ಹೀಗೆಲ್ಲಾ ಕೇಳುತ್ತಿದ್ದೀನೆಂದು ಬೈಯ್ದುಕೊಳ್ಳಬೇಡಿ.ಅವೆಲ್ಲಾ ಹಾಗೆ ಸುಮ್ಮನೆ.
ಈಗ ಇದನ್ನು ಓದುತ್ತಿರುವ ನೀವು ಹಾಕಿಕೊಂಡ ಒಳ ಚಡ್ದಿಯ ಬಣ್ಣ ಯಾವುದು?. ಇಂದು ಬೆಳಿಗ್ಗೆ ತಿಂದ ತಿಂಡಿ ಏನು?. ಮಧ್ಯಾಹ್ನ ಮಾಡಿದ ಊಟಕ್ಕೆ ಏನೇನೂ ಸೈಡ್ಸ್ ಇತ್ತು. ಯಾವುದದು?. ಇವತ್ತು ಮಾಡಿದ ಸ್ನಾನದಲ್ಲಿ ಎಷ್ಟು ಬಾರಿ ಸೋಪನ್ನು ಕೈಗೆತ್ತಿಕೊಂಡಿದ್ದೀರಿ? . ಇಂತಹ ಪ್ರಶ್ನೆಗಳನ್ನು ನಾನು ಎದುರಿಗಿದ್ದು ಕೇಳಿದ್ದರೆ ತಟ್ಟಿಬಿಡುವಷ್ಟು ಕೋಪ ಬರುತ್ತಿತ್ತು. ಹೋಗಿ ಹೋಗಿ ಒಳಚಡ್ದಿಯ ಬಣ್ಣ ಕೇಳುತ್ತಾನಲ್ಲ ಇಂವ ಎಂತಹ ಜನ ಅಂತ ಅಂದುಕೊಳ್ಳಬೇಕಾದ್ದೆ. ಇರಲಿ ಮುಂದೆ ನಾನು ಬರೆಯುತ್ತಾ ಹೋದಾಗ ಆ ಪ್ರಶ್ನೆಗಳ ಒಳಾರ್ಥ ತಿಳಿದಾಗ ಎಲ್ಲಾ ತಿಳಿಯಾಗುವುದು.
ಹೀಗೆ ದಿಡೀರನೆ ಒಳ ಚಡ್ಡಿಯ ಬಣ್ಣ ಕೇಳಿದಾಗ ಹೇಳಲು ಶೇಕಡಾ ತೊಂಬತ್ತೊಂಬತ್ತು ಜನಕ್ಕೆ ಆಗುವುದಿಲ್ಲ. ನಮ್ಮದೇ ಚಡ್ಡಿ ನಾವೇ ಹಾಕಿಕೊಂಡಿದ್ದು ನಾವೇ ಕೊಂಡು ತಂದಿದ್ದು ಆದರೆ ಈ ಗಳಿಗೆಯಲ್ಲಿ ಅದರ ಬಣ್ಣ ನೆನಪಾಗುವುದಿಲ್ಲ. ಅದಕ್ಕೆ ಮುಖ್ಯ ಕಾರಣ ಅವೆಲ್ಲ ದಿನನಿತ್ಯ ನಡೆಯುವ ಹಾಗೂ ಯಾಂತ್ರಿಕವಾಗಿ ನಡೆಯುವ ಕೆಲಸಗಳು. ಅವುಗಳನ್ನು ನಾವುಗಳು ಎಲ್ಲೋ ಆಲೋಚಿಸುತ್ತಾ ಮಾಡುತ್ತೇವೆ. ಸರಿ ಬಿಡಿ ಚಡ್ಡಿಯದ್ದು ಹಾಗೆ ಬಿಟ್ಟುಬಿಟ್ಟರೆ ಓಕೆ ನಷ್ಟವೇನೂ ಇಲ್ಲ. ಆದರೆ ಇಂತಹ ವೇಗಭರಿತ ದಿನಗಳಲ್ಲಿ ಊಟವನ್ನೂ ನಾವು ಹಾಗೆ ಮಾಡುತ್ತಿದ್ದೇವಾ ಎಂಬ ಅನುಮಾನ ನನಗೆ. ಯಾವುದೋ ಧಾವಂತದಲ್ಲಿ ಕೆಲಸದ ಒತ್ತಡದಲ್ಲಿ ಒಂದಿಷ್ಟು ಗಬಗಬನೆ ತಿಂದು ದೇಹಕ್ಕೆ ಅನ್ಯಾಯ ಮಾಡುತ್ತಿದ್ದೇವಾ? ಎಂಬ ಚಿಂತೆ.
ನಿತ್ಯ ಮನಸ್ಸಿನ ನೆಮ್ಮದಿಗೆ ದೇವರಪೂಜೆಯಂತೆ ದೇಹದ ಸುಸ್ಥಿಗೆ ಊಟ. ಅದು ದೇಹ ದ ಪೂಜೆ ಎಂಬಂತೆ ಮಾಡಬೇಕು. ನಾವು ಈ ಪ್ರಪಂಚದಲ್ಲಿ ನೋಡಬೇಕು , ಓಡಬೇಕು ಏನನ್ನಾದರೂ ಮಾಡಬೇಕು ಅಂದಾದಲ್ಲಿ ದೇಹವಿಲ್ಲದೆ ಅಸಾಧ್ಯ. ಆದರೆ ಮನಸ್ಸಿನ ಲೆಕ್ಕಾಚಾರದಲ್ಲಿ ದೇಹವನ್ನು ಬಹುಪಾಲು ಜನರು ಕಡೆಗಣಿಸುತ್ತಿದ್ದಾರೆ ಎಂಬುದು ಪರಮ ಸತ್ಯ. ಒಂದು ಒಳ್ಳೆಯ ಊಟ ಮಾಡಬೇಕು ಅದಕ್ಕೆ ಕನಿಷ್ಟ ಕಾಲು ಗಂಟೆ ವ್ಯಯಿಸಬೇಕು ಚಪ್ಪರಿಸಿ ಚಪ್ಪರಿಸಿ ತಿನ್ನಬೇಕು, ಉಪ್ಪಿನಕಾಯಿ ನೆಕ್ಕಿ ನಾಲಿಗೆ ಲೊಚ್ ಅನ್ನಿಸಬೇಕು. ತಂಬುಳಿಯಲ್ಲಿ ಸಿಗುವ ಒಂದೊಂದೇ ಸಾಸಿವೆ ಕಾಳನ್ನು ಹೆಕ್ಕಿ ತಿಂದು ಮಜ ಅನುಭವಿಸಬೇಕು. ಊಟವಾದಮೇಲೆ ಡರ್ ಅಂತ ತೇಗಬೇಕು. ಹಾಗೂ ಹೀಗೆ ಊಟ ಮಾಡುವಷ್ಟು ಹೊತ್ತು ಖಡಾಖಂಡಿತವಾಗಿ ಹೊರಪ್ರಪಂಚ, ಭವಿಷ್ಯದ ಜೀವನ, ಬ್ಯಾಂಕ್ ಬ್ಯಾಲೆನ್ಸ್ ಅತಂತ್ರ ನೌಕರಿ ಯಾವುದೂ ನೆನಪಿಗೆ ಬಾರದಷ್ಟು ತನ್ಮಯರಾಗಬೇಕು. ಅದು ನಿಮ್ಮ ದೇಹಕ್ಕೆ ನೀವು ಸಲ್ಲಿಸುವ ಪೂಜೆ. ಅಲ್ಲಿ ಮನಸ್ಸು ಕೇಂದ್ರೀಕೃತವಾಗುತ್ತದೆ. ಮತ್ತೆ ಊಟವಾದ ಮೇಲೆ ಹೊಸ ಹುರುಪು ಬರುತ್ತದೆ.
ಈ ಊಟಕ್ಕೆ ಮೊದಲು ಒಂದು ಸ್ನಾನಾಂತ ಆಗುತ್ತದೆಯಲ್ಲ ಅದೂ ಕೂಡ ಹಾಗೆಯೇ. ತೆಗೆದುಕೊಳ್ಳುವ ಸಮಯ ಹತ್ತೇ ನಿಮಿಷವಾದರೂ ಅಲ್ಲಿ ಸ್ನಾನದಲ್ಲಿ ಮುಳುಗಿಹೋಗಿಬಿಡಬೇಕು. ಸ್ನಾನದ ನಂತರ ಚಂದವಾಗಿ ಗಮನಿಸಿ ಬಟ್ಟೆ ಹಾಕಿಕೊಳ್ಳಬೇಕು. ಈ ಉತ್ತಮ ದೇಹ ಕೊಟ್ಟ ಭಗವಂತನಿಗೆ ದೇಹ ಪೂಜೆಯ ಮೂಲಕ ತ್ಯಾಂಕ್ಸ್ ಅನ್ನಬೇಕು.
ಅದು ಆಗಲಿಲ್ಲವೆಂದಾದಾಗ ನಮಗೆ ಬೆಳಿಗ್ಗೆ ಕಾಫಿ ಕುಡಿಯುವಾಗ ಸ್ನಾನದ ಯೋಚನೆ ಸ್ನಾನ ಮಾಡುವಾಗ ಬಾಸ್ ನ ಯೋಚನೆ ತಿಂಡಿ ತಿನ್ನುವಾಗ ಟ್ರಾಫಿಕ್ ನ ಯೋಚನೆ ಆಫೀಸಿಗೆ ಹೋಗಿ ಕೂತಾಗ ಮನೆಯ ಯೋಚನೆ ಹೀಗೆ ನಾವು ಮಾಡುತ್ತಿರುವ ಕೆಲಸದ ಮುಂದೆ ಅಥವಾ ಹಿಂದೆ ಯೋಚನೆಗಳು ಓಡಾಡುತ್ತಿರುತ್ತವೆ.
ಆವೆಲ್ಲಾ ಚಂದ ಇರಬೇಕು ಎಂದಾದರೆ ವರ್ತಮಾನಕ್ಕೆ ಮನಸ್ಸನ್ನು ಎಳೆತರುವ ಸ್ನಾನ ಊಟ ಮುಂತಾದ ಸುಲಭ ವಿಧಾನವನ್ನು ಒಂದೇ ಒಂದು ದಿನ ಆಚರಿಸಿ ನೋಡಿ ಆವಾಗ ನಿಮಗೆ ಮಾಡಿದ ಊಟ ಹಾಕಿದ ಚಡ್ಡಿ ಬಳಸಿದ ಸೋಪು ಎಲ್ಲಾ ನೆನಪಿರುತ್ತದೆ ಹಾಗೂ ಅ ಖುಷಿ ನಿಮ್ಮ ಎಲ್ಲಾ ಕೆಲಸಗಳಲ್ಲಿಯೂ ಕಾಣುತ್ತದೆ.
ಅಂತಿಮವಾಗಿ :ಇವತ್ತು ಹಾಕಿದ ಚಡ್ದಿಯ ಬಣ್ಣ ಸೋಪಿನ ಲೆಕ್ಕ ಊಟದ ಸೈಡ್ಸ್ ಸರಿಯಾಗಿ ಹೇಳಿದವರಿಗೆ ಈ ಬರಹ ಅಗತ್ಯ ಇಲ್ಲ. ಹ್ಯಾಪಿ ಲೈಫ್ ನಿಮ್ಮದು . ಶುಭ ದಿನ ಎಲ್ಲರಿಗೂ