Saturday, October 25, 2008

ದೀಪಾವಳಿಯಾದ ದೊಡ್ದಹಬ್ಬ



ದೀಪಾವಳಿ ಹಬ್ಬ ಎಂದರೆ ಬೆಳಕಿನ ಹಬ್ಬ ಅಂತ ಇತ್ತೀಚೆಗೆ ನಮಗೆ ಗೊತ್ತಾದದ್ದು. ಪಟ್ಟಣದ ಸಂಪರ್ಕ ಬಂದಮೇಲೆ ದೀಪಾವಳಿ ಅಂದರೆ ಪಟಾಕಿ ಹಬ್ಬ, ಸಾಲು ಸಾಲು ಹಣತೆಯ ಹಚ್ಚಿಡುವ ಬೆಳಕಿನ ಹಬ್ಬ ಮುಂತಾಗಿ ಅರಿವಾಗಿದ್ದು.ಅಲ್ಲಿಯವರೆಗೆ ಗೋವುಗಳ ಹಬ್ಬ ಎಂದು ನಮ್ಮಲ್ಲಿ ಚಿರಪರಿಚಿತ. ನಮ್ಮಲ್ಲಿ ಪಟಾಕಿ ಯ ಸದ್ದು ಕೇಳಬೇಕೆಂದರೆ ಅದು ಗಣೇಶ ಚೌತಿ. ಹಣತೆಯಲ್ಲಿ ದೀಪ ಹಚ್ಚಿಡಬೇಕೆಂದರೆ ಅದು ಕಾರ್ತಿಕ ಹಬ್ಬ. ಈಗ ಪಟ್ಟಣದಲ್ಲಿ ಟಿವಿಯಲ್ಲಿ ಬೆಳಕಿನ ಹಬ್ಬ ದೀಪಾವಳಿ ಎಂದಮೇಲೆ ದೀಪಾವಳಿಯಂದು ಪಟಾಕಿ ಹಚ್ಚಿ ನಂತರ ಸಂಜೆ ಹಣತೆಯಲ್ಲಿ ದೀಪ ಹಚ್ಚುವ ಪರಿಪಾಟ ಆರಂಭವಾಗಿದೆ. ಆ ಕಾರಣದಿಂದ ದೀಪಾವಳಿಯಲ್ಲಿ ಚೌತಿಯ ಪಟಾಕಿ ಕಾರ್ತಿಕದ ಹಣತೆ ಸೇರಿಕೊಂಡು ಮನೆಯ ಯಜಮಾನನೆಂಬ ಯಜಮಾನನಿಗೆ ಆರ್ಥಿಕ ಹೊರೆ ತುಸು ಹೆಚ್ಚಾಗಿದೆ. ಇರಲಿ ದೀಪಾವಳಿ ಎನ್ನುವ ಹಬ್ಬದ ಆಚರಣೆಯ ಜತೆ ಈ ಹೆಸರೂ ಕೂಡ ನಮಗೆ ಇತ್ತೀಚಿನದ್ದು. ಅದಕ್ಕೂ ಮುಂಚೆ ಇದು ದೊಡ್ಡಬ್ಬ ಎಂಬ ನಾಮಧೇಯದೊಂದಿಗೆ ಇತ್ತು. ದೊಡ್ಡಬ್ಬ ಎಂದು ಕರೆಯಿಸಿಕೊಳ್ಳುತ್ತಿದ್ದ ದೀಪಾವಳಿಗೆ ರಂಗು ಎರಡು ದಿವಸದ ಮೊದಲು ಬೂರೆ ಎಂಬ ಬಲೀಂದ್ರ ಎಂಬ ದೇವರನ್ನು ಸಾಯಂಕಲ ಮನೆ ತುಂಬಿಸಿಕೊಳ್ಳುವುದರಿಂದ ಆರಂಭದ ರಂಗು. ಬೆಳ್ಳಿ ಚೊಂಬಿಗೆ ತೆಂಗಿನಕಾಯಿ ತಲೆಯ ಮೇಲೆ ಇಟ್ಟು ಕಲಶ ಎಂದು ಕರೆಯಿಸಿಕೊಂಡ ಅದು ಬಲಿಯೇಂದ್ರನ ನಾಮಾಂಕಿತಗೊಳ್ಳುತ್ತದೆ. ಅಂದೇ ರಾತ್ರಿ ಊರಿನ ತರುಣರ ಬೂರುಗಳುವಿನ ಮಜ. ವರ್ಷದ ಆ ಒಂದು ರಾತ್ರಿ ಕಳ್ಳತನಕ್ಕೆ ಮುಕ್ತ ಮುಕ್ತ ಮುಕ್ತ.ಸೌತೇ ಕಾಯಿ ಚೆಂಡು ಹೂವು ಮುಂತಾದ ಹಬ್ಬಕ್ಕೆ ಬೇಕಾದ ಅತ್ಯಾವಶ್ಯಕ ವಸ್ತುಗಳನ್ನು ಬೂರೆಗಳುವು ಎಂಬ ಹೆಸರಿನಲ್ಲಿ ಕದಿಯಬಹುದು. ಕದಿಯುವ ಸಂದರ್ಭದಲ್ಲಿ ಸಿಕ್ಕಿಬಿದ್ದರೆ ಮನೆಯ ಯಜಮಾನ ಬೂರೆಗುದ್ದು ಗುದ್ದಬಹುದು. ಇದು ಬೂರೆ ಹಬ್ಬ ದ ಮಜ. ಊರಿನ ಕಡೆ ಈ ಬೂರೆಗಳುವಿನ ಅವಾಂತರಗಳನ್ನು ಒಂದು ಕಾದಂಬರಿಯನ್ನಾಗಿಸಬಹುದು. ಈ ಬೂರೆಗಳುವಿನ ಮುಖ್ಯ ಉದ್ದೇಶ ಮನುಷ್ಯನಲ್ಲಿ ಸುಪ್ತವಾಗಿ ಅಡಗಿರುವ ಕಳ್ಳತನದ ಮನೋರೋಗವನ್ನು ಹೊರಹಾಕುವುದು ಒಂದೆಡೆಯಾದರೆ ಹಬ್ಬಗಳಲ್ಲಿ ಉಳ್ಳವರು ಮಾತ್ರಾ ಮಜ ಉಡಾಯಿಸುವುದಲ್ಲ ಇಲ್ಲದಿದ್ದವರೂ ಆಚರಿಸಿಕೊಳ್ಳಲಿ ಎಂಬ ಸುಪ್ತ ಭಾವನೆ ಅಡಗಿದೆ. ಹೀಗೆ ಬೂರೆ ಮುಗಿದ ಮಾರನೇ ದಿವಸ ರೆಸ್ಟ್ ಆನಂತರದ ದಿವಸ ದೊಡ್ಡಬ್ಬ. ಚುಮು ಚುಮು ಬೆಳಗಿನಲ್ಲಿ ಎದ್ದು, ಕೊಟ್ಟಿಗೆಯಲ್ಲಿನ ಜಾನುವಾರುಗಳಿಗೆ ಬಿಸಿನೀರ ಸ್ನಾನ ಮಾಡಿಸಿ ಪೂಜೆ ಮಾಡಿ ಚೆಂಡು ಹೂವು ಗೋಟಡಿಕೆಯಿಂದ ಅಲಂಕರಿಸಿ ಸಾಮೂಹಿಕವಾಗಿ ದೇವಸ್ಥಾನಕ್ಕೆ ಎಲ್ಲರ ಮನೆಯ ಜಾನುವಾರುಗಳನ್ನು ಅಟ್ಟಿಸಿಕೊಂಡು ಹೋಗಿ ಅಲ್ಲಿ ಪೂಜೆ ಮುಗಿಸಿ ಮಧ್ಯಾಹ್ನ ಮನೆಗೆ ಬಂದು ಹೋಳಿಗೆ ಉಟ ಭಾರಿಸಿದರೆ ದೊಡ್ಡ ಬ್ಬ ಶೇಕಡಾ ತೊಂಬತ್ತು ಮುಗಿದಂತೆ. ನಂತರ ರಾತ್ರಿ ಕಕ್ಕಡಕ್ಕೆ ಬೆಂಕಿ ಹಚ್ಚಿಕೊಂಡು "ದಿಪ್ಪಡ ದಿಪ್ಪಡ ದಿವಾಳ್ಗೆಯೋ.. ಹಬ್ಬಕ್ಕೆ ಮೂರು ಹೋಳ್ಗೆಯೋ.." ಎಂದು ಕೂಗುತ್ತಾ ಕಕ್ಕಡವನ್ನು ಮನೆಯ ಸುತ್ತ ಎದುರು ಊರಿದರೆ ದೊಡ್ಡಹಬ್ಬ ಹಬ್ಬ ಪಿನಿಶ್.

ವರ್ಷದ ಏಕತಾನತೆಯಿಂದ ಹೊರಬರಲು. ನೆಂಟರಿಷ್ಟರೊಡನೆ ಬಾಂಧವ್ಯದ ಬೆಸುಗೆ ಏರ್ಪಡುವ ಹಬ್ಬಗಳು ಇಂದಿನ ಒಂಟಿ ಜೀವನ ಬಯಸುವ ಜಾಯಮಾನದಲ್ಲಿ ತಮ್ಮ ಮೂಲ ಅರ್ಥವನ್ನು ಕಳೆದುಕೊಂಡಿವೆ. ಅರ್ಥಪ್ರಧಾನ ವ್ಯವಸ್ಥೆಯಲ್ಲಿ ಭಾವನಾತ್ಮಕ ವಿಷಯ ವಿಚಾರ ಪೇಲವವಾಗಿವೆ. ಹಳ್ಳಿಯಲ್ಲಿನ ಹವ್ಯಕರ ಮನೆಗಳಲ್ಲಿ ಕೊಟ್ಟಿಗೆಗಳು ಖಾಲಿ ಖಾಲಿ. ಜಾನುವಾರು ಕಟ್ಟುವುದು ಸಾಕುವುದು ಗಲೀಜು, ಲಾಭದಾಯಕವಲ್ಲ ಎಂಬ ಮಿದುಳಿನ ತರ್ಕಕ್ಕೆ ಇಳಿದ ಪರಿಣಾಮ ಬಹಳಷ್ಟು ಮನೆಗಳಲ್ಲಿ ಆ ಕಾರಣದಿಂದ ದೊಡ್ದಬ್ಬ ಎನ್ನುವುದು ದೀಪಾವಳಿ ಆಗಿದೆ. ದೀಪಾವಳಿ ಯ ಹಣತೆ ಬೆಳಕು ಕರೆಂಟ್ ಬೆಳಕಿನಡಿಯಲ್ಲಿ ಎಷ್ಟೋ ಮನೆಯನ್ನು ಬೆಳಗಿಸುವ ತಾಕತ್ತು ಕಳೆದುಕೊಂಡಿದೆ. ಹಣತೆ ಮಸುಕು ಮಸುಕಾಗಿ ಕಾಣಿಸುತ್ತಿದೆ. ಮನೆಯ ಹಿರಿಯರ ಯಾಜಮಾನಿಕೆಯಲ್ಲಿ ನಡೆಯುವ ಹಬ್ಬಗಳು ಆಧುನಿಕತೆಯ ಭರಾಟೆಯಲ್ಲಿ ಬುದ್ಧಿವಂತರು ಎಂದು ಕರೆಯಿಸಿಕೊಂಡ ಈಗಿನ ತಲೆಮಾರಿನವರು ಕೇಳುವ ಪ್ರಶ್ನೆಗಳಿಗೆ ಉತ್ತರಿಸಲಾಗದೆ ನೀರಸವಾಗುತ್ತಿದೆ. ಕಾಲಚಕ್ರ ಉರುಳುತ್ತಾ ಉರುಳುತ್ತಾ ಮತ್ತೆ ಅವೆಲ್ಲಾ ಮರುಕಳಚಿದರೂ ಆಶ್ಚರ್ಯವಿಲ್ಲ. ಕಾರಣ ಮನುಷ್ಯನಿಗೆ ಆರಂಭದಿಂದಲೂ ಹುಡುಕುವ ಹುಚ್ಚು , ಕಳೆದ ನೆಮ್ಮದಿ, ಇರದ ಬಾಂಧವ್ಯ,ವನ್ನು ಅರಸುತ್ತಾ ಹೊರಟರೆ ಮತ್ತೆ ಈ ದೊಡ್ಡಹಬ್ಬ ತನ್ನ ಹಳೆಯ ಮೆರುಗನ್ನು ಹಳೆಯ ವೈಭವಕ್ಕೆ ಕರೆದೊಯ್ದರೂ ಒಯ್ಯಬಹುದು.

ಕೊನೆಯದಾಗಿ: ಈ ಸಾಲು ಸಾಲು ಹಬ್ಬಗಳನ್ನು ಆಚರಿಸಬೇಕೇಕೆ? ಎಂದು ಆನಂದರಾಮ ಶಾಸ್ತ್ರಿಗಳನ್ನು ಕೇಳಿದೆ." ಈ ವರ್ಷ ಹಬ್ಬ ಆಚರಿಸದಿದ್ದರೆ ಮುಂದಿನ ವರ್ಷ 'ಹೋದ್ವರ್ಷ ಹಬ್ಬ ಎಷ್ಟು ಚೆನ್ನಾಗಿತ್ತು' ಎಂದು ಅಲವತ್ತುಕೊಳ್ಳಲು ಆಗುವುದಿಲ್ಲವಲ್ಲ , ಆ ಕಾರಣಕ್ಕಾದರೂ ಈ ವರ್ಷ ಹಬ್ಬ ಆಚರಿಸಬೇಕು." ಎಂದರು. ನಾನು ಮಗುಮ್ಮಾದೆ.

ನಿಮ್ಮ ಬಾಳಿನ ದೀಪಕ್ಕೆ ಶುದ್ಧ ಎಣ್ಣೆ ದೊರೆತು ಜಗತ್ತಿಗೆ ಬೆಳಗಲಿ ಎನ್ನುತ್ತಾ ದೊಡ್ಡಹಬ್ಬದ ಶುಭಾಶಯಗಳು ನನ್ನಿಂದ ಹಾಗೂ ನಮ್ಮ ಆನಂದರಾಮ ಶಾಸ್ತ್ರಿಗಳಿಂದ.