Saturday, January 22, 2011

ಸತ್ಯವೆಂದರೆ ಸತ್ತರೂ ಸತ್ಯವೆ

ನಿಮಗೆ ತಥ್ ಅಂತ ಹಲವಾರು ಬಾರಿ ಅನ್ನಿಸಿರುತ್ತದೆ. ಸರ್ಕಾರಿ ಅಧಿಕಾರಿಗಳ ಲಂಚಗುಳಿತನವೋ,ರಾಜಕಾರಣಿಗಳ ಧನದಾಹವೋ, ಎಲ್ಲೆಲ್ಲಿಯೋ ನಡೆಯುವ ಮೋಸವೋ, ಹೀಗೆ ಹತ್ತು ಹಲವಾರು ಘಟನೆಗಳನ್ನು ಕೇಳಿದಾಗ ಪತ್ರಿಕೆಗಳಲ್ಲಿ ಓದಿದಾಗ ಅಥವಾ ಕಣ್ಣಾರೆ ನೋಡಿದಾಗ. ಆವಾಗೆಲ್ಲಾ ನಮ್ಮ ಭವ್ಯ ಭಾರತದ ಬಗ್ಗೆ ಕೇವಲವಾಗಿ ಮಾತನಾಡಿಬಿಡುತ್ತೇವೆ. ಈ ದೇಶದ ಕತೆ ಇಷ್ಟೇ ಕಣಣ್ಣೋ ಅಂತಲೋ ಅಥವಾ ಕತೆ ಮುಗಿದೇ ಹೋಯಿತು ಅಂತ ಅಂದುಬಿಡುತ್ತೇವೆ. ಈ ದೇಶದಲ್ಲಿ ಹಣ ಹಾಗೂ ಪ್ರಭಾವ ಇದ್ದರೆ ಏನೂ ಮಾಡಬಹುದು ಅಂತಲೂ ಅನ್ನುತ್ತೇವೆ. ಇರಿ ಒಂದು ನಿಮಿಷ ಹಾಗೆಯೇ ಇರಿ ನಾ ಕಂಡ ಒಂದು ಉದಾಹರಣೆ ಹೇಳುತ್ತೇನೆ. ಆಗ ನಿಮಗೆ ಅರ್ಥವಾಗುತ್ತದೆ. ನಮ್ಮ ಭಾರತ ದೇಶದ ಕಾನೂನು ಕಟ್ಟಲೆ ಕೋರ್ಟು ಕಛೇರಿ ಎಷ್ಟೊಂದು ಗಟ್ಟಿಯಾಗಿದೆ ಅಂತ ನಿಮಗೆ ಅರ್ಥವಾಗುತ್ತದೆ.
ಆತ ವೃತಿಯಲ್ಲಿ ಜ್ಯೋತಿಷಿ ಉಪವೃತ್ತಿಯಲ್ಲಿ ಕೃಷಿಕ. ಮೊದಲು ಉಲ್ಟಾ ಆಗಿತ್ತು, ಜನರ ಸಂಕಷ್ಟಗಳು ಪ್ರಪಂಚದಲ್ಲಿ ಹೆಚ್ಚಿದಂತೆಲ್ಲಾ ಬದಲಾಯಿತು ಅಷ್ಟೆ. ಆತ ನೂರಾರು ವರ್ಷದಿಂದ ಊರವರು ಪೂಜೆ ಪುನಸ್ಕಾರ ಮಾಡುತ್ತಿದ್ದ ಅರಳಿ ಮರ ಇರುವ ಜಾಗಕ್ಕೆಸೇರಿದಂತೆ ಇರುವ ರಸ್ತೆಗೂ ಬೇಲಿ ಹಾಕಿದ. ಕಾನೂನು ಎಲ್ಲ ತನ್ನ ಕೈಯಲ್ಲಿ ಇದೆ ಅಂದ. ಊರಿನ ನಾಲ್ಕಾರು ಮಂದಿ ಯುವಕರು ಹೋರಾಟಕ್ಕಿಳಿದರು. ಏನೆಲ್ಲಾ ನಾಟಕ ಮಾಡಿದ, ಒಂದು ಹಂತದಲ್ಲಿ ಯುವಕರಿಗೆ ಸೋಲೇ ಗತಿ ಎಂಬ ಹಂತ ಸೃಷ್ಟಿಯಾಯಿತು. ಆಗ ಅಸಿಸ್ಟೆಂಟ್ ಕಮಿಷನರ್ ತಹಾಶೀಲ್ದಾರ್ ಆದಿಯಾಗಿ ಯುವಕರ ಬೆಂಬಲಕೆ ನಿಂತರು. ಆತನಿಗೆ "ಉದಯ ಕರ್ನಾಟಕ" ಎಂಬ ಟ್ಯಾಬ್ಲಾಯ್ಡ್ ಬೆಂಬಲಕ್ಕೆ ಬಂತು. ಆದರೂ ಯುವಕರು ಜಗ್ಗಲಿಲ್ಲ. ಆನಂತರ ಜ್ಯೋತಿಷಿ ಹೈಕೋರ್ಟ್ ಮೆಟ್ಟಲೇರಿದ. ಆಗ ಯುವಕರೂ ಕೂಡ ಅಸಾಹಾಯಕರಾದರು. ಜ್ಯೋತಿಷಿ ಬೀಗಿದ. ಯುವಕರು ತಣ್ಣಗಾದರು. ಆದರೆ ಸತ್ಯದ ಸಾಹಸ ಬಿಡಲಿಲ್ಲ. ಆತನಿಗೆ ಕೇಸು ಕೋರ್ಟಿನಲ್ಲಿದೆ ಎಂಬುದೇ ಅಸ್ತ್ರ. ಕೊನೆಗೂ ಒಂದು ವರ್ಷದ ನಂತರ ಹೈಕೋರ್ಟ್ ಆತನ ಕೇಸನ್ನು ನಿರ್ದಾಕ್ಷಿಣ್ಯವಾಗಿ ವಜಾಗೊಳಿಸಿತು. ಎಂಬಲ್ಲಿಗೆ ಸಾರ್ವಜನಿಕರ ಆಸ್ತಿ ಬಹುಜನರ ಉಪಯೋಗಕ್ಕೆ ಉಳಿಯಿತು.
ಈಗ ಹೇಳಿ, ನಮ್ಮಲ್ಲೂ ಸತ್ಯ ನ್ಯಾಯ ನೀತಿ ಧರ್ಮ ಇದೆ ತಾನೆ?. ಆದರೆ ಅದನ್ನು ದಕ್ಕಿಸಿಕೊಳ್ಳಲು ಸ್ವಲ್ಪ ತಾಳ್ಮೆ ಇರಬೇಕು ಅಷ್ಟೆ. ಕೇಳುವವರು ಇರಬೇಕು ಅಷ್ಟೆ. ಕೇಳುಗರ ಸಂಖ್ಯೆ ಹೆಚ್ಚಿದಂತೆಲ್ಲಾ ನ್ಯಾಯ ನೀತಿ ಧರ್ಮ ತನ್ನಷ್ಟಕ್ಕೆ ಮೇರುಗುಗೊಳ್ಳುತ್ತದೆ.

ಸಾತ್ವಿಕರು ಸಿಡಿದೆದ್ದರೆ?

ಹಾಗೆಲ್ಲಾ ಆಗುತ್ತಾ ಅನ್ನೋದು ಬೇರೆ ಮಾತು. ಆದರೂ ಅಪರೂಪಕ್ಕೆ ಒಮ್ಮೆ ಆಗಿಬಿಡುತ್ತೆ. ವಿ ಭಟ್ರು ಮತ್ತು ತಂಡ ವಿಕ ದಿಂದ ರಾಜೀನಾಮೆ ಕೊಟ್ಟು ಹೊರಬಿದ್ದಾಗ ಏನಬರೆದದು ಹಾಯ್ ಪತ್ರಿಕೆ. ಒಂದು ಸತ್ಯ ಸಂಗತಿ ಎಂದರೆ ಹಾಯ್ ಎನೇ ಬರೆದರೂ ಹೇಗೇ ಬರೆದರೂ ಅವೆಲ್ಲಾ ಅಪ್ಪಟ ಸುಳ್ಳು ಅಂತ ಜನರಿಗೆ ತಿಳಿದಿದೆ. ಅದನ್ನು ಮಜಕ್ಕೆ ಓದುತ್ತಾರೆ ಅಷ್ಟೆ. ಮಜಕ್ಕಾದರೂ ಓದಲಿ ಸೀರಿಯಸ್ಸಾಗಿಯಾದರೂ ಓದಲಿ ಪತ್ರಿಕೆ ನಡೆಸುವವರಿಗೆ ರೊಕ್ಕ ಗ್ಯಾರಂಟಿ. ಅವರ ಪ್ರಯತ್ನ ಸಫಲವಾದಂತೆ. ಆದರೆ ಸುಕಾಸುಮ್ಮನೆ ಬರೆಯಿಸಿಕೊಂಡವರು ಇರುತ್ತಾರಲ್ಲ ಅವರು ಬೆಂದುಹೋಗುತ್ತಾರೆ. ಕಿಂಚಿತ್ ಸತ್ಯಾಂಶವಿದ್ದರಾದರೂ ಸರಿ ಆದರೆ ಹಾಗಾಗದೇ ಹೋದಾಗ ಬಹಳ ಕಷ್ಟ. ನನಗೆ ವಿಭಟ್ರ ಟೀಂ ನ ತ್ಯಾಗರಾಜ್ , ಪ್ರತಾಪ್ ಮುಂತಾದವರು ಹತ್ತಿರದ ಪರಿಚಯ ಇಲ್ಲ. ಆದರೆ ಭಡ್ತಿಯವರನ್ನು ತೀರಾ ಹತ್ತಿರದಿಂದ ಬಲ್ಲೆ. ಸರಳ ಸಜ್ಜನ ಹಾಗೂ ಹಾರ್ಡ್ ವರ್ಕರ್ ಅಂತಾರಲ್ಲ ಅಂತಹವರು. ಅದೆಷ್ಟು ಜನರನ್ನು ತಿದ್ದಿ ತೀಡಿ ಬೆಳೆಸಿದರೋ ಲೆಕ್ಕವಿಲ್ಲ ಬಿಡಿ. ಹಾಯ್ ನಲ್ಲಿ ಅವರ ಬಗ್ಗೆ ಬಂದಾಗ ನನಗೆ ತುಂಬಾ ನೋವಾಯಿತು. ಪಾಪ ಅವರು ಎಷ್ಟು ಅನುಭವಿಸಿದರೋ ಗೊತ್ತಿಲ್ಲ. ಇಷ್ಟಾದರೂ ನನಗೆ ಒಂದು ಭಾವನೆ ಇತ್ತು "ಅವರೇನೋ ಹಾಗೆಯೇ ಆದರೆ ಕೊಚ್ಚೆಗೆ ಇವರು ಕಲ್ಲು ಎಸೆದರೆ.....? ಎಂಬ ಮಾಮೂಲಿ ಗಾದೆ. ಆದರೆ ಇವತ್ತಿನ ಭಡ್ತಿಯವರ ಬ್ಲಾಗ್ (http://gindimaani.blogspot.com/)ನಲ್ಲಿನ "ಆದರೆ ‘ನೀಲಿ ಪತ್ರಿಕೆ’ ಗಳಲ್ಲಿ ಒಮ್ಮೆ ಬರೆಸಿಕೊಂಡಾಗ, ಅದೂ ವಿನಾ ಕಾರಣ...ಆಗ ಹತ್ತುವ ಉರಿಯಿದೆಯಲ್ಲಾ ಅದನ್ನು ಅನುಭವಿಸಿದವರೇ ಹೇಳಬೇಕು" ಎಂಬ ಸಾಲುಗಳನ್ನು ಓದುತ್ತಾ ಹೋದಾಗ ನಿಜ ನಿಜ ಅನ್ನಿಸತೊಡಗಿತು. ಎಲ್ಲರೂ ಸಾಯಲಿ ಬಿಡು ನಮ್ಮ ತಂಟೆಗೆ ಬಂದಿಲ್ಲವಲ್ಲ, ಹೀಗೆ ಉಪೇಕ್ಷೆಯ ಮಾತನಾಡಿದ್ದರಿಂದ ಹೀಗೆಲ್ಲಾ ಆಗುತ್ತಿರುವುದು ತಾನೆ?. ನಾವೇನು ಬದಲಾವಣೆಯ ಹರಿಕಾರರಲ್ಲ ನಿಜ, ಹಾರುತ್ತಿರುವ ಹದ್ದಿಗೆ ಪ್ರಪಂಚ ಕಾಣುತ್ತಿರುವುದು ನಿಜ, ಅದರ ಹಾರಾಟ ತನ್ನ ಆಹಾರಕ್ಕಾಗಿ ಎಂಬುದೂ ಸತ್ಯ, ನಮಗೆ ಅದನ್ನು ಮುಟ್ಟಲಾಗುವುದಿಲ್ಲ ಎನ್ನುವುದೂ ನಿಜ ಇರಬಹುದು ಆದರೆ ಕಂಡ ಆಹಾರಕ್ಕೆ ಅದು ಭೂಮಿಗೆ ಇಳಿಯಲೇ ಬೇಕು. ಕೊಳೆತದ್ದು ಹಳಸಿದ್ದು ಸತ್ತದ್ದು ತಿಂದು ಬದುಕುವ ರಣ ಹದ್ದು ಅದನ್ನೇ ತಿನ್ನಲು ಹೊರಟಾಗ ಅದಕ್ಕೆ ಅಡ್ಡಗಾಲಾಗುವುದು ಬೇಡ. ಆದರೆ ತನ್ನ ಸ್ವಾರ್ಥಕ್ಕಾಗಿ ಸಾತ್ವಿಕ ಪ್ರಾಣಿಗಳನ್ನು ಬದುಕಿರುವಾಗಲೇ ಕೊಂದು ಆಹಾರವನ್ನಾಗಿಸಿಕೊಳ್ಳಲು ಬಿಡಬಾರದು. ಹಾಗೆ ತೀರ್ಮಾನಿಸಿಕೊಂಡು ಇಳಿದಾಗ ಮತ್ತೆ ಅದು ಮೇಲೇರದಂತೆ ಮಾಡಬೇಕು. ಹಾಗೆ ಆಗುತ್ತದೆ ಬಿಡಿ ಖಂಡಿತ.
ಬೇರೆಯವರ ಜೀವನದ ಭಾವನೆಗಳಿಗೆ ಸುಳ್ಳಿನ ಕತೆ ಪೋಣಿಸಿ ಅನ್ಯತಾ ಹಿಂಸೆ ನೀಡುವವರನ್ನು ಖಂಡಿಸಲೇ ಬೇಕು. ಆಗ ಸಾತ್ವಿಕ ಶಕ್ತಿಗೆ ಜಯ ಖಂಡಿತ. ನಿಧಾನದ ಸಮಯ ಹಿಡಿಯಬಹುದು ಅಲ್ಲಿಯವರೆಗೆ ತಾಳ್ಮೆ ಅವಶ್ಯಕ. ಅದುವೇ ಮಾನವೀಯತೆ.

Friday, January 21, 2011

ಟಿಕ್ ಟಿಕ್ ಗೆಳೆಯ


ಮಾಪಕ ಇಲ್ಲದೇ ಕಾಲದ ಅಳತೆ ಆಗದು ಎಂದು ಹೊರಟ ಮನುಷ್ಯನ ಆವಿಷ್ಕಾರವೇ ಗಡಿಯಾರ. ಕಾಲ ಗತಿಸಿದಂತೆ ಗಡಿಯಾರದ ವಿಷಯದಲ್ಲಿ ಕ್ರಾಂತಿಯೇ ಆಯಿತು. ಪುಟ್ಟ ಪುಟ್ಟ ಕೈಗಡಿಯಾರದಿಂದ ಹಿಡಿದು ಗೊಡೆ ಗಡಿಯಾರದ ತನಕವೂ ವಿಶಿಷ್ಠವೇ ವಿಶೇಷವೇ. ಐವತ್ತು ವರ್ಷಗಳ ಹಿಂದೆ ಬ್ಯಾಟರಿ ಚಾಲಿತ ಗಡಿಯಾರಗಳು ಭಾರತ ಪ್ರವೇಶಿಸಿರಲಿಲ್ಲ. ಆಗೆಲ್ಲ ಕಿ ಕೊಟ್ಟು ಪೆಂಡುಲಮ್ ಅಲ್ಲಾಡುವ ಗಡಿಯಾರವೇ ವಿಶೇಷ. ಅದಕ್ಕೊಂದು ಅಲಂಕಾರವೇ ಭೂಷಣ. ಈಗ ವಿದ್ಯುತ್ ಕ್ರಾಂತಿಯ ಪರಿಣಾಮ ದಿಂದ ಎಲ್ಲವೂ ವಿದ್ಯುತ್ ಮಯ. ಹಾಗಾಗಿ ವಾರಕ್ಕೊಮ್ಮೆ ಟರ್ರ್ ಎಂದು ಸದ್ಧು ಮಾಡುತ್ತಾ ಕೀ ಕೊಡುವ ಗಡಿಯಾರಗಳ ಸಂಖ್ಯೆ ಕಡಿಮೆ ಅದು ಭಾರಿಸುವ ಡಣ್ ಡಣ್ ಎಂಬ ಸದ್ಧೂ ಅಡಗಿದೆ. ಅಂತಹ ಗಡಿಯಾರಗಳು ಸಂಗ್ರಹಕಾರರ ಮನೆ ಸೇರಿದೆ.ಆದರೆ ಹೊನ್ನಾವರದ ಕಾಮತ್ ಹೋಟೆಲ್ ನಲ್ಲಿ ಈ ಆರು ಅಡಿ ಎತ್ತರದ ಗಡಿಯಾರವನ್ನು ಜತನದಿಂದ ಕಾಪಾಡಿಕೊಂಡು ಬಂದಿದ್ದಾರೆ. ವಾರಕ್ಕೊಮ್ಮೆ ಕೀ ಕೊಟ್ಟು ನಿಧಾನ ಗತಿಯಲ್ಲಿ ಚಲಿಸುವ ಈ ಆರು ಅಡಿ ಎತ್ತರದ ಗಡಿಯಾರವನ್ನು ಈಗಿನವರಿಗೆ ಅಚರಿಯನ್ನಾಗಿಸಿದ್ದಾರೆ. ಬೀಟೆ ಮರದಿಂದ ತಯಾರಿಸಲಾದ ಈ ಗಡಿಯಾರಕ್ಕೆ ಅಂದಿನ ಕಾಲದಲ್ಲಿ ೨೪ ಸಾವಿರ ರೂಪಾಯಿ ಬೆಲೆಯಂತೆ. ಒಮ್ಮೆ ಅತ್ತ ಹೋದಾಗ ನಮ್ಮ ನಿಮ್ಮನ್ನು ಆಕರ್ಷಿಸುವುದು ಅದರ ಗಾಂಭೀರ್ಯದಿಂದ ಎಂಬುದು ಖಂಡಿತ.

ಈಗ ನಮ್ಮನೆ ಹಿಂದೆ


ಚಳಿಗಾಲವೆಂಬ ಚಳಿಗಾಲದಲ್ಲಿ ನಿತ್ಯ ಆಕಾಶ ಶುಭ್ರ. ಸುಮ್ಮನೆ ಫೋಟೋ ಕ್ಲಿಕ್ಕಿಸಿದರೂ ವಾವ್...

ಹಣವೂ ಇಲ್ಲ ಗುಣವೂ ಇಲ್ಲ ಕಾಮೆಂಟ್

ನನ್ನ ಹಣವೂ ಇಲ್ಲ ಗುಣವೂ ಇಲ್ಲ ಬರಹಕೆ ಮಾವೆಂಸ ಹೇಳಿದ್ದು( http://mavemsa.blogspot.com)
ಇವತ್ತು ನಾನು, ಶ್ರೀಶಂ ಹೇಳಿದ ದೂರನ್ನು ನನಗೆ ಒಮ್ಮೆ ಖ್ಯಾತ ಸಾಹಿತಿಗಳಾದ ನಾ.ಡಿಸೋಜಾರೇ ಪರೋಕ್ಷವಾಗಿ ಹೇಳಿದ್ದರು. ಒಂದು ಸಮಾರಂಭದಲ್ಲಿ ನನ್ನನ್ನು ‘ಈಗ ಎಲ್ಲಿ ಬರೆಯುತ್ತಿದ್ದೀರಿ’ ಎಂದು ಕೇಳಿದಾಗ ನಾನು ವಿಜಯ ಕರ್ನಾಟಕದಲ್ಲಿ ಎಂದಾಗ ಅವರು ಉದ್ಗರಿಸಿದ್ದು ಇಷ್ಟೇ, ‘ಅವರು ದುಡ್ಡು ಕೊಡುತ್ತಾರೇನ್ರೀ?’ ನಾನು ಎಚ್ಚರಗೊಳ್ಳಲಿಲ್ಲ!
ಅದಕ್ಕೆ ಕಾರಣವೂ ಇತ್ತು, ಹಿಂದೊಮ್ಮೆ ಕೃಷಿ ಪುರವಣಿಗೆ ಬರೆದ ಲೇಖನಗಳಿಗೆ ಚೆಕ್ ಬಾರದಿದ್ದರಿಂದ ಅದಕ್ಕೆ ಬರೆಯಬಾರದು ಎಂದು ತೀರ್ಮಾನಿಸಿದ್ದೆ. ಇದ್ದಕ್ಕಿದ್ದಂತೆ ನನ್ನ ಬ್ಲಾಗ್ ನೋಡಿ ಈಗ ವಿಕೆಯ ಲವ್‌ಲವಿಕೆ ನೋಡಿಕೊಳ್ಳುತ್ತಿರುವ ಕರಿಸ್ವಾಮಿಯವರು ಅಕ್ಷರಶಃ ತರಾಟೆಗೆ ತೆಗೆದುಕೊಂಡರು. ಮೊದಲು ನಮ್ಮ ಪತ್ರಿಕೆಗೆ ಈ ಬರಹ ಕಳುಹಿಸಿ ನಂತರ ನಿಮ್ಮ ಬ್ಲಾಗ್‌ನಲ್ಲಿ ಹಾಕಿ ಎಂದು. ನಾನು ಹಿಂದೆ ಹೊಡೆತ ತಿಂದ ಸುದ್ದಿ ಹೇಳಿದಾಗ ಗೌರವಧನವನ್ನು ನಿಮಗೆ ಕೊಡುವುದು ನಮ್ಮ ಜವಾಬ್ದಾರಿ ಎಂದು ಭರವಸೆ ಇತ್ತಿದ್ದರು. ಆ ವಿಶ್ವಾಸಕ್ಕೆ ಬರೆದೆ. ಆದರೆ......
ಮತ್ತೆ ಐದಾರು ಲೇಖನಕ್ಕೆ ಗೌರವಧನ ಬಾರದಿದ್ದಾಗ ಅವರನ್ನು ಮಾತನಾಡಿಸಿದ್ದೆ. ಲೇಖನಗಳ ಪಟ್ಟಿ ಕಳುಹಿಸಲು ಹೇಳಿ ಕೈ ತೊಳೆದುಕೊಂಡಿದ್ದರು. ಕೊನೆಗೆ ನಾನು ಬ್ಲಾಗ್‌ನಲ್ಲಿ ಚುಟುಕಾಗಿ ಈ ಬಗ್ಗೆ ಬರೆದದ್ದನ್ನು ನೋಡಿ ಹೇಳಿದರಂತೆ, ಅವರು ಬ್ಲಾಗ್‌ನಲ್ಲಿ ಕಾರಿಕೊಂಡಿದ್ದಾರೆ. ಇನ್ನು ಗೌರವಧನ ಕಳುಹಿಸುವ ಪ್ರಶ್ನೆಯಿಲ್ಲ. ಹೇಗಿದೆ ನೋಡಿ ಸತ್ಯ ಹೇಳುವುದರ ಬೆಲೆ?
ಬಜ್ ಮಿತ್ರರು ಹೇಳಿದ್ದು
ದಿವ್ಯಾ ... - Right time to make some decision..Jan
PARANJAPE KN. - ಬಿಡಬೇಡಿ, claim ಮಾಡಿ, ನಿಮಗೆ ನ್ಯಾಯವಾಗಿ ಸಿಗಲೇಬೇಕಲ್ಲ. ಪತ್ರಿಕಾ ಕಚೇರಿ ಮುಂದೆ ಧರಣಿ ಕೂರಬೇಕಾದ್ರೆ ಕರೀರಿ... ಬರುವೆ.
Santhosh Acharya - ನನಗಂತು ಇಲ್ಲಿಯವರೆಗೆ ಸಂಭಾವನೆ ಸಿಗುತ್ತದೆ ಎಂದೇ ಗೊತ್ತಿರಲಿಲ್ಲ. :)
navyajyothi - ಸರ್ ಕೇವಲ ವಿಕ ಮಾತ್ರವಲ್ಲ ಇನ್ನೂ ಹಲವು ಪತ್ರಿಕೆಗಳು ಇಂಥಾ ಜಾಯಮಾನ ಹೊಂದಿವೆ.
PARANJAPE KN. - ಆ ಪತ್ರಿಕೆಗಳು ಯಾವುವು ಅ೦ತ ತಾವು ಹೇಳಿದರೆ ನಾವು ಸ್ವಲ್ಪ ಹುಶಾರಾಗಿರಬಹುದು ನವ್ಯಜ್ಯೋತಿಯವರೇ
Palachandra M - "ವಿಕದಲ್ಲಿ ನಿಮ್ಮ ಲೇಖನ ಪ್ರಕಟಿಸೋದೇ ಹೆಮ್ಮೆಯ ವಿಷಯ, ಅದೇ ನಿಮಗೆ ಸಂಭಾವನೆ" ಅಂತ ಪತ್ರಿಕೆಯವರ ಅನಿಸಿಕೆ ಇರಬಹುದು.. ಆದ್ರೂ ಒಂದ್ ಹತ್ತು ಲೇಖನ ಕಳ್ಸಿದಮೇಲೆ ಸಂಭಾವನೆ ಬರ್ಲಿಲ್ಲಾ ಅಂದ್ಮೇಲೆ, ಅಲ್ಲಗೇ ನಿಲ್ಲಿಸಬಹುದಿತ್ತಲ್ಲ ಶರ್ಮರೇ..
shivuu.k - ನೀವು ಬರೆದ ಈ ವಿಚಾರವನ್ನು ಅನುಸರಿಸಿ ನಾನು ಈಗ ವಿಜಯ ಕರ್ನಾಟಕದಲ್ಲಿರುವ ಗೆಳೆಯನ ಬಳಿ ಮಾತಾಡಿದೆ. [ಕಾರಣ ನನ್ನದೂ ವಿಜಯ ಕರ್ನಾಟಕದ ಲವಲವಿಕೆಯಲ್ಲಿ ನಾಲ್ಕಾರು ಲೇಖನಗಳು, ತಿಂಗಳಿಗೆ ಎರಡು ಫೋಟೊಗಳು, ವಿಶೇಷಾಂಕದಲ್ಲಿನ ಫೋಟೊಗಳು....ಹೀಗೆ ಸುಮಾರು ಸಂಭಾವನೆ[ರಾಯಲ್ಟಿ]ಬರಬೇಕಿದೆ.] ಅವರು ಹೇಳಿದ ಪ್ರಕಾರ ರಾಯಲ್ಟಿ ಖಂಡಿತ ಕೊಡುತ್ತಾರಂತೆ. ನಾವು ಯಾವ ವಿಭಾಗಕ್ಕೆ ಲೇಖನವನ್ನು ಅಥವ ಫೋಟೊಗಳನ್ನು ಕಳಿಸುತ್ತೇವೋ ಆ ವಿಭಾಗದ ಮುಖ್ಯಸ್ಥರಿಗೆ ಇದುವರೆಗೆ ಬಂದಿರುವ ಚಿತ್ರಗಳು ಮತ್ತು ಲೇಖನದ ಜೆರಾಕ್ಸ್ ತೆಗೆದು ಅದರ ವಿವರಗಳನ್ನು ಅವರಿಗೆ ಪೋಸ್ಟ್ ಮಾಡಿದರೇ ಹಣ ಖಂಡಿತ ಕಳಿಸುತ್ತಾರೆ. ಸಾಧ್ಯವಾದರೆ ಮುಖ್ಯಸ್ಥರ ಫೋನ್ ನಂಬರ್ ಇದ್ದಲ್ಲಿ ಪೋಸ್ಟ್ ಮಾಡಿದ ನಂತರ ಫೋನ್ ವಿಚಾರಿಸಿದರೆ ನಮಗೆ ಸಿಗಬೇಕಾದ ಸಂಭಾವನೆ ಸಿಗುತ್ತದೆ. ಇದು ಈಗ ನಾನು ಮಾತಾಡಿದಾಗ ತಿಳಿದ ವಿಚಾರ. ಈಗ ನಾನು ವಿ ಕ ದಲ್ಲಿ ಬಂದಿರುವ ಫೋಟೊ ಮತ್ತು ಲೇಖನಗಳನ್ನು ಕಲೆ ಹಾಕಿ ನೇರ ಅಫೀಸಿಗೆ ಹೋಗಲು ನಿರ್ಧರಿಸಿದ್ದೇನೆ.
ಸುಧಾ ಅಥವ ಪ್ರಜಾವಾಣಿಯಲ್ಲಿ ಮೊದಲು ಪ್ರಕಟವಾದ ಬರಹಕ್ಕೆ ಸರಿಯಾಗಿ ಚೆಕ್ ಬಂದುಬಿಡುತ್ತಿತ್ತು. ಆದ್ರೆ ಇತ್ತೀಚೆಗೆ ನನ್ನ ಎರಡು ಚಿತ್ರ ಸಹಿತ ಲೇಖನಗಳಿಗೆ ಚೆಕ್ ಬಂದಿಲ್ಲ. ಮೊದಲು ಸರಿಯಾಗಿ ಕಳಿಸುತ್ತಿದ್ದ ಅವರು ಕೂಡ ಬದಲಾಗಿಬಿಟ್ಟಿದ್ದಾರೆ! ಅಲ್ಲಿನ ನಾನು ಚಿತ್ರಗಳು ಮತ್ತು ಲೇಖನ ಕಳಿಸುವುದನ್ನು ನಿಲ್ಲಿಸಿದ್ದೆ.
ಕನ್ನಡಪ್ರಭದವರು ಈ ವಿಚಾರದಲ್ಲಿ ಯಾರಿಗೂ ಮೋಸ ಮಾಡೋಲ್ಲ. ಉದಯವಾಣಿ ಮತ್ತು ತರಂಗದವರು ಸಂಭಾವನೆ ವಿಚಾರದಲ್ಲಿ ಸರಿಯಾಗಿ ಕಳಿಸುತ್ತಾರೆ. ಆದ್ರೆ ವಿಜಯ ಕರ್ನಾಟಕದವರು ಯಾಕೆ ಹೀಗೆ?
ಆದರೂ ನಾನು ಹೋಗಿ ಕೇಳುವವರೆಗೆ ಅವರು ಗಮನಿಸದೇ ಇರುವುದು ಅಥವ ಉದ್ದೇಶಪೂರ್ವಕವಾಗಿ ಹೀಗೆ ಜಾಣ ಮರೆವು ತೋರಿಸುವುದು ಸರಿಯಲ್ಲವೆಂದು ನನ್ನ ಅಭಿಪ್ರಾಯ.
ನಿಮ್ಮ ಜೊತೆ ನಾನಿದ್ದೇನೆ. ಏಕೆಂದರೆ ನನಗೂ ಪ್ರಜಾವಾಣಿ ಮತ್ತು ವಿಜಯ ಕರ್ನಾಟಕದಿಂದ ಸಾಕಷ್ಟು ಸಂಭಾವನೆ ಬರಬೇಕಿದೆ.Jan 20

ಆಗ್ಲೂ ನಿಮ್ಮ ಲೈಪ್ ಜಿಂಗಲಾಲ.

ಈ ನನ್ನ ಅಕ್ಷರರೂಪದಲ್ಲಿರುವ ಬರಹಗಳನ್ನು ನೀವು ಓದುತ್ತಿರುವ ಈ ಸಮಯದಲ್ಲಿ ಇದನ್ನು ಬರೆದಿರುವ ನಾನು ಬೇರೆಯದೇ ಆದ ಕೆಲಸವನ್ನು ಮಾಡುತ್ತಿರುತ್ತೇನೆ. ಮುಂದೊಂದು ದಿನ ಇದು ಎಂದೋ ಬರೆದ ಬರಹವಾಗಿರುತ್ತದೆ. ಬರೆದ ನಾನೆಂಬ ನಾನು ಕಾಲವಾದಮೇಲೆಯೂ ನನ್ನ ಭಾವನೆಗಳು ಉಳಿದಿರುತ್ತವೆ. ಈ ಅಕ್ಷರವೆಂಬ ಮೋಡಿಯ ಮೂಲಕ ನಿಮ್ಮ ಮುಖದಲ್ಲಿ ಸಣ್ಣದೊಂದು ಮುಗುಳ್ನಗೆಯಿಂದ ವಿಕಟಾಟ್ಟಹಾಸದ ಭಾವನೆಗಳನ್ನು ನಾನು ಹೊರಡಿಸಬಹುದು. ಹಾಗೆಯೇ ಬ್ರಹ್ಮೇತಿ ಸಿಟ್ಟನ್ನು ತರಿಸಬಹುದು, ದಳದಳ ಉದುರುವ ಗಳಗಳ ಕಣ್ಣೀರು ತರಿಸಬಹುದು, ವ್ಯಗ್ರ ಮನಸ್ಸಿಗೆ ಸಮಾಧಾನ ನೀಡಬಹುದು, ಸಮಾಧಾನದ ಮನಸ್ಸನ್ನು ವ್ಯಗ್ರಗೊಳಿಸಬಹುದು. ಅಥವಾ ಕೊರೆದು ಕೊರೆದು ಬೇಸರ ಹುಟ್ಟಿಸಬಹುದು ಎಂಬೆಲ್ಲಾ ಮಾತುಗಳು ನನ್ನ ತಾಕತ್ತನ್ನು ಅವಲಂಬಿಸುತ್ತದೆ ಎನ್ನುವುದು ಮತ್ತೆ ಬೇರೆಯದೇ ವಿಷಯ. ಇರಲಿ ಈಗ ನಾನು ಹೇಳ ಹೊರಟಿರುವ ವಿಷಯ ಇದ್ಯಾವುದೂ ಅಲ್ಲ ಹಾಗಂತ ಮಡೆಸ್ನಾನ ಹಾಗೂ ಕ್ರಿಕೆಟ್ ಹರಾಜಿನ ಬಗ್ಗೆ ಚಂದವಾಗಿ ಬರೆದು ಕೆಲಓದುಗರಿಂದ ಭಿನ್ನವಾಗಿ ಅರ್ಥೈಸಿಕೊಂಡು ಸಣ್ಣ ವಿವಾದಕ್ಕೆ ಕಾರಣರಾದ ಹೆಗೋಡು ಅಕ್ಷರರ ಬಗ್ಗೆಯೂ ಅಲ್ಲ ಕೇವಲ ಮನುಷ್ಯನೆಂಬ ಮನುಷ್ಯ ಸೃಷ್ಟಿಸಿಕೊಂಡ ಪದಗಳಿಗೆ ಕಾರಣವಾಗುವ ಅಕ್ಷರಗಳೇ ಇಲ್ಲದಿದ್ದರೆ ಎಂಬ ಸ್ಥಿತಿಯ ಬಗ್ಗೆ.
ಈಗಿನ "ವಾವ್" ಎಂಬ ಅರ್ಥದ ಉದ್ಘಾರ ಮೊದಲ ಅಕ್ಷರ ಸೃಷ್ಟಿಸಿ ಅದನ್ನು ಮತ್ತೊಬ್ಬಾತ ಹಾಗೆಯೇ ಓದಿದಾಗ ಹೊರಟಿರುತ್ತದೆ ಖಂಡಿತ. ಎಂತಹಾ ಸಂತೋಷದ ಕ್ಷಣವಲ್ಲವೆ ಅದು. ಮನುಷ್ಯ ನಾಗರೀಕತೆ ಎಂದು ಈಗ ಕರೆದುಕೊಳ್ಳುತ್ತಿರುವ ಆರಂಭದ ಹೆಜ್ಜೆಗೆಳು ಅವು. ಕೇವಲ ಕೈಸನ್ನೆ ಗಳಿಂದ ಆ ಊ ಗಳಿಂದ ಮುಂದಿನ ಹಂತವಾದ ಮಾಹಿತಿಯ ವಿನಿಮಯದ ಮೊದಲ ಹೆಜ್ಜೆ. ಈಗ ಸುಮ್ಮನೆ ಆರಾಮು ಖುರ್ಚಿಯಲ್ಲಿ ಕುಳಿತು ಆಕಾಶ ನೋಡುತ್ತಾ "ಅಕ್ಷರ" ಸೃಷ್ಟಿಯ ಮೊದಲ ಮೆಟ್ಟಿಲುಗಳ ಕಲ್ಪಿಸಿಕೊಂಡರೆ ಮೈ ನವಿರೇಳುತ್ತದೆ. ಮೊದಲ ಅ ಎಲ್ಲಿ ಸೃಷ್ಟಿಯಾಯಿತೋ ಆನಂತರ ತಡವಾಗಲಿಲ್ಲ, ಭವ್ಯ ಭವಿಷ್ಯದ ಕನಸು ಹೊತ್ತ ಲಕ್ಷಾಂತರ ಜನ ತಮಗೆ ಗೊತ್ತಿದ್ದೊ ಗೊತ್ತಿಲ್ಲದೆಯೋ ಕೆಲ ಅಕ್ಷರಗಳ ಮೂಲಕ ಕೊಟ್ಯಾಂತರ ಶಬ್ಧಗಳ ಸೃಷ್ಟಿಗೆ ಕಾರಣವಾಗುತ್ತಾ ಸಾಗಿದರು. ಹಲವರು ಈ ಅಕ್ಷರ ಜಗತ್ತಿಗೆ ತಮ್ಮ ಜೀವನವನ್ನೆಲ್ಲಾ ಮುಡಿಪಾಗಿ ಇಟ್ಟರು. ಇವೆಲ್ಲಾ ಗತಿಸಿ ಸಹಸ್ರಾರು ವರ್ಷಗಳೇ ಸಂದುಹೋದವು. ದಿನದಿಂದ ದಿನಕ್ಕೆ ಅಕ್ಷರ ಜಗತ್ತು ವಿಶ್ವರೂಪ ತಾಳಿ ತನಗೆ ಬೇಕಾದ ರೀತಿಯಲ್ಲಿ ನರ್ತಿಸತೊಡಗಿದೆ.
ಮನುಷ್ಯ ಸೃಷ್ಟಿಯ ಅಕ್ಷರದ ಬಳಕೆ ಎಲ್ಲಾ ಒಳ್ಳೆಯದಕ್ಕೇ ಆಗುತ್ತಿದೆ ಅಂತೇನೂ ಇಲ್ಲ. ಉನ್ನತಿಗೆ ಸಾಗಿಸಬೇಕಾಗಿದ್ದ ಅಕ್ಷರಗಳ ಗುಚ್ಛ ಅವನತಿಗೆ ಒಯ್ದ ದಾಖಲೆಗಳೂ ಇವೆ. ಅವನ್ನೆಲ್ಲಾ ಇಲ್ಲಿ ಕೊರೆಯುತ್ತಾ ಕೂತರೆ ನೀವು ನನಗೆ ಉಗಿಯುವುದು ಖಂಡಿತಾ, ಹಾಗಾಗಿ ಹೇಳಲೇಬೇಕಾಗಿರುವ ಹೇಳಹೊರಟಿರುವ ಮಾತನ್ನು ಹೇಳುತ್ತಾ ಮುಗಿಸುತ್ತೇನೆ.
ಈಗ ನಾವು ನೀವೆಲ್ಲಾ ಕಾಗದದಲ್ಲಿಯೋ ಅಥವಾ ಕಂಪ್ಯೂಟರ್ ನಲ್ಲಿಯೋ ಮೂಡುವ ಅಕ್ಷರಗಳನ್ನು ಕಣ್ಗಳ ಮೂಲಕ ರೀಡಿ ಮಿದುಳಿನಲ್ಲಿ ಭಾವನೆಗಳನ್ನು ಮೂಡಿಸಿಕೊಳ್ಳುತ್ತಿರುವುದು ಸರಿಯಷ್ಟೆ. ಅಂಥಹ ಜನರಿಗೆ ಓದುಗರು ಅನ್ನುತ್ತಾರೆ. ಸರಿ ತಾನೆ?. ಹೀಗೆ ಮಿದುಳಿನಲ್ಲಿ ಮೂಡಿದ ಭಾವನೆಗಳನ್ನು ಅಕ್ಷರ ರೂಪಕ್ಕೆ ಇಳಿಸಿ ಯತಾವತ್ ಮತ್ತೊಂದು ಮಿದುಳಿನಲ್ಲಿ ಭಾವನೆಗಳನ್ನು ಮೂಡಿಸುವವನಿಗೆ ಬರಹಗಾರ ಎನ್ನುತ್ತಾರೆ. ಇಂತಹ ಅವಸ್ಥೆಗಳ ಅನುಭವಕ್ಕೆ ನಿಮ್ಮ ಮೆದುಳು ಅಕ್ಷರಗಳನ್ನು ಕಲಿತಿರಬೇಕು, ಅದು ಯಾವುದೇ ಭಾಷೆಯದೇ ಆಗಿರಲಿ. ಈಗ ನಮ್ಮ ನಿಮ್ಮ ಮಿದುಳಿಗೆ ಅಕ್ಷರ ಕಲಿತಾಗಿದೆ. ಹಾಗಾಗಿ ಅಲ್ಲಿ ಯೋಚನೆಗಳ ಸರಮಾಲೆಯೇ ಸೃಷ್ಟಿಯಾಗುತ್ತಿದೆ,ಅಂತ್ಯವಿಲ್ಲದ ಆರಂಭ ಗೊತ್ತಿಲ್ಲದ ಯೋಚನೆಗಳು ಯೋಚನೆಗಳು ಯೋಚನೆಗಳು ಅವು. ಈಗ ಒಂದು ಕೆಲಸ ಮಾಡೋಣ ಸಹಸ್ರ ವರ್ಷಗಳ ಅಥವಾ ಅದಕ್ಕೂ ಹಿಂದೆ ಅಕ್ಷರ ತಿಳಿಯದ ಮನುಷ್ಯ ಏನು ಯೋಚಿಸುತ್ತಿದ್ದ..? ಕೇವಲ ಕಣ್ಣಿಗೆ ಕಂಡ ದೃಶ್ಯಗಳಷ್ಟೆ ಅವನ ಯೋಚನೆ. ಅಲ್ಲಿ ಶಬ್ದಗಳಿಲ್ಲ ಅಕ್ಷರಗಳ ಗೊಡವೆಯಿಲ್ಲ.
ಅಂತಹ ಒಂದು ಅವಸ್ಥೆಯನ್ನ ನಾವೂ ನೀವು ಬಲಾತ್ಕಾರವಾಗಿ ಅನುಭವಿಸಬೇಕಿದೆ. ಅಕಸ್ಮಾತ ಒಂದೈದು ನಿಮಿಷ ಹಾಗೆ ನೀವು ನಿಮ್ಮ ಮಿದುಳನ್ನು ಖಾಲಿ ಇಡಲು ಸಮರ್ಥರಾದಿರಾದರೆ ನಿಮ್ಮಂಥ ಜಿಂಗಾಲಾಲ್ ಜನ ಮತ್ತೊಬ್ಬರು ಈ ಪ್ರಪಂಚದಲ್ಲಿ ಇರುವುದಿಲ್ಲ. ಟ್ರೈ ಮಾಡಿ ನೋಡಿ.
ವಿಸೂ: ಅಕ್ಷರದ ಈ ಬರಹ ರಗಳೆಯಾಗಿ ನಿಮ್ಮ ಮಿದುಳಿಗೆ ಅನಿಸಿದರೆ ನನ್ನ ತಪ್ಪಲ್ಲ. ಅರ್ಥೈಸಿಕೊಳ್ಳಲು ನಿಮ್ಮ ಮಿದುಳು ಅಸಮರ್ಥವಾಗಿದೆ ಅಂತ ಅರ್ಥ ಆಗ್ಲೂ ನಿಮ್ಮ ಲೈಪ್ ಜಿಂಗಲಾಲ.

Thursday, January 20, 2011

ಹಣವೂ ಇಲ್ಲ ಗುಣವೂ ಇಲ್ಲ.

ನಾನು ಒಂದಿಷ್ಟು ಬರೆಯುತ್ತೇನೆ. ಸನ್ ಸಾವಿರದ ಒಂಬೈನೂರಾ ಎಂಬತ್ನಾಲ್ಕನೆ ಇಸವಿಯಿಂದ ಬರೆದು ಬರೆದು ಗುಡ್ಡೆ ಹಾಕಿದ್ದಿದೆ. ಪ್ರಜಾವಾಣಿ ದಿನಪತ್ರಿಕೆ ಹಾಗೂ ಕರ್ಮವೀರ ವಾರಪತ್ರಿಕೆ ಅಂದಿನಿಂದ ನನ್ನ ಬರಹಗಳನ್ನು ಪ್ರಕಟಿಸಿದ ಪತ್ರಿಕೆಗಳು. ಕನ್ನಡದ ವಾರಪತ್ರಿಕೆ ಕರ್ಮವೀರದೊಡನೆ ನನಗೆ ಸರಿ ಸುಮಾರು ೨೫ ವರ್ಷದ ಅನುಬಂಧ. ಆದರೆ ವಿಪರ್ಯಾಸವೆಂದರೆ ನನಗೆ ಇಲ್ಲಿಯವರೆಗೆ ಯಾರೂ ಮುಖತ: ಪರಿಚಯ ಇಲ್ಲ. ಆದರೆ ಅಲ್ಲಿಗೆ ಕತೆ ಹಾಸ್ಯ ಲೇಖನ ಗಳನ್ನು ಕಳುಹಿಸಲು ನನಗೆ ತುಂಬಾ ಒಲವು. ಕಾರಣ ಅವರು ಡೆಸ್ಕ್ ನಲ್ಲಿ ಯಾರೇ ಇರಲಿ ಎಲ್ಲರಿಗೂ ಸ್ಪಂದಿಸುತ್ತಾರೆ ಅಥವಾ ನನಗೆ ಸ್ಪಂದಿಸಿದ್ದಾರೆ. "ನಿಮ್ಮ ಬರಹ ಸ್ವೀಕಾರ ವಾಗಿದೆ " ಎಂಬ ಒಂದು ಕಾರ್ಡ್ ಹಾಕುತ್ತಾರೆ. ನಂತರ ಒಂದು ಪ್ರತಿ ಕಳುಹಿಸುತ್ತಾರೆ ಹಾಗೆಯೇ ಹಿಂದಿನಿಂದಲೇ ಬಡ ಬರಹಗಾರರ ನೆಚ್ಚಿನ ಐಟಂ...! ಚೆಕ್ ಬಂದೇಬಿಡುತ್ತದೆ. ಅಲ್ಲಿಗೆ ಮತ್ತೆ ಬರೆಯಲು ಶುರು.
ಇನ್ನು ಪ್ರಜಾವಾಣಿಗೆ ಕಳುಹಿಸುವ ಕೆಲಸದ ಜತೆ ಪ್ರಕಟವಾಗಿದೆಯೋ ಇಲ್ಲವೋ ಅಂತ ನೋಡುತ್ತಾ ಕೂರುವುದು ಬರೆದವನ ಕೆಲಸ. ಪ್ರಕಟವಾಯಿತು ಎಂದಾದ ೧೫ ದಿವಸಗಳೊಳಗೆ ಗಟ್ಟಿ ಮೊತ್ತದ ನೆಚ್ಚಿನ ಐಟಂ ಗ್ಯಾರಂಟಿ ಅಂತ ಕಡಾಖಂಡಿತ ಅಂತ
ಲೆಕ್ಕ. ನಂದು ಏನಾಯಿತು? ಯಾವಾಗ? ಅಂತೆಲ್ಲಾ ಮೈಲ್ ಮಾಡಿದರೆ ಅವರು ಅಪ್ಪನಾಣೆ ಉತ್ತರಿಸುವುದಿಲ್ಲ. ಹೋಗಲಿ ಬಿಡಿ ಅದೂ ಒಂಥರಾ ಥ್ರಿಲ್ ಇರುತ್ತದೆ. ಸುಧಾ ಕೂಡ ಹಾಗೆಯೇ ಆದರೆ ಇವರೆಲ್ಲಾ ಫೋನ್ ಮಾಡಿದರೆ ಉತ್ತರಿಸುತ್ತಾರೆ.
ಕನ್ನಡ ಪ್ರಭ ವೂ ಕೂಡ ವಾಪಾಸ್ ಮೈಲ್ ಮಾಡದಿದರೂ ಪ್ರತಿ ಕಳುಹಿಸದಿದ್ದರೂ ಬರಹಗಾರರ ಸಂಭಾವನೆ ತಿಂದು ತೇಗುವುದಿಲ್ಲ. ತಿಂಗಳೊಳಗೆ ತಲುಪುತ್ತದೆ.
ನಮ್ಮ ಬರಹಗಾರ ಮಿತ್ರ ಮಾವೆಂಸ ವಿಜಯಕರ್ನಾಟಕದ ಬಗ್ಗೆ ತಮ್ಮ ಬ್ಲಾಗ್ನ ಲ್ಲಿ ಒಮ್ಮೆ ಹಣ ಕಳುಹಿಸದಿರುವ ಬಗ್ಗೆ ಹೇಳಿದ್ದರು. ಅವರು ವೈಯಕ್ತಿಕವಾಗಿ ಸಿಕ್ಕಾಗ ಚರ್ಚೆಯೂ ಆಯಿತು. ಎಂಬಲ್ಲಿಗೆ ಮಾವೆಂಸ ರಿಗೆ ಬಹಳ ಕಷ್ಟಪಟ್ಟು ಬರೆದ ಲೇಖನದ ಗೌರವ ಧನ ಮಟಾಶ್.
ನಾನೂ ಕಳೆದ ವರ್ಷ ಸುಮಾರು ೫೦ ಲೇಖನ ಕಳುಹಿಸಿದೆ ವಿಜಯಕರ್ನಾಟಕಕ್ಕೆ . ಬಹುಪಾಲು ಎಲ್ಲವೂ ಪ್ರಕಟವಾಯಿತು. ಗೌರವಧನಕ್ಕೆ ಕಾದಿದ್ಡೆ ಬಂತು. ಸಂಪಾದಕರಿಗೆ ಸೇರಿ ಮೈಲ್ ಮಾಡಿದರೆ ಅದೇ ನಿರುತ್ತರ.
ಯಾಕೆ ಹೀಗೆ ಮಾಡುತ್ತಾರೋ? ಇದೇ ಪ್ರಪಂಚವೋ? ಹೇಳುವುದೊಂದು ಮಾಡುವುದೊಂದೋ...? ಅರ್ಥವಾಗದಪ್ಪ. ಇಷ್ಟು ಬರೆದ ಮೇಲಂತೂ ಇನ್ನು ಅತ್ತ ಮುಖಬೇರೆ ಹಾಕುವಂತಿಲ್ಲ. ಹಣವೂ ಇಲ್ಲ ಗುಣವೂ ಇಲ್ಲ.

ಈ ಕೊಡ ಬೋಳಿಮಗಂಗೆ ಏನಾಗಿತ್ತು ?

ಕಳೆದ ಕೆಲ ದಿವಸಗಳಿಂದ ಒಂದಿಷ್ಟು ಪತ್ರಕರ್ತರು ಅಕ್ಷರ ಯುದ್ಧವನ್ನು ಸಾರಿಯಾಗಿದೆ. ವಿಜಯಕರ್ನಾಟಕದಿಂದ ಹೊರ ಹೊರಟ ಭಟ್ರ ಟೀಂ ವರ್ಸಸ್ ರವಿಬೆಳಗೆರೆ ಅಂತ ಹೊಸತಾಗಿ ನಾನೇನು ಹೇಳಬೇಕಾಗಿಲ್ಲ. ಹೀಗೆ ಯುದ್ಧ ನಡೆಸುತ್ತಿರುವ ಅಕ್ಷರ ಸಾಧಕರ ವೈಖರಿ ನೋಡಿ ಓದುಗ ಬೆಕ್ಕಸಬೆರಗಾಗಿದ್ದಾನೆ. ಇವರೊಡನೆ ಸಾಥ್ ನೀಡಲು ಸಂಪಾದಕೀಯ ಹಾಗೂ ವಿಮರ್ಶಕಿ ಎಂಬ ಬ್ಲಾಗ್ ಗಳೂ ನಿಂತಿವೆ. ಹೀಗೆ ವಾರ್ ನಡೆಸುತ್ತಿರುವ ಬರಹಗಳು ಸಿಕ್ಕಾಪಟ್ಟೆ ಸ್ಟ್ರಾಂಗ್. ಅದೆಷ್ಟು ಸ್ಟಾಂಗ್ ಎಂದರೆ ನಮ್ಮನಿಮ್ಮಂತಹ ಬಡಪಾಯಿ ಬರಹಗಾರರೂ ಕಂ ಓದುಗರೂ ಬೆಚ್ಚಿಬೀಳುವಷ್ಟು. ಕಾರಣ ಯಾರ ಬರಹವನ್ನು ಓದುವಾಗಲೂ ಇವರು ಮಾತ್ರಾ ಸರಿ ಎಂಬ ಭಾವನೆಯನ್ನು ಮೂಡಿಸುತ್ತಾರೆ. ಅದು ಸರಿ ಬಿಡಿ ಎಲ್ಲರೂ ಅಕ್ಷರ ತಿಂದು ಪದಗಳ ಹೊರಡಿಸಿ ಸದ್ದು ಮಾಡುತ್ತಲೇ ಬಂದವರು. ಹಾಗಾಗಿ ಏನು? ಎತ್ತ? ? ಯಾಕಾಗಿ ? ಎಂದು ಕೊನೆಯವರೆಗೂ ಅರ್ಥವಾಗುವುದೇ ಇಲ್ಲ. ಹೋಗಲಿ ಬಿಡ ಅರ್ಥವಾಗದಿದ್ದರೆ ಕತ್ತೆ ಬಾಲ ಕುದುರೆಜುಟ್ಟು ಅಂತ ಅಂದುಕೊಂಡು ಬಿಟ್ಟಾಕಿಬಿಡೋಣ. ನಮ್ಮಲ್ಲಿ ಒಂದು ಮಾತಿದೆ " ಆ ಕೊಡ ಬೋಳಿಮಗಂಗೆ ಏನಾಗಿತ್ತು? " ಅಂತ. ಅದರ ಕತೆ ಇಷ್ಟೆ. ಊರಲ್ಲಿ ಎರಡು ಮನೆ ಒಬ್ಬಾತ ದೇಹಿ ಅಂತ ಬಂದವರಿಗೆ ಇಲ್ಲ ಎನ್ನದೆ ಕೈಬಿಚ್ಚಿ ದಾನ ಮಾಡುತ್ತಿದ್ದ ಮತ್ತೊಬ್ಬಾತ ಎಂಜಲು ಕೈಯಲ್ಲಿ ಕಾಗೆ ಓಡಿಸುತ್ತಿರಲಿಲ್ಲ. ಹಾಗಾಗಿ ಎಲ್ಲರೂ ಮೊದಲನೆಯವನ ಮನೆಗೆ ಹೋಗಿ ಬೇಡಿ ಎರಡನೆಯವನ ಮನೆಯತ್ತ ತಿರುಗಿನೋಡದೆಯೇ ಮುಂದೆ ಹೋಗುತ್ತಿದ್ದರು. ಒಂದು ಸಲ ದಾನಿಗೆ ಏನೋ ತೊಂದರೆಯಾಗಿ ಆ ವರ್ಷ ಬಂದವರಿಗೆ ಇಲ್ಲ ಎಂದ . ಸರಿ ಆವಾಗ ಶುರುವಾಗಿದ್ದೇ "ಈ ಕೊಡ ಬೋಳಿಮಗಂಗೆ ಏನಾಗಿತ್ತು ? ಎಂಬ ಉದ್ಘಾರ. ಪಾಪ ಅಷ್ಟು ವರ್ಷ ದಾನ ಮಾಡಿದ್ದಕ್ಕೆ ಈ ಪ್ರತಿಫಲ ದಾನಿಗೆ. ಆತ ನಿರುಮ್ಮಳವಾಗಿ ಇದ್ದ ಬೈಗಳವಿಲ್ಲದೆ. ಅಯ್ಯೋ ಈ ಕತೆಗೂ ಅಕ್ಷರ ಜಗಳಕ್ಕೂ ಎತ್ತಣದೆತ್ತಣ ಸಂಬಂಧ ಎಂದಿರಾ? ನನಗೂ ಗೊಂದಲ ಇದೆ ಕಣ್ರಿ..... ಆದ್ರೂ ರವಿ ಬೆಳೆಗೆರೆ ಇರೋದೆ ಅದಕ್ಕೆ ಇವರಿಗೇನಾಗಿದೆ? ಅಂತ ಒಂದು ಕ್ಲ್ಯೂ ಅಷ್ಟೆ.