
"ರತ್ನಾದ ಮಣಿ ಮಂಟಪಾಕೆ ಸ್ವಾಮಿ ಪ್ರತ್ಯಕ್ಷವಾಗಿ ನೀ ಬಾರಯ್ಯ..." ಹೀಗೊಂದು ಹಾಡು ನನ್ನ ಅಕ್ಕಂದಿರು ಸುಶ್ರಾವ್ಯವಾಗಿ ಹಾಡತೊಡಗಿದರೆಂದರೆ ಅದು ಚೌತಿ ಹಬ್ಬದ ಅಥವಾ ಮತ್ಯಾವುದೋ ದೇವರ ಕಾರ್ಯದ ಮಂಗಳಾರತಿ ಸಮಯ ಅಂತ. ನನ್ನ ಎರಡು ಅಕ್ಕಂದಿರ(ನನಗೆ ಮೂವರು ಅಕ್ಕಂದಿರು, ಅದರಲ್ಲಿ ಇಬ್ಬರು ಸಂಗೀತದ ಪೆಟ್ಟಿಗೆ, ಇಲ್ಲಿ ಹೆಸರನ್ನು ಉದ್ದೇಶಪಟ್ಟೇ ದಾಖಲಿಸುತ್ತಿಲ್ಲ, ಯಾವ ಇಬ್ಬರಿಗೂ ನಾವೇ ಅಂದಾಗಲಿ ಅರ್ಥ...! ಸುಮ್ಮನೆ ಮೂರನೆಯವರಿಗೆ ಬೇಜಾರು ಯಾಕೆ?) ಹಿಟ್ ಹಾಡುಗಳಲ್ಲಿ ಇದೂ ಒಂದು. ಇವತ್ತು ಮೂರು ಸಂಜೆ ಹೊತ್ತಿನಲ್ಲಿ ತುಳಸಿಪೂಜೆಯನ್ನು ಅಜ್ಜ ಮೊಮ್ಮಗ ಶ್ರದ್ಧೆಯಿಂದ ಮಾಡುತ್ತಿರಬೇಕಾದಾಗ ನನ್ನವಳು ಅದೇ ಹಾಡನ್ನು ಗೊಣಗುಟ್ಟಿದಳು. ಅಮ್ಮ ಅದಕ್ಕೆ ದನಿ ಸೇರಿಸಿದಳು. ಆದರೂ ಆ ಹಾಡಿನ ಗತ್ತು ಬರಲಿಲ್ಲ. ನನ್ನ ಮಗ ನನಗೆ ಅವನ ವಯಸ್ಸಿನಲ್ಲಿ ಹೇಗೆ ಶ್ರದ್ಧೆ ಇತ್ತೋ ಅದೇ ಆಸಕ್ತಿಯಿಂದ ತುಳಸಿ ಗಿಡಕ್ಕೆ ಅಲಂಕಾರ ಮಾಡಿ ನೆಲ್ಲಿ ಚಂಡೆ ತಂದು ಸಿಗಿಸಿದ್ದ. ಮತ್ತು ಸಿಕ್ಕಾಪಟ್ಟೆ ಶ್ರದ್ಧೆಯಿಂದ ಕಾರ್ತಿಕ ದೀಪ ಹಚ್ಚುತ್ತಿದ್ದ. ಅಪ್ಪಯ್ಯ ಈಗ ಇಪ್ಪತ್ತೈದು ವರ್ಷದ ಹಿಂದಿನ ಅದೇ ಶ್ರಧ್ದೆಯಿಂದ ಪೂಜೆ ಮಾಡುತ್ತಿದ್ದ.
ಅಮ್ಮ ಹೆಂಡತಿ ಕೂಡ ತನ್ಮಯರಾಗಿದ್ದರು.
ನನಗೆ ಮಾತ್ರಾ ಇವೆಲ್ಲ ಸಣ್ಣ ಮಕ್ಕಳ ಆಟದಂತೆ ಭಾಸವಾಗುತ್ತಿತ್ತು. ಹೌದು ಅದೇಕೋ ನನಗೆ ಅಲ್ಲಿ ತೊಡಗಿಸಿಕೊಳ್ಳಲಾಗುತ್ತಿಲ್ಲ. ಹಾಗಾಗಿ ಕಳೆದುಕೊಳ್ಳುವುದೇ ಹೆಚ್ಚು. ಭಕ್ತಿಯ ಭಾವ ಮೂಡಿಬರಲೂ ಪುಣ್ಯ ಮಾಡಿರಬೇಕು....!. ಆದರೆ ನಾನು ಒಂದೆರಡು ಕ್ಷಣ ಬಾಲ್ಯಕ್ಕೆ ಜಾರಿದೆ. ದೊಡ್ಡ ದೊಡ್ಡ ಅಕ್ಕಂದಿರು "ರತ್ನಾದ......" ಹಾಡುತ್ತಿದ್ದರು ನಾನು ಚಡ್ಡಿ ಹಾಕಿಕೊಂಡು ದೀಪ ಹಚುತ್ತಿದ್ದೆ ಆದರೆ ಆಗಿನ ಚಡ್ಡಿ ಈಗಿನಂತೆ ಮೊಳಕಾಲಿನ ವರೆಗೆ ಬರುತ್ತಿರಲಿಲ್ಲ ಇನ್ನೂ ಬಹಳ ಮೇಲೆಯೇ ಇರುತ್ತಿತ್ತು.....!
ಬೇಕು ಬೇಕು ಇವೆಲ್ಲಾ ಬೇಕು ಹಳೆಯ ಸುಮಧುರ ನೆನಪು ಮರುಕಳಿಸಲಾದರೂ ಬೇಕು. ಮಜ ಇರುವುದೇ ಅಲ್ಲಿ.
ನಿಮಗೂ ನೆನಪಾಗಿರಬೇಕು ಅಲ್ಲ್ವಾ..? ಆಗಲಿಲ್ಲವಾ ನೀವು ನತದೃಷ್ಟರು ಬಿಡಿ. ನಿಮ್ಮ ಮಕ್ಕಳಿಗಾದರೂ
ಸುನೇರೇ ಫಲ್ ಗಳನ್ನು ಕಲ್ಪಿಸಿಕೊಡಿ. ದೊಡ್ಡವರಾದಮೇಲೆ ಹೀಗೆ ಕೊರೆಯುತ್ತಾರೆ. ಆವಾಗ ಹೀಗಿತ್ತು ಮಜ ಇತ್ತು........