Thursday, July 22, 2010

ಐಸ್ ಒಳಗೆ ಹೋಟೆಲ್ಲು


ಅತಿ ಸೆಕೆಯಿಂದ ಬಾಯಾರಿಕೆಯಾದಾಗ ಹೊಟೆಲ್ ಗೆ ಹೋಗಿ ತಣ್ಣನೆಯ ಐಸ್ ಯುಕ್ತ ಪಾನೀಯಗಳನ್ನು ಬಯಸುವುದು ಸಹಜ. ಅದು ಬೆಚ್ಚನೆಯ ಹೋಟೆಲ್ ನ ಐಸ್ ಬಳಸಿ ಮಾಡಿದ ತಿನಿಸು. ಆದರೆ ಇಡೀ ಹೊಟೆಲ್ ಐಸ್ ನದ್ದಾದರೆ ಹೋಗಿ ತಿನ್ನುವುದು ಏನನ್ನು?. ಹಾಗೊಂದು ವ್ಯವಸ್ಥೆ ಜಪಾನ್ ನ ಹೊಕ್ಕಿಯಾಡೊ ದ್ವೀಪದಲ್ಲಿ "ಟೊಮ್ಮಾಮು ಐಸ್ ವಿಲೇಜ್" ನಿರ್ಮಿಸಿಬಿಟ್ಟಿದ್ದಾರೆ. ಈ ಹೋಟೆಲ್ ನಲ್ಲಿ ಗೋಡೆಗಳು ಕೂರುವ ಖುರ್ಚಿಗಳು ಟೇಬಲ್ ಗಳು ಕೊನೆಯದಾಗಿ ಲೋಟ ತಟ್ಟೆಗಳೂ ಸೇರಿದಂತೆ ಎಲ್ಲವೂ ಐಸ್ ಮಯ. ಐಸ್ ಲೋಟದಲ್ಲಿ ನೀಡುವ ಪಾನೀಯ ಗಟಗಟ ಕುಡಿಯದಿದ್ದರೆ ಅಲ್ಲಿಯೇ ಹಿಮದ ಗಡ್ಡೆಯಾದರೂ ಆಶ್ಚರ್ಯವಿಲ್ಲ. ಹಾಗಾಗಿ ಬಿಸಿ ಬಿಸಿ ಕಾಫಿಯನ್ನೂ ಇಲ್ಲಿ ತಣ್ಣಗೆ ಕುಡಿಯಬೇಕು. ಉಳಿದುಕೊಳ್ಳುವ ರೂಂ ಲಿವಿಂಗ್ ಹಾಲ್ ಎಲ್ಲಾ ಐಸ್‌ಮಯವಾದರೂ ಸದ್ಯ ಬೆಡ್‌ಶೀಟ್ ಗಳು ಮಾಮೂಲಿಯಾಗಿಯೇ ಇವೆ ಎಂಬುದು ಬೆಚ್ಚನೆಯ ಮಾತು.
ಈ ಹೋಟೆಲ್ ಎಲ್ಲರಿಗೂ ಒಗ್ಗದು. ಇಲ್ಲಿ ಉಳಿಯಲು ಸ್ವಲ್ಪ ಐಸ್ ನ್ನು ನಿರ್ವಹಿಸುವ ತಾಕತ್ತು ದೇಹಕ್ಕಿರಬೇಕು. ಕೇವಲ ದೇಹದ ತಾಕತ್ತೊಂದಿದ್ದರೆ ಸಾಲದು ಜೇಬಿನ ತಾಕ್ತೂ ಗಟ್ಟಿಯಿರಬೇಕು. ಒಂದು ರಾತ್ರಿ ಇಲ್ಲಿನ ಐಸ್ ಕೋಣೆಯಲ್ಲಿ ತಂಗಲು ಜೋಡಿಯೊಂದಕ್ಕೆ ತಗಲುವ ವೆಚ್ಚ ೬೯೬ ಯೆನ್ ಅಂದರೆ ಸರಿ ಸುಮಾರು ೩೫೦೦೦...! ರೂಪಾಯಿಗಳು ಮಾತ್ರಾ. ಬಹಳಷ್ಟು ಜನ ದರ ಕೇಳಿಯೇ ಫ್ರೀಜ್ ಆಗಿಬಿಡುವ ಸಾದ್ಯತೆ ಇರುವುದರಿಂದ ತೀರಾ ಅಲ್ಲಿಗೆ ಹೋಗಿ ಅನುಭವಿಸುವುದರಲ್ಲಿ ಅರ್ಥವಿಲ್ಲ ಅಂದುಬಿಡಬಹುದು. ಆದರೂ ಇಲ್ಲಿ ರೂಂ ಗಳು ಸಿಗಬೇಕೆಂದರೆ ತಿಂಗಳುಗಟ್ಟಲೆ ಮುಂಚಿತವಾಗಿ ಬುಕಿಂಗ್ ಮಾಡಬೇಕು. ಫೆಬ್ರವರಿ ೧೫ ರ ನಂತರ ಸೆಕೆ ಜಾಸ್ತಿಯಾಗಿ ಹಿಮ ಕರಗಿ ಹೊಟೇಲ್ ಮುಚ್ಚುವುದರಿಂದ ಅಷ್ಟರೊಳಗೆ ಹೋಗಿ ಜೇಬು ಕರಗಿಸುವ ಕಾರ್ಯಕ್ರಮ ಹಾಕಿಕೊಳ್ಳಬೇಕು. ಇಷ್ಟೆಲ್ಲಾ ಇದ್ದರೂ ಹೊಕ್ಕಿಯಾಡೊ ದ ಈ ಐಸ್ ಹೋಟೆಲ್ಲಿಗಿಂತ ಸ್ವೀಡನ್ ದೇಶದ ಐಸ್ ಹೋಟೆಲ್ ಗಳು ಬಹು ಉತ್ತಮವಂತೆ. ಇವೆಲ್ಲದಕ್ಕಿಂತ ಅಲ್ಲಿ ಒಂದುರಾತ್ರಿ ತಂಗುವ ದುಡ್ಡಿನಲ್ಲಿ ಇಲ್ಲಿ ದೊಡ್ಡ ಫ್ರಿಜ್ ತಂದು ದಿನಾರಾತ್ರಿ ತಣ್ಣಗೆ ಮಲಗಿಕೊಳ್ಳಬಹುದು ಎಂಬುದು ಬುದ್ಧಿವಂತರ ಮಾತು
(ಇಂದಿನ ವಿಜಯ ಕರ್ನಾಟಕ ಲವಲವಿಕೆಯಲ್ಲಿ ಪ್ರಕಟಿತ ಬರಹ)

Tuesday, July 20, 2010

ಶ್ರೀಖಂಡ ತಿನ್ನಲು ಸಿದ್ಧ ....!


ಈ ಚಿತ್ರದಲ್ಲಿ ನೀವು ನೊಡಬೇಕಾದ್ದು ರಂಗು ರಂಗಿನ ಕೆಂಪು ಬಣ್ಣ ಅಲ್ಲ, ಕಪ್ಪು ಗೋಡೆಯಲ್ಲಿನ ಹಸೆಗೋಡೆಯ ಬರಹವೂ ಅಲ್ಲ,ನೆಲಕ್ಕೆ ಹಾಕಿದ ಗ್ರಾನೈಟೂ ಅಲ್ಲ. ಇಷ್ಟೆಲ್ಲಾ ಅಂದಮೇಲೆ ನೋಡಬೇಕಾದ್ದು ಏನು ಅಂತ ಉಳಿದೆರಡರ ಬಗ್ಗೆ ನಾನು ಹೇಳಬೇಕಾಗಿಲ್ಲ. ಆದರೆ ಅದರ ರುಚಿ ಮಜದ ಬಗ್ಗೆ ಹೇಳಬೇಕಿದೆ.
ಶ್ರೀಕಂಠಾ.....ವಿಷಕಂಠಾ.... ಹಾಡು ನೀವು ಕೇಳಿರಬಹುದು. ನನಗೆ ಆ ಹಾಡು ಕೇಳಿದಾಗಲೆಲ್ಲಾ ನೆನಪಾದಾಗಲೆಲ್ಲಾ ಈ ಶ್ರೀಖಂಡ ನೆನಪಾಗಿಬಿಡುತ್ತದೆ. ಆದರೆ ಇಲ್ಲಿ ಅಮೃತ ಕಂಡಾ ಎಂದು ತಿದ್ದಿಕೊಳ್ಳಬೇಕಷ್ಟೆ. ಈ ಶ್ರೀಖಂಡ( ಬಹುಶಃ ಬೇರೆ ಬೇರೆ ಕಡೆ ಬೇರೆ ಹೆಸರು ಇರಬಹುದು) ಅತ್ಯಂತ ಸುಲಭದಲ್ಲಿ ಮಾಡಬಹುದಾದ ಅತ್ಯಂತ ಶ್ರೀಮಂತ ಸಿಹಿ. ಮೊಸರನ್ನು ಒಂದು ಶುದ್ಧ ಬಟ್ಟೆಯೊಳಗೆ ಹಾಕಿ ಗಂಟು ಕಟ್ಟಿ ಚಿತ್ರದಲ್ಲಿದ್ದಂತೆ ನೇತು ಹಾಕಿದರೆ ಅರ್ದ ಕೆಲಸ ಮುಗಿದಂತೆ. ನಾಲ್ಕೈದು ತಾಸಿನ ನಂತರ ಬಟ್ಟೆ ಗಂಟು ಬಿಚ್ಚಿದರೆ ನೀರು ಕಳೆದುಕೊಂಡ ಮೊಸರು ಸಿದ್ಧ. ಅದಕ್ಕೆ ಸಕ್ಕರೆ ಕೇಸರಿ ಗೋಡಂಬಿ ಗಳನ್ನು ಹಾಕಿ ಗುಟಾಯಿಸಿದರೆ ಶ್ರೀಖಂಡ ತಿನ್ನಲು ಸಿದ್ಧ. ಅಕಸ್ಮಾತ್ ಇದನ್ನು ಸಿಕ್ಕಾಪಟ್ಟೆ ತಿಂದು ಲ್ಯಾಟ್ರೀನ್ ಸಹವಾಸ ಜಾಸ್ತಿಯಾದರೂ ಚಿಂತೆಯಿಲ್ಲ, ಅದನ್ನೆಲ್ಲಾ ತಲೆಗೆ ಹಚ್ಚಿಕೊಳ್ಳುವುದು ಬೇಡ...!. ಶ್ರೀಖಂಡ ದಿಂದ ಬಸಿದ ನೀರಿಗೆ ಜೀರಿಗೆ ಮೆಂತ್ಯ ಹಾಕಿ ಕಷಾಯ ಮಾಡಿಕುಡಿದರೆ ತೂಬು ಬಂದ್. ಹಾಗಾಗಿ ಎಷ್ಟು ತಿಂದರೂ ಇನ್ನೂ ಬೇಕು ಎನ್ನುವ ಶ್ರೀಖಂಡ ಪಕ್ಕಾ ಪಕ್ಕಾ ರುಚಿಯ ಜತೆಗೆ ಔಷಧಿಯನ್ನೂ ಕೊಡುತ್ತದೆಯಂತೆ(ಈ ಔಷಧಿಯನ್ನು ನಾನು ಪರೀಕ್ಷಿಸಿ ನೋಡಿಲ್ಲ, ಪರಿಣಾಮ ದುಷ್ಪರಿಣಾಮಕ್ಕೆ ನಾನು ಹೊಣೆಯಲ್ಲ). ಮೊಸರು ಹೆಚ್ಚಾಗಿ ವ್ಯರ್ಥವಾಗುವುದರ ಬದಲು ಹೀಗೆ ಬಳಸಿಕೊಳ್ಳಬಹುದು. (ಜತೆಯಲ್ಲಿ ಸಕ್ರೆ ಗೋಡಂಬಿ ಕೇಸರಿ ಖರ್ಚು ಎಕ್ಟ್ರಾ....!) . ಇವತ್ತೇ ಮಾಡಿರಲ್ಲ, ನಂಗಂತೂ ಕರೆಯುವುದು ಬೇಡ ನಮ್ಮ ಮನೆಯಲ್ಲಿ ತಯಾರಾಗಿ ನಿಂತಿದೆ. ಸಾದ್ಯವಾದರೆ ಇಲ್ಲಿಗೆ ಬನ್ನಿ.

Monday, July 19, 2010

ಭತ್ತವ ಬಿತ್ತಿ ಚಿತ್ರವ ಬೆಳೆದು


ಜಪಾನ್ ಎಂಬ ದೇಶದ ಹೆಸರು ಕೇಳಿದ ತಕ್ಷಣ ನೆನಪು ಮೂಡುವುದು ತಂತ್ರಜ್ಞಾನದ್ದು. ಎರಡನೇ ಮಹಾಯುದ್ದಕಾಲದಲ್ಲಿ ನಡೆದ ಧಾಳಿಯ ತೀವ್ರತೆ ಎಷ್ಟಿತ್ತೆಂದರೆ ಜಪಾನ್ ಇನ್ನು ಶತಮಾನಗಳ ಕಾಲ ಮುಂದೆಬಾರದು ಎನ್ನುವಂತಿತ್ತು. ಆದರೆ ಪ್ರಪಂಚದ ನಿರೀಕ್ಷೆ ಹುಸಿಯಾಯಿತು ಕೆಲ ದಶಕಗಳಲ್ಲಿ ಜಪಾನ್ ಮೈ ಕೊಡವಿಕೊಂಡು ಮುಂದುವರೆದ ರಾಷ್ಟ್ರಗಳ ಪಟ್ಟಿಯಲ್ಲಿ ವಿರಾಜಮಾನವಾಯಿತು. ಅಷ್ಟೊಂದು ವೇಗದಲ್ಲಿ ಜಪಾನ್ ಪುಟಿದೇಳಲು ಕಾರಣ ಅಲ್ಲಿಯ ಜನರ ಆತ್ಮಸ್ಥೈರ್ಯ ಬುದ್ಧಿಮತ್ತೆ ಎಂಬುದು ನಿಜವಾದರೂ ಅವರು ತೊಡಗಿಕೊಳ್ಳುವ ಪರಿ ಅಂತಹದ್ದು ಎನ್ನುವುದು ಸತ್ಯ. ಮಾಡುವ ಕೆಲಸ ಯಾವುದಾದರೂ ಆಗಲಿ ಅಲ್ಲಿನ ತನ್ಮಯತೆ, ವಿಶಿಷ್ಠ ದೃಷ್ಟಿಕೋನ ಜಪಾನ್ ನ್ನು ಮೇಲಕ್ಕೇರಿಸಿದೆ. ಅದಕ್ಕೊಂದು ಉದಾಹರಣೆ ಈ ಚಿತ್ರಗಳು.
ಭತ್ತವ ಬಿತ್ತಿ ಅಕ್ಕಿಯ ರೂಪದ ಪ್ರತಿಫಲವನ್ನು ಎಲ್ಲಾ ದೇಶಗಳಲ್ಲಿಯೂ ಪಡೆಯುತ್ತಾರೆ. ಆದರೆ ಭತ್ತದ ಸಸಿಯಮೂಲಕ ತಮ್ಮ ಕಲೆಯನ್ನು ಅನಾವರಣಗೊಳಿಸುವ ಕೆಲಸ ಒಲಿದದ್ದು ಜಪಾನಿಯರಿಗೆ ಮಾತ್ರಾ. ವಿವಿಧ ಬಣ್ಣದ ವಿವಿಧ ಜಾತಿಯ ಭತ್ತವನ್ನು ಬಳಸಿ ತಮ್ಮ ಬೃಹತ್ ಹೊಲದಲ್ಲಿ ಭತ್ತದ ಸಸಿಗಳ ಮೂಲಕ ಚಿತ್ರಗಳನ್ನು ಹರಡಿಬಿಡುತ್ತಾರೆ ಜಪಾನ್ ರೈತರು. ಸಸಿಗಳು ಬೆಳೆದ ನಂತರ ರೈತರು ಬಯಸಿದ್ದ ಚಿತ್ರಗಳಾಗಿ ಅವು ಮಾರ್ಪಡುತ್ತವೆ. ನೆಪೋಲಿಯನ್‌ನ ಭಾವಚಿತ್ರ, ಕುದುರೆ ಸವಾರನ ಚಿತ್ರ ಮುಂತಾದವುಗಳನ್ನು ಭತ್ತದ ಸಸಿಗಳ ಮೂಲಕ ನಿರ್ಮಿಸಿದ ಜಪಾನ್ ನ ಇಂಕಾದೇತ್, ಯೊನೆಜೇವಾ, ಮುಂತಾದ ಊರಿನ ಪ್ರಮುಖ ಆಕರ್ಷಣೆ ಈ ಚಿತ್ರಗಳದ್ದು. ಇಲ್ಲಿ ಕೃತಕ ಬಣ್ಣಗಳ ಬಳಕೆಯಿಲ್ಲ. ಎಲ್ಲವೂ ಪ್ರಕೃತಿಯ ಕೊಡುಗೆಯೇ. ವಿವಿಧ ತಳಿಗಳ ಭತ್ತದ ತಳಿಗಳನ್ನು ಈ ಚಿತ್ರಗಳಿಗಾಗಿಯೇ ಕಾಪಾಡಿಕೊಂಡು ಬರಲಾಗುತ್ತಿದೆ. ಭತ್ತ ಬಿತ್ತಿದ ನಂತರ ಸುಮಾರು ಒಂದೆರಡು ತಿಂಗಳುಗಳ ಅಂದರೆ ಅಗಸ್ಟ್ ಸಪ್ಟೆಂಬರ್ ಗಳಲ್ಲಿ ಆಕಾಶದಿಂದ ಅಥವಾ ಎತ್ತರದ ಪ್ರದೇಶದಿಂದ ಅದ್ಬುತವಾಗಿ ಕಾಣುವ ಈಚಿತ್ರವನ್ನು ನೋಡಲು ಪ್ರತೀ ವರ್ಷ ಸಾವಿರಾರು ಪ್ರವಾಸಿಗರು ಆಗಮಿಸುತ್ತಾರೆ.
೧೯೯೩ ರಲ್ಲಿ ಹೀಗೆ ಭತ್ತದ ಗದ್ದೆಗಲಲ್ಲಿ ಸಣ್ಣ ಪ್ರಮಾಣದಲ್ಲಿ ಸಹಜವಾದ ಚಿತ್ರ ಬಿಡಿಸುವ ಕಲೆ ರೈತರ ಖುಷಿಗಾಗಿ ಆರಂಭವಾಯಿತು. ನಂತರದ ದಿನಗಳಲ್ಲಿ ತಂತ್ರಂಜ್ಞರ ಹೆಚ್ಚಿನ ಆಸಕ್ತಿಯಿಂದಾಗಿ ಇದರ ವ್ಯಾಪ್ತಿ ವಿಸ್ತರಿಸುತ್ತಾ ಸಾಗಿತು. ೨೦೦೫ ರ ನಂತರವಂತೂ ಭತ್ತದ ಗದ್ದೆಯ ಈ ಕಲೆ ಜಪಾನ್ ದೇಶದ ಹಲವೆಡೆ ಆವರಿಸಿತು. ಇದರ ಸಿದ್ಧತೆಗಾಗಿ ಹಳ್ಳಿಗಳಲ್ಲಿ ಜನ ಸಭೆ ಸೇರಿ ತೀರ್ಮಾನ ಕಗೊಳ್ಳುವಮಟ್ಟಿಗೆ ಬೆಳೆದು ನಿಂತಿತು. ಭೂಮಾಲಿಕರು ಹಾಗೂ ಈ ತರಹ ಚಿತ್ರಬಿಡಿಸುವ ಕಲಾವಿದರ ನಡುವೆ ಒಪ್ಪಂದಗಳು ಏರ್ಪಟ್ಟು ವಿವಿಧ ಬಗೆಯ ಚಿತ್ರಗಳು ಗದ್ದೆಗಳಲ್ಲಿ ಮೂಡತೊಡಗಿದವು. ತನ್ಮೂಲಕ ರೈತರಿಗೆ ಪ್ರವಾಸಿಗರಿಂದ ಉಪ ಆದಾಯವೊಂದು ಬರುವಂತಾಯಿತು. ಮಾಡುವ ಕೆಲಸದಲ್ಲಿ ವೈವಿಧ್ಯವನ್ನು ಗುರುತಿಸುವ ಮನಸ್ಥಿತಿಯಿದ್ದರೆ ಏನನ್ನೂ ಸಾಧಿಸಿ ಫಲ ಕಾಣಬಹುದು ಎನ್ನುವುದಕ್ಕೆ ಜಪಾನ್ ರೈತರ ಈ ಭತ್ತದ ಗದ್ದೆಗಳು ಸಾಕ್ಷಿಯಾಗಿನಿಂತಿವೆ.
(ಇಂದಿನ ವಿಜಯಕರ್ನಾಟಕ ಲವಲವಿಕೆಯಲ್ಲಿ ಪ್ರಕಟಿತ)