Wednesday, February 17, 2010

ಹಣ್ಣು ಸಿಕ್ಕಾಗ ಒಮ್ಮೆ ರುಚಿ ನೋಡಿ.


ಚುಮು ಚುಮು ಚಳಿಗಾಲ ಮುಗಿಯುತ್ತಾ ಬಂತು. ನಮ್ಮ ಮಲೆನಾಡಿನಲ್ಲಿ ಅಷ್ಟೇನು ಭೀಕರವಲ್ಲದ ಬೇಸಿಗೆ ಆರಂಭ. ಈ ಬೇಸಿಗೆ ಆರಂಭವಾಯಿತೆಂದರೆ ನಮ್ಮಲ್ಲಿನ ಹುಡುಗರಿಗೆ ಶಾಲೆ ಮುಗಿಯುವ ದಿವಸ. ಅಷ್ಟಾದಮೇಲೆ ರಜದಲ್ಲಿ ಗುಡ್ಡ ಸುತ್ತುವುದೇ ಕೆಲಸ. ನಗರ ಪಟ್ಟಣದ ಮಕ್ಕಳು ಸಿನೆಮಾ ಹಾಲ್ ಗೆ ಮುತ್ತಿದ ಹಾಗೆ ನಮ್ಮಲ್ಲಿನ ಹುಡುಗರು ಗುಡ್ಡ ಮುತ್ತುತ್ತಾರೆ. ಅಲ್ಲಿದೆ ಅವಕ್ಕೆ ಮಜ. ಆ ಮಜಕ್ಕೆ ಮುಖ್ಯ ಕಾರಣ ಕಾಡು ಹಣ್ಣುಗಳು. ಪರಿಗೆ-ಮುಳ್ಳು ಹಣ್ಣು-ಕೌಳಿ ಹಣ್ಣು-ಜಾವಣಿಗೆ ಹಣ್ಣು- ಹೀಗೆ ನಾನಾ ತರಹದ ಹಣ್ಣು ಗಳ ಖಜಾನೆ ಅಲ್ಲಿ ಮಕ್ಕಳಿಗಾಗಿ ತೆರೆದಿರುತ್ತದೆ. ಸಿಕ್ಕಿದ್ದು ಇವರಿಗೆ ಸಿಗದ್ದು ಹಕ್ಕಿಗಳಿಗೆ. ಆ ಕಾಡು ಹಣ್ಣುಗಳಿಗೋ ಒಂದು ವಿಶಿಷ್ಠ ರುಚಿ. ಅತ್ತ ಸಿಹಿಯೂ ಅಲ್ಲದ ಇತ್ತ ಹುಳಿಯೂ ಅಲ್ಲದ ಹಣ್ಣುಗಳ ಸಂಖ್ಯೆ ಸ್ವಲ್ಪ ಜಾಸ್ತಿ. ಅಂತಹ ಒಂದು ಅದ್ಭುತ ಹಣ್ಣುಗಳ ಪಟ್ಟಿಗೆ ಸೇರುವುದು ಈಗ ನೀವು ಚಿತ್ರದಲ್ಲಿ ನೋಡಿದ ಹಲಗೆ ಹಣ್ಣು.
ಈ ಹಲಗೆ ಹಣ್ಣು (ಬೇರೆಡೆ ಬೇರೆ ಹೆಸರು ಕರೆಯಬಹುದು) ಒಮ್ಮೆ ತಿಂದರೆ ನಿಮಗೆ ಮುಂದೆ ಆ ಹಣ್ಣು ನೋಡಿದಾಗ, ನೋಡಿದಾಗ ಏನು ಹಲಗೆ ಹಣ್ಣು ಎಂಬ ಹೆಸರು ಕೇಳಿದಾಗ ಬಾಯಲ್ಲಿ ಛಳ್ ಅಂಥ ನೀರು ಉಕ್ಕುತ್ತದೆ. ತೆಳ್ಳನೆಯ ಬೂದಿ ಬಣ್ಣದ ಹರಪಲು ಮುಚ್ಚಿಕೊಂಡಿರುವ ಇದನ್ನು ನಮ್ಮ ಅಂಗಿಗೆ ನಿಧಾನ ಉಜ್ಜಿಕೊಳ್ಳಬೇಕು ಆಗ ಕಡು ಕೆಂಪು ಬಣ್ಣದ ಒಳಮೈ ಹೊರಚಾಚುತ್ತದೆ. ಆಗ ತಿನ್ನುವುದಕ್ಕಿಂತ ನೋಡುವುದೇ ಅಂದ. ನಂತರ ನಾಲಿಗೆ ಮೇಲಿಟ್ಟು ಚೀಪಿದರೆ "ವಾವ್" ಅದರ ಮಜವೇ ಮಜ.
ಹಲಗೆ ಗಿಡ ಎನ್ನುವದಕ್ಕಿಂತ ಬಳ್ಳಿ ಎನ್ನಬಹುದು. ಹಲಗೆ ಬಳ್ಳಿ ಏಕಾಂಗಿಯಾಗಿ ಬೆಳೆಯಲಾರದು. ಪೊದೆಗಳಲ್ಲಿ ಹುಟ್ಟಿ ಸುತ್ತೆಲ್ಲಾ ಆವರಿಸಿಕೊಳ್ಳುತ್ತದೆ. ಪೆಬ್ರವರಿ ಆರಂಭದಲ್ಲಿ ಹಸಿರು ಬಣ್ಣದ ಕಾಯಾಗಿ ಅಂತ್ಯದಲ್ಲಿ ಹಣ್ಣಾಗುತ್ತದೆ. ಹಕ್ಕಿಗಳ ಪರಮ ಪ್ರೀತಿಯ ಹಣ್ಣು ಇದು. ಕಾಡು ಕೋಳಿಯೂ ಇದನ್ನು ತಿನ್ನುತ್ತದೆ.
ರುಚಿ ಯನ್ನು ಮೆಚ್ಚಿ ನೂರಾರು ಹತ್ತಿಪ್ಪತ್ತು ತಿಂದಿರೋ ಹೊಟ್ಟೆ ನೋವು ಶುರುವಾಗಿಬಿಡುತ್ತದೆ ಜೋಕೆ. ವಿನಾಶದ ಅಂಚಿನಲ್ಲಿರುವ ಈ ಬಳ್ಳಿಯನ್ನು ನಮ್ಮ ವನದಲ್ಲಿ ರಕ್ಷಿಸಿಡಲು ಹರ ಸಾಹಸಪಟ್ಟಿದ್ದು ಈ ವರ್ಷ ಶ್ರಮ ಸಾರ್ಥಕ್ಯ ಕಂಡಿದೆ. ಹಣ್ಣುಗಳು ಹತ್ತಾರು ಬಿಟ್ಟಿತ್ತು. ನಾನು ನಾಲ್ಕೈದು ತಿಂದೆ ಮಕ್ಕಳಿಗೆ ಒಂದಿಷ್ಟು ಕೊಟ್ಟೆ ಹಕ್ಕಿಗಳಿಗೆ ಉಳಿದದ್ದು ಬಿಟ್ಟೆ. ಹಣ್ಣು ಸಿಕ್ಕಾಗ ಒಮ್ಮೆ ರುಚಿ ನೋಡಿ. ನಾನು ಈಗ ಕೊರೆದದ್ದು ಸತ್ಯ ಎಂಬ ಅರಿವಾಗುತ್ತದೆ.

Tuesday, February 16, 2010

ಆ ತುದಿ ಈ ತುದಿ ಮತ್ತು ನಾನು

ಸೂರ್ಯ ಹುಟ್ಟುತ್ತಾನೆ ಮುಳುಗುತ್ತಾನೆ ಎಂಬ ಕಣ್ಣಿಗೆ ಕಾಣುವ ಪ್ರಕ್ರಿಯೆಯ ಜತೆಗೆ ಕಾಣದ , ಆದರೆ ಲೆಕ್ಕಕ್ಕೆ ಮಾತ್ರಾ ಸಿಗುವ ಕಾಲ ಎಂಬುದು ತನ್ನಷ್ಟಕ್ಕೆ ಓಡುತ್ತಿರುತ್ತದೆ. ನಾವು ಹೇಗಿದ್ದರೂ ಕಾಲನಿಗೆ ನಿಶ್ಚಿಂತೆ. ಓದುವವರು ಓದುತ್ತಾರೆ, ನಿದ್ರೆ ಮಾಡುವವರು ನಿದ್ರೆ, ದುಡಿಯುವವರು ದುಡಿಮೆ, ಹೀಗೆ ಏನೆಲ್ಲಾ ಮಾಡುತ್ತಿರಲಿ ಕಾಲನಿಗೆ ಅವೆಲ್ಲಾ ನಗಣ್ಯ. ಸಾವಿರ ಸಾವಿರ ನೆನಪುಗಳ ಮೂಟೆಯೊಂದಿಗೆ ಒಂದು ದಿನ ನಾವೂ ಕಾಲವಾಗುತ್ತೇವೆ. ಹೀಗೆಲ್ಲಾ ಬ್ಲಾಗ್ ಬರೆಯದೇ ನನ್ನ ನಿಮ್ಮ ಅಜ್ಜ ಅಜ್ಜಿಗಳೆಂಬ ಸಹಸ್ರಾರು ಕಾಲದ ಯಂತ್ರಗಳನ್ನು ಅವರುಗಳ ನೆನಪುಗಳನ್ನು ಕಾಲನೆಂಬ ಕಾಲ ನುಂಗಿ ಹಾಕಿ ಮುನ್ನುಗ್ಗುತ್ತಿದ್ದಾನೆ. ಅಂತ್ಯವೆಲ್ಲೋ..? ಆರಂಭವಂತೂ ಆಗಿದೆ.

ನನ್ನ ಬಾಲ್ಯ ಪಕ್ಕಾ ಆಸ್ತಿಕ ಮನೆಯಲ್ಲಿ. ನನ್ನಪ್ಪ ಮೂಢನಂಬಿಕೆಗಳಿಂದ ದೂರ ಹಾಗಂತ ಸಹ್ಯವಾಗುವ ಆಚರಣೆಗೆ ಅಂಟಿಕೊಂಡವ. ನನಗೆ ಓದನ್ನು ಬೆನ್ನು ಹತ್ತಲಾಗಲಿಲ್ಲ. ಆಬ್ಸೆಂಟ್ ಮೈಂಡ್ ಈಸ್ ಡೆವಿಲ್ ವರ್ಕ್ ಶಾಪ್ ಎನ್ನುವಂತೆ ದೇವರು ಜೀವನದ ಬಹುಪಾಲು ಸಮಯನ್ನು ಕಿತ್ತುಕೊಂಡ ವಿಷಯವಾಯಿತು. ಇದ್ದಾನೋ ಇಲ್ಲವೋ ಇದ್ದರೆ ಎಲ್ಲಿ ಹೇಗೆ? ಯಾಕಾಗಿ? ಹೀಗೆ ಪ್ರಶ್ನೆಗಳು ವರಲೆಯ ಹುತ್ತದಂತೆ ಏರುತ್ತಾ ಸಾಗುತಿದ್ದವು. ಪುಸ್ತಕ ಓದುವುದು ಓದಿಗಿಂತ ಮೊದಲು ಅದೇನೋ ಒಂದು ಅದ್ಭುತ ಉತ್ತರ ಸಿಗುವ ಆಸೆ ಓದಿದ ನಂತರ ಓಹ್ ಇದು ಇಷ್ಟೇನಾ..? ಎಂಬ ನಿರಾಸೆ. ದೇವರ ಅಸ್ತಿತ್ವವನ್ನು ನಂಬುವ ಜನರ ಬೆನ್ನು ಹತ್ತಿ ಆನಂತರ ಅವರ ತೀರಾ ಸಾಮಿಪ್ಯ ಸಾದ್ಯವಾದಾಗ ಅವರೂ ಗೊಂದಲದಲ್ಲಿದ್ದಾರೆ ಎಂಬುದು ಅರಿವಾಗಿ ಅವರೂ ದೇವರ ನಂಬಿದ್ದು ಹಣ ಗಳಿಸಲೋ ಅಥವಾ ಭಯಕ್ಕೋ ಎನ್ನುವ ವಿಷಯ ತಿಳಿದು ಹಿಂದಿರುಗಿ ನಂತರ ದೇವರ ಅಸ್ತಿತ್ವವನ್ನು ನಂಬದವರಿಗೆ ಹತ್ತಿರವಾಗಿ ಅವರ ಸಾಮಿಪ್ಯ ಸನಿಹವಾದಾಗ ಅವರೂ ಕೇವಲ ಗೊತ್ತಿಲ್ಲದೆ ಹಾಗೆಲ್ಲಾ ಮಾಡುತ್ತಿರುವ ವಿಷಯ ತಿಳಿದು ಅವರೂ ಆಸ್ತಿಕತನ ವಿರೋಧಿಸುವ ಮಟ್ಟಿಗಷ್ಟೇ ನಾಸ್ತಿಕರು ಎಂಬುದು ತಿಳಿದು ವಾಪಾಸಾಗಿದ್ದಿದೆ. ಇರಲಿ ಹಾಗೆಲ್ಲಾ ಆಗುವುದೂ ಒಂದು ಅದೃಷ್ಟವೇ ಅಂದುಕೊಂಡು ಬಿಡೋಣ.
ನಂಬಿ ಕೆಟ್ಟವರಿಲ್ಲವೋ ಎಂಬುದೇ ಒಳ್ಳೆಯ ವೇದಾಂತ . ನಂಬದಿದ್ದರೂ ಕೆಡುವುದಿಲ್ಲವೋ ಎಂಬುದೂ ಕೂಡ ಒಳ್ಳೆಯ ಸಿದ್ಧಾಂತ.
ಬಹುಪಾಲು ಮನುಷ್ಯರ ಮೆದುಳು ಬೆಳೆಯುವುದು ಅವರ ವ್ಯಕ್ತಿತ್ವ ರೂಪುಗೊಳ್ಳುವುದು ಅವರಿದ್ದ ಪರಿಸರದ ಮೇಲೆಯೇ ಅವಲಂಬಿತವಾಗಿರುತ್ತದೆ. ದಿನ ನಿತ್ಯ ಕಾಣುವ ಕೇಳುವ ವಿಷಯಗಳನ್ನು ಕ್ರೂಢಿಕರೀಸಿ ಒಂದು ಅಭಿಪ್ರಾಯಕ್ಕೆ ಬಂದು ತಾನು ಬೆಳೆಯುತ್ತಾನೆ ಮನುಷ್ಯ. ಅವನಿಗೆ ಅವನಿದ್ದ ಅವಸ್ಥೆಯೆ ಒಳ್ಳೆಯದು ಅಂತ ಅನ್ನಿಸತೊಡಗುತ್ತದೆ. ಅದಕ್ಕೆ ಸಮರ್ಥನೆಗೆ ಇಳಿಯುತ್ತಾನೆ. ಯಾವುದೋ ಹಂತದಲ್ಲಿ ಅದು ಬೇಸರವಾದ ಅಪರೂಪದ ವ್ಯಕ್ತಿಗಳು ಹೊಸದನ್ನು ಹುಡುಕತೊಡಗುತ್ತಾರೆ. ಸಿಕ್ಕ ಹೊಸದೆಲ್ಲವೂ ಆರಂಭದಲ್ಲಿ ಅದ್ಭುತ ಅಂತ ಅನ್ನಿಸಿ ನಿಧಾನ ಕೇವಲವಾಗತೊಡಗುತ್ತವೆ. ಪಟ್ಟಣದಲ್ಲಿದ್ದ ವರಿಗೆ ಹರಿಯುವ ನದಿಯ ಜುಳು ಜುಳು ನಿನಾದ ಹಳ್ಳಿಯಲ್ಲಿದ್ದವರಿಗೆ ಆಕಾಶದೆತ್ತರದ ಕಟ್ಟಡಗಳು ಅದ್ಭುತವನ್ನು ತೆರೆದಿಡುತ್ತವೆ. ಆದರೆ ಯಾರು ಇದ್ದ ಅವಸ್ಥೆಯನ್ನು ನಿರಂತರ ಅನುಭವಿಸಿ ಏಕತಾನತೆಯನ್ನು ರೂಢಿಸಿಕೊಳ್ಳುತ್ತಾರೋ ಅವರು ಶಾಂತ ಬದುಕು ಸಾಗಿಸುತ್ತಾರೆ. ಇಲ್ಲದಿದ್ದಲ್ಲಿ ಯಾವುದೇ ಅವಸ್ಥೆ ಇದ್ದರೂ ಅದು ನರಕವೇ....
ನಿತ್ಯ ಹುಟ್ಟುವ ಸೂರ್ಯ ಹಳೆಯದಾದರೂ ಅದರಿಂದ ಹೊರಡುವ ಇಂದಿನ ಬಣ್ಣ ಹೊಸತು, ಹರಿಯುವ ನದಿಯ ಪಾತ್ರ ಹಳೆಯದಾದರೂ ನೀರಿನ ಜುಳು ಜುಳು ಶಬ್ಧ ಹೊಸತು, ಕಟ್ಟಡ ಹಳೆಯದಾದರೂ ಅದರ ಮುಂದೆ ಏಳುವ ಹೊಗರು ಹೊಸತು , ಅಂತೆಲ್ಲಾ ಅನ್ನಿಸ ತೊಡಗಿದರೆ ವಾವ್ ಅನ್ನುವುದು ಪ್ರತಿಕ್ಷಣದ ಶಬ್ಧ. (ಪುರುಸೊತ್ತು ಇದ್ದಾಗ ಮುಂದುವರೆಯುತ್ತದೆ)
ಕೊನೆಯದಾಗಿ: ಅಪ್ಪನೆಂಬ ಅಪ್ಪ ಅಮ್ಮನ ಅಣತಿಯಂತೆ ಅಜ್ಜನಿಗೆ ನಪ್ಪಿಹೋದ ಬಟ್ಟಲಲ್ಲಿ ಜಗುಲಿಯ ಮೂಲೆಯಲ್ಲಿ ಅನ್ನ ಇಟ್ಟದ್ದನ್ನು ಮೊಮ್ಮಗ ಕಂಡ. ಅಜ್ಜನ ಕಣ್ಣಲ್ಲಿ ಧಾರಾಕಾರ ನೀರಿಳಿಯತೊಡಗಿತು. ಮೊಮ್ಮಗ ಅಜ್ಜನ ಬಳಿ ಹೋಗಿ ಕಣ್ಣೀರು ವರೆಸಿ " ಅಜ್ಜಾ ಅಪ್ಪ ಹೀಗೆ ಮಾಡಿದಕ್ಕೆ ಬೇಸರವಾಯಿತಾ?" ಎಂದು ಕೇಳಿದ. ಅದಕ್ಕೆ ಅಜ್ಜ ಹೇಳಿದ " ಇಲ್ಲ ಮಗೂ ನಿನ್ನ ಅಜ್ಜಿಯ ಮಾತು ಕೇಳಿ ನಾನೂ ನನ್ನ ಅಪ್ಪನಿಗೆ ಹೀಗೆ ಮಾಡಿದ್ದು ನೆನಪಾಯಿತು" ಅಂದ.

Monday, February 15, 2010

"ಅಬ್ಬಿ ನೀರು"


"ಅಬ್ಬಿ ನೀರು" ಪದ ನೀವು ಮಲೆನಾಡಿಗರಾಗಿದ್ದರೆ ಕೇಳಿರುತ್ತೀರಿ. ಮನೆಯ ಹಿಂದೆ ದಬ ದಬ ಎಂಬ ಸದ್ದು ಮಾಡುತ್ತಾ ಹರಿಯುತ್ತಲಿರುತ್ತದೆ. ಶೇಕಡಾ ೧ ರಷ್ಟು ಬಳಕೆಗೆ ಮಿಕ್ಕಿದ್ದು ತೋಟಕ್ಕೆ. ಇದು ಅಬ್ಬಿ ನೀರು ಸೌಕರ್ಯ ಹೊಂದಿರುವ ಮನೆಗಳ ನೀರಿನ ಸಮೃದ್ಧಿ. ಪುಗಸಟ್ಟೆ ಪ್ರಕೃತಿ ನಿಡುವ ಈ ನೀರಿಗೆ ಒಂದು ವಿಶಿಷ್ಠ ರುಚಿ. ಜುಳು ಜುಳು ಎಂದು ಬೆಟ್ಟದ ತಲೆಯಿಂದ ಹರಿದು ಮನೆಯ ಹಿತ್ತಿಲು ಸೇರು ಅಬ್ಬಿ ನೀರು ಅಚ್ಚರಿಯ ಮೂಟೆ.
ನೆಲದಾಳದಲ್ಲಿ ಮುನ್ನೂರು ಮೀಟರ್ ಕೊರೆದು ನೀರು ಸಿಗದೆ ಹತಾಶರಾಗುವುದು ಮನುಷ್ಯ ಪ್ರಯತ್ನ. ನೆಲದಿಂದ ಸಾವಿರ ಅಡಿ ಮೇಲೆ ನೀರು ಚಿಮ್ಮಿಸುವುದು ಪ್ರಕೃತಿಯ ತಾಕತ್ತು.
ಕೊಡಚಾದ್ರಿಯ ತುಟ್ಟ ತುದಿಗೆ ನಿಂತರೆ ಕಣ್ಣು ಹಾಯಿಸುವಷ್ಟು ದೂರದವರೆಗೂ ತಗ್ಗು ಪ್ರದೇಶವಾದ ಕೊಲ್ಲೂರು ಹೊಸನಗರ ಮುಂತಾದವುಗಳು ಕಾಣಿಸುತ್ತವೆ. ಅಷ್ಟೆತ್ತರದ ಗುಡ್ಡದ ಮೇಲೆ ಜುಳು ಜುಳು ನೀರು ಚಿಮ್ಮುತ್ತದೆ. ಯಾರಿಟ್ಟರು ಅಲ್ಲಿ ನೀರಿನ ಸೆಲೆ? ಎಂಬ ಆಶ್ಚರ್ಯ ಮೂಡದಿರದು ಪ್ರಕೃತಿಯನ್ನು ಅಚ್ಚರಿಯಿಂದ ನೋಡುವ ಮನಸ್ಸಿದ್ದವರಿಗೆ. ಕೊಡಚಾದ್ರಿಯಿಂದ ಕೆಳಗಿಳಿದು ಬಂದು ಬಾವಿ ಬಗ್ಗಿದರೆ ಅಲ್ಲಿ ಕಾಣುವ ತಳದ ನೀರಿಗೂ ಅಚ್ಚರಿ ಮೂಡದಿರದು.
ಕಾಡು ಹೋಯ್ತು ಅಂತ ಕೇವಲ ಬೊಬ್ಭಿಡುವ ಮಂದಿಗೂ ನಿಲುಕದ ಈ ನೀರಿನ ಸೆಲೆಯನ್ನು ಗುಡ್ಡದ ನೆತ್ತಿಯವರೆಗೂ ಪಂಪ್ ಮಾಡುತ್ತಿರುವ ಪ್ರಕೃತಿ ಮಲೆನಾಡಿನ ಹಲವಾರು ಊರಿನ ಮನೆಗಳ ನೀರಿನ ದಾಹವನ್ನು ಯಾವ ಪ್ರತಿಫಲಾಪೇಕ್ಷೆಯಿಲ್ಲದೆ ನಿರಂತ ಉಣಬಡಿಸುತ್ತಿದೆ ನೂರಾರು ವರ್ಷಗಳಿಂದ. ತೆಗೆದ ಬಾವಿಯಲ್ಲಿ ಕೊರೆದ ಬೋರ್ ನಲ್ಲಿ ನೀರು ಬತ್ತಿರಬಹುದು "ಅಬ್ಬಿನೀರಿನ" ಸೆಲೆ ಇವತ್ತಿನವರೆಗೂ ಬತ್ತಿದ ಉದಾಹರಣೆ ಇಲ್ಲ. ಹಾಗೊಮ್ಮೆ ಮಲೆನಾಡಿನಲ್ಲಿ ಅಬ್ಬಿನೀರಿನ ಸೆಲೆ ನಿಂತಿತು ಅಂದಿಟ್ಟುಕೊಳ್ಳಿ ಅಲ್ಲಿಗೆ ಪರಿಸರ ಪ್ರಕೃತಿಯ ಕತೆ ಮುಗಿದಂತಯೆ. ಅದು ಆಗಲಿಲ್ಲ ಆಗಬಾರದು ಅಂತಾದರೆ ಹುಲು ಮಾನವನ ಪ್ರಯತ್ನ ಕಾಡು ಕಡಿದರೂ ಅಡ್ಡಿಯಿಲ್ಲ ಹೊಸ ಕಾಡು ಬೆಳೆಸುವುದು. ಕಾಡು ಬೆಳೆಸುವುದು ಅಂದರೆ ಪ್ರಶಸ್ತಿ ಸಿಗುವಷ್ಟರಮಟ್ಟಿಗಲ್ಲದಿದ್ದರೂ ತಿಂದ ಹಲಸಿನ ಬೀಜ ಎಲ್ಲೆಂದರಲ್ಲಿ ಬಿಸಾಕದೆ ಸೂಕ್ತ ಜಾಗದಲ್ಲಿ ಗಿಡ ಮರವಾಗುವಂತಹ ಜಾಗದಲ್ಲಿ ಇಡುವುದು. ಎಂಬಂತಹ ಸಣ್ಣ ಪುಟ್ಟ ಅಳಿಲುಸೇವೆಯಿಂದ ಪ್ರಕೃತಿಯ ರಕ್ಷಣೆಯಂತ ದೊಡ್ಡ ಮಾತಲ್ಲದಿದ್ದರೂ ನಾವು ನೆಟ್ಟಗಿಡ ವೆಂಬ ಗಿಡ ಮರವಾಗಿ ಹಣ್ಣು ಬಿಟ್ಟ ಆನಂದ ಹೊಂದಬಹುದು.
ಇರಲಿ ಅವೆಲ್ಲಾ ಒಂದೆಡೆ ನಿಮಗೆ ಇನ್ನೊಂದು ಸತ್ಯ ಹೇಳಿಬಿಡುತ್ತೇನೆ. ೨೦೧೨ ರ ಪ್ರಳಯ ಅಂತ ಗುಲ್ಲೆದ್ದಿದೆಯಲ್ಲ ಅದು ಸತ್ಯವೇ ಆದ್ರೆ ೨೦೧೧ ರಲ್ಲಿ "ಅಬ್ಬಿ ನೀರು" ನಿಲ್ಲುತ್ತದೆ. ಹಾಗಾದಕೂಡಲೇ ನಾನು ನಿಮಗೆಲ್ಲಾ ತಿಳಿಸುತ್ತೇನೆ, ನೀವು ಬೇರೆಯ ಗ್ರಹಕ್ಕೆ ಹೊರಡುವ ತಯಾರಿ ನಡೆಸಬಹುದು...!