Tuesday, June 23, 2009

ಗೋವಿಂದಂ ಆದಿಪುರುಷಂ...ತಮಹಂ ಸ್ಮರಾಮಿ

ನಿರಾಶೆಯೆಂಬ ಕಾರ್ಮೋಡ ಕವಿದಾಗ, ಕೆಲಸಗಳು ಕೈಕೊಟ್ಟಾಗ. ಸರಣಿ ಸೋಲುಗಳು ಎದುರಾದಾಗ ಮನುಷ್ಯ ಉತ್ತರ ಹುಡುಕಿಕೊಳ್ಳಲು ದೇವರ ಮೊರೆಹೋಗುತ್ತಾನೆ. ಆದರೆ ದೇವರೆಂಬ ದೇವರನ್ನು ಮನುಷ್ಯ ಕೇವಲ ಇದೇ ಉದ್ದೇಶಕ್ಕೆ ಸೃಷ್ಟಿ ಮಾಡಿಕೊಳ್ಳಲಿಲ್ಲ. ಕಣ್ಣಿಗೆ ಕಾಣುವ, ಹಸಿವನ್ನಿಂಗಿಸುವ, ಫಲಿತಾಂಶ ನೀಡುವ ಕೈಂಕರ್ಯಗಳು ಮುಗಿದಾಗ ಮಿಕ್ಕ ಸಮಯವನ್ನು ಕಳೆಯಲು ದೇವರನ್ನು ಸೃಷ್ಟಿಸಿಕೊಂಡ. ಆವಾಗ ಪ್ರಪಂಚಾದ್ಯಂತ ಅವರವರ ಮನಸ್ಸಿನ,ಯೋಚನೆಯ ಹಂತಕ್ಕನುಗುಣವಾಗಿ ನಾನಾ ತರಹದ ದೈವಗಳು ಹುಟ್ಟಿಕೊಂಡವು. ಇದಂ ಇಥ್ಹಂ ಎಂಬ ಉತ್ತರಗಳು ದೇವರಕಡೆಯಿಂದ ಸಮರ್ಪಕವಾಗಿ ಸಿಗದ ಕಾರಣ ಮನುಷ್ಯನಿಂದ ದೇವರ ಸೃಷ್ಟಿ ಹೆಚ್ಚುತ್ತಾ ಹೋಯಿತು. ಇನ್ನೂ ಹೆಚ್ಚಾಗುತ್ತಲೇ ಇದೆ. ಪ್ರಾರ್ಥನೆಯ ಮೂಲಕ ಭಜನೆಯ ಮೂಲಕ ಮಂತ್ರದ ಮೂಲಕ ತಂತ್ರದ ಮೂಲಕ ಆ ಅನಾಮಿಕ ಶಕ್ತಿಯನ್ನು ಒಲಿಸಿಕೊಳ್ಳಲು ಮನುಷ್ಯನ ಪ್ರಯತ್ನ ನಿರಂತರ. ಉತ್ತರ ಸಿಗದೆ ಸಾಯುವ ಈ ಮನುಷ್ಯ ಮತ್ತೆ ಮುಮ್ದಿನ ತಲೆಮಾರಿಗೆ ತನ್ನ ನಂಬಿಕೆಗಳನ್ನು ಬಿತ್ತುತ್ತಾ ಸಾಗಿದ್ದಾನೆ. ಮತ್ತು ಸಾಗುತ್ತಲೇ ಇದ್ದಾನೆ. ಅಂತಹ ಒಂದು ದೈವ ಸೃಷ್ಟಿ ಇಸ್ಕಾನ್ ನಿಂದಾದ ಗೋವಿಂದಂ.
ಕೃಷ್ಣ...ಕೃಷ್ಣ...ಕೃಷ್ಣ. ಕೃಷ್ಣವಿನಾ ತೃಣಮಪಿ ನಚಲತಿ ಅಂತ ಅಂದುಕೊಂಡಿದ್ದಾರೆ ಇಸ್ಕಾನಿಗಳು. ಕೇವಲ ಏನೇನೋ ಹೇಳಿ ಕೃಷ್ಣನಿದ್ದಾನೆ ಎನ್ನುವುದಕ್ಕಿಂತ ವ್ಯವಸ್ಥಿತವಾಗಿ ಮನುಷ್ಯನ ಮನಸ್ಸಿಗೆ ಆಹ್ಲಾದಕರ ಸಂಗೀತ ನೀಡಿ ಹೇಳಿದರೆ, ಕುಣಿದು ಪ್ರಾರ್ಥಿಸಿದರೆ ದೈವವನ್ನು ತಲುಪಬಹುದು ಎಂಬುದು ಪ್ರಭುಪಾದರ ತತ್ವ. ಅದು ಮೇಧಾವಿಗಳನ್ನೂ ಕೂಡ ಆ ಕಾರಣಕ್ಕಾಗಿಯೇ ತನ್ನ ತೆಕ್ಕೆಗೆ ತೆಗೆದುಕೊಂಡಿದೆ. "ಅಕ್ಷಯ ಪಾತ್ರ" ದಂತಹ ಅದ್ಭುತ ಕಾರ್ಯಕ್ರಮವನ್ನು "ಕೃಷ್ಣ ಜಪ" ದ ಮೂಲಕ ಸಮರ್ಪಕವಾಗಿ ನಡೆಸಿಕೊಂಡು ಬರುತ್ತಿದೆ. ಸಾವಯವ ಕೃಷಿಯಲ್ಲಿಯೂ ಎತ್ತಿದ ಕೈ.
ಇರಲಿ ಈಗ ನಾನು ಹೇಳಹೊರಟಿರುವ ವಿಷಯಕ್ಕೆ ಬರೋಣ.
ಚುಮು ಚುಮು ಬೆಳಕಿನಲ್ಲಿ ಇಸ್ಕಾನಿಗಳು ಕೃಷ್ಣ ಪೂಜೆ ಮಾಡುತ್ತಾರೆ. ಪೂಜೆ ಮುಗಿದ ನಂತರ ಪ್ರಾಂಗಣದಲ್ಲಿ ನಿಧಾನ ದೂಪದ ಹೋಗೆ ಆವರಿಸಿಕೊಳ್ಳುತ್ತದೆ. ದಟ್ಟವಾದ ಪರಿಮಳಯುಕ್ತ ದೂಪದ ಹೊಗೆ ಮನಸ್ಸಿಗೆ ಅದೇನೋ ಹಿತವನ್ನುನೀಡುತ್ತದೆ. ಸಾಲಂಕೃತ ಕೃಷ್ಣನ ವಿಗ್ರಹದ ಪರದೆ ನಿಧಾನ ಪಕ್ಕಕ್ಕೆ ಸರಿಯುತ್ತದೆ. ನಿಮಗೆ ದೂಪದ ಹೊಗೆಯ ನಡುವೆ ಕೃಷ್ಣ ದರ್ಷನ ಪ್ರಾರಂಬ. ಆವಾಗ ನಿಧಾನಗತಿಯಲ್ಲಿ " ಗೋವಿಂದಂ ಆದಿಪುರುಷಂ" ಹಾಡು ಶುರುವಾಗುತ್ತದೆ (ಬೇಕಾದರೆ ಹಾಡು ಇಲ್ಲಿದೆ ಕೇಳಿ http://www.youtube.com/watch?v=5GIQTuUJwwA ) ಅಕ್ಕಪಕ್ಕದ ಕೃಷ್ಣ ಭಕ್ತರು ಕೈ ಮೇಲೆತ್ತಿ ನಿಧಾನ ಹೆಜ್ಜೆ ಹಾಕತೊಡಗುತ್ತಾರೆ. ಪಾಶ್ಚಾತ್ಯ ಶೈಲಿಯ ಸಂಗೀತ ಸಂಯೋಜನೆಯ ಈ ಹಾಡು ನಮ್ಮ ನಿಮ್ಮನ್ನು ಅಮಲಿಗೇರಿಸುತ್ತದೆ. ನಿಧಾನ ಶುರುವಾದ ಹಾಡಿನ ಲಯ ಚುರುಕಾಗಿದ್ದು ನಿಮಗೆ ತಿಳಿಯುವುದೇ ಇಲ್ಲ. ಲಯ ಚುರುಕಾದಂತೆ ಹೆಜ್ಜೆಯೂ ಚುರುಕು. ಹಾಗೆ ಹತ್ತು ನಿಮಿಷಗಳ ದೇಹದ ಸುಸ್ತಿಗೆ ಮನಸ್ಸಿನ ಮುದಕ್ಕೆ ಈಡಾಗಿ ನೀವುಗಳು ಅದೇನೋ ಒಂದು ಹಿತವಾದ ಅನುಭವನ್ನು ಹೊಂದುತ್ತೀರಿ. ಅದೇ ಅನುಭವವನ್ನು ದೈವ ಸಾನ್ನಿದ್ಯ ಅನ್ನುತ್ತಾರೆ ಅವರು.
ಅಂತಹ ಅನುಭವವನ್ನು ಪದೇ ಪದೇ ಹೊಂದಲು ಮನಸ್ಸು ಬಯಸುತ್ತದೆ . ಮಾಡುವ ಕೆಲಸ ಸುಂದರ ಸಂಸಾರ ಮನೆ ಮಠ ಬಿಟ್ಟು ಅಲ್ಲಿಗೆ ಹೋಗಿಬಿಟ್ಟೀರಿ ಮತ್ತೆ. ಸಾಕು ಈಗ ನಾವಿರುವ ಸಂಸಾರ ಅಲ್ಲಿಲ್ಲ , ಆದರೆ ಅಲ್ಲಿರುವ ವಾತಾವರಣ ನಮ್ಮ ಮನೆಯಲ್ಲಿಯೂ ತಂದುಕೊಳ್ಳಬಹುದು. ಹ್ಯಾಪಿ ಕೃಷ್ಣ ಡೆ.

Monday, June 22, 2009

ಹುಯ್ಯೋ ಹುಯ್ಯೋ ಮಳೆರಾಯ


ಬಾಳೆ ತೋಟಕೆ ನೀರಿಲ್ಲ ಅನ್ನೋದು ಹಳ್ಳಿಯ ಹಳೇ ಹಾಡು. ಈಗ ಹುಯ್ಯೋ ಹುಯ್ಯೋ ಮಳೆರಾಯ ಲಿಂಗನಮಕ್ಕಿ ಡ್ಯಾಮಿಗೆ ನೀರಿಲ್ಲ ಅಂತ ಬದಲಾಯಿಸಬೇಕಿದೆ. ಈ ವರ್ಷ ಅದೇಕೋ ಗೊತ್ತಿಲ್ಲ ನಮ್ಮ ಮಲೆನಾಡಿನಲ್ಲಿ ಮಳೆಗಾಲ ಇನ್ನೂ ಶುರುವಾಗಿಲ್ಲ. ಜೂನ್ ಎಂದರೆ ಜಿರ್ರೋ ಎಂದು ಆಕಾಶವೇ ಕಳಚಿ ತಲೆಮೇಲೆ ಬಿದ್ದಂತೆ ಸುರಿಯಬೇಕಾಗಿದ್ದ ಮಳೆ ಮುಗುಮ್ಮಾಗಿ ಮಲಗಿದೆ. ಕಳೆದ ವರ್ಷ ಇಷ್ಟೊತ್ತಿಗೆ ಲಿಂಗನಮಕ್ಕಿ ಡ್ಯಾಮ್ ಭಾಗಶ: ತುಂಬಿ ಹೋಗಿತ್ತು. ಜುಲೈ ಅಂತ್ಯದಲ್ಲಿ ಡ್ಯಾಮಿಂದ ಯರ್ರಾಬಿರ್ರಿ ನೀರು ಬಿಟ್ಟಿದ್ದರು. ಈ ವರ್ಷ ಡ್ಯಾಂ ಖಾಲಿ ಖಾಲಿ.
ಹೊನ್ನೆಮರಡು ಹಿನ್ನೀರಿಗೆ ಹೋಗಿ ನಿಂತರೆ ನೂರಾರು ಬೋಳು ಮರಗಳು ಸಾಲುಸಾಲಾಗಿ ಕಾಣಿಸುತ್ತವೆ. ನಡುಗುಡ್ಡೆಗಳು ಎಣಿಸಲಾರದಷ್ಟು ಇದೆ. ಅವೆಲ್ಲಾ ವರುಣನ ಅವಕೃಪೆಗೆ ಒಳಗಾದ್ದರಿಂದ ನೀರಿಲ್ಲದೆ ನಗ್ನ ನೃತ್ಯ.
ಆಣೆಕಟ್ಟಿನಲ್ಲಿ ಇನ್ನುಹೆಚ್ಚೆಂದರೆ ಹತ್ತು ದಿವಸಕ್ಕಾಗುವಷ್ಟು ನೀರು ಇದೆ. ಆಮೇಲೆ ಕರೆಂಟ್ ಕತೆ ದೇವರೇ ಬಲ್ಲ. ಅಂಬೋದು ನೆಗೇಟೀವ್ ವಾಕ್ಯ ಅಂತ ಅನ್ನಿಸಿದರೂ ಸತ್ಯದ ಮಾತು.
ಆದರೂ ಏನೋ ಒಂದು ಆಗುತ್ತದೆ ಮತ್ತೇನೋ ಸಂಭವಿಸುತ್ತದೆ ಕಡಿದು ಗುಡ್ಡೆ ಹಾಕಬೇಕು ಎನ್ನುವ ಅದಮ್ಯ ಉತ್ಸಾಹದಲ್ಲಿ ನಮ್ಮೆಲ್ಲರ ದಿನಗಳು ಕಡಿಮೆಯಾಗುತ್ತಿವೆ.
ಆದರೂ ಮಳೆ ಇಲ್ಲದಕುರಿತು ಒಂದಿಷ್ಟು ಮಾತುಗಳು ಹೊರ ಬೀಳುತ್ತವ್. ಅವು ಯಾರ್ಯಾರು ಆಡಿದ್ದು ಅಂತ ತಳಕು ಹಾಕಿಕೊಳ್ಳುವ ಕೆಲಸ ನಿಮಗೆ ಬಿಟ್ಟದ್ದು.
"ಕಾಲ ಕೆಟ್ಟೊತು.. ಈಗಿನ ಕಾಲದವು ಪೂಜೆ ಪುನಸ್ಕಾರ ಬಿಟ್ಟಿದ್ದ, ಹಂಗಾಗಿ ಹಿಂಗೆಲ್ಲ ಆಗ್ದೆ ಮಣ್ಣು ಹೊಯ್ಕ್ಯತ್ತ ಮತೆ"
ನಮ್ಮ ಕಾಲದಲ್ಲಿ ಸುಭೀಕ್ಷ ಇತ್ತಪ ಅನಾಚಾರ ಅತ್ಯಾಚಾರ ಹೆಚ್ಚಾಗಿದ್ದಕ್ಕಾಗಿ ಮಳೆ ಬೆಳೆ ಹೀಗೆ
"ಮಳೆಯ ಈ ಅವತಾರಕ್ಕೆ ಅತಿಯಾದ ಕಾಡು ನಾಶ ಕಾರಣ"
ಮಳೆ ಇಲ್ಲದ್ದಕ್ಕೆ ಅಕೆಶಿಯಾ ಬೆಳಸಿದ್ದೆ ಕಾರಣ
ನೀಲಗಿರಿ ಬೆಳಸಿದ್ದೆ ಕಾರಣ
ಹುಡುಗ್ರು ಸಂಧ್ಯಾವಂದನೆ ಬಿಟ್ಟಿದ್ದೆ ಮಳೆ ಹೀಗಾಗಲು ಕಾರಣ
ಇವಕ್ಕೆಲ್ಲ ಬಿಜೆಪಿ ಯ ಆಪರೇಷನ್ ಕಮಲವೇ ಕಾರಣ ಹಾಗಾಗಿ ಯಡಯೂರಪ್ಪ ರಾಜಿನಾಮೆ ಕೊಡಬೇಕು
ಮಳೆ ಹೀಗಾಗಲು ಐವತ್ತು ವರ್ಷದಿಂದ ಆಳಿದ ಕಾಂಗ್ರೆಸ್ ದುರಾಡಳಿತವೇ ಕಾರಣ
ಶುಕ್ರ ವಕ್ರನಾದ್ದರಿಂದ ಮಳೆ ಕಡಿಮೆಯಾಗಿದೆ ನೆಟ್ಟಗಾದಮೇಲೆ ಎಲ್ಲಾ ಸರಿಯಾಗುತ್ತದೆ
ರಾಹು ಗುರುವಿನ ಮೇಲೆ ವಕ್ರನಾಗಿದ್ದಾನೆ ಅದು ನಿಜವಾದ ಕಾರಣ
ಬಳ್ಳಾರಿಯಲ್ಲಿ ಗಣಿ ದೊರೆಗಳು ಇದಕ್ಕೆ ನೇರ ಹೊಣೆ
ಮದುವೆ ಸಾಂಗೋಪಸಾಂಗವಾಗಿ ನಡೆಯಲಿ ಎಂದು ಹರಕೆ ಹೇಳಿಕೊಂಡದ್ದೇ ಮಳೆ ಇಲ್ಲದ್ದಕ್ಕೆ ಕಾರಣ
ಪ್ರಕೃತಿಯ ಮೇಲೆ ಮನುಷ್ಯನ ಅತಿಯಾದ ಹಲ್ಲೆ ಇದಕ್ಕೆ ಮೂಲ
ಹೀಗೆ ತಮ್ಮನ್ನೊಂದು ಬಿಟ್ಟು ಮಿಕ್ಕೆಲ್ಲವರೂ ಕಾರಣ ಎಂಬಂತಹ ಹೇಳಿಕೆಯೊಂದಿಗೆ ಮನಸ್ಸಿಲ್ಲದ ಮನಸ್ಸಿನಿಂದ ಹೇಳಿಕೆ ಮುಗಿಸೋಣ.
ಒಟ್ಟಿನಲ್ಲಿ "ಅಯ್ಯೋ ಮಳೆಯ ರಭಸಲ್ಲಿ ನಾವು ಕೊಚ್ಚಿ ಹೋಗುತ್ತಿದ್ದೇವೆ" ಎಂದು ಬರೆಯಬೇಕಾಗಿದ್ದ ಜಾಗದಲ್ಲಿ "ಹುಯ್ಯೋ...." ಅಂತ ಬರೆಯಬೇಕಾಗಿದ್ದು ತೀರಾ ಖುಷಿಯಲ್ಲದ ಸಂಗತಿ ಅನ್ನುವುದಂತೂ ಸತ್ಯ.