ವಾವ್ ಅಂತ ಅನ್ನದಿರಲು ಆಗದಲ್ಲ ಈ ಹಸಿರಾಗುವ ಕೆಂಪು ನೋಡಿ. ಇರಲಿ ಆಮೇಲೆ ವಾವ್ ಅಂದರೂ ಆದೀತು ಈಗ ಇದರ ಒಂದು ಸಣ್ಣ ಮಜ ನೋಡೋಣ. ಇದು ಅರಳಿಮರದ ಚಿಗುರು. ಕಲ್ಲಿನ ಸಂದಿಯಲ್ಲಿ ಹುಟ್ಟಿದ್ದರಿಂದ ಕಲ್ಲರಳಿ ಅಂತಲೂ ಅನ್ನಬಹುದು. ಹಾಗಂತ ಕಲ್ಲು ಅರಳುವುದು ಅಂದರೆ ಅರ್ಥವೇ ಇಲ್ಲ ಹಾಗಾಗಿ ಇಲ್ಲಿ ಕಲ್ಲು ಮತು ಅರಳಿ ಬೇರೆ ಬೇರೆ.
ನಿಮ್ಮ ಮನೆಯ ಮುದ್ದು ಕಂದನಿಗೆ ಪೇಟೆಗೆ ಹೋದಾಗ ಅಲ್ಲಲ್ಲ ಶಾಪಿಂಗ್ ಗೆ ಹೋದಾಗ ಪೀ......ಎನ್ನುವ ಪೀಪಿ ಖರೀದಿ ಮಾಡಿದ್ದುಂಟು. ನೀವೂ ಕೂಡ ಬಾಲ್ಯದಲ್ಲಿ ಅದಕ್ಕಾಗಿ ವರಾತ ಮಾಡಿದ್ದು ನನಗೇನು ಎಲ್ಲರಿಗೂ ಗೊತ್ತಿದೆ ಬಿಡಿ. ಈಗ ಈ ಅರಳಿ ಚಿಗುರಿನ ವಿಷಯಕ್ಕೆ ಬರೋಣ. ಚೂಪನೆಯ ಚಿಗುರು ಕಾಣಿಸುತ್ತಿದೆಯಲ್ಲ ಅದನ್ನು ಉಗುರಿನಿಂದ ನಯವಾಗಿ ಚಿವುಟಿ ಸಣ್ಣದಾಗಿ ಕೈಗೆ ಬರುವ ಕಹಳೆಯನ್ನು ನಾಲಿಗೆಯ ಮೇಲಿಟ್ಟುಕೊಂಡು ಉಸಿರು ಒಳಗೆ ತೆಗೆದುಕೊಂಡರೆ ಪಕ್ಕಾ ಪಕ್ಕಾ ಹಕ್ಕಿಯ ಮರಿಯ ದನಿ ಹೊರಡುತ್ತದೆ. ಆಗ ಎರಡೂ ಕೈಯನ್ನು ಗೂಡಾಗಿ ಹಿಡಿದುಕೊಂಡರಂತೂ ನೋಡುಗರಿಗೆ ಕೈಯಲ್ಲಿ ಹಕ್ಕಿ ಮರಿ ಕಿವಿಗೆ ಮರಿಯ ಕೂಗಿನ ಸದ್ದು. ಒಮ್ಮೆ ಎಲ್ಲರೂ "ಅಯ್ಯೋ ಪಾಪ. ಮರಿ ಹಕ್ಕಿ ಬಿಡ ಬಿಡ" ಅನ್ನೋದು ಗ್ಯಾರಂಟಿ ಕೈಯಲ್ಲಿ ಗೋರಂಟಿ ಇದ್ದರಂತೂ ಇನ್ನೂ ಇನ್ನೂ ಗ್ಯಾರಂಟಿ
ಒಟ್ಟಿನಲ್ಲಿ ನಾನು ಏನು ಹೇಳಲು ಹೊರಟಿದ್ದೇನೆಂದರೆ ಪ್ರಕೃತಿ ನಮಗೆ ಪುಕ್ಕಟೆ ಪೀಪಿ ದಯಪಾಲಿಸಿದೆ ಅದಕ್ಕಾಗಿ ಹಣ ವ್ಯಯಿಸಬೇಡಿ. ಗುಡ್ ಡೆ.