Tuesday, January 31, 2012

ಮುಂದೆ ಹೀಗೆ ಕುಟ್ಟಬಹುದು..



ವಿದ್ಯಾರ್ಥಿ ಜೀವನ ಬಂಗಾರದ್ದಂತೆ, ಆದರೆ ಅದು ಬಂಗಾರದ್ದು ಅಂತ ತಿಳಿಯುವುದು ಆ ಜೀವನ ಮುಗಿದಮೇಲೆಯೇ ಅಂತೆ. ಹೌದೇ ಹೌದು. ಈ ಪಟದಲ್ಲಿನ ಮುದ್ದು ಮುದ್ದು ಮಕ್ಕಳು ಹಣೆಯಮೇಲೆ ಕೈಯಿಟ್ಟು ನಿಂತದ್ದು ನೋಡಿದಾಗ ನಮಗೆ ನಿಮಗೆ ಹಾಗನ್ನಿಸುವುದು ನಿಜ. ಆದರೆ ನಾವು ನೀವೂ ಕೂಡ ಹೀಗೆ ಒಂದು ದಿನ ಹಣೆಯಮೇಲೆ ಕೈಯಿಟ್ಟು ಜೈ ಎಂದಿದ್ದಿದೆ. ಒಮ್ಮೆ ಕಷ್ಟಪಟ್ಟು ಆ ದಿನಗಳನ್ನು ನೆನಪಿಸಿಕೊಳ್ಳಿ. ಎಂತಾ ಮಜ ಈಗ ಅಲ್ಲವೇ?. ಹಾಗಾದರೆ ಅಂದು...?

ಥೂ ತಲೆಕೆಟ್ಟು ಹೋಗುತ್ತಿತ್ತು. ಸಾಲಾಗಿ ಒಬ್ಬರ ಹಿಂದೆ ಒಬ್ಬರು ಹೋಗಬೇಕಿತ್ತು. ಮಾಸ್ತರುಗಳೋ ನಮ್ಮನ್ನು ಗದರಿಸಲು ಭಗವಂತ ತಯಾರಿಸಿದ ಯಂತ್ರಗಳಂತೆ ಭಾಸವಾಗುತ್ತಿತ್ತು. ಗಣರಾಜ್ಯೋತ್ಸವವಾದರೆ ಕೊಂಚ ಅಡ್ಡಿಲ್ಲ ಚಳಿ ಚಳಿ ಅಷ್ಟೆ. ಆ ಆಗಸ್ಟ್ ಹದಿನೈದೋ ಭಗವಂತನಿಗೇ ಪ್ರೀತಿ. ನೀವು ಪಟ್ಟಣದಲ್ಲಿ ಓದಿದ ಜನ ಆಗಿದ್ದರೆ ನಿಮಗೆ ಕಪ್ಪುಸುಂದರಿ ಟಾರ್ ರಸ್ತೆಯಮೇಲೆ ನಡಿಗೆ, ನಮಗೆ ಅಮ್ಮಾ... ಕೆಸರು ಕಿಚಕಿಚ ಅದರ ನಡುವೆ ನಮ್ಮ ಪ್ರಭಾತ್ ಪೇರಿ. "ಸಾಗಿ ಮುಂದೆ ಭಾರತೀಯರ ಹಿಂದೆ" ಹಾಡು ಯಾರಿಗೆ ಬೇಕಿತ್ತು..?. ಎರಡು ಕಿಲೋಮೀಟರ್ ಕೆಸರಿನಲ್ಲಿ ಸಾಲಾಗಿ ಸುತ್ತಿ ವಾಪಾಸು ಚಡ್ಡಿಯನ್ನೆಲ್ಲಾ ಒದ್ದೆ ಮುದ್ದೆ ಮಾಡಿಕೊಂಡು ರೂಂ ನಲ್ಲಿ ಕಿಚಿಪಿಚಿಯಲ್ಲಿ ಕುಳಿತು ಕುಟ್ಟುವ ಭಾಷಣ ಕೇಳಬೇಕಿತ್ತು. ಅದನೂ ಅರ್ಥವೇ ಆಗುತ್ತಿರಲಿಲ್ಲ. ಪ್ರತೀ ಬಾರಿಯೂ ಅದೇ ರಾಗ ಅದೇ ಹಾಡು, ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು, ದೇಶಕ್ಕಾಗಿ ನಾವು ತ್ಯಾಗ ಮಾಡಬೇಕು... ಹೀಗೆ ದೊಡ್ಡವರೆನಿಸಿಕೊಂಡ ದೊಡ್ಡ ಜನ ತಮ್ಮ ಮನಸ್ಸೋ ಇಚ್ಛೆ ಕೊರೆಯುತ್ತಿದ್ದುದನ್ನು ಗಲಾಟೆ ಮಾಡದೇ ಆಲಿಸಬೇಕಿತ್ತು. ಅಪ್ಪಿ ತಪ್ಪಿ ಪಿಟಕ್ ಎಂದರೆ ಮನೆಯಲ್ಲಿ ಹೆಂಡತಿ ಕೈಯಲ್ಲಿ ಉಗಿಸಿಕೊಂಡು ಸಿಟ್ಟು ತೀರಿಸಿಕೊಳ್ಳಲು ಹಪಹಪಿಸುತ್ತಿರುವ ಮಾಸ್ತರರ ಕೋಲಿಗೆ ಆಹುತಿ. ಆದರೂ ಇದರ ನಡುವೆ ಎನೋ ಒಂದು ಸಂಭ್ರಮ ಇತ್ತು ಅಂತ ಈಗ ಅನ್ನಿಸುತ್ತಿದೆ.

ಮೊನ್ನೆ ೨೬ ನೇ ತಾರೀಕು ಅದೇ ಹಳೆಯ ವಾಕ್ಯಗಳು ಅಂದಿನ ಮಕ್ಕಳಿಂದ ಇಂದಿನ ಮಕ್ಕಳಿಗೆ ಕೊರೆಯಲ್ಪಟ್ಟಾಗ ಛೆ ಅಂತ ಅನ್ನಿಸಿದ್ದು ಸುಳ್ಳಲ್ಲ. ಆ ಇಂದಿನ ಮಕ್ಕಳಲ್ಲಿ ಒಬ್ಬಿಬ್ಬರಾದರೂ ಮುಂದೆ ಹೀಗೆ ಕುಟ್ಟಬಹುದು.. ಬಂಗಾರದ......