"ನನಗೆ ಗೊತ್ತಿಲ್ಲ" ಎಂಬ ಸರಳ ವಾಕ್ಯದೊಡನೆ ಜೀವನವನ್ನು ಸ್ವಾಗತಿಸಿದರೆ ಮಾಹಿತಿಗಳು ದಶದಿಕ್ಕಿನಿಂದ ನಮ್ಮನ್ನು ಆವರಿಸಿಕೊಳ್ಳತೊಡಗುತ್ತದೆ. ಅಂತಹ ಮಾಹಿತಿಗಳಲ್ಲಿ ನಮಗೆ ಬೇಕಾದ್ದನ್ನು ಜತನವಾಗಿಟ್ಟುಕೊಂಡು ಮಿಕ್ಕಿದ್ದನ್ನು ಉಫ಼್ ಎನ್ನಿಸುವ ತಾಕತ್ತು ಇದ್ದರೆ ಬದುಕು ಸುಂದರ ಜೀವನ ಸುಮಧುರ. ಈ ಸುಂದರ ಜೀವನ ಎಂಬುದು ಮಗದೊಮ್ಮೆ ಅವರವರ ಕಲ್ಪನೆಯ ಕೂಸು. ಕಲ್ಪನಾ ಶಕ್ತಿ ಎಷ್ಟರಮಟ್ಟಿಗೆ ಇದೆ ಎಂಬ ವಿಷಯವನ್ನವಲಂಬಿಸಿ ತರ್ಕಕ್ಕೆ ಒಡ್ಡಿ ಕಡೆದು ಮೊಸರು ಬೆಣ್ಣೆಯನ್ನು ತೆಗೆದು ಉಳಿದ ಮಜ್ಜಿಗೆಯನ್ನೂ ಗುಟುಕರಿಸುವ ಶಕ್ತಿ ಆಯಾ ಮನುಷ್ಯರ ಚೈತನ್ಯಕ್ಕೆ ಸಂಬಧಿಸಿದ ವಿಚಾರ.
ಎಲ್ಲರ ಬದುಕೂ ಹುಟ್ಟಿನಿಂದ ಸಾವಿನವರೆಗೂ ಘಟನೆಗಳ ಸರಮಾಲೆಯೇ. ನಮ್ಮೀ ದೇಹವೆಂಬ ಬಳ್ಳಿಯ ಸುತ್ತ ಘಟನೆಗಳು ತನ್ನಷ್ಟಕ್ಕೇ ನಡೆಯುತ್ತವೆಯೋ, ಅಥವಾ ಅದರ ಸೃಷ್ಟಿಕರ್ತರು ನಾವೋ ಎಂಬುದು ನಿಖರವಾದ ಉತ್ತರವಿಲ್ಲದ ಪ್ರಶ್ನೆ. ನಮ್ಮ ಪಂಚೇಂದ್ರಿಯಗಳ ಮೂಲಕ ಗ್ರಹಿಸುವ ವಿಷಯಗಳನ್ನು ವಿಚಾರಗಳನ್ನು ಮೂರನೆಯವರಾಗಿ ಕುಳಿತು ವಿವೇಚನೆಗೆ ಹರಿಬಿಟ್ಟಾಗ ಸೃಷ್ಟಿಯ ಎತ್ತರ ಆಳದ ಬಗ್ಗೆ ಹಾಗೂ ಅಗಾಧ ಶಕ್ತಿಯ ಬಗ್ಗೆ ಅರೆಕ್ಷಣ ಅಚ್ಚರಿಮೂಡದಿರದು. ಈ ಎಲ್ಲಾ ಸಮಗ್ರವನ್ನೂ ಎಲ್ಲರೂ ದಾಖಲಿಸುತ್ತಾ ಸಾಗಿದರೆ ಅದು ಅಂತ್ಯವಿಲ್ಲದ ಅಳತೆಯ ಬೃಹತ್ ಗ್ರಂಥವಾಗಿಬಿಡಬಹುದು. ಹಿಗೆಲ್ಲಾ ಅನಾಹುತಕ್ಕೆ ಭಗವಂತ ಅಣತಿ ನೀಡಲಾರ. ಎಲ್ಲರ ಅನುಭವಾಮೃತವನ್ನೂ ಮತ್ತೊಬ್ಬರಿಗೆ ಹಂಚಿಕೊಳ್ಳಲು ಅವಕಾಶ ನೀಡಲಾರ. ಹಾಗಂತ ಹಠ ಹಿಡಿದವನ ಆಸೆಯನ್ನು ಪೂರೈಸದೇಯೂ ಇರಲಾರ. ಹಾಗೆ ಆ ಸೃಷ್ಟಿಕರ್ತ ಪೂರೈಸಿದ ನನ್ನ ಆಸೆ ಈಗ ನಿಮ್ಮ ಕೈಯಲ್ಲಿರುವ "ಬ್ಲಾಗ್ ಬರಹಗಳು".
ಇದರೊಳಗೆ ಏನಿದೆ ಏನಿಲ್ಲ ಎನ್ನುವುದಕ್ಕಿಂತ ನಾನು ಕಂಡಿರುವ ನೋಡಿರುವ ಕೇಳಿರುವ ಘಟನೆಗಳ ಸಣ್ಣದೊಂದು ಗುಚ್ಛವಿದೆ ಅನ್ನಬಹುದು. ಇದು ಎಷ್ಟರಮಟ್ಟಿಗೆ ನಿಮಗೆ ನಿಮ್ಮ ಜೀವನಕ್ಕೆ ಸಹಾಯವಾಗುತ್ತದೆಯೋ ನನಗೆ ಗೊತ್ತಿಲ್ಲ. ನನಗಂತೂ ಮನಸ್ಸಿಗೆ ಅದೇನೋ ಆನಂದಭಾವವನ್ನು ತಂದಿಡುತ್ತದೆ. ನನ್ನ ಈ ಆನಂದಕ್ಕೆ ಸಹಕರಿಸಿದ ನಿಮಗೆ, ಮುದ್ರಿಸಿದ ಗಣಪತಿ ಪ್ರಿಂಟರ್ಸ್ ಹಾಗೂ ಸಿಬ್ಬಂದಿಗೆ, ವಿಶೇಷವಾಗಿ ವೇಣುಮಾಧವನಿಗೆ, ನನ್ನ ಮನೆಯವರಿಗೆ, ನೆಂಟರಿಷ್ಟರಿಗೆ, ಕಟ್ಟೆ ಮಿತ್ರರಿಗೆ, ತಲವಾಟ ಗ್ರಾಮಪಂಚಾಯ್ತಿ ಅಧ್ಯಕ್ಷರು ಸದಸ್ಯರು ಹಾಗೂ ಜನರಿಗೆ, ೨೦೦೮ ರಿಂದಲೂ ನನ್ನ ಬ್ಲಾಗನ್ನು ನೆಟ್ ಲ್ಲಿ ಓದುತ್ತಾ ಕಾಮೆಂಟ್ ದಾಖಲಿಸುತ್ತಾ ಬಂದಿರುವವರಿಗೆ ಹಾಗೂ ಬ್ಲಾಗ್ ಮಿತ್ರರಿಗೆ, ಉಚಿತವಾಗಿ ತಾಣ ಒದಗಿಸಿಕೊಟ್ಟ ಗೂಗಲ್ ನವರಿಗೆ ಹಾಗೂ ಸಹಕರಿಸಿದ ಎಲ್ಲರಿಗೂ ಅನಂತಾನಂತ ವಂದನೆಗಳು. ಕಾನೂನಿನ ಕೆಳಗೆ ತೂರಿಕೊಳ್ಳಲು ಕಾನೂನು ಇದೆಯಂತೆ ಆದರೆ ಮನುಷ್ಯಧರ್ಮದ ಕೆಳಗೆ ಮತ್ತೆ ಇರುವುದು ಮನುಷ್ಯಧರ್ಮವೇ ಅಂತೆ. ಹಾಗಾಗಿ ಆ ಸೃಷ್ಟಿಕರ್ತನ ಹತ್ತಿರ ನನ್ನ ನಿತ್ಯ ಬೇಡಿಕೆ "ಹೇ ಭಗವಂತಾ, ಇಲ್ಲಿ ಬಹಳಷ್ಟು ಒಳ್ಳೆಯ ಕೆಲಸಗಳು ಆಗಬೇಕಿದೆ, ಅದು ನನ್ನ ಮೂಲಕ ಆಗಲಿ, ತನ್ಮೂಲಕ ನನಗೆ ನೆಮ್ಮದಿ ಸಿಗಲಿ" ಎಂಬ ನನ್ನದೂ ಸ್ವಾರ್ಥವನ್ನೂ ಸೇರಿಸುತ್ತಾ ನಿಮಗೆ ನನ್ನ ಬರಹಕ್ಕೆ ಸ್ವಾಗತ,
-ಆರ್.ಶರ್ಮಾ.ತಲವಾಟ
೯೩೪೨೨೫೩೨೪೦