Saturday, June 19, 2010

ಯಾರೂ ಮೂರ್ಖರಾಗಬೇಡಿ!


Two Suns on 21thJune 2010
21st June - the Whole World is waiting for.............
Star Aderoid will be the brightest in the sky, starting 10 June. It will look as large as the sun from naked eye. This will culminate on 21stjune when the star comes within 34.65M miles of the earth. Be sure to watch the sky on june. 21 at 12:30 pm. It will look like the earth has 2 suns!
The next time Aderoid may come this close is in 2287

ಹಲ್ಲೋ!ಈ ಮೇಲ್ ಒಂದು ಡೋಂಗಿ! ತಮಾಷೆ ನೋಡಲಿಕ್ಕಾಗಿ ಯಾರೋ ಇಂತಹ ಮೇಲ್ ಹುಟ್ಟು ಹಾಕುತ್ತಾರೆ. ನಂತರ ಮುಗ್ಧ ಜನ ಅದನ್ನು ಬೆಳೆಸುತ್ತಾರೆ. ಇಂತಹ ಅನೇಕ ಡೋಂಗಿ hoax ಗಳು ಪ್ರಚಾರದಲ್ಲಿವೆ. adrenoid ಎಂಬ ನಕ್ಷತ್ರವೇ ಇಲ್ಲ. ಯಾವ ನಕ್ಷತ್ರವೂ ಭೂಮಿಗೆ ೩೫ ಮಿ.mile ನಷ್ಟು ಹತ್ತಿರ ಬರಲು ಸಾಧ್ಯವೇ ಇಲ್ಲ. ಬಂದರೆ ಭೂಮಿಯೇ ಬೂದಿಯಾಗುತ್ತದೆ! ಈ ಡೋಂಗಿಯನ್ನು ನಂಬಿ ಆಕಾಶದತ್ತ ಮುಖಮಾಡಿ ನಿಂತು ಯಾರೂ ಮೂರ್ಖರಾಗಬೇಡಿ!
-mruthyunjaya gindimane

Friday, June 18, 2010

ನಿಸರಿ" ತುಪ್ಪದ ಸಿರಿ


ಜೇನು ತುಪ್ಪ ಸಾಮಾನ್ಯವಾಗಿ ಎಲ್ಲರೂ ರುಚಿ ನೋಡಿರುತ್ತಾರೆ. ಆದರೆ ನಿಸರಿತುಪ್ಪ ತಿಂದಿದ್ದೀರಾ? ಎಂಬ ಪ್ರಶ್ನೆಗೆ ಉತ್ತರ ಸ್ವಲ್ಪ ಗೊಂದಲವಾದದ್ದೇ. ಜೇನುತುಪ್ಪದ ರುಚಿಯನ್ನೇ ಹೋಲುವ ಮತ್ತು ಜೇನುತುಪ್ಪಕ್ಕಿಂತ ದುಪ್ಪಟ್ಟು ಔಷಧೀಯ ಗುಣವಿರುವ ಹಾಗೂ ಜೇನುತುಪ್ಪಕ್ಕಿಂತ ಹೆಚ್ಚಿನ ಬೆಲೆಯ ನಿಸರಿ(ಮಿಸರಿ) ತುಪ್ಪ ಸ್ವಾದಿಷ್ಠಕರ ಎಂಬುದು ನಿಜ. ಆದರೆ ನಿಸರಿ ತುಪ್ಪದ ಲಭ್ಯತೆಯ ಪ್ರಮಾಣ ಕಡಿಮೆ. ಕಾರಣ ಜೇನಿಗಿಂತ ಹತ್ತು ಪಟ್ಟು ಚಿಕ್ಕಪ್ರಮಾಣದ ಕೀಟವಾದ ನಿಸರಿ ಸಾಮಾನ್ಯವಾಗಿ ಮನುಷ್ಯನಿಗೆ ತುಪ್ಪತೆಗೆಯಲಾರದಂತಹ ಜಾಗಗಳಲ್ಲಿ ಗೂಡು ಕಟ್ಟಿಬಿಡುತ್ತವೆ. ಕಾಂಪೌಂಡಿನ ಪೊಡಕಿನಲ್ಲಿ ಆವುಗಳ ವಾಸಸ್ಥಾನ. ತುಪ್ಪ ತೆಗೆಯಲು ಹೊರಟರೆ ಕಾಂಪೌಂಡ್ ಧ್ವಂಸ. ಹಾಗಾಗಿ ಅವು ಸೇಫ್. ಇನ್ನು ಅಪರೂಪಕ್ಕೊಬ್ಬರು ನಿಸರಿ ಸಾಕಾಣಿಕೆ ಮಾಡಿದ್ದರೂ ತುಪ್ಪ ಹೇರಳವಾಗಿ ಸಿಗದ ಕಾರಣ ಮಾರುಕಟ್ಟೆಯಲ್ಲಿ ಅಪರೂಪ. ಅವೆಲ್ಲ ನಿಸರಿಯ ಕತೆಯಾಯಿತು ಈಗ ಈ ಲೇಖನಕ್ಕೆ ಕಾರಣವಾಗುವಂತೆ ಒಂದು ನಿಸರಿಯ ತಂಡ ಅಪರೂಪದ ಜಾಗದಲ್ಲಿ ತನ್ನ ಸಂಸಾರ ಹೂಡಿ ಪ್ರತೀವರ್ಷವೂ ಅರ್ದ ಕೆಜಿಯಷ್ಟು ತುಪ್ಪವನ್ನು ಲೀಲಾಜಾಲವಾಗಿ ನೀಡುತ್ತಿದೆ. ಅದರ ವಿಷಯದತ್ತ ಹೊರಳೋಣ. ಸಾಗರ ತಾಲ್ಲೂಕಿನ ತಲವಾಟದ ಜಯಕೃಷ್ಣರವರು ತಮ್ಮ ಅಡಿಗೆ ಮನೆಯಲ್ಲಿನ ಗೂಡು ಎಲ್ಲರಿಗೂ ಕಾಣಿಸಬಾರದೆಂದು ಕ್ಯಾಲೆಂಡರ್ ನೇತುಹಾಕಿದ್ದರು. ಈಗ ನಾಲ್ಕುವರ್ಷದ ಹಿಂದೆ ಅಡಿಗೆ ಮನೆ ಚೊಕ್ಕಟಮಾಡುವಾಗ ಕ್ಯಾಲೆಂಡರ್ ತೆಗೆದರೆ ಕಪ್ಪನೆಯ ರಾಶಿಯೊಂದು ಕಂಡು ಬೆಚ್ಚಿಬಿದ್ದರು. ಟಾರ್ಚ್ ತೆಗೆದುಕೊಂಡು ಬಂದು ಹತ್ತಿರದಿಂದ ನೋಡಿದಾಗ ತಿಳಿದದ್ದು ಅದು ಅಪಾಯಕಾರಿಯಲ್ಲದ ಮತ್ತು ಆದಾಯ ತರುವ ನಿಸರಿ ಗೂಡು ಎಂದು. ಸಾಕಾಣಿಕೆ ಮಾಡಲು ಹೊರಟರೆ ದುರ್ಲಭವಾದ ನಿಸರಿ ಅದಾಗಿಯೇ ಬಂದು ಸೇರಿಕೊಂಡಿತ್ತು.ಗೋಡೆಯ ಆಚೆಬದಿಯ ಸಣ್ಣ ಕಿಂಡಿಯ ಮೂಲಕ ತನ್ನ ಹಾರಾಟವನ್ನು ಮಾಡಿಕೊಂಡು ಗೂಡಿನ ಒಳಗಿನ ಖಾಲಿಜಾಗವನ್ನು ತನ್ನ ತತ್ತಿ ಹಾಗೂ ತುಪ್ಪ ಸಂಗ್ರಹಾಗಾರವನ್ನಾಗಿಸಿಕೊಂಡಿತ್ತು ಅದು. ನಿಸರಿಯ ಗೂಡಿಗೆ ಒಂದೆರಡು ತೂತು ಮಾಡಿ ತಟ್ಟೆ ಇಟ್ಟ ಜಯಕೃಷ್ಣರಿಗೆ ತಟ್ಟೆ ತುಂಬಾ ಸ್ವಾದಿಷ್ಠ ತುಪ್ಪ. ಅಲ್ಲಿಂದೀಚೆಗೆ ಪ್ರತೀ ವರ್ಷವೂ ಪುಕ್ಕಟೆಯಾಗಿ ನಿಸರಿ ತುಪ್ಪ ಸಿಗುತ್ತಿದೆ ಅವರಿಗೆ. ಜತೆಯಲ್ಲಿ ನಿಸರಿಯ ಸಂಸಾರದ ಒಳಹೊರಗನ್ನು ಕಣ್ತುಂಬಾ ನೋಡುವ ಸೌಭಾಗ್ಯವೂ ಅವರದ್ದು. ತುಪ್ಪ ತೆಗೆದನಂತರ ಮತ್ತೆ ಕ್ಯಾಲೆಂಡರ್ ತೂಗುಹಾಕಿ ಮುಂದಿನ ದಿನಾಂಕ ನಿರೀಕ್ಷಿಸುತ್ತಾ ಉಳಿದರಾಯಿತು. ನೋಡಿ ದೇವರು ಕೊಟ್ಟರೆ ಹೇಗೆಲ್ಲಾ ಕೊಡುತ್ತಾನೆ....?
(ವಿಜಯ ಕರ್ನಾಟಕ ಲವಲವಿಕೆ ಯಲ್ಲಿ ಪ್ರಕಟಿತ ಬರಹ)

ಬಾ ಬಾ ಚಿಟ್ಟೆ ಬಿಳಿ ಬಿಳಿ ಚಿಟ್ಟೆಸುಂದರ ಪರಿಸರದ ಬಗ್ಗೆ ಚಿತ್ರಿಸುವಾಗ ಚಿಟ್ಟೆಯನ್ನು ಲೆಕ್ಕಿಸದಿದ್ದರೆ ಅದಕ್ಕೊಂದು ರೂಪವೇ ಬರುವುದಿಲ್ಲ. ಆಹ್ಲಾದಕರ ವಾತಾವರಣ ಎಂದಕೂಡಲೆ ಅಲ್ಲಿ ಬಣ್ಣ ಬಣ್ಣದ ಚಿಟ್ಟೆಗಳ ಹಾರಾಟ ಕಣ್ಮುಂದೆ ತೇಲುತ್ತದೆ. ಮಕ್ಕಳಿಂದ ಮುದುಕರವರೆಗೂ ಚಿಟ್ಟೆಗಳು ಗಮನ ಸೆಳೆದಿದೆ. ಕವಿಗಳಿಂದ ವರೇಣ್ಯರ ಮನಸ್ಸಿನೊಳಗೆ ಚಿಟ್ಟೆಗಳು ದಾಂಗುಡಿಯನ್ನಿಟಿದೆ. ಸಹಸ್ರಾರು ಜಾತಿಯ ಬಣ್ಣದ ಚಿಟ್ಟೆಗಳಲ್ಲಿ ಅಪರೂಪ ಸೌಂದರ್ಯದ ಚಿಟ್ಟೆಗಳೂ ಇವೆ. ಆದರೆ ಅವು ಕಾಣಸಿಗುವುದು ಅಪರೂಪ. ಕಂಡರೂ ಕ್ಯಾಮೆರಾದ ಕಣ್ಣಿಗೆ ಸಿಗುವುದು ಕಷ್ಟ. ಅಂತಹ ಚಿಟ್ಟೆಯೊಂದು ಮೊನ್ನೆ ನನಗೆ ದರ್ಶನ ನೀಡಿತು. ಊಟಕ್ಕೆ ಕುಳಿತಾಗ ಅಟ್ಟಣಿಗೆಯ ಮೇಲೆ ಏನೋ ಬಿಳಿಯ ವಸ್ತು ಗೋಚರಿಸಿದಂತಾಯಿತು. ಊಟ ಅರ್ದಕ್ಕೆ ನಿಲ್ಲಿಸಿ ಹತ್ತಿರ ಹೋದರೆ, ಅಚ್ಚರಿ ಕಾದಿತ್ತು. ಚಿಟ್ಟೆ...!. "ಬಾ... ಬಾ.. ಚಿಟ್ಟೆ ಬಣ್ಣದ ಚಿಟ್ಟೆ" ಎಂದು ಮಕ್ಕಳ ಪದ್ಯದ ಮೂಲಕ ಕರೆಯಿಸಿಕೊಳ್ಳುವ ಬಟರ್ ಫ್ಲೈ. ಸಾಮಾನ್ಯವಾಗಿ ಬಣ್ಣ ಬಣ್ಣದಲ್ಲಿ ಕಾಣಿಸಿಕೊಳ್ಳುವ ಚಿಟ್ಟೆಯಲ್ಲ ಇದು. ಅಚ್ಚ ಬಿಳಿಯ ಬಣ್ಣ...! ದ ಚಿಟ್ಟೆ ಇದು. ವಾವ್ ಅದರ ಸೌಂದರ್ಯ ವರ್ಣಿಸಲದಳ. ಊಟ ಅಷ್ಟಕ್ಕೆ ನಿಲ್ಲಿಸಿ ಕ್ಯಾಮೆರಾ ತರುವಷ್ಟು ಮಟ್ಟಿಗಿನ ಸೌಂದರ್ಯ ಆ ಚಿಟ್ಟೆಗಿತ್ತು. ಕ್ಯಾಮೆರಾ ಕಣ್ಣೊಳಗೆ ಬಿಳಿ ಚಿಟ್ಟೆಯ ಛಾಯೆ ಸೇರಿಕೊಂಡಾಗಲಷ್ಟೆ ಸಮಾಧಾನ ವಾಗಿದ್ದು. ಬಿಳಿ ಚಿಟ್ಟೆಯ ಬೆನ್ನ ಮೇಲೆ ಬರಿಗಣ್ಣಿಗೆ ಕಾಣುವಂತಹ ಬಂಗಾರದ ಬಣ್ಣದ ಎಳೆಗಳು ಇದ್ದರೂ ದುರದೃಶ್ಟವಶಾತ್ ಕ್ಯಾಮೆರಾದ ಕಣ್ಣಿಗೆ ಅದು ಅಷ್ಟೊಂದು ಸಮರ್ಪಕವಾಗಿ ಬೀಳಲಿಲ್ಲ. ಸಾವಧಾನದಿಂದ ಹತ್ತಿರ ಹೋಗಿ ಪಿಳಕ್ ಪಿಳಕ್ ಎಂದು ಹತ್ತೆಂಟು ಬಾರಿ ಕ್ಯಾಮೆರಾ ಕ್ಲಿಕ್ಕಿಸಿದರೂ ಅಲ್ಲಿಂದ ಚಿಟ್ಟೆ ಮಿಸುಕಾಡಲಿಲ್ಲ. ಬಿಳಿಯ ಚಿಟ್ಟೆಯೊಳಗಿನ ಸೌಂದರ್ಯ ನಿಮಗೆ ಸಂಪೂರ್ಣ ತೋರಿಸಲಾಗದಿದ್ದರೂ ಇಷ್ಟರ ಮಟ್ಟಿಗೆ ಸಿಕ್ಕಿತಲ್ಲ ಎಂಬುದೇ ಸಮಾಧಾನ.
(ವಿಜಯ ಕರ್ನಾಟಕ ಲವಲಲವಿಕೆ ಯಲ್ಲಿ ಪ್ರಕಟಿತ)

Thursday, June 17, 2010

ರಾಂ ಭಟ್ರು ಇನ್ನಿಲ್ಲ


ಗೋಕರ್ಣದ ಸರ್ತೆ ಭಟ್ಟರ ಘಟ್ಟದ ಮೇಲಿನ ಯಾತ್ರೆ ಗೊತಿದ್ದವರಿಗೆ ರಾಂ ಭಟ್ರು ಚಿರಪರಿಚಿತ. ವರ್ಷಕ್ಕೊಮ್ಮೆ ಮಹಾಬಲೆಶ್ವರನ ಪ್ರಸಾದ ಹೊತ್ತು ಜತೆಗೆ ಒಂದಿಷ್ಟು ಕಾಯಿಕೊಬ್ಬರಿ ತೆಗೆದುಕೊಂಡು ಘಟ್ಟದಮೇಲೆ ಬಂದು ಅವರವರ ಸರ್ತೆ ಮನೆಗಳಿಗೆ ಪ್ರಸಾದ ತಲುಪಿಸಿ ಅವರು ಕೊಡುವ ಅಡಿಕೆ ಯನ್ನು ತೆಗೆದುಕೊಂಡು ತಮ್ಮ ಜೀವನ ನಿರ್ವಹಣೆ ಮಾಡಿಕೊಳ್ಳುವ ಗೋಕರ್ಣದ ಪುರೋಹಿತರಿಗೆ ಸರ್ತೆ ಭಟ್ರು ಎನ್ನುತ್ತಾರೆ. ಅಂತಹ ಪುರೋಹಿತರುಗಳ ಸಂಖ್ಯೆ ಈಗ ಮಾಯವಾಗಿದೆ. ಕೊನೆಯ ಕೊಂಡಿಯಂತಿದ್ದ ರಾಮ್ ಭಟ್ರು ಮೊನ್ನೆ ವಿಧಿವಶರಾದ ಮೇಲೆ ಇನ್ಯಾರೂ ಬಹುಶಃ ಬರಲಿಕ್ಕಿಲ್ಲ.
ಸಾತ್ವಿಕ ಅಂತ ಉದಾಹರಣೆ ನೀಡುವುದಾದ್ರೆ ಅದು ಈ ರಾಂ ಭಟ್ರಿಗೆ ಸಲ್ಲಬೇಕಿತ್ತು. ಈ ನನ್ನ ಬ್ಲಾಗ್ ಓದುವ ಬಹಳ ಜನಕ್ಕೆ ರಾಮ ಭಟ್ರು ಚಿರಪರಿಚಿತ. ತನ್ಮೂಲಕ ಅವರಿಗೆ ಇದೂ ಓಮ್ದು ಶ್ರದ್ಧಾಂಜಲಿ. ರಾಂ ಭಟ್ರು ಇನ್ನಿಲ್ಲ ಎನ್ನುವುದು ನಮಗೆ ಗೋಕರ್ಣದಲ್ಲಿ ಮಹಬಲೇಶ್ವರ ನೇ ಇಲ್ಲ ಎನ್ನುವಷ್ಟರ ಮಟ್ಟಿಗಿನ ವಿಷಯ. ಮನುಷ್ಯನ ಜೀವನ ಉತ್ತಮ ವಾಗಿತ್ತೋ ಇಲ್ಲವೋ ಎನ್ನುವುದು ಸಾವಿನಲ್ಲಿ ತಿಳಿಯುತ್ತದೆಯಂತೆ. ಸಾತ್ವಿಕರಿಗೆ ಅಂಥಹ ಸಾವೆ ಬಂತು. ಆತ್ಮಕ್ಕೆ ಚಿರ ಶಾಂತಿ ಸಿಗಲಿ.

ಸುಧಾರಣೆಯತ್ತ ಮುಖ ಈಗ ಗೋಕರ್ಣದ್ದು.

"ಗೋಕರ್ಣಂತು ಮಾಹಾಕಾಶಿ ವಿಶ್ವನಾಥೋ ಮಹಾಬಲ: ಕೋಟಿ ತೀರ್ಥೇಶು ಗಂಗಾಯಾಂ ಸಮುದ್ರಂ ಅಧಿಕಂ ಬಲಂ" ಎಂಬ ಶ್ಲೋಕದ ಮೂಲಕ ಗೋಕರ್ಣ ಎಂಬ ಕ್ಷೇತ್ರ ಕಾಶಿಗಿಂತ ಒಂದು ತೂಕ ಹೆಚ್ಚು ಎಂಬ ವಿಚಾರವನ್ನು ಹರಡುತ್ತದೆ. ಇರಲಿ ಯಾವುದು ಹೆಚ್ಚೋ ಯಾವುದು ಕಡಿಮೆಯೋ ನಮಗ್ಯಾಕೆ ಅದರ ಗೊಡವೆ. ಕಾಶಿಯ ವಾಸಿ ಶ್ಲೋಕ ರಚಿಸಿದರೆ ಆತ ಕಾಶಿಯೇ ಮೇಲು ಎಂದು ರಚಿಸಿ ಕಾರಣ ಕೊಡುತ್ತಾನೆ. ಆನಂತರ ಅದು ತರ್ಕಕ್ಕೆ ಬೀಳುತ್ತದೆ. ಬಿಟ್ಟಾಕೋಣ ರಗಳೆಯನ್ನ. ವಿಷಯ ನೋಡೋಣ ಅಲ್ಲ ಓದೋಣ.
ಗೋಕರ್ಣ ಕ್ಕೆ ಈಗ ಕೆಲವರ್ಷದ ಹಿಂದೆ ನೀವು ಹೋಗಿದ್ದರೆ ಅಯ್ಯೋ ಇದೆಂತಾ ಗಲೀಜಪ್ಪಾ ಎಂಬ ಉದ್ಘಾರ ತೆಗೆಯುತ್ತಿದ್ದೀರಿ. ಅಲ್ಲಿ ಬೆನ್ನು ಬೀಳುವ ಭಟ್ರಮಂದಿ ಹೂವು ಕೊಳ್ಳೀ ಎನ್ನುವ ಹಾಲಕ್ಕಿ ಮಂದಿಯ ತಪ್ಪಿಸಿ ಕೊಂಡು ಹೋಗಲು ಹೆಣಗಾಡುತ್ತಿದ್ದಿರಿ. ದೇವಸ್ಥಾನದ ಆವರಣದೊಳಗೆ ಬಂದು ಝಾಂಡಾ ಹೊಡೆಯುವ ಗೋ ಮಯ ಮೆಟ್ಟಿ ಇಶಿಶೀ ಎನ್ನುತ್ತಿದೀರಿ. ಈಗ ತೀರಾ ಹಾಗಿಲ್ಲ. ಬಹಳಷ್ಟು ಬದಲಾವಣೆ ಕಂಡಿದೆ ಗೋಕರ್ಣ. ಆದರೂ ಗೋಕರ್ಣವನ್ನು ಸಮರ್ಪಕ ಪುಣ್ಯಕ್ಷೇತ್ರವನ್ನಾಗಿಸಲು ಸಿಕ್ಕಾಪಟ್ಟೆ ಶ್ರಮದ ಅಗತ್ಯ ಇದೆ. ಒಂದಿಷ್ಟು ಬೆಂಕಿಪೊಟ್ಟಣವನ್ನು ಬೇಕಾಬಿಟ್ಟಿ ಎಸೆದಂತಿರುವ ಪಟ್ಟಣ ಗೋಕರ್ಣ. ಅದನ್ನು ಏಕ್ ದಂ ಸ್ವಚ್ಛ ಕಷ್ಟಸಾದ್ಯದ ಕೆಲಸ.
ಆದರೂ ಈಗ ಮಹಾಬಲೇಶ್ವರ ದೇವ ಅಲ್ಲಿ ಇದ್ದಾನೆ ಎಂಬ ನಂಬಿಕೆ ಬರತೊಡಗಿದೆ. ಮಧ್ಯಾಹ್ನ ಸುಗ್ರಾಸ ಭೋಜನ ಭಕ್ತರಿಗೆ ದೊರಕುತ್ತಿದೆ. ಅದೂ ಸಂಪೂರ್ಣ ಉಚಿತ ಮತ್ತು ಬನ್ನಿ ಬನ್ನಿ ಊಟ ಮಾಡಿ ಎಂಬ ವಿಶ್ವಾಸ ಪೂರ್ವಕ ಕರೆಯದೊಂದಿಗೆ. ಆವರಣ ದಲ್ಲಿ ಕಾಮಗಾರಿ ನಡೆಯುತ್ತಿದೆ. ದೇವಸ್ಥಾನ ಪಳಪಳ ಎನ್ನಲು ಆರಂಭಿಸಿದೆ. ಸುಧಾರಣೆಯತ್ತ ಮುಖ ಈಗ ಗೋಕರ್ಣದ್ದು.