗ ರೇಣು ಸ್ಪರ್ಶಕ್ಕಾಗಿ ಕಾಯುತ್ತಿರುತ್ತದೆ. ಅದು ವಂಶಾಭಿವೃದ್ಧಿಗಾಗಿ, ಜೇನು ದುಂಬಿಗಳು ಝೇಂಕಾರದೊಂದಿಗೆ ಹೂವಿನ ಬಳಿ ತಮ್ಮ ಆಹಾರಕ್ಕಾಗಿ ಕುಳಿತು ಪರಾಗಸ್ಪರ್ಶ ಮಾಡುತ್ತವೆ. ಆಗ ಅಲ್ಲೊಂದು ಸಂಭ್ರಮ ಸಂತಸ ಏರ್ಪಡುತ್ತದೆಯೋ ಇಲ್ಲವೋ ಗೊತ್ತಿಲ್ಲ ಆದರೆ ಸೃಷ್ಟಿ ಕ್ರಿಯೆಯಂತೂ ನಡದೇ ಬಿಡುತ್ತದೆ. ಹೂವು ಕಾಯಾಗುವ ಎಲ್ಲ ಕಾರ್ಯಗಳಿಗೂ ಅಲ್ಲಿಂದಲೇ ಪ್ರಾರಂಭ. ಇಷ್ಟಾದರೂ ಅದು ಕಾಮ ಪ್ರೇಮ ಅಂತ ನಮಗೆ ಅನ್ನಿಸುವುದಿಲ್ಲ. ಡಾಣಾ ಡಂಗುರವಾಗಿ ನಡೆಯುವ ಈ ಕ್ರಿಯೆ ಅತ್ಯಂತ ಸಹಜ. ಅದರ ಮೇಲೆ ಕವನ ಕಟ್ಟಬಹುದು ಕಾವ್ಯ ಹುಟ್ಟ ಬಹುದು.
ಜೇನಿನ ರಾಣಿ ಗಂಡು ನೊಣದೊಂದಿಗೆ ಮಿಲನಕ್ಕಾಗಿ ಮೇಲಕ್ಕೇರುತ್ತದೆ. ಸಂಭ್ರಮಿಸುತ್ತದೆ ಗಂಡು ನೊಣ ಮಿಲನದ ನಂತರ ಸಾಯುತ್ತದೆ. ರಾಣಿ ಗೂಡಿಗೆ ಬಂದು ಕೆಲದಿನಗಳ ನಂತರ ಮೊಟ್ಟೆಯಿಡಲು ಆರಂಭಿಸುತ್ತದೆ. ಆದರೆ ಆರಂಭದ ದಿನಗಳ ಮೇಲೆ ಸಾಕಷ್ಟು ಕಾವ್ಯ ಹುಟ್ಟುತ್ತದೆ. ಅದು ಅಸಹ್ಯವಲ್ಲ. ಅಶ್ಲೀಲವಲ್ಲ, ಕಾಮದ ವಾಸನೆಯ ಲವಲೇಶವೂ ಅಲ್ಲಿಲ್ಲ . ಅದು ಅತೀವ ಸಹಜ.
ಆರಾಮವಾಗಿ ಹಾಲುಕೊಡುತಿದ್ದ ಆಕಳು ಕೊಟ್ಟಿಗೆಯಲ್ಲಿ ಕೂಗತೊಡಗುತ್ತದೆ. "ದನ ಹೀಟಿಗೆ ಬೈಂದು ಕಾಣ್ತು" ಮನೆಯಾತ ಸ್ವಲ್ಪ ಲಘು ದನಿಯಲ್ಲಿ ಹೇಳುತ್ತಾನೆ. ಹೀಟು ಎಂದರೆ ಆಕಳು ಹೋರಿಯನ್ನು ಬಯಸುತ್ತಿದೆ ಎಂಬ ಅರ್ಥವಾದ್ದರಿಂದ ಸಣ್ಣ ಮಕ್ಕಳಿರುವ ಮನೆಯಲ್ಲಿ ಅವರ ಪ್ರಶ್ನೆಗಳಿಗೆ ಉತ್ತರ ಕೊಡಲಾಗುವುದಿಲ್ಲ ಎಂಬರ್ಥದಲ್ಲಿ ಅಲ್ಲೇ ಸಣ್ಣಮಟ್ಟದ ತಗ್ಗಿದ ದನಿ. ಆನಂತರ ಒಂಥರಾ ಮುಗುಳುನಗೆಯ ಕಾರ್ಯದಲ್ಲಿ ಆಕಳಿಗೆ ಹೋರಿಯ ಬಳಿ ಸೇರಿಸುವ ಕೆಲಸ ನಡೆಯುತ್ತದೆ.
ದಾರಿ ಬದಿಯಲ್ಲಿ ಶ್ವಾನ ತಿಂಗಳಲ್ಲಿ ನಾಯಿಗಳು ಮಿಲನಕ್ಕೆ ತೊಡಗಿಕೊಂಡಾಗಲೂ ದಾರಿ ಹೋಕರು ಸ್ವಲ್ಪ ಅದೇಕೋ ನಾಚಿಕೊಳ್ಳುತ್ತಾರೆ. ಆದರೂ ಅದು ಒಂಥರಾ ಪ್ರಕೃತಿ ಸಹಜ ಎಂಬ ಭಾವ ತಳೆದು ದಾಟಿಹೋಗುತ್ತಾರೆ. ಆದರೂ ಇಲ್ಲೂ ಕೂಡ ಕೇವಲ ಕಾಮದ್ದೇ ವಾಸನೆ ಇಲ್ಲ ಗುಸು ಗುಸು ಸುದ್ಧಿಯಿಲ್ಲ. ಸಾರ್ವಜನಿಕವಾಗಿ ಹೀಗೆ ಹೀಗೆ ಅಂತ ಹೇಳಬಹುದು. ಅದೇನು ತೀರಾ ಅಶ್ಲೀಲವಲ್ಲ ಬಿಡಿ.
ಗಿಡ ಮರಗಳ ಕ್ರಿಮಿ ಕೀಟಗಳ ಮಟ್ಟ ಮನುಷ್ಯನಿಗೆ ಕಾವ್ಯವಾದರೆ, ಪ್ರಾಣಿಗಳ ಹಂತದ ಸೃಷ್ಟಿಕ್ರಿಯೆ ಸ್ವಲ್ಪ ಕಸಿವಿಸಿ. ಇನ್ನು ಮನುಷ್ಯನದ್ದೇ ಆದರೆ ಮುಗಿದೇ ಹೋಯಿತು. ಅದು ನಾಲ್ಕು ಗೋಡೆಗಳ ಮಧ್ಯೆ ನಡೆಯಬೇಕಾದ ಕ್ರಿಯೆ. ಹಾಗೆ ಹೀಗೆ ಅದಕ್ಕೊಂದು ಚೌಕಟ್ಟು ಅದನ್ನ ಮೀರಿದರೆ ಗಾಸಿಪ್ಪು , ಗಲಾಟೆ ಮಾನ,ಮರ್ಯಾದೆ ಅಯ್ಯಯ್ಯೋ... ಹೀಗೆ ಸಾವಿರಾರು. ಇರಲಿ "ಆಲ್ ಇಸ್ ವೆಲ್"., ಮುಂದೆ ನೋಡೋಣ.
ಪ್ರಕೃತಿ ವಂಶಾಭಿವೃದ್ಧಿಗೆ ಪ್ರಥಮ ಆದ್ಯತೆಯನ್ನು ನೀಡುತ್ತದೆ. ಸಹಜ ಮನುಷ್ಯರೆಲ್ಲರೂ ಪ್ರಕೃತಿಯಲ್ಲಿ ತೊಡಗಿಕೊಂಡಿದ್ದಾರೆ. ನಾನು ಎಲ್ಲರಂತೆ ಅಲ್ಲ ಎಂದು ತೊರಿಸಿಕೊಳ್ಳಬೇಕು ಎಂದು ಹೊರಟ ಪ್ರತೀ ಮನುಷ್ಯನ ಮೊದಲ ಆದ್ಯತೆ ಈ ಪ್ರಕೃತಿ ಸಹಜವಾಗಿದ್ದಕ್ಕೆ ವಿರೋಧವಾಗಿ ಹೊರಡುವುದು. ಎಲ್ಲ ಮನುಷ್ಯರಂತೆ ನಾನಲ್ಲ ಎಂದು ತೊರಿಸಿಕೊಳ್ಳಲು ಹೊರನೋಟಕ್ಕೆ ಸುಲಭದಾರಿ ಈ ಕಾಮ. ಕಾಮಮುಕ್ತ ಎಂದು ತೊರಿಸಿಕೊಳ್ಳಲೊಂದು ಕಾವಿ. ದಿನವಿಡಿ ಕಾಮದ ಯೋಚನೆಯಿಂದ ದೂರವಿರಲು ಅನುಸರಿಸುವ ಮಾರ್ಗ ನೂರಾರು. ಬಹುಪಾಲು ದಿನದ ಸಮಯ ಇದಕ್ಕೇ ವ್ಯರ್ಥ. ನಿಯಮಿತ ಆಹಾರ ತುಳಸೀ ಮಣಿ ಉಪ್ಪುಕಾರ ಊಹ್ಞೂ ... ಅಪ್ಪಾ ಪಾಪ ಅನ್ನದೇ ವಿಧಿಯಿಲ್ಲ. ಪ್ರಕೃತಿಯೋ ನಿಮಿಷ ನಿಮಿಷಕ್ಕೂ ತನ್ನ ನಿಯಮದಿಂದ ವಿರುದ್ಧ ಹೊರಟ ಮನುಷ್ಯನನ್ನು ಮಟ್ಟ ಹಾಕಲು ಹೊಸ ಹೊಸ ವಿಧಾನ ಹುಡುಕುತ್ತಿರುತ್ತದೆ. ನಿಜದಲ್ಲಿ ಆಗದ್ದನ್ನು ಸ್ವಪ್ನದಲ್ಲಾದರೂ ಆಗಿಸಿಬಿಡುತ್ತದೆ. ಹೀಗೆ ನಿಜ ಸ್ವಪ್ನ ನಿಜ ಸ್ವಪ್ನ ಎಂದು ಹೊಳ್ಯಾಡಿ ಹೊರಳಾಡಿ ಯಾವುದೋ ದುರ್ಬಲ ಸಂದರ್ಭದಲ್ಲಿ ಕೇಳಿಗೆ ಎಳೆದೇ ಬಿಡುತ್ತದೆ. ಆವಾಗ ಇದಕ್ಕೇ ಕಾಯುತ್ತಿರುವ ಮಿಕ್ಕ ಮನುಷ್ಯರದ್ದು ಹೊಯ್ಲಾಲೆಯೋ ಹೊಯ್ಲಾಲೆ.
ಹಿಂದೆಯೂ ನೂರಾರು ಸನ್ಯಾಸಿಗಳು ಹತ್ತಾರು ವರ್ಷ ಹಠ ಹೊತ್ತು ಕಾಮದಿಂದ ದೂರವಿರಲಾರದೇ ಎನೇನೊ ಮಾಡಿದ್ದಿದೆ. ಆದರೆ ಆವಾಗ ಅವರ ಅದೃಷ್ಟ "ಹಿಡನ್ ಕ್ಯಾಮೆರಾ" ಇರದ್ದರಿಂದ ಹತ್ತಿರದ ಒಂದೆರಡು ಜನರಿಗಷ್ಟೇ ತಿಳಿದು ಮುಚ್ಚಿ ಮಾರನೇ ದಿನದಿಂದ ಮತ್ತೇ ಆಶೀರ್ವಚನದಲ್ಲಿ ಜೀವನ ಪಾವನವಾಗಿದೆ. ಆದರೆ ಕಾಲ ಈಗಿನದು ಹಾಗಲ್ಲ ಏನೇನೋ ಮಾಡಿಬಿಡುತ್ತಾರೆ ತಂತ್ರಜ್ಞಾನ ಬಳಸಿ. ದುರಂತ ಎಂದರೆ ಬಹಳಷ್ಟು ತಂತ್ರಜ್ಞಾನ ಬಳಕೆಯಾಗುವುದು ಇಂತಹ ಬೇಡದ ಕೆಲಸಗಳಿಗೆ. ಇರಲಿ ಅವೆಲ್ಲಾ ಆಗುವುದೇ ಹೀಗೆ ಆದರೆ ನಾವು ಗಮನಿಸಬೇಕಾದ್ದು ಬೇರೆಯೇ ಇದೆ.
ಕಾಮವನ್ನು ಗೆಲ್ಲಲು ಹೊರಟ ಸನ್ಯಾಸಿ ಎಲ್ಲೋ ಒಂಚೂರು ಯಡವಿದ್ದಿರಬಹುದು,ಆದರೆ ತಾನು ಎಲ್ಲರಿಗಿಂತ ಭಿನ್ನ ಎಂದು ತೊರಿಸಿಕೊಡಲು ಹಠಕ್ಕೆ ಇಳಿದು ಜಪ ತಪ ಅಂತ ಮುಳುಗಿ ಧ್ಯಾನ,ಪೀಠ ಎಂದು ಸೃಷ್ಟಿಸಿಕೊಂಡು ನೀತಿ ನಿಯಮ ಅಂತ ಪಾಲಿಸಿಕೊಂಡು ನೂರಾರು ಶ್ರೀಮಂತರಿಗೆ ಸಮಾಧಾನ ಕೊಟ್ಟು ಅವರಿಂದ ಹಣ ಪಡೆದು ಒಂದಿಷ್ಟು ವಿದ್ಯಾದಾನ ಮತ್ತೊಂದಿಷ್ಟು ಆರೋಗ್ಯ ಸೇವೆ ಮಗದೊಂದು ಗೋಪಾಲನೆ ಹೀಗೆ ಎನೇನೋ ಒಬ್ಬ ಸಹಜ ಮನುಷ್ಯ ಮಾಡಲಾಗದ್ದನ್ನು ಸಾಧಿಸಿರುತ್ತಾನಲ್ಲ ಅದರತ್ತ ನಮ್ಮ ನೋಟ ಹರಿಯಬೇಕು. ಅಲ್ಲಿ ಸಾರ್ಥಕತೆ ಕಾಣಬೇಕು. ನಾವು ನೀವೂ ಕೇವಲ ಟೀಕೆ ಮಾಡುತ್ತಾ "ಅಯ್ಯೋ ಈ ಸನ್ಯಾಸಿಗಳ ಕತೆ ಇಷ್ಟೆಯಾ" ಅಂತ ಹೇಳುತ್ತಾ ಕಳೆದುಹೋಗಬಹುದು ಆದರೆ ಈ ಸಮಯದಲ್ಲೂ ಮತೋರ್ವ ವ್ಯಕ್ತಿ ಕಾಮವನ್ನು ಜಯಿಸಲು ಒಳ್ಳೆಯ ಕೆಲಸದ ದಾರಿ ಹಿಡಿದಿರುತ್ತಾನೆ ಎಂಬುದು ಸತ್ಯ.
ಏನಾದರೂ ಒಂದಿಷ್ಟು ಒಳ್ಳೆಯ ಸಾರ್ವಜನಿಕ ಕೆಲಸಗಳು ಇಲ್ಲಿಯವರೆಗೆ ಆಗಿದ್ದಿದ್ದರೆ ತನ್ನಷ್ಟಕೆ ತನ್ನ ಹೆಂಡತಿ ಮಕ್ಕಳೊಡನೆ ಬದುಕಿ ಕೊಂಡ ಬ್ಯಾಂಕ್ ಬ್ಯಾಲೆನ್ಸ ಏರಿಸಿಕೊಂಡ ಮನುಷ್ಯನಿಂದಲ್ಲ. ಏನಾದರೂ ಮಾಡಬೇಕೆಂದು ದಾರಿ ಹಿಡಿದ ಜನರಿಂದಲೇ ಸ್ವಲ್ಪ ಮಟ್ಟಿಗೆ ಆಗಿರುವುದು. ಹಾಗೆಲ್ಲ ಸಾವಿರಾರು ಜನರ ನಾಯಕತ್ವ ವಹಿಸಿಕೊಂಡಾಗ ಎಲ್ಲೋ ಸ್ವಲ್ಪ ಯಡವಟ್ಟು ಆಗುತ್ತದೆ ಎಂದು ಪಾಮರರು ಮಾತನಾಡಿಕೊಳ್ಳುತ್ತಾರೆ. ಅದು ಕಾಮಕ್ಕೆ ಸಂಬಂದಿಸಿದ್ದಾರೆ ಸಿಕ್ಕಾಪಟ್ಟೆ ವಿಷಯ. ಆದರೆ ವಾಸ್ತವ ವೆಂದರೆ ಕಾಮದ್ದು ಪ್ರಕೃತಿ ಸಹಜ ವಿಷಯ ಅದಕ್ಕೆ ಅಷ್ಟೊಂದು ಮಹತ್ವ ಕೊಡುವ ಅಗತ್ಯ ಇಲ್ಲ. ಅತ್ಯಾಚಾರ ಕೊಲೆ ಮುಂತಾದವು ಮಾನವೀಯತೆ ಅಲ್ಲ. ಸೃಷ್ಟಿ ಕ್ರಿಯೆ ಸೃಷ್ಟಿಯಾಗಲೀ ಬಿಡಲಿ ಸಂಭ್ರಮದ್ದು. ಅದರ ನಂತರ ಮನುಷ್ಯ ನಿರುಂಬಳನಾಗುತ್ತಾನೆ. ತಲೆಯೊಳಗೆ ಕೊರೆಯುತ್ತಿದ ಹುಳ ಆಚೆ ಬಂದಿರುತ್ತದೆ. ಹೊಸ ಹೊಸ ಕೆಲಸ ಗಳು ಹೊಸ ಹೊಸ ಯೋಚನೆಗಳು ತೆರೆದುಕೊಳ್ಳುತ್ತವೆ. ಹಾಗಾಗಿ ಅಲ್ಲಿ ತೊಡಗಿ ಆಚೆ ಬಂದವ ಯಾವ ಕೆಲಸದಲ್ಲಿ ತೊಡಗುತ್ತಾನೆ ಮತ್ತೆಷ್ಟು ಮೇಲಕ್ಕೇರುತ್ತಾನೆ ಎಂಬುದು ಬಹಳ ಮುಖ್ಯ. ಹಾಗೆ ವಿವಾದಕ್ಕೆ ಸಿಕ್ಕಿಕೊಂಡವರು ತಮ್ಮನ್ನು ಸಮರ್ಥಿಸಿಕೊಳ್ಳಲು ಹೆಣಗಾಡತೊಡಗುವಂತಹ ಪರಿಸ್ಥಿತಿ ನಿರ್ಮಾಣವಾಗಿಬಿಟ್ಟರೆ ಆ ಮನುಷ್ಯನಿಂದ ಹೊರಡಬಹುದಾಗಿದ್ದ ಅದ್ಬುತ ವಿಷಯ ವಿಚಾರಗಳು ಕಾಮದ ಗುಂಡಿಯೊಳಗೆ ಹೂತು ಹೋಗಿಬಿಡುತ್ತವೆ. ಪಾಮರ ಕಳೆದುಕೊಳ್ಳುವುದು ಹೀಗೆ ಪಂಡಿತ ಉಳಿಸಿಕೊಳ್ಳಲಾಗದೆ ಹೋಗುವುದೂ ಹಿಗೆಯೇ. ಇದೇ ಪ್ರಕೃ ತಿಯನ್ನು ಗೆಲ್ಲುತ್ತೇನೆ ಎಂದು ಹೊರಟ ಹುಲುಮಾನವನ್ನು ಪ್ರಕೃತಿಯೇ ಬಡಿದು ಹೈರಾಣ ಮಾಡುವ ಪರಿ.