ಆಹಾರವೆಂಬುದು ಔಷಧಿಯೂ ಆದಾಗ ಆರೋಗ್ಯ ನಳನಳಿಸುತ್ತದೆ. ದಿನನಿತ್ಯ ಮಾತ್ರೆ ನುಂಗುವುದಕ್ಕಿಂತಲೂ ಆಹಾರದ ಜತೆಯಲ್ಲಿ ಔಷಧಿಯುಕ್ತ ಪೌಷ್ಟಿಕಾಂಶ ಸೇವನೆ ವೈದ್ಯರನ್ನು ಗಾವುದ ದೂರ ವಿಡುತ್ತದೆ. ಎಂಬಂತಹ ವಾಕ್ಯಗಳನ್ನು ಹೇಳಲಷ್ಟೆ ಚೆನ್ನ ಅನುಷ್ಠಾನ ಕಷ್ಟಕರ ಎಂಬುದೂ ಸತ್ಯವಾದರೂ ತೀರಾ ಅನುಸರಿಸಲಾಗದ ಸಂಗತಿಯೇನಲ್ಲ. ಔಷಧಿಯುಕ್ತ ಆಹಾರ ಸೇವನೆಗೆ ಮಲೆನಾಡು ಲಾಗಾಯ್ತಿನಿಂದಲೂ ಪ್ರಸಿದ್ಧಿ. ಇಲ್ಲಿನ ಪ್ರಕೃತಿಯಲ್ಲಿ ದೊರಕುವ ಕಾಡು ಜಾತಿಯ ಸೊಪ್ಪುಗಳ ಬಳಕೆ ಬಹಳ ಹಿಂದಿನಿಂದಲೇ ಕಂಡುಕೊಂಡಿದ್ದಾರೆ. ಅವುಗಳ ಸಂಪೂರ್ಣ ಬಳಕೆ ಆಷಾಢಮಾಸದಲ್ಲಿ ಎನ್ನುವುದು ಇನ್ನೊಂದು ಅಂಶ. ಮಲೆನಾಡಿನಲ್ಲಿ ಆಷಾಢವೆಂದರೆ ಕುಂಭದ್ರೋಣ ಮಳೆಗಾಲ. ಮನೆಯಾತನಿಗೆ ಪೇಟೆಗೆ ಹೋಗಿ ತರಕಾರಿ ತರಲೂ ಆಗದಷ್ಟು ಜಡಿ ಮಳೆ. ಮನೆಯ ಪುಟ್ಟ ಹಿತ್ತಲಿನಲ್ಲಿ ಬೆಳಸಿದ ತರಕಾರಿಗಳೆಲ್ಲವೂ ಗಿಡ ಸಮೇತ ಕೊಳೆತು ಹೋಗಿರುತ್ತವೆ. ಆದರೆ ಹೊಟ್ಟೆ ಮಳೆ ಎಂದರೆ ಕೇಳುವುದಿಲ್ಲವಲ್ಲ. ಮನೆ ಮಂದಿಯ ಹೊಟ್ಟೆ ತುಂಬಿಸುವ ಜವಾಬ್ದಾರಿ ಹೊತ್ತ ಮನೆಯಾಕೆ ಮನೆಪಕ್ಕದ ಕಾಡಿಗೆ ಇಳಿಯುವುದೇ ಆವಾಗ.
ಚೊಗಟೆ, ಚಕ್ರಮಣಿ,ಕರಡಿ,ಚಿತ್ರಮೂಲ,ಒಂದೆಲಗ,ಶ್ರೀಗಂಧ, ಕಳಲೆ,ಮರಗೆಸ, ಕಾಡುಗೆಸ, ಗೋಳಿ, ಮುಂತಾದ ನೂರಾರು ಜಾತಿಯ ಸೊಪ್ಪು ತಂಬುಳಿ, ಚಟ್ನಿಯಾಗಿ ಮನೆಯವರ ಹೊಟ್ಟೆ ತುಂಬಿಸುತ್ತದೆ. ಹಾಗೆಯೇ ಆರೋಗ್ಯ ಕೂಡ ನಳನಳಿಸುವಂತೆ ಮಾಡುತ್ತದೆ. ಅತಿ ಮಳೆಯಿಂದ ತಂಡಿಯಾದ ದೇಹದ ಉಷ್ಣತೆ ಹೆಚ್ಚುವಂತೆಯೂ ಮಾಡುತ್ತದೆ ಈ ನೈಸರ್ಗಿಕ ತರಕಾರಿಗಳು.ಆಷಾಡಮಾಸದಲ್ಲಷ್ಟೇ ದೊರಕುವ ಕಳಲೆ ಎಂಬ ಬಿದಿರಿನ ಮೊಳಕೆ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚುವಂತೆ ಮಾಡಿ ವರ್ಷಪೂರ್ತಿ ಆರೋಗ್ಯ ರಕ್ಷಣೆಗೆ ಸಹಾಯ ಮಾಡುತ್ತದೆ.
ಈ ಕಾಡುತರಕಾರಿಗಳು ಕೇವಲ ಔಷಧಿ ಮಾತ್ರವಲ್ಲ ರುಚಿಯೂ ಹೌದು. ಮರಗೆಸದಿಂದ ಮಾಡುವ ಪತ್ರೊಡೆ ಯ ರುಚಿ ಸವಿದವನೇ ಬಲ್ಲ. ಸೊಪ್ಪಿನಿಂದ ಮಾಡುವ ಚಟ್ನಿ ತಂಬುಳಿಗಳ ರುಚಿಯ ನೆನಪು ವರ್ಷಪೂರ್ತಿ ಇರುತ್ತದೆ.ಮಳೆ ಬಿದ್ದಾಕ್ಷಣ ರಸ್ತೆಪಕ್ಕದಲ್ಲಿ ಹುಟ್ಟುವ ಎಲವರೆಗೆ ಚೊಗಟೆ ಮುಂತಾದ ಎಲೆಗಳನ್ನು ಕೊಯ್ದು ಹುರಿದು ಅದಕ್ಕೆ ಜೀರಿಗೆ, ಕಾಯಿ ತುರಿ ಬೆರಸಿ ರುಚಿಗೆ ತಕ್ಕಷ್ಟು ಉಪ್ಪು ಹುಳಿ ಖಾರ ಹಾಕಿ ಸುಲಭದಲ್ಲಿ ಪದಾರ್ಥ ಮಾಡಬಹುದಾದ ಇವುಗಳ ಸವಿರುಚಿ ಗೆ ಮರುಳಾಗದವರಿಲ್ಲ. ಕಾಸು ಖರ್ಚಿಲ್ಲದೆ ತಿಂಗಳುಗಳ ಕಾಲ ಮಲೆನಾಡಿನ ಮಹಿಳೆ ಪ್ರಕೃತಿಯ ಸೊಪ್ಪನ್ನು ಬಳಸಿ ಮನೆಮಂದಿಯ ಆರೋಗ್ಯ ನಳನಳಿಸುವಂತೆ ಮಾಡಿಬಿಡುತ್ತಾಳೆ. ಆರೋಗ್ಯವೇ ಭಾಗ್ಯ ಎಂದಾದ ಮೇಲೆ ಅದೊಂದೆ ಸಾಕು ಇನ್ನು ರುಚಿ ಬೋನಸ್ ಇದ್ದಂತೆ.
(ಇಂದಿನ ವಿಜಯ ಕರ್ನಾಟಕ ಲವಲವಿಕೆಯಲ್ಲಿ ಪ್ರಕಟಿತ)