Saturday, January 10, 2009

ಎರಡು ಬ್ಲಾಗ್ ಗಳು ಮತ್ತೊಂದು ವಂಶವೃಕ್ಷ


"ಉಸುಕಿನ ಬದುಕಿನಲ್ಲಿಮುಸುಕೊಳಗಿನ ಅಳು ನಗುವಿಗಿಂತಮೌನವು ಸ್ಥಿರವಾಗಿತ್ತುಸಮಾಧಿಯಾಗುವ ಕಾತುರದಲ್ಲಿ." ಹೀಗೊಂದು ಕವನ ಮುಕ್ತಾಯ ಕಾಣುತ್ತದೆ ನಮ್ಮ ಶಿವು.ಕೆರವರ(http://chaayakannadi.blogspot.com/)
ಛಾಯಾಕನ್ನಡಿ ಯಲ್ಲಿ. ಚಂದದ ಫೊಟೋ ತೆಗೆಯುವುದೂ ಒಂದು ಕಲೆ ಅದಕ್ಕೊಂದು ಒಪ್ಪ ಓರಣವಾಗಿ ಅಡಿಬರಹ ಅಥವಾ ಕವನ ಅಥವಾ ನುಡಿಗುಚ್ಛ ನೀಡುವುದಿದೆಯಲ್ಲ ಅದಕ್ಕೊಂದು ಸಂಯಮ ಸಮಾಧಾನ ಬೇಕು. ಶಿವು ರವರು ತುಂಬಾ ಅಚುಕಟ್ಟಾಗಿ ತಮ್ಮ ಬ್ಲಾಗಿನಲ್ಲಿ ಅದನ್ನು ನೆರವೇರಿಸಿಕೊಡುತ್ತಾರೆ. ಎಲ್ಲೋ ಪುರುಸೊತ್ತು ಆದಾಗ ಬರೆಯುವುದು ಬೇರೆ ವಿಷಯ ಆದರೆ ಇಲ್ಲಿ ಹಾಗಲ್ಲ ತಮ್ಮ ಕೆಲಸದ ನಡುವೆಯೂ ಹೀಗೆ ತಮ್ಮ ಆಸ್ತಿಯಾದ ಫೋಟೊಗಳನ್ನು ಬರಹಗಳನ್ನೂ ಗೆ ಉದಾರವಾಗಿ ನಮಗೆ ಉಣಿಸುವ ಶಿವು ಮನೆಗೆ ಒಮ್ಮೆ ಭೇಟಿಕೊಟ್ಟರೆ ನಮಗಂತೂ ಖುಷ್ ಖುಷಿ ಗ್ಯಾರಂಟಿ. ಶಿವೂಗೆ ತ್ಯಾಂಕ್ಸ್.

" ಅಲ್ಲ ಕಣಾ , ತಾನೊಬ್ಬನೇ ದೊಡ್ಡ ಮರ್ವಾದಸ್ತ ಅಂದ್ಕಂಡಾನೇನಾ ಆ ರಾಮಪ್ಪ ? ನಾಯೇನ್ ಮರ್ವಾದೆ ಬಿಟ್ಟೀನೇನಾ? ನೋಡಾ, ನಾನು ಇಸ್ಫೀಟ್ ಆಡ್ತೀನಿ, ಹೆಂಡ ಕುಡೀತೀನಿ , ಚರಂಡ್ಯಾಗ್ ಬಿದ್ದಿರ ಬಹುದು ಕಣಾ . ಆದ್ರೆ , ಮರ್ವಾದೆ ಬಿಟ್ಟೀನನಾ? ಹೇಣ್ತೀಗ್ ಹೊಡಿತಿನಿ ," ಎನ್ನುವ ಪಕ್ಕಾ ಪಕ್ಕಾ ಮಲೆನಾಡಿನ ಆಡುಮಾತನ್ನು ಯಥಾವತ್ತಾಗಿ ಬಳಸಿ ಪರಮಾತ್ಮ ಆಡಿಸಿದಂತೆ ..... ಎಂಬ ಬರಹವನ್ನು ಮನಸೆಂಬ ಹುಚ್ಚು ಹೊಳೆ... ಬ್ಲಾಗ್ ನ ಮೂಲಕ ಚಿತ್ರಾ ಹೆಗಡೆ ನಮ್ಮನ್ನು ತಲುಪುತ್ತಾರೆ. ಆಡು ಮಾತನ್ನು ಯಥಾವತ್ತಾಗಿ ಅಕ್ಷರ ರೂಪಕ್ಕಿಳಿಸುವುದು ಸ್ವಲ್ಪ ಕಷ್ಟಕರ. ಅದು ಅಭ್ಯಾಸವಾಯಿತೆಂದರೆ ಯಶಸ್ಸು ತನ್ನಿಂದ ತಾನೆ. ನಮ್ಮ ಶಾಂತಲಾ ಭಂಡಿ ಯವರ ಬರಹದಂತೆ (ಅಯ್ಯೋ...ಇಷ್ಟ್ ಲಗು ಆನು ಸತೋಜಿ ಮಾಡ್ಕ್ಯಂಡ್ಯನೆ?’) ಚಿತ್ರಾ ರ ಬರಹಗಳೂ ಇಷ್ಟವಾಗುತ್ತವೆ. ಮರಾಠಿಯಿಂದ ಅನುವಾದಿಸಿದ ಈ ಪ್ರೇಮ ಸಂಭಾಷಣೆ .. ... ಚಿತ್ರಾ ಖುಷ್ ನೀಡುವಲ್ಲಿ ನಿಮಗೆ ಖಂಡಿತಾ ಇಷ್ಟವಾಗುತ್ತಾರೆ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಒಮ್ಮೆ ಈ ಎರಡೂ ಬ್ಲಾಗ್ ಗೆ ಹೋಗಿ ಬನ್ನಿ ಆಮೇಲೆ ಸತ್ಯವೋ ಸುಳ್ಳೋ ಅಂತ ಇಲ್ಲಿ ಅಥವಾ ಅಲ್ಲಿ ಕಾಮೆಂಟಿಸಿ.
ಇಷ್ಟು ಈ ವಾರದ ಬ್ಲಾಗಾಯಣ ಈ ಭವಿಷ್ಯ ಬಲ್ಲವರ್ಯಾರು?. ಇದ್ದರೆ ಮತ್ತೆ ನೋಡೋಣ? ಇಷ್ಟು ಹೋತ್ತು ನಿಮ್ಮ ಅಮೂಲ್ಯ ಸಮಯ ನಿಡಿದ್ದಕ್ಕೆ ಧನ್ಯವಾದಗಳು.

ವಂಶವೃಕ್ಷ.:- ನಿಮ್ಮ ಅಪ್ಪ ಅಮ್ಮ ನ ಹೆಸರು ನಿಮಗೆ ಗೊತ್ತು ಅಜ್ಜ ಅಜ್ಜಿಯ ಹೆಸರೂ ಗೊತ್ತು ಅದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿ ಮುತ್ತಜ್ಜ ಅಜ್ಜಿಯದೂ ಗೊತ್ತು. ಆದರೆ ಸತ್ಯ ಹೇಳುತ್ತೇನೆ ನಿಮಗೆ ನಿಮ್ಮ ಮುತ್ತಜ್ಜನ ಅಪ್ಪ ಅಮ್ಮನ ಹೆಸರು ಗೊತ್ತಿಲ್ಲ. ಈ ಸಮಸ್ಯೆ ನಿಮಗೆ ನಿವಾರಣೆ ಮಾಡುವುದು ನಿಮ್ಮ ಮನೆಯಲ್ಲಿ ವಂಶಗಳು ಹರಿದು ಬಂದ ಮಾಹಿತಿ ತಿಳಿಸುವ ವಂಶವೃಕ್ಷ ದ ಚಾರ್ಟ್ ಇದ್ದಿದ್ದರೆ ಅದು ನಿಮಗೆ ತಿಳಿದಿರುತ್ತಿತ್ತು. ಆದರೆ ಅದಿಲ್ಲ. ಮಾಡುವುದೇನು ಈಗ ಎಂಬ ಪ್ರಶ್ನೆ ಸಹಜ. ಸರಿ ಹೋಗಲಿ ಬಿಡಿ ಇದೇ ಸಮಸ್ಯೆ ನಿಮ್ಮ ಮರಿ ಮಗನಿಗೆ ಬರುವುದು ಬೇಡ. ಅದಕ್ಕಾಗಿಯೇ ಸುಲಭದಲ್ಲಿ ವಂಶವೃಕ್ಷ ವನ್ನು ವ್ಯವಸ್ಥಿತವಾಗಿ ದಾಖಲಿಡಲು http://onefamily.ibibo.com/Tree ನವರು ಉಚಿತವಾಗಿ ವ್ಯವಸ್ಥೆ ಮಾಡಿದ್ದಾರೆ. ನಿಮಗೆ ಸಮಯವಿದ್ದಾಗಲೆಲ್ಲ ಅಲ್ಲಿ ಭೇಟಿ ನೀಡಿ ನಿಮ್ಮ ಕುಟುಂಬಗಳ ಬಗ್ಗೆ ನಿಮಗೆ ತಿಳಿದಿರುವಷ್ಟು ಮಾಹಿತಿಯನ್ನು ದಾಖಲಿಸಿ. ಅಲ್ಲಿಯೇ ನಿಮಗೆ ತಿಳಿಯದ್ದು ಕುಟುಂಬದ ಇತರೆ ಸದಸ್ಯರಿಗೆ ಮೈಲ್ ಮಾಡುವ ವ್ಯವಸ್ಥೆ ಇದೆ ಬಳಸಿಕೊಳ್ಳಿ. ಮುಂದಿನ ತಲೆಮಾರಿಗೆ ನಿಮ್ಮ ಹೆಸರು ಅಜರಾಮರವಾಗಲಿ.
ಕೊನೆಯದಾಗಿ: ಯಾರು ಭವಿಷ್ಯದ ಬಗ್ಗೆ ಅತಿಯಾಗಿ ಚಿಂತಿತರಾಗಿದ್ದಾರೋ ಅವರಿಗೆ ವರ್ತಮಾನದಲ್ಲಿ ಯಾವ ಸಮಸ್ಯೆಯೇ ಇಲ್ಲ. ವರ್ತಮಾನದಲ್ಲಿ ಸಮಸ್ಯೆ ಇರುವವರಿಗೆ ಭವಿಷ್ಯದ ಚಿಂತೆಗೆ ಸಮಯವೇ ಇರುವುದಿಲ್ಲ.

Tuesday, January 6, 2009

ಕಾ ಕೆ ಕಾಹಾ ಕಾಂ ಕೆ ಕಾಹಾ

ಕಾ ಕೆ ಕಾಹಾ
ಕಾಂ ಕೆ ಕಾಹಾ
ಕಯಾ ಕಾಭ್ಯಾಂ ಕೈಹಿ...
ಹೀಗೆ ಸಂಸ್ಕೃತ ಮೇಷ್ಟ್ರು ನಮಗೆ ಪಾಠ ಮಾಡುತ್ತಿದ್ದರೆ ನಾವು ಕಾಕೆ ತರಹ ಕೂಗಾಡುತ್ತಿದ್ದೆವು. ಅದು ಎಂಟನೇ ಕ್ಲಾಸಿನಲ್ಲೋ ಒಂಬತ್ತನೇ ಕ್ಲಾಸಿನಲ್ಲಿಯೋ ಸಂಸ್ಕೃತದ ರಾಮ: ರಾಮೌ ರಾಮಾ: ತರಹದ ವಿಭಕ್ತಿ ಪ್ರತ್ಯಯದ ಅಭ್ಯಾಸಗಳು. ಅದು ಯಾಕೆ ಬೇಕು? ಹಾಗೆ ಕಲಿತರೆ ನಾವು ಏನಾಗಬಹುದು? ಮುಂತಾದ ಅಂದಿನ ಪ್ರಶ್ನೆಗಳಿಗೆ ಸಮರ್ಪಕವಾದ ಉತ್ತರ ನನಗೆ ಗೊತ್ತಿಲ್ಲ. ಗಣಿತದ ಎ ಪ್ಲಸ್ ಬಿ ಹೋಲ್ ಸ್ಕ್ವೇರ್ ಇದ್ದಂತೆ. ಅದು ಮುಂದೆ ನಮ್ಮ ಜೀವನದಲ್ಲಿ ಎಲ್ಲಿ ಸಹಾಯಕ್ಕೆ ಬರುತ್ತದೆ ಅಂತ ಇಲ್ಲಿಯವರೆಗೆ ಅನುಭವಕ್ಕೆ ಬಂದಿಲ್ಲ. ಇರಲಿ ಅದು ಡಾಕ್ಟರ್ ಇಂಜಿನಿಯರ್ ಮುಂತಾದ ದುಡ್ಡು ಮಿಂಟ್ ಮಾಡುವ ಉದ್ಯೋಗಗಳಿಗೆ ಅವಶ್ಯಕತೆ ಇರಬಹುದು. ಕಾಕೆ ಕಾ: ಅಥವಾ ರಾಮ: ರಾಮೌ ಪುರೋಹಿತರ ವೃತ್ತಿಗೆ ಕೆಲಸಕ್ಕೆ ಬರಬಹುದು ನಾನು ಅಲ್ಲಿ ಏಗಿದವನಲ್ಲ ಹಾಗಾಗಿ ನನಗೆ ಅದು ಗೊತ್ತಿಲ್ಲ. ಅಪ್ಪಯ್ಯ ಘನಂದಾರಿ ಪುರೋಹಿತರು ಆದ್ದರಿಂದ ನಾನು ರಾಮ: ಕಲಿತಿದ್ದರೆ ಚಂಡಿಹವನದ ಅದ್ಧೂರ್ಯಕ್ಕೆ ವಿಭೂತಿ ಬಳಿದು ಕುಳಿತುಕೊಳ್ಳಬಹುದಿತ್ತು. ಎ ಪ್ಲಸ್ ಬಿ ಯನ್ನಾದರೂ ಕಲಿತಿದ್ದರೆ ದೂರದ ದೇಶದಲ್ಲೇಲ್ಲೋ ಇಂಜನಿಯರ್ ಆಗಬಹುದಿತ್ತು ಆದರೆ ನಾನು ಅವೆರಡನ್ನೂ ಮಾಡಲಿಲ್ಲ. ನಾನು ಹಿಡಿದುಕೊಂಡ ಕೃಷಿಯೆಂಬ ಕೃಷಿಯ ಪಾಠವನ್ನು ಅವರ್ಯಾರೂ ಕಲಿಸಲಿಲ್ಲ. ಪಾಪ ಅವರನ್ನು ದೂರುವುದು ತಪ್ಪು ಆ ಪಠ್ಯದಲ್ಲಿ ಇರಲಿಲ್ಲ. ಮುಂದೆ ಮುಂದೆ ಓದಿ ಕೃಷಿಯ ಪದವಿಯನ್ನು ಆರಿಸಿಕೊಂಡರೆ ಅಲ್ಲಿ ಇದೆಯಂತೆ. ಅದು ಮುಂದಿನದಾಯಿತು ಬೇಸಿಕ್ ನಲ್ಲಿ ಇಲ್ಲ. ಹಾಗಾಗಿ ನಾನು ಪರಿಸ್ಥಿತಿ ಬಂದ ಹಾಗೆ ಬದುಕನ್ನಾಯ್ದುಕೊಂಡೆ. ಹಾಗಾಗಿ ಕಾಕೆ ಕಾಹಾ ವೂ ಎ ಪ್ಲಸ್ ಬಿ ಗಳನ್ನೂ ವೇಸ್ಟ್ ಮಾಡಿದೆ.

ಮೊನ್ನೆ ಬೆಂಗಳೂರಿನ ಶಾಲೆಯೊಂದರಲ್ಲಿ ಓದುತ್ತಿರುವ ನಾಲ್ಕನೆ ಕ್ಲಾಸಿನ ಹುಡುಗನೊಬ್ಬನನ್ನು ನೋಡಿದೆ( ಆ ಶಾಲೆಯ ಕಲಿಕೆಯ ವಿದಿವಿಧಾನಗಳೇ ವಿಚಿತ್ರ) ಆತ ಮೈಲಿಗಟ್ಟಲೆ ಆರಾಮವಾಗಿ ಈಜುತ್ತಿದ್ದ.ಚಕಚಕನೆ ಮರ ವೇರಿ ಇಳಿಯುತ್ತಿದ್ದ. ಕಾಡೊಳಗೆ ಯಾವ ಅಂಜಿಕೆಯೂ ಇಲ್ಲದೆ ನುಗ್ಗುತ್ತಿದ್ದ . ಅವನಲ್ಲಿ ಪ್ರಕೃತಿಯೊಡನೆ ಬಾಳಿ ಬದುಕಲು ಬೇಕಾದ ಎಲ್ಲಾ ಧೈರ್ಯದ ಪಾಠಗಳು ಮಿಳಿತಗೊಂಡಿತ್ತು. ನಮ್ಮ ಸಂಪ್ರದಾಯಗಳಲ್ಲಿ ಮನೆಯ ಅಪ್ಪಿ ಸಂಧ್ಯಾವಂದನೆ ಮಾಡಿದರೆ ಅದು ದೊಡ್ಡ ಸಾಧನೆ. ಅಕಸ್ಮಾತ್ ನೀರಿಗಿಳಿಯುವ ಸಂದರ್ಭ ಬಂದರೆ ಕೈಕಾಲು ಬಡಿದುಕೊಂಡು ಹೇತ್ಲಾಂಡಿಯಾಗಿಬಿಡುತ್ತಾನೆ. ನೀರಿನಲ್ಲಿ ಈಜುವುದು ಎಂಬುದು ಪ್ರಾಣಿಗಳಿಗೆ ಪ್ರಕೃತಿ ನೀಡಿದ ಸಹಜ ಕ್ರಿಯೆ. ಆದರೆ ಮನುಷ್ಯರೆಂಬ ಮನುಷ್ಯರಾದ ನಾವು ಶಿಷ್ಟಾಚಾರ ಶಿಸ್ತು ಎಂಬ ಸೋಗಿನಲ್ಲಿ ಅಂತಹ ಸಹಜವಾದ್ದಕ್ಕೆ ಹೆದರಿಕೆಯೆಂಬ ಆಹಾರವನ್ನು ನೀಡಿ ಚಿವುಟಿಬಿಟ್ಟಿದ್ದೇವೆ. ಟ್ವಿಂಕಲ್ ಟ್ವಿಂಕಲ್ ಹಾಡು ಹೇಳಿತು ಮಗು ಎಂದರೆ ಅಪ್ಪಾಅಮ್ಮಂದಿರಾದ ನಮಗೆ ಆಕಾಶ ಮೂರೇಗೇಣು. ಯು ಕೆ ಜಿ ಯಲ್ಲಿ ಹೆಚ್ಚು ಅಂಕ ಪಡೆದರೆ ಮಾರ್ಕ್ಸ್ ಕಾರ್ಡ್ ಹಿಡಿದು ಬೀದಿ ಬೀದಿ ಅಲೆದು ನಮ್ಮ ಮಗು ಜೋರು ಎಂಬುದನ್ನು ಸಾರಿ ಬರುತ್ತೇವೆ. ಹೀಗೆ ಪ್ರಕೃತಿಯಿಂದ ದೂರವಾದ ಮಕ್ಕಳು ತಮ್ಮ ಜೀವನದ ಧನಾರ್ಜನೆಗೆ ಒಂದು ಭವಿಷ್ಯದ ಯಂತ್ರವಾಗುತ್ತವಷ್ಟೆ. ಆದರೆ ಪ್ರಪಂಚ ಹೀಗೆಯೇ ಇರುವುದಿಲ್ಲ ಬದಲಾಗುತ್ತಿರುತ್ತದೆ ಎಂಬುದಕ್ಕೆ ಮತ್ತೆ ಬೆಂಗಳೂರಿನ ಆ ಶಾಲೆಯೇ ಸಾಕ್ಷಿ. ಇತಿಹಾಸ ಮರುಕಳಚುತ್ತದೆ ಎಂಬುದಕ್ಕೆ ಹೊಸ ಉದಾಹರಣೆ ಬೇಡ.
ಜೀವನ ಹಳ್ಳಿಯಲ್ಲಾಗಲಿ ಪಟ್ಟಣದಲ್ಲಾಗಲಿ ಆದರೆ ಜೀವನಾರಂಭದಲ್ಲಿ ಮಕ್ಕಳ ಕಲಿಕೆಯ ಅವಸ್ಥೆಯಲ್ಲಿ ಪ್ರಕೃತಿ ಸಹಜವಾದದ್ದು ಕಲಿತುಬಿಡಬೇಕು. ಕಾಕೆ ಕಾಹಾ ಯಾವಾಗ ಬೇಕಾದರೂ ಕಲಿಯಬಹುದು ಆದರೆ ಪ್ರಕೃತಿ ಸಹಜವಾದ ಈಜು ಮರ ಹತ್ತುವುದು ಮೈಲುಗಟ್ಟಲೆ ನಡೆಯುವುದು ಎಲ್ಲಾ ಮುದುಕರಾದ ಮೇಲೆ ಕಲಿಯಲು ಆಗದು. ಆದರೆ ವಿಪರ್ಯಾಸ ವೆಂದರೆ ನಮ್ಮ ಹಳ್ಳಿಗಳಲ್ಲೇ ಪಟ್ಟಣ ನೋಡಿ ಬೆಳೆಯುತ್ತಿರುವ ಮಂದಿಯಿಂದಾಗಿ ಶೇಕಡಾ ತೊಂಬತ್ತು ಮಂದಿಗೆ ನೀರು ಎಂದರೆ ಭಯ ಕಾಡು ಎಂದರೆ ಹೆದರಿಕೆ ಜೇನು ಎಂದರೆ ಅಮ್ಮಾ... ನಡೆಯುವುದು ಎಂದರೆ ಅಯ್ಯೋ... ಹಾಗಾಗಿ ಎ ಪ್ಲಸ್ ಬಿ ಅನಿವಾರ್ಯ!.
ಆಗಲಿ ಮಕ್ಕಳು ಇಂಜನಿಯರ್ ಆಗಲಿ ಡಾಕ್ಟರ್ ಆಗಲಿ ಕೋಟಿಗಟ್ಟಲೆ ಸಂಪಾದಿಸುವಂತಾಗಲಿ ಆದರೆ ಅದರ ನಡುವೆ ಅಕ್ಕಿ ಭತ್ತದಿಂದಲೂ ಭತ್ತ ಗಿಡದಿಂದಲೂ ಗಿಡ ಭೂಮಿಯಿಂದಲೂ ಎಂಬ ತತ್ವ ಬಾಲ್ಯದಲ್ಲಿಯೇ ತಿಳಿದಿರಲಿ. ನೀರು ನಮ್ಮ ಮಿತ್ರ ಅದರ ಗೆಳೆತನ ಬೇಕು ಕಾಡು ಮರ ಇದ್ದರೆ ನಾವು ಮುಂತಾದ ವಿಷಯಗಳಲ್ಲಿ ಧೈರ್ಯ ವಿಶ್ವಾಸ ತುಂಬಿರಲಿ.

Sunday, January 4, 2009

ಕ್ರಿಸ್ಟಿನಾ ಎಂಬ ಜರ್ಮನಿ ಹುಡುಗಿ


"ಹಲೊ ಚೆನಾಗಿದೀರಾ? ಹೋ..ಗಿ ಬರ್ತೇನೆ.... ವಾವ್ ಇತ್ಸ್ ಬ್ಯೂತಿಪುಲ್, ಊತ ಆಯ್ತಾ" ಇವಿಷ್ಟು ಕ್ರಿಸ್ಟಿನಾಳ ಕನ್ನಡ. ದೂರದ ಜರ್ಮನಿಯಿಂದ ಈ ಇಪ್ಪತೈದು ವರ್ಷದ ಹುಡುಗಿ ಹೊನ್ನೇಮರಡೆಂಬ ಕಾಡಲ್ಲಿ ಬಂದು ಠಿಕಾಣಿ ಹೂಡಿದ್ದಾಳೆ. ಜರ್ಮನಿಯ ಯುನಿವರ್ಸಿಟಿಯಲ್ಲಿ ಪಿ ಎಚ್ ಡಿ ಮಾಡುತ್ತಿದ್ದಾಳೆ. ಆಕೆ ಆರಿಸಿಕೊಂಡ ವಿಷಯ ಪರಿಸರಕ್ಕೆ ಸಂಬಂಧಪಟ್ಟದ್ದು. ಹಾಗಾಗಿ ಆಕೆಗೆ ಹೊನ್ನೇಮರಡು ಪ್ರಶಸ್ತವಾದ ಸ್ಥಳ.
ನೀವುಹೊನ್ನೇಮರಡುವನ್ನು ನೋಡಿದ್ದೀರೋ ಇಲ್ಲವೋ ಗೊತ್ತಿಲ್ಲ. ಗುಂಪುಗುಂಪಾಗಿ ಒಂದಿಷ್ಟು ಜನ ಬಂದುಬೋಟಿಂಗ್ ಮಾಡಿ ಜಾಕೆಟ್ ಬುಕ್ ಮಾಡಿ ಈಜಿಕೊಂಡು ನಾಲ್ಕೈದು ತಾಸು ಕಳೆಯಲು ಒಳ್ಳೆಯ ಜಾಗ. ಆದರೆ ಅಲ್ಲಿಯೇ ಮೂರ್ನಾಲ್ಕು ತಿಂಗಳು ಕಾಲ ಎಲ್ಲಿಗೂ ಹೋಗದೇ ಕಾಲ ಕಳೆಯಬೇಕೆಂದರೆ ತಲೆ ಸರಿ ಇಟ್ಟುಕೊಳ್ಳುವುದು ಕಷ್ಟಕರ. ನೀರವ ಮೌನ ಹಕ್ಕಿಯ ಚಿಲಿಪಿಲಿ ಮರಗಳ ತಿಕ್ಕಾಟದ ಶಬ್ಧ ಎಲ್ಲವೂ ವಾರಕ್ಕೊಮ್ಮೆಯೋ ತಿಂಗಳಿಗೊಮ್ಮೆಯೋ ಆದರೆ ಬಲು ಚೆನ್ನ. ಪಟ್ಟಣದ ಗೌಜು ಗದ್ದಲ ಪಿಚ್ಚೆನಿಸಿದರೆ ಅಂತಹ ಸ್ಥಳ ಅಪ್ಯಾಯಮಾನವಾಗಿರುತ್ತದೆ. ಆದರೆ ನಿತ್ಯ ಅಷ್ಟೇ ಆದರೆ ಇಷ್ಟೆಯಾ? ಎಂಬ ಭಾವನೆ ಅರಳಿ ಹೊಟ್ಟೆಯೊಳಗಿನಿಂದ ಒಂಥರಾ ಬೇಸರವೆನಿಸಿಬಿಡುತ್ತದೆ. ಆದರೆ ಹೊನ್ನೆಮರಡುವಿನಲ್ಲಿ ಇಪ್ಪತ್ತು ವರ್ಷದಿಂದ ಇರುವ ಎಸ್.ಎಲ್.ಎನ್ ಸ್ವಾಮಿ ದಂಪತಿಗಳಿಗೆ ಹಾಗೆ ಅನ್ನಿಸಲಿಲ್ಲ. ಬಿಡಿ ಸ್ವಾಮಿ ಇಲ್ಲಿಯವರೇ ಆಗಿಬಿಟ್ಟಿದ್ದಾರೆ ಕ್ರಿಸ್ಟಿನಾ..? ಆಕೆಯ ಧೈರ್ಯಕ್ಕೆ ಪಿ ಎಚ್.ಡಿ ಮಾಡುವ ಉತ್ಸಾಹಕ್ಕೆ ಮೆಚ್ಚಲೇ ಬೇಕು. ಇಪ್ಪತ್ತದು ವರ್ಷದ ಆ ಹುಡುಗಿ ಕಾಡಿನ ಮನೆಯಂತಿರುವ ಮನೆಯಲ್ಲಿ ಒಮ್ಮೊಮ್ಮೆ ಒಬ್ಬಂಟಿಯಾಗಿಯೂ ಇರಬೇಕಾಗಿಬರುತ್ತದೆ. ಆದರೂ ಆಕೆ ಖುಷ್ ಖುಷಿಯಿಂದ ಈಜುತ್ತಲೋ ಬರೆಯುತ್ತಲೋ ಕಾಲ ಹಾಕುತ್ತಿದ್ದಾಳೆ. ಮಾರ್ಚ್ ವರೆಗೆ ಅವಳ ವೀಸಾ ಇದೆಯಂತೆ ಅಲ್ಲಿಗೆ ಅವಳ ಪಿಎಚ್ ಡಿ ಯ ಅವಧಿ ಕೂಡ ಮುಗಿಯುತ್ತಂತೆ ನಂತರ ಜರ್ಮನಿಗೆ ತೆರಳಿ ದಾಕ್ಟ ರೇಟ್ ಗೆ ಕುತ್ತಿಗೆಯೊಡ್ಡಿ ನಿಂತರಾಯಿತು.
ಹೀಗೆ ಹಿನ್ನೀರಿನ ಪರಿಸರ ಎಂತೆಂತಹಾ ವಿಷಯಕ್ಕೆ ಬಳಕೆಯಾಗುತ್ತಿದೆ. ಈಜು ಕಲಿಯಲು. ಪಿಎಚ್ ಡಿ ಪೈರ್ ಕ್ಯಾಂಪ್ ಕಯಾಕಿಂಗ್, ಬೋಟಿಂಗ್. ಹತ್ತು ಹಲವು. ಆದರೆ ಇದೇ ಹಿನ್ನೀರು ಸಹಸ್ರಾರು ಕುಟುಂಬವನ್ನು ಮುಳುಗಿಸಲು ಕಾರಣವಾಗಿದೆ. ಶರಾವತಿ ನದಿಯ ಪಾತ್ರಗಳಲ್ಲಿ ಜನಜೀವನ ಕಂಡುಕೊಂಡಿದ್ದ ನೂರಾರು ಕುಟುಂಬಗಳು ಇಂದು ಎಲ್ಲೆಲ್ಲಿಯೂ ಹಂಚಿ ಪಂಚಂಪಾಡು ಅನುಭವಿಸುತ್ತಿದೆ. ಅಂದು ಸರ್ಕಾರ ಕೊಟ್ಟ ಜಮೀನು ಇಂದಿನವರೆಗೂ ಮಂಜೂರಿ ಪಡೆಯಲಾರದೆ ನಿತ್ಯ ಅಲೆದಾಟ ಮುಂದುವರೆಸಿವೆ. ಪಾಪ ಅವುಕ್ಕೆ ಪಿಎಚ್ ಡಿ ಇರಲಿ ಪಚಡಿಯೂ ಇಲ್ಲ. ಆದರೆ ತುಂಬಿ ನಿಂತ ನೀರು ವಿದ್ಯುತ್ ರೂಪ ತಾಳಿ ಜಗತ್ತನ್ನು ಬೆಳಗುತ್ತಿದೆ. ಮುಳುಗಿದವರ ಬದುಕೊಂದನ್ನು ಬಿಟ್ಟು.
ಕ್ರಿಸ್ಟಿನಾ ಳ ಬಳಿ ಹೀಗೆ ಬದುಕು ಕಳೆದುಕೊಂಡವರ ಕಥೆ ನನ್ನ ಹರಕು ಮುರುಕು ಇಂಗ್ಲೀಷ್ ನಲ್ಲಿ ಹೇಳಿದೆ. ಆಕೆಗೆ ಹೀಗೊಂದು ವಿಷಯ ಈ ಶಾಂತ ನೀರಿನ ಹಿಂದಿದೆ ಅಂತ ಅಂದಾಜು ಮಾಡಲೂ ಆಗಿರಲಿಲ್ಲವಂತೆ. ಪಾಪ ಪಿಚ್ ಎಂದಳು. ಮಾರನೆ ದಿವಸ ಅವಳ ನೋಡಲು ಬಂದಿದ್ದ ಅಪ್ಪ ಅಮ್ಮ ನನ್ನುಕರೆದುಕೊಂಡು ನಮ್ಮ ಮನೆಯ ನೋಡಲು ಬಂದಳು. ಹಾಗೂ ಅಲ್ಲಿ ಮುಳುಗಿದ ನೀವು ಇಲ್ಲಿ ಎದ್ದಿರಲ್ಲ ಎಂದಳು. ಎಲ್ಲ ಮಾಡಿದ್ದು ಅಪ್ಪ ಅಮ್ಮ ಎನ್ನುತ್ತಾ ನಾನು ನಕ್ಕೆ..