Monday, August 29, 2016

ಕೆಂಪು ಕೆಂಪು ಕೂಲ್ ಕೂಲ್

ಆಗಸ್ಟ್ ಹದಿನೈದು ನಮ್ಮ ಮಲೆನಾಡಿನಲ್ಲಿ ಜಿಟಿಜಿಟಿ ಮಳೆಗಾಲ. ಅಮ್ಮ ಅಪ್ಪಂಗೆ ತ್ರಾಸುಕೊಟ್ಟು ಹೊಲಿಸಿಕ ೊಂಡ ಹೊಸ ಡ್ರೆಸ್ ಧರಿಸಿ ಪ್ರಭಾತ್ಪೇರಿ ಎಂಬ ಮಜದಲ್ಲಿ ಪಾಲ್ಗೊಂಡು ಚಾಕಲೇಟ್ ತಿಂದು ಮನೆ ಸೇರುವಷ್ಟರಲ್ಲಿ ಹೊಲಿಸಿದ ಹೊಸ ಡ್ರೆಸ್ ಕೆಂಪು ಕೆಂಪು ಕೂಲ್ ಕೂಲ್. ಮಿಕ್ಕೆಲ್ಲಾ ದಿನ ಖಾಕಿ ಚಡ್ಡಿಯಾದರೆ ಅಂದು ಮಾತ್ರಾ ಹೊಸ ಪರಿಮಳದ ನೀಲಿಚೆಡ್ಡಿ ಬಿಳಿ ಅಂಗಿ. ಆ ಅಂಗಿಯ ಪರಿಮಳ ಇಸ್ತ್ರಿಯ ವಾಸನೆ ವಾವ್ ಇನ್ನೂ ನನ್ನ ಐವತ್ತನೆಯ ವಯಸ್ಸಿನಲ್ಲಿ ಮಿದುಳಿನ ಮೂಲೆಯಲ್ಲಿ ಅಚ್ಚಳಿಯದೇ ಉಳಿದಿದೆ. ದೊಡ್ಡವರು ಮಾಡುತ್ತಿದ್ದ ದೇಶದ ಕುರಿತ ಭಾಷಣ ಅಂದೂ ನಮ್ಮ ತಲೆಗೆ ಹೋಗುತ್ತಿರಲಿಲ್ಲ ಬಹುಷ: ಇಂದಿನ ಮಕ್ಕಳಿಗೂ ಅದರ ಗಂಧಗಾಳಿಯೂ ಇಲ್ಲ. ಇಂದಿನ ಮಕ್ಕಳೇಮುಂದಿನ ಪ್ರಜೆಗಳು ಅಂತ ಅಂದೂ ಕೂಗುತ್ತಿದ್ದೆವು ಇಂದೂ ಕೂಗುತ್ತಿದ್ದಾರೆ  ಮುಂದೂ ಕೂಗುತ್ತಾರೆ.
ಹೀಗೆ ಮುಂದುವರೆದಿದೆ ಕಾಲ ಒಟ್ಟಿನಲ್ಲಿ ಕೆಂಪು ಕೆಂಪು ಕೂಲ್ ನಿಂದ ತಂಪು ತಂಪು ಕೂಲ್ ನವರೆಗೆ

Wednesday, May 21, 2014

ದೀಪದ ಎಣ್ಣೆ ಎಳ್ಳಣ್ಣೆಯಾಗಿರಬೇಕು

ಮನಸ್ಸೆಂಬ ಮಾಯಾಲೋಕ ಶರವೇಗದಲ್ಲಿ ಮುನ್ನೆಡೆಯುತ್ತದೆ. ದೇಹಕ್ಕಿಂತ ಸಹಸ್ರಪಟ್ಟು ವೇಗದ ಮನಸ್ಸನ್ನು ನಿಯಂತ್ರಿಸದಿದ್ದಲ್ಲಿ ಕೊಂಚ ಕಷ್ಟ ಬದುಕು. ಓಡುವ ತಲೆಯನ್ನು ನಿಲ್ಲಿಸಲು ನೂರಾರು ತರಹ ನಿಯಮಗಳಿವೆ. ದೇಹದ ಮೂಲಕ ಮನಸ್ಸನ್ನು ನಿಯಂತ್ರಿಸುವುದು ಸುಲಭವಿಧಾನವಾದ್ದರಿಂದ ತಟಕ್ ಅಂತ ಮಾದಕಪಾನೀಯ ದ್ರವ್ಯಗಳಿಗೆ ಮೊರೆಹೋಗುವುದು ಸುಲಭ ಸಹಜ. ಓದುವ ಹಾರುವ ಹಾರಾಡುವ ಮನಸ್ಸು ದಿನಕ್ಕೊಮ್ಮೆ ಟಕ್ಕಂತ ನಿಂತರೆ ಅದರ ಮಜವೇ ಮಜ. ಹಾಗೆ ಸಹಜವಾಗಿ ನಿಲ್ಲಿಸುವುದು ಸುಲಭವಲ್ಲ ನಿಜ ಆದರೆ ಸುಲಭಮಾರ್ಗವಿದೆ. ಕತ್ತಲೆ ಕೋಣೆಯಲ್ಲಿ ಕಣ್ಣಿನ ನೇರಕ್ಕೆ ದೀಪವಿಟ್ಟುಕೊಂಡು ಐದು ನಿಮಿಷ ಎವೆಯಿಕ್ಕದೆ ನೋಡುವುದು ಮತ್ತೆ ಐದು ನಿಮಿಷ ಕಣ್ಣು ಮುಚ್ಚಿ ಕಣ್ಣೊಳಗೆ ಬಿಂಬವವನ್ನುತುಂಬಿಕೊಳ್ಳಬೇಕು. ಅರ್ದ ಘಂಟೆ ಸಾಕು ಮನಸ್ಸು ನಂತರ ನಿಲ್ಲತೊಡಗುತ್ತದೆ. ದೀಪದ ಎಣ್ಣೆ ಎಳ್ಳಣ್ಣೆಯಾಗಿರಬೇಕು ಎಂಬುದು ಹೊಸ ವಿಷಯ. ಮಿಕ್ಕೆಲ್ಲ ಅಲ್ಲಿ ಇಲ್ಲಿ ಓದಿ ಕೇಳಿ ತಿಳಿದದ್ದೆ ಎಮ್ದಿರಾ . ವಾಕೆ ಮಜ ಮಾಡಿ. 

Monday, May 19, 2014

ಕಾ ಕೆ ಕಾಹಾ....

ಎಂಟನೇ ತರಗತಿಯ ಸಂಸ್ಕೃತ ಮೇಷ್ಟ್ರು ನಮಗೆ  ಕಾ ಕೆ ಕಾ: , ಕಾಂ ಕೆ ಕಾ: ಅಂತ ಬಾಯಿಪಾಠ ಮಾಡಿಸಲು ಯತ್ನಿಸಿದ್ದುಂಟು.  ನಾವು ಮಾತ್ರಾ  ಕಾಕೆ ಕಾಕಾ ಎಂದು ಹಿಂದಿನ ಬೇಂಚಿನಲ್ಲಿ ಪಕ್ಕಾ  ಕಾಗೆಯಂತೆ ಒದರುತ್ತಿದ್ದೆವು. ಹಾಗೆ ಒದರಿದ ಕೆಲವರು ಇಂದು ದೊಡ್ಡ ಮಟ್ಟದ ಅಧಿಕಾರಿಗಳಾಗಿದ್ದಾರೆ ಇನ್ನು ಕೆಲವರು ಬೇಕಾಬಿಟ್ಟಿಯಾಗಿಯೂ ಹೋಗಿದ್ದಾರೆ. ಆದರೆ ಹಾಗೆಲ್ಲ ಏರಿದ್ದಕ್ಕೂ ಅಥವಾ ಇಳಿದಿದ್ದಕ್ಕೂ ಈ ಕಾಕೆ ಕಾ:  ಸಂಬಂಧ ಇಲ್ಲ ಅಂತ ತೀರಾ ತಳ್ಳಿ ಹಾಕಲಾಗದು.  ರಾಮಹ ರಾಮೌ ರಾಮಾಃ ದಂತೆಯೇ ಈ ಕಾ ಕೆ ಕಾಹ  ವನ್ನು ಎದ್ದು ಬಿದ್ದು ಗಟ್ಟುಹೊಡೆದು ಪರೀಕ್ಷೆಯಲ್ಲಿ ಪಕ್ಕಾ ಹಾಗೆಯೇ ಬರೆದು ನೂರಾ ಇಪ್ಪತ್ತೈದಕ್ಕೆ ನೂರಾ ಇಪ್ಪತ್ತು ಪಡೆದು ಒಬ್ಬ ನನ್ನ ಸ್ನೇಹಿತ ಅಂದು ಬೀಗಿದ್ದ. ಪಾಪ ಇಂದು ಅವನು ಸಂಜೆಯಾದಕೂಡಲೇ ಒಮ್ಮೊಮ್ಮೆ ಮಟ ಮಟ ಮಧ್ಯಾಹ್ನವೂ  ತೊಂಬತ್ತು ಹಾಕಿ ಕಣ್ಣು ಕೆಂಪಗೆ ಮಾಡಿಕೊಂಡು ಕಾಗೆಯಂತೆಯೇ ಒದರುತ್ತಾನೆ. ನಮ್ಮ ಜೊತೆ ಹಾಗೆಲ್ಲಾ ಕೂಗಾಡುತ್ತಿದ್ದವನು  ಓದೋದು ನನಗೆ ಒಗ್ಗಿದ್ದಲ್ಲ ಅಂತ ಪುಸ್ತಕ ಮಡಚಿಟ್ಟು  ಪಕ್ಕಾ ವ್ಯವಹಾರಸ್ಥನಾಗಿ ಠಾಕು ಠೀಕಾಗಿದ್ದಾನೆ, ಮಗದೊಬ್ಬ ನೂರಕ್ಕೆ ತೊಂಬತ್ತು ಗಳಿಸಿ ತೊಂಬತ್ತು ಮುಟ್ಟದೆ ಸೂಪರ್ ಪೋಸ್ಟ್ ನಲ್ಲಿ ಜುಂ ಅಂತ ಇದ್ದಾನೆ.                                     ನಾನೂ   ಅತ್ತಲೂ ಇಲ್ಲದೆ ಇತ್ತಲೂ ಸಲ್ಲದೆ ಆಗಿಬಿಟ್ಟೆ ಅಂತ ಬಹಳ ಜನ ಅಂದುಕೊಂಡಿದ್ದರು. ಹಾಗಾಗಲಿಲ್ಲ. ಅಪ್ಪನ ಲೆಕ್ಕಾಚಾರ ಹಿಡಿದರೆ  ತಿಥಿ ದಿವಸ ಕಾಗೆ ಕರೆಸುವ ಜನ ನಾನಾಗಬೇಕಾಗಿತ್ತು. ಆದರೆ ಆಗಲಿಲ್ಲ. ಇತ್ತಲೆ ಇದ್ದೇನೆ  ಹಾಯಾಗಿ. ಕಾಗೆ ಕಂಡಕೂಡಲೆ ಕಾ ಕಾ ಎನ್ನುತ್ತ .

Sunday, May 18, 2014

ೋಗರತೋವ

"ಯೋಗರತೋವ ಭೋಗರತೋವ" ಅಂತ ಮುಂದುವರೆಯುತ್ತದೆ ಭಜಗೋವಿಂದಂ ನಲ್ಲಿ. ಅಲ್ಲಿ ಯಾವಾರ್ಥ ಇಲ್ಲಿ ಅದಕ್ಕೆ ಏನರ್ಥ ಬೇಡ ಬಿಡಿ. ಈಗ  ಇನ್ನೊಂದೆಡೆ ಯೋಗ ಅಂದರೆ  ಲಕ್ ಅಂತಲೂ ಬಳಕೆಯಾಗುತ್ತೆ ಅದೂ ಬೇಡ. ನನನಗೀಗ ಇದಕ್ಕೆ  ತೋಚಿದ ಅರ್ಥ ಮೈ ಮುರಿಯುವುದು. ಅದೇ ಯೋಗ  ಅದು ಭೋಗ ಹೆಚ್ಚಾದಾಗ ಬೇಕಾಗುತ್ತದೆ.
         ಪ್ರಕೃತಿ ಕರುಣಿಸಿದ ಈ ಅದ್ಭುತ ದೇಹದ ಉಪಯೋಗ ಸಮರ್ಪಕವಾಗದಿದ್ದಲ್ಲಿ ಅದು ರೋಗದ ಗೂಡಾಗುವ ಸಾದ್ಯತೆ ಹೆಚ್ಚಾಗುತ್ತದೆ. ಆವಾಗ ವೈದ್ಯರೂ ಬೇಕು ಔಷಧಿಯೂ ಬೇಕು ಅಂತ ಮನಸ್ಸು ತೀರ್ಮಾನ ಮಾಡಿಬಿಡುತ್ತದೆ. ಅಲ್ಲೂ ಸರಿಯಾಗಿಸಿಕೊಳ್ಳುವುದಕ್ಕೆ ಹೇರಳ ಅವಕಾಶವಿದೆ. ಆದರೆ ಸ್ವಲ್ಪ ಛಲ ಹಠ ಇದ್ದರೆ ಸದೃಡ ದೇಹಕ್ಕೆ ಈ ಮೈ ಮುರಿತವೇ ಒಳ್ಳೆಯದು. ಕಾಯಕವೇ ಕೈಲಾಸ ನಿಜ ಆದರೆ ದೇಹಕ್ಕೆ ಅನುಕೂಲವಾಗುವಂತಹ ಕಾಯಕವಾದರೆ ಕಾಯಕ್ಕೂ ಕೈಲಾಸ ಭೂಲೋಕದಲ್ಲಿಯೇ ದರ್ಶನವಾಗುತ್ತದೆ. ಕೇವಲ ಕುಳಿತು ಕೆಲಸ ಮಾಡಿದರೆ ಕೈ ಲಾಸ್ ಆಗಿ ಕಲಾಸ್ ಆಗುವ ಸಂಭವವೇ ಹೆಚ್ಚು. ಅದಕ್ಕೆ ಈ ಮೈ ಮುರಿದುಕೊಳ್ಳುವುದು ಸುಲಭ ಮಾರ್ಗ.
         ವಾಡಿಕೆ ಮಾತೊಂದಿದೆ. ಬೆಳಗ್ಗೆ ಎದ್ದು ಮೈಮುರಿದು ಹೊರಟ ಅಂತ. ಎರಡು ಕೈ ಮೇಲಕ್ಕೆ ಎತ್ತಿ ಆ... ಅಂದು ಬಾಯಿ ಕಳೆಯುವ ಕ್ರಿಯೆಗೆ ಹಾಗೆ ಹೇಳುವುದು ವಾಡಿಕೆ. ನಿಜವಾಗಿಯೂ ಅದು ಅಷ್ಟೇ ಅಲ್ಲ. ರಾತ್ರಿಯ ಸುಖದ ನಿದ್ರೆಯ ಮುಗಿಸಿದ ದೇಹ ಬೆಳಗ್ಗೆ ಎಚ್ಚರವಾದಾಗ ಮೈ ಮುರಿಯುವ ಮನಸ್ಸಿಗೆ ತಯಾರಾಗಿರುತ್ತದೆ. ಆದರೆ ನಾವು ಶತ ಸೋಂಬೇರಿಗಳು ಕೈ ಎತ್ತಿ ಆ... ಅಂದು ಕಾಫಿ ಕುಡಿಯಲು ಅನುವಾಗುತ್ತೇವೆ. ಸಂಜೆ ಕಾಡುವ ಸೊಂಟ ನೋವಿಗೆ ಮಾತ್ರೆ ನುಂಗುತ್ತೇವೆ. ಈಗ ಸ್ವಲ್ಪ ಮಜ ಮಾಡೋಣ ಬೆಳಗ್ಗೆ  ಎದ್ದ ಹಾಸಿಗೆಯಲ್ಲಿಯೇ ಒಂಚೂರು ಮೈ ಮುರಿಯೋಣ (ಚಿತ್ರದಲ್ಲಿಷ್ಟು ಏಕ್ ದಂ ಬೇಡ, ಒಮ್ಮೆಲೆ ಹಾಗೆ ಮಾಡಲು ಹೋದರೆ ನಿಜವಾಗಿಯೂ ಲಟ ಲಟ ಅಂತ ಮೈ ಮುರಿದು ಹೋದೀತು) ಅದು ಎಷ್ಟೆಂದರೆ ಒಮ್ಮೆ ಬೆವರು ಕಿತ್ತು ಬರುವಷ್ಟು. ಆಮೇಲೆ ಕಾಫಿ  ಮುಂತಾದ ನಮ್ಮ ಚಟಗಳು ಹೇಗೂ ಇದ್ದದ್ದೆ. ಇನ್ನು ಇವನ್ನೆಲ್ಲಾ ಮಾಡದಿದ್ದರೂ ಅದು ಇದೆಯಲ್ಲ ಎಂತದು ಅಂದರೆ ಆಗುವುದು... ಅದು ಆಗಿಯೇ ಆಗುತ್ತೆ ಬಿಡಿ.
           



Saturday, May 10, 2014

ಮಲೆನಾಡಿನಲ್ಲೀಗ ಜೇನು ಸಂಭ್ರಮ

ಕೈಯಲ್ಲಿ ಕತ್ತಿ ಬಕೇಟ್ ಹಿಡಿದು ಮಲೆನಾಡಿನ ಗುಡ್ಡವೇರುವ ಮಂದಿ ಮನೆಗೆ ವಾಪಾಸು ಬರುವಾಗ ಪಾತ್ರೆ ತುಂಬಾ ಜೇನುತುಪ್ಪ ಉಕ್ಕುತ್ತಿರುತ್ತದೆ. ಇದು ಮೆ ತಿಂಗಳ ಮಲೆನಾಡಿನ ಜೇನುಕೀಳುವವರ ಸಂಭ್ರಮದ ಕೆಲಸ. ಹಳ್ಳಿಯ ಹಿಂದಿರುವ ಗುಡ್ಡಗಳು ಅದರಲ್ಲಿನ ಹುತ್ತಗಳು, ಮರದ ಪೊಟರೆಗಳು ದಿನವೊಂದಕ್ಕೆ ಸಾವಿರ ರೂಪಾಯಿಯ ಸಂಪಾದನೆಯ ಮೂಲ ಎಂದರೆ ಎಲ್ಲರಿಗೂ ಅಚ್ಚರಿಯಾದರೂ ಸತ್ಯ. ಮೆ ತಿಂಗಳಿನಲ್ಲಿ ಕಾಡು ಜಾತಿಯ ಸಸ ್ಯ ತೆಂಗಾರುಬಳ್ಳಿ ಹೂವನ್ನು ಬಿಡುತ್ತದೆ. ಈ ಹೂವು ಅರಳಿತು ಎಂದರೆ ಜೇನುಹುಳುಗಳಿಗೆ ಮಲೆನಾಡಿನಲ್ಲಿ ಅಂತಿಮ ಆಹಾರದ ಕಣಜ ಮುಗಿಯುತ್ತಿದೆಯೆಂದು ಅರ್ಥ. ಈ ಕೊನೆಯ ಹೂವಿನ ಮಕರಂದ ಹೀರಿ ಜೇನುಕುಟುಂಬ ತತ್ತಿಯಲ್ಲಿ ತುಪ್ಪವನ್ನಾಗಿಸಿ ಸಂಗ್ರಹಿಸಿಟ್ಟುಕೊಳ್ಳುತ್ತವೆ. ಆ ತುಪ್ಪಕ್ಕೆ ಮನುಷ್ಯ ಕನ್ನ ಹಾಕುತ್ತಾನೆ. ವಾರಕ್ಕೆ ಮೂರು ನಾಲ್ಕು ಜೇನು ಹುಡುಕಿ ವಾರಾಂತ್ಯದಲ್ಲಿ ಒಮ್ಮೆಲೆ ಅಷ್ಟನ್ನೂ ಕಿತ್ತು ಹತ್ತಾರು ಕೆಜಿ ತುಪ್ಪವನ್ನು ಸಂಗ್ರಹಿಸಿ ಹಣ ಮಾಡುವ ಜನ ಪ್ರತಿ ಮಲೆನಾಡಿನಹಳ್ಳಿಯಲ್ಲಿಯೂ ಕಾಣಸಿಗುತ್ತಾರೆ. ಈ ಕಾಡು ಜೇನುತುಪ್ಪಕ್ಕೆ ಕೆಜಿಯೊಂದಕ್ಕೆ ೧೦೦ ರಿಂದ ೧೫೦ ರೂಪಾಯಿ ಇದ್ದು ಉತ್ತಮ ಆದಾಯ ಎಂಬುದು ಕಳೆದ ಮೂವತ್ತು ವರ್ಷದಿಂದ ಜೇನುಕಾಯಕದಲ್ಲಿ ತೊಡಗಿಕೊಂಡಿರುವ ತಾಳಗುಪ್ಪ ಸಮೀಪ ಕೆರೇಕೈ ಗಿಡ್ಡಪ್ಪ. ತುಪ್ಪ ಹಿಂಡಿದ ರೊಟ್ಟನ್ನು ಕಾಯಿಸಿ ಜೇನುಮೇಣವನ್ನು ತಯಾರಿಸಿ ಆಭರಣ ತಯಾರಿಕೆಯವರಿಗೆ ಮಾರಾಟ ಮಾಡಿ ಕೊಂಚ ಆದಾಯ ಗಳಿಸುತ್ತಾರೆ. ಇದರ ಜತೆಯಲ್ಲಿ ಗುಡ್ಡಗಳಲ್ಲಿ ಹುಡುಕಿದ ಜೇನನ್ನು ಪೆಟ್ಟಿಗೆಯೊಳಗೆ ಕೂಡುವವರಿಗೆ ತೋರಿಸಿದರೆ ಇನ್ನೂ ೧೫೦ ರೂಪಾಯಿ ಅಧಿಕ ಆದಾಯವಿದೆ. ಕೆಲವರು ಅಂತಹ ಜೇನನ್ನು ಮರದ ಪೆಟ್ಟಿಗೆಯೊಳಗೆ ಕೂಡಿ ಮನೆಬಾಗಿಲಿನಲ್ಲಿಯೇ ತುಪ್ಪಸಂಗ್ರಹಿಸುತ್ತಾರೆ. ಇವರು ಜೇನು ಹುಡುಕುವ ಕಷ್ಟ ತೆಗೆದುಕೊಳ್ಳುವುದಿಲ್ಲ. ಪೆಟ್ಟಿಗೆ ತುಪ್ಪಕ್ಕೆ ಶುದ್ಧತೆಯ ಪಟ್ಟ ಹಾಗೂ ಗುಣಮಟ್ಟ ಇರುವುದರಿಂದ ಇದು ೩೦೦ ರೂಪಾಯಿವರಗೂ ಬಿಕರಿಯಾಗುತ್ತದೆ. ಗುಡ್ಡಗಳಲ್ಲಿ ಜೇನುಹುಡುಕುವ ಕೆಲಸ ತುಸು ಕಷ್ಟಕರವಾದದ್ದು. ಜೇನು ಪತ್ತೆಯಾದಮೇಲೆ ೧೫ ನಿಮಿಷದ ಕಾರ್ಯಾಚರಣೆ ನಡೆಯಿಸಿ ಜೇನುತುಪ್ಪ ಸಂಗ್ರಹಿಸುತ್ತಾರೆ. ಆದರೆ ಪೆಟ್ಟಿಗೆಯೊಳಗೆ ಕೂಡುವುದು ಬಹುಕಷ್ಟಕರವಾದ ಕೆಲಸ. ಒಂದು ಜೇನು ಕುಟುಂಬವನ್ನು ಪೆಟ್ಟಿಗೆಯೊಳಗೆ ಕೂಡಿಸಲು ದಿನಪೂರ್ತಿ ಸಾಹಸ ಮಾಡಬೇಕಾದ ಸಂದರ್ಭ ಬರುತ್ತದೆ. ಈ ಕಾರಣದಿಂದ ಪೆಟ್ಟಿಗೆಗೆ ಜೇನು ಕೂಡಿಸುವವರು ೧೦೦೦ ರೂಪಾಯಿವರೆಗೂ ಹಣ ಕೇಳುತ್ತಾರೆ. ಜೇನು ಸಾಕಾಣಿಕೆ ಹುಚ್ಚಿನವರಿಗೆ ಇಲ್ಲಿ ಹಣ ಗೌಣಪಾತ್ರವನ್ನು ವಹಿಸುತ್ತದೆ. ಇದು ಹವ್ಯಾಸವಾಗಿದ್ದು ಜೇನು ಹುಡುಕುವುದು, ಕೀಳುವುದು, ಸಾಕುವುದು ಮುಂತಾದವುಗಳನ್ನು ಖುಷಿಗಾಗಿ ಮಾಡುವವರು ಹಲವರಿದ್ದಾರೆ. ಇಂಥವರಿಗೆಲ್ಲೆ ಮೆ ತಿಂಗಳು ಎಂದರೆ ಅತ್ಯಂತ ಉತ್ಸಾಹದಾಯಕ ಮಾಸ. ಜೇನು ತುಪ್ಪ ಮೇಣ ಹಾಗೂ ಪೆಟ್ಟಿಗೆಗೆ ಕೂಡುವುದು ಮುಂತಾದ ಎಲ್ಲಾ ಕಡೆ ಈಗ ಹಣದ ಹರಿವು ಇದೆ. ಒಂದುಕಾಲದಲ್ಲಿ ಜೇನು ಖುಷಿಯ ಸಮಾಚಾರವಷ್ಟೇ ಆಗಿತ್ತು, ಆದರೆ ಇಂದು ಇದರ ಹಿಂದೆ ಹಣ ಸ್ವ ಉದ್ಯೋಗ ಹಾಗೂ ಉತ್ತಮ ಆದಾಯ ಇದೆ ಎನ್ನುತ್ತಾರೆ ತಾಳಗುಪ್ಪ ಸಮೀಪದ ಪ್ರಶಾಂತೆ ಕೆರೇಕೈ(೯೪೪೮೯೧೪೭೯೧). ಇವರು ಅಗ್ಗದ ದರದ ಜೇನು ಪೆಟ್ಟಿಗೆ ತಯಾರಿಕೆ ಆರಂಭಿಸಿ ತುಪ್ಪ ಸಂಗ್ರಹಣೆ , ಜೇನು ಪೆಟ್ಟಿಗೆಗೆ ಕೂಡುವುದರ ಉದ್ಯೋಗ ಮಾಡುತ್ತಿದ್ದಾರೆ. ಔಷಧೀಯ ಬಳಕೆಗೆ ಹೆಚ್ಚು ಉಪಯೋಗವಾಗುತ್ತಿರುವ ಜೇನುತುಪ್ಪ ಹತ್ತಾರು ಕೋಟಿ ರೂಪಾಯಿಯ ಉದ್ಯಮ. ಮಲೆನಾಡು ಕಪ್ಪು ತುಡುವೆ ಹಾಗೂ ಹೆಜ್ಜೇನಿನ ಸ್ವರ್ಗ. ಮಳೆಗಾಲ ಆರಂಬಕ್ಕಿಂತ ಮೊದಲು ಇದರ ವಹಿವಾಟು ಅತಿಹೆಚ್ಚು, ನಂತರ ಮತ್ತೆ ಡಿಸೆಂಬರ್ ವರೆಗೆ ಜೇನುಹುಳುಗಳಿಗೆ ಸೇರಿದಂತೆ ಅಲ್ಲಿ ತೊಡಗಿಕೊಂಡವರಿಗೆ ವಿಶ್ರಾಂತಿ ಕಾಲ. ಮಲೆನಾಡಿನ ಸಹಜ ಕಾಡಿನಲ್ಲಿ ಹೇರಳವಾಗಿರುವ ಜೇನು ತಾನು ದುಡಿದು ಬಹಳಷ್ಟು ಜನರಿಗೆ ಉದ್ಯೋಗನೀಡಿದೆ..

Thursday, May 8, 2014

ಮುಂಗಾರಿನ ಗುಡುಗಿಗೆ ಮಯೂರ ನಾಟ್ಯ

"ಗುಡು ಗುಡು ಸದ್ದನು ಕೇಳಿದ ಮಾತ್ರಕೆ ಮಯೂರ ನಾಟ್ಯವನಾಡೀತು" ಎಂದು ಕವಿಗಳು ಕಾವ್ಯ ರಚಿಸಿದ್ದಾರೆ. ಮಳೆಗಾಲದ ಆರಂಭದಲ್ಲಿ ಗುಡುಗಿನ ಗುಡು ಗುಡು ಸದ್ದು ಎಲ್ಲರೂ ಕೇಳಬಹುದು. ಆದರೆ ಮಯೂರ ನಾಟ್ಯ ಮಾತ್ರಾ ಮರೀಚಿಕೆಯೇ ಸರಿ. ಅಕಸ್ಮಾತ್ ಮಯೂರದ ನಾಟ್ಯ ನೊಡಲು ಸಿಕ್ಕರೂ ಅದು ಬಹು ದೂರದಿಂದ ಮಾತ್ರಾ ಸಾದ್ಯ. ಮಲೆನಾಡಿನ ಗುಡ್ಡ ಬೆಟ್ಟಗಳಲ್ಲಿ ವ್ಯಾಪಕಾವಾಗಿರುವ ನವಿಲುಗಳು ಮುಂಗಾರಿನ ಆರಂಭದಲ್ಲಿ ಮುಂಜಾನೆ ಮತ್ತು ಸಂಜೆ ನಾಟ್ಯವನ್ನಾಡುತ್ತವೆ. ಆದರೆ ಮನುಷ್ಯರು ಹತ್ತಿರಹೋದರೆ ಜೀವಭಯದಿಂದ ಓಡಿಹೋಗಿಬಿಡುತ್ತವೆ. ನವಿಲು ನೃತ್ಯದ ಹತ್ತಿರ ದರ್ಶನ ತುಂಬಾ ಸುಂದರವಾಗಿದ್ದರೂ ಎಲ್ಲರಿಗೆ ಅದು ದುರ್ಲಭ. ಈ ಸೌಭಾಗ್ಯವನ್ನು ಹತ್ತಿರದಿಂದ ನೊಡುವ ಭಾಗ್ಯ ತಾಳಗುಪ್ಪ ಸಮೀಪದ ಬೂರ್ಲುಕೆರೆಯ ಜನರಿಗೆ ಮಾತ್ರಾ ತುಂಬಾ ಸುಲಭ. ಸಾಗರ ತಾಲ್ಲೂಕು ತಾಳಗುಪ್ಪ ಸಮೀಪದ ಬೂರ್ಲುಕೆರೆ ಚಂದ್ರಣ್ಣ ಹಾಗೂ ಲಲಿತಾ ದಂಪತಿಗಳ ಅಚ್ಚುಮೆಚ್ಚಿನ ಗಿರಿಯಪ್ಪ ನೆಂಬ ನವಿಲು ಇಲ್ಲಿನ ಜನರಿಗೆ ಪ್ರತಿನಿತ್ಯ ಬೆಳಿಗ್ಗೆ ೮ ರಿಂದ ೯ ಗಂಟೆಯವರೆಗೆ ಮಯೂರ ನಾಟ್ಯ ಪ್ರದರ್ಶಿಸುತ್ತಿದ್ದಾನೆ. ಗಿರಿಯಪ್ಪನ ನೃತ್ಯ ನೋಡಿದವರು ನಮ್ಮ ರಾಷ್ಟ್ರಪಕ್ಷಿಯನ್ನಾಗಿಸಿ ಆಯ್ಕೆಮಾಡಿದ್ದಕ್ಕೆ ಕೃತಾರ್ಥರಾಗಲೇಬೇಕು. ನೂರಾರು ಗರಿಗಳನ್ನು ಕೊಡೆಯಾಕಾರದಲ್ಲಿ ಹರಡಿಕೊಂಡು ಐದು ನಿಮಿಷಕ್ಕೊಮ್ಮೆ ಗರಗರ ಸದ್ದು ಮಾಡುತ್ತಾ ಗರಿಗಳನ್ನು ಕುಣಿಸುತ್ತಾ ಸುತ್ತುವ ಗಿರಿಯಪ್ಪನೆಂಬ ನವಿಲ ನೃತ್ಯ ವರ್ಣಿಸಲಸದಳ. ಫೋಟೋ ತೆಗೆಯಲಾರಂಬಿಸಿದರೆ ಇನ್ನಷ್ಟು ಖುಷಿಯಾಗಿ ವಿವಿಧ ರೀತಿಯ ಫೋಸ್ ಕೊಡುವ ಗಿರಿಯಪ್ಪ ಪಕ್ಕಾ ಮನಸ್ಸು ತಿಳಿದವರಂತೆ ವರ್ತಿಸುತ್ತಾನೆ. ಕಾಡುನವಿಲು ನಾಡು ಸೇರಿದ ಬಗೆ: ರಾಷ್ಟ್ರಪಕ್ಷಿ ನವಿಲು ಸಾಮಾನ್ಯವಾಗಿ ಮನುಷ್ಯರ ಸಂಪರ್ಕದಿಂದ ಬಹುದೂರ. ಮನುಷ್ಯನನ್ನು ಕಂಡರೆ ಕ್ಷಣಮಾತ್ರದಲ್ಲಿ ಮಾಯವಾಗಿಬಿಡುತ್ತವೆ. ಆದರೆ ಬೂರ್ಲುಕೆರೆ ಚಂದ್ರಣ್ಣನ ಮನೆಯಲ್ಲಿ ಹಾಗಿಲ್ಲ. ಅದಕ್ಕೆ ಕಾರಣ ಚಂದ್ರಣ್ಣನವರ ಸಹೋದರ ಪ್ರಕಾಶ್ ರವರ ಮಗಳು ಶೈಲಿನಿಯ ಪಕ್ಷಿಪ್ರೀತಿ. ಈಗ ಮೂರು ವರ್ಷದ ಹಿಂದೆ ಮನೆಯ ತೊಟದ ಬಳಿ ಪೊದೆಯಲ್ಲಿ ಶೈಲಿನಿಗೆ ಎರಡು ನವಿಲುಮರಿಗಳ ಅರ್ತನಾದ ಕೆಳಿತು. ತಾಯಿ ಮರಿಯಿಂದ ದೂರವಾಗಿದ್ದ ಅವುಗಳನ್ನು ಮನೆಗೆ ತಂದು ಭತ್ತ ಹಾಕಿ ಬೆಳಸಿದಳು. ಒಮ್ದು ಮರಿ ಹೆಚ್ಚು ದಿವಸ ಬದುಕಲಿಲ್ಲ, ಇನ್ನೊಂದು ಮಾತ್ರಾ ಶೈಲಿನಿಯ ಜತೆ ಆಡುತ್ತಾ ಅವಳೊಡನೆ ರಾತ್ರಿ ಹಾಸಿಗೆಯಲ್ಲಿ ಮಲಗಿ ಬೆಳೆದು ದೊಡ್ಡದಾಯಿತು. ವಿದ್ಯಾಭ್ಯಾಸದ ನಿಮಿತ್ತ ಶೈಲಿನಿ ಉಡುಪಿಗೆ ಹೋದಾಗ ದೊಡ್ಡಪ್ಪ ಚಂದ್ರಣ್ಣನ ಮಡಿಲು ಸೇರಿತು ಗಿರಿಯಪ್ಪ. ಲಲಿತಾ ಚಂದ್ರ ಶೇಖರ್ ತಮ್ಮ ಮಗುವಿನಂತೆ ಗಿರಿಯಪ್ಪನನ್ನು ಪ್ರೀತಿಸುತ್ತಾರೆ. ಮನೆಯೊಳಗೆ ಮುಕ್ತವಾಗಿ ಸಂಚರಿಸುವ ಗಿರಿಯಪ್ಪ ಸಾಕುನಾಯಿ ಗುಂಡ ನೊಂದಿಗೂ ಆಪ್ತತೆಯಿಂದ ಇದ್ದಾನೆ. ತನಗೆ ಬೇಕೆನಿಸಿದಾಗ ತೋಟ ಗುಡ್ಡ ಬೆಟ್ಟ ಸುತ್ತಾಡಿ ಸಾಕಾದಾಗ ಮನೆ ಸೇರುತ್ತಾನೆ. ಮಳೆ ಗುಡುಗು ಬಂದರೆ ಮನೆಯ ಮೇಲೆ ಹತ್ತಿ ಕುಳಿತುಕೊಳ್ಳುತ್ತಾನೆ. ನಿತ್ಯ ನೃತ್ಯ: ಮೆ ತಿಂಗಳಿನಲ್ಲಿ ಬೆಳಿಗ್ಗೆ ಪ್ರತಿನಿತ್ಯ ಗರಿಬಿಚ್ಚಿ ನೃತ್ಯ ಮಾಡುವ ಗಿರಿಯಪ್ಪ, ನೋಡಲು ಜನ ಬಂದರೆ ಇನ್ನಷ್ಟು ನೃತ್ಯಕ್ಕೆ ರಂಗೇರಿಸುತ್ತಾನೆ. ಮಿಕ್ಕ ಸಮಯದಲ್ಲಿ ತನಗೆ ಬೇಕಾದಲ್ಲಿ ಮರ ಏರಿ ಅಥವಾ ಕಾಡೊಳಗೆ ಅಡ್ದಾಡುತ್ತಾ ಇರುತ್ತಾನೆ. ಹಸಿವಾದಾಗ ಮನೆಗೆ ಬಂದು ಕಾಳು ತಿನ್ನುತ್ತಾನೆ, ನಾಯಿಗೆ ಹಾಗೂ ನವಿಲಿಗೆ ಅಕ್ಕಪಕ್ಕದಲ್ಲಿ ಕಾಳು ಹಾಕಿದರೂ ಒಂದಕ್ಕೊಂದು ಗಲಾಟೆ ಮಾಡಿಕೊಳ್ಳದೆ ಅವರವರ ಪಾಲನ್ನು ಅವರವರೇ ತಿನ್ನುತ್ತಾರೆ ಎನ್ನುತ್ತಾರೆ ಚಂದ್ರಣ್ಣ.ಕಾಡೊಳಗೆ ಬೇಟೆಗಾರರ ಭಯವಿರುವುದರಿಂದ ಅಪಾಯದ ಭಯ ನಮ್ಮನ್ನು ಕಾಡುತ್ತದೆ, ನಾಲ್ಕು ವರ್ಷದ ಹಿಂದೆ ನನ್ನ ಸಹೋದರ ಪ್ರಕಾಶ ರ ಒಡನಾಡಿಯಾಗಿದ್ದ ನವಿಲು ಕಳ್ಳಬೇಟೆಗಾರರ ಗುಂಡೇಟಿಗೆ ಬಲಿಯಾಗಿತ್ತು. ಅವನ ನೆನಪಿಗೆ ಇವನಿಗೂ ಗಿರಿಯಪ್ಪ ಎಂದೇ ನಾಮಕರನ ಮಾಡಿದ್ದೇವೆ ಎನ್ನುತ್ಟಾರೆ. ಕಾಡಿನ ನವಿಲು ಊರು ಸೇರಿ ನೃತ್ಯದ ಸೊಬಗನ್ನು ಜನರಿಗೆ ಹತ್ತಿರದಿಂದ ಸವಿಯಲು ಅವಕಾಶ ಮಾಡಿಕೊಟ್ಟ ಚಂದ್ರಣ್ಣನ ಕುಟುಂಬಕ್ಕೂ ಗಿರಿಯಪ್ಪನಿಗೂ ಹ್ಯಾಟ್ಸಾಫ್ ಎನ್ನಲೇಬೇಕು. ನವಿಲು: ರಾಷ್ಟ್ರಪಕ್ಷಿ ನವಿಲು ನೋಡಲು ತುಂಬಾ ಸುಂದರ. ಇದರ ಮಾಯಸ್ಸು ೧೨ ರಿಂದ ೧೪ ವರ್ಷಗಳು. ವರ್ಷಕ್ಕೊಮ್ಮೆ ಮೊಟ್ತೆಯನ್ನಿಡುವ ಇವು ಒಮ್ಮೆ ೧೦ ರಿಂದ ೧೫ ಮೊಟ್ಟೆಯನ್ನಿಟ್ಟು ಮರಿಮಾಡುತ್ತವೆ. ಅಕ್ಟೋಬರ್ ನವೆಂಬರ್ ತಿಂಗಳಿನಲ್ಲಿ ಮರಿಯಾಗುತ್ತವೆ. ಭತ್ತದ ಗದ್ದೆಗಳಿಗೆ ಧಾಳಿ ಮಾಡಿ ನಾಶ ಮಾಡುತ್ತವೆ ಎಂಬ ಕಾರಣಕ್ಕಾಗಿ ಹಾಗೂ ಹೆಣ್ಣು ನವಿಲು ಕೋಳಿಯಂತೆ ಇರುವ ಕಾರಣಕ್ಕಾಗಿ ಇವು ಕಳ್ಳ ಬೇಟೆಗಾರರ ಗುಂಡಿಗೆ ಬಲಿಯಾಗುತ್ತವೆ. ಗಂಡುನವಿಲ್ಗೆ ಗರಿ ಇರುವುದರಿಂದ ಸುಲಭದಲ್ಲಿ ಬೇಟೆಗಾರರ ಕೈಗೆ ಸಿಗುತ್ತವೆ. ಇಷ್ಟಿದ್ದರೂ ಪ್ರಕೃತಿಯ ಶಕ್ತಿ ಅಗಾಧ ನವಿಲಿನ ಸಂಖ್ಯೆ ಕ್ಷೀಣಿಸದೆ ಸಮೃದ್ಧಿಯಿದೆ. ನವಿಲಿನ ನೃತ್ಯ ನೋಡಬಯಸುವವರು ಫೋನ್ ಮಾಡಿಕೊಂಡು ಬರಬೇಕಿದೆ: ಚಂದ್ರಣ್ಣ ಮೊಬೈಲ್:9480058299

ಗುರುವಿಲ್ಲದ ಕಲಾಕಾರ

ಈ ಚಿಗುರುಮೀಸೆ ಹುಡುಗ ಗೆರೆಗಳಮೂಲಕ ಚಕಚಕನೆ ತದ್ರೂಪು ಚಿತ್ರ ಬಿಡಿಸುತ್ತಾನೆ, ರಾಗಿ ಬೀಜ ಬಿತ್ತಿ ಗುಡ್ಡ ಅಕ್ಷರ ಸಹಿತ ಕಲಾಕೃತಿ ರಚಿಸುತ್ತಾನೆ, ಹೀಗೆಲ್ಲಾ ಮಾಡುತ್ತಾನೆ ಎಂದಕೂಡಲೆ ಈತ ಯಾವುದೋ ಚಿತ್ರಶಾಲೆಯಲ್ಲಿ ಕಲಿತು ಬಂದ ಹುಡುಗ ಅಂತ ಅನಿಸಿದರೆ ಅದು ಸುಳ್ಳು, ಗುರುಗಳಿಲ್ಲದೆ ಸ್ವಂತ ಆಸಕ್ತಿಯಿಂದ ಗೆರೆಗಳಮೂಲಕ ಮೋಡಿಮಾಡುವ ಈ ಹುಡುಗ ಹೊನ್ನಾವರ ತಾಲ್ಲೂಕು ಚಂದಾಪುರ ಸಮೀಪ ಹೊಸಾಡು ಗ್ರಾಮದವನು. ಈತನ ಪ್ರತಿಭೆ ಅಚಾನಕ್ಕಾಗಿ ಹೊರಬಂದಿದ್ದು ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರದ ಸಮೀಪ ಬಾನ್ಕುಳಿಯಲ್ಲಿ ಮೆ ೫ ರಿಂದ ೭ ರವರೆಗೆ ನಡೆಯುತ್ತಿರುವ ಶಂಕರಪಂಚಮಿ ಕಾರ್ಯಕ್ರಮದಲ್ಲಿ. ಬಾನ್ಕುಳಿ ಶ್ರೀ ರಾಮಚಂದ್ರಾಪುರ ಮಠದ ಶಾಖೆಯ ಗೊಶಾಲೆಯಲ್ಲಿ ಅರ್ಕ ಹಾಗೂ ಎರೆಗೊಬ್ಬರ ತಯಾರಿಕಾ ಘಟಕದಲ್ಲಿ ಕೆಲಸಕ್ಕೆಂದು ಹೊನ್ನವರದಿಂದ ಬಂದ ಈ ಹುಡಗುನ ಹೆಸರು ಯೋಗೇಶ. ಎಸ್.ಎಸ್.ಎಲ್.ಸಿ ವರೆಗೆ ವಿದ್ಯಾಭ್ಯಾಸ ಮಾಡಿದ ಈತ ಆರ್ಥಿಕ ತೊಂದರೆಯಿಂದ ಮುಂದೆ ಓದಲಿಲ್ಲ. ಆದರೆ ಚಿತ್ರ ಬಿಡಿಸುವ ಹುಚ್ಚು ಬಾಲ್ಯದಿಂದಲೂ ಇತ್ತು. ಬಾನ್ಕುಳಿಯಲ್ಲಿ ಶಂಕರಪಂಚಮಿ ಕಾರ್ಯಕ್ರಮ ನಿಗದಿಯಾದಾಗ ನಾನು ನನ್ನ ಕೊಡುಗೆಯನ್ನು ನೀಡುತ್ತೇನೆ ಎಂದು ಆಡಳಿತದವರನ್ನು ಕೇಳಿಕೊಂq. ಅವರಿಗೂ ಇವನಲ್ಲಿದ್ದ ಪ್ರತಿಭೆ ಎಂತದ್ದು ಎಂದು ತಿಳಿದಿರಲಿಲ್ಲ, ಆದರೂ ಒಪ್ಪಿಗೆ ಕೊಟ್ಟರು. ಕಾರ್ಯಕ್ರಮ ಆರಂಭದ ನಾಲ್ಕುದಿವಸದ ಮುಂಚೆ ಗೋಣಿತಾಟು ರಾಗಿ ಮಣ್ಣು ಸಗಣಿ ಬಳಸಿ ಏನೇನೋ ಮಾಡುತ್ತಿದ್ದ ಈತನನ್ನು ಯಾರೂ ಹೆಚ್ಚು ಗಮನಿಸಲಿಲ್ಲ. ಆದರೆ ಈತ ಗೋಣಿಚೀಲದಲ್ಲಿ ರಾಗಿ ಬೀಜ ಬಿತ್ತಿ ಬಾನ್ಕುಳಿ ಮಠದ ಪ್ರತಿಕೃತಿಯನ್ನು ತಯಾರಿಸಿಟ್ಟಿದ್ದ. ಅಲ್ಲಿ ತಾನು ಇಲ್ಲಿಯವರೆಗೆ ಬಿಡಿಸಿದ್ದ ರೇಖಾಚಿತ್ರಗಳನ್ನು ಪೇರಿಸಿಟ್ಟಿದ್ದ. ಅಲ್ಲಿಯವರೆಗೆ ಸುದ್ದಿಯಲ್ಲಿಲ್ಲದ ಈತ ದಿಡೀರನೇ ಪ್ರಸಿದ್ಧಿಯಾಗಿದ್ದ. ಶಂಕರಪಂಚಮಿ ಕಾರ್ಯಕ್ರಮಕ್ಕೆ ಬಂದ ಸಾರ್ವಜನಿಕರೆಲ್ಲರೂ ಅತ್ಯಂತ ಸಂತೊಷದಿಂದ ಯೋಗೇಶನ ಪ್ರತಿಭೆಯನ್ನು ಹೊಗಳಿದ್ದಾರೆ. ರಾಘವೇಶ್ವರಭಾರತೀ ಸ್ವಾಮಿಗಳು ಯೋಗೇಶನ ಪ್ರತಿಭೆಗೆ ಮೆಚ್ಚಿ ಮಂಗಳವಾರ ಬೃಹತ್ ವೇದಿಕೆಯಲ್ಲಿ ಸನ್ಮಾನ ಮಾಡಿದ್ದಾರೆ. ನಾನು ನನ್ನ ಖುಷಿಗಾಗಿ ಚಿತ್ರ ಬರೆಯುತ್ತೇನೆ, ನಾನು ಯಾರ ಬಳಿಯೂ ಕಲಿತಿಲ್ಲ, ಮೊಬೈಲ್ ನಲ್ಲಿ ಫೋಟೋ ತೆಗೆದುಕೊಮ್ಡು ಅದರಂತೆ ಚಿತ್ರ ಬರೆಯುತ್ತೇನೆ, ಎಂದು ಮುಗ್ದವಾಗಿ ಹೇಳುತ್ತಾನೆ ಯೋಗೇಶ. ನನಗೆ ಶ್ರೀಗಳು ಹುರುದುಂಬಿಸಿದ್ದಾರೆ ಬಂದ ಎಲ್ಲಾ ಜನರು ಬೆನ್ನುತಟ್ಟಿದ್ದಾರೆ ಎನೋ ಒಂಥರಾ ಖುಷಿ ಎನ್ನುತ್ತಾನೆ. ಪ್ರತಿಭೆ ಎನ್ನುವುದು ಸುಪ್ತವಾಗಿರುತ್ತದೆ, ಪ್ರಕಟವಾಗಲು ಸಮಯ ಬರಬೇಕು ಎನ್ನುವುದಕ್ಕೆ ಈ ಕೂಲಿಕಾರ್ಮಿಕ ಯೋಗೇಶನೇ ಸಾಕ್ಷಿ. ಮೊಬೈಲ್: ಯೋಗೇಶ್ 9449488421