ನಾವು ಸರ್ಕಾರಿ ಸ್ವಾಮ್ಯದ ಹಲವಾರು ಸಂಸ್ಥೆಗಳೊಂದಿಗೆ ದಿನನಿತ್ಯ ವ್ಯವಹರಿಸುತ್ತೇವೆ. ಅದು ಕರೆಂಟಿನ ಕೆಇಬಿ ಯಿಂದ ಹಿಡಿದು ಮೊಬೈಲ್ ನ ಬಿ ಎಸ್ ಎನ್ ಎಲ್ ನವರೆಗೂ ಕೆ ಎಸ್ ಆರ್ ಟಿಸಿ ಒಳಗೊಂಡಂತೆ ಹತ್ತಾರು ಹಲವಾರು. ಹಾಗೆ ವ್ಯವಹರಿಸುವಾಗೆಲ್ಲ ನಮ್ಮದು ಗೊಣಗಾಟ ಸರ್ವೇ ಸಾಮಾನ್ಯ. ಅಂತಿಮವಾಗಿ ಸರ್ಕಾರಿ ಸೇವೆ ಎಂದರೆ "ರಗಳೆ" ಎಂಬ ಲಂಚಬಾಕತನ ಎಂಬ ವರಾತ. ಆದರೆ ಇಲ್ಲಿ ನಮ್ಮದೂ ಒಂದಿಷ್ಟು ತಪ್ಪಿರುತ್ತದೆ ಅಂತ ನನಗೆ ಮೊನ್ನೆಯಷ್ಟೇ ತಿಳಿಯಿತು. ಅದು ಹೀಗಾಯ್ತು.
ನನ್ನ ವಿಲ್ ಪೋನ್ ಗೆ ಇಂಟರ್ ನೆಟ್ ಹಾಕಿಸಿಕೊಂಡು ಮೂರು ವರ್ಷ ಸಂದವು. ಆವಾಗಾವಾಗ ನೆಟ್ ಕೈಕೊಡುವುದು ಸರ್ವೇ ಸಾಮಾನ್ಯ. ಹಾಗಾದಾಗಲೆಲ್ಲ ಶಿವಮೊಗ್ಗ ಕಂಪ್ಲೇಂಟ್ ನಂಬರ್ ಗೆ ಫೋನ್ ಮಾಡಿ ದೂರುತ್ತಿದೆ. ಅವರಾದರೋ ಅಲ್ಲಿಂದ ದಾರವಾಡಕ್ಕೆ ಪೋನ್ ಹಚ್ಚಿ ದುರಸ್ತಿ ಮಾಡುತ್ತಿದ್ದರು. ಒಮ್ಮೊಮ್ಮೆ ೨ ದಿವಸ ಸರಿ ಆಗದೇ ಇದ್ದಾಗ ಸ್ವಲ್ಪ ಜೋರಾಗಿಯೇ ರಗಳೆ ಮಾಡಿದ್ದು ಇದೆ. ಆದರೆ ಕಳೆದ ಸೋಮವಾರದಿಂದ ಅರೆಕ್ಷಣವೂ ನೆಟ್ ಕೈಕೊಡಲಿಲ್ಲ. ಹೀಗೇ ನೆಟ್ ನಲ್ಲಿ ನೋಡುತ್ತಾ ಕುಳಿತವನಿಗೆ "ಅರೆ ಹೌದು ನಾವು ಕೆಟ್ಟಾಗ ಪೋನ್ ಮಾಡುತ್ತೇವೆ ಸರಿ ಇದ್ದಾಗ ಸುದ್ದಿಯೇ ಹೇಳುವುದಿಲ್ಲವಲ್ಲ. ಅವರುಗಳ ಕೆಲಸಕ್ಕೆ ಸಂಬಳ ಪಡೆಯುತ್ತಿರಬಹುದು ಆದರೆ ಮನುಷ್ಯನ ಮನಸ್ಸಿನ ಮೂಲೆಯಲ್ಲಿ ನಾವು ಮಾಡುತ್ತಿರುವ ಕೆಲಸಕ್ಕೆ ಒಂದು ಹೊಗಳಿಕೆ ಜನರಿಂದ ಬರಲಿ ಅಂಬ ಆಸೆ ಇರಬಹುದಲ್ಲ" ಎಂದೆನಿಸಿ ಕಂಪ್ಲೇಂಟ್ ನಂಬರ್ ಗೆ ಫೋನ್ ಹಚ್ಚಿದೆ. ಹಾಗೂ ವಾರ ಪೂರ್ತಿ ಸರಿಯಿದ್ದ ನೆಟ್ ಬಗ್ಗೆ ಕಂಗ್ರಾಟ್ಸ್ ಹೇಳಿದೆ. ಕಂಪ್ಲೇಟ್ ರಿಸೀವ್ ಮಾಡಿದ ಮೇಡಂ ಗೆ ಮಹದಾಶ್ಚರ್ಯ. ಯಾರೂ ಹೀಗೆಲ್ಲ ವ್ಯವಸ್ಥೆ ಸರಿ ಇದ್ದದನ್ನು ಹೇಳುವುದೇ ಇಲ್ಲವಂತೆ. ಅವರು ಸಂಭ್ರಮದಿಂದ ಮತ್ತೊಬ್ಬ ಮೇಲಾಧಿಕಾರಿಯನ್ನು ಕರೆದು ಪೋನ್ ಕೊಟ್ಟರು, ಅವರದ್ದೂ ಅದೇ ಖುಷಿ.
ಹೀಗೆಲ್ಲಾ ಇದೆ ನಿಮಗೂ ಇಂತಹ ಅನುಭವ ಆಗಿರಬಹುದು ಆಗಿಲ್ಲದಿದ್ದರೆ ಇವತ್ತೇ ಅನುಭವ ಮಾಡಿಕೊಳ್ಳಬಹುದು.