Friday, July 15, 2011

ಅದು ನಗುತ್ತಿದೆ... ಸನಿಹದಲ್ಲಿಯೇ ನಮ್ಮ ಹೊರಗೆ ಕುಳಿತು.

"ಮನೋ ಮಧುಕರೋ ಮೇಘೋ ಮಾನಿನೀ ಮದನೋ ಮರುತ್ ಮಾಮರೋ ಮರ್ಕಟೋರ್ಮತ್ಸ್ಯೋ ಮಕಾರಾತ್ ದಶ ಚಂಚಲಾ:" ಅಂತ ಸಂಸ್ಕೃತದಲ್ಲಿ ಒಂದು ಉಕ್ತಿ ಇದೆಯಂತೆ. ಸ್ವಲ್ಪ ಹೆಚ್ಚುಕಮ್ಮಿ ಇದ್ದರೂ ಇರಬಹುದು ಬಿಡಿ. ಒಟ್ಟಿನಲ್ಲಿ ಮ ಕಾರದಿಂದ ಪ್ರಾರಂಭವಾಗುವ ಹಲವು ಶಬ್ಧಗಳು ಚಂಚಲತೆಗೆ ಉದಾಹರಣೆ ಎಂಬುದು ತಾತ್ಪರ್ಯ. ಹಾಗೆ ನೋಡಿದಲ್ಲಿ ಇಡೀ ಪ್ರಪಂಚವೇ ಒಂಥರಾ ಚಂಚಲ. ಸ್ಥಿರ ಎನ್ನುವುದು ನಮ್ಮ ತರ್ಕವಷ್ಟೆ. ಆದರೆ ಈ ಮೇಲಿನ ಮಕಾರ ದಿಂದ ಪ್ರಾರಂಭವಾಗುವ ವಿಷಯ ಚಂಚಲತೆ ಹೆಚ್ಚು ಅನ್ನಬಹುದು.

ನಿಂತಲ್ಲಿ ನಿಲ್ಲಲಾರ, ಕುಂತಲ್ಲಿ ಕೂರಲಾರ, ಮಾಡಿದ್ದನ್ನು ಮಾಡಲಾರ ಮಾಡದೆಯೂ ಇರಲಾರ ಎಂಬ ವ್ಯಕ್ತಿತ್ವಕ್ಕೆ ಚಂಚಲ ಮನಸ್ಥಿತಿ ಯ ಜನ ಅಂತ ನಾಮಕರಣ ಮಾಡಿಯಾಗಿದೆ. ಇದು ವ್ಯಕ್ತಿಯ ಹೊರಗಿನ ಚಂಚಲತೆಯ ಕತೆಯಾದರೆ ವ್ಯಕ್ತಿಯೊಳಗಿನ ಚಂಚಲತೆ ಇದೆಯಲ್ಲ ಅದರದ್ದು ಬೃಹತ್ ಸಮಸ್ಯೆ ಹಲವರಿಗೆ.
ಮಠ ಸಿನೆಮಾದಲ್ಲಿ " ಮನಸ್ಸಿನೊಳಗಿನ ಮಾತನಾಡುವ ಗಿಳಿಯನ್ನು ಸುಮ್ಮನಾಗಿಸುವುದೇ ದಾನ್ಯ" ಎಂದು ಮಜವಾಗಿ ಧ್ಯಾನದ ಕುರಿತು ಹೇಳಿದ್ದಾರೆ. ಈ ಚಂಚಲತೆಯನ್ನು ಸ್ಥಿರಗೊಳಿಸುವ ಕೆಲಸಕ್ಕೆ ಮಿದುಳ ಬಳಸಿ ಬದುಕುವ ಮಂದಿ ಬಹಳ ಬೆಲೆಯನ್ನು ತೆತ್ತಿದ್ದಾರೆ ತೆತ್ತುತ್ತಲಿದ್ದಾರೆ. ಆ ಮಾತನಾಡುವ ಗಿಳಿ ಇದೆಯಲ್ಲ ಅದರ ನಿಯಂತ್ರಣಕ್ಕೆ ಹಾಕಿದ ಹಾಕುತ್ತಿರುವ ಹಾಕುವ ವೇಷ ಹಲವು ತರಹದ್ದು. ಜನಸಾಮಾನ್ಯರ ಈ ದೌರ್ಬಲ್ಯವನ್ನರಿತ ಒಂದು ತೂಕ ಹೆಚ್ಚಿನ ಬುದ್ದಿವಂತರು ಅದಕ್ಕೆ ಹಾಗೆ ಮಲಗಿ, ಹೀಗೆ ಕೂತು ಉಸಿರು ಬಿಡಿ, ಮತ್ತೆ ಆಳವಾಗಿ ಉಸಿರಾಡಿ, ಹ ಹ ಹ ಎಂದು ಹಾರಿಹಾರಿ ಬೀಳಿ, ಅಂತಿಮವಾಗಿ ನಾವು ಹೀಗೆ ಕಲಿಸಿಕೊಟ್ಟದ್ದಕ್ಕೆ ಇಷ್ಟು ಹಣ ಕಕ್ಕಿ ಎಂಬಲ್ಲಿಯವರೆಗೆ ಈ ಗಿಳಿಯ ಆಟ ನಡೆಯುತ್ತಲಿದೆ. ನಿರಂತರವಾಗಿ ಪುತುಪುತುನೆ ಏಳುವ ಆಲೋಚನೆಯ ಬೆನ್ನುಹತ್ತಿ ಉತ್ತರ ಸಿಗದೆ ತಡಬಡಾಯಿಸುವ ಹಲವರಿಗೆ ಈ ಗಿಳಿಯ ಕಾಟ ಅಷ್ಟಿಷ್ಟಲ್ಲ. ಶುರುವಾದ ಆಲೋಚನೆಗೆ ಪಟಕ್ಕನೆ ಬ್ರೆಕ್ ಹಾಕುವ ತಾಕತ್ತು ರೂಢಿಸಿಕೊಂಡರೆ ಇವರ ಪಾಲಿಗೆ ಜಗತ್ತ ಗೆದ್ದಂತೆ. ಉದ್ಯೋಗದಲ್ಲಿ ಜೀವನಕ್ಕಾಗಿ ಮಿದುಳು ಉಪಯೋಗಿಸುವ ಮಂದಿಯ ದೇಹ ಒಂಥರಾ ಜಡ್ಡಾಗಿರುತ್ತದೆ. ದೇಹದ ಶ್ರಮದ ಮೂಲಕ ಅಥವಾ ಶ್ರಮದ ಕೆಲಸದ ಮೂಲಕ ಮಿದುಳಿನ ಯೋಚನೆಯನ್ನು ನಿಯಂತ್ರಿಸುವುದು ಸುಲಭ ಅಥವಾ ಸುಲಭ ಅನ್ನುವುದಕ್ಕಿಂತಲೂ ಅದು ಪ್ರಕೃತಿ ಸಹಜ. ದೇಹ ಶ್ರಮಕ್ಕೆ ಹಾರ್ಡ್ ವರ್ಕ್ ಅಂತ ಒಂಥರಾ ಜಿಗುಪ್ಸೆಯ ಪದಪ್ರಯೋಗ ಬಳಕೆಗೆ ಬಂದ ನಂತರ ಈ ಧ್ಯಾನ ಎಂಬ ಮಾರುಕಟ್ಟೆಯ ವ್ಯಾಪ್ತಿ ವಿಸ್ತಾರವಾಗುತ್ತಿದೆ. ಈ ಮಾರುಕಟ್ಟೆಯಲ್ಲಿ ಬಿಕರಿಗಿಟ್ಟ ಸರಕು "ಶಾಂತಿ..ನೆಮ್ಮದಿ....ಸುಖ " ಎಂಬ ನಮ್ಮೊಳಗೇ ಇರುವ ನಾವೇ ಸೃಷ್ಟಿಸಿಕೊಳ್ಳಬೇಕಾಗಿರುವ ವಿಷಯಗಳು. ಮಜ ಎಂದರೆ ಅದಕ್ಕೆ ನಾವು ಹಣ ಕೊಟ್ಟು ಅಲ್ಲಿದೆ, ಎಲ್ಲಿದೆ..? ಅಲ್ಲೆಲ್ಲೋ ಇದೆ, ಎಂದು ಹಗಲಿನಲ್ಲಿ ಬ್ಯಾಟರಿ ಬಳಸಿ ಹುಡುಕಾಡುತ್ತಿದ್ದೇವೆ. ಅದು ನಗುತ್ತಿದೆ... ಸನಿಹದಲ್ಲಿಯೇ ನಮ್ಮ ಹೊರಗೆ ಕುಳಿತು.

ನನ್ನದು ಈಟಿಂಗ್ ಬಾಬತ್ತಿಗೆ



ಬಾಳೆಹಣ್ಣು ಎಂದಾಗ ಬಾಯಲ್ಲೇನೋ ನೀರೂರದು ನಿಜ. ಆದರೆ ಸುಕ್ಕೇಳಿ ಸುದ್ದಿ ಹೇಳಿದಾಗ ಮಿದುಳಿನ ಮೂಲೆಯಿಂದ ಸಿಕ್ಕರೆ ನಾಲಿಗೆಯ ಮೇಲಿಡು ಎಂಬ ಸಂದೇಶ ಮೊಳಕೆಯೊಡೆಯಲಾರಂಬಿಸುತ್ತದೆ. ಬಾಳೆಹಣ್ಣನ್ನು ಸಕ್ಕರೆಪಾಕದಲ್ಲಿ ಅದ್ದಿ ಬಿಸಿಲಿನಲ್ಲಿ ಒಣಗಿಸಿ ತಯಾರು ಮಾಡುವ ಸುಕ್ಕೇಳಿಯನ್ನ ಒಮ್ಮೆ ತಿಂದಿರಾದರೆ ಇವೆಲ್ಲಾ ಆಗುತ್ತದೆ. ಸುಕ್ಕೇಳಿಗೆ ಇನ್ನಷ್ಟು ಮೆರುಗು ಸಿಗಬೇಕೆಂದರೆ ಬಾಳೆಹಣ್ಣಿನ ಜಾತಿಯೂ ಬಹುಮುಖ್ಯ ಪಾತ್ರವಹಿಸುತ್ತದೆ. ವಾಟ್ ಬಾಳೆ, ಸುಗನ್ ಬಾಳೆ, ಮಿಟ್ಲ ಬಾಳೆ, ಕರಿ ಬಾಳೆ, ಉದ್ಬಾಳೆ ,ಮುಂತಾದ ಮಲೆನಾಡಿನ ಸಾಂಪ್ರದಾಯಿಕ ತಳಿಗಳು ಸುಕ್ಕೇಳಿ(ಡ್ರೈ ಬನಾನ) ಗೆ ಯೋಗ್ಯವಾದವು. ಪಚ್ಚಬಾಳೆ ಮುಂತಾದ ಸುಧಾರಿತ ತಳಿಗಳು ಅಷ್ಟೊಂದು ಪರಿಮಳ ನೀಡಲಾರವು. ಆದರೂ ತೀರಾ ಗೊಡ್ಡೇನಲ್ಲ ಬಿಡಿ. ಈಗ ಸುಕ್ಕೇಳಿಯುಂದ ಫೋಟೋದಲ್ಲಿನ ಬಾಳೆಹಣ್ಣಿನ ಕತೆಗೆ ಹೋಗೋಣ

"ಬೂದಿಬಾಳೆ" ಎಂಬುದು ಚಿತ್ರದಲ್ಲಿನ ಬಾಳೆಯ ಸಾಂಪ್ರದಾಯಿಕ ಹೆಸರು. ಇದಕ್ಕೆ ಆ ಹೆಸರುಬರಲು ಮುಖ್ಯ ಕಾರಣ ಇದರ ಹಣ್ಣನ್ನು ಬಬ್ಬೂದಿಯಲ್ಲಿ( ಅಯ್ಯೋ ಬಬ್ಬೂದಿ ಅಂದ್ರೆ ಏನು? ಎಂದಿರಾ, ಕಟ್ಟಿಗೆ ಬೆಂಕಿಯ ಕೆಂಡದ ಬಿಸಿ ಬೂದಿ ಅಷ್ಟೆ) ಸುಟ್ಟು ತಿಂದರೆ ಅದ್ಬುತ ರುಚಿಯ ಕಾರಣ ಇದಕ್ಕೆ ಅದೇ ಹೆಸರು ಅಂತ ಗುಸುಗುಸು ಪಿಸಪಿಸ. ಇರಲಿ ಹೆಸರು ಏನು ಮಾಡುತ್ತೆ ರುಚಿಯಿದ್ದರೆ ಆಯಿತಪ್ಪಾ ಅಲ್ಲವೇ?, ಇದು ಅಜೀರ್ಣ ತೊಂದರೆಯ ಹೊಟ್ಟೆನೋವಿಗೆ ದಿವ್ಯ ಔಷಧ. ಒಂದೆರಡು ಹಣ್ಣು ತಿಂದರೆ ಹೊಟ್ಟೆ ನೋವು ಮಾಯ.

ಈ ಹಣ್ಣು ಮಾರುಕಟ್ಟೆಯಲ್ಲಿ ಬಿಕರಿಯಾಗುವುದಿಲ್ಲ. ಕಾರಣ ಇದನ್ನು ತಿನ್ನುವ ವಿಧಾನ ಬಹಳ ಜನರಿಗೆ ಗೊತ್ತಿಲ್ಲದಿರುವುದೂ ಒಂದಿರಬಹುದು. ಎಲ್ಲಿ ಹಣ ಹುಟ್ಟುವುದಿಲ್ಲವೋ ಜನ ಅದರಿಂದ ನಿಧಾನ ದೂರ ಸರಿಯುತ್ತಾರೆ. ಹಾಗಾಗಿ ಬೂದಿಬಾಳೆ ಬೆಳೆಯುವವರಿಲ್ಲ. ಆ ಕಾರಣಕ್ಕೆ ಇದು ಅಳಿವಿನ ಅಂಚಿನಲ್ಲಿರುವ ಬಾಳೆ ಯಾಗಿದೆ. ನಾನು ಒಂದೆರಡು ಗುಂಪು ಉಳಿಸಿಕೊಂಡಿದ್ದೇನೆ, ಪರಿಸರ ಪ್ರೇಮಿಗಳ ಡೈಲಾಗ್ "ಈ ಭೂಮಿ ನಮ್ಮ ಮುಂದಿನ ಪೀಳಿಗೆಯಿಂದ ಎರವಲು ಪಡೆದದ್ದು, ಅವರಿಗೆ ಸುರಕ್ಷಿತವಾಗಿ ಮರಳಿಸೋಣ" ಎಂದೆಲ್ಲಾ ಅಂತಾರಲ್ಲ ಅದಕ್ಕೆ ನನ್ನದೂ ಒಂದು ಅಳಿಲು ಸೇವೆಯಾಗಲಿ ಎಂದು.

ಯಾವಾಗ ನೋಡಿದ್ರೂ ತಿನ್ನೋ ವಿಚಾರನೇ ಬರಿತೀಯಪ್ಪಾ... ಬೇರೇ ಇಲ್ವಾ....? ಅಂತ ನೀವು ಗೊಣಗುಟ್ಟಿದಂತಾಯಿತು. ಪುಷ್ಠಿಕರವಾದ್ದು ತಿಂದರೆ ತಾನೇ ನಮ್ಮ ನಿಮ್ಮ ಆಟ, ಓಟ, ನೋಟ , ಎಲ್ಲಾ, ಹಾಗಾಗಿ ಅದೆಂತದೋ ಫಸ್ಟ್ ಪ್ರಿಯಾರಿಟಿ ಅಂತ ಅಂತಾರಲ್ಲ ಅದು ನನ್ನದು ಈಟಿಂಗ್ ಬಾಬತ್ತಿಗೆ ಅಷ್ಟೆ. ನಿಮ್ಮದು...? ನನಗೇನು ಗೊತ್ತು?.

Wednesday, July 13, 2011

ಇವತ್ತು ಇಷ್ಟೆ.

ಜೋಗಕ್ಕೆ ಹೋಗಬೇಕು,ನಿಮಗೆ ಅಲ್ಲಿನ ಜಲಪಾತದ ಇವತ್ತಿನ ಪಟ ತೆಗೆದು ತೋರಿಸಬೇಕು, ಎಂತೇನೂ ಹೋದದ್ದಲ್ಲ. ಮೆಸ್ಕಾಂ ನಲ್ಲಿ ಕೆಲಸ ಇತ್ತು ಹೋಗಿದ್ದೆ. ಹಾಗೇ ಸೀದಾ ಮನೆಗೆ ಬಂದುಬಿಡಬಹುದಿತ್ತು. ಆದರೆ ಹಾಗೆ ಮಾಡಲಿಲ್ಲ. ಆವಾಗ ಸತ್ಯವಾಗಿ ಹೇಳುತ್ತೇನೆ ನಿಮ್ಮ ನೆನಪಾಯಿತು. ಸೀದಾ ಜೋಗಜಲಪಾತದ ಕಡೆ ಕಾರು ತಿರುಗಿಸಿದೆ. ನೀರು ಸುಮಾರಾಗಿ ಬೀಳುತ್ತಿತ್ತು. ಬಿಕೋ ಎನ್ನುವಷ್ಟರ ಮಟ್ಟಿಗಿನ ಜನ ಅಲ್ಲದಿದರೂ ಕಡಿಮೆ ಪ್ರವಾಸಿಗರಿದ್ದರು. ಕಾರು ಒಳಗೆ ಪ್ರವೇಶಿಸಲು "ಇಪ್ಪತ್ತು ರೂಪಾಯಿ ಮಡಗಿ" ಎಂದ ಗೇಟಿಗ. ಬೇಡ ಎನ್ನುತ್ತಾ ಹೊರಗಡೆಯಿಂದ ಫೋಟೋ ತೆಗೆದುಕೊಂಡು ಬಂದೆ. ಅಯ್ಯೋ ಏನ್ ಖಂಜೂಸ್ ಜನ ಅಂತ ಅನ್ನಬೇಡಿ, ನೀರು ಸಿಕ್ಕಾಪಟ್ಟೆ ಜೋರು ಇದ್ದಿದ್ದರೆ ಅದರ ಫೋಟೋ ತೆಗೆಯಲು ಇಪ್ಪತ್ತು ರೂಪಾಯಿ ಅಂತ ನೋಡುತ್ತಿರಲಿಲ್ಲ. ನೀರು ಕೊಂಚ ಇದ್ದದ್ದರಿಂದ ಹಾಗೆ ಮಾಡಿದೆ. ಜಲಪಾತದ ರಭಸ ಜೋರಾದರೆ ಅದರ ಫೋಟೋ ಕತೆ ಅಂದು ನೋಡೋಣ. ಇವತ್ತು ಇಷ್ಟೆ.

ನಿತ್ಯ ಸಿಕ್ಕರೆ ವಿಶ್ವಸುಂದರಿಯೂ ಬೋರ್ ಬೋರ್.



ಆಷಾಢ ಮಾಸದ ಜಡಿಮಳೆಯಲ್ಲಿ ಮಧ್ಯಾಹ್ನ ಊಟಕ್ಕೆ ನಿಂಬ್ಗಾರ ಇದ್ದರೆ ’ಉಫ್’ ಅದರ ಮಜವೇ ಮಜ. ಕಣ್ಣಲ್ಲಿ ನೀರು ಬಾಯಲ್ಲಿ ನೀರು , ಒಟ್ಟಿನಲ್ಲಿ ಮಜ ಬಿಡಿ. ಆ ನಿಂಬ್ಗಾರಕ್ಕೆ ನಿಜವಾದ್ ರುಚಿಕೊಡುವ ಕೆಲಸ ಮಾಡುವುದು ನಿಂಬೆಹಣ್ಣು. ಈ ನಿಂಬ್ಗಾರ ಎನ್ನುವ ಉಪ್ಪಿನಕಾಯಿ ನೀವು ಈಗಾಗಲೆ ತಿಂದ ಜನ ಆಗಿದ್ದರೆ ಇದನ್ನ ಓದುತ್ತಿದ್ದಂತೆ ಬಾಯಲ್ಲಿ "ಚುಳ್" ಅಂತ ನೀರು ಬಂದಿರುತ್ತದೆ. ನನಗೆ ಹೀಗೆ ಟೈಪಿಸುವಾಗ ಬಾಯಿತುಂಬಾ ಬಂದಾಯ್ತು. ಆಗಲಿ ಈ ಪದಾರ್ಥಕ್ಕೆ ಸಾಸಿವೆ ಕಾಳು, ಸೂಜಿಮೆಣಸು ರುಚಿಕಟ್ಟನ್ನು ಒದಗಿಸುವ ಕೆಲಸ ಮಾಡಿದರೆ ಅದಕ್ಕೊಂದು ವಿಶೇಷ ರುಚಿ ಒದಗಿಸುವ ಕೆಲಸ ಮಾಡುವುದು ಆಷಾಢ ನಿಂಬೆ.
ಅಯ್ಯೋ ಇದ್ಯಾವುದಪ್ಪಾ "ಆಷಾಢನಿಂಬೆ" ಅಂತ ತಲೆಕೆಡಿಸಿಕೊಳ್ಳದಿರಿ. ಇದು ಮಾಮೂಲಿ ನಿಂಬೆಹಣ್ಣು ಆಷಾಢಮಾಸದಲ್ಲಿ ಸಿಕ್ಕಾಪಟ್ಟೆ ಬಿಡುತ್ತದೆ ಅದಕ್ಕೆ ಆ ಹೆಸರು ಕೊಟ್ಟೆ. ಸಾಮಾನ್ಯವಾಗಿ ನಮ್ಮ ತೋಟದ ಬದುವಿನಲ್ಲ್ಲಿ ನಿಂಬೆಗಿಡ ಹಾಕಿರುತ್ತಾರೆ. ಅದು ಈಗ ಗಿಡದತುಂಬಾ ಅರಿಶಿನ ಬಣ್ಣಕ್ಕೆ ತಿರುಗಿಸಿಕೊಂಡ ಹಣ್ಣು ಬಿಟ್ಟಿರುತ್ತದೆ. ಹಾಗೆ ಬಿಟ್ಟದ್ದನ್ನು ಕೊಯ್ಯುವಾಗಲೇ ಒಂಥರಾ ಮಜ. ಪ್ರತೀ ಹಣ್ಣು ಕೊಯ್ದಾಗಲೂ ಅದರಿಂದ ಹೊರಡುವ ಪರಿಮಳ ಇದೆಯಲ್ಲಾ ಅದು ನರನಾಡಿಗಳಿಗೂ ತನ್ನ ಇರುವಿಕೆಯನ್ನು ತಲುಪಿಸುತ್ತದೆ. ತೋಟದಿಂದ ಮನೆಗೆ ತಂದಾಗ ಜಗುಲಿ ಪ್ರವೇಶಿಸುತ್ತಿದ್ದಂತೆ ಮನೆಯಲ್ಲಿದ್ದವರು "ಅಯ್ಯೋ ನಿಂಬೆ ಹಣ್ಣು ಕೊಯ್ಕಬಂದ್ಯನಾ... ಏನ್ ಪರಿಮಳ ನೋಡು " ಎನ್ನುವಷ್ಟು ಮಜ ಇರುತ್ತದೆ. ಅದರ ರಸ ಹಿಂಡಿ ಏನೇನೋ ಮಾಡಿ ಒಂದು ವಗ್ಗರಣೆ ಜಡಿದು ಊಟಕ್ಕೆ ಮುಂಚೆ ಬಾಳೆ ತುದಿಯಲ್ಲಿ ಬಡಸಿದಾಗ, ಹಸಿದು ಕುಳಿತ ಜನ ಒಂದು ಚೂರು ತೋರ್ಬೇರಳಿನಲ್ಲಿ ನೆಕ್ಕಿದ ಕೂಡಲೆ ನಾಲಿಗೆ "ಲೊಚ್" ಎಂದು ತನ್ನಷ್ಟಕ್ಕೆ ಲೊಟ್ಟೆ ಹೊಡೆದು ವಾವ್ ಎಂಬ ಉದ್ಘಾರವನ್ನು ಬೇಡವೆಂದರೂ ಹೊರಡಿಸುತ್ತದೆ.
ಅಯ್ಯೋ ನೀವೆಷ್ಟು ಅದೃಷ್ಟವಂತರು, ಹಳ್ಳಿಯ ಜೀವನ ಅದೆಷ್ಟು ಚೆನ್ನ, ಹೀಗೆ ತೋಟಕ್ಕೆ ಹೋಗಿ ಹಾಗೆ ನಳನಳಿಸುವ ನಿಂಬೆ ಹಣ್ಣು ಕೊಯ್ದು ತಂದು ಆಘ್ರಾಣಿಸಿ ಅನುಭವಿಸಬಹುದು, ಹಾಗೂ ಇಲ್ಲಿನ ಕೆಲಸಕ್ಕೆ ರಾಜೀನಾಮೆ ಬಿಸಾಕಿ ಹಳ್ಳಿಯಲ್ಲಿ ಒಂದೆಕರೆ ತೋಟ ತೆಗೆದುಕೊಂಡು ಹಾಯಾಗಿದ್ದುಬಿಡೋಣ, ಈ ಯಾಂತ್ರಿಕ ಜೀವನ ಬೋರ್ ಬೋರ್" ಎಂದೆಲ್ಲಾ ಅಂದುಕೊಳ್ಳದಿರಿ. ಅಲ್ಲಿನೀವು ಸಂಪಾದಿಸುವ ನೂರನೇ ಒಂದು ಭಾಗದ ಸಂಪಾದನೆ ಇಲ್ಲಿಲ್ಲ. ಆ ಸಂಪಾದನೆಯಲ್ಲಿ ಹತ್ತು ರೂಪಾಯಿ ಕೊಟ್ಟರೆ ಅಂಗಡಿಯಲ್ಲಿ ನಿಮಗೆ ಇದರ ಅಪ್ಪನಂತಹ ನಿಂಬೆ ಹಣ್ಣು(ವಯಸ್ಸಾದದ್ದು ಅಂತಲ್ಲ ಮತೆ) ದೊರಕುತ್ತದೆ. ಆ ಹತ್ತು ರೂಪಾಯಿ ಯಾವ ಲೆಕ್ಕ. ಆದರೆ ಇಲ್ಲಿ ಹತ್ತು ರೂಪಾಯಿ(ಸಂಪಾದನೆಯ ವಿಷಯದಲ್ಲಿ) ಯೇ ದೊಡ್ಡ ಲೆಕ್ಕ. ಹಾಗಾಗಿ ನಿಮ್ಮ ಮಜ ನಿಮಗೆ, ನಮ್ಮ ಮಜ ನಮಗೆ. ಪುರ್ಸೊತ್ತಾದರೆ ನಮ್ಮ ಮನೆಗೆ ಬಂದು ಒಂದು ಅನುಭವ ತೆಗೆದುಕೊಳ್ಳಿ. ಅಪರೂಪಕ್ಕೆ ಎಲ್ಲವೂ ಚಂದ ನಿತ್ಯ ಸಿಕ್ಕರೆ ವಿಶ್ವಸುಂದರಿಯೂ ಬೋರ್ ಬೋರ್.

Tuesday, July 12, 2011

"ಹೃದಯದ ಪ್ರೀತಿಯಂತೆ"...



"ಹೃದಯದ ಪ್ರೀತಿಯಂತೆ" ಎಂಬ ತಲೆ ಬರಹದೊಂದಿಗೆ ೧೦-೦೭-೧೧ ರ ಪ್ರಜಾವಾಣಿ ಸಾಪ್ತಾಹಿಕ ಪುರವಣಿಯಲ್ಲಿ ನನ್ನ ಒಂದು ಜೇನಿನಹಿಂದೆ ಪುಸ್ತಕದ ರಿವ್ಯೂ ಬಂದಿದೆ. ಬರೆದ ಆರ್ ಸುಧೀಂದ್ರ ಕುಮಾರ್ ರವರಿಗೂ ಪ್ರಜಾವಾಣಿ ಬಳಗಕ್ಕೂ ಹಾಗೂ ಬೆನ್ನು ತಟ್ಟಿ ಪ್ರೋತ್ಸಾಹಿಸಿದ ಅಕ್ಷರ ಹೆಗ್ಗೋಡು ಇವರಿಗೂ ಮತ್ತು ನಿಮಗೂ ಅನಂತಾನಂತ ಧನ್ಯವಾದಗಳು

Monday, July 11, 2011

ಏನಾಗುತ್ತೋ ಆ ಶಿವನೇ ಬಲ್ಲ.



"ಯಮ್ಮನೆ ಸೊಸೆ ಮೀಟಿಂಗ್ ಇದ್ದು ಹೇಳಿ ಹೊಯ್ದ, ಇನ್ನೂ ಬರ್ಲ್ಯಪ ಎಂತ ಮಾಡ್ತ ಏನ" ಇದು ಈಗ ಮೂರ್ನಾಲ್ಕು ವರ್ಷದಿಂದ ಈಚೆಗೆ ನಮ್ಮ ಹಳ್ಳಿ ಮನೆಯಲ್ಲಿನ ವೃದ್ಧರ ಗೊಣಗಾಟ. ಸ್ತ್ರೀ ಶಕ್ತಿ ಸಂಘಟನೆ ಹಳ್ಳಿ ಹಳ್ಳಿಯ ಮೂಲೆ ಮೂಲೆಯಲ್ಲಿಯೂ ಮೂಲೆ ಮೂಲೆಯಲ್ಲಿಯೂ ಹಬ್ಬಿ ತಿಂಗಳಿಗೊಂದು ಮೀಟಿಂಗ್ ಚರ್ಚೆ ವಾದ ವಿವಾದ ಮುಂತಾದವುಗಳು ಸಾಂಗೋಪಸಾಂಗವಾಗಿ ನಡೆಯುತ್ತಿವೆ. ಮೂರುವರ್ಷದ ಹಿಂದಿದ್ದ ರಭಸ ಕೊಂಚ ಕಡಿಮೆಯಾದರೂ ಏನೋ ಒಂದಿಷ್ಟು ಕೆಲಸ ಮಾಡುತ್ತಿದ್ದಾರೆ ಹಳ್ಳಿಯ ಮಹಿಳಾಮಣಿಗಳು. ಆರಂಭದಲ್ಲಿ ಇಪ್ಪತ್ತರ ಸಂಖ್ಯೆಯಲ್ಲಿದ್ದ ಸದಸ್ಯರ ತಂಡ ೮-೧೦ ಕ್ಕೆ ಇಳಿದಿದೆ ಕೆಲವೆಡೆ, ಮತ್ತೆ ಒಡೆದು ಹರಿದು ಹಂಚಿ ಮೂರ್ನಾಲ್ಕು ಸಂಘಗಳಾಗಿವೆ ಹಲವೆಡೆ.

ನಮ್ಮ ಹಳ್ಳಿಗಳಲ್ಲಿ ಸಾಮಾನ್ಯವಾಗಿ ಮನೆಯ ಒಡತಿಯ ಮೇಲೆ ಸಂಸಾರ ಅವಲಂಬಿತವಾಗಿರುತ್ತದೆ. ಇಲ್ಲಿ ಗಂಡು ಒಂಥರಾ ಜೇನಿನಲ್ಲಿನ ಗಂಡು ನೊಣ ಇದ್ದ ಹಾಗೆ. ಕೆಲಸ ಮಾಡಿದರೂ ನಡೆಯುತ್ತದೆ ಮಾಡದಿದ್ದರೂ ತೀರಾ ವ್ಯತ್ಯಯ ಏನಿಲ್ಲ. ಬಹುಪಾಲು ಗಂಡಸರ ಕೆಲಸ ಎಂದರೆ ಪೇಟೆ ಪೇಟೆ ಪೇಟೆ. ಆದರೆ ಮಹಿಳೆ ಮಾತ್ರಾ ಹಾಗಲ್ಲ, ಮನೆಯ ಒಪ್ಪಓರಣದಿಂದ ಹಿಡಿದು ಅಡುಗೆ ತುಡುಗೆ ಮುಗಿಸಿ ನಂತರ ತೋಟ ಗದ್ದೆಯವರೆಗೂ ವಿಸ್ತರಿಸುತ್ತದೆ ಆಕೆಯ ವ್ಯಾಪ್ತಿ. "ಗೃಹಣೀ ಗೃಹ ಮುಚ್ಚ್ಯತೆ" ಎಂಬ ಸ್ಲೋಗನ್ ನೂರಕ್ಕೆ ನೂರರಷ್ಟು ಹಳ್ಳಿಯ ಹೆಂಗಸಿಗೆ ಅನ್ವಯಿಸುತ್ತದೆ. ಪೇಟೆಯಲ್ಲಿ ಗಂಡಸು ಕೂತರೆ ಸಂಸಾರ ಕಷ್ಟ ಇಲ್ಲಿ ಹೆಣ್ಣು ಕೂತರೆ ಸೇಮ್ ಟು ಸೇಮ್.( ಈಗ ದುಡಿಯುವ ಹೆಣ್ಣುಮಕ್ಕಳು-ಇಬ್ಬರ ದುಡಿಮೆ ಇದಕ್ಕೆಲ್ಲಾ ಹೊರತಾಗಿ)

ಈ ಸಂಘಗಳು ಬಂದಮೇಲೆ ಹೆಂಗಸರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಹಣಕಾಸಿನ ವ್ಯವಹಾರಕ್ಕೂ ತೊಡಗಿಸಿಕೊಂಡಿದ್ದಾರೆ. ಒಂಥರಾ ಬೇಷ್ ಎನ್ನಬಹುದಾದ ಕೆಲಸವೇ, ಆದರೆ ಮತ್ತೊಂದು ದೃಷ್ಟಿಯಲ್ಲಿ ನೋಡಿದಾಗ ಹಳ್ಳಿಯ ಸಂಸಾರಗಳು ಸ್ವಲ್ಪ ಯಡವಟ್ಟು ಹೆಜ್ಜೆಯನ್ನಿಡಲು ಕಾರಣವಾಗಿದೆ. ಅದೇನು ಅಂತಹಾ ಪ್ರಪಂಚ ಮುಳುಗುವಂತಹಾ ಅಥವಾ ಎಲ್ಲಾ ಯಕ್ಕುಟ್ಟಿ ಹೋಯಿತು ಎನ್ನುವಂತಹ ಸಮಸ್ಯೆ ಅಲ್ಲದಿದ್ದರೂ ತೀರಾ ಹಣದ ಹಿಂದೆ ಬಿದ್ದರೆ ಅಲ್ಪಸ್ವಲ್ಪ ಏರುಪೇರು ಖಂಡಿತ ಅಂತ ಬಹುಜನರ ಮಾತು. ಸಂಘಗಳಿಗೆ ಹೇರಳ ಹಣ ಹರಿದು ಬರುತ್ತಿವೆ. ಅದು ಸಾಲದ ರೂಪದಲ್ಲಿ, ವಾರಕ್ಕೊಮ್ಮೆ ಕಂತಿನ ಮೂಲಕ ಕಟ್ಟುವ ಷರತ್ತಿನೊಂದಿಗೆ. ಹಾಗೆ ಹರಿದು ಬಂದ ಹಣ ಸಾಲದ ಕೂಪಕ್ಕೆ ನಿಧಾನವಾಗಿ ಮಹಿಳೆಯರನ್ನು ತಳ್ಳುತ್ತಿದೆ. ಇದು ವಿರಳ ಸಂಖ್ಯೆಯಲ್ಲಿ ಜನರಿರುವ ಸ್ಥಳವಾದ್ದರಿಂದ ಪಡೆದ ಸಾಲ ದುಡಿಮೆಗೆ ಒಡ್ಡುವುದು, ಮತ್ತೆ ಅದರಿಂದ ಗಳಿಸುವುದು ಕಷ್ಟಸಾದ್ಯ. ಹಾಗಾಗಿ ಪಡೆದ ಸಾಲ ಕೊಳ್ಳುಬಾಕತನಕ್ಕೆ ವ್ಯಯವಾಗುತ್ತಿದೆ. ಸದ್ಯ ಸಣ್ಣರೂಪದ ಸಮಸ್ಯೆ ಮುಂದೆ ಬೃಹತ್ ಗಾತ್ರದ ಸಮಸ್ಯೆಯಾಗುವ ಮುನ್ನೋಟ ಗೋಚರಿಸುತ್ತಿದೆ ಎಂಬುದು ಚಾಲ್ತಿ ಮಾತು.

ಇಷ್ಟೆ ಸಣ್ಣದೊಂದು ಸಮಸ್ಯೆಯ ನಡುವೆ ಹಳ್ಳಿ ಮಹಿಳೆ ಮುಂದೆ ಬರುವ ಹೆಜ್ಜೆ ಇಡುತ್ತಿದ್ದಾಳೆ, ಏನಾಗುತ್ತೋ ಆ ಶಿವನೇ ಬಲ್ಲ.

ಆ ನೆನಪುಗಳ ಹಿಂದೆ "ಏನೋ" ಇದೆ



ನಿಮಗೆ ಗೊತ್ತಾ...?. ಥೋ ನಾನು ಯಾವಾಗ್ಲೂ ಹೀಗೆ, ನಿಮಗೆ ಗೊತ್ತಿದ್ದರೆ ಮತ್ತೇಕೆ ನಾನು ಹೇಳುವುದು. ಆದರೆ ಏನು ಮಾಡುವುದು ಮಾತಿಗೆ ಮುಂಚೆ ಹೀಗೆ ಹೇಳುವುದು ಅಭ್ಯಾಸವಾಗಿಬಿಟ್ಟಿದೆ. ನನ್ನ ಪರಿಚಯದ ಜನ ಒಬ್ಬರು ಹೀಗೆ ಮಾತಿನ ನಂತರ "ನಾನು ಏನೆ ಹೇಳ್ದೇ ಹೇಳು?" ಅಂತ ಕೇಳಿ ತಮ್ಮ ಮಾತನ್ನು ಮುಂದುವರೆಯಿಸುತ್ತಿದ್ದರು. ಎಲ್ಲೋ ಅಪರೂಪಕ್ಕೆ ಸಿಗುವ ಜನ ಹೀಗೆ ಮಾತಿನ ನಡುವೆ ಕೇಳಿದರೆ ಓಕೆ. ಆದರೆ ನಿತ್ಯ ಸಿಗುವ ಜನಕ್ಕೆ ಅದೊಂತರಾ ಹಿಂಸೆಯಾಗುತ್ತದೆ. ಅವರ ಹೆಂಡತಿಯ ತಮ್ಮ ಇವರ ಈ ಮೇಲ್ಮಾತಿನಿಂದ ರೋಸಿ ಹೋಗಿದ್ದ. ಒಂದು ಸಾರಿ "ನಾನು ಸಿರ್ಸಿಯಿಂದ ಮೂರು ಗಂಟೆ ಬಸ್ಸಿಗೆ ಹೊರಟೆ" ಎಂದು ಹೇಳಿ ಮುಂದೆ ಯಥಾಪ್ರಕಾರ "ನಾನು ಏನು ಹೇಳ್ದೆ ಹೇಳು" ಅಂತ ಹೇಳಿ ಮಾತು ಮುಂದುವರೆಸಲು ಅಣಿಯಾದರು. ಆದರೆ ಬಾವನ ಖಾಯಂ ಡೈಲಾಗ್ ಕೇಳಿ ರೋಸಿದ್ದ ನೆಂಟ "ನಾನು ಸಿರ್ಸಿಯಿಂದ ಮೂರು ಗಂಟೆ ಬಸ್ಸಿಗೆ ಹೊರಟೆ" ಎಂದು ಪುನರುಚ್ಚರಿಸಿದ. ಬಾವ ಕಕ್ಕಾಬಿಕ್ಕಿ.
ಅಷ್ಟೇನೂ ಮಜ ಕೊಡಲಿಲ್ಲವ ಇದು, ಹೋಗಲಿ ಬಿಡಿ ನಾನು ಕುಟ್ಟಲು ಶುರುಮಾಡಿದ್ದೇ ಒಂದು ಈಗ ಬರದದ್ದೇ ಮತ್ತೊಂದು. ಅದೇ ಹೇಳಿದೆನಲ್ಲ ನಾನು ಮೊನ್ನೆ ಜರ್ಮನಿಗೆ ಹೋಗಿದ್ದೆ. ಯಾವಾಗ ಹೇಳಿದ್ದೆ ಎಂದಿರಾ?, ಇರಲಿ ತೀರಾ ಎಲ್ಲದಕ್ಕೂ ಹೀಗೆ ಕೇಳುತ್ತಾಹೋದರೆ ನನಗೂ ರಗಳೆ ಎನೋ ಒಂಚೂರು ಪುರ್ಸತ್ತು ಮಾಡಿಕೊಂಡು ರೀಡಲು ಕುಳಿತ ನಿಮಗೂ ಕಸಿವಿಸಿ. ನಾನು ಜರ್ಮನಿಗೆ ಹೋಗಿದ್ದೆ ಎಂದರೆ ನನ್ನ ಚರಾಸ್ತಿಯಾದ ಈ ದೇಹದ ಸಮೇತವಲ್ಲ. ಮಾನಸಿಕವಾಗಿ ಅಷ್ಟೆ. ನಮ್ಮ ಹೋಂ ಸ್ಟೆ ಗೆ ನವದಂಪತಿಗಳಾದ ಮಂಜುನಾಥ್ ಎಂಡ್ ಜ್ಯೋತಿ ಅತಿಥಿಗಳಾಗಿ ಬಂದು ಒಂದು ವಾರ ಉಳಿದುಕೊಂಡಿದ್ದರು. ಮಂಜುನಾಥ್ ನನ್ನನ್ನು ನಿತ್ಯ ಜರ್ಮನಿಗೆ ಕರೆದುಕೊಂಡು ಹೋಗುತ್ತಿದ್ದರು, ಅವರ ಜತೆ ಹೋಗಿದ್ದೆ ಅಂದೆ. ಈ ಮೇಲಿನ ಪಟದಲ್ಲಿ ಕಾಣುವ ಮಂಜುನಾಥ್ ಒಳ್ಲೆಯ ಮಾತುಗಾರ, ಮನಬಿಚ್ಚಿ ಕೂರಬೇಕಷ್ಟೆ. ತಾವು ಉಳಿದ ಕಾರಣಕ್ಕೆ ನನಗೆ ಹಣಕೊಟ್ಟು ಉಚಿತವಾಗಿ ತಾವು ಕಂಡ ಜರ್ಮನಿಯ ಕುರಿತು ಚನ್ನಾಗಿ ಹೇಳಿದರು. ಅವರಿಗೆ ಅವರದೇ ಆದ ನಿಲುವಿದೆ, ಹಾಗಾಗಿ ಒಳ್ಳೆ ಮಜಕೊಡುತ್ತಾರೆ. ಅವರ ಸ್ನೇಹಿತನೊಬ್ಬ ಹೇಳಿದನಂತೆ "ಅಲ್ಲ ಕಣಯ್ಯಾ ಹಳ್ಳಿಗಳೆಲ್ಲಾ ಆಧುನಿಕತೆಯ ಸೋಂಕಿಗೆ ಬಲಿಯಾಗಿ, ತಮ್ಮ ಮೂಲ ಸೊಗಡನ್ನು ಕಳೆದುಕೊಂಡು ಮಜ ಕೊಡುತ್ತಿಲ್ಲ ಈಗ" ಎಂದನಂತೆ.ಆಗ ಮಂಜುನಾಥ್ ಹೇಳಿದರಂತೆ "ಅದು ಸರಿ ನೀನು ಹಣಕ್ಕೋಸ್ಕರ ಹಳ್ಳಿ ತೊರೆದು ಇಲ್ಲಿ ಜುಂ ಅಂತ ಕಾರಲ್ಲಿ ಓಡಾಡ್ತೀಯಾ, ಆಧುನಿಕತೆಯ ಎಲ್ಲಾ ಸವಲತ್ತುಗಳನ್ನು ಹೆಂಡತಿ ಮಕ್ಕಳ ಸಮೇತ ಅನುಭವಿಸುತ್ತೀಯಾ, ಆದರೆ ನೀನು ಬಿಟ್ಟು ಬಂದ ಹಳ್ಳಿ ಮಾತ್ರಾ ನಿನ್ನನ್ನು ನಿನ್ನ ನೆನಪನ್ನು ನೂರು ವರ್ಷ ಹಿಂದೆ ಇಟ್ಟಿರಬೇಕು ಅಂತ ಅಂದರೆ ಹೇಗೆ, ಅವರೂ ಅನುಭವಿಸಬೇಕಲ್ಲ." ಎಂದರಂತೆ. ಈಗ ನಿಮಗೂ ಒಂಚೂರು ಹಾಗೆ ಅನ್ನಿಸಿರಬೇಕಲ್ಲ..?

ಏನೋ..ಅಷ್ಟು ಹೇಳಿಬಿಟ್ಟರು ಎಂದರೆ ದೊಡ್ದ ಮಜಾನ? ಎಂಬುದು ನಿಮ್ಮ ಪ್ರಶ್ನೆ. ಆದರೆ ಅಷ್ಟೇ ಅಲ್ಲ ಅವರು ತಾವು ಬೆಳೆದದ್ದು, ಓದಿದ್ದು, ಮದುವೆಯಾದದ್ದು, ಜರ್ಮನಿಯ ಅನುಭವ,ಅಲ್ಲಿಯವರ ವರ್ತನೆ, ಅಲ್ಲಿನ ಸರ್ಕಾರದ ಜನರ ಕಾಳಜಿ ಮುಂತಾದ್ದನ್ನೆಲ್ಲಾ ಮಜವಾಗಿ ಹೇಳಿದರು. ಜತೆಗೆ ಆ ಮನುಷ್ಯ ಎಲ್ಲರೂ ನಮ್ಮ ಸರ್ಕಾರವನ್ನು ದೂಷಿಸುವಂತೆ ದೂಷಿಸಲಿಲ್ಲ, ನಮ್ಮ ಸರ್ಕಾರ ಹೀಗಿರುವುದಕ್ಕೆ ನಾವೆಷ್ಟು ಪಾಲುದಾರರು ಎಂಬುದರ ಕುರಿತು ಒಳನೋಟವನ್ನು ಬೀರಿದರು. "ನಾನು ಸಾಫ್ಟ್ ವೇರ್ ಇಂಜನಿಯರ್ ನಿಜ, ನನ್ನ ಸಂಬಳ ಐದಂಕಿಯದೂ ನಿಜ, ಆದರೆ ನಾನೇನೂ ಮಹಾನ್ ಸಂಶೋಧಕನಲ್ಲ. ಸಂಶೋದನೆಗಳು ಏಕವ್ಯಕ್ತಿಯಿಂದ ಮಾತ್ರಾ ಸಾದ್ಯ, ನಾವೆಲ್ಲ ಗುಂಪಿನಲ್ಲಿ ಯಾರೋ ಕಂಡುಹಿಡಿದದ್ದನ್ನ ರೂಪಾಂತರ ಮಾಡುವ ಜನ ಅಷ್ಟೆ. ಅದೂ ಕೂಡ ನನ್ನ ಬದುಕಿನ ನಿರ್ವಹಣೆ, ನನ್ನ ಮಜಕ್ಕೋಸ್ಕರ......" ಹೀಗೆ ಮುಂದುವರೆದರು. ಒಟ್ಟಿನಲ್ಲಿ ಜರ್ಮನಿಯ ಯಾತ್ರೆ ಮಜವಾಗಿತ್ತು.

ಅವರು ಹೋದ ಮಾರನೇ ದಿನ ಪ್ರಸನ್ನರ ಹತ್ರ ಚಾಟಿಸುತ್ತಿದ್ದೆ. ಏನ್ ನಡೀತಾ ಇದೆ ಎಂದರು ಪ್ರಸನ್ನ. ಇನ್ನೊಂದು ಹೋಂ ಸ್ಟೆ ಕಟ್ಟಡದ ಕೆಲಸ ನಡೀತಾ ಇದೆ, ಅದು ಲಕ್ಷುರಿ ಸ್ಟೇ ಎಂದೆ. ಲಕ್ಷುರಿ ಅಂದ್ರೆ?. ಅದೇ ದಿನಕ್ಕೆ ಐದು ಸಾವಿರ ಒಂದು ರೂಂ ಗೆ ಅಂದೆ. ಅಯ್ಯಪ್ಪಾ ಅದು ನಮಗೆ ನಿಲುಕದ್ದು ಎಂದು ಟೈಪಿಸಿ ನಂತರ " ನಾನು ಆವಾಗ ನಿಮ್ಮಮನೆಗೆ ಬಂದಿದ್ದೆನಲ್ಲ ಅದು ನಿಜವಾದ ಹೋಂ ಸ್ಟೆ, ಒಳ್ಳೆ ಮರೆಯಲಾರದ ಊಟ, ತಿರುಗಾಟ ವಾಹ್, ನಂತರ ಅವರೇ ಬ್ರಾಕೆಟ್ ನಲ್ಲಿ ಅದೂ ಬಿಟ್ಟಿಯಾಗಿ ಎಂದು ಟೈಪಿಸಿ "ಹೇಗೆ ನಾಚಿಕೆ ಬಿಟ್ಟು ಟೈಪಿಸಿದ್ದೇನೆ ಅಂತ ಅಂದರು. ನನಗೆ ಒಂದು ಕ್ಷಣ ಏನೂ ತೋಚಲಿಲ್ಲ. ನನಗೆ ಅವರು ಬಂದದ್ದು ನೆನಪು ತಿರುಗಿದ್ದು ನೆನಪು ಆದರೆ ಹಣದ ವ್ಯವಹಾರ ನೆನಪಿರಲಿಲ್ಲ. ಅಥವಾ ನನಗೆ ಅಂದು ಹಾಗೆ ಅತಿಥಿಗಳನ್ನು(ಎಲ್ಲೋ ವರ್ಷಕ್ಕೆ ಒಬ್ಬಿಬ್ಬರು) ಹಾಗೆ ನೋಡಿಕೊಳ್ಳಲು ಸಾದ್ಯವೂ ಇತ್ತು, ಅದು ಅವರ ಪಾಲಷ್ಟೆ. ಎಂದು ಬಾಯ್ ಎಂದೆ.

ನನಗೆ ಮಂಜುನಾಥ್ ಆವಾಗಾವಾಗ ನೆನಪಾದಂತೆ ನಾನು ಪ್ರಸನ್ನರಿಗೆ ಆವಾಗಾವಾಗ ಹೀಗೆ ನೆನಪಾಗುತ್ತೇನೆಲ್ಲ ಎಂದು ಖುಷಿಯಾಯಿತು. ಆದರೆ ಆ ನೆನಪುಗಳ ಹಿಂದೆ ಏನೋ ಇದೆ, ಆ "ಏನೋ" ಎಂಬುದರ ಹಿಂದೆ ನೋ ಎನ್ನುತ್ತಾ ಹೋದಾಗ ಒಂದು ತರಹ. ಯಸ್ ಎನ್ನುತ್ತಾ ಹೋದಾಗ ಮತ್ತೊಂದು ತರಹಾ ಎನ್ನುವುದಂತೂ ನಿತ್ಯನೂತನ ಸತ್ಯ.

ಅಂತಿಮವಾಗಿ: ನಮ್ಮೂರಲ್ಲೊಬ್ಬರು "ಯನ್ನತ್ರ ದುಡ್ಡೇ ಇಲ್ಯಾ... ದೇವ್ರಾಣೆ" ಎಂದು ಪ್ರತೀ ವಾಕ್ಯದ ಅಂತ್ಯದಲ್ಲಿ ದೇವ್ರಾಣೆಯನ್ನು ಬಳಸುತ್ತಾರೆ. ಮೊನ್ನೆ ಅವರು ಮೂರು ಲಕ್ಷವನ್ನು ಕಳೆದುಕೊಂಡರು, ವ್ಯವಹಾರವೊಂದರಲ್ಲಿ. ಛೆ ಪಾಪ....!

ಖಂಡಿತಾ ಕೊನೇದು:ಎಂತಾ ಬರೆದೆ ಮಾರಾಯ ಒಂದಕ್ಕೊಂದು ಸಂಬಂಧವೇ ಇಲ್ಲಾ ಅಂತ ಅಂದುಕೊಳ್ಳಬೇಡಿ. ಎಲ್ಲೋ ಏನೋ ಒಂಥರಾ ನಂಟಿದೆ. ಗಂಟು ಬಿಚ್ಚಬೇಕಷ್ಟೆ.

Sunday, July 10, 2011

ಕೂ..........ಹುಯ್..ರೈಲು ಬಂತ್ರೋ.....




ತಾಳಗುಪ್ಪ ಎಂಬ ಹೆಸರು ಕೇಳಿದಾಕ್ಷಣ ಬಹಳ ಜನರಿಗೆ ನೆನಪಾಗುವುದು ರೈಲು. ಕಟ್ಟಕಡೆಯ ನಿಲ್ದಾಣ ಎಂಬ ಹೆಗ್ಗಳಿಗೆ ೧೯೩೯ ರಷ್ಟು ಹಳೆಯದು ಎಂಬ ಇನ್ನೊಂದು ಹೆಗ್ಗಳಿಕೆ. ಹದಿನೇಳು ವರ್ಷದ ಹಿಂದೆ ಉಗಿಬಂಡಿ ಚುಕುಬುಕು ಸದ್ದನ್ನು ನಿಲ್ಲಿಸಿ ಒಂಥರಾ ಬಿಕೋ ಎನ್ನುವ ವಾತಾವರಣ ಅಲ್ಲಿ ನಿರ್ಮಾಣವಾಗಿತ್ತು. ಇಂದು ಮತ್ತೆ ವೊ.... ಎಂದು ಕೂಗುತ್ತಾ ಬ್ರಾಡ್ ಗೇಜ್ ಡಿಸೇಲ್ ಟ್ರೈನ್ ಬಂದಾಗ ಜನ ಪುಳಕಿತರಾದರು. ಸಾಗರದಲ್ಲಿ ಮುನಿಯಪ್ಪರಿಂದ ಉದ್ಘಾಟನೆಗೊಂಡು ತಾಳಗುಪ್ಪಕ್ಕೆ ಬಂದು ಹೋಯಿತು ರೈಲು. ಹತ್ತಾರು ವರ್ಷದಿಂದ ಸಾಕಷ್ಟು ಹೋರಾಟ ಹಾರಾಟ ನಡೆದು ಅಂತಿಮವಾಗಿ ಚಕ್ ಚಕ್ ಸದ್ದು ಮೂಡಿತು.

ಒಂಥರಾ ಖುಷಿಯಾಗುತ್ತಿದೆ ನೋಡಿ, ಈ ಕಾಲದಲ್ಲಿಯೂ ಟ್ರೈನ್ ಬಂದರೆ. ನೀವೆಲ್ಲಾ ವಿಮಾನ ಬಂದರೂ ಪುಳಕಿತರಾಗದಷ್ಟು ಎತ್ತರದಲ್ಲಿದ್ದೀರಿ ನಾವು...! ಇನ್ನೂ ಟ್ರೈನ್ ಗೆ. ಇರಲಿ ಇನ್ನು ಜೋಗಕ್ಕೆ ಬರುವಾಗ ಆರಾಮ್. ಆದರೆ ಸದ್ಯ ಮೈಸೂರು-ತಾಳಗುಪ್ಪ ಟ್ರೈನ್ ಮಾತ್ರಾ ಬರುತ್ತಂತೆ, ಬೆಂಗಳೂರಿನಿಂದ ಬರುವ ಟ್ರೈನ್ ಮುಂದಿನ ದಿವಸಗಳಲ್ಲಂತೆ. ಏನೆ ಇರಲಿ ಕೂ..........ಹುಯ್..ರೈಲು ಬಂತ್ರೋ..... ಎಂಬುದು ನಮ್ಮೂರಿನ ಬಿಸಿಬಿಸಿ ಸುದ್ದಿ ಸದ್ಯ.