ಬಾಲ್ಯ ಎಂಬ ಎರಡಕ್ಷರದ ಶಬ್ದ ಬಹು ಸುಂದರ. ಬಡತನವಿರಲಿ ಶ್ರೀಮಂತಿಕೆಯಿರಲಿ ಆವಾಗ ಅದು ಬಾಧಿಸದ ವಯಸ್ಸು. ಆಟ ಊಟ ಓಟ ಎಲ್ಲವೂ ಅವರವರ ಮಟ್ಟಕ್ಕೆ ಚೆನ್ನ. ಎಲ್ಲರ ಜೀವನದಲ್ಲಿಯೂ ಬಾಲ್ಯದ ಜೀವನ ಬಹುಮುಖ್ಯವಾದ ಘಟ್ಟ. ವಿಪರ್ಯಾಸವೆಂದರೆ ಬಹು ಜನರಿಗೆ ಅದು ತಿಳಿಯುವುದು ಅವರು ಬೆಳೆದು ದೊಡ್ಡವರಾದಮೇಲೆಯೇ. ಅದೃಷ್ಟವಂತ ಮಕ್ಕಳಿಗೆ ಬಾಲ್ಯವನ್ನು ಸುಂದರವನ್ನಾಗಿಸುವ ಪಾಲಕರು ಸಿಕ್ಕುತ್ತಾರೆ. ಆವಾಗ ಅದು ಅವರ ನಡೆ ನುಡಿ ಸ್ವಭಾವದಮೇಲೆ ಜೀವನಪೂರ್ತಿ ಉತ್ತಮ ಪರಿಣಾಮಬೀರುತ್ತದೆ. ಬಾಲ್ಯ ಅಸಹನೆಯಿಂದ, ಸಮಾಜದ ತಿರಸ್ಕಾರದ ನೋಟದಿಂದ ಕೂಡಿದ್ದರೆ ಅದು ವ್ಯಕ್ತಿಯ ಜೀವನದಮೇಲೆ ಹೇರಳ ದುಶ್ಪರಿಣಾಮವನ್ನೂ ಬೀರುತ್ತದೆ. ಹಾಗಾಗಿ ಬಾಲ್ಯವನ್ನು ವಿಕಸಿಸಲು ಬಿಡಬೇಕು. ಭಯದಿಂದ, ಗದರುವಿಕೆಯಿಂದ ಮಕ್ಕಳ ವಿಕಸನಕ್ಕೆ ಬಹಳ ಧಕ್ಕೆಯಾಗುತ್ತದೆ ಎಂಬುದು ಹಿರಿಯರು ತಿಳುವಳಿಕೆಹೊಂದಿದಷ್ಟೂ ಸಮಾಜಕ್ಕೆ ಉತ್ತಮ ಪ್ರಜೆಗಳ ಕೊಡುಗೆ ಸಾದ್ಯವಾಗಬಲ್ಲದು.
ಸುತ್ತಲೂ ಹಸಿರು ಮರಗಿಡಗಳು, ನಡುವೆ ಜುಳುಜುಳು ಹರಿವ ನದಿ, ತಂಪಾಗಿ ಹಾರಾಡುವ ಬಣ್ಣ ಬಣ್ಣದ ಚಿಟ್ಟೆಗಳು, ನದಿಯ ಪಕ್ಕದಲ್ಲೊಂದು ಅಜ್ಜನ ಮನೆ,ಕಂಡ ಕುತೂಹಲಕ್ಕೆ ತಾಳ್ಮೆಯಿಂದ ಉತ್ತರ ನೀಡಿ ತಣಿಸುವ ಮಾವಂದಿರು, ರಾಕ್ಷಸನ ಸೋಲಿನ, ಭೀಮನ ಶಕ್ತಿಯ, ಅರ್ಜುನನ ಗುರಿಯ, ಜಟಾಯುವಿನ ಹೋರಾಟದ ಕತೆ ಹೇಳುವ ಅಜ್ಜ, ರುಚಿ ರುಚಿ ಕುರುಕಲು ಕೊಡುವ ಅಜ್ಜಿ, ಗರಿ ಗರಿ ಬಟ್ಟೆ ತೊಳೆದು ನೀಡುವ ಅತ್ತೆ, ಇವಿಷ್ಟೂ ಅಥವಾ ಇನ್ನಷ್ಟು ನಿಮ್ಮ ಬಾಲ್ಯದಲ್ಲಿ ಸಿಕ್ಕರೆ ಅದರ ಸವಿ ನೆನಪು ಬೇಕಾದಾಗ ನಿಮ್ಮನ್ನು ಆಕಾಶದಲ್ಲಿ ತೇಲಾಡುತ್ತದೆ. ಆದರೆ ಅದು ಎಲ್ಲರಿಗೂ ಇದೇ ರೀತಿಯಲ್ಲಿ ಸಿಗುವುದಿಲ್ಲ. ಹಾಗಂತ ಎಲ್ಲವೂ ಹೀಗೆಯೇ ಇರಬೇಕೆಂಬ ಕಾನೂನು ಅಲ್ಲಿಲ್ಲ. ಹಿರಿಯರು ಮನಸ್ಸು ಮಾಡಿ ಇದ್ದುದ್ದರಲ್ಲಿಯೇ ಗದರದೇ ಸಾವಧಾನದಿಂದ, ತಾಳ್ಮೆಯಿಂದ ವ್ಯವಹರಿಸಿ ಸುಖವನ್ನು ಮಕ್ಕಳಿಗೆ ನೀಡಬಹುದು. ಹಾಗೆಯೇ ಅವರ ಚೇತನಕ್ಕೆ ಚೈತನ್ಯ ತುಂಬಬಹುದು. ಮನೆಯ ಅಡಿಪಾಯ ಗಟ್ಟಿಯಿದ್ದರೆ ಮೇಲ್ಮನೆಯ ಭದ್ರತೆ ಹೆಚ್ಚುವಂತೆ, ಬಾಲ್ಯದ ಅಡಿಪಾಯವನ್ನು ಭದ್ರಗೊಳಿಸಿ ಜೀವನವನ್ನು ಸುಭದ್ರಗೊಳಿಸಬಹುದು ಎಂಬುದು ಸಂಶೋಧಕರ ಅಭಿಮತ. "ನನ್ನ ಮಾವ ಚಾರಣಕ್ಕೆ ಕರೆದೊಯ್ಯುತ್ತಿದ್ದರು, ಅಲ್ಲಿನ ನಿಗೂಢತೆಯ ಪರಿಚಯ ಮಾಡಿಒಸುತ್ತಿದ್ದರು, ಅದರ ಹಸಿ ಹಸಿ ನೆನಪು ಯಾವಾಗ್ಲೂ ನನ್ನನ್ನು ಉತ್ಸಾಹಕ್ಕೆ ಕರೆದಿಯ್ಯುತ್ತದೆ" ಹೀಗಂತ ಬೆಂಗಳೂರಿನ ಹನಿವೆಲ್ ಕಂಪನಿಯ ಉದ್ಯೋಗಿ ರಮ್ಯಾ ತಮ್ಮ ಬ್ಲಾಗಿನಲ್ಲಿ ಅಜ್ಜನ ಮನೆಯ ಸವಿನೆನಪಿನ ಕತೆ ವಿವರಿಸುತ್ತಾರೆ. ಇಂದಿನ ಒತ್ತಡದ ಜೀವನದಲ್ಲಿ ಬಾಲ್ಯದ ನೆನಪುಗಳು ಆಡಿದ ಆಟಗಳು, ಮರಳುಗುಡ್ಡೆ ಹಾಕಿ ಕಟ್ಟಿದ ಮನೆಗಳು, ಕೆರೆಯನೀರಿನಲ್ಲಿ ಕುಣಿದಾಡಿದ ದಿವಸಗಳು, ಅಜ್ಜನ ಕತೆಗಳು, ಹೀಗೆ ಎಲ್ಲವೂ ಹುರುಪು ನೀಡಲು ಕಾರಣವಾಗುತ್ತದೆಯಂತೆ. ಇದು ಒಬ್ಬ ರಮ್ಯಾಳ ಕತೆಯಲ್ಲ, ಪಟ್ಟಣದಲ್ಲಿ ಓದಿ ರಜೆಯಲ್ಲಿ ಹಳ್ಳಿ ಸುಖ ಪಡೆದ ಎಲ್ಲಾ ಮೊಮ್ಮಕ್ಕಳ ಕತೆ ಇಂತಹ ಸವಿಸವಿ ನೆನಪುಗಳಿಂದಲೇ ಆರಂಭವಾಗುತ್ತದೆ.
ಬಾಲ್ಯ ಎಂದರೆ ಆಡಿನಲಿಯುತ್ತಾ ನೋಡಿ ಕಲಿಯುತ್ತಾ ಬೆಳೆಯುವ ಹಂತ. ಅಂತಹ ಅಭೂತಪೂರ್ವ ಸಮಯವನ್ನು ಕೇವಲ ಪುಸ್ತಕದ ಕಲಿಕೆಗೆ ಸೀಮಿತ ಗೊಳಿಸುವ ಆಸಕ್ತಿ ಪಾಲಕರಿಗಿದ್ದರೆ ಮಕ್ಕಳ ಮನಸ್ಸು ಕುಬ್ಜಗೊಳ್ಳುತ್ತದೆ. ಗಿಳಿಪಾಠ ಬೇಸರ ತರಿಸುತ್ತದೆ. ಹಾಗಂತ ಕುತೂಹಲಕ್ಕೆ ಅವಕಾಶವಿರದ ಪ್ರಶ್ನೆಗೆ ಉತ್ತರವಿರದ ವಿಶಾಲಬಯಲಿನ ಮನುಷ್ಯ ಸೃಷ್ಟಿಯ ಆಟಗಳು ಮಾತ್ರಾ ವ್ಯಾಯಾಮ, ಹಾಗೂ ಸಂತೋಷ ಎಂಬುದು ಹಲವರ ದೃಷ್ಟಿ.ಆದರೆ ವಾಸ್ತವ ತೀರಾ ಭಿನ್ನ, ಪಟ್ಟಣದ ಮೈದಾನದಲ್ಲಿ ಆಡುವ ಆಟ ಏಕತಾನತೆಯಿಂದ ಕೂಡಿರುವುದರಿಂದ ಅದು ಜೀವನಪೂರ್ತಿ ಸವಿನೆನಪಿಗೆ ಅವಕಾಶವಿರುವುದಿಲ್ಲ, ಅದೇ ವರ್ಷಕ್ಕೊಮ್ಮೆ ಹಳ್ಳಿಯತ್ತ ಹೊರಳಿ ಅಲ್ಲಿ ನೋಡುವ ನೋಟವೇ ಮನಸ್ಸಿನಲ್ಲಿ ಅಚ್ಚಾಗಿಬಿಡುತ್ತದೆ. ಅದು ಸುಮಧುರ ಸುಂದರ.
ಯಾವಾಗ ನಾನು ದೊಡ್ದವನಾದೇನೋ? ಇವರನ್ನೂ ತಿರುಗಿ ಬೈದೇನೋ? ಎಂಬಂತಹ ಆಲೋಚನೆ ಮಕ್ಕಳ ಮನಸ್ಸಿನಲ್ಲಿ ಬೆಳೆಯುತ್ತಿದೆಯೆಂದರೆ ಅಲ್ಲಿ ಮಕ್ಕಳ ಮನಸ್ಸು ಕುಬ್ಜವಾಗುತ್ತಿದೆಯೆಂದು ಅರ್ಥ. ಮಕ್ಕಳು ಬಾಯಿಬಿಟ್ಟು ತಮ್ಮ ಅವ್ಯಕ್ತ ಭಯವನ್ನು ಹೇಳಲಾರವು, ಆದರೆ ಅವರ ವರ್ತನೆ ಹೇಳುತ್ತದೆ. ನಿತ್ಯ ಜಗಳ ಮಾಡುವ ಅಪ್ಪ ಅಮ್ಮಂದಿರನ್ನು ನೋಡುತ್ತಾ ಬೆಳೆದ ಮಗು ತನಗೆ ಗೊತ್ತಿಲ್ಲದಂತೆ ತನ್ನ ಜೀವನದಲ್ಲಿಯೂ ಅದನ್ನೇ ಮುಂದುವರೆಸುತ್ತದೆ. ಹಾಗಾಗಿ ಹಿರಿಯರ ಜಗಳ ಕಾದಾಟ ಎಲ್ಲಾ ಮಕ್ಕಳೆದುರಿಗೆ ಸಲ್ಲ. ಅಥವಾ ಅಂತಹ ಸಮಸ್ಯೆಗಳಿದ್ದರೆ ಅಂತಹ ಬೇಡದ ನೆನಪುಗಳನ್ನೆಲ್ಲಾ ಅಡಿಗೆ ಒತ್ತಿ ಅದರ ಮೇಲೆ ಸುಂದರ ಭಾವನೆಗಳನ್ನು ಅರಳಿಸುವ ಕೆಲಸ ವರ್ಷಕ್ಕೊಮ್ಮೆಯಾದ್ರೂ ಸಿಗುವಂತಿರಬೇಕು. ಅದು ಅಜ್ಜನ ಮನೆಯಲ್ಲಿ ಮಾತ್ರಾ ಸಾದ್ಯ ಎಂಬುದು ಅನುಭವ ವೇದ್ಯ.
"ನನ್ನ ಅಮ್ಮ ಹಸಿಹಾಲು ಕುಡಿಯುತ್ತಿದ್ದಳಂತೆ ನನಗೂ ಕುಡಿಸು ಮಾಮಾ" ಎಂಬುದು ಭಾರತದಲ್ಲಿ ಹುಟ್ಟಿ ದುಬೈ ನಲ್ಲಿ ಬೆಳೆಯುತ್ತಿರುವ ಕಾವ್ಯಳ ಆಸೆ. ದುಬೈ ಸೇರಿ ಇಪ್ಪತ್ತು ವರ್ಷಗಳು ಸಂದರೂ ಆಕೆಯ ಅಮ್ಮಳಿಗೆ ಎಂದೋ ಕುಡಿದ ಹಸಿಹಾಲಿನ ಬಿಸಿ ಮರೆತಿಲ್ಲ. ಮನದ ಮೂಲೆಯಲ್ಲಿ ಮಗಳಿಗೂ ಸಿಗಲಿ ಎಂಬ ಆಸೆಯಿಂದ ರಜೆಯಲ್ಲಿ ಪ್ರತೀ ವರ್ಷ ಹದಿನೈದು ದಿನಗಳ ಮಟ್ಟಿಗೆ ಹುಟ್ಟಿದ ಹಳ್ಳಿಗೆ ಮಗಳನ್ನು ಕಳುಹಿಸುವ ಅಮ್ಮ ತನ್ನ ಮಗಳ ಬಾಳಿನುದ್ದಕ್ಕೂ ಸವಿನೆನಪನ್ನು ದಾಖಲಿಸಲು ನೆರವಾಗುತ್ತಾಳೆ. ಆಕಳಿನ ಮೊಲೆಯಿಂದ ಸೀದಾ ಕಾವ್ಯಳ ಬಾಯಿಗೆ ಹಾರಿದ ಹಾಲು ಕೇವಲ ಕ್ಷಣಿಕ ಹಸಿಬಿಸಿ ಹಾಲಿನ ಸುಖವೊಂದನ್ನೇ ಅಲ್ಲ ಅವಳ ನೆನಪಿನ ಕೋಶದಲ್ಲಿ ಶಾಶ್ವತವಾಗಿ ದಾಖಲಾಗಿ ನೆನಪುಗಳನ್ನು ಶ್ರೀಮಂತಗೊಳಿಸುತ್ತವೆ. ಆದರೆ ಅಂತಹ ವ್ಯವಸ್ಥೆಗೆ ಹಳ್ಳಿಗಳು ಜೀವಂತವಾಗಿರಬೇಕು. ಅಲ್ಲಿರುವ ಜೀವಗಳಿಗೆ ಚೈತನ್ಯ ಇರಬೇಕು. ಅಂತಹ ಚೈತನ್ಯವಿರುವ ಜೀವಗಳ ಜೊತೆ ಪಟ್ಟಣಿಗರಿಗೆ ಸಂಬಂಧವಿರಬೇಕು, ಹೀಗೆ ಬೇಕುಗಳ ಪಟ್ಟಿ ಬೆಳೆಯುತ್ತಲೇ ಸಾಗುತ್ತದೆ.
ಮನಸ್ಸಿದ್ದರೆ ಮಾರ್ಗ ಎಂಬಂತೆ ಹಳ್ಳಿಯಲ್ಲಿರುವ ಮಕ್ಕಳಿಗೆ ಪಟ್ಟಣ ತೊರಿಸಿ ಅವುಗಳ ಮುಖ ಅರಳುವುದನ್ನೂ, ಪಟ್ಟಣದ ಮಕ್ಕಳಿಗೆ ಹಳ್ಳಿಯ ಸೊಗಡು ಪರಿಚಯಿಸಿ ಅವುಗಳ ಕಣ್ಣುಗಳು ಅಗಲವಾಗುವುದನ್ನೂ ನೋಡುವ ಆಸೆ ಪಾಲಕರಿಗೆ ಇದ್ದರೆ ಸ್ವರ್ಗಕ್ಕೆ ಕಿಚ್ಚು ಹಚ್ಚಬಹುದು. ಅದೂ ಅವರುಗಳ ಜೀವನಪೂರ್ತಿ ನೆನಪುಗಳ ಮೂಲಕ. ಅದಕ್ಕೊಂದು ಅಜ್ಜನ ಮನೆ ಅವಶ್ಯಕತೆ ಇದೆ. ಇಲ್ಲದಿದ್ದರೆ ಸೃಷ್ಟಿಸಿಕೊಳ್ಳುವಷ್ಟು ಜಗತ್ತು ಇಂದು ಮುಂದುವರೆದಿದೆ. ಆದರೆ ಮನಸ್ಸು ಅರಳಬೇಕಷ್ಟೆ, ಮತ್ತು ಅಜ್ಜನ ಮನೆಯತ್ತ ಹೊರಳಬೇಕಷ್ಟೆ.
(ಇಂದಿನ ವಿಜಯಕರ್ನಾಟಕ ಲವಲವಿಕೆಯಲ್ಲಿ ಪ್ರಕಟಿತ)